Advertisement
ಅಪ್ರವಾಸ:  ಕೆ. ಸತ್ಯನಾರಾಯಣ ಕಥಾ ಸರಣಿ

ಅಪ್ರವಾಸ: ಕೆ. ಸತ್ಯನಾರಾಯಣ ಕಥಾ ಸರಣಿ

ಮಹಾದೇವಪ್ಪನವರ ಎದುರಿಗೆ ಹೋಗಿ ನಿಂತುಕೊಂಡೆ. ಲೆಕ್ಕ ಸರಿಯಾಗಿ ಮಾಡಿಲ್ಲದ ಹುಡುಗರನ್ನು ಸಾಲಾಗಿ ನಿಲ್ಲಿಸಿಕೊಂಡು, ಒಬ್ಬೊಬ್ಬರನ್ನೇ ಕರೆದು, ಸಣ್ಣ ಬೆತ್ತದ ಕಡ್ಡಿಯಲ್ಲಿ ಛಡಿ ಏಟು ಕೊಡುತ್ತಿದ್ದರು. ನಾನು ಕೂಡ ಸಾಲಿನಲ್ಲಿ ನಿಂತುಕೊಂಡೆ. ಬಾಯಿ ಬಿಡಲು ಧೈರ್ಯವೇ ಬರಲಿಲ್ಲ. ನಾನು ಮಾಡಿರುವ ಲೆಕ್ಕ ಸರಿಯಾಗಿದೆ ಎಂದು ಕೆಂಪೇಗೌಡ ಮೇಷ್ಟರು ರೈಟ್‌ ಮಾರ್ಕ್‌ ಹಾಕಿಕೊಟ್ಟಿದ್ದರು. ಆದರೆ ನಾನು ಮನೆಯಲ್ಲಿ ಅಪ್ಪ ಹೇಳಿದ್ದನ್ನು ಹೇಳೋಕೆ ನಿಂತಿದ್ದೆ. ನಿಂತಿದ್ದ ಹಾಗೇ ಧೈರ್ಯ ಉಡುಗಿ ಹೋಯಿತು. ಸಾಲಿನಲ್ಲಿ ನಿಂತಿರುವುದರಿಂದ ನಾನು ಕೂಡ ಲೆಕ್ಕ ಸರಿಯಾಗಿ ಮಾಡಿಲ್ಲವೆಂದು ತಿಳಿದು ಹೊಡೆದುಬಿಟ್ಟರೆ ಅಂತ ಭಯ ಹೆಚ್ಚಾಗಿ ಹಿಂದಕ್ಕೆ ಸರಿದೆ.
ಕೆ.
ಸತ್ಯನಾರಾಯಣ ಬರೆಯುವ ಕಥಾಸರಣಿ “ರೂಪಕಗಳಿಗೆ ಕೊರತೆಯಿಲ್ಲ”  

ಮಹಾದೇವಪ್ಪನವರು ತುಂಬಾ ಎತ್ತರಕ್ಕೆ, ತುಂಬಾ ದಪ್ಪಗೆ ಇದ್ದರು. ಕಪ್ಪು ಬಣ್ಣ. ಅಗಲ ಕಿವಿ. ಅವರನ್ನು ನೋಡುವ ತನಕ ನಾನು ಅಂತಹವರನ್ನು ನೋಡಿರಲಿಲ್ಲ. ಅವರನ್ನು ನೋಡಿದಾಗ ನನಗೆ ಆರೇಳು ವರ್ಷವಿರಬೇಕು.

ಅವರು ನಮ್ಮ ಕಾಮಗೆರೆ ಶಾಲೆಯ ಮುಖ್ಯೋಪಾಧ್ಯಾಯರು. ಎರಡು ಮೂರು ಮೇಷ್ಟರ ಎತ್ತರ, ಗಾತ್ರ ಸೇರಿದರೆ ಇವರು ಒಬ್ಬರಾಗುತ್ತಿದ್ದರು. ಏಳೂ ತರಗತಿಗಳು ಒಂದೇ ಕಡೆ ನಡೆಯುತ್ತಿದ್ದವು. ದೊಡ್ಡ ತೊಟ್ಟಿ ಮನೆಯನ್ನು ಬಿಡಿಸಿಕೊಂಡು ಎಲ್ಲ ಕ್ಲಾಸುಗಳನ್ನು ಒಂದೇ ಕಡೆ ನಡೆಸುತ್ತಿದ್ದರು. ತೊಟ್ಟಿ ಮಧ್ಯಭಾಗದಲ್ಲಿತ್ತು. ಎಲ್ಲ ಮೇಷ್ಟರ, ಎಲ್ಲ ಪಾಠಗಳೂ ಎಲ್ಲ ವಿದ್ಯಾರ್ಥಿಗಳಿಗೂ ಕೇಳಿಸುತ್ತಿತ್ತು. ಆದರೆ ಮಹಾದೇವಪ್ಪನವರ ಧ್ವನಿ ಮಾತ್ರ ಗಂಟೆ ಹೊಡೆದ ಹಾಗೆ. ಯಾವಾಗಲೂ ಎಲ್ಲರಿಗೂ ಕೇಳುತ್ತಿತ್ತು. ಅವರ ಕಣ್ಣುಗಳ ಒಳಗೆ ಗಾಜಿನ ಗೋಲಿಯಿದ್ದು ಪಳಪಳ ಹೊಳೆಯುತ್ತಿದ್ದವು. ಬೇರೆ ಯಾವ ಮೇಷ್ಟರ ಕಣ್ಣುಗಳಲ್ಲೂ ಆ ರೀತಿಯ ಹೊಳಪಿರಲಿಲ್ಲ.

ಅದೇಕೋ ನನಗೆ ಅವರನ್ನು ಕಂಡರೆ ಮೊದಲಿನಿಂದಲೂ ಭಯ. ತುಂಬಾ ಭಯ. ನನ್ನನ್ನು ಒಂದು ದಿನ ಬೈದವರಲ್ಲ, ಹೊಡೆದವರಲ್ಲ, ಹೆಸರು ಹಿಡಿದು ಕರೆದವರೂ ಅಲ್ಲ. ಆದರೂ ಭಯ. ಕಂಡರೆ ಮೈ ನಡುಗುತ್ತಿತ್ತು. ನನಗೆ ಗೊತ್ತಿಲ್ಲದೇ ಚಡ್ಡಿಯ ಲಾಡಿಯನ್ನು ಇನ್ನೊಂದು ಸಲ ಕಟ್ಟಿಕೊಳ್ಳುತ್ತಿದ್ದೆ.

ಸ್ಕೂಲಿನಲ್ಲಲ್ಲದೆ ಅವರು ಆಗಾಗ ಬೀದಿಯಲ್ಲಿ ಕೂಡ ಎದುರಾಗೋರು. ಎದುರಾದ ತಕ್ಷಣ ಪಕ್ಕಕ್ಕೆ ಹೋಗಿ ದೂರದಲ್ಲಿ ನಿಂತು ಪಿಳಿಪಿಳಿ ಕಣ್ಣು ಬಿಡುತ್ತಿದ್ದೆ. ಅವರು ಆ ಕಡೆ ಹೋದ ಮೇಲೆ ಅವರು ಹೋದ ದಿಕ್ಕಿಗೆ ನಮಸ್ಕಾರ ಮಾಡುತ್ತಿದ್ದೆ.

ಮಹಾದೇವಪ್ಪ ಪ್ರವಾಸ ಘೋಷಿಸಿಬಿಟ್ಟರು. ತಲಕಾಡು, ಸೋಮನಾಥಪುರ, ಕನ್ನಂಬಾಡಿ, ಶ್ರೀರಂಗಪಟ್ಟಣ. ತಲಾ ಎರಡು ರೂಪಾಯಿ. ಸಂಪತ್‌ ಮೇಷ್ಟರಿಗೆ ದುಡ್ಡು ಕೊಟ್ಟು ಹೆಸರು ಬರೆಸಬೇಕು. ಮೊದಲು ಹೆಸರು ಕೊಟ್ಟರೆ ಸಾಕು, ನಂತರ ದುಡ್ಡು ಕೊಡಬಹುದು. ಮನೆಯಿಂದಲೇ ಊಟ ಕಟ್ಟಿಸಿಕೊಂಡು ಬರಬೇಕು. ಜೊತೆಯಲ್ಲಿ ಯಾರನ್ನೂ ಕರಕೊಂಡು ಬರಬಾರದು. ಸಂಪತ್‌ ಮೇಷ್ಟರು ಕುಳ್ಳ ಆಸಾಮಿ. ಯಾವಾಗಲೂ ಹಲ್ಲು ಗಿಂಜುತ್ತಾ ನಗುತ್ತಿದ್ದರು. ಒಂದೆರಡು ಸಲ ನನ್ನ ಕೈಲಿ ಅಂಗಡಿಯಿಂದ ಸಿಗರೇಟ್‌ ತರಿಸಿದ್ದರು. ನಮ್ಮ ಕ್ಲಾಸಿಗೆ ಬಂದಾಗ ನನ್ನ ಹೆಸರನ್ನು ಬರೆದುಕೊಂಡರು. ನಾನು ಹೇಳಿದೆ ಅಂತ ನಿಮ್ಮ ತಂದೆಗೆ ಹೇಳು ಎಂದು ಅವರೇ ಹೇಳಿಕೊಟ್ಟರು.

ಮನೆಗೆ ಹೋಗಿ ನಮ್ಮ ತಂದೆಗೆ ಹೇಳಿದೆ. ಆವಾಗ ತಾನೆ ಬಾಟಲಿನಲ್ಲಿದ್ದ ಹಸಿರು ಇಂಕು ಮುಗಿಯುತ್ತಿತ್ತು. ಸದ್ಯ ಅದು ಮುಗಿದರೆ ಸಾಕೆಂದು ನಾನು ಕಳವಳ ಪಡುತ್ತಿದ್ದೆ. ಕೊಳ್ಳೇಗಾಲದ ಅಂಗಡಿಯಿಂದ ಇಂಕ್‌ ತರುವಾಗ ನೀಲಿ ಬಣ್ಣದ ಬದಲು ಹಸಿರು ಇಂಕ್‌ ತಂದುಬಿಟ್ಟಿದ್ದರು. ಅದೇ ತಾನೆ ನಾನು ಪೆನ್‌ನಲ್ಲಿ ಬರೆಯಲು ಶುರು ಮಾಡಿದ್ದೆ. ನಮ್ಮ ಕ್ಲಾಸಿನ ಬಹುಪಾಲು ಮಕ್ಕಳು ಎಲ್ಲರೂ ನೀಲಿ ಬಣ್ಣದ ಶಾಯಿಯನ್ನು ಉಪಯೋಗಿಸುತ್ತಿದ್ದರು. ನನ್ನದು ಮಾತ್ರ ಹಸಿರು. ಎಲ್ಲ ಮೇಷ್ಟರುಗಳು ಬೈದರೂ ಮಹಾದೇವಪ್ಪನವರು ಗದರಿ ನನ್ನ ನೋಟ್‌ ಪುಸ್ತಕವನ್ನು ರೊಯ್ಯೆಂದು ಎಸೆದರು. ತೊಟ್ಟಿ ಮಧ್ಯಕ್ಕೆ ಬಿತ್ತು. ಅಲ್ಲಿ ನೀರು ಪಾಚಿಗಟ್ಟಿದ್ದರಿಂದ ನೋಟ್‌ಬುಕ್‌ ಒದ್ದೆಯಾಯಿತು. ಮಾರನೆ ದಿನ ಮಧ್ಯಾಹ್ನದ ಹೊತ್ತಿಗೆ ಒಣಗಿತು.

ಮನೆಗೆ ಹೋಗಿ ಹೇಳಿದೆ. ಇಲ್ಲ, ಈಗೇನು ಮಾಡೋಕಾಗೋಲ್ಲ. ಈ ಬಾಟಲು ಮುಗಿಯಲಿ, ಆಮೇಲೆ ನೀಲಿ ಇಂಕು ತಂದರಾಯಿತು ಎಂದರು. ಇಂಕ್‌ ಯಾವ ಬಣ್ಣದ್ದಾದರೇನು? ಬರೆಯುವ ಕೈ ಚೆನ್ನಾಗಿದ್ದರೆ ಸಾಕು. ನಿಮ್ಮ ಮೇಷ್ಟರುಗಳಿಗೆ ಹಾಗಂತ ಹೇಳು. ಯಾರಾದರೂ ತರಲೆ ಮಾತಾಡಿದರೆ, ಬಂದು ಹೇಳು. ನಾನೇ ಬಂದು ದಬಾಯಿಸತೀನಿ.

ನಮ್ಮ ತಂದೆಯ ಆದೇಶವನ್ನು ಮೇಷ್ಟರುಗಳು ಒಪ್ಪಲಿಲ್ಲ. ಮಹಾದೇವಪ್ಪನವರು ಇಪತ್ತು ಸಲ ಉಠ್‌ಬೈಸ್‌ ಮಾಡಿಸಿದರು.

ನಿನಗೆ ಎಲ್ಲರ ತರ ನೀಲಿ ಇಂಕ್‌ನಲ್ಲಿ ಬರೆಯೋಕೆ ಆಗದೆ ಹೋದರೆ, ಪೆನ್ಸಿಲ್‌ನಲ್ಲೇ ಬರಿ ಅಂತ ಮಹಾದೇವಪ್ಪ ಗದರಿಸಿದರು. ನಾನು ಪೆನ್ಸಿಲ್‌ನಲ್ಲಿ ಬರೆಯಲು ಶುರು ಮಾಡಿದೆ. ಇಂಕನ್ನು ಸ್ವಲ್ಪ ಸ್ವಲ್ಪ ಹೊರಗಡೆ ಹಾಕುತ್ತಿದ್ದೆ, ಯಾರಿಗೂ ಗೊತ್ತಾಗದಂತೆ. ಇನ್ನೇನು ಹಸಿರು ಇಂಕು ಮುಗಿಯುತ್ತಾ ಬಂದು ನನಗೆ ಸ್ವಲ್ಪ ಸ್ವಲ್ಪ ಧೈರ್ಯ ಬರುತ್ತಿತ್ತು. ಸ್ಕೂಲಿನಲ್ಲೂ ಹೆದರಿಕೆ ಕಡಿಮೆ ಆಗ್ತಾ ಇತ್ತು, ಮನೆಯಲ್ಲೂ ಕೂಡ.

ಆ ಧೈರ್ಯದ ಮೇಲೆ ಮನೆಯಲ್ಲಿ ಪ್ರವಾಸದ ವಿಷಯ ಹೇಳಿದೆ. ಹೋಗೋದು ಬೇಡ. ಕನ್ನಾಂಬಾಡೀನ ನಾನು ಅಗಲೇ ತೋರಿಸಿದೀನಿ. ಮಂಡ್ಯಕ್ಕೆ ಹೋಗುವಾಗ ನಮ್ಮ ಶ್ರೀರಂಗಪಟ್ಟಣದ ಮೇಲೆ ಅಲ್ಲವೇ ಹೋಗೋದು. ಸೋಮನಾಥಪುರದಲ್ಲಿ ಇರೋದು ಬರೇ ದೇವಸ್ಥಾನ. ಮಕ್ಕಳು ಯಾಕೆ ದೇವಸ್ಥಾನ ನೋಡಬೇಕು. ತಲಕಾಡಿನಲ್ಲಿ ಮಕ್ಕಳಿಗೆ ನೋಡೋಕೆ ಏನಿದೆ?

ನನ್ನ ಜೊತೆ ಮಕ್ಕಳೆಲ್ಲ ಹೊರಟುಬಿಟ್ಟಿದ್ದರು. ಅಮ್ಮನಿಗೆ ಮತ್ತೆ ಮತ್ತೆ ಹೇಳಿದೆ. ಅಮ್ಮ ಕೂಡ ಬೈಸಿಕೊಂಡಳು. ನನಗೋಸ್ಕರ ಮತ್ತೆ ಮತ್ತೆ ಹೇಳುತ್ತಿದ್ದಳು. ಕೊನೆಗೊಂದು ದಿನ ಅಪ್ಪ ರೇಗಿ ಒಪ್ಪಿಕೊಂಡರು.

ನಮ್ಮ ತಂದೆ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದುದರಿಂದ ಔಷಧಿ, ಮಾತ್ರೆಗಳನ್ನು ಮಾರುತ್ತಿದ್ದರು. ಯಾರಾದರೂ ಅವರ ಮೇಲೆ ನಂಬಿಕೆ ಇಟ್ಟುಕೊಂಡು ಕೇಳಿದರೆ, ಇಂಜೆಕ್ಷನ್‌ ಕೂಡ ಕೊಡುತ್ತಿದ್ದರು. ಮಹಾದೇವಪ್ಪನವರ ಮನೆಗೂ ಕೊಟ್ಟಿದ್ದರು. ಅದರ ಬಾಕಿ ಮೂರು ರೂಪಾಯಿ ಎಷ್ಟು ಸಲ ಕೇಳಿದರೂ ಕೊಟ್ಟಿರಲಿಲ್ಲವಂತೆ.

ಸರಿ, ನಿನ್ನ ಹೆಸರನ್ನು ಹೇಗಿದ್ದರೂ ಸಂಪತ್‌ ಮೇಷ್ಟರು ಬರಕೊಂಡಿದಾನೆ ಅಂತಿ. ಹೋಗು. ದುಡ್ಡು ಕೇಳಿದರೆ, ನಮ್ಮ ತಂದೆಗೆ ಮಹಾದೇವಪ್ಪ ಬಾಕಿ ಕೊಡಬೇಕಲ್ಲ ಅದಕ್ಕೆ ಗುರುತಾರ ಹಾಕಿಕೊಳ್ಳೋಕೆ ಹೇಳು.

ಹಾಗೆಂದು ಹೇಳುವಾಗ ತಂದೆ ಗಹಗಹಿಸಿ ನಕ್ಕರು. ಸೂಳೆಮಗ ಮಹದೇವಪ್ಪ ನನಗೆ ದುಡ್ಡು ಕೊಡದೆ ಸತಾಯಿಸತಿದಾನೆ. ಸರಿಯಾಗಿ ಬುದ್ಧಿ ಕಲಿಸ್ತೀನಿ ಅಂದರು.

ಮಕ್ಕಳು ಒಬ್ಬೊಬ್ಬರಾಗಿ ದುಡ್ಡು ತಂದು ಕೊಡ್ತಾ ಇದ್ದರು. ಕೆಲವರು ನಾಲ್ಕಾಣೆ, ಎಂಟಾಣೆ ಕಂತುಗಳಲ್ಲಿ ತಂದುಕೊಟ್ಟರು. ಸಂಪತ್‌ ಮೇಷ್ಟ್ರು ನನ್ನನ್ನು ಕೇಳಿದರು. ಎರಡು ದಿನ ಬಿಟ್ಟು, ಎಲ್ಲೋ ದುಡ್ಡು ಅಂತ ಜೋರಾಗಿ ಗದರಿಸಿದರು. ನಾನು ಮನೆಯಲ್ಲಿ ಹೇಳಿಕೊಟ್ಟಿದ್ದನ್ನು ಹೇಳಿದೆ.

“ನೋಡು, ನನಗೆ ಅದೆಲ್ಲ ಗೊತ್ತಿಲ್ಲ. ಹೆಚ್‌ ಎಂಗೆ ಹೇಳು. ನಿನ್ನ ತಂದೆ ಹೇಳಿದ್ದನ್ನೆಲ್ಲ ಹೇಳು, ನಿನ್ನ ಹೆಸರು ನನ್ನ ಹತ್ತಿರನೇ ಇರುತ್ತೆ. ಹೆಚ್‌ ಎಂ ಒಪ್ಪಿಕೊಂಡರೆ ನನ್ನದೇನು?”

ಮಹಾದೇವಪ್ಪನವರ ಎದುರಿಗೆ ಹೋಗಿ ನಿಂತುಕೊಂಡೆ. ಲೆಕ್ಕ ಸರಿಯಾಗಿ ಮಾಡಿಲ್ಲದ ಹುಡುಗರನ್ನು ಸಾಲಾಗಿ ನಿಲ್ಲಿಸಿಕೊಂಡು, ಒಬ್ಬೊಬ್ಬರನ್ನೇ ಕರೆದು, ಸಣ್ಣ ಬೆತ್ತದ ಕಡ್ಡಿಯಲ್ಲಿ ಛಡಿ ಏಟು ಕೊಡುತ್ತಿದ್ದರು. ನಾನು ಕೂಡ ಸಾಲಿನಲ್ಲಿ ನಿಂತುಕೊಂಡೆ. ಬಾಯಿ ಬಿಡಲು ಧೈರ್ಯವೇ ಬರಲಿಲ್ಲ. ನಾನು ಮಾಡಿರುವ ಲೆಕ್ಕ ಸರಿಯಾಗಿದೆ ಎಂದು ಕೆಂಪೇಗೌಡ ಮೇಷ್ಟರು ರೈಟ್‌ ಮಾರ್ಕ್‌ ಹಾಕಿಕೊಟ್ಟಿದ್ದರು. ಆದರೆ ನಾನು ಮನೆಯಲ್ಲಿ ಅಪ್ಪ ಹೇಳಿದ್ದನ್ನು ಹೇಳೋಕೆ ನಿಂತಿದ್ದೆ. ನಿಂತಿದ್ದ ಹಾಗೇ ಧೈರ್ಯ ಉಡುಗಿ ಹೋಯಿತು. ಸಾಲಿನಲ್ಲಿ ನಿಂತಿರುವುದರಿಂದ ನಾನು ಕೂಡ ಲೆಕ್ಕ ಸರಿಯಾಗಿ ಮಾಡಿಲ್ಲವೆಂದು ತಿಳಿದು ಹೊಡೆದುಬಿಟ್ಟರೆ ಅಂತ ಭಯ ಹೆಚ್ಚಾಗಿ ಹಿಂದಕ್ಕೆ ಸರಿದೆ.

ಮನೆಯಲ್ಲಿ ಹೋಗಿ ಹೇಳಿದೆ. ಮತ್ತೆ ಅಪ್ಪ ಗದರಿದರು. ಅವನಿಗೇಕೆ ಹೆದರಿಕೋತಿ. ಅವನೇನು ಶನಿ ಮಹಾರಾಜನೇ? ಅದೂ ಅಲ್ಲದೇ ಅವನೇ ನನಗೆ ಕೊಡಬೇಕಾಗಿರುವ ಬಾಬ್ತು. ನೀನು ಹೋಗಿ ಹೇಳು. ಅವನು ಆಗಲ್ಲ ಅನ್ಲಿ. ನಾನೇ ಸ್ಕೂಲ್‌ ಹತ್ತಿರ ಬಂದು ಭೂತ ಬಿಡಿಸ್ತೀನಿ ಬಡ್ಡಿ ಮಗನಿಗೆ.

ನಾನು ಹೂಂ ಅಂದೆ. ಮಹಾದೇವಪ್ಪನವರ ಆಕಾರ ನೋಡಿದರೇ ಭಯವಾಗೋದು. ಬಾಯೆಲ್ಲ ಒಣಗೋದು. ಮನೆಗೆ ಹೋದರೆ ಅಪ್ಪ ಗದರುವರು.

“ಹಸಿರು ಇಂಕೆಲ್ಲ ಸರಿಯಾಗಿ ಬರೀತಾ ಇದೆಯಾ. ಅಕ್ಷರಗಳೆಲ್ಲ ದುಂಡು ದುಂಡಾಗಿ ಬರುತ್ತಿದೆ ತಾನೇ. ಹಸಿರು ಇಂಕೇ ನಿಜವಾಗಲೂ ಚೆನ್ನಾಗಿರೋದು. ಯಾಕೆ ಈ ಎಜುಕೇಷನ್‌ ಡಿಪಾರ್ಟ್‌ಮೆಂಟಿನವರು ನೀಲಿ ಇಂಕೇ ಬೇಕು ಅಂತ ದರ್ಬಾರು ಮಾಡತಾರೋ?”

ಅಪ್ಪ, ಅಮ್ಮನಿಗೆ ನಾನು ಟೂರ್‌ ದಿವಸ ಹಾಕಿಕೊಂಡು ಹೋಗಬೇಕಾದ ಬಟ್ಟೆ ಯಾವುದಿರಬೇಕು, ರೊಟ್ಟಿ, ಮೊಸರನ್ನ ಕೊಟ್ಟು ಕಳಿಸು ಸಾಕು ಎಂದು ಮತ್ತೆ ಮತ್ತೆ ಹೇಳ್ತಾ ಇದ್ದರು.

ಎರಡು-ಮೂರು ದಿನಕ್ಕೊಂದು ಸಲ ಸಂಪತ್‌ ಮೇಷ್ಟರು ಪ್ರವಾಸಕ್ಕೆ ಬರುವ ಮಕ್ಕಳ ಹೆಸರನ್ನು ಓದಿ ಹೇಳುತ್ತಿದ್ದರು. ನನ್ನ ಹೆಸರನ್ನು ಕೂಡ ಹೇಳುತ್ತಿದ್ದರು. ನಾನು ದುಡ್ಡು ಕೊಟ್ಟಿರಲೇ ಇಲ್ಲ. ಅಪ್ಪ ಏನಾದರೂ ಮೇಷ್ಟರ ಹತ್ತಿರ, ಮಹಾದೇವಪ್ಪನವರ ಹತ್ತಿರ ಮಾತನಾಡಿದರಾ? ಇಲ್ಲ ಮಾತಾಡಿರಲಾರರು. ಏಕೆಂದರೆ, ಪ್ರತಿ ರಾತ್ರಿ ಅಪ್ಪ ಅವರನ್ನು ಬೈಯ್ಯುತ್ತಲೇ ಇದ್ದರು.

ನಿನ್ನ ದುಡ್ಡು ಕೇಳೋಕೆ ಧೈರ್ಯವೆಲ್ಲಿದೆ ಅವನಿಗೆ. ಬಿಕನಾಸಿ ನನ್ನ ಮಗ ಅವನು. ಆರು ತಿಂಗಳಾಯಿತು ಮಾತ್ರೆ, ಔಷಧಿ ದುಡ್ಡು ಕೊಡದೆ ಸತಾಯಿಸ್ತಾ ಇದಾನೆ.

ಮಧ್ಯ ರಾತ್ರಿ ಎಚ್ಚರವಾದಾಗಲೂ ಮುಖಪೂರ್ತಿ ಮುಸುಕು ಹಾಕಿಕೊಂಡು ಮಲಗಿದ್ದರೂ ಮುಸುಕಿನೊಳಗೂ ಮಹಾದೇವಪ್ಪ ಬಂದು ನನ್ನನ್ನು ಕೆಕ್ಕರಿಸಿ ನೋಡುತ್ತಿದ್ದರು.

*****

          ಪ್ರವಾಸ ಹೊರಡುವ ದಿನ ಬಂದೇ ಬಿಡ್ತು. ಬೇಕಾಗಿದ್ದ ಅಂಗಿ ಚಡ್ಡಿಯನ್ನು ಅಮ್ಮ ಎರಡು ದಿನ ಮುಂಚೆಯೇ ಎರಡು ದಿಂಬಿನ ಕೆಳಗಿಟ್ಟು ಇಸ್ತ್ರಿ ಮಾಡಿದ ಹಾಗೆ ಮಾಡಿಕೊಟ್ಟರು. ಅಡಕೆ ಪಟ್ಟಿಯಲ್ಲಿ ರೊಟ್ಟಿ, ಉಪ್ಪಿನಕಾಯಿ, ಮೊಸರನ್ನ ಕಟ್ಟಿಕೊಟ್ಟರು. ದೊಡ್ಡ ಸೋದರಮಾವ ಮಂಡ್ಯದಿಂದ ಬಂದು ಬಿಟ್ಟುಹೋಗಿದ್ದ ನೀರಿನ ಫ್ಲಾಸ್ಕ್‌ನಲ್ಲಿ ನೀರು ತುಂಬಿಕೊಟ್ಟರು. ದಾರಿ ಖರ್ಚಿಗೆಂದು ನಾಲ್ಕಾಣೆ ಕೊಟ್ಟ ಅಪ್ಪ, ಎಲ್ಲರೂ ಏನಾದರೂ ತಗೋತಾ ಇದ್ದರೆ ಮಾತ್ರೆ ನೀನೂ ತಗೋ ಅಷ್ಟೆ ಎಂದು ಹೇಳಿದರು.

ಕಿಸಾನ್‌ ಮೋಟಾರ್‌ ಬಸ್‌ ಸ್ಕೂಲ್‌ ಹತ್ತಿರ ಬಂದು ನಿಂತಿತ್ತು. ನನ್ನನ್ನು ಬಿಡಲು ಸ್ಕೂಲ್‌ ಹತ್ತಿರ ಅಪ್ಪ ಬರಬಹುದೆಂದು ಆಸೆಯಿತ್ತು. ಬರಲಿಲ್ಲ. ಮಸುಕು ಮಸುಕು ಬೆಳಕಿನಲ್ಲಿ ನಾನು ಒಬ್ಬನೇ ಹೊರಟೆ. ಬೆಳಗಿನ ಹೊತ್ತಾದರೂ ಬೆವರುತ್ತಿದ್ದೆ. ಅಷ್ಟು ಬೆಳಿಗ್ಗೆನೇ ಬಾಯಾರಿಕೆಯಾಗಿ ಸ್ಕೂಲ್‌ ಹತ್ತಿರ ಬರುವಷ್ಟರಲ್ಲೇ ಎರಡು ಸಲ ನೀರು ಗುಟಕರಿಸಿದೆ. ದಾರಿಯಲ್ಲಿ ನಾಲ್ಕು ಕಡೆ ಕಾಲುರಂಜು ಹಾಕಿ ಎಸೆದ ಸಾಮಾನುಗಳು ಕಾಣುತ್ತಿದ್ದವು. ಇನ್ನೊಂದು ಕಡೆ ಕರಿ ಮಡಕೆ ಒಡೆದು ಬಿಸಾಕಿದ್ದರು. ಎಲ್ಲ ಅಪ್ಪ-ಅಮ್ಮಂದಿರು ಬಂದಿರಲಿಲ್ಲ. ಮಹಾದೇವಪ್ಪ ಮೇಷ್ಟ್ರು, ನೀಲಿ ಬಣ್ಣದ ಜುಬ್ಬ ಹಾಕಿಕೊಂಡು ಓಡಾಡುತ್ತಿದ್ದರು. ಮೇಷ್ಟರುಗಳು ಕೂಡ ಅವರ ಹಿಂದೆ ಓಡಾಡುತ್ತಿದ್ದರು. ನಾನು ಅವರ ಕಣ್ಣಿಗೆ ಬೀಳಬಾರದೆಂದು ನನ್ನ ಕಡೆ ಬಂದ ತಕ್ಷಣ ಬೇರೆ ಕಡೆಗೆ ತಿರುಗಿಬಿಡುತ್ತಿದ್ದೆ.

ಬಸ್‌ ಹತ್ತಿದ ಮೇಲೆ ನಾನು ಮಹಾದೇವಪ್ಪನವರ ಮೇಲೆ ನಿಗಾ ಇರಿಸಿದೆ. ಅವರು ಡ್ರೈವರ್‌ ಸೀಟಿನ ಎಡಗಡೆ ಕಾಲಮೇಲೆ ಕಾಲು ಹಾಕಿಕೊಂಡು ಕುಳಿತು ಏನೇನೋ ಮಾತಾಡುತ್ತಿದ್ದರು. ಮುಂದಿನ ವರ್ಷದಿಂದ ಮಕ್ಕಳಿಗೆ ಪ್ರವಾಸ ಕಡ್ಡಾಯ. ಜುಬ್ಬದ ತೋಳು ಮಡಿಸಿದರು. ನನ್ನ ಕಡೆ ನೋಡದಂತೆ ನೋಡಿಕೊಂಡೆ. ಇಲ್ಲ, ನನ್ನ ಕಡೆ ನೋಡಲಿಲ್ಲ. ಬಸ್‌ ಮಧುವನಹಳ್ಳಿ ದಾಟಿ ಕೊಳ್ಳೇಗಾಲದ ಕೆರೆ ಏರಿ ಹತ್ತಿರ ಬಂದಾಗ ಸಂಪತ್‌ ಮೇಷ್ಟರು ಅಟೆಂಡೆನ್ಸ್‌ ತೆಗೆದುಕೊಂಡರು. ನನ್ನ ಹೆಸರು ಕರೆದಾಗ, ಎಸ್‌ ಸಾರ್‌ ಎಂದು ಅತುರಾತುರವಾಗಿ ಹೇಳಿದೆ. ಹೇಳುವಾಗ ಅರ್ಧ ಮಾತ್ರ ಎದ್ದು ತಟಕ್ಕನೆ ಕುಳಿತುಕೊಂಡು ಬಿಟ್ಟೆ. ಮಹಾದೇವಪ್ಪ ನನ್ನನ್ನು ನೋಡಬಹುದು, ದುಡ್ಡು ಕೊಟ್ಟಿಲ್ಲ ಅಂತ ಎಲ್ಲರೆದುರಿಗೆ ಹೀಯಾಳಿಸಿ ಅವಮಾನ ಮಾಡಬಹುದು. ಅಪ್ಪ ನನ್ನನ್ನು ಹೀಗೆ ಪೇಚಿಗೆ ಸಿಗಸಬಾರದಾಗಿತ್ತು.

ಪ್ರವಾಸದುದಕ್ಕೂ ನಾನು ಮಹಾದೇವಪ್ಪನವರನ್ನೇ ಗಮನಿಸುತ್ತಿದ್ದೆ. ತಲಕಾಡಿನಲ್ಲಿ ಎಲ್ಲರೂ ಚಕ್ರತೀರ್ಥ ನೋಡಲು ಹೋದಾಗ, ನಾನು ಯಾರಿಗೂ ತಿಳಿಯದಂತೆ ಬಸ್‌ ಹಿಂದುಗಡೆ ಅವಿತುಕೊಂಡೆ. ಸೋಮನಾಥಪುರದಲ್ಲಿ ಎಲ್ಲರೂ ದೇವಸ್ಥಾನದಲ್ಲಿ ಗರ್ಭಗುಡಿಯ ಮುಂದೆ ಕುಳಿತುಕೊಂಡು ರಾಗವಾಗಿ ಭಜನೆ ಮಾಡಿದರು. ಕಲ್ಲಿನಲಿ ಕೆತ್ತಿದನು ಶಿಲ್ಪಿಯವ ಶಿವನ ಹಾಡು ಹಾಡಿದರು. ನಾನು ಗುಂಪಿನ ಮಧ್ಯೆ ಸೇರಿಕೊಂಡುಬಿಟ್ಟೆ. ನರಸೀಪುರದಲ್ಲಿ ಸಂಗಮದ ಹತ್ತಿರ ಎಲ್ಲ ಊಟ ಮಾಡಿದರು. ಮಹಾದೇವಪ್ಪ ಬೇಗ ಊಟ ಮುಗಿಸಿ ಒಂದು ಪಕ್ಕಕ್ಕೆ ಹೋಗಿ ಸಿಗರೇಟ್‌ ಸೇದಿ ಆಕಾಶ ಎಲ್ಲ ತುಂಬುವಷ್ಟು ಹೊಗೆ ಬಿಟ್ಟರು. ನಾನು ಊಟ ಮಾಡಬೇಕಾದರೆ ಒಂದು ಕಡೆ ಕುಳಿತುಕೊಳ್ಳಬೇಕು. ಹಾಗೆ ಕುಳಿತಾಗ ಮಹಾದೇವಪ್ಪ ಬಂದುಬಿಟ್ಟರೆ ಎಂದು ಕೂರಲೇ ಇಲ್ಲ. ಮಹಾದೇವಪ್ಪ ಓಡಾಡುವ ವಿರುದ್ಧ ದಿಕ್ಕಿನಲ್ಲಿ ಓಡಾಡುತ್ತಾ ಕಣ್ಣು ತಪ್ಪಿಸಿದೆ. ಕನ್ನಂಬಾಡಿ ತಲುಪುವ ಹೊತ್ತಿಗೆ ಮುಸ್ಸಂಜೆ. ಕತ್ತಲಲ್ಲಿ ಮಹಾದೇವಪ್ಪನವರಿಗೆ ನನ್ನ ಮುಖ ಕಾಣುವ ಹಾಗೇ ಇರಲಿಲ್ಲ. ಪಟ್ಟಣದಲ್ಲಿ ರಂಗನಾಥಸ್ವಾಮಿಗೆ ಮಂಗಳಾರತಿ ಆದಮೇಲೆ, ಮಂಗಳಾರತಿ ತಟ್ಟೆ ನನ್ನ ಹತ್ತಿರ ಬಂದಾಗ ಅದರ ಬೆಳಕು ನನ್ನ ಮೇಲೆ ಬೀಳದಂತೆ ಹಿಂದೆ ಸರಿದೆ.

ಬಸ್‌ ಮತ್ತೆ ಕಾಮಗೆರೆ ಕಡೆಗೆ ಹೊರಟಿತು. ಮಕ್ಕಳೆಲ್ಲ ತುಂಬಾ ಖುಷಿಯಾಗಿದ್ದರು. ಕೆಲವರು ನಿದ್ದೆ ಮಾಡುತ್ತಿದ್ದರು. ಕ್ಲಾಸ್‌ ಪುಸ್ತಕದಲ್ಲಿದ್ದ ಪದ್ಯಗಳನ್ನೇ ಮತ್ತೆ ಹಾಡಿದರು. ಕಡ್ಲೆ ಕಾಯಿ, ಒಣ ಬಟಾಣಿ ಕೊಂಡಿದ್ದವರು ನನಗೂ ತಿನ್ನಲು ಕೊಟ್ಟರು. ನಾನು ಮಾತ್ರ ಯಾವ ಪೆಟ್ಟಿ ಅಂಗಡಿಯ ಹತ್ತಿರವೂ ಹೋಗಿರಲಿಲ್ಲ. ಏನನ್ನೂ ಕೊಂಡಿರಲಿಲ್ಲ.

ಬಸ್‌ ಮತ್ತೆ ಸತ್ತೇಗಾಲ, ಕೊಳ್ಳೇಗಾಲ, ಮಧುವನಹಳ್ಳಿ, ಇಂದುವಾಡಿ, ಸಿಂಗನಲ್ಲೂರು ದಾಟಿ ಕಾಮಗೆರೆ ತಲುಪಿದಾಗ ರಾತ್ರಿ ಹತ್ತೂವರೆ ಆಗಿತ್ತು. ಇನ್ನೂ ಜಾಸ್ತಿ ಆಗಿರಬೇಕು. ಸ್ಕೂಲ್‌ ಎದುರಿಗಿದ್ದ ದೊಡ್ಡ ಆಲದಮರ ಕತ್ತಲೆಯಲ್ಲಿ ಇನ್ನೂ ದೊಡ್ಡದಾಗಿ ಕಾಣುತ್ತಿತ್ತು. ಬೀದಿ ದೀಪಗಳು ಅಲ್ಲೊಂದು ಇಲ್ಲೊಂದು ಉರಿಯುತ್ತಿದ್ದವು. ಮೇಷ್ಟರುಗಳು ಮಕ್ಕಳನ್ನು ಕರೆದುಕೊಂಡು ಹೋಗಲು ಬಂದಿದ್ದ ತಾಯಿ-ತಂದೆಗಳ ಹತ್ತಿರ, ಮಕ್ಕಳು ತುಂಬಾ ಸಂತೋಷಪಟ್ಟರು, ಗಲಾಟೆ ಮಾಡಲಿಲ್ಲ ಎಂದು ಹೇಳುತ್ತಿದ್ದರು. ಕಾಮಗೆರೆ ಗೌರ್ನಮೆಂಟ್‌ ಸ್ಕೂಲಿಗೆ ಜೈ ಎಂದು ಎಲ್ಲ ಮಕ್ಕಳ ಕೈಲೂ ಜೋರಾಗಿ ಕೂಗಿಸಿದರು.

*****

          ಮನೆ ಹತ್ತಿರ ಬಂತು. ಅಡಕೆಪಟ್ಟಿಯಲ್ಲಿ ಇನ್ನೂ ಊಟ ಹಾಗೇ ಇದೆ. ಊಟ ಮಾಡೇ ಇಲ್ಲ. ಏನು ಮಾಡಬೇಕು. ಮನೆ ಪಕ್ಕದ ಪೋಸ್ಟ್‌ ಆಫೀಸ್‌ ಹತ್ತಿರ ಒಂದು ತಿಪ್ಪೆ ಇತ್ತು. ಅಲ್ಲಿ ಹಾಕಿದರೆ ಬೆಳಿಗ್ಗೆ ಅಮ್ಮನಿಗೋ, ಪಕ್ಕದ ಮನೆ ವೆಂಕಟೇಶ ಮೇಷ್ಟರ ಮನೆಯವರಿಗೋ ಕಾಣಬಹುದು. ಏನು ಮಾಡೋದು? ತಿಪ್ಪೆ ಹತ್ತಿರವೇ ಹಾಕಿ ಅದರೆ ಮೇಲೆ ಸುತ್ತಮುತ್ತ ಇದ್ದ ಕಲ್ಲುಮಣ್ಣು ಮುಚ್ಚಿದೆ. ಮತ್ತಷ್ಟು ಮಣ್ಣು ಎರಚಿದೆ.

ಬಾಗಿಲು ತಟ್ಟಿದೆ. ತೆಗೆಯಲಿಲ್ಲ. ಎರಡನೆ ಸಲ ಬಡಿದಾಗ ನನಗೇ ಧೈರ್ಯ ಜಾಸ್ತಿಯಾಗಿತ್ತು. ಗಟ್ಟಿಯಾಗಿ ಬಾಗಿಲು ಬಡಿದೆ. ಒಳಗಡೆ ಲಾಟೀನು ದೀಪ ದೊಡ್ಡದು ಮಾಡಿ, ಬಂದ ಅಂತ ಕಾಣುತ್ತೆ ಚಕ್ರವರ್ತಿ ಮಹಾರಾಜ ಅಂತ ಅಪ್ಪ ತಮಾಷೆ ಮಾಡಿ ಕೂಗಿದರು. ಅಮ್ಮ tour ಚೆನ್ನಾಗಿತ್ತೇನೋ, ಮೊಸರನ್ನ ಸಾಕಾಯಿತಾ ಎಂದು ಕೇಳಿದರು. ಸಾಕಾಯಿತು, ಚೆನ್ನಾಗಿತ್ತು, ಹೊಟ್ಟೆ ತುಂಬಿತು. ನಾನು ತಿಂಡಿ ಏನೂ ತಗೊಳ್ಳಲೇ ಇಲ್ಲ ಅಂತ ನಾಲ್ಕಾಣೆ ಪಾವಲಿಯನ್ನು ಅಪ್ಪನಿಗೆ ಕೊಡಲು ಹೋದಾಗ ಅವರು ಮುಖದ ತುಂಬಾ ನಕ್ಕರು.

ಮಹಾದೇವಪ್ಪ ಸೂಳೆಮಗ ಕೇಳಲಿಲ್ಲ ಅಲ್ಲವಾ. ಕೇಳಲ್ಲ ಅಂತ ಗೊತ್ತಿತ್ತು ಬಿಡು. ಸದ್ಯ ಹೀಗಾದರೂ ದುಡ್ಡು ವಸೂಲಾಯಿತಲ್ಲ. ಮುಂದಿನ ವರ್ಷದಿಂದ ನೀನು ಕೂಡ ಎಲ್ಲರಂತೆ ರಾಜಾರೋಷವಾಗಿ ಕಾಸು ಕೊಟ್ಟು ಹೋಗುವಿಯಂತೆ. ಈಗ ಕೈಕಾಲು ತೊಳೆದುಕೊಂಡು ಮಲಗಿಕೊ ಅಂದರು.

ರೊಟ್ಟಿ ತುಂಬಾ ಜಾಸ್ತಿ ಕೊಟ್ಟಿದ್ದೆ. ವಾಪಸ್‌ ಬರತಾ ಸತ್ತೇಗಾಲದ ಹತ್ತಿರ ತಿಂದೆ ಎಂದು ಹೇಳಿದ ಮೇಲೆ ಎಲ್ಲರೂ ಮಲಗಿಕೊಂಡರು.

ನನಗೆ ಈಗ ಯಾವ ರೀತಿಯ ಹೆದರಿಕೆಯೂ ಇರಲಿಲ್ಲ, ಯಾರ ಹೆದರಿಕೆಯೂ ಇರಲಿಲ್ಲ.

ಬೆಳಿಗ್ಗೆ ಎದ್ದು ಸ್ಕೂಲಿಗೆ ಹೋದಾಗ ಮಹಾದೇವಪ್ಪ ಮೇಷ್ಟರು ದೂರದಲ್ಲಿ ಕಾಣಿಸಿದರು. ಕಾಣಿಸಿದರೆ ಕಾಣಿಸಲಿ ಅಂತ ಅಂದುಕೊಂಡು ನಾನು ನನ್ನ ಬ್ಯಾಗಿನಿಂದ ಪುಸ್ತಕಗಳನ್ನು ತೆಗೆದು, ಎದುರುಗಡೆ ಇದ್ದ ಮಣೆಯ ಮೇಲೆ ಇಟ್ಟುಕೊಂಡೆ.

About The Author

ಕೆ. ಸತ್ಯನಾರಾಯಣ

ಕೆ. ಸತ್ಯನಾರಾಯಣ ಹುಟ್ಟಿದ್ದು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೊಪ್ಪ ಗ್ರಾಮದಲ್ಲಿ. 1978ರಲ್ಲಿ ಭಾರತ ಸರ್ಕಾರದ ಇಂಡಿಯನ್ ರೆವಿನ್ಯೂ ಸರ್ವೀಸ್ ಗೆ ಸೇರಿ ಆದಾಯ ತೆರಿಗೆ ಇಲಾಖೆಯಲ್ಲಿ ದೇಶದ ನಾನಾ ಭಾಗಗಳಲ್ಲಿ ಕೆಲಸ ಮಾಡಿ ನಿವೃತ್ತಿಯಾಗಿದ್ದಾರೆ. ಸಣ್ಣಕಥೆ, ಕಿರುಕಥೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣಬರಹ, ವಿಮರ್ಶೆ, ಪ್ರವಾಸಕಥನ- ಹೀಗೆ ಬೇರೆ ಬೇರೆ ಪ್ರಕಾರಗಳಲ್ಲಿ ಇವರ ಕೃತಿಗಳು ಪ್ರಕಟವಾಗಿವೆ. ಮಾಸ್ತಿ ಕಥಾ ಪುರಸ್ಕಾರ(ನಕ್ಸಲ್ ವರಸೆ-2010) ಮತ್ತು ಕಥಾ ಸಾಹಿತ್ಯ ಸಾಧನೆಗೆ ಮಾಸ್ತಿ ಪ್ರಶಸ್ತಿ, ಬಿ.ಎಂ.ಶ್ರೀ.ಪ್ರತಿಷ್ಠಾನದ ಎಂ.ವಿ.ಸೀ.ಪ್ರಶಸ್ತಿ, ಬೆಂಗಳೂರು ವಿವಿಯ ಗೌರವ ಡಾಕ್ಟರೇಟ್(2013), ರಾ.ಗೌ.ಪ್ರಶಸ್ತಿ, ಬಿ.ಎಚ್.ಶ್ರೀಧರ ಪ್ರಶಸ್ತಿ, ವಿಶ್ವಚೇತನ ಪ್ರಶಸ್ತಿ, ಸೂರ್ಯನಾರಾಯಣ ಚಡಗ ಪ್ರಶಸ್ತಿ (ಸಾವಿನ ದಶಾವತಾರ ಕಾದಂಬರಿ), ವಿ.ಎಂ.ಇನಾಮದಾರ್‌ ಪ್ರಶಸ್ತಿ (ಚಿನ್ನಮ್ಮನ ಲಗ್ನ ಕೃತಿ) ಸೂವೆಂ ಅರಗ ವಿಮರ್ಶಾ ಪ್ರಶಸ್ತಿ (ಅವರವರ ಭವಕ್ಕೆ ಓದುಗರ ಭಕುತಿಗೆ ವಿಮರ್ಶಾ ಕೃತಿ) ಲಭಿಸಿದೆ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ