ಪ್ರಿಯ ಅತಿಥಿ
ಹೇಳುವುದಿಲ್ಲ ಕೇಳುವುದಿಲ್ಲ
ಠಕ್ಕ *ರಾನ್ಸಮ್ವೇರಿನ ಹಾಗೆ ಕಳ್ಳ ಹೆಜ್ಜೆಯಲ್ಲಿ
ಬಾಗಿಲು ಬಡಿಯದೆ ಒಳಗೆ ಬಂದು ಕೂತುಬಿಡುತ್ತಾನೆ
ಒಳ ಬಂದು ಸೀದಾ ಧಡಲ್ ಎಂದು
ಮಲ್ಲಿಗೆ ಸಸಿ ಹೊತ್ತ ಎದೆ ಕುಂಡವನ್ನೇ ಒಡೆಯುತ್ತಾನೆ
ಆಮೇಲೆ ಸುಳ್ಳು ಸುಳ್ಳೇ ಸಂತೈಸುವಂತೆ ಮಾಡಿ
ಕುಂಡವನ್ನು ಜೋಡಿಸಿಟ್ಟಂತೆ ಮಾಡಿ
ನಾಲ್ಕೂ ಕೊಣೆಗಳೊಳಗೆ ಹೊಕ್ಕು ತಾನೇ
ಕೂತು ಬಿಡುತ್ತಾನೆ ಈ ಕಳ್ಳ ಅತಿಥಿ
ಒಂದು ಕೋಣೆಯಲ್ಲಿ ಓದುತ್ತಾ
ಇನ್ನೊಂದರಲ್ಲಿ ಹಾಡುತ್ತ
ಮತ್ತೊಂದರಲ್ಲಿ ಕುಣಿದು ಕುಪ್ಪಳಿಸಿ
ಮಗದೊಂದರಲಿ ಉಂಡು ಮಲಗುವವ
ಎದ್ದು ಹೋಗುವ ಸೊಲ್ಲೇ ಎತ್ತದವ
ರಾತ್ರಿ ಟ್ರೈನಿಗೆ ಟಿಕೆಟು ತೆಗೆಸಿ ಕೊಟ್ಟರೂ
ಊಹೂಂ ಸುತರಾಂ ಹೋಗಲು ಮುಂದಾಗದವ
ಹೂವೊಂದು ಚಿವುಟುವ ಆ ಕೈಗಳು
ಪರಿಮಳವಂಟಿದ ಪ್ರೇಮ ಪತ್ರವೊಂದನ್ನು
ನನ್ನೆಡೆಗೆ ಟಪಾಲು ಎಸೆದವು
ಬೆಂಬಿಡದೆ ಕಾಡುವ ಅತಿಥಿಯ
ದಸ್ಕತ್ತು ಪತ್ರದ ಕೊನೆಯಲ್ಲಿ
ಇಂತಿ ನಿನ್ನ ಪ್ರೀತಿಯ
“ದುಗುಡ”
*ರಾನ್ಸಮ್ವೇರ್ ಎಂದರೆ ಹ್ಯಾಕರುಗಳು ಕಂಪ್ಯೂಟರ್ ಅಥವಾ ಡೇಟಾವನ್ನು ಲಾಕ್ ಮಾಡಿ, ಅದನ್ನು ಬಿಡುಗಡೆ ಮಾಡಲು ಹಣ(ಫಾಯಿದೆ) ಬೇಡುವ ಒಂದು ಖದೀಮ ಸಾಫ್ಟವೇರ್.

ಚೈತ್ರಾ ಶಿವಯೋಗಿಮಠ ಮೂಲತಃ ವಿಜಯಪುರದವರು. ಪ್ರಸ್ತುತ ಬೆಂಗಳೂರಿನ ನಿವಾಸಿ. ವೃತ್ತಿಯಲ್ಲಿ ಸಾಫ್ಟವೇರ್ ಇಂಜಿನಿಯರ್ ಆಗಿರುವ ಇವರಿಗೆ ಓದು, ಬರಹ, ಕಾವ್ಯ ಅಚ್ಚುಮೆಚ್ಚು. ಇವರ ಮೊದಲ ಪ್ರಕಟಿತ ಕವನ ಸಂಕಲನ “ಪೆಟ್ರಿಕೋರ್”(ಪ್ರಾರ್ಥನಾ ಕಾವ್ಯ ಪುರಸ್ಕಾರ, ಅಮ್ಮ ಪ್ರಶಸ್ತಿ ಸಂದಿದೆ). ಹಲವಾರು ಪತ್ರಿಕೆಗಳಲ್ಲಿ ಇವರ ಕವನಗಳು/ ಬರಹಗಳು ಪ್ರಕಟವಾಗಿವೆ.


