Advertisement
ಸುಧಾ ಆಡುಕಳ ಬರೆದ ಈ ಭಾನುವಾರದ ಕತೆ

ಸುಧಾ ಆಡುಕಳ ಬರೆದ ಈ ಭಾನುವಾರದ ಕತೆ

ಹೇಳಿಕೇಳಿ ದೊಡ್ಡವರ ಮನೆಯ ಮೂರೆಳೆಯ ಸರ ನಾನು. ಎಲ್ಲರ ಮದುವೆಯಲ್ಲೂ ಊರಿಗೆ ಮೊದಲು ಮದುವಣಗಿತ್ತಿಯನ್ನು ನೋಡುವ ಯೋಗ ನನ್ನದಾಗಿತ್ತು. ಚಿನ್ನದ ಬಟ್ಟಲಿನಲ್ಲಿ ಪಟ್ಟೆ ಸೀರೆಯೊಂದಿಗೆ ನನ್ನನ್ನೂ ಇಟ್ಟು ಮದುವಣಗಿತ್ತಿಗೆ ಕೊಡುತ್ತಿದ್ದುದು ವಾಡಿಕೆ. ಹೊಸ ಮದುವಣಗಿತ್ತಿಯ ಕತ್ತಿನಲ್ಲಿ ಕುಳಿತು ಎಷ್ಟೆಲ್ಲ ಪುಳಕಗಳನ್ನು ಅನುಭವಿಸಿರುವೆ ನಾನು. ಮದುಮಗ ಹಾರ ಹಾಕಲು, ತಾಳಿಕಟ್ಟಲು ಹುಡುಗಿಯ ಕತ್ತನ್ನು ಬಳಸಿದಾಗ ಅವಳೆದೆಯಲ್ಲಿ ಮಿಡಿಯುವ ಸಣ್ಣ ಕಂಪನ ನನ್ನವರೆಗೂ ಹರಡುತ್ತಿತ್ತು. ಪಾಲು, ಪಟ್ಟಿಯ ಗೊಂದಲದಲ್ಲಿ ನನ್ನನ್ನು ಪಡೆಯಲು ಮಾರಾಮಾರಿಯೇ ನಡೆದು ಕೊನೆಗೊಮ್ಮೆ ಈ ಮನೆಯ ಪಾಲೆಂದು ಘೋಷಣೆಯಾಯಿತು.
ಸುಧಾ ಆಡುಕಳ ಬರೆದ ಈ ಭಾನುವಾರದ ಕತೆ “ಪಾಲು” ನಿಮ್ಮ ಓದಿಗೆ

ನಾಲ್ಕಾರು ದಿನಗಳಿಂದ ಮನೆಯ ಸಂಧಿಸಂಧಿಯಲ್ಲೂ ಕಸಬರಿಗೆಗಳು ತೂರಿಬಂದು ಕಸ, ಬಲೆಗಳೆಲ್ಲವನ್ನೂ ಎಳೆದೆಳೆದು ತೆಗೆದಿದ್ದವು. ಎಂದೋ ಮೇಲೇರಿ ಕುಳಿತು ಮರೆತೇಹೋಗಿದ್ದ ಹಳೆಯ ಸಾಮಾನುಗಳೆಲ್ಲವೂ ಹೊರಬಂದು ಅಂಗಳ ಸೇರಿದ್ದವು. ನೀರ ಮುಖನೋಡದೇ ದಶಕಗಳೇ ಸಂದಿದ್ದ ಕಂಚುತಾಮ್ರಗಳೆಲ್ಲವೂ ಹುಣಸೆಹುಳಿಯನ್ನು ಮೈಗೆ ಮೆತ್ತಿಸಿಕೊಂಡು ತಮ್ಮ ಕಲೆಯನ್ನೆಲ್ಲ ಕಳೆದು ಥಳಥಳನೆ ಹೊಳೆಯತೊಡಗಿದ್ದವು. ಹಾಗೆ ಹೊರಬಂದ ವಸ್ತುಗಳೆಲ್ಲವೂ ಕೋಣೆಯೊಂದರಲ್ಲಿ ರಾಶಿಯಾಗಿ ಕುಳಿತು ಇನ್ನೇನು ದಿನವೊಂದರಲ್ಲಿ ಮನೆತುಂಬಾ ನೆಂಟರು ತುಂಬಿ ತುಳುಕುವರೆಂದು ಎಣಿಸಿದ್ದರೆ ಎಲ್ಲರ ಎಣಿಕೆಯೂ ಸುಳ್ಳಾಗುವಂತೆ ಮನೆಗೆ ಬೀಗಜಡಿದು ಬಂದವರು ಬಂದಹಾಗೆಯೇ ಮರಳಿ ಹೋಗಿದ್ದರು. ಹೋಗುವಾಗ ಅವರಾಡಿದ ಮಾತುಗಳಿಂದಲೇ ಹಳೆಯ ಅನುಭವಿ ಪಾತ್ರೆಗಳಿಗೆ ಪರಿಸ್ಥಿತಿಯ ಅರಿವಾಗಿ ಇನ್ನಷ್ಟು ಗಂಭೀರವಾದ ಮುಖಮುದ್ರೆಯೊಂದಿಗೆ ಸುತ್ತಲೂ ನೋಡತೊಡಗಿದವು. ಇದ್ಯಾವುದರ ಪರಿವೆಯಿಲ್ಲದ ಅಪ್ಪಟ ಸ್ಟೀಲ್ ಪಾತ್ರೆಗಳು ತಮ್ಮಷ್ಟಕ್ಕೆ ತಾವೇ ಅದೇನನ್ನೋ ಪಿಸುಗುಟ್ಟುತ್ತಾ ನಗುತ್ತಿದ್ದವು. ಅಷ್ಟರಲ್ಲಿ ಮೂಲೆಯಲ್ಲಿ ಕುಳಿತಿದ್ದ ತಾಮ್ರದ ಕೊಡವೊಂದು ಮೆಲ್ಲನೆ ದೂರದಲ್ಲಿರುವ ದಳ್ಳೆಯನ್ನು ಕೇಳಿತು, “ಹಾಗಿದ್ದರೆ ಇದು ಮೊದಲಿನದೇ ಕಥೆಯೇನೋ? ಮತ್ತೆ ನಮ್ಮನ್ನೆಲ್ಲ ಪಾಲು ಮಾಡುತ್ತಾರೆ.” ದಳ್ಳೆ ತನ್ನ ಕಂಚಿನ ಕಂಠದಲ್ಲಿ ಹೇಳಿತು, “ಹೌದನಿಸುತ್ತದೆ. ಮತ್ತೆ ಹಿಂದಿನದೆಲ್ಲವೂ ಪುನರಾವರ್ತನೆಯಾಗದಿದ್ದರೆ ಸಾಕು.”

ವಿಷಯವೇನೋ ಗಹನವಾದದ್ದೇ ಎಂದು ಅರಿವಾದೊಡನೆ ಎಲ್ಲ ಪಾತ್ರೆಗಳೂ ತಮ್ಮ ತಮ್ಮ ಮಾತುಗಳನ್ನು ನಿಲ್ಲಿಸಿ ದಳ್ಳೆಯೆಡೆಗೆ ನೋಡತೊಡಗಿದವು. ಈಗೊಂದು ತಿಂಗಳ ಹಿಂದಿನವರೆಗೂ ಎಲ್ಲವೂ ಸರಿಯಾಗಿಯೇ ಇತ್ತು. ಬ್ರಹ್ಮಾಂಡದಂತಹ ಮನೆಯೊಳಗೆ ಹಳೆಯ ಕಾಲದ ಪಳಯುಳಿಕೆಯಂತೆ ಆರಡಿಯ ಮೇಲೆರಡಿಂಚು ಎತ್ತರದ ಆ ಮನುಷ್ಯ ಅತ್ತಲಿಂದಿತ್ತ ತಿರುಗುತ್ತ, ಯಕ್ಷಗಾನದ ಹಾಡನ್ನು ಗುನುಗುತ್ತಾ, ಆಗಾಗ ಸಡಿಲಗೊಂಡ ಮದ್ದಲೆಯ ಮೇಲೆ ಕೈಯ್ಯಾಡಿಸುತ್ತ ಇಡಿಯ ರಂಗವನ್ನು ಒಬ್ಬನೇ ನಿರ್ವಹಿಸುವ ಏಕವ್ಯಕ್ತಿ ನಾಟಕದ ನಟನಂತೆಯೇ ಮನೆಯನ್ನು ಜೀವಂತವಾಗಿಟ್ಟಿದ್ದ. ಇತ್ತೀಚೆಗೆ ತಮ್ಮೆಡೆಗೆ ಚಾಚುವ ಅವನ ಕೈಬೆರಳುಗಳಲ್ಲಿರುವ ಕಂಪನವನ್ನು ಕೆಲವು ಪಾತ್ರೆಗಳು ಅನುಭವಿಸಿದ್ದವು. ಕೆಲವೊಮ್ಮೆ ಡಬ್ಬಗಳು ತಮ್ಮನ್ನೆಲ್ಲಿ ಬೀಳಿಸುವನೇನೋ ಎಂಬ ಹೆದರಿಕೆಯಲ್ಲಿ ತಂದೆಯ ಹೆಗಲೇರಿದ ಮಗುವಿನಂತೆಯೇ ಅವನನ್ನು ಅವುಚಿಕೊಂಡಿದ್ದವು. ಆದರೂ ಅವನು ಯಾರೆದುರೂ ಏನೊಂದನ್ನೂ ತೋರಿಸಿಕೊಂಡವನಲ್ಲ. ಮಕ್ಕಳು ಮನೆಗೆ ಬರುವರೆಂದರೆ ಬಸ್ ನಿಲ್ದಾಣಕ್ಕೆ ಹೋಗಿ ಕಾದುನಿಂತು ಅವರ ಕೈಚೀಲಗಳನ್ನೆಲ್ಲ ತನ್ನ ತೋಳಿಗೇರಿಸಿಕೊಂಡು ನಿಧಾನ ಹೆಜ್ಜೆಯಿಡುತ್ತ ಬರುವವನೆ. ಆಟೋದಲ್ಲಿ ಕೆಲವೇ ನಿಮಿಷಗಳಲ್ಲಿ ಮನೆಸೇರಬಹುದಾದರೂ ಉದ್ದಕ್ಕೆ ಮನೆಗಳ ಸಾಲಿನ ನಡುವೆ ಹಾದು ಬರುವಾಗ ಎಲ್ಲರಿಗೂ ತನ್ನ ಮಕ್ಕಳು, ಮೊಮ್ಮಕ್ಕಳ ಪರಿವಾರದೊಂದಿಗೆ ಸಾಗುವ ತನ್ನ ಖುಶಿಯನ್ನು ಹಂಚುವ ಅವನ ಪುಟ್ಟ ಆಸೆಗೆ ತಣ್ಣೀರೆರಚಲಾರದೇ ಮಕ್ಕಳೂ ಅವನೊಂದಿಗೆ ಕಾಲ್ನಡಿಗೆಯಲ್ಲೇ ಮೆರವಣಿಗೆ ಹೊರಡುತ್ತಿದ್ದರು.

ಮಕ್ಕಳು ಮನೆಗೆ ಬಂದ ಮರುದಿನದಿಂದಲೇ ಊರಿನಲ್ಲಿರುವ ಎಲ್ಲ ಅಂಗಡಿಗಳ ಮುಂಗಟ್ಟುಗಳು ಅವನ ಪುಟ್ಟ ಮೊಮ್ಮಕ್ಕಳ ಹೆಜ್ಜೆಯೂರಿಸಿಕೊಂಡು ಪಾವನವಾಗುತ್ತಿದ್ದವು. ತಮ್ಮೂರಿನ ರಾಕ್ಷಸಾಕಾರದ ಮಾಲ್ ಗಳನ್ನು ನೋಡಿ ಬೇಸತ್ತಿದ್ದ ಮಕ್ಕಳಿಗೆ ಗೂಡಂಗಡಿಗಳು ಅಜ್ಜನೆಂಬ ಜಾದೂಗಾರ ಹೇಳಿದ್ದನ್ನು ಹೊರತೆಗೆದು ಕೊಡುವ ಜಾದೂ ಪೆಟ್ಟಿಗೆಯಂತೆ ಕಾಣುತ್ತಿದ್ದವು. ಹೊಸಕಾಲದ ತಿಂಡಿಗಳೆದಂರೆ ಆರೋಗ್ಯ ಕೆಡಿಸುವ ಕೆಡುಕುಗಳೆಂಬಂತೆ ನೋಡುವ ತಮ್ಮ ಅಮ್ಮಂದಿರಿಗಿಂತ ಅವುಗಳನ್ನೆಲ್ಲ ತಮ್ಮಂತೆಯೇ ಆಸೆಯಿಂದ ಚಪ್ಪರಿಸಿ ತಿನ್ನುವ ಅಜ್ಜ ಅವರೆಲ್ಲರಿಗೂ ಸ್ನೇಹಿತನಂತೆ ಕಾಣುತ್ತಿದ್ದ. ಮಕ್ಕಳು, ಮೊಮ್ಮಕ್ಕಳು ಬಂದಾಗಲೆಲ್ಲ ಈ ಯಜಮಾನ ಮತ್ತೆ ತನ್ನ ವೈಭವದ ದಿನಗಳಿಗೆ ಮರಳುತ್ತಿದ್ದ. ತನ್ನ ಬಂಧುಗಳನ್ನೆಲ್ಲ ಕರೆಕರೆದು ಬಡಿಸುತ್ತಿದ್ದ. ಬರಡಾದ ನೆಲ ಸೋನೆಮಳೆಯಿಂದ ತೊಯ್ದಂತೆ ಇಡಿಯ ಮನೆಯ ವಾತಾವರಣ ಸಂಬಂಧಗಳ ಬೆಸುಗೆಯಿಂದ ತೇವಗೊಳ್ಳುತ್ತಿತ್ತು. ಮತ್ತೆ ಎಲ್ಲರೂ ಅವರವರ ಮನೆಗೆ ಹೊರಟರೆ ಯಜಮಾನನ ಏಕಾಂತವಾಸ ಪ್ರಾರಂಭವಾಗುತ್ತಿತ್ತು. ಹತ್ತು ವರ್ಷಗಳ ಹಿಂದೆ ಹೆಂಡತಿಯನ್ನು ಕಳಕೊಂಡಾಗಿನಿಂದಲೂ ದಿನಗಳು ಕಳೆಯುತ್ತಿದ್ದುದೇ ಹೀಗೆ.

ಅದೊಂದು ದಿನ ಎಂದಿನಂತೆ ಸಂಜೆ ಚಹಾಕ್ಕಿಟ್ಟು ಸಕ್ಕರೆಯ ಡಬ್ಬಕ್ಕಾಗಿ ಮೇಲೆಚಾಚಿದ ಕೈಯ್ಯಿ ಅಗತ್ಯಕ್ಕಿಂತ ಹೆಚ್ಚೇ ನಡುಗಿತ್ತು. ಸಕ್ಕರೆಯ ಡಬ್ಬ ಕೈಗೆ ಬಾರದೇ ಕಾಲುಗಳು ಕುಸಿಯತೊಡಗಿದವು. ಇದ್ದಕ್ಕಿದ್ದಂತೆ ನೆಲದ ಮೇಲೆ ದೊಪ್ಪನೆ ಕುಸಿದ ಯಜಮಾನನಿಗೆ ಎಚ್ಚರವೇ ಇರಲಿಲ್ಲ. ಅಸಹಾಯಕರಾಗಿ ನೋಡುತ್ತಿದ್ದ ಪಾತ್ರೆ ಪಗಡೆಗಳೆಲ್ಲ ಕ್ಷಣಕಾಲ ಅವಾಕ್ಕಾಗಿ ಮೌನಕ್ಕೆ ಜಾರಿದ್ದವು. ಎಚ್ಚರವಾದಾಗ ಅವನು ತೊಯ್ದು ತೊಪ್ಪೆಯಾಗಿದ್ದ. ನಿಧಾನವಾಗಿ ತೆವಳುತ್ತಲೇ ತನ್ನ ಪುಟ್ಟ ಮೊಬೈಲನ್ನು ಹಿಡಿದು ಯಾರಿಗೋ ಕರೆಮಾಡಿದ್ದ. ತಾಸಿನೊಳಗೆ ಕೂ…. ಕೂ… ಎಂದು ಕೂಗುತ್ತ ವಾಹನವೊಂದು ಮನೆಯೆದುರು ಬಂದು ನಿಂತಿತ್ತು. ನಡುಗುವ ಹೆಜ್ಜೆಯಡುತ್ತ ಅದರೊಳಗೆ ಹೋದ ಮನೆಯ ಯಜಮಾನ ತಿಂಗಳುಗಟ್ಟಲೆ ಮನೆಗೆ ಬಂದಿರಲಿಲ್ಲ. ಎಲ್ಲಿಗೆ ಹೋದರೂ ವಾರ ಕಳೆಯುವುದರೊಳಗೆ ಮನೆಯಲ್ಲಿ ಹಾಜರಿ ಹಾಕುತ್ತಿದ್ದ ಮನುಷ್ಯ ತಿಂಗಳಾದರೂ ಬರದಿದ್ದಾಗಲೇ ಮನೆಯ ಹಳೆಯ ಸಾಮಾನುಗಳೆಲ್ಲ ತಮ್ಮ ಹಳಹಳಿಕೆಯನ್ನು ಪ್ರಾರಂಭಿಸಿದ್ದವು. ಅಂತೂ ಕೊನೆಗೊಂದು ದಿನ ಮತ್ತದೇ ಕೂ…ಕೂ… ಶಬ್ದ ಕೇಳಿತಾದರೂ ಅದರೊಳಗಿಂದ ಅವನು ನಡುಗುವ ಕಾಲುಗಳೊಂದಿಗೆ ಇಳಿಯಲೇ ಇಲ್ಲ. ಪುಟ್ಟ ಹಾಸಿಗೆಯ ಮೇಲೆ ಕಟ್ಟಿಗೆಯಂತೆ ಮಲಗಿದ್ದ ಅವನನ್ನು ಹೊತ್ತು ತಂದ ಇಬ್ಬರು ಮನೆಯೊಳಗೆ ಮಲಗಿಸಿ ಮಾಯವಾಗಿದ್ದರು. ತಾಸೆರಡರಲ್ಲಿ ಇಡಿಯ ಮನೆ ಸಂಬಂಧಿಕರ ಅಳು, ಶೋಕ, ಗಲಾಟೆಯಿಂದ ತುಂಬಿಹೋಗಿತ್ತು. ಎಲ್ಲರ ಬಾಯಲ್ಲೂ ಅವನದೇ ಗುಣಗಾನ. ಮತ್ತೆ ನಾಲ್ವರ ಹೆಗಲೇರಿದ ಯಜಮಾನ ಮರಳಿ ಬಾರದ ಲೋಕಕ್ಕೆ ಹೋಗಿಯೇಬಿಟ್ಟಿದ್ದ. ಇದೆಲ್ಲ ಕಳೆದು ಹದಿನೈದು ದಿನಗಳಾದಮೇಲೆ ಮತ್ತೀಗ ಎಲ್ಲ ಹಳೆಯ ಪಾತ್ರೆ ಪಗಡೆಗಳು ಹೊರಬಂದು ಕೊಠಡಿಯಲ್ಲಿ ಕುಳಿತಿದ್ದವು.

ಪಾಲು, ಪಟ್ಟಿ ಇದ್ಯಾವುದರ ಪರಿವೆಯಿಲ್ಲದ ಆಧುನಿಕ ಹೊಳಪಿನ ಪಾತ್ರೆಗಳಿಗೆ ಪರಿಸ್ಥಿತಿಯ ಗಂಭೀರತೆಯ ಅರಿವಿದ್ದಂತಿರಲಿಲ್ಲ. ಅಸಲಿಗೆ ಅವುಗಳಿಗೆ ಈ ಯಜಮಾನನ ಬಗೆಗೆ ಅಷ್ಟೊಂದು ಪ್ರೀತಿಯೂ ಇರಲಿಲ್ಲ. ಅವುಗಳೆಲ್ಲ ಈ ಮನೆಗೆ ಬಂದಾಗ ಅವನ ಆರ್ಭಟ ನೋಡಬೇಕಿತ್ತು. ಕಾಲವೇ ಕೆಟ್ಟುಹೋಯಿತು ಎಂಬಂತೆ ಎಲ್ಲರೆದುರು ಹೆಂಡತಿಯನ್ನು ಹೀಯಾಳಿಸಿ ಬೈದಿದ್ದ. ಮನೆಯಲ್ಲಿರುವ ಹಿತ್ತಾಳೆ, ತಾಮ್ರದ ಪಾತ್ರೆಗಳನ್ನು ಹುಣಸೆಹಣ್ಣು, ಬೂದಿಯಿಂದ ಉಜ್ಜಿ, ಉಜ್ಜಿ ತೊಳೆದು ಸಾಕಾಗಿದ್ದ ಅವಳು ತನ್ನ ತವರಿನಲ್ಲಿರುವಂತಹ ಸ್ಟೀಲ್ ಪಾತ್ರೆಗಳನ್ನು ಹಂಬಲಿಸಿದ್ದು ಅದೆಷ್ಟು ಬಾರಿಯೊ. ಆದರೆ ಪ್ರತಿಸಲವೂ ಅವಳಿಗೆ ನಿರಾಸೆಯ ಉತ್ತರವೇ ದೊರಕಿತ್ತು. ಈ ಸಲ ಏನಾದರೂ ಮಾಡಬೇಕೆಂದು ಹಠಹಿಡಿದ ಅವಳು ಇದ್ದಬಿದ್ದ ಪುಡಿಗಾಸನ್ನೆಲ್ಲ ಒಟ್ಟುಗೂಡಿಸಿ ಒಂದಿಷ್ಟು ಪಾತ್ರೆಗಳನ್ನು ತಂದೇಬಿಟ್ಟಿದ್ದಳು. ಬಟ್ಟೆಗೆ ಹಾಕಿ ಉಳಿದ ಸೋಪಿನ ಚೂರನ್ನು ಹಾಕಿ ಮೆಲ್ಲನೆ ಉಜ್ಜಿದರೂ ಸಾಕು, ಫಳಫಳನೆ ಹೊಳೆಯುವ ಪಾತ್ರೆಗಳು ಅವನ ಕಣ್ಣನ್ನೂ ಕುಕ್ಕಿ ಇವೆಲ್ಲ ಈ ಮನೆಗೆ ಬೇಕಿತ್ತೇ? ಎಂದು ಒಂದಿಷ್ಟು ಜಂಬರ ಮಾಡಿ ಹೆಂಡತಿ ಜಗ್ಗದೇ ಇದ್ದಾಗ ಸುಮ್ಮನಾಗಿದ್ದ. ಇವನಿಷ್ಟು ಮೃದುವಾದದ್ದೇ ತನ್ನ ಅದೃಷ್ಟವೆಂದು ಅವಳು ಅನ್ನ ಬೇಯಿಸಲೂ ಹೊಳೆಯುವ ಪಾತ್ರೆಯನ್ನೇ ತಂದು ಮಣಭಾರದ ಹಳೆಯ ಪಾತ್ರೆಗಳಿಗೆಲ್ಲ ನಿವೃತ್ತಿಯನ್ನು ಘೋಷಿಸಿದ್ದಳು.

ಅವಳು ಅಕಾಲದಲ್ಲಿ ಅಗಲಿದಾಗ ನಯನಾಜೂಕಿನ ಅರಿವಿಲ್ಲದ ಈ ಯಜಮಾನ ತನ್ನ ದೊರಗು ಕೈಗಳಿಂದ ತಮ್ಮನ್ನು ಬೂದಿಯಲ್ಲಿ ಮೀಯಿಸುವಾಗ ಹೊಳೆಯುವ ಪಾತ್ರೆಗಳ ಮುಖವೆಲ್ಲಾ ಕಂದಿಹೋಗಿತ್ತು. ಶುದ್ಧ ಒರಟು ಯಜಮಾನನ ಬಗ್ಗೆ ಮೊದಮೊದಲು ಅವರಿಗೆ ಅಷ್ಟೇನೂ ಪ್ರೀತಿಯಿರಲಿಲ್ಲ. ಆದರೂ ಅವನು ಗುನುಗುವ ಯಕ್ಷಗಾನದ ಫಲಕುಗಳು, ತಮ್ಮನ್ನು ಇಡುವ ಜಾಗ ಚೂರೇಚೂರು ಬದಲಾದರೂ ಅವನಿಗಾಗುತ್ತಿದ್ದ ಚಡಪಡಿಕೆ, ತಮ್ಮಲ್ಲಿ ಒಬ್ಬರು ಕಾಣೆಯಾದರೂ ಅವನು ತೋರುವ ಕಾಳಜಿ ಎಲ್ಲವೂ ಅವರಿಗೆ ನಿಧಾನವಾಗಿ ಅವನನ್ನು ಅರ್ಥೈಸಿಕೊಳ್ಳಲು ಸಹಾಯಕವಾಗಿದ್ದವು. ಹಿರಿಯರೆಲ್ಲರ ಮುಖ ನೋಡುವಾಗ ಮುಂದೇನೋ ಅವಘಡವಿದೆಯೆಂಬುದು ಅರಿವಾಗಿ ಅವು ಕೂಡ ತಮ್ಮ ಹುಡುಗಾಟಿಕೆಯನ್ನು ಬದಿಗಿಟ್ಟು ಕೇಸರಿ ಕಾಸುವ ದಳ್ಳೆಯೊಡನೆ, “ತಾತಾ, ಮುಂದೇನು ಆಗಬಹುದು ಅಂತೀರಿ? ಯಾಕಿಷ್ಟು ಆತಂಕದಲ್ಲಿದ್ದೀರಿ?” ಎಂದು ಕಕ್ಕುಲಾತಿಯಿಂದ ವಿಚಾರಿಸತೊಡಗಿದವು.


ದಳ್ಳೆ ಹಳೆಯ ಲೋಕವೊಂದಕ್ಕೆ ಜಾರಿ ತನ್ನ ಕಥೆ ಹೇಳತೊಡಗಿತು. ಅದರ ಧ್ವನಿಯು ತೀರ ಆಳದಿಂದ ಬಂದಂತಿತ್ತು. “ಅಂದೂ ಹೀಗೆಯೇ ಒಂದು ಸಾವಾಗಿತ್ತು. ಅದೂ ಯಜಮಾನನದೆ. ಇವನ ತಂದೆಯದು. ಅಲ್ಲಿಯವರೆಗೆ ಎಲ್ಲವೂ ಸರಿಯಿತ್ತು. ಮತ್ತೆ ಶುರುವಾಯಿತು ಪಾಲುಪಟ್ಟಿಯ ಯುದ್ಧ. ಸಾಲಲ್ಲಿ ಕುಳಿತ ಪಂಚರು ಬೆಳಗಿನಿಂದ ಸಂಜೆಯವರೆಗೆ ಹೆಣಗಿದರೂ ಪಾಲಿನ ತೂಕ ಸರಿಯಾಗಲೇ ಇಲ್ಲ. ಎಲ್ಲ ಮುಗಿದರೂ ದೇವರ ಬೆಳ್ಳಿಯ ಪಾತ್ರೆಗಳು, ಕೇಸರಿ ಕಾಯಿಸುವ ದಳ್ಳೆಯ ವ್ಯಾಜ್ಯ ಮುಗಿಯುವ ಲಕ್ಷಣವೇ ಇರಲಿಲ್ಲ. ಮನೆಯ ಎಲ್ಲ ಕಾರ್ಯಗಳನ್ನು ನಡೆಸುವವರಿಗೆ ದೇವರ ಹಕ್ಕು. ಹಾಗಾಗಿ ದೇವರು, ದಳ್ಳೆ ಒಬ್ಬರಿಗೆ ಎಂಬ ಪಂಚರ ಮಾತಿಗೆ ತಲೆಕೊಡುವರು ಯಾರೂ ಇರಲಿಲ್ಲ. ದೇವರು ಬೇಕೆಂಬ ಹಿರಿಯ ಮಗ ಹತ್ತು ಸೇರಕ್ಕಿಯ ಕೇಸರಿಬಾತು ಮಾಡಿ ನೂರಾರು ಮಂದಿಗೆ ಬಡಿಸುವ ಕಾರ್ಯದ ಭಾರ ಹೊರಲಾರೆ ಎಂದು ತಲೆಯಾಡಿಸಿಯೇಬಿಟ್ಟ. ಕೋಪಗೊಂಡ ಪಂಚನೊಬ್ಬ ಕೊನೆಯಲ್ಲಿ ದಳ್ಳೆಯ ರಗಳೆಯೇ ಬೇಡವೆಂದು ಅದನ್ನು ಕಂಚುಗಾರನಿಗೆ ಮಾರುವ ವಿಷಯವೆತ್ತಿ ನನ್ನನ್ನು ಥರಗುಟ್ಟಿಸಿಬಿಟ್ಟಿದ್ದ. ಆಗ ಈ ಯಜಮಾನ ನನ್ನನ್ನು ತನ್ನ ಎದೆಗವಚಿಕೊಂಡು ಈ ಮನೆಗೆ ಕರೆತಂದ. ಕುಂದಿಲ್ಲದಂತೆ ವರ್ಷದಲ್ಲಿ ನಾಲ್ಕಾರು ಸಲ ಬಂಧುಬಳಗ ಊರಮಂದಿಯನ್ನೆಲ್ಲ ಕರೆಸಿ ಕೇಸರಿ ಮಾಡಿ ಬಡಿಸಿದ. ಇತ್ತೀಚೆಗೆ ಅವೆಲ್ಲವೂ ಸಾಧ್ಯವಾಗದಿದ್ದರೂ ನನ್ನೊಳಗಿನ ಕಲಾಯಿ ಕರಗಿ ಕಿಲುಬು ಅಂಟದಂತೆ ಕಾಪಾಡಿಕೊಂಡೇ ಇದ್ದಾನೆ. ಇನ್ನೀಗ ಮುಂದೆ ನನ್ನ ದಾರಿ ಕಂಚುಗಾರನ ಕುಲುಮೆಯೇ ಇರಬೇಕು” ದಳ್ಳೆ ತನ್ನ ಮಾತು ಮುಗಿಸಿ ದೀರ್ಘ ನಿಟ್ಟುಸಿರೊಂದನ್ನು ಬಿಟ್ಟಿತು. ಮಾತು ಮುಗಿಯುವುದನ್ನೇ ಕಾಯುತ್ತಿದ್ದ ಅನ್ನದ ಚರಿಗೆ ತನ್ನ ಬೇಗುದಿಯನ್ನು ಹೊರಗೆ ಕಕ್ಕಿತು. “ಈ ಹೀನ ಬದುಕಿಗಿಂತ ಕಂಚುಗಾರನ ಕುಲುಮೆಯಲ್ಲಿ ಬೆಂದು ಹೊಸದಾಗುವುದು ಎಷ್ಟೋ ಮೇಲು. ಎಂಥಾ ವೈಭವದ ದಿನಗಳನ್ನು ಕಂಡ ಜೀವವಿದು. ಸುತ್ತ ನೂರಾರು ಜನರು ಸಾಲುಗಟ್ಟಿ ಕೈಮುಗಿದು ನಿಂತಿರುವಾಗ ಎಲ್ಲರ ನಡುವೆ ದಾರಿಮಾಡಿಕೊಂಡು ಮನೆಯೊಡತಿ ನನ್ನನ್ನು ತಂದು ದೇವರ ಮುಂದಿಟ್ಟರೆ ಸಾಕು. ನೈವೇದ್ಯಕ್ಕೆ ತಯಾರಿಯಾಯ್ತೆಂದು ಪೂಜೆ ಪ್ರಾರಂಭವಾಗುತ್ತಿತ್ತು. ನನ್ನ ಅಣತಿಯಿಲ್ಲದೇ ಏನೂ ನಡೆಯದೆಂಬ ಜಂಭದಿಂದ ನಾನು ಇನ್ನಷ್ಟು ಉಬ್ಬಿಕೊಳ್ಳುತ್ತಿದ್ದೆ. ಅದೆಂಥದ್ದೋ ನಾಜೂಕು ಪಾತ್ರೆಯ ಮೋಹವನ್ನು ಯಾರು ತುರುಕಿದರೋ ಅವಳ ತಲೆಯಲ್ಲಿ? ನಾನು ಮೂಲೆಸೇರಿದೆ. ಅಷ್ಟೇ ಆದರೆ ಬೇಸರವಿರಲಿಲ್ಲ, ಆದರೆ ನನ್ನ ಕಷ್ಟದ ಯಾತ್ರೆ ಅಷ್ಟಕ್ಕೇ ಮುಗಿಯಲಿಲ್ಲ. ಅರೆಯುವ ಕಲ್ಲಿನ ಮೂಲೆಯಲ್ಲಿಟ್ಟು ನನ್ನೊಳಗೆ ಅಕ್ಕಚ್ಚನ್ನು ಸುರುವುತ್ತಲೇ ಹೋದರು. ಹಾಳುಮೂಳು ಹುಳಿಯನ್ನೆಲ್ಲ ನನ್ನೊಳಗೆ ಸುರಿದು ನನ್ನನ್ನು ಕಿಲುಬುಗೊಳಿಸಿದರು. ಹುಳಿನಾರುವ ನೀರನ್ನು ಇಡೀದಿನ ಹೊತ್ತು ನಾನೇ ಕರಗಿ ಸೋರುವಂತಾದರೂ ಕುಂಡೆಗೆ ಡಾಂಬರು ಮೆತ್ತಿ ಮತ್ತೆ, ಮತ್ತೆ ನನ್ನನ್ನು ಕರಗಿಸಿದರು. ಮನೆಯ ಹಟ್ಟಿಯ ಬಾಗಿಲು ಮುಚ್ಚಿಹೋಗುವವರೆಗೂ ನನಗೆ ಮುಕ್ತಿ ಸಿಗಲಿಲ್ಲ. ಅಂತೂ ಕಡೆಗೊಂದು ದಿನ ಮಹಡಿಯ ಮೂಲೆ ಸೇರಿದೆ. ನನಗಾದ ಅವಮಾನದ ಬೇಗೆಗಿಂತ ಯಾವ ಕುಲುಮೆಯೂ ಬಿಸಿಯಿರಲಾರದು. ಕುಲುಮೇಯೇ ಲೇಸು.” ಅನ್ನದ ಚರಿಗೆ ತನ್ನ ಮನದಾಳವನ್ನು ಬಿಚ್ಚಿಟ್ಟಿತು.

ಎಲ್ಲರಿಗೂ ಈಗ ತಾವೆಲ್ಲರೂ ಬೇರಾಗುವ ಆತಂಕ ಕಾಡತೊಡಗಿತು. ಈ ಮನೆಯಲ್ಲಿಯೇ ಕೆಲಸವಿಲ್ಲದೇ ಮೂಲೆ ಸೇರಿದ್ದ ಮಣಭಾರದ ಮೆಟಗತ್ತಿಗಳು, ಕಡಗೋಲು, ರಂಗೋಲೆ ಮರಿಗೆ, ಹಂಡೆಗಳೆಲ್ಲವೂ ಇನ್ನು ತಮ್ಮ ಮನೆವಾಸ ಮುಗಿದಂತೆಯೇ ಎಂದು ನಿಟ್ಟುಸಿರಿಟ್ಟವು. ಮನೆಯಲ್ಲಿ ನಡೆಯುವ ಹತ್ತಾರು ಕಾರ್ಯಗಳಲ್ಲಿ ಬೆಳ್ಳಂಬೆಳಿಗ್ಗೆ ನಾಲ್ಕು ಗಂಟೆಗೆಲ್ಲ ಎದ್ದ ಹೆಂಗಸರು ನಿದ್ದೆಯೋಡಿಸಲು ಗಟ್ಟಿಹಾಲಿನ ಚಹಾಕುಡಿದು ತಮ್ಮ ಮೇಲೇ ಪಟ್ಟಾಗಿ ಕುಳಿತು, ಪಟ್ಟಾಂಗ ಹೊಡೆಯುತ್ತ ತರಕಾರಿಗಳನ್ನು ಕೊಚ್ಚುತ್ತಿದ್ದ ದಿನಗಳನ್ನು ನೆನಪಿಸಿಕೊಂಡ ಮೆಟಗತ್ತಿಗಳು ಈಗ ಮೊಂಡಾದ ತಮ್ಮ ಬಾಯಿಗಳನ್ನು ಕಂಡು ಮರುಗಿದವು. ತಾಗಿದರೆ ಸೀಳುವಷ್ಟು ಹರಿತವಾದ ತಮ್ಮ ಬಾಯಮೇಲೆ ಸಪೂರ ನಾಜೂಕು ಬೆರಳುಗಳು ಸರಸರನೆ ಸರಿಯುವಾಗ ಲೊಚಕ್ಕನೆ ಚುಂಬಿಸಿ ತುಸುರಕ್ತ ಹರಿಸುತ್ತಿದ್ದ ಹರೆಯದ ದಿನಗಳು ನೆನಪಾಗಿ ಚೂರು ಬಿಸಿಯೇರಿದವು. ಇವರೆಲ್ಲರ ಪ್ರವರಕ್ಕೆ ಕಿವಿಗೊಡುತ್ತಿದ್ದ ಪೆಟ್ಟಿಗೆಯೊಳಗಿನ ಬಂಗಾರದ ನಗಗಳು ಅಲ್ಲಿಂದಲೇ ತಮ್ಮ ದನಿ ಸೇರಿಸತೊಡಗಿದವು. ಅರಗಿನ ಹಾರವೊಂದು ತನ್ನ ಕಥೆಯನ್ನು ಹೇಳಿತು. “ನಿಮ್ಮ ಕಾಲವೆಲ್ಲಾ ಈಗ ಮುಗಿದಂತೆಯೇ ಬಿಡಿ. ಕಂಚುತಾಮ್ರಕ್ಕೆ ಬಾಯಿಬಿಡುತ್ತಿದ್ದ ಕಾಲ ಎಂದೋ ಮುಗಿದುಹೋಯಿತು. ನಮ್ಮ ಬೆಲೆಯನ್ನು ನೋಡಿ, ದಿನದಿಂದ ದಿನಕ್ಕೆ ಗಗನಕ್ಕೆ ಏರುತ್ತಲೇ ಇದೆ. ಮೂರಂಕಿಯ ಕಾಲದಲ್ಲಿಯೇ ನನ್ನನ್ನು ಕೆಂಡದ ಮೇಲಿಟ್ಟು ಸುಟ್ಟು ಸುಲಿದರು. ಇದು ಐದಂಕಿಯ ಕಾಲ. ಇನ್ನೆಷ್ಟು ಜಗಳಗಳೋ ಕಾಣೆ.”  ಇಷ್ಟು ಹೇಳಿ ಮೌನಕ್ಕೆ ಜಾರಿದ ಅರಗಿನ ಹಾರದ ಕಥೆ ಕೇಳಲು ಎಲ್ಲರೂ ಕಾತರರಾಗಿ ಕಾಯುತ್ತಿದ್ದರೂ ಹಾರವೇಕೋ ಮೌನಮುರಿಯಲು ಸುಮಾರು ಹೊತ್ತೇ ಮಾಡಿತು. “ಏನಂತ ಹೇಳೋದು ನನ್ನ ಕಥೆಯನ್ನ? ಹೇಳಿಕೇಳಿ ದೊಡ್ಡವರ ಮನೆಯ ಮೂರೆಳೆಯ ಸರ ನಾನು. ಎಲ್ಲರ ಮದುವೆಯಲ್ಲೂ ಊರಿಗೆ ಮೊದಲು ಮದುವಣಗಿತ್ತಿಯನ್ನು ನೋಡುವ ಯೋಗ ನನ್ನದಾಗಿತ್ತು. ಚಿನ್ನದ ಬಟ್ಟಲಿನಲ್ಲಿ ಪಟ್ಟೆ ಸೀರೆಯೊಂದಿಗೆ ನನ್ನನ್ನೂ ಇಟ್ಟು ಮದುವಣಗಿತ್ತಿಗೆ ಕೊಡುತ್ತಿದ್ದುದು ವಾಡಿಕೆ. ಹೊಸ ಮದುವಣಗಿತ್ತಿಯ ಕತ್ತಿನಲ್ಲಿ ಕುಳಿತು ಎಷ್ಟೆಲ್ಲ ಪುಳಕಗಳನ್ನು ಅನುಭವಿಸಿರುವೆ ನಾನು. ಮದುಮಗ ಹಾರ ಹಾಕಲು, ತಾಳಿಕಟ್ಟಲು ಹುಡುಗಿಯ ಕತ್ತನ್ನು ಬಳಸಿದಾಗ ಅವಳೆದೆಯಲ್ಲಿ ಮಿಡಿಯುವ ಸಣ್ಣ ಕಂಪನ ನನ್ನವರೆಗೂ ಹರಡುತ್ತಿತ್ತು. ಪಾಲು, ಪಟ್ಟಿಯ ಗೊಂದಲದಲ್ಲಿ ನನ್ನನ್ನು ಪಡೆಯಲು ಮಾರಾಮಾರಿಯೇ ನಡೆದು ಕೊನೆಗೊಮ್ಮೆ ಈ ಮನೆಯ ಪಾಲೆಂದು ಘೋಷಣೆಯಾಯಿತು. ರಾತ್ರಿ ಸದ್ದಾಗದೇ ನಡೆದುಬಂದ ಪಾದಗಳು ನನ್ನನ್ನು ಮೃದುವಾಗಿ ಅಂಗೈಯಲ್ಲಿ ಎತ್ತಿಕೊಂಡು ಒಳಕೋಣೆಗೆ ಸರಿದವು. ಅಲ್ಲೊಂದು ಪಾತ್ರೆಯಲ್ಲಿ ಕುದಿಯುವ ಕೆಂಡವಿತ್ತು. ಮೆಲ್ಲನೆ ನನ್ನನ್ನು ಅದರ ಮೇಲೆ ಹೊರಳಾಡಿಸಿ ಸುಲಿಯತೊಡಗಿದರು. ಮೃದುವಾದ ತೊಗಲಿನಾಸೆಗೆ ಹಸಿಕರುವಿನ ಚರ್ಮ ಸುಲಿದಂತೆ ನಿರ್ದಯವಾಗಿ ನನ್ನ ಮೈಮೇಲಿನ ಒಂದಿಷ್ಟು ಚಿನ್ನವನ್ನು ಸುಲಿದು ತೆಗೆದು ಮತ್ತಲ್ಲಿಯೇ ಇಟ್ಟುಬಿಟ್ಟರು. ಅರ್ಧ ಸುಲಿದ ನನ್ನನ್ನು ಯಾರು ತಾನೆ ಧರಿಸಿಯಾರು? ಆಗಿನಿಂದಲೂ ಅಜ್ಞಾತವಾಸದಲ್ಲಿಯೇ ಇರುವೆ. ಪಾಲು, ಪಟ್ಟಿಯೆಂದರೆ ನನಗೆ ಕೆಂಡದಂತ ಅನುಭವ”ಎನ್ನುತ್ತಲೇ ನಿಡುಸುಯ್ದಿತು. ಜೊತೆಗಿರುವ ಒಂದಿಷ್ಟು ಓಲೆ, ಬಳೆಗಳು ಸದ್ದುಮಾಡಿ ಮೈಮುರಿದವು. ತಮ್ಮೆಲ್ಲರನ್ನೂ ಇಷ್ಟು ದಿನಗಳ ಕಾಲವು ಸುರಕ್ಷೆಯ ವರ್ತುಲದೊಳಗಿಟ್ಟ ಮನೆಯ ಯಜಮಾನನ ನೆನಪುಗಳನ್ನು ಮೆಲುಕಾಡಿಸುತ್ತಲೇ ಅವೆಲ್ಲವೂ ಮತ್ತೆ ಮೌನಕ್ಕೆ ಜಾರಿದವು.

ಎರಡು ದಿನಗಳು ಕಳೆದು ಮನೆಯ ಮೂವರೂ ಅಕ್ಕತಂಗಿಯರು ಮರಳಿ ಬಂದರು. ಬರುವಾಗಲೇ ತಿಂಡಿ, ಊಟದ ಗಂಟುಗಳನ್ನು ಹೊತ್ತುಕೊಂಡೇ ಬಂದಿದ್ದರು. ತಂದೆಯ ಭಾವಚಿತ್ರದೆದುರು ಕುಳಿತು ತುತ್ತುಗಳೊಂದಿಗೆ ನೆನಪುಗಳನ್ನೂ ಹಂಚಿಕೊಳ್ಳುತ್ತಾ ಉಂಡರು. ಕೋಣೆಯ ಬಾಗಿಲು ತೆರೆದು ಎಲ್ಲವನ್ನೂ ಹಂಚಿಕೊಳ್ಳಲು ಮುಂದಾದರು. “ನಮ್ಮ ಮನೆಯಿರುವುದೇ ಇಷ್ಟಗಲ. ಅಲ್ಲಿಗೇನಾದರೂ ಇಲ್ಲಿಯ ಸಾಮಾನುಗಳನ್ನು ಒಯ್ದರೆ ಮತ್ತೆ ಮನೆಮಂದಿಯೆಲ್ಲ ಹೊರಗಿರಬೇಕಾದೀತು.” ಎಂದು ನಕ್ಕಳು ಹಿರಿಯ ಅಕ್ಕ. ಪುಟ್ಟ ತಂಗಿ ನಗುನಗುತ್ತಲೇ ಇಡಿಯ ಆಭರಣದ ಗಂಟನ್ನು ಅವಳ ಕೈಗಿಡುತ್ತಾ ಹೇಳಿದಳು, “ಅದಕ್ಕೇ ನಿನಗೆ ಇವುಗಳೇ ಯೋಗ್ಯ” ಅಕ್ಕ ಅವಾಕ್ಕಾಗಿ, “ಇಷ್ಟೆಲ್ಲಾ ನನಗೊಬ್ಬಳಿಗೆ!” ಎಂದರೆ ಇಷ್ಟೇ ಬಿಡು ಎಂದು ಇಬ್ಬರೂ ನಕ್ಕರು. ಪೇಟೆಯ ತನ್ನ ಮನೆಯಲ್ಲಿ ಇಷ್ಟೇ ಸಾಕು ಎಂದು ಪುಟ್ಟ ಪಾತ್ರೆಗಳನ್ನೆಲ್ಲ ಜೋಡಿಸಿಕೊಂಡಳು ಕಿರಿಯವಳು. ಎರಡಂಕಣದ ಮನೆಯಲ್ಲಿ ಜಾಗಕ್ಕೇನು ಬರವೆ? ಅಪ್ಪನ ನೆನಪಿಗೆಂದು ಮಿಕ್ಕಿದ್ದಲ್ಲವೂ ನನಗಿರಲಿ ಎಂದಳು ನಡುವಿನವಳು. ಒಂದೇ ನಿಮಿಷದಲ್ಲಿ ಪಾಲುಪಟ್ಟಿಗಳೆಲ್ಲವೂ ಮುಗಿದು ಅಪ್ಪನ ಫೋಟೋವನ್ನು ಒಬ್ಬೊಬ್ಬರೊಂದೊಂದನ್ನು ಪ್ಯಾಕ್ ಮಾಡಿಕೊಳ್ಳುತ್ತಿದ್ದರು. ಎರಡು ದಿನಗಳಿಂದ ಆತಂಕಗೊಂಡಿದ್ದ ವಸ್ತುಗಳು ಒಳಗಿನಿಂದಲೇ ಪಿಸುನುಡಿದವು, “ಅವರು ನಮ್ಮನ್ನು ಹಂಚಿಕೊಳ್ಳುತ್ತಾರೆ ಎಂದುಕೊಂಡೆವು, ಅವರು ತಮ್ಮೊಳಗಿನ ಪ್ರೀತಿಯನ್ನು ಹಂಚಿಕೊಂಡರು ಅಷ್ಟೆ.”

*****

ದಳ್ಳೆ: ಸಿಲಿಂಡರಿನಾಕಾರದ ದೊಡ್ಡ ಪಾತ್ರೆ
ಚರಿಗೆ: ಅನ್ನ ಮಾಡಲು ಬಳಸುವ ಚಿಕ್ಕ ಬಾಯಿಯ ಪಾತ್ರೆ
ಹಂಡೆ: ಬಚ್ಚಲಲ್ಲಿ ನೀರು ಕಾಯಿಸಲು ಉಪಯೋಗಿಸುವ ದೊಡ್ಡ ಪಾತ್ರೆ
ಮೆಟಗತ್ತಿ: ತರಕಾರಿ ಹೆಚ್ಚಲು ಉಪಯೋಗಿಸುವ ಹತಿಯಾರ
ಅಕ್ಕಚ್ಚು: ಅಡುಗೆ ಮನೆಯ ತ್ಯಾಜ್ಯಗಳನ್ನು ಒಂದುಗೂಡಿಸಿ ದನಗಳಿಗೆ ಕುಡಿಯಲು ಕೊಡುವ ದ್ರವ

About The Author

ಸುಧಾ ಆಡುಕಳ

ಸುಧಾ ಆಡುಕಳ ಮೂಲತಃ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಆಡುಕಳದವರು. ಪ್ರಸ್ತುತ ಉಡುಪಿಯಲ್ಲಿ ಗಣಿತ ಉಪನ್ಯಾಸಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಾಹಿತ್ಯದಲ್ಲಿ ಆಸಕ್ತಿ. ಬಕುಲದ ಬಾಗಿಲಿನಿಂದ’ ಎಂಬ ಅಂಕಣ ಬರಹವನ್ನು ಬಹುರೂಪಿ ಪ್ರಕಟಿಸಿದೆ. ಅನೇಕ ಕಥೆ, ಕವನಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ