Advertisement
“ಹಯವದನದ ಅತೃಪ್ತ ಆತ್ಮಗಳು”: ಪ್ರಶಾಂತ್ ಬೆಳತೂರು ಬರಹ

“ಹಯವದನದ ಅತೃಪ್ತ ಆತ್ಮಗಳು”: ಪ್ರಶಾಂತ್ ಬೆಳತೂರು ಬರಹ

ಬದುಕಿನಲ್ಲಿ ಸಾಕಷ್ಟು ಅನುಭವಗಳಾಗಿದ್ದರೂ ಹಿಂದೆ ಎಂದೋ ಮಾಡಿದ ಅವರ ತಪ್ಪುಗಳಿಗೆ ಈಗ ಇಲ್ಲಿ ಕೂತು ಸುಖಾಸುಮ್ಮನೆ ಅದರ ಪ್ರಾಯಶ್ಚಿತ್ತ ಅನುಭವಿಸುತ್ತಿರಬಹುದು. ಮನೆ, ಮಕ್ಕಳು, ಸಂಸಾರ ಇತ್ಯಾದಿಗಳಲ್ಲಿ ಕಳೆದು ಹೋಗಿರಬಹುದಾದ ಅವರು ಈಗ ತಮ್ಮನ್ನು ತಾವು ಇಲ್ಲಿ ಈ ಕ್ಷಣ ಹುಡುಕಿಕೊಳ್ಳುತ್ತಿರಬಹುದು, ಅಥವಾ ಇಷ್ಟು ದಿನದ ಸಂತಸದ ಬದುಕನ್ನು ನಾನು ನನ್ನ ಯೌವ್ವನದ ಕಾಲದಲ್ಲಿ ಕಳೆಯಲಾಗಲಿಲ್ಲವೆಂಬ ಹಪಾಹಪಿತನದಿಂದ ಇಲ್ಲಿಗೆ ಬಂದು ನಿತ್ಯ ನರಳುತ್ತಿರಬಹುದು, ಅಥವಾ ಮುಂದಿನ ತಮ್ಮ ಬದುಕು ಹೇಗೆ ಕೊನೆಯಾಗಬಹುದು ಎಂಬ ಆತಂಕವೂ ಕಾಡುತ್ತಿರಬಹುದು. ಒಟ್ಟಿನಲ್ಲಿ ಒಬ್ಬೊಬ್ಬರು ಒಂದೊಂದು ಮುಖವಾಡಗಳ ಬೆನ್ನು ಹತ್ತಿ ತಾವು ಹೊರಟಿರುವ ಹಾದಿಯ ಬಗ್ಗೆ ಗುಮಾನಿ ಶುರುವಾಗಿ ಮಗ್ಗಲು ಬದಲಿಸಲಾಗದೆ, ತಿರುವು ಪಡೆದುಕೊಳ್ಳಲಾಗದೆ ಏನನ್ನೋ ಕಳೆದುಕೊಂಡ ಭಾವದಲ್ಲಿ ಮನಸು ವಿಲವಿಲ ಒದ್ದಾಡುತ್ತಿರಲೂಬಹುದು..!
ಪ್ರಶಾಂತ್‌ ಬೆಳತೂರು ಬರಹ ನಿಮ್ಮ ಓದಿಗೆ

ಎರಡು ಅತೃಪ್ತ ಆತ್ಮಗಳು ನಗರದ ಜನ ಜಂಗುಳಿಯ ನಡುವೆ ಭೇಟಿಯಾದವು. ಮನುಷ್ಯರಾಗಿದ್ದಾಗ ಪ್ರೇಮದ ವಿರಹದಲ್ಲೇ ನೊಂದು ಬೆಂದು ಬಸವಳಿದು ಹೋಗಿದ್ದ ಅವು ಮನುಷ್ಯ ಜನ್ಮದಿಂದ ಕಳಚಿಕೊಂಡೊಡನೆ ಪ್ರೇಮದ ಹೊಸ ಹಕ್ಕಿಗಳಂತೆ ಮೊದಲ ಬಾರಿಗೆ ಇಲ್ಲಿ ಈಗಷ್ಟೇ ಭೇಟಿಯಾದವು. ಅವು ತಾವು ಹಿಂದೆ ಮನುಷ್ಯರಾಗಿದ್ದಾಗ ಇದೇ ನಗರದಲ್ಲಿ ತಾವು ಯಾರ ಕಣ್ಣಿಗೂ ಬೀಳದಂತೆ ಪ್ರೇಮದಲ್ಲಿ ಕೈಗೆ ಕೈ ತಾಕಿಸಿ ಮೈಗೆ ಮೈ ಸೋಕಿಸಿ ಬಿಗಿದಪ್ಪಿ ನಡೆದ ಸ್ಥಳಗಳೆಲ್ಲಾವನ್ನು ಸುತ್ತು ಹಾಕುತ್ತಾ ಈ ನಗರದಲ್ಲಿ ಹಿಂದೆ ತಾವು ಬೇರ್ಪಡಲು ಕಾರಣವಾದ ಕಹಿ ಘಟನೆಯೊಂದನ್ನು ನೆನೆಯುತ್ತಾ ಓಡಾಡುತ್ತಿರುವಾಗ, ಒಂದು ಆತ್ಮವೂ ಶತಮಾನದ ನಮ್ಮ ಆಸೆ- ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲಾಗದ ಮನುಷ್ಯ ಜನ್ಮವೊಂದು ನರಕ ಎಂದು ಬಗೆಯುತ್ತಾ ಷರಾ ಬರೆದರೆ… ಮತ್ತೊಂದು ಆತ್ಮ ಮನುಷ್ಯ ಜನ್ಮವೇ ಶ್ರೇಷ್ಠವೆಂದು ನಮಗೆ ನಮ್ಮ ಕೈಯಲ್ಲಿದ್ದ ಬದುಕನ್ನು ಬದುಕಲಾಗಲಿಲ್ಲ ಅಂತಹದೊಂದು ಬದುಕು ನಮ್ಮದಾಗಿದ್ದಾರೆ ಅಲ್ಲೇ ಹೆಚ್ಚಿನ ಖುಷಿ ಮನೆ ಮಾಡಿರುತ್ತಿತ್ತು ಎಂದು ಬಗೆದು ತಮ್ಮ ಈಗಿನ ಸ್ಥಿತಿಗೆ ಮರುಕ ತಂದುಕೊಂಡಿತು. ಅದನ್ನು ಸಮಾಧಾನಿಸುತ್ತಾ ಮತ್ತೊಂದು ಆತ್ಮ ಹೀಗೆಂದಿತು..! ಪ್ರೇಮದ ಬಗ್ಗೆ ನಿನಗೆ ಈಗಲೂ ನಿಖರವಾದ ತಿಳವಳಿಕೆ ಇಲ್ಲ ನಿನ್ನ ಪ್ರೇಮವೆಲ್ಲವೂ ಗೊಂದಲದ ಗೂಡು..! ನಿನ್ನಲ್ಲಿ ಉಳಿದುಕೊಂಡ ಹುಚ್ಚು ಕಲ್ಪನೆ, ನಿನ್ನ ಮತಿಹೀನ ಭ್ರಮೆ, ನೀನೊಂದು ಈಗ ಆತ್ಮವಾಗಿದ್ದರೂ ಮತ್ತೆ ದೇಹದ ಬಗ್ಗೆ ಪ್ರೇಮ ಹೊಂದುವುದು? ಯಾವ ನ್ಯಾಯ ಹೇಳು ಎಂದಿತು. ಲಿಂಗ ಭೇದವಿಲ್ಲದ, ರೂಪವಿಲ್ಲದ, ನಿರಾಕಾರವಾದ ಈ ಆತ್ಮದಲ್ಲಿ ಸಕಲವನ್ನು ಪ್ರೇಮಿಸುವುದು ಸಾಧ್ಯವಾಗುವಾಗ ಅಳಿದ ದೇಹದ ಬಗ್ಗೆ ಹಂಬಲ ಹೊಂದುವುದು ವ್ಯಾಮೋಹವೇ ಹೊರತು ಪ್ರೇಮವಲ್ಲ ಎಂದು ಜರೆಯಿತು..! ಈ ಮುಂಚೆ ಯಕಃಶ್ಚಿತ್ ಖಾಸಗಿ ಕಾಲೇಜಿನ ಉಪನ್ಯಾಸಕನೂ ಮೇಲಾಗಿ ಕವಿಯೂ ಆಗಿದ್ದ ನೀನು ಪಾಠ ಮಾಡುವಾಗ ಅದೆಷ್ಟು ವಿದ್ಯಾರ್ಥಿಗಳಿಗೆ ಪಾಠ ಬಿಟ್ಟು ಈ ಹುಚ್ಚು ಪ್ರೇಮದ ವಿರಹಗಳ ಕತೆಯನ್ನೆಲ್ಲಾ ಪುಃಖಾನುಪುಂಖವಾಗಿ ಒದರುತ್ತಿದ್ದೆ. ಯಾವುದಕ್ಕಾದರೂ ಅರ್ಥವಿದೆಯಾ? ಮಾತಾಡು ಎಂದಿತು. ತುಂಬಾ ಹೊತ್ತು ಮೌನದಿಂದ್ದ ಆತ್ಮ ನಾವಿಬ್ಬರೂ ಪ್ರೇಮಿಗಳಾಗಿದ್ದಾಗ ಹಯವದನ ನಾಟಕವನ್ನೊಮ್ಮೆ ಓದಿದ್ದೆವು ನೆನಪಿದೆಯಾ ನಿನಗೆ ಎಂದು ಕೇಳಿತು? ಅದಕ್ಕೆ ಪ್ರತಿಕ್ರಿಯಿಸಿದ ಮತ್ತೊಂದು ಆತ್ಮ ಹಾ… ಆ ಪದ್ಮಿನಿಯ ಕತೆಯೇ? ಎಂದು ನಗುತ್ತಾ ಅದ್ಕೆ ನೀನಿನ್ನೂ ಅತೃಪ್ತ ಆತ್ಮ..! ದೇಹ ಸತ್ತರೂ ಅದೇ ಅತೃಪ್ತತೆ ನಿನ್ನಲ್ಲಿ ಉಳಿದಿದೆ.! ಆ ನಾಟಕದಿಂದ ನಮ್ಮಂತಹ ಆತ್ಮಗಳಿಗೆ ಏನಾಗಬೇಕಾಯಿತು? ನಾಟಕವೋ? ಸಾಹಿತ್ಯವೋ? ಸಿನಿಮಾವೋ? ಅಥವಾ ಎದೆಯಾಳದಲ್ಲಿ ಮತ್ತೆ ಮತ್ತೆ ಗುನುಗುವ ಹಾಡೋ? ಅವೆಲ್ಲಾ ಮನುಷ್ಯರಿಗೆ..! ಆತ್ಮಕ್ಕೆ ಇಂತಹ ರೋಗಗಳಿರಬಾರದು. ಜಗತ್ತಿನ ಎಲ್ಲ ಜನರು ನಾಳೆಯ ಕಲ್ಪನೆಯ ಕನಸಿನಲ್ಲಿ ಅಥವಾ ಭ್ರಮೆಯಲ್ಲಿ ನಮ್ಮಂತೆ ಬದುಕನ್ನು ವೃಥಾ ಕಳೆದುಕೊಂಡು ಬಿಡುತ್ತಾರೆ. ಬದುಕು ಅರ್ಥವಾಗುವಷ್ಟರಲ್ಲಿ ಮುಪ್ಪು ಮೈಗೆ ಅಂಟಿರುತ್ತದೆ. ಸಾವು ತಲೆ ಸವರಿಕೊಂಡು ಜೊತೆಯಾಗುತ್ತದೆ ಎಂದು ನಿಟ್ಟುಸಿರು ಬಿಟ್ಟಿತು..! ಸಾವು… ಒಂದು ರೀತಿಯಲ್ಲಿ ಒಳ್ಳೆಯದೇ ಆದರೆ ಎಷ್ಟೋ ಜನ ಬದುಕಿದ್ದಾಗಲೇ ಇಲ್ಲಿ ಸತ್ತಂತಿರುತ್ತಾರೆ…! ಅತ್ತ ಸಾಯಲಾಗದೆ ಇತ್ತ ಬದುಕಲೂ ಆಗದೆ ಅತೃಪ್ತಿಯಲ್ಲಿಯೇ ದಿನ ದೂಡುವ ಕೋಟ್ಯಂತರ ಜೀವಗಳ ಕುರಿತು ಯಾರು ಯೋಚಿಸುತ್ತಾರೆ ಇಲ್ಲಿ? ನೀನಿಲ್ಲಿ ವ್ಯಕ್ತಿಯ ಒಳಗಿರುವ ಆತ್ಮದ ಬಗ್ಗೆ ಮಾತ್ರ ಮಾತಾಡುತ್ತಿದ್ದೀ? ಆದರೆ ಈ ನಗರಕ್ಕೂ ಒಂದು ಆತ್ಮವಿದೆ..! ಅದು ಈ ಜನಜಂಗುಳಿಯ ದಟ್ಟಣೆಯೆಲ್ಲಾ ಕಡಿಮೆಯಾಗಿ ನಿದಿರೆಗೆ ಜಾರುವಾಗ ನಮ್ಮಂತಹ ಅತೃಪ್ತ ಆತ್ಮಗಳ ಕಂಡು ಒಂದೇ ಸಮನೇ ಬಿಕ್ಕಳಿಸುತ್ತದೆ. ಅದೋ ಅಲ್ಲಿ ನಗರದ ವೃತ್ತದ ಆ ಗಲ್ಲಿಯೊಂದರಲ್ಲಿ ಸಿಂಗರಿಸಿಕೊಂಡು ನಿತ್ಯ ಗಿರಾಕಿಗಳಿಗೆ ಕಾಯುತ್ತಾ ನಿಂತಿರುವ ಆ ಹೆಂಗಸರ ಪಾಡು ನೋಡು..! ಅಲ್ಲಿ ಹಸಿರು ಸೀರೆ ಉಟ್ಟ ಆ ಹೆಂಗಸಿನ್ನೂ ತನ್ನ ಮೊದಲ ರಾತ್ರಿಯಲ್ಲಿ ಗಂಡನೊಂದಿಗೆ ಅವನ ಉಕ್ಕಿನಂತಹ ಬಾಹುಗಳೊಂದಿಗೆ ಮಿಂದೆದ್ದ ಕಾಮದ ಅಮಲಿನ ಗುಂಗನ್ನು ಮತ್ತೆ ಮತ್ತೆ ನೆನೆದು ಅತೃಪ್ತಿಯಲ್ಲಿ ಬಿಕ್ಕಳಿಸುತ್ತಾಳೆ. ಈಗ ಈ ನಗರದ ಎಷ್ಟೊಂದು ಗಂಡಸರೊಂದಿಗೆ ಅವಳು ಮಲಗಿದ್ದಾಳೆ ಎಂಬುದು ಅವಳಿಗೂ ಅಂದಾಜಿಲ್ಲ. ಆದರೆ ಅವಳ ಎದೆಯನ್ನು ಕಲಕಿರುವುದು, ಆರದ ಗಾಯದಂತೆ ಉರಿಯುತ್ತಲೇ ಇರುವುದು ಎಂದೋ ಪ್ರೀತಿಸಿ ಮದುವೆಯಾಗಿದ್ದ ಅವಳ ಗಂಡ ಮಾತ್ರ. ಅವನೋ ಇವಳಷ್ಟು ತುಂಬಾ ಒಳ್ಳೆಯವನೇನಲ್ಲ. ಚಿನ್ನದಂತಹ ಪ್ರೇಯಸಿ ಹೆಂಡತಿಯಾಗಿ ಬಂದ ಮೇಲೂ ಅವನಿಗೆ ಅತೃಪ್ತಿ ಕಾಡಿತು..! ದಿನ ಇವಳನ್ನು ಸಂಭೋಗಿಸುವುದರಲ್ಲಿ ಸುಖ ಕಳೆದುಕೊಂಡು ಇವಳಿಗೆ ಗೊತ್ತಾಗದಂತೆ ಹತ್ತಾರು ಹೆಣ್ಣು ದೇಹಗಳ ನಡುವೆ ಹಪಾಹಪಿಸಿ ಕಾಮದ ರೋಗ ಹೊತ್ತಿಸಿಕೊಂಡು ದೇಹ ತೊರೆದ. ಈಗ ಮತ್ತೊಂದು ದೇಹವನ್ನು ಹೊಕ್ಕಲು ವಿಷಾದದಲ್ಲಿ ಅಲೆಯುತ್ತಿದ್ದಾನೆ! ಆದರೆ ನೀನು ಆತ್ಮವಾದರೂ ಇನ್ನೂ ಅನ್ಯ ಮನಸ್ಕನಾಗಿ ಅಪೂರ್ಣ ಆತ್ಮವಾಗುವುದು ಥರವಲ್ಲ..! ಆತ್ಮವಿರುವುದು ಪೂರ್ಣತೆಗಾಗಿ ಎಂದಿತು. ಕ್ಷಣ ಕಾಲ ಆ ಎರಡು ಆತ್ಮಗಳು ಮೌನವಾದವು. ಕವಿಯ ಆತ್ಮ ಮತ್ತೆ ಸಾವಾಕಾಶವಾಗಿ ಮಾತಾನಾಡಲು ಶುರು ಮಾಡಿತು.

 

ನೋಡು ಪೂರ್ಣತೆ ಎಂಬುದು ಮನುಷ್ಯನ ಒಂದು ಹುಚ್ಚು ಕಲ್ಪನೆ..! ಅವನಿಗೆ ಬದುಕಿನಲ್ಲಿ ಕೊರತೆಗಳಿರಬೇಕು..! ಏನಾದರೊಂದು ಅತೃಪ್ತಿ ಕಾಡಬೇಕು ಇಲ್ಲದಿದ್ದರೆ ಅವನು ಜೀವಂತವಾಗಿ ಈ ಸಮಾಜದೊಂದಿಗೆ ಇರಲಾರ. ಈ ನಗರದ ಉದ್ಯಾನವನ್ನೊಮ್ಮೆ ನೋಡು ಇಲ್ಲಿಗೆ ಎಳೆಯ ಮಕ್ಕಳಿಂದ ಹಿಡಿದು ಪ್ರೇಮಿಗಳು, ವಯಸ್ಕರು, ಉದ್ಯೋಗಸ್ಥರು, ನಿವೃತ್ತರು, ಸಾವಿನಂಚಿನಲ್ಲಿ ಏಕಾಂಗಿಯಾಗಿ ಕೂತು ಏನನ್ನೋ ಧೇನಿಸುವವರು ಎಲ್ಲರೂ ಈ ಒಂದೇ ಉದ್ಯಾನವನಕ್ಕೆ ಬರುತ್ತಾರೆ. ಆದರೆ ಅವರೊಳಗಿನ ಭಾವನೆಗಳ ತಾಕಲಾಟದಿಂದ ಈ ಉದ್ಯಾನವನ ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಅವರ ಕಂಗಳಿಗೆ ತೆರೆದುಕೊಳ್ಳುತ್ತದೆ. ಎಳೆಯ ಮಕ್ಕಳಿಗೆ ಈ ಒಂದು ಉದ್ಯಾನವನ ಮುಂದೆ ತಮ್ಮ ಬಾಲ್ಯ ಕಾಲದ ಸುಂದರ ನೆನಪುಗಳಾಗಿ ಅವರ ಎದೆಯಲ್ಲಿ ಉಳಿಯಬಹುದು. ಇಲ್ಲಿನ ಪ್ರೇಮಿಗಳು ಮುಂದೊಂದು ದಿನ ಈ ಉದ್ಯಾನವನದಲ್ಲಿನ ತಮ್ಮ ಪ್ರೇಮದ ಭೇಟಿಗಳನ್ನು ನೆನೆದು ಖುಷಿಗೊಳ್ಳಬಹುದು ಅಥವಾ ಈ ನೆನಪುಗಳೇ ಕಹಿಯಾಗಿ ಮುಂದೊಂದು ದಿನ ಯಮಯಾತನೆಯ ವಿರಹದಲ್ಲಿ ಕಾಡುತ್ತಾ ಇಲ್ಲಿಗೆ ಮತ್ತೆ ಕಾಲಿಡಲು ಹೆದರಬಹುದು ಅಥವಾ ಮತ್ತೆ ಇನ್ನೊಬ್ಬ ಪ್ರಿಯಕರನೋ, ಗಂಡನೋ, ಹೆಂಡತಿಯೋ ಹೀಗೆ ಯಾರಾದರೊಂದಿಗೆ ಬಂದಾಗ ತನ್ನ ಹಳೆಯ ಪ್ರೇಮದ ಕಡತವನ್ನು ಮನದೊಳಗೆ ಬಿಚ್ಚಿಕೊಂಡು ವಿಷಾದದಲ್ಲಿ ಮೌನಕ್ಕೆ ಜಾರಬಹುದು. ಇಲ್ಲಿಯ ಯಾವುದಾದರೂ ಉದ್ಯೋಗಸ್ಥನಿಗೆ ಈ ದಿನದ ನೆಮ್ಮದಿ ತರಬಹುದು ಅಥವಾ ಇಲ್ಲಿಯ ಯಾವುದಾದರೂ ಮರವೋ ಕಲ್ಲಿನ ಬೆಂಚಿನಲ್ಲಿ ಕೂತ ಆರಾಮದಾಯಕ ವಾತಾವರಣವೋ ಈ ಘಳಿಗೆಗೆ ಒಂದಷ್ಟು ಹಿತವೆನಿಸುವ ಸುಖವಾಗಬಹುದು. ಅಥವಾ ಅವನದೇ ಬದುಕಿನ ಜಂಜಡಗಳೊಂದಿಗೆ ಗುದ್ದಾಟದ ತೀವ್ರತೆಯಲ್ಲಿ ಹಣ್ಣಾಗಿ ಬಂದವನಿಗೆ ಈ ಉದ್ಯಾನವನ ಅವನ ಮನಸ್ಸಿಗೆ ಸಂಜೆಯ ಮದ್ದಾಗಬಹುದು…! ಅಷ್ಟೇ ಏಕೆ ಈ ನಿವೃತ್ತರನ್ನು ದಿಟ್ಟಿಸಿ ನೋಡು; ಬದುಕಿನಲ್ಲಿ ಸಾಕಷ್ಟು ಅನುಭವಗಳಾಗಿದ್ದರೂ ಹಿಂದೆ ಎಂದೋ ಮಾಡಿದ ಅವರ ತಪ್ಪುಗಳಿಗೆ ಈಗ ಇಲ್ಲಿ ಕೂತು ಸುಖಾಸುಮ್ಮನೆ ಅದರ ಪ್ರಾಯಶ್ಚಿತ್ತ ಅನುಭವಿಸುತ್ತಿರಬಹುದು. ಮನೆ, ಮಕ್ಕಳು, ಸಂಸಾರ ಇತ್ಯಾದಿಗಳಲ್ಲಿ ಕಳೆದು ಹೋಗಿರಬಹುದಾದ ಅವರು ಈಗ ತಮ್ಮನ್ನು ತಾವು ಇಲ್ಲಿ ಈ ಕ್ಷಣ ಹುಡುಕಿಕೊಳ್ಳುತ್ತಿರಬಹುದು, ಅಥವಾ ಇಷ್ಟು ದಿನದ ಸಂತಸದ ಬದುಕನ್ನು ನಾನು ನನ್ನ ಯೌವ್ವನದ ಕಾಲದಲ್ಲಿ ಕಳೆಯಲಾಗಲಿಲ್ಲವೆಂಬ ಹಪಾಹಪಿತನದಿಂದ ಇಲ್ಲಿಗೆ ಬಂದು ನಿತ್ಯ ನರಳುತ್ತಿರಬಹುದು, ಅಥವಾ ಮುಂದಿನ ತಮ್ಮ ಬದುಕು ಹೇಗೆ ಕೊನೆಯಾಗಬಹುದು ಎಂಬ ಆತಂಕವೂ ಕಾಡುತ್ತಿರಬಹುದು. ಒಟ್ಟಿನಲ್ಲಿ ಒಬ್ಬೊಬ್ಬರು ಒಂದೊಂದು ಮುಖವಾಡಗಳ ಬೆನ್ನು ಹತ್ತಿ ತಾವು ಹೊರಟಿರುವ ಹಾದಿಯ ಬಗ್ಗೆ ಗುಮಾನಿ ಶುರುವಾಗಿ ಮಗ್ಗಲು ಬದಲಿಸಲಾಗದೆ, ತಿರುವು ಪಡೆದುಕೊಳ್ಳಲಾಗದೆ ಏನನ್ನೋ ಕಳೆದುಕೊಂಡ ಭಾವದಲ್ಲಿ ಮನಸು ವಿಲವಿಲ ಒದ್ದಾಡುತ್ತಿರಲೂಬಹುದು..! ಈ ಅಪ್ರಕಟಿತ ತಿಕ್ಕಾಟಗಳು ಯಾರೊಬ್ಬರಿಗೂ ಕಾಣುವುದಿಲ್ಲ. ಮೇಲ್ನೋಟಕ್ಕೆ ಒಬ್ಬರು ಮತ್ತೊಬ್ಬರ ಸ್ಥಿತಿಯನ್ನು ಕಂಡು ಅವರಿಗೇನು ಚಿಂತೆ? ಅವರಿಗೇನು ಕಡಿಮೆ? ಇತ್ಯಾದಿ ಕಪೋಲಕಲ್ಪಿತ ಕಲ್ಪನೆಗಳಲ್ಲಿ ವಿಹರಿಸುತ್ತಾ ಅಸೂಯೆಪಡುತ್ತಿರುತ್ತಾರೆ. ಒಬ್ಬ ಕೆಳಗಿನ ನೌಕರ ತನಗಿಂತ ಮೇಲಾಧಿಕಾರಿಯನ್ನು ಕಂಡರೆ ಕರುಬುವುದು ಸಹಜ. ಅವನಿಗೇನು ಉತ್ತಮ ಸಂಬಳ, ಬಯಸಿದ್ದೆಲ್ಲವೂ ಅಂಗೈಯಲ್ಲಿದೆ. ಹೀಗಿರುವಾಗ ಅವನಿಗೇನು ನೋವು ಎನಿಸಬಹುದು. ಆದರೆ ವಾಸ್ತವ ನಾವಂದುಕೊಂಡಂತೆ ಇರದು. ಅವನಿಗೂ ನೂರೆಂಟು ಅತೃಪ್ತಿ ಮನೆ ಮಾಡಿಕೊಂಡಿದೆ. ಅದೇ ಅವನನ್ನು ಇಲ್ಲಿಯ ತನಕ ಬದುಕಿಸಿದೆ ಎಂದರೆ ನೀನು ಒಪ್ಪದಿರಬಹುದು. ಆದರೆ ಇದೇ ಸತ್ಯವೆಂದಿತು.

ಅದಕ್ಕೆ ಪ್ರತಿಕ್ರಿಯಿಸಿದ ಕವಿಯ ಪ್ರೇಯಸಿಯ ಆತ್ಮ ತಲೆಯಾಡಿಸುತ್ತಾ ಇರಬಹುದು. ನಮ್ಮ ಪ್ರೇಮ ಪರಿಪೂರ್ಣವೆಂದುಕೊಂಡ ಮರುಘಳಿಗೆ ಈಗ ನಮ್ಮ ಆತ್ಮಗಳು ಕೂಡ ಕಿರುಚುತ್ತಾ ಸಾಯಬಹುದು..! ನನಗೆ ನಿನ್ನ ಹೊರತು ಬೇರೆ ಗಂಡುಗಳ ಆಸೆ ಇರಲಿಲ್ಲವೆಂದಲ್ಲ..! ಆದರೆ ನಿನ್ನ ಮಿಂಚಿನಂತಹ ಪ್ರೇಮ ಅವೆಲ್ಲವನ್ನೂ ನನ್ನೊಳಗೆ ಅಳಿಸಿ ಹಾಕಿತು..! ಎಂದು ಮೌನವಾಯಿತು.

ಆಗ ಕವಿಯ ಆತ್ಮವು ಖೇದದಿಂದ ನಾನು ಆರಂಭದಲ್ಲಿ ನಿನ್ನ ದೇಹದ ಆಕರ್ಷಣೆಯನ್ನೇ ಪ್ರೇಮವೆಂದುಕೊಂಡು ಹುಚ್ಚನಂತೆ ವರ್ತಿಸುತ್ತಿದ್ದೆ..! ನಿನ್ನೊಂದಿಗೆ ಮಲಗಿ ತೃಪ್ತಿ ಪಡೆಯಬೇಕೆಂದುಕೊಂಡೆ. ಆದರೆ ನಿನ್ನೊಂದಿಗೆ ಹೀಗೆ ನಿತ್ಯ ಬೆತ್ತಲಾಗಿ ಮಲಗಿದ್ದರೆ ನನ್ನ ಕಣ್ಣಿಗೆ ನೀನೊಂದು ಕೇವಲ ಮಾಂಸದ ಮುದ್ದೆಯಾಗುತ್ತಿದ್ದೆ.! ನಿನ್ನ ಹೊಳೆಯುವ ಕಣ್ಣು, ಬಳುಕುವ ಸೊಂಟ, ರಂಗು ತುಂಬಿಕೊಂಡ ಕೆನ್ನೆ, ಉಬ್ಬುವ ಮೊಲೆ, ಅರಳುವ ನಿನ್ನ ಯೋನಿಯೊಂದಿಗೆ ಬುಸುಗುಡುವ ಹಾವಿನಂತೆ ಹೊರಳಾಡಿ ತಣ್ಣಗಾಗುತ್ತಾ ನಿನ್ನೆದುರಿನಲ್ಲಿ ಬಯಕೆಯೆಲ್ಲಾ ಇಂಗಿ ಹೋದ ನಿರುಪದ್ರವಿ ಕೀಟದಂತೆ ರೆಕ್ಕೆ ಕಳೆದುಕೊಂಡು ವಿಲವಿಲ ಒದ್ದಾಡಿಬಿಡುತ್ತಿದ್ದೆ. ಪರಿಪೂರ್ಣತೆಯನ್ನು ಪಡೆದುಕೊಂಡ ಯಾವುದೇ ಜೀವಿಯೂ ಭೂಮಿಯಲ್ಲಿ ಬದುಕುವುದಕ್ಕೆ ಲಾಯಕ್ಕಿಲ್ಲ..! ಅಪೂರ್ಣತೆ ಇರಬೇಕು ಜೀವಿಯಾದರೂ, ನಮ್ಮಂತೆ ಆತ್ಮವಾದರೂ ಬದುಕಿನ ಪಲ್ಲವಿಯೊಂದು ಹಾಡುತ್ತಲೇ ಇರಬೇಕಾದರೆ ಮನದ ಕಡಲಿನಲ್ಲೊಂದು ಅಪೂರ್ಣತೆಯ ಅಲೆಗಳು ಅಲ್ಲೋಲ ಕಲ್ಲೋಲ ಎಬ್ಬಿಸುತ್ತಾ ಹಾಡಬೇಕು..! ಥೇಟ್ ಹಯವದನದ ದೇವದತ್ತನಂತೆ, ಕಪಿಲನಂತೆ, ಪದ್ಮಿನಿಯಂತೆ, ನನ್ನಂತೆ ಹಾಗೂ ನಿನ್ನಂತೆ…! ಎನ್ನುತ್ತಾ ಆತ್ಮ ಕಣ್ಣೀರು ಸುರಿಸುವಾಗ ಮತ್ತೊಂದು ಆತ್ಮ ಸಂತೈಸುತ್ತಾ ಹೇಳಿತು..! ಅಪೂರ್ಣತೆಗೂ ನೀನು ಈಗ ಹಾಕುತ್ತಿರುವ ಈ ಕಣ್ಣೀರಿಗೂ ಏನಾದರೂ ಅರ್ಥವಿದೆಯಾ? ದೇಹದಿಂದ ಬಿಡುಗಡೆ ಪಡೆದ ಮೇಲೂ ಆತ್ಮಗಳ ವಿಲಾಪ ಒಳ್ಳೆಯದಲ್ಲ..! ವ್ಯಕ್ತಿಗತ ಬದುಕನ್ನು ಬದುಕಲು ಬಾರದ ನಿನ್ನಂತಹ ಹೇಡಿಗಳು ಉಪನ್ಯಾಸಕರಾಗಿ ಮಕ್ಕಳಿಗೆ, ಕವಿಗಳಾಗಿ ನಾಡಿನ ಜನತೆಗೆ ಅದೇನೇನು ಹಿತವಚನ ಮಾಡಿ ಬಂದೆ..! ಇಲ್ಲಿನ ಆಳುವ ಸರ್ಕಾರಗಳಂತೂ ಮೊದಲೇ ಬುದ್ಧಿಗೇಡಿ ಸರ್ಕಾರಗಳು. ಅವಕ್ಕಾದರೂ ಆತ್ಮವಿದ್ದರೆ ಚೆನ್ನಾಗಿತ್ತು..! ಆದರೆ ಅವುಗಳಿಗೋ ಬುದ್ಧಿ, ಆತ್ಮ, ಹೃದಯ ಯಾವುದೂ ಇಲ್ಲ..! ಹೋದರೆ ಹೋಗಲಿ ಎಂದರೆ ಅದರ ಕಿವಿ, ಕಣ್ಣುಗಳು ಕೂಡ..! ಒಟ್ಟಾರೆ ಯಾವುದೊಂದು ಅಂಗವು ಅದಕ್ಕೆ ಇಲ್ಲಿಯವರೆಗೆ ನೆಟ್ಟಗಿಲ್ಲ..! ಇಲ್ಲದಿದ್ದರೆ ಮನುಷ್ಯರ ಖಾಸಗಿ ವಿಷಯಗಳಾದ ಪ್ರೀತಿ, ಪ್ರೇಮದ ಬಗ್ಗೆ ಇಷ್ಟು ಹಗುರವಾಗಿ ಮಾತನಾಡುವವರು ಇಲ್ಲಿ ಹುಟ್ಟಿಕೊಳ್ಳುತ್ತಿದ್ದರೆ ಹೇಳು? ನೀನೋ ಕವಿಯಾಗಿ ಬರೆಯಬಾರದ್ದೆಲ್ಲವನ್ನೂ ನಿನ್ನ ಹುಚ್ಚು ಕಲ್ಪನೆಯಲ್ಲಿ ಬರೆದು ಆತ್ಮ ಸುಖಕ್ಕೆ ಬರೆದೆ ಎಂದು ಬಡಾಯಿ ಕೊಚ್ಚಿಕೊಂಡು ತಿರುಗುತ್ತಿದ್ದೆ. ಆದರೆ ಪ್ರಶಸ್ತಿ ಪುರಸ್ಕಾರಗಳು ಒಂದಾದ ನಂತರ ಮತ್ತೊಂದು ಮಗದೊಂದು ಎಂದು ನಿನ್ನ ಪಾಲಿಗೆ ಸಿಕ್ಕ ಮೇಲಂತೂ ನಿನ್ನ ಕಾಲು ಮತ್ತು ತಲೆ ಭೂಮಿಯ ಮೇಲೆ ನೇರವಾಗಿ ನಿಲ್ಲಲ್ಲೇ ಇಲ್ಲ..! ಆದರೆ ಒಂದು ಮಾತು ಮಾತ್ರ ಇಲ್ಲಿ ಅಕ್ಷರಶಃ ನಿಜ. ಅದೇನೆಂದರೆ ನೀನು ಯಾವಾಗ ಅತೃಪ್ತಿಯಲ್ಲಿ, ಆತ್ಮವಿಲಾಪದಲ್ಲಿ, ಬದುಕಿನ ನೂರೆಂಟು ತಿಕ್ಕಾಟದಲ್ಲಿ ಬಂಡಾಯವೆದ್ದು ಬರೆದೆಯೋ ಅಲ್ಲಿನ ನಿನ್ನ ಪ್ರತಿ ಅಕ್ಷರದಲ್ಲಿ ನಾವಿಬ್ಬರು ಜೀವಿಸಿದ್ದೆವು. ಅಲ್ಲಿನ ನಿನ್ನ ಒಂದೊಂದು ಬರಹದಲ್ಲಿ ಬದುಕಿನ ಹುಡುಕಾಟವಿತ್ತು..! ನನ್ನೊಳಗಿನ ನಿನ್ನ ಪ್ರೇಮದ ಸೆಳೆತವಿತ್ತು..! ಆಗ ನಿಜಕ್ಕೂ ನೀನು ಕವಿಯಾಗಿ ತಿರುಗುತ್ತಿದ್ದೆ. ಗದ್ದಲ ತುಂಬಿಕೊಂಡ ಈ ನಗರದ ಆತ್ಮವನ್ನು ಏಕಾಏಕಿ ನೀನು ಹೊಕ್ಕಿ ಹೊರಬರುವಷ್ಟು ಮನುಷ್ಯ ಪ್ರೇಮ ನಿನ್ನ ನರನಾಡಿಗಳಲ್ಲಿ ಹರಿಯುತ್ತಲೇ ಇತ್ತು..!

ಆಗ ನಾನು ನಿಜಕ್ಕೂ ನಿನ್ನನ್ನು ವಿಪರೀತವಾಗಿ ಪ್ರೇಮಿಸಿದೆ. ಒಮ್ಮೊಮ್ಮೆ ನಿನ್ನನ್ನು ಕೊಲ್ಲುವಷ್ಟು ಪ್ರೇಮ ಹುಟ್ಟಿಕೊಂಡಿದೆ ನನ್ನೊಳಗೆ..! ಆದರೆ ಯಾವಾಗ ನೀನು ಹಾರ ತುರಾಯಿಗಳ ನಡುವೆ ಗಂಭೀರವಾಗಿ ಕವಿಯ ವೇಷದಲ್ಲಿ ವೇದಿಕೆಯ ಮೇಲೆ ಕೂತೆಯೋ ನಾನು ನೋಡಿದ್ದ ಕವಿ ನಿನ್ನೊಳಗೆ ಸತ್ತು ಹೋಗಿದ್ದ. ಆದರೆ ಈ ಜಗತ್ತು ಮಾತ್ರ ಇಂಚಿಂಚಾಗಿ ಅಸಂತೃಪ್ತಿಯಲ್ಲಿ ಕೊಳೆಯುತ್ತಿದ್ದ ನಿನ್ನನ್ನು ಕವಿಯೆಂದು ಸನ್ಮಾನಿಸಿ ನಿನ್ನ ಆತ್ಮದಲ್ಲಿ ನಾರುವ ದುರ್ಗಂಧ ಎಬ್ಬಿಸಿ ಬಿಟ್ಟಿತು..! ನೀನು ಬದುಕಿನ ಮುಖ್ಯ ಉದ್ದೇಶವನ್ನು ಮರೆತು ಬೇಡವಾದ ಕ್ಷುಲ್ಲಕ ಸಂಗತಿಗಳ ಮೇಲೆ ಕವಿತೆ ಬರೆದೆ, ಕತೆ ಬರೆದೆ, ಜನ ಅದನ್ನೇ ಚಪ್ಪರಿಸಿಕೊಂಡು ಓದಿದರು..! ಆದರೆ ಅವರು ನಿಜಕ್ಕೂ ನಿನ್ನನ್ನು ಓದಬೇಕಾಗಿದ್ದು ನೀನು ಬದುಕಿನ ಅಪೂರ್ಣತೆಯ ತಿಕ್ಕಾಟದಲ್ಲಿ ಬರೆದ ಬಂಡಾಯವನ್ನು, ಅಲ್ಲಿ ನೀನು ಅನುಭವಿಸಿದ ಆತ್ಮದ ತೊಳಲಾಟಗಳನ್ನು, ಆದರೆ ಜನ ಅದರ ಹತ್ತಿರ ಕೂಡ ಸುಳಿಯಲಿಲ್ಲ..! ನಿನ್ನನ್ನು ನಂಬಿ ಅಚ್ಚು ಹಾಕಿಸಿದ ಈ ನಗರದ ಪ್ರಕಾಶಕರ ಅಂಗಡಿಯಲ್ಲಿ ಅದರ ಸಾವಿರಾರು ಪ್ರತಿಗಳು ನೀನು ಸತ್ತ ನಂತರವೂ ಖಾಲಿಯಾಗದೆ ಧೂಳಿಡಿದು ಅನಾಥವಾಗಿ ಮೂಲೆಯೊಂದರಲ್ಲಿ ಬಿದ್ದುಕೊಂಡಿವೆ. ಇಲಿಗಳು ಜಿರಲೆಗಳು ಕೊಳೆಯುತ್ತಾ ಬಿದ್ದಿರುವ ನಿನ್ನ ಪುಸ್ತಕಗಳ ಮೇಲೆ ಮನಸೋ ಇಚ್ಛೆ ದಾಳಿ ಮಾಡಿ ಇಂಚಿಂಚಾಗಿ ಕಿತ್ತು ತಿನ್ನುತ್ತಾ ತಮ್ಮ ಸಂತಾನವನ್ನು ಸಮೃದ್ಧಿಯಾಗಿ ಬೆಳೆಸಿಕೊಳ್ಳಲು ಕನಿಷ್ಠ ನಿನ್ನ ಪುಸ್ತಕಗಳು ಸಹಕಾರಿಯಾದವು ಎಂಬುದನ್ನು ಬಿಟ್ಟರೆ ಅದರಿಂದ ಇನ್ನಾವ ಅನೂಕೂಲಗಳು ಇಲ್ಲಿಯವರೆಗೆ ಜರುಗಿಲ್ಲವೆಂಬುದೇ ನಿನ್ನ ಬರಹದ ದೊಡ್ಡ ಪವಾಡ ಎಂದು ಮೂದಲಿಕೆಯ ಮಾತುಗಳನ್ನಾಡಿತು.

ಕವಿಯ ಆತ್ಮವು ತನ್ನ ಪ್ರೇಯಸಿಯ ಮೂದಲಿಕೆಯ ಮಾತುಗಳಿಗೆ ನಗುತ್ತಾ ಹೌದು ನನ್ನ ಬರಹಗಳು ಈಗಲೂ ಅಪೂರ್ಣತೆಯಲ್ಲಿ ಬಳಲುತ್ತಿವೆ ನೋಡು..! ನಾನು ಸತ್ತ ಮೇಲಾದರೂ ನನ್ನ ಬರಹಗಳು ವಿಮರ್ಶಕರ ಕಂಗಳ ಮರ್ಜಿಗೆ ಬೀಳಬಹುದು ಎಂದುಕೊಂಡಿದ್ದೆ. ಆದರೆ ಯಾವೊಬ್ಬ ವಿಮರ್ಶಕರು ಸುತಾರಾಂ ಪೂರ್ಣವಾಗಿ ಓದುವುದಕ್ಕೆ ತಯಾರಿಲ್ಲ. ಕನಿಷ್ಠ ಒಬ್ಬ ಒಳ್ಳೆಯ ಓದುಗನ ಕಣ್ಣುಗಳಿಗಾದರೂ ಬೀಳುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ ಆದರೆ ನಾನು ಬರೆದ ಆ ಬರಹದಲ್ಲಿ ಬದುಕಿನ ಸತ್ಯಗಳಿವೆ ಎಂದು ಕವಿಯ ಆತ್ಮ ಚೀರಿಕೊಂಡಿತು..! ಮತ್ತೊಂದು ಸಂತೈಸಿತು..! ಚೀರಬೇಡ ನೀನು ಬರೆಯುವುದು ಆತ್ಮ ಸುಖಕ್ಕೆ ಎಂದಾದ ಮೇಲೆ ಅದನ್ನು ಯಾರು ಓದಿದರೆಷ್ಟು? ಬಿಟ್ಟರೆಷ್ಟು? ಕೇವಲ ಒಂದು ಆತ್ಮವಾಗಿ ಉಳಿದ ಮೇಲೂ ಇಷ್ಟೊಂದು ಸಣ್ಣತನದಲ್ಲಿ ನೀನು ವರ್ತಿಸುವುದು ಸರಿಯಲ್ಲ..! ಈಗ ನಮ್ಮ ಭೇಟಿಯ ಮುಖ್ಯ ವಿಷಯಕ್ಕೆ ಬಾ. ನೀನೇ ಈ ಮೊದಲು ಹೇಳುತ್ತಿದ್ದೆ ಬಾಳ ಸಂಗಾತಿಗೂ, ಆತ್ಮ ಸಂಗಾತಿಗೂ ಒಂದು ನಿರ್ದಿಷ್ಟವಾದ ಗೆರೆಗಳಿವೆ. ಎಲ್ಲಾ ಬಾಳ ಸಂಗಾತಿಗಳು ಆತ್ಮ ಸಂಗಾತಿಗಳಾಗಲು ಸಾಧ್ಯವಿಲ್ಲವೆಂದು ನಿನ್ನ ಪ್ರೇಮದಲ್ಲಿ ದೊಡ್ಡ ದೊಡ್ಡ ವಿವರಣೆಗಳನ್ನು ಕೊಟ್ಟು ನೂರಾರು ಪ್ರೇಮ ಪತ್ರಗಳನ್ನು ಬದುಕಿನ ಕೊನೆಯ ತನಕ ಬರೆದೆ. ನಾನಂತೂ ಅವೆಲ್ಲವನ್ನೂ ಓದಿದ್ದೇನೆ. ಆದರೆ ಅದನ್ನು ನೀನು ಈ ಲೋಕದೆದುರು ಒಂದು ದಿನವಾದರೂ ಅವುಗಳನ್ನು ಒಟ್ಟುಗೂಡಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದರೆ ಕನಿಷ್ಠ ನೀನೊಬ್ಬ ಒಳ್ಳೆಯ ಪ್ರೇಮಕವಿಯಾಗುತ್ತಿದ್ದೆ. ಆದರೆ ನೀನು ಆ ಧೈರ್ಯವನ್ನೇ ಮಾಡದೆ ಕ್ಷುದ್ರ ಜೀವಿಯಾಗಿ ಒದ್ದಾಡಿ ಅಪರಿಪೂರ್ಣತೆಯಿಂದ ನರಳಿ ನರಳಿ ಕೊನೆಗೆ ಪ್ರೇಮದಲ್ಲೂ ಸುಳ್ಳುಗಳನ್ನು ಬರೆಯ ಹೊರಟಿದ್ದು ನೀನು ಯಾವ ಪುರುಷಾರ್ಥಕ್ಕೆ? ಇದರಿಂದ ನಿನಗೆ ದಕ್ಕಿದ್ದು ಆತ್ಮವಂಚನೆಯಲ್ಲದೆ ಮತ್ತಿನ್ನೇನು?ನಿನಗೆ ಬದುಕಿರುವಾಗ ಇದರ ಕುರಿತು ಒಂದು ಸಣ್ಣ ಪಶ್ಚಾತ್ತಾಪವೂ ಕೂಡ ಮನಸ್ಸಿನಾಳದಲ್ಲಿ ಉಂಟಾಗಲಿಲ್ಲವೆಂದೆನಿಸುತ್ತದೆ.ಎಂದು ದುಃಖಿಸತೊಡಗಿತು.

ಕವಿಯ ಆತ್ಮವೂ ಸಂತೈಸುತ್ತಾ ತನ್ನಿಂದಾದ ತಪ್ಪುಗಳಿಗೆ ಮರುಕಪಡುತ್ತಾ ಪೂರ್ಣತೆಗಾಗಿ ದೇಹ ತೊರೆದು ಆತ್ಮದ ರೂಪದಲ್ಲಿ ಮತ್ತೆ ಒಂದಾಗಿರುವ ನಾವು ಮತ್ತೆ ಅಪರಿಪೂರ್ಣತೆಯಲ್ಲಿ ಒದ್ದಾಡುವುದು ತರವಲ್ಲ..! ಈ ರಾತ್ರಿ ನಮ್ಮದು..! ಈ ನಗರ ನಮ್ಮದು…! ಇಲ್ಲಿನ ಈ ಕ್ಷಣ ನಮ್ಮದು..! ಹಿಂದಿನಂತೆ ಅಸ್ತವ್ಯಸ್ತಗೊಂಡ ಬದುಕು ನಮ್ಮದಲ್ಲ.ಹೇಳು ನೀನು ಈಗ ತಡಮಾಡದೆ ಪ್ರೇಮದಲ್ಲಿ ಏನನ್ನಾದರೂ..ಈ ರಾತ್ರಿಗೆ ಹೊಸ ಅರ್ಥ ಬರುವಂತೆ, ಆತ್ಮ ಹೊಸ ಹುಟ್ಟು ಪಡೆದಂತೆ, ಪ್ರೇಮದಲ್ಲಿ ಮತ್ತೊಂದು ಮರುಹುಟ್ಟು ಬೇಕಿದೆ ಹೇಳು…! ಎಂಬ ಮಾತುಗಳು ಬಡಿದಂತೆಲ್ಲಾ ಒಂದು ಆತ್ಮ ಇದ್ದಕ್ಕಿದ್ದಂತೆ ನೋವಿನ ದನಿಯಲ್ಲಿ ಅದೃಶ್ಯಗೊಂಡಿತು..! ದೇವದತ್ತನಂತೆ… ಇಲ್ಲ.. ಇಲ್ಲ.. ಕಪಿಲನಂತೆ..! ಹೂಂ ಇಲ್ಲ.. ಇಲ್ಲ… ಪರಿಪೂರ್ಣತೆಯ ಕನಸು ಕಂಡು ಛಿದ್ರವಾದ ಪದ್ಮಿನಿಯಂತೆ…! ಇಲ್ಲವೇ ಇಲ್ಲ ಸಾಧ್ಯವೇ ಇಲ್ಲ ಎಂದು ಇದನ್ನೆಲ್ಲಾ ಬರೆಯಲು ಹೆಣಗುತ್ತಿರುವ ನನ್ನಂತೆ..! ಅಥವಾ ಇದನ್ನು ಓದಿ ಅಪೂರ್ಣತೆಗಾಗಿ ವಿಷಾದದಲ್ಲಿ ನಕ್ಕು ಸುಮ್ಮನಾದ ಅನಾಮಿಕ ಓದುಗನೊಬ್ಬನ ಎದೆಯಾಳದ ಹಗುರ ಭಾವದಂತೆ ಉಳಿದುಕೊಳ್ಳುತ್ತದೆ ಅಪೂರ್ಣತೆ..! ಹೀಗೆ ಎಲ್ಲರಲ್ಲೂ…ಹಾಗೂ ಎಲ್ಲೆಲ್ಲೂ…!

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ