ಮನಸ್ಸು ಮತ್ತು ಆತ್ಮ ಎಂದರೆ ಒಂದೆಯೇ ಅಥವಾ ಬೇರೆಬೇರೆಯೇ ಎಂಬ ನಮ್ಮ ಪ್ರಶ್ನೆಗೆ ಧರ್ಮಶಾಸ್ತ್ರ ಹಾಗೂ ತತ್ವಶಾಸ್ತ್ರಗಳು ಕೊಡುವ ಉತ್ತರ “ಇಲ್ಲ, ಅವು ಬೇರೆ ಬೇರೆ. ಆತ್ಮವು ಚಿರಂತನವಾದ, ಎಂದೂ ಬದಲಾಗದ ಮೂಲಸತ್ವ ಅಥವಾ ಶುದ್ಧಪ್ರಜ್ಞೆ” ಎಂದು. ಕಡುವಿಜ್ಞಾನವು ಆತ್ಮದ ಅಸ್ತಿತ್ವವನ್ನು – ವಾಸ್ತವಿಕ ಸಾಕ್ಷಿಗಳ ಕೊರತೆಯ ಕಾರಣಕ್ಕಾಗಿ – ಒಪ್ಪುವುದಿಲ್ಲ. ಸದ್ಯಕ್ಕೆ ಈ ಪ್ರಬಂಧದಲ್ಲಿ ಆತ್ಮವನ್ನು ಕುರಿತು ಚರ್ಚಿಸುತ್ತಿಲ್ಲ. `ಮನಸ್ಸಿನ’ ಸಂಕೀರ್ಣತೆಯೇ ಇಲ್ಲಿ ನಮಗೆ ಸಾಕಷ್ಟು ನೀರು ಕುಡಿಸುತ್ತಿದೆ! ಆತ್ಮವನ್ನು ಕುರಿತ ಚರ್ಚೆಯನ್ನು ಇನ್ನೊಮ್ಮೆ ಮಾಡೋಣ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ನಲವತ್ತೊಂದನೆಯ ಬರಹ
ಬಹಳ ವರ್ಷಗಳ ಹಿಂದೆ ಅಂದರೆ, 1970ರಲ್ಲಿ ಕನ್ನಡದ ಅಗ್ರಗಣ್ಯ ಸಾಹಿತಿಗಳಲ್ಲಿ ಒಬ್ಬರಾದ ಡಾ. ಕೆ. ಶಿವರಾಮ ಕಾರಂತರು `ಮೈ ಮನಗಳ ಸುಳಿಯಲ್ಲಿ’ ಎಂಬ ಕಾದಂಬರಿ ಬರೆದಿದ್ದರು. ಪ್ರವೃತ್ತಿ-ಆಸಕ್ತಿಗಳಿಂದ ಅದ್ಭುತ ಸಂಗೀತ ಕಲಾವಿದೆ ಹಾಗೂ ವೃತ್ತಿಯಿಂದ ವೇಶ್ಯೆಯಾಗಿದ್ದ ಮಂಜುಳೆ ಎಂಬ ಮುಖ್ಯಪಾತ್ರವನ್ನು ಇರಿಸಿಕೊಂಡು, ಗಂಡು ಹೆಣ್ಣುಗಳ ಸಂಬಂಧದಲ್ಲಿ ಮೈ ಮನಸ್ಸುಗಳ ತೃಪ್ತಿಯ ಬಗ್ಗೆ, ಅಶ್ಲೀಲವಲ್ಲದ ಕಲಾಶೃಂಗಾರದ ದಾರಿಯಲ್ಲಿ ಜಿಜ್ಞಾಸೆ ನಡೆಸಿದ್ದರು. `ಪ್ರೇಮ-ಕಾಮಗಳ ದೃಷ್ಟಿಯಿಂದ ಪರಿಭಾವಿಸಿದಾಗ ಮೈಗಳು ಬೆರೆತಾಗಲೆಲ್ಲ ಮನಸ್ಸುಗಳು ಬೆರೆಯುತ್ತವೊ ಇಲ್ಲವೊ? ಮೈ ಹಾಗೂ ಮನಸ್ಸು ಬೆರೆಯುವಂತಹ ಸಂದರ್ಭ ಸೃಷ್ಟಿಯಾಗುವುದು ಹೇಗೆ?’ ಎಂಬ ಪ್ರಶ್ನೆಗಳನ್ನು ಕುರಿತು ಆ ಕಾದಂಬರಿಯಲ್ಲಿ ಬಹಳ ಪ್ರಯೋಗಾತ್ಮಕವಾಗಿ ಮತ್ತು ಆಳವಾಗಿ ವಿಶ್ಲೇಷಿಸಿದ್ದಾರೆ ಆ ಹಿರಿಯ ಲೇಖಕರು.
*****
ಮೈ ಮನಸ್ಸುಗಳ ದ್ವಂದ್ವವು ಆಧುನಿಕ ಕನ್ನಡ ಸಾಹಿತ್ಯದ ಮುಖ್ಯ ಪ್ರೇರಣೆಗಳಲ್ಲಿ ಒಂದು ಎಂದರೆ ಉತ್ಪ್ರೇಕ್ಷೆ ಅಲ್ಲ. ಗಿರೀಶ್ ಕಾರ್ನಾಡರ ಹಯವದನ, ನಾಗಮಂಡಲ, ಚಂದ್ರಶೇಖರ ಕಂಬಾರರ ಸಿರಿಸಂಪಿಗೆ, ಅನಂತಮೂರ್ತಿಯವರ ಹಲವು ಕಥೆ-ಕಾದಂಬರಿಗಳು ಈ ಮೈ-ಮನಸ್ಸಿನ ದ್ವಂದ್ವಗಳ ಬಗ್ಗೆ ಹಲವು ಬಗೆಯಲ್ಲಿ ಅನುಸಂಧಾನ ನಡೆಸಿವೆ. ಗಂಡು-ಹೆಣ್ಣುಗಳ ಪ್ರೇಮ-ಕಾಮ-ಮಿಲನದ ದೃಷ್ಟಿಯಿಂದ ಮೈ ಮತ್ತು ಮನಸ್ಸು ಎರಡೂ ಬೆರೆಯುವ ಬಿಂದುವಿಗಾಗಿ ಈ ಸಾಹಿತ್ಯ ಕೃತಿಗಳ ನಾಯಕ-ನಾಯಕಿಯರು ಹಂಬಲಿಸಿ ಪರಿತಪಿಸಿದ್ದಾರೆ, ಕಷ್ಟಗಳನ್ನು ಅನುಭವಿಸಿದ್ದಾರೆ, ನಾಗದಿವ್ಯ, ಅಗ್ನಿದಿವ್ಯಗಳಲ್ಲಿ ತಮ್ಮ ಸತ್ವಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಒಂದು ಉದಾಹರಣೆಯನ್ನು ನೋಡುವುದಾದರೆ, ಕಂಬಾರರ `ಸಿರಿಸಂಪಿಗೆ’ ನಾಟಕದಲ್ಲಿ (ಪ್ರಕಟಣೆ – 1991) ಇಲ್ಲಿನ ನಾಯಕ ಶಿವನಾಗದೇವನು ತನ್ನನ್ನು ತಾನು ಸೀಳಿಸಿಕೊಂಡು, ದೇಹ ಹಾಗೂ ಮನಸ್ಸು ಎಂದು ಎರಡು ಭಾಗವಾಗಿ ಒಡೆದುಕೊಳ್ಳುತ್ತಾನೆ. ಅವನ ಮನಸ್ಸು ತನ್ನೊಳಗೆ ಅಂದರೆ ತನ್ನ ಕಲ್ಪನೆಯಲ್ಲಿ ಇರುವ ದೀಪದ ಮೊಲ್ಲೆ ಎಂಬ ಬಿಂಬವನ್ನು ಅಪಾರವಾಗಿ ಪ್ರೀತಿಸುತ್ತದೆ; ಈ ಮನಸ್ಸಿಗೆ ತಾನು ಶಾಸ್ತ್ರೋಕ್ತವಾಗಿ ಕೈ ಹಿಡಿದ ಹೆಂಡತಿ ಸಿರಿಸಂಪಿಗೆಯನ್ನು ಪ್ರೀತಿಸಲು ಸಾಧ್ಯವಾಗುವುದಿಲ್ಲ. ಆದರೆ ಎರಡಾಗಿ ಒಡೆದುಕೊಂಡ ಅವನ ಭಾಗಗಳಲ್ಲಿ ಒಂದು ಭಾಗವಾದ ಅವನ ದೇಹವು ಒಂದು ಹಾವಾಗಿ ಮಾರ್ಪಟ್ಟು ನಾಗಲೋಕದ ರಾಜನಾದ ಕಾಳಿಂಗನಲ್ಲಿ ಸೇರುತ್ತದೆ! ಕಾಳಿಂಗನು ಸಿರಿಸಂಪಿಗೆಯನ್ನು ಕೂಡಲು ಬಹುವಾಗಿ ಹಂಬಲಿಸಿ ಅವಳನ್ನು ಹುಡುಕಿಕೊಂಡು ಬಂದು, ಆ ಸುಂದರಿಯನ್ನು ಒಲಿಸಿಕೊಳ್ಳಲಿಕ್ಕಾಗಿ ಅವಳ ಪತಿ ಶಿವನಾಗದೇವನ ರೂಪವನ್ನು ಧರಿಸುತ್ತಾನೆ! ಈ ಮರ್ಮ ಅರಿಯದ ಸಿರಿಸಂಪಿಗೆಯು ಶಿವನಾಗದೇವನನ್ನು ಕೂಡುತ್ತಾಳೆ ಮತ್ತು ಗರ್ಭಿಣಿಯೂ ಆಗುತ್ತಾಳೆ. ಅವಳ ಶೀಲವನ್ನು ಶಂಕಿಸಿದ `ಪತಿ’ ಶಿವನಾಗದೇವನು(ನಾಟಕದ ನಾಯಕನ ದೇಹ ಇಲ್ಲದ ಮನಸ್ಸಿನ ಭಾಗ) ಸಿರಿಸಂಪಿಗೆಯು, ಊರಿನ ದೇವಸ್ಥಾನದಲ್ಲಿ ಎಲ್ಲರ ಮುಂದೆ ನಾಗದಿವ್ಯವನ್ನು ಮಾಡಿ – ಅಂದರೆ ಜೀವಂತ ನಾಗರಹಾವನ್ನು ಕೈಯಲ್ಲಿ ಹಿಡಿದು, ಅದರಿಂದ ಕಚ್ಚಿಸಿಕೊಳ್ಳದೆ ಉಳಿದು – ತನ್ನ ಪಾವಿತ್ರ್ಯವನ್ನು ರುಜುವಾತು ಮಾಡಬೇಕೆಂದು ರಾಜಾಜ್ಞೆ ವಿಧಿಸುತ್ತಾನೆ. ಅದರಂತೆ ಸಿರಿಸಂಪಿಗೆಯು ನಾಗದಿವ್ಯ ಮಾಡುವಾಗ, ಸ್ವತಃ ಕಾಳಿಂಗನೇ ಅವಳು ಕೈಯಲ್ಲಿ ಹಿಡಿಯಲಿರುವ ಹಾವಾಗಿ ಬಂದು ಅವಳನ್ನು ಕಾಪಾಡುತ್ತಾನೆ. ಆದರೆ ಶಿವನಾಗದೇವನು ಕೋಪದಿಂದ ಆ ಹಾವನ್ನು (ಅಂದರೆ ತನ್ನ ಅರ್ಧ ಭಾಗವನ್ನು, ಅರ್ಥಾತ್ ತನ್ನ ದೇಹವನ್ನು) ಕೊಂದು ತಾನೂ ಸಾಯುವುದರೊಂದಿಗೆ ನಾಟಕವು ದುರಂತದಲ್ಲಿ ಅಂತ್ಯಗೊಳ್ಳುತ್ತದೆ. ಸಾರ್ಥಕ ಸಂಬಂಧಗಳಲ್ಲಿ ದೇಹ ಮತ್ತು ಮನಸ್ಸು ಎರಡಾಗಿ ಒಡೆಯದಿರುವ ಮಹತ್ವವನ್ನು ಈ ಕೃತಿಯು ಎತ್ತಿ ಹಿಡಿಯುತ್ತದೆ.
*****
ಏನಿದು ಈ ದೇಹ-ಮನಸ್ಸುಗಳ ದ್ವಂದ್ವ? ಅವುಗಳಲ್ಲಿ ಸಹಮತವಿರುತ್ತದೋ ಅಥವಾ ಒಂದಕ್ಕೊಂದು ಅವು ವಿರುದ್ಧವೋ? ಎತ್ತು ಏರಿಗೆಳೆದರೆ ಕೋಣ ನೀರಿಗೆಳೆಯುವ ವಿಪರೀತದ ವಿಕಟಹಾಸ್ಯವೋ ಅಥವಾ ಹಾಲು ಜೇನು ಬೆರೆತಂತಹ ಸಾಮರಸ್ಯವೋ ಅವುಗಳದ್ದು? ಇದರ ಮರ್ಮವೇನು?
ಮನುಕುಲದ ದಾಖಲಿತ ಚರಿತ್ರೆಯ ಕಾಲದಿಂದಲೂ ವಿವಿಧ ರೂಪಗಳಲ್ಲಿ ಅಸ್ತಿತ್ವದಲ್ಲಿರುವ ಹಾಗೂ ಇಂದಿಗೂ ಸಮಾಜದ ಗುಪ್ತಲೋಕಗಳಲ್ಲಿ ಉಳಿದು ಬಾಳುತ್ತಿರುವ ವೇಶ್ಯಾವೃತ್ತಿಯಲ್ಲಿನ ಒಂದು ಮುಖ್ಯ ಪ್ರಶ್ನೆಯೂ ದೇಹ ಮನಸ್ಸುಗಳ ಸಂಬಂಧದ ವಿಷಯದಲ್ಲಿ ಗಂಭೀರ ಪ್ರಶ್ನೆಗಳನ್ನು ಎತ್ತುತ್ತದೆ. ವೇಶ್ಯೆ-ವಿಟ ಅಥವಾ ಗಂಡುವೇಶ್ಯೆ-ವಿಟೆಯರ ನಡುವೆ ಇರುವ ಸಂಬಂಧ ಕೇವಲ ದೇಹದ್ದೋ? ಆ ತಾತ್ಕಾಲಿಕ ಸಂಪರ್ಕದಲ್ಲಿ ಮನಸ್ಸು ಏನು ಮಾಡುತ್ತಿರುತ್ತದೆ? `ದೇಹವನ್ನು ಮಾರುವ-ಕೊಳ್ಳುವ’ ಪರಿಕಲ್ಪನೆಯು ಮನುಕುಲದ ಚರಿತ್ರೆಯಲ್ಲಿ ಬಂದದ್ದಾದರೂ ಹೇಗೆ? ಆಧುನಿಕ ಸಮಾಜಗಳಲ್ಲಿ ಆಗಾಗ ಪ್ರಸ್ತಾಪಿತವಾಗುವ ನೋ ಸ್ಟ್ರಿಂಗ್ಸ್, ಒನ್ ನೈಟ್ ಸ್ಟ್ಯಾಂಡ್, ಸಿಚುಯೇಷನ್ಶಿಪ್, ಜಸ್ಟ್ ಎ ಫ್ಲಿಂಗ್……. ಈ ಮುಂತಾದ ದೇಹ ಮಾತ್ರ ಭಾಗವಹಿಸುವ ಗಂಡು-ಹೆಣ್ಣು ಸಂಬಂಧಗಳಲ್ಲಿ ಮನಸ್ಸಿನ ಪಾತ್ರ ಏನು?

ವಿಜ್ಞಾನವು ಮನಸ್ಸು ಎಂಬ ಪದಕ್ಕೆ “ಪ್ರಜ್ಞೆ, ಗ್ರಹಿಕೆ, ಆಲೋಚನೆ, ಅಂದಾಜಿಸುವ ಹಾಗೂ ತೀರ್ಮಾನಿಸುವ ಶಕ್ತಿ, ಭಾಷೆ ಮತ್ತು ನೆನಪಿನ ಕೌಶಲ್ಯಗಳು ಸೇರಿದ ಅರಿವುಗಳ ಒಂದು ಕಟ್ಟು. ಅದು ಜಾಗ್ರತ ಪ್ರಜ್ಞೆ ಹಾಗೂ ಸುಪ್ತ ಪ್ರಜ್ಞೆಗಳ ನಡುವಿನ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತದೆ. ಹಾಗೂ ಮೆದುಳು ಎಂಬ ಯಂತ್ರಾಂಶದ ತಂತ್ರಾಂಶವಾಗಿರುತ್ತದೆ” ಎಂಬ ಸಂಕೀರ್ಣ ವ್ಯಾಖ್ಯೆಯನ್ನು ಕೊಡುತ್ತದೆ. ಇನ್ನು ಮನಸ್ಸು ಮತ್ತು ಆತ್ಮ ಎಂದರೆ ಒಂದೆಯೇ ಅಥವಾ ಬೇರೆಬೇರೆಯೇ ಎಂಬ ನಮ್ಮ ಪ್ರಶ್ನೆಗೆ ಧರ್ಮಶಾಸ್ತ್ರ ಹಾಗೂ ತತ್ವಶಾಸ್ತ್ರಗಳು ಕೊಡುವ ಉತ್ತರ “ಇಲ್ಲ, ಅವು ಬೇರೆ ಬೇರೆ. ಆತ್ಮವು ಚಿರಂತನವಾದ, ಎಂದೂ ಬದಲಾಗದ ಮೂಲಸತ್ವ ಅಥವಾ ಶುದ್ಧಪ್ರಜ್ಞೆ” ಎಂದು. ಕಡುವಿಜ್ಞಾನವು ಆತ್ಮದ ಅಸ್ತಿತ್ವವನ್ನು – ವಾಸ್ತವಿಕ ಸಾಕ್ಷಿಗಳ ಕೊರತೆಯ ಕಾರಣಕ್ಕಾಗಿ – ಒಪ್ಪುವುದಿಲ್ಲ. ಸದ್ಯಕ್ಕೆ ಈ ಪ್ರಬಂಧದಲ್ಲಿ ಆತ್ಮವನ್ನು ಕುರಿತು ಚರ್ಚಿಸುತ್ತಿಲ್ಲ. `ಮನಸ್ಸಿನ’ ಸಂಕೀರ್ಣತೆಯೇ ಇಲ್ಲಿ ನಮಗೆ ಸಾಕಷ್ಟು ನೀರು ಕುಡಿಸುತ್ತಿದೆ! ಆತ್ಮವನ್ನು ಕುರಿತ ಚರ್ಚೆಯನ್ನು ಇನ್ನೊಮ್ಮೆ ಮಾಡೋಣ.
*****
ವೈದ್ಯರು ಅದರಲ್ಲೂ ಮನಃಶಾಸ್ತ್ರಜ್ಞರು `ಸೈಕೋಸೊಮ್ಯಾಟಿಕ್ ಡಿಸೀಸಸ್’(ಮನೋದೈಹಿಕ ಜಾಡ್ಯಗಳು) ಎಂಬ ವಿಷಯವನ್ನು ಪ್ರಸ್ತಾಪಿಸುವುದು ಮಾತ್ರವಲ್ಲ, ಅವುಗಳನ್ನು ವಿಶದವಾಗಿ ಚರ್ಚಿಸುತ್ತಾರೆ. ದೇಹದ ಮೇಲೆ ಮನಸ್ಸಿನ ಒತ್ತಡ, ಉದ್ವೇಗ, ಅಶಾಂತಿಗಳಿಂದ ಉಂಟಾಗುವ ನಕಾರಾತ್ಮಕ ಪರಿಣಾಮಗಳನ್ನು ಕುರಿತು ಒಂದು ಸಿದ್ಧಾಂತವನ್ನೇ ರಚಿಸಿದ್ದಾರೆ ಅವರು.
ಮನಃಶ್ಯಾಸ್ತ್ರಜ್ಞರು ಚರ್ಚಿಸುವ ಗಂಭೀರ ಮಾನಸಿಕ ರೋಗಗಳಲ್ಲಿ ಬಾರ್ಡರ್ಲೈನ್ ಪರ್ಸನಾಲಿಟಿ ಡಿಸ್ಆರ್ಡರ್(ಅತಿರೇಕದಂಚಿನ ವ್ಯಕ್ತಿತ್ವ ಅಸ್ವಸ್ಥತೆ) ಎಂಬ ಖಾಯಿಲೆಯೂ ಒಂದು. ಇದರಲ್ಲಿ ತುಂಬ ವಿಷಾದಮಯ ಹಾಗೂ ಕುತೂಹಲಕರ ಅಂಶಗಳಿವೆ. ಈ ರೋಗ ಇರುವವರು ವಿದ್ಯಾಭ್ಯಾಸ, ವೃತ್ತಿ, ವಾಹನ ಚಾಲನೆ, ವ್ಯವಹಾರವೇ ಮುಂತಾದ ಜೀವನಾಧಾರ ಚಟುವಟಿಕೆಗಳನ್ನು, ರೋಗವಿಲ್ಲದ ಇತರ ಮನುಷ್ಯರಂತೆಯೇ ಸಾಮಾನ್ಯವಾಗಿ ಮಾಡುತ್ತಿದ್ದರೂ, ಗಾಢ ಸ್ನೇಹ, ಕೌಟುಂಬಿಕ ಸಂಬಂಧಗಳು ಮತ್ತು ಪ್ರೀತಿ ಪ್ರೇಮದಂತಹ ಆಪ್ತ ನೆಲೆಗಳಲ್ಲಿ ವಿಪರೀತ ಅಸ್ಥಿರತೆ ಹಾಗೂ ಏರುಪೇರುಗಳಿಂದಾಗಿ, ತಾವು ಪ್ರೀತಿಸುತ್ತಿರುವವರನ್ನೇ ದೂರ ಮಾಡುತ್ತಾರಂತೆ! ಹೀಗಾಗಿ ಯಾವುದೇ ಅರ್ಥಪೂರ್ಣವಾದ ದೀರ್ಘಕಾಲೀನ ಆಪ್ತ ಸಂಬಂಧವನ್ನು ಹೊಂದುವಲ್ಲಿ ಈ ರೋಗ ಇರುವವರು ವಿಫಲರಾಗುತ್ತಾರೆಂದು ಗುರುತಿಸಲಾಗಿದೆ. ರೋಗಗ್ರಸ್ತ ಮನಸ್ಸು ಮೈಯನ್ನು ಅತಿಕ್ರಮಿಸಿ ಯಾರೊಡನೆಯೂ ಸಾರ್ಥಕ ಸಂಬಂಧವು ಸಾಧ್ಯವಾಗದ ದುರಂತವಿದು.
ವಿವೇಕಾನಂದರು ಒಮ್ಮೆ ಹೇಳಿದ್ದರು – `ಸದೃಢ ದೇಹದಲ್ಲಿ ಸದೃಢ ಮನಸ್ಸು ಇರುತ್ತದೆ’ ಎಂದು. ವ್ಯಾಯಾಮ, ಯೋಗ ಮುಂತಾದ ಯುಕ್ತವಾದ ಶಾರೀರಿಕ ಚಟುವಟಿಕೆಗಳಿಂದ ದೇಹಾರೋಗ್ಯವನ್ನು ಕಾಪಾಡಿಕೊಳ್ಳಲು ಕೊಟ್ಟ ಕರೆ ಅದು ಅನ್ನಬಹುದು. ಇದರಲ್ಲಿ ಅಸಾಧುವಾದುದು ಏನೂ ಇಲ್ಲ. ಆದರೆ, ಇಂದು ಮನಃಶಾಸ್ತ್ರಜ್ಞರು ಪ್ರಸ್ತಾಪಿಸುತ್ತಿರುವ ಹಾಗೂ ಇಂದಿನ ಮಾಹಿತಿ ತಂತ್ರಜ್ಞಾನಾಧಾರಿತ ಜೀವನದಲ್ಲಿ ಕಂಡುಬರುತ್ತಿರುವ ಕೆಲವು ರೋಗಗಳಲ್ಲಿ ದೇಹ ಸದೃಢವಾಗಿದ್ದರೂ ಮನಸ್ಸು ರೋಗಗ್ರಸ್ತವಾಗಿರುವ ಅನೇಕ ವಿದ್ಯಮಾನಗಳನ್ನು ಗಮನಿಸುತ್ತೇವೆ. ಬೈಪೋಲಾರ್ ಡಿಸ್ಆರ್ಡರ್, ಬಾರ್ಡರ್ಲೈನ್ ಪರ್ಸನಾಲಿಟಿ ಡಿಸ್ಆರ್ಡರ್, ಎಡಿಎಚ್ಡಿ ಮುಂತಾದ ಹತ್ತುಹಲವು ಮಾನಸಿಕ ರೋಗಗಳು ಮನುಕುಲವನ್ನು ಕಾಡುವುದನ್ನು ಪತ್ತೆ ಹಚ್ಚಲಾಗಿದೆ. ವೃತ್ತಿ, ವ್ಯವಹಾರಗಳ ವಿಷಯದಲ್ಲಿ `ಎಲ್ಲರಂತೆ ಇರುವವರು’ ತಮ್ಮ ಆಪ್ತ ಸಂಬಂಧಗಳ ವಿಷಯದಲ್ಲಿ ವಿಚಿತ್ರವಾಗಿ, ಅತಾರ್ಕಿಕವಾಗಿ ವರ್ತಿಸಿ ಸ್ನೇಹ-ಪ್ರೀತಿಗಳನ್ನು ಕಾರ್ಯವಿಫಲ(ಡಿಸ್ಫಂಕ್ಷನಲ್)ಗೊಳಿಸುವುದನ್ನು ಗಮನಿಸಲಾಗಿದೆ! ಸ್ನೇಹ-ಪ್ರೀತಿಗಳನ್ನು ನೋಯಿಸುವುದರಿಂದ ಹಿಡಿದು ಆತ್ಮಹತ್ಯೆ-ಕೊಲೆಗಳ ತನಕ ಈ ಮನೋವಿಕಲ್ಪ ಮುಂದುವರಿಯುತ್ತದೆಂದರೆ ದೇಹ-ಮನಸ್ಸುಗಳ ಈ ಚಕ್ರಸುಳಿಯ ಆಟಾಟೋಪ ನೋಡಿ ವಿಷಾದಿಸುವುದನ್ನು ಬಿಟ್ಟರೆ ನಮಗೆ ಏನು ಮಾಡಲು ಸಾಧ್ಯ ಇದೆ!?
ಈ ದಿನಗಳಲ್ಲಿ ಮಕ್ಕಳಲ್ಲಿ ಉಂಟಾಗುತ್ತಿರುವ ಏಕಾಗ್ರತೆಯ ಕೊರತೆಯ ಗಂಭೀರ ಸಮಸ್ಯೆ ಕೂಡ ಇಂತಹ ಸಮಸ್ಯೆಗಳಲ್ಲಿ ಒಂದು. ಇಡೀ ದಿನ ಆಧುನಿಕ ಮಾಹಿತಿ ತಂತ್ರಜ್ಞಾನದ ಉಪಕರಣಗಳ ಪರದೆಯ ಮೇಲೆ ತಮ್ಮ ಬೆರಳು ಜಾರಿಸುತ್ತಿರುವ ಮಕ್ಕಳು ಎಂತೆಂತಹ ಹಳವಂಡಗಳಿಗೆ ಸಿಕ್ಕುತ್ತಿದ್ದಾರೆ ಎಂಬುದನ್ನು ನೋಡಿದರೆ ಗಾಬರಿಯಾಗುತ್ತದೆ.
*****
ಶಾಲಾಕಾಲೇಜುಗಳಿಗೆ ಹೋಗಿ ವಿದ್ಯಾಭ್ಯಾಸ ಕಲಿತಿರುವ ಯಾರಿಗೇ ಆದರೂ ಅಧ್ಯಾಪಕರ ಬಹು ಮೆಚ್ಚಿನ ಒಂದು ಗದರಿಕೆ ನೆನಪಿರುತ್ತದೆ – `ಯೂ ಆರ್ ಫಿಸಿಕಲಿ ಪ್ರೆಸೆಂಟ್ ಬಟ್ ಮೆಂಟಲಿ ಆಬ್ಸೆಂಟ್’! ಅಧ್ಯಾಪಕರು `ಮನಸ್ಸಿಟ್ಟು’ ಆಸಕ್ತಿಯಿಂದ ಮಾಡುತ್ತಿರುವ ಪಾಠದ ಬಗೆಗೆ ಗಮನ ಕೊಡದೆ ಮಾನಸಿಕವಾಗಿ ಎಲ್ಲೋ ಹೋಗಿರುವಂತೆ ಭಾಸವಾಗುವ ತನ್ನ ಶಿಷ್ಯ ಮಹಾಶಯನ ವರ್ತನೆಯಿಂದ ತುಂಬ ಕಿರಿಕಿರಿಗೊಂಡು “ಅಯ್ಯೋ, ಮೂರ್ಖ ವಿದ್ಯಾರ್ಥಿಯೇ! ನೀನು ದೈಹಿಕವಾಗಿ ಮಾತ್ರ ತರಗತಿಯಲ್ಲಿದ್ದಿ. ನಿನ್ನ ಮನಸ್ಸು ತರಗತಿಯಲ್ಲಿಲ್ಲ, ಬೇಗ ಮನಸ್ಸನ್ನು ತರಗತಿಗೆ ಕರೆದು ತಾರೋ ಮಂಗ್ಯಾ” ಎಂದು ಗದರುವ ರೀತಿ ಇದು.
ಮನಸ್ಸು ನಮ್ಮ ಆತ್ಮವಿಶ್ವಾಸವನ್ನು ಪರಿಣಮಿಸುವುದನ್ನು ಕುರಿತು ಮಾಡಲಾದ ಒಂದು ಪ್ರಯೋಗದ ಬಗ್ಗೆ ಒಮ್ಮೆ ನಾನು ಓದಿದ್ದೆ. ಹೊಸದಾಗಿ ಕೆಲಸಕ್ಕೆ ಸೇರಿದ್ದ ಒಬ್ಬ ಯುವಕನ ಮೇಲೆ ಈ ಪ್ರಯೋಗ ನಡೆಯುತ್ತದೆ. ಒಂದು ದಿನ ಬೆಳಿಗ್ಗೆ ಎಂದಿನಂತೆ ಶುಭ್ರವಾಗಿ ಸ್ನಾನ ಮಾಡಿ ತನ್ನ ಇಷ್ಟದ ಉಡುಪು ತೊಟ್ಟು ಠಾಕುಠೀಕಾಗಿ, ಖುಷಿಖುಷಿಯಾಗಿ ಉತ್ಸಾಹದಿಂದ ಆ ಯುವಕ ಕೆಲಸಕ್ಕೆ ಬರುತ್ತಾನೆ. ಅಂದು ತನ್ನ ಅಂದರೆ ತನ್ನ ಮನಸ್ಸಿನ ಮೇಲೆ ಪ್ರಯೋಗ ನಡೆಯಲಿದೆ ಎಂಬ ವಿಷಯವು ಅವನಿಗೆ ಗೊತ್ತಿರುವುದಿಲ್ಲ. ಆದರೆ, ಅವನನ್ನು ಬಿಟ್ಟು ಕಛೇರಿಯ ಉಳಿದ ಎಲ್ಲ ಜನರಿಗೂ ಅಂದು ನಡೆಯಲಿರುವ ಪ್ರಯೋಗದ ಬಗ್ಗೆ ಗೊತ್ತಿರುತ್ತದೆ. ಆ ಯುವಕನು ಕಛೇರಿಗೆ ಕಾಲಿಡುತ್ತಿದ್ದಂತೆ ಸ್ವಾಗತಕಾರಿಣಿಯು “ಅಯ್ಯೋ, ಇವತ್ತು ಏನಾಯ್ತು? ಯಾಕೆ ಇಷ್ಟು ಸಪ್ಪಗೆ ಕಾಣ್ತಿದೀರ? ನಿಮ್ಮ ಶರಟು ಪ್ಯಾಂಟು ಒಂದಕ್ಕೊಂದು ಹೊಂದ್ತಾನೆ ಇಲ್ಲ! ಯಾಕೆ, ಗಮನ ಕೊಡ್ಲಿಲ್ವಾ?” ಅನ್ನುತ್ತಾಳೆ. `ಓಹ್, ಇದೇನು!… ಇವತ್ತು ನನ್ನ ಉಡುಪು ಚೆನ್ನಾಗಿಲ್ಲವೇ? ಛೆ” ಎಂದು ಅವನ ಮುಖ ಸಪ್ಪಗಾಗುತ್ತದೆ. ಹಾಗೆಯೇ ಅವನು ಕಛೇರಿಯ ಒಳಗೆ ಹೋಗುತ್ತಿದ್ದಂತೆ ಬೇರೆ ಸಹೋದ್ಯೋಗಿಗಳು ಕೂಡ `ಏನಾಯ್ತು? ಛೆ. ಇವತ್ತು ತುಂಬ ಸಪ್ಪಗೆ ಕಾಣ್ತಿದೀರ! ಕಳೆಯೇ ಇಲ್ಲ’, “ನೀವು ಹಾಕ್ಕೊಂಡಿರೋ ಬಟ್ಟೆ ಏನೂ ಚೆನ್ನಾಗಿಲ್ಲ”….. ಹೀಗೆ ನಕಾರಾತ್ಮಕವಾದ ಮಾತುಗಳನ್ನು ಹೇಳುತ್ತಲೇ ಹೋದರು. ಕೊನೆಗೆ ಆ ಯುವಕನಿಗೆ ಎಷ್ಟು ಬೇಸರ, ಒತ್ತಡ, ಆತಂಕಗಳಾದವೆಂದರೆ ಅವನ ದೇಹ ನಿಜಕ್ಕೂ ಅಸ್ವಸ್ಥವಾಯಿತು. ಮುಖ ಕಂದಿಹೋಗಿ, ತಲೆ ನೋವು ಬಂದಂತಾಗಿ ಅವನು ತನ್ನ ಮೇಲಧಿಕಾರಿಯ ಬಳಿ ಹೋಗಿ ಅಂದು ತನಗೆ `ಮೈಯಲ್ಲಿ ಚೆನ್ನಾಗಿಲ್ಲದಿರುವುದರಿಂದ’ ತಾನು ರಜೆ ಹಾಕಿ ಮನೆಗೆ ಹೋಗುತ್ತೇನೆ ಎಂದು ರಜಾ ಚೀಟಿ ಕೊಟ್ಟು ಮನೆಗೆ ಹೋದ! ಅಂತೂ ಮನಸ್ಸೆಂಬೋ ಮನಸ್ಸು ದೇಹದ ಮೇಲೆ ಹೊಂದಿರುವ ಅಸೀಮ ಹತೋಟಿಯು ಆ ಪ್ರಯೋಗದಿಂದಾಗಿ ರುಜುವಾತಾಯಿತು.
*****
ಬಹಳ ಆತಂಕವನ್ನು ಸಹ ಹುಟ್ಟಿಸುವ ಒಂದು ವಿಷಯ ಅಂದರೆ ಸದಾಕಾಲ ಪರದೆಗಳ ಮೇಲೆಯೇ ತಮ್ಮ ಕಣ್ಣು, ಮನಸ್ಸುಗಳ ಸಂಪೂರ್ಣ ಗಮನವನ್ನು ಕೊಟ್ಟಿರುವ ಜನರ ದೈಹಿಕ ಹಾಗೂ ಮಾನಸಿಕ ಆರೋಗ್ಯಗಳು ಇಂದು ಹಾಳಾಗುತ್ತಿರುವ ರೀತಿ. ಆ ಪರದೆಗಳನ್ನು ಹೊಂದಿದ ದೂರವಾಣಿ, ಗಣಕಯಂತ್ರಗಳನ್ನು ಅತಿಯಾಗಿ ಬಳಸುವುದರಿಂದ ಮೆದುಳಿನಲ್ಲಿರುವ ಪಿಟ್ಯುಟರಿ ಎಂಬ ಗ್ರಂಥಿಯ ಮೇಲೆ ಪರಿಣಾಮ ಆಗುತ್ತಿದೆಯಂತೆ. ಈ ಪಿಟ್ಯುಟರಿ ಗ್ರಂಥಿಯು ನಮ್ಮ ಯಕೃತ್ತನ್ನು ನಿಯಂತ್ರಿಸುತ್ತದೆ. ಹೀಗಾಗಿ ಮಾಹಿತಿ ತಂತ್ರಜ್ಞಾನ ಯುಗದ ಅನೇಕ `ಜೀವನ ಶೈಲಿ’ ಖಾಯಿಲೆಗಳಿಗೆ ಈ ಉಪಕರಣಗಳ ಮೇಲಿನ ಅತಿ ಅವಲಂಬನೆಯು ಕಾರಣವಾಗುತ್ತದಂತೆ! ಮೊದಲೇ ತುಂಬ ಸೂಕ್ಷ್ಮವಾದ ಮನಸ್ಸು ಈ ತಂತ್ರಜ್ಞಾನ ಯುಗದಲ್ಲಿ ಇನ್ನಷ್ಟು ಸೂಕ್ಷ್ಮಗೊಂಡಿದೆ! ದೇಹ ಮನಸ್ಸುಗಳ ಸಂಬಂಧವು ಹದಗೆಡಲು ಈಗ ಇನ್ನೊಂದು ದೊಡ್ಡ ಕಾರಣ ಸಿಕ್ಕಿದಂತಾಯಿತು.
ಬಸವಣ್ಣನವರು “ಕಾಲಲ್ಲಿ ಕಟ್ಟಿದ ಗುಂಡು, ಕೊರಳಲ್ಲಿ ಕಟ್ಟಿದ ಬೆಂಡು, ತೇಲಲೀಯದು ಗುಂಡು, ಮುಳುಗಲೀಯದು ಬೆಂಡು, ಇಂತಪ್ಪ ಸಂಸಾರ ಶರಧಿಯ ದಾಂಟಿಸಿ ಕಾಯೋ ಕಾಲಾಂತಕನೆ… ಕೂಡಲ ಸಂಗಮದೇವಾ” ಎಂದು ತಮ್ಮ ವಚನವೊಂದರಲ್ಲಿ ಮೊರೆಯಿಟ್ಟಿದ್ದಾರೆ. ಇದರಲ್ಲಿ ಗುಂಡನ್ನು ದೇಹ ಹಾಗೂ ಬೆಂಡನ್ನು ಮನಸ್ಸು ಎಂದು ಭಾವಿಸಿ ಮನುಷ್ಯನು ದೇಹ ಮನಸ್ಸುಗಳ ಚಕ್ರಸುಳಿಯಲ್ಲಿ ಸಿಲುಕಿ ಒದ್ದಾಡುವುದನ್ನು ವಿವರಿಸಿಕೊಳ್ಳಲು ಸಾಧ್ಯವಿದೆ.

ಒಟ್ಟಿನಲ್ಲಿ ಮನುಷ್ಯನ ಮನಸ್ಸನ್ನು ಅನೇಕ ಪದರಗಳಿರುವ ಒಂದು ಸಂಕೀರ್ಣ ವ್ಯವಸ್ಥೆ ಎಂದು ತಿಳಿಯಬಹುದೇನೊ. ಇದರ ಜೊತೆಗೆ, ವಿಷಯವನ್ನು ಇನ್ನಷ್ಟು ಸಂಕೀರ್ಣಗೊಳಿಸಲು ದೇಹಕ್ಕೆ ಅದರದ್ದೇ ಆದ ಕೆಲವು ಸತ್ಯಗಳು, ಭಾವಾವಸ್ಥೆಗಳು ಹಾಗೂ ಸಮೀಕರಣಗಳು ಇರುವಂತೆ ತೋರುತ್ತದೆ. ಮನುಷ್ಯರ ನಡುವಿನ ಸಂಬಂಧಗಳ ಅನೇಕ ಗೋಜಲುಗಳಿಗೆ ಈ ಬಿಡಿಸಲಾರದ ಸಿಕ್ಕುಗಳೇ ಕಾರಣವಿರಬಹುದು. ಸಾಹಿತ್ಯ, ವಿಜ್ಞಾನ ತತ್ವಶಾಸ್ತ್ರ ಹಾಗೂ ಮನಃಶಾಸ್ತ್ರಗಳಂತಹ ವಿವಿಧ ಜ್ಞಾನಶಿಸ್ತುಗಳು ಈ ಸಂಕೀರ್ಣತೆಯನ್ನು ಅರಿಯಲು ಜಿಜ್ಙಾಸೆ ನಡೆಸುತ್ತಲೇ ಇವೆ. ಅಡಿಗರ ಭೂಮಿಗೀತ ಕವನದ ಕೊನೆಯ ಸಾಲುಗಳಿಂದ ಈ ಪ್ರಬಂಧವನ್ನು ಮುಕ್ತಾಯಗೊಳಿಸುತ್ತೇನೆ.
ಹೆಳವನ ಹೆಗಲ ಮೇಲೆ ಕುರುಡ ಕೂತಿದ್ದಾನೆ
ದಾರಿ ಸಾಗುವುದೆಂತೊ ನೋಡಬೇಕು.

ಡಾ.ಎಲ್.ಜಿ.ಮೀರಾ ಮೂಲತಃ ಕೊಡಗಿನವರು. ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮಿಳ್ ಕಾವ್ಯ ಮೀಮಾಂಸೆ, ಮಾನುಷಿಯ ಮಾತು (1996), ಬಹುಮುಖ (1998), ಸ್ತ್ರೀ ಸಂವೇದನೆಯಲ್ಲಿ ಕನ್ನಡ ಕಥನ ಸಂಶೋಧನೆ (ಮಹಾಪ್ರಬಂಧ) (2004), ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆ (ಸಂಪಾದನೆ) (2006), ಆಕಾಶಮಲ್ಲಿಗೆಯ ಘಮ ಎಂಬ ಸಣ್ಣಕತೆಯನ್ನು, ರಂಗಶಾಲೆ ಎಂಬ ಮಕ್ಕಳ ನಾಟಕವನ್ನು, ಕೆಂಪು ಬಲೂನು ಇತರೆ ಶಿಶುಗೀತೆಗಳು, ಕಲೇಸಂ ಪ್ರಕಟಣೆಯ ನಮ್ಮ ಬದುಕು ನಮ್ಮ ಬರಹದಲ್ಲಿ ಆತ್ಮಕತೆ ರಚಿಸಿದ್ದಾರೆ.
