ಮೆಲ್ಲಗೆ ಮೇಲಿಂದ ಏನೋ ಗೊರಗುಡುವ ಸದ್ದು ಕೇಳಿಸಿದೆ. ಮರದ ಎಲೆಗಳು ತುಂಬಾ ಕತ್ರಾಗಿದ್ದರಿಂದ ಮೇಲೆ ನೋಡಿದ್ದಾರೆ. ಏನೂ ಕಂಡಿಲ್ಲ. ಮತ್ತೊಂದೆರಡು ಮಾರು ಹತ್ತಿದ್ದಾರೆ. ಅಷ್ಟರೊಳಗೆ ಆ ಗೊರಗುಡುವ ಸದ್ದು ಕೊಂಚ ಜೋರಾಗಿದೆ. ಕೆಂಪ್ಲಿಂಗಜ್ಜನಿಗೆ ಅನುಮಾನ ಬಂದು ನಿಂತಲ್ಲಿಯೇ ತುಂಬಾ ಸೂಕ್ಷ್ಮವಾಗಿ ಸುತ್ತಲೂ ಕಣ್ಣಾಡಿಸಿದ್ದಾರೆ. ಅವರ ತಲೆಯ ಮೇಲಿನ ಕೈಯ್ಯಳತೆಯ ಕೊಂಬೆಯೊಂದರಲ್ಲಿ ದಡಿ ಕರಡಿಯೊಂದು ಕೂತಿದೆ!
ಎಸ್. ಗಂಗಾಧರಯ್ಯ ಅನುಭವ ಕಥನ “ಕಾಡ ಕಕ್ಕೆ”ಯ ಹನ್ನೆರಡನೆಯ ಕಂತು
ಚಿಕ್ಕಂದಿನಲ್ಲಿ ಹೊಲಮಾಳಗಳೆಂದರೆ ಬರೀ ಹೊಲಗಳಾಗಿರಲಿಲ್ಲ. ಗಿಡ ಮರಗಳ ಕಡಲಾಗಿದ್ದವು. ಆ ಮಾಳಗಳ ಬದುಗಳಲ್ಲಿ ಮಾತ್ರವಲ್ಲದೆ, ಹೊಲಗಳ ಮಧ್ಯೆ ಕೂಡ ಅಲ್ಲಲ್ಲಿ ಹಲಸು, ಮಾವು, ಬೆಲವತ್ತ, ಎರದೆ, ಕಾರೆ ಹಣ್ಣಿನ ಗಿಡ ಮುಂತಾದ ಗಿಡಮರಗಳಿರುತ್ತಿದ್ದವು. ಇವುಗಳೊಂದಿಗೆ ಜಾಲಿ ಮರ, ತೊಡರು ಮುಳ್ಳಿನ ಗಿಡಗಳೂ ಇರುತ್ತಿದ್ದವು. ಬೇಸಿಗೆಯಲ್ಲಿ ಜಾಲಿ ಮರಗಳನ್ನು ಸವರಿ ಬಿಡಲಾಗುತ್ತಿತ್ತು. ಮಳೆ ಬಿದ್ದ ಕೂಡಲೇ ಹೊಲದಗಕ್ಕೂ ಚೆಲ್ಲಾಪಿಲ್ಲಿಯಾಗಿರುತ್ತಿದ್ದ ಅವುಗಳ ಮುಳ್ಳುಗಳನ್ನು ಆಯುವುದೂ ಒಂದು ಕೆಲಸವಾಗಿರುತ್ತಿತ್ತು. ಈ ಎರಡೂ ಗಿಡಗಳಿಂದ ಕಡಿದ ಕೊಂಬೆಗಳನ್ನು ಹಸಿರು ಬೇಲಿಯಲ್ಲಿ ಬಿದ್ದಿರುತ್ತಿದ್ದ ಕಂಡಿಗಳಿಗೆ ಮುಚ್ಚಲಾಗುತ್ತಿತ್ತು. ಹಣ್ಣುಗಳ ಕಾಲದಲ್ಲಿ ಹೊಲದ ಕಡೆ ಹೋದರೆ ಒಂದಲ್ಲಾ ಒಂದು ಹಣ್ಣು ಸಿಗುತ್ತಿತ್ತು. ಎಂಥ ಪುಟ್ಟ ಹಿಡುವಳಿಯ ರೈತನ ಹೊಲವೂ ಇದರಿಂದ ಹೊರತಾಗಿರಲಿಲ್ಲ.
ನಮ್ಮ ಹೊಲಗಳಲ್ಲಿ ನಾಲ್ಕೈದು ಹಲಸಿನ ಮರಗಳಿದ್ದವು. ಇವುಗಳ ಜೊತೆಗೆ ಒಂದೆರಡು ನಾಟಿ ಮಾವಿನ ಮರಗಳು, ಒಂದು ಬೆಲವತ್ತದ ಮರವಿತ್ತು. ಹಲಸಿನ ಹಣ್ಣಿನ ಕಾಲ ಬಂದರೆ ಸಾಕು, ಇಡೀ ಹೊಲಮಾಳವೆಲ್ಲಾ ಹಲಸು, ಮಾವು, ಬೆಲವತ್ತ, ಎರದೆ ಮುಂತಾದ ಹಣ್ಣುಗಳ ಪರಿಮಳದಲ್ಲಿ ಮುಳುಗೇಳುತ್ತಿತ್ತು. ಈ ಕಾಲದಲ್ಲಿ ಪಕ್ಕದ ಗುಡ್ಡಗಳಲ್ಲಿ ಇರುತ್ತಿದ್ದ ಕರಡಿಗಳು ಇರುಳಿನಲ್ಲಿ ಹೊಲಮಾಳಗಳಿಗೆ ಮುಗಿ ಬೀಳುತ್ತಿದ್ದವು. ಬೆಲವತ್ತ ಕಾಯಿ ಬಿಡುವ ಕಾಲದಲ್ಲಿ ಮಕ್ಕಳು ಮಂಕರಿ ಸಗಣಿಯನ್ನು ಹಾಕಲು, ಗಡಿಗೆಗಳಲ್ಲಿ ಗಂಜಲ ತುಂಬಿಕೊಂಡು ಸುರಿಯಲು ಹೋದಾಗ ಬರುವಾಗ ಬಿದ್ದರುತ್ತಿದ್ದ ಬೆಲವತ್ತದ ಹಣ್ಣುಗಳನ್ನು ಆಯ್ದು ತರುತ್ತಿದ್ದೆವು. ಇನ್ನು ಎರದೆ ಹಣ್ಣಿ ಕಾಲದಲ್ಲಂತೂ ನಮ್ಮ ಚೆಡ್ಡಿ ಹಾಗೂ ಅಂಗಿ ಜೇಬುಗಳಲ್ಲಿ ಎರದೆ ಹಣ್ಣುಗಳು ಇದ್ದೇ ಇರುತ್ತಿದ್ದವು. ಕಲ್ಲು ಹೊಲ ಅಂತ ಕರೆಯುತ್ತಿದ್ದ ಹೊಲದ ಮೂಲೆಯ ಬದುವಿನಲ್ಲೊಂದು ಎರದೆ ಮರ ಇತ್ತು. ಅದರ ಕೆಂಗು ಹಾಗೂ ಹಣ್ಣುಗಳು ಒಂದಕ್ಕಿಂತ ಒಂದು ರುಚಿಯಾಗಿರುತ್ತಿದ್ದವು. ಜತೆಗೆ ಜಾಸ್ತಿ ಹುಳ ಹಿಡಿಯುತ್ತಿರಲಿಲ್ಲ. ಒಂದಾಳು ಎತ್ತರಕ್ಕಿಂತ ಕೊಂಚ ಜಾಸ್ತಿ ಇದ್ದ ಈ ಮರ ಸುತ್ತಲೂ ಛತ್ರಿಯಂತೆ ಹರವಿಕೊಂಡಿತ್ತು. ಬುಡವನ್ನು ಹಿಡಿದು ಅಲ್ಲಾಡಿಸಿದರೆ ಜೇಬು ತುಂಬುವಷ್ಟು ಹಣ್ಣು ಸಿಗುತ್ತಿದ್ದವು. ಇನ್ನು ಮಾವಿನ ಹಣ್ಣಿನ ಕಾಲದಲ್ಲಂತೂ ಇಡೀ ಹೊಲಮಾಳದಲ್ಲಿ ನಾಟಿ ಹಣ್ಣುಗಳು ಸೂರಾಡುತ್ತಿದ್ದವು. ಮರದಲ್ಲಷ್ಟೇ ಅಲ್ಲ ಕೆಳಕ್ಕೂ ಬಿದ್ದು ತಿಂದರೆ ಸಾಕಪ್ಪ ಅಂತ ಕಾಯುತ್ತಿದ್ದವು. ಆಗ ನಮಗೆ ಯಾವ ಮರದ ಹಣ್ಣಿನ ರುಚಿ ಹೆಂಗಿರುತ್ತದೆ ಅನ್ನುವುದು ತಿಂದ ಅನುಭವದಿಂದ ಗೊತ್ತಿರುತ್ತಿತ್ತು. ಹಂಗಾಗಿ ಆ ಮರಗಳಿಗೆ ಮುಗಿಬೀಳುತ್ತಿದ್ದೆವು. ಹಂಗೆ ಹಣ್ಣುಗಳನ್ನು ತಿನ್ನುವಾಗ ಹೊಟ್ಟೆಗಷ್ಟೇ ಅಲ್ಲದೆ ನಮ್ಮ ಅಂಗಿ, ಚೆಡ್ಡಿಗಳಿಗೂ ತಿನ್ನಿಸುತ್ತಿದ್ದೆವು. ಈ ಕಾರಣಕ್ಕೆ ನಮ್ಮ ಯಾವುದೇ ಅಂಗಿ ಚೆಡ್ಡಿಗಳೂ ಮಾವಿನ ಕಾಯಿಯ ಹಾಲು ಹಾಗೂ ಹಣ್ಣಿನ ಕಲೆಯಿಂದ ಮುಕ್ತವಾಗಿರುತ್ತಿರಲಿಲ್ಲ. ಬೇರೆ ಬೇರೆ ಹೊಲದವರೂ ಕೊಂಚ ಧಾರಾಳವಾಗಿರುತ್ತಿದ್ದರು. ಹೆದರಿಸಿ ಓಡಿಸುತ್ತಿರಲಿಲ್ಲ. ಅವರೂ ತಿಂದು ಮಿಗುವಷ್ಟು ಕಾಯಿಗಳು ಜೋಲುತ್ತಿದ್ದವು. ಸಾಲದ್ದಕ್ಕೆ ಆಗ ಈ ಯಾವ ಹಣ್ಣುಗಳನ್ನೂ ಮಾರಾಟ ಮಾಡುವ ಮನಸ್ಥಿತಿಯೇ ಇರಲಿಲ್ಲ. ಹಿಂಗೆ ಪ್ರಾಣಿ, ಪಕ್ಷಿ, ಮನುಷ್ಯರು ತಿಂದು ಮಿಕ್ಕಿದ್ದನ್ನು ಮರಗಳಿಂದ ಇಳಿಸಿಕೊಂಡು ಮನೆಗಳಿಗೆ ಸಾಗಿಸುತ್ತಿದ್ದರು.
ಇದೇ ಕಲ್ಲು ಹೊಲದ ಹೊಲದ ಮುಡುಕಿನಲ್ಲಿ ಒಂದು ಹಲಸಿನ ಮರವಿತ್ತು. ಅದರ ಒಂದು ಕೊಂಬೆ ಯಾವುದೋ ಕಾಲದಲ್ಲಿ ಬೀಸಿದ ಮಳೆಗಾಳಿಗೆ ಮುರಿದು ಹೋಗಿತ್ತು. ಆದ್ದರಿಂದ ಅದನ್ನು ಮುರ್ಕಲಸಿನ ಮರ ಅಂತಲೇ ಕರೆಯುತ್ತಿದ್ದೆವು. ಹಣ್ಣಿನ ಕಾಲದಲ್ಲಿ ಬೇರೆ ಯಾವ ಹಲಸಿನ ಮರಕ್ಕೆ ಜೋಪಾನ ಮಾಡದಿದ್ದರೂ, ಈ ಮರಕ್ಕೆ ಮಾತ್ರ ಜೋಪಾನ ಮಾಡಲಾಗುತ್ತಿತ್ತು. ಅದರಲ್ಲಿ ಹೀಚಾಗಲು ಶುರುವಾಗುತ್ತಿದ್ದಂತೆಯೇ ಅದರ ಬುಡದ ಸುತ್ತಲೂ ಯಾರೂ ಸುಲಭಕ್ಕೆ ಒಳ ನುಗ್ಗಲಾಗದಂತೆ ಥರಾವರಿ ಮುಳ್ಳಿನ ದಪ್ಪ ಬೇಲಿಯನ್ನು ಹಾಕಲಾಗುತ್ತಿತ್ತು. ಕಾರಣ ಅದು ಚಂದ್ರ ಹಲಸಿನ, ಕೆಂಪು ತೊಳೆಯ ಹಣ್ಣಿನ ಮರವಾಗಿತ್ತು. ಬಾಯಿಗಿಟ್ಟರೆ ಕರಗಿ ಹೋಗುಂಥ ಸಿಹಿಯದ್ದಾಗಿತ್ತು.
ಮುಸುಕುಗಳು ಕಾಣಿಸಿಕೊಳ್ಳುತ್ತಿದ್ದಂತೆ ಪದಾರ್ಥ ಮಾಡುವ ಸಲುವಾಗಿ ಅಂಥ ದಡಿ ಬೇಲಿಯನ್ನೂ ಸರುಕಿಸಿ ಕಿತ್ತುಕೊಳ್ಳುತ್ತಿದ್ದರು. ಇನ್ನು ಕಾಯಿಗಳು ಬಲಿಯತೊಡಗಿದಂತೆ ಈ ಮರದಲ್ಲಿ ಕಳ್ಳತನಕ್ಕೆ ಬರೀ ಮನುಷ್ಯರಷ್ಟೇ ಪ್ರಯತ್ನ ಮಾಡುತ್ತಿರಲಿಲ್ಲ.. ಇವರುಗಳ ಜೊತೆಗೆ ಕೆಲವೊಮ್ಮೆ ಕರಡಿಗಳೂ ದಾಳಿ ಇಡುತ್ತಿದ್ದವು. ಸಾಮಾನ್ಯವಾಗಿ ಇರುಳಿನಲ್ಲಿ ಮಾತ್ರ ಹೊಲಮಾಳಗಳಲ್ಲಿ ಅಡ್ಡಾಡುತ್ತಿದ್ದ ಕರಡಿಗಳು ಹಲಸಿನ ಹಣ್ಣಿನ ಕಾಲದಲ್ಲಿ ಒಮ್ಮೊಮ್ಮೆ ಹಗಲಿನಲ್ಲಿಯೂ ಕಾಣಿಸಿಕೊಳ್ಳುತ್ತಿದ್ದವು. ಅಕಸ್ಮಾತ್ ಕರಡಿಗಳು ಕಾಣಿಸಿಕೊಂಡರೆ ತಕ್ಷಣವೇ ಬೆಂಕಿ ಹತ್ತಿಸಬೇಕೆಂದೂ, ಆ ಬೆಂಕಿಯನ್ನು ಕಂಡ ಕೂಡಲೇ ಅವು ಪೇರಿ ಕಿತ್ತು ಬಿಡುತ್ತವೆಂದೂ ನಮಗೆ ದೊಡ್ಡವರು ಹೇಳುತ್ತಿದ್ದರು. ಆದ್ದರಿಂದ ಹೊಲದ ಕಡೆ ಹೋಗುವಾಗಲೆಲ್ಲಾ ಹೆಚ್ಚೂ ಕಡಿಮೆ ನಮ್ಮ ಜೇಬುಗಳಲ್ಲಿ ಬೆಂಕಿಪಟ್ಟಣವಿರುತ್ತಿತ್ತು. ನನ್ನ ಕೆಲವು ಗೆಳೆಯರಿಗೆ ಕದ್ದು ಬೀಡಿ ಸೇದಲು ಇದು ವರದಾನವೂ ಆಗಿತ್ತು.
ಅದು ಆ ಸಾರ್ತಿಯ ಹಲಸಿನ ಹಣ್ಣಿನ ಕಾಲ. ಅವತ್ತೊಂದು ದಿನ ಕೆಂಪ್ಲಿಂಗಜ್ಜ ಹಲಸಿನ ಹಣ್ಣಿಗಾಗಿ ಮುರ್ಕಲಸಿನ ಮರದ ಹತ್ತಿರ ಹೋಗಿದ್ದಾರೆ. ಅದರ ಮುಳ್ಳು ಬೇಲಿಯನ್ನು ವಾರೆ ಮಾಡಿ ದಾರಿ ಮಾಡಿಕೊಂಡು ಬುಡದ ಹತ್ತಿರಕ್ಕೆ ಹೋಗಿ, ಬುಡದಲ್ಲಿ ಬಿಟ್ಟಿದ್ದ ಕಾಯಿಗಳಾವುವೂ ಬಲಿತಿಲ್ಲದ್ದನ್ನು ಖಾತ್ರಿಪಡಿಸಿಕೊಂಡು ಮರವನ್ನು ಹತ್ತಿ ನೋಡಲು ತೀರ್ಮಾನಿಸಿದ್ದಾರೆ. ಒಂದೆರಡು ಮಾರು ಮರವನ್ನು ಹತ್ತಿದ್ದಾರೆ. ಆಗ ಮೆಲ್ಲಗೆ ಮೇಲಿಂದ ಏನೋ ಗೊರಗುಡುವ ಸದ್ದು ಕೇಳಿಸಿದೆ. ಮರದ ಎಲೆಗಳು ತುಂಬಾ ಕತ್ರಾಗಿದ್ದರಿಂದ ಮೇಲೆ ನೋಡಿದ್ದಾರೆ. ಏನೂ ಕಂಡಿಲ್ಲ. ಮತ್ತೊಂದೆರಡು ಮಾರು ಹತ್ತಿದ್ದಾರೆ. ಅಷ್ಟರೊಳಗೆ ಆ ಗೊರಗುಡುವ ಸದ್ದು ಕೊಂಚ ಜೋರಾಗಿದೆ. ಕೆಂಪ್ಲಿಂಗಜ್ಜನಿಗೆ ಅನುಮಾನ ಬಂದು ನಿಂತಲ್ಲಿಯೇ ತುಂಬಾ ಸೂಕ್ಷ್ಮವಾಗಿ ಸುತ್ತಲೂ ಕಣ್ಣಾಡಿಸಿದ್ದಾರೆ. ಅವರ ತಲೆಯ ಮೇಲಿನ ಕೈಯ್ಯಳತೆಯ ಕೊಂಬೆಯೊಂದರಲ್ಲಿ ದಡಿ ಕರಡಿಯೊಂದು ಕೂತಿದೆ! ಕೆಂಪ್ಲಿಂಗಜ್ಜನಿಗೆ ಏನು ಮಾಡಬೇಕೆಂದು ತೋಚದೆ ಇತ್ತ ಇಳಿಯಲೂ ಕಾಲು ಬಾರದೆ ಕೂಗಿಕೊಳ್ಳಲೂ ಬಾಯಿ ಬರದೆ ಭಯಕ್ಕೆ ನಿಂತಲ್ಲೇ ಕಲ್ಲಾಗಿ ಬಿಟ್ಟಿದ್ದಾರೆ. ಕರಡಿಯೂ ಸಹ ಎಂದಿನಂತೆ ಪುಕ್ಕಲಿನಿಂದಾಗಲಿ, ರೋಷದಿಂದಾಗಲಿ ವರ್ತಿಸದೆ ತನ್ನ ಪಾಡಿಗೆ ತಾನು ಕೂತಿದೆ. ಕೊಂಚ ಹೊತ್ತಿನ ಮೇಲೆ ಅತ್ತ ಹೊಲದತ್ತ ಬಂದವರೊಬ್ಬರು ಹಲಸಿನ ಮರದ ಹತ್ತಿರಕ್ಕೆ ಬಂದಿದ್ದಾರೆ. ಆಗ ರವಷ್ಟು ಧೈರ್ಯ ತಂದುಕೊಂಡ ಕೆಂಪ್ಲಿಂಗಜ್ಜ ಒಂದೊಂದೇ ಹೆಜ್ಜೆ ಕೆಳಗಿಳಿದು ಬೇಲಿಯ ಮುಳ್ಳುಗಳನ್ನೂ ಲೆಕ್ಕಿಸದೆ ಅಲ್ಲಿಗೆ ಬಂದಿದ್ದವನಿಗೂ ಮೇಲೆ ಕರಡಿ ಕೂತಿರುವುದನ್ನು ಕೂಗಿ ಹೇಳಿಕೊಂಡು ಮನೆಯತ್ತ ಓಡಿದ್ದಾರೆ. ಅದಾದ ಎರಡು ದಿನ ಜ್ವರ ಹಿಡಿದು ಮಲಗಿದ್ದರಂತೆ. ಒಂದಷ್ಟು ದಿನ ಕರಡಿಯ ಭಯಕ್ಕೆ ಯಾರೂ ಆ ಮರದತ್ತ ಸುಳಿದಿರಲಿಲ್ಲ.
ಆಗ ಹೊಲಮಾಳಗಳಲ್ಲಿ ಹಲಸಿನ ಮರಗಳು ಸಮೃದ್ಧಿಯಾಗಿದ್ದವು. ಅಂತೆಯೇ ಥರಾವರಿ ಬಗೆಯ, ರುಚಿಯ ಹಲಸಿನ ಮರಗಳಿದ್ದವು. ಸಾಮಾನ್ಯವಾಗಿ ಎಲ್ಲಾ ಹಲಸಿನ ಮರಗಳು ಒಂದೇ ಕಾಲದಲ್ಲಿ ಕಾಯಿ ಬಿಡುತ್ತಿದ್ದವು. ಆ ಕಾಲ ಬಂದರೆ ಸಾಕು, ವಾರಕ್ಕೊಮ್ಮೆ ನಮ್ಮ ಮನೆಯಲ್ಲಿ ಹಲಸಿನ ಹಣ್ಣುಗಳನ್ನು ಮುರಿದು ತರಲು ಗಾಡಿಯನ್ನು ಕಟ್ಟಿಕೊಂಡು ಹೊಲಗಳಿಗೆ ಹೋಗಲಾಗುತ್ತಿತ್ತು. ಆಗ ಮುರಿದವುಗಳಲ್ಲಿ ಕೆಲವಾಗಲೇ ಹಣ್ಣಾಗಿರುತ್ತಿದ್ದವು. ಮತ್ತೆ ಕೆಲವು ಚೆನ್ನಾಗಿ ಬಲಿತಿರುತ್ತಿದ್ದವು. ಅಷ್ಟೊಂದು ಹಣ್ಣುಗಳನ್ನು ಹೆಂಗೇ ತಿಂದರೂ ಅವುಗಳಲ್ಲಿ ಅರ್ಧದಷ್ಟನ್ನೂ ಖಾಲಿ ಮಾಡಲಾಗುತ್ತಿರಲಿಲ್ಲ. ಆಗ ಅವುಗಳನ್ನು ಈಗಿನಂತೆ ಸಂತೆಗಳಲ್ಲಿ ಮಾರುವ ಅಭ್ಯಾಸವಿರಲಿಲ್ಲ. ಹಂಗಾಗಿ ಕೀಳುವಾಗ ಹಾಗೂ ಗಾಡಿಗೆ ತುಂಬಿಕೊಂಡು ಬರುವಾಗ ದಾರಿಯಲ್ಲಿ ಸಿಕ್ಕವರಿಗೆಲ್ಲಾ ಹಣ್ಣುಗಳನ್ನು ಕೊಡಲೇಬೇಕಿತ್ತು. ಸಿಕ್ಕ ಸಿಕ್ಕವರಿಗೆಲ್ಲಾ ಕೊಟ್ಟು ಇನ್ನೂ ಜಾಸ್ತಿ ಉಳಿದರೆ ಜಾಸ್ತಿಯಾದವುಗಳನ್ನು ಕೆಲವರ ಮನೆಗಳಿಗೇ ತಲುಪಿಸುವಂತೆ ಮಕ್ಕಳಾದ ನಮಗೆ ಹೇಳಲಾಗುತ್ತಿತ್ತು. ಅದರಂತೆ ನಾವು ಒಂದೊಂದೇ ಹಣ್ಣುಗಳನ್ನು ಹೊತ್ತು ಅವರು ಹೇಳಿದ ಮನೆಗಳ ಬಾಗಿಲಿಗೆ ಹೋಗುತ್ತಿದ್ದೆವು. ಆಗ ಅವರು ನಮ್ಮ ಮನೇಲೇ ಇದಾವೆ ಇದನ್ನ ತಗಂಡು ಏನು ಮಾಡಲಿ, ಅಂತ ಹೇಳಿದರೆ, `ನಂಗೊತ್ತಿಲ್ಲ ತಗಬೇಕಂತೆ’, ಅಂತ ಹೇಳುತ್ತಾ ಕೈಯ್ಯಲ್ಲಿದ್ದ ಕಾಯನ್ನು ಅಲ್ಲಿಟ್ಟು ಓಡಿ ಬರುತ್ತಿದ್ದೆವು.

ABCDDA
ಇದೇರೀತಿ ಅವರವರ ಹಿತ್ತಿಲ ಕೊಪ್ಪಲುಗಳಲ್ಲಿ ಬೆಳೆದ ತರಕಾರಿಗಳ ವಿಲೇವಾರಿ ಕೂಡಾ ಆಗುತ್ತಿತ್ತು. ಆಗ ಹಿತ್ತಲಿಲುಗಳೇ ಹಳ್ಳಿಗಳ ಸ್ವಾವಲಂಬನೆಯ ಸಂಕೇತಗಳಾಗಿದ್ದವು. ಹಿತ್ತಿಲುಗಳೆಂದರೆ ತರಕಾರಿ, ಸೊಪ್ಪುಸೆದೆಗಳ ಕಣಜಗಳಾಗಿರುತ್ತಿದ್ದವು. ಹಿತ್ತಿಲುಗಳೆಂದರೆ, ಅಲ್ಲಿ ಒಂದು ಹುಲ್ಲಿನ ಮೆದೆ, ಕನಿಷ್ಟ ಎರಡು ಮೂರು ಬಗೆಯ ಸೊಪ್ಪುಗಳ ಮಡಿಗಳು, ಬದನೆ, ನುಗ್ಗೆ, ಕರಿಬೇವಿನ ಗಿಡಗಳು, ಬಚ್ಚಲು ನೀರು ಹರಿಯುವಲ್ಲಿ ಗುಂಪು ಬಾಳೆ ಗಿಡಗಳು, ಹಿತ್ತಲವರೆಯ ಚಪ್ಪರ, ತುಪ್ಪವರೆ, ಬೇಲಿಯಲ್ಲಿ ತೊಂಡೆಕಾಯಿಯ ಬಳ್ಳಿಗಳು, ಎರಡು ಮೂರು ಬಗೆಯ ಮಲ್ಲಿಗೆ ದಂಟುಗಳು, ಪೂಜೆಗಾಗಿ ಥರಾವರಿ ಗಿಡಗಳು, ಇವುಗಳಿಗೆಲ್ಲಾ ನೀರು ಹಾಕಲು ಸಣ್ಣದೊಂದು ಕೈ ಬಾವಿ ಮುಂತಾದವುಗಳು ಸರ್ವೇಸಾಮಾನ್ಯವಾಗಿದ್ದವು. ಅದೇರಿತಿ ಸೊಪ್ಪಿನ ಮಡಿಗಳಿಗೆ ಬೆಳಗೆದ್ದು ಜರಡಿಯನ್ನಿಡಿದು ನೀರಾಕುವ ಜವಾಬ್ದಾರಿ ಮಕ್ಕಳ ಹೆಗಲಿಗಿರುತ್ತಿತ್ತು. ನಾವು ಸಂಜೆ ಆಟ ಆಡಿಕೊಂಡು ಮನೆಯತ್ತ ಹೊರಟದ್ದನ್ನು ಗಮನಿಸುತ್ತಿದ್ದ ಕೆಲವರು ತಮ್ಮ ಹಿತ್ತಿಲುಗಳಲ್ಲಿ ಬೆಳೆದ ತರಕಾರಿಯನ್ನು ಕರೆದು ಕೈಗಿಡುತ್ತಿದ್ದರು. `ಇದು ನಮ್ ಹಿತ್ಲಾಗೂ ಐತೆ’ ಅಂದರೂ `ತಗಂಡು ಹೋಗ್ತೀಯ ಇಲ್ವಾ ಸುಮ್ಕೆ’ ಅಂತ ಗದರಿಸುತ್ತಿದ್ದರು. ಇಂಥ ಹಿತ್ತಿಲುಗಳ ಕಣ್ಮರೆಯಾದ ದಿನದಿಂದಲೇ ಹಳ್ಳಿಗಳ ಸ್ವಾವಲಂಬನೆಯೂ ಕಣ್ಮರೆಯಾಗತೊಡಗಿತು. ನಮ್ಮ ಊರಲ್ಲಿ ಶಿವಲಿಂಗಜ್ಜ ಅಂತ ಶತಾಯುಷಿಯೊಬ್ಬರಿದ್ದರು. ನೋಡಲು ಥೇಟ್ ಸಂತನಂತೆ ಕಾಣುತ್ತಿದ್ದ ಅವರು ನಿಜವಾದ ಸಂತನಂತೆಯೇ ಬದುಕಿದ್ದವರು. ಜತೆಗೆ ಜಾತಿಯ ಸಣ್ಣತನಗಳಿಂದ, ದೇವರು ದಿಂಡರುಗಳೆಂಬ ಮೌಢ್ಯದಿಂದ ದೂರವಾಗಿದ್ದರು. ಅದ್ದಕ್ಕೆ ಅವರ ಇಡೀ ನಡಾವಳಿಕೆ ಸಾಕ್ಷಿಯಾಗಿತ್ತು. ವಚನಕಾರ ಸಿದ್ದರಾಮ ಹಾಗೂ ಬಸವಣ್ಣನವರ ಇಡೀ ಆಶಯಗಳನ್ನು ಅವರಿಗರಿವಿಲ್ಲದಂತೆ ರೂಢಿಸಿಕೊಂಡಿದ್ದರು. ಅವರಿಗೆ ಗಿಡ ಮರಗಳನ್ನು ಬೆಳೆಸುವುದು, ಅವುಗಳು ಬೆಳೆಯುತ್ತಾ ಅವುಗಳ ಹಸಿರಿನಲ್ಲಿ ಹಿಗ್ಗುವುದು ಪರಮ ಸುಖದ ಸಂಗತಿಯಾಗಿತ್ತು. ಹಂಗಂತ ಅವರಿಗೆ ಗಿಡಮರಗಳನ್ನು ಬೆಳಸಲು ತಮ್ಮದೇ ನೆಲ ಇಲ್ಲವೇ ಹೊಲ ಆಗಬೇಕು ಅನ್ನುವ ಸ್ವಾರ್ಥ ಇರಲಿಲ್ಲ. ನಮ್ಮ ಊರಾಚೆಯ ಬಳಸಾಕಟ್ಟೆ ಹಾಗೂ ಸಮ್ಗಟ್ಟೆಗಳ ಹಿಂಭಾಗದಲ್ಲಿ ಅವರು ನೆಟ್ಟಿದ್ದ ಮರಗಳು ಈಗಲೂ ಇವೆ. ಅಂತೆಯೇ ಅವರಿಗೆ ಓಡುವ ನೀರನ್ನು ಕೊಂಚ ಸಮಾಧಾನಿಸಿ ಹೋಗುವಂತೆ ಚಣೊತ್ತು ನಿಲ್ಲಿಸಿದರೆ ಅದರಿಂದ ಗಿಡ, ಮರ, ಪ್ರಾಣಿ ಪಕ್ಷಿಗಳ ಜೀವಕ್ಕೆ ಆಸರೆಯಾಗುತ್ತೆ ಅನ್ನುವ ತಿಳುವಳಿಕೆಯಿತ್ತು. ಹಂಗಾಗಿ ಖುದ್ದು ತಾವೇ ಕಲ್ಲುಗಳನ್ನು ಕಿತ್ತು ಸಣ್ಣಪುಟ್ಟ ಒಡ್ಡುಗಳನ್ನು ಕಟ್ಟಿದ್ದಾರೆ. ಅವು ಇವತ್ತಿಗೂ ಹಂಗೇ ಇವೆ. ಕೆರೆ ಕಟ್ಟೆಗಳನ್ನು ಸ್ವಚ್ಛವಾಗಿಡುವುದು, ಅವುಗಳಿಗೆ ಬರುವ ನೀರಿನ ದಾರಿಗಳನ್ನು ಸರಿ ಮಾಡುವುದು ಅವರಿಗೆ ನಿಜವಾದ ಕಾಯಕ ಆಗಿತ್ತು. ಮಹಾ ಮೌನಿಯಾಗಿರುತ್ತಿದ್ದ ಈ ಅಜ್ಜ ನಮ್ಮಂಥ ಮಕ್ಕಳು ಸಿಕ್ಕರೆ ತಮ್ಮ ಅನುಭವದ ಕೆಲವು ಅಗತ್ಯ ಮಾತುಗಳನ್ನು ಹೇಳುತ್ತಿದ್ದರು. ಆ ಮಾತುಗಳು ಆಗ ನಮ್ಮ ಆಲೋಚನೆಗೆ ಎಟಕುತ್ತಿರಲಿಲ್ಲ. ಹಂಗಂತ ಗೊತ್ತಿದ್ದರೂ ಅವುಗಳನ್ನು ಆಗಾಗ ನಮ್ಮ ಕಿವಿಗಳ ಮೇಲೆ ಹಾಕುತ್ತಿದ್ದರು. ಆ ಹೊತ್ತಿಗಾಗಲೇ ಹೊಲ ಮಾಳಗಳ ಅವನತಿ ಶುರುವಾಗಿತ್ತು. ಹೊಲಮಾಳಗಳ ಎದೆಯ ಮೇಲಿದ್ದ ಗಿಡ ಮರಗಳು ಕಣ್ಮರೆಯಾಗತೊಡಗಿದ್ದವು. ಎಂದೂ ಬೇಲಿಗಳನ್ನೇ ಕಾಣದೆ ಬಟ್ಟಂಬಯಲಾಗಿದ್ದ ಹೊಲಮಾಳಗಳನ್ನು ಬೇಲಿಯಿಂದ ಬಂಧಿಸುವ ಕೆಲಸ ಶುರುವಾಗಿತ್ತು. `ಈ ಮನ್ಸ ಅನ್ನೋನ್ಗೆ ಎಷ್ಟಿದ್ರೂ ಸಾಲಾಕಿಲ್ಲ. ಜತ್ಗೆ ಯಾವುದ್ನೂ ಇದ್ದಂಗೆ ಇರಾಕೆ ಬಿಡಲ್ಲ. ಅಲ್ಲ ಈ ಹೊಲಮಾಳ್ಗುಳಾಗೆ ಇರಾ ಗಿಡ ಮರ್ಗುಳು, ಅವ್ಗುಳು ಬಿಡಾ ಹಣ್ಗುಳು ಇವ್ರಿಗಷ್ಟೇ ಸೇರವೆ ಅಂದ್ಕಂಡಿದಾರೆ ಈ ಮೂಢಾತ್ಮರು. ಎತ್ಲಾಗೆ ನೋಡಿದ್ರೂ ಬೇಲಿ ಹಾಕ್ಕಂತಾವ್ರೆ. ಹಿತ್ಲು ಬದ್ಕು ಗೊತ್ತಿಲ್ದೋನು ಎತ್ಲಾಗೋದ್ರೆ ಏನು ಬಂತು?’ ಮುಂತಾದ ಮಾರ್ಮಿಕ ಮಾತುಗಳನ್ನು ಆಡುತ್ತಿದ್ದರೆ ನಾವು ಆ ಮಾತುಗಳ ತಲೆ ಬುಡ ತಿಳಿಯದೆ ಅಜ್ಜನ ಗೇಣುದ್ದದ ಬೆಳ್ಳಂಬೆಳ್ಳನೆಯ ಗಡ್ಡ, ಹಿಂದಕ್ಕೆ ಹಂಗೇ ಬಾಚಿಕೊಂಡಿರುತ್ತಿದ್ದ ಅಂಥದೇ ಬಿಳಿಯ ಜಡೆಯಂಥ ಮುಡಿ, ಖಾದಿಯ ಜುಬ್ಬ, ಲುಂಗಿಗಳು, ಹೆಗಲ ಮೇಲೊಂದು ಬಿಳಿಯ ವಸ್ತ್ರ, ಕಾಂತಿ ತುಂಬಿದ ಕಣ್ಣು ಹಾಗೂ ಸಮಾಧಾನ ತುಂಬಿದ ಅಜ್ಜನ ಮೊಗವನ್ನೇ ದಿಟ್ಟಿಸುತ್ತಿದ್ದೆವು. ಈಗವರನ್ನು ನೆನೆದರೆ ನಿಜವಾದ ಸಂತ ಕಣ್ಮುಂದೆ ಬರುತ್ತಾನೆ. ಹಿಂಗೆ ಪರೋಪಕಾರಕ್ಕಾಗಿ ಅದರಲ್ಲೂ ಪ್ರಕೃತಿ ಪ್ರೀತಿಯನ್ನೇ ಉಸಿರಾಗಿಸಿಕೊಂಡಿದ್ದ, ಜಾತಿ, ಧರ್ಮಗಳ ಹಂಗಿಲ್ಲದೆ ಬದುಕಿದ ಜೀವವೊಂದು ನಮ್ಮ ಊರಲ್ಲಿ ಇತ್ತು ಅನ್ನುವುದು ನನಗೆ ಇಂದಿಗೂ ಹೆಮ್ಮೆ ಅನಿಸುತ್ತದೆ.
ಇಂಥ ಹೊಲಮಾಳಗಳು, ಅವುಗಳಲ್ಲಿನ ಗಿಡಮರಗಳು, ಸಂತನಂಥ ಈ ಅಜ್ಜ ನಮ್ಮಂಥ ಮಕ್ಕಳೊಳಗೆ ಪುಳಕ ಹುಟ್ಟಿಸುತ್ತಿದ್ದರೆ ಅದೊಂದು ಮರ ಮಾತ್ರ ನಡುಕ ಹುಟ್ಟಿಸುತ್ತಿತ್ತು. ಅದು ಮಾವಿನ ಮರ. ಅದು ಊರವರ ಬಾಯಲ್ಲಿ ಹೆಣ ಕುಯ್ಯುವ ಮರ. ಏಕೆಂದರೆ ಆಗ ತಾಲ್ಲೂಕು ಕೇಂದ್ರೆ ಚಿಕ್ಕನಾಯಕನಹಳ್ಳಿಯಲ್ಲಿ ಮಾತ್ರ ಹೆಣ ಕುಯ್ಯುವ ಮನೆ ಅಂದರೆ ಶವಾಗಾರ ಇತ್ತು. ಊರಿನಲ್ಲಿ ಕೆರೆ ಅಥವಾ ಬಾವಿಗೆ ಬಿದ್ದೋ ಇಲ್ಲಾ ನೇಣು ಹಾಕಿಕೊಂಡೋ ಸತ್ತರೆ ಅಂಥ ಹೆಣಗಳ ಪರೀಕ್ಷೆ ನಡೆಯುತ್ತಿದ್ದದ್ದು ಈ ಮರದ ಅಡಿಯಲ್ಲಿಯೇ. ಆಗಿನ್ನೂ ನಮ್ಮೂರಿಗೆ ರಸ್ತೆ ಎಂಬುದು ಇದ್ದರೂ ಅದು ಕೇವಲ ಎತ್ತಿನ ಗಾಡಿಗಳನ್ನು ಓಡಾಡಿಸುವುದಕ್ಕೆ ಮಾತ್ರ ಅನ್ನುವ ಹಂಗಿತ್ತು. ಹಂಗಾಗಿ ನಮ್ಮೂರಿನಿಂದ ಶೆಟ್ಟೀಕೆರೆಗೆ ಸಂತೆ ಮುಂತಾದವುಗಳಿಗೆ ಹೋಗಬೇಕಾದರೆ ಹೆಚ್ಚಾಗಿ ಹೊಲಮಾಳದ ನಡುವಿನ ಕಾಲು ದಾರಿಯನ್ನೇ ಬಳಸುತ್ತಿದ್ದರು. ಸ್ಕೂಲಿಗೆ ಹೋಗುತ್ತಿದ್ದ ಮಕ್ಕಳಿಗೂ ಅಷ್ಟೇ ಈ ಕಾಲು ದಾರಿಯೇ ರೂಢಿಯಾಗಿತ್ತು. ಸಾಲದ್ದಕ್ಕೆ ಈ ಕಾಲು ದಾರಿಯಲ್ಲಿ ಹೋದರೆ ಮಿಡ್ಲ್ ಸ್ಕೂಲ್ ತುಂಬಾ ಹತ್ತಿರವಾಗುತ್ತಿತ್ತು. ಆ ಮರದಡಿಯಲ್ಲಿ ಹೆಣಗಳನ್ನು ಪರೀಕ್ಷೆ ಮಾಡುವ ಸಮಯದಲ್ಲಿ ಮಾತ್ರ ಆ ಕಾಲುದಾರಿಯಲ್ಲಿ ಯಾವ ಮಕ್ಕಳನ್ನೂ ಬಿಡುತ್ತಿರಲಿಲ್ಲ. ಅಂಥ ಹೆಣಗಳನ್ನು ಕುಯ್ಯುತ್ತಿದ್ದವರು ರಂಗಪ್ಪ ಅನ್ನುವವರು ಶೆಟ್ಟೀಕೆರೆಯ ಆಸ್ಪತ್ರೆಯಲ್ಲಿ ಡಿ ದರ್ಜೆಯ ನೌಕರರಾಗಿದ್ದರು. ಹುಷಾರಿಲ್ಲದಾಗ ಆಸ್ಪತ್ರೆಗೆ ಹೋದರೆ ರಂಗಪ್ಪನವರನ್ನು ಕಾಣುತ್ತಲೇ ಖಾಯಿಲೆ ಅರ್ಧಕ್ಕರ್ದ ಬಿಟ್ಟು ಹೋಗುತ್ತಿತ್ತು. ಅವರು ಸೀಸೆಗಳಲ್ಲಿ ತುಂಬಿರುತ್ತಿದ್ದ ಬಣ್ಣಬಣ್ಣದ ಔಷಧಿಯನ್ನು ಪ್ಲಾಸ್ಟಿಕ್ಕಿನ ವಾಳೆಯೊಂದಕ್ಕೆ ಹಾಕಿ ಕೊಟ್ಟರೆ ಒಂಚೂರೂ ಅಬ್ಬಳಿಸದೆ ಕಣ್ಮುಚ್ಚಿ ಘಟಘಟನೆ ಕುಡಿದುಬಿಡುತ್ತಿದ್ದೆ. ಕೆಲವು ಹಬ್ಬಗಳಲ್ಲಿ, ಜಾತ್ರೆಗಳ ಸಂದರ್ಭದಲ್ಲಿ ಈ ರಂಗಪ್ಪ ತೆಂಗಿನ ಕಾಯಿಗಳ ಸಲುವಾಗಿ ನಮ್ಮ ಮನೆಗೆ ಬರುತ್ತಿದ್ದರು. ಆಗ ಅವರನ್ನು ಕಾಣುತ್ತಲೇ ಭಯವಾಗುತ್ತಿತ್ತು.
ಈ ಹೆಣ ಕುಯ್ಯುವ ಮರದ ಬಗ್ಗೆ ಅದರಲ್ಲಿರುವ ಥರಾವರಿ ದೆವ್ವಗಳ ಬಗ್ಗೆ ಕೆಂಪ್ಲಿಂಗಜ್ಜನ ಬಾಯಲ್ಲಿ ಕೇಳಿದ್ದ ದೆವ್ವದ ಕಥೆಗಳು ಆ ಮರದಡಿಗೆ ಹೋದರೆ ಸಾಕು ಎದೆ ಝಲ್ಲೆನಿಸುತ್ತಿದ್ದವು. ಈ ಮರದಲ್ಲಿನ ದೆವ್ವಗಳು ಕೇವಲ ರಾತ್ರಿ ಹೊತ್ತು ಮಾತ್ರ ತಿರುಗಾಡಲ್ಲ. ಹಗಲು ಹೊತ್ತಿನಲ್ಲೂ ರಾಜಾರಸ್ಟಾಗಿ ಓಡಾಡುತ್ತವೆ. ಪುಕ್ಕಲ ಆಸಾಮಿ ಅಂತ ಕಂಡರೆ ಸಾಕು ಹೆದರಿಸಿಬಿಡುತ್ತವೆ ಅಂತ ಕೆಂಪ್ಲಿಂಗಜ್ಜ ಹೇಳುತ್ತಿತ್ತು. ಈ ಕೆಂಪ್ಲಿಂಗಜ್ಜನಿಗೆ ಈ ಮಾವಿನ ಮರದಲ್ಲಿ ಒಂದೆರಡು ದೆವ್ವಗಳ ಜತೆ ತುಂಬಾ ಗೆಳೆತನವಿತ್ತಂತೆ. ತಾನು ಆ ದಾರಿಯಲ್ಲಿ ಹೋಗುವಾಗಲೆಲ್ಲಾ ಅವರೊಡನೆ ಶೆಟ್ಟೀಕೆರೆಯವರೆಗೂ ಮಾತನಾಡಿಕೊಂಡು ಬರುತ್ತಿದ್ದವಂತೆ. ತಿರುಗಿ ಬರುವಾಗ ಮರದಲ್ಲಿ ಬಲಿತಿದ್ದ ಮಾವಿನಕಾಯಿಗಳನ್ನು ತಿನ್ನಲು ಕೊಡುತ್ತಿದ್ದವಂತೆ. ಕೆಂಪ್ಲಿಂಗಜ್ಜ ಅವುಗಳನ್ನು ಕುರಿಯ ಗೂಡಿನಲ್ಲಿ ಬಂದ್ರೆ ಸೊಪ್ಪಿನೊಳಕ್ಕೆ ಇಟ್ಟು ಹಣ್ಣು ಮಾಡಿಕೊಂಡು ತಿನ್ನುತ್ತಿತ್ತಂತೆ. ಕೆಲವು ಸಾರ್ತಿ ಮಾತಿನ ಸಲುವಾಗಿ ಆ ಗೆಣೆಕಾರ ದೆವ್ವಗಳು ಕುರಿ ಗೂಡಿನವರೆಗೂ ಬಂದು ಹೋಗುತ್ತಿದ್ದವಂತೆ. ಹೋಗುವಾಗ ಮನುಷ್ಯರಂತೆ ಸೀದಾ ಊರೊಳಗೇ ಹೋಗುತ್ತಿದ್ದವಂತೆ. ಈ ಕಾರಣಕ್ಕೇ ಕೆಂಪ್ಲಿಂಗಜ್ಜನಿಗೆ ದೆವ್ವಗಳೆಂದರೆ ಎಳ್ಳಷ್ಟೂ ಭಯ ಇರಲಿಲ್ಲವಂತೆ. ಇಂಥ ಕಥೆಗಳನ್ನು ಕೇಳಿದ್ದ ನನಗೆ ಈ ಹೆಣ್ಣ ಕುಯ್ಯುವ ಮಾವಿನ ಮರ ನನಗೆ ನನ್ನ ಬಾಲ್ಯಕಾಲವನ್ನು ಪೂರಾ ನಿಗೂಢವಾಗಿ ಉಳಿಸಿತ್ತು. ಮಿಡ್ಲ್ ಸ್ಕೂಲಿಗೆ ಹೋಗುತ್ತಿದ್ದ ಅಷ್ಟೂ ದಿನಗಳ ನಾವು ಆ ಮರದಡಿಯ ದಾರಿಯನ್ನು ಒಂದೇ ಉಸುರಿಗೆ ಓಡಿ ದಾಟಿಬಿಡುತ್ತಿದ್ದೆವು. ಒಬ್ಬೊಬ್ಬನೇ ಯಾವತ್ತೂ ಅದರಡಿಯಲ್ಲಿ ಹೋದ ನೆನಪೇ ಇಲ್ಲ. ಇಂಥ ಈ ಮಾವಿನ ಮರದಲ್ಲಿ ಫಸಲಿನ ಸಮಯದಲ್ಲಿ ತುಂಬಾ ಕಾಯಿಗಳು ಜೋಲುತ್ತಿದ್ದವು. ಈ ಮರದ ಕಾಯಿ ಉಪ್ಪಿನ ಕಾಯಿಗೆ ಎತ್ತಿದ ಕೈ ಅಂತ ಜನ ಮಾತಾಡಿಕೊಳ್ಳುತ್ತಿದ್ದರು ಅಷ್ಟೇ. ಬಳಸುತ್ತಿರಲಿಲ್ಲ. ನಾವಂತೂ ಅವುಗಳತ್ತ ನೋಡುತ್ತಲೇ ಇರಲಿಲ್ಲ. ಅಷ್ಟೊಂದು ಕಾಯಿಗಳು ಜೋಲುತ್ತಿದ್ದರೂ ಯಾರೊಬ್ಬರೂ ಆ ಮರವನ್ನು ಹತ್ತಿ ಕಾಯಿಗಳನ್ನು ಕೀಳುವುದನ್ನು ಕಂಡಿರಲೂ ಇಲ್ಲ.
ಆದರೆ ಅದೊಂದು ದಿನ ಸ್ಕೂಲು ಬಿಟ್ಟು ಊರಿಗೆ ಹಿಂತಿರುಗುವಾಗ ಆ ಮಾವಿನ ಮರದಿಂದ ತಪತಪನೆ ಕಾಯಿಗಳು ಉದುರುತ್ತಿದ್ದದ್ದು ಕೊಂಚ ದೂರದಿಂದಲೇ ಕಂಡಿತು. ನನ್ನ ಜತೆ ಓದುತ್ತಿದ್ದ, ನನಗಿಂತ ನಾಲ್ಕೈದು ವರ್ಷ ದೊಡ್ಡವನಾಗಿದ್ದ ಅಗ್ಗೆ ಅನ್ನುವವನು `ಇದು ದೆವ್ಗುಳ್ದೇ ಕೆಲ್ಸ. ಈಗ ಹೆಂಗೋಗ್ತೀರಪ್ಪ ಹೋಗ್ರಪ್ಪ ಅದೂ ಅದ್ರ ಅಡಿಲಾಸಿ’ ಅಂತ ಅನ್ನುತ್ತಾ ಭಯಂಕರ ಭಯ ಹುಟ್ಟಿಸಿದ. ಹಂಗೆ ನೋಡಿದರೆ ಅವನು ಆ ಮಾವಿನ ಮರಕ್ಕೆ ಯಾವತ್ತೂ ಹೆದರಿಕೊಂಡದ್ದನ್ನು ನಾವು ಕಂಡಿರಲಿಲ್ಲ. ಅವನ ಮಾತುಗಳನ್ನು ಕೇಳುತ್ತಲೇ ನಾವು ನಿಂತಲ್ಲೇ ಗಪ್ಪಾದೆವು. `ಬಡ್ಡಿ ಮಕ್ಳ ಆ ಹುತ್ತದ ಕ್ವಾವೇಲಿ ಇಟ್ಟಿದ್ದ ಬೀಡಿ ಮೋಟುಗಳ್ನ ಯಾರು ತಗಂಡಿದ್ದ ಹೇಳ್ರಿ ಮತ್ತೆ ಮರ್ಯಾದಿಂದ’ ಅಂತ ಹಲ್ಲು ಕಡಿದ. ಒಂದೇ ಕ್ಲಾಸಿನಲ್ಲಿ ಮೂರ್ನಾಲ್ಕು ವರ್ಷ ಓದಿದ್ದ ಅಗ್ಗೆ ಮಿಡ್ಲ್ ಸ್ಕೂಲಿಗೆ ಬರುವ ಹೊತ್ತಿಗೆ ಬೀಡಿ ಸೇದುವುದನ್ನು ತುಂಬಾನೇ ಪಳಗಿದ್ದ. ಸ್ಕೂಲಿಗೆ ಹೋಗುವಾಗ ಕ್ಲಾಸಲ್ಲಿ ಮೇಷ್ಟ್ರುಗಳು ಹುಡುಕಿದ್ರೆ ಬೀಡಿ ಮೋಟ್ಗಳು ಸಿಕ್ತವೆ ಅಂತ ಚೆಡ್ಡಿ ಜೇಬಿನಲ್ಲಿರುತ್ತಿದ್ದ ಬೀಡಿ ಮೋಟುಗಳನ್ನೆಲ್ಲಾ ಮೂಗು ಹುತ್ತದ ಸಣ್ಣ ಕ್ವಾವೆಯೊಂದಕ್ಕೆ ಹಾಕಿ ಅದರ ಮೇಲೆ ಎಂಥದಾರ ಕೂಳೆಗಳನ್ನು ಮುಚ್ಚುತ್ತಿದ್ದ. ಇದು ಅವನ ಪ್ರತಿದಿನದ ದಿನಚರಿಯಾಗಿತ್ತು. ಅದು ನಮಗೆಲ್ಲರಿಗೂ ಗೊತ್ತಿದ್ದ ವಿಷಯವೇ ಆಗಿತ್ತು. ಆದರೂ ನಾವ್ಯಾರೂ ಅವುಗಳನ್ನು ಮುಟ್ಟಲು ಹೆದರುತ್ತಿದ್ದೆವು. ಆದರೆ ಅವತ್ತು ಯಾರೋ ಚಟಗಾರನೊಬ್ಬ ಅವುಗಳನ್ನು ಯಾಮಾರಿಸಿದ್ದ. `ನಮ್ಗೇನ್ ಗೊತ್ತು ನಾವ್ಯಾರೂ ಮುಟ್ಟಿಲ್ಲ. ಅಷ್ಟುಕ್ಕೂ ನಾವ್ಯಾರೂ ಬೀಡಿ ಸೇದಲ್ಲ’ ಅಂದೆವು ನಾವು ನಾಲ್ಕೈದು ಜನ ಒಟ್ಟಿಗೇ. `ನಿಮ್ಗೆ ಗೊತ್ತುಲ್ವ? ಹಂಗಾರೆ ಅವ್ಕೇ ಕಾಲ್ಗುಳು ಬಂದು ನಡ್ಕಂಡು ಹೋಗೆವೆ! ತಡೀರಿ ಹಂಗಾರೆ’ ಅಂದವನೇ ಮಾವಿನ ಮರದತ್ತ ಕಣ್ಣು ನೆಟ್ಟು `ಹೇ ದೆವ್ಗುಳ ಈ ಬಡ್ಡೀಮಕ್ಳು ಒಪ್ಪಿಕೊಳ್ತಾ ಇಲ್ಲ. ಇವ್ರುನ್ನ ಸುಮ್ಕೆ ಬಿಡಬೇಡ್ರಿ’ ಅಂದ. ಅದೇ ಸಮಯಕ್ಕೆ ಆ ಮರದಿಂದ ಮತ್ತೆ ತಪತಪನೆ ಕಾಯಿಗಳು ಉದುರಿದವು. ಅಗ್ಗೆಗೆ ಬೀಡಿ ಸೇದುವ ಚಟ ಜಾಸ್ತಿಯಾದಂತೆ ಚಟಪಟಿಸುತ್ತಿದ್ದ. ನಮಗೆ ನಿಂತಲ್ಲೇ ನಡುಕ ಹುಟ್ಟುತ್ತಿತ್ತು. `ಈಗೇನ್ ಮರ್ಯಾದೆಯಿಂದ ಹೇಳ್ತೀರೋ ಇಲ್ವೋ’ ಅಂತ ಅಗ್ಗೆ ಒಂದೇ ಸಮನೆ ಹಲ್ಲು ಕಡಿದ. ಅಷ್ಟೊತ್ತಿಗೆ ಮಾವಿನ ಮರದಿಂದ ವ್ಯಕ್ತಿಯೊಬ್ಬ ಇಳಿದು `ಹೇಯ್ ಯಾಕೋ ಆ ಮಕ್ಳುನ್ನ ಹಂಗೆ ಹೆದ್ರುಸ್ತಿದೀಯ?’ ಅಂತ ಅಗ್ಗೆಗೆ ಗದರಿಸಿದ. ನನಗೆ ಕೆಂಪ್ಲಿಂಗಜ್ಜನ ದೆವ್ವದ ಕಥೆಗಳು ನೆನಪಾಗಿ ಅವನು ನಿಜವಾಗಿಯೂ ಮನುಷ್ಯನಲ್ಲ ದೆವ್ವವೇ ಮನುಷ್ಯ ಯಾಸ ಹಾಕಿಕೊಂಡು ಬಂದಿದೆ ಅಂತ ಅನಿಸಿ ನನಗೆ ವಿಪರೀತ ಭಯವಾಗಿ ಆ ಭಯ ಅಳುವಿಗೆ ತಿರುಗಿತು. ಅದು ನನ್ನ ಜತೆಗಿದ್ದ ಒಂದಿಬ್ಬರಿಗೂ ದಾಟಿಕೊಂಡಿತು. ನನ್ನ ಅಳು ಹಾಗೂ ಆ ವ್ಯಕ್ತಿಯ ಮಾತಿನಿಂದ ಅಗ್ಗೆ ತಣ್ಣಗಾಗಿದ್ದ. ಆದರೆ ಅವನು ನಮ್ಮಷ್ಟು ಭಯ ಬಿದ್ದಿರಲಿಲ್ಲ. `ಅಲ್ಲ ಈ ಮರುದ್ ಮಾವಿನ ಕಾಯಿ ತಿನ್ನಬಾರ್ದಂತೆ. ಅಂಥಾದ್ರಲ್ಲಿ ನೀನು ಕಾಯ್ಗಳ್ನೇ ಉದ್ರಿಸ್ಕಂಡು ಹೊರ್ಟಿದೀಯ’ ಅಂದ ಅಗ್ಗೆ. ಮರದಡಿಯಲ್ಲಿ ಬಿದ್ದಿದ್ದ ಕಾಯಿಗಳನ್ನು ಆಯ್ದು ಗೋಣಿ ಚೀಲವೊಂದಕ್ಕೆ ತುಂಬಿಕೊಳ್ಳುತ್ತಿದ್ದ ಆ ವ್ಯಕ್ತಿ ಒಂದು ಚಣ ಅಗ್ಗೆಯತ್ತ ನೋಡಿ `ತಿಂದ್ರೆ ಏನಾಗುತ್ತಂತೆ?’ ಅಂದ. `ಈ ಮರ್ದಲ್ಲಿ ದೆವ್ಗುಳು ಇದಾವಂತೆ’ ಅಂತ ನಮ್ಮೊಳಗೊಬ್ಬ ಮೆಲ್ಲಗೆ ಉಸುರಿದ. `ಅಗಳಾ ದೆವ್ವ ಇದಾವಂತ! ನಂಗೆ ಯಾವೂ ಕಾಣ್ಲುಲ್ವಲ್ಲ ಮತ್ತೆ? ಹೇ ಪಾಪ ರಾತ್ರೆಲ್ಲಾ ಎದ್ದಿರ‍್ತಾವಲ್ಲ ಹಂಗಾಗಿ ಮಲಿಕಂಡಿದ್ವು ಅನ್ಸುತ್ತೆ’ ಅಂದ ಆ ವ್ಯಕ್ತಿ ವ್ಯಂಗ್ಯವಾಗಿ. ಅವನ ವ್ಯಂಗ್ಯವನ್ನು ಅರ್ಥ ಮಾಡಿಕೊಳ್ಳುವ ವಯಸ್ಸು ನಮ್ಮದಾಗಿರಲಿಲ್ಲ. `ಐದಾರು ವರ್ಷಗಳಿಂದ ಕಿತ್ಕಂಡು ಹೋಗಿ ತಿನ್ತಾನೇ ಇದೀನಪ್ಪ. ನಂಗೆ ಏನೂ ಆಗೇ ಇಲ್ವಲ್ಲ’ ಅಂದ ಅವನೇ ಮುಂದುವರೆದು. ನನಗೆ ಖಾಯಮ್ಮಾಗಿಹೋಯ್ತು. ಕೆಂಪ್ಲಿಂಗಜ್ಜ ಕಥೆಗಳು ನೆನಪಾದವು. ಇವನು ಗ್ಯಾರಂಟಿ ದೆವ್ವದ ಯಾಸದ ಮನುಷ್ಯನೇ ಅಂತ. ನನಗೆ ನಿಂತಲ್ಲೇ ತಲೆ ಸುತ್ತು ಬಂತು. ಎಚ್ಚರವಾದಾಗ ನಮ್ಮ ಮನೆಯ ಜಗಲಿಯಲ್ಲಿದ್ದೆ. ಕಣ್ಣು ಬಿಟ್ಟಾಗ ಮವಿನ ಕಾಯಿ ಕೀಳುತ್ತಿದ್ದ ಆ ವ್ಯಕ್ತಿ ಕಣ್ಮುಂದೆ ನಿಂತಿದ್ದ. ಅವನೇ ನನ್ನನ್ನು ಮನೆಯವರೆಗೂ ಎತ್ತಿಕೊಂಡು ಬಂದಿದ್ದ.
(ಹಿಂದಿನ ಕಂತು: ಚಿಕ್ಕಯನಾಕನಹಳ್ಳಿಯ ತಾತಯ್ಯನ ಗೋರಿ ಮತ್ತದರ ಕುದುರೆ)

ಎಸ್. ಗಂಗಾಧರಯ್ಯ ಮೂಲತಃ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮಾಕುವಳ್ಳಿಯವರು. ಪ್ರಸ್ತುತ ವಾಸ ತಿಪಟೂರಿನಲ್ಲಿ. ಕಥಾ ಸಂಕಲನ: ನವಿಲ ನೆಲ, ಒಂದು ಉದ್ದನೆಯ ನೆರಳು, ದೇವರ ಕುದುರೆ, ಮಣ್ಣಿನ ಮುಚ್ಚಳ, ಎರೆ ನೆತ್ತಿ -ಈ ತನಕದ ಕಥೆಗಳು, ಕಾದಂಬರಿ: ಗಂಗಪಾಣಿ, ವ್ಯಕ್ತಿಚಿತ್ರ ಸಂಪುಟ: ಬಯಲ ಪರಿಮಳ, ಅನುವಾದ: `ವೈಕಂ ಕಥೆಗಳು’, ಲೋರ್ಕಾ ನಾಟಕ-`ಎರ್ಮಾ’, ಲೋರ್ಕಾಕಾವ್ಯ-`ಚರಮಗೀತೆ’, `ಹಲವು ರೆಕ್ಕೆಯ ಹಕ್ಕಿʼ-ವಿವಿಧ ಲೇಖಕರ ಕಥೆಗಳು, ಟರ್ಜೆನೇವ್‌ರ `ಬೇಟೆಗಾರನ ಚಿತ್ರಗಳು’, ದಾರಿಯೋ ಫೋ ನಾಟಕ-`ಗುಲಾಬಿ ಗರ್ಭ’, ಮಾರ್ಕ್ವೆಜ್ ಸಂದರ್ಶನ-`ಫ್ರೇಗ್ರನ್ಸ್ ಆಫ್ ಗ್ವಾವ’, ಚಿಂಗೀಝ್ ಐತ್ಮತೋವ್‌ನ ಕಾದಂಬರಿ- `ಜಮೀಲಾ’, ಬುನಿನ್ ಕಥೆಗಳು, ಅರ್ನೆಸ್ಟ್ ಹೆಮಿಂಗ್ವೆ -ಇಂಡಿಯನ್‌ಕ್ಯಾಂಪ್ ಮತ್ತು ಇತರ ಕಥೆಗಳು, ಮಾರ್ಕ್ವೆಜ್ ಕಥೆಗಳು, ದಾರಿಯೋ ಫೋ ವಾಚಿಕೆ, ಲೋರ್ಕಾ ನಾಲ್ಕು ನಾಟಕಗಳು, ಇವರ ಪ್ರಕಟಿತ ಕೃತಿಗಳು. ಕರ್ನಾಟಕ ಸಾಹಿತ್ಯಅಕಾಡೆಮಿ ಪುಸ್ತಕ ಬಹುಮಾನ (ಅನುವಾದ – 1996), ಕರ್ನಾಟಕ ಸಾಹಿತ್ಯಅಕಾಡೆಮಿ ಪುಸ್ತಕ ಬಹುಮಾನ (ಕಥೆ – 2018), ಡಾ. ಬೆಸಗರಹಳ್ಳಿ ರಾಮಣ್ಣಕಥಾ ಪ್ರಶಸ್ತಿ(2018), ಶಿವಮೊಗ್ಗ ಕರ್ನಾಟಕ ಸಂಘದ ಡಾ.ಯು.ಆರ್.ಅನಂತಮೂರ್ತಿ ಪ್ರಶಸ್ತಿ.(2018), ತುಮಕೂರಿನ ವೀ.ಚಿ.ಪ್ರತಿಷ್ಠಾನದ ವೀ.ಚಿ.ಪ್ರಶಸ್ತಿ (2018), ಸೇಡಂನ ಅಮ್ಮ ಪ್ರಶಸ್ತಿ(2022), ಶಾ. ಬಾಲೂರಾವ್ ಅನುವಾದ ಪ್ರಶಸ್ತಿ(2023) ಸೇರಿದಂತೆ ಇನ್ನೂ ಹಲವು ಪ್ರಶಸ್ತಿಗಳು ಇವರಿಗೆ ದೊರೆತಿವೆ.

