ಬಿದ್ದ ಗಾಯ ವಾಸಿಯಾದರೂ ಗಾಯದ ನೋವು ಮಾತ್ರ ಕಡಿಮೆಯಾಗಲಿಲ್ಲ. ನಾನು ಹಲವು ವೈದ್ಯರ ಹತ್ತಿರ ತೋರಿಸಿದರೂ ಕೂಡ ಅವರು ‘ಏನೂ ಸಮಸ್ಯೆ ಇಲ್ಲ’ ಎಂದು ಹೇಳುತ್ತಿದ್ದರು, ಆದರೆ ರಾತ್ರಿ ಮಲಗಿದಾಗ ಮಾತ್ರ ವಿಪರೀತ ಕಾಲು ಸೆಳೆತ, ಕಾಲು ನೋವು ಆಗುತ್ತಿತ್ತು. ಆಗ ನನಗೆ ಮನಸ್ಸಿನಲ್ಲಿ “ಇದು ದೇವರ ಶಾಪವಿರಬಹುದೋ ಏನೋ?” ಅಂದುಕೊಂಡು ದೇವರ ಕುರಿತು “ಅಮ್ಮಾ ನನ್ನಿಂದ ತಪ್ಪಾಗಿದ್ದರೆ ಕ್ಷಮಿಸು, ನಾನು ಊರಿಗೆ ಬಂದು ದರ್ಶನ ಮಾಡುತ್ತೇನೆ” ಎಂದು ಹೇಳಿಕೊಂಡೆ. ಏನಾಶ್ಚರ್ಯ!! ಅಂದರೆ ಮಾರನೇ ದಿನದಿಂದ ನನ್ನ ನೋವೆಲ್ಲಾ ಕಮ್ಮಿಯಾಯಿತು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಅರವತ್ನಾಲ್ಕನೆಯ ಕಂತು ನಿಮ್ಮ ಓದಿಗೆ
ನಮ್ಮೂರ ದೇವತೆ ಮಾರಮ್ಮನ ಜಾತ್ರೆ 2 ವರ್ಷಕ್ಕೊಮ್ಮೆ ಬರುತ್ತದೆ. ಈ ದೇವಿಯ ದೇವಸ್ಥಾನ ಊರಲ್ಲಿಲ್ಲ. ಬದಲಾಗಿ ಊರ ಹೊರಗೆ ಒಂದು ಹೊಲವೊಂದರಲ್ಲಿ ದೇವಿಯನ್ನು ಜಾತ್ರೆ ಮುಗಿದ ತರುವಾಯ ಇಟ್ಟು ಬರಲಾಗುತ್ತದೆ. ಈ ಸಂಪ್ರದಾಯ ಬಹು ಹಿಂದಿನಿಂದಲೂ ಜಾರಿಯಲ್ಲಿದೆ.
ದೇವಿಯ ಜಾತ್ರೆಯಲ್ಲಿ ಊರ ಜನರೆಲ್ಲರೂ ಸೇರಿ ವಿಜೃಂಭಣೆಯಿಂದ ಆಚರಿಸುತ್ತಾರೆ. ಈ ಹಬ್ಬಕ್ಕೆ ಪರ ಊರಿನಲ್ಲಿ ಕೆಲಸ ಮಾಡುತ್ತಿರುವ ಊರಿನ ಜನರೆಲ್ಲರೂ ಆಗಮಿಸುತ್ತಾರೆ. ಒಮ್ಮೆ ಜಾತ್ರೆಗೆ ಬಂದ ಮೇಲೆ ಜಾತ್ರೆ ಮುಗಿಯುವವರೆಗೂ ಊರನ್ನು ಬಿಟ್ಟು ಹೋಗುವಂತಿಲ್ಲ. ಜಾತ್ರೆ ಮುಗಿಸಿಯೇ ಹೋಗಬೇಕು ಎಂಬ ನಿಯಮ ಇದೆ. ಮಧ್ಯದಲ್ಲಿ ಹೋದರೆ ತೊಂದರೆ ಆಗುತ್ತದೆ ಎಂಬ ನಂಬಿಕೆ ಇದೆ. ದೇವರ ಭಯದಿಂದಾಗಿ ಇದನ್ನು ಯಾರೂ ಪ್ರಶ್ನಿಸುತ್ತಿರಲಿಲ್ಲ, ಬದಲಾಗಿ ಹಬ್ಬ ಮುಗಿಸಿಕೊಂಡೇ ಹೋಗುತ್ತಿದ್ದರು. ಜಾತ್ರೆಯಲ್ಲಿ ದೇವಿಯ ಮೂರ್ತಿಯನ್ನು ಮಣ್ಣು ಮತ್ತು ಮರದ ತುಂಡುಗಳ ಸಹಾಯದಿಂದ ಮಾಡುತ್ತಾರೆ. ಕುರಿ ಕೋಳಿ ಬಲಿಯ ಜೊತೆಗೆ ಇಲ್ಲಿ ನಡೆಯುವ ಆಚರಣೆಗಳು ತುಂಬಾ ವಿಭಿನ್ನವಾಗಿರುತ್ತವೆ.
ದೇವಿಯ ಜಾತ್ರೆಯ ಪ್ರಾರಂಭದಲ್ಲಿ ಊರಿನ ಗಡಿಯನ್ನು ಗುರುತಿಸಿ ನಂತರ ಬೇಲಿಯನ್ನು ಹಾಕುತ್ತಾರೆ. ಒಮ್ಮೆ ಊರ ಒಳಗೆ ಬಂದರೆ ಜಾತ್ರೆ ಮುಗಿಸುವ ತನಕ ಊರು ಬಿಟ್ಟು ಹೋಗುವಂತಿಲ್ಲ ಎಂದು ತಮಟೆ ಬಾರಿಸುವವನ ಮೂಲಕ ಊರ ತುಂಬಾ ಸಾರಿಸುತ್ತಾರೆ. ಜಾತ್ರೆ ಮುಗಿದ ನಂತರ ಅದ್ಧೂರಿ ಮೆರವಣಿಗೆಯೊಂದಿಗೆ ದೇವಿಯ ಮೂರ್ತಿಯನ್ನು ಮೊದಲು ಇದ್ದ ಜಾಗದಲ್ಲಿಯೇ ಇಟ್ಟು ಬರುತ್ತಾರೆ. ದೇವಿಯ ದೇಗುಲ ಕಟ್ಟಿಸಲು ಪ್ರಸಾದ ಕೇಳಿದರೆ ದೇವರು ಒಪ್ಪಲಿಲ್ಲವಂತೆ. ಈ ಕಾರಣ ಹಾಗೆಯೇ ಬಯಲು ಜಾಗದಲ್ಲಿ ಇಟ್ಟು ಬರುತ್ತಿದ್ದರು. ಈಗ ಮಾತ್ರ ಇದಕ್ಕೆಂದೇ ಕಟ್ಟೆ ಕಟ್ಟಿಸಿದ್ದಾರೆ. ಆದರೆ ದೇಗುಲ ಮಾತ್ರ ಇಲ್ಲ. ಇದು ‘ಗಡಿ ಮಾರಿ’ ಎಂದು ಕೆಲವರು ಹೇಳುತ್ತಾರೆ.
ನಾನು ಈ ದೇವರನ್ನು ಚಿಕ್ಕಂದಿನಿಂದ ತುಂಬಾ ನಂಬಿಕೊಂಡು ಬಂದಿದ್ದೇನೆ. ಆದರೆ ಮೊದಲು ಶಿಕ್ಷಕನಾಗಿ ನೇಮಕವಾದಾಗ ಈ ಹಬ್ಬಕ್ಕೆಂದು ಊರಿಗೆ ಬಂದು ಹಬ್ಬ ಮುಗಿಯುವ ತನಕ ಕಾಯದೇ ಮಧ್ಯದಲ್ಲೇ ವಾಪಸ್ ಹೋಗುತ್ತೇನೆಂದು ಮನೆಯಲ್ಲಿ ಹೇಳಿದೆ. ಆದರೆ ಮನೆಯಲ್ಲಿ ಒಪ್ಪಲಿಲ್ಲ. ಆಗ ನಾನು ಹಠ ಮಾಡಿ ‘ವಾಪಸ್ ಹೋಗಲೇ ಬೇಕು’ ಎಂದು ಬೈಕ್ ತೆಗೆದುಕೊಂಡು ಅನ್ಯ ಊರಿಗೆ ಹೋಗುವಾಗ ನಾನು ಬೈಕಿನಿಂದ ಬಿದ್ದು ನನಗೆ ಚಿಕ್ಕ ಪುಟ್ಟ ಗಾಯಗಳಾದವು. ವಾಪಸ್ ಮನೆಗೆ ಬಂದಾಗ ನನ್ನಮ್ಮ ‘ನೋಡು ದೇವಿಯ ಶಾಪ: ವಾಪಸ್ ಹೋಗಬೇಡ’ ಎಂದರು. ಆದರೆ ನಾನು ಅವರ ಮಾತನ್ನು ಮೀರಿ ಚಿಕ್ಕಬಳ್ಳಾಪುರಕ್ಕೆ ಹೋದೆ.
ನಾನು ವಾಪಾಸ್ ಹೋಗುವಷ್ಟರಲ್ಲಿ ನಮ್ಮ ಶಾಲೆಗೆ ಒಬ್ಬ ಅಧಿಕಾರಿ ಶಾಲೆಗೆ ಭೇಟಿ ನೀಡಿದ್ದರು. ನನ್ನ ಮೇಲೆ ಕಿಡಿ ಕಾರುತ್ತಿದ್ದ ನಮ್ಮ ಹೆಡ್ ಮೇಡಂ ರವರು ಈ ಸಮಯ ಬಳಸಿ ನನ್ನ ಮೇಲೆ ಇಲ್ಲ ಸಲ್ಲದ್ದನ್ನು ಅವರಿಗೆ ಹೇಳಿ ಕಳಿಸಿದ್ದರು. ನಾನು ವಾಪಸ್ ಹೋದಾಗ ಇತರೆ ಶಿಕ್ಷಕರು ಈ ಬಗ್ಗೆ ಹೇಳಿದಾಗ ನನಗೆ ತುಂಬಾ ಬೇಸರವಾಯಿತು. ಆದರೂ ಈ ಸಿಟ್ಟು ಬೇಸರವನ್ನು ಅವರ ಮುಂದೆ ತೋರ್ಪಡಿಸದೇ ನೇರವಾಗಿ ಕಚೇರಿಗೆ ಹೋಗಿ ಅಧಿಕಾರಿಗೆ ನನ್ನ ಸಮಸ್ಯೆಯ ಬಗ್ಗೆ ಹೇಳಿದೆ. ಅವರು ಆಗ ಸುಮ್ಮನಾದರು.

ಬಿದ್ದ ಗಾಯ ವಾಸಿಯಾದರೂ ಗಾಯದ ನೋವು ಮಾತ್ರ ಕಡಿಮೆಯಾಗಲಿಲ್ಲ. ನಾನು ಹಲವು ವೈದ್ಯರ ಹತ್ತಿರ ತೋರಿಸಿದರೂ ಕೂಡ ಅವರು ‘ಏನೂ ಸಮಸ್ಯೆ ಇಲ್ಲ’ ಎಂದು ಹೇಳುತ್ತಿದ್ದರು, ಆದರೆ ರಾತ್ರಿ ಮಲಗಿದಾಗ ಮಾತ್ರ ವಿಪರೀತ ಕಾಲು ಸೆಳೆತ, ಕಾಲು ನೋವು ಆಗುತ್ತಿತ್ತು. ಆಗ ನನಗೆ ಮನಸ್ಸಿನಲ್ಲಿ “ಇದು ದೇವರ ಶಾಪವಿರಬಹುದೋ ಏನೋ?” ಅಂದುಕೊಂಡು ದೇವರ ಕುರಿತು “ಅಮ್ಮಾ ನನ್ನಿಂದ ತಪ್ಪಾಗಿದ್ದರೆ ಕ್ಷಮಿಸು, ನಾನು ಊರಿಗೆ ಬಂದು ದರ್ಶನ ಮಾಡುತ್ತೇನೆ” ಎಂದು ಹೇಳಿಕೊಂಡೆ. ಏನಾಶ್ಚರ್ಯ!! ಅಂದರೆ ಮಾರನೇ ದಿನದಿಂದ ನನ್ನ ನೋವೆಲ್ಲಾ ಕಮ್ಮಿಯಾಯಿತು. ವಿಜ್ಞಾನ ಶಿಕ್ಷಕನಾದ ನನಗೆ ಇದರ ಬಗ್ಗೆ ಏನು ಹೇಳಬೇಕು ಅಂತಾನೇ ಗೊತ್ತಾಗಲಿಲ್ಲ. ಊರಿಗೆ ಹೋಗಿ ದೇವರಿಗೆ ಹಣ್ಣು ಕಾಯಿ ಅರ್ಪಿಸಿ ಪೂಜೆಗೈದು ವಾಪಸ್ ಬಂದೆ.
ದೇವರ ಕುರಿತು ನಾನು ಅನೇಕರ ಬಳಿ ನನ್ನ ಮಾಹಿತಿ ಹಂಚಿಕೊಂಡಿದ್ದೇನೆ. ದೇವರ ಇರುವಿಕೆಯ ಕುರಿತು ಬೇರೆ ಬೇರೆಯವರು ಬೇರೆ ಬೇರೆ ಅನಿಸಿಕೆ ಹೇಳಿದರೂ ಕೂಡ ನನ್ನ ಅನಿಸಿಕೆ ಯಾವತ್ತೂ ಬದಲಾಗಿಲ್ಲ. ಕೆಲವು ಸಲ ನನಗೂ ನಾಸ್ತಿಕತೆಯ ಬಗ್ಗೆ ಒಲವು ಮೂಡುತ್ತದೆ. ಆದರೆ ತತ್ ಕ್ಷಣದಲ್ಲಿ ಮತ್ತೆ ಆಸ್ತಿಕತೆಯ ಬಗ್ಗೆ ಮನಸ್ಸು ವಾಲುತ್ತದೆ. ನನ್ನ ಎಷ್ಟೋ ಗೆಳೆಯರು ದೇವರನ್ನು ನಂಬುವುದಿಲ್ಲ. ಆದರೆ ಅವರು ನನ್ನ ನಂಬಿಕೆಯ ಬಗ್ಗೆ ಎಂದೂ ಅವಹೇಳನ ಮಾಡಿಲ್ಲ.
‘ತೇನವಿನಾ ತೃಣಮಪಿ ನ ಚಲತಿ’ ದೇವರ ಅನುಮತಿ ಇಲ್ಲದೇ ಒಂದು ಹುಲ್ಲು ಕಡ್ಡಿಯೂ ಅಲುಗಾಡುವುದಿಲ್ಲ ಎಂಬ ಮಾತು ದೇವರ ಇರುವಿಕೆಯ ಬಗ್ಗೆ ಹೇಳುತ್ತದೆ. ಅನೇಕ ವಚನಕಾರರು ದೇವರ ಇರುವಿಕೆಯ ಬಗ್ಗೆ ತಿಳಿಸಿದರೆ, ಕೆಲವರು ದೇವರಿಗಿಂತ ‘ಕಾಯಕ’ ಮುಖ್ಯ, ಕಾಯಕದಿಂದಲೇ ದೇವರನ್ನು ಕಾಣಬಹುದು ಎಂದಿದ್ದಾರೆ. ಕೆಲವರಂತೂ “ಕಲ್ಲು ದೇವರು, ಮಣ್ಣು ದೇವರು ದೇವರಲ್ಲ” ಎಂದೂ ಹೇಳಿದ್ದಾರೆ. ಆದರೆ ಒಬ್ಬ ವ್ಯಕ್ತಿಯು ತನಗಾದ ಅನುಭವದ ಮೂಲಕ ದೇವರ ಬಗ್ಗೆ ನಂಬಿಕೆ ತಳೆದಿರುತ್ತಾರೆ ಅಥವಾ ನಂಬಿಕೆ ಬಿಟ್ಟಿರುತ್ತಾರೆ. ಇದು ಅವರವರ ನಂಬಿಕೆಯ ಪ್ರಶ್ನೆ ಎಂದು ತಿಳಿಯಬೇಕು. ನಂಬಿಕೆ ಅಪನಂಬಿಕೆಯ ಕುರಿತು ಯಾರೂ ಕೂಡ ಒತ್ತಾಯ ಮಾಡಬಾರದು ಎಂಬುದು ನನ್ನನಿಸಿಕೆ. ಅದೇ ರೀತಿ ನನ್ನ ದೇವರೇ ದೊಡ್ಡವರು, ಶ್ರೇಷ್ಠ. ಉಳಿದವೆಲ್ಲಾ ಕನಿಷ್ಟ ಎಂಬುದೂ ಅಪಾಯಕಾರಿ.

ಯಾವುದೇ ಮುಖ್ಯ ಹುದ್ದೆಯಲ್ಲಿರುವವರು ಅಥವಾ ಬಾಸ್ ಎನಿಸಿಕೊಂಡವನು ತಮ್ಮ ಕೆಳಗಿನ ವ್ಯಕ್ತಿಗಳಿಗೆ ಅಥವಾ ತಮ್ಮ ಅಧೀನ ಸಿಬ್ಬಂದಿಗಳಿಗೆ ಹಿತವಾಗುವಂತೆ ವರ್ತಿಸಬೇಕೇ ವಿನಃ ಬೇಕಂತಲೋ ತೊಂದರೆ ಕೊಡಬಾರದು. ಒಂದುವೇಳೆ ಅವರು ತಪ್ಪು ಮಾಡಿದರೆ ನೇರವಾಗಿ ಹೇಳಿ ತಪ್ಪು ತಿದ್ದಲಿ. ಇದನ್ನು ಬಿಟ್ಟು ಅದನ್ನೇ ಮನಸ್ಸಿನಲ್ಲಿಟ್ಟುಕೊಂಡು ತೊಂದರೆ ಕೊಡಲೆಂದು ಹೊರಟರೆ ಕೆಲಸ ಮಾಡುವ ಸ್ಥಳದಲ್ಲಿ ಶಾಂತಿ ಇರುವುದಿಲ್ಲ. ಈ ವಿಷಯದಲ್ಲಿ ಬಾಸ್ ಆದವರು ಸಮಚಿತ್ತತೆ, ಸಮಾನ ನ್ಯಾಯ, ಕೆಲಸ ಮಾಡಿಸಿಕೊಳ್ಳುವ ಉಪಾಯ ಮುಂತಾದ ಗುಣಗಳನ್ನು ಹೊಂದಿರಬೇಕು. ಉತ್ತಮ ಬಾಸ್ ಎನಿಸಿಕೊಳ್ಳಲು ಇವಿಷ್ಟೇ ಸಾಲದು. ಉತ್ತಮ ಬಾಸ್ ಹೇಗಿರಬೇಕು? ಹೇಗಿದ್ದರೆ ಜನರ ಹೃದಯ ಗೆಲ್ಲಬಹುದು ಎಂಬುದರ ಕುರಿತು ಬರೆಯುತ್ತಾ ಹೋದರೆ ಪುಟಗಳೇ ಸಾಲುವುದಿಲ್ಲ. ನಾಯಕತ್ವದ ಕುರಿತು ನಾವು ಮುಂದಿನ ಸಂಚಿಕೆಯಲ್ಲಿ ತಿಳಿಯೋಣ.

ಬಸವನಗೌಡ ಹೆಬ್ಬಳಗೆರೆ ಶಿವಮೊಗ್ಗದ ಸ.ಪ್ರೌ.ಶಾಲೆ, ಮಸಗಲ್ಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಬಂಧ, ಲೇಖನ, ಕವನ ಹಾಗೂ ಕಥೆ ಬರೆಯುವುದು ಹಾಗೂ ಓದುವುದು ಇವರ ಹವ್ಯಾಸಗಳು. “ಬೋಳಾಯಣ” ಇವರ ಪ್ರಕಟಿತ ಹನಿಗವನ ಸಂಕಲನ.

