ಇಲ್ಲಿನ ಕಥೆಗಳನ್ನು ಕೇವಲ ಮನರಂಜನೆಗೆ ಬರೆಯದೆ ಸಾಮಾಜಿಕ ಕಳಕಳಿ, ಪ್ರೀತಿ, ಹೆಂಗರುಳು ಮಾನವೀಯತೆ ಇವೆಲ್ಲ ಕಥೆಗಳಲ್ಲಿ ತುಂಬಿ ತುಳುಕುತಿದೆ. ಲೇಖಕಿಯ ಸಾಮಾಜಿಕ ಬದ್ಧತೆಯು ನಮಗಿಲ್ಲಿ ಕಂಡು ಬರುತ್ತದೆ. “ನಿಯತ್ತಿನ ದಾರಿಯೊಳಗ ನಡಿಯೋ ಮನಸಿರೋ ಯಾವ ಹೆಣ್ಣು ಮಗಳು ಆಗಲಿ ಬೆಳಕ ತುಂಬಿರೋ ಬಯಲನ್ನೇ ಆರಿಸ್ಕೊಂತಾಳೆ ಹೊರತು ಅರಮನಿ ಕತ್ತಲ ಬಗಸೂದಿಲ್ಲ ಅನ್ನೋದು ನನಗ ಮತ್ತು ಸುಮ್ಮಿಗೆ ಇಬ್ಬರಿಗೂ ನಿಚ್ಚಳವಾಗಿತ್ತು.” ಲೇಖಕಿಯ ಮನೋಧರ್ಮವೇ ಕಥೆಗಳಲ್ಲಿ ಸುಪ್ತವಾಗಿ ಅಡಗಿರುವಂಥದ್ದು ಸಾಮಾನ್ಯ ವಿಚಾರ. ಹೆಚ್ಚಿನ ಕಥೆಗಳಲ್ಲಿ ಅನುಕಂಪದ ಅಲೆಗಳ ಹರಿವು ಇದೆ.
ಛಾಯಾ ಭಗವತಿ ಕಥಾ ಸಂಕಲನ”ವಾಸ್ಕೋ ಬಂದ”ದ ಕುರಿತು ಸಂಗೀತ ರವಿರಾಜ್ ಬರಹ
‘ವಾಸ್ಕೋ ಬಂದ’ ಎಂಬ ವಿನೂತನ ಹೆಸರಿನ ಕಥಾಸಂಕಲನವನ್ನು ನಮ್ಮ ನಾಡಿನ ಪ್ರಮುಖ ಬರಹಗಾರ್ತಿ, ಛಾಯಾ ಭಗವತಿಯವರು ಇತ್ತೀಚೆಗೆ ಹೊರತಂದಿದ್ದಾರೆ. ಇಲ್ಲಿನ ಎಲ್ಲಾ ಹನ್ನೊಂದು ಕಥೆಗಳು ಸಂವೇದನಶೀಲತೆ ಹೊಂದಿರುವ, ನಮ್ಮೊಳಗೆ ಭಾವ ಸಂಚಲನ ಮೂಡಿಸುವ, ನಮ್ಮದೇ ಕಥೆಗಳು ಎನಿಸುವಷ್ಟು ಸಹಜತೆಯಿಂದ ಕೂಡಿದೆ. ಕಥೆಗಳ ಒಳಗಿನ ಹೊಯ್ದಾಟ, ತೊಳಲಾಟವನ್ನು ಸ್ಪಷ್ಟವಾದ ಆಲೋಚನೆಯೊಂದಿಗೆ ಇಲ್ಲಿ ಚಿತ್ರಿಸಿದ್ದಾರೆ. ಪ್ರತಿ ಪಾತ್ರಗಳ ವೈವಿಧ್ಯತೆ, ಪಾತ್ರಗಳ ದೃಷ್ಟಿಕೋನಗಳು ತುಂಬಾ ತೀಕ್ಷ್ಣವಾಗಿದ್ದು ಲೇಖಕಿಯ ವಿಭಿನ್ನ ಆಲೋಚನೆಗಳನ್ನು ಇಲ್ಲಿನ ಕಥೆಗಳು ಹೇಳುತ್ತವೆ. ಸಂಕಲನದ ಶೀರ್ಷಿಕೆ ಕಥೆ ‘ವಾಸ್ಕೋ ಬಂದ’ ಈ ನಿಟ್ಟಿನಲ್ಲಿ ಪ್ರಮುಖವಾಗಿ ನಿಲ್ಲುತ್ತದೆ. ಕಥೆ ಓದದೆ ವಾಸ್ಕೋ ಯಾರಪ್ಪ? ವಾಸ್ಕೋಡಗಾಮನೆ ಇರಬಹುದ? ಎನ್ನುವ ಜಿಜ್ಞಾಸೆ ಸಹಜವಾಗಿ ಮೂಡುತ್ತದೆ.

(ಛಾಯಾ ಭಗವತಿ)
ಹಳ್ಳಿಯಲ್ಲಿ ಬೆಳೆದ ಲೇಖಕಿಯ ಸೃಜನಶೀಲ ಮನಸ್ಸಿನ ಈ ‘ವಾಸ್ಕೋ ಕಥೆ’ ಸೊಗಸಾದ ನಿರೂಪಣೆಯೊಂದಿಗೆ ನಮ್ಮನ್ನು ಮತ್ತೆ ಕಾಡುತ್ತದೆ. ಕಾಡುವುದು ಏಕೆಂದರೆ “ಮುಗಿಲು ಮುಟ್ಟುವ ಹಾಗೆ ಹುಯಿಲೆಬ್ಬಿಸಿ ಅಳತೊಡಗಿದಳು” ಎಂಬ ಅಂತ್ಯವಿರುವ ಕಾರಣ ಕಥೆಯ ನೋವು ನಮ್ಮ ನೋವಾಗಿ ಮನದೊಳಗು ಹುಯಿಲೆಬ್ಬಿಸುತ್ತದೆ. ವಾಸ್ಕೋ ಎಂಬುದು, ಗುಲ್ಬರ್ಗ ಜಿಲ್ಲೆಯ ಊರಿನ ಹೆಸರಾಗಿ, ಊರಿನ ಹೆಸರು ಬಸ್ಸಿನ ಹೆಸರಾಗಿ, ಬಸ್ಸಿನ ಹೆಸರು ಬಸ್ಸಿನ ಡ್ರೈವರಿಗೆ ಹೆಸರಾಗಿ ಕಡೆಗೆ ಕಥೆ ಹೆಣೆದುಕೊಂಡ ಹೋದ ರೀತಿ ಅಭೂತಪೂರ್ವವಾಗಿದೆ.
ಉತ್ತರ ಕರ್ನಾಟಕದ ಆಡು ಭಾಷೆಯಲ್ಲಿ ಇರುವ ಇಲ್ಲಿನ ಕಥೆಗಳು ಅಲ್ಲಿಯ ಲೋಕದ ಹೊಸತನವನ್ನು ನಮ್ಮೊಳಗು ಬಿತ್ತುತ್ತದೆ. ಕಥೆಗಳಲ್ಲಿರುವ ಗ್ರಾಮ್ಯ ಪದಪುಂಜಗಳು ಹೊಸ ಹೊಳವುಗಳನ್ನು ನಮಗಿಲ್ಲಿ ತೋರಿಸುತ್ತದೆ. ರಾಟಿ, ವನ್ನಿ, ಹೊನ್ನುಂಗುರ ಇತ್ಯಾದಿ ಕಥೆಗಳ ಶೀರ್ಷಿಕೆಗಳೇ ಕಥೆಗಳ ಭಾಷಾಜ್ಞಾನವನ್ನು ನಮಗೆ ಆರಹುತ್ತದೆ. ‘ಒಲವೇ ನಮ್ಮ ಬದುಕು’ ಕಥೆ ಅಪ್ಪಟ ಅವರೂರಿನ ಭಾಷೆಯಲ್ಲಿ ಮನಮೋಹಕ ಅನುಭವಗಳ ಆಗರ. ಇಲ್ಲಿ ಅಂದಿನ ವಿಚಾರಗಳನ್ನು ಇಂದಿನ ಮನೋಭಾವದಲ್ಲಿ ಬರೆದಿದ್ದಾರೆ. “ಅಂತೂ ಅಂದಂಗ ಮಾಡಿದನಲ್ಲ ಈರಣ್ಣ ಅಂತ ಹಿಂದಿನದೆಲ್ಲ ನೆನಪು ಮಾಡಿಕೆಂಡ ನಿಟ್ಟುಸಿರು ಬಿಟ್ಟುಳು ಸಣ್ಣಮ್ಮಕ್ಕ”. ಇಂಥ ನಿಟ್ಟಿಸಿರು ಪ್ರತಿ ಹೆಣ್ಮಕ್ಕಳ ಪ್ರತಿ ಕಾಲದ ನಿಟ್ಟುಸಿರು. ಪ್ರತಿ ಕಥೆಯಲ್ಲೂ ಇಂತ ನಿಟ್ಟುಸಿರು ಇದೆ. ಎಲ್ಲ ಹೆಣ್ಣುಗಳ ಅಂತರಾಳವ ಕಥೆಗಾರ್ತಿ ಹೇಗೆ ಬಲ್ಲರು ಎನ್ನುವಷ್ಟು ಸಹಜವಾಗಿ ಕಥೆಗಳೆಲ್ಲವು ಮೂಡಿಬಂದಿದೆ. ಅವರೂರಿನ ಭಾಷೆಯ ಸಹಜವಾದ ಬೈಗುಳಗಳು ಕಥೆಯಷ್ಟೇ ಸ್ವಾಭಾವಿಕವಾಗಿ
ಪಡಿಮೂಡಿದೆ.
ಇಲ್ಲಿನ ಕಥೆಗಳನ್ನು ಕೇವಲ ಮನರಂಜನೆಗೆ ಬರೆಯದೆ ಸಾಮಾಜಿಕ ಕಳಕಳಿ, ಪ್ರೀತಿ, ಹೆಂಗರುಳು ಮಾನವೀಯತೆ ಇವೆಲ್ಲ ಕಥೆಗಳಲ್ಲಿ ತುಂಬಿ ತುಳುಕುತಿದೆ. ಲೇಖಕಿಯ ಸಾಮಾಜಿಕ ಬದ್ಧತೆಯು ನಮಗಿಲ್ಲಿ ಕಂಡು ಬರುತ್ತದೆ. “ನಿಯತ್ತಿನ ದಾರಿಯೊಳಗ ನಡಿಯೋ ಮನಸಿರೋ ಯಾವ ಹೆಣ್ಣು ಮಗಳು ಆಗಲಿ ಬೆಳಕ ತುಂಬಿರೋ ಬಯಲನ್ನೇ ಆರಿಸ್ಕೊಂತಾಳೆ ಹೊರತು ಅರಮನಿ ಕತ್ತಲ ಬಗಸೂದಿಲ್ಲ ಅನ್ನೋದು ನನಗ ಮತ್ತು ಸುಮ್ಮಿಗೆ ಇಬ್ಬರಿಗೂ ನಿಚ್ಚಳವಾಗಿತ್ತು.” ಲೇಖಕಿಯ ಮನೋಧರ್ಮವೇ ಕಥೆಗಳಲ್ಲಿ ಸುಪ್ತವಾಗಿ ಅಡಗಿರುವಂಥದ್ದು ಸಾಮಾನ್ಯ ವಿಚಾರ. ಹೆಚ್ಚಿನ ಕಥೆಗಳಲ್ಲಿ ಅನುಕಂಪದ ಅಲೆಗಳ ಹರಿವು ಇದೆ. ಒಟ್ಟಿನಲ್ಲಿ ಹೆಣ್ಣಿಗಿರುವ ಕಟ್ಟುಪಾಡುಗಳನ್ನ ಮೀರಿ ನಿಲ್ಲುವಂತಹ ಆಶಯ ಹೊತ್ತ ಕಥೆಗಳೆಲ್ಲವು ನಮ್ಮನ್ನು ಹೆಚ್ಚು ತಟ್ಟುತ್ತವೆ. “ಸುಖದ ಹೆಸರಿನಲ್ಲಿ ಮುಳ್ಳು ತಂತಿಯ ಮೇಲಿನ ದೊಂಬರಾಟಕಿಂತ ವಾಸ್ತವದ ನೆಲದ ಮೇಲೆ ಗುಡಿಸಲು ಕಟ್ಟಿಕೊಂಡಿರುವುದು ಸಾವಿರ ಪಾಲು ಉತ್ತಮ ಅನಿಸಿತ್ತು ಆಕೆಗೆ”. ಇಂತಹ ಅಪ್ಯಾಯಮಾನವಾದ ಸಾಲುಗಳ ತುಂಬಾ ಇಲ್ಲಿ ಪ್ರತಿ ಹೆಣ್ಣಿನ ಒಳದನಿ ಇದೆ. ತಾನು ಬಾಲ್ಯದಲ್ಲಿ ನಡೆದಾಡಿದ ನೆಲ, ತೊಳಲಾಡಿದ ಭಾವ, ತೊದಲಾಡಿದ ಭಾಷೆ, ಪಡೆದುಕೊಂಡ ಅನುಭವಗಳ ಒಟ್ಟು ಮೊತ್ತವೇ ಇಲ್ಲಿನ ಕಥೆಗಳು ಎನ್ನಬಹುದು. ಅವರ ಭಾಷೆಯನ್ನೇ ಭಾವನೆಗಳಲ್ಲಿ ಸ್ಪುರಿಸಿ ಹುಟ್ಟಿ ಬೆಳೆದ ನೆಲದ ಋಣವನ್ನು ಧನ್ಯತಭಾವದಿಂದ ನೇವರಿಸಿ ನಮಗಿಲ್ಲಿ
ಉಣಬಡಿಸಿದ್ದಾರೆ.
ರಾಟಿ, ಒಂದು ಬಿನ್ನಹ ಕೇಳು ಮನವೇ, ಮಂಜಕ್ಕ, ಇಂಗದ ಹಸಿವಿನ ಹಂಬಲದೊಳಗೆ ಕಥೆಗಳು ಸಂಬಂಧಗಳ ಕುರಿತು ಎಚ್ಚರಿಸುವ ಗುಣ ಇರುವ ಕಥೆಗಳು. ‘ಹೊನ್ನುಂಗರ’ ಕಥೆಯಲ್ಲಿ ಧಾವಂತದ ಬದುಕಿನ ಸದ್ಯದಲ್ಲಿ ಸಂಬಂಧ ಎನ್ನುವುದು ಬೂಟಾಟಿಕೆಯಾಗಿದೆ ಎಂಬುದನ್ನು ನೇರವಾಗಿ ಹೇಳುತ್ತಾರೆ. ತನ್ನದಲ್ಲದ ಕಥೆಯನ್ನು ರಚಿಸುವಾಗ ಅದು ಬರೀ ಹೇಳಿಕೆಯಾಗಿ ಬಿಡುವ ಸಾಧ್ಯತೆ ಹೆಚ್ಚು. ಆದರೆ ಇಲ್ಲಿನ ಕಥೆಗಳು ಕೇವಲ ಹೇಳಿಕೆಗಾಗಿ ಉಳಿದಿಲ್ಲ ತಾನೇ ನೋವುಂಡು ಬರೆದಂತೆ ಅನಿಸುವ ಬೇರೆ ಬೇರೆ ರೀತಿಯ ಪ್ರತಿ ಕಥೆಗಳು ಸಾರ್ಥಕತೆ ಕಂಡಿವೆ. ಪ್ರತಿಯೊಬ್ಬ ವ್ಯಕ್ತಿಯು ಇತರರ ನೋವನ್ನು ಅರಿತಿರಬೇಕು ಎಂಬ ಸಂಕಲ್ಪ ಇವರ ಕಥೆಗಳಲ್ಲಿ ಕಂಡುಬರುತ್ತದೆ.
ಸ್ತ್ರೀ ಪರ ನಿಲುವುಗಳನ್ನು ಕಥೆಗಳಲ್ಲಿ ನಿರೂಪಿಸಿರುವುದು ಅತ್ಯಂತ ಸಮಂಜಸವಾಗಿದೆ. ಹೆಣ್ಣಿನ ಜೀವನ ಯಾವುದಾದರೂ ಒಂದು ರೀತಿಯಲ್ಲಿ ಸಾರ್ಥಕ ಮತ್ತು ಆದರ್ಶಮಯ ಎಂಬುದನ್ನು ‘ಪ್ರೀತಿ ಕೇವಲ ಪ್ರೀತಿ’ ಕಥೆಯ ವಿದ್ಯಾ ಇಲ್ಲಿ ನಿರೂಪಿಸುತ್ತಾಳೆ. ‘ಸಾವಕ್ಕಗ ಗಂಡನ ಮಾರಿ ನೋಡದು ಹೇಸಿಗೆ ಅನಿಸಿಬಿಡ್ತು’. ಹೆಣ್ಣು ಮಕ್ಕಳ ಒಳಗಿನ ಬೇಗುದಿಯನ್ನು ಹೊರ ಹಾಕುವ ಇಂತಹ ಪರಿಯನ್ನು ಅಲ್ಲಲ್ಲಿ ಚಿತ್ರಿಸಿದ್ದಾರೆ. ಹೆಣ್ಣಿನ ವಿಷಯದಲ್ಲಿ ಎಲ್ಲಿಯು ಸಮರ್ಥನೆಗಳು ಕಂಡುಬರುವುದಿಲ್ಲ. ಪ್ರತಿಭಟನೆಯ ವಿಧಾನವು ಕಥೆಗಳಲ್ಲಿ ಇರುವುದು ನಮ್ಮರಿವಿಗೆ ಬರುತ್ತದೆ. ಹೆಣ್ಣಿನ ಬಡತನದ ಚಿತ್ರಣವು ಹೆಚ್ಚಾಗಿ ಕಾಣಿಸುವ ಇಲ್ಲಿನ ಕಥೆಗಳಲ್ಲಿ ಕೆಟ್ಟ ವ್ಯವಸ್ಥೆಯನ್ನು ವಿರೋಧಿಸುತ್ತಾ ಬರೆಯುತ್ತಾರೆ. ಒಟ್ಟಿನಲ್ಲಿ ಅವರ ಕಥೆಗಳಲ್ಲಿರುವ ಜೀವದ್ರವ್ಯ ನಮ್ಮೊಳಗು ಚೇತೋಹಾರಿಯನ್ನುಂಟು ಮಾಡುತ್ತದೆ. ಅನಿಮಿಷ ಪ್ರಕಾಶನದಿಂದ ಪ್ರಕಟಗೊಂಡಿರುವ ಈ ಕೃತಿಗೆ ಬಿದರಹಳ್ಳಿ ನರಸಿಂಹಮೂರ್ತಿಯವರು ಮುನ್ನುಡಿಯನ್ನು ಬರೆದಿದ್ದಾರೆ. ‘ವಾಸ್ಕೋಬಂದ’ ಕೃತಿ ಛಾಯ ಭಗವತಿಯವರಿಗೆ ಉತ್ತಮ ಮನ್ನಣೆ ತಂದು ಕೊಡಲಿ ಎಂಬುದಾಗಿ ನಮ್ಮ ಹಾರೈಕೆ.

ಸಂಗೀತಾ ರವಿರಾಜ್ ಅವರು ಮೂಲತಃ ಕೊಡಗಿನವರು. ಎಂ.ಎ ಅರ್ಥಶಾಸ್ತ್ರ ಬಿ.ಇಡಿ ಪದವೀಧರರಾಗಿದ್ದು, ಹಲವು ಪತ್ರಿಕೆಗಳಲ್ಲಿ ಇವರ ಕವಿತೆಗಳು, ಪ್ರಬಂಧಗಳು ಮತ್ತು ವಿಮರ್ಶಾ ಲೇಖನಗಳು ಪ್ರಕಟಗೊಂಡಿವೆ. ರಾಜ್ಯ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಸೇವೆ ಸಲ್ಲಿಸಿರುವ ಸಂಗೀತಾ ಅವರು ‘ಚೆಂಬು ಸಾಹಿತ್ಯ ವೇದಿಕೆ’ ಯನ್ನು ಹುಟ್ಟುಹಾಕಿದ್ದಾರೆ. ಕಪ್ಪು ಹುಡುಗಿ(ಕವನ ಸಂಕಲನ), ಕಲ್ಯಾಣ ಸ್ವಾಮಿ(ಕಾದಂಬರಿ), ನಿರುತ್ತರ(ಕವನ ಸಂಕಲನ) ಇವರ ಪ್ರಕಟಿತ ಕೃತಿಗಳು.


