ಮಕ್ಕಳ ರಂಗಭೂಮಿಯ ಬಗ್ಗೆ ಆಸಕ್ತಿ ಇರುವ ಯಾವುದೇ ಶಾಲಾ ವಿದ್ಯಾರ್ಥಿಗಳೂ ಅಭಿನಯಿಸಬಹುದಾದ ಸರಳ ವಿನ್ಯಾಸದ – ಸಂಕೀರ್ಣ ವಿವರಗಳುಳ್ಳ ಉತ್ತಮ ನಾಟಕಗಳು ಇವು. ಅಂದ ಚಂದದ ಸಂಭಾಷಣೆ, ಕುತೂಹಲಕಾರಿಯಾಗಿ ಮುಂದುವರಿಯುವ ವಿಧಾನ. ಹೊಸ ವಿಚಾರಗಳನ್ನು ಹೇಳಬೇಕೆನ್ನುವ ತವಕ ಈ ಎಲ್ಲ ನಾಟಕಗಳಲ್ಲಿಯೂ ಇದೆ. ಪಂಚತಂತ್ರ – ಟಾಲ್ ಸ್ಟಾಯ್ – ರವೀಂದ್ರನಾಥ ಟಾಗೋರ್ ಮುಂತಾದವರು ನೀಡಿರುವ ಕಥಾನಕಗಳನ್ನು ಆಧರಿಸಿ ಪುನಃ ನಿರೂಪಿಸಿರುವ ಮಕ್ಕಳಿಗಾಗಿಯೇ ರಚಿತವಾದ ವಿಶಿಷ್ಟ ಕೃತಿಗಳು ಇವು.
ಸುಧಾ ಆಡುಕಳ ಅವರ “ಕಿಟಕಿ ಪಕ್ಕ ನಿಂತ ಹುಡುಗಿ ಮತ್ತು ಇತರ ನಾಟಕಗಳು” ಕೃತಿಗೆ ಐಕೆ ಬೊಳುವಾರು ಬರೆದ ಮುನ್ನುಡಿ
ಅಧ್ಯಾಪಕಿ ಮತ್ತು ಲೇಖಕಿ ಆಗಿರುವ ಶ್ರೀಮತಿ ಸುಧಾ ಆಡುಕಳ ಅವರು ಹಲವು ವರ್ಷಗಳಿಂದ ನಾಟಕಗಳನ್ನು ರಚಿಸುತ್ತಾ ಬಂದವರು. ಅವರು ಏಕ ವ್ಯಕ್ತಿನಾಟಕ ಪ್ರಯೋಗಿಸ ಬಯಸುವವರಿಗೆ ಮತ್ತು ಮಕ್ಕಳಿಗಾಗಿಯೇ ನಾಟಕ ಸಿದ್ಧಪಡಿಸುವವರಿಗೆ ಹಲವು ವರ್ಷಗಳಿಂದ ನಾಟಕ ರಚಿಸಿ ನೀಡುತ್ತಾ ಬಂದಿದ್ದಾರೆ. ಅದು ಬಹುಜನರ ಮೆಚ್ಚುಗೆಗೆ ಪಾತ್ರವೂ ಆಗಿದೆ.
ಹೀಗೆ ಅವರು ಸಿದ್ಧಪಡಿಸಿದ ಮಕ್ಕಳ ನಾಟಕಗಳಲ್ಲಿ ಐದು ನಾಟಕಗಳು ಇದೀಗ ಪುಸ್ತಕ ರೂಪದಲ್ಲಿ ಪ್ರಕಟಗೊಂಡು ಕನ್ನಡದ ಓದುಗರಿಗೆ ಸಿಗುವಂತಾಗಿದೆ. ಈ ಸಂದರ್ಭದಲ್ಲಿ ಮಕ್ಕಳ ನಾಟಕಗಳ ಇಂದಿನ ಪರಿಸ್ಥಿತಿ ಬಗ್ಗೆ ಹೇಳಬೇಕು.

(ಸುಧಾ ಆಡುಕಳ)
ಇವತ್ತು ಕನ್ನಡ ರಂಗಭೂಮಿಯ ಸ್ಥಿತಿ ಹೇಗಾಗಿದೆ ಎಂದರೆ ರಂಗಶಿಕ್ಷಣ ಕೇಂದ್ರಗಳಿಂದ ತರಬೇತು ಪಡೆದು ಬಂದ ವೃತ್ತಿಪರ ನಟನಟಿಯರು ನಾಟಕಗಳನ್ನು ಮಾಡಿಸುವುದುಂಟು. ಅವರು ಮಕ್ಕಳಿಗಾಗಿ ನಾಟಕಗಳನ್ನು ಸಿದ್ಧಪಡಿಸುವುದಾದರೂ ಈಗಾಗಲೇ ತರಬೇತಿ ಸಂದರ್ಭದಲ್ಲಿ ತಾವು ನೋಡಿದ್ದ ತಯಾರಿಸಿದ ನಾಟಕಗಳನ್ನುಆಯ್ದುಕೊಳ್ಳುತ್ತಾರೆಯೇ ಹೊರತು ಹೊಸ ನಾಟಕಗಳ ಜೊತೆ ಕೆಲಸ ಮಾಡಲು ಧೈರ್ಯಮಾಡುತ್ತಿಲ್ಲ..
ಒಂದು ಕಡೆ ಹೀಗಾದರೆ ಹವ್ಯಾಸಿ ರಂಗಭೂಮಿಯಲ್ಲಿ ಅಥವಾ ಮಕ್ಕಳ ರಂಗಭೂಮಿ ಪ್ರಯೋಗಗಳಲ್ಲಿ ಹೊಸದಾಗಿ ರಚನೆಗೊಂಡ ನಾಟಕಗಳನ್ನು ಪ್ರಯೋಗಿಸುವವರ ಸಂಖ್ಯೆ ತುಂಬಾ ಕ್ಷೀಣವಾಗಿದೆ.
ಮಕ್ಕಳ ರಂಗಭೂಮಿ – ಶಿಕ್ಷಣದಲ್ಲಿ ರಂಗಭೂಮಿ – ಶಾಲಾ ಪಠ್ಯದಲ್ಲಿ ರಂಗಭೂಮಿ ಒಂದು ವಿಷಯವಾಗಿ ಸೇರ್ಪಡೆಯಾಗಬೇಕು, ಇತ್ಯಾದಿ ವಿಚಾರಗಳ ಬಗ್ಗೆ ಅಲ್ಲಲ್ಲಿ ಚರ್ಚೆಗಳು – ಸಂಕಿರಣಗಳು ನಡೆಯುತ್ತಿವೆ. ಬೇಸಿಗೆ ಶಿಬಿರದ ಹೆಸರಿನಲ್ಲಿ ಅಸಂಖ್ಯಾತ ರಂಗಶಿಬಿರಗಳು ನಡೆದಿವೆ. ಅಲ್ಲಿ ಆಟಗಳು, ಕ್ರಾಫ್ಟ್ಗಳು, ಕರಕುಶಲ ಕಲೆ, ಸಂಗೀತ, ಸ್ಪೋಕನ್ ಇಂಗ್ಲಿಷ್ ಮುಂತಾದವುಗಳನ್ನೇ ಪ್ರಮುಖವಾಗಿಸಿ ವೃತ್ತಿಪರ ರಂಗಕರ್ಮಿಗಳು ತಮ್ಮ ದುಡಿಮೆಯ ಆದಾಯವೇನಾದರೂ ಸಿಗುವುದೋ ಎಂದು ಕಷ್ಟ ಪಡುತ್ತಿದ್ದಾರೆಯೇ ಹೊರತು ಒಂದು ಪೂರ್ಣಪ್ರಮಾಣದ ಮಕ್ಕಳ ನಾಟಕಗಳನ್ನು ಸಿದ್ಧಪಡಿಸುತ್ತಿಲ್ಲ. ಸಾಧ್ಯವೂ ಆಗುತ್ತಿಲ್ಲ.
ಶಾಲಾ ವಾರ್ಷಿಕೋತ್ಸವಗಳಲ್ಲಿಯೂ ಇಂದಿನ ದಿನಗಳಲ್ಲಿ ನಾಟಕ ಪ್ರದರ್ಶನ ನಡೆಯುತ್ತಿಲ್ಲ. ಪ್ರತಿಭಾ ಕಾರಂಜಿಯ ಹೆಸರಿನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಹೊಸ ನಾಟಕಗಳ ತಯಾರಿಗಳು ನಡೆಯುತ್ತಿದ್ದವು. (ಸ್ಪರ್ಧೆ- ಸೋಲು – ಗೆಲುವು ಇತ್ಯಾದಿ ಗೊಂದಲಗಳು ಅಲ್ಲಿಯೇ ಇರಲಿ. ಅದು ಬೇರೆಯೇ ಚರ್ಚೆ).
ಈಗ ಅದು ಸಂಪೂರ್ಣವಾಗಿ ನಿಂತು ಹೋಗಿದೆ.
ಇಂತಹ ಸಂದರ್ಭದಲ್ಲಿ ಅನುಭವಿ ನಾಟಕಕಾರರಾಗಿರುವ ಸುಧಾ ಆಡುಕಳ ಅವರ ಮಕ್ಕಳ ನಾಟಕಗಳು ಪ್ರಕಟವಾಗುತ್ತಿರುವುದು ಬಹು ಸಂತಸದ ಸಂಗತಿ.
ಮಕ್ಕಳ ರಂಗಭೂಮಿಯ ಬಗ್ಗೆ ಆಸಕ್ತಿ ಇರುವ ಯಾವುದೇ ಶಾಲಾ ವಿದ್ಯಾರ್ಥಿಗಳೂ ಅಭಿನಯಿಸಬಹುದಾದ ಸರಳ ವಿನ್ಯಾಸದ – ಸಂಕೀರ್ಣ ವಿವರಗಳುಳ್ಳ ಉತ್ತಮ ನಾಟಕಗಳು ಇವು. ಅಂದ ಚಂದದ ಸಂಭಾಷಣೆ, ಕುತೂಹಲಕಾರಿಯಾಗಿ ಮುಂದುವರಿಯುವ ವಿಧಾನ. ಹೊಸ ವಿಚಾರಗಳನ್ನು ಹೇಳಬೇಕೆನ್ನುವ ತವಕ ಈ ಎಲ್ಲ ನಾಟಕಗಳಲ್ಲಿಯೂ ಇದೆ.
ಪಂಚತಂತ್ರ – ಟಾಲ್ ಸ್ಟಾಯ್ – ರವೀಂದ್ರನಾಥ ಟಾಗೋರ್ ಮುಂತಾದವರು ನೀಡಿರುವ ಕಥಾನಕಗಳನ್ನು ಆಧರಿಸಿ ಪುನಃ ನಿರೂಪಿಸಿರುವ ಮಕ್ಕಳಿಗಾಗಿಯೇ ರಚಿತವಾದ ವಿಶಿಷ್ಟ ಕೃತಿಗಳು ಇವು.
‘ತೊತ್ತೊಚಾನ್ ಜಗತ್ತಿನ ಬಹುಜನ ಮೆಚ್ಚುಗೆಯ ಬೇರೆ ಬೇರೆ ಭಾಷೆಗಳಲ್ಲಿಯೂ ಪ್ರಕಟವಾಗಿ ಮಕ್ಕಳ ಶಿಕ್ಷಣದ ಬಗ್ಗೆ ಅಪಾರ ಚಿಂತನೆಯನ್ನು ಮೂಡಿಸಿರುವ ಸಾಹಿತ್ಯ ಕೃತಿ.
ಈ ಕೃತಿಯನ್ನು ನಾಟಕ ರೂಪಕ್ಕೆ ತರುವುದು ಶಿಕ್ಷಣ ಮತ್ತು ರಂಗಭೂಮಿಯ ಬಗ್ಗೆ ಅಪಾರ ಒಲವುಳ್ಳವರಿಂದ ಮಾತ್ರ ಸಾಧ್ಯವಾಗುವ ಕೆಲಸ. ಆ ಕೆಲಸವನ್ನು ಲೇಖಕರು ತಮ್ಮ ನಾಟಕ ರೂಪದಲ್ಲಿ ಅತ್ಯಂತ ಸುಲಭವಾಗಿಸಿದ್ದಾರೆ. ‘ತೊತ್ತೊಚಾನ್’ ನಾಟಕವನ್ನು ಒಂದು ಶಾಲೆಯಲ್ಲಿ ಅಭ್ಯಾಸ ಮಾಡುತ್ತಾರೆ. ಅದನ್ನು ಶಾಲಾ ಅಂಗಳದಲ್ಲಿ ಪ್ರದರ್ಶಿಸುತ್ತಾರೆ. ಎಂದಾದರೆ ಆ ಶಾಲಾ, ಶಾಲಾ ಅಧ್ಯಾಪಕರು, ನಟಿಸುವ ಮಕ್ಕಳು ಮತ್ತು ಮಕ್ಕಳ ಮನೆಯವರು ಇತ್ಯಾದಿ ಎಲ್ಲರೂ ಹೊಸ ಶೈಕ್ಷಣಿಕ ಹಾದಿಯೊಂದನ್ನು ಅರ್ಥಮಾಡಿಕೊಳ್ಳುತ್ತಾರೆ. ಇದು ಅದಕ್ಕೆ ಸುಲಭ ದಾರಿ ಎಂಬುದು ಅರಿವಾಗಬಹುದು.
ಮತ್ತು, ಈ ಪುಸ್ತಕದಲ್ಲಿರುವ ನಾಟಕ ಕೃತಿಗಳು ಮಕ್ಕಳಿಗೆ ಓದುವುದಕ್ಕೂ ಅಭಿನಯಿಸುವುದಕ್ಕೂ ಪ್ರೇರೇಪಣೆ ನೀಡಬಲ್ಲ ಶಕ್ತಿಹೊಂದಿರುವುದರಿಂದ ಮಕ್ಕಳೇ ಅಭಿನಯಿಸಬಹುದಾದ ನಾಟಕಗಳ ಕೊರತೆಯೂ ಕನ್ನಡ ರಂಗಭೂಮಿಗೆ ಇರುವುದರಿಂದ ಈ ನಾಟಕಗಳು ಆ ಕೊರತೆಯನ್ನು ತುಂಬಿಸಲಿ ಮತ್ತು ಓದುವ- ಆಡುವ ಮಕ್ಕಳು ಸ್ವತಃ ಮಕ್ಕಳ ನಾಟಕ ರಚಿಸಲು ಇದು ಪ್ರೇರಣೆಯಾಗಲಿ ಎಂದು ಹಾರೈಸುವೆ.
ಐಕೆ ಬೊಳುವಾರು
14-06-2026

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ


