Advertisement
ಪ್ರಾಚೀನ ಬೆಳ್ಳಿ ಗಣಿಗಾರಿಕೆ: ಡಾ. ಎಂ. ವೆಂಕಟಸ್ವಾಮಿ ಸರಣಿ

ಪ್ರಾಚೀನ ಬೆಳ್ಳಿ ಗಣಿಗಾರಿಕೆ: ಡಾ. ಎಂ. ವೆಂಕಟಸ್ವಾಮಿ ಸರಣಿ

ಅಗುಚಾದಲ್ಲಿ ಅದಿರು ಫ್ರೀಬರ್ಗೈಟ್‌ನ (ಹೆಚ್ಚು ಗಟ್ಟಿ ಅದಿರು) ಸಂಕೀರ್ಣ ಮಿಶ್ರಣವಾಗಿದ್ದು ಇದನ್ನು ಬೆಳ್ಳಿಯ ಪ್ರಮುಖ ಮೂಲವೆಂದು ಪರಿಗಣಿಸಲಾಗಿದೆ. ದರಿಬಾ ಮತ್ತು ಅಗುಚಾ ಎರಡೂ ಗಣಿಗಳಲ್ಲಿ ಮೇಲ್ಮೈಯಲ್ಲಿ ದೊರಕುವ ನಿಕ್ಷೇಪಗಳು ಶಿಥಿಲೀಕರಣಗೊಂಡು ಕಬ್ಬಿಣ ಅಂಶದಿಂದ ಮಿಶ್ರಣಗೊಂಡಿವೆ. ದರಿ ಬಾದ ಹಲವಾರು ಗಣಿಗಳ ಮೇಲ್ಮೈ ನಿಕ್ಷೇಪಗಳಲ್ಲಿ ಗ್ರ್ಯಾಫೈಟ್ ಮೈಕಾ ಶಿಸ್ಟ್‌ನಲ್ಲಿ ಬೆಳ್ಳಿ ದೊರಕುತ್ತದೆ. ಇದೇ ರೀತಿಯ ಗಣಿಗಳು ಅಗುಚಾ ಪ್ರದೇಶದಲ್ಲೂ ಕಂಡುಬಂದಿವೆ. ಈ ಗಣಿಗಳು ಬಹುಶಃ ಪ್ರಾಚೀನ ಭಾರತದ ಆರಂಭಿಕ ಗಣಿ ಕಾರ್ಯಗಳಾಗಿದ್ದು ನಂತರ ಅವು ಆಳದ ಭೂಗತ ಗಣಿಗಳಾಗಿ ಮಾರ್ಪಟ್ಟಿವೆ.
ಡಾ. ಎಂ. ವೆಂಕಟಸ್ವಾಮಿ ಅನುವಾದಿತ “ಭಾರತದಲ್ಲಿ ಪ್ರಾಚೀನ ಗಣಿಗಾರಿಕೆ” ಸರಣಿಯಲ್ಲಿ ಆರನೆಯ ಅಧ್ಯಾಯ

ಪ್ರಪಂಚದಾದ್ಯಂತ ಬೆಳ್ಳಿಯೂ ಸೇರಿದಂತೆ ಅಮೂಲ್ಯ ಲೋಹಗಳ ಗಣಿಗಾರಿಕೆಯ ಅನ್ವೇಷಣೆ ಮತ್ತು ಲೋಹಗಳ ತಂತ್ರಜ್ಞಾನ ನಾಗರಿಕತೆಗಳ ಮೂಲಕ ಕಾಲಕಾಲಕ್ಕೆ ಅಭಿವೃದ್ಧಿಗೊಳ್ಳುತ್ತಾ ಬಂದಿದೆ. ಭೂಮಿಯಲ್ಲಿ ಸೀಸ, ಸತು, ತಾಮ್ರ ಮತ್ತು ಚಿನ್ನದ ಅದಿರುಗಳ ಜೊತೆಗೆ ಸಣ್ಣ ಪ್ರಮಾಣದಲ್ಲಿ ಬೆಳ್ಳಿಯ ಅಂಶವೂ ಕಂಡುಬರುತ್ತದೆ. ಬೆಳ್ಳಿಯ ನಾಣ್ಯಗಳು ಮತ್ತು ಆಭರಣಗಳ ಬಳಕೆ ಮುಖ್ಯವಾಗಿ ಹರಪ್ಪ ನಾಗರಿಕತೆಯ ಕೊನೆಯ ಹಂತದಲ್ಲಿ ಹೆಚ್ಚಾಗಿ ಕಂಡುಬರುತ್ತದೆ.

(ಚಿತ್ರ: ಬೆಳ್ಳಿ ಲೋಹ ಸಂಸ್ಕರಣೆ ಮಾಡುತ್ತಿರುವ ಒಂದು ದೃಶ್ಯ Indian silver miners at work (https://www.gutenberg.org/.)

ಕ್ರಿ.ಪೂ. ಮೊದಲ ಸಹಸ್ರಮಾನದಲ್ಲಿ ಬೆಳ್ಳಿಯ ಬೇಡಿಕೆಯಲ್ಲಿ ಸ್ಥಿರವಾದ ಹೆಚ್ಚಳ ಕಂಡುಬಂದಿರುವುದು ತಿಳಿಯುತ್ತದೆ. ಬೆಳ್ಳಿಯ ನಾಣ್ಯಗಳ ಮುದ್ರಣವಾಗಲು ಪ್ರಾರಂಭವಾಗಿದ್ದೆ ಬೆಳ್ಳಿಯ ಗಣಿಗಾರಿಕೆ ಮತ್ತು ಲೋಹಶಾಸ್ತ್ರ ತಂತ್ರಜ್ಞಾನ ಹೆಚ್ಚು ವೇಗವನ್ನು ಪಡೆದುಕೊಂಡಿತು (ತ್ರಿಪಾಠಿ, 2018). ಇದರ ಕಾರಣದಿಂದ ರಾಜಸ್ತಾನದ ಅರಾವಳಿ ಬೆಟ್ಟಗಳಲ್ಲಿ ಮೌರ್ಯ ರಾಜರ ಕಾಲದಲ್ಲಿ ದರಿಬಾ ಮತ್ತು ಅಗುಚಾ ಪ್ರದೇಶಗಳಲ್ಲಿ ಹಲವು ಕಡೆ ಗಣಿಗಳನ್ನು ಅಭಿವೃದ್ಧಿಪಡಿಸಿ ಬೆಳ್ಳಿಯನ್ನು ಉತ್ಪಾದಿಸಲಾಯಿತು.

ಜಾವರ್‌ನಲ್ಲಿರುವ ಮೋಚಿಯಾ ಮ್ಯಾಗ್ರಾದಲ್ಲಿ ಮೇವಾರ್ ರಾಜ ರಾಣಾ ಲಕ್ಷಣ್ ಸಿಂಗ್ (ಕ್ರಿ.ಶ. 1382-1397) ಆಡಳಿತದ ಕಾಲದಲ್ಲಿ ಸೀಸ-ಸತು ಜೊತೆಗೆ ಬೆಳ್ಳಿ ಮತ್ತು ಇತರ ಲೋಹಗಳ (ಬಹುಲೋಹಿಯ) ನಿಕ್ಷೇಪಗಳನ್ನು ಮರುಶೋಧಿಸಲಾಯಿತು. ಆ ಕಾಲದಲ್ಲಿಯೇ ಪರಿಶೋಧಿಸಿ ಗಣಿಗಾರಿಕೆ ಮಾಡಿ ಉತ್ಪಾದಿಸಲಾದ ಲೋಹಗಳು ಅಂದಿನ ಕಾಲದ ಆರ್ಥಿಕ ಬೆನ್ನೆಲುಬಾಗಿ ಪ್ರಮುಖ ಪಾತ್ರ ವಹಿಸಿದವು. ಪ್ರಾಚೀನ ಕಾಲದಲ್ಲಿ ಬೆಳ್ಳಿ ಗಣಿಗಾರಿಕೆಯಿಂದ ಗೆಲಿನಾ (ಬೆಳ್ಳಿಯ ಅದಿರು) ಹೊರತೆಗೆದಿರುವ ಅನೇಕ ಸ್ಥಳಗಳು ಕಂಡುಬಂದಿವೆ. ಇವುಗಳಲ್ಲಿ ಮುಖ್ಯವಾದ ಗಣಿಗಳೆಂದರೆ, ಹಿಮಾಚಲ ಪ್ರದೇಶದ ಉಚಿಚ್; ಚಂಡಿ ಡೋಂಗ್ರಿ, ಮಧ್ಯಪ್ರದೇಶ; ಬಸುವಪುರಂ ಮತ್ತು ಕೊಯಿಲಕುಂಟ್ಲಾ ಆಂಧ್ರಪ್ರದೇಶ; ಸರ್ಗಿಪಲ್ಲಿ, ಒಡಿಸಾ ಮತ್ತು ರಾಜಸ್ತಾನದ ಅಗುಚಾ, ರಾಜಪುರ-ದರಿಬಾ, ಆಜ್ಮೇರ್-ಘಗ್ರ ಮತ್ತು ಜಾವರ್ ಮುಖ್ಯವಾದವು.

ಸ್ಥಳೀಯ (ನೆಟೀವ್) ಬೆಳ್ಳಿ ಜಾವರ್ ಪ್ರದೇಶದ ಬಲರಿಯಾ ಮತ್ತು ಮೋಚಿಯಾ ಗಣಿಗಳಲ್ಲಿ ದೊರಕುತ್ತದೆ. “ಐನ್-ಐ-ಅಕ್ಬರಿ” ಪಠ್ಯದಲ್ಲಿ ಬೆಳ್ಳಿ “ಬೈರತ್ ತಾಮ್ರದ ಗಣಿ”ಯಲ್ಲಿ ಉಪ ಲೋಹವಾಗಿ ಉತ್ಪಾದನೆಯಾಗುತ್ತಿತ್ತು ಎಂಬ ಉಲ್ಲೇಖಗಳಿವೆ. ಆದರೆ ಇದೇ ಜಾವರ್ ಪ್ರದೇಶದಲ್ಲಿ ಬರೀ ಬೆಳ್ಳಿ ಉತ್ಪಾದನೆಯಾಗುವ ಗಣಿ ಕಂಡುಬಂದಿಲ್ಲ. ಜೋಧ್ವಾಸ್ ಪ್ರದೇಶದಲ್ಲಿ ಬೆಳ್ಳಿಯನ್ನು ಉತ್ಪಾದನೆ ಮಾಡಿರುವ ಕಿಟ್ಟ ಬಿದ್ದಿದೆ (ಗ್ರೋವರ್, 2004).

(ಚಿತ್ರ: ಉಚಿಚ್ ಹಳೆ ಬೆಳ್ಳಿ ಗಣಿ, ಹಿಮಾಚಲ ಪ್ರದೇಶ (ಲಾ, 2011)

(ಚಿತ್ರ: ಜೋಧ್ವಾಸ್ ಹಳೆ ಗಣಿ ಕಾರ್ಯ, ರಾಜಸ್ತಾನ, (ಎ.ಕೆ.ಗ್ರೋವರ್)

(ಚಿತ್ರ: ಜಾವರ್‌ನ ಒಂದು ಹಳೆ ಬೆಳ್ಳಿ ಗಣಿ ಕಾರ್ಯ, ರಾಜಸ್ತಾನ (ಎಂ.ಎನ್.ಮಿಶ್ರ)

(ಚಿತ್ರ: ಅಗುಚಾ ಪ್ರಾಚೀನ ಬೆಳ್ಳಿ ಕುಲುಮೆ (ಕ್ರಾಡಾಕ್ ಮತ್ತು ಇತರರು, 1989)

(ಚಿತ್ರ: ಅಗುಚಾ ಹಳೆ ತೆರೆದ ಗಣಿ (ಎ.ಕೆ.ಗ್ರೋವರ್)

ಹರಪ್ಪನ ನಾಗರಿಕ ತೊಟ್ಟಿಲುಗಳಲ್ಲಿ ಬೆಳ್ಳಿಯ ಆಭರಣಗಳು ಮತ್ತು ಪಾತ್ರೆಗಳನ್ನು ಸಂಗ್ರಹ ಮಾಡಲಾಗಿ ಅವುಗಳಲ್ಲಿ ಕೆಲವು ಮುರಿದ ಆಭರಣಗಳು ಮತ್ತು ಕರಗಿಸಿದ ಚಿನ್ನ ಮತ್ತು ಬೆಳ್ಳಿಯ ಉಂಡೆಗಳೂ ಇದ್ದವು. ಇವು ನಿಸ್ಸಂದೇಹವಾಗಿ ಹಳೆ ಆಭರಣಗಳನ್ನು ಕರಗಿಸಿ ಹೊಸ ಆಭರಣಗಳನ್ನು ತಯಾರಿಸುವುದನ್ನು ತೋರಿಸುತ್ತದೆ. ಇದರಿಂದ ಹರಪ್ಪನ ಕಾಲದಲ್ಲಿ ಚಿನ್ನ ಮತ್ತು ಬೆಳ್ಳಿಯ ಲೋಹಶಾಸ್ತ್ರವು ಸಾಕಷ್ಟು ವಿಕಸನಗೊಂಡಿರುವುದರ ಜೊತೆಗೆ ಸೊಗಸಾದ ಆಭರಣಗಳನ್ನು ತಯಾರು ಮಾಡಲಾಗುತ್ತಿತ್ತು ಎನ್ನುವುದನ್ನು ಸೂಚಿಸುತ್ತದೆ.

ಮೌರ್ಯರ ಕಾಲದ ನಾಣ್ಯಗಳು, ವಿಶೇಷವಾಗಿ ಬೆಳ್ಳಿಯ ನಾಣ್ಯಗಳು ತಾಮ್ರದ ನಾಲ್ಕನೆ ಒಂದು ಭಾಗದಿಂದ ಮಿಶ್ರಣಗೊಂಡಿರುವ ಲೋಹದ ನಾಣ್ಯಗಳಾಗಿವೆ. ಇದರಿಂದ ಆ ಪ್ರದೇಶದಲ್ಲಿ ಬೆಳ್ಳಿಯ ಗಣಿಗಾರಿಕೆ ನಡೆದಿರುವುದನ್ನು ಬಲವಾಗಿ ಸೂಚಿಸುತ್ತದೆ. ಅಂದರೆ ಕ್ರಿ.ಪೂ. ಮೊದಲ ಸಹಸ್ರಮಾನದ ಮಧ್ಯಭಾಗದಲ್ಲಿಯೇ ರಾಜಸ್ತಾನದಲ್ಲಿ ಬೆಳ್ಳಿ ಗಣಿಗಾರಿಕೆ ಆರಂಭಗೊಂಡಿತ್ತು ಎನ್ನುವುದು ದೃಢಪಟ್ಟಿದೆ.

(ಚಿತ್ರ: ರಾಜಸ್ತಾನ ದರಿಬಾ ಗಣಿಯ ಸುರಂಗದ ಸ್ಟೋಪ್ ಒಂದರಲ್ಲಿ ನೀರು ತುಂಬಿಕೊಂಡಿರುವುದು)

(ಚಿತ್ರ: ಅದೇ ದರಿಬಾ ಗಣಿಯ ಸುರಂಗದ ಸ್ಟೋಪ್ ಒಂದರಲ್ಲಿ ಏಣಿ ಹಾಕಿಕೊಂಡು ಬೆಳ್ಳಿ ಅದಿರನ್ನು ತೆಗೆಯುತ್ತಿರುವುದು (Picture courtesy by P. T. Craddock)

ರಾಜಸ್ತಾನದ ದರಿಬಾ ಮತ್ತು ಅಗುಚಾದಲ್ಲಿ ಗಟ್ಟಿಯಾದ ಕ್ಯಾಲ್ಕ್ ಸಿಲಿಕೇಟ್ ಶಿಲೆಗಳು ಮತ್ತು ಮೃದುವಾದ ಗ್ರ್ಯಾಫೈಟ್ ಮೈಕಾ ಶಿಫ್ಟ್‌ಗಳಲ್ಲಿ ಬೆಳ್ಳಿಯ ಅದಿರು ಖನಿಜೀಕರಣವಾಗಿ ರೂಪುಗೊಂಡಿದೆ. ಈ ಪ್ರದೇಶದಲ್ಲಿ ಗಣಿ ಮಾಡಿ ಅದಿರನ್ನು ತೆಗೆಯುವುದು ಸುಲಭವಾದರೂ ಸಂಕೀರ್ಣ ಖನಿಜ ಮಿಶ್ರಣದಿಂದ ಲೋಹಗಳನ್ನು ಕರಗಿಸಿ ಪ್ರತ್ಯೇಕಿಸುವುದು ಕಷ್ಟದ ಕೆಲಸವಾಗಿತ್ತು. ರಾಂಪುರದಲ್ಲಿನ ಪ್ರಾಥಮಿಕ ಅದಿರು ಕಬ್ಬಿಣ, ಸತು ಮತ್ತು ಸೀಸದ ಸಲ್ಫೈಡ್‌ಗಳೊಂದಿಗೆ ಮಿಶ್ರಣಗೊಂಡಿದೆ. ಇದೇ ರೀತಿ ಹಲವಾರು ಖನಿಜ/ಲೋಹಗಳ ಮಿಶ್ರಣ ನಿಸರ್ಗದಲ್ಲಿ ದೊರಕುವುದು ಸರ್ವೇಸಾಮಾನ್ಯ. ಲೋಹಗಳನ್ನು ಪ್ರತ್ಯೇಕಿಸುವುದಕ್ಕೆ ಆಧುನಿಕ ಲೋಹಶಾಸ್ತ್ರದಲ್ಲಿ ಹೊಸಹೊಸ ಅವಿಷ್ಕಾರಗಳು ನಡೆಯುತ್ತಲೇ ಇರುತ್ತವೆ. ಚಿನ್ನ ಕೂಡ ಅನೇಕ ಖನಿಜಗಳೊಂದಿಗೆ ಮಿಶ್ರಣಗೊಂಡಿದ್ದು ಪ್ರತ್ಯೇಕಿಸಲು ಲೋಹಶಾಸ್ತ್ರದಲ್ಲಿ ಹಲವು ರೀತಿಯ ಸಂಕೀರ್ಣವಾದ ತಂತ್ರಜ್ಞಾನ ಬಳಸಲಾಗುತ್ತದೆ.

ಅಗುಚಾದಲ್ಲಿ ಅದಿರು ಫ್ರೀಬರ್ಗೈಟ್‌ನ (ಹೆಚ್ಚು ಗಟ್ಟಿ ಅದಿರು) ಸಂಕೀರ್ಣ ಮಿಶ್ರಣವಾಗಿದ್ದು ಇದನ್ನು ಬೆಳ್ಳಿಯ ಪ್ರಮುಖ ಮೂಲವೆಂದು ಪರಿಗಣಿಸಲಾಗಿದೆ. ದರಿಬಾ ಮತ್ತು ಅಗುಚಾ ಎರಡೂ ಗಣಿಗಳಲ್ಲಿ ಮೇಲ್ಮೈಯಲ್ಲಿ ದೊರಕುವ ನಿಕ್ಷೇಪಗಳು ಶಿಥಿಲೀಕರಣಗೊಂಡು ಕಬ್ಬಿಣ ಅಂಶದಿಂದ ಮಿಶ್ರಣಗೊಂಡಿವೆ. ದರಿ ಬಾದ ಹಲವಾರು ಗಣಿಗಳ ಮೇಲ್ಮೈ ನಿಕ್ಷೇಪಗಳಲ್ಲಿ ಗ್ರ್ಯಾಫೈಟ್ ಮೈಕಾ ಶಿಸ್ಟ್‌ನಲ್ಲಿ ಬೆಳ್ಳಿ ದೊರಕುತ್ತದೆ. ಇದೇ ರೀತಿಯ ಗಣಿಗಳು ಅಗುಚಾ ಪ್ರದೇಶದಲ್ಲೂ ಕಂಡುಬಂದಿವೆ. ಈ ಗಣಿಗಳು ಬಹುಶಃ ಪ್ರಾಚೀನ ಭಾರತದ ಆರಂಭಿಕ ಗಣಿ ಕಾರ್ಯಗಳಾಗಿದ್ದು ನಂತರ ಅವು ಆಳದ ಭೂಗತ ಗಣಿಗಳಾಗಿ ಮಾರ್ಪಟ್ಟಿವೆ.

ಅಗುಚಾದಲ್ಲಿ ಇತ್ತೀಚೆಗೆ ತೆರೆದ ಗಣಿಗಳನ್ನು ಹೊಸದಾಗಿ ಮಾಡುತ್ತಿದ್ದಾಗ ಮೌರ್ಯರ ಕಾಲದಲ್ಲಿ ನಡೆದಿರುವ ಸಂಕೀರ್ಣ ಗಣಿಗಳ ಸರಣಿ ಕಂಡುಬಂದಿತು. ಗಣಿಗಳ ಒಳಗೆ ವಾತಾಯನ (ಗಾಳಿಯ) ವ್ಯವಸ್ಥೆ, ನೀರನ್ನು ಮೇಲಕ್ಕೆ ಹಾಯುವುದು ಮತ್ತು ಆಳದಲ್ಲಿನ ಅದಿರನ್ನು ತೆಗೆಯುವ ಗಣಿಗಾರಿಕಾ ವಿಧಾನಗಳು ಅತ್ಯಾಧುನಿಕ ಶ್ಯಾಫ್ಟ್‌ಗಳ ವಿನ್ಯಾಸದೊಂದಿಗೆ ಕಂಡುಬಂದಿವೆ. ಕ್ರಾಡಾಕ್ ಮತ್ತು ಇತರರು 1989ರಲ್ಲಿ ಆರ್ಕಿಯೂ ಲೋಹಶಾಸ್ತ್ರೀಯ ಅಧ್ಯಯನ ನಡೆಸಿದಾಗ ಚಿನ್ನ ಅಥವಾ ಬೆಳ್ಳಿಯನ್ನು ಸಂಸ್ಕರಿಸುವ ವಕ್ರೀಕಾರಕ ಕುಡಿಕೆ ಅಥವಾ ಪುಡಿ ಮಾಡಿದ ಮೂಳೆಯ ಬೂದಿಯಿಂದ ತಯಾರಿಸಿದ ಸಣ್ಣಸಣ್ಣ ರಂದ್ರಗಳಿರುವ ಕುಡಿಕೆಗಳು ದೊರಕಿದವು. ಮೌಲ್ಯಮಾಪನದ ಸಮಯದಲ್ಲಿ ಇದರಲ್ಲಿ ಸೀಸದ ಗುಂಡಿಯಿಂದ ಚಿನ್ನ ಮತ್ತು ಬೆಳ್ಳಿಯನ್ನು ಪಡೆಯಲಾಗುತ್ತಿತ್ತು. ಜೊತೆಗೆ ಕುಲುಮೆಗಳು, ಮಣ್ಣಿನ ಸಣ್ಣಸಣ್ಣ ಕಂಬಗಳ ಜೊತೆಗೆ ಸಮತಟ್ಟಾದ ತಳಗಳು ಕಂಡುಬಂದಿವೆ.

ಪುರಾತತ್ತ್ವಶಾಸ್ತ್ರದ ಅಧ್ಯಯನಗಳ ಆಧಾರದ ಮೇಲೆ ರಾಂಪುರ-ಆಗುಚಾದ ಗಣಿಗಾರಿಕೆಯನ್ನು ಮೂರು ಅವಧಿಗಳಲ್ಲಿ ವಿಭಾಗಿಸಲಾಗಿದೆ ಎಂದು ತಿಳಿದುಬರುತ್ತದೆ. ಮೌರ್ಯರ ಪೂರ್ವ ಕಾಲದ ಅವಧಿಯಿಂದ ಮೌರ್ಯ ರಾಜರ ಆಡಳಿತ ಕಾಲದವರೆಗೆ, ಕುಶಾಣರ ಕಾಲದಿಂದ ಸುಂಗರ ಕಾಲದವರೆಗೆ ಮತ್ತು ಗುಪ್ತರ ಕಾಲ (ತ್ರಿವೇದಿ, 1982).

ಉಪಉತ್ಪನ್ನ ಲೋಹವಾಗಿ ದೊರಕುವ ಬೆಳ್ಳಿ: ಲ್ಯಾಟಿನ್ ಭಾಷೆಯಲ್ಲಿ ಬೆಳ್ಳಿಯನ್ನು “ಅರ್ಜೆಂಟಮ್” ಎಂದು ಕರೆಯಲಾಯಿತು. ಇದು ಪ್ರೋಟೋ-ಇಂಡೋ-ಯುರೋಪಿಯನ್‌ನಲ್ಲಿ, ಹೊಳೆಯುವ ಅಥವಾ ಬಿಳಿ ಬಣ್ಣದಿಂದ ಬಂದಿರುವ ಪದವಾಗಿದೆ. ಇದರ ಪರಮಾಣು ಸಂಖ್ಯೆ 47. ಬೆಳ್ಳಿ ಮೃದುವಾದ, ಬಿಳಿ, ಹೊಳಪಿನ ಸ್ಥಿತ್ಯಂತರ ಲೋಹ. ಬೆಳ್ಳಿ ಯಾವುದೇ ಲೋಹಕ್ಕಿಂತ ಅತ್ಯುನ್ನತ ವಿದ್ಯುತ್ ವಾಹಕತೆ, ಉಷ್ಣ ವಾಹಕತೆ ಮತ್ತು ಪ್ರತಿಫಲವನ್ನು ಪ್ರದರ್ಶಿಸುತ್ತದೆ. ಬೆಳ್ಳಿ ಶುದ್ಧ, ಮುಕ್ತ ಮೂಲಧಾತು ರೂಪದಲ್ಲಿ (ಸ್ಥಳೀಯ ಬೆಳ್ಳಿ) ಭೂಮಿಯ ಹೊರಪದರಲ್ಲಿ ಚಿನ್ನ ಮತ್ತು ಇತರ ಲೋಹಗಳೊಂದಿಗೆ ಮಿಶ್ರಲೋಹವಾಗಿ ಮತ್ತು ಮುಖ್ಯವಾಗಿ ಬೆಳ್ಳಿಯ (ಅರ್ಜೆಂಟಿಟ್ ಮತ್ತು ಕ್ಲೋರ್ಗೈಟ್) ಅದಿರುಗಳ ಮೂಲಕ ದೊರಕುತ್ತದೆ. ಬೆಳ್ಳಿ ಹೆಚ್ಚಾಗಿ ತಾಮ್ರ, ಚಿನ್ನ, ಸೀಸ ಮತ್ತು ಸತು ಗಣಿಗಳಲ್ಲಿ ಉಪುಉತ್ಪನ್ನವಾಗಿ ದೊರೆಯುತ್ತದೆ.

ಬೆಳ್ಳಿಯನ್ನು ಬಹಳ ಹಿಂದಿನಿಂದಲೂ ಚಿನ್ನ, ವಜ್ರಗಳ ನಂತರ ಅಮೂಲ್ಯ ಲೋಹವೆಂದು ಮೌಲ್ಯೀಕರಿಸಲಾಗಿದೆ. ಬೆಳ್ಳಿಯನ್ನು ಅನೇಕ ದೇಶಗಳ ಬುಲಿಯನ್ ನಾಣ್ಯಗಳಲ್ಲಿ, ಕೆಲವೊಮ್ಮೆ ಚಿನ್ನದೊಂದಿಗೆ ಬಳಸಲಾಗುತ್ತದೆ. ಬೆಳ್ಳಿಯ ಶುದ್ಧತೆಯನ್ನು ಸಾಮಾನ್ಯವಾಗಿ ಪ್ರತಿ-ಮಿಲ್ಲೆ ಆಧಾರದ ಮೇಲೆ ಅಳೆಯಲಾಗುತ್ತದೆ. ಉದಾಹರಣೆಗೆ 94% ಶುದ್ಧ ಬೆಳ್ಳಿ ಮಿಶ್ರಲೋಹವನ್ನು 0.940 ಶುದ್ಧ ಎಂದು ಹೇಳಲಾಗುತ್ತದೆ. ಪ್ರಾಚೀನ ಕಾಲದಲ್ಲಿ ಬಳಸಲಾದ ಏಳು ಲೋಹಗಳಲ್ಲಿ ಬೆಳ್ಳಿ ಹೆಚ್ಚಿನ ಮಾನವ ನಾಗರಿಕ ಸಂಸ್ಕೃತಿಗಳಲ್ಲಿ ಶಾಶ್ವತ ಪಾತ್ರವನ್ನು ವಹಿಸಿದೆ.

ಆಭರಣಗಳು, ಕರೆನ್ಸಿ ಮತ್ತು ಹೂಡಿಕೆ ಮಾಧ್ಯಮವಾಗಿ (ನಾಣ್ಯಗಳು ಮತ್ತು ಬುಲಿಯನ್ ಹೊರತುಪಡಿಸಿ), ಬೆಳ್ಳಿಯನ್ನು ಸೌರ ಫಲಕಗಳು, ನೀರಿನ ಸೋಸುವಿಕೆ, ಹೆಚ್ಚಿನ ಮೌಲ್ಯದ ಟೇಬಲ್‌ವೇರ್ ಮತ್ತು ಪಾತ್ರೆಗಳು, ವಿದ್ಯುತ್ ಸಂಪರ್ಕಗಳು ಮತ್ತು ವಾಹಕಗಳಲ್ಲಿ ವಿಶೇಷ ಕನ್ನಡಿಗಳು, ಕಿಟಿಕಿ ಲೇಪನಗಳಲ್ಲಿ, ರಾಸಾಯನಿಕ ಪ್ರತಿಕ್ರಿಯೆಗಳ ವೇಗವರ್ಧಕಗಳಲ್ಲಿ ಮತ್ತು ಮಿಠಾಯಿಗಳಲ್ಲಿ ಬಳಸಲಾಗುತ್ತದೆ. ಬೆಳ್ಳಿ ಸಂಯುಕ್ತಗಳನ್ನು ಛಾಯಾಚಿತ್ರ ಮತ್ತು ಎಕ್ಸ್-ರೇ ಚಿತ್ರಗಳಲ್ಲಿ ಮತ್ತು ಇನ್ನೂ ಅನೇಕ ಕಡೆ ಬಳಸಲಾಗುತ್ತದೆ.

(ಬೆಳ್ಳಿಯ ಅದಿರು (printers image)

About The Author

ಡಾ. ಎಂ. ವೆಂಕಟಸ್ವಾಮಿ

ಡಾ. ವೆಂಕಟಸ್ವಾಮಿ ಇಂದಿನ ಕೆ.ಜಿ.ಎಫ್. ತಾಲ್ಲೂಕು, ಕೋಲಾರ ಜಿಲ್ಲೆಯವರು. ಪ್ರ.ದ.ಕಾಲೇಜ್‌ನಲ್ಲಿ ಬಿ.ಎಸ್ಸಿ,. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ(ಭೂವಿಜ್ಞಾನ) ಎಂ.ಎಸ್ಸಿ. ಮುಗಿಸಿದ್ದಾರೆ. ೧೯೮೫ರಲ್ಲಿ ಲಕ್ನೋದಲ್ಲಿ ಭೂವಿಜ್ಞಾನಿಯಾಗಿ(ಯು.ಪಿ.ಎಸ್.ಸಿ. ಮೂಲಕ) ಸೇರಿಕೊಂಡು ೨೦೧೫ರಲ್ಲಿ ಮಹಾರಾಷ್ಟ್ರದ ನಾಗ್ಪುರದಲ್ಲಿ ಉಪ ಮಹಾನಿರ್ದೇಶಕರಾಗಿ ನಿವೃತ್ತಿ ಹೊಂದಿದ್ದಾರೆ. "ಕೋಲಾರ ಚಿನ್ನದ ಗಣಿಗಳು" ಮಹಾಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಡಿ.ಲಿಟ್. ದೊರಕಿದೆ. ಕಳೆದ ನಾಲ್ಕೂವರೆ ದಶಕಗಳಿಂದಲೂ ಇವರು ಸಾಹಿತ್ಯಸೇವೆಯಲ್ಲಿ ತೊಡಗಿಕೊಂಡಿದ್ದು, ಈಶಾನ್ಯ ರಾಜ್ಯಗಳ ಸಾಹಿತ್ಯವನ್ನು ಕನ್ನಡಕ್ಕೆ ಮೊದಲು ತಂದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ. ಇವರ ಕೃತಿಗಳು ನಾಡಿನ ಪ್ರಮುಖ ಪ್ರಕಾಶನಗಳಲ್ಲಿ ಒಟ್ಟು ೩೭ ಕೃತಿಗಳು ಪ್ರಕಟಗೊಂಡಿವೆ. ೨೦೧೯ರಲ್ಲಿ ಬಂಗಾರಪೇಟೆ ತಾಲ್ಲೂಕಿನ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆಯನ್ನು ವಹಿಸಿದ್ದರು.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ