Advertisement
ಎಸ್‌. ರಾಮಮೂರ್ತಿ ಬರೆದ ಈ ಭಾನುವಾರದ ಕತೆ

ಎಸ್‌. ರಾಮಮೂರ್ತಿ ಬರೆದ ಈ ಭಾನುವಾರದ ಕತೆ

ಶಾಮಲಾಳ ಪ್ರತಿ ಮಾತೂ ಹೂವಿನಂತೆ ಮೃದುವಾಗಿ, ಜೇನಿನಂತೆ ಸಿಹಿಯಾಗಿತ್ತು. ಕೂತರೆ ಹೂತುಹೋಗುವಂತಿದ್ದ ಮೆತ್ತೆಯಲ್ಲಿ ಕೂರಿಸಿದಳು. ಮಾನವಳಾಗಿ ಮಹಾನ್‌ ಕಾರ್ಯವನ್ನೆಸಗುತ್ತಿದ್ದೇನೆಂಬ ಭಾವನೆಯಲ್ಲಿ, ತಲೆ ಒರೆಸಿಕೊಳ್ಳಲು ಟವೆಲ್‌ ಕೊಟ್ಟಳು.  ಅವಳಿಗಂತೂ ಅದೆಲ್ಲ ಕನಸಿನಂತಿದ್ದು ಗೊಂದಲದ ಗೂಡಿನಲ್ಲಿ ಸಿಕ್ಕಿಹಾಕಿಕೊಂಡು ಒದ್ದಾಡುತ್ತಿದ್ದಳು. ಶಾಮಲಾ ಚೂಡಿದಾರೊಂದನ್ನು ಕೊಡುತ್ತಾ ಇದನ್ನ ಹಾಕ್ಕೋ ಎಂದಳು. ತಲೆ ಬಾಚಿಕೊಳ್ಳು ಬಾಚಣಿಗೆ ಕೊಟ್ಟಳು, ಪೂಸಿಕೊಳ್ಳಲು ಪೌಡರ್‌ ಕೊಟ್ಟಳು. ಅವಳು ಪೌಡರ್‌ ಹಾಕಿಕೊಳ್ಳದೇ ‘ನನಗೆ ತುಂಬ ಹೊಟ್ಟೆ ಹಸೀತಾ ಇದೆʼ ಅಂದಳು. ‘ಅಯ್ಯೋ, ಎಂಥ ಕೆಲಸ ಮಾಡಿದೇ, ಇರುʼ ಅಂತ ಹೇಳಿ ಅಡುಗೆ ಮನೆಗೆ ಓಡಿ ತಟ್ಟೆ ತುಂಬ ತಿಂಡಿಗಳನ್ನು ತುಂಬಿಕೊಂಡು ಬಂದು ಅವಳ ಮುಂದಿಟ್ಟಳು. 
ಎಸ್‌. ರಾಮಮೂರ್ತಿ ಬರೆದ ಕತೆ “ಚೆಲುವೆ” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

ಶರ್ಮಿಲಾ ಸುಂದರಿಯರ ಗುಂಪಿಗಂತೂ ಸೇರಿದವಳಲ್ಲ. ಪ್ರಪಂಚದಲ್ಲಿ ಯಾವ ಹೆಣ್ಣು ತಾನೇ ಇದನ್ನು ಒಪ್ಪಿಕೊಳ್ಳುತ್ತಾಳೆ? ‘ಆ ಉಬ್ಬೀಗಿಂತಲೂ ಸಾವಿರ ಪಟ್ಟು ಸುಂದರವಾಗಿದ್ದೀನಿʼ ಅಂತ ಹೇಳ್ತಾ ಕನ್ನಡಿಯೆದುರು ಗಂಟೆಗಟ್ಟಲೆ ನಿಲ್ತಾರೆ. ಇವಳೂ ಅದಕ್ಕೆ ಹೊರತಲ್ಲ.

ಮದುವೆಯಾಗಿ ಎರಡು ವರ್ಷವಾಗಿದೆಯಷ್ಟೇ. ಗಂಡನಂತೂ ಯಾವಾಗಲೂ ಅವಳ ಹಿಂದೆ ಹಿಂದೇನೇ ಇರ್ತಾನೆ. ಆಗರ್ಭ ಶ್ರೀಮಂತ. ಇವಳು ಮಾಡೋ ಖರ್ಚಿಗೆ ಆಕಾಶವೇ ಮಿತಿ. ಕೊತ್ತಂಬರಿ ಸೊಪ್ಪಿಗೂ ಮಾಲ್‌ಗೆ ಹೋಗ್ತಾಳೆ. ಇಲ್ಲಾ, ಮನೇಗೇ ತರಿಸ್ತಾಳೆ. ಇಂಥವಳ ಸುತ್ತ ಗೆಳತಿಯರ ಗುಂಪು ಇರೋದು ಸಹಜವಲ್ಲವೇ? ಅವರ ಬಾಯಲ್ಲಿ, ಇವಳಂಥ ವಿಶ್ವಸುಂದರಿ ಈ ಲೋಕದಲ್ಲೇ ಇಲ್ಲ; ಇವಳ ಥರ ಡ್ರೆಸ್‌ ಮಾಡೋರು ಇಡೀ ಭಾರತದಲ್ಲೇ ಇಲ್ಲ; ಇವಳು ಒಗ್ಗರಣೆ ಹಾಕಿದರೆ ದೇವಲೋಕದ ಗಂಧರ್ವರು ಮೂಗರಳಿಸ್ತಾರೆ; ಇವಳು ನುಡಿಸೋ ವೀಣೆಗೆ ಸಾಕ್ಷಾತ್ ಸರಸ್ವತಿಯೇ ಮೂಕವಿಸ್ಮಿತಳಾಗ್ತಾಳೆ; ಪೇಂಟಿಂಗ್‌ ಮಾಡೋದನ್ನ ನೋಡಿದ್ದಿದ್ದರೆ ರವಿವರ್ಮನೇ ಕುಂಚ ಹಿಡಿಯೋದನ್ನ ಬಿಟ್ಟುಬಿಡ್ತಿದ್ದ; ಪಾಕಶಾಸ್ತ್ರದಲ್ಲಂತೂ ನಳ ಭೀಮರು ಇವಳೆದುರಿಗೆ ಬಚ್ಚಾಗಳು; ಅಷ್ಟೇ ಅಲ್ಲ, ಇವಳಿಗೆ ಬೇಕಾದ್ದನ್ನ ಇವಳೇ ಮಾಡಿಕೊಳ್ಳೋದು ಇವಳ ಸ್ಪೆಷಾಲಿಟಿ; ಇನ್ನು, ಬುದ್ಧಿಮತ್ತೆಯ ವಿಷಯಕ್ಕೆ ಬಂದರೆ, ಇವಳ ಮುಂದೆ ನ್ಯೂಟನ್ನು, ಐನ್‌ಸ್ಟೀನರೆಲ್ಲ ದೋಡ್ಡ ಸೊನ್ನೆ.

ಇಂಥ ಶರ್ಮಿಳಾ ಎಂಬೋ ಶರ್ಮಿಳಾಗೆ ಕೋಸಂಬರಿ ತಿನ್ನುವಾಸೆಯಾಯಿತು. ಫ್ರಿಜ್‌ನಿಂದ ಸೌತೇಕಾಯಿ ತೆಗೆದಳು. ಸಿಪ್ಪೆಸುಲಿಗ ಎಲ್ಲೂ ಕಾಣಿಸಲಿಲ್ಲ.  ಬಿಎಂಡಬ್ಲ್ಯೂ ಹಾಕ್ಕೊಂಡು ‘ಡುಡುʼ ಮಾಲಿಗೆ ಹೊರಟಳು. ಮಾಲಿನಲ್ಲಿ ಇವಳ ಕಂಡರೆ ಸಾಕು, ಅಂಗಡಿಗಳವರಿಗೆಲ್ಲ ಹಬ್ಬ. ಸಿಪ್ಪೆಸುಲಿಗದ ಜೊತೆಗೆ ಕಾರಿನ ತುಂಬ ಸಾಮಾನುಗಳನ್ನು ತುಂಬಿಸಿಕೊಂಡಳು.

ತುಂತುರು ಹನಿಯಲು ಶುರುವಾಗಿತ್ತು. ಆಕಾಶದ ಕಪ್ಪು ಮೋಡಗಳು ಭೂಮಿಯನ್ನೆಲ್ಲಾ ಆವರಿಸಿತ್ತು. ಯಾವ ಘಳಿಗೆಯಲ್ಲಿ ‘ಧೋʼ ಅಂತ ಮಳೆ ಬೀಳುತ್ತೋ ಆನ್ನೋ ಧಾವಂತದಲ್ಲಿ ಜನ ಗಡಿಬಿಡಿಯಿಂದ ಮನೆಗಳಿಗೆ ಹೋಗಲು ಕಾತರಿಸುತ್ತಿದ್ದರು. ಕೆಲವರು ಮುಂದೆ ಹೋಗಿ ತಲೆ ಎತ್ತಿ ಮುಖದ ಮೇಲೆ ತುಂತುರು ಹನಿಗಳನ್ನು ಬೀಳಿಸಿಕೊಂಡು ಕುಣಿದಾಡುತ್ತಿದ್ದರು. ಶಾಮಲಳಿಗೆ ಯಾಕೋ, ಆ ಜಾಗ ಬಿಟ್ಟು ಕದಲುವ ಮನಸ್ಸಾಗಲಿಲ್ಲ. ಹಿಂದಿನಿಂದ ಯಾರೋ ಇವಳನ್ನು ಮುಟ್ಟಿದಂತಾಯಿತು. ಹಿಂತಿರುಗಿ ನೋಡಿದಳು. ಒಂದು ಹೆಣ್ಣು. ಹೆಚ್ಚು ಕಡಿಮೆ ತನ್ನ ವಯಸ್ಸಿನವಳೇ. ನಸುಗಪ್ಪು ಬಣ್ಣ. ಪೇಲವ ಮುಖ. ಚಳಿಯಿಂದ ಸಣ್ಣಗೆ ನಡುಗುತ್ತಿದ್ದಳು. ಅವಳನ್ನೇ ನೋಡಿದಳು ಶರ್ಮಿಳಾ. ಬಣ್ಣ ಕಪ್ಪಾದರೂ ಕಣ್ಮನ ಸೆಳೆಯುವ ಚೆಲುವು. ಏನೋ ಬೇಕೆಂಬ, ಆದರೆ ಕಣ್ಣುಗಳಲ್ಲಿ, ಅದನ್ನು ಕೇಳಲು ಹಿಂಜರಿಯುವಂತಹ ಭಾವನೆ. ತನಗೇ ಅರಿವಿಲ್ಲದಂತೆ ಕೇಳಿದಳು: ಏನು ಬೇಕು? ‘ಚಳಿ ಆಗ್ತಾ ಇದೆ. ಟೀ ಕುಡೀಬೇಕು. ಹತ್ತು ರುಪಾಯಿʼ ಅನ್ನುತ್ತಾ ಕೈ ಚಾಚಿದಳು. ಟೀ ಕುಡಿಯೋಕೆ ಹತ್ತು ರುಪಾಯೂ ಇಲ್ಲವೇ ಅನ್ನೋದೇ ಅವಳಿಗೆ ಪರಮಾಶ್ಚರ್ಯ. ಹುಬ್ಬೇರಿಸಿ ಅವಳನ್ನೇ ನೋಡಿದಳು. ಮನಸ್ಸಿನಲ್ಲೊಂದು ಮಿಂಚು ಹರಿಯಿತು. ಇವಳನ್ನು ಮನೆಗೆ ಕರೆದುಕೊಂಡು ಹೋದರೆ ಹೇಗೇ? ಎಷ್ಟು ಚೆನ್ನಾಗಿರತ್ತೆ! ಒಂದು ಹೆಣ್ಣಿಗೆ ಬಾಳು ಕೊಟ್ಟರೆ ಹೇಗಿರತ್ತೆ?! ಆ ಪ್ರಶ್ನೆಯೇ ಉತ್ತರ ರೂಪದಲ್ಲಿತ್ತು. ಒಪ್ಪಿಗೆಯನ್ನು ಸೂಚಿಸಿತ್ತು. ಒಹ್!‌ ಎಂತಹ ಉದಾತ್ತ ಯೋಚನೆ! ಸ್ನೇಹಿತೆಯರು ‘ಎಂಥ ಒಳ್ಳೆ ಕೆಲಸ ಮಾಡಿದೆ? ಅಂತ ಹೊಗಳುವುದನ್ನು ಕಿವಿಯಾರೆ ಕೇಳಿಸಿಕೊಂಡು ಪುಲಕಗೊಂಡಳು. ‘ಬಾʼ ಅಂದದ್ದೇ ಅವಳ ಕೈಯ್ಯನ್ನು ಮೃದುವಾಗಿ ಹಿಡಿದು ಒಂದು ಹೆಜ್ಜೆ ಇಟ್ಟಳು. ಕಾರಿನ ಬಳಿ ಸಾಗಿ ಹಿಂದಿನ ಬಾಗಿಲನ್ನು ತೆಗೆದು ಕೂರುವಂತೆ ಸೈಗೆ ಮಾಡಿದಳು. ಆದರೆ ಅವಳು ಅಲ್ಲೇ ನಿಂತಳು ಕಾರು ಹತ್ತುವ ಮನಸ್ಸಿಲ್ಲದೇ. ‘ಮನೇಗೆ ಹೋಗಿ ಟೀ ಕುಡಿಯೋಣ ಬಾʼ ಅಂತ ಕರೆದಳು. ‘ನೀವು ಪೋಲೀಸರಿಗೆ ಕೊಡ್ತೀರಾ?ʼ ಕೇಳಿದಳು. ‘ಅಯ್ಯೋ ಹುಚ್ಚೀ, ಎಂಥ ಮಾತಾಡ್ತೀಯಾ? ನಾನ್ಯಾಕೆ ನಿನ್ನನ್ನ ಪೋಲೀಸರಿಗೆ ಕೊಡಲಿ? ʼ ಅನ್ನುತ್ತ ಅವಳ ಬೆನ್ನು ತಟ್ಟುತ್ತಾ ʼಇಲ್ಲ ಇಲ್ಲಾ, ನಾನು ಹಾಗೆಲ್ಲ ಮಾಡಲ್ಲ. ಇನ್ನು ಮೇಲೆ ನೀನು ನಮ್ಮ ಮನೆಯಲ್ಲೇ ಇದ್ದುಬಿಡಬೇಕು. ನಿನ್ನನ್ನ ಸುಖವಾಗಿ ನೋಡಿಕೋತೀನಿ. ಆಯ್ತಾ?ʼ ಅಂದರೂ ಅವಳಿಗೆ ಪೂರ್ತಿಯಾಗಿ ನಂಬಿಕೆ ಬರಲಿಲ್ಲ. ಅನುಮಾನದಿಂದಲೇ ಕಾರು ಹತ್ತಿದಳು.

ಮನೆಯ ಮುಂದಿಳಿದು, ಅವಳ ಜೊತೆ ಮನೆಯೊಳಗೆ ಹೆಜ್ಜೆ ಇಟ್ಟಳು ಶಾಮಲಾ. ಹಣವಂತರಿಗೂ ಹೃದಯವಂತಿಕೆ ಇದೆ, ಅವರಿಗೂ ಕರುಣೆ, ಅನುಕಂಪಗಳು ಇರುತ್ತವೆ ಅನ್ನೋದನ್ನ ತೋರಿಸ್ತೀನಿ ಅಂತ ಮನಸ್ಸಿನಲ್ಲೇ ಅಂದುಕೊಂಡಳು. ಕನ್ನಡಿಯಂತಿದ್ದ ನೆಲದ ಮೇಲೆ ಹೆಜ್ಜೆ ಇಡಲು ಹಿಂದು ಮುಂದು ನೋಡುತ್ತಿದ್ದವಳನ್ನು ‘ಅಯ್ಯೋ, ಪರವಾಗಿಲ್ಲ ಬಾ. ಆಮೇಲೆ ನೆಲ ಒರೆಸಿದರೆ ಆಯ್ತುʼ ಅಂತ ಕೈಹಿಡಿದು ನಡೆಸಿದಳು. ಅವಳಂತೂ ಮನೆಯನ್ನು ನೋಡಿ ಮೂಕವಿಸ್ಮಿತಳಾಗಿಬಿಟ್ಟಳು. ಅವಳ ಬೆರಗಿನ ಮುಖವನ್ನು ನೋಡಿ ಉಬ್ಬಿಹೋದ ಶಾಮಲಾ ‘ಬಾಬಾ. ಮೇಲೆ ನನ್ನ ರೂಮಿಗೆ ಹೋಗೋಣʼ ಅಂತ ಮೇಲೆ ಕರೆದುಕೊಂಡುಹೋದಳು. ಶಾಮಲಾಳ ಪ್ರತಿ ಮಾತೂ ಹೂವಿನಂತೆ ಮೃದುವಾಗಿ, ಜೇನಿನಂತೆ ಸಿಹಿಯಾಗಿತ್ತು. ಕೂತರೆ ಹೂತುಹೋಗುವಂತಿದ್ದ ಮೆತ್ತೆಯಲ್ಲಿ ಕೂರಿಸಿದಳು. ಮಾನವಳಾಗಿ ಮಹಾನ್‌ ಕಾರ್ಯವನ್ನೆಸಗುತ್ತಿದ್ದೇನೆಂಬ ಭಾವನೆಯಲ್ಲಿ, ತಲೆ ಒರೆಸಿಕೊಳ್ಳಲು ಟವೆಲ್‌ ಕೊಟ್ಟಳು.  ಅವಳಿಗಂತೂ ಅದೆಲ್ಲ ಕನಸಿನಂತಿದ್ದು ಗೊಂದಲದ ಗೂಡಿನಲ್ಲಿ ಸಿಕ್ಕಿಹಾಕಿಕೊಂಡು ಒದ್ದಾಡುತ್ತಿದ್ದಳು. ಶಾಮಲಾ ಚೂಡಿದಾರೊಂದನ್ನು ಕೊಡುತ್ತಾ ಇದನ್ನ ಹಾಕ್ಕೋ ಎಂದಳು. ತಲೆ ಬಾಚಿಕೊಳ್ಳು ಬಾಚಣಿಗೆ ಕೊಟ್ಟಳು, ಪೂಸಿಕೊಳ್ಳಲು ಪೌಡರ್‌ ಕೊಟ್ಟಳು. ಅವಳು ಪೌಡರ್‌ ಹಾಕಿಕೊಳ್ಳದೇ ‘ನನಗೆ ತುಂಬ ಹೊಟ್ಟೆ ಹಸೀತಾ ಇದೆʼ ಅಂದಳು. ‘ಅಯ್ಯೋ, ಎಂಥ ಕೆಲಸ ಮಾಡಿದೇ, ಇರುʼ ಅಂತ ಹೇಳಿ ಅಡುಗೆ ಮನೆಗೆ ಓಡಿ ತಟ್ಟೆ ತುಂಬ ತಿಂಡಿಗಳನ್ನು ತುಂಬಿಕೊಂಡು ಬಂದು ಅವಳ ಮುಂದಿಟ್ಟಳು.  ಅವಳು ಗಬಗಬನೆ ತಿನ್ನತೊಡಗಿದಳು. ಶಾಮಲಾ ಎದ್ದುಹೋಗಿ ದೊಡ್ಡ ಲೋಟದಲ್ಲಿ ಹಬೆಯಾಡುತ್ತಿದ್ದ ಟೀ ತಂದು ಅವಳ ಮುಂದಿಟ್ಟಳು. ಟೀ ಕುಡಿದು ಸಂತೃಪ್ತಳಾದ ಅವಳು ಶಾಮಲಾಳ ಮುಖ ನೋಡಿದಳು. ಶಾಮಲಾ ‘ಹೇಳು ನಿನ್ನ ಕಥೇನʼ ಅಂದಳು.

ಬಾಗಿಲು ತಟ್ಟಿದ ಶಬ್ದ. ಹಿಂದೆಯೇ ರಮೇಶ ಪ್ರವೇಶಿಸಿದ. ಶಾಮಲಾ ಜೊತೆಗೆ ಇನ್ನೊಬ್ಬರಿದ್ದುದನ್ನು ಕಂಡು ‘ಒಳಗೆ ಬರಲಾ ಶಾಮೀ?ʼ ಕೇಳಿದ. ‘ಬನ್ನಿ ಬನ್ನಿʼ ಅಂದಳು. ರಮೇಶ ಅವಳ ಮುಖವನ್ನ ನೋಡಿ ಶಾಮಲಳ ಮುಖ ನೋಡಿದ. ‘ಇವಳು ನನ್ನ ಗೆಳತಿʼ ಅಂತ ಪರಿಚಯಿಸಿದಳು. ಅವಳ ಮುಖವನ್ನೇ ನೋಡುತ್ತ ‘ಹೊರಗೆ ತುಂಬ ಛಳಿ ಶಾಮೀʼ ಅನ್ನುತ್ತಾ ‘ಒಂದು ನಿಮಿಷ ನನ್ನ ರೂಮಿಗೆ ಬರ್ತೀಯಾ ಶಾಮೀ?ʼ ಅನ್ನುತ್ತ ಆಚೆಗೆ ಬಂದ. ಶಾಮಲಾ ಅವನನ್ನು ಹಿಂಬಾಲಿಸಿದಳು.

‘ಯಾರು ಶಾಮೀ ಈಕೇ? ನಮ್ಮನೇಗೆ ಯಾಕೆ ಬಂದಿದ್ದಾಳೆ?ʼ

‘ಡುಡು ಮಾಲ್‌ನಲ್ಲಿ ಸಿಕ್ಕಿದಳು. ಟೀಗೆ ಕಾಸು ಕೇಳಿದಳು. ನನಗೆ ಇವಳು ತುಂಬಾ ಹಿಡಿಸಿದಳು. ಒಳ್ಳೆ ಸೆಲೆಕ್ಷನ್‌ ಅನ್ನಿಸಿತು. ಮನೆಗೆ ಕರೆದುಕೊಂಡುಬಂದುಬಿಟ್ಟೆʼ

‘ಸರಿ ಶಾಮೀ, ಆದರೆ ಮನೇಗೆ ಕರಕೊಂಡು ಬಂದು ಏನು ಮಾಡ್ತೀಯಾ?ʼ

‘ಇವಳನ್ನ ಸಾಕ್ತೀನಿ. ಸುಖವಾಗಿರೋ ಥರ ನೋಡಿಕೋತೀನಿʼ

‘ಶಾಮೀ, ನಿನಗೇನು ಹುಚ್ಚುಗಿಚ್ಚು ಹಿಡಿದಿದೆಯಾ ಹೇಗೆ? ಇವೆಲ್ಲ ಸಾಧ್ಯವಿಲ್ಲʼ

‘ನಂಗೊತ್ತು ನೀವು ಹೀಗೊಂದನ್ನೇನಾದರೂ ಹೇಳ್ತೀರಿ ಅಂತʼ ಅಂತನ್ನುವಷ್ಟರಲ್ಲಿ ಕಣ್ಣುಗಳಲ್ಲಿ ಗಂಗಾ ಭವಾನಿಯರು ಕಾಣಿಸಿಕೊಂಡರು. ಅದನ್ನು ನೋಡಿದ ರಮೇಶ ತಣ್ಣಗಾದ. ಒಂದೆರಡು ನಿಮಿಷ ಏನೂ ಮಾತಾಡಲಿಲ್ಲ. ದೊಡ್ಡದಾಗಿ ನಿಟ್ಟುಸಿರು ಬಿಟ್ಟು ‘ನಿನ್ನಿಷ್ಟ. ಒಳ್ಳೆ ಚೆಲುವೆಯನ್ನೇ ಸೆಲೆಕ್ಟ್ ಮಾಡಿದ್ದೀಯʼ ಅಂದ.

‘ಚೆಲುವೇನಾ?ʼ ಶಾಮಲಾಳ ಮುಖ ಕೆಂಪಾಯಿತು.

‘ನೋಡು. ಅವಳನ್ನ ಇನ್ನೊಂದು ಸಲ ನೋಡು. ತುಂಬಾ ಮುದ್ದಾಗಿದ್ದಾಳೆ. ನಾನಂತೂ ಅವಳನ್ನ ನೋಡಿದ ತಕ್ಷಣ ಕ್ಲೀನ್‌ ಬೋಲ್ಡ್‌ ಆಗಿಬಿಟ್ಟೆ. ಅದೆಲ್ಲಾದರೂ ಹೋಗಲಿ. ರಾತ್ರಿ ನಮ್ಮ ಜೊತೇಲಿ ಊಟಕ್ಕೆ ಕೂತುಕೋತಾಳೆ ತಾನೇ?ʼ

ಶಾಮಲಾ ಅವನ ರೂಮಿನಿಂದ ಆಚೆ ಬಂದಳು. ‘ಒಳ್ಳೆ ಚೆಲುವೆಯನ್ನೇ ಸೆಲೆಕ್ಟ್ ಮಾಡಿದ್ದೀಯʼ, ‘ತುಂಬಾ ಮುದ್ದಾಗಿದ್ದಾಳೆ. ನಾನಂತೂ ಅವಳನ್ನ ನೋಡಿದ ತಕ್ಷಣ ಕ್ಲೀನ್‌ ಬೋಲ್ಡ್‌ ಆಗಿಬಿಟ್ಟೆʼ, ‘ರಾತ್ರಿ ನಮ್ಮ ಜೊತೇಲಿ ಊಟಕ್ಕೆ ಕೂತುಕೋತಾಳೆ ತಾನೇ?ʼ – ಅದೇ ಅದೇ ಮಾತುಗಳು ಶಾಮಲಾಳ ಕಿವಿಯಲ್ಲಿ.

ಶಾಮಲಾ ಟೇಬಲ್‌ ಡ್ರಾ ತೆಗೆದು ಚೆಕ್‌ ಬುಕ್ಕನ್ನು ಕೈಗೆತ್ತಿಕೊಂಡಳು.

‘ಒಳ್ಳೆ ಚೆಲುವೆಯನ್ನೇ ಸೆಲೆಕ್ಟ್ ಮಾಡಿದ್ದೀಯʼ

ಚೆಕ್‌ ಬುಕ್ಕನ್ನೆಸೆದು ಐನೂರರ ಎರಡು ನೋಟುಗಳನ್ನೆತ್ತಿಕೊಂಡಳು.

‘ನೋಡಿದ ತಕ್ಷಣ ಕ್ಲೀನ್‌ ಬೋಲ್ಡ್‌ ಆಗಿಬಿಟ್ಟೆʼ.

ಒಂದು ನೋಟನ್ನು ವಾಪಸ್‌ ಇಟ್ಟು ಇನ್ನೊಂದನ್ನು ಕೈಲಿ ಹಿಡಿದು ಅವಳ ಬಳಿ ಸಾರಿ, ಅವಳ ಕೈಲಿಟ್ಟು ಹೊರಗೆ ಹೋಗುವಂತೆ ತೋರುಬೆರಳನ್ನು ಬಾಗಿಲ ಕಡೆಗೆ ಚಾಚಿದಳು. ಹೊಸಿಲು ದಾಟಿದ ಮೇಲೆ ಬಾಗಿಲು ಹಾಕಿಕೊಂಡಳು.

ಸುಂದರಿಯಾಗಿ ಕಾಣಲು ಏನೆಲ್ಲ ಮಾಡಿಕೊಳ್ಳಬೇಕೋ ಆ ಎಲ್ಲ ಶೃಂಗಾರವನ್ನೂ ಮಾಡಿಕೊಂಡು,  ರಮೇಶನ ರೂಮು ಪ್ರವೇಶಿಸಿದ ಶಾಮಲಾ ಅವನಿಗೆ ಒತ್ತಿಕೊಂಡು ಕೂರುತ್ತಾ ‘ರಾತ್ರಿ ಅವಳು ನಮ್ಮ ಜೊತೆ ಊಟಕ್ಕೆ ಕೂರಲ್ಲವಂತೆʼ ಅಂದಳು.
‘ಅಯ್ಯೋ, ಯಾಕಂತೇ? ಏನಾಯ್ತೂ?ʼ ಪೇಚಾಡಿದ.

‘ಮನೇಲೇ ಇಟ್ಟುಕೊಳ್ತೀನಿ ಅಂತ ಹೇಳಿದ್ದೆ. ಹೂಂ ಅಂತಾನೂ ಅಂದಿದ್ದಳು. ಅದ್ಯಾಕೋ ಏನೋ ಇದ್ದಕ್ಕಿದ್ದ ಹಾಗೇ ‘ನಾನು ಹೋಗಬೇಕುʼ ಅಂದಳು. ಎಷ್ಟೇ ಬಲವಂತ ಮಾಡಿದರೂ ಒಪ್ಪಲಿಲ್ಲ. ಇನ್ನೇನು ಮಾಡಲಿ? ಒಂದಷ್ಟು ದುಡ್ಡು ಕೊಟ್ಟು ಕಳಿಸಿಕೊಟ್ಟೆ ಅನ್ನುತ್ತಾ ಅವನಿಗೆ ಮತ್ತಷ್ಟು ಒತ್ತಿಕೊಂಡು ‘ನನ್ನನ್ನ ಪ್ರೀತಿಸ್ತೀರ ತಾನೇ?ʼ ಮೆಲ್ಲಗೆ ಕೇಳಿದಳು.

‘ಇದೇನು ಶಾಮೀ, ಎಂಥ ಪ್ರಶ್ನೆ ಕೇಳ್ತಿದ್ದೀಯಾ?ʼ ಅನ್ನುತ್ತಾ ಅವಳ ಎರಡೂ ಕದಪುಗಳನ್ನು ಕೈಗಳಲ್ಲಿ ಹಿಡಿಯುತ್ತ ಮೃದುವಾಗಿ ಅವಳ ಹಣೆಯನ್ನು ಚುಂಬಿಸಿದ.

ಅವನ ಕಣ್ಣುಗಳಲ್ಲಿ ಕಣ್ಣಿಟ್ಟು ಕೇಳಿದಳು ‘ನಾನು ಚೆನ್ನಾಗಿದ್ದೀನಿ ತಾನೇ?ʼ

(ಕ್ಯಾಥರೀನ್‌ ಮ್ಯಾನ್ಸ್ಫ಼ೀಲ್ಡ್ ರವರ ಕಥೆಯೊಂದರಿಂದ ಪ್ರೇರಿತ).

About The Author

ಎಸ್.‌ ರಾಮಮೂರ್ತಿ (ಗೌತಮ)

ಹುಟ್ಟಿದ್ದು, ಓದಿದ್ದು, ಬೆಳೆದಿದ್ದು ಬೆಂಗಳೂರಿನಲ್ಲಿ. ಕಾವ್ಯನಾಮ: ‘ಗೌತಮʼ. ಎಂಜಿನಿಯರಿಂಗ್‌ನಲ್ಲಿ ಎಎಂಐಇ (ಮೆಕ್ಯಾನಿಕಲ್), ಮೈಸೂರು ವಿವಿಯಿಂದ ಕನ್ನಡದಲ್ಲಿ ಸ್ನಾತಕೊತ್ತರ ಪದವಿ. ವೃತ್ತಿ: ಭಾರತ್‌ ಎಲೆಕ್ಟ್ರಾನಿಕ್ಸ್‌ನಲ್ಲಿ ಸು. ಮುವ್ವತ್ತೆಂಟು ವರ್ಷಗಳ ಸೇವೆ. ಸದ್ಯ ನಿವೃತ್ತ. ೧೦ ವರ್ಷಗಳ ಕಾಲ ಆರ್‌ವಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೆ ಕನ್ನಡ ಬೋಧನೆ. ಜೊತೆಗೆ ಬೆಂಗಳೂರಿನ ನೂರಾರು ಕನ್ನಡೇತರರಿಗೆ ಕನ್ನಡ ಬೋಧನೆ. ‘ವಾರಪತ್ರಿಕೆʼಯ ದೀಪಾವಳಿ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಏಕೈಕ ಕಾದಂಬರಿಯೂ ಸೇರಿದಂತೆ ೫ ಕಾದಂಬರಿ, ೬ ಕಥಾಸಂಕಲನ, ೭ ಹಾಸ್ಯ ಸಂಕಲನ, ೧ ಲಲಿತ ಪ್ರಬಂಧ ಸಂಕಲನ ಇತ್ಯಾದಿ ಪ್ರಕಟ. ಹವ್ಯಾಸ: ಇಂಗ್ಲಿಷ್‌ನಿಂದ ಕನ್ನಡಕ್ಕೆ ಅನುವಾದ(ವಿವಿಧ ವಿಷಯಗಳ ಮೇಲಿನ ಸುಮಾರು ೪೦ ಪುಸ್ತಕಗಳ ಅನುವಾದ)

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ