ಹೀಗೆ ತೇಜಸ್ವಿ ಮನೆ ಕಟ್ಟುವಾಗ ಪ್ರೊಫೆಸರ್ ಬಂದಿದ್ದರು. ತೇಜಸ್ವಿ ಹಕ್ಕಿಗಳನ್ನು ವೀಕ್ಷಿಸಲು ಬೈನಾಕುಲರ್ ಇಟ್ಟುಕೊಂಡಿದ್ದರು. ಹೀಗೆ ಒಂದು ದಿನ ಕಾರಿನಲ್ಲಿ ಎಲ್ಲರೂ ಹೋಗುತ್ತಿದ್ದೆವು. ಪ್ರೊಫೆಸರ್ ಬೈನಾಕ್ಯೂಲರನ್ನು ತೇಜಸ್ವಿಯಿಂದ ಪಡೆದುಕೊಂಡು ಪಕ್ಷಿ ನೋಡುತ್ತೇನೆ ಎಂದು ಪಡೆದುಕೊಂಡರು. ಸಾಕಷ್ಟು ಏನೇನೋ ಮಾಡಿದರೂ ಹಕ್ಕಿಗಳು ಪ್ರೊಫೆಸರ್‌ಗೆ ಹತ್ತಿರದಿಂದ ಕಾಣಿಸಲಿಲ್ಲ. ಇದರಿಂದ ಬೇಸತ್ತ ಪ್ರೊಫೆಸರ್. ‘ಇದ್ರಲ್ಲಿ ಏನೂ ಕಾಣೋದೆ ಇಲ್ವಲ್ರಿ’ ಎಂದು ತೇಜಸ್ವಿ ಕೈಗೆ ಕೊಟ್ಟರು. ತೇಜಸ್ವಿ ತೆಗೆದುಕೊಂಡು ಒಮ್ಮ ಕಾರಿನಿಂದ ಆಚೆ ವೀಕ್ಷಿಸಿ ‘ರೀ ಪ್ರೊಫೆಸರ್ ನಿಮ್ಗೆ ತಿ.. ಕಡಿಯುತ್ತಾ..ʼ ಎಂದರು. ನನಗೋ ನಗು ತಡೆದುಕೊಳ್ಳಲಾಗಲಿಲ್ಲ.
ಕೆ.ಟಿ. ಶಿವಪ್ರಸಾದ್ ಹಾಗೂ ಪೂರ್ಣಚಂದ್ರ ತೇಜಸ್ವಿಯವರ ಒಡನಾಟದ ಕುರಿತ ನಾಗರಾಜ್ ಹೆತ್ತೂರು ಕೃತಿ “ಶಿವ ಮೇಡ್ ಬೈ ತೇಜಸ್ವಿ”ಯ ಆಯ್ದ ಭಾಗ
ಹೀಗೆ ಒಂದು ದಿನ ಮೂಡಿಗೆರೆಗೆ ಕರೆಸಿಕೊಂಡಿದ್ದ ತೇಜಸ್ವಿ ಇದ್ದಕ್ಕಿದ್ದಂತೆ ‘ಶಿವ ಮೀನು ಹಿಡಿಯಬೇಕು. ನೀನು ಹೆಮ್ಮಿಂಗ್ವೇ ಓದಿದ್ದೀಯಾ..? ಓಲ್ಡ್ ಮ್ಯಾನ್ ಇನ್ ದ ಸೀ ಥರಾ ಎಕ್ಸ್ಪೀರಿಯನ್ಸ್ ಮಾಡಬೇಕು ಏನಂತೀಯಾ..?’ ಎಂದು ಪ್ರಶ್ನಿಸಿದರು.
ನಮಗೋ ಇದರ ಬಗ್ಗೆ ಎಬಿಸಿಡಿ ಗೊತ್ತಿಲ್ಲ. ಗಾಳದಲ್ಲಿ, ಬಲೆಯಲ್ಲಿ ಹಿಡಿಯುತ್ತಾರೆ ಎಂಬುದನ್ನು ಬಿಟ್ಟರೆ ಮತ್ತೇನು ಗೊತ್ತಿಲ್ಲ. ಇಷ್ಟರಲ್ಲಾಗಲೇ ತೇಜಸ್ವಿ ಮೀನು ಹಿಡಿವ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದರು. ಎಕ್ಸ್ ಪೀರಿಯನ್ಸ್ ಮಾಡದಿದ್ದರೂ ಇದ್ದ ಜ್ಞಾನದಲ್ಲೇ ನನಗೆ ಹೇಳಿಕೊಡುತ್ತಿದ್ದರು. ನಾವು ಆರಂಭದಲ್ಲಿ ಮೀನು ಹಿಡಿಯಲು ಹೋಗಿದ್ದು ಹೇಮಾವತಿ ತೀರಕ್ಕೆ. ‘ಶಿವ ಹೀಗೆ ಗಾಳ ಹಾಕಬೇಕು ಮೀನನ್ನು ಆಕರ್ಷಿಸಬೇಕು ಎಂದರೆ ಎರೆಹುಳು ತೋರಿಸಬೇಕು’ ಎಂದು ಎರೆಹುಳುವನ್ನು ಬಾಣದ ತುದಿಗೆ ಸಿಕ್ಕಿಸಿ ತೋರಿಸುತ್ತಿದ್ದರು.
ಹೀಗೆ ಗಂಟಗಟ್ಟಲೆ ಕುಳಿತುಕೊಳ್ಳುತ್ತಿದ್ದೆವು. ತಮಾಷೆಯ ವಿಷಯ ಎಂದರೆ ನನಗೆ ಹೇಳಿಕೊಡುತ್ತಿದ್ದ ತೇಜಸ್ವಿಗೆ ಮೀನು ಸಿಕ್ಕಿದ್ದು ಕಡಿಮೆ ನನಗೆ ಸಿಗುತ್ತಿದ್ದುದು ಹೆಚ್ಚು. ಆಗೆಲ್ಲ ತೇಜಸ್ವಿ, ‘ಏನೋ ಶಿವಾ ಏನಾದ್ರೂ ಮಾಡ್ಕೊಂಡು ಬಂದಿದ್ದೀಯೇನೋ ನಂಗೆ ಸಿಗಲ್ಲಾ… ನಿಂಗೆ ಸಿಗ್ತಾವಲ್ಲೋ’ ಎನ್ನುತ್ತಿದ್ದರು. ಹೀಗೆ ಸಾಕಷ್ಟು ದಿನ ನಮ್ಮ ಮೀನು ಹಿಡಿಯುವ ಹವ್ಯಾಸ ಮುಂದುವರೆಯಿತು. ತೇಜಸ್ವಿ ಇದನ್ನು ಗಂಭಿರವಾಗಿ ಪರಿಗಣಿಸಲು ಪ್ರಾರಂಭಿಸಿದ್ದರು.
‘ಮೀನು ಹಿಡಿಯಲು ಭದ್ರಾ ಡ್ಯಾಂಗೆ ಹೋಗೋಣ’ ಎಂದರು. ಸರಿ ಎಂದು ಅಲ್ಲಿಗೂ ಹೊರಟೆವು. ಅದೊಂದು ವಿಭಿನ್ನ ಅನುಭವ. ನಾವು ಈ ದಡದಲ್ಲಿ ಮೀನು ಹಿಡಿಯುತ್ತಿದ್ದರೆ ಆ ದಡದಲ್ಲಿ ಕಾಡು ಪ್ರಾಣಿಗಳು ಬಂದು ನೀರು ಕುಡಿದುಕೊಂಡು ಹೋಗುತ್ತಿದ್ದವು. ನಾವು ಪ್ರಾಣಿಗಳ ಹಾವಾಭಾವ ನೋಡುತ್ತ ಗಂಟೆಗಟ್ಟಲೆ ಕುಳಿತುಕೊಳ್ಳುತ್ತಿದ್ದೆವು. ಇಷ್ಟರಲ್ಲಾಗಲೇ ಸಣ್ಣ ಮೀನುಗಳನ್ನು ಹಾಕಿ ದೊಡ್ಡ ಮೀನು ಹಿಡಿಯಬಹುದು ಎಂದು ತೇಜಸ್ವಿ ಸೀಕ್ರೆಟ್ ಹೇಳಿಕೊಟ್ಟಿದ್ದರು.
ಹೀಗೆ ಒಂದು ದಿನ ಬಂಡೆ ಮೇಲೆ ಕುಳಿತು ನೀರನ್ನೇ ದಿಟ್ಟಿಸುತ್ತಿದ್ದೆ. ತೇಜಸ್ವಿ ಮತ್ತೊಂದು ಕಡೆ ಗಾಳ ಹಾಕಿದ್ದರು. ನನ್ನ ಪಕ್ಕದಲ್ಲಿ ಏನೂ ಹಾರಿ ನೀರಿಗೆ ಧಪ್ಪ ಎಂದು ಬಿತ್ತು. ನಾನು ಭಯದಿಂದ ಹೆದರಿ ಗಾಳ ಬಿಟ್ಟು ಎದ್ದೆ. ನನ್ನನ್ನು ನೋಡಿದ ತೇಜಸ್ವಿ ಬಿದ್ದು ಬಿದ್ದು ನಗುತ್ತಿದ್ದಾರೆ.
ನಾನು ಜೀವವೇ ಹೋದಂತೆ ನಿಂತು ಏನು ಬಿತ್ತೆಂದು ನೋಡುತ್ತಿದ್ದೆ. ತೇಜಸ್ವಿ ನಕ್ಕು ಸುಮ್ಮನಾದವರು ‘ಏ ಶಿವಾ ಅದು ನೀರು ನಾಯಿ ಕಣೋ’ ಎಂದರು. ನನಗೆ ಜೀವ ಬಂದಂತಾಯ್ತು.

ರೀ ಪ್ರೊಫೆಸರ್ ನಿಮ್ಗೆ ತಿ.. ಕಡಿಯುತ್ತಾ…
ಹೀಗೆ ಒಮ್ಮೆ ಪ್ರೊಫೆಸರ್ ರನ್ನು ಕರೆದುಕೊಂಡು ಬಂದಿದ್ದರು. ಪ್ರೊಫೆಸರ್ ನೀಟಾಗಿ ಒಂದು ಹೊಸ ಸ್ವೆಟ್ಟರ್ ಕೂಡ ಹಾಕಿಕೊಂಡು ಬಂದಿದ್ದರು. ದುರಂತ ಎಂದರೆ ಆವತ್ತು ಪ್ರೊಫೆಸರ್‌ಗೆ ಯಾವುದೇ ಮೀನು ಸಿಗಲಿಲ್ಲ. ಸಂಜೆ ನೋಡುತ್ತೇವೆ ಪ್ರೊಫೆಸರ್ ಪಕ್ಕ ಒಂದು ನೂಲಿನ ರಾಶಿಯೇ ಬಿದ್ದಿದೆ. ನೋಡಿದರೆ ಅದು ಪ್ರೊಫೆಸರ್ ಸ್ವೆಟ್ಟರ್. ಮೀನು ಸಿಗದ ಪ್ರೊಫೆಸರ್ ಕುಳಿತುಕೊಂಡೇ ಸ್ವೆಟ್ಟರ್ ನೂಲು ಎಳೆದು ಗುಡ್ಡೆ ಮಾಡಿ ಹಾಕಿದ್ದರು. ತೇಜಸ್ವಿ ಅದನ್ನು ನೋಡಿ ಇನ್ನು ಯಾವತ್ತೂ ಸ್ವೆಟ್ಟರ್ ಹಾಕಿಕೊಂಡು ಬರಬೇಡಿ ಎಂದಿದ್ದರು.
ಹೀಗೆ ತೇಜಸ್ವಿ ಮನೆ ಕಟ್ಟುವಾಗ ಪ್ರೊಫೆಸರ್ ಬಂದಿದ್ದರು. ತೇಜಸ್ವಿ ಹಕ್ಕಿಗಳನ್ನು ವೀಕ್ಷಿಸಲು ಬೈನಾಕುಲರ್ ಇಟ್ಟುಕೊಂಡಿದ್ದರು. ಹೀಗೆ ಒಂದು ದಿನ ಕಾರಿನಲ್ಲಿ ಎಲ್ಲರೂ ಹೋಗುತ್ತಿದ್ದೆವು. ಪ್ರೊಫೆಸರ್ ಬೈನಾಕ್ಯೂಲರನ್ನು ತೇಜಸ್ವಿಯಿಂದ ಪಡೆದುಕೊಂಡು ಪಕ್ಷಿ ನೋಡುತ್ತೇನೆ ಎಂದು ಪಡೆದುಕೊಂಡರು. ಸಾಕಷ್ಟು ಏನೇನೋ ಮಾಡಿದರೂ ಹಕ್ಕಿಗಳು ಪ್ರೊಫೆಸರ್‌ಗೆ ಹತ್ತಿರದಿಂದ ಕಾಣಿಸಲಿಲ್ಲ. ಇದರಿಂದ ಬೇಸತ್ತ ಪ್ರೊಫೆಸರ್. ‘ಇದ್ರಲ್ಲಿ ಏನೂ ಕಾಣೋದೆ ಇಲ್ವಲ್ರಿ’ ಎಂದು ತೇಜಸ್ವಿ ಕೈಗೆ ಕೊಟ್ಟರು. ತೇಜಸ್ವಿ ತೆಗೆದುಕೊಂಡು ಒಮ್ಮ ಕಾರಿನಿಂದ ಆಚೆ ವೀಕ್ಷಿಸಿ ‘ರೀ ಪ್ರೊಫೆಸರ್ ನಿಮ್ಗೆ ತಿ.. ಕಡಿಯುತ್ತಾ..ʼ ಎಂದರು. ನನಗೋ ನಗು ತಡೆದುಕೊಳ್ಳಲಾಗಲಿಲ್ಲ.
ಪ್ರೊಫೆಸರ್ ನಮ್ಮಿಬ್ಬರ ಮುಖ ನೋಡಿದರು.
‘ಯಾಕ್ರಿ ಸೆಟ್ಟಿಂಗ್ ಚೇಂಜ್ ಮಾಡಿದ್ದೀರಾ..? ಗೊತ್ತಿಲ್ಲ ಅಂದ್ರೆ ಸುಮ್ಮನೆ ಕುಳಿತುಕೊಳ್ಳಿ’ ಎಂದರು. ಪ್ರೊಫೆಸರ್ ಬೆಪ್ಪಾದರು.
ನಾವು ಮೀನು ಹಿಡಿಯುವ ಹುಚ್ಚು ಯಾವ ಮಟ್ಟಕ್ಕೆ ಹೋಯಿತು ಎಂದರೆ ಭದ್ರಾ ನದಿ ದಡಕ್ಕೆ ನಾವು ಹೋಗುವುದು ಮಾಮೂಲಾಯಿತು. ಈ ಮಧ್ಯೆ ನನ್ನ ಬಳಿ ಬಂದ ತೇಜಸ್ವಿ ‘ಶಿವ ಅವನನ್ನ ಮೀನು ಹಿಡಿಯಲು ಕರೆಯಬೇಡ ಅವನು ಬಂದರೆ ಮೀನು ಸಿಗುವುದಿಲ್ಲ’ ಎಂದರು.
ದುರಂತ ಎಂದರೆ ಪ್ರೊಫೆಸರ್ ಬಂದಾಗ ಮೀನು ಸಿಗದೆ ನಿರಾಶೆ ಅನುಭವಿಸುತ್ತಿದ್ದುದ್ದೇ ಹೆಚ್ಚು.

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ


