Advertisement
ಉಪಾಸೊ: ಶ್ರೀಧರ ಬಳಗಾರ ಕಾದಂಬರಿ “ಬಲಿಪಾದ”ದ ಆಯ್ದ ಭಾಗ

ಉಪಾಸೊ: ಶ್ರೀಧರ ಬಳಗಾರ ಕಾದಂಬರಿ “ಬಲಿಪಾದ”ದ ಆಯ್ದ ಭಾಗ

ಅತ್ತ ಶಡ್ಡುವಿನ ಪ್ರೇಮ ಭಂಗಪಡಿಸಲು ಮುಂದಾಗಲಾರದೆ ಇತ್ತ ಗಂಡ ಊರಿಗೆ ಬಹಿಷ್ಕಾರ ಹಾಕುವುದನ್ನು ನೋಡಲಾರದ ಸಂಕಟದಲ್ಲಿ ಜಾನಕೆ ನರಳುತ್ತಿದ್ದಳು. ಅವಳ ಸನಿಹ ನಿದ್ದೆ ಸುಳಿಯದು. ಹೊರಳಾಡಿ ಮಗ್ಗಲು ಬದಲಿಸಿದಳು. ನಿಟ್ಟುಸಿರುಬಿಟ್ಟಳು. ಶ್ವಾಸ ಎದೆಯೊಳಗೆ ಸಿಕ್ಕಿದಂತಾಗಿ ಎದ್ದು ಕೂತಳು. ಹೊಸ್ತಿಲ ಪಕ್ಕ ಉರಿಯುತ್ತಿದ್ದ ನಂದಾದೀಪದ ಮಂದ ಬೆಳಕಿನಲ್ಲಿ ಚಾಪೆಯ ಮೇಲೆ ಅಂಗಾತ ಮಲಗಿದ್ದ ಉಪಾಸೊ ಅಂಕಣ ದಿಟ್ಟಿಸುತ್ತಿದ್ದ. ಹಗಲಲ್ಲಿ ಹಗುರಾಗಿ ಕಾಣುತ್ತಿದ್ದ ಹಗರಣಗಳು ರಾತ್ರಿ ಕತ್ತಲಲ್ಲಿ ಕಾಮದಂತೆ ತೀವ್ರವಾಗಿ ಕಾಡುತ್ತಿದ್ದವು. ನಿದ್ದೆಯಿಲ್ಲದ ನಿಶ್ಯಬ್ದ ಏಕಾಂತದಲ್ಲಿ ನೆನಪುಗಳು ಕಿಕ್ಕಿರಿಯುತ್ತಿದ್ದವು. ಮಗನ ವೇಷ ಧರಿಸಿದ ಬದಲಾದ ಹೊಸ ಕಾಲವನ್ನು ಎದುರಿಸುವುದು ಹೇಗೆಂದು ಯೋಚನೆಯಾಗುತ್ತದೆ.
ಶ್ರೀಧರ ಬಳಗಾರ ಕಾದಂಬರಿ “ಬಲಿಪಾದ”ದ ಆಯ್ದ ಭಾಗ ನಿಮ್ಮ ಓದಿಗೆ

ನೇರ ಕುಶಾವಳಿಗೆ ಬರುವುದಾಗಿ ಲವ ಮೇಳದ ಮುಖಂಡನಿಗೆ ಹೇಳಿ ಮನೆಯಲ್ಲುಳಿದನು. ಉಪಾಸೊ ಗುಮಟೆ ನುಡಿಸಿ ಎಚ್ಚರ ತಪ್ಪಿ ಬಿದ್ದದ್ದು ಲವನಿಗೆ ಅಪ್ಪ ವಯಸ್ಸು ತಡೆದುಕೊಳ್ಳದಷ್ಟು ಭಾರವನ್ನು ಹೊತ್ತಿದ್ದಾನೆಂದು ಅಸಮಾಧಾನವಾಗಿತ್ತು. ಹೊಣೆಗಾರಿಕೆಯಿಂದ ಹಿಂದೆ ಸರಿಯುವಂತೆ ಹೇಳಿದರೆ ಅಧಿಕಾರ ವಾರಸುದಾರಿಕೆಗೆ ಹೊಂಚು ಹಾಕುತ್ತಿದ್ದಾನೆಂದು ಅನುಮಾನಿಸಬಹುದೆಂದು ಲವ ಆತಂಕವಿಟ್ಟುಕೊಂಡೇ ದಿನ ಮುಂದೂಡಿದ್ದನು. ಆದರಿಂದು ಲವನಿಗೆ ಅಪ್ಪನೊಂದಿಗೆ ಮಾತಾಡಲೇಬೇಕಿತ್ತು. ಉಪಾಸೊ ಹಾಸಿಗೆ ಬಿಡಿಸುತ್ತಿದ್ದಾಗ ಲವ ಬಾಗಿಲ ಹೊರಗೆ ನಿಂತು, “ಗುಮಟೆ ನುಡಿಸೋದಕ್ಕೆ ಪಂಡು ಬರ್ಲಿಲ್ಲ ಅಂತ ನಿನಗೆ ಸಿಟ್ಟು.” ಎಂದನು.

“ಮನೆತನದ ಸಂಪ್ರದಾಯ ಮುರಿದ. ಗುಮಟೆ ವಿಷಯದಲ್ಲಿ ಮಾತ್ರ ಅಲ್ಲ. ದುಡ್ಡು ಗಂಟು ಹಾಕೋದಕ್ಕೆ ಹೊರಟಿದ್ದಾನೆ”

“ಅಜ್ಜನ ಕಾಲಕ್ಕೆ ರಾಗಿ ಕುಂಬ್ರಿ ಇತ್ತು. ನಿನ್ನ ಕಾಲದಲ್ಲಿ ಭತ್ತ ಬಂತು. ಈಗ ಅಡಿಕೆ ಬಂತು. ತಪ್ಪೇನು?”

ಉಪಾಸೊನ ಕಣ್ಣುಗಳು ದೊಡ್ಡದಾದವು. ಒರಟು ದನಿಯಲ್ಲಿ, “ಅದು ಒಪ್ಪಲಾಗದ ವಿಷಯ. ನಮಗೆ ವಾಡಿಕೆ ಮುಖ್ಯ. ಹೀಂಗೆ ಮುಂದೊರೆದ್ರೆ ನಾವು ಯಾರಂತ ನಮ್ಗೆ ಮರ್ತು ಹೋಗ್ತದೆ. ಬೇರು ಕಿತ್ತು ಮ್ಯಾಲೆ ಬರ್ತದೆ! ಒಂದು ಅಪರೂಪದ ಗೆಣಸಿನ ತಳಿ ಮಾಯವಾದಂತೆ ನಮ್ಮ ಕುಲ ಅಳಿದು ಹೋಗ್ತದೆ” ಲವ ಮಾತು ಮುಂದೊರೆಸದೆ ಚಿಟ್ಟೆಯ ತುದಿಯಲ್ಲಿ ಕುಳಿತನು. ರಾತ್ರಿ ಇನ್ನಷ್ಟು ನೀರವ ಎನಿಸಿತು.

(ಶ್ರೀಧರ ಬಳಗಾರ)

ಜಾನಕೆ ಅಪ್ಪ ಮಗನ ಏರು ದನಿಯ ಬಿಸಿಬಿಸಿ ವಾದವನ್ನು ಆಲಿಸಿದ್ದು ಇದೇ ಮೊದಲಲ್ಲ. ಡೇರಿಯಾ ಶಾಲೆಯ ಮಕ್ಕಳಿಗೆ ಇಂಗ್ಲಿಶ್ ಕಲಿಸುವ ವಿಷಯದಲ್ಲಿ ಜಟಾಪಟಿಯಾಗಿತ್ತು. ಕುಶಾವಳಿಯಿಂದ ಕುಲ ದೇವತೆ ಚಾಪಲಾದೇವಿಯನ್ನು ಊರಿಗೆ ಕರೆಯಿಸಿಕೊಳ್ಳುವ ಲವನ ಯೋಚನೆಯನ್ನು ಉಪಾಸೊ ಉರಿಯುತ್ತ ವಿರೋಧಿಸಿದ್ದನು. ಅಂದಿನಿಂದ ಮೊದಲಿನಂತೆ ಅಪ್ಪ-ಮಗನ ಸಂಬಂಧ ಮಧುರವಾಗಿಲ್ಲವೆಂದು ಅವಳು ಕೊರಗಿದ್ದಳು. ಮಾತೂ ಕಮ್ಮಿಯಾಗಿತ್ತು. ಇಬ್ಬರೂ ತಮ್ಮೊಳಗೆ ಬೆಳೆಯುತ್ತಿರುವ ವೈಮನಸು, ಮುನಿಸು ಕುಣಬಿ ಸಮಾಜದ ಕಿವಿ ತಲುಪದಂತೆ ಬಹಿರಂಗಗೊಳ್ಳದಂತೆ ಎಚ್ಚರವಹಿಸಿದ್ದರು. ಮನೆತನದ ಮಾನ ಮುಚ್ಚಿಕೊಂಡರಲ್ಲ ಎಂದು ಅವಳಿಗೆ ತುಸು ಸಮಾಧಾನ. ಮೇಳದವರ ವೇಷದ ಸವಾರಿ ಮುಂದಿನ ಕೇರಿಯ ದಾರಿ ಹಿಡಿದು ಸಾಗಿ ಕಾಡು ಕಣಿವೆಯ ತಗ್ಗಿನ ಕೊಪ್ಪದಲ್ಲಿ ಜಾಗಟೆ ಸದ್ದು ಪ್ರತಿಧ್ವನಿಸಿ ಕೇಳಿತು. ಉಪಾಸೊ ಮತ್ತು ಲವ ಮೇಳದವರ ಜೊತೆಯಲ್ಲಿ ಕೂತು ಕೆಂಡದಲ್ಲಿ ಅಕ್ಕಿ ರೊಟ್ಟಿ ಸುಟ್ಟರೂ ತಿನ್ನದೇ ಇರುವುದು ಜಾನಕೆ ಗಮನಿಸಿದ್ದಳು. ಕಂಬಳದ ಊಟದ ಬಳಿಕ ಸೇರಿದ್ದ ಮನೆ ಜನರು ತಮ್ಮತಮ್ಮ ಗೂಡಿಗೆ ಮರಳಿ ಹೋದರು. ಪುಟೆ ಮತ್ತು ಕೇರಿಯ ಹೆಂಗಸರು ತಮ್ಮ ಯಜಮಾನರ ಪಕ್ಕ ಕುಳಿತು ಉಣ್ಣುತ್ತಿದ್ದಾಗ ನಡುವೆ ಒಂದೆರೆಡು ಸಲ ಜಾನಕೆಗೆ ಹೊಟ್ಟೆಗೆ ಹಾಕಲು ಒತ್ತಾಯಿಸಿದ್ದರು. “ನಿಮ್ಮದೆಲ್ಲ ಆಗ್ಲಿ. ನಂದು ಕಡೇಗೆ” ಎಂದು ಎಲ್ಲರ ಊಟದ ನಂತರ ತಾನು ಉಣ್ಣಲು ಕೂರುವುದಾಗಿ ಮನೆಯ ಹಿರಿಯ ಹೆಂಗಸಾದ ತನ್ನ ಹಿರಿತನವನ್ನು ಸಾರಿದ್ದಳು. ಮೂಲ ಮನೆಯಲ್ಲಿ ವಾಸವಾಗಿರುವವರು ಉಪಾಸೊ ಮತ್ತು ಅವನ ಸಂಸಾರದೊಂದಿಗೆ ಮಕ್ಕಳಿಲ್ಲದ ಅವನ ತಮ್ಮ ಧೂಳೊ ಮತ್ತು ಅವನ ಹೆಂಡತಿ ಮಾತ್ರ. ಸ್ವಭಾವವೆ ದಡ್ಡತನದ್ದೊ ಮಕ್ಕಳಾಗದ್ದನ್ನು ತಲೆಗೆ ಹಚ್ಚಿಕೊಂಡು ಮಂದ ಮತಿಗಳಾಗಿದ್ದಾರೊ ಅವರ ಬುದ್ಧಿಗೆ ಕುಟುಂಬದ ಸೂಕ್ಷ್ಮ ಕಲಹಗಳು ಹೊಳೆಯುವುದಿಲ್ಲ. ಅಥವ ಅವರಿಗೆ ರಗಳೆಗಳು ಬೇಕಾಗಿಲ್ಲ. ದಂಪತಿ ಎಲೆ ಬೀಸಾಕಿ, ಉಂಡ ಜಾಗವನ್ನು ಸಾರಿಸಿ ಒಳ ಜಗಲಿಯಿಂದ ಮೇಲೇರಲು ಬೈತುಕೋಲಿಗೆ ಆನಿಸಿಟ್ಟ ಮರದ ಎಂಚಣಿಗೆ ಏರಿ ಮೆತ್ತಿಯ ಕೋಣೆ ಸೇರಿಕೊಂಡರು.

ಉಪಾಸೊ ಅಂಗಳದ ಕಟ್ಟೆಯ ಮೇಲೆ ಮನೆಯತ್ತ ಬೆನ್ನು ಹಾಕಿ ಬೆಳದಿಂಗಳ ಸಮುದ್ರವಾದ ಗದ್ದೆಯ ಬಯಲನ್ನು ನೋಡುತ್ತಿದ್ದನು. ಅವನಿಗೆ ಬೇಸರವಾದಾಗಲೆಲ್ಲ ಹೀಗೆ ಒಬ್ಬನೇ ಕೂತು ಕಾವ್ಯವೊ ಕಥೆಯೊ ಹುಟ್ಟಿದ ಕಾಡಿನ ನೆನಪಿನ ಓಣಿಯಲ್ಲಿ ನಡೆಯುತ್ತಿದ್ದನು. ಅವನ ಮನಸು ಶಾಂತವಾಗಿ ನಿಲ್ಲುವವರೆಗೆ ಜಾನಕೆ ಕಾದು ಚಿಟ್ಟೆಗೆ ಬಂದು, “ರಾಶಿ ರಾಶಿ ನಾಳೆಯ ಕೆಲ್ಸ ಉಂಟು. ಬಾಳೆ ಹಾಕಿದ್ದೇನೆ ಬನ್ನಿ” ಎಂದು ಕರೆದಳು. ಕತ್ತದ ಮಂಚದ ಮೇಲೆ ಮಡಿಚಿದ ಬಲ ಮುಂಗೈನ್ನು ದಿಂಬು ಮಾಡಿಕೊಂಡು ತಲೆಯಿಟ್ಟು ಮಲಗಿದ್ದ ಲವ, “ಇದ್ದ ವಿಷಯ ಹೇಳ್ದೆ. ನನ್ನಜ್ಜನ ಗಂಟು ಕೊಡು ಹೇಳ್ಲಿಲ್ಲ.” ಎಂದ. ‘ನಾಳೆ ಸಮಾಜದ ಗಾವಡ ಬುದುವಂತ ಆಗುವ ಹುಡುಗನಿಗೆ ಪದ್ಧತಿಯ ಅಕಲು ಬೇಕು’ ಉಪಾಸೊನ ತುಟಿಯವರೆಗೆ ಬಂದ ಮಾತು ಒಡೆದು ಶಬ್ದವಾಗಲಿಲ್ಲ.

ಸಗಣಿ ಸಾರಿಸಿದ ಮಣ್ಣು ನೆಲದ ಮೇಲೆ ಜಾನಕೆ ಕುಡಿ ಬಾಳೆ ಎಲೆಗಳನ್ನು ಎದುರು ಬದರು ಇಟ್ಟಿದ್ದಳು. ಹುಲ್ಲಿನ ಚೌಕ ಚಾಪೆ ಹಾಕಿ ಇಬ್ಬರೂ ಕುಳಿತರು. ಲವ ಎಲೆ ಸುಟ್ಟು ಒಳಗೆ ಒಣಗಿದ ಬಿಸಿ ರೊಟ್ಟಿ ಎತ್ತಿ ಅಂಟಿಕೊಂಡಿದ್ದ ಚರಕಲು ಕರಿಯನ್ನು ಬಿಡಿಸಿ ಅಪ್ಪನ ಎಲೆಯ ಮೇಲಿಟ್ಟನು. ಉಪಾಸೊ ಮಡಕೆಯಲ್ಲಿ ಹಬೆಯಾಡುತ್ತಿದ್ದ ಗೆಣಸಿನ ಮೆಲಾರವನ್ನು ತೆಂಗಿನ ಚಿಪ್ಪಿನ ಸೌಟಿನಿಂದ ಎತ್ತಿ ಇಬ್ಬರ ಕುಡಿಕೆಗೆ ಸುರಿದನು. ಆರುತ್ತಿದ್ದ ದಡಸಿಗೆ ಮೇಲಿನ ಚಿಮಣಿ ಬುರುಡೆಯ ಬತ್ತಿಯ ವರ್ತಿಯನ್ನು ತುಸು ಜಗ್ಗಿ ದೀಪ ಪ್ರಕಾಶಮಾನವಾಗಿ ತಲೆ ಬಗ್ಗಿಸಿ ರೊಟ್ಟಿ ಮುರಿಯುವವರ ಮೊಖದ ಮೇಲೆ ಚೆಲ್ಲಿ ಅಲ್ಲಿ ನಿರಿಗೆಗಳು ಇಲ್ಲದಿರುವುದನ್ನು ನೋಡಿದ ಜಾನಕೆಯ ತುಟಿಯಲ್ಲಿ ಮಂದಹಾಸ ಬಿರಿಯಿತು.

“ಕೋಳಿಗೆ ಕಟ್ಟಿದ್ದ ಖಡ್ಗ ಬೇಕಿದ್ರೆ ಇಳಿಸಿ ಕೊಡ್ತೆ ಅಪ್ಪ” ನಡುವೆ ನೀರು ಕುಡಿದು ಲವ ಅಪ್ಪನತ್ತ ನೋಡಿದನು.

“ಅದೇನು ದೊಡ್ಡ ಕೆಲ್ಸಾ ಅಲ್ಲಾ. ನಾಡಿದ್ದು ಕುಶಾವಳಿಗೆ ನಿನ್ನ ಆಯಿ ಕೂಡೆ ನಡೆದು ಹೋಗೂದಕ್ಕೆ ಆಗ್ತದೊ ಕೇಳು. ಇಲ್ಲಾಂದ್ರೆ ಜೀಪು ಮಾಡೋದು”

ಇಬ್ಬರೂ ಅವಳತ್ತ ನೋಡಿದರು.

“………”

“ಅದೊಂದು ಕಾಲ ಇತ್ತು ಮೂವೊತ್ತು ಮೈಲು ನಡೆದು ಹೋದದ್ದು. ಈಗ ಎಲ್ರೂ ಜೀಪು, ಬೈಕು ಹತ್ತುವವರೇ”

“ಅದೆಂತ ಮಾಡ್ತಿಯೋ ನೋಡು ಅದು ನಿನಗೆ ಬಿಟ್ಟಿದ್ದು” ಉಪಾಸೊ ಕೈ ತೊಳೆಯಲು ಎದ್ದು ಹೋದ.

ಗಂಡನ ಮಾತಿನ ಸಮಾಧಾನ ಭಾವಕ್ಕೆ ಜಾನಕೆಗೆ ಉಂಡ ಕೂಳು ತಣ್ಣಗೆನಿಸಿತು.

* * *

 ಪ್ರತಿ ವರ್ಷ ಚೌತಿ ಮತ್ತು ದೀಪಾವಳಿಯ ಹಬ್ಬದ ದಿನ ಮನೆ ಮಂದಿ ಎಲ್ಲ ಸೇರಲು ಮಾಡಿದ ವಿಶಾಲ ಜಗಲಿ ಅದು. ದಪ್ಪ ಅಂಕಣ ಹೊತ್ತು ನಿಂತ ನಡುವಿನ ಎರಡು ಉರುಟಾದ ಕಂಬಗಳು. ತೊಲೆಯುದ್ದಕ್ಕೆ ಹೂ ಹಕ್ಕಿ ಆಕಾರದಲ್ಲಿ ಕತ್ತರಿಸಿ ಅಂಟಿಸಿದ ಬಣ್ಣದ ಕಾಗದದ ಪರಪರೆ. ಶಿಶುಗಳ ಬೆರಳಚ್ಚು ಗುರುತಿನ ಕೆಮ್ಮಣ್ಣಿನ ಗೋಡೆಗೆ ಶೇಡಿಯಿಂದ ಬರೆದ ರಂಗೋಲಿ ಚಿತ್ರ. ಕುಟುಂಬದ ಸದಸ್ಯರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಹತ್ತೆಂಟು ಸಂಸಾರಗಳ ಕೂಡು ವಾಸಕ್ಕೆ ಮನೆ ಸಣ್ಣದಾಯಿತು. ಮೂಲ ಮನೆಯ ಸುತ್ತ ಮುತ್ತ ಸಣ್ಣದಾದ ಉಪಮನೆಗಳನ್ನು ಕಟ್ಟಿಕೊಂಡು ಸಂಸಾರ ಮಾಡಿದರು. ಮೂಲ ಮನೆ ಬೃಹತ್ ಮರದ ಶಾಖೆಗಳಂತೆ ಉಪಮನೆಗಳಾಗಿ ಚಾಚಿಕೊಂಡು ಡೇರಿಯ ಮನೆತನವೇ ಒಂದು ಊರಿನಂತೆ ಕೇರಿಯಂತೆ ಹರಡಿ ಕೊಂಡಿತು. ಮೂಲ ಮನೆಯ ಕರುಳ ಸಂಬಂಧಕ್ಕೆ ತೊಂದರೆ ಆಗಲಿಲ್ಲ. ಆಡುತ್ತ ಮಕ್ಕಳು ಹಸಿದಾಗ ಸಿಕ್ಕಿದ ಯಾರ ಮನೆಯಲ್ಲಾದರೂ ಗಂಜಿ ಸುರಿದಾರು. ಬರುವ ನೆಂಟರಿಗೆ ಎಲ್ಲ ಮನೆಯ ಬಾಗಿಲುಗಳು ತೆರೆದಿರುತ್ತವೆ. ಮಧ್ಯಾಹ್ನ ಹೊತ್ತು ಮೀರಿ ಊಟಕ್ಕೆ ಬಂದ ಬೀಗರಿಗೆ ಯಾರದ್ದೇ ಮನೆಯ ಮಡಕೆಯ ತಳದಲ್ಲಿ ಅನ್ನ ಉಳಿದಿರಲಿ ಅದು ಒಂದು ಪಿಸು ದನಿಯ ಸನ್ನೆಯಲ್ಲೇ ಹಿತ್ತಲ ಬಾಗಿಲಿಂದ ರವಾನೆಯಾಗುತ್ತದೆ. ಉಪ ಮನೆಯಲ್ಲಿ ಉಂಡು ಹಿರಿಯರು ಮೂಲ ಮನೆಯ ಕತ್ತಲ ಕೋಣೆಗೆ ಮಧ್ಯಾಹ್ನ ತಲೆ ಚಾಚಲು ಹೋಗುವ ರೂಢಿಯಿದೆ. ಒಬ್ಬರ ಮನೆಯ ಸಂಚಿಯಲ್ಲಿ ಕೈಯಾಡಿಸಿ ತಯ್ಯಾರಾದ ಕವಳ ಇನ್ನೊಬ್ಬರ ಮನೆಯ ಕಟ್ಟೆಯ ಮೇಲೆ ಕೂತಲ್ಲೆ ನುಗ್ಗಾಗುತ್ತದೆ. ಕೊನೆ ಮನೆಯಲ್ಲಿ ಕಟ್ಟಿದ ಬೀಡಿ ಮೊದಲ ಮನೆಯ ಒಲೆಯ ಕೆಂಡ ಮುಟ್ಟಿಸಿಕೊಂಡು ಹೊಗೆ ಉಗುಳಬಹುದು. ಮೂಲ ಮನೆಯ ಪಣತದಲ್ಲಿರಿಸಿದ ಅಕ್ಕಿ ಎಲ್ಲರ ಮನೆಯ ಒಲೆಯ ಮೇಲಿನ ಮಡಕೆಯಲ್ಲಿ ಅನ್ನವಾಗುತ್ತದೆ. ಎಲ್ಲರ ಬಚ್ಚಲಲ್ಲಿ ಗುತ್ತುವ ಅಬ್ಬಿಯ ನೀರು ಒಂದೇ. ಹೀಗೆ ನಿತ್ಯವನ್ನು ಸಂಯುಕ್ತ ಮನಸಿಂದ ಹಂಚಿಕೊಂಡವರು.

ಅಡಕೆ ಬೆಳೆದ, ಗುಮಟೆ ನುಡಿಸಲು ತಪ್ಪಿಸಿಕೊಂಡ ಸುಳಾವಳಿಯ ಪಂಡುವನ್ನು ತನ್ನ ಗಂಡ ಪಂಚಾಯತಿ ಕಟ್ಟೆಗೆ ವಿಚಾರಣೆಗೆ ಕರೆಯುವ ಮಾತು ಜಾನಕೆಯ ತಲೆಯೊಳಗೆ ಜೀರುಂಡೆಯಂತೆ ಚೀರುತ್ತಲೇ ಇತ್ತು. ಇದು ಅಪ್ಪ-ಮಗನ ನಡುವೆ ಅಗಲವಾಗುತ್ತ ದಾಟಲಾಗದ ಅರಲು ಹೊಂಡವಾಗಿ ನಿಂತಂತೆ ಅವಳಿಗೆ ಆತಂಕವಾಗಿತ್ತು. ಕುಶಾವಳಿಯ ನ್ಯಾಯ ಪಂಚಾಯತಿಯ ಚೌಕ ಪೀಠಕ್ಕೆ ಪಂಡುವನ್ನು ಕರೆದರೆ, ಅದೇ ನಿಯಮಾನುಸಾರ ತನ್ನ ತವರು ಪಿಸೊಸೆಯ ತಮ್ಮ ಶಡ್ಡುವಿನ ಪ್ರಕರಣಕ್ಕೆ ವಿನಾಯತಿ ನೀಡುವಂತಿಲ್ಲ. ಶಡ್ಡು ಮತ್ತು ಅವನು ಪ್ರೀತಿಸುತ್ತಿದ್ದ ಸಿವತೆಯ ಕುಲದೈವ ಒಂದೇ. ಒಂದೇ ಕುಲದೇವತೆಯನ್ನು ಆರಾಧಿಸುವ ಪರಿವಾರದವರ ನಡುವೆ ಕುಣಬಿ ಕುಲಾಚಾರದಂತೆ ವೈವಾಹಿಕ ಸಂಬಂಧ ನಿಷಿದ್ಧ. ಕಟ್ಟುಪಾಡು ಮೀರಿ ಮದುವೆಯಾದರೆ ದಂಪತಿಯನ್ನಷ್ಟಲ್ಲದೆ ಊರಿಗೇ ಬಹಿಷ್ಕಾರ ಹಾಕುತ್ತಾರೆ. ಮಿರಾಸಿ, ವೇಳಿಪ ಮತ್ತೂ ಇನ್ನಿತರ ಸಮಾಜದ ಮುಖಂಡರ ಮಧ್ಯೆ ಗಾವಡನಾದ ಗಂಡ ತನ್ನ ಹೆಂಡತಿಯ ತವರೆಂಬ ಕಾರಣಕ್ಕಾಗಿ ನ್ಯಾಯ ರಿಯಾಯತಿ ನೀಡುವುದನ್ನು ಕನಸಿನಲ್ಲೂ ನಿರೀಕ್ಷಿಸುವಂತಿಲ್ಲ. ಅತ್ತ ಶಡ್ಡುವಿನ ಪ್ರೇಮ ಭಂಗಪಡಿಸಲು ಮುಂದಾಗಲಾರದೆ ಇತ್ತ ಗಂಡ ಊರಿಗೆ ಬಹಿಷ್ಕಾರ ಹಾಕುವುದನ್ನು ನೋಡಲಾರದ ಸಂಕಟದಲ್ಲಿ ಜಾನಕೆ ನರಳುತ್ತಿದ್ದಳು. ಅವಳ ಸನಿಹ ನಿದ್ದೆ ಸುಳಿಯದು. ಹೊರಳಾಡಿ ಮಗ್ಗಲು ಬದಲಿಸಿದಳು. ನಿಟ್ಟುಸಿರುಬಿಟ್ಟಳು. ಶ್ವಾಸ ಎದೆಯೊಳಗೆ ಸಿಕ್ಕಿದಂತಾಗಿ ಎದ್ದು ಕೂತಳು. ಹೊಸ್ತಿಲ ಪಕ್ಕ ಉರಿಯುತ್ತಿದ್ದ ನಂದಾದೀಪದ ಮಂದ ಬೆಳಕಿನಲ್ಲಿ ಚಾಪೆಯ ಮೇಲೆ ಅಂಗಾತ ಮಲಗಿದ್ದ ಉಪಾಸೊ ಅಂಕಣ ದಿಟ್ಟಿಸುತ್ತಿದ್ದ. ಹಗಲಲ್ಲಿ ಹಗುರಾಗಿ ಕಾಣುತ್ತಿದ್ದ ಹಗರಣಗಳು ರಾತ್ರಿ ಕತ್ತಲಲ್ಲಿ ಕಾಮದಂತೆ ತೀವ್ರವಾಗಿ ಕಾಡುತ್ತಿದ್ದವು. ನಿದ್ದೆಯಿಲ್ಲದ ನಿಶ್ಯಬ್ದ ಏಕಾಂತದಲ್ಲಿ ನೆನಪುಗಳು ಕಿಕ್ಕಿರಿಯುತ್ತಿದ್ದವು. ಮಗನ ವೇಷ ಧರಿಸಿದ ಬದಲಾದ ಹೊಸ ಕಾಲವನ್ನು ಎದುರಿಸುವುದು ಹೇಗೆಂದು ಯೋಚನೆಯಾಗುತ್ತದೆ.

ಕುಶಾವಳಿ ಪೂರ್ವಜರು ಬದುಕಿದ್ದ ಊರು. ಪಾಳು ಅವಶೇಷವಾಗಿರುವ ಊರ ಒಡಲಲ್ಲಿ ಕಾಳಿನದಿಯ ಜನ್ಮಸ್ಥಳವಿದೆ. ವಾಸವಾಗಿದ್ದ ಜನ ಮಳೆ ಇಲ್ಲದೆ ಗುಳೆ ಎದ್ದು ಹೋದ ಘಟನೆ ವಂಶಾವಳಿಯ ಕಥೆಯಾಗಿ ತಲೆಮಾರುಗಳ ಗುಂಟ ಹರಿಯುತ್ತಲೇ ಇದೆ. ಜನ ತೊರೆದ ಜಾಗದಲ್ಲಿ ಮರಗಳು ಕಾಡು ಕಟ್ಟಿವೆ. ಕಾಲಾಂತರದಿಂದ ಕುಲದೇವತೆ ಜಲ್ಮಿ ಗಡಿಗಾವಲು ಗಣ ಪರಿವಾರದ ಜತೆಯಲ್ಲಿ ಆ ಜಮೀನಿನಲ್ಲಿ ವಾಸವಾಗಿದೆ. ನೆನಪಿನಾಚೆಯ ಕಾಲದಿಂದ ಊರು ಬಿಟ್ಟು ವಲಸೆ ಹೋಗಿ ಸುತ್ತ ಮುತ್ತಲಿನ ಕೊಪ್ಪದ ಮಕ್ಕಿಗದ್ದೆಯಲ್ಲಿ ವಾಸವಾಗಿದ್ದ ಕುಲದವರು ಪ್ರತಿ ವರ್ಷ ಸಂಸಾರ ಸಹಿತ ಜಲ್ಮಿ ಭೂಮಿಗೆ ಮರಳಿ ಬಂದು ಒಂದೆರಡು ರಾತ್ರಿ ಉಳಿದು ಪೂಜೆ, ಬಲಿ, ಬೇಟೆ, ಊಟ ಮುಗಿಸಿ ವಾಪಸ್ಸಾಗುವುದು ಬಿಡಲಾಗದ ವ್ರತ. ಆದರೆ ಹೊಸ ಹುಡುಗರು ಪಾಳು ಬಿದ್ದ ಕಾಡೂರಿಗೆ ಮಕ್ಕಳು, ಮುದುಕರು ಮತ್ತು ಹೆಂಗಸರನ್ನು ಕಟ್ಟಿಕೊಂಡು ಕಷ್ಟಪಟ್ಟು ಯಾತ್ರೆ ಹೋಗುವುದರ ಬದಲು ಗ್ರಾಮ ದೇವತೆ ಚಾಪಲಾ ದೇವಿಯನ್ನು ಡೇರಿಯಾ ಊರಿಗೆ ಕರೆಯಿಸಿಕೊಳ್ಳಲು ಹಟ ಹಿಡಿದಿದ್ದಾರೆ. ಯುವಕರ ಒಕ್ಕೊರಲಿನ ದನಿಯಾಗಿ ಲವ, “ಅದು ಹುಲಿ ಸಂರಕ್ಷಿತ ಅರಣ್ಯ. ಇಂದಲ್ಲ ನಾಳೆಯಾದರೂ ಸರಕಾರ ವೈಲ್ಡ್ ಲೈಫ್ ಕಾಯ್ದೆ ಪ್ರಕಾರ ನಮಗೆ ಅಲ್ಲಿಗೆ ಹೋಗೋದಕ್ಕೆ ಬಿಡೋದಿಲ್ಲ” ಎಂದು ವಾದಿಸಿದ್ದು ಉಪಾಸೊಗೆ ದೊಡ್ಡ ಸವಾಲಾಗಿ ಕಂಡಿತ್ತು. ತನ್ನ ಜೀವವಿರುವವರೆಗೆ ಈ ವ್ರತವನ್ನು ನಿಲ್ಲಿಸಲು ಬಿಡಲಾರೆ. ಜನರೂ ಒಪ್ಪಲಾರರು ಎಂದುಕೊಳ್ಳುತ್ತ ತನ್ನ ನೋಟದಲ್ಲಿ ಸಂಕಲ್ಪವನ್ನು ದಿಟಗೊಳಿಸುತ್ತಿದ್ದಾಗ ಜಾನಕೆ ನೀರು ಕುಡಿದು ಬಂದು ಗಂಡನ ಸನಿಹ ಗೋಡೆಗೆ ಒರಗಿದಳು.

ಜಾನಕೆ ತಳಿಯ ಸರಳಿಂದ ದೃಷ್ಟಿ ಹರಿಸಿದಳು. ಹೊರಗೆ ರಾತ್ರಿ ಆಳವಾಗುತ್ತ ಬೆಳದಿಂಗಳು ಗಾಢವಾಗಿತ್ತು. ಚಂದ್ರ ಸ್ಫುಟವಾಗಿ ಹೊಳೆಯುತ್ತಿದ್ದ. ಗದ್ದೆಯ ಪೊದೆಯಲ್ಲಿ ಹುಂಡುಕೊರೆ ಹಕ್ಕಿಗಳು ಕಿರುಚುತ್ತಿದ್ದವು. ಹಾಳಿ ಕಂಟದ ಮುಳ್ಳು ಹುಲ್ಲನ್ನು ಸುಡಲು ಹಾಕಿದ್ದ ಬೆಂಕಿ ಒಣ ಕುಂಟೆಗೆ ತಗಲಿಕೊಂಡು ಹೊಗೆ ಸುರುಳಿ ಸುತ್ತಿ ಕೊನೆ ಉಸಿರಿನಂತೆ ನಿತ್ರಾಣ ಹಾರುತ್ತಿತ್ತು. ಬಚ್ಚಲಲ್ಲಿ ಗುತ್ತುತ್ತಿದ್ದ ಅಬ್ಬಿ ನೀರಿನ ಸಪ್ಪಳ ನಿಶ್ಯಬ್ದದಲ್ಲಿ ಜೋರು ಕೇಳಿಸುತ್ತಿತ್ತು. ಅಟ್ಟದಲ್ಲಿ ಗೊರಕೆ ಸದ್ದು. ಮನೆಯ ಕತ್ತಲಲ್ಲಿ ಕದ್ದು ಕುಳಿತ ನಿದ್ದೆ ಅವಳ ಬಳಿ ಸುಳಿಯದು. ಗದ್ದೆಯ ಆಚೆ ಗೇರು ಮರದ ಮರೆಯಲ್ಲಿ ಶಾಲೆಯ ಹಂಚು ಕಂಡಿತು. ಶಾಲೆಯ ಗೋಡೆಯ ಅಂಚಿನ ದಾರಿಯಲ್ಲಿ ನೆರಳೊಂದು ನಡೆದು ಬರುತ್ತಿರು ವಂತೆ ಭಾಸವಾಯಿತು. ಹತ್ತು ಹೆಜ್ಜೆ ಮುಂದಿಡುತ್ತಿದ್ದಂತೆ ಆ ನೆರಳ ಮನುಷ್ಯ ಆಕಾರಕ್ಕೆ ಕೈ ಕಾಲುಗಳು ಮೂಡಿದವು. ತಲೆಯೂ ಗೋಚರಿಸಿತು. ಹಣೆಗೆ ರಬ್ಬರಿಂದ ಕಟ್ಟಿದ ಹೆಡ್ ಲೈಟ್‌ನಿಂದ ಚಿಮ್ಮಿದ ಹಾಲು ಹಾದಿ ಒಮ್ಮೊಮ್ಮೆ ಕಾಡಿನತ್ತ ಮತ್ತೊಮ್ಮೆ ಗದ್ದೆಯತ್ತ ತೆಳು ಮಂಜನ್ನು ಸೀಳಿಕೊಂಡು ನಿಶಾನೆ ತೋರಿಸುತ್ತಿತ್ತು. ಮೊಳುದ್ದ ಸೂಡಿಯನ್ನು ಬಲಗೈ ಬೀಸುತ್ತಿತ್ತು. ಕಿಡಿ ಸಿಡಿಯುತ್ತಿತ್ತು. ಸೂಡಿಗೆ ಮೊಳಕ್ಕೊಂದರಂತೆ ನಾಲ್ಕು ಕಟ್ಟು ಹಾಕುವುದು ರೂಢಿ. ಉರಿದು ಒಂದು ಮೊಳ ಉಳಿದಿದೆ ಎಂದರೆ ದೂರದಿಂದ ಬಂದವನೇ. ಹೆಡ್‌ಲೈಟ್ ಮತ್ತು ಸೂಡಿ ಎರಡೂ ಆಸಾಮಿ ಹಿಡಿದಿದ್ದಾನೆಂದರೆ ಕಾಡು ಹಾದು ಬಂದವನೇ. ಧೈರ್ಯಕ್ಕೆಂದು ಜೀವ ರಕ್ಷಣೆಗೆಂದು ಎರಡೆರೆಡು ಬೆಳಕಿನ ಅಸ್ತ್ರ ಹಿಡಿದಿದ್ದಾನೆ. ಸುಗ್ಗಿ ಮೇಳದವರು ಯಾರೊ ಮನೆಗೆ ಮರಳುತ್ತಿದ್ದಿರಬೇಕು ಎಂದು ಉದಾಸೀನ ಮಾಡಿ ಅವಳು ಬೆನ್ನು ಹಾಕಿ ಮಲಗಿದ ಉಪಾಸೋ ಪಕ್ಕ ಕುಳಿತಳು. ಗಂಡ ಸಮಾಜದ ಮುಖಂಡತ್ವವನ್ನು ಬಿಟ್ಟು ಕೊಡುವುದೇ ತಲೆಗೆ ಸುತ್ತಿಕೊಂಡ ಎಲ್ಲ ಜಂಜಾಟದಿಂದ ಪಾರಾಗಲಿಕ್ಕಿರುವ ಏಕೈಕ ದಾರಿ ಎಂದು ಅವಳ ಅಂತರಂಗ ನುಡಿಯುತ್ತದೆ. ಆದರೆ ಜವಾಬ್ದಾರಿಯಿಂದ ನುಸುಳಿಕೊಳ್ಳುವುದು ಡೇರಿಯಾ ವಂಶದ ಗೌರವಕ್ಕೆ ಕಳಂಕ ಉಂಟು ಮಾಡಿದಂತೆಯೇ. ಎಲ್ಲರಿಗೂ ದೊರೆಯುವ ಮಾನ-ಮರ್ಯಾದೆ ಅಲ್ಲ ಅದು. ಬಯಸಿದರೂ ಸಿಗುವಂತದ್ದಲ್ಲ. ಒತ್ತಡವನ್ನು ಸಹಿಸಿಕೊಳ್ಳುವ ವಯಸ್ಸೂ ಅಲ್ಲ. ಚಿಂತೆ ತೀವ್ರವಾಗಿ ದೀರ್ಘ ಉಸಿರಾಟಕ್ಕಾಗಿ ಕೊಸರಾಡಿದಳು. ಎದೆಯೊಳಗೆ ಏನೊ ಹಿಂಡಿದಂತೆ ಭಾರ. ಅಂಗಳದಲ್ಲಿ ಮೆಟ್ಟಿನ ಸದ್ದಾಯಿತು. ಸೂಡಿಯ ಕುಡಿಯನ್ನು ನೆಲಕ್ಕೆ ತಿಕ್ಕಿ ನುರಿದದ್ದು ಕೇಳಿತು. ಬೀಡಿ ಹೊಗೆಯ ವಾಸನೆ. ಕದದೆದುರು ನಿಂತು ಹೋಯ್ ಎಂದ. ಉಪಾಸೊ ಸರ‍್ರನೆ ಎದ್ದು ಕುಳಿತ. ಜಾನಕೆ ಚಿಮಣಿ ಹೊತ್ತಿಸಿದಳು. ಅಪರಾತ್ರಿಯ ಕರೆ ಯಾರದ್ದೆಂದು ಇಬ್ಬರಿಗೂ ಗಾಬರಿ. ಉಪಾಸೊ ಕದ ತೆಗೆದ. ಪಿಸೊಸೆಯ ಬುದವಂತ ಮಾಬ್ಲು! ಆರೇಳು ಮನೆಗಳ ಪುಟ್ಟ ಕೊಪ್ಪದ ಬುದವಂತ. “ಆರಾಮ್” “ಆರಾಮ್” ಇಬ್ಬರೂ ಉಭಯ ಕುಶಲ ಪಡೆದು ನಿರಾಳರಾದರು. ರಾತ್ರಿ ತರುತ್ತಿದ್ದವರ ಸಮಾಚಾರಕ್ಕೆ ಹೆದರುತ್ತಿದ್ದರು. ಶಿಶು ಗರ್ಭದೊಳಗೆ ಅಡ್ಡ ಸಿಕ್ಕಿ ಹಡೆಯಲಾರದೆ ಬಸುರಿ ನರಳುತ್ತಿದ್ದಾಗಲೊ ಸಾವಿನ ಸೂತಕ ಹಿಡಿದೊ ತಾಪಡತೊಪ್ ಬರುತ್ತಿದ್ದದೇ ಹೆಚ್ಚು. “ಬಾಳ ರಾತ್ರಿ ಮಾಡ್ಕಂಡೆ” ಉಪಾಸೊ ಅರ್ಜಂಟ್ ಇಲ್ಲದಿದ್ದರೆ ಬರುವ ಮನುಷ್ಯನಲ್ಲ ನೀನು ಎಂಬ ಧಾಟಿಯಲ್ಲಿ ನುಡಿದನು. ಸ್ವಲ್ಪ ಗಂಭೀರವೇ ಎನ್ನುವಂತೆ ತಲೆ ಹಾಕಿದ. ಮಾಬ್ಲು ಚಿಟ್ಟೆಯ ಕೆಳಗಿಳಿದು ಕಾಲಿಗೆ ನೀರು ಹಾಕಿಕೊಂಡು ಬರುತ್ತ, “ಕುನ್ನಿ ಎಲ್ಲಿ?” ಎಂದ. “ಕಿರಬನ ಕಾಟದಲ್ಲಿ ಬಚಾವು ಮಾಡೋದೇ ಒಜ್ಜೆ”. ತವರಿಂದ ಬಂದ ಮಾಬ್ಲು ಕಂಡು ಅಕ್ಕರೆ ಉಕ್ಕಿ ಜಾನಕೆ ಬಾಳೆಕೀಳೆ ಹಾಕಿ ರೊಟ್ಟಿ ಇಟ್ಟಳು. ನೀರು ತುಂಬಿದ ತಂಬಿಗೆ ಪಕ್ಕಕ್ಕಿಟ್ಟಳು. ಅದಾಗಲೇ ಒಣಗಿ ಗಟ್ಟಿಯಾದ ಮುರಿದ ರೊಟ್ಟಿ ಚೂರನ್ನು ಮೆಲಾರದಲ್ಲಿ ಅದ್ದಿಅದ್ದಿ ಮೆದು ಮಾಡಿ ನಾಲ್ಕೈದು ಹಲ್ಲಿರುವ ಬಾಯಲ್ಲಿಟ್ಟು ಜಗಿಯಲು ಚಡಪಡಿಸಿದ. “ನಮ್ಮ ಕೊಪ್ಪದಲ್ಲಿ ನಾಳೆ ಕಂಬಳ” ಎಂದ ತುತ್ತು ನುರಿಯುತ್ತ. ಗಟಗಟ ನೀರು ಕುಡಿದನು. ಮೆಲಾರದ ಕುಡಿಕೆಯೊಳಗೆ ಬೆರಳು ತೊಳೆದನು. ಜಾನಕೆ ಕೀಳೆ ಎತ್ತಿದಳು. ಉಪಾಸೊ ಕದದ ಬೋದಿಗೆಯ ಕೊಟ್ಟಿನಲ್ಲಿಟ್ಟ ಬೀಡಿ ಎಸೆದನು. ಚಿಮಣಿಯ ನಾಲಗೆಗೆ ಬೀಡಿ ತುದಿ ತಾಗಿಸಿ ಧಮ್ಮು ಹೀರಿ ಜ್ವಲಿಸಿದರು. ಬೆರಳ ನಡುವಿಟ್ಟು ಬಾಂಕಿನ ಮೇಲೆ ಕೂತು ಧಮ್ಮು ಎಳೆಯ ತೊಡಗಿದರು. ಮಾತು ಮಧ್ಯ ರಾತ್ರಿಯವರೆಗೂ ಬೆಳೆಯುವುದು ಅವಳಿಗೆ ಖಾತ್ರಿ. ಮುಖ್ಯ ವಿಷಯಕ್ಕೆ ಬರುವುದಕ್ಕಿಂತ ಮುಂಚೆ ಆಚೀಚೆ ದೇಶಾವರಿ ಸುತ್ತಾಡಿ ಕಾಲ ಹರಣ ಮಾಡುವುದು ಕೊಪ್ಪದ ಹಳಬರ ಚಾಳಿ. ಮಾತಿನ ಮಧ್ಯೆ ಸಣ್ಣ ನಿದ್ದೆ ಮಾಡಿ ಏಳುವಷ್ಟು ಹೊತ್ತು ಮೌನ. ಕುರುಡಾಗುತ್ತ ಆರಲು ಹೊರಟ ಚಿಮಣಿ ದೀಪಕ್ಕೆ ಜಾನಕೆ ಬಿಸಿ ಮುಚ್ಚಳ ತಿರುಗಿಸಿ ಚಿಮಣಿ ಎಣ್ಣೆ ಎರೆಸಿದಳು. ಎಣ್ಣೆಯ ವಾಸನೆ ಹಬ್ಬಿತು. ಒದ್ದೆ ಬಟ್ಟನ್ನು ಕೊಬ್ಬರಿ ಎಣ್ಣೆ ಹಾಕಿ ಬಾಚಿದ ತಲೆಗೆ ಒರೆಸಿದಳು. ಮೋಟು ಬೀಡಿ ಸುಡುತ್ತ ಹೊಗೆ ನಂದುವವರೆಗೆ ಹದೆ ಏರುವ ಸಲ್ಲಾಪದಂತೆ ಚದುರುವ ಸುದ್ದಿ. ಮಾತಿಗೆ ಬರಬೇಕಿದ್ದ ಮುಖ್ಯ ವಿಷಯ ಯಾವುದೆಂದು ಇಬ್ಬರಿಗೂ ಗೊತ್ತು. ಕಂಬಕ್ಕೆ ಚಾಚಿದ ಜಾನಕೆಯ ರೆಪ್ಪೆ ಮುಚ್ಚಿ ಮುಖ ಮುಗ್ಗರಿಸಿ ಮಂಪರಿನ ನಡುವೆ ಅವರ ಮಾತಿನ ತುಣುಕು ಕನಸಿನಲ್ಲೆಂಬಂತೆ ಕೇಳುತ್ತಿತ್ತು. ಒಮ್ಮೆ ಜೋರಾಗಿ ತೂಕಡಿಸಿ ಬಲ ಬುಜ ಕುಸಿದು ಹೋಯಿತು. ನಾಚುತ್ತ ಸೆರಗನ್ನು ಹೊದೆಯುತ್ತಿದ್ದಂತೆಯೇ ನಿದ್ದೆ ಓಡಿ ಹೋಯಿತು. ಈಗವಳಿಗೆ ಪೂರ್ತಿ ಎಚ್ಚರ. ಕತ್ತಲ ಉದಕವನ್ನು ಕಲಕುವಂತೆ ಪಚ ಪಚಗುಡುವ ಒಣ ತುಟಿಗಳು. ಶಡ್ಡು ಮತ್ತು ಸಿವತೆಯ ಪ್ರೇಮ ಪ್ರಸಂಗ ಎಲ್ಲಿಗೆ ಬಂದು ನಿಂತಿದೆ ಎಂದು ತಿಳಿಯುವ ಕುತೂಹಲ ಅವಳಿಗೆ. ಊರು ಬಿಟ್ಟು ಓಡಿ ಹೋಗಿದ್ದರೆ ಮಾಬ್ಲು ತಡ ಮಾಡದೆ ಹೇಳಿ ಬಿಡುತ್ತಿದ್ದ ಎಂದು ಸಮಾಧಾನ. ಪರಸ್ಪರ ಪ್ರೇಮಿಸಿದ ಜೋಡಿ ಮದುವೆಯಾದರೆ ಸೊಗಸಾಗಿತ್ತು ಎಂದು ಗುಟ್ಟಾಗಿ ರಮ್ಯ ಹಾರೈಕೆ ಅವಳೊಳಗೆ ಸುಳಿದು ಹೋಗುವುದು.

ಶಡ್ಡು ಪಾಪದ ಪೋರ ಎಂದು ವಾತ್ಸಲ್ಯ ಎದೆ ತುಂಬುತ್ತದೆ. ಬರುವ ಮಳೆಗಾಲಕ್ಕೆ ಮೂವೊತ್ತು ದಾಟುತ್ತದೆ ಅವನಿಗೆ. ಅವನ ವಾರಿಗೆಯವರಿಗೆ ಎರಡು ಮಕ್ಕಳು. ವಯಸ್ಸು ಹೆಚ್ಚಾದರೆ ದೋಷ ಕಂಡೇ ಹೆಣ್ಣು ಕೊಡಲು ಹೆತ್ತವರು ಯಾರೂ ಮುಂದೆ ಬರುತ್ತಿಲ್ಲ ಎಂಬ ವದಂತಿ ಹರಡುತ್ತದೆ. ಒಮ್ಮೆ ಅಡ್ಡ ಸುದ್ದಿ ಬಿದ್ದರೆ ಮದುವೆ ಇಲ್ಲದೆ ಮುದುಕಾಗಬೇಕು. ರೂಪ ಮತ್ತು ಗುಣದಲ್ಲಿ ಯಾವ ಹುಡುಗಿಯೂ ತೆಗೆದು ಹಾಕುವಂತಿಲ್ಲ ಅವನನ್ನು. ಒಂದೇ ಕುಲ ಗೋತ್ರದ ಹುಡುಗನನ್ನು ಸಿವತೆ ಮೆಚ್ಚಬೇಕಾದರೆ ಅವನು ಚೆಂದಕ್ಕಿದ್ದಾನಂತಲ್ಲವೆ. ಕರಡಿಯ ಭಯ ದಾಟಿ ಶಡ್ಡು ಜತೆಗೆ ಸಂಸಾರ ಹೂಡಲು ಅವಳು ಸಿದ್ಧಳಾದಳು. ಊರು ತೊರೆದು ಓಡಿ ಹೋಗಲು ಅವರು ಗುಟ್ಟಾಗಿ ಉಪಾಯ ಮಾಡಿರಬಹುದು. ತಮ್ಮಿಂದ ಊರೇ ಬಹಿಷ್ಕಾರಕ್ಕೆ ತುತ್ತಾಗುವುದು ಅವರನ್ನು ಬಾಧಿಸಲಿಲ್ಲವೆ ಎಂದು ಅಚ್ಚರಿಯಾಯಿತು. ಪಿಸೊಸೆಗೆ ಹೆತ್ತವರು ಹೆಣ್ಣು ಧಾರೆ ಎರೆದು ಕೊಡಲು ಮನಸು ಮಾಡುವುದಿಲ್ಲ. ಊರಿಗೆ ಪಿಸೂಸೆ ಗಾಂವ್ ಎಂದು ಅಡ್ಡ ಹೆಸರು. ಹುಚ್ಚರ ಊರು ಎಂದರ್ಥ. ನಿಜದಾರ್ಥದಲ್ಲಿ ಅವರೇನೂ ಹುಚ್ಚರಲ್ಲ. ಊರಿನ ನಾಲ್ಕೂ ಕಡೆಯಲ್ಲಿ ಕಗ್ಗಲಿನ ಬೆಟ್ಟ. ಬೆಟ್ಟದ ದವಡೆಯಲ್ಲಿ ಸಿಕ್ಕಿಹಾಕಿಕೊಂಡ ಮರಗಳು. ನಡುವೆ ಅಂಕುಡೊಂಕು ದಾರಿ ಇಳಿದಿಳಿದು ತಲಪುವ ಪಾತಾಳ. ಬೆಟ್ಟದುದ್ದಕ್ಕೆ ಅಲ್ಲಲ್ಲಿ ಗುಹೆಗಳು. ಹೊರ ಚಾಚು ಕಲ್ಲಿನ ಹಲಗೆಯ ಕೆಳಗೆ ಜೋಲುವ ಜೇನು ತೊಟ್ಟಿಲು. ಗುಹೆಯೊಳಗೆ ಸಂಸಾರಸ್ಥರಾದ ಕರಡಿಗಳು. ಅವು ಜೇನಿಗಾಗಿ ವಾಸವಾಗಿವೆ. ಬೆಟ್ಟದ ಬುಡದಲ್ಲಿ ಮೆಟ್ಟಿಲಿನಂತ ಮಕ್ಕಿ ಗದ್ದೆ ಬಯಲು. ಮಳೆಗಾಲದ ಒಂದು ಹಂಗಾಮು ಭತ್ತದ ಬೆಳೆಗೆ ಮೋಸವಿಲ್ಲ. ಜೇನಿಗಾಗಿ ಬೀಡುಬಿಟ್ಟ ಕರಡಿಗಳ ಹಾವಳಿಯಿಂದ ಜೀವ ಹೋದರೂ ಪಿಸೊಸೆಯ ಜನ ಹುಟ್ಟಿದ ಜಾಗ ಬಿಡಲು ತಯ್ಯಾರಿಲ್ಲ. ವರ್ಷಕ್ಕೆ ಒಂದೆರೆಡು ಸಲವಾದರೂ ಕರಡಿ ಧಾಳಿಗೆ ತುತ್ತಾದವರಿದ್ದಾರೆ. ಹೇಗೋ ಬಚಾವಾದವರೂ ಇದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ ನಾಲ್ವರು ಕರಡಿಗೆ ಬಲಿಯಾಗಿದ್ದಾರೆ. ಅವರಲ್ಲಿ ಮಾಬ್ಲು ಅಪ್ಪನೂ ಒಬ್ಬ. ಜಾನಕೆ ತವರಿಗೆ ಹೋದ ಮಾರನೆ ದಿನ ಮುಸ್ಸಂಜೆ ನಡೆದ ಭೀಕರ ಘಟನೆ ಅದು. ಅವಳಿಗಿನ್ನೂ ಎಲ್ಲ ಕಣ್ಣಿಗೆ ಕಟ್ಟಿದಂತಿದೆ.

(ಕೃತಿ: ಬಲಿಪಾದ (ಕಾದಂಬರಿ), ಲೇಖಕರು: ಶ್ರೀಧರ ಬಳಗಾರ, ಪ್ರಕಾಶಕರು: ಅಂಕಿತ ಪುಸ್ತಕ, ಬೆಲೆ: 295/-)

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ