Advertisement
ರಮ್ಯಾ ಶ್ರೀಹರಿ ಬರೆದ ಈ ದಿನದ ಕವಿತೆ

ರಮ್ಯಾ ಶ್ರೀಹರಿ ಬರೆದ ಈ ದಿನದ ಕವಿತೆ

ಕಣ್ಣೀರಿಗಷ್ಟೇ ಅರಳುವ ಹೂಗಳು

ಬೀದಿ ದೀಪಗಳಿರದೆ ಕಂಗೆಟ್ಟ ಕಡುಗತ್ತಲಿನಲ್ಲಿ
ಕಾಮನಬಿಲ್ಲಿನ ಸೀರೆಯನ್ನುಟ್ಟು
ನಡೆಯುವ ಈ ದೇಹದ ಮೇಲೆ
ಬಂದೆರಗುವಂತೆ ಹಾದು ಹೋದ ಕರಿನೆರಳು
ಯಾವ ರಣಹದ್ದಿನದೂ ಅಲ್ಲ, ರಾಕ್ಷಸನದೂ ಅಲ್ಲ.
ಹಾಗೊಂದು ನೆರಳು ಬರೀ ಕತ್ತಲಿನ,
ಕತ್ತಲ ಲೋಕದ್ದೇ ವಿಶಿಷ್ಟ ಸೃಷ್ಟಿ,
ಒಳಲೋಕದ್ದೇ ಶ್ವಾಸ, ಚಲನೆ, ಪ್ರತಿಮೆ.
ಮಡಿಸಿಟ್ಟ ಸೀರೆಯ ಒಳಪದರಗಳಲ್ಲಿ
ಅಂಟಿಕೊಂಡುಳಿದ ದೀಪದೆಣ್ಣೆಯ ಕಮಟು ವಾಸನೆ, ಕಲೆ.

‘ಹಳೆ ಭಯಗಳು ಹೊಸರೂಪಗಳಾಗಿ ಮಾರ್ಪಾಡಾಗುವ ಸಹಜ ಪ್ರಕ್ರಿಯೆ’
ಹಾಗೆಂದು ಹೆಸರಿಸಿದ ಕೂಡಲೇ
ಮಾಯವಾಗಿ ಬಿಡುವಂಥದ್ದು ಎಂದು
ತಿಳಿದುಕೊಂಡೆವಾದರೆ ಬೇಸ್ತು ಬಿದ್ದೇವು.

ಅನುಭವವೊಂದು ಪದಗಳ ಕುಂಬಾರಿಕೆಯಿಲ್ಲದೆ
ಒಳಗಿರುವ ತಳವಿರುವ ಪಾತ್ರವಾಗುವುದಿಲ್ಲ, ನಿಜ
ಖಾಲಿ ಮಣ್ಣಿನ ಪಾತ್ರೆ ಬಾಯಾರಿಕೆ ಹಿಂಗಿಸುವುದಿಲ್ಲ
ಹಾಗೊಂದು ಖಾಲಿ ಮಡಿಕೆಯನ್ನು
ಇರುಳು ಕಂಡ ಬಾವಿಯಲ್ಲಿಳಿಸಿದರೆ
ಬರೀ ಪದವೇ! ಸಾಲುಗಳೇ!
ಪುಟಗಟ್ಟಲೆ ತುಂಬಿಸಿಕೊಳ್ಳುವಷ್ಟು ಮಾತಿನ ನೀರೊ ನೀರು!
ಕನ್ನಡಿಯೊಳಗಿನ ಗಂಟು, ಬಿಸಿಲ್ಗುದುರೆ.

ಹುಟ್ಟುತ್ತಲೇ ಹೀಗೆ ಬೆನ್ನಿಗೆ, ಕರುಳಿಗೆ, ನಾಭಿಗೆ, ಕಣ್ಣಿಗೆ
ಗರ್ಭದ ಪೊರಯಂತೆ ಸುತ್ತಿದ,
ಜೇಡರ ಹುಳುವಿನ ಬೇಟೆಯನ್ನು
ಸುಳಿಗೆ ಸಿಲುಕಿಸಿದ ನೂಲಿನಂಥ
ಸ್ಥೂಲ ಸೂಕ್ಷ್ಮದ ಈ ಯಮಲೋಕದ ಪಾಶ
ಕಳೆದುಹೋಗುವುದಿಲ್ಲ ಹಾಗೆ
ಕನ್ನಡಿಯ ಮೇಲಿನ ಧೂಳಿನಂತೆ.

ನಮ್ಮ ನಮ್ಮ ಪಾಲಿನ ಕತ್ತಲ ಈ ಹಾಳೆಯನ್ನು
ಬಣ್ಣದೆಣ್ಣೆಯಲ್ಲಿ ನೆನೆಹಾಕಿ, ಕಲೆಸಿ, ಜಾಲಾಡಿ
ಜಾಲಿಸೌಟಿನಲ್ಲಿ ಸೋಸಿ ತೆಗೆಯುವ ಪಾಕ
ಒಬ್ಬೊಬ್ಬರದು ಒಂದೊಂದು ಬಗೆ
ಬಗೆದು ತೆಗೆದು, ಒಗೆದು ಬಿಸಿಲಿಗೆ ಒಣಹಾಕಿ ತೆಗೆದ
ಎಲ್ಲರ ಕರಿನೆರಳಿನ ಅರಿವೆಯೂ
ಆದಿ ಅಂತ್ಯವಿರದ ಅವಿಚ್ಛಿನ್ನ ಕತ್ತಲ ಆಕಾಶ
ಒಮ್ಮೊಮ್ಮೆಯಷ್ಟೇ ಭೂಮಿಯ ಕಡೆ ಬಂದಪ್ಪಳಿಸುವ
ಅನುಗ್ರಹದ ಅಕ್ಷತೆಕಾಳಿನಂತೆ
ಧಾರೆಯಾಗಿ ಹರಿಯುವ
ಕಣ್ಣೇರಿಗಷ್ಟೇ ಅರಳುವ ಪುಟ್ಟ ಪುಟ್ಟ ಬಿಳಿ ಹಳದಿ ಹೂಗಳು
ರಸ್ತೆ ತಿರುವಿನ ಮೂಲೆಯಲ್ಲಿ ಕಂಡು……
ಅಂತರಪಿಶಾಚಿಯಂತೆ ಅಲೆದು
ಹಲವರ ಮೇಲೆರಗುವ ಕರಿನೆರಳಿಗೂ
ತಂಪು ಆಸರೆ, ಮುಕ್ತಿ.

 ರಮ್ಯಾ ಶ್ರೀಹರಿ ತತ್ತ್ವಶಾಸ್ತ್ರದಲ್ಲಿ ಎಂ.ಎ ಮಾಡಿದ್ದಾರೆ. 
ಮನಃಶಾಸ್ತ್ರ ಮತ್ತು ತತ್ತ್ವಶಾಸ್ತ್ರದ ಕುರಿತು ಕನ್ನಡದಲ್ಲಿ ಸರಳ ಲೇಖನಗಳನ್ನು ಬರೆಯುತ್ತಾರೆ.
 ‘ಅನಿಶ್ಚಿತತೆಯಿಂದ ಆನಂದದೆಡೆಗೆ’ ಇವರ ಪ್ರಕಟಿತ ಕೃತಿ  

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ನಿಮ್ಮೂರಿಗೆ ಮಾನ್ಸೂನ್....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ