Advertisement
ದಾಯಾದಿ ಮಚ್ಚರ: ಕೆ. ಸತ್ಯನಾರಾಯಣ ಕಥಾ ಸರಣಿ

ದಾಯಾದಿ ಮಚ್ಚರ: ಕೆ. ಸತ್ಯನಾರಾಯಣ ಕಥಾ ಸರಣಿ

ಅಲ್ಲೇನು ದ್ವೇಷದ ಬಾಕಿ ಇರಲಿಲ್ಲ. ದೊಡ್ಡಪ್ಪ ಹೃತ್ಪೂರ್ವಕವಾಗಿ ಸಹಕರಿಸುವುದಲ್ಲದೆ, ಸ್ಮಶಾನಕ್ಕೂ ಹೋದರಂತೆ. ಹೆಣಕ್ಕೆ ಬೆಂಕಿ ಹಾಕಿದ ಮೇಲೆ, ಅದು ಉರಿದು ತಲೆ ಸಿಡಿಯುವ ಶಬ್ದ ಬರುವ ತನಕವೂ ಬೆಂಕಿಯ ಬೆಳಕಿನಲ್ಲಿ, ಅಲ್ಲಿದ್ದವರಿಗೆಲ್ಲ ಮಂಡ್ಯದಲ್ಲಿ ನೋಡಿದ ಹೆಣದ ವಾರಸುದಾರನ ಜೊತೆ ಯಾವ ಭೂಮಿಯ ವಿಷಯಕ್ಕೆ ಜಗಳ ಶುರುವಾಗಿ ಹೊಡೆದಾಟವಾಗಿ ಏನೇನಾಯಿತು ಎಂದು ಎಲ್ಲವನ್ನೂ ವಿವರವಾಗಿ ಹೇಳುತ್ತಿದ್ದರಂತೆ.
ಕೆ.
ಸತ್ಯನಾರಾಯಣ ಬರೆಯುವ ಕಥಾಸರಣಿ “ರೂಪಕಗಳಿಗೆ ಕೊರತೆಯಿಲ್ಲ”  

ನಮ್ಮ ಬೀದಿಯಲ್ಲಿದ್ದವರೆಲ್ಲ ಒಂದೇ ಜಾತಿ, ಒಂದೇ ಉಪಜಾತಿ, ಒಂದೇ ಗೋತ್ರ, ಒಂದೇ ಒಕ್ಕಲಿನವರು. ಆದರೆ ಮುನಿಸು, ವೈಮನಸ್ಯ, ಕರಬುವಿಕೆ, ದ್ವೇಷ ಎಲ್ಲವೂ ಇವರೊಳಗೇ, ಇಷ್ಟರೊಳಗೇ ನಡೆಯುತ್ತಿತ್ತು. ಇದೇ ನಮ್ಮ ಜೀವನದ ಲಯ. ಇಡೀ ಬೀದಿಯಲ್ಲಿ ಒಂದೇ ಒಂದು ಮನೆತನ ಕೂಡ ಆಸ್ತಿವಂತರು ಎಂದು ಹೇಳಿಕೊಳ್ಳುವಂಥದ್ದಲ್ಲ. ಆದರೂ ಎಷ್ಟೊಂದು ಕೋರ್ಟ್‌ ಕೇಸ್‌ಗಳು, ಮನಸ್ತಾಪ, ಮಾತು ಬಿಡುವುದು. ಊರು ಬಿಟ್ಟು ಬೇರೆ ಕಡೆ ಕೆಲಸಕ್ಕೆ ಹೋದರೂ ಪ್ರತಿ ದಿನದ, ಪ್ರತಿ ಕ್ಷಣದ ದಾಯಾದಿ ಮಚ್ಚರದ ವಿವರಗಳು ನಾವಿದ್ದ ಕಡೆಗೇ ತಲುಪುತ್ತಿದ್ದವು – ದೂರವಾಣಿ, ಪತ್ರಗಳ ಮೂಲಕವಲ್ಲ, “ತಂದು ಹಾಕುವ” ಮೂಲಕ.

ಓದಿ ಬರೆದು, ಕೆಲಸ ಹಿಡಿದು ನಗರ ಸೇರಿದ ಮೇಲೆ ನನಗೆ ಇದೆಲ್ಲ ಕ್ಷುದ್ರ, ಕ್ಷುಲ್ಲಕ, ನಮ್ಮ ಇಡೀ ಬದುಕನ್ನು ಹೀಗೇ ಕಳೆದುಬಿಟ್ಟೆವಲ್ಲ ಅಂತ ಪಶ್ಚಾತ್ತಾಪವಾಗುತ್ತಿತ್ತು. ನಮ್ಮ ಯಾರ ಮನೆತನವೂ ಗಾಂಧಿ, ನೆಹರು, ಅಂಬಾನಿ, ಮಫತ್‌ಲಾಲ್‌ ಮನೆತನದ ತರಹ ಇಲ್ಲವಲ್ಲ ಎಂಬ ಕೊರಗು. ಜೀವನಾನುಭವ ಕೊಂಚ ಕೊಂಚ ಮಾಗುತ್ತಿದ್ದಂತೆ, ಇದರಲ್ಲೆಲ್ಲ ಬೇಸರ ಪಟ್ಟುಕೊಳ್ಳುವಂತಾದ್ದು ಏನೂ ಇಲ್ಲ, ಇದೇ ನಮ್ಮ ಜೀವನದ ವೈಶಿಷ್ಟ್ಯ, ಹೆಗ್ಗಳಿಕೆ ಎಂದು ಹೆಮ್ಮೆ ಮೂಡಿತು. ಗಾಂಧಿ, ನೆಹರು, ಅಂಬಾನಿ, ಮಫತ್‌ಲಾಲ್‌ ಮನೆತನಗಳಲ್ಲೂ ನಮ್ಮ ಕುಟುಂಬಗಳ ರೀತಿಯಲ್ಲೇ ಕ್ಷುದ್ರತೆ, ಒಳ ಜಗಳ – ಒಂದು ರೀತಿಯ ಸಮತೋಲನ ಭಾವ ಮೂಡಿತ್ತು. ಆದರೆ ಒಂದು ಸಲ ಬೇಸಿಗೆ ರಜಾಕ್ಕೆ ಮಂಡ್ಯಕ್ಕೆ ಹೋಗಿದ್ದಾಗ ಕಣ್ಣಾರೆ ಕಂಡ ಒಂದು ಪ್ರಸಂಗ ನನ್ನ ಎಲ್ಲ ಓದು, ಅನುಭವ, ತಿಳುವಳಿಕೆಯನ್ನು ಅಲುಗಾಡಿಸಿತು. ಬರೆಯಲು ಕೂಡ ಭಯವಾಗುವಂಥದ್ದು. ಕತೆ, ಪ್ರಬಂಧ, ಇಂತಹದ್ದೆಲ್ಲ ಆಗಲು ಅನರ್ಹವಾದದ್ದು.

*****

            ಮಂಡ್ಯದಲ್ಲಿದ್ದ ಒಬ್ಬ ಚಿಕ್ಕಪ್ಪ ಸತ್ತು ಹೋದರು. ಅದೇ ದಿವಸ ಬೆಂಗಳೂರಿನಲ್ಲಿದ್ದ ಇನ್ನೊಬ್ಬ ಚಿಕ್ಕಪ್ಪ ಕೂಡ ಸತ್ತು ಹೋದರು. ವಾವೆಯಲ್ಲಿ ಇಬ್ಬರಿಗೂ ಹಿರಿಯರಾಗಿ ದೊಡ್ಡಪ್ಪ ಎಂದು ಕರೆಯಬಹುದಾಗಿದ್ದವರು ಆಗ ಮೈಸೂರಿನಲ್ಲಿದ್ದರು. ಇದ್ದವರಲ್ಲಿ ನಮ್ಮ ಪೈಕಿ ಅನುಕೂಲವಾಗಿದ್ದವರು ಅವರೊಬ್ಬರೇ. ಅವರ ಮಕ್ಕಳೆಲ್ಲ ಗೆಜೆಟೆಡ್‌ ಅಧಿಕಾರಿಗಳು ಇಲ್ಲ ಎಂಜಿನಿಯರ್‌ಗಳು. ಆ ಕುಟುಂಬದವರು ಯಾವಾಗಲೂ ಎಲ್ಲರನ್ನೂ ಹೀಯಾಳಿಸುತ್ತಿದ್ದರು. ಛೀ … ಥೂ … ಮಾಡುತ್ತಿದ್ದರು. ಮೈಸೂರು, ಕಾಂಚೀಪುರಂ, ಮಧುರೈ ಎಲ್ಲ ಕಡೆಯ ರೇಶ್ಮೆ ಸೀರೆಗಳೂ ಅವರ ಮನೆ ಹೆಂಗಸರ ಹತ್ತಿರ ಇತ್ತೆಂದು ಎಲ್ಲರೂ ಪಿಸುಮಾತಿನಲ್ಲಿ ಮಾತನಾಡಿಕೊಳ್ಳುತ್ತಿದ್ದರು.

ಸರಿ. ಮೈಸೂರಿನಿಂದ ಒಂದು ಟ್ಯಾಕ್ಸಿ ಮಾಡಿಕೊಂಡು ಮಂಡ್ಯಕ್ಕೆ ಬಂದರು. ಮಂಡ್ಯದಲ್ಲಿ ಒಂದು ಹೆಣ ನೋಡಬೇಕಿತ್ತಲ್ಲ. ಟ್ಯಾಕ್ಸಿಯಿಂದ ಎಲ್ಲ ಇಳಿದರು. ಹಿರಿಯರಾದ ದೊಡ್ಡಪ್ಪ ಇಳಿಯಲಿಲ್ಲ. ನೆರೆದಿದ್ದವರೆಲ್ಲ ಬನ್ನಿ, ಹಾಗೆ ಮಾಡಬೇಡಿ, ನೀವು ನೋಡಬೇಕಾದ್ದು, ನೋಡುವುದು ಹೆಣದ ಮುಖವನ್ನು ತಾನೇ, ಮನುಷ್ಯರ ಮುಖವನ್ನಲ್ಲವಲ್ಲ. ಅದೂ ಅಲ್ಲದೆ ನೀವು ನೋಡುತ್ತಿದ್ದೀರಿ ಎನ್ನುವುದು ಹೆಣಕ್ಕಾಗಲೀ, ಮನುಷ್ಯನಿಗಾಗಲೀ ಗೊತ್ತಾಗುವುದಿಲ್ಲವಲ್ಲ ಎಂದು ಗೋಗರೆದರು.

ದೊಡ್ಡಪ್ಪ ಒಪ್ಪಲಿಲ್ಲ. ಅವನು ಸತ್ತು ಹೋದರೆ ಏನು? ನಾನು ಬದುಕಿದ್ದೀನಲ್ಲ. ನನ್ನ ಕಡೆಯಿಂದ ದ್ವೇಷ ಇದ್ದೇ ಇದೆ. ಸಾಯುವ ತನಕ ಇರುತ್ತೆ. ಮುಂದಿನ ಜನ್ಮದಲ್ಲೂ ಇರುತ್ತೆ. ಪರಲೋಕದಲ್ಲಿ ಅವನು ಸಿಕ್ಕರೂ ನಾನು ಮಾತನಾಡಿಸುವುದಿಲ್ಲ, ಮುಖ ನೋಡುವುದಿಲ್ಲ.

ಮಂಡ್ಯದ ಬಂಧುಗಳಲ್ಲೇ ಹಿರಿಯರಾದವರೊಬ್ಬರು ಮತ್ತೆ ಕೇಳಿಕೊಂಡರು. ಪದಾರ್ಥವೇ ಹೊರಟು ಹೋಯಿತಲ್ಲ. ಈಗ ಎಲ್ಲವನ್ನೂ ಮರೆತು ಬಿಡಿ. ಪದಾರ್ಥವೇ ಹೋದ ಮೇಲೆ, ಪದಾರ್ಥದಿಂದ ಮೂಡಿದ ದ್ವೇಷ ಇರೋಲ್ಲ. ಬನ್ನಿ ಒಂದು ಸಲ ಹೆಣದ ಮುಖ ನೋಡಿ. ದೊಡ್ಡಪ್ಪ ಇನ್ನೂ tight ಆದರು. ಜೇಬಿನೊಳಗಿದ್ದ ನಶ್ಯದ ಡಬ್ಬಿಯನ್ನು ಈಚೆಗೆ ತೆಗೆದು ನಶ್ಯವನ್ನೂ ಮೂಗಿಗೇರಿಸಿ, ಜೋರಾಗಿ ಒಂದು ಸಲ ಸೀನಿದರು. ಆ ಸೀನಿಗೆ ನಾವೆಲ್ಲ ನಡುಗಿದೆವು. ಹಿಂದಿನ ಸೀಟಿನಲ್ಲಿ ಕುಳಿತಿದ್ದರಲ್ಲ, ಉಳಿದವರೆಲ್ಲ ಕಾರಿನಿಂದ ಕೆಳಗೆ ಇಳಿದಿದ್ದರಲ್ಲ, ಆದ್ದರಿಂದ ವಿಶಾಲವಾದ ಸೀಟಿನಲ್ಲಿ ಪದ್ಮಾಸನ ಹಾಕಿಕೊಂಡು, ಮುಖ ದಪ್ಪ ಮಾಡಿಕೊಂಡು ಕುಳಿತರು. ಇನ್ನೊಂದು ಜೇಬಿನಿಂದ ಕನ್ನಡಕ ತೆಗೆದು ಹಾಕಿಕೊಂಡು ದಿನ ಪತ್ರಿಕೆಯ ಸಾಲುಗಳನ್ನು ಗಟ್ಟಿಯಾಗಿ ಓದಲು ಪ್ರಾರಂಭಿಸಿದರು. ಹಾಗೆ ಓದುವಾಗಲೂ ಕಾರಿನ ಸುತ್ತ ನೆರೆದಿದ್ದವರನ್ನೆಲ್ಲ ತೀಕ್ಷ್ಣವಾಗಿ ದಿಟ್ಟಿಸುತ್ತಿದ್ದರು. ಸ್ವಲ್ಪ ಬಿರುಸಾಗಿಯೇ ಹೇಳಿದರು:

ಇಲ್ಲ, ಆಗೋಲ್ಲ. ಅದೂ ಅಲ್ಲದೆ ಅದೆಲ್ಲ ಶಾಸ್ತ್ರ ನಿಷಿದ್ಧ. ಹಾಗೆ ದ್ವೇಷ ಬಿಡಬೇಕಾದರೆ ಮನೆ ದೇವರ ದೇವಸ್ಥಾನಕ್ಕೆ ಹೋಗಬೇಕು. ಎರಡೂ ಕಡೆಯ ಹಿರಿಯರು ಬರಬೇಕು. ಹೀಗೆ ನ್ಯಾಯ ಮಾಡಿಸುವುದಕ್ಕೆ ಬರುವ ಹಿರಿಯರ ಮೈ ಮೇಲೆ ಯಾವ ವಸ್ತ್ರವೂ ಇರಬಾರದು. ಕಂಚಿನ ಪಾತ್ರೆಯಲ್ಲಿ ಎಣ್ಣೆ ತರಬೇಕು. ಎಣ್ಣೆಯಲ್ಲಿ ಒಬ್ಬರ ಬಿಂಬವನ್ನು ಇನ್ನೊಬ್ಬರು ನೋಡಿ, ಆಮೇಲೆ ದೇವರಿಗೆ ನಮಸ್ಕಾರ ಮಾಡಿ, ದ್ವೇಷ ಬಿಡ್ತು, ದ್ವೇಷ ಬಿಡ್ತು ಅಂತ ಒಪ್ಪಿಸಬೇಕು. ಅವನು ಬದುಕಿದ್ದಾಗ ಹೀಗೆಲ್ಲ ಮಾಡಿದ್ದರೂ ನಾನು ನೋಡುತ್ತಿರಲಿಲ್ಲ. ಹದಿನಾರು ವರ್ಷವೇ ಸೋತಿಲ್ಲ, ಈಗ ಸತ್ತುಹೋದ ಅನ್ನುವ ಒಂದೇ ಒಂದು ಕಾರಣಕ್ಕಾಗಿ ಸೋಲಬೇಕೇನು? ದ್ವೇಷ ಹಾಗೇ ಮುಂದುವರೆಯಲಿ ಎಂದು ಕಾರಿನಲ್ಲೇ ಮುದುಡಿಕೊಂಡು ಕುಳಿತುಬಿಟ್ಟರು. ಕಣ್ಣು ಮುಚ್ಚಿ ಏನೇನೋ ಮಣ ಮಣ ಮಾತಾಡಿಕೊಳ್ಳುತ್ತಿದ್ದರು.

ಸರಿ. ಇನ್ನೇನು ಮಾಡುವುದು. ಬಂಧುಗಳೆಲ್ಲ ಕಾರು ಹತ್ತಿ ಬೆಂಗಳೂರಲ್ಲಿ ನೋಡಬೇಕಾಗಿದ್ದ ಇನ್ನೊಬ್ಬ ಚಿಕ್ಕಪ್ಪನ ಹೆಣವನ್ನು ನೋಡಲು ಹೊರಟರು.

ಅಲ್ಲೇನು ದ್ವೇಷದ ಬಾಕಿ ಇರಲಿಲ್ಲ. ದೊಡ್ಡಪ್ಪ ಹೃತ್ಪೂರ್ವಕವಾಗಿ ಸಹಕರಿಸುವುದಲ್ಲದೆ, ಸ್ಮಶಾನಕ್ಕೂ ಹೋದರಂತೆ. ಹೆಣಕ್ಕೆ ಬೆಂಕಿ ಹಾಕಿದ ಮೇಲೆ, ಅದು ಉರಿದು ತಲೆ ಸಿಡಿಯುವ ಶಬ್ದ ಬರುವ ತನಕವೂ ಬೆಂಕಿಯ ಬೆಳಕಿನಲ್ಲಿ, ಅಲ್ಲಿದ್ದವರಿಗೆಲ್ಲ ಮಂಡ್ಯದಲ್ಲಿ ನೋಡಿದ ಹೆಣದ ವಾರಸುದಾರನ ಜೊತೆ ಯಾವ ಭೂಮಿಯ ವಿಷಯಕ್ಕೆ ಜಗಳ ಶುರುವಾಗಿ ಹೊಡೆದಾಟವಾಗಿ ಏನೇನಾಯಿತು ಎಂದು ಎಲ್ಲವನ್ನೂ ವಿವರವಾಗಿ ಹೇಳುತ್ತಿದ್ದರಂತೆ.

ಇದೆಲ್ಲ ನೋಡಿದ ನನಗೆ ಆ ದೊಡ್ಡಪ್ಪನ ಮುಖವನ್ನು ಮತ್ತೆ ನೋಡುವುದಕ್ಕೆ ಭಯವಾಯಿತು. ಮುಂದೆ ದಾಯಾದಿಗಳಲ್ಲಿ ಯಾರಾದರೂ ಸತ್ತಾಗ, ಎಲ್ಲರೂ ಬಂದರೆ, ದ್ವೇಷ ಸಾಧಿಸದೆ ಹೆಣದ ಮುಖದ ದರ್ಶನ ಮಾಡಿದರೆ ಎಂದು ಎಚ್ಚರದಿಂದ ಗಮನಿಸುತ್ತಿದ್ದೆ.

*****

            ಇದೆಲ್ಲವೂ ನನಗೆ ಮರೆತೇ ಹೋಗಿತ್ತು. ಒಬ್ಬ ಹಿರಿಯ ಲೇಖಕರು ಸತ್ತು ಹೋದಾಗ ಇನ್ನೊಬ್ಬ ಲೇಖಕರು ಹೆಣದ ಮುಖ ನೋಡಲು ಬರಲೇ ಇಲ್ಲ. ಆದರೆ ಅವರು ಕೊಟ್ಟ ಕಾರಣ ಬೇರೆ ಆಗಿತ್ತು. ಆ ಕಾರಣದಲ್ಲಿ ದಾಯಾದಿ ಮಚ್ಚರವಿರಲಿಲ್ಲ.

ಆ ಲೇಖಕ ಸತ್ತಿದ್ದರಿಂದ ನನಗೆ ದುಃಖವಾಗುತ್ತಿಲ್ಲ ಎಂದು ನಾನು ಹೇಳುವುದಿಲ್ಲ. ಆದರೆ ನನಗೆ ಬಂದು ಆತನ ಹೆಣದ ಮುಖ ನೋಡಬೇಕೆನಿಸುವುದಿಲ್ಲ. ನಮಗೆ ಪ್ರಾಮಾಣಿಕವಾಗಿ ಅನಿಸಿದ್ದನ್ನು ಮಾತ್ರ ನಾವು ಮಾಡಬೇಕಲ್ಲವೇ ಎಂದು ಮರುಪ್ರಶ್ನೆ ಹಾಕಿದರು. ಅವರು ಎತ್ತಿದ ಪ್ರಶ್ನೆಗೂ, ನಮ್ಮ ದೊಡ್ಡಪ್ಪ, ಹೆಣದ ಮುಖ ನೋಡಲು ನಿರಾಕರಿಸಿ ನೀಡಿದ ಕಾರಣಕ್ಕೂ ಏನಾದರೂ ಸಂಬಂಧವಿದೆಯೇ, ಯಾವ ಕಾರಣ ಎಷ್ಟು ಮಾನವೀಯ, ಎಷ್ಟು ತಾರ್ಕಿಕ ಎಂದು ಇನ್ನೂ ಯೋಚಿಸುತ್ತಿದ್ದೇನೆ. “ದಾಯಾದಿ” ಪದದ ಇತಿಹಾಸ, ಅರ್ಥವನ್ನೆಲ್ಲ ಹುಡುಕುತ್ತಿದ್ದೇನೆ.

About The Author

ಕೆ. ಸತ್ಯನಾರಾಯಣ

ಕೆ. ಸತ್ಯನಾರಾಯಣ ಹುಟ್ಟಿದ್ದು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೊಪ್ಪ ಗ್ರಾಮದಲ್ಲಿ. 1978ರಲ್ಲಿ ಭಾರತ ಸರ್ಕಾರದ ಇಂಡಿಯನ್ ರೆವಿನ್ಯೂ ಸರ್ವೀಸ್ ಗೆ ಸೇರಿ ಆದಾಯ ತೆರಿಗೆ ಇಲಾಖೆಯಲ್ಲಿ ದೇಶದ ನಾನಾ ಭಾಗಗಳಲ್ಲಿ ಕೆಲಸ ಮಾಡಿ ನಿವೃತ್ತಿಯಾಗಿದ್ದಾರೆ. ಸಣ್ಣಕಥೆ, ಕಿರುಕಥೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣಬರಹ, ವಿಮರ್ಶೆ, ಪ್ರವಾಸಕಥನ- ಹೀಗೆ ಬೇರೆ ಬೇರೆ ಪ್ರಕಾರಗಳಲ್ಲಿ ಇವರ ಕೃತಿಗಳು ಪ್ರಕಟವಾಗಿವೆ. ಮಾಸ್ತಿ ಕಥಾ ಪುರಸ್ಕಾರ(ನಕ್ಸಲ್ ವರಸೆ-2010) ಮತ್ತು ಕಥಾ ಸಾಹಿತ್ಯ ಸಾಧನೆಗೆ ಮಾಸ್ತಿ ಪ್ರಶಸ್ತಿ, ಬಿ.ಎಂ.ಶ್ರೀ.ಪ್ರತಿಷ್ಠಾನದ ಎಂ.ವಿ.ಸೀ.ಪ್ರಶಸ್ತಿ, ಬೆಂಗಳೂರು ವಿವಿಯ ಗೌರವ ಡಾಕ್ಟರೇಟ್(2013), ರಾ.ಗೌ.ಪ್ರಶಸ್ತಿ, ಬಿ.ಎಚ್.ಶ್ರೀಧರ ಪ್ರಶಸ್ತಿ, ವಿಶ್ವಚೇತನ ಪ್ರಶಸ್ತಿ, ಸೂರ್ಯನಾರಾಯಣ ಚಡಗ ಪ್ರಶಸ್ತಿ (ಸಾವಿನ ದಶಾವತಾರ ಕಾದಂಬರಿ), ವಿ.ಎಂ.ಇನಾಮದಾರ್‌ ಪ್ರಶಸ್ತಿ (ಚಿನ್ನಮ್ಮನ ಲಗ್ನ ಕೃತಿ) ಸೂವೆಂ ಅರಗ ವಿಮರ್ಶಾ ಪ್ರಶಸ್ತಿ (ಅವರವರ ಭವಕ್ಕೆ ಓದುಗರ ಭಕುತಿಗೆ ವಿಮರ್ಶಾ ಕೃತಿ) ಲಭಿಸಿದೆ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ