ಶಿಖರದ ತಲುಪಿದೆವೆನ್ನುವಾಗ ಸಣ್ಣದೊಂದು ಝರಿ ಅಡ್ಡ ಹಾಯುವುದು. ಅದನ್ನು ದಾಟಿ ಕಟ್ಟಿ ತಂದ ತಿಂಡಿ ತಿಂದು ಶಿಖರಾಗ್ರ ತಲುಪಿದೆವು. ಅಲ್ಲಿನ ಮಂಜಿನಲ್ಲಿ ಕುಣಿದು ಕುಪ್ಪಳಿಸಿದೆವು. ಶಿಖರಾಗ್ರದಿಂದ ಕಾಣುವ ಮೋಹನ ಮೋಹಕ ನೋಟಕೆ ಕಾದು ಕುಳಿತೆವು. ಒಂದೆರಡು ಬಾರಿ ಕಣಿವೆಯ ರುದ್ರ ಸೌಂದರ್ಯವನ್ನು ವೀಕ್ಷಿಸಿದೆವು. ಕುದುರೆ ಮುಖದಿಂದ ಮುಳ್ಳಯ್ಯನಗಿರಿಯ ವಿಹಂಗಮ ನೋಟ ನೋಡಬಹುದು. ಯಾವುದಕ್ಕೂ ಮಂಜು ನಮಗೆ ಅವಕಾಶವೀಯಲೇ ಇಲ್ಲ. ಮುಳ್ಳಯ್ಯನ ಗಿರಿ ಏರಿ ಕುದುರೆ ಮುಖ ಪರ್ವತ ನೋಡಿ ಪರವಶನಾದುದು ನೆನಪಿದೆ.
ಶ್ರೀಧರ್ ಎಸ್. ಸಿದ್ದಾಪುರ ಬರೆಯುವ “ಸಾಗುತ ದೂರ ದೂರ…” ಪ್ರವಾಸ ಸರಣಿಯಲ್ಲಿ ಕುದುರೆಮುಖ ಕುರಿತ ಬರಹ
ಪಶ್ಚಿಮ ಘಟ್ಟದ ಕಾಡುಗಳಲ್ಲೊಂದು ಅನರ್ಘ್ಯ ಪಯಣ
ಕುದುರೆಮುಖ ಹೆಸರೇ ಎಷ್ಟೊಂದು ರೋಮಾಂಚನಕಾರಿ. ಪ್ರಾಣಿಗಳ ಮುಖವನ್ನು ಹೋಲುವ ಶಿಖರಗಳು ಬಹಳ ಅಪರೂಪ. ಗಂಗಾನದಿ ಉಗಮವಾದ ಗಂಗೋತ್ರಿ ಬಳಿಯ ಗೋಮುಖ ಶಿಖರ ಗೋವಿನ ಮುಖವನ್ನು ಹೋಲುತ್ತದೆ. ಗೋವಿನ ಮುಖದಿಂದ ನೀರು ಚಿಮ್ಮವ ಕಾರಣ ಗಂಗೋತ್ರಿ ಎನ್ನಲಾಯಿತಂತೆ. ಅಂತಹುದೇ ಒಂದು ಶಿಖರ ಕುದುರೆಮುಖ. ದೂರದಿಂದ ನೋಡಿದರೆ ಕುದುರೆಯನ್ನು ಹೋಲುತ್ತದೆ. ಹಾವು ಮಲಗಿದಂತಿರುವ ಹಾದಿಗಳಲ್ಲಿ ಪಯಣ. ಸಾಲುಗಟ್ಟಿದ ಚಕ್ರವ್ಯೂಹದ ಸೈನಿಕರಂತೆ ಎದ್ದೆದ್ದು ಬರುವ ಬೆಟ್ಟಗಳ ರಾಶಿ. ಅವುಗಳ ಮೇಲೆಲ್ಲಾ ಸಾಗುವ ಚಿಕಣಿ ಚಿಕಣಿ ಮನುಷ್ಯರ ಸಾಲು. ಮರಗಳಿಲ್ಲದ ಕುರುಚಲು ಕಾಡಿನಿಂದ ಕೂಡಿದ ವಿವಿಧ ಶಿಖರಗಳು. ಆಗಾಗ ಮುತ್ತಿಕ್ಕಿ ಹೋಗುವ ಮಂಜು, ಎಂಥವರನ್ನೂ ಮಂತ್ರ ಮುಗ್ಧಗೊಳಿಸುತ್ತೆ.

ಪಯಣಿಗನ ದಾರಿ
ಬೆಟ್ಟದ ಮಗ್ಗುಲಿನಲ್ಲೊಂದು ಮನೆ ಆ ಮನೆ ಎದುರಿಗೆ ಹುಲ್ಲು ಹೊತ್ತ ಪರ್ವತಗಳು. ಮನೆ ಎದುರಿನ ಇಳಿಜಾರಿನಲ್ಲಿ ಅಡಿಕೆ, ತರಕಾರಿ ತೋಟ. ಕೃಷಿಕಾಯಕ ಮಾಡುವ ತುಂಬು ಕುಟುಂಬ. ಇಲ್ಲಿಂದ ಪ್ರತಿದಿನ ದಿಬ್ಬಣ ಹೊರಟಂತೆ ಕುದುರೆ ಮುಖ ಶಿಖರದ ಕಡೆ ಹಲವು ಚಾರಣಿಗರು ಪ್ರತಿನಿತ್ಯ ಮುಖ ಮಾಡುತ್ತಾರೆ. ನಮ್ಮ ದಿಬ್ಬಣವೂ ಇಲ್ಲಿಂದಲೇ ಪ್ರಾರಂಭವಾದದ್ದು.
ಪಯಣದ ಮೊದಲ ಹಂತವೇ ಕುದುರೆಮುಖದಿಂದ ಹೊರನಾಡಿನ ದಾರಿಯಲ್ಲಿ ತಿರುಗಿ ಮುಂದೆ ಸಿಗುವ “ಬಾಳಗಲ್ಲು” ಗ್ರಾಮದಲ್ಲಿ ಬಲಕ್ಕೆ ಹೊರಳಿಕೊಳ್ಳಬೇಕು. ಕೆಲವೇ ಕಿಲೋ ಮೀಟರ್ ಡಾಂಬಾರು ರಸ್ತೆ ಮುಗಿದ ಕೂಡಲೇ ಕಚ್ಚಾರಸ್ತೆಯೊಂದು ಸಾಹಸಿಗ ಪಯಣಕ್ಕೆ ನಿಮ್ಮನ್ನು ಆಹ್ವಾನಿಸುತ್ತದೆ. ಎದ್ದನೋ ಬಿದ್ದೆನೋ ಎಂಬಂತೆ ಈ ರಸ್ತೆಯಲ್ಲಿ ಸುಮಾರು ಮೂರು ಕಿಲೋ ಮೀಟರ್ ಸಾಗಬೇಕು. ಈ ರಸ್ತೆಯನ್ನು ದಾಟಿಕೊಂಡರೆ ಸಿಗುವುದೆ ಮುಳ್ಳೋಡಿ ಗ್ರಾಮ. ಇದುವೆ ಕೊನೆಯ ಗ್ರಾಮ ಕೂಡ. ಈ ದಾರಿಯುದ್ದಕ್ಕೂ ಬೆಟ್ಟಗಳ ರಾಶಿ ಅನನ್ಯ ದೃಶ್ಯಾವಳಿ ನಿಮಗೆ ಕಾಣಸಿಗುತ್ತದೆ.
ವಸತಿ
ಬೆಟ್ಟದ ಮಗ್ಗುಲಿನಲ್ಲೊಂದು ಮನೆ. ಮನೆ ಎದುರಿಗೆ ಹೂ ಹೊತ್ತ ಪರ್ವತಗಳು. ಮನೆ ಎದುರಿನ ಇಳಿಜಾರಿನಲ್ಲಿ ಅಡಿಕೆ, ತರಕಾರಿ, ಭತ್ತದ ಗದ್ದೆಗಳು. ಕೃಷಿ ಕಾಯಕ ಮಾಡುವ ಜೀವಸೆಲೆಯುಕ್ಕಿಸುವ ತುಂಬು ಕುಟುಂಬ. ಇಲ್ಲಿಂದ ಪ್ರತಿದಿನ ಚಳಿ ಮಳೆ ಎನ್ನದೆ ದಿಬ್ಬಣ ಹೊರಟಂತೆ ಕುದುರೆಮುಖದತ್ತ ಚಾರಣಿಗರು ಮುಖ ಮಾಡುತ್ತಾರೆ. ನಮ್ಮ ದಿಬ್ಬಣವೂ ಇಲ್ಲಿಂದಲೇ ಪ್ರಾರಂಭವಾದದ್ದು. ಆ ಊರಿನ ವಿಶೇಷ ತಿಂಡಿ ತಿನಿಸು ಶುಚಿ ರುಚಿಯಾಗಿ ಮಾಡುವುದರಲ್ಲಿ ಎತ್ತಿದ ಕೈ. ಅದುವೇ ಅರುಣ್ ಗೌಡರ ಮನೆ.
ಶಿಖರದಿಂದ ಶಿಖರಕ್ಕೆ
ಮುಳ್ಳೋಡಿಯಿಂದ ಮುಂದೆ ಕುದುರೆ ಮುಖ ಶಿಖರದತ್ತ ಸಾಗುವ ಕಾಲುದಾರಿಯೊಂದು ಸಿಗುತ್ತದೆ. ಅದಕ್ಕೂ ಮೊದಲು ನಮ್ಮ ಗೈಡ್ ಮುಳ್ಳೋಡಿ ಅರುಣ್ ಗೌಡರ ಮನೆಯಲ್ಲಿ ತಿಂಡಿ ತಿಂದು, ಮಧ್ಯಾಹ್ನ ಊಟಕ್ಕೆ ಕಟ್ಟಿಸಿಕೊಂಡು ಗೈಡ್‌ನೊಂದಿಗೆ ಹರಟುತ್ತಾ ನಮ್ಮ ದಾರಿ ಹಿಡಿದೆವು.
ಕಾಲು ಹಾದಿಯ ಪ್ರಾರಂಭದಲ್ಲೊಂದು ವಿಶಿಷ್ಟ ಹಲಸಿನ (Jackfruit, Artocarpus heterophyllus) ಮರವಿದೆ. ದಿವಲಸಿನ (Artocarpus altilis, Breadfruit) ಗಾತ್ರದಷ್ಟು ಮಾತ್ರವೇ ಬೆಳೆವ ಇದರ ರುಚಿ ಮರೆಯಲಾಗದ್ದು. ಹೆಸರು ರುದ್ರಾಕ್ಷಿ. ಸೊಳೆಯೂ ರುದ್ರಾಕ್ಷಿಯಂತೆ ಬಲು ಸಣ್ಣ. ಕಡು ಕಂದು ಬಣ್ಣ. ಪಶ್ಚಿಮ ಘಟ್ಟಗಳಲ್ಲಿನ ಮರಗಳ ವೈವಿಧ್ಯವನ್ನು ನೋಡಿದರೆ ಬೆರಗು ಹುಟ್ಟಿಸುತ್ತದೆ. ಇದೇ ಶ್ರೇಣಿಯ ಗಂಗಡಿಕಲ್ಲು ಪರ್ವತವೇರಲು ಹೋದಾಗ, ಭೂತ ರುದ್ರಾಕ್ಷಿ ಎನ್ನುವ ವಿಶಿಷ್ಟ ಜಾತಿಯ ಮರವೊಂದನ್ನು ಪರ್ವತಗಳ ಮಗ್ಗುಲಲ್ಲಿ ಬೆಳೆದಿದ್ದವು. ಸಣ್ಣ ರುದ್ರಾಕ್ಷಿ ಕಾಯಿ ಬಿಡುವ ಇದನ್ನು ಮತ್ತೆಲ್ಲೂ ನೋಡಿಲ್ಲ.
ಏರು ದಾರಿಯನ್ನೇರುತ್ತಾ ಜಲಪಾತವನ್ನು ಸವಿಯ ಸವಿಯುತ್ತಾ ಸಾಗಿ. ಬರುವಾಗಲಾದರೂ ಇಲ್ಲಿ ಲಾಗ ಹಾಕುವ ಖುಷಿಯನ್ನು ನೆನಸಿಕೊಳ್ಳುತ್ತಾ ಸಾಗಿದೆವು. ಆ ಜಲಪಾತದ ಪಕ್ಕದಲ್ಲೊಂದು ಗಣಪತಿ ಗುಡಿ. ಪ್ರತಿ ಎಳ್ಳಾಮಾಸೆ ದಿನ ಇಲ್ಲಿಗೆ ತಂಡೋಪತಂಡವಾಗಿ ಜನ ಬಂದು ದೇವರ ದರ್ಶನ ಪಡೆದು ಹೋಗುವರು. ಒಂದು ಹಂತದ ಪರ್ವತದ ತುದಿ ಏರಿ ಕುದುರೆಮುಖ ಶಿಖರ ಕಾಣಿಸುವುದೇ ಎಂದು ನೋಟ ಬೀರಿದೆವು. ಗೈಡ್ ಅರುಣನ ತಲೆ ತಿಂದೆವು. ಮುಂದಿನ ದಾರಿಯಲ್ಲದು ಕಾಣಿಸುತ್ತದೆ ಎಂದಾತ ಹೇಳಿದ. ಈ ಹಂತದಲ್ಲಿ ದೂರದಲ್ಲಿನ ಮನೆಗಳು ಮಕ್ಕಳ ಆಟಿಕೆಗಳಂತಾಗಿ ಬಿಟ್ಟಿದ್ದವು. ಏರಿದಂತೆಲ್ಲಾ ಪರ್ವತ ಶ್ರೇಣಿಗಳು ನಮ್ಮನ್ನು ಮಂತ್ರ ಮುಗ್ಧಗೊಳಿಸುತ್ತಿದ್ದವು. ಏರುವುದರಲ್ಲಿ ಸಾಕ್ಷಾತ್ ಮಂಗನಾಗಿರುವ ನಾನು ಮತ್ತು ನನ್ನ ಗೆಳೆಯ ಉಳಿದವರ ಬರುವಿಕೆಗಾಗಿ ಒಂದು ಮರದ ಬಳಿ ಕಾಯ ತೊಡಗಿದೆವು. ಅದೇ ಒಂಟಿಮರ, ಇಲ್ಲಿಂದ ಕೆಳಗೆ ಜೀವ ಸಲಿಲ ಒಂದು ಹರಿದು ಹೋಗುತ್ತಿತ್ತು. ಅವರನ್ನೆಲ್ಲಾ ಮುಂದೆ ಕಳುಹಿಸಿ ನಾವು ಅನುಪಾಲಿಸಿದೆವು.

‘ಹುಲಿ ಬಂತು ಹುಲಿ’ -ಹುಲಿ ಯೋಜನೆ
‘ಕಾಡೊಳಗೆ ಹುಲಿ ಬಿಟ್ಟಾರ‍್ರೀ’ ಎಂಬ ಅಮಾಯಕ ಗೌಡರ ಮಾತು ನಗು ತರಿಸಿತು. ಹುಲಿ ಬಿಡಲು ಅದೇನು ಆಟದ ಸಾಮಾನೇ? ಇರಲಿ, ‘ಹುಲಿಯೋಜನೆ’ (project tiger) ಜಾರಿಯಾಗುವುದೆಂದು ಊರು ಬಿಟ್ಟ ಅನೇಕ ಖಾಲಿ ಬಿದ್ದ ಮನೆಗಳು ಸಣ್ಣ ಪರ್ವತದ ತಪ್ಪಲಿನಲ್ಲಿದ್ದವು.
ಮಾನವ ಕೂಡ ಪ್ರಕೃತಿಯ ಒಂದು ಭಾಗವೆಂದೆಣಿಸದೇ ಬೇರ್ಪಡಿಸಿ ನೋಡುವುದು ಸೂಕ್ತವಲ್ಲ. ಈ ಕುರಿತು ಮಾಧವ ಗಾಡ್ಗೀಳ್ ವರದಿ ಕಾಡಂಚಿನ ಬುಡಕಟ್ಟು ಜನರು ಪ್ರಕೃತಿಯೊಂದಿಗೆ ಲೀನವಾಗಿ ಸಹ ಜೀವನ ನಡೆಸುವರೇ ಹೊರತು ಮಾರಕವಲ್ಲವೆಂದಿದ್ದಾರೆ. ಹಲವು ಶತಮಾನಗಳಿಂದ ಅವರಲ್ಲೇ ಇದ್ದರೂ ಕಾಡಿಗೆ ಕಿಂಚಿತ್ತೂ ತೊಂದರೆಯಾಗಿಲ್ಲ. ತೊಂದರೆ ಏನಿದ್ದರೂ ನಮ್ಮಂತಹ ನಾಗರೀಕರಿಂದಲೇ! ತೀರ ಸರಳ ಜೀವನ ನಡೆಸುವ ಇವರು ನಮಗೆಲ್ಲಾ ಮಾದರಿ.
ಜೊಂಡು ಹುಲ್ಲಿನ ಸಮತಟ್ಟಾದ ದಾರಿಯಲ್ಲಿ ಸಾಗಿದೆವು. ನಮ್ಮ ಎಡ ಬಲಕ್ಕೆಲ್ಲಾ ಪರ್ವತಗಳು. ಈ ಭಾಗದ ಜನರಿದನ್ನು ಗುಪ್ಪಿ ಎಂದು ಕರೆಯುವರು. ಗೈಡ್ ಅರುಣ್ ತೋರಿಸಿದ ಪರ್ವತ ಒಂದನ್ನು ನೋಡಿದೆವು ಅದೇ ‘ಹಿರೆಮರಗುಪ್ಪಿ’ ಬಲಕ್ಕೊಂದು ಶಿಖರ. ಏನೋ ಹೆಸರು ಹೇಳಿದ, ಅದೆಲ್ಲಾ ನನ್ನ ಜ್ಞಾಪಕ ಚಿತ್ರಶಾಲೆಯ ಮೂಲೆ ಸೇರಿದೆ. ಮುಂದಿನ ಬಾರಿ ಈ ಪರ್ವತವೇರಬೇಕೆಂದು ನಿಶ್ಚಯಿಸಿದೆವು.
ಪರಿಕ್ರಮಣ ಮುಂಬರಿದಂತೆ ಎಡಕ್ಕೊಂದು ನಿರ್ಮಲಧಾರೆಯೊಂದು ಹರಿಯುತ್ತಿತ್ತು. ಅಲ್ಲೊಂದಿಷ್ಟು ನೀರು ತುಂಬಿಕೊಂಡೆವು. ಈ ಚಾರಣದ ವಿಶೇಷವೆಂದರೆ ನವಂಬರ್-ಡಿಸೆಂಬರ್‌ನಲ್ಲೂ ಪರ್ವತದುದ್ದಕ್ಕೂ ನಮಗೆ ನೀರಿನ ಅಭಾವ ಕಾಣಿಸಲಿಲ್ಲ. ತುದಿ ಮುಟ್ಟುವ ಕೆಲವು ಹೆಜ್ಜೆಗಳ ಹಿಂದೆಯೂ ಸಣ್ಣದೊಂದು ಝರಿ ಹರಿಯುತ್ತದೆ. ಹಾಗಾಗಿಯೇ ಪಶ್ಚಿಮ ಘಟ್ಟಗಳು ದಕ್ಷಿಣ ಭಾರತದ ಜಲಗೋಪುರಗಳೆಂದು ಕರೆಸಿಕೊಂಡಿವೆ. ಮುಂದೆ ಸಮತಟ್ಟಾದಂತಿರುವ ಗದ್ದೆಗಳು ಎದುರಾದವು. ಇವೇನೆಂದು ಆಶ್ಚರ್ಯಗೊಂಡು ಗೈಡ್‌ನನ್ನು ಕೇಳಿದೆವು. “ಇವು ಕೆಲ ವರ್ಷಗಳ ಕೆಳಗೆ ರೆಸಾರ್ಟ್ ಮಾಡ ಹೊರಟು ನಿರ್ಮಿಸಿದ ಗದ್ದೆಗಳು.” ಫಾರೆಸ್ಟ್ ಡಿಪಾರ್ಟಮೆಂಟ್‌ನ ಅನುಮತಿ ಸಿಗದೇ ನಿಂತು ಹೋಯಿತು”, ಎಂದನು. ನಾಗರಿಕ ಸಮಾಜ ಈ ಕಾಡ ಮಧ್ಯೆ ಬಂತೆಂದರೆ ಕಾಡಿನ ಜೀವಿಗಳು ಮತ್ತು ಇಲ್ಲಿನ ಜೀವ ವ್ಯೆವಿಧ್ಯ ಎದುರಿಸಬೇಕಾದ ಸಮಸ್ಯೆಗಳ ನೆನೆದು ನಿಂತು ಹೋದದ್ದೆ ಒಳಿತೆನಿಸಿತು.
ಶಿಖರದ ಮಧ್ಯದಲ್ಲೊಂದು ಎಡಕ್ಕೆ ಕಿರುದಾರಿ ಕಾಣಿಸಿತು, ಇದು ಧರ್ಮಸ್ಥಳ ಕಡೆಯಿಂದ ಪರ್ವತವೇರುವ ದಾರಿಯೆಂದು ಗೈಡ್ ನಮಗೆ ತಿಳಿಸಿದ. ಇದು ಬರೋಬ್ಬರಿ 18 ಕಿಲೊ ಮೀಟರ್ ಪಯಣದ ಹಾದಿ. ಇಲ್ಲಿಂದ ಶಿಖರದ ತುದಿಗೆ 4 ಕಿ.ಮೀ. ಸಂಪೂರ್ಣ ಏರುದಾರಿ. ಮುಂದೆ ಸಿಗುವ ಅನೇಕ ಕಿರು ತೊರೆ ಹಳ್ಳಗಳ ಮೂಲಕ ಹಾದು ಕುದುರೆ ಮುಖ ಪರ್ವತದ ಸವಾರಿ ಮಾಡಲು ತಯಾರಾದೆವು. ಕುದುರೆ ಬೆನ್ನೇರಿ ಬಂದಂತೆ ಪರ್ವತವನ್ನೇರಬೇಕು. ಶಿಖರಾಗ್ರಕ್ಕೆ 1 ಕಿ.ಮಿ. ಇರುವಾಗ ಬಲಬದಿಗೊಂದು ಕುದುರೆಗುಂಡಿ ಎಂಬ ಸುಂದರ ಜಲಪಾತ ಕಾಣಸಿಗುತ್ತದೆ. ಅದನ್ನು ನೋಡಿಕೊಂಡು ಮುಂದೆ ಸಾಗಿದೆವು. ಪ್ರತಿ ಹೆಜ್ಜೆಯೂ ನಮ್ಮ ಹೃದಯ ಪುಪ್ಪಸಗಳ ಸಮೀಕ್ಷೆ ನಡೆಸುತ್ತಿದ್ದವು. ಕೊನೆಯ ಒಂದು ಕಿ.ಮೀ. ಬಹಳ ತ್ರಾಸದಾಯಕ. ಹೆಜ್ಜೆ ಹೆಜ್ಜೆಗೂ ನಿಲ್ಲುವ ಚಾರಣಿಗರ ಸಾಲು.

ಕುದುರಮುಖ ಶಿಖರದ ಭುಜವನ್ನೇರಿದಾಗ ಅಲ್ಲೊಂದು ಪಾಳು ಬಿದ್ದ ಕಟ್ಟಡ. ‘ಇಷ್ಟೊಂದು ಎತ್ತರದಲ್ಲೂ ಕಟ್ಟಡವೇ?’ ಉದ್ಗಾರ ತೆಗೆದೆವು. ವಿಶಾಲವಾದ ಈ ಕಟ್ಟಡ ಬ್ರಿಟಿಷ್ ಬಂಗಲೆಯೆಂದ ನಮ್ಮ ಗೈಡ್ ಅರುಣ್. ಇಷ್ಟೊಂದು ಎತ್ತರದಲ್ಲಿ ಕಟ್ಟಡ ಕಂಡು ಮೂಕ ವಿಸ್ಮಿತರಾದೆವು. ‘ಅವರ ಅಭಿರುಚಿಯನ್ನು ಮೆಚ್ಚಲೇ ಬೇಕು ಅಲ್ಲವೇ?’ ಎಂದ ಗೆಳೆಯ ರಾಮಕೃಷ್ಣ. ಎಲ್ಲರೂ ಹೂಂ ಗುಟ್ಟಿದೆವು. ಶಿಖರದ ತಲುಪಿದೆವೆನ್ನುವಾಗ ಸಣ್ಣದೊಂದು ಝರಿ ಅಡ್ಡ ಹಾಯುವುದು. ಅದನ್ನು ದಾಟಿ ಕಟ್ಟಿ ತಂದ ತಿಂಡಿ ತಿಂದು ಶಿಖರಾಗ್ರ ತಲುಪಿದೆವು. ಅಲ್ಲಿನ ಮಂಜಿನಲ್ಲಿ ಕುಣಿದು ಕುಪ್ಪಳಿಸಿದೆವು. ಶಿಖರಾಗ್ರದಿಂದ ಕಾಣುವ ಮೋಹನ ಮೋಹಕ ನೋಟಕೆ ಕಾದು ಕುಳಿತೆವು. ಒಂದೆರಡು ಬಾರಿ ಕಣಿವೆಯ ರುದ್ರ ಸೌಂದರ್ಯವನ್ನು ವೀಕ್ಷಿಸಿದೆವು. ಕುದುರೆ ಮುಖದಿಂದ ಮುಳ್ಳಯ್ಯನಗಿರಿಯ ವಿಹಂಗಮ ನೋಟ ನೋಡಬಹುದು. ಯಾವುದಕ್ಕೂ ಮಂಜು ನಮಗೆ ಅವಕಾಶವೀಯಲೇ ಇಲ್ಲ. ಮುಳ್ಳಯ್ಯನ ಗಿರಿ ಏರಿ ಕುದುರೆ ಮುಖ ಪರ್ವತ ನೋಡಿ ಪರವಶನಾದುದು ನೆನಪಿದೆ.
ಸಂಜೆಗತ್ತಲಿನ ಹೊತ್ತು ತಡಕಾಡುಕುತ್ತ, ಗೈಡ್ ಅರುಣ್ ಮನೆಗೆ ಧಾವಿಸಿ ಬೋಂಡದ ರುಚಿ ನೋಡಿದೆವು. ಹೀಗೆ ಕುದುರೆಮುಖವೆಂಬ ಅನರ್ಘ್ಯ ಅನುಭವ ಕೊನೆಗೊಂಡಿತು.

ಮುಗಿಸುವ ಮುನ್ನ: ಮೋಡ ಮುತ್ತಿಕ್ಕುವ ದಾರಿಗಳಲ್ಲಿ ಪ್ಲಾಸ್ಟಿಕ್ ರಕ್ಕಸನ ಹಾವಳಿ ಬಹಳವೇ ಹೆಚ್ಚಿದೆ. ಇದನ್ನರಿತು ಚಾರಣಿಗರು ಮತ್ತು ಸರಕಾರ ಸೂಕ್ತ ವ್ಯವಸ್ಥೆ ಮಾಡಬೇಕು. ಇಲ್ಲವಾದರೆ ಪ್ರಕೃತಿಯ ಸುಂದರ ತಾಣಗಳು ಹೊಲಸು ನಾರುವುದರಲ್ಲಿ ಆಶ್ಚರ್ಯವಿಲ್ಲ.
(ಫೋಟೋಗಳು: ಲೇಖಕರವು)

ಶ್ರೀಧರ್ ಎಸ್. ಸಿದ್ದಾಪುರ ವೃತ್ತಿಯಲ್ಲಿ ಶಿಕ್ಷಕರು. ತಿರುಗಾಟ, ಅನ್ವೇಷಣೆ ಒಂದು ಹುಚ್ಚು. ಬರಹ, ಓದು ಅಚ್ಚುಮೆಚ್ಚು. ಹಕ್ಕಿ, ಜೇಡಗಳಲ್ಲಿ ವಿಶೇಷ ಆಸಕ್ತಿ. “ಅಲೆಮಾರಿಯ ಅಂತರಂಗ” ಇಪ್ಪತ್ತು ವರ್ಷದ ಅಲೆದಾಟ, ಅನುಭವಗಳ ಪ್ರವಾಸ ಕಥನ.


