Advertisement
ಮನೆಯೊಳಗಿನ-ಈಕೆ  ಮತ್ತು  ಹೊರಗಿನ-ಆಕೆ!: ಸುಕನ್ಯಾ ಕನಾರಳ್ಳಿ ಅಂಕಣ

ಮನೆಯೊಳಗಿನ-ಈಕೆ  ಮತ್ತು  ಹೊರಗಿನ-ಆಕೆ!: ಸುಕನ್ಯಾ ಕನಾರಳ್ಳಿ ಅಂಕಣ

ಮನೆಯೊಳಗಿನ ಈಕೆ  ಮನೆಯಿಂದ ಆಚೆ ಹೋಗಿ ದುಡಿದರೂ ಸಹ  ಮನೆಯನ್ನು ನಿಭಾಯಿಸುವುದು  ಕೊನೆಗೂ ಈಕೆಯ  ಹೊಣೆಯಾಗಿ ಉಳಿದುಕೊಂಡಿದೆ ಎನ್ನುವುದೂ ಸಹ ನಿಜ. ಅಲ್ಲೋ ಇಲ್ಲೋ ಗಂಡ ಮಕ್ಕಳಿಂದ ಸಹಾಯ ಸಿಗಬಹುದೇನೋ. ಅದು ಕೇವಲ ಸಹಾಯ ಅಷ್ಟೆ. ಈಕೆ ಮನೆಯನ್ನು ಸದಾ ತಲೆಯಲ್ಲಿ ಹೊತ್ತಿರುವಷ್ಟು ಮನೆಯ ಇತರರು ಹೊತ್ತಿರುವುದಿಲ್ಲ. ಅದಕ್ಕೇ  ಅವಳು ‘ಮನೆ-ಒಡತಿ’.
ಸುಕನ್ಯಾ
ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಮೂವತ್ತೊಂದನೆಯ ಬರಹ

ಮಧ್ಯಮವರ್ಗ ಎಂದರೇನು ಎಂದು ಯಾರೋ ಕೇಳಿದಾಗ ನನ್ನ ಗೆಳತಿಯ ಮಗಳೊಬ್ಬಳು ‘ತಿಂಗಳ ಮಧ್ಯದಲ್ಲೇ ಸಂಬಳ ಮುಗಿದುಹೋಗುತ್ತಲ್ಲ, ಅವರು!’ ಎಂದು ಫಟ್ಟನೆ ಉತ್ತರಿಸಿ ಖೊಳ್ಳನೆಯ ನಗೆಯೆಬ್ಬಿಸಿದ್ದಳು. ಅದು ಸ್ವಾತಂತ್ರ್ಯದ ತಕ್ಷಣದ ದಶಕಗಳಲ್ಲಿ ಇರಬಹುದು. ಮಧ್ಯಮವರ್ಗದ ಮುಖಮೂತಿ ಕಾಲಕಾಲಕ್ಕೆ ಬದಲಾಗಿದೆ ನಿಜ. ತೊಂಬತ್ತರ ದಶಕದ ಗ್ಲೋಬೀಕರಣದ ನಂತರವಂತೂ ನಗರದ ಮಧ್ಯಮವರ್ಗ ಹಠಾತ್ತನೆ ಮೇಲೇರಿ ಈಗೀಗ ದೊಪ್ಪನೆ ಕೆಳಗೆ ಬೀಳುವಂತೆ ಕಾಣಹತ್ತಿದೆ.

ಆದರೆ ವರ್ಗ ಎನ್ನುವುದು ಕೇವಲ ಆದಾಯದ ಬಾಬತ್ತಲ್ಲ. ಅದು ಒಂದು ಮನೋಭಾವ, ಧೋರಣೆ, ಮತ್ತು ಬದುಕಿನ ಶೈಲಿಯೂ ಹೌದು. ಒಂದು ಕಾಲದಲ್ಲಿ ಮಧ್ಯಮವರ್ಗ ಎಂದರೆ ನಡುಮನೆಯ ಶೋಕೇಸು ಅಂತನ್ನಿಸುತ್ತಿತ್ತು. ಆಮೇಲೆ ಟಿವಿ  ಸಹ ನಡುಮನೆಗೆ ಬಂದಿಳಿಯಿತು. ಮನೆಮಂದಿಯೆಲ್ಲ ಕೂತು ನೋಡುವ ಚಲನಚಿತ್ರ, ಧಾರಾವಾಹಿಗಳಿಂದ  ಹಿಡಿದು ರಾಷ್ಟ್ರದ ವ್ಯವಸ್ಥೆ ಉದ್ದಕ್ಕೂ ಮಧ್ಯಮವರ್ಗದ ಕಾಳಜಿಗಳೇ ಮುಖ್ಯವಾಗಿಬಿಟ್ಟವು.

ನಡುವಿನಲ್ಲಿ ಇರುವ ಈ ವರ್ಗ ಬದುಕನ್ನು ತೂಗಿಸಲು ಕಷ್ಟಪಡುತ್ತದೆ. ಅತ್ತ ಕಡೆಯ ಶ್ರೀಮಂತರ ಧೈರ್ಯ ಧಿಮಾಕುಗಳಿಲ್ಲ. ಇತ್ತ ಕಡೆಯ ಬಡವರ ಹೋಗಲೇ, ಇವತ್ತಿಗಿದ್ದರೆ ಸಾಕು ಎಂಬ ಉಡಾಫೆಯೂ ಇಲ್ಲ.   ಶ್ರೀಮಂತರು ಗೆಲ್ಲಲೆಂದೇ ಆಟಗಳನ್ನು ಹೂಡುತ್ತಾರೆ. ಹೋದರೆ ಒಂದು ಕಲ್ಲು, ಬಿದ್ದರೆ ಒಂದು ಹಕ್ಕಿ. ಆದರೆ ಮಧ್ಯಮವರ್ಗಕ್ಕೆ ಸೋಲದೆ ಮುಳುಗದೆ, ನಾಲ್ಕು ಜನರ ಕಣ್ಣಿನಲ್ಲಿ ನಗೆಪಾಟಲಿಗೆ ಗುರಿಯಾಗದೆ  ಹೇಗೋ ಈಜಿ ದಡ ಸೇರುವುದೇ ಜೀವನದ ಗುರಿಯಾಗಿಬಿಡುತ್ತದೆ.

ಆ ದಿನನಿತ್ಯದ ಹರಕತ್ತಿನಲ್ಲಿ ಬಾಳು-ವಿರೋಧಿ ಸಣ್ಣತನ, ಗೊಣಗಾಟ ಎಲ್ಲವೂ ಮೈದಾಳುತ್ತವೆ. ಜೊತೆಗೆ ಸುತ್ತಮುತ್ತಲಿನವರ ಕಣ್ಣಲ್ಲಿ ಮೇಲೇರಲು ಏನೇನೋ ಸರ್ಕಸ್! ಆ ಫ್ಯಾಂಟಸಿ ಪಾರ್ಕಿಗೆ ಹೋಗು, ಈ ಪರದೇಶ ಯಾತ್ರೆ ಮಾಡು, ಇನ್ನೊಂದು ರೆಸಾರ್ಟಿನಲ್ಲಿ ಮಕ್ಕಳ ಹುಟ್ಟುಹಬ್ಬ ನಡೆಸು… ಹೀಗೇ ನೂರಾರು. ಅಲ್ಲೆಲ್ಲೂ ಚೌಕಾಸಿ ಮಾಡುವುದಿಲ್ಲ. ಮಾನಮರ್ಯಾದೆ ಪ್ರಶ್ನೆ ತಾನೆ? ತರಕಾರಿ ಮಾರುವವಳು, ಹೂ ತರುವವಳು, ಇಸ್ತ್ರಿ ಮಾಡುವವಳು ಇವರ ಹತ್ತಿರ ಮಾತ್ರ ಬೀದಿ ಜಗಳಕ್ಕೂ ತಯಾರು!

ಹೊರಗಿನ-ಆಕೆಯರು ಮಾಡುವ ಕೆಲಸವೆಲ್ಲ ಅನಧಿಕೃತ ವಲಯಕ್ಕೆ ಸೇರಿದ್ದು.. ಮನೆಯೊಳಗಿನ-ಈಕೆಯ ಕೆಲಸ ಸಹ ಅನಧಿಕೃತವೇ. ಆದರೆ ಅವಳಿಗೆ ಗೃಹಿಣಿ, ಮನೆಯೊಡತಿ ಇತ್ಯಾದಿ ಪಟ್ಟ ಕಟ್ಟಿ ತಲೆ ಸವರಲಾಗಿದೆ. ಹೀಗೆ ಅವರಿಬ್ಬರಿಗೆ ತಾಳೆ ಹಾಕುವುದು ನಮ್ಮ ಸೆಂಟಿಮೆಂಟಲ್ ಮಧ್ಯಮವರ್ಗಕ್ಕೆ  ನೋವನ್ನುಂಟುಮಾಡಬಹುದು, ನಿಜ. ಆದರೆ ಶ್ರಮ, ವೇತನಗಳ ವ್ಯಾಪ್ತಿಯಲ್ಲಿ ನಿಂತು ಸ್ವಲ್ಪ ಮಟ್ಟಿಗಾದರೂ ನಿರ್ಭಾವದಿಂದ ಗಮನಿಸುವುದಾದರೆ ಒಳಗಿನ ಈಕೆಗೆ ಮತ್ತು ಹೊರಗಿನ ಆಕೆಯರಿಗೆ ವ್ಯತ್ಯಾಸವಿಲ್ಲ.  ಅದೇ ಕಾರಣಕ್ಕೆ ಈಕೆ ತನಗೆ ಮತ್ತು ತನ್ನ ಗೃಹಕೃತ್ಯಕ್ಕೆ ಸಾಮಾಜಿಕವಾಗಿ ಸಿಗುವ ಅನಾದರ, ತಾತ್ಸಾರಗಳನ್ನು ತನಗೆ ಗೊತ್ತಿಲ್ಲದೆಯೇ ಹೊರಗಿನ-ಆಕೆಯರಿಗೆ ದಾಟಿಸುತ್ತಿರುತ್ತಾಳೆ. ಇದೊಂದು ಸುಪ್ತಪ್ರಜ್ಞೆಗೆ ಎಗ್ಗಿಲ್ಲದೆ ಎದುರಾಗಬಹುದಾದರೆ ಮಾತ್ರ ಹೊಳೆಯುವ ಸತ್ಯ! ‘ಅಸ್ಪೃಶ್ಯ’ ಎಂದು ಆಚೆಗಿಡಲ್ಪಟ್ಟವರು ತಮ್ಮ ತಮ್ಮೊಳಗೆ ‘ಎಡಗೈ’ ಮತ್ತು ‘ಬಲಗೈ’ ಎಂಬ ಇನ್ನೊಂದು ಗೋಡೆಯನ್ನು ಸೃಷ್ಟಿಸಿಕೊಂಡು ಇವರು ಅವರನ್ನು ಮುಟ್ಟಿಸಿಕೊಳ್ಳುವುದಿಲ್ಲವಲ್ಲ, ಹಾಗೆ! ಮನೆಯೊಳಗಿನ-ಈಕೆಯ ಪಾಡನ್ನು  ಕೆಲವೇ ಮಾತುಗಳಲ್ಲಿ ಹೇಳಬಹುದಾದರೆ,  ‘ಮನೆಯೊಳಗೆ ದಸ್ಯುತನ, ರಮ್ಯ ಮೋಹಕ ರೂಪಗಳಲ್ಲಿ!’

ಈ ರಮ್ಯ-ಮೋಹಕತೆ ಥಟ್ಟನೆ ಬಂದದ್ದಲ್ಲ ಮತ್ತೆ! ಎಷ್ಟೊಂದು ವರ್ಷಗಳಿಂದ ತಲೆಯನ್ನು ಸವರಿ, ಸವರಿ, ಅರೆದು ಕುಡಿಸಲಾಗಿದೆಯಲ್ಲ? ಬದುಕೆಂದರೆ ಪ್ರೇಮ; ಪ್ರೇಮವೆಂದರೆ ಸಂತೋಷ; ಸಂತೋಷವೆಂದರೆ ಇದೇ… ಆಕೆಯರಿಗೆ ಕನಿಷ್ಠ ಭತ್ಯೆ, ತುಟ್ಟಿ ಭತ್ಯೆ, ರಜಾ ಸವಲತ್ತು ಏನೂ ಸಿಗದಿದ್ದರೂ ಸಹ ಅದು ಹೊಟ್ಟೆಯ ಪಾಡಾದ್ದರಿಂದ ಸಂಬಳ ಅಂತೇನೋ ಇದೆ. ಈಕೆಗೆ ಅದೂ ಇಲ್ಲ. ಇನ್ನೊಂದು ಹೀಗಿರುವ ಪದ್ಯ:

ಛೇ, ಎಂಥ ಮಾತು ಸುಶೀಲೆ
ನಮ್ಮದು ಎಂಥ ಇತಿಹಾಸ!
ನಮ್ಮ ಆದಿಶಕ್ತಿಯರೆಲ್ಲ ಇನ್ಯಾರು?

ಮನೆಗೆ ಬಂದು ನೋಡು
ನಮ್ಮಮ್ಮನ ಪಠಕ್ಕೆ
ಎಂಥ ಮಜಬೂತಾದ ಬೆಳ್ಳಿ ಕಟ್ಟಿದೆ!

ಸುಮ್ಮನೆ ಕಿಲಕಿಲನೆ ನಗಬೇಡ,
ನಮ್ಮಮ್ಮ ಸತ್ತಿದ್ದೇಕೆಂದು ತಾನೆ ನಿನ್ನ ಪ್ರಶ್ನೆ?
ಕೇಳು ಹೇಳುತ್ತೇನೆ:

ಅಪ್ಪನ ಶಂಕೆ ಬೆಳೆದಂತೆ
ಅಮ್ಮ ಕೃಶವಾಗತೊಡಗಿದಳು.
ಇಲ್ಲ, ನಿನ್ನಾಣೆಗೂ ನಿಜ,

ನಮ್ಮಮ್ಮ ನಮ್ಮ ಗೃಹದೇವತೆ,
ಸುಮ್ಮನೆ ಕೊರಗಬೇಡ
ನಿನಗೆ ಮೀಸಲು ಸ್ಥಾನ ತಪ್ಪಿದ್ದುಂಟೆ?

ನಮ್ಮ ಅಕ್ಕ ತಂಗಿಯರೆಲ್ಲ
ಬಿಸಿಲು ತಗುಲದಂತೆ
ಖುದ್ದು ಬುರ್ಕಾ ಹೊಲಿಸಿದ್ದು ಸುಳ್ಳೆ?

ಮನೆಯೊಳಗಿನ ಈಕೆ  ಮನೆಯಿಂದ ಆಚೆ ಹೋಗಿ ದುಡಿದರೂ ಸಹ  ಮನೆಯನ್ನು ನಿಭಾಯಿಸುವುದು  ಕೊನೆಗೂ ಈಕೆಯ  ಹೊಣೆಯಾಗಿ ಉಳಿದುಕೊಂಡಿದೆ ಎನ್ನುವುದೂ ಸಹ ನಿಜ. ಅಲ್ಲೋ ಇಲ್ಲೋ ಗಂಡ ಮಕ್ಕಳಿಂದ ಸಹಾಯ ಸಿಗಬಹುದೇನೋ. ಅದು ಕೇವಲ ಸಹಾಯ ಅಷ್ಟೆ. ಈಕೆ ಮನೆಯನ್ನು ಸದಾ ತಲೆಯಲ್ಲಿ ಹೊತ್ತಿರುವಷ್ಟು ಮನೆಯ ಇತರರು ಹೊತ್ತಿರುವುದಿಲ್ಲ. ಅದಕ್ಕೇ  ಅವಳು ‘ಮನೆ-ಒಡತಿ’.

ಈ ಮಧ್ಯೆ
ಕುಡಿತದಮಲಿನ ಹೊಡೆತ ತಿಂದ
ರಾಶಿ ರಾಶಿ ಮಕ್ಕಳ ಹೆತ್ತ,

ಅಸ್ಥಿಪಂಜರದ, ಸತ್ತ ಮೊರೆಯವಳ
ಹಸಿ ನೆನಪು.

ಇಲ್ಲ ಇಲ್ಲ
ಈಗವಳು
ದೊಡ್ಡ ಸಾಹೇಬರ
ಹೊರಗೆ ಬಾರದ ಅವ್ವ,
ಸೊಸೆಗೆ ಮನೆಗೆಲಸದವಳ ಅಗತ್ಯ ಬಿದ್ದಿಲ್ಲ.

ಅಂತೂ
ಕೋಟ್ಯಂತರ ವರ್ಷಗಳಿಂದ
ಭೂಮಿ ತಿರುಗುತ್ತಿದೆ,
ಸುಳ್ಳಲ್ಲ.

ಗೃಹಸ್ಥ ಎಂಬ ಪದವೇನೋ ಇದೆ. ಆದರೆ ಅವನಿಗೆ ಮದುವೆಯಾಗಿದೆ, ಮಕ್ಕಳಿರಬಹುದು ಎಂದು ಸೂಚಿಸುತ್ತದೆಯೇ ಹೊರತು ಅವನು ಮನೆಗೆ ಪೂರ್ತಿಯಾಗಿ ಬಾಧ್ಯಸ್ಥನಾಗಿರಬೇಕಿಲ್ಲ. ತಾಳ ತಪ್ಪಿದ ಬದುಕಾದರೆ ಈಕೆಯನ್ನು ದೂರಿದಷ್ಟು ಆತನನ್ನು ಸಮಾಜ ದೂರುವುದಿಲ್ಲ.

ಗೃಹಿಣಿ ಎಂಬುದು ಪದಶಃ ಸಂಸ್ಕೃತೀಕರಣಗೊಂಡಿರುವುದರಿಂದ — ಅಂದರೆ ಅದು ಸಂಸ್ಕೃತಿಗೆ ಮಾತ್ರ ಸಂಬಂಧಪಟ್ಟಿದ್ದೇ ಹೊರತು ಆರ್ಥಿಕ ವ್ಯವಸ್ಥೆಗೆ ಅಲ್ಲ — ಎಂದು ಹೆಂಗಸರ ತಲೆ ಸವರಲ್ಪಟ್ಟಿರುವುದರಿಂದ ಗೃಹಿಣಿ-ಭತ್ಯೆ ಎನ್ನುವುದು ಒಂದು ಆಭಾಸದಂತೆ ಕೇಳಿಸಬಲ್ಲದು, ನಿಜ. ನೊಬೆಲ್ ಪ್ರಶಸ್ತಿ ವಿಜೇತ ಅಮಾರ್ತ್ಯ ಸೇನ್ ದಶಕಗಳ ಹಿಂದೆಯೇ ಇದರ ಬಗ್ಗೆ ಬರೆದಿದ್ದರು: ಹೆಂಗಸು ಮನೆಯೊಳಗೆ ಮಾಡುವ ಅಪಾರ ಕೆಲಸಕ್ಕೆ ವೇತನ ಇಲ್ಲದಂತೆ ಮಾಡುವುದರಿಂದ ಕೊನೆಗೆ ಲಾಭವಾಗುವುದು ಸರಕಾರಕ್ಕೆ ಮತ್ತು ಕಾರ್ಪೊರೇಟುಗಳಿಗೆ.’ ನಾವೇನು ಎಚ್ಚೆತ್ತುಕೊಂಡೆವೆ? ಸಾಂಸ್ಕೃತಿಕ ಮತ್ತು ಧಾರ್ಮಿಕ ಬ್ಲಾಕ್ ಮೇಲ್ ಮುಂದೆ ಯಾವ ನೊಬೆಲ್, ಯಾವ ಅಮಾರ್ತ್ಯ ಸೇನ್, ಯಾವ ಲೆಕ್ಕ?

ನಾನು ಜೆಯೆನ್ಯೂನಲ್ಲಿ ಇದ್ದಾಗ ಕೆಲಸಕ್ಕೆ ಬರುತ್ತಿದ್ದ ಆಯಿಷಾಗೆ ಇಪ್ಪತ್ತರ ಒಳಗೇ ಮೂರು ಮಕ್ಕಳು ಹುಟ್ಟಿದ್ದವು. ನಾಲ್ಕನೆಯದನ್ನು ಹೊತ್ತು ಹೊಟ್ಟೆ ಉಬ್ಬಿದಾಗ, ‘ಇರೋವಕ್ಕೇ ಹೊಟ್ಟೆಬಟ್ಟೆಗೆ ಸರಿಯಾಗಿ ಇದ್ದಂತಿಲ್ಲ, ಇದೇನು ಮಾರಾಯ್ತಿ?’ ಎಂದು ಗೊಣಗಿದ್ದೆ. ‘ಅಯ್ಯೋ ದೀದಿ, ಕಳೆದ ತಿಂಗಳು ಆ ಅಪಾಪೋಲಿ ನನ್ನ ಗಂಡ ಅನ್ನಿಸಿಕೊಂಡವನು ಬಂದಿದ್ದ. ಇದ್ದ ಎರಡು ರಾತ್ರಿಯೂ ಅತ್ಯಾಚಾರ ಮಾಡಿದ, ಆಮೇಲೆ ಎಂದಿನಂತೆ ನಾಪತ್ತೆ. ನಾನೇನು ಬಯಸಿ ಹೊತ್ತುಕೊಂಡೆ ಅಂದುಕೊಂಡ್ರಾ?’ ಅಂತ ಕೇಳಿದಾಗ ವಿಷಾದದಲ್ಲಿ ಮೌನವಾಗಿದ್ದೆ. ಅತ್ತ ಗಂಡನನ್ನು ಯಾವ ತರದಲ್ಲೂ ಹೊಣೆಯಾಗಿಸದ ಸಮಾಜದ ವ್ಯವಸ್ಥೆ; ಇತ್ತ ಗರ್ಭಪಾತ ಮಾಡಿಸಿಕೊಂಡರೆ ರೌರವ ನರಕ ಕಾದಿದೆ ಎಂದು ಅದಕ್ಕೂ ಹೆಣ್ಣನ್ನು ಹೊಣೆಯಾಗಿಸುವ ಧರ್ಮವ್ಯವಸ್ಥೆ!

ಮನುಷ್ಯ ಸಂತಾನದ ಇತಿಹಾಸದಲ್ಲಿ ಹೆಣ್ಣಿನ ಮಟ್ಟಿಗೆ ನಡೆದಿರುವ ಅತ್ಯದ್ಭುತ ಕ್ರಾಂತಿ ಎಂದರೆ ಗರ್ಭನಿರೋಧಕ ಮಾತ್ರೆ. ಸ್ತ್ರೀವಾದ ಸ್ತ್ರೀಪರ ಹಕ್ಕುಗಳು ಎನ್ನುವುದೆಲ್ಲ ಪಶ್ಚಿಮದ ಆಮದು ಎಂದು ಕೆಲವು ಜಂತುಗಳು ಬೊಬ್ಬೆ ಹೊಡೆದಾಗೆಲ್ಲ, ‘ಹೌದು, ಬೇಡದ ಗರ್ಭವನ್ನು ತಡೆಯಲು ಪರಿಹಾರ ಎನ್ನುವುದು ಕನಿಷ್ಠ  ರೂಪದಲ್ಲಿಯಾದರೂ  ಹೆಣ್ಣಿಗೆ ಬಂದಿದ್ದರೆ ಅದು ಪಶ್ಚಿಮದಿಂದಲೇ. ನಿಮ್ಮ ಪುರಾಣಗಳಿಂದಲ್ಲ,’ ಎಂದು ದಬಾಯಿಸಿದ ನೆನಪು.

ಆಗ ಆಯಿಷಾಗೆ ನನ್ನ ಸಹಪಾಠಿಗಳಿಬ್ಬರು ಡಜನ್ ಗಟ್ಟಲೆ ಗರ್ಭನಿರೋಧಕ ಮಾತ್ರೆಗಳನ್ನು ಕೊಡಿಸಿ ಗಂಡನ ಮುಖ ಕಂಡ ತಕ್ಷಣ ಒಂದನ್ನು ನುಂಗಿಬಿಡು; ಅವನಿದ್ದಷ್ಟೂ ದಿನ ನುಂಗುತ್ತಲೇ ಇರು; ಮುಗಿದ ಮೇಲೆ ನಮಗೆ ಹೇಳು  ಎಂದು ತಾಕೀತು ಮಾಡಿದ್ದರು.

ಮಧ್ಯಮವರ್ಗದ ಈಕೆಯರು ಮಾನಮರ್ಯಾದೆಗೆ ಹೆದರಿ ಬದುಕುವ ತಮ್ಮದು ಧರ್ಮಕರ್ಮದ ಹಾದಿ ಎಂದು ಬೀಗಿ ನಿಲ್ಲುತ್ತಾರೆ, ಹೌದೆ? ಕವಿಯ ವ್ಯಾಖ್ಯಾನ ಮಾತ್ರ ಬೇರೆಯೇ:

ಸರಳ ಸುಂದರ ನೇರ
ಹಾದಿ.
ಬೇಕಾದರೆ ಹಾಡು
‘ನನ್ನ ಹಾದಿಯಲಿ ಕಾಲಿಲ್ಲ ಮುಳ್ಳಿಲ್ಲ’ ಎಂದು.

ಹುಂ, ಸಂದೇಹವೇಕೆ?
ಅಪ್ಪಿ ಮುತ್ತಿಟ್ಟು ನಕ್ಕು
ಜರತಾರಿಯ ಭಾರ,
ಮಲ್ಲಿಗೆಯ ಘಮಘಮದ ನಡುವೆ
ಜೀಕಾಡಿ,
ಘಿಲಕ್ ಘಿಲಕ್ ಎಂದು
ಅಳತೆ ಮೀರಿದ ಸೊಂಟಕ್ಕೆ
ಬೀಗದಕೈ ಸಿಕ್ಕಿಸಿ,

ಸ್ಪೆಷಲ್ ವಾರ್ಡಿನಲ್ಲೊಂದು ದಿನ
ವಿಜೃಂಭಣೆಯಿಂದ
ನೆಗೆದು ಬೀಳು.

ಕೊನೆಗೆ ಆ ಸುಪ್ತಪ್ರಜ್ಞೆ ಕ್ಯಾರೆ ಎನ್ನದೆ ಹೇಳುವ ಸತ್ಯವೆಂದರೆ ಇದು: ‘ಮನೆಯೊಡತಿ’ (ಹೆಚ್ಚಿನಂಶ ಮನೆ ಅವಳ ಹೆಸರಿನಲ್ಲಿ ಇರುವುದಿಲ್ಲ, ತಿಕ್ಕಿ ತೊಳೆದು ಸ್ವಚ್ಛವಾಗಿಟ್ಟು ಬೀಗಬಹುದು, ಅಷ್ಟೇ!) ಅಚ್ಚಕನ್ನಡದಲ್ಲಿ ಸ್ವಲ್ಪ ಎತ್ತರದಲ್ಲಿರುವ ಮನೆಕೆಲಸದವಳೇ, ಸಂಸ್ಕೃತದಲ್ಲಿ ಘನವಾಗಿ ಗೃಹಿಣಿ ಎಂದು ಹೇಳುತ್ತಾರೆ ಅಷ್ಟೆ!

ಕೊನೆಗೆ ಆ ಸುಪ್ತಪ್ರಜ್ಞೆ ಕ್ಯಾರೆ ಎನ್ನದೆ ಹೇಳುವ ಸತ್ಯವೆಂದರೆ ಇದು: ‘ಮನೆಯೊಡತಿ’ (ಹೆಚ್ಚಿನಂಶ ಮನೆ ಅವಳ ಹೆಸರಿನಲ್ಲಿ ಇರುವುದಿಲ್ಲ, ತಿಕ್ಕಿ ತೊಳೆದು ಸ್ವಚ್ಛವಾಗಿಟ್ಟು ಬೀಗಬಹುದು, ಅಷ್ಟೇ!) ಅಚ್ಚಕನ್ನಡದಲ್ಲಿ ಸ್ವಲ್ಪ ಎತ್ತರದಲ್ಲಿರುವ ಮನೆಕೆಲಸದವಳೇ, ಸಂಸ್ಕೃತದಲ್ಲಿ ಘನವಾಗಿ ಗೃಹಿಣಿ ಎಂದು ಹೇಳುತ್ತಾರೆ ಅಷ್ಟೆ!

ತೆಲುಗು ಕವಿ ವಿಮಲಾ ಅವರ ಪದ್ಯ ‘ವಂಟಿಲ್ಲು’ ನೆನಪಾಗುತ್ತದೆ.

ಅಮ್ಮ ಅಡಿಗೆಮನೆಯ ಸಾಮ್ರಾಜ್ಞಿ
ಆದರೆ ಪಾತ್ರೆ ಪಡಗಗಳ ಮೇಲೆ ಕೆತ್ತಿಸಿರುವ
ಹೆಸರು ಮಾತ್ರ ಅಪ್ಪನದೇ!

ಆದರೇನು? ನಾವೆಲ್ಲಾ ಕ್ಷಮಾಧರಿತ್ರಿ, ಸಹನಾಶೀಲೆ, ಪೊರೆಯುವ ಶಕ್ತಿ ಇತ್ಯಾದಿ ಇತ್ಯಾದಿ ಎನ್ನುವುದು ಸುಳ್ಳೇ? ಕವಿ ಅಲ್ಲಿ ಸಹ ಗುಡುಗಿದ್ದಾಳೆ:

‘ಆದಿ ಪರಾಶಕ್ತಿತ್ವ’
ಇಟ್ಟುಕೊಂಡಿರಿ.
ಯಾರಾದರೂ ಬಂದು
ಕೇಳಿಯಾರು.
ತೊತ್ತಿಗೆ ಸಹಧರ್ಮಿತ್ವದ ಹಣೆಬರಹ
ಮುದ್ದಾಗಿದೆ.

ಕಂದರದ ಆಳಕ್ಕೆ ದೂಕುವ
ಸೋಗುಗಳೂ ಸೊಗಸಾಗಿವೆ.
ಸಭ್ಯರೇ, ಸ್ವಲ್ಪ ತೆಪ್ಪಗಿರಿ
ನಿರಾಳ ಉಸಿರಾಡೋಣ.

ಒಮ್ಮೆ ಕಿವಿನಾಡಿನಲ್ಲಿ ‘A clean house is the index of a wasted life!’ ಎಂಬ ಫಲಕ ನೋಡಿ ಖುಷಿಯಾಗಿ ತಂದು ಬಂದ ಅತಿಥಿಗಳಿಗೆ ಕಾಣುವಂತೆ ಮನೆಯಲ್ಲಿ ತಗುಲಿಸಿದ್ದೆ. ಅಕಸ್ಮಾತ್ ಮನೆ ಕ್ಲೀನಾಗಿಲ್ಲದಿದ್ದರೆ ಅದು ನನ್ನೊಬ್ಬಳ ಹೊಣೆಯಲ್ಲ, ಮತ್ತು ಅದು ಇರಬೇಕಾದ್ದು ಹಾಗೆಯೇ ಎಂಬ ನಯವಾದ ಕಿವಿಮಾತು!

ಇರಲಿ, ಹೊರಗಿನ-ಆಕೆಯರು ಮಹಾಮುಗ್ಧರು ಅಂತೇನೂ ಅಲ್ಲ. ಇಂಡಿಯಾದಲ್ಲಿ ನನ್ನ ಮನೆಗೆ ಕೆಲಸಕ್ಕೆ ಬರುವವರಿಗೆ ನಾನು ಯಾವತ್ತೂ ಅವರಿಗೆ ಹಿತವಾಗಿ ಆಶ್ಚರ್ಯವಾಗುವಷ್ಟು ಸಂಬಳ ಕೊಟ್ಟಿದ್ದೇನೆ. ಬೆಲೆಬಾಳುವ ವಸ್ತುಗಳನ್ನು ಕೊಟ್ಟಿದ್ದೇನೆ. ಆರು ತಿಂಗಳಿಂದ ನಾನು ಮನೆಯಲ್ಲಿ ಉಪಯೋಗಿಸದಿರುವ ಏನಿದ್ದರೂ ಎತ್ತಿ ದಾನ ಮಾಡಿದ್ದೇನೆ. ಅವಳ ಕೆಲಸಕ್ಕೆ ಗೌರವ ಕೊಟ್ಟರೆ ಮನೆಯೊಳಗಿನ ನನ್ನ ಕೆಲಸಕ್ಕೆ ಗೌರವ ಕೊಟ್ಟುಕೊಂಡಂತೆ ಎಂಬ ಒಂದೇ ಕಾರಣಕ್ಕೆ.

ಇತ್ತೀಚೆಗೆ ಕೆಲವೇ ತಿಂಗಳುಗಳ ಹಿಂದೆ ಬಂದಿದ್ದ ಮನೆಕೆಲಸದ-ಆಕೆ  ಊರಿಗೆ ಹೋಗುವಾಗ  ಕೆಲವು ಬೆಲೆಬಾಳುವ ವಸ್ತ್ರಗಳನ್ನು ಒಯ್ದಿದ್ದು ನಂತರದಲ್ಲಿ ಗಮನಕ್ಕೆ ಬಂದು ಮನಸ್ಸು ಅಸ್ವಸ್ಥವಾಗಿತ್ತು. ನನ್ನ ಮನೆಯಿಂದ ಯಾರು ಏನನ್ನು ಕದಿಯಲು ಸಾಧ್ಯ ಎಂಬ ಉಡಾಫೆ ನನಗೆ! ಕದ್ದರೆ ಪುಸ್ತಕಗಳು ತಾನೇ? ಇಷ್ಟು ಒಳ್ಳೆಯ ಸಂಬಳ ಕೊಡುವ, ಯಾವುದಕ್ಕೂ ತಲೆ ಹಾಕದಿರುವ ನನ್ನಂತವಳ ಮನೆಯಲ್ಲಿ ಕೆಲಸ ಮಾಡುವುದನ್ನು ಯಾಕೆ  ಕಳೆದುಕೊಂಡಾರು?

ವಾರೆವ್ಹಾ ಮನೆಯೊಳಗಿನ-ಈಕೆಯರು ಕಟ್ಟಿಕೊಳ್ಳುವ ಭ್ರಮೆಗಳೇ!

ಕೊನೆಗೂ ಗೆದ್ದಿದ್ದು ನಾವಿಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಮನೆಗೆಲಸದ ಹೆಂಗಸರೇ ಎಂಬ ಸತ್ಯವಂತೂ ಅಲ್ಲ. ಅವಳು ಬಡವಳು, ನಾನು ಉಳ್ಳವಳು ಎಂಬ ವರ್ಗ-ಯುದ್ಧವೇ!  Thievery is just a weapon in the class war! ಅಂತ ಸ್ನೇಹಿತರೊಬ್ಬರು ಹೇಳಿದ ನೆನಪು. ಜೆಯೆನ್ಯೂ ಸ್ನೇಹಿತರು ಹುಬ್ಬನ್ನು ಮತ್ತೆ ಕೊಂಕಾಗಿಸಿ ಕೇಳುತ್ತಿದ್ದಾರೆ: Did we not tell you that class as a category is more palpable than gender? ವರ್ಗಸಂಘರ್ಷವೇ ಅಂತಿಮ ಸತ್ಯ ಎಂದು ಕಾರ್ಲ್ ಮಾರ್ಕ್ಸ್ ಗಹಗಹಿಸಿ ನಗುತ್ತಿರಬಹುದೇ?

ಎರಡು ದಿನದ ಹಿಂದೆ ಅಪಾರ್ಟ್ಮೆಂಟಿನ ಒಳಗೆ ಇಸ್ತ್ರಿ ಮಾಡುವವಳ ದರಗಳನ್ನು ವರ್ಷಾನುಗಟ್ಟಲೆ ಹೆಚ್ಚಿಸಿಯೇ ಇಲ್ಲ, ಹೊರಗಿನದಕ್ಕಿಂತ ಅದು ಮೊದಲೇ ಕಮ್ಮಿ ಇದೆ, ಅದರ ಬಗ್ಗೆ ಗಮನ ಹರಿಸಬೇಕು ಎಂಬ ಸೂಚನೆಯನ್ನು ಹರಿಯಬಿಟ್ಟೆ. ಹಲವಾರು ಗಂಡಸು ಹೆಂಗಸರಿಂದ ಬಂದ ಪ್ರತಿಕ್ರಿಯೆಗಳಲ್ಲಿ ವರ್ಗಪ್ರಜ್ಞೆ ಮೆರೆದು ಮೇಲಕ್ಕೇರಿತ್ತು. ಈಗ ಎಲ್ಲದರ ಬೆಲೆಯೂ ಗಗನಕ್ಕೆ ಏರಿರುವಾಗ ನಮ್ಮ ಸಂಬಳ, ನಮ್ಮ ಬಡ್ತಿ, ನಮ್ಮ ಆದಾಯ ಇತ್ಯಾದಿಗಳ ಬಗ್ಗೆ  ಮಾತ್ರ ಚಿಂತಿಸುವುದು ಬಿಟ್ಟು ಇಸ್ತ್ರಿಯವಳ ಚಿಂತೆ ನಮಗೇಕೆ? ನಾವು ಸಂಸಾರಸ್ಥರು, ಮಕ್ಕಳೊಂದಿಗರು! ಇಸ್ತ್ರಿ ಮಾಡಲು ಜಾಗ ಕೊಟ್ಟಿಲ್ಲವೇ? ಅಷ್ಟು ಸಾಕು!

ಮಹಿಳಾ ಮೀಸಲಾತಿ ಪ್ರಶ್ನೆಯನ್ನು ನಮ್ಮ ದೇಶ ನಿಭಾಯಿಸಿರುವ ರೀತಿ ನೆನಪಿಸಿಕೊಳ್ಳಬಹುದು. ಪಾರ್ಲಿಮೆಂಟಿನಲ್ಲಿ ಹೆಂಗಸರಿಗೆ ಅಧಿಕಾರ ಕೊಡಬೇಕೆ? ಯಾಕೆ? ಅಡಿಗೆಮನೆಯಲ್ಲಿ ಕೊಟ್ಟಿಲ್ಲವೇ? ಇರಲು ಮನೆ ಕಟ್ಟಿಕೊಟ್ಟಿಲ್ಲವೇ? ಮಕ್ಕಳನ್ನು ಕೊಟ್ಟಿಲ್ಲವೇ? ಹೊಟ್ಟೆಬಟ್ಟೆ ನೋಡಿಕೊಂಡಿಲ್ಲವೇ? ಹೀಗೆಲ್ಲಾ ಮಾತಾಡಿಕೊಳ್ಳುತ್ತಾ ಗಂಡಸರು ಪಕ್ಷಭೇದವನ್ನು ಮರೆತು ‘ಏನೇ ಆದರೂ ಈ ಹೆಂಗಸರನ್ನ ಎಲ್ಲಿಟ್ಟಿರಬೇಕೋ, ಅಲ್ಲೇ ಇಟ್ಟಿರಬೇಕು ಕಣ್ರೀ’ ಎಂದು ಪರಸ್ಪರ ಭುಜದ ಮೇಲೆ ಕೈಹಾಕಿಕೊಂಡು ಹೋಗುತ್ತಾರೆ. ಅಲ್ಲಿ ಜೆಂಡರ್-ವಿವೇಕ! ಇಲ್ಲಿ ಮಹಿಳಾಮಣಿಗಳ ನಡುವೆ ವಿಜೃಂಭಿಸುವ ವರ್ಗ-ಜಾಣತನ!

‘ಏನೇ ಆದರೂ ಇಸ್ತ್ರಿಯವಳಿಗೆ ಲಾಭ ಇರುವುದರಿಂದ ತಾನೇ ಇಲ್ಲಿದಾಳೆ? ಇಲ್ಲದಿದ್ದರೆ ಇಷ್ಟೊತ್ತಿಗೆ ಹೋಗಿರುತ್ತಿದ್ದಳಲ್ಲ?’ ಎಂದು ಕೆಲವರು ತರ್ಕದ ಗುರಾಣಿ ಹಿಡಿದರು. ಈ ತಿರುಬೋಕಿ ತರ್ಕ ಮಧ್ಯಮವರ್ಗದ ಒಂದು ಸ್ಥಿರವಾದ ಗುಣವೂ ಹೌದು.  ಯಾಕೆಂದರೆ ನಾವೆಲ್ಲ ಶಾಲೆ ಕಾಲೇಜು ಮೆಟ್ಟಿಲು ಹತ್ತಿದವರು ತಾನೇ? ನಿಮ್ಮ ಬಾಸ್ ಸಹ ಅದನ್ನೇ ಹೇಳಿದರೆ ಹೇಗೆ? ‘ಅಯ್ಯೋ, ಲೈಫಲ್ಲಿ ಏನೇನೋ ಕಮಿಟ್ಮೆಂಟ್ ಇದಾವೆ ಅಂತ ಆ ಮಂದಿಯ ಸುಟ್ಟ ಮುಖಗಳನ್ನ  ಸಹಿಸಿಕೊಂಡಿದೀನಿ, ಇಲ್ಲದಿದ್ದರೆ ಯಾರಿಗೆ ಬೇಕು?’ ಅಂತ ಮೊನ್ನೆ ತಾನೇ ಗೊಣಗಿದಿರಲ್ಲ?

ವರ್ಷಗಳಿಂದ ನಮ್ಮ ಜೊತೆ ಹೇಗೋ ಹೊಡಬಾಳು ಹತ್ತಿರುವ ನಮ್ಮ ಇಸ್ತ್ರಿಯವಳಿಗೆ ಯಾಕೆ ಬಡ್ತಿ ಕೊಡಬಾರದು ಎಂದು ಗಂಡಸರು ಹೆಂಗಸರು ಪಟ್ಟಿಯನ್ನು ಬರೆದಿದ್ದೇ ಬರೆದಿದ್ದು, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಬಿಟ್ಟಂತೆ! ‘ಸ್ಮಾರ್ಟಾಗಿ ಕೆಲಸ ಮಾಡಬೇಕು, ಇಲ್ಲದಿದ್ದರೆ ಬಡ್ತಿ ನೈ! ಇದೇ ಕಾರ್ಪೋರೆಟ್ ಮಂತ್ರ’ ಎಂದು ಇನ್ನೊಬ್ಬಾಕೆ ಅಬ್ಬರಿಸಿದಳು. ಮಧ್ಯಮವರ್ಗದ ನಮ್ಮನ್ನು ದಶಕಗಳಿಂದ ದೋಚಿರುವ ಅಂಬಾನಿ-ಅದಾನಿಯರ ವಿರುದ್ಧ ನಾವು ಕಮಕ್ ಕಿಮಕ್ ಎನ್ನುವುದಿಲ್ಲ. ಅವರ ಮಂತ್ರಗಳನ್ನು ಮನೆಯೊಳಗಿನ ಈಕೆಯರು ಸಹ ಪಠಿಸುವಾಗ ಬದುಕು ಎಲ್ಲಿಗೆ ಬಂದು ನಿಂತಿದೆ ಎಂದು ಅಚ್ಚರಿಯಾಗುತ್ತದೆ.

ಬದುಕಿನಲ್ಲಿ ತರ್ಕವಿದೆಯೇ, ಇದ್ದರೆಷ್ಟು ಮಟ್ಟಿಗೆ ಎಂದು ಯೋಚಿಸುತ್ತಿದ್ದೆ. ಕವಿ ಮತ್ತೊಮ್ಮೆ ಕಿವಿಯ ಹತ್ತಿರ ಬಂದು ಪಿಸುಗುಟ್ಟಿದಳು:

ಆರುವ ರೀತಿ ಹತ್ತಾರು
ಪರಿಣಾಮ ಒಂದೇ.

ಇನ್ನೇನು ಇನ್ನೇನು ಎಂದು
ಕಾಯಿಸಿ ಆರಬಹುದು.

ಇಲ್ಲ, ಇದು ಉರಿದೇ ತೀರುತ್ತದೆ
ಎಂದುಕೊಂಡಾಗ ರಪ್ಪನೆ ಕತ್ತಲಿಗೆ ನಮ್ಮ ದೂಡಬಹುದು.

ಬತ್ತಿ ಮುಗಿಯದೆಯೂ
ಎಣ್ಣೆ ತೀರದೆಯೂ
ಆರಿಯೇ ಬಿಡಬಹುದು!

***

ಬೌದ್ಧಿಕ ಋಣ: ಎಲ್ಲ ಪದ್ಯಗಳೂ ವಿಜಯಾ ದಬ್ಬೆಯವರ ಕವನ ಸಂಕಲನ ಇತಿ ಗೀತಿಕೆ  ಯಿಂದ ಪಡೆದಂತವು. ಮೈಸೂರು: ರಚನಾ ಪ್ರಕಾಶನ. 1996.

About The Author

ಸುಕನ್ಯಾ ಕನಾರಳ್ಳಿ

ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕಿ, ಲೇಖಕಿ, ಮತ್ತು ಭಾಷಾಂತರಕಾರ್ತಿ. ವೈದೇಹಿ (An Afternoon with Shakuntala and Other Stories) ಮತ್ತು ಅಗ್ರಹಾರ ಕೃಷ್ಣಮೂರ್ತಿಯವರ ಕೃತಿಗಳು (Love and Water Flow Together) [(ಕುವೆಂಪು ಭಾಷಾಭಾರತಿ ಪ್ರಶಸ್ತಿ  (2023) ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿಅನುವಾದಿತ ಪುಸ್ತಕ ಪ್ರಶಸ್ತಿ (2023)] ಇಂಗ್ಲೀಷಿಗೆ ಅನುವಾದಿಸಲ್ಪಟ್ಟ ಕೃತಿಗಳು.  ‘ಹೇಳುತೇನೆ ಕೇಳು: ಮಹಿಳೆಯರ ಆತ್ಮಕಥೆಗಳು’; ‘ಕಥೆ ಹೇಳುವೆ’; ‘ಬರ್ತಿಯಾ?… ಎಷ್ಟು?…: ಭಾರತೀಯ ಸೂಳೆಲೋಕದಕಥೆಗಳು’; ನಯನತಾರ ಸೆಹಗಲ್ ಅವರ ‘ಚಿಟ್ಟೆಗಳ ಪಾಡು’ ಇತ್ಯಾದಿ ಅವರ ಕನ್ನಡ ಭಾಷಾಂತರ ಕೃತಿಗಳು. ಮೌಲಾನಾ ಜಲಾಲುದ್ದೀನ್ ರೂಮಿಯ ಕಾವ್ಯದ ಭಾಷಾಂತರ ಕೃತಿ ‘ದಿವ್ಯದಲ್ಲಿ ಹಿಸ್ಸೆಯಿಲ್ಲ: ಕಡುಪ್ರೇಮಿಯ ಎದೆಯ ಹಾಡು ಇತ್ತೀಚೆಗೆ ಬಿಡುಗಡೆಯಾದ ಕೃತಿ. 'ಕನ್ನಡ-ಕಾಸರವಳ್ಳಿಯವರ ಸಿನಿಮಾಗಳಲ್ಲಿ ರಾಷ್ಟ್ರ ಮತ್ತು ಹೆಣ್ಣು' ಎರಡು ಪುಸ್ತಕಗಳಾಗಿ ಸದ್ಯದಲ್ಲೇ ಬೆಳಕು ಕಾಣಲಿದೆ. 

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ