Advertisement
ಬ್ರಹ್ಮದ್ವೇಷಿಗಳ ಮನೆಯಲ್ಲಿ ದೀಕ್ಷಿತರ ಫೋಟೋ: ಕೆ. ಸತ್ಯನಾರಾಯಣ ಕಥಾ ಸರಣಿ

ಬ್ರಹ್ಮದ್ವೇಷಿಗಳ ಮನೆಯಲ್ಲಿ ದೀಕ್ಷಿತರ ಫೋಟೋ: ಕೆ. ಸತ್ಯನಾರಾಯಣ ಕಥಾ ಸರಣಿ

ಸಂಸ್ಥಾನದಲ್ಲಿ ಚಿಗರಿಗೌಡರ ಮನೆತನ ನೂರಕ್ಕೆ ನೂರರಷ್ಟು, ಬ್ರಹ್ಮದ್ವೇಷಕ್ಕೂ ಪ್ರಸಿದ್ಧವಾಗಿತ್ತು. ಅರಮನೆಯಂತಹ ಬಂಗಲೆ ಕೋಟೆಯೊಳಗಿದ್ದು, ಕೋಟೆಯ ಆವರಣದಲ್ಲಿದ್ದ ದೇವಸ್ಥಾನಗಳಿಗೆ ಬ್ರಾಹ್ಮಣರನ್ನು ಮಾತ್ರ ಅರ್ಚಕರನ್ನಾಗಿ ಇಟ್ಟುಕೊಳ್ಳದೆ, ನಾಥ ಸಂಪ್ರದಾಯದ ಮಠಗಳಲ್ಲಿ ತರಬೇತಿ ಪಡೆದವರನ್ನು ಅರ್ಚಕರನ್ನಾಗಿ ನೇಮಿಸಿಕೊಳ್ಳುತ್ತಿದ್ದರು. ಹೋಮ-ಹವನಕ್ಕೆ ಪ್ರಯಾಗದಿಂದಲೇ ಕ್ಷತ್ರಿಯ ಮಠಗಳಿಗೆ ಸೇರಿದ ಋತ್ವಿಕರನ್ನು ಕರೆಸುತ್ತಿದ್ದರು. ನೂರಾರು ಬ್ರಾಹ್ಮಣ ವಿರೋಧಿ ಸಂಸ್ಥೆಗಳಿಗೆ, ಸಂಘಟನೆಗಳಿಗೆ ಅನುದಾನ ಕೊಡುತ್ತಿದ್ದರು. ಬ್ರಾಹ್ಮಣರಿಗೆ ಅವರ ಬಗ್ಗೆ ಅಸಹಾಯಕ ಸಿಟ್ಟು, ತಿರಸ್ಕಾರ ಎಲ್ಲವೂ ಇತ್ತು. ಅದನ್ನೆಲ್ಲ ಎಲ್ಲೂ ಹೇಳಿಕೊಳ್ಳದ ಹಾಗೆ ಮನೆತನದ ಪ್ರಭಾವ ಹದ್ದುಬಸ್ತಿನಲ್ಲಿಟ್ಟಿತ್ತು.
ಕೆ.
ಸತ್ಯನಾರಾಯಣ ಬರೆಯುವ ಕಥಾಸರಣಿ “ರೂಪಕಗಳಿಗೆ ಕೊರತೆಯಿಲ್ಲ”  

ನರಹರಿ ಕಾಮಗೆರೆ ನಮ್ಮ ಕಸಿನ್‌ಗಳಲ್ಲೇ ತುಂಬಾ ವಿದ್ಯಾವಂತ, ಬುದ್ಧಿವಂತ ಮತ್ತು ಚಾಲೂ ಸ್ವಭಾವದವನು. ನೆಂಟನಾದ್ದರಿಂದ ಹೇಳಬಾರದೋ ಇಲ್ಲವೋ ಗೊತ್ತಿಲ್ಲ. ವಿಪರೀತ ಜಾತಿವಾದಿ ಕೂಡ. ಎಲ್ಲರಿಗೂ ಅವರವರ ಜಾತಿಯ ಬಗ್ಗೆ ದೌರ್ಬಲ್ಯ ಇರುತ್ತದೆ, ಪಕ್ಷಪಾತ ಇರುತ್ತದೆ. ನರಹರಿ ಇನ್ನೂ ಹತ್ತಾರು ಹೆಜ್ಜೆ ಮುಂದೆ ಹೋಗಿ ಜಾತಿಯ ಶ್ರೇಷ್ಠತೆಯಲ್ಲಿ ಕೂಡ ನಂಬಿಕೆ ಇಟ್ಟುಕೊಂಡಿದ್ದ. ಆ ನಂಬಿಕೆಯನ್ನು ಪ್ರದರ್ಶಿಸುತ್ತಲೂ ಇದ್ದ. ಬದಲಾದ ಜಗತ್ತಿನಲ್ಲಿ ಎಲ್ಲ ಜಾತಿಯವರು ಒಂದೇ ರೀತಿಯ ಶಿಕ್ಷಣ ಪಡೆದು ವಿದ್ಯಾವಂತರು, ಉದ್ಯೋಗಸ್ಥರಾಗುತ್ತಿರುವುದನ್ನು ಒಪ್ಪದ ಮನೋಭಾವ. ಆದರೇನಂತೆ, ನಾವು ಇದನ್ನೆಲ್ಲ ಹತ್ತಾರು ತಲೆಮಾರುಗಳಿಂದ ಮಾಡಿಕೊಂಡು ಬಂದಿದ್ದೇವೆ. ಹಾಗಾಗಿ, ನಾವೇ ಶ್ರೇಷ್ಠರು ಎಂಬ ವಾದ. ಈ ವಾದ, ನಂಬಿಕೆಗನುಗುಣವಾಗಿ, ಜಾತಿಯವರು ಭೂಮಂಡಲದ ಯಾವುದೇ ಮೂಲೆಯಲ್ಲಿ ಏನೇ ಸಾಧನೆ ಮಾಡಿದರೂ ಮಾಹಿತಿ ಸಂಗ್ರಹಿಸಿ ನಮ್ಮ ಜಾತಿಯ WhatsApp ಗ್ರೂಪ್‌ನಲ್ಲಿ ಹಾಕುತ್ತಿದ್ದ. ಅಂತಹವರು ಭಾರತಕ್ಕೆ, ಕರ್ನಾಟಕಕ್ಕೆ ಬಂದಾಗ ದುಂಬಾಲು ಬಿದ್ದು ಸನ್ಮಾನಿಸುತ್ತಿದ್ದ.

ನರಹರಿ ಸ್ಟೇಟ್‌ ಬ್ಯಾಂಕಿನಲ್ಲಿ ತುಂಬಾ ಉನ್ನತ ಹುದ್ದೆಯಲ್ಲಿದ್ದ. ಬಂಧುಗಳಾದ ನಮಗೆ ಆತನಿಂದ ನಾನಾ ರೀತಿಯ ಸಹಾಯದ, ಒತ್ತಾಸೆಯ ಅಗತ್ಯವಿತ್ತು. ಮಕ್ಕಳಿಗೆ ಶಾಲೆಯ ಸೀಟು, ತಿರುಪತಿಯಲ್ಲಿ ಆದ್ಯತೆಯ ದರ್ಶನ, ದೇಶಾದ್ಯಂತ ಇರುವ ಬ್ಯಾಂಕಿನ ಅತಿಥಿ ಗೃಹಗಳಲ್ಲಿ ವಸತಿ, ಉದ್ಯೋಗಾಂಕ್ಷಿಗಳಿಗೆ ಸೂಕ್ತ ಶಿಫಾರಸ್‌, ಎಲ್ಲರಿಗೂ ಎಲ್ಲವೂ ಸಿಗುತ್ತಿತ್ತು. ಹಾಗಾಗಿ, ಯಾರೂ ಅವನನ್ನು ಪ್ರಶ್ನಿಸುತ್ತಿರಲಿಲ್ಲ.

ನರಹರಿ ಕೆಲಸದಲ್ಲಿ, ಸಾರ್ವಜನಿಕ ಸಂಪರ್ಕದಲ್ಲಿ ತುಂಬಾ ಗಟ್ಟಿಗ. ಮೇಲಧಿಕಾರಿಗಳಿಗೆ ಬಹು ಪ್ರಿಯನಾದವನು. ಅವನನ್ನು ಆರಾಧಿಸುವವರಲ್ಲಿ ಎಲ್ಲ ಕೋಮುಗಳಿಗೆ ಸೇರಿದ ನಾಯಕರು, ವ್ಯಾಪಾರಸ್ಥರು ಇದ್ದರು. ಅದನ್ನೇ ಹೇಳಿಕೊಂಡು ಬೀಗುತ್ತಿದ್ದ ಕೂಡ.

ಹೆಚ್ಚು ಕಡಿಮೆ ನನ್ನ ವಯಸ್ಸಿನವನೇ ಆದ್ದರಿಂದ ನಾನು ಅವನಿಗೆ ಆಗಾಗ ಹೇಳುತ್ತಿದ್ದೆ:

“ನೋಡು ನರಹರಿ, ಇದೆಲ್ಲ ನಿನ್ನ ಮೇಲಿನ ವೈಯಕ್ತಿಕ ಪ್ರೀತಿ, ಆದರವಲ್ಲ. ನಿನ್ನ ಹುದ್ದೆ, ಅಧಿಕಾರದಿಂದ ಸಿಗುವ ಲಾಭ-ಉಪಯೋಗದ ಮೇಲಿರುವ ಪ್ರೀತಿ, ಗೌರವ. ಅದನ್ನೇಕೆ ತಪ್ಪು ತಿಳಿಯುತ್ತಿ.”

ನರಹರಿ ಒಪ್ಪುವನೇ? ನಿಜಕ್ಕೂ ಜಾಣ. ಮಾತಿನಲ್ಲೂ ಜಾಣ.

ಇಲ್ಲ, ಇಲ್ಲ. ಇವರೆಲ್ಲ ನನ್ನನ್ನು ವೈಯಕ್ತಿಕವಾಗಿ ಆದರಿಸುತ್ತಾರೆ. ಯಾವುದೇ ಜಾತಿಯ ಉನ್ನತ ನಾಯಕರಾದರೂ, ಅಧಿಕಾರಿಗಳಾದರೂ, ಅವರ ಮನೆಗಳಲ್ಲಿ ನಡೆಯುವ ಹೋಮ-ಹವನ, ನವಗ್ರಹ ಪೂಜೆಗಳಿಗೆ ನನ್ನನ್ನು, ಕುಟುಂಬವನ್ನು ಆಹ್ವಾನಿಸುತ್ತಾರೆ. ಪೂರ್ಣಾಹುತಿಯ ಸಮಯದಲ್ಲಿ ನನ್ನನ್ನು ಕೂಡ ಕುಟುಂಬದ ಸದಸ್ಯನಂತೆ ಹೋಮ ಕುಂಡದ ಮುಂದೆ ನಿಲ್ಲಿಸುತ್ತಾರೆ.

*****

          ಮಂಡ್ಯದಲ್ಲಿ ಅವನು ಕೆಲಸ ಮಾಡುತ್ತಿದ್ದಾಗ ಒಂದಷ್ಟು ದಿನ ರಜಾ ಹಾಕಿ ಅವನ ಮನೆಗೆ ಹೋದೆ. ಮನೆಯಲ್ಲ ಅದು, ಅರಮನೆ. ಸುಸಜ್ಜಿತ ಮಾತ್ರವಲ್ಲ, ಅತ್ಯಾಧುನಿಕ. ಆಳು-ಕಾಳು, ಹೂತೋಟ, ತೋಟದಲ್ಲಿ ಉಯ್ಯಾಲೆ, ಪುಟ್ಟ ಈಜು ಕೊಳ, ನಾಲ್ಕಾರು ಲತಾ ಮಂಟಪಗಳು, ಅದೆಷ್ಟು ಕಾರಂಜಿಗಳು.

ನಾನು ಅಲ್ಲಿದ್ದ ದಿನಗಳಲ್ಲೇ ಶ್ರೀ ಚಿಗರಿಗೌಡರ ಮನೆತನದಿಂದ ನರಹರಿಗೆ ಒಂದು ರಾತ್ರಿಯ ಊಟಕ್ಕೆ ಆಹ್ವಾನ ಬಂತು. ಚಿಗರಿಗೌಡರ ಬಗ್ಗೆ ನಾನು ಕೇಳಿದ್ದೆ ಎಂದು ಹೇಳುವುದು ತಪ್ಪು. ಯಾರಿಗೆ ಅವರ ಬಗ್ಗೆ, ಅವರ ಮನೆತನದ ಬಗ್ಗೆ ಗೊತ್ತಿಲ್ಲ ಎನ್ನುವುದು ಸರಿಯಾದ ಮಾತು. ಒಂದೊಂದೂವರೆ ತಾಲೂಕಿಗಾಗುವಷ್ಟು ತರಿ ಜಮೀನು, ನೂರಾರು ಪಂಪಹೌಸ್‌ಗಳು, ದ್ರಾಕ್ಷಿ ಫಾರಂ, ಹದಿನಾರು ಬಸ್‌ ರೂಟ್‌, ಬೆಂಗಳೂರಿನ ಜಯನಗರದಲ್ಲಿ ವಿಶಾಲವಾದ ಗೆಸ್ಟ್‌ ಹೌಸ್‌, ಸಾವಯವ ಆಹಾರ ಪದಾರ್ಥಗಳ ದೊಡ್ಡ ಮಳಿಗೆ, ದೇಶ ವಿದೇಶಗಳಲ್ಲಿ ಹರಡಿರುವ ಬಂಧು-ಬಾಂಧವರು, ಜಗತ್‌ ಪ್ರಸಿದ್ಧ ವಿಶ್ವವಿದ್ಯಾಲಯಗಳಲ್ಲಿ ಓದುತ್ತಿರುವ ಎರಡು-ಮೂರು ತಲೆಮಾರಿನ ಮಕ್ಕಳು, ಬೀಗರಾಗಿ ಟ್ರಿಬ್ಯೂನಲ್‌, ನ್ಯಾಯಾಲಯಗಳ ನ್ಯಾಯಾಧೀಶರು. ಆಯ್ತು ಈ ಸಲ ನರಹರಿಯ ದೆಸೆಯಿಂದಾಗಿ ಅವರ ಮನೆತನದವರನ್ನು ನೋಡುವ ಒಂದು ಅವಕಾಶ ಎಂದು ಖುಷಿಯಾಯಿತು.

ಸಂಸ್ಥಾನದಲ್ಲಿ ಚಿಗರಿಗೌಡರ ಮನೆತನ ನೂರಕ್ಕೆ ನೂರರಷ್ಟು, ಬ್ರಹ್ಮದ್ವೇಷಕ್ಕೂ ಪ್ರಸಿದ್ಧವಾಗಿತ್ತು. ಅರಮನೆಯಂತಹ ಬಂಗಲೆ ಕೋಟೆಯೊಳಗಿದ್ದು, ಕೋಟೆಯ ಆವರಣದಲ್ಲಿದ್ದ ದೇವಸ್ಥಾನಗಳಿಗೆ ಬ್ರಾಹ್ಮಣರನ್ನು ಮಾತ್ರ ಅರ್ಚಕರನ್ನಾಗಿ ಇಟ್ಟುಕೊಳ್ಳದೆ, ನಾಥ ಸಂಪ್ರದಾಯದ ಮಠಗಳಲ್ಲಿ ತರಬೇತಿ ಪಡೆದವರನ್ನು ಅರ್ಚಕರನ್ನಾಗಿ ನೇಮಿಸಿಕೊಳ್ಳುತ್ತಿದ್ದರು. ಹೋಮ-ಹವನಕ್ಕೆ ಪ್ರಯಾಗದಿಂದಲೇ ಕ್ಷತ್ರಿಯ ಮಠಗಳಿಗೆ ಸೇರಿದ ಋತ್ವಿಕರನ್ನು ಕರೆಸುತ್ತಿದ್ದರು. ನೂರಾರು ಬ್ರಾಹ್ಮಣ ವಿರೋಧಿ ಸಂಸ್ಥೆಗಳಿಗೆ, ಸಂಘಟನೆಗಳಿಗೆ ಅನುದಾನ ಕೊಡುತ್ತಿದ್ದರು. ಬ್ರಾಹ್ಮಣರಿಗೆ ಅವರ ಬಗ್ಗೆ ಅಸಹಾಯಕ ಸಿಟ್ಟು, ತಿರಸ್ಕಾರ ಎಲ್ಲವೂ ಇತ್ತು. ಅದನ್ನೆಲ್ಲ ಎಲ್ಲೂ ಹೇಳಿಕೊಳ್ಳದ ಹಾಗೆ ಮನೆತನದ ಪ್ರಭಾವ ಹದ್ದುಬಸ್ತಿನಲ್ಲಿಟ್ಟಿತ್ತು.

ಇವರಿಗೂ ನರಹರಿಯನ್ನು ಕಂಡರೆ ತುಂಬಾ ಪ್ರೀತಿಯಿತ್ತು, ಒಡನಾಟವಿತ್ತು. ಅವರ ಬಹುತೇಕ ಬ್ಯಾಂಕ್‌ ಖಾತೆಗಳು ಇವನ ಸುಪರ್ದಿನಲ್ಲಿದ್ದ ಶಾಖೆಗಳಲ್ಲಿದ್ದವು. ವಾರಾಂತ್ಯದಲ್ಲಿ ಟೆನ್ನಿಸ್‌ ಆಡಿಸಲು ಇವನನ್ನು ಅವರ ಕಾರಿನಲ್ಲೇ ಮೈಸೂರಿಗೆ Royal Evans ಕ್ಲಬ್‌ಗೆ ಕರೆದುಕೊಂಡು ಹೋಗುತ್ತಿದ್ದರು.

ಇಂತಹ ಕುಟುಂಬದ ಜೊತೆ ನಿನಗೆ ಎಂತಹ ಒಡನಾಟ ಎಂದು ರೇಗಿಸಿದರೆ, ಅವರ ನಿಲುವು ಏನಾದರೆ ನನಗೇನು? ಎಂತಹವರ ಜೊತೆಗೂ ಒಂದು personal equation ಸಾಧ್ಯತೆ ಇದ್ದೇ ಇರುತ್ತದೆ. ನನ್ನ ಮಟ್ಟಿಗೆ ಅವರು Lovely Patriarch ಎಂದು ನನ್ನ ಬಾಯಿ ಮುಚ್ಚಿಸಿದ.

ರಾತ್ರಿ ಪಾನಗೋಷ್ಠಿ, ಊಟಕ್ಕೆ ಹೋದೆವು. ನಾವು ಪಾನಗೋಷ್ಠಿಗೆ ಕೂತಿದ್ದ ಹಾಲಿನಲ್ಲಿ ಮೂರು ನಿಮಿಷಕ್ಕೊಂದು ಸಲ ಬೆಳಕಿನ ರೀತಿ, ಬಣ್ಣ ಬದಲಾಗುತ್ತಿತ್ತು. ಹತ್ತು ನಿಮಿಷಕ್ಕೊಂದು ಸಲ ಕಾಮನಬಿಲ್ಲು ಮೂಡುತ್ತಿತ್ತು. ಹಾಸಿದ್ದ ಕಾರ್ಪೆಟ್‌ ಮೇಲೆ ಕಾಲಿಡಲು ನಾವೇ ಸಂಕೋಚ ಪಡುವಷ್ಟು ನುಣುಪಾಗಿತ್ತು, ಕಲಾತ್ಮಕವಾಗಿತ್ತು. ಪಾರ್ಟಿಯ ಒಂದು ಹಂತದಲ್ಲಿ ನಾನು ಬೂಟು ತೆಗೆದು, ಕಾಲುಚೀಲ ಮಾತ್ರ ಧರಿಸಿ ಕುಳಿತಿದ್ದೆ. ಅಕಸ್ಮಾತ್‌ ಕಾರ್ಪೆಟ್‌ ಸ್ಪರ್ಶವಾದಾಗ ಎಂತಹ ಪುಳಕ, ಉಲ್ಲಾಸದ ಭಾವನೆ.

ಆದರೆ ನನ್ನ ಗಮನವನ್ನು ಮತ್ತೆ ಮತ್ತೆ ಸೆಳೆದದ್ದು, ಒಂದು ಕಾಲದಲ್ಲಿ ನಮ್ಮ ಸಂಸ್ಥಾನದ ರಾಜ್ಯಪಾಲರಾಗಿದ್ದ ಮಹದೇವ ದೀಕ್ಷಿತರ ಆಳೆತ್ತರದ ಫೋಟೋ. ಅದರ ಮುಂದೆ ಇರುವ ಹೊಳೆಯುವ ಕಂಚಿನ ದೀಪದ ಕಂಭ. ಮಹಾದೇವರ ಹಣೆಯ ಮೇಲೆ ಇಟ್ಟಿದ್ದ ವಿಭೂತಿ, ಕುಂಕುಮ, ಅವರ ಆಶೀರ್ವಾದದ ವಿಶಾಲ ನಗು. ಅಷ್ಟು ದೊಡ್ಡ ಸೈಜಿನ ಫೋಟೋಗೂ ಹಾಕಿದ್ದ ಮಲ್ಲಿಗೆ ಹೂವಿನ ಸುಗಂಧ, ವಾಸನೆ.

ನನಗೆ ಆಶ್ಚರ್ಯವಾಯಿತು. ಇದೇನಪ್ಪಾ ಇಂತಹ ಕಡು ಬ್ರಹ್ಮದ್ವೇಷಿಗಳ ಮನೆಯಲ್ಲಿ ದೀಕ್ಷಿತರ ಫೋಟೋ ಅಂತಾ. ಪಾನ, ಭೋಜನ ಎಲ್ಲ ಒಂದು ರೀತಿಯಲ್ಲಿ ಉದ್ವೇಗದಲ್ಲಿದ್ದವು. ರಾತ್ರಿಯಲ್ಲೂ ಕನಸಿನಲ್ಲಿ, ಅರೆ ಕನಸಿನಲ್ಲಿ, ಸುಷುಪ್ತಿಯಲ್ಲಿ, ದೀಕ್ಷಿತರ ಫೋಟೋ ಮತ್ತು ಫೋಟೋದಿಂದ ಹೊರಟ ಆಶೀರ್ವಾದದ ವಿಶಾಲ ನಗು.

ಮುಂದಿನ ದಿನಗಳಲ್ಲಿ ನರಹರಿಯೇ ಹೇಳಿದ ಪ್ರಕಾರ, ನಾನು ಸಂಗ್ರಹಿಸಿದ ಕಥಾ ವಿವರಗಳ ಪ್ರಕಾರ, ಇತಿಹಾಸ-ಕತೆ-ಪ್ರಸಂಗವೆಲ್ಲ ತಿಳಿದು ಬಂತು.

*****

          ಭಗವಂತ ಕುಮಾರ್‌ ಸಂಸ್ಥಾನದ ಮುಖ್ಯಮಂತ್ರಿಯಾಗಿದ್ದ ಯುಗ. ದೀರ್ಘಕಾಲ ಮತ್ತೆ ಮತ್ತೆ ಚುನಾವಣೆಯಲ್ಲಿ ಗೆದ್ದು ಗೆದ್ದು, ಮುಖ್ಯಮಂತ್ರಿ ಆಗ್ತಾ ಇದ್ದದ್ದರಿಂದ, ಭಗವಂತರು ಶಾಶ್ವತವಾದ ಮುಖ್ಯ ಮಂತ್ರಿ ಎಂಬ ಭಾವನೆ ನಮ್ಮಲ್ಲಿ ಬೇರೂರಿತ್ತು. ಇಂದ್ರಪ್ರಸ್ಥದ ಮಹಾನಾಯಕಿಗೆ ಬಲಗೈಯಂತಿದ್ದರು. ಆಕೆಯ ಇನ್ನೂ ಒಂದು ಬಲಗೈ ಈ ಕಾನ್ಪುರದ ದೀಕ್ಷಿತ. ಮಹಾನಾಯಕಿಗೆ ಸಲ್ಲಬೇಕಾದ ಕಾಣಿಕೆ, ಮುಜುರೆಗಳೆಲ್ಲ ದೀಕ್ಷಿತರ ಮೂಲಕವೇ ಸಮರ್ಪಣೆಯಾಗಬೇಕು. ಭಗವಂತ ಕುಮಾರ್‌ ದೀಕ್ಷಿತರನ್ನೇನು ಕಡೆಗಣಿಸುವಷ್ಟು ದಡ್ಡರಾಗಿರಲಿಲ್ಲ. ರಾಜ್ಯಪಾಲರಾಗಿ ನೀವು ಕೆಂಪೇಗೌಡ ನಗರಿಯಲ್ಲಿ ತಿಂಗಳಿಗೆ ಒಂದು ವಾರವಿದ್ದರೆ ಸಾಕು, ಉಳಿದಂತೆ ನಿಮ್ಮ ಕಾನ್ಪುರದ estate ನಲ್ಲೇ ಇರಿ ಎಂದು ಪ್ರತಿ ತಿಂಗಳೂ ಒಂದು chartered flight ನಲ್ಲಿ ಕಳಿಸಿಕೊಡುತ್ತಿದ್ದರು. ವಿಮಾನದ ತುಂಬ ಹಣ, ಉಡುಗೊರೆ, ಒಡವೆ ವಸ್ತು. ಇದೆಲ್ಲದರ ಭಾರದಿಂದಾಗಿ ವಿಮಾನಕ್ಕೆ ಮೇಲೇರುವುದಕ್ಕೇ ಕಷ್ಟವಾಗುತ್ತಿತ್ತು. ಮುಖ್ಯ ಮಂತ್ರಿ, ರಾಜ್ಯಪಾಲರ ನಡುವೆಯಿದ್ದ ಅಂತಹ ಅನ್ಯೋನ್ಯ, ಅನುನಯದ ಸಂಬಂಧವನ್ನು ಮತ್ತೆ ನಾವು ಕರುನಾಡಿನಲ್ಲಿ ನೋಡಲೇ ಇಲ್ಲ.

ದೀಕ್ಷಿತರು ಕೃತಜ್ಞತೆಯ ಮನುಷ್ಯ. ಭಗವಂತರಿಗೆ ಏನಾದರೂ ಸರಿಯಾದ ಉಪಕಾರ ಮಾಡಿ ಕೃತಜ್ಞತೆ ಹೇಳಬೇಕೆಂಬ ಪ್ರಾಮಾಣಿಕ ತುಡಿತ.

ಈ ತುಡಿತಕ್ಕೆ ಒದಗಿ ಬಂದದ್ದು, ಚಿಗರಿಗೌಡರ ಮನೆತನದ ಒಂದು ದುರಂತ. ಹಿಂದೆ ಪಾಳೆಗಾರರಾಗಿದ್ದವರಲ್ಲವೇ? ಯಾವ ವಿಷಯಕ್ಕೂ ಯಾರೂ ಎದುರು ಮಾತಾಡುವ ಹಾಗಿಲ್ಲ. ಯಾವುದೇ ವ್ಯವಹಾರದಲ್ಲೂ ಯಾರೂ ಸ್ಪರ್ಧಿಸಬಾರದು ಎಂಬ ನಿಯಮ. ಚಿಗರಿಗೌಡರ ದಾಯಾದಿಗಳಾದ ದೇವೀರೇಗೌಡರ ಮನೆತನದವರು ಮಾತ್ರ ಇವರಿಗೆ ಸೊಪ್ಪು ಹಾಕುತ್ತಿರಲಿಲ್ಲ. ಅವರು ಕೂಡ ಜಿದ್ದಿನ ಸ್ವಭಾವದವರೇ. ಪದೇ ಪದೇ ಇವರಿಗೆ ಅಡ್ಡಗಾಲಾಗುತ್ತಿದ್ದರು, ಕೆಣಕುತ್ತಿದ್ದರು. ಒಂದು ವಿವಾದದ ಸಂದರ್ಭದಲ್ಲಿ ಕೆಸರುಗದ್ದೆಯೊಳಗೆ ಎರಡೂ ಮನೆತನಗಳ ನಡುವೆ ಕುಡಗೋಲು, ಮಚ್ಚು, ಕತ್ತಿ, ಹಾರೆಗಳ ಸಮೇತ ಮಾರಾಮಾರಿ ಆಯಿತು. ಚಿಗರಿಗೌಡರೇ ಖುದ್ದಾಗಿ ನಿಂತು, ಗದ್ದೆಯ ಕೆಸರೆಲ್ಲ ಕೆಂಪು ಬಣ್ಣಕ್ಕೆ ತಿರುಗವಂತೆ ಹತ್ಯಾಕಾಂಡದ ಮಾರ್ಗದರ್ಶನ ಮಾಡಿದರು. ದೇವೀರೇಗೌಡರ ವಂಶಸ್ಥರನ್ನು ಕೊಲೆಗೈದರು. ಮನೆಯೊಳಗಿದ್ದ ಮಕ್ಕಳು ಮರಿಗಳನ್ನು ಕೂಡ ಎಳೆದುಕೊಂಡು ಬಂದು, ಗದ್ದೆಯ ರಕ್ತದ ಹೊಂಡದಲ್ಲಿ ಕಂಠಪೂರ್ತಿ ಮುಳುಗಿಸಿದರು.

ಸಂಸ್ಥಾನ ಕಂಡ ಭೀಕರ ಹತ್ಯಾಕಾಂಡ ಅದು. ಪತ್ರಿಕೆಗಳಲ್ಲಿ ಸುದ್ದಿಯಾಯಿತು. ಶಾಸನ ಸಭೆಯಲ್ಲಿ ಪ್ರಸ್ತಾಪಗೊಂಡಿತು. ತನಿಖೆ ಆಯಿತು. ವರ್ಷಾನುಗಟ್ಟಲೆ ನಾನಾ ಹಂತದ ನ್ಯಾಯಾಲಯಗಳಲ್ಲಿ ಕೇಸು ನಡೆದೂ ನಡೆದೂ ಚಿಗರಿಗೌಡರ ಕುಟುಂಬದ ಅನೇಕ ಗಂಡಸರಿಗೆ ಜೀವಾವಧಿ ಶಿಕ್ಷೆ ಆಯಿತು. ಮನೆತನಕ್ಕೆ ಗಂಡು ಪಾಳ್ಯವೇ ಇಲ್ಲವಾಯಿತು. ಸಾರ್ವಜನಿಕರು ಕಾಲ ಕ್ರಮೇಣ ಪ್ರಕರಣವನ್ನು ಮರೆತರೂ, ಜೈಲಿನ ಒಳಗಿನಿಂದಲೇ ಶಿಕ್ಷೆಯನ್ನು ಕಡಿಮೆ ಮಾಡಿಸುವುದಕ್ಕೆ, ಕ್ಷಮಾದಾನ ಪಡೆಯುವುದಕ್ಕೆ ನಾನಾ ರೀತಿಯ ಪ್ರಯತ್ನಗಳು, ಕೋಟ್ಯಾಂತರ ರೂಪಾಯಿ ವ್ಯವಹಾರ, ಕೈ ಬದಲಾಯಿಸುವುದೆಲ್ಲ ನಡೆಯುತ್ತಲೇ ಇತ್ತು. ಮುಖ್ಯ ಮಂತ್ರಿ ಭಗವಂತರನ್ನು ಮತ್ತೆ ಮತ್ತೆ ಪೀಡಿಸುತ್ತಲೇ ಇದ್ದರು. ಭಗವಂತರ ಮೂಲಕ ಇಂದ್ರಪ್ರಸ್ಥಕ್ಕೆ ಕರಣೀಕವನ್ನು ಎಡಬಿಡದೆ ಸಲ್ಲಿಸುತ್ತಲೇ ಇದ್ದರು.

ಎಲ್ಲದಕ್ಕೂ ಕಾಲ ಕೂಡಿ ಬರುತ್ತದೆ, ಬರಬೇಕು ಅನ್ನುವಂತೆ ದೀಕ್ಷಿತರ ನಿವೃತ್ತಿಯ ದಿನಗಳು ಹತ್ತಿರ ಬಂದೇಬಿಟ್ಟಿತು. ನೀವು ಏನು ಹೇಳಿದರೂ ನಾನು ಮಾಡಿ ಹೋಗ್ತೇನೆ. ಇತಿಹಾಸದಲ್ಲಿ ನಮ್ಮ ಮಧುರ ಬಾಂಧವ್ಯ ದಾಖಲಾಗಿ ಉಳಿಯಬೇಕು ಎಂದು ರಾಜ್ಯಪಾಲರೇ ಮುಖ್ಯ ಮಂತ್ರಿಗಳನ್ನು ನಿರಂತರವಾಗಿ ಪೀಡಿಸುತ್ತಲೇ ಇದ್ದರು.

ಭಗವಂತರದು ಒಂದೇ ಬೇಡಿಕೆ. ಗೌಡರ ಮನೆತನದ ಬಹುಪಾಲು ಗಂಡಸರು ಸಾಕಷ್ಟು ವರ್ಷಗಳಿಂದ ಜೈಲಿನಲ್ಲಿದ್ದಾರೆ. ಯಾರಿಗೂ ತೊಂದರೆ ಕೊಡದೆ, ಭಗವಂತನ ಸ್ಮರಣೆ ಮಾಡಿಕೊಂಡು ದಿನ ನೂಕುತ್ತಿದ್ದಾರೆ. ಪ್ರತಿವರ್ಷದ ಕೊನೆಯಲ್ಲೂ ಪ್ರತಿಯೊಬ್ಬರಿಗೂ Chief Jail Warden ಸದ್ವರ್ತನೆಯ ಸರ್ಟಿಫಿಕೇಟ್‌ ಕೊಟ್ಟಿದ್ದಾರೆ. ಸಹಖೈದಿಗಳ ಕುಟುಂಬಳಿಗೆ ನಾನಾ ರೀತಿಯಲ್ಲಿ ನೆರವಾಗಿದ್ದಾರೆ. ಜೈಲು ಅಧಿಕಾರಿಗಳ ಯೋಗಕ್ಷೇಮವನ್ನು ನಿರ್ವಹಿಸುವುದನ್ನು ಕೂಡ ಮರೆತಿಲ್ಲ. ಇವರ ವೈರಿಗಳ ವಂಶ ನಿರ್ನಾಮವಾಯಿತು ನಿಜ. ಅದೊಂದನ್ನು ಬಿಟ್ಟರೆ, ಚಿಗರಿಗೌಡರ ಮನೆತನದಲ್ಲಿ ಯಾವ ಊನವೂ ಇಲ್ಲ. ರಾಜ್ಯಪಾಲರಾಗಿ ನೀವು ನಿಮ್ಮ ವಿಚಕ್ಷಣೆ, ಅಧಿಕಾರ, ಅನುಭವ ಎಲ್ಲವನ್ನೂ ಬಳಸಿ, ಅವರ ಶಿಕ್ಷೆಯ ಅವಧಿಯನ್ನು ಕಡಿಮೆ ಮಾಡಿ ಮಾಫಿ ಮಾಡಿ. ಒಂದು ಗಣ್ಯ ಮನೆತನ ಮತ್ತೆ ಮುಂದೆ ಬರುತ್ತೆ. ಇತಿಹಾಸದಲ್ಲಿ ನಿಮ್ಮ ಹೆಸರು ಶಾಶ್ವತವಾಗಿ ಉಳಿಯುತ್ತೆ. ರಾಜಕೀಯವಾಗಿ ನನಗೂ ಸಹಾಯವಾಗುತ್ತೆ.

ಈ ಕ್ಷಮಾದಾನ, ಮಾಫಿಗಾಗಿ ದೀಕ್ಷಿತರಿಗೆ ಉತ್ತರ ಪ್ರದೇಶದಲ್ಲಿ ಇನ್ನೊಂದು ಕಾನ್ಪುರ ಜಿಲ್ಲೆಗಾಗುವಷ್ಟು ಭೂಮಿ ಸಿಕ್ಕಿತಂತೆ. ಅದೇನು ಹೊಸದೂ ಅಲ್ಲ, ದೊಡ್ಡ ವಿಷಯವೂ ಅಲ್ಲ ಬಿಡಿ. ಅಂದಿನಿಂದ ಚಿಗರಿಗೌಡರ ಮನೆತನದವರಿಗೆ ದೀಕ್ಷಿತರೇ ಮನೆ ದೇವರು, ಕುಲದೈವವಾದರು. ಅದಕ್ಕೇ ದಿವಾನ್‌ ಖಾನೆಯಲ್ಲಿ ಅವರ ಆಳೆತ್ತರದ ಫೋಟೋ. ಫೋಟೋ ಮುಂದೆ ಸದಾ ಕಾಲ ಉರಿಯುವ ನಂದಾ ದೀಪ. ದೀಕ್ಷಿತರಿಂದ ಸದಾ ಪ್ರಸನ್ನ ಮನೋಭಾವದ ಅಶೀರ್ವಾದ.

ಇಷ್ಟು ವಿವರಗಳು ಕತೆಯ ಇತಿಹಾಸದ ಮಾನವೀಯ ವಿವರಗಳು ಎಲ್ಲವೂ ತಿಳಿದ ಮೇಲೆ ಚಿಗರಿಗೌಡರ ಮನೆತನದವರೂ ಬ್ರಹ್ಮದ್ವೇಷಿಗಳು ಎಂದು ಗುರುತಿಸಲು ನನಗೂ ಒಂದು ರೀತಿಯ ಹಿಂಜರಿಕೆಯೇ.

ಈ ಸಾಲುಗಳನ್ನು ಬರೆದು ಮುಗಿಸುತ್ತಿರುವಾಗಲೂ ದೀಕ್ಷಿತರ ಆಳೆತ್ತರದ ಫೋಟೋ ನನ್ನ ಕಣ್ಣೆದುರಿಗೇ ಬರುತ್ತದೆ.

About The Author

ಕೆ. ಸತ್ಯನಾರಾಯಣ

ಕೆ. ಸತ್ಯನಾರಾಯಣ ಹುಟ್ಟಿದ್ದು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೊಪ್ಪ ಗ್ರಾಮದಲ್ಲಿ. 1978ರಲ್ಲಿ ಭಾರತ ಸರ್ಕಾರದ ಇಂಡಿಯನ್ ರೆವಿನ್ಯೂ ಸರ್ವೀಸ್ ಗೆ ಸೇರಿ ಆದಾಯ ತೆರಿಗೆ ಇಲಾಖೆಯಲ್ಲಿ ದೇಶದ ನಾನಾ ಭಾಗಗಳಲ್ಲಿ ಕೆಲಸ ಮಾಡಿ ನಿವೃತ್ತಿಯಾಗಿದ್ದಾರೆ. ಸಣ್ಣಕಥೆ, ಕಿರುಕಥೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣಬರಹ, ವಿಮರ್ಶೆ, ಪ್ರವಾಸಕಥನ- ಹೀಗೆ ಬೇರೆ ಬೇರೆ ಪ್ರಕಾರಗಳಲ್ಲಿ ಇವರ ಕೃತಿಗಳು ಪ್ರಕಟವಾಗಿವೆ. ಮಾಸ್ತಿ ಕಥಾ ಪುರಸ್ಕಾರ(ನಕ್ಸಲ್ ವರಸೆ-2010) ಮತ್ತು ಕಥಾ ಸಾಹಿತ್ಯ ಸಾಧನೆಗೆ ಮಾಸ್ತಿ ಪ್ರಶಸ್ತಿ, ಬಿ.ಎಂ.ಶ್ರೀ.ಪ್ರತಿಷ್ಠಾನದ ಎಂ.ವಿ.ಸೀ.ಪ್ರಶಸ್ತಿ, ಬೆಂಗಳೂರು ವಿವಿಯ ಗೌರವ ಡಾಕ್ಟರೇಟ್(2013), ರಾ.ಗೌ.ಪ್ರಶಸ್ತಿ, ಬಿ.ಎಚ್.ಶ್ರೀಧರ ಪ್ರಶಸ್ತಿ, ವಿಶ್ವಚೇತನ ಪ್ರಶಸ್ತಿ, ಸೂರ್ಯನಾರಾಯಣ ಚಡಗ ಪ್ರಶಸ್ತಿ (ಸಾವಿನ ದಶಾವತಾರ ಕಾದಂಬರಿ), ವಿ.ಎಂ.ಇನಾಮದಾರ್‌ ಪ್ರಶಸ್ತಿ (ಚಿನ್ನಮ್ಮನ ಲಗ್ನ ಕೃತಿ) ಸೂವೆಂ ಅರಗ ವಿಮರ್ಶಾ ಪ್ರಶಸ್ತಿ (ಅವರವರ ಭವಕ್ಕೆ ಓದುಗರ ಭಕುತಿಗೆ ವಿಮರ್ಶಾ ಕೃತಿ) ಲಭಿಸಿದೆ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ