ವೈಜ್ಞಾನಿಕ, ಧಾರ್ಮಿಕ ಕಾರಣಗಳು ಏನೇ ಇರಲಿ. ಈ ಭೂಮಿಯಲ್ಲಿ ಇರುವ ಪ್ರತಿಯೊಂದು ಕ್ರಿಮಿಕೀಟ, ಮರ ಗಿಡ, ಪ್ರಾಣಿ ಪಕ್ಷಿಗಳು ಮನುಷ್ಯರಷ್ಟೇ ಪ್ರಮುಖರು. ಪ್ರಕೃತಿಯ ಸಮತೋಲನಕ್ಕಾಗಿ ನಾಡಿನಲ್ಲಿ ಸಮೃದ್ಧಿ ನೆಲೆಸಲು ಕಾಡು ಬೇಕು ಎನ್ನುವ ಸತ್ಯ ಮನಗಂಡರೆ ಗಿಡ ಮರಗಳನ್ನು ನಾವು ಪ್ರೀತಿಸುತ್ತೇವೆ. ಹೀಗಾಗಿ ದೇವರ ಕಾಡುಗಳು, ನಾಗ ಬನಗಳು ಈ ಭೂಮಿಯಲ್ಲಿ ನಂಬಿಕೆಯ ಹೆಸರಿನಲ್ಲಿ ಬಹುಕಾಲ ಬಾಳಿ ಬಂದವು. ಆದರೆ ಇಂದು ಇವಿಷ್ಟು ಕಾಂಕ್ರೀಟ್ ಕಾಡುಗಳಾಗಿರುವುದು ನಾವು ಕಂಡ ದುರಂತ. ಆಧುನಿಕತೆ ಎಂದರೆ ಇರುವ ಕಾಡನ್ನು ಕಡಿದು ಅಗಲ ರಸ್ತೆಗಳನ್ನು, ಅಗಸದೆತ್ತರ ಗಗನಚುಂಬಿ ಕಟ್ಟಡಗಳನ್ನು ಕಟ್ಟುವುದು ಎಂದಲ್ಲ.
ಆಲದ ಮರದ ಕುರಿತು ದೇವಿಕಾ ನಾಗೇಶ್ ಬರಹ
“ಆಲಕ್ಕೆ ಹೂವಿಲ್ಲ ಸಾಲಕ್ಕೆ ಕೊನೆಯಿಲ್ಲ. ಜಾಲಿಯ ಮರಕ್ಕೆ ನೆರಳಿಲ್ಲ. ತವರಿಗೆ ಮಾತು ತಂದವಳು ಮಗಳಲ್ಲ…” ಜನಪದ ತ್ರಿಪದಿ ಇದು.
ನಮ್ಮ ರಾಷ್ಟ್ರದ ವೃಕ್ಷ ಎಂಬ ಮಾನ್ಯತೆ ಇರುವ ಆಲದ ಮರವನ್ನು ಇದರ ಬಹು ಉಪಯೋಗಿ ಕಾರಣಕ್ಕಾಗಿ ಕಲ್ಪವೃಕ್ಷ ಎಂದೂ ಕರೆಯುತ್ತಾರೆ. ಮೋರಿಸ್ ಕುಟುಂಬಕ್ಕೆ ಸೇರಿದ ಹಲಸಿನ ಜಾತಿಯ ಈ ಮರದ ವೈಜಾನಿಕ ಹೆಸರು ಫಿಕಸ್ ಬೆಂಗಾಲೆನ್ಸಿಸ್. ಆಯುರ್ವೇದದಲ್ಲಿ ಅತ್ಯಂತ ವಿಶಿಷ್ಟವಾದ ಔಷಧೀಯವಾದ ಗುಣ ಇರುವ ಈ ಮರದ ತೊಗಟೆ, ಎಲೆ, ಬೇರು, ಹಾಲು ಲ್ಯಾಟಿಕ್ ಹೀಗೆ ಪ್ರತಿಯೊಂದೂ ಬಳಕೆ ಆಗುತ್ತದೆ. ಚರ್ಮರೋಗ, ಮಧುಮೇಹ, ಅತಿಸಾರ .. ಇತ್ಯಾದಿಗಳಿಗೆ ಔಷಧಿಯಾಗಿಯೂ ಈ ಮರದ ಬಳಕೆ ಇದೆ..
“ಅಜ್ಜ ನೆಟ್ಟ ಆಲದ ಮರಕ್ಕೆ ನೇಣು ಹಾಕಿಕೊಳ್ಳಬೇಡ”ಎನ್ನುವ ಗಾದೆ ಮಾತನ್ನು ಸಾಮಾನ್ಯವಾಗಿ ಎಲ್ಲರೂ ಬಳಸುತ್ತಾರೆ. ಸಂಪ್ರದಾಯಗಳನ್ನು ವಿವೇಚನೆ ಇಲ್ಲದೆ ಬಳಸಬಾರದು ಎನ್ನುವ ಕಾರಣಕ್ಕೆ ಈ ಗಾದೆ ಬಂದಿರಬಹುದು. ಕುಟುಂಬಕ್ಕೆ ನೆರಳು ನೀಡುವ ಆಧಾರ ಸ್ಥಂಬವಾಗಿರುವ ಅಜ್ಜನನ್ನು ಆಲದಮರಕ್ಕೆ ಹೋಲಿಸುತ್ತಾರೆ. ತುಳುವಿನಲ್ಲಿ ಗೋಳಿಮರ ಎಂದು ಕರೆಯಲಾಗುವ ಈ ವೃಕ್ಷದ ಅಗಲವಾದ ಎಲೆಯನ್ನು ಅಕ್ಕಿ ಕಡುಬು ಮಾಡಲು ಬಳಸುತ್ತಾರೆ. ಇದರ ತೊಗಟೆಯನ್ನು ಬಟ್ಟೆಯಲ್ಲಿ ಕಟ್ಟಿ ನೀರಿನಲ್ಲಿ ಕುಚಲಕ್ಕಿ ಹಾಕಿ ಗಂಜಿ ಬೇಯಿಸಿ ಅದನ್ನು ತುಸು ದನದ ಹಾಲು ಬೆರಸಿ ಉಂಡರೆ ಅದು ಬೇಧಿ ನಿಲ್ಲಲು ಪರಿಣಾಮಕಾರಿ ಔಷಧಿ ಆಗುತ್ತದೆ. ನಮ್ಮ ಬಾಲ್ಯದಲ್ಲಿ ಆಗಿಂದಾಗ್ಗೆ ಮಕ್ಕಳಿಗೆ ಬಾಧಿಸುತ್ತಿದ್ದ ಬೇಧಿಯನ್ನು ನಿಲ್ಲಿಸಲು ನಮ್ಮ ಅಜ್ಜಿ ಮಾಡುತ್ತಿದ್ದ ಮನೆಮದ್ದು ಇದು.
ನೆರಳಿರುವ ಕಾರಣದಿಂದ ಈ ಮರದಡಿ ಹುಲ್ಲು ಹುಟ್ಟದು. ಹೀಗಾಗಿ ಈ ಮರದ ಅಡಿಯನ್ನು ಊರಿನಲ್ಲಿ ದೊಡ್ಡವರು ಪಂಚಾಯಿತಿ ಕಟ್ಟೆಯಾಗಿ ಬಳಸುತ್ತಿದ್ದರು. ದುರಂತ ಅಂದರೆ ಜೀವನದಲ್ಲಿ ಬೇಸತ್ತ ಅಪರೂಪದ ಕೆಲವರಿಗೆ ನೇತು ಹಾಕಿಕೊಂಡು ಆತ್ಮಹತ್ಯೆಗೂ ಈ ಮರ ಒದಗಿ ಬಂದಿದೆ. ನಂತರದ ದಿನಗಳಲ್ಲಿ ಈ ಮರದ ಬೃಹತ್ ಬೇರುಗಳಿಗೆ ಹಗ್ಗ ಕಟ್ಟಿ ನಾವು ಜೋಕಾಲಿ ಆಡುವುದಕ್ಕೆ ಈ ಮರದ ನೆರಳನ್ನು ಆಶ್ರಯಿಸುತ್ತಿದ್ದೆವು. ನಿಧಾನಕ್ಕೆ ನಮ್ಮ ಊರಿನ ಕೋಳಿ ಕಟ್ಟಕ್ಕೆ, ಜೂಜಿಗೆ, ಊರಿನ ಸೋಮಾರಿ ಪಡ್ಡೆ ಹುಡುಗರಿಗೆ ಇಸ್ಪೇಟ್ ಆಟವಾಡಲು ಈ ಮರದ ನೆರಳು ಆಶ್ರಯವಾಯಿತು. ಆಗ ಸಹಜವಾಗಿ ನಮ್ಮ ಮನೆಗಳಲ್ಲಿ ಈ ಮರದಡೀ ಆಡಲು ಮಕ್ಕಳನ್ನು ಹೆತ್ತವರು ಬಿಡುತ್ತಿರಲಿಲ್ಲ. ಈ ಮರದ ಬೃಹತ್ ಬೇರುಗಳನ್ನು ರೆಂಬೆ ಕೊಂಬೆಗಳನ್ನು ಬಳಸಿಕೊಂಡು ಕಣ್ಣೇ ಮುಚ್ಚೇ, ಕಳ್ಳ ಪೊಲೀಸ್ ಆಟ ಆಡುತ್ತಿದ್ದ ಈ ನೆಲೆ ಆ ಪೋಲಿ ಹುಡುಗರಿಂದ ತಪ್ಪಿ ಹೋದದ್ದಕ್ಕೆ ನಮಗೆ ಆಗ ಬೇಸರವಾಗಿತ್ತು. ಆದರೆ ಆ ಮರದಲ್ಲಿ ವಾಸವಾಗಿದ್ದ ಪ್ರಾಣಿ ಪಕ್ಷಿಗಳಿಗೆ ಯಾವುದೇ ನಿಷೇಧವಿರಲಿಲ್ಲ. ನೂರಾರು ವರ್ಷ ಬಾಳುವ ಈ ಮರದ ಪೊಟರೆಗಳನ್ನು ಬಳಸಿ ನೆಮ್ಮದಿಯ ತಾಣವಾಗಿ ಬಳಸಿಕೊಂಡ ಪ್ರಾಣಿ ಪಕ್ಷಿಗಳಿಗೆ ಲೆಕ್ಕವೇ ಇರಲಿಲ್ಲ.

ಆಲದ ಮರವನ್ನು ಧಾರ್ಮಿಕವಾಗಿ ಪವಿತ್ರವೃಕ್ಷ ಎಂದು ಯಾಕೆ ಕರೆಯುತ್ತಾರೆ… ಎಂಬ ಕುತೂಹಲ ನನಗೆ ಇವತ್ತು ನಿನ್ನೆಯದಲ್ಲ.
ಕರಾವಳಿಯ ಬುಡಕಟ್ಟು ಸಮುದಾಯವಾದ ಕೊರಗರ ಆರಾಧ್ಯ ದೈವವಾದ ಕೊರಗತನಿಯ ಮಂಗಳೂರಿನ ಕುತ್ತಾರ್ ನಲ್ಲಿರುವ ಧರ್ಮ ಚಾವಡಿ ಕೊರಗಜ್ಜ ನ ಕಟ್ಟೆಯಲ್ಲಿ ಕೊರಗಜ್ಜನಾಗಿ ಜಾತಿಮತ ಭೇದವಿಲ್ಲದೆ ದೇಶ ವಿದೇಶಗಳ ಭಕ್ತರನ್ನು ಕೈ ಬೀಸಿ ಕರೆದು ಆರಾಧಿಸಲ್ಪಡುತ್ತಿರುವುದು ವರ್ತಮಾನದ ಅಚ್ಚರಿಯ ಬೆಳವಣಿಗೆ. ಆಗಸಕ್ಕೆ ಚಾಚಿಕೊಂಡ ಈ ಕಟ್ಟೆಯ ತಂಪು ಕಾಯುವುದು ವಿಶಾಲ ಆಲದಮರದ ನೆರಳು. ಕರಾವಳಿಯ ನಾಗಬನಗಳು ಕಾಂಕ್ರೀಟ್ ಕಟ್ಟಡ ಆಗುವ ಮೊದಲು ಇದೇ ಆಲದ ಮರ ಇಲ್ಲಿ ಭಕ್ತರ ನೆತ್ತಿಗೆ ತಂಪು ನೀಡುತ್ತಿತ್ತು. ಮಂಗಳೂರಿನ ಸ್ಟೇಟ್ ಬ್ಯಾಂಕ್ನಿಂದ ಹೆಡ್ ಪೋಸ್ಟ್ ಆಫೀಸ್ ಕಡೆ ಹೋಗುವ ರಸ್ತೆಯಲ್ಲಿ ಉದ್ದಕ್ಕೆ ಚಾಚಿಕೊಂಡಿರುವ ನೆರಳು ನೀಡುವ ಆಲದ ಮರ ಗಳ ಸಾಲು “ಸಾಲು ಮರದ ತಿಮ್ಮಕ್ಕನ” ನೆನಪು ತರುತ್ತದೆ. ಸದ್ಯ ರಸ್ತೆ ಅಗಲೀಕರಣದ ನೆವದಲ್ಲಿ ಕಡಿಯದ ಈ ಮರಗಳ ನೆರಳ ಆಶ್ರಯದಲ್ಲಿ ಸಾಲಾಗಿ ನಿಂತ ಅಂಗಡಿಸಾಲು, ಕ್ಯಾಂಟಿನ್, ವಾಹನಗಳು ನೀಡುವ ಸೊಬಗು ವಿಶೇಷವಾದದ್ದು.
ಹಿಂದೂ ಧರ್ಮ ಮತ್ತು ಸಂಸ್ಕೃತಿಯಲ್ಲಿ ಅರಳಿ (ಅಶ್ವತ್ಥ), ಆಲದ ಮರ, ಬಿಲ್ವಪತ್ರೆ, ತುಳಸಿ, ಮಾವು, ಬೇವು, ಬಾಳೆ, ನೆಲ್ಲಿ, ಅಶೋಕ ಮತ್ತು ಶಮೀ ಮರಗಳನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಈ ಮರಗಳು ದೈವಿಕ ಶಕ್ತಿಗಳನ್ನು ಹೊಂದಿರುತ್ತವೆ ಮತ್ತು ವಿವಿಧ ಪೂಜೆ, ಹಬ್ಬ ಹಾಗೂ ಮಂಗಳಕರ ಸಂದರ್ಭಗಳಲ್ಲಿ ಇವುಗಳ ಎಲೆ, ಹೂವು, ಹಣ್ಣುಗಳನ್ನು ಬಳಸಲಾಗುತ್ತದೆ.
ಪ್ರಮುಖ ಪವಿತ್ರ ಮರಗಳು ಮತ್ತು ಅವುಗಳ ಮಹತ್ವ ಹೀಗಿದೆ.
ಅರಳಿ ಮರ (ಅಶ್ವತ್ಥ): ವಿಷ್ಣುವಿನ ರೂಪವೆಂದು ನಂಬಲಾಗುತ್ತದೆ. ಇದು ಋಷಿಗಳು ಧ್ಯಾನ ಮಾಡುತ್ತಿದ್ದ ಅತ್ಯಂತ ಪವಿತ್ರ ಮರ.
ಆಲದ ಮರ (ವಟವೃಕ್ಷ): ಶಿವ ಮತ್ತು ಬ್ರಹ್ಮನ ಸಂಕೇತ, ದೀರ್ಘಾಯುಷ್ಯ ಮತ್ತು ಫಲವತ್ತತೆಯ ಪ್ರತೀಕ.
ಬಿಲ್ವಪತ್ರೆ: ಶಿವನಿಗೆ ಅತ್ಯಂತ ಪ್ರಿಯವಾದ ಮರ, ಮಹಾಶಿವರಾತ್ರಿಯಂದು ವಿಶೇಷ ಪೂಜೆಗೆ ಬಳಸುತ್ತಾರೆ
ತುಳಸಿ: ಲಕ್ಷ್ಮಿ ಮತ್ತು ವಿಷ್ಣುವಿನ ವಾಸಸ್ಥಾನ, ಪ್ರತಿದಿನದ ಪೂಜೆಗೆ ಅತಿ ಅಗತ್ಯ.
ಮಾವಿನ ಮರ: ಎಲ್ಲಾ ಶುಭ ಕಾರ್ಯಗಳಲ್ಲಿ ತೋರಣವಾಗಿ ಬಳಸುವ ಇದು ಮಂಗಳಕರ. ಮಾತ್ರವಲ್ಲ ಋಣಾತ್ಮಕ ಶಕ್ತಿಯನ್ನು ದೂರಮಾಡುತ್ತದೆ.
ಶವ ವನ್ನು ಸುಡಲು ಕೂಡ ಹಸಿ ಮಾವಿನ ಮರವನ್ನು ಕಡಿಯುವ ಕ್ರಮ ಇದೆ.
ಬಾಳೆ ಗಿಡ: ವಿಷ್ಣು-ಲಕ್ಷ್ಮಿ ಪೂಜೆಗೆ (ವಿಶೇಷವಾಗಿ ಗುರುವಾರ) ಬಳಸುವ ಇದು ಸಮೃದ್ಧಿಯ ಸಂಕೇತ.
ಬೇವು: ದೇವಿಯ (ಶಕ್ತಿ) ರೂಪವೆಂದು ಪರಿಗಣಿಸಲಾದ ಇದು, ಆರೋಗ್ಯ ಮತ್ತು ಶುದ್ಧತೆಯ ಸಂಕೇತ.
ನೆಲ್ಲಿಕಾಯಿ: ವಿಷ್ಣುವಿಗೆ ಪ್ರಿಯವಾದ ಮರ, ಇದನ್ನು ಏಕಾದಶಿಯಂದು ಪೂಜಿಸಲಾಗುತ್ತದೆ.
ಅಶೋಕ ಮರ: ಶೋಕವನ್ನು (ದುಃಖ) ದೂರಮಾಡುವ, ಶುಭ ಕಾರ್ಯಗಳಿಗೆ ಬಳಸುವ ಮರ.
ಶಮೀ ಮರ: ದಸರಾ ಹಬ್ಬದಂದು ಪೂಜಿಸುವ, ಯಜ್ಞಾದಿಗಳಲ್ಲಿ ಬಳಸುವ ಪವಿತ್ರ ಮರ.
ಈ ಮರಗಳನ್ನು ಪೂಜಿಸುವುದರಿಂದ ಜೀವನದಲ್ಲಿ ಯಶಸ್ಸು, ಸಂತೋಷ ಮತ್ತು ಸಮೃದ್ಧಿ ಲಭಿಸುತ್ತದೆ ಎಂಬ ನಂಬಿಕೆ ಇದೆ.
ಪಂಚವಟಿ ತೋಪುಗಳು… ವಟ್ ಪೂರ್ಣಿಮಾ ಹಬ್ಬದ ಸಮಯದಲ್ಲಿ ಮಹಿಳೆಯರು ಆಲದ ಮರದ ಸುತ್ತಲೂ ದಾರಗಳನ್ನು ಕಟ್ಟುತ್ತಾರೆ. ಪಂಚವಟಿ ತೋಪುಗಳಲ್ಲಿರುವ ಮರಗಳು ಹಿಂದೂ ಧರ್ಮ, ಬೌದ್ಧ ಮತ್ತು ಜೈನ ಧರ್ಮದಂತಹ ಭಾರತೀಯ ಮೂಲದ ಧರ್ಮಗಳಲ್ಲಿ ಪೂಜನೀಯವೆಂದು ಕರೆಯಲಾಗುವ ವೃಕ್ಷಗಳು ಇವು… ಹಿಂದೂ ಧರ್ಮದಲ್ಲಿ ಕೆಲವೊಂದು ವೃಕ್ಷಗಳಿಗೆ ವಿಶೇಷವಾದ ಪೂಜನೀಯ ಸ್ಥಾನವನ್ನು ನೀಡಲಾಗಿದೆ. ಅಶ್ವತ್ಥ, ಆಲದ ಮರ, ಅಶೋಕ, ಬೇಲ, ತುಳಸಿ, ಬಾಳೆ, ಶ್ರೀಗಂಧ, ಬೇವು ಹೀಗೆ ಕೆಲವೊಂದು ವೃಕ್ಷಗಳು ಅಂದರೆ ಮರಗಳಲ್ಲಿ ದೇವರು, ದೇವತೆಗಳು ನೆಲೆಸಿರುತ್ತಾರೆ… ಎಂಬ ನಂಬಿಕೆ ಇದೆ.

ವೈಜ್ಞಾನಿಕ, ಧಾರ್ಮಿಕ ಕಾರಣಗಳು ಏನೇ ಇರಲಿ. ಈ ಭೂಮಿಯಲ್ಲಿ ಇರುವ ಪ್ರತಿಯೊಂದು ಕ್ರಿಮಿಕೀಟ, ಮರ ಗಿಡ, ಪ್ರಾಣಿ ಪಕ್ಷಿಗಳು ಮನುಷ್ಯರಷ್ಟೇ ಪ್ರಮುಖರು. ಪ್ರಕೃತಿಯ ಸಮತೋಲನಕ್ಕಾಗಿ ನಾಡಿನಲ್ಲಿ ಸಮೃದ್ಧಿ ನೆಲೆಸಲು ಕಾಡು ಬೇಕು ಎನ್ನುವ ಸತ್ಯ ಮನಗಂಡರೆ ಗಿಡ ಮರಗಳನ್ನು ನಾವು ಪ್ರೀತಿಸುತ್ತೇವೆ. ಹೀಗಾಗಿ ದೇವರ ಕಾಡುಗಳು, ನಾಗ ಬನಗಳು ಈ ಭೂಮಿಯಲ್ಲಿ ನಂಬಿಕೆಯ ಹೆಸರಿನಲ್ಲಿ ಬಹುಕಾಲ ಬಾಳಿ ಬಂದವು. ಆದರೆ ಇಂದು ಇವಿಷ್ಟು ಕಾಂಕ್ರೀಟ್ ಕಾಡುಗಳಾಗಿರುವುದು ನಾವು ಕಂಡ ದುರಂತ. ಆಧುನಿಕತೆ ಎಂದರೆ ಇರುವ ಕಾಡನ್ನು ಕಡಿದು ಅಗಲ ರಸ್ತೆಗಳನ್ನು, ಅಗಸದೆತ್ತರ ಗಗನಚುಂಬಿ ಕಟ್ಟಡಗಳನ್ನು ಕಟ್ಟುವುದು ಎಂದಲ್ಲ. ಕಾಡಿರಲಿ ನಾಡಿರಲಿ ಇಲ್ಲಿ ಗಿಡ ಮರ ಪ್ರಾಣಿ ಪಕ್ಷಿ ಹೀಗೆ ಎಲ್ಲದರಲ್ಲೂ ವೈವಿಧ್ಯತೆ ಇರುತ್ತದೆ. ಇದೇ ಜೀವ ವಿಕಾಸದ ಹಾದಿಯ ತಾತ್ವಿಕತೆ.
ದೇವರ ಮೇಲಿನ ಭಯಭಕ್ತಿಯ ಕಾರಣದಿಂದಾದರೂ ಕಾಡು ಉಳಿಸಿ ನಾಡು ಬಾಳಲಿ ಎನ್ನುವುದು ನಮ್ಮ ಗುರು ಹಿರಿಯರು ಬಹಳ ಹಿಂದೆಯೇ ಮನ ಗಂಡಿದ್ದರು. ಸಂಪ್ರದಾಯ ಸಂಸ್ಕೃತಿ ಪವಿತ್ರತೆಯ ಹೆಸರಿನಲ್ಲಿ ಪ್ರಕೃತಿಯನ್ನು ಅದು ಇರುವ ಮೂಲ ಸ್ವರೂಪದಲ್ಲಿ ಉಳಿಸಲು ತಮ್ಮದೇ ಆದ ಮಾರ್ಗೋಪಾಯಗಳನ್ನು ರೂಪುರೇಷೆಗಳನ್ನು ಹಾಕಿಕೊಳ್ಳುತ್ತಿದ್ದರು.
ಆಲದ ಮರದ ವಿಶೇಷತೆ ಎಂದರೆ ಬೆಳೆದ ಕೊಂಬೆ ರೆಂಬೆಗಳಲ್ಲಿ ಹುಟ್ಟಿಕೊಳ್ಳುವ ಜಡೆ ಆಕಾರದ ಬೇರುಗಳು ನೆಲದತ್ತ ಚಾಚಿಕೊಂಡು ಅದೇ ಒಂದೊಂದು ಮರವಾಗಿ ವಿಸ್ತರಿಸಿಕೊಳ್ಳುತ್ತದೆ. ನಮ್ಮ ದೇಶದಲ್ಲಿ ಸುದೀರ್ಘ ಇತಿಹಾಸವಿರುವ ಇಂತಹ ನಾಲ್ಕು ಮರಗಳು ಪತ್ತೆಯಾಗಿವೆ. ಮೊದಲನೆಯದ್ದು ಆಂಧ್ರಪ್ರದೇಶದ ಮೆಹಬೀಚ್ ನಗರದಲ್ಲಿದೆ. ಎರಡನೆಯದು ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿದೆ. ಮೂರನೆಯದು ತಮಿಳುನಾಡಿನ ಚೆನ್ನೈಯಲ್ಲಿದೆ. ನಾಲ್ಕನೆಯ ಬೃಹತ್ ಗಾತ್ರದ ಆಲದ ಮರವಿರುವುದು ನಮ್ಮ ರಾಜಧಾನಿ ಬೆಂಗಳೂರಿನ ದಕ್ಷಿಣದಲ್ಲಿರುವ ಕೇತೋಹಳ್ಳಿಯ ಮುನೇಶ್ವರ ದೇವಾಲಯದ ಪಕ್ಕದಲ್ಲಿದೆ. ಈ ಮರ 65ಫೀಟ್ ಎತ್ತರ ಮತ್ತು ಮೂರು ಎಕರೆ ಜಾಗವನ್ನು ಆಕ್ರಮಿಸಿಕೊಂಡಿದೆ. ಈ ಮರ ಸಾವಿರಾರು ಪ್ರಾಣಿ, ಪಕ್ಷಿಗಳಿಗೆ ಆವಾಸಸ್ಥಾನವಾಗಿದೆ. 400 ವರ್ಷಗಳ ಇತಿಹಾಸವಿರುವ ಈ ಮರದಲ್ಲಿ ಲೆಕ್ಕವಿಲ್ಲದಷ್ಟು ಕೋತಿಗಳು ವಾಸಿಸುತ್ತಿವೆ. ಬೆಂಗಳೂರು ಮೈಸೂರು ರಸ್ತೆಯಲ್ಲಿರುವ ಈ ಬೃಹತ್ ಮರವನ್ನು ನೋಡಲು ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಮಣ್ಣಿನ ಸವೆತವನ್ನು ತಡೆಗಟ್ಟುವ ಗುಣ ಈ ಮರದ ಬೇರುಗಳಿಗಿವೆ. ಮುನೇಶ್ವರ ದೇವಾಲಯದ ಆವರಣದಲ್ಲಿರುವ ಬೆಂಗಳೂರಿನ ಈ ಆಲದ ಮರದ ಸುತ್ತಲೂ ಕಲ್ಲು ಬೆಂಚುಗಳಿದ್ದು ಶುದ್ಧ ಪರಿಸರವೂ ಮರದ ನೆರಳು ನಗರ ಜೀವನದಿಂದ ಬೇಸತ್ತ ಜನರನ್ನು ವಿಹಾರಕ್ಕಾಗಿ ಇಲ್ಲಿಗೆ ಆಮಂತ್ರಿಸುತ್ತಿರುತ್ತದೆ.

ಬಯಲು ಎಂಬ ಆಲಯದ ಸ್ವರೂಪ ಪಡೆದ ಆಲದ ಮರ ನೂರು ಸಾವಿರವಾಗಲಿ. ನೆತ್ತಿಗೆ ನೆರಳಾಗಲಿ. ಪ್ರಕೃತಿಯ ಸಮತೋಲನ ಕಾಯುವ ಕಲ್ಪವೃಕ್ಷವಾಗಲಿ.

ದೇವಿಕಾ ನಾಗೇಶ್ ಹಾಸನ ಜಿಲ್ಲೆಯ, ಬೇಲೂರು ತಾಲೂಕಿನ, ಹಸುರು ಗುಡ್ಡದ ಮೂಲದವರು. ಈಗ ಮಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಎದೆಯ ಮುಳ್ಳುಗಳು (ಕಥಾ ಸಂಕಲನ ), ಹರಿವ ತೇವದಿ ಉರಿವ ತೊಡರು (ಲೇಖನ ಸಂಕಲನ), ಸಾರ ಅಬೂಬಕರ್ (ಜೀವನ ಚರಿತ್ರೆ), ಮುಸ್ಸಂಜೆ (ಕವನ ಸಂಕಲನ) ಪ್ರಕಟಿತ ಕೃತಿಗಳು. ಓದು, ಬರಹ, ತಿರುಗಾಟ, ಸಿನೆಮಾ ನೋಡುವುದು ಇವರ ಹವ್ಯಾಸಗಳು.

