Advertisement
ಹಾಸ್ಟೆಲ್ ಕಿತಾಪತಿ ಹಾಗೂ ನೆಟ್ ವರ್ಕ್ ಮಾರ್ಕೆಟಿಂಗ್ ಮಾಯೆ!!: ಬಸವನಗೌಡ ಹೆಬ್ಬಳಗೆರೆ ಸರಣಿ

ಹಾಸ್ಟೆಲ್ ಕಿತಾಪತಿ ಹಾಗೂ ನೆಟ್ ವರ್ಕ್ ಮಾರ್ಕೆಟಿಂಗ್ ಮಾಯೆ!!: ಬಸವನಗೌಡ ಹೆಬ್ಬಳಗೆರೆ ಸರಣಿ

ಇವನ ಮಾತಿನ ಮೋಡಿಗೆ ಬೆರಗಾಗಿ ನಾನೂ ಸಹ ಇದನ್ನು ನೋಡಬೇಕೆಂದು ಅವನು ಕರೆದ ಮೀಟಿಂಗ್ ಗೆ ಹೋಗಿ ಅಲ್ಲಿ ನೋಡಿದರೆ ಶಾಕ್!! ಮೀಟಿಂಗ್ ಗೆ ಬಂದ ಅನೇಕರು ಅವನ ಆಟೋಗ್ರಾಫ್‌ ತೆಗೆದುಕೊಳ್ಳಲು ಮುಗಿಬಿದ್ದಿದ್ದರು!!  ಯಾವ ಹೀರೋಗೂ ಕಮ್ಮಿ ಇರದ ರೀತಿ ಬ್ಲೇಜರ್ ಹಾಕಿಕೊಂಡು ಅವನು ವೇದಿಕೆ ಮೇಲೆ ಮಿಂಚುತ್ತಿದ್ದ!!  “ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು ಎಂಬುದು ಹಳೇ ಮಾತು. ಆದರೆ ನಾವು ಕಾಲು ಇದ್ದಷ್ಟು ಹಾಸಿಗೆ ಹೊಲಿಸಿಕೊಳ್ಳಬೇಕು” ಎಂಬ ಡೈಲಾಗ್ ಹೊಡೆದು ನೆರೆದವರನ್ನು ಪ್ರೇರಣೆ ಮಾಡುತ್ತಿದ್ದ!!
ಬಸವನಗೌಡ
ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಎಪ್ಪತ್ತೊಂದನೆಯ ಕಂತು ನಿಮ್ಮ ಓದಿಗೆ

ಸರಿಯಾಗಿ ಓದದೇ ಮೆಸೇಜ್ ಕಳಿಸಿದ ನಂತರ ಆದ ಅನಾಹುತದ ಬಗ್ಗೆ ಹಿಂದಿನ ಸಂಚಿಕೆಯಲ್ಲಿ ಹೇಳಿದ್ದೆ. ಇದು ಇಲ್ಲಿಗೆ ಮುಗಿಯುವುದಿಲ್ಲ, ಮುಂದೆಯೂ ಸಹ ಇದೇ ರೀತಿಯ ತಪ್ಪಾಯಿತು. ಆದರೆ ಅದು ನನ್ನಿಂದ ಆದದ್ದಲ್ಲ, ನನ್ನ ರೂಂ ಮೇಟ್ಸ್‌ಗಳಿಂದ! ಆದರೆ ಅವರು ತಪ್ಪು ಭಾವಿಸಿದ್ದು ನನ್ನ ಮೇಲೆ.

​ದೂರಶಿಕ್ಷಣ ಮೂಲಕ ಬಿ.ಎಸ್ಸಿ. ಮಾಡಲು ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿಗೆ ಹೋದೆ.  ಬೇಸಿಗೆ ಹಾಗೂ ದಸರಾ ರಜೆಗಳಲ್ಲಿ ಪ್ರಾಕ್ಟಿಕಲ್ ತರಗತಿಗಳಿಗೆ ನಾವು ಹಾಜರಾಗಬೇಕಿತ್ತು, ಈ ದಿನಗಳಲ್ಲಿ ಬರೀ ಎರಡೇ ಎರಡು ತಿಂಗಳುಗಳಿಗೆಂದು ಸಹ್ಯಾದ್ರಿ ಹಾಸ್ಟೆಲ್‌ಗೆ ಸೇರಿದೆ. ಇಲ್ಲಿ ಈಗಾಗಲೇ ರೆಗ್ಯುಲರ್ ಆಗಿ ಓದುವವರು ಇದ್ದರು. ಹಾಸ್ಟೆಲ್ ಸೀಟು ನಮಗೆ ಕೊಡುತ್ತಿರಲಿಲ್ಲ. ಆದರೆ ನನಗೆ ಪರಿಚಿತರು ಇದ್ದುದರಿಂದ ಅವರ ರೂಮಿನಲ್ಲಿ ಅಡ್ಜೆಸ್ಟ್ ಮಾಡಿಕೊಳ್ಳುತ್ತೇವೆ ಎಂದು ಹೇಳಿದ್ದರಿಂದ ನನಗೆ ಹಾಸ್ಟೆಲ್ ಸೀಟು ಕೊಟ್ಟರು.

​ಆಗಿನ ಕಾಲಕ್ಕೆ ಸಹ್ಯಾದ್ರಿ ಕಾಲೇಜು ಎಂದರೆ ತುಂಬಾ ಫೇಮಸ್ ಆಗಿದ್ದ ಕಾಲೇಜು. ಅಲ್ಲಿ ಓದಿದ  ಅನೇಕರು ಉನ್ನತ ಹುದ್ದೆಗಳಲ್ಲಿದ್ದಾರೆ. ನಾನು ಮೊದಲಿನಿಂದಲೂ ಹಾಸ್ಟೆಲ್‌ನಲ್ಲಿಯೇ ಬೆಳೆದಿದ್ದರಿಂದ ಈ ಹಾಸ್ಟೆಲ್‌ಗೆ ಬೇಗ ಹೊಂದಿಕೊಂಡೆ. ನಾನು ಉಳಿದುಕೊಂಡಿದ್ದ ರೂಮಿನಲ್ಲಿ ನಮ್ಮ ಊರಿನ ಆಸುಪಾಸಿನವರಾಗಿದ್ದ ಪ್ರಮೋದ (ಪಮ್ಮಿ), ರಮೇಶ್ (ರಾಮ) ಹಾಗೂ ಮಂಜು ಇದ್ದರು. ಇವರ ಜೊತೆಯಲ್ಲಿ ನಾನು ತುಂಬಾ ಕ್ಲೋಸ್ ಆದೆ.

ಹಾಸ್ಟೆಲ್‌ನಲ್ಲಿ ಊಟದ ಬಗ್ಗೆ ಹೇಳಬೇಕೆಂದರೆ ರುಚಿಕರವಾದ ಊಟದ ವ್ಯವಸ್ಥೆ ಇರುತ್ತಿತ್ತು. ಆದರೆ ಹಾಸ್ಟೆಲ್‌ನಲ್ಲಿ ಊಟ ಮಾಡುವಾಗ ಹುಡುಗರ ಬಳಿ ತಟ್ಟೆಯ ಕೊರತೆ ಎದ್ದು ಕಾಣುತ್ತಿತ್ತು. ಒಂದು ತಟ್ಟೆಯಲ್ಲಿ ಮೂರ್ನಾಲ್ಕು ವಿದ್ಯಾರ್ಥಿಗಳು ತಿನ್ನುತ್ತಿದ್ದರು. ಇದನ್ನು ನೋಡಿ ‘ಸರ್ವ ಜನಾಂಗದ ಶಾಂತಿಯ ತೋಟ’ ‘ಭಾವೈಕ್ಯತೆ’ ಎಂಬ ಪದಗಳನ್ನು ನಿಜ ಜೀವನದಲ್ಲಿ ಇವರು ಅನುಸರಿಸುತ್ತಿದ್ದಾರೆ ಎಂಬ  ಭಾವ ಮೂಡುತ್ತಿತ್ತು. ಇಲ್ಲಿನ ತಿಂಡಿಯ ಬಗ್ಗೆ ಹೇಳಬೇಕೆಂದರೆ ಒಂದೊಮ್ಮೆ  ತಿಂಡಿಯು ಚಿತ್ರಾನ್ನವಾದರೆ ನಾವು ಬೇಗನೆ ಹೋಗಬೇಕಾಗಿತ್ತು. ಏಕೆಂದರೆ ಭಟ್ರು ಮಾಡಿದ್ದ ತಿಂಡಿಯನ್ನು ನಾವೇ ಬಡಿಸಿಕೊಂಡು ತಿನ್ನಬೇಕಾಗಿದ್ದರಿಂದ ಚಿತ್ರಾನ್ನದಲ್ಲಿದ್ದ ಶೇಂಗಾವನ್ನೆಲ್ಲ ಮೊದಲು ತಿಂಡಿ ತಿನ್ನಲು ಹೋದವರು ಬರೀ ಶೇಂಗಾವನ್ನೇ ಆರಿಸಿ ಬಡಿಸಿಕೊಂಡು ಖಾಲಿ ಮಾಡುತ್ತಿದ್ದರು. ಕೊನೆಗೆ ಹೋದವರಿಗೆ ಬರೀ ಒಗ್ಗರಣೆ ಅನ್ನವೇ ಗತಿಯಾಗುತ್ತಿತ್ತು. ನುಗ್ಗೆಕಾಯಿ ಸಾಂಬಾರ್ ಮಾಡಿದ ದಿನವಂತೂ ಕೆಲ ಹುಡುಗರು ಬರೀ ನುಗ್ಗೆಕಾಯಿಯನ್ನೇ ತಟ್ಟೆಯ ತುಂಬಾ ಬಡಿಸಿಕೊಂಡು ತಿನ್ನುತ್ತಿದ್ದರು!! ಕೊನೆಗೆ ಉಳಿದ ಹುಡುಗರಿಗೆ ಬರೀ ಸಾಂಬಾರ್ ಗೆ ತೃಪ್ತಿ ಮಾಡಿಕೊಳ್ಳಬೇಕಿತ್ತೇ ಹೊರತು ಒಂದು ಪೀಸೂ ನುಗ್ಗೆಕಾಯಿ ಸಿಗುತ್ತಿರಲಿಲ್ಲ!

​ಹಾಸ್ಟೆಲ್ ಹುಡುಗರು ಬೆಳಗ್ಗೆ ಹೊತ್ತು ಎಷ್ಟು ತುಂಟಾಟ ಮಾಡುತ್ತಿದ್ದರೋ ಅಷ್ಟೇ ಸೀರಿಯಸ್ಸಾಗಿ ರಾತ್ರಿ ಹೊತ್ತು ಓದುತ್ತಿದ್ದರು. ಕೆಲವರು ನೋಡಲು ದಡ್ಡರಂತೆ ಕಂಡರೂ ರೂಮಿಗೆ ಬಂದು ಚೆನ್ನಾಗಿ ಓದಿ ಬೋರ್ಡ್ ರ್ಯಾಂಕ್ ಪಡೆದಿದ್ದರು. ಇದನ್ನು ನೋಡಿ ನನಗೆ ‘Don’t judge a book by its cover’ ಎಂಬ ಮಾತು ನೆನಪಿಗೆ ಬರುತ್ತಿತ್ತು.

​ದೂರಶಿಕ್ಷಣ ಕೋರ್ಸಿಗೆಂದು ಬಂದ ಬಹುತೇಕರು ಶಿಕ್ಷಕರಾಗಿ ನೇಮಕರಾದವರು ಇದ್ದರು. ನಮ್ಮ ಬ್ಯಾಚಿನಲ್ಲಿಯೂ ನನ್ನ ಜೊತೆಯಲ್ಲಿಯೇ ಟಿ.ಸಿ.ಹೆಚ್ ಕೋರ್ಸ್ ಓದಿದವರು ಇದ್ದರು. ಕೆಲವರಿಗೆ ಸರ್ಕಾರಿ ಶಿಕ್ಷಕ ಹುದ್ದೆ ಸಿಕ್ಕಿರಲಿಲ್ಲ. ಅವರು ನಮ್ಮನ್ನು ನೋಡಿ ತಮ್ಮ ಬಗ್ಗೆ ತಾವೇ ಬೇಸರ ಮಾಡಿಕೊಳ್ಳುತ್ತಿದ್ದರು. ಆಗ ನಾನು ಅವರಿಗೆ ‘ಜೀವನ ಇನ್ನೂ ಮುಗಿದಿಲ್ಲ, ಮುಂದೆ ಇನ್ನೂ ಬಹಳ ಅವಕಾಶ ಇದೆ, ಪ್ರಯತ್ನವನ್ನು ಕೈ ಬಿಡಬೇಡಿ’ ಎಂದು ಧೈರ್ಯ ತುಂಬುತ್ತಿದ್ದೆ. ನಮ್ಮ ಬ್ಯಾಚಿನಲ್ಲಿ ಇದ್ದ ಒಬ್ಬರು ಈ ಮಾತಿನಿಂದ ಪ್ರೇರಣೆಗೊಂಡಿದ್ದನು, ನನ್ನ ಮೊಬೈಲ್ ನಂಬರ್ ಅನ್ನು ತೆಗೆದುಕೊಂಡಿದ್ದರು, ನನಗೆ ತುಂಬಾ ಗೌರವ ಕೊಡುತ್ತಿದ್ದರು. ಪ್ರತಿದಿನ ಕಾಲೇಜ್‌ಗೆ ಹೋದಾಗಲೂ ಅವರಿಗೆ ಸಮಾಧಾನ ಮಾಡುತ್ತಾ ಮುಂದೆ ನಿಮಗೆ ಕೆಲಸ ಸಿಕ್ಕೇ ಸಿಗುತ್ತದೆ ಎಂದು ಹೇಳುತ್ತಿದ್ದೆ.

​ರೂಮಿಗೆ ಬಂದಾಗ ನನ್ನ ರೂಮಿನಲ್ಲಿರುವವರ ಬಳಿ ಮೊಬೈಲ್ ಇರದ ಕಾರಣ ಅವರು ನನ್ನ ಮೊಬೈಲ್ ಅನ್ನು ತೆಗೆದುಕೊಂಡು ಅದರಲ್ಲಿ ವಿಡಿಯೋ ಗೇಮ್ ಆಡುತ್ತಿದ್ದರು. ಅದು ಕೀ ಪ್ಯಾಡ್ ಸೆಟ್ ಆಗಿದ್ದು ಅದರಲ್ಲಿ ಅವರು  ಹಾವಿನ ಆಟವನ್ನು ಆಡುತ್ತಿದ್ದರು.

ಇವರ ಕೈಲಿ ಮೊಬೈಲ್ ಇದ್ದಾಗ ನನ್ನ ಕ್ಲಾಸ್ ಮೇಟ್ ಒಬ್ಬಳು ನಾರ್ಮಲ್ ಆಗಿ ಮೆಸೇಜ್ ಮಾಡಿದ್ದಾಳೆ. ಆಗ ಅವರು ನನ್ನ ಗಮನಕ್ಕೆ ತರದೇ ರಿಪ್ಲೇ ಕೊಟ್ಟಿದ್ದಾರೆ. ಅವಳ ಜೊತೆ ಚಾಟಿಂಗ್ ನ್ನೂ ಸಹ ಮುಂದುವರೆಸಿದ್ದಾರೆ. ಇದು ಒಂದು ದಿನದ ಕಥೆಯಾಗಿಲ್ಲ. ಪ್ರತಿದಿನವೂ ಚಾಟಿಂಗ್ ಮಾಡಿದ್ದಾರೆ. ಅವಳೂ ಸಹ ನಾನು ಎಂದುಕೊಂಡು ರಿಪ್ಲೇ ಕೊಟ್ಟಿದ್ದಾಳೆ. ಆದರೆ ಇವರು ಬೆಳಿಗ್ಗೆ ಮೊಬೈಲನ್ನು ನನ್ನ ಕೈಲಿ ಕೊಡುವಾಗ ಆ ಮೆಸೇಜ್‌ಗಳನ್ನು ಡಿಲೀಟ್ ಮಾಡಿ ಕೊಡುತ್ತಿದ್ದರು. ಇದರಿಂದ ನನಗೆ ಇದರ ಬಗ್ಗೆ ಗೊತ್ತಾಗಿಲ್ಲ. ಆದರೆ ಕಾಲೇಜ್ ಗೆ ಹೋದಾಗ ಯಥಾ ಪ್ರಕಾರ ನಾನು ಇವಳನ್ನು ಮಾತನಾಡಿಸುತ್ತಿದ್ದೆ. ಇವಳು ಸಹ ಇದರ ಬಗ್ಗೆ ಏನೂ ಕೇಳುತ್ತಿರಲಿಲ್ಲ. ಇದೇ ರೀತಿ ಕೆಲವಾರು ದಿನಗಳು ನಡೆದಿವೆ. ನಾನು ವಾಪಸ್  ಚಿಕ್ಕಬಳ್ಳಾಪುರಕ್ಕೆ ಹೋಗುವ ಹಿಂದಿನ ದಿನ ಹಾಸ್ಟೆಲ್  ನಲ್ಲಿ ನನ್ನ ರೂಂ ಮೇಟ್ ಗಳ ಕೈಲಿ ನನ್ನ ಮೊಬೈಲ್ ಇತ್ತು. ಚಿಕ್ಕಬಳ್ಳಾಪುರಕ್ಕೆ ಹೋಗಿ ನನಗೆ ಅಸೈನ್ ಮೆಂಟ್ ಗಳ ಬಗ್ಗೆ ಅನುಮಾನ ಬಂದು ಇವಳಿಗೆ ಕೇಳಲೆಂದು ಕರೆ ಮಾಡಿದ್ರೆ ಅವಳು ನನ್ನ ಕರೆಯನ್ನು ಸ್ವೀಕರಿಸಲಿಲ್ಲ. ಹಲವಾರು ಬಾರಿ ಕರೆ ಮಾಡಿದಾಗಲೂ ನೋ ರೆಸ್ಪಾನ್ಸ್!!  ಇವಳು ಬ್ಯುಸಿ ಇರಬೇಕು ಎಂದುಕೊಂಡು ಸಂಜೆಯೂ ಕರೆ ಮಾಡಿದರೆ ಇದೇ ಪ್ರತಿಕ್ರಿಯೆ. ನಾನು ಇವಳ ಜೊತೆ ಇರುತ್ತಿದ್ದ ಮತ್ತೊಬ್ಬಳಿಗೆ ಕರೆ ಮಾಡಿದಾಗ ಇವಳು “ಗೌಡ ನೀನು ಈ ಹೀಂಗೆ ಮಾಡ್ಬಹುದಾ?” ಎಂದು ಕೇಳಿದಳು. ನಾನು “ಏಕೆ? ಏನಾಯಿತು?” ಎಂದು ಕೇಳಿದಾಗ ಇವಳು “ನೀನು I love you ಎಂದು ಯಾಕೆ ಅವಳಿಗೆ ಮೆಸೇಜ್ ಮಾಡಿದೆ. ಇವಳು ನಿನ್ನನ್ನು ಒಳ್ಳೆಯ ಫ್ರೆಂಡ್ ಅಂದುಕೊಂಡಿದ್ದಳಂತೆ. ಆದರೆ ನೀನು ಇವಳಿಗೆ ಈ ರೀತಿಯ ಮೆಸೇಜು ಮಾಡಿದ್ದರಿಂದ ಅವಳಿಗೆ ತುಂಬಾ ನೋವು ಎನಿಸಿದೆ” ಎಂದು ಒಂದೇ ಸಮನೆ ಹೇಳಿದಳು. ಆಗ ನಾನು “ಅಲ್ಲಾ ತಾಯಿ! ನಾನೇಕೆ ಇವಳಿಗೆ ಆ ರೀತಿ ಮೆಸೇಜ್ ಮಾಡಲಿ, ಬಹುಶಃ ನನ್ನ ರೂಮ್ ಮೇಟ್‌ಗಳ ಕಿತಾಪತಿ ಇರಬೇಕು. ಈ ವಿಷಯವನ್ನು  ಅವಳಿಗೆ ತಿಳಿಸು” ಎಂದೆ.

​ಒಂದೊಮ್ಮೆ ಬೇಸರವಾಗಿದ್ದಲ್ಲಿ ನನ್ನ ಕಡೆಯಿಂದ “ಸಾರಿ ತಿಳಿಸು” ಎಂದೆ. ಅದಕ್ಕವಳು “ಆಗಲಿ” ಎಂದಳು. ಅಂದೇ ಅವಳ ನಂಬರನ್ನು ಡಿಲೀಟ್ ಮಾಡಿದೆ.

​ನನಗೆ ನೌಕರಿ ಸಿಕ್ಕಿದ್ದರೂ ಸಹ ನನಗೆ ಸಿಗುತ್ತಿದ್ದ ವೇತನವನ್ನು ನನ್ನ ಸಹಪಾಠಿಗಳ ವೇತನದ ಜೊತೆ ಹೋಲಿಸಿಕೊಳ್ಳುತ್ತಿದ್ದೆ. ಇವರು ಆಗ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದರು. ನನಗೆ ತುಂಬಾ ಕಮ್ಮಿ ವೇತನ ಎನಿಸಿ ನಾನೂ ಸಹ ಹೆಚ್ಚು ಹಣ ಗಳಿಸಬೇಕು ಎಂಬ ಆಸೆಯು ಮನದಲ್ಲಿ ಮೂಡಿತ್ತು. ಆದರೂ ನನ್ನ ಆಸೆಯನ್ನು ಒತ್ತಿಟ್ಟು “ಬಡವಾ ನೀ ಮಡಿಗಿದಂಗಿರು” ಎಂಬ ಮಾತಿನಂತೆ ನನ್ನಾಸೆಗೆ ಎಳ್ಳುನೀರು ಬಿಟ್ಟಿದ್ದೆ!!

ಇದೇ ಸಮಯದಲ್ಲಿ ದಾವಣಗೆರೆಯ  ಹಾಸ್ಟೆಲ್ ನಲ್ಲಿ ಇದ್ದ ಗೆಳೆಯನೊಬ್ಬನು ಸಿಕ್ಕನು. ಅವನು ಇಂಜಿನಿಯರಿಂಗ್ ಸೇರಿ ಅದನ್ನೂ ಮುಗಿಸದೇ ಹಣ ಮಾಡಲು ನೆಟ್‌ವರ್ಕ್ ಮಾರ್ಕೆಟಿಂಗ್ ಸೇರಿದ್ನಂತೆ. ಅಲ್ಲದೇ ಅವನ ಮಾತಿನ ಚಾಕಚಾಕ್ಯತೆಯಿಂದ ಎಲ್ಲರನ್ನೂ ಅವನು ಸೇರಿದ ಕಂಪೆನಿಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದ. ಇದರಿಂದ ಅವನಿಗೆ ಉತ್ತಮ ಹಣವು ಸಿಗುತಿತ್ತು. ಆಗಾಗ್ಗೆ ಸಿಗುತ್ತಿದ್ದ ಅವನು ನನ್ನನ್ನು ದೊಡ್ಡ ದೊಡ್ಡ ಹೋಟೆಲ್‌ಗಳಿಗೆ ಕರೆದುಕೊಂಡು ಹೋಗಿ ಅವನು ಗಳಿಸಿರುವ ಹಣದ ಬಗ್ಗೆ ತಿಳಿಸುತ್ತಿದ್ದ. ಅಲ್ಲದೇ ವಾರಕ್ಕೊಮ್ಮೆ ಅವನು ಮಾಡುತ್ತಿದ್ದ ಅವನು ಸೇರಿದ್ದ ಕಂಪೆನಿಯ ಮೀಟಿಂಗ್ ಬರಲು ಆಹ್ವಾನವಿತ್ತಿದ್ದ. ಅಲ್ಲದೇ “ಗೌಡ, ಸಾಧನೆ ಅಂದ್ರೆ ಏನು ಗೊತ್ತಾ ನಮ್ಮ ಸಿಗ್ನೇಚರ್ ಆಟೋಗ್ರಾಫ್ ಆಗಿ ಬದಲಾಗಬೇಕು” ಎಂಬ ಡೈಲಾಗ್ ಹೊಡೀತಿದ್ದ. ಇವನ ಮಾತಿನ ಮೋಡಿಗೆ ಬೆರಗಾಗಿ ನಾನೂ ಸಹ ಇದನ್ನು ನೋಡಬೇಕೆಂದು ಅವನು ಕರೆದ ಮೀಟಿಂಗ್ ಗೆ ಹೋಗಿ ಅಲ್ಲಿ ನೋಡಿದರೆ ಶಾಕ್!! ಮೀಟಿಂಗ್ ಗೆ ಬಂದ ಅನೇಕರು ಅವನ ಆಟೋಗ್ರಾಫ್‌ ತೆಗೆದುಕೊಳ್ಳಲು ಮುಗಿಬಿದ್ದಿದ್ದರು!!  ಯಾವ ಹೀರೋಗೂ ಕಮ್ಮಿ ಇರದ ರೀತಿ ಬ್ಲೇಜರ್ ಹಾಕಿಕೊಂಡು ಅವನು ವೇದಿಕೆ ಮೇಲೆ ಮಿಂಚುತ್ತಿದ್ದ!!  “ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು ಎಂಬುದು ಹಳೇ ಮಾತು. ಆದರೆ ನಾವು ಕಾಲು ಇದ್ದಷ್ಟು ಹಾಸಿಗೆ ಹೊಲಿಸಿಕೊಳ್ಳಬೇಕು” ಎಂಬ ಡೈಲಾಗ್ ಹೊಡೆದು ನೆರೆದವರನ್ನು ಪ್ರೇರಣೆ ಮಾಡುತ್ತಿದ್ದ!! “ಬಡವರಾಗಿ ಹುಟ್ಟೋದು ನಿಮ್ಮ ತಪ್ಪಲ್ಲ, ಆದರೆ ಬಡವರಾಗಿ ಸಾಯೋದು ಮಾತ್ರ ನಿಮ್ಮ ತಪ್ಪು” ಎಂದು ಹೇಳಿ ಅವರಿಗೂ ಆ ಕಂಪೆನಿ ಸೇರಿಸಲು ಪೀಠಿಕೆ ಹಾಕುತ್ತಿದ್ದ!!  ಆಗಿನ್ನೂ ಸೆಲ್ಫಿ ಇರಲಿಲ್ಲ. ಇದ್ದಿದ್ದರೆ ಎಲ್ರೂ ಅವನ ಸೆಲ್ಫಿ ತೆಗೆದುಕೊಳ್ಳುತ್ತಿದ್ದರೇನೋ?!  ವೇದಿಕೆ ಮೇಲೆ ಅವನು ಬರುವಾಗ ಎಲ್ಲರೂ ಚಪ್ಪಾಳೆ ತಟ್ಟುತ್ತಾ ಕೇಕೆ ಹಾಕುತ್ತಾ ಅವನ ಮೇಲೆ ಹೂವುಗಳನ್ನು ಎರಚುತ್ತಾ ಸ್ವಾಗತಿಸುತ್ತಿದ್ದರು. ಅವನು ತನ್ನ ಕೈನಲ್ಲಿ ವಿಕ್ಟರಿ ಸಿಂಬಲ್ ತೋರಿಸುತ್ತಾ ವೇದಿಕೆ ಮೇಲೆ ಹತ್ತುತ್ತಿದ್ದ.

​ಇದನ್ನೆಲ್ಲಾ ನೋಡಿದ ನನಗೂ  ಇವನು ಸೇರಿದ ಕಂಪೆನಿಗೆ ಸೇರುವ ಆಸೆ ಉಂಟಾಯಿತು.

ನಾನು ಅವನು ಹೇಳಿದ ಕಂಪೆನಿ ಸೇರಿದೆನೋ? ಆನಂತರ ನಾನೂ ಅವನ‌ ರೀತಿ ಹಣ ಗಳಿಸಿದೆನಾ? ಅಥವಾ ಮುಂದೇನಾಯ್ತು ಎಂಬ ಬಗ್ಗೆ ಮುಂದಿನ ಸಂಚಿಕೆಯಲ್ಲಿ ತಿಳಿಯೋಣ..

ಮುಗಿಸೋ ಮುನ್ನ :

ನಾವು ಜನರನ್ನು ನಂಬಬೇಕು. ಆದರೆ Too much is too bad ಎಂಬಂತೆ ಯಾರನ್ನೇ ಆಗಲಿ ಅತಿಯಾಗಿ ನಂಬಬಾರದು ಹಾಗೂ ನಮ್ಮ ಎಲ್ಲಾ ವಿಷಯಗಳನ್ನು ಮತ್ತೊಬ್ಬರೊಡನೆ ಹಂಚಿಕೊಳ್ಳಬಾರದು. ಯಾಕೆಂದರೆ ಇಂಗ್ಲೀಷಿನಲ್ಲಿ‌ “Don’t tell your problems to anybody. Because 70 percent don’t care and remaining 30 percent people laugh at your problems” ಎಂದು ಹೇಳ್ತಾರೆ.. ದುಃಖಕ್ಕೆ ಇಲ್ಲಿ ಮಾರ್ಕೆಟ್ ಇಲ್ಲ!

About The Author

ಬಸವನಗೌಡ ಹೆಬ್ಬಳಗೆರೆ

ಬಸವನಗೌಡ ಹೆಬ್ಬಳಗೆರೆ  ಶಿವಮೊಗ್ಗದ ಸ.ಪ್ರೌ.ಶಾಲೆ, ಮಸಗಲ್ಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಬಂಧ, ಲೇಖನ, ಕವನ ಹಾಗೂ ಕಥೆ ಬರೆಯುವುದು ಹಾಗೂ ಓದುವುದು ಇವರ ಹವ್ಯಾಸಗಳು. “ಬೋಳಾಯಣ” ಇವರ ಪ್ರಕಟಿತ ಹನಿಗವನ ಸಂಕಲನ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ