ಅದೂ ಸರಿಯೇ. ಅಂತಾರಾಷ್ಟ್ರೀಯ ಕರೆ ದುಬಾರಿ ತಾನೇ? ಟಿಪಿಕಲ್ ಅಮೆರಿಕನ್ ಎಂದು ಗೊಣಗಿಕೊಂಡು ನಾನು ಸುಮ್ಮನಾದರೂ ಮನೆಯಲ್ಲಿ ರಂಪವಾಗುವುದೇನೂ ತಪ್ಪಲಿಲ್ಲ. ‘ಅಲ್ಲಿಂದಾ ಫೋನ್ ಮಾಡಿದವನ ಹತ್ತಿರ ಒಳ್ಳೆಯ ಮಾತಾಡೋದು ಬಿಟ್ಟು, ನಾನು ಕರಮಿ, ನಾನು ಕುಳ್ಳಿ, ನಾನು ಡುಮ್ಮಿ ಅಂತ ಹೇಳಿಕೊಳ್ತಾಳಲ್ಲ ನಿನ್ನ ಮಗಳು, ಏನನ್ನಬೇಕು ಇದಕ್ಕೆ?’ ಎಂದು ಚಂದ್ರಣ್ಣ ತಲೆ ಮೇಲೆ ಕೈಹೊತ್ತುಕೊಂಡಿದ್ದರು. ‘ಅಲ್ಲಿಂದಾ ಫೋನ್ ಮಾಡಿದವನ ಪ್ರಶ್ನೆ ಅಷ್ಟು ಸ್ಪಷ್ಟವಾಗಿದ್ದರೆ ಇಲ್ಲಿಂದಾ ಮಾತಾಡುವ ನನ್ನ ಉತ್ತರ ಸಹ ಸ್ಪಷ್ಟವಾಗಿರಬೇಕು ತಾನೇ?’ ಎಂದು ವಿಶಾಲಮ್ಮನ ಹತ್ತಿರ ನಾನು ಬೇತುಕೊಂಡಿದ್ದೆ.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಮೂವತ್ಮೂರನೆಯ ಬರಹ
ಒಮ್ಮೆ ನನ್ನ ವಿದ್ಯಾರ್ಥಿನಿಯೊಬ್ಬಳು ಹೆಣ್ಣು ನೋಡಲು ಬಂದವನಿಗೆ ಸ್ಪಷ್ಟವಾಗಿ ತಾನಿರುವ ಮನೆಯಲ್ಲಿ ಹಳೆಯ ಫರ್ನಿಚರ್ ಇರುವುದು ತನಗೆ ಇಷ್ಟವಿಲ್ಲ ಎಂದಿದ್ದಳಂತೆ. ಆ ಪೆದ್ದನಿಗೆ ಅರ್ಥವಾಗದಿದ್ದರಿಂದ ‘ನನಗೆ ನಿನ್ನ ಕುಟುಂಬದ ಜೊತೆಯಲ್ಲಿ ಈಗಿಂದಲೇ ಇರುವುದು ಇಷ್ಟವಿಲ್ಲ. ಸ್ವಲ್ಪ ದಿನಗಳ ಮಟ್ಟಿಗಾದರೂ ವೈಯುಕ್ತಿಕತೆ, ಸ್ವಾತಂತ್ರ್ಯವನ್ನು ಖುಷಿಯಿಂದ ಅನುಭವಿಸುವ ಇರಾದೆ ಇದೆ,’ ಎಂದಳಂತೆ. ಕೇಳಿ ಅವನಿಗಿಂತ ಹೆಚ್ಚಾಗಿ ಅವಳ ಅಪ್ಪಾಮ್ಮರೆ ಬೊಬ್ಬೆ ಹೊಡೆದಿದ್ದರು.
‘ಕಷ್ಟಪಟ್ಟು ಬೆಳೆಸಿದ ಅಪ್ಪಾಮ್ಮರನ್ನ ಹಳೆ ಫರ್ನಿಚರ್ ಅಂತ ಅಂದುಬಿಟ್ಟಳಲ್ಲ! ಇದಕ್ಕೇನಾ ನಾವು ಇವಳಿಗೆ ವಿದ್ಯೆ ಕಲಿಸಿರೋದು?’ ಎಂದು ಸುತ್ತಿಬಳಸಿ ಪಾಠ ಹೇಳಿಕೊಟ್ಟವರನ್ನು ದೂರಿದಾಗ ನನಗೆ ನಗು ಬಂದಿತ್ತು.
‘ಅವನು ಇನ್ನೂ ಅವಳಿಗೆ ಅಪರಿಚಿತ. ಅವನ ಅಪ್ಪಅಮ್ಮ ಸಹ ಅಪರಿಚಿತರೇ. ಅವರ ಬಗ್ಗೆ ಏನೋ ಹೇಳಿದರೆ ನೀವ್ಯಾಕೆ ನಿಮ್ಮ ಬಗ್ಗೆಯೇ ಹೇಳಿದಂತೆ ಪೇಚಾಡಿಕೊಳ್ಳುತ್ತಿದೀರಾ?’ ಎಂದು ಕೇಳಬೇಕಾಯಿತು. ಸತ್ಯ ಅದೇ. ನಾಳೆ ದಿನ ಮಗನಿಗೆ ಹೆಣ್ಣು ನೋಡಲು ಹೋದಾಗ ಆ ಇನ್ನೊಬ್ಬ ಹೆಣ್ಣುಮಗಳು ಸಹ ಹೀಗೇ ಹೇಳಿಬಿಟ್ಟರೆ?
ಕೊನೆಗೆ ಅವರ ಮಗಳು ಮಹತ್ತರವಾದ ಪ್ರಶ್ನೆಯನ್ನು ಕೇಳಿಯೇಬಿಟ್ಟಳು. ‘ಇಷ್ಟಕ್ಕೂ ಅವನು ಕಷ್ಟಪಟ್ಟು ತನ್ನನ್ನು ಬೆಳೆಸಿದ ಅಪ್ಪಮ್ಮ ತನ್ನದೇ ಜವಾಬ್ದಾರಿ, ನಿನಗೆ ಆ ಚಿಂತೆ ಬೇಡ ಅಂತ ಹೇಳ್ತಾನಾ?’
ಹೆಣ್ಣು ತನಗೇನು ಬೇಕು ಎನ್ನುವುದರ ಬಗ್ಗೆ ಸ್ಪಷ್ಟತೆಯನ್ನು ಬೆಳೆಸಿಕೊಳ್ಳಬಾರದಂತೆ. ಸೆರಗಿನ ಅಂಚನ್ನು ಬೆರಳಿಗೆ ಸುತ್ತಿಕೊಳ್ಳುತ್ತಾ, ಉಂಗುಷ್ಟದಲ್ಲಿ ನೆಲ ಕೆರೆಯುತ್ತಾ, ‘ಅಪ್ಪಾಮ್ಮರ ಇಷ್ಟವೇ ತನ್ನಿಷ್ಟ!’ ಅಂತ ಪಲುಕಬೇಕಂತೆ!
ಹೆಮ್ಮಕ್ಕಳ ಮೇಲೆ ಹೇರಲ್ಪಡುವ ಕರ್ತವ್ಯಗಳು ಹಲವಾರು. ತಿದ್ದಬೇಕು, ಲಾಲಿಸಬೇಕು, ಪಾಲಿಸಬೇಕು, ಸಹನೆಯಿಂದ ದಾರಿಗೆ ತರಬೇಕು, ವಯಸ್ಸಾದವರನ್ನು ನೋಡಿಕೊಳ್ಳಬೇಕು, ಕುಟುಂಬದ ಹೊಣೆ ಹೊರಬೇಕು… ಒಂದೇ, ಎರಡೇ? ಅಯ್ಯಮ್ಮ!
ಯಾವುದೋ ಹಾಲಿವುಡ್ ಚಿತ್ರದಲ್ಲಿ ಹೀಗೆಯೇ ಕೌಟುಂಬಿಕ ಪುರಾಣ ಹೊಡೆದಾಗ ಪ್ರಧಾನಪಾತ್ರವಾದ ಜೂಲಿಯಾ ರಾಬರ್ಟ್ಸ್ ‘What I need is a partner! Not a project!’ ಅಂತ ಫಟ್ಟನೆ ಹೇಳಿದ ನೆನಪು.
*****
ನನ್ನದೇ ಬದುಕಿನ ಎರಡು ‘ಹೆಣ್ಣು ನೋಡುವ’ ಪ್ರಸಂಗಗಳು ನೆನಪಾಗಿದ್ದವು.
ಒಮ್ಮೆ ಒಬ್ಬ ಹೀಗೆಯೇ ‘ನೋಡಲು’ ಬಂದಿದ್ದ. ಎಂದಿನಂತೆ ಸೀರೆ ಉಡು, ಉಪ್ಪಿಟ್ಟು ಕೇಸರಿಬಾತ್ ಕೊಡು, ಕಾಫಿ ಸರಬರಾಜು ಮಾಡು ಇತ್ಯಾದಿ ವಿಧಿಗಳು ಮುಗಿದ ಮೇಲೆ ನನ್ನನ್ನು ಮತ್ತೆ ಕರೆದರು. ಮುಗಿಯಿತು ಎಂದುಕೊಂಡು ನಿಟ್ಟುಸಿರು ಬಿಟ್ಟವಳಿಗೆ ಕರ್ಮ ಮುಗಿದಿಲ್ಲ ಎಂದು ಅರಿವಾಗಿ ಹೋಗಿ ಎದುರಲ್ಲಿ ಕೂತೆ.
ಅವನ ಅಪ್ಪ ನನ್ನ ಹೆಸರನ್ನು ಕೇಳಿದರು. ಧ್ವನಿಪರೀಕ್ಷೆ ಮಾಡುವ ಉದ್ದೇಶವಿದ್ದಿರಬಹುದು. ಅಥವಾ ಮೂಗಿಯಾ, ಕಿವುಡಾ ಎಂದು ಖಾತರಿ ಮಾಡಿಕೊಳ್ಳಬೇಕಿತ್ತೋ ಏನೋ. ನನ್ನ ಹೆಸರನ್ನು ಹೇಳಿದ ಮೇಲೆ ತುಂಬ ಸಹಜವಾಗಿಯೇ ‘ನಿಮ್ಮ ಹೆಸರೇನು?’ ಅಂದೆ.
ಅವರ ಮುಖ ಆ ಕ್ಷಣವೇ ವಧುಪರೀಕ್ಷೆಯ ರಿಸಲ್ಟ್ ಹೇಳಿತ್ತಂತೆ.
ಅಪ್ಪ ಚಂದ್ರಣ್ಣ ಉರಿದು ಬಿದ್ದಿದ್ದರು. ‘ಹೆಸರೇನು ಅಂತ ಕೇಳ್ತಾಳೆ, ಐದು ನಿಮಿಷ ಆದ ಮೇಲೆ ವಾಚ್ ನೋಡಿಕೊಳ್ತಾಳೆ. ಇದೇನಾ ನಿನ್ನ ಮಗಳಿಗೆ ಕಲಿಸಿದ್ದು?’ ಅಂತ ವಿಶಾಲಮ್ಮನ ಮೇಲೆ ಪ್ರಹಾರ.
ಇನ್ನೊಮ್ಮೆ ಅಮೆರಿಕಾದಲ್ಲಿದ್ದ ವರನಿಗೆ ನನ್ನ ಫೋಟೋ ಹೋಗಿತ್ತು. ಅದು ಕಪ್ಪುಬಿಳಿ ಆದ್ದರಿಂದ ಮತ್ತು ಅರೆಬರೆ ಇದ್ದರಿಂದ (ಅಂದರೆ ಸಮಸ್ತ ದೇಹವೂ ಕಾಣಿಸದಿದ್ದರಿಂದ) ಅವನಿಗೆ ಇನ್ನಷ್ಟು ವಿವರಗಳು ಬೇಕಿದ್ದವು ಅಂತನ್ನಿಸುತ್ತೆ.
ಒಮ್ಮೆ ಅಲ್ಲಿಂದ ಫೋನ್ ಮಾಡಿದ್ದ. ಕೇಳಿದ ಮೊಟ್ಟ ಮೊದಲ ಪ್ರಶ್ನೆ: are you tall, slim and fair? ಸತ್ಯವನ್ನಲ್ಲದೆ ಬೇರೇನೂ ಹೇಳಲಾರೆ ಎಂಬ ಅಹಂಕಾರದ ನಾನು ‘no, I am short, dark and plump’ ಎಂದುಬಿಟ್ಟೆ.
ತಕ್ಷಣ ಫೋನ್ ಇಟ್ಟ ಶಬ್ದ ಕೇಳಿಸಿತ್ತು.

ಅದೂ ಸರಿಯೇ. ಅಂತಾರಾಷ್ಟ್ರೀಯ ಕರೆ ದುಬಾರಿ ತಾನೇ? ಟಿಪಿಕಲ್ ಅಮೆರಿಕನ್ ಎಂದು ಗೊಣಗಿಕೊಂಡು ನಾನು ಸುಮ್ಮನಾದರೂ ಮನೆಯಲ್ಲಿ ರಂಪವಾಗುವುದೇನೂ ತಪ್ಪಲಿಲ್ಲ. ‘ಅಲ್ಲಿಂದಾ ಫೋನ್ ಮಾಡಿದವನ ಹತ್ತಿರ ಒಳ್ಳೆಯ ಮಾತಾಡೋದು ಬಿಟ್ಟು, ನಾನು ಕರಮಿ, ನಾನು ಕುಳ್ಳಿ, ನಾನು ಡುಮ್ಮಿ ಅಂತ ಹೇಳಿಕೊಳ್ತಾಳಲ್ಲ ನಿನ್ನ ಮಗಳು, ಏನನ್ನಬೇಕು ಇದಕ್ಕೆ?’ ಎಂದು ಚಂದ್ರಣ್ಣ ತಲೆ ಮೇಲೆ ಕೈಹೊತ್ತುಕೊಂಡಿದ್ದರು. ‘ಅಲ್ಲಿಂದಾ ಫೋನ್ ಮಾಡಿದವನ ಪ್ರಶ್ನೆ ಅಷ್ಟು ಸ್ಪಷ್ಟವಾಗಿದ್ದರೆ ಇಲ್ಲಿಂದಾ ಮಾತಾಡುವ ನನ್ನ ಉತ್ತರ ಸಹ ಸ್ಪಷ್ಟವಾಗಿರಬೇಕು ತಾನೇ?’ ಎಂದು ವಿಶಾಲಮ್ಮನ ಹತ್ತಿರ ನಾನು ಬೇತುಕೊಂಡಿದ್ದೆ.
*****
ಇನ್ನೊಮ್ಮೆ ಇನ್ನೊಬ್ಬ ವಿದ್ಯಾರ್ಥಿಯ ಅಪ್ಪಾಮ್ಮ ಬಂದಿದ್ದರು. ‘ತುಂಬ ಒಳ್ಳೆಯ ವರ, ಮದುವೆ ಬೇಡಾ ಅಂತ ಹಠ ಹಿಡಿದಿದಾಳೆ, ನೀವಾದ್ರೂ ಸ್ವಲ್ಪ ಬುದ್ಧಿ ಹೇಳಿ!’
‘ಬುದ್ಧಿ ಹೇಳಬೇಕಾಗಿರುವುದು ನಿಮಗೆ. ಆಕೆಯ ಗ್ರಾಜುಯೇಶನ್ ಇನ್ನೂ ಮುಗಿದಿಲ್ಲ. ಇದು ಬಾಲ್ಯವಿವಾಹಕ್ಕೆ ಸಮ!ʼ ಎಂದು ಹೇಳಿ ಅವರ ವಿರೋಧವನ್ನು ಕಟ್ಟಿಕೊಂಡಿದ್ದೆ. ಆದರೂ ಕುತೂಹಲಕ್ಕೆಂದು ಆ ಹುಡುಗಿಯನ್ನು ಮಾತಾಡಿಸಿದೆ. ಓದು ಮುಗಿಯಲಿ ಎಂಬ ಕಾಳಜಿಯಾ? ಇಲ್ಲಾ, ಬೇರಿನ್ನೆನೋ ಕಾರಣವಾ?
‘ಅವನ ಜೊತೆ ಹೊರಗೆ ಸಹ ಹೋಗಿದ್ದೆ. ಮಹಾ ಪಾಕಡಾ ಅಂತ ಅನ್ನಿಸ್ತು. ಜೊತೆಗೆ ಬೆಣ್ಣೆ ಬಿಸ್ಕೆಟ್ ತರ ಇದಾನೆ. ಹತ್ತಿರದಿಂದ ನೋಡಿದ್ರೆ ಖಟ್ರೆ ಅಂತನ್ನಿಸುತ್ತೆ, ಇನ್ನು ಅವನ ಜೊತೆ ಮಲಗಿಕೊಳ್ಳಲು ಸಾಧ್ಯವಾ?’ ಅಂತ ಅವಳು ನಿರ್ಭಿಡೆಯಿಂದ ಹೇಳಿದಾಗ ಮೆಚ್ಚಿಕೊಂಡಿದ್ದೆ.
ಅಗ್ರಹಾರ ಕೃಷ್ಣಮೂರ್ತಿಯವರ ಕಾದಂಬರಿಯ ನೆನಪಾಗಿತ್ತು. ಎಂಬತ್ತರ ದಶಕದಲ್ಲಿ ಲಂಕೇಶ್ ಪತ್ರಿಕೆಯಲ್ಲಿ ‘ನೀರು ಮತ್ತು ಪ್ರೀತಿ’ ಎಂಬ ಶೀರ್ಷಿಕೆಯಡಿ ಹರಿದ ಅವರ ಧಾರಾವಾಹಿ ಸಿಕ್ಕಾಪಟ್ಟೆ ಜನಪ್ರಿಯವಾಗಿದ್ದ ಕಾಲ. ಅದರ ಪ್ರಧಾನಪಾತ್ರವಾದ ಜಲಜ ‘ಬೆಣ್ಣೆಹೊಳೆ’ಯ ಜಲಸಮೃದ್ಧಿಯಲ್ಲಿ ಮಿಂದ ಹುಡುಗಿ. ಮೈಸೂರಿಗೆಂದು ಓದಲು ಹೋದಾಗ ತಾನು ಇದ್ದ ವಿಧವೆ ಯಮುನತ್ತೆಯ ಮನೆಯಲ್ಲಿ ನೀರಿನ ಬರವನ್ನು ಎದುರಿಸಬೇಕಾಯಿತು.
ಮುಟ್ಟಿನ ದಿನಗಳಲ್ಲಿ ಸ್ವಚ್ಛವಾಗಿರಲು ಜಲಜ ಹೆಣಗುವ ರೀತಿ ನೀರಿನ ಬರಪ್ರದೇಶಗಳ ಎಲ್ಲ ಹೆಂಗಸರಿಗೆ ಗೊತ್ತಿರುತ್ತದೆ, ನಿಜ. ಆದರೆ ಒಬ್ಬ ಗಂಡಸು ಕಾದಂಬರಿಕಾರ ಇಷ್ಟರ ಮಟ್ಟಿಗೆ ಅದನ್ನು ಅರ್ಥ ಮಾಡಿಕೊಂಡಿದ್ದು ಮಾತ್ರ ಅಪೂರ್ವ ಅಂತಲೇ ಹೇಳಬೇಕು. ಜಲಜ ಸಹಪಾಠಿ ಗೋಪಾಲನ ಮನೆಯಲ್ಲಿ ಇದ್ದ ದಂಡಿ ನೀರಿಗೆ ಮನಸೋತು ಅವನ ಜೊತೆ ಬಾಂಧವ್ಯವನ್ನು ಕಟ್ಟಿಕೊಂಡಿದ್ದಳು. ನೀರಿನಿಂದಲೇ, ನೀರಿಗೋಸ್ಕರವೇ ಹುಟ್ಟಿ ಹಬ್ಬಿದ್ದ ಪ್ರೀತಿ ಅದು. ವಿದ್ಯಾಭ್ಯಾಸ ಮುಗಿದ ಮೇಲೆ ಅನಿವಾರ್ಯವಾಗಿ ಅವನಿಂದ ದೂರವಾಗಿ ಮರಳಿ ಊರಿಗೆ ಬಂದು ಹೆತ್ತವರು ನಿಶ್ಚಯಿಸಿದ ಮನೋಹರನನ್ನು ಮದುವೆ ಮಾಡಿಕೊಂಡು ಮೊದಲ ರಾತ್ರಿಯಲ್ಲೇ ಆಘಾತಕ್ಕೆ ತುತ್ತಾಗಿದ್ದಳು. ಕತೆ ಹೀಗೆ ಸಾಗುತ್ತದೆ:
ಬೆಳಗಿನ ಜಾವ. ರಗ್ಗಿನೊಳಗೆ ಅವಳ ಸೊಂಟಕ್ಕೇ ಅಂಟಿಕೊಂಡಿದ್ದ ಮನೋಹರನ ಕೈ ಜಲಜಳನ್ನು ಎಚ್ಚರಗೊಳಿಸಿತು. ಬೆಚ್ಚಗೆ ಬೆನ್ನಿಗೆ ಒತ್ತಿಕೊಂಡು ಮಲಗಿದ್ದ ಪತಿ ಆಗಲೇ ಎಚ್ಚರಗೊಂಡು ಬೆಳಗಿನಜಾವದ ಬೆಚ್ಚನೆಯ ಅನುಭವಕ್ಕೆ ಮತ್ತೊಮ್ಮೆ ಅಣಿಯಾಗುತ್ತಿದ್ದ. ರಾತ್ರಿ ಅವನ ಬಾಯಿವಾಸನೆಯ ಕೆಟ್ಟ ಕನಸೇನಾದರೂ ಬಿದ್ದಿತ್ತೇ ಎಂದು ಅನುಮಾನಿಸಿದಳು!
ಮನೋಹರ ಜಲಜಳ ಮುಖವನ್ನು ತನ್ನೆಡೆಗೆ ತಿರುಗಿಸಿಕೊಳ್ಳುವ ಪ್ರಯತ್ನ ಮಾಡಿದ. ಅವಳು ನಿಧಾನವಾಗಿ ಅವನೆಡೆಗೆ ತಿರುಗಿದಳು. ಖುಷಿಗೊಂಡ ಮನೋಹರ ಅಪ್ಪಿಕೊಂಡು ಚುಂಬಿಸಲು ಮುಂದಾದ. ದುರ್ವಾಸನೆ ಅವಳ ಮೂಗಿಗೆ ಅಡರಿ ಅವಳಿಗೆ ತಲೆ ತಿರುಗುವಂತಾಯಿತು. ಝಗ್ಗನೆ ಮಂಚವಿಳಿದು ಕಳಚಿಹೋಗಿದ್ದ ಸೀರೆ ಕುಪ್ಪಸಗಳನ್ನು ತೊಟ್ಟು ಬೋಲ್ಟ್ ತೆಗೆದು ಯಾವುದೋ ಮಹಾ ಪರ್ವತವನ್ನು ಅತ್ಯಂತ ಸಾಹಸದಿಂದ ಏರಿಬಂದವಳಂತೆ ಹೊರಗೆ ಬಂದಳು.
ಅವಳಿಗೆ ಮೊದಲರಾತ್ರಿಯ ಅನುಭವ ನುಂಗಲಾರದ ತುತ್ತಾಯಿತು. ಯಾರಲ್ಲಿಯೂ ಹೇಳುವಂತಿಲ್ಲ ಬಿಡುವಂತಿಲ್ಲ. ಈ ಬಗೆಯ ದುಃಸ್ಥಿತಿ ತನಗೇ ಒದಗಬೇಕೆ, ವೈವಾಹಿಕ ಜೀವನದ ಪ್ರಾರಂಭ ಇಷ್ಟೊಂದು ಕಹಿಯಾಗಿ ಮೊದಲಾಗಬೇಕೆ ಎಂದು ಚಿಂತಾಕ್ರಾಂತಳಾದಳು. …
ನಾಲ್ಕು ದಿನಗಳ ನಂತರ ಗಂಡನ ಜೊತೆ ನಗರಕ್ಕೆ ಹೊರಡುವ ದಿನವಂತೂ ಜಲಜ ಕುಂತಲ್ಲಿ ನಿಂತಲ್ಲಿ ಗೊಳೋ ಎನ್ನತೊಡಗಿದಳು. ಅನೇಕರು, ‘ಹೆಣ್ಣಾಗಿ ಹುಟ್ಟಿದ ಮೇಲೆ ಯಾವತ್ತಿದ್ದರೂ ಅಪ್ಪ ಅಮ್ಮಂದಿರನ್ನು ಬಿಟ್ಟು ಹೋಗಲೇಬೇಕಮ್ಮಾ’ ಎಂದು ಪರಿಪರಿಯಾಗಿ ಸಮಾಧಾನ ಮಾಡತೊಡಗಿದರು. ಮಡಿಲಕ್ಕಿ ತುಂಬಿಸಿಕೊಂಡು ಹೊರಡುವಾಗ ಕೃಷ್ಣಸ್ವಾಮಿಯವರೇ ಬಂದು ಮಗಳ ತಲೆ ನೇವರಿಸುತ್ತಾ, ‘ಹುಟ್ಟಿದ ಮನೆಗೆ ಒಳ್ಳೆ ಹೆಸರು ತರಬೇಕಮ್ಮ, ಎಂಥಾ ಕಷ್ಟ ಬಂದರೂ ತಾಳ್ಮೆಯಿಂದ ಸೇರಿಸಿಕೊಂಡು ಗಂಡನ ಜೊತೆ ಹೊಂದಿಕೊಂಡು ಹೋಗಬೇಕು. ಕಣ್ಣೀರು ಯಾಕೆ? ನಗುನಗುತ್ತಾ ಹೋಗಬೇಕು,’ ಎಂದು ಪತಿವ್ರತಾಧರ್ಮದ ಸೂತ್ರಗಳನ್ನೆಲ್ಲಾ ಒಂದೊಂದಾಗಿ ಹೇಳತೊಡಗಿದಾಗಲಂತೂ, ಜಲಜ ತನಗುಂಟಾಗಿದ್ದ ತೀವ್ರ ದುಃಖಕ್ಕೆ ನಿಜವಾದ ಕಾರಣವನ್ನು ಹೇಳಲಾರದ ಸಂಕಟದಿಂದ ವಿಲಿವಿಲಿ ಒದ್ದಾಡುತ್ತಾ ಅಪ್ಪನನ್ನು ಬಹಳ ಹೊತ್ತು ಅಪ್ಪಿಕೊಂಡು ಅತ್ತಳು. ಅಳುತ್ತಾ ಅಪ್ಪಿಕೊಂಡು ನಿಂತೇ ಇದ್ದಳು. …
ಹೊಸ ಬದುಕಿನಲ್ಲಿ ಗಂಡನ ಜೊತೆಗೆ ಜಲಜ ಒಂಟಿಯಾದಳು! ಪ್ರತಿದಿನ ರಾತ್ರಿಗಳು ಯಾಕಾದರೂ ಬರುತ್ತವೋ ಅನ್ನಿಸತೊಡಗಿತು ಅವಳಿಗೆ. ಮನೋಹರ ಬೆಳಗ್ಗೆ ಬ್ಯಾಂಕಿಗೆ ಯಾವಾಗ ಹೊರಡುವನೋ ಎಂದು ಕಾಯುತ್ತಿದ್ದ ಅವಳಿಗೆ ಸಂಜೆ ಅವನು ಬರುವವರೆಗೆ ನೆಮ್ಮದಿಯಿರುತ್ತಿತ್ತು. ಅವನು ಮನೆಯಲ್ಲಿರುವಷ್ಟು ಹೊತ್ತು ಇವಳ ಹಿಂದಿಂದೆ ಸುತ್ತಿ ಸೊಂಟ ಬಳಸಿ ಅಪ್ಪಿಕೊಳ್ಳುವಾಗಲೆಲ್ಲಾ ಗಂಡನ ಬಾಯನ್ನು ಬಿಗಿಯಾಗಿ ಹೊಲೆದುಬಿಡಬೇಕೆನಿಸುತ್ತಿತ್ತು! …
ಬೆಳಗ್ಗೆ ಹಲ್ಲುಜ್ಜದೆ, ಕೊನೆ ಪಕ್ಷ ಬಾಯನ್ನು ಮುಕ್ಕಳಿಸದೆ ಕಾಫಿ ಹೀರುತ್ತಿದ್ದುದನ್ನು ಅವಳು ಹೇಗಾದರೂ ಸಹಿಸಿಕೊಳ್ಳುತ್ತಿದ್ದಳಾದರೂ, ಸ್ನಾನಕ್ಕೆ ಹೋದವನು ಒಂದು ಗಳಿಗೆಯಾದರೂ ಬಚ್ಚಲಲ್ಲಿರದೆ ಕ್ಷಣಾರ್ಧದಲ್ಲಿ ಮೈಯೊರೆಸಿಕೊಂಡು ಬರುತ್ತಿದ್ದ ಮನೋಹರನ ಬಗ್ಗೆ ಜುಗುಪ್ಸೆಯುಂಟಾಗುತ್ತಿತ್ತು. ಮನುಷ್ಯನಿಗೆ ದಿನದ ಯಾವುದೇ ಮುಖ್ಯ ಕೆಲಸಕ್ಕಿಂತಲೂ ಮಹತ್ವದ ಕೆಲಸ ಸ್ನಾನವೆಂದೇ ಭಾವಿಸಿದ್ದ ಜಲಜಳಿಗೆ ತನ್ನ ಗಂಡನೆಂಬ ಪ್ರಾಣಿ ಅಚ್ಚುಕಟ್ಟಾಗಿ ನಾಲ್ಕೈದು ನಿಮಿಷ ಹಲ್ಲುಜ್ಜಿ, ಐದಾರು ನಿಮಿಷ ಮೈತಿಕ್ಕಿ ಸ್ನಾನ ಮಾಡಿಬರಲು ಏನು ದಾಡಿ ಎಂದು ಕೊರಗಿ ಕೊರಗಿ ಅದಕ್ಕಾಗಿ ಅವನನ್ನು ಒತ್ತಾಯಿಸತೊಡಗಿದಾಗ, ಮನೋಹರ ಧಾರಾಳವಾಗಿ ಬೈಗುಳಗಳ ಮಳೆಯನ್ನೇ ಸುರಿಸತೊಡಗಿದ್ದ. ಅವಳು ರೋಸಿ ಹೋದಳು. ಹುಟ್ಟುಗುಣ ಸುಟ್ಟರೂ ಹೋಗದು ಎಂಬ ಮಾತು ಒತ್ತಟ್ಟಿಗಿರಲಿ, ಆಫ್ಟರಾಲ್ ತನಗೆ ವಿಧೇಯಳಾಗಿರಬೇಕಾದ ಹೆಂಡತಿಯಿಂದ ಹೀಗೆ ಮಾತು ಕೇಳಬೇಕಾದ ಸ್ಥಿತಿಯೊದಗಿದ್ದಕ್ಕೆ ಅವಳ ಬಗ್ಗೆ ಅಸಾಧ್ಯ ಸಿಟ್ಟನ್ನೇ ಬೆಳೆಸಿಕೊಳ್ಳತೊಡಗಿದ. …

ರಾತ್ರಿ ಹೊತ್ತು ಹಿಂಸೆ ಮಾಡುತ್ತಾ ಮೇಲೆರಗಿ ಬರುತ್ತಿದ್ದ ಅವನ ಬಾಯಿಯ ದುರ್ವಾಸನೆಯ ಜೊತೆಗೆ ಕಂಕುಳ ಕೆಳಗಿನ ಕೂದಲು ಪೊದೆಪೊದೆಯಾಗಿ ಬೆಳೆದು ಒಂದು ವಿಶೇಷ ಬಗೆಯ ಬಣ್ಣ ತಳೆದು ಕಮಟುಗಟ್ಟಿದ ವಾಸನೆಯನ್ನು ಹರಡುತ್ತಿದ್ದುದನ್ನು ಸಹಿಸಿಕೊಳ್ಳಲಾಗದೆ ನರಳತೊಡಗಿದಳು. ತಾನು ಯಮುನತ್ತೆಯ ನೀರಿನ ಬರದಲ್ಲೂ ಕಷ್ಟಪಟ್ಟು ಕ್ಲೀನಾಗಿರುತ್ತಿದ್ದ ದಿನಗಳು, ಅದಕ್ಕಾಗಿ ಒಮ್ಮೆ ಆಕಸ್ಮಿಕಕ್ಕೀಡಾಗಿ ಗೋಪಾಲನ ಬಚ್ಚಲನ್ನು ಬಳಸಿಕೊಂಡು ಮಾನಸಿಕ ಯಾತನೆಯಲ್ಲಿ ನರಳಿದ್ದು ನೆನಪಾಗಿ, ತನ್ನ ಗಂಡನಿಗೆ ಮೂರುಹೊತ್ತೂ ನೀರಿರುವ ಮನೆಯಲ್ಲಿ ತನ್ನನ್ನು ತಾನು ಸ್ವಚ್ಛವಾಗಿಸಿಕೊಳ್ಳಲು ಯಾಕೆ ದೇವರು ಬುದ್ಧಿ ಕೊಡಲಿಲ್ಲವೆಂದು ರಾಘವೇಂದ್ರ ಸ್ವಾಮಿಗಳ ಧ್ಯಾನ ಮಾಡತೊಡಗಿದಳು! (ಪುಟ ೭೪-೮)
Marriages are made in heaven ಎಂದು ಗೊಡ್ಡು ಪುರಾಣ ಹೊಡೆಯುವುದು ಬೇಡ ಮತ್ತೆ!
***
ಆಕರ: ಅಗ್ರಹಾರ ಕೃಷ್ಣಮೂರ್ತಿ, ನೀರು ಮತ್ತು ಪ್ರೀತಿ. ಶ್ರೀರಂಗಪಟ್ಟಣ, ಮಂಡ್ಯ: ನೆಲಮನೆ ಪ್ರಕಾಶನ. ೨೦೦೧.


