ಹಗೆತನದ ಗೀರುಗಳು
ಎಷ್ಟೊಂದು ಕೌತುಕ
ಬದುಕ ಬಾಗಿಲಲಿ
ನಡೆಯುತ್ತೇನೆ;
ಹೊಸ ತಿರುವುಗಳ ಹುಡುಕಿ
ನನಗಂತೂ ಸುಸ್ತಾಗಿದೆ
ನವಿರ ಸ್ಪರ್ಶ ತಾಕಿಸುವ
ಸಂಜೆ ನೆರಳಲಿ
ಈಗೀಗ ಹಗೆತನದ ಗೀರುಗಳು
ಗಾಳಿಯ ತೂಗಿ
ನೆಲಕ್ಕುರುಳಿದ
ಮುದಿ ಎಲೆಗಳಲ್ಲೂ ಕೂಡ
ಹತಾಶೆಯ ಚಿತ್ರ.
ಕಾಮ್ರೇಡ್…
ಇಲ್ಲಿ ಯಾರನ್ನು
ಎದೆಗಪ್ಪಿ ಸಂತೈಸಿದ್ದಾರೆ
ಪುರಾವೆ ತೋರಿಸು
ಸೋಜಿಗದ ಬಣ್ಣ ಮೆತ್ತಿಕೊಂಡ
ತುಟಿಗೂ ಧೂಳು.
ಬಹುಶಃ
ಬೆಳಗು-ಕತ್ತಲಿನ ನೆತ್ತಿಯಲ್ಲಿ
ಮೌನದ ಬಟ್ಟೆ ತೊಟ್ಟಿದ್ದಕ್ಕೆ
ಇರಬಹುದು;
ಸಾಗುತ್ತೇನೆ ಎದೆಗೊಟ್ಟು
ಗಾವುದ ದೂರದಲ್ಲಿ..!!
ಶಿವರಾಜ ಅರಳಿ ಹುಟ್ಟಿದ್ದು ಹಾವೇರಿ ಜಿಲ್ಲೆಯ ಮೇಲ್ಮರಿ ಗ್ರಾಮದಲ್ಲಿ.
ವೃತ್ತಿಯಲ್ಲಿ ಶಿಕ್ಷಕರಾಗಿರುವ ಇವರು ಪ್ರವೃತ್ತಿಯಲ್ಲಿ ಸಾಹಿತ್ಯದ ವಿದ್ಯಾರ್ಥಿ.
ಬೆವರ ಹನಿಗಳು(೨೦೨೩), ಬರಡಾದ ಬಾನಂಗಳ(೨೦೨೪), ಕಣ್ಣ ಬಾನಲ್ಲಿ ಬೆಂಕಿಯ ಚಿತ್ರ(೨೦೨೫) ಹಾಗೂ ಪೋಲಿ ಚಿಟ್ಟೆಯ ಅಸಲಿ ಕಥೆ(೨೦೨೬) ಎಂಬ ನಾಲ್ಕು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ.
ಇವರಿಗೆ ಬೆಟಗೇರಿ ಕೃಷ್ಣಶರ್ಮ ಕಾವ್ಯ ಬಹುಮಾನ, ಡಿ ಎಸ್. ಕಕಿ೯ ಯುವ ಕಾವ್ಯ ಪ್ರಶಸ್ತಿ, ಆಜೂರ ಪುಸ್ತಕ ಪ್ರಶಸ್ತಿ ಹಾಗೂ ಶಿಭಾ ಕಾವ್ಯ ಪುರಸ್ಕಾರ ಲಭಿಸಿದೆ.
ಸದ್ಯ ಇವರು ಕನಾ೯ಟಕ ಸಾಹಿತ್ಯ ಅಕಾಡೆಮಿಯ ಚಕೋರದ ಬೆಳಗಾವಿ ಜಿಲ್ಲಾ ಸಂಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ


