Advertisement
ರಕುತದಿ ಬರೆದೆನು ಇದ ನಾನು…: ವಿನಾಯಕ ಅರಳಸುರಳಿ ಅಂಕಣ

ರಕುತದಿ ಬರೆದೆನು ಇದ ನಾನು…: ವಿನಾಯಕ ಅರಳಸುರಳಿ ಅಂಕಣ

ಪತ್ರ ಕೇವಲ ಸಾಮಾನ್ಯ ಜನರ ಅಂತರಾಳವನ್ನು ಹಾಗೂ ಕಷ್ಟ-ಕಾರ್ಪಣ್ಯಗಳಷ್ಟನ್ನೇ ಹಂಚಿಕೊಳ್ಳುವ ಮಾಧ್ಯಮವಷ್ಟೇ ಆಗಿರಲಿಲ್ಲ. ಸ್ವಾತಂತ್ರ್ಯ ಹೋರಾಟಗಾರರಿಂದ ಹಿಡಿದು ಚಿಂತಕರ ತನಕ ಎಷ್ಟೋ ಪ್ರಖರ ವ್ಯಕ್ತಿಗಳು ತಮ್ಮ ಹೋರಾಟಗಳನ್ನೂ, ಚಿಂತನೆಗಳನ್ನೂ ಬೇರೆಯವರಿಗೆ ದಾಟಿಸಲು ಆಯ್ದುಕೊಂಡ ಮಾರ್ಗಗಳ ಪೈಕಿ ಪತ್ರವೂ ಒಂದು. ಸೆರೆಯಲ್ಲಿದ್ದಾಗ, ಭೇಟಿ ಸಾಧ್ಯವಿಲ್ಲದಾಗ ತಮ್ಮ ಸಹಚರರಿಗೆ, ಅನುಯಾಯಿಗಳಿಗೆ ಸೂಚನೆಗಳನ್ನು ನೀಡಲೆಂದು ಕಳುಹಿಸಿದ ರಹಸ್ಯ ಓಲೆಯ ನಡುವೆ ಬರೆದ “ಸ್ವಾತಂತ್ರ್ಯ ಸುಮ್ಮನೆ ಬರುವುದಿಲ್ಲ ಗೆಳೆಯಾ. ಅದು ಹೋರಾಟವನ್ನು ಕೇಳುತ್ತದೆ!” ಎಂಬ ಮಾತು ಭೂಮಿಯ ಮೇಲೆ ಮನುಷ್ಯನಿರುವ ತನಕವೂ ನಮ್ಮೆಲ್ಲರ ಬದುಕುಗಳಿಗೆ ಅನ್ವಯವಾಗುವ ಸಾಲು. ಹೀಗೆ ಜೀವನದ ಪರಮ ಸತ್ಯಗಳನ್ನು ರಹಸ್ಯವಾಗಿ ತಮ್ಮೊಳಗಿಟ್ಟುಕೊಂಡು ರವಾನೆಯಾದ ಪತ್ರಗಳೆಷ್ಟೋ? ಅವು ಬೆಳಗಿದ ಹಣತೆಗಳೆಷ್ಟೋ?
ವಿನಾಯಕ ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ”ಯ  ಮತ್ತೊಂದು ಬರಹ ನಿಮ್ಮ ಓದಿಗೆ

ಅದೊಂದು ಊರು. ಇಂಥದೇ ಊರಾಗಬೇಕೆಂದೇನೂ ಇಲ್ಲ. ಬಯಲು ಸೀಮೆಯೋ, ಮಲೆನಾಡೋ, ಕರಾವಳಿಯೋ ಯಾವುದೂ ಆಗಿರಬಹುದು. ಸಮಯ ಸಂಜೆ ನಾಲ್ಕಾಗುತ್ತಿದೆ. ನಡು ನೆತ್ತಿಯಲ್ಲಿದ್ದ ಸೂರ್ಯ ಬೆಟ್ಟಗಳ ನಡುವಿನ ತ್ರಿಕೋನದತ್ತ ಬಾಗಿದ್ದೇ ಬೆಳಕು ಅಚಾನಕ್ಕಾಗಿ ಕೆಂಪಾಗತೊಡಗಿದೆ. ಸರ್ಕಾರಿ ಶಾಲೆಯ ಮಕ್ಕಳ ಕೊನೆಯ ತರಗತಿ ನಡೆಯುತ್ತಿದೆ. ಕನ್ನಡ ಮಾಸ್ತರು ‘ಗಾಂಧೀ ತಾತ ಮಕ್ಕಳಿಗೆ ಬರೆದ ಪತ್ರ’ ಪಾಠವನ್ನು ಕಲಿಸುತ್ತಿದ್ದಾರೆ. ಅಷ್ಟರಲ್ಲಿ ಕಿಟಕಿಯ ಬದಿ ಕುಳಿತ ಹುಡುಗನೊಬ್ಬನ ಕಣ್ಣು ಹೊರಕ್ಕೆ ಹಾಯುತ್ತದೆ. ಟ್ರಿಣ್ ಟ್ರಿಣಾ ಟ್ರಿಣ್ ಎಂದು ಬೆಲ್ ಹೊಡೆದ ಸೈಕಲ್ಲೊಂದು ಶಾಲೆಯ ಅಂಗಳದಲ್ಲಿ ಆಗಷ್ಟೇ ಬಂದು ನಿಲ್ಲುತ್ತಿದೆ. ಖಾಕಿ ಬಣ್ಣದ ಅಂಗಿ ತೊಟ್ಟ ಅವನು ಸೈಕಲ್ನಿಂದ ಇಳಿಯುತ್ತಿದ್ದಾನೆ.

ಅಂಚೆ ಮಾಮ! ಗಾಂಧೀ ತಾತನ ಕಥೆಯ ಪತ್ರವನ್ನೇ ನಿಜದಲ್ಲಿ ಹೊತ್ತು ತಂದವನಂತೆ ಪತ್ರ ತುಳುಕುವ ಜೋಳಿಗೆಯ ಸಮೇತ ಅವನು ಶಾಲೆಯನ್ನು ಹೊಗ್ಗುತ್ತಾನೆ. ಮಕ್ಕಳೆಲ್ಲ ಹೋ ಎನ್ನುತ್ತ ಅವನನ್ನು ಸುತ್ತುವರಿಯುತ್ತಾರೆ. ಕ್ಯಾಸನೂರು ಮಾಣಿ, ದೊಡ್ಡೇರಿ ಹುಡುಗಿ, ಬೆನಕವಳ್ಳಿ ಸೌಕಾರರು‌‌ ಎಂದೆಲ್ಲ ಕರೆಯುತ್ತಾ ಒಂದೊಂದೇ ಪತ್ರವನ್ನು ಕೈಗಿಡುತ್ತ ಬರುತ್ತಾನೆ. ಅವನ ಬಾಯಿಂದ ಬಂದಿದ್ದು ತಮ್ಮ ನಿಜವಾದ ಹೆಸರಲ್ಲದಿದ್ದರೂ ಕರೆ ಬಂದಂತೆಲ್ಲ ಗುಂಪಿನ ಹುಡುಗ-ಹುಡುಗಿಯರು ಬಹುಮಾನ ಗೆದ್ದ ಸ್ಪರ್ಧಿಗಳಂತೆ ಸಂಭ್ರಮದಲ್ಲಿ ಕೈ ಚಾಚುತ್ತಾರೆ. ತಮ್ಮ ಹೆಸರು ಬಾರದ ಹುಡುಗರು ಕೊಂಚ ನಿರಾಶರಾದರೂ ಯಾರಿಗೆ ಪತ್ರ ಸಿಕ್ಕಿದೆಯೋ ಅವರ ಹಿಂದೆ “ನಂಗೂ ತೋರ್ಸಾ” ಎನ್ನುತ್ತ ಓಡುತ್ತಿದ್ದಾರೆ‌. ಅಸಲಿಗೆ ಹೆಸರು ಕರೆಯಲ್ಪಟ್ಟವರಿಗೂ ಅದು ಅವರವರ ಮನೆಯ ಪತ್ರಗಳಲ್ಲ. ಪಕ್ಕದ ಮನೆಯವರದ್ದೋ, ದಾರಿಯಲ್ಲಿ ಹಾದು ಹೋಗುವಾಗ ಎದುರಾಗುವ ಮನೆಯದ್ದೋ ಆಗಿರುತ್ತದೆ. ಆದರೂ ಮುಚ್ಚಿದ ಲಕೋಟೆಯೊಳಗೆ ಏನೆಲ್ಲ ಇರಬಹುದಾದ ಆ ಪುಟ್ಟ ಪತ್ರಗಳನ್ನು ಯಾರಿಗೋ ತಲುಪಿಸುವ ವಿಶೇಷ ಸಂಭ್ರಮದಲ್ಲಿ ಅವರೆಲ್ಲ ಖುಷಿಯಲ್ಲಿ ಓಡುತ್ತಿದ್ದಾರೆ.

ಪತ್ರವೆಂಬ ಹೃದಯದ ಸಂದೇಶ ವ್ಯಕ್ತಿಯಿಂದ ವ್ಯಕ್ತಿಗೆ ಬಂದು ತಲುಪುತ್ತಿದ್ದುದೇ ಹೀಗೆ. ಮನೆಯ ಉಣಗೋಲಿನ ಮುಂದೆ ಸೈಕಲ್ಲಿನ ಬೆಲ್ಲು ಟ್ರಿಣ್ ಗುಟ್ಟಿದರೆ ಒಳಗೆ ಅಡುಗೆ ಮನೆಯಲ್ಲಿರುವ ಹೆಣ್ಣು ಜೀವದ ಹೃದಯವೂ ರಿಂಗಣಿಸುತ್ತಿತ್ತು. ವರ್ಷದಿಂದ ಮುಖವನ್ನೇ ನೋಡದ ಅಮ್ಮನೋ, ಅಪ್ಪನೋ, ತಂಗಿಯೋ, ಅಣ್ಣನೋ ಬರೆದಿರಬಹುದಾದ ತವರಿನ ಪತ್ರ! ಅತ್ತಿಗೆ ಮತ್ತೆ ಬಸುರಿಯಾದಳೇ? ಗಬ್ಬಗಟ್ಟಿದ್ದ ಹಸುವಿನ ಕರು ಹೆಣ್ಣೇ ಅಥವಾ ಹೋರಿಯೇ? ಕಳೆದ ಸಲ ಹೋದಾಗ ತಾನು ಕೊಟ್ಟಿದ್ದ ಅಬ್ಬಲಿಗೆ ಹೂ ಬಿಟ್ಟಿತೇ? ಅಪ್ಪನ ಅಸ್ತಮ ಉಲ್ಬಣಿಸಿದ ಸುದ್ದಿಯೊಂದು ಬರದಿದ್ದರೆ ಸಾಕು… ಇನ್ನೂ ಕೈಗೇ ಬಾರದ ಪತ್ರದಲ್ಲಿ ಎಷ್ಟೆಲ್ಲ ಸಂಭಾವ್ಯ ಸಾಲುಗಳು! ತಾನು ಹುಟ್ಟಿ ಬೆಳೆದ ಅದೇ ಮನೆಯ ಕೋಣೆಯೊಂದರಲ್ಲಿ ತನ್ನ ಕರುಳಿಗೇ ಬೆಸೆದುಕೊಂಡಿರುವ ಜೀವವೊಂದರಿಂದ ಬರೆಯಲ್ಪಟ್ಟು, ತವರಿನ ಅದೇ ತಂಪು ದಾರಿಯಲ್ಲಿ ಸಾಗಿ ಬಂದಿರುವ ಪತ್ರ… ಅದು ಯಾವ ಅಮ್ಮನಿಗಿಂತ ಕಡಿಮೆ?

ಸಾರಿಗೆ-ಸಂದೇಶಗಳು ದುರ್ಭರವಾಗಿದ್ದ ಸಮಯದಲ್ಲಿ ಹೇಳಲೇಬೇಕಾದ ಮಾತುಗಳನ್ನು ಹೊತ್ತು ತರುವ ಅರ್ಥಪೂರ್ಣ ಜವಾಬ್ದಾರಿ ಪತ್ರಗಳದ್ದಾಗಿತ್ತು. ಆಕಾಶದಲ್ಲಿ ಅದ್ದಿ ತೆಗೆದಂಥಾ ನೀಲಿ ಬಣ್ಣದ ‘ಇನ್ ಲ್ಯಾಂಡ್ ಲೆಟರ್’! ಇಡೀ ಪತ್ರ ಬರೆದು ಮುಗಿಸಿದ ಮೇಲೆ ನೆನಪಾದ ಸಾಲೊಂದನ್ನು ಗೋಂದು ಅಂಟಿಸಿ ಮಡಿಚಲೆಂದು ಬಿಟ್ಟಿರುವ ಅಂಚಿನಲ್ಲಿ ಬರೆದು ಕಳುಹಿಸಿದಂಥಾ ಒತ್ತೊಟ್ಟಿನ ಪದ ಸಂದಣಿ ಅದರಲ್ಲಿ. ಈಗಲೂ ಹಳೆಯ ಮನೆಯ ಉಪ್ಪರಿಗೆಯಲ್ಲೋ ಅಥವಾ ಇನ್ಯಾವುದೋ ಹಳೆಯ ಟ್ರಂಕಿನಲ್ಲೋ ಹುಡುಕಾಡಿ ನೋಡಿದರೆ ಅಂಥವು ಕೆಲವಾದರೂ ಸಿಗಬಹುದು. ಹಾಸ್ಟೆಲಿನಲ್ಲಿ ಓದುತ್ತಿದ್ದ ಅಪ್ಪ ತಿಂಗಳ ಖರ್ಚನ್ನು ಕೇಳಿ ಅಜ್ಜನಿಗೆ ಬರೆದ ಪತ್ರ, ಅವನ ಓದಿಗಾಗಿ ಸಾಲ ಕೊಡುವಂತೆ ಪ್ರಾರ್ಥಿಸಿದ ಅಜ್ಜ ಯಾವುದೋ ಸಾಹುಕಾರರಿಗೆ ಬರೆದು, ಕೊನೆಗೆ ಅಂಚೆಗೆ ಹಾಕಲು ಮನಸ್ಸಾಗದೇ ಅಲ್ಲಿಯೇ ಉಳಿದ ಸ್ವಾಭಿಮಾನದ ಪತ್ರ, ಗಂಡನ ದುಷ್ಟತನ ತಾಳಲಾಗದ ಮಗಳು ಅಮ್ಮನ ಬಳಿ ಕಷ್ಟ ತೋಡಿಕೊಂಡ ಪತ್ರ… ಗಮನಿಸಿ ನೋಡಿದರೆ ಆ ಪತ್ರದ ಎದೆ ಮಧ್ಯದಲ್ಲಿ ಹನಿಯೊಂದು ಬಿದ್ದು ಒದ್ದೆಯಾದ ಗುರುತು. ಭಾವ ಬಿಂದುವನ್ನು ಹೀರಿಕೊಂಡ ಹಾಳೆಯ ಆ ಭಾಗ ಈಗಲೂ ತೆಳುವಾಗಿಯೇ ಇದೆ. ಅದು ಬರೆಯುವಾಗ ಬಿದ್ದ ಮಗಳ ಕಣ್ಣೀರೇ ಅಥವಾ ಓದುವಾಗ ಸುರಿಸಿರಬಹುದಾದ ಅಮ್ಮನ ಕಂಬನಿಯೇ? ಅಜ್ಜ ಕೊನೆಗೆ ಹೇಗೆ ದುಡ್ಡು ಹೊಂದಿಸಿದ? ಅಪ್ಪ ಓದು ಮುಂದುವರಿಸಿದನೇ? ಮಗಳ ಗಂಡ ಹೊಡೆಯುವುದನ್ನು ನಿಲ್ಲಿಸಿದನೇ? ಎಲ್ಲಿದೆ ಆ ಮುಗಿದ ಜೀವನಗಳ ಉಳಿದ ಕಥೆ ಹೇಳುವ ಪತ್ರದ ಮುಂದಿನ ಭಾಗ? ತಮ್ಮ ಪಾಲಿನ ನಗು, ಯಾತನೆ, ಕಾರ್ಪಣ್ಯಗಳನ್ನೆಲ್ಲ ಮುಗಿಸಿ ಎದ್ದು ಹೋದ ತಲೆಮಾರಿನ ಕುರುಹುಗಳನ್ನು ಉಸಿರಾಡುತ್ತ ಇನ್ನಾದರೂ ಉಳಿದೇ ಹೋಗಿವೆ ಆ ಬಣ್ಣ ಮಾಸಿದ ಪತ್ರಗಳು.

ಮೊಬೈಲಿನ ಇನ್ ಬಾಕ್ಸನ್ನು ಸ್ವತಃ ಅಪ್ಪ-ಅಮ್ಮನಿಗೇ ತೋರಿಸದ ಕಾಲವಿದು. ಆದರೆ ಆಗ ಎಂಟಾಣೆಯ ತೆರೆದ ಅಂಚೆಯ ಕಾರ್ಡಿನಲ್ಲಿ ಇಡೀ ಮನಸ್ಸನ್ನೇ ಅಂಟಿಸಿ ಕಳುಹಿಸುತ್ತಿದ್ದೆವು! ಆ ‘ತೆರೆದ ಅಂಚೆ’ಗೆ ಸೀಲು ಗುದ್ದಿ ಮುಂದಕ್ಕೆ ದಾಟಿಸುವಾಗಲೋ, ಇಲ್ಲಾ ಅಷ್ಟಾಗಿ ಕೆಲಸವಿಲ್ಲದ ಶನಿವಾರದ ಮಧ್ಯಾಹ್ನಗಳಲ್ಲೋ ಅವನ್ನು ಓದಿಬಿಡುವ ಅಂಚೆ ಇಲಾಖೆಯವರ ಮುಖದಲ್ಲಿ ಅದೆಷ್ಟು ಕಿರು ನಗೆ ಹಾದು ಹೋಗಿತ್ತೋ? ಊರಿನ ದೊಡ್ಡ ಮನುಷ್ಯರ ಅದೆಂತೆಂಥಾ ಗುಟ್ಟುಗಳು ಅಂಚೆ ಮಾಮನಿಗೆ ಗೊತ್ತಿರುತ್ತಿದ್ದವೋ? ಇನ್ನು, ಯಾವ ವ್ಯಕ್ತಿಯೂ ನಿರೀಕ್ಷಿಸದ, ಬರುವುದೇ ಬೇಡವೆನ್ನುವ ಪತ್ರವೆಂದರೆ ಅದು ಟೆಲಿಗ್ರಾಂ! ತುರ್ತಾಗಿ ಕಳುಹಿಸಿದ ದುರಂತ ಸಂದೇಶಗಳೇ ಹೆಚ್ಚು ಅದರಲ್ಲಿ. ಮನೆಯೆದುರು ಸೈಕಲ್ ನಿಲ್ಲಿಸಿದ ಅಂಚೆಯವ ‘ಲೆಟರ್’ ಎಂದರೆ ಖುಷಿ. ‘ಟೆಲಿಗ್ರಾಂ’ ಎಂದರೆ ಆತಂಕ. ಬದುಕು ಮುಗಿಸಿ ಹೊರಟಿರುವ ಅಥವಾ ಹೋಗಿಯೇ ಬಿಟ್ಟಿರುವ ಅತ್ಯಾಪ್ತ ಜೀವವೊಂದರ ಕೊನೆಯ ಉಸಿರು, ಕಟ್ಟ ಕಡೆಯ ಪಿಸು ಮಾತು ಈ ಟೆಲಿಗ್ರಾಂ.

‘ಫಾದರ್ ಈಸ಼್ ಸೀರಿಯಸ್. ಸ್ಟಾರ್ಟ್ ಇಮ್ಮಿಡಿಯಟ್ಲೀ’

ಆ ಎರಡೇ ಪದಗಳಿಗೆ ಛಿದ್ರವಾಗುವ ಹೃದಯ. ಓದು ಬಾರದವರಿಗೆ ಓದಿ ಹೇಳಲೆಂದು ಅದನ್ನು ತೆರೆಯುತ್ತಿರುವ ಅಂಚೆಯಣ್ಣನ ಕಣ್ಣಲ್ಲೂ ಅದೊಂದು ಆತಂಕ. ‘ಅಂಥಾದ್ದೇನೂ ಇರದಿರಲಿ’ ಎಂಬ ಪ್ರಾರ್ಥನೆ. ಇಂಥಾ ಅದೆಷ್ಟು ಮಾನವೀಯ ಮುಖಗಳನ್ನು ಅಡಗಿಸಿಕೊಂಡು ಅಂಚೆ ಡಬ್ಬಿ ಹಾಗೂ ಓದುವ ಕೈಗಳ ನಡುವೆ ಓಡಾಡುತ್ತಿದ್ದವೋ ಆ ಕಾಲದ ಪತ್ರಗಳು?

*****

ಪ್ರತೀ ಬಾರಿ ಯುಗಾದಿ ಹಾಗೂ ದೀಪಾವಳಿಗಳು ಬಂದವೆಂದರೆ ಅದೊಂದು ಪತ್ರ ತಪ್ಪದೇ ಬರುತ್ತಿತ್ತು: ಆಭರಣ ಅಂಗಡಿಯವರ ಶುಭ ಹಾರೈಕೆಯ ಪತ್ರ! ಉಳಿದ ಪತ್ರಗಳಿಗಿಂತ ಭಿನ್ನವಾದ ದಪ್ಪನೆಯ ಕಾರ್ಡು ಅದು. ಅದರ ಮೇಲೆ ಆಭರಣ ತೊಟ್ಟ ಸುಂದರ ನಾರಿಯ ಚಿತ್ರ. ಅವಳ ಕೈಯಲ್ಲೊಂದು ಉರಿಯುವ ಹಣತೆ. ಪಕ್ಕದಲ್ಲಿ ಈ ಯುಗಾದಿ/ದೀಪಾವಳಿ ನಿಮ್ಮ ಬಾಳಲ್ಲಿ ಖುಷಿ ತರಲೆಂದು ಹಾರೈಸುವ ಅನಾಮಿಕ ಕವಿತೆ. ಯಾವ ಕವಿ ಬರೆದದ್ದೋ? ಎಂದೋ ಒಮ್ಮೆ ಅವರ ಅಂಗಡಿಗೆ ಹೋಗಿ ಆಭರಣ ಖರೀದಿಸಿದ್ದಕ್ಕೆ ಪ್ರತೀ ಸಲದ ಹಬ್ಬಕ್ಕೂ ಶುಭ ಹಾರೈಸಿ ಪತ್ರ ಕಳುಹಿಸುವ ಅಂಗಡಿ ಮಾಲಿಕರು. ಹಾಗೆ ಒಡವೆ ಖರೀದಿಸಿದ ವ್ಯಕ್ತಿಯೇ ತೀರಿ ಹೋದರೂ ಅವರ ಹೆಸರಿಗೆ ಅವು ಬರುತ್ತಲೇ ಇರುತ್ತಿದ್ದವು. ಇತ್ತ ‘ಅಪ್ಪಯ್ಯ ಈಗಿಲ್ಲ’ ಎಂದು ತಿರುಗಿ ಬರೆಯುವುದಕ್ಕೆ ಮಗನಿಗೂ ಬೇಸರ. ‘ಅವರ ಕಲ್ಪನೆಯಲ್ಲಾದರೂ ಅಪ್ಪಯ್ಯ ಹೀಗೇ ಬದುಕಿರಲಿ’ ಎಂಬ ಬಯಕೆಯೋ ಅಥವಾ ಆ ಕಾಗದ ಬಂದಾಗೆಲ್ಲ ‘ಅಂದು ಅಪ್ಪ, ಅಮ್ಮ ಹಾಗೂ ನನ್ನನ್ನು ಕರೆದುಕೊಂಡು ಇವರ ಅಂಗಡಿಗೆ ಹೋಗಿದ್ದ. ಅಮ್ಮನಿಗೆ ಸರ ಕೊಡಿಸಿದ್ದ. ನನಗಾಗ ಹದಿನಾಲ್ಕು ವರುಷ’ ಎಂದು ನೆನಪಿಸಿಕೊಳ್ಳುವ ಅವಕಾಶವನ್ನು ಕಳೆದುಕೊಳ್ಳುವ ಮನಸ್ಸಿಲ್ಲವೋ? ಇನ್ನು ಕೆಲವು ಸಲ ಪತ್ರದಲ್ಲಿ ‘ಇವರಿಂದ’ ಅಥವಾ ‘ಶುಭ ಕೋರುವವರು’ ಎಂದು ಅಚ್ಚಾಗಿರುವ, ಅಂದು ಒಡವೆ ಕೊಟ್ಟು ಕಳುಹಿಸಿದ್ದ ಅಂಗಡಿ ಮಾಲಿಕರೂ ತೀರಿ ಹೋಗಿರುತ್ತಿದ್ದರು! ಮಗನೋ, ತಮ್ಮನೋ ಅವರ ಹೆಸರಿನಲ್ಲಿ ಶುಭಾಶಯ ಕಳುಹಿಸಿರುತ್ತಿದ್ದರು. ‘ಓದುವವರ ದೃಷ್ಟಿಯಲ್ಲಾದರೂ ಅಪ್ಪ/ಅಣ್ಣ ಬದುಕಿರಲಿ’ ಎಂಬ ಆಸೆಯೇ ಅವರಿಗೂ. ಹೀಗೆ ತೊರೆದು ಹೋದ ಜೀವಗಳೆರಡನ್ನು ಪರಸ್ಪರ ಕಲ್ಪನೆಯಲ್ಲಿ ಜೀವಂತವಾಗಿರಿಸುವ, ವಿವರಣೆಗೆ ನಿಲುಕದ ಭಾವವೊಂದನ್ನು ಸ್ಫುರಿಸುವ ಅರ್ಥಪೂರ್ಣ ಕೆಲಸ ಮಾಡುತ್ತಿದ್ದವು ಈ ಶುಭಾಶಯ ಪತ್ರಗಳು.

ಯಾವ ವಾಹಿನಿಯೇ ಆಗಲಿ, ಪ್ರೀತಿಯನ್ನು ಹೊತ್ತುಕೊಂಡು ಹರಿಯದ ಹೊರತು ಅದರ ಹರಿವು ಪೂರ್ಣವಾಗುವುದು ಸಾಧ್ಯವೇ ಇಲ್ಲ. ಅದು ಓಲೆ-ಪತ್ರಗಳೇ ಆಗಿರಬಹುದು, ಮೆಸೇಜು-ವಾಟ್ಸಾಪುಗಳೇ ಆಗಿರಬಹುದು. ಸಂದೇಶಗಳನ್ನು ಹೊತ್ತೊಯ್ಯುವ ಪ್ರತಿಯೊಂದು ಮಾಧ್ಯಮದಲ್ಲೂ ಮನುಷ್ಯ ಮೊದಲಿಗೆ ತನ್ನ ಪ್ರೀತಿಯನ್ನೇ ಹರಿಸಲು ನೋಡುತ್ತಾನೆ. ಎಲ್ಲೋ ಇರುವ ಮನದನ್ನೆಗೆ ಬರೆದ ಪತ್ರಗಳು, ದೂರದ ಊರಿಗೆ ವರ್ಗವಾದ ಗಂಡನಿಗೆ ಬರೆದ ಕಾಗದಗಳು, ಆಷಾಢಕ್ಕೆ ತವರಿಗೆ ಹೋದ ಹೆಂಡತಿಗೆ ಕಳುಹಿಸುವ ಓಲೆಗಳು.. ಎಲ್ಲರೆದುರು ತೆರೆದೋದಲಾಗದ, ಇಬ್ಬರೇ ಇರುವಾಗ ಕಿವಿಯಲ್ಲಿ ಹೇಳಿದ ಪಿಸುಮಾತುಗಳಂತೆ ಇವು. ಗಂಡ ಕಳುಹಿಸಿದ, ವಿರಹವುಕ್ಕುವ ಪತ್ರಗಳು ಮನೆಯ ಇನ್ಯಾರದೇ ಕೈಗೆ ಸಿಗದಂತೆ ಎಚ್ಚರ ವಹಿಸುವುದೇ ಅವಳ ಪಾಲಿಗೆ ದೊಡ್ಡ ಸಾಹಸ. ಇದಕ್ಕಾಗಿ ಅವಳು ಅಂಚೆಯಣ್ಣನಿಗೆ ಹೇಳದೆಯೂ ಅರ್ಥವಾಗವಂತೆ ವಿಷಯವನ್ನು ಸೂಕ್ಷ್ಮವಾಗಿ ದಾಟಿಸಬೇಕಾಗುತ್ತದೆ. ಅವನಾದರೂ ‘ಪತ್ರ ಬಂದಿದೆಯಾ?’ ಎನ್ನುವ ಅವಳ ಪ್ರಶ್ನೆ ಹಾಗೂ ಹಾಗೆ ಕೇಳುವಾಗಿನ ಆಕೆಯ ಮುಖದ ಉದ್ವೇಗದಿಂದಲೇ ಪತ್ರದ ಗೌಪ್ಯತೆಯನ್ನು ಅರ್ಥ ಮಾಡಿಕೊಂಡು, ಬಂದ ಪತ್ರವನ್ನು ನೇರ ಅವಳಿಗೇ ಕೊಡುತ್ತಾನೆ. ಹಾಗೆ, ನಿಧಿಯಂತೆ ಸಿಕ್ಕ ಓಲೆಯನ್ನು ಯಾರಿಗೂ ಕಾಣದಂತೆ ಬಚ್ಚಿಟ್ಟುಕೊಂಡು ಹಳ್ಳದ ದಡದಲ್ಲೋ, ಉಪ್ಪರಿಗೆಯ ಮೆತ್ತೆಯಲ್ಲೋ, ರಾತ್ರಿ ಮಲಗುವ ಮುನ್ನದ ಏಕಾಂತದಲ್ಲೋ ರಹಸ್ಯವಾಗಿ ತೆರೆದೋದಿ, ನಕ್ಕು, ಅವನ ಅಕ್ಷರಗಳಿಗೆ ನವಿರಾದ ಮುತ್ತೊಂದನ್ನಿತ್ತು ಎದೆಗಪ್ಪಿಕೊಂಡಳೆಂದರೆ ಆ ಪತ್ರಕ್ಕೆ ತಾನು ಧನ್ಯನಾದೆನೆಂಬ ಸಂತೃಪ್ತಿ. ಇಲ್ಲಿ ಅವಳಿಂದ ಸಿಕ್ಕ ಮುತ್ತು, ಅಪ್ಪುಗೆಯು ಈ ಪತ್ರಕ್ಕೆ ನೇರ ಬೆಸೆದ ಅವನ ಹೃದಯಕ್ಕೇ ರವಾನೆಯಾಗಿ ಅಲ್ಲಿ ಅವನು ಪುಳಕಗೊಂಡಿದ್ದು ಹೇಗೆಂಬುದು ಪತ್ರಕ್ಕೆ ಮಾತ್ರ ಗೊತ್ತಿರುವ ಸತ್ಯ!

ಇವೆಲ್ಲ ಕೆಲ ಕ್ಷಣಗಳ ಅಗಲಿಕೆಯಾದರೆ ಅಗಲಿಕೆಯೇ ಮುಖ್ಯ ಭೂಮಿಕೆಯಾಗಿ, ಸೇರುವುದು ಬರಿಯ ಮಧ್ಯಂತರದಂತಿರುವ ಸಂಬಂಧವೊಂದಿದೆ. ಅದು ಗಡಿ ಕಾಯುವ ಯೋಧ ಹಾಗೂ ಸಾವಿರಾರು ಮೈಲುಗಳಾಚೆಯ ಊರಲ್ಲೆಲ್ಲೋ ಇರುವ ಅವನ ಮಡದಿಯದ್ದು. ದೇಶದ ರಕ್ಷಣೆಗಾಗಿ ಎಲ್ಲವನ್ನೂ ತೊರೆದು ಹೋಗಿರುವ, ಯಾವಾಗ ಏನು ಬೇಕಾದರೂ ಆಗಬಹುದಾದ ಅಪಾಯದ ಬದುಕನ್ನು ಆಯ್ಕೆ ಮಾಡಿಕೊಂಡಿರುವವನು ನಿಯಮಿತವಾಗಿ ಕಳುಹಿಸುವ ಒಂದೊಂದು ಪತ್ರವೂ ಅವಳ ಪಾಲಿಗೆ ಅವನ ಹೊಸ ಜನ್ಮದಂತೆ. ಎಂದೋ ಒಮ್ಮೆ ಬಂದು ಹೋದವನ ಪ್ರೀತಿ, ಅಪ್ಪುಗೆ, ಕಾಳಜಿಗಳನ್ನೆಲ್ಲ ಅವನ ಅಕ್ಷರಗಳಿಂದ ಬಸಿದುಕೊಂಡು ತಣಿಯ ಬೇಕಾದ ಅನಿವಾರ್ಯ ಆಕೆಯದು. ಅತ್ತ ಅವನಿಗಾದರೂ ಸಾವೊಂದನ್ನೇ ಸುರಿಸುವ ದಶ ದಿಕ್ಕುಗಳ ನಡುವೆ ಸ್ವರ್ಗದಿಂದಿಳಿದು ಬಂದ ಸ್ಪೂರ್ತಿಯ ಸಂದೇಶ ಅವಳ ಕಾಗದ. ಗಡಿಯ ಡೇರೆಯೊಳಗೆ ನಟ್ಟಿರುಳಿನಲ್ಲಿ, ಮೊಂಬತ್ತಿಯ ಬೆಳಕಿನಲ್ಲಿ ಅವಳು ಬರೆದ ಅಕ್ಷರಗಳನ್ನು ಅವಳದೇ ದನಿಯಲ್ಲಿ ಓದಿಕೊಂಡು ಮಲಗಿದವನಿಗೆ ಅಪರೂಪಕ್ಕೆ ಕಣ್ತುಂಬಾ ನಿದ್ರೆ.

ಹೀಗೆ ಪ್ರಿಯಕರ, ಪ್ರೇಯಸಿಯರಿಂದ ಬರುವ ಪತ್ರಗಳೆಲ್ಲ ಸಂಬಂಧಗಳ ನಡುವಿನ ತಂತುಗಳ ಮೂರ್ತ ರೂಪದಂತೆ. ವಾರಕ್ಕೆ, ಹದಿನೈದು ದಿನಗಳಿಗೆ ಬರುವ ಓಲೆಗಳು ಉತ್ಕಟ ಪ್ರೀತಿಯ ಸಂಕೇತಗಳಾದರೆ ವಿರಳವಾಗುತ್ತ ಹೋಗುವ ಪತ್ರಗಳು ಸವೆಯುತ್ತಿರುವ ಅನುಬಂಧದ ದ್ಯೋತಕವಾಗುತ್ತವೆ. ಯಾಕೆ ನಿನ್ನ ಗಂಡ ಪತ್ರವನ್ನೇ ಬರೆದಿಲ್ಲ? ಶಹರದಿಂದ ಮಗನ ಕಾಗದವೇ ಬರಲಿಲ್ಲವಲ್ಲ? ಎಂಬೆಲ್ಲ ಪ್ರಶ್ನೆಗಳು ಹೆಚ್ಚಿನ ಸಲ ಹಳಿಸುತ್ತಿರುವ ಸಂಬಂಧವನ್ನು ಸಾರುತ್ತವೆ. ಅವರಿಗೆ ನನ್ನ ಮೇಲಿನ ಪ್ರೀತಿ ಕಡಿಮೆಯಾಗಿದೆಯೇ? ಅವರ ಮನಸ್ಸು ಇನ್ನೆತ್ತಲಾದರೂ ಹರಿಯುತ್ತಿದೆಯೇ? ಮಗನಿಗೆ ನಾವು ಬೇಡವಾದೆವೇ?

ಬರೆದ ಪತ್ರದಲ್ಲಿ ನೂರು ಪದಗಳಾದರೆ ಬರೆಯದ ಓಲೆಯಲ್ಲಿ ಸಾವಿರ ಪ್ರಶ್ನೆಗಳು.

ಆ ದಿನಗಳಲ್ಲಿ, ಕೆಲವು ಪತ್ರಿಕೆಗಳಲ್ಲಿ ಪರಸ್ಪರ ಅನುಮತಿಯ ಮೇರೆಗೆ ಪೋಸ್ಟ್ ಬಾಕ್ಸ್ ನಂಬರ್ರನ್ನೋ ಇಲ್ಲಾ ಅಂಚೆ ವಿಳಾಸವನ್ನೋ ಹಂಚಿಕೊಂಡು ಅನಾಮಿಕ ಗೆಳೆಯ/ಗೆಳತಿಗೆ ಪತ್ರ ಬರೆಯುವ ಪೆನ್ ಫ್ರೆಂಡ್ ಮಾದರಿಯೂ ಇತ್ತು. ಗೊತ್ತಿರುವ ಹತ್ತು ಸ್ನೇಹಿತರಿಗಿಂತ ಪತ್ರದ ಮೂಲಕವಷ್ಟೇ ಪರಿಚಯವಾಗಿ ಪ್ರಕಟವಾಗುವ ಒಬ್ಬ ಗೆಳೆಯ/ಗೆಳತಿಯೇ ಆಪ್ತವೆನಿಸುವುದು ಮನುಷ್ಯನ ಮನಸ್ಸಿನ ವಿಚಿತ್ರ ಗುಣ. ಸೂಕ್ಷ್ಮವಾಗಿ ಯೋಚಿಸಿದರೆ ಆ ಸ್ನೇಹವನ್ನು ವಿಶೇಷವಾಗಿಸುತ್ತಿದ್ದುದೇ ಅನಾಮಿಕತೆ ಹಾಗೂ ಅಪರಿಚಿತತೆ. ಭೌತಿಕವಾಗಿ ಎದುರಿರುವ ವ್ಯಕ್ತಿಯ ಚಹರೆ, ಗುಣ, ಲೋಪಗಳೆಲ್ಲ ಕಣ್ಣಿಗೆ ಕಾಣುವಾಗ ಪತ್ರದಲ್ಲಿ ಪದಗಳ ಮುಖಾಂತರ ಪರಿಚಯವಾಗಿರುವವರ ಇನ್ನುಳಿದ ಗುಣಗಳನ್ನು ನಮ್ಮ ಕಲ್ಪನೆಯಲ್ಲೇ ಪೂರ್ಣಗೊಳಿಸಿಕೊಂಡು, ಅವರನ್ನು ಅಪೂರ್ವ ವ್ಯಕ್ತಿಯಂತೆ ಚಿತ್ರಿಸಿಕೊಳ್ಳುವ ಅವಕಾಶ ಪತ್ರ ಸ್ನೇಹದಲ್ಲಿ ಮಾತ್ರ ಸಾಧ್ಯವಿತ್ತು. ಸ್ನೇಹ-ಪ್ರೇಮಗಳಲ್ಲಿ ಪರಿಪೂರ್ಣತೆಯನ್ನು ಬಯಸುವ ಮನಸ್ಸನ್ನು ಇದು ಪತ್ರ ಪ್ರೇಮದತ್ತ ನೂಕುತ್ತಿತ್ತು‌. ಈಗಿನ ಫೇಸ್ಬುಕ್ಕು, ಇನ್ಸ್ಟಾಗ್ರಾಮುಗಳಲ್ಲಿ ಆಗುವಂತೆ ಪತ್ರದ ಮೂಲಕವೇ ಪ್ರೇಮಾಂಕುರವಾಗಿ ಮದುವೆಯಾದವರೂ ಇಲ್ಲದಿಲ್ಲ. ಇನ್ನು, ಯಾರಿಗೋ ಬರೆದ ಪತ್ರ ಇನ್ಯಾರಿಗೋ ಬಟಾವಡೆಯಾಗಿ, ಅವರು ಅದಕ್ಕೆ ಸ್ಪಂದಿಸಿ ಪ್ರೀತಿ-ಸ್ನೇಹಗಳೇರ್ಪಟ್ಟಿದ್ದೂ ಇದೆ. ಹೀಗೆ ಕಣ್ಣಳತೆಯಾಚೆಗಿನದೇನನ್ನೋ ಹುಡುಕುವ ಮನಸ್ಸುಗಳನ್ನು ಅಂಥದೇ ವ್ಯಕ್ತಿತ್ವಕ್ಕೆ ಕೊಂಡಿ ಬೆಸೆಯುವ ಕೆಲಸವನ್ನು ಪತ್ರಗಳು ಮಾಡಿವೆ.

ಹಾಗೆಂದು ಪತ್ರಗಳು ತೀರಾ ಸಾಮಾಜಿಕ ಜಾಲತಾಣಗಳಂತೆಯೇ ಎಂದರೆ ಅದು ಅಪಚಾರವಾದೀತು. ಓಲೆಯೆಂದರೆ ಕನ್ನಡವನ್ನು ಇಂಗ್ಲೀಷಿನ ಅಕ್ಷರಗಳಲ್ಲಿ ಟೈಪಿಸಿ ಕಳುಹಿಸುವ ಐದಾರು ಸಾಲುಗಳ ಮೆಸೇಜಲ್ಲ. ಅದಕ್ಕೊಂದು ಚಿಕ್ಕ ಪೂರ್ವ ತಯಾರಿ ಬೇಕು. ಮಾನಸಿಕ ಸಿದ್ಧತೆ ಬೇಕು. ತನ್ನದೇ ಬದುಕಿನ ಪುಟ್ಟ ಸಂಚಿಕೆಯೊಂದನ್ನು ಕೆಲವು ಪದಗಳಲ್ಲಿ ಸಾದರಪಡಿಸುವುದಕ್ಕೂ ಚಿಕ್ಕದಾದ ಒಂದು ಕೌಶಲ್ಯ ಬೇಕು. ಎಷ್ಟೇ ವ್ಯಾವಹಾರಿಕವೆಂದುಕೊಂಡರೂ ಅಲ್ಲಿ ಬಳಕೆಯಾಗುವುದು ಪರಿಶುದ್ಧ ಕನ್ನಡವೇ! ಪತ್ರದ ಮೂಲಕ ಶುರುವಾದ ಬರೆಯುವ ಗೀಳು ಲೇಖನ, ಕಥೆ, ಕವಿತೆಗಳಲ್ಲಿ ಕೊನೆಯಾದ ದೃಷ್ಟಾಂತಗಳೆಷ್ಟೋ? ಕಾಗದದಿಂದ ಆರಂಭವಾದ ಓದನ್ನು ಪತ್ರಿಕೆ, ಪುಸ್ತಕಗಳಿಗೆ ವಿಸ್ತರಿಸಿಕೊಂಡು ಓದುಗರಾದವರೆಷ್ಟೋ! ಹೀಗೆ ಬರೆಯುವ, ಓದುವ ಮನಸ್ಸಿನಲ್ಲಿ ಭಾಷೆಯನ್ನು, ಸಾಹಿತ್ಯವನ್ನು ತೆಳುವಾಗಿ ಬಿತ್ತುವ ಕೆಲಸವನ್ನೂ ಓಲೆಗಳು ಮಾಡಿವೆ. ಬರೆಯುತ್ತ ಬರೆಯುತ್ತ ಲೇಖನಿ-ಬೆರಳು-ಅಂತರಂಗಗಳ ನಡುವೆ ಅನೂಹ್ಯವಾದ ಮಿಳಿತವೊಂದು ಏರ್ಪಟ್ಟು ಪತ್ರ ಮುಗಿಯುವ ಹೊತ್ತಿಗೆ ಬೇರೆಯದೇ ವ್ಯಕ್ತಿಯಾದವರೆಷ್ಟೋ?

*****

ಯುವ ಕಥೆಗಾರರೊಬ್ಬರ ಸಂಕಲನವೊಂದರಲ್ಲಿ ಪತ್ರಗಳು ಉಂಟುಮಾಡುವ ಗೊಂದಲದ ಕುರಿತಾದ ಸ್ವಾರಸ್ಯಕರವಾದ ಕಥೆಯೊಂದಿದೆ. ದೂರದ ಶಹರಕ್ಕೆ ಮದುವೆಯಾಗಿ ಬಂದ ಮಗಳಿಗೆ ಒಂದು ದಿನ ಅಮ್ಮನ ಆರೋಗ್ಯದ ಕುರಿತಾದ ಟೆಲಿಗ್ರಾಮೊಂದು ಬರುತ್ತದೆ. ಟೆಲಿಗ್ರಾಮೆಂದರೆ ಇನ್ನೇನು? ಅಮ್ಮ ಇಲ್ಲ ಎನ್ನುವುದರ ಸಾಂಕೇತಿಕ ರೂಪವದು. ಅದನ್ನು ಓದಿದ್ದೇ ಮಗಳು ಕಣ್ಣೀರಿನ ಕಡಲಾಗುತ್ತಾಳೆ. ಅಳುತ್ತಳುತ್ತಲೇ ಗಂಡನ ಜೊತೆ ಚಿಕ್ಕ ಮಗನನ್ನೂ ಕರೆದುಕೊಂಡು ಬಸ್ಸು ಹತ್ತುತ್ತಾಳೆ. ದಾರಿಯುದ್ದಕ್ಕೂ ಬಿಕ್ಕಳಿಸುತ್ತಾಳೆ. ಇಷ್ಟು ದಿನ ಹೋದಾಗ ನಗು ಮುಖದಲ್ಲಿ ಇದಿರುಗೊಳ್ಳುತ್ತಿದ್ದ ಅಮ್ಮನನ್ನು ಈಗ ನಿರ್ಜೀವವಾಗಿ ನೋಡುವುದಕ್ಕೆ ತಯಾರಾಗಲು ಪ್ರಯತ್ನಿಸಿ ಪ್ರಯತ್ನಿಸಿ ಸೋಲುತ್ತಾಳೆ. ಬಸ್ಸಿಳಿದು ಮನೆಯತ್ತ ನಡೆದವಳಿಗೆ ಇಡೀ ಊರೇ ಶೋಕ ತಪ್ತವಾಗಿರುವಂತೆನಿಸುತ್ತದೆ. ಮನೆಯ ಬಾಗಿಲಿನಲ್ಲೆದುರಾದ ಅಪ್ಪನೂ ಮುಖ ತಗ್ಗಿಸಿ ನಡೆಯುತ್ತಾನೆ. ಅಳುತ್ತಳುತ್ತಲೇ ಕೋಣೆಯನ್ನು ಹೊಕ್ಕರೆ ಅಲ್ಲಿ ಇಂದಷ್ಟೇ ಹಡೆದ ಅವ್ವ ಹಾಗೂ ಕೈ ಕಾಲು ಆಡಿಸುತ್ತಿರುವ ಅವಳ ಹಸುಗೂಸುಗಳಿರುತ್ತವೆ! ಆ ಪ್ರಾಯದಲ್ಲಿ ಅಮ್ಮ ಹಡೆದಿರುತ್ತಾಳೆ! ಶಾಲೆಗೆ ಹೋಗುವ ವಯಸ್ಸಿನ ಮೊಮ್ಮಗನಿರುವ ಹೊತ್ತಿಗೆ ಹೊಸದಾಗಿ ಅಮ್ಮನಾದ ಮುಜುಗರದ ವಿಷಯವನ್ನು ಜಗಜ್ಜಾಹೀರು ಮಾಡುವ ಧೈರ್ಯವಿಲ್ಲದೇ ‘ಮದರ್ ಈಸ಼್ ಸೀರಿಯಸ್. ಸ್ಟಾರ್ಟ್ ಇಮೀಡಿಯೆಟ್ಲಿ’ ಎನ್ನುವ ಟೆಲಿಗ್ರಾಮನ್ನು  ತವರಿನವರು ಕಳುಹಿಸಿರುತ್ತಾರೆ! ಸಾವಿನ ಮನೆಯೆಂದುಕೊಂಡು ಹೊಕ್ಕ ತವರಿನಲ್ಲಿ ಹೊಸ ಹುಟ್ಟನ್ನು ಕಾಣುವ ವಿಶೇಷ ಪೇಚಿಗೆ ಆ ಪತ್ರ ಕಾರಣವಾಗುತ್ತದೆ.

ಹಾಗಂತ ಪತ್ರ ಕೇವಲ ಸಾಮಾನ್ಯ ಜನರ ಅಂತರಾಳವನ್ನು ಹಾಗೂ ಕಷ್ಟ-ಕಾರ್ಪಣ್ಯಗಳಷ್ಟನ್ನೇ ಹಂಚಿಕೊಳ್ಳುವ ಮಾಧ್ಯಮವಷ್ಟೇ ಆಗಿರಲಿಲ್ಲ. ಸ್ವಾತಂತ್ರ್ಯ ಹೋರಾಟಗಾರರಿಂದ ಹಿಡಿದು ಚಿಂತಕರ ತನಕ ಎಷ್ಟೋ ಪ್ರಖರ ವ್ಯಕ್ತಿಗಳು ತಮ್ಮ ಹೋರಾಟಗಳನ್ನೂ, ಚಿಂತನೆಗಳನ್ನೂ ಬೇರೆಯವರಿಗೆ ದಾಟಿಸಲು ಆಯ್ದುಕೊಂಡ ಮಾರ್ಗಗಳ ಪೈಕಿ ಪತ್ರವೂ ಒಂದು. ಸೆರೆಯಲ್ಲಿದ್ದಾಗ, ಭೇಟಿ ಸಾಧ್ಯವಿಲ್ಲದಾಗ ತಮ್ಮ ಸಹಚರರಿಗೆ, ಅನುಯಾಯಿಗಳಿಗೆ ಸೂಚನೆಗಳನ್ನು ನೀಡಲೆಂದು ಕಳುಹಿಸಿದ ರಹಸ್ಯ ಓಲೆಯ ನಡುವೆ ಬರೆದ “ಸ್ವಾತಂತ್ರ್ಯ ಸುಮ್ಮನೆ ಬರುವುದಿಲ್ಲ ಗೆಳೆಯಾ. ಅದು ಹೋರಾಟವನ್ನು ಕೇಳುತ್ತದೆ!” ಎಂಬ ಮಾತು ಭೂಮಿಯ ಮೇಲೆ ಮನುಷ್ಯನಿರುವ ತನಕವೂ ನಮ್ಮೆಲ್ಲರ ಬದುಕುಗಳಿಗೆ ಅನ್ವಯವಾಗುವ ಸಾಲು. ಹೀಗೆ ಜೀವನದ ಪರಮ ಸತ್ಯಗಳನ್ನು ರಹಸ್ಯವಾಗಿ ತಮ್ಮೊಳಗಿಟ್ಟುಕೊಂಡು ರವಾನೆಯಾದ ಪತ್ರಗಳೆಷ್ಟೋ? ಅವು ಬೆಳಗಿದ ಹಣತೆಗಳೆಷ್ಟೋ? ಹೊತ್ತಿಸಿದ ಬಂಡಾಯದ ಕಿಚ್ಚುಗಳೆಷ್ಟೋ? ಮನುಷ್ಯ ಹೊಸ ಹೊಸ ದಾಸ್ಯಗಳಿಗೆ ಒಳಗಾಗುತ್ತಲೇ ಇರುವ ಈ ಸಮಯದಲ್ಲಿ ಆ ಓಲೆಗಳೇನಾದರೂ ಓದಲು ಸಿಕ್ಕಿದ್ದರೆ ನಮ್ಮ ಎಷ್ಟೆಲ್ಲ ಪ್ರಶ್ನೆಗಳಿಗೆ ಉತ್ತರಗಳು ಸಿಕ್ಕಿ ಬಿಡುತ್ತಿದ್ದವೋ?

*****

ಪತ್ರಗಳಿಗೆ ಮನುಷ್ಯನ ನಾಗರೀಕತೆಯ ಅರ್ಧದಷ್ಟಾದರೂ ಉದ್ದದ ಇತಿಹಾಸವಿದೆ. ಅರಸರುಗಳ ಕಾಲದಲ್ಲಂತೂ ಪತ್ರಗಳು ಆಜ್ಞೆಗಳನ್ನು ಹೊತ್ತುಕೊಂಡು ಅರಮನೆಯಿಂದ ಬಟಾವಡೆಯಾಗುತ್ತಲೇ ಇದ್ದವು. ಅವು “ಮಹಾರಾಣಿಯವರು ಮಗುವಿಗೆ ಜನ್ಮ‌ ನೀಡಿದ್ದಾರೆ” ಎಂಬ ಶುಭ ವಾರ್ತೆಯಾಗಿರಬಹುದು. “ಅರಸರು ಸುಂಕವನ್ನು ಏರಿಸಿದ್ದಾರೆ” ಎಂಬ ಕಹಿ ಸುದ್ದಿಯೂ ಆಗಿರಬಹುದು. ಸುತ್ತೋಲೆಯೆಂದು ಕರೆಯಲ್ಪಡುವ ಈ ಪತ್ರಗಳ ಕೆಳಗೆ ಒತ್ತಲ್ಪಟ್ಟ ರಾಜ ಮುದ್ರೆಗೆ ಅದೆಂಥಾ ಬೆಲೆಯಿತ್ತೆಂದರೆ ಅವು ಖುದ್ದು ರಾಜನ ಬಾಯಿಂದ ಬಂದ ಮಾತೇ ಆಗಿರುತ್ತಿದ್ದವು. ಈಗಲೂ ಸರ್ಕಾರಗಳ ಅದೇಶಗಳೆಲ್ಲ ಹೀಗೆ ಮೊಹರು ಹಾಗೂ ಸಹಿ ಬಿದ್ದ ಸುತ್ತೋಲೆಗಳ ಮೂಲಕವೇ ಜನರಿಗೆ ರವಾನೆಯಾಗುತ್ತವೆ.

ಪೌರಾಣಿಕ ಅಥವಾ ನೀತಿ ಕಥೆಗಳಲ್ಲಿ ಒಬ್ಬ ವ್ಯಕ್ತಿಯ ಕೈಗೆ ಪತ್ರ ಕೊಟ್ಟು ಇನ್ಯಾರದೋ ಬಳಿಗೆ ಕಳುಹಿಸುವ ದೃಷ್ಟಾಂತಗಳನ್ನು ನಾವು ಓದಿದ್ದೇವೆ. ಒಮ್ಮೊಮ್ಮೆ ಅವು “ಈ ಪತ್ರ ತರುವವನು ಒಬ್ಬ ಒಳ್ಳೆಯ ವ್ಯಕ್ತಿಯಾಗಿದ್ದು ಅವನಿಗೆ ನಿನ್ನ ಮಗಳನ್ನು ಕೊಟ್ಟು ಮದುವೆ ಮಾಡು” ಎಂದು ತಮ್ಮ ಆಪ್ತರ್ಯಾರಿಗೋ ಬರೆದ ಪತ್ರಗಳೂ ಆಗಿರುತ್ತಿದ್ದವು. ಅಂತೆಯೇ ಮದುವೆಗಳೂ ನಡೆಯುತ್ತಿದ್ದವು! ಇನ್ನು ಕೆಲವು ಸಲ “ಈ ಪತ್ರ ತರುತ್ತಿರುವವನು ಓರ್ವ ದುಷ್ಟ. ಅವನನ್ನು ಬಂಧಿಸು/ಗಲ್ಲಿಗೆ ಹಾಕು” ಎಂಬ ಸಂದೇಶಗಳೂ ಇದ್ದದ್ದುಂಟು ಹಾಗೂ ಅಂತೆಯೇ ಪತ್ರಗಾರನನ್ನು ಬಂಧಿಸಿದ್ದೂ ಉಂಟು! ತನ್ನ ಬಂಧನ/ಮರಣ ದಂಡನೆಯ ಆದೇಶವನ್ನು ತಾನೇ ಹೊತ್ತು ತಲುಪಿಸುವ ದುರಾದೃಷ್ಟ ಈ ಪತ್ರಗಾರರದ್ದು.

ಕಥೆಗಳಲ್ಲಿ ಬರುವ, ಒಂದು ಮಟ್ಟಕ್ಕೆ ಸತ್ಯವೂ ಆಗಿರುವ ಇನ್ನೊಂದು ಉಲ್ಲೇಖವೆಂದರೆ ಪಾರಿವಾಳಗಳದ್ದು. ಪಾರಿವಾಳದ ಕಾಲಿಗೆ ಪತ್ರ ಕಟ್ಟಿ ಹಾರಿ ಬಿಟ್ಟರೆ ಅವು ಊರು, ಕಾಡು, ನದಿಗಳನ್ನೆಲ್ಲ ದಾಟಿ ತಲುಪಿಸಬೇಕಾದವರಿಗೆ ತಲುಪಿಸಿ ಬಿಡುತ್ತಿದ್ದವು! ಎಷ್ಟೋ ರಾಜರು, ಯುವರಾಣಿಯರು, ಪ್ರಿಯತಮೆ-ಪ್ರಿಯಕರರು ಹೀಗೆ ತಮ್ಮ ಪತ್ರದ ರವಾನೆಗಾಗಿ ಪಾರಿವಾಳವೆಂಬ ಉಚಿತ ಪತ್ರಗಾರನನ್ನು ಬಳಸಿಕೊಂಡ ಕಥೆಗಳು ನಮ್ಮ ನಡುವೆ ಹೇರಳವಾಗಿವೆ. ಗೂಗಲ್ ಮ್ಯಾಪುಗಳಿದ್ದರೂ, ಏರಿಯಾ, ಅಡ್ಡರಸ್ತೆ, ಲ್ಯಾಂಡ್ ಮಾರ್ಕ್ ಎಂದೆಲ್ಲ ನೆನಪಿಟ್ಟುಕೊಳ್ಳುವ ಸಾಮರ್ಥ್ಯವಿದ್ದರೂ ಮನುಷ್ಯರೇ ಆಗಾಗ ದಾರಿ ತಪ್ಪುವಾಗ ನಾಲ್ಕಾಣೆ ಸಂಬಳವನ್ನೂ ಪಡೆಯದ ಪಾರಿವಾಳಗಳು ಏಕೆ ಹಾಗೂ ಹೇಗೆ ವಿಳಾಸ ಹುಡುಕುತ್ತಿದ್ದವು ಎಂದು ಅಚ್ಚರಿಯಾಗುತ್ತದೆ. ಕೊಂಚ ಕೆದಕಿ ನೋಡಿದರೆ ಹೀಗೆ ಪಾರಿವಾಳಗಳ ಮುಖಾಂತರ ಸುದ್ದಿ ಕಳುಹಿಸಿದ ನಿದರ್ಶನಗಳು ಇತಿಹಾಸದ ಘಟನೆಗಳಿಂದ ಹಿಡಿದು ಮಹಾಯುದ್ಧದ ತನಕವೂ ಸಿಗುತ್ತವೆ. ಆದರೆ ಪಾರಿವಾಳಗಳು ಇನ್ನುಳಿದ ಪಕ್ಷಿಗಳ ಬಳಿ ವಿಳಾಸ ಕೇಳಿಕೊಂಡೋ, ಇಲ್ಲಾ ‘ರಾಜ ಚಂದ್ರ ಸೇನ, ಅರಮನೆ ಬೀದಿ, ಮೂರನೇ ಮುಖ್ಯ ರಸ್ತೆ, ಶಿವಪುರ’ ಎಂದು ತಾವೇ ಗುರುತು ಹಿಡಿದುಕೊಂಡೋ ಹೋಗುತ್ತಿರಲಿಲ್ಲ. ಬದಲಿಗೆ ಒಬ್ಬ ವ್ಯಕ್ತಿಯು ಮೊದಲಿನಿಂದ ಸಾಕಿದ ಪಾರಿವಾಳವೊಂದನ್ನು ಇನ್ನೊಬ್ಬನಿಗೆ ಕೊಟ್ಟರೆ ಅವನು ಅದನ್ನು ತನ್ನ ಜಾಗಕ್ಕೆ ಒಯ್ದು ಪಂಜರದಲ್ಲಿಟ್ಟುಕೊಳ್ಳುತ್ತಿದ್ದ. ಸಮಯ ಬಂದಾಗ ಅದರ ಕಾಲಿಗೆ ಚಿಕ್ಕ ಪತ್ರ ಕಟ್ಟಿ ಬಿಡುತ್ತಿದ್ದ. ಹುಟ್ಟಿ ಬೆಳೆದ ಜಾಗದ ಗುರುತಿರುವ ಪಾರಿವಾಳ ಅಲ್ಲಿಂದ ನೇರ ತನ್ನನ್ನು ಸಾಕಿದವನ ಬಳಿಗೆ ಬರುತ್ತಿತ್ತಂತೆ. ಆಗಿನ ಕಾಲದಲ್ಲೇ ಹೀಗೆ ಪಾರಿವಾಳಗಳ ಸ್ವಭಾವವನ್ನು ಅರ್ಥ ಮಾಡಿಕೊಂಡು, ಅವುಗಳನ್ನು ಉಚಿತವಾಗಿ ಪತ್ರ ರವಾನೆಗೆ ಬಳಸುತ್ತಿದ್ದುದನ್ನು ನೋಡಿದರೆ ಮುಂದೆ ಪೋರ್ಟರ್ ನಂಥಾ ಚಿಕ್ಕ ಸರಕು, ಲಕೋಟೆಗಳನ್ನು ಸಾಗಿಸುವ ಕಂಪನಿಗಳು ಈಗಾಗಲೇ ಸರ್ಕಸ್‌ಗಳಲ್ಲಿ ಸೈಕಲ್ ಹೊಡೆಯುವುದನ್ನು ಕಲಿತಿರುವ ಕರಡಿ, ಕೋತಿಗಳಿಗೆ ಮತ್ತಷ್ಟು ತರಬೇತಿ ನೀಡಿ, ನಮ್ಮ ಪತ್ರ-ಪಾರ್ಸೆಲ್‌ಗಳನ್ನು ಸಾಗಿಸಲು ಉಚಿತವಾಗಿ ಬಳಸಿದರೂ ಅಚ್ಚರಿಯಿಲ್ಲ ಅನಿಸುತ್ತದೆ. ಮುಂದೊಮ್ಮೆ ನಾವು ರವಾನೆಗೆಂದು ಮೊಬೈಲಿನಲ್ಲಿ ಬುಕ್ ಮಾಡಿದರೆ ಕರಡಿಯೋ, ಚಿಂಪಾಂಜಿಯೋ ಮೋಟಾರ್ ಸೈಕಲ್‌ನಲ್ಲಿ ಬಂದು ಬಾಗಿಲು ತಟ್ಟಿದರೂ ತಟ್ಟಬಹುದು!

ಇವೆಲ್ಲ ಬಟಾವಡೆಯಾದ ಪತ್ರಗಳ ವಿಷಯವಾಯಿತು. ಆದರೆ ಅಂಚೆಗೇ ಹಾಕದ ಪತ್ರಗಳ ಕಥೆಯೇನು? ಮುಜುಗರದಿಂದಲೋ, ಭಯದಿಂದಲೋ, ಬದುಕಿನ ಇನ್ಯಾವ ಅನಿವಾರ್ಯತೆಯಿಂದಲೋ ‘ಇವರಿಗೆ’ ಎಂಬ ಕಾಲಂನಲ್ಲಿರುವವರನ್ನು ತಲುಪದೆ ಬರೆದವರ ಬಳಿಯೇ ಉಳಿದು, ಅಲ್ಲೇ ಮಾಸಿ ಹೋದ ಅವುಗಳಲ್ಲಿನ ಪದಗಳ ವ್ಯಥೆಯೇನು? ಹೇಳಿದವರ ಬಳಿಯೇ ಉಳಿದು ಹೋದ ಮಾತಿನಲ್ಲಿ ಅದೆಷ್ಟು ಕಂಪನಗಳೋ? ದುರ್ಘಟನೆಗೀಡಾದ ವ್ಯಕ್ತಿಯೊಬ್ಬ ಅಚಾನಕ್ಕಾಗಿ ಇಲ್ಲವಾಗುತ್ತಾನೆ. ಆದರೂ ಅವರ ಮನೆಯೆದುರಿನ ಅಂಚೆ ಡಬ್ಬಿಗೆ ಪತ್ರಗಳು ಬಂದು ಬೀಳುತ್ತಲೇ ಇರುತ್ತವೆ. ಪತ್ರದ ಮೂಲಕವಷ್ಟೇ ಪರಿಚಯವಿದ್ದ ಈ ಅತ್ಯಾಪ್ತ ಜೀವಕ್ಕೆ ಇನ್ನೆಲ್ಲೋ ಕುಳಿತ ಇನ್ನೊಂದು ಜೀವ ಓಲೆ ಕಳುಹಿಸುತ್ತ ಉತ್ತರಕ್ಕೆ ಕಾಯುತ್ತಲೇ ಇರುತ್ತದೆ. ಇವನಿಗಷ್ಟೇ ಎಂಬಂತೆ ಅವಳು ಬರೆದು ಕಳುಹಿಸಿದ ಆ ಹೃದಯದ ಪಿಸುಮಾತುಗಳೆಲ್ಲ ಯಾರೂ ತೆರೆಯದ ಅಂಚೆ ಡಬ್ಬಿಯೊಳಗೆ ಮೌನವಾಗಿ ಕುಳಿತು ತೆರೆಯ ಬರುವ ಕರದ ನಿರೀಕ್ಷೆಯಲ್ಲಿ ಮಾಸಲಾಗುತ್ತವೆ. ಮಣ್ಣಾಗುತ್ತವೆ.

ಪತ್ರವೆಂದರೆ ಏನಲ್ಲ. ಪತ್ರದೊಳಗೆ ಏನೆಲ್ಲ‌‌…

*****

ಜೀವದ ಸಂದೇಶಗಳನ್ನೇ ಉಸಿರಾಡುತ್ತಿದ್ದ ಪತ್ರಗಳನ್ನು ಬಿಟ್ಟು ಜಗತ್ತು ಮುಂದೆ ಬಂದಿದೆ. ಜಂಗಮವಾಣಿಗಳು, ಮಿಂಚಂಚೆಗಳು, ಸೋಶಿಯಲ್ ಮೀಡಿಯಾಗಳು ಬಂದ ಮೇಲೆ ಪತ್ರ ಬರೆಯುವವರು ಇಲ್ಲವಾಗಿದ್ದಾರೆ. ಬೇಕೆಂದೊಡನೆ ತೆರೆದು ಬರೆಯಬಹುದಾದ, ತಕ್ಷಣಕ್ಕೆ ಬೇಕಾದವರನ್ನು ತಲುಪಿ ಅವರ ಉತ್ತರವನ್ನೂ ಹೊತ್ತು ತರುವ, ಯಾರ ಜೊತೆಗಾದರೂ ಅವರು ಎದುರೇ ಇರುವಷ್ಟು ಸಲೀಸಾಗಿ ಸಂಭಾಷಿಸಬಹುದಾದ ಈ ಆಧುನಿಕ ಕಾಲದಲ್ಲಿ ಪ್ರಿಯತಮೆಯಿಂದ ಪ್ರಿಯಕರನಿಗೆ ರವಾನೆಯಾಗುತ್ತಿರುವ ಪತ್ರವೆಂದರೆ ಅದು ಡೈವೋರ್ಸ್ ನೋಟೀಸೊಂದೇ. ಏಕಾಂತವನ್ನು ಹುಡುಕಿ, ನದಿಯ ದಂಡೆಯಲ್ಲೆಲ್ಲೋ ಕುಳಿತು ಬರೆದು, ಗುಟ್ಟಾಗಿ ಹೋಗಿ ಅಂಚೆಗೆ ಹಾಕಿ, ತವಕಿಸಿ ಕಾದು, ಉತ್ತರ ಬಂದಾಗ ಮತ್ತದೇ ದಂಡೆಯಲ್ಲಿ ನದಿಗೆ ಕಾಲು ಚಾಚಿಕೊಂಡು ಪತ್ರ ಓದುತ್ತಿದ್ದ ಹೊತ್ತಿನಲ್ಲಿ ಸಂಬಂಧಗಳು ಎಷ್ಟೊಂದು ಗಾಢವಾಗಿದ್ದವಲ್ಲವೇ ಎನಿಸುತ್ತದೆ. ಸುಲಭಕ್ಕೆ ಕಳುಹಿಸುವ, ತಲುಪುವ ಸಂದೇಶಗಳು ಕಾಡಿ, ಕಾದು ಪಡೆದ ಓಲೆಯಷ್ಟು ಆಳವಾದಾವು ಹೇಗೆ?

ಆದರೇನು ಮಾಡುವುದು? ಕಾಲದ ಹರಿವಿನಲ್ಲಿ ಯಾವುದೂ ಶಾಶ್ವತವಲ್ಲ. ಕೋಟಿ ಹೃದಯಗಳ ಉಸಿರನ್ನು ದಾಖಲಿಸಿಕೊಳ್ಳುತ್ತಿದ್ದ ಪತ್ರಗಳೆಲ್ಲ ಇದ್ದಕ್ಕಿದ್ದಂತೆ ಯಾರೋ ‘ಇಂದ’ ಕಾಲಮ್ಮನ್ನು ತುಂಬದೆಯೇ ಅಂಚೆಗೆ ಹಾಕಿದರೇನೋ ಎಂಬಂತೆ ಯಾರಿಗೂ ಬಟಾವಡೆಯಾಗದೇ ಹೋದವು. ಅಂಚೆ ಮಾಮನೀಗ ಶಾಲೆಗೆ ಬರುತ್ತಿಲ್ಲ. ಬಂದರೂ ಮಕ್ಕಳು ಅವನನ್ನು ಸುತ್ತುವರಿಯುತ್ತಿಲ್ಲ. ಹಾರುವ ಪಾರಿವಾಳಗಳ ಕಾಲಲ್ಲೂ ಕಟ್ಟಿದ ಓಲೆಯಿಲ್ಲ. ಕೈಯಲ್ಲಿರುವ ಮೊಬೈಲಿನಲ್ಲಿ ಹತ್ತಾರು ನಂಬರುಗಳು. ಇನ್ ಬಾಕ್ಸಿನಲ್ಲಿ ಒಮ್ಮೆ ಎಲ್ಲವೂ  ಆಪ್ತವೆನಿಸುವ, ಇನ್ನೊಮ್ಮೆ ಯಾವುದೂ ನಮ್ಮದೆನಿಸದ ನೂರಾರು ಮೆಸೇಜುಗಳು‌. ಕರೆ ಮಾಡಿದರೂ ರಿಂಗಣಿಸದ ಬ್ಲಾಕ್ ಲಿಸ್ಟುಗಳು.

ಕೋಟಿ ಮಿಡಿತಗಳಿಂದ ತುಂಬಿ ತುಳುಕುತ್ತಿದ್ದ ಡಬ್ಬಿಯ ಪತ್ರಗಳನ್ನೆಲ್ಲ ಕಾಲರಾಯ ಕದ್ದೊಯ್ದು ಅಂಚೆಯೀಗ ಖಾಲಿ ಖಾಲಿ.

About The Author

ವಿನಾಯಕ ಅರಳಸುರಳಿ

ವಿನಾಯಕ ಅರಳಸುರಳಿ ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲೋಕಿನ ಅರಳಸುರಳಿ ಗ್ರಾಮದವರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಬಿಕಾಂ ಪದವಿ ಪಡೆದಿದ್ದು ಪ್ರಸ್ತುತ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಅಕೌಂಟ್ಸ್ ಹುದ್ದೆ ನಿರ್ವಹಿಸುತ್ತಿದ್ದಾರೆ. ಸಣ್ಣ ಕಥೆ, ಲಲಿತ ಪ್ರಬಂಧ ಹಾಗೂ ಕವಿತೆಗಳನ್ನು ಬರೆದಿದ್ದು ‘ನವಿಲುಗರಿ ಮರಿ ಹಾಕಿದೆ' ಹೆಸರಿನ ಲಲಿತ ಪ್ರಬಂಧ ಸಂಕಲನ ಹಾಗೂ 'ಮರ ಹತ್ತದ ಮೀನು' ಕಥಾ ಸಂಕಲನಗಳು ಪ್ರಕಟವಾಗಿವೆ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ