ಮದುವೆ ಗೊತ್ತಾಗುವ ಮುನ್ನ ಶಿವರಾಂ ಒಂದು ಚಿತ್ರ ನಿರ್ಮಿಸಿದ್ದರು. ನೆಮ್ಮದಿ, ಸಂತೋಷ ತುಂಬಿದ ಒಂದು ಕಂಟ್ರಾಕ್ಟರ್ ಸಂಸಾರದ ಕತೆ ಅದು. ಸಂಸಾರದ ಯಜಮಾನ ಡ್ಯಾಂ ಸೈಟ್ನಲ್ಲಿ ಆದ ಅಪಘಾತದಿಂದಾಗಿ ಮಧ್ಯ ವಯಸ್ಸಿನಲ್ಲೇ ತೀರಿಕೊಂಡಾಗ, ನಾಯಕಿಯಾಗಿದ್ದ ಜಯಮ್ಮ ದುಃಖ ತೋರಿಸಿದ ರೀತಿ, ನಂತರ ಸಂಸಾರ ಕಟ್ಟಿದ ರೀತಿ, ಎಲ್ಲರನ್ನೂ ಮೂಕರನ್ನಾಗಿಸಿತ್ತು. ಜೀವನದಲ್ಲಿ ಇದ್ದರೆ ಇಂತಹ ಹೆಂಡತಿ ಇರಬೇಕು ಅಂತ ಬಯಸಿ, ಬೇಡಿ, ಪ್ರಚಾರ ನೀಡಿ, ಮದುವೆ ಮಾಡಿಕೊಂಡಿದ್ದರು.
ಕತೆಗಾರ ಕೆ. ಸತ್ಯನಾರಾಯಣ ಹೊಸ ಕಥಾ ಸರಣಿ “ರೂಪಕಗಳಿಗೆ ಕೊರತೆಯಿಲ್ಲ”, (ಕಥೆ, ಕಥನ, ಕಥಾ ಪ್ರಬಂಧ, ಕಥಾ ಸಂದರ್ಭ, ದೃಷ್ಟಾಂತ, ಸಾಮತಿ–ಪ್ರಸಂಗಳು) ಇಂದಿನಿಂದ, ಪ್ರತಿ ಶನಿವಾರಗಳಂದು ನಿಮ್ಮ ಕೆಂಡಸಂಪಿಗೆಯಲ್ಲಿ
ವಿಶ್ವಸಂಸ್ಥೆ ಮತ್ತು ದಾಂಪತ್ಯದ ಪ್ರಶ್ನೆ
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಆಡಳಿತ ಕಾರ್ಯದರ್ಶಿಯಾಗಿ ನಮ್ಮ ಚಿಕ್ಕ ಬಾಣಾವರದ ಶಿವರಾಂ ಆಯ್ಕೆಯಾಗೇಬಿಟ್ಟರು. ಈ ಆಯ್ಕೆಗೆ ಮುನ್ನ ಕೆಲವು ವಾರಗಳಲ್ಲಿ ಮಾಧ್ಯಮದ ತುಂಬೆಲ್ಲ ಅವರೇ ಮತ್ತು ಅವರು ಮಾತ್ರವೇ. ಅವರಿಗೆ ಪರಿಣತಿ ಇರುವ ಜ್ಯೋತಿಷ್ಯ, ವೈದ್ಯ, ಹೋಮ, ಹವನ, ಭೌತಶಾಸ್ತ್ರದ ಬಗ್ಗೆಯೇ ಪ್ರಸ್ತಾಪ. ಆದರೆ ಶಿವರಾಂ ಜೀವನ-ಸಾಧನೆಯನ್ನು ಸೂಕ್ಷ್ಮವಾಗಿ ಮೊದಲಿನಿಂದ ಬಲ್ಲವರಿಗೆಲ್ಲ ಅವರು ಹೀಗೆ ಯಾವ ಯಾವುದೋ ಕ್ಷೇತ್ರದಲ್ಲಿ ಇದ್ದಕ್ಕಿದ್ದಂತೆ ಉನ್ನತ ಹುದ್ದೆಯಲ್ಲಿ ಕಾಣಿಸಿಕೊಂಡುಬಿಡುವುದು ಅಂತಹ ಆಶ್ಚರ್ಯಕರ ಸಂಗತಿಯಾಗಿರಲಿಲ್ಲ. ಹಾಗೆಲ್ಲ ಕಾಣಿಸಿಕೊಂಡರೂ ಅವರೇನು ನಮಗೆ ನೋಡಲು-ಮಾಡಲು ಸಿಗುತ್ತಿರಲಿಲ್ಲ. ಅಲ್ಲದೆ ಅವರು ಹುಟ್ಟೂರಿನ ಜೊತೆ ಹೈಸ್ಕೂಲ್ ದಿನಗಳಾದ ನಂತರ ಸಂಪರ್ಕವಿಟ್ಟುಕೊಂಡವರೂ ಅಲ್ಲ. ಆದರೂ ನಮ್ಮೂರಿನವರು, ನಮ್ಮೂರ ಹೆಸರು ಕೂಡ ಮಾಧ್ಯಮದಲ್ಲಿ ಬರುತ್ತೆ ಅಂತ ನಮಗೆಲ್ಲ ಹೆಮ್ಮೆ, ಸಂತೋಷ. ಆದರೆ ವಿಶ್ವಸಂಸ್ಥೆಯಂತಹ ಸಂಸ್ಥೆಯಲ್ಲಿ ಇಷ್ಟೊಂದು ದೊಡ್ಡ ಪೋಸ್ಟ್ ಹೊಡೆದಾಗ, ನಮಗೆ ಹೆಮ್ಮೆ, ಸಂತೋಷದ ಜೊತೆಗೆ ವಿಪರೀತ ಸಿಟ್ಟು ಕೂಡ ಬಂತು. ಶಿವರಾಂ ಮೇಲಲ್ಲ, ಶಿವರಾಂಗೆ ಒಂದು ಕಾಲದಲ್ಲಿ ಧರ್ಮಪತ್ನಿ, ಒಡನಾಡಿ, ಮನದನ್ನೆ ಎಲ್ಲವೂ ಆಗಿದ್ದ ನಮ್ಮ ಸಂಬಂಧಿ ಜಯಮ್ಮನ ಮೇಲೆ.
ಜಯಮ್ಮನನ್ನು ಇನ್ನಿಲ್ಲದ ರೂಪಸಿ ಅಂತ ಹೇಳಿ, ಅವಳು ಮೇಕಪ್ ಮ್ಯಾನ್-ಕಮ್-ಟೈಲರ್ ಆಗಿದ್ದ ರಾಜಾರಾಂ ಮಗಳಾಗಿದ್ದರೂ ಮೇಲೆಬಿದ್ದು, ಮನಸಾರೆ ಶಿವರಾಂ ಮದುವೆ ಮಾಡಿಕೊಂಡಿದ್ದರು. ಚೆನ್ನೈನ ರಾಯಪೇಟದ ಏಕದಂ ನಂಬರ್ ಒನ್ ಅರಮನೆ ಅಂದರೆ ಅವರದೇ. ಚೆನ್ನೈನಲ್ಲೇ ಮದುವೆ ಆದದ್ದು. ಏಳು ದಿನಗಳ ಮದುವೆ. ಎಂತಹ ಮದುವೆ. ನ ಭೂತೋ ನ ಭವಿಷ್ಯತಿ.
ಮದುವೆ ಆದ ಎರಡು ವರ್ಷಕ್ಕೇ ಜಯಮ್ಮ ತಗಾದೆ ತೆಗೆದಳು. ಶಿವರಾಂ ಅರಮನೆಯಲ್ಲಿ ಅಗ್ರಹಾರ, ಕ್ಲಬ್, ದೇವಸ್ಥಾನಗಳು, ಪಂಚತಾರಾ ಹೋಟೆಲ್, ಕ್ರೀಡಾಂಗಣ, ಈಜುಕೊಳ ಎಲ್ಲವೂ ಇದ್ದವು. ಅಣ್ಣ-ತಮ್ಮಂದಿರು ಮತ್ತು ಅವರ ಸಂಸಾರವೆಲ್ಲ ಒಟ್ಟಿಗೇ ಇದ್ದರು. ಶ್ರೀಮಂತರಾಗಿದ್ದರೂ, ಬೇರೆ ವಿಚಾರಗಳಲ್ಲಿ ಆಧುನಿಕರಾಗಿದ್ದರೂ, ಅಡುಗೆಯನ್ನು ಸೌದೆ ಒಲೆಯಲ್ಲೇ ಮಾಡಿಸುತ್ತಿದ್ದರು.
ಜಯಮ್ಮ ಪ್ರಚಾರ ಮಾಡಿದ ಪ್ರಕಾರ ಶಿವರಾಂಗೆ ಮತ್ತು ಅವರ ಸಹೋದರರಿಗೆ ವಿಪರೀತ ಕಾಮದ ಗೀಳು. ಊಟ ತಿಂಡಿಯಂತೆ ಪದೇ ಪದೇ ಇರಬೇಕು, ಪದೇ ಪದೇ ಆಗಬೇಕು. ಹಗಲೆನ್ನದೆ, ರಾತ್ರಿಯೆನ್ನದೆ ಅದರಲ್ಲೇ ಮುಳುಗಿ ತೇಲಬೇಕು. ಯಾವಾಗಲೂ ಒಂದೇ ರೀತಿಯ ಸುಖ, ಸಂತಸ ನೀಡಬೇಕು. ಇದರ ನಂತರ ಉಳಿದ ವ್ಯಾಪಾರ-ವಹಿವಾಟು.
ಶಿವರಾಂ ಜಯಮ್ಮನನ್ನು ಮದುವೆಯಾದ ಕಾಲಕ್ಕೆ, ಆಕೆ ಕೂಡ ಪ್ರಸಿದ್ಧ ನಟಿಯೇ, ಸುರ-ಸುಂದರಿಯೇ. ಎರಡೂ ಕೆನ್ನೆಗಳಲ್ಲಿ ಗುಳಿ ಬೀಳುತ್ತಿದ್ದುದು, ಇಡೀ ದಕ್ಷಿಣ ಭಾರತದ ನಟಿಯರಲ್ಲಿ ಜಯಮ್ಮನಿಗೆ ಮಾತ್ರ. ಕಣ್ಣುಗಳೂ ಅಷ್ಟೇ! ಬಟ್ಟಲುಗಣ್ಣು ಮತ್ತು ಮಿಂಚಿನ ಕಣ್ಣು. ಕೆಲವರ ಪ್ರಕಾರ ಜಯಮ್ಮ ಬಟ್ಟಲುಗಣ್ಣಿನ ಸುಂದರಿ. ಇನ್ನು ಕೆಲವರ ಪ್ರಕಾರ ಮಿಂಚಿನ ಕಣ್ಣಿನ ಸುಂದರಿ.
ಮದುವೆಯಾಗುವ ಕಾಲಕ್ಕೇ ಜಯಮ್ಮ ಹೆಚ್ಚು ಕಡಿಮೆ ಎಲ್ಲ ನಾಯಕ ನಟರೊಡನೆ ನಟಿಸಿದ್ದಳು. ಕ್ಷಮಿಸಿ, ಹಾಗೆ ಹೇಳುವುದು ತಪ್ಪು. ಏಕೆಂದರೆ, ಅವಳ ಜೊತೆ ನಟಿಸಿದ ಮೇಲೇ ನಟರಿಗೆ ನಾಯಕ ಪಟ್ಟ ಗ್ಯಾರಂಟಿ ಆಗುತ್ತಿದ್ದುದು. ತನ್ಮೂಲಕ ಜಯಮ್ಮನಿಗೆ ಕಲಾವಿದರ ಅಡ್ಡಾದಿಡ್ಡಿ ಜೀವನದ ಸ್ವಭಾವ, ಸಂಸಾರಗಳು ಬೀದಿಗೆ ಬೀಳುತ್ತಿದ್ದುದು, ಎಲ್ಲವೂ ಚೆನ್ನಾಗಿಯೇ ಗೊತ್ತಿತ್ತು. ಅಲ್ಲದೆ ಶಿವರಾಂರವರನ್ನು ಅವಳೂ ಕೂಡ ಇಷ್ಟಪಟ್ಟೇ ಮದುವೆ ಆಗಿದ್ದುದು. ಆದರೂ ಮದ್ರಾಸಿನ ಬೀದಿ ಬೀದಿಯಲ್ಲಿ, ಹೈದರಾಬಾದ್ ಸ್ಟುಡಿಯೋಗಳಲ್ಲೆಲ್ಲ ಸದಾ ಸುದ್ದಿಯಾಗುವಷ್ಟು ವರಾತ ತೆಗೆದಳು.
ಮದುವೆ ಗೊತ್ತಾಗುವ ಮುನ್ನ ಶಿವರಾಂ ಒಂದು ಚಿತ್ರ ನಿರ್ಮಿಸಿದ್ದರು. ನೆಮ್ಮದಿ, ಸಂತೋಷ ತುಂಬಿದ ಒಂದು ಕಂಟ್ರಾಕ್ಟರ್ ಸಂಸಾರದ ಕತೆ ಅದು. ಸಂಸಾರದ ಯಜಮಾನ ಡ್ಯಾಂ ಸೈಟ್ನಲ್ಲಿ ಆದ ಅಪಘಾತದಿಂದಾಗಿ ಮಧ್ಯ ವಯಸ್ಸಿನಲ್ಲೇ ತೀರಿಕೊಂಡಾಗ, ನಾಯಕಿಯಾಗಿದ್ದ ಜಯಮ್ಮ ದುಃಖ ತೋರಿಸಿದ ರೀತಿ, ನಂತರ ಸಂಸಾರ ಕಟ್ಟಿದ ರೀತಿ, ಎಲ್ಲರನ್ನೂ ಮೂಕರನ್ನಾಗಿಸಿತ್ತು. ಜೀವನದಲ್ಲಿ ಇದ್ದರೆ ಇಂತಹ ಹೆಂಡತಿ ಇರಬೇಕು ಅಂತ ಬಯಸಿ, ಬೇಡಿ, ಪ್ರಚಾರ ನೀಡಿ, ಮದುವೆ ಮಾಡಿಕೊಂಡಿದ್ದರು.
ಜಯಮ್ಮನ ತಂದೆ ರಾಜಾರಾಂಗೆ ಈ ಮದುವೆ ಅಷ್ಟೊಂದು ಇಷ್ಟವಿರಲಿಲ್ಲ. ಆ ಕಾಲಕ್ಕೇ ನಟರಿಗೆ, ನಟಿಯರಿಗೆ ಇಬ್ಬರಿಗೂ ಗಂಡಸರೇ ಮೇಕಪ್ ಮಾಡುತ್ತಿದ್ದರು. ರವಿಕೆ, ಷರಟು, ಪ್ಯಾಂಟ್ ಹೊಲೆಯುವುದು ಕೂಡ ಮೇಕಪ್ ಮ್ಯಾನ್ ಕೆಲಸದಲ್ಲಿ ಸೇರಿತ್ತು. ರಾಜಾರಾಂಗೆ ಸಿನಿಮಾ ಮಂದಿ ಒಬ್ಬರನ್ನು ಒಬ್ಬರು ಇಷ್ಟಪಡುವುದು, ಇಟ್ಟುಕೊಳ್ಳುವುದು, ಕಟ್ಟಿಕೊಳ್ಳುವುದು, ಬಿಡುವುದು ಇದನ್ನೆಲ್ಲ ದಿನದಿನವೂ ನೋಡಿ ದಣಿವಾಗಿತ್ತು. ಮಗಳು ಎಷ್ಟೇ ಒಳ್ಳೆಯ ನಟಿಯಾಗಿದ್ದರೂ ಸಿನೆಮಾದವರ ಸಹವಾಸ ಮಾತ್ರ ಬೇಡ, ಯಾವುದಾದರೂ ವಿಜ್ಞಾನಿಯನ್ನೋ, ಬ್ಯಾಂಕ್ ಮ್ಯಾನೇಜರ್ನನ್ನೋ ತಂದು ಮದುವೆ ಮಾಡಬೇಕು ಅಂತ ಲೆಕ್ಕ ಹಾಕಿದ್ದರು. ಜಯಮ್ಮನಿಗೆ ಗೊತ್ತಿಲ್ಲದಂತೆ ನಾಲ್ಕಾರು ಕಡೆ ಪ್ರಸ್ತಾಪ ಕೂಡ ಮಾಡಿದ್ದರು.
ಸೌಂದರ್ಯ, ಪ್ರತಿಭೆ, ಪ್ರಸಿದ್ಧಿ, ಅದೃಷ್ಟ ಎಲ್ಲವೂ ಯಾವಾಗಲೂ ಒಂದೇ ತರಹ ಇರುತ್ತದೆಂಬ ನಂಬಿಕೆ ಮತ್ತು ಆಸೆಯ ಜೀವನದ ಘಟ್ಟದಲ್ಲಿ ಜಯಮ್ಮ ಬೀಗುತ್ತಿದ್ದಳು. ಶಿವರಾಂ ಜೊತೆ ವಿವಾಹವೆಂದರೆ ಸುಖ ಮಾತ್ರವಲ್ಲ, ದಿನವೂ ಸ್ವರ್ಗದಲ್ಲೇ ವಾಸ ಅಂತ ಅಪ್ಪನನ್ನು ಕಾಡಿ-ಬೇಡಿ ಒಪ್ಪಿಸಿದಳು. ರಾಜಾರಾಂ ಹೆಚ್ಚು ಹಠ ಮಾಡಲಿಲ್ಲ ಅನ್ನುವುದು ದೊಡ್ಡಸ್ತನದ ಮಾತು ಬಿಡಿ.
ಜಯಮ್ಮನಿಗೆ ತಿಳಿಯದ ಶಿವರಾಂ ವ್ಯಕ್ತಿತ್ವದ ಇನ್ನೊಂದು ಭಾಗವೂ ಇತ್ತು. ರಾಜಕೀಯದ ಆಸಕ್ತಿ, ರಾಜಕಾರಣಿಗಳ ಒಡನಾಟ. ಚಿಕ್ಕ ಬಾಣಾವರಕ್ಕೆ ಅವರ ವಂಶಸ್ಥರು ಮೂರು ತಲೆಮಾರುಗಳು ಹಿಂದೆ ವಲಸೆ ಬಂದಿದ್ದರೂ, ತಾವು ಇನ್ನೂ ತೆಲುಗಿನವರೇ ಎಂದು ಶಿವರಾಂ ಹೇಳಿಕೊಳ್ಳುತ್ತಿದ್ದರು. ಆಂಧ್ರ ಸೀಮೆಯ ರಾಜಕಾರಣಿಗಳೊಡನೆ ಜ್ಯೋತಿಷ್ಯ, ಹಣಕಾಸಿನ ವಹಿವಾಟು, ಸಲಹೆ ನೀಡುವುದು, ನಂಬಿಕಸ್ಥ ಅಧಿಕಾರಿಗಳನ್ನು ಹುಡುಕಿಕೊಡುವುದು, ಭಾಷಣ ಬರೆದುಕೊಡುವುದು, ಎಲ್ಲವನ್ನೂ ಮಾಡುತ್ತಿದ್ದರು. ಬೇಕು ಅಂದಾಗ ಸಂಸಾರ, ಬೇಕು ಅಂದಾಗ ಸಿನೆಮಾ, ಬೇಕು ಅಂದಾಗ ರಾಜಕೀಯ. ಶಿವರಾಂ ಜಯಮ್ಮನ ಸುಪರ್ದಿಗೆ ಇಡಿಯಾಗಿ ಬರಲಿಲ್ಲ. ಅಥವಾ ಮದುವೆ ಮುಂದುವರೆದಿದ್ದರೆ ಬರುತ್ತಿದ್ದರೇನೋ? ಶಿವರಾಂ ಸೋದರರೂ ಅಷ್ಟೇ, ಯಾವ ವಿಷಯಕ್ಕೂ ಹೆಂಡತಿಯರನ್ನು ಲೆಕ್ಕ-ಜಮಾಕ್ಕೆ ಇಟ್ಟುಕೊಳ್ಳುತ್ತಿರಲಿಲ್ಲ.
ಸೋದರರ ನಿಯಮವೆಂದರೆ, ಎಲ್ಲೆಲ್ಲೋ, ಯಾರ ಯಾರ ಮನೆಯಲ್ಲೋ, ಹೇಗೆ ಹೇಗೋ ಬಿದ್ದಿದ್ದ ಹೆಣ್ಣು ಮಕ್ಕಳಿಗೆ ಎಂತಹ ಜೀವನ ಕೊಡ್ತಿದ್ದೀವೆ, ಇಂದ್ರನ ವೈಭೋಗದಲ್ಲಿ ಮುಳುಗಿಸಿದ್ದೇವೆ, ಇಷ್ಟು ಅದೃಷ್ಟ, ಎಷ್ಟು ಜನ ಹೆಣ್ಣು ಮಕ್ಕಳಿಗೆ ಸಿಗುತ್ತೆ ಅನ್ನುವುದು.
ಜಯಮ್ಮನ ತಗಾದೆ, ಹಂತ ಹಂತವಾಗಿ ತಕರಾರಾಯಿತು, ಪ್ರಕರಣವಾಯಿತು, ಮೊಕದ್ದಮೆಯಾಯಿತು. ಶಿವರಾಂ ಸೋದರರ ಪತ್ನಿಯರು ಕೂಡ ಕುಮ್ಮಕ್ಕು ಕೊಟ್ಟರು. ನಾವೆಲ್ಲ ಎಷ್ಟೋ ವರ್ಷದಿಂದ ಸಹಿಸಿಕೊಂಡು ಬಂದಿದೀವಿ. ಮದುವೆಯಾದ ಒಂದೆರಡು ವರ್ಷಗಳಾದ ಹೊಸದರಲ್ಲಿ ನಮಗೂ ಇದೆಲ್ಲ ಜುಗುಪ್ಸೆ ಮಾಡಿಕೊಳ್ಳೋದು, ಎದುರು ಮಾತನಾಡುವ ಧೈರ್ಯ ಇರಲಿಲ್ಲ. ನಮ್ಮೆಲ್ಲರ ಧೈರ್ಯ ನಿನಗೊಬ್ಬಳಿಗೇ ಬಂದಿದೆ ಅಂತ ಹೇಳಿ ಜಯಮ್ಮನ ಕೈಲಿ ಪತ್ರಿಕೇಲಿ ಧಾರಾವಾಹಿ ಬರೆಸಿದರು.

ಸ್ವಲ್ಪ Time ತಗೊಂಡರೂ, Divorce ಆಯ್ತು. ಜಯಮ್ಮ ಒಂದು Textile Desgin Shop ಅನ್ನು ಎಗ್ಮೋರ್ನಲ್ಲಿ ಇಟ್ಟುಕೊಂಡಳು. ಶಿವರಾಂಗೆ ಮಾತ್ರ ದೆಲ್ಲಿಯಲ್ಲಿ ಒಳ್ಳೆಯ, ಇನ್ನೂ ಒಳ್ಳೆಯ Post ಗಳು ಒಂದಾದ ನಂತರ ಒಂದರಂತೆ ಸಿಗುತ್ತಾ ಹೋದವು. ಅವರ ಪ್ರಸಿದ್ಧಿ, ಫೋಟೋವೆಲ್ಲ ಪೇಪರ್ನಲ್ಲಿ ಬಂದಗಲೆಲ್ಲ, ಛೇ! ಜಯಮ್ಮ ತಪ್ಪು ಮಾಡಿದಳು, ಸ್ವಲ್ಪ Adjust ಮಾಡಿಕೊಂಡಿದ್ದರೆ, ಮಹಾರಾಣಿಯಂತೆ ಮೆರೆಯಬಹುದಿತ್ತು, ನಮ್ಮ ಇಡೀ Clan ಗೇ Role Model ಆಗಬಹುದಿತ್ತು, ನಮಗೂ ಇಂತಹ ಮನೆನತನವೊಂದರ ಜೊತೆ ಸಂಬಂಧ ಇದೆ ಅಂತ ಹೇಳಿಕೊಳ್ಳಬಹುದಾಗಿತ್ತಲ್ಲ ಅಂತ ಮತ್ತೆ ಮತ್ತೆ ಅನಿಸೋದು. ನಮ್ಮಲ್ಲೇ ಕೆಲವರು ಹಿರಿಯರು ಹೋಗಿ ಜಯಮ್ಮನ ಹತ್ತಿರ ಪ್ರಸ್ತಾಪ ಮಾಡಿದ್ದೂ ಉಂಟು. ಶಿವರಾಂರಂತಹವರ ಶ್ರೀಮತಿ ಎಂದು ಹೇಳಿಕೊಳ್ಳುವುದರಲ್ಲೇ ಒಂದು ಸೊಗಸಿದೆಯಲ್ಲವೇ ಅಂತ ವಿವರಿಸಲು ಹಿರಿಯರ ನಿಯೋಗವೊಂದು ಜಯಮ್ಮನ ಮನೆಗೆ ಹೋಗಿದ್ದಾಗ, Devilish ಎಂದು ಬೈದು ಕಳಿಸಿದ್ದಳು. ಹಾಗೆ ಬೈಯುವಾಗ, ಜಯಮ್ಮನ ಮುಖವೆಲ್ಲ ಕೆಂಡವಾಗಿ, ಮೈಯೆಲ್ಲಾ ಸೆಟೆದುಕೊಂಡಿತ್ತಂತೆ.
ನಾವು ತಾನೆ ಎಷ್ಟು ದಿನ, ಎಷ್ಟು ಸಲ ಬಿಡಿಸಿ ಹೇಳಬಹುದು. ಒಂದು ಹಂತದ ನಂತರ ಸುಮ್ಮನಾದೆವು.
ಆದರೂ ಎಲ್ಲದಕ್ಕೂ ಒಂದು ಮಿತಿ ಇರುತ್ತದಲ್ಲ. ಶಿವರಾಂ ಭದ್ರತಾ ಮಂಡಳಿಯ ಆಡಳಿತ ಕಾರ್ಯದರ್ಶಿಯಾಗಿ ನೇಮಕವಾದ ಸುದ್ದಿ ಪ್ರಕಟವಾದ ದಿವಸ ಮಾತ್ರ ತುಂಬಾ ಹೊಟ್ಟೆ ಉರಿದುಹೋಯಿತು. ಜಯಮ್ಮ ಹೇಗಾದರೂ ಅವರ ಜೊತೇನೇ Continue ಆಗಿದ್ದರೆ, ನಮಗೆಲ್ಲ ಒಂದು ಹೆಮ್ಮೆಯಾಗೋದು. ಶಿವರಾಂ ನಮ್ಮ ಪೈಕಿಯವರು, ಅಗತ್ಯ ಬಿದ್ದರೆ, ನಾವೆಲ್ಲ ಅವರನ್ನು ಕಾಣಬಹುದು ಕಾಣುತ್ತೇವೆ ಅಂತ ಎಲ್ಲರ ಕೈಲೂ ಹೇಳಿಕೊಳ್ಳಬಹುದಿತ್ತು. ಹಾಗಂತ ನಮ್ಮ ನಮ್ಮಲ್ಲೇ ಮಾತಾಡಿಕೊಂಡೆವು. ಕೈ ಕೈ ಹಿಸುಕಿಕೊಂಡೆವು.
ಜಯಮ್ಮನ Textile Design ವ್ಯಾಪಾರ ಚೆನ್ನಾಗಿ ನಡೆಯುತ್ತಾ, ಇನ್ನೊಂದು ಮಹಡಿಯನ್ನು ಬಾಡಿಗೆಗೆ ತೆಗೆದುಕೊಂಡು, ಇನ್ನೂ ಎಂಟು-ಹತ್ತು ಜನರನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದಾಳಂತೆ.
ಏನು ಪ್ರಯೋಜನ ಬಂತು ಹೇಳಿ?

ಕೆ. ಸತ್ಯನಾರಾಯಣ ಹುಟ್ಟಿದ್ದು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೊಪ್ಪ ಗ್ರಾಮದಲ್ಲಿ. 1978ರಲ್ಲಿ ಭಾರತ ಸರ್ಕಾರದ ಇಂಡಿಯನ್ ರೆವಿನ್ಯೂ ಸರ್ವೀಸ್ ಗೆ ಸೇರಿ ಆದಾಯ ತೆರಿಗೆ ಇಲಾಖೆಯಲ್ಲಿ ದೇಶದ ನಾನಾ ಭಾಗಗಳಲ್ಲಿ ಕೆಲಸ ಮಾಡಿ ನಿವೃತ್ತಿಯಾಗಿದ್ದಾರೆ. ಸಣ್ಣಕಥೆ, ಕಿರುಕಥೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣಬರಹ, ವಿಮರ್ಶೆ, ಪ್ರವಾಸಕಥನ- ಹೀಗೆ ಬೇರೆ ಬೇರೆ ಪ್ರಕಾರಗಳಲ್ಲಿ ಇವರ ಕೃತಿಗಳು ಪ್ರಕಟವಾಗಿವೆ. ಮಾಸ್ತಿ ಕಥಾ ಪುರಸ್ಕಾರ(ನಕ್ಸಲ್ ವರಸೆ-2010) ಮತ್ತು ಕಥಾ ಸಾಹಿತ್ಯ ಸಾಧನೆಗೆ ಮಾಸ್ತಿ ಪ್ರಶಸ್ತಿ, ಬಿ.ಎಂ.ಶ್ರೀ.ಪ್ರತಿಷ್ಠಾನದ ಎಂ.ವಿ.ಸೀ.ಪ್ರಶಸ್ತಿ, ಬೆಂಗಳೂರು ವಿವಿಯ ಗೌರವ ಡಾಕ್ಟರೇಟ್(2013), ರಾ.ಗೌ.ಪ್ರಶಸ್ತಿ, ಬಿ.ಎಚ್.ಶ್ರೀಧರ ಪ್ರಶಸ್ತಿ, ವಿಶ್ವಚೇತನ ಪ್ರಶಸ್ತಿ, ಸೂರ್ಯನಾರಾಯಣ ಚಡಗ ಪ್ರಶಸ್ತಿ (ಸಾವಿನ ದಶಾವತಾರ ಕಾದಂಬರಿ), ವಿ.ಎಂ.ಇನಾಮದಾರ್ ಪ್ರಶಸ್ತಿ (ಚಿನ್ನಮ್ಮನ ಲಗ್ನ ಕೃತಿ) ಸೂವೆಂ ಅರಗ ವಿಮರ್ಶಾ ಪ್ರಶಸ್ತಿ (ಅವರವರ ಭವಕ್ಕೆ ಓದುಗರ ಭಕುತಿಗೆ ವಿಮರ್ಶಾ ಕೃತಿ) ಲಭಿಸಿದೆ.

