Advertisement
ಪ್ರಾಚೀನ ವಜ್ರ ಗಣಿಗಾರಿಕೆ: ಡಾ. ಎಂ. ವೆಂಕಟಸ್ವಾಮಿ ಸರಣಿ

ಪ್ರಾಚೀನ ವಜ್ರ ಗಣಿಗಾರಿಕೆ: ಡಾ. ಎಂ. ವೆಂಕಟಸ್ವಾಮಿ ಸರಣಿ

ವಜ್ರಗಳನ್ನು ಅಲಂಕಾರ/ಆಭರಣಗಳಾಗಿ, ಕತ್ತರಿಸುವ ಸಾಧನಗಳಾಗಿ, ದುಷ್ಟತನವನ್ನು ದೂರ ಮಾಡಲು “ತಾಲಿಸ್ಮನ್” ಆಗಿ ಬಳಸಲಾಗುತ್ತಿತ್ತು. ತಾಲಿಸ್ಮನ್ ಎಂದರೆ ಕೆತ್ತಿದ ವಜ್ರದುಂಗುರ ಅಥವಾ ರತ್ನಕಲ್ಲು ಮಾಂತ್ರಿಕ ಶಕ್ತಿಯನ್ನು ಹೊಂದಿರುತ್ತದೆ ಮತ್ತು ಅದೃಷ್ಟವನ್ನು ತರುತ್ತದೆ ಎಂದು ಭಾವಿಸಲಾಗಿತ್ತು. ಪ್ರಾಚೀನ ಭಾರತದಲ್ಲಿ ವಜ್ರದ ಗುಣಲಕ್ಷಣಗಳನ್ನು ಮತ್ತು ಮಾಂತ್ರಿಕ ಶಕ್ತಿಯನ್ನು ಅಧ್ಯಯನ ಮಾಡಲಾಗಿದ್ದು, ವಜ್ರಗಳ ಮಹತ್ವ ಎಷ್ಟೆಂದರೆ “ಮ್ಯಾಂಡಲಿನ್” ಎಂಬ ವೃತ್ತಿಪರ ವಜ್ರಗಳ ತಜ್ಞರೆ ಇದ್ದರು. ಆದರೆ ಅದರ ಬಗ್ಗೆ ಅನೇಕ ಅನುಮಾನಗಳಿವೆ.
ಡಾ.
ಎಂ. ವೆಂಕಟಸ್ವಾಮಿ ಅನುವಾದಿತ “ಭಾರತದಲ್ಲಿ ಪ್ರಾಚೀನ ಗಣಿಗಾರಿಕೆ” ಸರಣಿಯಲ್ಲಿ ಎರಡನೆಯ ಅಧ್ಯಾಯ

ಜಗತ್ತಿನಲ್ಲಿ ವಜ್ರಗಳನ್ನು ಮೊದಲಿಗೆ ಗುರುತಿಸಿದವರು ಭಾರತೀಯರು. ಭಾರತವು ವಿಶ್ವದ ಅತ್ಯಂತ ಹಳೆಯ ಚಿನ್ನ ಉತ್ಪಾದಿಸುವ ದೇಶವೆಂದೂ ಸಹ ಗುರುತಿಸಲ್ಪಟ್ಟಿದೆ. ಭಾರತದಲ್ಲಿ ಹರಪ್ಪ ನಾಗರಿಕತೆಯ ಪೂರ್ವದಲ್ಲಿಯೇ ದೊಡ್ಡ ಪ್ರಮಾಣದಲ್ಲಿ ಹಲವಾರು ಖನಿಜ/ಲೋಹಗಳ ಗಣಿಗಾರಿಕೆ ನಡೆದಿತ್ತು. ವೈಜ್ಞಾನಿಕ ಪುರಾವೆಗಳ ಪ್ರಕಾರ, ಜಗತ್ತಿನ ಹಳೆಯ ನಾಗರಿಕತೆಗಳಿಗೆ 10,0000 ವರ್ಷಗಳ ಹಿಂದೆಯೇ ತಾಮ್ರ ಲೋಹದ ಬಗ್ಗೆ ತಿಳಿದಿತ್ತು ಎನ್ನಲಾಗಿದೆ. ವೇದಗಳಲ್ಲಿ ಲೋಹ ಮತ್ತು ಲೋಹಗಳ ಕೆಲಸದ ಬಗ್ಗೆ ಅನೇಕ ಉಲ್ಲೇಖಗಳಿದ್ದು ಅವುಗಳನ್ನು ರೂಪಕಗಳಾಗಿ ಬಳಸಿರುವುದನ್ನು ಗಮನಿಸಬಹುದು. ಚಿನ್ನ, ಬೆಳ್ಳಿ, ವಜ್ರ ಮತ್ತು ಇತರ ಲೋಹಗಳ ಬಗೆಗಿನ ಉಲ್ಲೇಖಗಳು ರಾಮಾಯಣ ಮತ್ತು ಮಹಾಭಾರತದಲ್ಲಿಯೂ ಕಂಡುಬರುತ್ತದೆ.

ಕ್ರಿ.ಪೂ. 10ನೇ ಶತಮಾನದಲ್ಲಿ ಲೋಹವನ್ನು ಸರಳವಾಗಿ ಪ್ರಕಾಶಮಾನವಾದ “ಲೋಹ” ಅಥವಾ “ಹಿರಾಯ” ಎಂದು ಕರೆಯಲಾಗುತ್ತಿತ್ತು. ನಂತರ ಹಳದಿಯಾಗಿ ಹೊಳೆಯುವ ಲೋಹವನ್ನು ಚಿನ್ನ ಅಥವಾ “ಹರಿತಾ-ಹಿರಾಯ”, ಮತ್ತು ಹೊಳೆಯುವ ಪ್ರಕಾಶಮಾನವಾದ ಲೋಹವನ್ನು ಬೆಳ್ಳಿ ಅಥವಾ “ರಜತ-ಹಿರಾಯ” ಮತ್ತು ಮೂಲ ಲೋಹವನ್ನು “ಆಯಾಸ್” ಎಂದು ವಿಭಜಿಸಲಾಯಿತು. ಮೂಲ ಲೋಹವನ್ನು ಮತ್ತೆ ಕೆಂಪು ಆಯಾಸ್ (ತಾಮ್ರ) ಮತ್ತು ಕಪ್ಪು ಆಯಾಸ್ (ಕಬ್ಬಿಣ) ಎಂದು ವಿಭಾಗಿಸಲಾಗಿದೆ. ಚಿನ್ನವು, ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಸಂಪನ್ಮೂಲ ಎಂಬುದಾಗಿ ಅನೇಕ ಹಿಂದೂ ಪವಿತ್ರ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ, ಜೊತೆಗೆ ವೇದ, ಪುರಾಣ, ಉಪನಿಷತ್ ಮತ್ತು ಮಹಾಕಾವ್ಯಗಳಲ್ಲೂ ನೋಡಬಹುದು.

ಭಾರತದಲ್ಲಿ ಚಿನ್ನದ ಗಣಿಗಾರಿಕೆ ಸುಮಾರು 6,000 ದಿಂದ 8,000 ವರ್ಷಗಳಷ್ಟು ಪ್ರಾಚೀನ ಎಂಬುದಾಗಿ ವೈಜ್ಞಾನಿಕವಾಗಿಯೇ ದೃಢಪಟ್ಟಿದೆ. ಭರತಖಂಡ ಅದ್ಭುತ ಗಣಿಗಾರಿಕೆ ಮತ್ತು ಲೋಹಶಾಸ್ತ್ರ ಕೌಶಲ್ಯಗಳನ್ನು ಹೊಂದಿದ್ದು ಪ್ರಾಚೀನ ಗಣಿಗಾರಿಕೆ ಬಹುಶಃ ಜಗತ್ತಿನಲ್ಲಿ ಬೇರೆಲ್ಲಿಯೂ ಸಾಟಿಯಿಲ್ಲದಂತೆ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ. ಕಾಲಕಾಲಕ್ಕೆ ಅನೇಕ ನಾಗರಿಕತೆಗಳು (ಶಿಲಾಯುಗ, ತಾಮ್ರಯುಗ ಮತ್ತು ಕಬ್ಬಿಣಯುಗ) ಮತ್ತು ಸಾಂಸ್ಕೃತಿಕ ಕಾಲಘಟ್ಟಗಳ ಮೂಲಕ ಗಣಿಗಾರಿಕೆ ನಡೆಯುತ್ತಲೇ ಬಂದಿದೆ. ಆಧುನಿಕ ಯುಗದಲ್ಲಿ ಗಣಿಗಾರಿಕೆ ಅನ್ವಯಿಕ ವಿಜ್ಞಾನವಾಗಿ ಅಭಿವೃದ್ಧಿಗೊಂಡಿದೆ. ನಾಗರಿಕತೆಗಳು ಹುಟ್ಟಿದ ಕಾಲದಿಂದಲೂ ಖನಿಜಗಳು ಮತ್ತು ಲೋಹಗಳು ಜಗತ್ತಿನ ಯಾವುದೇ ಪ್ರದೇಶದ ರಾಜರು ಮತ್ತು ಜನ ಸಮುದಾಯಗಳ ಆದಾಯ ಮತ್ತು ಅಭಿವೃದ್ಧಿಯ ಸಂಕೇತವಾಗಿದೆ.

ಇತಿಹಾಸ ಪೂರ್ವದಿಂದ ಹಿಡಿದು ಇಂದಿನ ಆಧುನಿಕ ಜಗತ್ತಿನವರೆಗೆ, ಗಣಿಗಾರಿಕೆ ಮಾನವನ ಅಸ್ತಿತ್ವದಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಹರಪ್ಪ ನಾಗರಿಕತೆ ಮತ್ತು ಕ್ರಿಶ್ಚಿಯನ್ ಯುಗದ ಪೂರ್ವದಿಂದಲೇ ಗಣಿಗಾರಿಕೆಯನ್ನು ಮಾಡಲಾಗಿದೆ. ಆರಂಭದಲ್ಲಿ ಗಣಿಗಾರಿಕೆಯನ್ನು ಶಿಲಾಯುಧಗಳು, ಗುದ್ದಲಿ-ಕೊಡಲಿ, ಹಾರೆ ಹುಳಿ ಸುತ್ತಿಗೆಗಳಿಂದ ಮಾಡಲಾಯಿತು. ಪ್ರಾಚೀನ ಭಾರತದಲ್ಲಿ ಕನಿಷ್ಠ ಉಪಕರಣಗಳು ಮತ್ತು ಅಸಮರ್ಪಕ ಮೂಲಸೌಕರ್ಯಗಳಿಂದ ಖನಿಜಗಳನ್ನು ಭೂಮಿಯಿಂದ ಹೇಗೆ ಹೊರ ತೆಗೆಯುತ್ತಿದ್ದರು ಎನ್ನುವುದು ಕುತೂಹಲಕರ ವಿಷಯವಾಗಿದೆ.

ಭರತಖಂಡ ಅಮೂಲ್ಯ ರತ್ನಗಳನ್ನು ಉತ್ಪಾದಿಸುವ ಮತ್ತು ಮಾರಾಟದ ಕೇಂದ್ರ ಸ್ಥಳವಾಗಿತ್ತು ಎಂಬುದನ್ನು ಸುಮಾರು 2500 ವರ್ಷಗಳ ಹಿಂದೆಯೇ ಜಗತ್ತಿನ ಅನೇಕ ದೇಶಗಳ ಪ್ರವಾಸಿಗರು ಭಾರತಕ್ಕೆ ಭೇಟಿ ನೀಡಿದ ತಮ್ಮ ಯಾತ್ರಿಕ ಅನುಭವಗಳ ಸಂಚಿಕೆಗಳಲ್ಲಿ ರತ್ನಗಳ ಬಗ್ಗೆ ದಾಖಲಿಸಿದ್ದಾರೆ. ಸಂಸ್ಕೃತದಲ್ಲಿ ವಜ್ರವನ್ನು ಇಂದ್ರನ ಆಯುಧಕ್ಕೆ ಹೋಲಿಸುವುದರ ಜೊತೆಗೆ ಮಳೆ-ಗುಡುಗು ಸಹಿತ ದೇವರು; ಮತ್ತು ಹಿರಕ್ ಮಣಿ, ಅಥವಾ ಸ್ಫಟಿಕವನ್ನು ಸೂಚಿಸುವ ಪದಗಳಿಂದ ಕರೆಯಲಾಗಿದೆ.

ಮಹಾಭಾರತದಲ್ಲಿ “ಶಮಂತಕ ಮಣಿ” ಮತ್ತು ಅದರ ಅದ್ಭುತ ಶಕ್ತಿಯ ಬಗ್ಗೆ ಉಲ್ಲೇಖವಿದ್ದು ಅದನ್ನು ಜಾಂಬವಂತನು ಶ್ರೀಕೃಷ್ಣನಿಗೆ ನೀಡುವ ಪ್ರಸಂಗವಿದೆ. ಪ್ರಾಚೀನ ಕಾಲದಲ್ಲಿ ವಜ್ರಗಳನ್ನು ಅವುಗಳ ಶಕ್ತಿ, ತೇಜಸ್ಸು ಮತ್ತು ಹೊಳಪನ್ನು ವಕ್ರೀಭವಿಸುವ ಮತ್ತು ಕೆತ್ತನೆ ಮಾಡುವ ಸಾಮರ್ಥ್ಯದ ಆಧಾರದ ಮೇಲೆ ವಜ್ರಗಳ ಮೌಲ್ಯವನ್ನು ನಿರ್ಧರಿಸಲಾಗುತ್ತದೆ. ಗರುಡ ಪುರಾಣದಲ್ಲಿ ಪ್ರಾಚೀನ ಭಾರತೀಯ ರತ್ನಶಾಸ್ತ್ರದ ಬಗ್ಗೆ ಒಂದು ಉಲ್ಲೇಖವಿದ್ದು, ಅದರಂತೆ ದೋಷರಹಿತ ವಜ್ರಗಳನ್ನು ಹೊಂದಿರುವ ಮಾಲೀಕರ ಸಂಪತ್ತು, ಜಾನುವಾರು, ಉತ್ತಮ ಸುಗ್ಗಿ, ಪತ್ನಿ ಮತ್ತು ಹೆಚ್ಚು ಮಕ್ಕಳನ್ನು ಪಡೆದಿರುತ್ತಾರೆ ಎನ್ನಲಾಗಿದೆ. ಇದಲ್ಲದೆ ವಜ್ರಗಳು ಅದರ ಮಾಲೀಕರನ್ನು ಭಯ ಮತ್ತು ಮಾಟಮಂತ್ರಗಳಿಂದ ರಕ್ಷಿಸುತ್ತದೆ ಎಂಬುದಾಗಿಯೂ ಹೇಳಲಾಗಿದೆ.

ವಜ್ರಗಳನ್ನು ಅಲಂಕಾರ/ಆಭರಣಗಳಾಗಿ, ಕತ್ತರಿಸುವ ಸಾಧನಗಳಾಗಿ, ದುಷ್ಟತನವನ್ನು ದೂರ ಮಾಡಲು “ತಾಲಿಸ್ಮನ್” ಆಗಿ ಬಳಸಲಾಗುತ್ತಿತ್ತು. ತಾಲಿಸ್ಮನ್ ಎಂದರೆ ಕೆತ್ತಿದ ವಜ್ರದುಂಗುರ ಅಥವಾ ರತ್ನಕಲ್ಲು ಮಾಂತ್ರಿಕ ಶಕ್ತಿಯನ್ನು ಹೊಂದಿರುತ್ತದೆ ಮತ್ತು ಅದೃಷ್ಟವನ್ನು ತರುತ್ತದೆ ಎಂದು ಭಾವಿಸಲಾಗಿತ್ತು. ಪ್ರಾಚೀನ ಭಾರತದಲ್ಲಿ ವಜ್ರದ ಗುಣಲಕ್ಷಣಗಳನ್ನು ಮತ್ತು ಮಾಂತ್ರಿಕ ಶಕ್ತಿಯನ್ನು ಅಧ್ಯಯನ ಮಾಡಲಾಗಿದ್ದು, ವಜ್ರಗಳ ಮಹತ್ವ ಎಷ್ಟೆಂದರೆ “ಮ್ಯಾಂಡಲಿನ್” ಎಂಬ ವೃತ್ತಿಪರ ವಜ್ರಗಳ ತಜ್ಞರೆ ಇದ್ದರು. ಆದರೆ ಅದರ ಬಗ್ಗೆ ಅನೇಕ ಅನುಮಾನಗಳಿವೆ.

ಡೆಕ್ಕನ್ ಪ್ರಾಂತ್ಯ (ದಕ್ಷಿಣ ಭಾರತ) ಪ್ರಾಚೀನ ಕಾಲದಲ್ಲಿಯೇ ವಜ್ರ ಗಣಿಗಾರಿಕೆಗೆ ಪ್ರಸಿದ್ಧಿಯಾಗಿತ್ತು. ಪೆನ್ನಾರ್, ಕೃಷ್ಣಾ ಮತ್ತು ಗೋದಾವರಿ ನದಿಗಳ ಮೆಕ್ಕಲು ಮಣ್ಣಿನ ನಿಕ್ಷೇಪಗಳಲ್ಲಿ ಅನೇಕ ಸ್ಥಳಗಳಲ್ಲಿ ವಜ್ರಗಳನ್ನು ಸಂಗ್ರಹಿಸಲಾಗುತ್ತಿತ್ತು. ಹಿಂದಿನ ಗೋಲ್ಕೊಂಡ ಸಾಮ್ರಾಜ್ಯದಲ್ಲಿ ವಜ್ರ ಗಣಿಗಾರಿಕೆ ಕ್ರಿ.ಪೂ. 3ನೇ ಶತಮಾನದಿಂದಲೇ ನಡೆದಿತ್ತು. ಇದಕ್ಕೆ ಮುಂಚೆ ದಕ್ಷಿಣ ಭಾರತದಲ್ಲಿ ಹರಿಯುವ ವಜ್ರ ನದಿಗಳು ಅಸ್ತಿತ್ವದಲ್ಲಿವೆ ಎಂಬುದಾಗಿ “ಟಾಲೆಮಿ” ಎಂಬ ಇಜಿಪ್ಟ್ ಯಾತ್ರಿಕ ತನ್ನ ಲೇಖನಗಳಲ್ಲಿ ದಾಖಲಿಸಿದ್ದಾನೆ.

ನದಿಗಳಲ್ಲಿ ವಜ್ರಗಳು ಹರಿಯುವುದೆಂದರೆ, ಭೂಮಿಯ ಮೇಲೆ ಮನುಷ್ಯನ ನಾಗರಿಕತೆಗಳು ಹುಟ್ಟುವುದಕ್ಕೂ ಪೂರ್ವದಲ್ಲಿ ವಜ್ರಗಳಿರುವ ಕಿಂಬರ್ಲೈಟ್ ಮತ್ತು ಲ್ಯಾಂಪ್ರೋಫೈರ್ ಪೈಪ್‌ಗಳು (ವಜ್ರಭರಿತ ಶಿಲೆಗಳು) ನೆಲದ ಮೇಲೆ ನೈಸರ್ಗಿಕ ಪ್ರಕ್ರಿಯೆಗಳಿಂದ ಶಿಥಿಲಗೊಳ್ಳುವುದರಿಂದ ವಜ್ರಗಳು ಶಿಲೆಗಳಿಂದ ಬಿಡುಗಡೆಗೊಂಡು ನೀರಿನ ಜೊತೆಗೆ ನದಿಗಳ ಮೂಲಕ ಹರಿದುಹೋಗಿ ಸಂಚಯನಗೊಳ್ಳುತ್ತವೆ. ಹಾಗಾಗಿಯೇ ಈಗಲೂ ಜಗತ್ತಿನ ಅನೇಕ ಕಡೆ ನದಿ ಪಾತ್ರದ ಮೆಕ್ಕಲು ಮಣ್ಣಿನಲ್ಲಿ ವಜ್ರಗಳು ದೊರಕುತ್ತವೆ.

(ಚಿತ್ರ: ಜೀನ್ ಬ್ಯಾಪ್ಟಿಸ್ಟ್-ಟಾವರ್ನಿಯರ್ (1605-1689) ಮತ್ತು ಡೈಮಂಡ್ ಮೈನಿಂಗ್ ಭಾವಚಿತ್ರಗಳು (www.Wikipedia.org <http://www.Wikipedia.org).

ಕೆಲವು ಪ್ರಸಿದ್ಧ ಭಾರತೀಯ ವಜ್ರಗಳು: ಗ್ರೇಟ್ ಮೊಘಲ್-787, ನಿಜಾಮರ-440, ರೀಜೆಂಟ್-140, ಓರ‍್ಲೋ-195, ದರಿಯಾ-ಐ-ನೂರ್-185, ಷಾ-95, ಹೋಪ್-45 ಮತ್ತು ಕೊಹಿನೂರ್-793 ಕ್ಯಾರೆಟ್. ಒಂದು ಕ್ಯಾರೆಟ್ ಎಂದರೆ 0.2 ಮಿಲಿ ಗ್ರಾಂ ತೂಕ.

ಪ್ರಾಚೀನ ಕಾಲದಿಂದ ಇತಿಹಾಸದ ಕಾಲದವರೆಗೆ: ಪ್ರಾಚೀನ ಮತ್ತು ಐತಿಹಾಸಿಕ ಕಾಲದ ವಜ್ರಗಳ ಸಾಂಪ್ರದಾಯಿಕ ಜ್ಞಾನವು ಹಿಂದೂ ಧರ್ಮಗಳಲ್ಲಿ ವಜ್ರ ಗಣಿಗಾರಿಕೆ ಒಳಗೊಂಡಂತೆ ಸುದೀರ್ಘವಾದ ತಂತ್ರಜ್ಞಾನವನ್ನು ಹೊಂದಿರುವುದು ಕಾಣಿಸುತ್ತದೆ. ಮಹಾಭಾರತದ ಅವಧಿ 5000 ದಿಂದ 3000 ವರ್ಷಗಳ ನಡುವೆ! ಮತ್ತು ರಾಮಾಯಣ ಸುಮಾರು 7000 ವರ್ಷಗಳ ಆಸುಪಾಸು! ನಡೆದಿದೆ ಎನ್ನಲಾಗಿದೆ. ಆದರೆ ಕೆಲವು ವಿದ್ವಾಂಸರು ರಾಮಾಯಣ 10,000 ವರ್ಷಗಳು ಮತ್ತು ಮಹಾಭಾರತ 5000-7000 ವರ್ಷಗಳ ನಡುವೆ ನಡೆದಿದೆ ಎನ್ನುತ್ತಾರೆ. ಮಹಾಜನಪದ ಕಾಲದಲ್ಲಿ (ಕ್ರಿ.ಪೂ.1000 ರಿಂದ ಕ್ರಿ.ಪೂ.600 ವರ್ಷಗಳು), ವೇದ ಕಾಲದ ಜನಪದ ಕ್ಷೇತ್ರಗಳಿಂದ ವಿಕಸನಗೊಂಡಿತು. ಇದೇ ಕಾಲದಲ್ಲಿ ಸಾಮ್ರಾಜ್ಯಗಳು ತಮ್ಮದೇ ಆದ ನಾಣ್ಯ ಮುದ್ರಿಸುವ ಘಟಕಗಳನ್ನು ಮತ್ತು ವಜ್ರಗಳಿಗೆ ನಿರ್ದಿಷ್ಟವಾದ ಅಳತೆಯ ಘಟಕಗಳನ್ನು ಹೊಂದಿದ್ದವು.

ವಜ್ರಗಳನ್ನು “ತಾಂಡೂಲ್” ಅಳತೆಯ ಯುನಿಟ್‌ಗಳಲ್ಲಿ ಅಳೆಯಲಾಗುತ್ತಿತ್ತು. ಇದು ಒಂದು ಅಕ್ಕಿ ಕಾಳಿನ ತೂಕಕ್ಕೆ ಸಮನಾಗಿತ್ತು. ಕರೆನ್ಸಿಯನ್ನು ರೂಪಕ್ (ರೂಪಾಯಿ) ಎಂದು ಕರೆಯಲಾಗುತ್ತಿತ್ತು. ಸಂಸ್ಕೃತ ಸಾಹಿತ್ಯದಲ್ಲಿ ನೀಡಲಾದ ಬೆಲೆ ಪಟ್ಟಿಯ ಪ್ರಕಾರ 20 ತಾಂಡೂಲ್ ತೂಕದ ಉತ್ತಮ ವಜ್ರವು 200,000 ರೂಪಕ್ ಬೆಲೆಯಾಗಿತ್ತು. ಶ್ರೀಮಂತರು ತಮ್ಮ ಸಂಪತ್ತನ್ನು ಹೆಚ್ಚಾಗಿ ವಜ್ರಗಳಲ್ಲಿ ಪರಿವರ್ತಿಸಿ ಮನೆಗಳಲ್ಲಿ ಇಟ್ಟುಕೊಳ್ಳುತ್ತಿದ್ದರು. ಅದು ಹೂಡಿಕೆಯ ರೂಪದಲ್ಲಿ ತಮ್ಮ ಸಂಪತ್ತನ್ನು ಸಂಗ್ರಹಿಸಿಡುವ ರೀತಿಯಾಗಿತ್ತು.

ವಜ್ರಗಳು, ಇತರ ರತ್ನಗಳು ಮತ್ತು ಲೋಹಗಳ ಬಗ್ಗೆ ವಿವರಗಳನ್ನು ನೀಡಿರುವ ಗರುಡ ಪುರಾಣದ ಹೊರತಾಗಿ ಆರಂಭಿಕ ಗ್ರಂಥಗಳಲ್ಲಿ ಕೌಟಿಲ್ಯನ ರತ್ನಶಾಸ್ತ್ರ, ಸಿಳ್ಳಪದಿಕರ್ಣಿ (2ನೇ ಶತಮಾನ, ತಮಿಳು) ಅರ್ಥಶಾಸ್ತ್ರ (ಕ್ರಿ.ಪೂ. 320-296) ಸೇರಿವೆ; ರತ್ನ ಪರೀಕ್ಷೆ ಮತ್ತು ಬೃಹತ್ ಸಂಹಿತೆ (ಕ್ರಿ.ಶ. 5ನೇ ಶತಮಾನ) ಕ್ರಮವಾಗಿ ಬುದ್ಧಭಟ್ ಮತ್ತು ವರಾಹಮಿಹಿರ ಬರೆದ ಗ್ರಂಥಗಳಲ್ಲೂ ವಜ್ರಗಳ ಬಗ್ಗೆ ವಿವರಣೆಗಳಿವೆ.

ಅಮೂಲ್ಯವಾದ ರತ್ನಗಳು ಮತ್ತು ಲೋಹಗಳ ಮೌಲ್ಯಮಾಪನ ನಿಯಮಗಳನ್ನು ಕ್ರಿ.ಪೂ. 4ನೇ ಶತಮಾನದ ವೇಳೆಗೆ ಉತ್ತರ ಭಾರತದಲ್ಲಿ ಮೌರ್ಯರ ಸಾಮ್ರಾಜ್ಯದ ಕಾಲದಲ್ಲಿ ಅರ್ಥಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ವಜ್ರಗಳು ಮತ್ತು ಎಲ್ಲಾ ಪ್ರಮುಖ ರತ್ನಗಳ ವ್ಯಾಪಾರವನ್ನು ನಿಯಂತ್ರಿಸಲು ಆಯಾ ರಾಜ್ಯಗಳ ಕೋಶಾಧ್ಯಕ್ಷರು ಮೌಲ್ಯಮಾಪನಗಳನ್ನು ಬಳಸುತ್ತಿದ್ದರು. ಈ ವಿವರಣೆಗಳಿಂದ ಪ್ರಾಚೀನ ಕಾಲದಿಂದ ಇತಿಹಾಸದ ಕಾಲದವರೆಗೂ ಆರ್ಥಿಕ ಪ್ರಾಮುಖ್ಯತೆಯನ್ನು ಗುರುತಿಸಿದರೆ “ಗಣಿಗಳು ರಾಜರ ಖಜಾನೆಯ ಮೂಲ” ಎಂದು ತಿಳಿದುಬರುತ್ತದೆ. ಕೌಟಿಲ್ಯನು, ತನ್ನ ಕೌಟಿಲ್ಯಶಾಸ್ತ್ರದಲ್ಲಿ ಅದನ್ನು ವಿಶೇಷವಾಗಿ ಉಲ್ಲೇಖಿಸಿದ್ದಾನೆ.

(ಚಿತ್ರ: ವಜ್ರ ಗಣಿಗಳ ಪ್ರದೇಶಗಳನ್ನು ತೋರಿಸುವ ದಕ್ಷಿಣ ಭಾರತದ ನಕ್ಷೆ.)

ಪುರಾತನ ಗಣಿಗಳನ್ನು ಕಂಕರು (ಕಲ್ಲು)-ಮಣ್ಣು, ನದಿ ಮೆಕ್ಕಲು ಮಣ್ಣು ಸಂಚಯನ ನಿಕ್ಷೇಪಗಳು ಮತ್ತು ಅವುಗಳ ಮೂಲ ಶಿಲೆಗಳ ಆಧಾರದಿಂದ ಪಟ್ಟಿ ಮಾಡಲಾಗಿದೆ. ಆದರೆ ವಜ್ರದ ಕ್ಷೇತ್ರ (ಫೀಲ್ಡ್) ಗಳಿಗೆ ಸಂಬಂಧಿಸಿದಂತೆ ರತ್ನಗಳು ದೊರಕುವ ಗಣಿಗಳು ಮತ್ತು ಅವುಗಳ ಸ್ಥಳಗಳನ್ನು ಹಳೆ ವರದಿಗಳಲ್ಲಿ ಉಲ್ಲೇಖಿಸಲಾದ ಮೂಲ ಸ್ಥಳಗಳಲ್ಲಿ ಗುರುತಿಸುವುದು ಕಷ್ಟವಾಗಿದೆ. ಆದರೂ, ಭೂವೈಜ್ಞಾನಿಕ ಸಂಶೋಧನೆಗಳ ಆಧಾರದಿಂದ ಈ ಸ್ಥಳಗಳನ್ನು ಗುರುತಿಸಿ ಕೆಲವನ್ನು ಇಲ್ಲಿ ಪಟ್ಟಿ ಮಾಡಲಾಗಿದೆ: “ವೈರಾಗಡ್” (ಪುರಾತನ ವಜ್ರಗೃಹ) ನಾಗಪುರದ ಆಗ್ನೇಯ ದಿಕ್ಕಿನಲ್ಲಿ 80 ಮೈಲಿಗಳ ದೂರದಲ್ಲಿ “ವೆಂಗಂಗ” ನದಿಯ ಉಪನದಿ “ಬಾತ್” ನದಿ ದಡಗಳಲ್ಲಿ (ವೇಣುಗಂಗಾ-ಬೃಹತ್-ಸಂಹಿತೆ); ಮಧ್ಯಪ್ರದೇಶದ ಪನ್ನಾ ಸುತ್ತಮುತ್ತಲ ಅಕಾರಾವಂತಿಯ ಕೋಸಲ ಪ್ರದೇಶ; ಮೂಲದಲ್ಲಿ “ಮಾತಂಗ” ಎಂದು ಕರೆಯುತ್ತಿದ್ದ ಗೋಲ್ಕೊಂಡ ಗಣಿಗಳ ಸುತ್ತಮುತ್ತಲಿನ ಪ್ರದೇಶ; ಪೌಂಡಾ ಅಥವಾ ಸೌಮೆಲ್ಪುರದ ಸುತ್ತಲಿನ ಛೋಟಾ-ನಾಗಪುರ ಪ್ರದೇಶ; ಕಳಿಂಗ, ಮಹಾನದಿ ಕಣಿವೆ, ಸಂಬಲ್‌ಪುರ್ ಜಿಲ್ಲೆ; ಮತ್ತು ಕೋಯೆಲ್ ನದಿ, ಹಿರಕುಂಡ್ ಇತ್ಯಾದಿ ಮೆಕ್ಕಲುಮಣ್ಣು ನಿಕ್ಷೇಪಗಳು. ಕ್ರಿ.ಶ.13ನೇ ಶತಮಾನದವರೆಗೂ ವಜ್ರಗಳು ಮತ್ತು ವಜ್ರ ಗಣಿಗಾರಿಕೆಯ ವಿವರಗಳಿರುವ ಹಲವು ಗ್ರಂಥಗಳನ್ನು ರಚಿಸಲಾಯಿತು.

ಸಂಬಲಪುರ ಪ್ರದೇಶದ ಸವಾರ, ಛೋಟಾ ನಾಗ್ಪುರ್ ಪ್ರದೇಶದ ಕೋಲ್ಸ್ ಮತ್ತು ಮಧ್ಯ ಭಾರತದ ಗೊಂಡರು ಸಾಂಪ್ರದಾಯಿಕವಾಗಿ ಮೆಕ್ಕಲುಮಣ್ಣಿನ ನಿಕ್ಷೇಪಗಳಲ್ಲಿ ಗುಂಡಿಗಳನ್ನು ತೆಗೆದು ಕಂಕರು-ಕಲ್ಲು ಮಣ್ಣನ್ನು ನೀರಿನಲ್ಲಿ ಜಾಲಿಸಿ ವಜ್ರಗಳನ್ನು ಸಂಗ್ರಹಿಸುತ್ತಿದ್ದರು.

ಮಧ್ಯಕಾಲೀನ ಅವಧಿ (ಕ್ರಿ.ಶ. 1300 ರಿಂದ 18ನೇ ಶತಮಾನದವರೆಗೆ): ಕ್ರಿ.ಶ. 13ನೇ ಶತಮಾನದಲ್ಲಿ ಮಾರ್ಕೊ ಪೊಲೊ ಭಾರತಕ್ಕೆ ಭೇಟಿ ನೀಡಿದ ಮೇಲೆ ಅನೇಕ ಇಟಾಲಿಯನ್ನರು, ರಷ್ಯನ್ನರು, ಸ್ಪ್ಯಾನಿಷ್ ಮತ್ತು ಬ್ರಿಟಿಷ್ ಪ್ರವಾಸಿಗರು ದಕ್ಷಿಣ ಭಾರತದ ವಜ್ರ ಗಣಿಗಳಿಗೆ ಭೇಟಿ ನೀಡಿದರು. ಇವರೆಲ್ಲ ಭಾರತೀಯ ವಜ್ರಗಳು ಮತ್ತು ವಜ್ರ ಗಣಿಗಾರಿಕೆ ಚಟುವಟಿಕೆಗಳ ಬಗೆಗಿನ ಅದ್ಭುತ ಕತೆಗಳನ್ನು ಜಗತ್ತಿನಾದ್ಯಂತ ಹರಡಿದರು. 16ನೇ ಶತಮಾನದಲ್ಲಿ ಅಬುಲ್ ಫಜಲ್ ಬರೆದ “ಐನ್-ಐ-ಅಕ್ಬರಿ” ಪಠ್ಯದಲ್ಲಿ ವಜ್ರಗಳು ಸೇರಿದಂತೆ ಲೋಹಗಳು ಮತ್ತು ರತ್ನಗಳ ಬಗ್ಗೆ ಉಲ್ಲೇಖಿಸಿದ್ದರೂ ಯಾವುದೇ ಗಣಿ ಚಟುವಟಿಕೆಗಳನ್ನು ದಾಖಲಿಸಲಿಲ್ಲ.

ಫ್ರೆಂಚ್ ಯಾತ್ರಿಕ “ಜೀನ್ ಬ್ಯಾಪ್ಟಿಸ್ಟ್ ಟಾವೆರ್ನಿಯರ್”, ಕ್ರಿ.ಶ. 1652ರಲ್ಲಿ ಭಾರತಕ್ಕೆ ಭೇಟಿ ನೀಡಿದಾಗಿನ ವಜ್ರ ಗಣಿಗಾರಿಕೆ ಚಟುವಟಿಕೆಗಳು, ವಜ್ರಗಳ ವ್ಯಾಪಾರ ಮತ್ತು ರತ್ನಗಳನ್ನು ಕತ್ತರಿಸಿ ಹೊಳಪು ಮಾಡುವ ವಿವರಗಳನ್ನು ಸಾಕಷ್ಟು ವಿವರವಾಗಿ ದಾಖಲಿಸಿದ್ದಾನೆ (Howard, 1677; Ball, 1881; Ravi et al.). ಜೀನ್ ಬ್ಯಾಪ್ಟಿಸ್ಟ್‌ಗೆ ಆತನ ಗೆಳೆಯರು “ಭಾರತಕ್ಕೆ ಪ್ರಯಾಣ ಕೈಗೊಳ್ಳಬೇಡ ಅದು ಅಪಾಯʼ ಎಂದು ಸಲಹೆ ನೀಡಿದರೂ ಭಾರತದಲ್ಲಿನ ಪ್ರಸಿದ್ಧ ವಜ್ರ ಗಣಿಗಳನ್ನು ನೋಡುವ ಕುತೂಹಲದಲ್ಲಿ ತನ್ನ ಪ್ರಾಣವನ್ನು ಪಣಕ್ಕಿಟ್ಟ ಬ್ಯಾಪ್ಟಿಸ್ಟ್ ಯುರೋಪಿಯನ್ನರಿಗೆ ವಜ್ರ ಮಾರ್ಗವನ್ನು ತೆರೆಯುವಲ್ಲಿ ಮೊದಲಿಗನಾಗಲು ಭಾರತಕ್ಕೆ ಬಂದ. ಆತ ಭಾರತಕ್ಕೆ ಭೇಟಿ ನೀಡಿದಾಗ ಸುಮಾರು 60 ಸಾವಿರ ಕಾರ್ಮಿಕರು ವಜ್ರ ಗಣಿಗಾರಿಕೆಯಲ್ಲಿ ತೊಡಗಿಕೊಂಡಿರುವುದಾಗಿ ಮತ್ತು ಗಣಿಗಾರಿಕೆಯ ಕಾರ್ಯವಿಧಾನಗಳನ್ನು ದಾಖಲಿಸಿದ್ದಾನೆ.

ಟಾವೆರ್ನಿಯರ್ 1636 ಮತ್ತು 1662ರ ನಡುವೆ ಆರು ಸಮುದ್ರಯಾನಗಳನ್ನು ಮಾಡಿ ಕೃಷ್ಣ ನದಿ ಪ್ರದೇಶದ ಕೊಲ್ಲೂರು, ರಾಮಲ್ಕೋಟ ಮತ್ತು ಇತರ ಗಣಿಗಳಿಗೆ ಭೇಟಿ ನೀಡಿದ ಕಾಲದಲ್ಲಿ ಮೂರು ದೊಡ್ಡ ವಜ್ರಗಳನ್ನು ಸಂಗ್ರಹಿಸಿದ್ದನು. ಈ ಮೂರು ವಜ್ರಗಳಲ್ಲಿ ಅಮೂಲ್ಯ ಮತ್ತು ಅದ್ಭುತ ವಜ್ರಗಳಾದ ಕೊಹ್-ಇ-ನೂರ್ ಮತ್ತು ಹೋಪ್ ವಜ್ರಗಳೊಂದಿಗೆ ಯುರೋಪ್ ಮರಳಿದ್ದನು. ಈ ಎರಡೂ ವಜ್ರಗಳು ಇಂದಿಗೂ ತಮ್ಮ ಸೌಂದರ್ಯ ಮತ್ತು ಅಪರೂಪತೆಯನ್ನು ಕಾಯ್ದುಕೊಂಡಿವೆ. ಈ ವಜ್ರಗಳು ಇತಿಹಾಸದಲ್ಲಿ ಅನೇಕ ರಾಜರ ಕೈ ಬದಲಾಗಿವೆ.

ಕೊಲ್ಲೂರು ಪ್ರದೇಶದಿಂದ ಜಗತ್ಪ್ರಸಿದ್ಧ ಕೊಹ್-ಇ-ನೂರ್ ವಜ್ರವನ್ನು ಸಂಗ್ರಹಿಸಲಾಗಿದೆ ಎಂದು ಹೇಳಲಾಗುತ್ತದೆ. ಈ ಎರಡೂ ವಜ್ರಗಳ ರೇಖಾಚಿತ್ರಗಳನ್ನು ಟಾವೆರ್ನಿಯರ್ ತಮ್ಮ ಭಾರತೀಯ ವಜ್ರಗಳ ಆರಂಭಿಕ ದಾಖಲಾತಿಯಲ್ಲಿ ನಿರೂಪಿಸಿದ್ದಾನೆ. ಇದೇ ಕೊಲ್ಲೂರು ವಜ್ರ ಗಣಿಗಳಿಗೆ ಭೇಟಿ ನೀಡಿದ ಬ್ರಿಟಿಷರಾದ ವಿಲಿಯಂ ಮೆಥ್‌ವೋಲ್ಡ್ (1622) ಮತ್ತು ಹೂವಾರ್ಡ್ (1677) ಬ್ರಿಟಿಷರ ಕಾಲದಲ್ಲಿ ಜಿ.ಎಸ್.ಐ ಭೂವಿಜ್ಞಾನಿಗಳಿಗಿಂತ ಮುಂಚೆ ವಜ್ರ ಗಣಿಗಾರಿಕೆ ಮತ್ತು ವಜ್ರಗಳ ಸಂಗ್ರಹಣೆಯ ವಿಧಾನಗಳನ್ನು ದಾಖಲಿಸಿದ್ದಾರೆ.

1677ರಲ್ಲಿ ರಾಯಲ್ ಸೊಸೈಟಿಗೆ ಪ್ರಸ್ತುತಪಡಿಸಿದ ಪತ್ರಿಕೆಯಲ್ಲಿ, ಹೊವಾರ್ಡ್ (ಇಂಗ್ಲೆಂಡಿನ ಅರ್ಲ್ ಮಾರ್ಷಲ್) 38 ವಜ್ರ ಗಣಿಗಳನ್ನು ವಿವರಿಸಿದ್ದು ಅವುಗಳಲ್ಲಿ 23 ಗಣಿಗಳು ಗೋಲ್ಕೊಂಡ ಸಾಮ್ರಾಜ್ಯದಲ್ಲಿ ಮತ್ತು 15 ಗಣಿಗಳು ಬಿಜಾಪುರ ಸಾಮ್ರಾಜ್ಯದಲ್ಲಿ ಕೃಷ್ಣಾನದಿಯಿಂದ ಹಿಡಿದು ಭೀಮಾ ನದಿಯವರೆಗೂ (ಮುನ್, 1929) ಹರಡಿಕೊಂಡಿರುವುದಾಗಿ ಮತ್ತು ಮಡ್ಡಿಮಡಗು ಗಣಿ ವಜ್ರಗಳು ಗುಣಮಟ್ಟದಲ್ಲಿ ಶ್ರೇಷ್ಠವಾಗಿವೆ ಎಂದು ವಿವರಿಸಲಾಗಿದೆ. ಆ ಕಾಲದಲ್ಲಿ ಹೆಚ್ಚಿನ ಸಂಖ್ಯೆಯ ವಜ್ರ ಗಣಿಗಳನ್ನು ನದಿ ದಡಗಳ ಮೆಕ್ಕಲುಮಣ್ಣು ಸಂಚಯನಗಳು, ಕಂಕರು-ಕಲ್ಲು ಸ್ತರಗಳಲ್ಲಿ ಮತ್ತು ಕೃಷ್ಣ ಪೆನ್ನಾರ್ ಪ್ರಾಚೀನ ನದಿಗಳಲ್ಲಿ ಕರ್ನೂಲ್ ಗುಂಪಿನ ಬಂಗನಪಲ್ಲಿ ಶಿಲಾರಚನೆಗಳ ಸಮೂಹಗಳಲ್ಲಿ ತೋಡಲಾಗುತ್ತಿತ್ತು. ಪ್ರಾಚೀನ ಗಣಿ ಕಾರ್ಮಿಕರು ವಜ್ರಗಳನ್ನು ಹೆಚ್ಚಾಗಿ ನದಿಗಳ ಕಂಕರು-ಕಲ್ಲು, ಪೆಂಟೆಶಿಲೆ ಮತ್ತು ಮೆಕ್ಕಲುಮಣ್ಣಿನಲ್ಲಿ ಸಂಗ್ರಹಿಸುತ್ತಿದ್ದರು. ಈ ವಲಯದ ಪ್ರಮುಖ ವಜ್ರ ಗಣಿಗಳು ಮತ್ತು ಗಣಿ ಪ್ರದೇಶಗಳನ್ನು ಕೆಳಗೆ ನೀಡಲಾಗಿದೆ.

* ಗುಂಟೂರು ಮತ್ತು ಕೃಷ್ಣಾ ಜಿಲ್ಲೆಗಳ ಕೃಷ್ಣಾ ನದಿಯ ಮೆಕ್ಕಲುಮಣ್ಣು ಪ್ರದೇಶಗಳ (ಕಂಕರು-ಕಲ್ಲು ನಿಕ್ಷೇಪಗಳು) ಮಲ್ಲವೆಲ್ಲಿ-ಗೊಲ್ಲಪಲ್ಲೆ ಶಿಸ್ಟ್ ಪಟ್ಟಿ (ಬೆಲ್ಟ್), ಸಂಜೀವರಾವ್‌ಪೇಟ-ಕಳಸಪಾಡು ಶಿಸ್ಟ್ ಪಟ್ಟಿ, ಕುಂದೈರ್ ಶಿಸ್ಟ್ (ಬಸವಾಪುರ-ಕರ್ನೂಲ್ ಗಂಜಲಪಲ್ಲೆ) ಪಟ್ಟಿ ಮತ್ತು ಪೆನ್ನಾರ್ ನದಿಯ ಶಿಸ್ಟ್ (ಕಡಪ ಜಿಲ್ಲೆ ಚೆನ್ನೂರು-ಕೊಂಡಪೇಟ) ಪಟ್ಟಿ.

* ಕರ್ನೂಲ್ ಜಿಲ್ಲೆಯ ರಾಮಲ್ಲಕೋಟ ಯಾಂಬೈ ಶಿಸ್ಟ್ ಪಟ್ಟಿ ಮತ್ತು ಮುನಿಮಡುಗು-ಬಂಗನಪಲ್ಲೆ ಶಿಸ್ಟ್ ಪಟ್ಟಿ ಮತ್ತು ಕೃಷ್ಣಾ ಜಿಲ್ಲೆಯ ಮಲ್ಲವೆಲ್ಲಿ-ಗೊಲ್ಲಪಲ್ಲೆ ಶಿಸ್ಟ್ ಪಟ್ಟಿಯ ಸಂಯೋಜಿತ ಕಂಕರುಕಲ್ಲುಗಳು, ಅನಂತಪುರ ಮತ್ತು ಕರ್ನೂಲ್ ಜಿಲ್ಲೆಗಳಲ್ಲಿ ವಜ್ರಕರೂರು-ಜೊನ್ನಗಿರಿ ಪಟ್ಟಿಯ ಮೇಲ್ಮೈ ಮೆಕ್ಕಲುಮಣ್ಣು.

ಇಂದಿನ ಆಂಧ್ರಪ್ರದೇಶದ ಭೀಮಾ, ತುಂಗಭದ್ರಾ, ಕೃಷ್ಣಾ ಮತ್ತು ಗೋದಾವರಿ ಕಣಿವೆಗಳಲ್ಲಿರುವ ಪ್ರಾಚೀನ ವಜ್ರ ಗಣಿಗಳನ್ನು ವಾಯ್ಸಿ (1825), ರಾಜ (1872), ಲಿಯೊನಾರ್ಡ್ ಮುನ್ (1929), ದತ್ತ (1953) ಮತ್ತು ರಾವ್ (1969) ಅವರು ವಿಶೇಷವಾಗಿ ಅಧ್ಯಯನ ಮಾಡಿ ವರದಿಗಳನ್ನು ಕೊಟ್ಟಿದ್ದಾರೆ. ವ್ಯಾಲೆಂಟೈನ್ ಬಾಲ್ (1881) ಅವರು ಬಂಗಾಳ ವಜ್ರ ಗಣಿಗಳ ಕುರಿತಾದ ಬರಹಗಳಲ್ಲಿ ಬಂಗಾಳ, ಬಿಹಾರ, ಒರಿಸ್ಸಾ ಪ್ರದೇಶಗಳತ್ತ ಗಮನ ಸೆಳೆಯುತ್ತ ಪೂರ್ವದಲ್ಲಿ ವಜ್ರಗಳ ಉತ್ಪಾದನೆಯ ಬಗ್ಗೆ ವಿವರಿಸಿದ್ದಾರೆ.

15ನೇ ಶತಮಾನದಲ್ಲಿ ದಾಖಲಿಸಿದ ವೃತ್ತಾಂತಗಳಲ್ಲಿ “ರಾಯಚೂರು ದೋವಾಬ್” (ಎರಡು ನದಿಗಳ ನಡುವಿನ ಎತ್ತರ ಪ್ರದೇಶ) ರಾಜರು ವಜ್ರ ಗಣಿಗಾರಿಕೆಯಿಂದ ತಮ್ಮ ರಾಜ್ಯಕ್ಕೆ ನಿಯಮಿತ ಆದಾಯವನ್ನು ಪಡೆಯುತ್ತಿದ್ದರು ಎಂಬ ಉಲ್ಲೇಖಗಳಿವೆ. ಈಗ ಹೈದರಾಬಾದ್‌ನ ಉಪನಗರವಾಗಿರುವ ಗೋಲ್ಕೊಂಡ ಕೋಟೆಯ ಬಳಿ ಇರುವ “ಕರ್ವಾನ್” ಪಟ್ಟಣವು ವಜ್ರಗಳನ್ನು ಕತ್ತರಿಸಿ ಹೊಳಪು ಮಾಡುವ ವಿಶ್ವದ ಅತಿದೊಡ್ಡ ವಜ್ರ ಕೈಗಾರಿಕೆ ಮತ್ತು ವ್ಯಾಪಾರದ ದೊಡ್ಡ ಕೇಂದ್ರವಾಗಿತ್ತು. ಇಲ್ಲಿನ ಬಹುದೊಡ್ಡ ವ್ಯಾಪಾರ ವಹಿವಾಟದಿಂದ “ಗೋಲ್ಕೊಂಡ ವಜ್ರಗಳು” ಎಂದು ಕರೆಯಲಾಯಿತು. ಯುರೋಪ್‌ನಲ್ಲಿ ಗೋಲ್ಕೊಂಡ ಹೆಸರು ದೊಡ್ಡ ಸಂಪತ್ತಿನ ಸ್ಥಳ ಎಂದು ಅರ್ಥೈಸಲಾಗಿತ್ತು.

1840 ಮತ್ತು 1894ರ ಮಧ್ಯೆ ಹೈದರಾಬಾದ್ ಡೆಕ್ಕನ್ ಕಂಪನಿ “ಪರಿತಲಾ” ಎಂಬ ಪ್ರದೇಶದಲ್ಲಿ 2,085 ಕ್ಯಾರೆಟ್ ತೂಕದ 3,444 ವಜ್ರ ಕಲ್ಲುಗಳನ್ನು ಉತ್ಪಾದಿಸಿತು ಎಂದು ದಾಖಲಾಗಿದೆ. ಈ ಪ್ರದೇಶದಲ್ಲಿದ್ದ 88 ವಜ್ರ ಗಣಿಗಳಲ್ಲಿ ಮುಖ್ಯವಾದ ಐದು ಗಣಿಗಳೆಂದರೆ ಗೂರಾಪುರ, ಹಾಸನಾಪುರ, ಲಮದೂರು, ಮರ್ಮೂದ್ ಮತ್ತು ಪಿಂಚೆಟ್ಗಪಾಡು.

ವಜ್ರ ಗಣಿಗಾರಿಕೆ ನಡೆಯುತ್ತಿದ್ದ ಸ್ಥಳಗಳು: * ಪೆನ್ನಾರ್ ನದಿಯ ಕಡಪ ಶಿಸ್ಟ್ ಪಟ್ಟಿಯ ಗುಂಪಿನ ಶಿಲೆಗಳಲ್ಲಿರುವ ಕೊಂಡಪೇಟ, ಮುನಿಮಡಗು, ವಜ್ರಕರೂರು ಇತ್ಯಾದಿ ಗಣಿಗಳು. * ಪೆನ್ನಾರ್ ಮತ್ತು ಕೃಷ್ಣಾ ನದಿಗಳ ನಡುವಿನ ನಂದಿಯಾಲ್ ಗುಂಪಿನ ಶಿಲೆಗಳಲ್ಲಿರುವ ಬನಗಾನಪಲ್ಲಿ, ರಾಮುಲ್ಕೋಟ ಅದರ ಸುತ್ತಮುತ್ತಲಿನ ಗಣಿಗಳು. * ಕೃಷ್ಣಾ ನದಿ ದಡಗಳಲ್ಲಿರುವ ಎಲ್ಲೂರು ಅಥವಾ ಗೋಲ್ಕೊಂಡ ಗುಂಪು, ಕೊಲ್ಲೂರು, ಭಾಗಶಃ ಮುಲೇಲಿ ಅಥವಾ ಮಲ್ಲಪಲ್ಲಿಯ ಪ್ರಸಿದ್ಧ ಗಣಿಗಳು. * ಮಹಾನದಿ ದಡಗಳಲ್ಲಿರುವ ಸಂಬಲಪುರ್ ಗುಂಪು. ಉತ್ತರ ಕೋಯಲ್ ನದಿಯಲ್ಲಿರುವ ಸೌಮೇಲ್ಪುರ್ ಅಥವಾ ಸೆಮಾಹ್/ಸೆಮುಲ್ ಹಾಗೂ ಮಧ್ಯ ಪ್ರಾಂತ್ಯಗಳ ಮಹಾನದಿಯ ಜೊತೆಗೆ ವೈರಾಗರ್ ನದಿ ಕಣಿವೆಯ ಗಣಿಗಳು. * ಬುಂಡೇಲ್‌ಖಂಡ್‌ನಲ್ಲಿರುವ ಪನ್ನಾ ಗುಂಪು ಗಣಿಗಳು.

(ಚಿತ್ರ: ಜಗತ್ತಿನ ಕೆಲವು ಪ್ರಸಿದ್ಧ ವಜ್ರಗಳು)

ಕೆಲವು ಪ್ರಸಿದ್ಧ ವಜ್ರ ಗಣಿಗಳು: ಕೊಲ್ಲೂರು ವಜ್ರ ಗಣಿಗಳು: ಕೃಷ್ಣಾ ನದಿಯ ದಕ್ಷಿಣ ತೀರದಲ್ಲಿ ಕಂಕರು-ಕಲ್ಲು ಸ್ತರ-ಮಣ್ಣಿನ ನಿಕ್ಷೇಪಗಳಲ್ಲಿ ತೋಡಿರುವ ಕೊಲ್ಲೂರು ಗಣಿಗಳ (ಉತ್ತರ ರೇಖಾಂಶ: 16ಲಿ 43ᶦᶦ ಪೂರ್ವ ಅಕ್ಷಾಂಶ: 80ಲಿ 02ᶦᶦ) ವಜ್ರ-ಸಂಸ್ಕರಣಾ ಕಾರ್ಯಾಚರಣೆಯನ್ನು ಟಾವೆರ್ನಿಯರ್ ವಿವರವಾಗಿ ದಾಖಲಿಸಿದ್ದಾನೆ. ಕೊಲ್ಲೂರು ಗಣಿಗಳು 16ನೇ ಶತಮಾನದಲ್ಲಿ ಪ್ರಾರಂಭವಾಗಿ 19ನೇ ಶತಮಾನದವರೆಗೂ ಕಾರ್ಯ ನಿರ್ವಹಿಸಿದ್ದು, ಈ ಗಣಿಗಳಲ್ಲಿ ಅನೇಕ ಪ್ರಸಿದ್ಧ ಆಭರಣಗಳ ವಜ್ರಗಳನ್ನು ಸಂಗ್ರಹಿಸಲಾಗಿದೆ. ಈ ಗಣಿಗಳು ಭಾರತೀಯ ಉಪಖಂಡದ ಅತಿ ಪ್ರಸಿದ್ಧ ಮತ್ತು ಅತಿ ಹೆಚ್ಚು ವಜ್ರಗಳನ್ನು ಉತ್ಪಾದಿಸಿದ ಗಣಿಗಳಾಗಿವೆ.

ವ್ಯಾಪಕ ಗಣಿಗಾರಿಕೆ ನಡೆಯುತ್ತಿದ್ದ ಕಾಲದಲ್ಲಿ 30,000 ರಿಂದ 60,000 ಕಾರ್ಮಿಕರು (ಪುರುಷರು, ಮಹಿಳೆಯರು ಮತ್ತು ಮಕ್ಕಳು) ಕೊಲ್ಲೂರಿನ ಗಣಿಗಳಲ್ಲಿ ದುಡಿಯುತ್ತಿದ್ದರು ಮತ್ತು ಕೊಲ್ಲೂರಿನ ಪಟ್ಟಣದಲ್ಲಿಯೇ 1,00,000 ಕ್ಕಿಂತ ಹೆಚ್ಚು ಜನರು ವಾಸ ಮಾಡುತ್ತಿದ್ದರು ಎನ್ನಲಾಗಿದೆ. ಕೊಲ್ಲೂರಿನ ಗಣಿಗಳು ಕಚ್ಚಾ ಗಣಿಗಳಾಗಿದ್ದು ಕಾರ್ಮಿಕರು ಗಣಿಗಳಲ್ಲಿ ಕೆಲಸ ಮಾಡುವಾಗಿ ಅಪಾಯಕ್ಕೆ ಸಿಲುಕಿಕೊಳ್ಳುತ್ತಿದ್ದರು. ಧರಿಸಲು ಸರಿಯಾಗಿ ಬಟ್ಟೆಗಳೂ ಸಹ ಇಲ್ಲದ ಕಾರ್ಮಿಕರು ಬಿಸಿಲು, ಮಳೆಕಾಲದಲ್ಲಿ ಗುಡಿಸಿಲುಗಳಲ್ಲಿ ಮಲಗಬೇಕಾಗಿತ್ತು. ಕಾರ್ಮಿಕರಿಗೆ ಸರಿಯಾಗಿ ಸಂಬಳ ಕೂಡ ದೊರಕದೇ ಆಹಾರ ಮಾತ್ರ ಪೂರೈಸಲಾಗುತ್ತಿತ್ತು ಎಂಬುದಾಗಿ ತಿಳಿದುಬರುತ್ತದೆ.

ವಜ್ರಗಳನ್ನು ಸಂಗ್ರಹಿಸಲು ದೊಡ್ಡ ಗುಂಡಿಗಳನ್ನು ಬಾವಿಗಳ ರೀತಿಯಲ್ಲಿ ತೋಡುತ್ತಿದ್ದು ಗೋಡೆಗಳಿಗೆ ಮರದ ದಿಮ್ಮಿಗಳನ್ನು ಆಧಾರವಾಗಿ ಕೊಡುತ್ತಿಲ್ಲದ ಕಾರಣ ಮಳೆಗಾಲದಲ್ಲಿ ಕೆಲವೊಮ್ಮೆ ಬಾವಿಗಳು ಕುಸಿದು ಬಿದ್ದು ಹತ್ತಾರು ಕಾರ್ಮಿಕರು ಪ್ರಾಣ ಕಳೆದುಕೊಳ್ಳುತ್ತಿದ್ದರು. ಮಳೆಕಾಲದಲ್ಲಿ ಕಂಕರು-ಜೇಡಿಮಣ್ಣಿನ ಗುಂಡಿಗಳಲ್ಲಿ ಮಳೆನೀರು ಹೆಚ್ಚು ಸಂಗ್ರಹವಾಗುತ್ತಿದ್ದ ಕಾರಣ ಗುಂಡಿಗಳನ್ನು ಹೆಚ್ಚು ಆಳ ಮಾಡಲು ಸಾಧ್ಯವಾಗುತ್ತಿರಲಿಲ್ಲ. ವಜ್ರಗಳನ್ನು ಹೊಂದಿರುವ ಕಂಕರು-ಮೆಕ್ಕಲು-ಮಣ್ಣು ಸ್ತರಗಳು ಅಥವಾ ಪದರಗಳು ಸಾಮಾನ್ಯವಾಗಿ ಒಂದು ಅಡಿ ದಪ್ಪ ಇರುತ್ತಿದ್ದವು. ಈ ಸ್ತರಗಳು 1.5 ಕಿ.ಮೀ. ಉದ್ದ 500 ರಿಂದ 800 ಮೀ. ಅಗಲವಿದ್ದು ಆ ಪ್ರದೇಶದಲ್ಲಿ ಗುಂಡಿಗಳು/ಹೊಂಡಗಳನ್ನು ತೋಡಿ ವಜ್ರಗಳನ್ನು ಸಂಗ್ರಹಿಸಲಾಗುತ್ತಿತ್ತು.

ಕೊಲ್ಲೂರು ಪ್ರದೇಶ ಪೂರ್ವದಲ್ಲಿ ನಲ್ಲಮಲಾ ಬೆಟ್ಟಗಳ ಹೊರಹೊಲಯದಿಂದ ಹಿಡಿದುಕೊಂಡು ಉತ್ತರ-ಪಶ್ಚಿಮಕ್ಕೆ ಕೃಷ್ಣಾ ನದಿಯ ತಿರುವಿನವರೆಗೆ ಹರಡಿಕೊಂಡಿತ್ತು. ಗಣಿಗಾರಿಕೆ ನಿಂತುಹೋದ ಮೇಲೆ ಹೆಚ್ಚಿನ ಹೊಂಡಗಳು ಸುತ್ತಲಿನ ಬೆಟ್ಟಗಳಿಂದ ಗುಂಡುಕಲ್ಲು ಕಲ್ಲು-ಮಣ್ಣು ಜಾರಿಬಿದ್ದು ಮುಚ್ಚಿಕೊಂಡಿವೆ.

(ಚಿತ್ರ: ಕೊಲ್ಲೂರು ವಜ್ರ ಗಣಿಗಳಿರುವ ನಕ್ಷೆ)

ಜಿ.ಎಸ್.ಐ. ಭೂವಿಜ್ಞಾನಿಗಳು ಈ ಪುರಾತನ ಗಣಿಗಳನ್ನು 1986-1992ರ ಮಧ್ಯ ವಿವರವಾಗಿ ಸಮೀಕ್ಷೆ ಮಾಡಿ ವಜ್ರಗಳು ದೊರಕುತ್ತಿದ್ದ ಮೂಲ ಶಿಲೆಗಳು ಮತ್ತು ನಿಕ್ಷೇಪಗಳನ್ನು ಗುರುತಿಸಿದರು. ಕಡಪ ಸೂಪರ್ ಗುಂಪಿನ “ಕುಂಬಮ್” ಹೆಸರಿನ ಶಿಲಾರಚನೆಗಳಿಗೆ ಸೇರಿದ ನದಿ ದಡಗಳಲ್ಲಿ ಸಂಚಯನಗೊಂಡಿದ್ದ ಕಂಕರು ಕಲ್ಲುಗಳು ಮತ್ತು ಮರಳುಗಲ್ಲು ಪದರಗಳಲ್ಲಿ ವಜ್ರಗಳು ದೊರಕುವುದನ್ನು ಗುರುತಿಸಲಾಯಿತು. ಕೊಲ್ಲೂರು ಗಣಿ ಪ್ರದೇಶದಲ್ಲಿ 2000ರ ದಶಕದಲ್ಲಿ “ಪುಲಿಚಿಂತಲ” ನೀರಾವರಿ ಯೋಜನೆಯನ್ನು ಮಾಡಿದಾಗ ಬಹುಪಾಲಿನ ಈ ಪ್ರದೇಶ ಮುಳುಗಿಹೋಗಿ 15 ಮೀಟರು ಎತ್ತರ ನೀರು ನಿಂತುಕೊಂಡಿತು.

ಗೋಲ್ಕೊಂಡ ವಜ್ರ ಗಣಿಗಳ ಪ್ರದೇಶಗಳನ್ನು ಮೂಲವಾಗಿ ಗೋಲ್ಕೊಂಡ ಅಥವಾ ಗೊಲ್ಲಕೊಂಡ (ಕುರುಬರ ಬೆಟ್ಟ) ಎಂದು ಕರೆಯುತ್ತಿದ್ದರು. ಈಗ ಈ ಪ್ರದೇಶ ಪಾಳು ಬಿದ್ದಿದ್ದು ಗೋಲ್ಕೊಂಡ ಕೋಟೆಯೊಂದಿಗೆ ಹೈದರಾಬಾದ್ ನಗರಕ್ಕೆ 11 ಕಿ.ಮೀ. ದೂರದಲ್ಲಿ ಪಶ್ಚಿಮ ದಿಕ್ಕಿನಲ್ಲಿ ಹರಡಿಕೊಂಡಿದೆ. ಪ್ರಸ್ತುತ ಈ ಭಾಗ ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಹರಿಯುವ ಗೋದಾವರಿ, ವ್ಯೆನ್‌ಗಂಗಾ, ವಾರ್ಧಾ ಮತ್ತು ಕೃಷ್ಣಾ-ವೇಣಿ (ಕೃಷ್ಣ ಉಪ ನದಿ) ನದಿಗಳ ಕೆಳಭಾಗದ ಜಲಾನಯನಗಳ ಪ್ರದೇಶವಾಗಿದೆ. ಗೋಲ್ಕೊಂಡ ಕೋಟೆಯನ್ನು ಕ್ರಿ.ಶ. 945-970ರ ಮಧ್ಯೆ ನಿರ್ಮಿಸಲಾಗಿ, ಕ್ರಿ.ಶ.1687ರಲ್ಲಿ ಔರಂಗಜೇಬ್‌ನಿಂದ ದಾಳಿಗೊಳಗಾಗಿ ಶಿಥಿಲಗೊಂಡಿತು. ಮೂಲವಾಗಿ ಗೋಲ್ಕೊಂಡ ಕೋಟೆಯನ್ನು ಈ ಪ್ರಾಂತ್ಯವನ್ನು ಆಳುತ್ತಿದ್ದ ಕಾಕತೀಯ ರಾಜರು ಕಟ್ಟಿಸಿದ್ದರು.

ಗೋಲ್ಕೊಂಡ ವಜ್ರದ ಗಣಿಗಳು ರಾಜರ ಒಡೆತನದಲ್ಲಿದ್ದು ಗಣಿಗಳ ಕಾರ್ಯಾಚರಣೆಯನ್ನು ವಜ್ರ ವ್ಯಾಪಾರಿಗಳಿಗೆ ಗುತ್ತಿಗೆ ನೀಡಲಾಗುತ್ತಿತ್ತು. ಗುತ್ತಿಗೆದಾರರು ವಿದೇಶಿಯರು ಮತ್ತು ಚಿನ್ನದ ಒಡವೆಗಳನ್ನು ಮಾಡುತ್ತಿದ್ದ ದೇಶಿಯ ಜನರಾಗಿದ್ದರು. ಗುತ್ತಿಗೆದಾರರು ಗಣಿಗಳನ್ನು ತೋಡಿ ವಜ್ರಗಳನ್ನು ಸಂಗ್ರಹಿಸಿ ಮಾರಾಟ ಮಾಡಿದ ಲಾಭಾಂಶದಲ್ಲಿ ರಾಜನಿಗೆ 2% ಕೊಡುತ್ತಿದ್ದರು. ಜೊತೆಗೆ ಗಣಿಗಳಲ್ಲಿ ದೊರಕುತ್ತಿದ್ದ 10 ಕ್ಯಾರೆಟ್‌ಗಳಿಗಿಂತ ಹೆಚ್ಚು ತೂಕವಿದ್ದ ವಜ್ರಗಳನ್ನು ರಾಜನಿಗೆ ಒಪ್ಪಿಸಬೇಕಾಗಿತ್ತು.

1880ರ ದಶಕದಲ್ಲಿ ಗೋಲ್ಕೊಂಡ ಗಣಿಗಳ ನಕ್ಷೆಯನ್ನು ರಚಿಸಲು ಸಹಾಯ ಮಾಡಿದ ಜಿ.ಎಸ್.ಐ, ಭೂವಿಜ್ಞಾನಿ ವ್ಯಾಮಂಟೈನ್ ಬಾಲ್ ಗಣಿಗಳನ್ನು ಮರು ಪರಿಶೋಧಿಸುವವರೆಗೂ ವಜ್ರ ಗಣಿಗಳ ಇತಿಹಾಸವನ್ನು ಭಾರತ ಕಳೆದುಕೊಂಡಿತ್ತು. ವಜ್ರ ವ್ಯಪಾರಿ ಜೀನ್-ಬ್ಯಾಪ್ಟಿಸ್ಟ್ ಟಾವೆರ್ನಿಯರ್ ಬರೆದ “ಟ್ರಾವೆಲ್ಸ್ ಇನ್ ಇಂಡಿಯಾ” ಪುಸ್ತಕದಲ್ಲಿನ ವಿವರಣೆಗಳನ್ನು ನೋಡಿದ ಬಾಲ್ 1889ರಲ್ಲಿ ಕೊಲ್ಲೂರು ಪ್ರದೇಶಕ್ಕೆ ಭೇಟಿ ನೀಡಿ ಕಾರ್ಮಿಕರ ಪುರಾತನ ಗುಡಿಸಲುಗಳು, ಗಣಿತ್ಯಾಜ್ಯ ಮತ್ತು ಗಣಿಗಳ ಅವಶೇಷಗಳನ್ನು ಗುರುತಿಸಿದರು.

1960ರ ದಶಕದಲ್ಲಿ ಮತ್ತೊಮ್ಮೆ ಜಿ.ಎಸ್.ಐ, ಸಮೇಕ್ಷೆ ನಡೆಸಿ ಕೃಷ್ಣಾ ನದಿಯ ದಕ್ಷಿಣ ದಂಡೆಯಲ್ಲಿರುವ ಕೊಲ್ಲೂರು ಹಳ್ಳಿಯಿಂದ 1.5 ಕಿ.ಮೀ. ದೂರ ಈಶಾನ್ಯ ದಿಕ್ಕಿನಲ್ಲಿ ಪ್ರಾಚೀನ ಗಣಿಗಾರಿಕೆಯ ಕುರುಹುಗಳನ್ನು 1.5 ಕಿ.ಮೀ. ಉದ್ದದಲ್ಲಿ “ಪುಲಿಚಿಂತಲ” ವರೆಗೂ ಹರಡಿಕೊಂಡಿರುವುದನ್ನು ಗುರುತಿಸಿತು. ಹಳೆಯ ಗೋಲ್ಕೊಂಡ ವಜ್ರಗಳು ಮುಖ್ಯವಾಗಿ ಮೂರು ಗುಣಲಕ್ಷಣಗಳನ್ನು ಹೊಂದಿದ್ದವು; ಅಲ್ಟ್ರಾ-ವರ್ಣರಹಿತತೆ, ಉನ್ನತ ಮಟ್ಟದ ಪಾರದರ್ಶಕತೆ ಮತ್ತು ಟಾವೆರ್ನಿಯರ್ ಅವರ ಪ್ರಕಾರ ಸೂಕ್ಷ್ಮ ನೀಲಿ ಹೊಳಪಿನ ಬಣ್ಣ. ಒಂದು ಉತ್ಕೃಷ್ಟ ನೀಲಿ ವಜ್ರವನ್ನು 17ನೇ ಶತಮಾನದ ಮಧ್ಯದಲ್ಲಿ ಕೊಲ್ಲೂರು ಗಣಿಯಿಂದ ಟಾವೆರ್ನಿಯರ್ ಮೊದಲಿಗೆ ಖರೀದಿಸಿದ್ದನು.

ಅದೇ ನೀಲಿ ವಜ್ರವನ್ನು ಟಾವೆರ್ನಿಯರ್ ಅವರಿಂದ ಫ್ರಾನ್ಸ್‌ನ 14ನೇ ರಾಜ ಲೂಹಿಸ್ ಖರೀದಿಸಿದ್ದರು. ಈ ವಜ್ರ ಫ್ರಾನ್ಸ್ ದಂಗೆಯಲ್ಲಿ ಕಳ್ಳತನವಾಗಿ ಸ್ವಲ್ಪ ಕಾಲ ಎಲ್ಲೊ ಅಡಗಿಕೊಂಡಿತ್ತು. ಅನಂತರ ಅದು ಮತ್ತೆ ಕಾಣಿಸಿಕೊಂಡು ಅದನ್ನು ಕತ್ತರಿಸಿ ಮತ್ತಷ್ಟು ಹೊಳಪು ಮಾಡಿ “ಹೋಪ್” ವಜ್ರ ಎಂದು ಕರೆಯಲಾಯಿತು.

(ಚಿತ್ರ: ಗೋಲ್ಕೊಂಡ ಕೋಟೆ, 1799ರಲ್ಲಿ ಸರ್. ಟಿ.ಅನ್ಬುರೆ ತೆಗೆದ ಚಿತ್ರ)

ಕೊಲ್ಲೂರಿನಲ್ಲಿ ದೊರಕಿದ ಇತರ ಪ್ರಸಿದ್ಧ ವಜ್ರಗಳೆಂದರೆ ಕೊಹ್-ಇ-ನೂರ್, ಗ್ರೇಟ್ ಮೊಗಲ್, ವಿಟ್ಟೆಲ್ಸ್ಬಾಚ್-ಗ್ರಾಫ್, ನೂರ್, ಓರ್ಲೋವ್, ನಿಜಾಮ್ ಡ್ರೆಸ್ಡೆನ್ ಗ್ರೀನ್ ಮತ್ತು ನಸ್ಸಾಕ್ ಇತ್ಯಾದಿ.

(ಚಿತ್ರ: ಬಬ್ಗಾನಪಲ್ಲೆ ವಜ್ರ ಗಣಿ/ಸುರಂಗ, ಆಂಧ್ರ ಪ್ರದೇಶ.)

 

(ಚಿತ್ರ: ಸುಲ್ತಾನರ ಕಾಲದ ಗೋಲ್ಕೊಂಡ ವಜ್ರ ಗಣಿಗಳ ಒಂದು ದೃಶ್ಯ)

ಕೊಂಡಪೇಟ ವಜ್ರ ಗಣಿಗಳು: 1842ರಲ್ಲಿ ನ್ಯೂಬೋಲ್ಡ್ ಕೊಂಡಪೇಟ ವಜ್ರ ಗಣಿಗಳ ಬಗ್ಗೆ ವಿವರವಾಗಿ ವರದಿ ಮಾಡಿದರು. ಈ ಗಣಿಗಳು ಅಂದಿನ ಮದ್ರಾಸ್ ಪ್ರಾಂತ್ಯದ ಕಡಪ ಜಿಲ್ಲೆಯ ಚೆನ್ನೂರು ಗ್ರಾಮದ ಎದುರು ಪೆನ್ನಾರ್ ನದಿ ದಡದಲ್ಲಿ ನೆಲೆಯೂರಿದ್ದವು. ಕಂಕರು, ಮೆಕ್ಕಲುಮಣ್ಣು ಪದರಗಳಲ್ಲಿ ತೋಡಿರುವ ಗುಂಡಿಗಳು ಸಾಮಾನ್ಯವಾಗಿ ಚೌಕಾಕಾರವಾಗಿದ್ದು 4 ರಿಂದ 12 ಅಡಿಗಳ ಆಳದ ಗುಂಡಿಗಳಾಗಿದ್ದವು. ಇವೆಲ್ಲ ಮೆಕ್ಕಲುಮಣ್ಣಿನ ಸ್ತರಗಳಲ್ಲಿ ತೋಡಿದ್ದ ಗುಂಡಿಗಳು. ಈ ಕಪ್ಪು ಮಣ್ಣು ಪದರಗಳಲ್ಲಿ (3 ರಿಂದ 10 ಅಡಿಗಳ ದಪ್ಪ) ಸಣ್ಣಸಣ್ಣ ಕ್ವಾರ್ಡ್ಝ್ ಹರಳು (ಸ್ಪಟಿಕ) ಮಿಶ್ರಣಗೊಂಡಿದ್ದ ಶಿಲಾಸ್ತರಗಳು ಮತ್ತು ಈ ಪದರಗಳ ಕೆಳಗೆ ವಿವಿಧ ಗಾತ್ರದ ಕಂಕರು-ಕಲ್ಲುಗಳ ಹಾಸಿಗೆ ಇದ್ದು ಇದರ ನೆಲಗಟ್ಟಿನಿಂದ ಮೇಲಿನವರೆಗೆ ವಜ್ರಗಳು ದೊರಕುತ್ತಿದ್ದವು. ವಜ್ರಗಳು ಈ ಪದರಗಳಲ್ಲಿ ಸಡಿಲವಾಗಿ ಅಥವಾ ಕಂಕರುಕಲ್ಲು-ಮಣ್ಣಿಗೆ ಮೆತ್ತಿಕೊಂಡಿರುತ್ತಿದ್ದವು.

ವಜ್ರಭರಿತ ಕಿಂಬರ್‌ಲೈಟ್ ಮತ್ತು ಲ್ಯಾಂಪ್ರೊಫೈರ್ ಪೈಪ್‌ಗಳ ಜ್ವಾಲಾಮುಖಿಗಳು ಭೂಮಿಯ ಒಳಗಿಂದ ಚಿಮ್ಮುವ ಮ್ಯಾಗ್ಮ (ಶಿಲಾಪಾಕ) ನೆಲದ ಮೇಲೆ ಹರಿದು ತಣ್ಣಗಾಗಿ ಗಟ್ಟಿಗೊಳ್ಳುವ ಶಿಲೆಗಳು. ಈ ಎರಡೂ ರೀತಿಯ ಪೈಪ್‌ಗಳು ಭೂಗರ್ಭದಿಂದ ಹೊರಕ್ಕೆ ಬಂದಾಗ ಅವುಗಳಲ್ಲಿ ವಜ್ರಗಳು ಹರಳು ಗಟ್ಟಿಕೊಂಡಿರುತ್ತವೆ. ಬಹಳಷ್ಟು ಸಲ ಈ ಶಿಲೆಗಳು ವಜ್ರರಹಿತವಾಗಿಯೂ ಇರುತ್ತವೆ. ವಜ್ರಭರಿತ ಶಿಲೆಗಳು ಕಾಲಾಂತರದಲ್ಲಿ ನೈಸರ್ಗಿಕ ಪ್ರಕ್ರಿಯೆಗಳಿಂದ ಶಿಥಿಲಗೊಂಡಾಗ ವಜ್ರಗಳು ಬಿಡುಗಡೆಗೊಂಡು ನೀರಿನ ಮೂಲಕ ಹರಿದು ಕಂಕರುಕಲ್ಲು-ಮೆಕ್ಕಲುಮಣ್ಣು, ಪೆಂಟೆಶಿಲೆ ಪದರಗಳಲ್ಲಿ ಸಿಕ್ಕಿಕೊಂಡು ಸಂಚಯನಗೊಳ್ಳುತ್ತವೆ.

ಈ ರೀತಿಯ ಕಂಕರುಕಲ್ಲು-ಮೆಕ್ಕಲುಮಣ್ಣು, ಪೆಂಟೆಶಿಲೆಗಳ ಪದರಗಳನ್ನು ಅಗೆದು ಬಾಚಿಕೊಂಡು ಸಣ್ಣಸಣ್ಣ ಚೌಚಾಕಾರದ ನೀರಿನ ಹೊಂಡಗಳಿಗೆ ಹರಿಸಿ ಅಥವಾ ಸಾಗಿಸಿ ಕಟ್ಟೆಗಳನ್ನು ಕಟ್ಟಿ ಕಂಕರುಕಲ್ಲು-ಮಣ್ಣನ್ನು ತೊಳೆದಾಗ ರತ್ನಗಳು ಕಾಣಿಸಿಕೊಳ್ಳುತ್ತವೆ. ಹೀಗೆ ತೊಳೆದು ಎಸೆದ ತ್ಯಾಜ್ಯ ದಿಬ್ಬಗಳ ರಾಶಿಯಲ್ಲಿ ಕಣ್ಣಿಗೆ ಕಾಣಿಸದೆ ಉಳಿದುಕೊಂಡಿರುವ ರತ್ನಗಳನ್ನು ಮತ್ತೆ ಮತ್ತೆ ಹುಡುಕಲಾಗುತ್ತದೆ. ಮಳೆ ಬಿದ್ದ ಮೇಲೆ ತೇವಾಂಶ ಮತ್ತು ಬಿಸಿಲಿನಲ್ಲಿ ರತ್ನಗಳು ವಿಶಿಷ್ಟ ಹೊಳಪಿನಿಂದ ಕಂಗೊಳಿಸುತ್ತವೆ. ಇಂತಹ ವಾತಾವರಣದಲ್ಲಿ ಬಿಸಿಲಿನ ಪ್ರಕರಕ್ಕೆ ವಿರುದ್ಧವಾಗಿ ನಡೆದುಕೊಂಡುಹೋದರೆ ಸೂರ್ಯನ ಕಿರಣಗಳು ಬಿದ್ದು ಪ್ರತಿಫಲನಗೊಂಡ ರತ್ನಗಳು ದೂರದಿಂದಲೇ ಕಣ್ಣಿಗೆ ಕಾಣಿಸುತ್ತವೆ.

ಚಿನ್ನದ ಪಗೋಡಕ್ಕಿಂತ ಹೆಚ್ಚಿನ ತೂಕದ (ಮದ್ರಾಸ್‌ನಲ್ಲಿ ಒಂದು ಪಗೋಡ 3.44 ಗ್ರಾಂ ತೂಕ) ರತ್ನ ಕಲ್ಲುಗಳು ದೊರಕಿದಾಗ ಅವುಗಳನ್ನು ಸಾರ್ವಜನಿಕ ಹರಾಜಿನಲ್ಲಿ ಮಾರಾಟ ಮಾಡಲಾಗಿ ಅದರಲ್ಲಿ ಬಂದ ಆದಾಯದ ಮೂರನೇ ಒಂದು ಭಾಗ ಸರಕಾರಕ್ಕೆ ಮತ್ತು ಉಳಿದ ಎರಡು ಭಾಗ ಗಣಿ ಗುತ್ತಿಗೆದಾರರಿಗೆ ಸಂದಾಯವಾಗುತ್ತಿತ್ತು. ಗಣಿಗಳಲ್ಲಿ ಸಂಗ್ರಹಿಸಿದ ಎಲ್ಲಾ ವಜ್ರಗಳನ್ನು ಮಾರಾಟ ಮಾಡಲು ಗೋಲ್ಕೊಂಡ ಪಟ್ಟಣಕ್ಕೆ ಒಯ್ಯಲಾಗುತ್ತಿತ್ತು. 1939ರಲ್ಲಿ ರೋಸೇಟ್ ಜಾತಿಯ ಒಂದು ಉತ್ತಮ ವಜ್ರ ಓವಲುಂಪಲ್ಲಿ ಗಣಿಯಲ್ಲಿ ದೊರಕಿ ಅದು ಚಿನ್ನದ ಪಗೋಡಕ್ಕಿಂತ ಹೆಚ್ಚು ತೂಕವಿದ್ದು 1450 ರೂಪಾಯಿಗಳಿಗೆ ಮಾರಾಟವಾಯಿತು. ವಜ್ರದ ಗಣಿಗಳು 1840ರ ವರೆಗೂ ಕಾರ್ಯಾಚರಣೆಯಲ್ಲಿ ಮುಂದುವರಿದಿದ್ದವು (ಮಹಾದೇವನ್, 1940).

(ಚಿತ್ರ: ವಜ್ರ ಕ್ಷೇತ್ರಗಳ ನಕ್ಷೆ, ಮ್ಯಾಕ್ಸ್ ಬಾಯರ್, 1904)

ಅರಾವಳಿ ವಜ್ರ ಗಣಿಗಳು: ಪ್ರಸ್ತುತ ಭಾರತದಲ್ಲಿ ಅರಾವಳಿ ಕ್ರೇಟಾನ್ (ಸಣ್ಣ ಭೂಫಲಕ) ವಜ್ರಗಳನ್ನು ಉತ್ಪಾದಿಸುವ ಏಕೈಕ ವಜ್ರ ಗಣಿಯನ್ನು ಹೊಂದಿದೆ. ಫ್ರಾಂಕ್ಲಿನ್, 1829ರಲ್ಲಿ ಪನ್ನಾ ಸಮೀಪದ ಮಜ್‌ಗವಾನ್‌ನಲ್ಲಿರುವ ರತ್ನ ಕಲ್ಲುಗಳು (24ಲಿ 38ᶦᶦ 30ᶦ ಉತ್ತರ ರೇಖಾಂಶ 80ಲಿ 02ᶦ ಪೂರ್ವ ಅಕ್ಷಾಂಶ) ಹಸಿರು ಮಣ್ಣಿನಲ್ಲಿ ದೊರಕುತ್ತವೆ ಮತ್ತು ಈ ಗಣಿಗಳನ್ನು 13ನೇ ಶತಮಾನದಲ್ಲಿ ಮಾಡಲಾಗಿದೆ ಎಂದು ವಿವರಿಸಿದ್ದಾರೆ (ಹಗ್ಗರ್ಟಿ ಮತ್ತು ಇತರರು, 2004). ಬಾಲ್ (1881) ಅವರು ರಾಜರ ಕಾಲದಲ್ಲಿ ವಜ್ರಗಳನ್ನು ಹೇಗೆ ಹುಡುಕಿ ಸಂಗ್ರಹಿಸುತ್ತಿದ್ದರು ಎಂಬುದರ ವಿವರಗಳನ್ನು ದಾಖಲಿಸಿದ್ದಾರೆ. ಇವರ ಪ್ರಕಾರ ವಿಂಧ್ಯಾ ಪರ್ವತಗಳ ವಜ್ರಭರಿತ ಶಿಲಾರಚನೆಗಳು ಕೋಟ್ಯಂತರ ವರ್ಷಗಳಲ್ಲಿ ಶಿಥಿಲಗೊಂಡ ಪರಿಣಾಮ ವಜ್ರಗಳು ಬಿಡುಗಡೆಗೊಂಡಿವೆ ಎಂದು ವಿವರಿಸಿದ್ದಾರೆ. ಇದು ನೈಸರ್ಗಿಕ ಪ್ರಕ್ರಿಯೆ. ವಜ್ರಗಳನ್ನು ಹೊಂದಿರುವ ಕಿಂಬರ್ಲೈಟ್ ಮತ್ತು ಲ್ಯಾಂಪ್ರೊಫೈರ್ ಬೇರುಗಳು ಇನ್ನೂ ಎಷ್ಟೋ ಕಡೆ ಭೂಮಿಯ ಆಳದಲ್ಲಿ ಸಿಕ್ಕಿಕೊಂಡಿವೆ.

ಭೂಮಿಯ ಮೇಲೆ ಕಂಡುಬರುವ ಈ ಪೈಪ್‌ಗಳಲ್ಲಿ ಪ್ರಸ್ತುತ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯ, ಅಮೆರಿಕಾ ಇನ್ನೂ ಅನೇಕ ದೇಶಗಳಲ್ಲಿ ಗಣಿಗಳನ್ನು ಮಾಡಲಾಗುತ್ತಿದೆ. ಇತ್ತೀಚಿನ ಕಾಲದಲ್ಲಿ ವಜ್ರಗಳನ್ನು ಅವುಗಳ ಪ್ರಾಥಮಿಕ ಅಗ್ನಿಶಿಲೆಗಳಲ್ಲಿ ಮೊದಲ ಬಾರಿಗೆ 1827ರಲ್ಲಿ ಗಮನಿಸಿದ್ದು (ಸಿನೋರ್, 1930) ಮಧ್ಯಭಾರತದ ಮಜ್‌ಗವಾನ್‌ನಲ್ಲಿ. ಪ್ರಾಚೀನ ಕಾಲದಲ್ಲಿ ವಜ್ರಗಳನ್ನು ನದಿ ದಡಗಳ ಕಂಕರುಕಲ್ಲು, ಮೆಕ್ಕಲುಮಣ್ಣು ಮತ್ತು ಪೆಂಟೆಶಿಲೆಗಳ ಪದರಗಳಲ್ಲಿ ಮಾತ್ರ ಸಂಗ್ರಹ ಮಾಡಲಾಗುತ್ತಿತ್ತು. ತೀರಾ ಇತ್ತೀಚೆಗೆ ಭೂವಿಜ್ಞಾನಿಗಳು ಕಿಂಬರ್ಲೈಟ್ ಮತ್ತು ಲ್ಯಾಂಪ್ರೊಫೈರ್ ಪೈಪ್‌ಗಳನ್ನು ಕಂಡುಹಿಡಿದ ಅವುಗಳ ಮೇಲೆ ಆಳವಾದ ತೆರೆದ ಗಣಿಗಳನ್ನು ಮಾಡತೊಡಗಿದರು.

ಬಸ್ತಾರ್ ಕ್ರೇಟಾನ್ ವಜ್ರ ಗಣಿಗಳು: 1766ರಲ್ಲಿ, ರಾಬರ್ಟ್ ಕ್ಲೇವ್ ಹೆಸರಿನ ಅಧಿಕಾರಿ “ಇಬ್” ಮತ್ತು “ಮಹಾನದಿ”ಗಳ ನಡುವಿನ ಗಣಿಗಳಲ್ಲಿ ಸಂಗ್ರಹಿಸಿದ ವಜ್ರಗಳನ್ನು ಖರೀದಿಸಿದ್ದರ ಬಗ್ಗೆ ವರದಿಗಳಿವೆ. ಒರಿಸ್ಸಾದ ಸಂಭಾಲ್‌ಪೋರ್ ಪ್ರದೇಶದ ಗಣಿಗಳ ಬಗ್ಗೆ ವಿವರಗಳನ್ನು ನೀಡುವ ಬ್ರೆಟನ್ (1827) ಎಂಬಾತ, 1804-1818ರ ನಡುವೆ ಹಲವಾರು ವಜ್ರಗಳನ್ನು ಸಂಗ್ರಹಿಸಲಾಯಿತು ಮತ್ತು ಅವುಗಳಲ್ಲಿ ಒಂದು ದೊಡ್ಡ ವಜ್ರದ ತೂಕ 810.6 ಕ್ಯಾರೆಟ್ ಇರುವುದಾಗಿ ದಾಖಲಿಸಿದ್ದಾನೆ. ಈ ವಜ್ರ ಮಹಾನದಿಯ “ಹೀರಾ ಖುಂಡ್” ದ್ವೀಪದಲ್ಲಿ ದೊರಕಿದೆ ಎಂಬುದಾಗಿಯೂ ಉಲ್ಲೇಖಿಸಿದ್ದಾನೆ. ಒಂದು ಕ್ಯಾರೆಟ್ ವಜ್ರ ಎಂದರೆ 0.2 ಗ್ರಾಂ ತೂಕ. ಈ ವಜ್ರದ ಬಗ್ಗೆ ಅನಂತರ ಯಾವುದೇ ವಿವರಗಳು ಕಾಣಿಸಲಿಲ್ಲ. ಉಳಿದ ವಜ್ರಗಳೆಂದರೆ 346 ಕ್ಯಾರೆಟ್ ಮತ್ತು 368 ಕ್ಯಾರೆಟ್ ತೂಕದ ಎರಡು ವಜ್ರಗಳು ಸಂಭಾಲ್‌ಪೋರ್‌ನ ಮಹಾರಾಣಿಯ ವಶದಲ್ಲಿದ್ದರೆ, 100 ಕ್ಯಾರೆಟ್ ತೂಕದ ವಜ್ರವನ್ನು ಬ್ರಿಟಿಷ್ ಏಜೆಂಟ್ ಒಬ್ಬರು ಖರೀದಿಸಿ ಬ್ರಿಟಿಷ್ ಸರ್ಕಾರಕ್ಕೆ ರವಾನಿಸಿದ್ದರು.

ಮರಳು, ಮೆಕ್ಕಲುಮಣ್ಣು ಮತ್ತು ಕಂಕರು ಪದರಗಳಲ್ಲಿ ಬೆರಿಲ್, ನೀಲಮಣಿ, ಗಾರ್ನೆಟ್, ಕಾರ್ನೆಲಿಯನ್ ಅಮೆಥಿಸ್ಟ್ ಮತ್ತು ಸ್ಫಟಿಕದ ಹರಳು (ರತ್ನ ಕಲ್ಲುಗಳು) ಗಳೊಂದಿಗೆ ವಜ್ರಗಳು ದೊರಕುತ್ತಿದ್ದವು. ಅಗ್ನಿ ಶಿಲೆಗಳಿಂದ ಬಿಡುಗಡೆಗೊಂಡ ರತ್ನ ಕಲ್ಲುಗಳು ಮಹಾನದಿಯಲ್ಲಿ ಪ್ರವಾಹದ ಮೂಲಕ ಹರಿದು ಬಂದು ನದಿ ದಡಗಳಲ್ಲಿ ಸಂಚಯನಗೊಂಡಿದ್ದವು. ಇದೇ ಮೆಕ್ಕಲುಮಣ್ಣಿನಲ್ಲಿ ರತ್ನಗಳ ಜೊತೆಗೆ ಚಿನ್ನ ಸಂಗ್ರಹಿಸಿದ ವಿವರಣೆಗಳೂ ಇವೆ. ಕೊನೆಯದಾಗಿ 1850ರಲ್ಲಿ ಈ ಪ್ರದೇಶದಲ್ಲಿ ಗಣಿಗಾರಿಕೆ ನಿಂತುಹೋಯಿತು ಎಂದು ತಿಳಿದುಬರುತ್ತದೆ.

(ಚಿತ್ರ: 1825ರಲ್ಲಿ ಸಂಬಾಲ್‌ಪುರ್ ಕೋಟೆ, ಒಡಿಸ್ಸಾ)

ಇತ್ತೀಚಿನ ಕಾಲ (19 ಮತ್ತು 21ನೇ ಶತಮಾನದವರೆಗೆ): ಯುರೋಪಿಯನ್ ಯಾತ್ರಿಕರು-ವ್ಯಾಪಾರಿಗಳು, ಪೋರ್ಚುಗೀಸರು, ಬ್ರಿಟಿಷ್ ಅಧಿಕಾರಿಗಳು ಮತ್ತು ಜಿ.ಎಸ್.ಐ.ನ (19-20ನೇ ಶತಮಾನ) ಭೂವಿಜ್ಞಾನಿಗಳು ದಕ್ಷಿಣ ಭಾರತದ ಪ್ರಸಿದ್ಧ ವಜ್ರಗಳು ದೊರಕುತ್ತಿದ್ದ ಸ್ಥಳಗಳಲ್ಲದೆ ದೇಶದ ಇತರ ಪ್ರದೇಶಗಳಲ್ಲಿ ನಡೆಯುತ್ತಿದ್ದ ವಜ್ರ ಗಣಿಗಾರಿಕೆ ಮತ್ತು ಅವುಗಳ ಕಾರ್ಯಾಚರಣೆಗಳನ್ನು ಸಮೀಕ್ಷೆ ಮಾಡಿ ದಾಖಲಿಸಿದ್ದಾರೆ. ಭಾರತದ ಈ ಎಲ್ಲಾ ವಜ್ರ ಪ್ರಾಂತ್ಯಗಳನ್ನು ಮೂರು ವಿಭಾಗಗಳಾಗಿ ಮಾಡಲಾಗಿದೆ: 1) ದಕ್ಷಿಣ ಭಾರತ ವಜ್ರ ಪ್ರಾಂತ್ಯ, 2) ಪೂರ್ವ ಭಾರತ ವಜ್ರ ಪ್ರಾಂತ್ಯ ಮತ್ತು 3) ಮಧ್ಯ ಭಾರತ ವಜ್ರ ಪ್ರಾಂತ್ಯಗಳು. ಇವೆಲ್ಲ ವಿವಿಧ ಭೂವೈಜ್ಞಾನಿಕ ಶಿಲಾರಚನೆಗಳನ್ನು ಒಳಗೊಂಡಿವೆ (ಸತ್ಯನಾರಾಯಣ, 2002).

19ನೇ ಶತಮಾನದ ಆರಂಭದಲ್ಲಿ ಅನೇಕ ಕಡೆ ವಜ್ರ ನಿಕ್ಷೇಪಗಳಲ್ಲಿ ಸಕ್ರಿಯ ಕಾರ್ಯಗಳು ನಡೆಯುತ್ತಿದ್ದರೂ ದಕ್ಷಿಣ ಭಾರತದಲ್ಲಿ 1913ರಲ್ಲಿಯೇ ಗಣಿಗಾರಿಕೆ ಸ್ತಗಿತಗೊಂಡಿತು. ಆದರೆ ಮಧ್ಯ ಭಾರತದಲ್ಲಿ ಮಾತ್ರ ವಜ್ರ ಗಣಿಗಾರಿಕೆ ಇಂದಿಗೂ ಮುಂದುವರಿದಿದೆ. ಜಿ.ಎಸ್.ಐ.ನ ಇತ್ತೀಚಿನ ಸಂಶೋಧನೆಗಳಿಂದ ಪೆನ್ನಾರ್ ನದಿಯ ಜಲಾನಯನ ಪ್ರದೇಶದಲ್ಲಿ ಮೂಲ ಪ್ರಾಥಮಿಕ ಅಗ್ನಿಶಿಲೆಗಳಾದ ಗ್ರಾನೈಟ್-ಗ್ರೀನ್‌ಸ್ಟೋನ್ (ರೂಪಾಂತರ) ಶಿಲೆಗಳಲ್ಲಿ ಕಿಂಬರ್ಲೈಟ್ ಪೈಪ್‌ಗಳು ಅಥವಾ ಡೈಕ್ ತರಹ ಶಿಲಾರಚನೆಗಳು ವಜ್ರಕರೂರ್ ವಲಯದಲ್ಲಿ ಅಂತಸ್ಸರಣಗೊಂಡಿವೆ (ತೂರಿಕೊಂಡಿವೆ) ಎಂದು ದೃಢಪಟ್ಟಿದೆ. ಈ ಶಿಲೆಗಳು ಕಡಪಾ ಹಸಿರು ಶಿಲಾಪಟ್ಟಿಯ ಪಶ್ಚಿಮಕ್ಕಿವೆ.

 (ಚಿತ್ರ: ತೆರೆದ ವಜ್ರ ಗಣಿ, ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ, ಮಧ್ಯ ಪ್ರದೇಶ)

 

(ಚಿತ್ರ: ವಜ್ರ ಪೈಪ್ ತೋರಿಸುವ ಅಡ್ಡ ಸೀಳಿದ ಚಿತ್ರ, ಬ್ರಿಟಾನಿಕಾ ವಿಶ್ವಕೋಶ 2010)

ಈ ಕಿಂಬರ್ಲೈಟ್ ಪೈಪ್ ಶಿಲಾರಚನೆಗಳು ಹೆಚ್ಚಾಗಿ ರೇಖೀಯ ಮತ್ತು ಅನಿಯಮಿತ ಆಕಾರದಲ್ಲಿ ಬೇರು ಮಟ್ಟದಲ್ಲಿ ಸವೆತಗೊಂಡಿರುವುದು ಕಾಣಿಸುತ್ತದೆ. ಈ ಶಿಲೆಗಳಿರುವ ಪ್ರದೇಶದ ಮೇಲ್ಮೈ ಮಣ್ಣು ಹಳದಿ ಬಣ್ಣದಿಂದ ಕೂಡಿರುತ್ತದೆ. ತಾಜಾ ಕಿಂಬರ್ಲೈಟ್ ಪೈಪ್‌ಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳುವುದಿಲ್ಲ. ಕಿಂಬರ್ಲೈಟ್ ಪೈಪ್‌ಗಳ ಮೇಲ್ಭಾಗ ಸವೆದುಹೋದ ಕಾರಣ, ವಜ್ರಗಳು ಬಿಡುಗಡೆಗೊಂಡು ಪೆನ್ನಾರ್ ನದಿಯ ಮೂಲಕ ಹರಿದುಹೋಗಿ ನದಿ ದಡಗಳಲ್ಲಿ ಸಂಚಯನಗೊಂಡಿದ್ದವು.

(ಚಿತ್ರ:ವಜ್ರ ಪ್ರಾಂತ್ಯಗಳು ಮತ್ತು ಪ್ರಮುಖವಾಗಿ ವಜ್ರಗಳು ದೊರಕುವ ಸ್ಥಳಗಳನ್ನು ತೋರಿಸುವ ನಕ್ಷೆ (ಡಿ.ಐ.ಡಿ-ಜಿ.ಎಸ್.ಐ.)

ಪ್ರಸ್ತುತ ಬುಂದೇಲ್‌ಖಂಡ್ ಪ್ರದೇಶದಲ್ಲಿರುವ ವಜ್ರಗಳ ಪ್ರಮುಖ ಉತ್ಪಾದಕ ಕಂಪನಿಗಳೆಂದರೆ ಪನ್ನಾ ಡೈಮಂಡ್ ಮೈನಿಂಗ್ ಸಿಂಡಿಕೇಟ್, ಮಹಾಲಕ್ಷ್ಮಿ ಡೈಮಂಡ್ ಮೈನಿಂಗ್ ವರ್ಕ್ಸ್, ಮತ್ತು ಚರಖಾರಿ ಮೈನಿಂಗ್ ವರ್ಕ್ಸ್. ರಾಮ್‌ಖೇರಿಯಾ ಬಳಿ ಒಂದು ದೊಡ್ಡ ತೆರೆದ ಗಣಿ ಕಾರ್ಯ ನಿರ್ವಹಿಸುತ್ತಿದೆ. ಈ ಗಣಿಯಲ್ಲಿ 1952ರಲ್ಲಿ ಉತ್ಪಾದಿಸಲಾದ ವಜ್ರಗಳ ಮೌಲ್ಯ 3,50,000 ರೂಪಾಯಿಗಳು. ಪನ್ನಾ ಡೈಮಂಡ್ ಮೈನಿಂಗ್ ಸಿಂಡಿಕೇಟ್ 1936ರಲ್ಲಿ ಕಾರ್ಯಾಚರಣೆ ಆರಂಭಿಸಿತು, ಆದರೆ ವಿಶ್ವ ಮಹಾಯುದ್ಧಗಳು ಮತ್ತು ಇತರ ಕಾರಣಗಳಿಂದಾಗಿ 1949ರವರೆಗೂ ಯಾವುದೇ ನಿರೀಕ್ಷೆಗೆ ಮೀರಿ ವಜ್ರಗಳನ್ನು ಉತ್ಪಾದಿಸಲಾಗಲಿಲ್ಲ. 1936 ರಿಂದ 1950ರ ನಡುವೆ ಡೈಮಂಡ್ ಸಿಂಡಿಕೇಟ್ ಒಟ್ಟು 16,152 ಕ್ಯಾರೆಟ್ ತೂಕದ 23,653 ರತ್ನ ಕಲ್ಲುಗಳನ್ನು ಉತ್ಪಾದಿಸಿದೆ (ರೇ ಮತ್ತು ಸೃನ್, 1986).

ಬ್ರೆಜಿಲ್ (1700) ಮತ್ತು ದಕ್ಷಿಣ ಆಫ್ರಿಕಾ (1866) ದಲ್ಲಿ ವಜ್ರಗಳನ್ನು ಕಂಡುಹಿಡಿಯುವುದಕ್ಕೆ 3000 ವರ್ಷಗಳ ಮುಂಚಿಯೇ ಭಾರತದಲ್ಲಿ ವಜ್ರ ಗಣಿಗಾರಿಕೆ ನಡೆಯುತ್ತಿತ್ತು. ಪ್ರಸ್ತುತ ಮಧ್ಯ ಪ್ರದೇಶದ ಪನ್ನಾದಲ್ಲಿರುವ ಮಜ್‌ಗವಾನ್ ಗಣಿಯಿಂದ ವಾರ್ಷಿಕ ಸರಾಸರಿ 84,000 ಕ್ಯಾರೆಟ್ ವಜ್ರಗಳು ಉತ್ಪಾದನೆಯಾಗುತ್ತಿದ್ದು, 100 ಟನ್ ಕಲ್ಲುಗಳಲ್ಲಿ ಸರಾಸರಿ 10 ಕ್ಯಾರೆಟ್ ತೂಕದ ವಜ್ರಗಳು ದೊರಕುತ್ತಿವೆ. ಜೂನ್ 30, 2021 ರವರೆಗೂ ಈ ಗಣಿಯಲ್ಲಿ 10,05,064 ಕ್ಯಾರೆಟ್ ವಜ್ರಗಳನ್ನು ಉತ್ಪಾದಿಸಲಾಗಿದೆ.

ಅಂತರರಾಷ್ಟ್ರೀಯ ವಜ್ರ ಗಣಿ ಕಂಪನಿಗಳು ಮಧ್ಯ ಪ್ರದೇಶದಲ್ಲಿ ಸಾಕಷ್ಟು ಹಣ ಖರ್ಚು ಮಾಡಿ ವಜ್ರಗಳ ಪರಿಶೋಧನೆಯನ್ನು ನಡೆಸಿದ್ದರೂ ಗಣಿಗಾರಿಕೆ ಮಾಡಲು ರಾಷ್ರೀಯ ಪರಿಸರ ಸಂರಕ್ಷಣೆ, ಇತರ ಹತ್ತಾರು ಇಲಾಖೆಗಳಿಂದ ಮತ್ತು ರಾಜಕಾರಣಿಗಳಿಂದ ಅಪ್ಪಣೆ ಪಡೆಯಲಾಗದೆ ಹಿಂದಕ್ಕೆ ಸರಿದಿವೆ. ಭಾರತದಲ್ಲಿ ಗಣಿಗಾರಿಕೆ ಮಾಡಲು ಹತ್ತಾರು ಸರಕಾರಿ ವಿಭಾಗಗಳಿಂದ ಅಪ್ಪಣೆ ಪಡೆಯಬೇಕಾಗುತ್ತದೆ, ಜೊತೆಗೆ ತಾಂಡವವಾಡುವ ಭ್ರಷ್ಟತೆ ಬೇರೆ. ಇತ್ತೀಚೆಗೆ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ದೇಶದ 100 ಕಡೆ ಗಣಿಗಾರಿಕೆ ಮಾಡಬಹುದಾದ ಖನಿಜ ನಿಕ್ಷೇಪಗಳನ್ನು ಖಾಸಗಿ ಕಂಪನಿಗಳಿಗೆ ಹರಾಜು ಮಾಡಲು ಪಟ್ಟಿ ಮಾಡಿಕೊಂಡಿದೆ. ಅದರಲ್ಲಿ ಚಿನ್ನ, ಬೆಳ್ಳಿ, ವಜ್ರ, ಮೂಲ ಲೋಹಗಳು, ಕಬ್ಬಿಣ, ಮ್ಯಾಂಗನೀಸ್, ತಾಮ್ರ, ಅಲ್ಯೂಮಿನಿಯಮ್, ಸುಣ್ಣದಕಲ್ಲು, ಟಂಗ್ಸ್ಟನ್, ಫಾಸ್ಪೇಟ್ ಮತ್ತು ಪ್ಲಾಟಿನಂ ಇತ್ಯಾದಿ ಲೋಹಗಳು ಸೇರಿವೆ.

ಭೂಗರ್ಭದಲ್ಲಿ ರೂಪುಗೊಳ್ಳುವ ವಜ್ರಗಳು: ಭೂಮಿಯ ಮೇಲ್ಮೈಯಿಂದ 140 ರಿಂದ 190 ಕಿ.ಮೀ.ಗಳ ಆಳದಲ್ಲಿ ಹೆಚ್ಚು ತಾಪಮಾನ ಮತ್ತು ಒತ್ತಡದಲ್ಲಿ ಮ್ಯಾಂಟಲ್ ಪದರುಗಳಲ್ಲಿ ನೈಸರ್ಗಿಕವಾಗಿ ವಜ್ರಗಳು ರೂಪುಗೊಳ್ಳುತ್ತವೆ. ಕೆಲವೊಮ್ಮೆ 800 ಕಿ.ಮೀ.ಗಳ ಆಳದಲ್ಲೂ ರೂಪುಗೊಳ್ಳುತ್ತವೆ ಎನ್ನಲಾಗಿದೆ. ವಜ್ರಗಳು ಮೂಲವಾಗಿ ಇಂಗಾಲದ (ಕಾರ್ಬನ್) ಅಂಶದಿಂದ ಕೂಡಿದ್ದು ವಜ್ರಗಳ ಬೆಳವಣಿಗೆ 1.0 ಶತಕೋಟಿ ಯಿಂದ 3.3 ಶತಕೋಟಿ ವರ್ಷಗಳವರೆಗಿನ ಅವಧಿಯಲ್ಲಿ (ಭೂಮಿಯ ವಯಸ್ಸು 25% ರಿಂದ 75%) ರೂಪುಗೊಂಡಿವೆ ಎನ್ನಲಾಗಿದೆ. ಹೀಗೆ ರೂಪುಗೊಳ್ಳುತ್ತಿದ್ದ ಪ್ರಕ್ರಿಯೆಯ ಜೊತೆಜೊತೆಗೆ ವಜ್ರಭರಿತ ಜ್ವಾಲಾಮುಖಿಗಳು ನೆಲದ ಮೇಲಿನ ಶಿಲಾಪದರಗಳನ್ನು ಸೀಳಿಕೊಂಡು ಹೊರಚಿಮ್ಮಿ ತಣ್ಣಗಾಗಿ ಕಿಂಬರ್ಲೈಟ್ ಮತ್ತು ಲ್ಯಾಂಪ್ರೋಯಿಟ್ ಅಗ್ನಿಶಿಲೆಗಳಾಗಿ ಮಾರ್ಪಟ್ಟಿವೆ. ಜ್ವಾಲಾಮುಖಿಗಳ ಬೇರುಗಳು ಮೂಲಂಗಿಯ ಆಕಾರದಲ್ಲಿ ಭೂಮಿಯಲ್ಲಿ ಉಳಿದುಕೊಳ್ಳುತ್ತವೆ.

(ಚಿತ್ರ: ಕಿಂಬರ್ಲೈಟ್ ವಜ್ರಭರಿತ ಕಲ್ಲು (Kimberlite with rough diamond-youtube image)

ನೆಲದಲ್ಲಿ ಹರಡಿಕೊಂಡ ಶಿಲೆಗಳು ಕಾಲಾನಂತರದಲ್ಲಿ ನೈಸರ್ಗಿಕ ಪ್ರಕ್ರಿಯೆಗಳಿಂದ ಶಿಥಿಲೀಕರಣಗೊಂಡು ಅವುಗಳಲ್ಲಿನ ವಜ್ರಗಳು ಬಿಡುಗಡೆಯಾಗಿ ನೀರಿನ ಮೂಲಕ ಸಾಗಿ ಹಳ್ಳಕೊಳ್ಳ/ನದಿಗಳಲ್ಲಿ ಸಂಚಯನಗೊಳ್ಳುತ್ತವೆ. ಇಲ್ಲ ನೆಲದಲ್ಲಿ ಹರಡಿಕೊಳ್ಳುತ್ತವೆ. ಭೂಮಿಯ ಒಳಗೆ ಉಳಿದುಕೊಂಡ ಕಿಂಬರ್ಲೈಟ್ ಮತ್ತು ಲ್ಯಾಂಪ್ರೋಯಿಟ್ ಅಗ್ನಿಶಿಲೆಗಳ ಬೇರುಗಳ ಮೇಲೆ ಗಣಿಗಳನ್ನು ಮಾಡಿ ವಜ್ರಗಳನ್ನು ಉತ್ಪಾದಿಸಲಾಗುತ್ತದೆ.

ವಜ್ರಗಳು ಇಂಗಾಲ ಧಾತುವಿನ ಘನ ರೂಪವಾಗಿದ್ದು, ಅದರ ಪರಮಾಣುಗಳು ವಜ್ರ ಘನ ಎಂದು ಕರೆಯಲ್ಪಡುವ ಸ್ಫಟಿಕ ರಚನೆಯಲ್ಲಿ ಜೋಡಿಸಲ್ಪಟ್ಟಿರುತ್ತವೆ. ಕೋಣೆಯ ತಾಪಮಾನ ಮತ್ತು ಒತ್ತಡದಲ್ಲಿ ಇಂಗಾಲದಿಂದ ಗ್ರಾಫೈಟ್ ಅನ್ನು ಸೃಷ್ಟಿಸಲಾಯಿತೆ ಹೊರತು ವಜ್ರಗಳನ್ನು ಸೃಷ್ಟಿಸಲಾಗಲಿಲ್ಲ. ಮಾನವ ಇತಿಹಾಸದಲ್ಲಿ ವಜ್ರಗಳನ್ನು ಸೃಷ್ಟಿಮಾಡಲು ಎಷ್ಟೇ ಪ್ರಯತ್ನ ಮಾಡಿದರೂ ವಜ್ರಗಳನ್ನು ಸೃಷ್ಟಿಸಲು ಸಾಧ್ಯವಾಗಲಿಲ್ಲ. ಅದೇ ರೀತಿ ಕೃತಕವಾಗಿ ಚಿನ್ನವನ್ನೂ ತಯಾರು ಮಾಡಲು ಸಾಧ್ಯವಾಗಲಿಲ್ಲ. ಬದಲಿಗೆ ಸಿಂಥೆಟಿಕ್ ವಜ್ರಗಳು ಮತ್ತು ಅನೇಕ ರೀತಿಯ ಜೀವ ಉಳಿಸುವ ಔಷಧಿಗಳು ಸೃಷ್ಟಿಯಾದವು. ನಿಸರ್ಗದಲ್ಲಿ ದೊರಕುವ ವಜ್ರಗಳು ಯಾವುದೇ ವಸ್ತುವಿಗಿಂತ ಅತ್ಯಂತ ಗಡಸುತನ ಮತ್ತು ಉಷ್ಣವಾಹಕತೆಯನ್ನು ಹೊಂದಿರುತ್ತವೆ.

About The Author

ಡಾ. ಎಂ. ವೆಂಕಟಸ್ವಾಮಿ

ಡಾ. ವೆಂಕಟಸ್ವಾಮಿ ಇಂದಿನ ಕೆ.ಜಿ.ಎಫ್. ತಾಲ್ಲೂಕು, ಕೋಲಾರ ಜಿಲ್ಲೆಯವರು. ಪ್ರ.ದ.ಕಾಲೇಜ್‌ನಲ್ಲಿ ಬಿ.ಎಸ್ಸಿ,. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ(ಭೂವಿಜ್ಞಾನ) ಎಂ.ಎಸ್ಸಿ. ಮುಗಿಸಿದ್ದಾರೆ. ೧೯೮೫ರಲ್ಲಿ ಲಕ್ನೋದಲ್ಲಿ ಭೂವಿಜ್ಞಾನಿಯಾಗಿ(ಯು.ಪಿ.ಎಸ್.ಸಿ. ಮೂಲಕ) ಸೇರಿಕೊಂಡು ೨೦೧೫ರಲ್ಲಿ ಮಹಾರಾಷ್ಟ್ರದ ನಾಗ್ಪುರದಲ್ಲಿ ಉಪ ಮಹಾನಿರ್ದೇಶಕರಾಗಿ ನಿವೃತ್ತಿ ಹೊಂದಿದ್ದಾರೆ. "ಕೋಲಾರ ಚಿನ್ನದ ಗಣಿಗಳು" ಮಹಾಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಡಿ.ಲಿಟ್. ದೊರಕಿದೆ. ಕಳೆದ ನಾಲ್ಕೂವರೆ ದಶಕಗಳಿಂದಲೂ ಇವರು ಸಾಹಿತ್ಯಸೇವೆಯಲ್ಲಿ ತೊಡಗಿಕೊಂಡಿದ್ದು, ಈಶಾನ್ಯ ರಾಜ್ಯಗಳ ಸಾಹಿತ್ಯವನ್ನು ಕನ್ನಡಕ್ಕೆ ಮೊದಲು ತಂದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ. ಇವರ ಕೃತಿಗಳು ನಾಡಿನ ಪ್ರಮುಖ ಪ್ರಕಾಶನಗಳಲ್ಲಿ ಒಟ್ಟು ೩೭ ಕೃತಿಗಳು ಪ್ರಕಟಗೊಂಡಿವೆ. ೨೦೧೯ರಲ್ಲಿ ಬಂಗಾರಪೇಟೆ ತಾಲ್ಲೂಕಿನ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆಯನ್ನು ವಹಿಸಿದ್ದರು.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ