Advertisement
ಗುಬ್ಬಚ್ಚಿ: ಡಾ. ಎಸ್.ವಿ. ನರಸಿಂಹನ್‌‌ ಸರಣಿ

ಗುಬ್ಬಚ್ಚಿ: ಡಾ. ಎಸ್.ವಿ. ನರಸಿಂಹನ್‌‌ ಸರಣಿ

ಗುಬ್ಬಚ್ಚಿಯ ಕೂಗು ಸಣ್ಣ ಸಣ್ಣ ಚಿಲಿಪಿಲಿ ಧ್ವನಿಗಳು. ಗುಂಪಾಗಿ ಹಾರಾಡುವಾಗ, ಪರಸ್ಪರ ಸಂಪರ್ಕಕ್ಕಾಗಿ ಮತ್ತು ಎಚ್ಚರಿಸಲು ಅಥವಾ ವಿಶ್ರಾಂತಿ ಪಡೆಯುವ ವೇಳೆಯಲ್ಲಿ ಚಿರ್.ಪ್, ಟಿಶ್.ಲ್ಪ್.. ಅಥವಾ ಫಿಲ್.ಪ್ ಮುಂತಾದ ಕೂಗುಗಳ ಮೂಲಕ ಸಂಪರ್ಕಿಸುತ್ತವೆ. ಅಲ್ಲದೆ, ಗೂಡಿನ ಮಾಲೀಕತ್ವವನ್ನು ಘೋಷಿಸಲು ಮತ್ತು ಸಂತಾನವೃದ್ಧಿ ಋತುವಿನಲ್ಲಿ ಸಂಗಾತಿಯನ್ನು ಆಕರ್ಷಿಸಲು ಗಂಡು ಗುಬ್ಬಚ್ಚಿ ಇಂತಹ ಕರೆಗಳನ್ನು ಪುನಃ ಪುನಃ ಮತ್ತು ವೇಗದೊಂದಿಗೆ ಕೂಗುತ್ತದೆ. ಗುಬ್ಬಚ್ಚಿಗಳು ರಾತ್ರಿ ಎಲೆಭರಿತ ಮರಗಳು, ಮುಳ್ಳು ಪೊದೆಗಳಲ್ಲಿ ವಿಶ್ರಾಂತಿ ಪಡೆಯುತ್ತವೆ.
ಡಾ. ಎಸ್.ವಿ. ನರಸಿಂಹನ್‌ ಬರೆಯುವ “ಹಕ್ಕಿಪಕ್ಷಿ ಚಿತ್ರ ಸಂಪುಟ” ಸರಣಿಯಲ್ಲಿ “ಗುಬ್ಬಚ್ಚಿ” ಹಕ್ಕಿಯ ಕುರಿತ ಬರಹ ಇಲ್ಲಿದೆ

ಈವತ್ತು ನಾವು ನಮಗೆಲ್ಲ ಸುಪರಿಚಿತವಾದ ಗುಬ್ಬಚ್ಚಿಯ ವಿಷಯವನ್ನು ತಿಳಿದುಕೊಳ್ಳೋಣ.

ಗುಬ್ಬಚ್ಚಿ ಪ್ಯಾಸೆರಿಡೆ ಎಂಬ ಕುಟುಂಬದ ಒಂದು ಪಕ್ಷಿಯಾಗಿದೆ, ಇಂಗ್ಲೀಷಿನಲ್ಲಿ House Sparrow, ಹೌಸ್ ಸ್ಪಾರೋ ಎಂದೂ, ವೈಜ್ಞಾನಿಕವಾಗಿ ಪ್ಯಾಸರ್ ಡೊಮೆಸ್ಟಿಕಸ್ ಎಂದೂ ಕರೆಯುತ್ತಾರೆ. ಗುಬ್ಬಚ್ಚಿಗಳು ಪ್ರಪಂಚದಾದ್ಯಂತ ವಾಸಮಾಡಬಲ್ಲ, ಸುಪರಿಚಿತವಾದ, ಮಾನವನ ಅವಿನಾ ಸಂಗಾತಿಗಳಾಗಿವೆ.

ಗುಬ್ಬಚ್ಚಿಗಳು ಸಣ್ಣ ಆಕಾರದ, ಕಾಳು, ಧವಸ-ಧಾನ್ಯ, ಹಣ್ಣು, ಕೀಟಗಳನ್ನು ತಿಂದು ಬದುಕುವ, ಸಂಘಜೀವಿಗಳು; ಹೆಚ್ಚಾಗಿ ಜನನಿಬಿಡ ಪ್ರದೇಶಗಳಲ್ಲಿ, ಧಾನ್ಯದ ಉಗ್ರಾಣ, ಗಿರಣಿ, ಸಂತೆಮಾಳ ಮುಂತಾದೆಡೆಗಳಲ್ಲಿ ವಾಸ. ಇದು 16 ಸೆಂಮೀ. ಗಾತ್ರದ ಮತ್ತು 24-39 ಗ್ರಾಂ ಭಾರದ ಒಂದು ಸಣ್ಣ ಹಕ್ಕಿಯಾಗಿದೆ. ಗಂಡು ಹಕ್ಕಿಗಳು ಗಾಢವಾದ ಕಪ್ಪು, ಬಿಳಿ ಮತ್ತು ಕಂದು ಬಣ್ಣದ ಗುರುತುಗಳನ್ನು ಹೊಂದಿದ್ದರೆ ಹೆಣ್ಣು ಮತ್ತು ಎಳೆಯ ಹಕ್ಕಿಗಳು ತೆಳು ಕಂದು ಮತ್ತು ಬೂದು ಬಣ್ಣವನ್ನು ಹೊಂದಿರುತ್ತವೆ. ಹೆಣ್ಣು ಗುಬ್ಬಚ್ಚಿ ಗಂಡಿನಷ್ಟು ಲಕ್ಷಣವಿಲ್ಲ ಮತ್ತು ಸಾಮಾನ್ಯವಾಗಿ ಗಂಡಿಗಿಂತ ಸ್ವಲ್ಪ ಚಿಕ್ಕದಾಗಿರುತ್ತದೆ.

ದಪ್ಪನಾದ, ಚೂಪಾದ, ಪುಟ್ಟ ಕೊಕ್ಕು. ಕಾಳು-ಬೀಜಗಳ ಸಿಪ್ಪೆಯನ್ನು ಕೊಕ್ಕಿನಿಂದ ಕುಕ್ಕಿ ತೆಗೆದು ತಿನ್ನುತ್ತವೆ. ಕುಪ್ಪಳಿಸುತ್ತ ನೆಲದ ಮೇಲೆ ಓಡಾಟ. ಗುಬ್ಬಚ್ಚಿಯ ಹಾರಾಟವು ನೇರವಾಗಿರುತ್ತದೆ ಮತ್ತು ಪಟಪಟನೆ ರೆಕ್ಕೆ ಬಡಿದುಕೊಂಡು ಹಾರುತ್ತದೆ. ನೆಲದ ಮೇಲೆ, ಗುಬ್ಬಚ್ಚಿ ಸಾಮಾನ್ಯವಾಗಿ ನಡೆಯುವ ಬದಲು ಕುಪ್ಪಳಿಸಿಕೊಂಡು ಅತ್ತಿತ್ತ ಚಲಿಸುತ್ತವೆ. ಗುಬ್ಬಚ್ಚಿಗಳು ಬಹಳ ನಾಜೂಕು ಸ್ವಭಾವದ, ಆದರೆ ಮನುಷ್ಯರನ್ನು ಕಂಡರೆ ಅಷ್ಟೇ ಎಚ್ಚರಿಕೆಯಿಂದ ದೂರವಿರುವ ಹಕ್ಕಿಗಳು. ನಮ್ಮ ಸುತ್ತ-ಮುತ್ತ ಓಡಾಡಿಕೊಂಡಿದ್ದರೂ, ಅತಿ ಜಾಗರೂಕತೆ, ಅಷ್ಟೇ ಚುರುಕು!

ಗುಬ್ಬಚ್ಚಿಗಳು ಮಾನವನ ವಾಸಸ್ಥಳದೊಂದಿಗೆ ಬಲವಾಗಿ ಸಂಬಂಧ ಹೊಂದಿದ್ದು ನಗರ ಅಥವಾ ಗ್ರಾಮೀಣ ಪ್ರದೇಶಗಳಲ್ಲಿಯೂ ನಿರುಮ್ಮಳವಾಗಿ ವಾಸಿಸುತ್ತವೆ. ನೈಸರ್ಗಿಕವಾಗಿ ಧಾನ್ಯಗಳು, ಹೂ ಬಿಡುವ ಸಸ್ಯಗಳು ಮತ್ತು ಕಳೆಗಳ ಬೀಜಗಳನ್ನು ತಿನ್ನುತ್ತವೆ. ಆದರೆ ಗುಬ್ಬಚ್ಚಿಗಳು ಅವಕಾಶವಾದಿ ಮತ್ತು ಲಭ್ಯವಿರುವ ಯಾವುದೇ ಆಹಾರವನ್ನು ತಿನ್ನಬಲ್ಲವು. ಹಳ್ಳಿ ಪ್ರದೇಶಗಳ ಗುಬ್ಬಚ್ಚಿಗಳು ಪ್ರಾಣಿಗಳ ಸೆಗಣಿ ಮತ್ತು ಹೊಲಗಳಲ್ಲಿನ ಬೀಜ ಮತ್ತು ತ್ಯಾಜ್ಯ ಬೀಜಗಳನ್ನು ತಿನ್ನುತ್ತವೆ.

ಗುಬ್ಬಚ್ಚಿಯ ಕೂಗು ಸಣ್ಣ ಸಣ್ಣ ಚಿಲಿಪಿಲಿ ಧ್ವನಿಗಳು. ಗುಂಪಾಗಿ ಹಾರಾಡುವಾಗ, ಪರಸ್ಪರ ಸಂಪರ್ಕಕ್ಕಾಗಿ ಮತ್ತು ಎಚ್ಚರಿಸಲು ಅಥವಾ ವಿಶ್ರಾಂತಿ ಪಡೆಯುವ ವೇಳೆಯಲ್ಲಿ ಚಿರ್.ಪ್, ಟಿಶ್.ಲ್ಪ್.. ಅಥವಾ ಫಿಲ್.ಪ್ ಮುಂತಾದ ಕೂಗುಗಳ ಮೂಲಕ ಸಂಪರ್ಕಿಸುತ್ತವೆ. ಅಲ್ಲದೆ, ಗೂಡಿನ ಮಾಲೀಕತ್ವವನ್ನು ಘೋಷಿಸಲು ಮತ್ತು ಸಂತಾನವೃದ್ಧಿ ಋತುವಿನಲ್ಲಿ ಸಂಗಾತಿಯನ್ನು ಆಕರ್ಷಿಸಲು ಗಂಡು ಗುಬ್ಬಚ್ಚಿ ಇಂತಹ ಕರೆಗಳನ್ನು ಪುನಃ ಪುನಃ ಮತ್ತು ವೇಗದೊಂದಿಗೆ ಕೂಗುತ್ತದೆ. ಗುಬ್ಬಚ್ಚಿಗಳು ರಾತ್ರಿ ಎಲೆಭರಿತ ಮರಗಳು, ಮುಳ್ಳು ಪೊದೆಗಳಲ್ಲಿ ವಿಶ್ರಾಂತಿ ಪಡೆಯುತ್ತವೆ.

ಗುಬ್ಬಚ್ಚಿಗಳಿಗೆ ಸಂತಾನವೃದ್ಧಿಗೆ ನಿರ್ದಿಷ್ಟ ಋತು ಎಂಬುದಿಲ್ಲ. ಎಷ್ಟೋ ಬಾರಿ ಮನೆಯೊಳಗೇ ಗೂಡುಕಟ್ಟುವುದು. ಎಲ್ಲೆಂದರಲ್ಲಿ, ಸಂದುಗೊಂದುಗಳಿರುವೆಡೆ, ರಂಧ್ರಗಳಿರುವೆಡೆ, ಹುಲ್ಲು, ನಾರು, ಕಸದಿಂದ ರಚಿತವಾದ ಗೂಡು ಕಟ್ಟುತ್ತವೆ.

ರೈತರ ಧಾನ್ಯ, ಹೂದೋಟಗಳನ್ನು ನಾಶಪಡಿಸಿ ದಾಂಧಲೆಯೆಬ್ಬಿಸಿದರೂ, ಅವುಗಳ ಮರಿ ಗುಬ್ಬಚ್ಚಿಗಳಿಗೆ ಕೀಟ ಮತ್ತು ಹುಳುಹುಪ್ಪಟೆಗಳನ್ನೇ ತಿನ್ನಿಸಿ ಬೆಳೆಸುವುದರಿಂದ, ಕೀಟ ನಿಯಂತ್ರಣದಲ್ಲಿ ಗುಬ್ಬಚ್ಚಿಗಳದ್ದು ಗಮನಾರ್ಹ ಪಾತ್ರ. ಹಾಗಾಗಿ ಗುಬ್ಬಚ್ಚಿಗಳೂ ರೈತನ ಗೆಳೆಯ ಎನ್ನಬಹುದು.

ಇತ್ತೀಚೆಗೆ ಅತಿಯಾದ ಮೊಬೈಲ್ ಬಳಕೆ, ಎಲ್ಲೆಲ್ಲಿಯೂ ಹೆಚ್ಚುತ್ತಿರುವ ಮೈಕ್ರೋವೇವ್ ಟವರ್‌ಗಳು ಇವುಗಳಿಂದ ಗುಬ್ಬಚ್ಚಿಗಳು ಹಿಂದಿನಂತೆ ಕಾಣುವುದಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಆದರೆ ಇದಕ್ಕೆ ಮುಖ್ಯವಾದ ಕಾರಣ ಅದಲ್ಲ. ಗುಬ್ಬಚ್ಚಿಗಳಿಗೆ ಗುಡಿಸಲು-ಮನೆಗಳಲ್ಲಿ ಗೂಡು ಕಟ್ಟಲು ಅವಶ್ಯವಾದ ಸಂದುಗೊಂದುಗಳು ಇಲ್ಲವಾಗಿವೆ. ಎಲ್ಲೆಲ್ಲಿಯೂ ಸಿಮೆಂಟ್ ಕಾಂಕ್ರೀಟ್ ಕಟ್ಟಡಗಳೆ ತಲೆಯೆತ್ತಿವೆ. ಆವಾಸನಾಶದ ಜೊತೆಗೆ, ವಾಸಿಸಲು ಯೋಗ್ಯ ಪರಿಸರ ದೊರಕುತ್ತಿಲ್ಲ. ಅಲ್ಲದೆ, ಎಲ್ಲ ಧಾನ್ಯಗಳು ಸೂಪರ್ ಮಾರ್ಕೆಟ್‌ಗಳಲ್ಲಿ, ದಿನಸಿ ಅಂಗಡಿಗಳಲ್ಲಿ ಕಟ್ಟಿದ ಪ್ಯಾಕೆಟ್ ಗಳಲ್ಲಿಯೇ ಸಿಗುತ್ತಿರುವುದರಿಂದ ಗುಬ್ಬಚ್ಚಿಗಳಿಗೆ ಆಹಾರದ ಕೊರತೆಯೂ ಇದೆ. ಈ ಎಲ್ಲ ಕಾರಣಗಳಿಂದ ಗುಬ್ಬಚ್ಚಿಗಳ ಸಂಖ್ಯೆ ಕ್ಷೀಣಿಸುತ್ತಿದೆ.

About The Author

ಡಾ. ಎಸ್‌. ವಿ. ನರಸಿಂಹನ್

ಡಾ. ಎಸ್‌.ವಿ. ನರಸಿಂಹನ್ ವೈದ್ಯರು. ಕೊಡಗಿನ ವಿರಾಜಪೇಟೆಯಲ್ಲಿ ನೆಲೆಸಿದ್ದಾರೆ. ಆರೋಗ್ಯ ರಕ್ಷಣೆಯೊಂದಿಗೆ ಪರಿಸರ ರಕ್ಷಣೆಯ ಬಗೆಗೂ ಅಪಾರ ಕಾಳಜಿ ಹೊಂದಿದ್ದಾರೆ. ಕಳೆದ ನಲವತ್ತೊಂದು ವರ್ಷಗಳಿಂದ ಡಾ. ನರಸಿಂಹನ್‌ರವರು ಕೈಯಿಂದ ಕುಂಚಿಸಿದ ಸುಮಾರು ಎಂಭತ್ತೆರಡು  ಸಾವಿರ ‘ವನ್ಯಜೀವಿ ಸಂದೇಶ ಪತ್ರ’ಗಳು ಪ್ರಪಂಚದಾದ್ಯಂತ ತಲುಪಿವೆ. ಇದೊಂದು ಲಿಮ್ಕಾ ದಾಖಲೆ. ವಿಜ್ಞಾನ ಬರವಣಿಗೆಯಲ್ಲೂ ಆಸಕ್ತಿ ಹೊಂದಿರುವ ಇವರು, ಕನ್ನಡ ಭಾಷೆ, ಸಂಗೀತ-ಸಾಹಿತ್ಯ, ಖಗೋಳ, ಪರಿಸರ ಮುಂತಾದ ವಿಷಯಗಳಲ್ಲಿ ಶಾಲಾ-ಕಾಲೇಜುಗಳಲ್ಲಿ, ರೇಡಿಯೋ, ಟಿವಿ ಮತ್ತು ಪತ್ರಿಕಾ ಮಾಧ್ಯಮಗಳ ಮೂಲಕ ವಿದ್ಯಾರ್ಥಿಗಳಲ್ಲಿ ಆಸಕ್ತಿ ಬೆಳೆಸಿದ್ದಾರೆ. ಕೊಡಗಿನ ಸಂಪೂರ್ಣ ಪಕ್ಷಿಸಂಕುಲದ ನಿಖರ ಮಾಹಿತಿಯುಳ್ಳ ‘ಕೊಡಗಿನ ಖಗರತ್ನಗಳು’ ಪುಸ್ತಕದಲ್ಲಿ ತಾವೇ ಎಲ್ಲ ಹಕ್ಕಿಗಳ ಚಿತ್ರಗಳನ್ನೂ ಬರೆದದ್ದು ಮತ್ತೊಂದು ಲಿಮ್ಕಾ ದಾಖಲೆ.  ‘2013ರ ಕೊಡಗಿನ ವರ್ಷದ ವ್ಯಕ್ತಿ’ಪುರಸ್ಕೃತರು

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ