ಕವಿತೆಯ ಕೊನೆಯ ಭಾಗ ಭೌತಿಕ ನೆಲೆಯ ಇಲ್ಲವೇ ಮೂರ್ತ ರೂಪದ ವಿಕಾಸ ಕ್ರಮವನ್ನು ಮೀರಿದ ಆಂತರಂಗಿಕವಾದ ಬೆಳವಣಿಗೆಯ ಕಡೆಗೆ ಬೆರಳು ತೋರುತ್ತದೆ. ವ್ಯಕ್ತಿತ್ವದೊಳಗಿನ ಹಲವು ಅಂಶಗಳು ಸಂಘರ್ಷಕ್ಕೆ ಒಳಗಾಗುತ್ತಲೇ ಕೆಡುಕನ್ನು ಕಳಚಿಕೊಂಡು ಒಳಿತಿನ ಬೆಳಕು ಉದಯಿಸುವುದರ ಕಡೆಗೆ ಕವಿತೆ ತುಡಿಯುತ್ತದೆ. ಬಾಹ್ಯ ಗೋಚರವೆನಿಸಿಕೊಳ್ಳಬಹುದಾದ ಬದುಕಿನ ಸಾಧನೆ ಆಂತರಂಗಿಕವಾದ ಪರಿಧಿಯಲ್ಲಿ ಪ್ರಕಟಗೊಂಡು ಜೀವನ ವಿಕಾಸಕ್ಕೆ ನೆಲೆಯಾಗುವ ಬಗೆ ಇಲ್ಲಿ ಗೋಚರವಾಗುತ್ತದೆ. ಹನುಮದ್ವಿಕಾಸದ ಪರಿಕಲ್ಪನೆಯನ್ನು ಮೂಡಿಸುತ್ತಲೇ ಕವಿತೆ ಮಿತಿಗಳನ್ನು ಮೀರಿ ಮನುಷ್ಯ ಬದುಕು ಬೆಳೆಯಬಹುದಾದ ಸಾಧ್ಯತೆಯ ಕಡೆಗೆ ಸಹೃದಯರ ಮನವನ್ನು ಸೆಳೆಯುತ್ತದೆ.
ಗೋಪಾಲಕೃಷ್ಣ ಅಡಿಗರ ‘ವರ್ಧಮಾನ’ ಕವಿತೆಯ ಕುರಿತು ಡಾ. ವಿಶ್ವನಾಥ ನೇರಳಕಟ್ಟೆ ಬರಹ
ಕನ್ನಡ ಕಾವ್ಯಲೋಕವನ್ನು ಅತೀವ ಬೌದ್ಧಿಕ ಅಭಿವ್ಯಕ್ತಿಯ ಮೂಲಕ ಪ್ರಭಾವಿಸಿದ ಕವಿಗಳಲ್ಲಿ ಗೋಪಾಲಕೃಷ್ಣ ಅಡಿಗರು ಪ್ರಮುಖರು. ಅವರ ಅತ್ಯಂತ ಪ್ರಸಿದ್ಧವಾದ ಕವನಗಳಲ್ಲಿ ಒಂದಾದ ‘ವರ್ಧಮಾನ’ವನ್ನು ಭಾರತದ ವರ್ತಮಾನ ಕಾಲಘಟ್ಟಕ್ಕೆ ಅನ್ವಯಿಸಿ ಗಮನಿಸಿಕೊಳ್ಳಲು ಸಾಧ್ಯವಿದೆ. ಜೀವನ ವಿಕಾಸದ ಪರಿಯನ್ನು ಕಟ್ಟಿಕೊಡುವ ‘ವರ್ಧಮಾನ’ ಕವಿತೆ ನಾಲ್ಕು ಭಾಗಗಳಲ್ಲಿ ವಿಕಾಸಗೊಳ್ಳುತ್ತಾ ಸಾಗುತ್ತದೆ.
ಕವಿತೆ ಆರಂಭಗೊಳ್ಳುವುದು ಹರೆಯದ ವಯಸ್ಸಿನಲ್ಲಿ ಮೂಡುವ ಧಿಮಾಕನ್ನು ಮತ್ತು ಬಿರುಸುತನವನ್ನು ಪ್ರಸ್ತಾಪಿಸುವ ಮೂಲಕ. ಇದಕ್ಕಾಗಿ ಕವಿ ಬಳಸಿಕೊಂಡಿರುವುದು ಎಳೆಯ ಕರುವಿನ ಪ್ರತಿಮೆಯನ್ನು. ಕೊಂಬು ಮೊಳೆಯುತ್ತಿರುವ ಹರೆಯದಲ್ಲಿ ಅನಿಯಂತ್ರಿತವಾದ ಸ್ಥಿತಿಯೆಡೆಗೆ ಚಲಿಸಬೇಕೆಂಬ ಮನೋಧರ್ಮ ಪ್ರಬಲವಾಗಿರುವುದನ್ನು ಆರಂಭದ ಸಾಲುಗಳಲ್ಲಿ ಅರ್ಥೈಸಿಕೊಳ್ಳಬಹುದು. ಕುತ್ತಿಗೆಯನ್ನಾವರಿಸಿರುವ ಹಗ್ಗವನ್ನು ಕಳಚಿಕೊಂಡು, ಮುಂದೆ ಕಂಡದ್ದೆಲ್ಲವನ್ನೂ ಎತ್ತಿ, ಕುತ್ತಿದರೂ ಮೊಳೆವ ಕೊಂಬಿನ ತುರಿಕೆ ತೀರದಿರುವ ಚಿತ್ರಣ ಇಲ್ಲಿದೆ. ಮುಂದೆ ಕಾಣಿಸಿಕೊಳ್ಳುವುದು ಸಾಮಾನ್ಯ ವ್ಯಕ್ತಿಯೊಬ್ಬನಲ್ಲಿ ಇರುವ ಬೆಳವಣಿಗೆಯ ತುಡಿತ. ಅರಬ್ಬೀ ಕುದುರೆಯ ಮೇಲೆ ಸವಾರಿ ಮಾಡುವ ಪೊಗರು ರೂಢಿಸಿಕೊಂಡಿರುವ ನಾಣಿಯ ಮಗ ಶೀನಿಯಲ್ಲಿರುವುದು ರಾಜಕುಮಾರತನದ ಭಾವ. ಚಿಗುರು ಮೀಸೆ ಮೂಡಿಬಂದಿರುವ ಪ್ರಾಯದಲ್ಲಿ ಅವನಿಗೆ ದೇಶ ಕಾಣಿಸುತ್ತಿಲ್ಲ. ‘ನಾನೇ ಎಲ್ಲಾ, ನನ್ನನ್ನು ಬಿಟ್ಟರೆ ಬೇರೆ ಯಾರೂ ಇಲ್ಲ’ ಎಂಬ ವಿಚಿತ್ರ ಮನಃಸ್ಥಿತಿಯಲ್ಲಿ ಕಳೆದುಹೋಗಿರುವ ಸ್ಥಿತಿಯದು. ಹೀಗಿರುವ ಹರೆಯದವನ ರೋಷಾವೇಷದ ಹಿಂದಿನ ಕಾರಣವನ್ನು ನಾಲ್ಕು ಅಂಶಗಳಲ್ಲಿ ಸೆರೆಹಿಡಿಯುತ್ತಲೇ ಕವಿತೆ ಬಿಗಿಗೊಳ್ಳುತ್ತದೆ. ಆಕಾಶ ಕೈಗೆ ಎಟುಕದಿರುವುದು, ಕೋಶಾವಸ್ಥೆ ಮರಳಿಬಾರದಿರುವುದು, ತನಗಿಂತ ಮೊದಲು ತನ್ನಪ್ಪ ಹುಟ್ಟಿರುವುದು, ಮೊಲೆ ಬಿಡಿಸಿದ ಅವಮಾನ- ಮುಯ್ಯಿ ತೀರದಿರುವುದು ಇಲ್ಲಿ ಹರೆಯದ ಆಕ್ರೋಶ- ಅಸಮಾಧಾನ- ಅಸಹಾಯಕತೆಗೆ ಕಾರಣಗಳು. ದೊರಕದಿರುವುದನ್ನೇ ಬಯಸಿ ಹತಾಶಗೊಳ್ಳುವ ಪರಿ, ಕಳೆದುಹೋದ ಸ್ವರ್ಗಕ್ಕಾಗಿ ಪರಿತಪಿಸುವ ಬಗೆ, ಸಹಜವಾದದ್ದನ್ನು ಅಸಹಜವಾಗಿ ಪರಿಭಾವಿಸಿ, ಸಹಜತೆಯನ್ನು ಒಪ್ಪಿಕೊಳ್ಳಲಾರದ ಕೆಟ್ಟ ಹಠ, ಅವಕಾಶವನ್ನು ಕಿತ್ತುಕೊಂಡವರೆದುರಿನ ಅಸಹಾಯಕತೆಯ ಭಾವ ಈ ಕಾರಣಗಳಲ್ಲಿ ಅಂತರ್ಗತವಾಗಿದೆ.
ಬದುಕಿನ ಬೆಳವಣಿಗೆಯ ಒತ್ತಡ ಹುಟ್ಟುಹಾಕಿದ ನಾಗಾಲೋಟವನ್ನೂ, ಅದರ ಪರಿಣಾಮವನ್ನೂ, ಬೆಳವಣಿಗೆಯ ಹಾದಿಯಲ್ಲಿ ರೂಢಿಸಿಕೊಳ್ಳಬೇಕಾದ ಸಾರ್ವಕಾಲಿಕ ಮನೋಭಾವವನ್ನೂ ಪರಿಣಾಮಕಾರಿಯಾಗಿ ವ್ಯಕ್ತಗೊಳಿಸಿರುವುದು ಕವಿತೆಯ ಎರಡನೇ ಭಾಗ. ‘ಕಿಲಾಡಿರಸ್ತೆಯ ಕೊನೆಯ ತಿರುವಿನಲ್ಲಪಘಾತ’ ಎಂಬ ಸಾಲಿನ ಮೂಲಕ ಈ ಭಾಗ ನಮ್ಮಲ್ಲಿ ಕಾವ್ಯ ಕೌತುಕವನ್ನು ಉಂಟುಮಾಡುತ್ತದೆ. ಇಲ್ಲಿ ವಿಶಿಷ್ಟವೆನಿಸಿಕೊಳ್ಳುವುದು ‘ಕಿಲಾಡಿ ರಸ್ತೆ’ ಎಂಬ ಪದಬಳಕೆ. ಮಾಮೂಲಿಯಾದ ರಸ್ತೆಯಲ್ಲಿ ಯಾರು ಬೇಕಿದ್ದರೂ ಅಪಘಾತರಹಿತರಾಗಿ ವಾಹನ ಚಲಾಯಿಸಬಹುದು. ಆದರೆ ಅಪಾಯಕಾರಿ ತಿರುವುಗಳಿರುವ, ಇಕ್ಕಟ್ಟಾಗಿರುವ, ಅಸಹಜವಾಗಿರುವ ಕಿಲಾಡಿ ರಸ್ತೆ ಎಂತಹ ಅನುಭವಿಗಳನ್ನೂ ಸೋಲಿಸಿಬಿಡಬಲ್ಲದು. ಕವಿತೆಯೊಳಗಡೆ ದೊರೆಯುವುದು ಅಂಥದ್ದೇ ಚಿತ್ರಣ. ಮುನ್ನುಗ್ಗುವ ಧಾವಂತದಲ್ಲಿ ಎಡವಟ್ಟು ಮಾಡಿಕೊಂಡ ಸನ್ನಿವೇಶವನ್ನು ಹೇಳುತ್ತಲೇ ಕವಿತೆ ಅಪಘಾತ ನಡೆದ ಸ್ಥಳವನ್ನು ಪ್ರಸ್ತಾಪಿಸುತ್ತದೆ. ಕವಿತೆಯಲ್ಲಿ ಬಂದಿರುವ ಸಾಲಿನ ಪ್ರಕಾರ ಅಪಘಾತ ಆಗಿರುವುದು ‘ನ ಪ್ರಮದಿತವ್ಯ’ ಎಂಬ ಬೋರ್ಡಿನ ಕೆಳಗೆ. ಈ ಸಾಲನ್ನು ಕವಿ ಬಳಸಿರುವುದಕ್ಕೆ ಹಿನ್ನೆಲೆಯಾಗಿ ತೈತ್ತರೀಯ ಉಪನಿಷತ್ತನ್ನು ಗಮನಿಸಿಕೊಳ್ಳಬೇಕು. ಅಲ್ಲಿ ‘ನ ಪ್ರಮದಿತವ್ಯಂ’ ಎಂದರೆ ‘ದಾರಿಯನ್ನು ಬಿಡಬೇಡಿ’ ಎಂದರ್ಥ. ಸತ್ಯ ಮತ್ತು ಧರ್ಮದ ಹಾದಿಯನ್ನು ತೊರೆದು ಹೋಗಬಾರದು ಎಂಬ ಮೌಲ್ಯವನ್ನು ಮನಗಾಣಿಸುವ ಸಂದರ್ಭದಲ್ಲಿ ತೈತ್ತರೀಯ ಉಪನಿಷತ್ತು ಈ ಸಾಲನ್ನು ಉಲ್ಲೇಖಿಸಿದೆ. ಗಮ್ಯವನ್ನು ಸೇರುವ ಗಡಿಬಿಡಿಯಲ್ಲಿ ದಾರಿಯನ್ನು ಅತಿಕ್ರಮಿಸಿ ಸಾಗಿದ ಬಗೆಯನ್ನು ತಿಳಿಸಿಕೊಡಲು ಅಡಿಗರು ಕವಿತೆಯಲ್ಲಿ ಇದನ್ನು ಬಳಸಿಕೊಂಡಿದ್ದಾರೆ. ಜೀವನದ ಪ್ರಧಾನ ಸಂಚಲನೆಯನ್ನು ಕಡೆಗಣಿಸಿ, ಎಲ್ಲೆಲ್ಲಿಯೋ ಸಾಗಿ, ಮತ್ತೆ ಬದುಕಿನ ಪ್ರಧಾನಧಾರೆಗೆ ಮರಳಿಬರಲು ಒದ್ದಾಡುವ ನೆಲೆಯಲ್ಲಿ ಈ ಅಪಘಾತದ ಸನ್ನಿವೇಶವನ್ನು ಅರ್ಥೈಸಿಕೊಳ್ಳಬಹುದು. ಬದುಕಿನಲ್ಲೆದುರಾದ ತಾತ್ಕಾಲಿಕ ಸೋಲಿಗೆ, ಅವಮಾನಕ್ಕೆ ಸುತ್ತಲಿನವರ ಪ್ರತಿಕ್ರಿಯೆಯನ್ನು ಅಭಿವ್ಯಕ್ತಿಸುತ್ತಾ ಕವಿತೆ ಸಾಗುತ್ತದೆ. ಅರಬ್ಬೀ ಕುದುರೆಯ ಮೇಲೆ ಆಡಂಬರದ ಸವಾರಿಗೈಯ್ಯುವ ಕನಸು ಕಂಡವನು ಗೆಳೆಯರ ಉಬ್ಬಿಸುವಿಕೆಗೆ ಮೋಸಹೋಗಿ ಗಾಳಿಗುದುರೆಯ ಸವಾರಿ ಮಾಡಹೋಗಿ ಅವಾಂತರ ಮಾಡಿಕೊಂಡು ನಗೆಪಾಟಲಿಗೆ ಈಡಾದದ್ದು ಇಲ್ಲಿಯ ಬಹುದೊಡ್ಡ ವ್ಯಂಗ್ಯ. ಪರಮ ಸಾತ್ವಿಕನೂ ಪರಮ ಕ್ರೂರಿಯ ಅವತಾರ ಎತ್ತಬೇಕಾದ ಅನಿವಾರ್ಯತೆ, ಅತ್ಯಾಪ್ತ ಮಾನವೀಯ ಸಂಬಂಧಗಳನ್ನು ಕಳಚಿಯೂ ಮುನ್ನಡೆಯಬೇಕಾದ ಸ್ಥಿತಿ, ಜೀವನ ನಿಯಮಗಳನ್ನು ಮೀರಲಾರದೆ ಹಾಗೆಂದು ಪಾಲಿಸಲೂ ಆಗದೆ ಒದ್ದಾಡುವ ದ್ವಂದ್ವ, ಬಾಹ್ಯ ಪ್ರೇರಣೆ ರಾಹಿತ್ಯ ಸ್ಥಿತಿಯಲ್ಲಿ ಸ್ವಪ್ರೇರಣೆಯನ್ನೇ ಅವಲಂಬಿಸಬೇಕಾದ ಅನಿವಾರ್ಯ ಕರ್ಮ ಮೊದಲಾದವುಗಳನ್ನು ಕವಿತೆಯ ಎರಡನೇ ಭಾಗ ಮನದಟ್ಟು ಮಾಡಿಕೊಡುವುದು ಪೌರಾಣಿಕ ಪ್ರತಿಮೆಗಳ ಮೂಲಕ. ಜೀವನ ವಿಕಾಸದ ಈ ಬಹು ಆಯಾಮಗಳನ್ನು ಅರಿತುಕೊಳ್ಳದೇ ಹೋದರೆ ಬದುಕಿನ ಬಂಧನಕ್ಕೆ ಈಡಾಗುವ ಕುರಿತಾದ ಎಚ್ಚರಿಕೆಯೂ ಇಲ್ಲಿದೆ.
ಮೂರನೆಯ ಭಾಗದಲ್ಲಿ ಕವಿತೆ ಒಮ್ಮಿಂದೊಮ್ಮೆಗೆ ‘ಉತ್ತಮ ಪುರುಷ ಅಭಿವ್ಯಕ್ತಿ’ಯೆಡೆಗೆ ಹೊರಳಿಕೊಳ್ಳುತ್ತದೆ. ಕವಿತೆಯ ಪ್ರಧಾನ ಸೂತ್ರದಿಂದ ಪ್ರತ್ಯೇಕವಾದ ಭಾಗವೆಂದು ನಮ್ಮನ್ನು ಗೊಂದಲಕ್ಕೀಡು ಮಾಡುವ ಭಾಗ ನಮಗೆ ಎದುರಾಗುತ್ತದೆ. ಇಲ್ಲಿ ನಮಗೆ ದೊರಕುವುದು ಅತೀವ ಚಿಂತೆಗೆ ಒಳಗಾಗಿರುವ ತಂದೆಯೊಬ್ಬನ ಚಿತ್ರಣ. ಅವನಿರುವ ಸ್ಥಿತಿ ಅವನ ಮನಃಸ್ಥಿತಿಯನ್ನು ಸಮರ್ಥವಾಗಿ ತಿಳಿಸಿಕೊಡುವಲ್ಲಿ ಸಫಲವಾಗುತ್ತದೆ. ಅವನು ಕುಳಿತಿರುವುದು ಬಿಸಿಯಾದ ಬಂಡೆಯ ಮೇಲೆ. ಸೇದುತ್ತಿರುವುದು ಸಿಗರೇಟನ್ನು. ಬೇಸಗೆಯ ಮಧ್ಯಾಹ್ನದ ಉರಿ ಅವನನ್ನು ಸುಡುತ್ತಿದೆ. ಹೀಗೆ ಅಸಹ್ಯವೆನಿಸುವ ಅತೀವ ಉಷ್ಣತೆಗಿಂತಲೂ ಅಧಿಕವಾಗಿ ಅವನನ್ನು ಪ್ರಭಾವಿಸುವ ಸಂಗತಿಯೊಂದು ಅವನ ತಲೆಯೇರಿ ಕುಳಿತಿದೆ. ಅದು ಮಗನ ಭವಿಷ್ಯದ ಕುರಿತಾದ ಚಿಂತೆ. ತಂದೆಯ ಮಾತು ಮಗನನ್ನು ತಲುಪುತ್ತಲೇ ಇಲ್ಲ. ಇಲ್ಲಿ ಪರಂಪರೆ ಮತ್ತು ಆಧುನಿಕತೆಗಳು ಮುಖಾಮುಖಿಯಾಗುತ್ತವೆ. ಸಾಂಪ್ರದಾಯಿಕತೆಯನ್ನು ಪರಿಭಾವಿಸಿಕೊಳ್ಳುವಲ್ಲಿ ಎರಡು ಭಿನ್ನ ತಲೆಮಾರುಗಳು ಎದುರಿಸುವ ಸಂಘರ್ಷ ಇಲ್ಲಿ ಅಭಿವ್ಯಕ್ತಗೊಂಡಿದೆ. ಹಿರಿಯರಿಂದ ಬಂದ ಮನೆ ಮತ್ತು ಆ ಮನೆಯ ಜೊತೆಗೆ ನಂಟು ಹಾಕಿಕೊಂಡ ನಂಬಿಕೆ- ಆಚರಣೆಗಳನ್ನು ತನ್ನ ಮಗ ಮುಂದುವರಿಸಿಕೊಂಡು ಹೋಗಲಾರ ಎಂದು ಆತಂಕಪಡುವ ತಂದೆಯಲ್ಲಿರುವ ಪರಂಪರೆಯ ಪರವಾದ ನಿಲುವು, ಬೆಳವಣಿಗೆ ಹೊಂದಬೇಕೆಂಬ ಹಂಬಲದ ಹರೆಯದ ಮಗನ ಆಧುನಿಕತೆಯ ಕುರಿತಾದ ಒಲವು ಇವೆರಡೂ ವಿರೋಧಾಭಾಸಗಳು ಸಂಧಿಗೊಂಡು, ಘರ್ಷಣೆಗೆ ಒಳಗಾಗಿ, ವಿಕ್ಷಿಪ್ತತೆಯಲ್ಲಿಯೇ ಪರ್ಯಾವಸಾನಗೊಳ್ಳುವುದು ಈ ಭಾಗದ ಸ್ವಾರಸ್ಯ.
ಕವಿತೆಯ ಕೊನೆಯ ಭಾಗ ಭೌತಿಕ ನೆಲೆಯ ಇಲ್ಲವೇ ಮೂರ್ತ ರೂಪದ ವಿಕಾಸ ಕ್ರಮವನ್ನು ಮೀರಿದ ಆಂತರಂಗಿಕವಾದ ಬೆಳವಣಿಗೆಯ ಕಡೆಗೆ ಬೆರಳು ತೋರುತ್ತದೆ. ವ್ಯಕ್ತಿತ್ವದೊಳಗಿನ ಹಲವು ಅಂಶಗಳು ಸಂಘರ್ಷಕ್ಕೆ ಒಳಗಾಗುತ್ತಲೇ ಕೆಡುಕನ್ನು ಕಳಚಿಕೊಂಡು ಒಳಿತಿನ ಬೆಳಕು ಉದಯಿಸುವುದರ ಕಡೆಗೆ ಕವಿತೆ ತುಡಿಯುತ್ತದೆ. ಬಾಹ್ಯ ಗೋಚರವೆನಿಸಿಕೊಳ್ಳಬಹುದಾದ ಬದುಕಿನ ಸಾಧನೆ ಆಂತರಂಗಿಕವಾದ ಪರಿಧಿಯಲ್ಲಿ ಪ್ರಕಟಗೊಂಡು ಜೀವನ ವಿಕಾಸಕ್ಕೆ ನೆಲೆಯಾಗುವ ಬಗೆ ಇಲ್ಲಿ ಗೋಚರವಾಗುತ್ತದೆ. ಹನುಮದ್ವಿಕಾಸದ ಪರಿಕಲ್ಪನೆಯನ್ನು ಮೂಡಿಸುತ್ತಲೇ ಕವಿತೆ ಮಿತಿಗಳನ್ನು ಮೀರಿ ಮನುಷ್ಯ ಬದುಕು ಬೆಳೆಯಬಹುದಾದ ಸಾಧ್ಯತೆಯ ಕಡೆಗೆ ಸಹೃದಯರ ಮನವನ್ನು ಸೆಳೆಯುತ್ತದೆ.

ಪ್ರಸ್ತುತ ಕಾಲಘಟ್ಟದ ಯುವ ತಲೆಮಾರೂ ಸಹ ಬದುಕಿನ ಬೆಳವಣಿಗೆಯ ಕುರಿತಾದ ವಿಕ್ಷಿಪ್ತತೆಗಳನ್ನು ಒಡಮೂಡಿ ನಿಂತಿದೆ. ಭವಿಷ್ಯದ ಕುರಿತಾದ ಅಭದ್ರತೆ ದೇಶದ ಯುವಜನತೆಯನ್ನು ಕೆರಳಿಸುತ್ತಿದೆ. ಪ್ರಭುತ್ವಕ್ಕೊಂದು ಪರ್ಯಾಯ ಮಾದರಿ ಬೇಕೆಂಬ ಕೂಗು ಬಲವಾಗಿಯೇ ಕೇಳಿಬರುತ್ತಿದೆ. ಯುವಜನರ ಈ ಅಸಮಾಧಾನ, ಅತೃಪ್ತಿ, ಆಕ್ರೋಶಗಳು ಬರಿಯ ಮೂರ್ತ ವಿಕಾಸ ಮಾದರಿಗೆ ಸೀಮಿತಗೊಳ್ಳದೆ, ಹನುಮದ್ವಿಕಾಸವಾಗಬೇಕಾಗಿದೆ. ಆ ಮೂಲಕ ಅಡಿಗರ ವರ್ಧಮಾನ ಕವಿತೆಯ ರೀತಿಯಲ್ಲಿಯೇ ಭಾರತದ ಯುವಜನರ ವರ್ತಮಾನ ಮತ್ತು ಭವಿಷ್ಯ ವಿಕಾಸಗೊಳ್ಳಬೇಕಿದೆ. ದೇಶದ ಭವಿಷ್ಯ ಸುರಕ್ಷಿತಗೊಳ್ಳಬೇಕಿದೆ.

ವಿಶ್ವನಾಥ ನೇರಳಕಟ್ಟೆ ಮೂಲತಃ ದಕ್ಷಿಣ ಕನ್ನಡದ ಬಂಟ್ವಾಳದವರು. ಬಂಟ್ವಾಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೊದಲ ತೊದಲು (ಕವನ ಸಂಕಲನ), ಕಪ್ಪು-ಬಿಳುಪು (ಕಥಾ ಸಂಕಲನ), ಹರೆಯದ ಕೆರೆತಗಳು (ಚುಟುಕು ಸಂಕಲನ), ಸಾವಿರದ ಮೇಲೆ (ನಾಟಕ) ಇವರ ಪ್ರಕಟಿತ ಕೃತಿಗಳು. “ಡಾ. ನಾ ಮೊಗಸಾಲೆಯವರ ಸಾಹಿತ್ಯದಲ್ಲಿ ಪ್ರಾದೇಶಿಕತೆ” ವಿಷಯದಲ್ಲಿ ಪಿಎಚ್.ಡಿ. ಸಂಶೋಧನೆ ಮಾಡಿದ್ದಾರೆ.


