ಇಲ್ಲಿನ ಎಲ್ಲ ಕತೆಗಳ ಹಿಂದಿನ ಕಾಳಜಿ ಮನುಷ್ಯ ಎದುರಿಸುತ್ತಿರುವ ಬಿಕ್ಕಟ್ಟು, ಹಾಗೂ, ಮಾನಸಿಕವಾಗಿ ಉಸಿರುಗಟ್ಟಿಕೊಂಡು ಬಿದ್ದು ಒದ್ದಾಡುತ್ತಿರುವ ಇಕ್ಕಟ್ಟುಗಳಿಂದ ಪಾರಾಗಿ ಹಸನಾದ ಬದುಕನ್ನು ಕಟ್ಟಿಕೊಳ್ಳಲು ಹೆಣಗಾಡುತ್ತಿರುವವರ ಚಿತ್ರಣಗಳನ್ನು ಭಾಷೆಯಲ್ಲಿ ರೂಪಕಗಳಾಗಿ ಹಿಡಿದಿಡುವುದಾಗಿದೆ. ತಮ್ಮ ಮೊದಲ ಪ್ರಯತ್ನದಲ್ಲಿಯೇ ಶೃತಿ ಬಿ. ಆರ್ ಅವರು ತಮ್ಮೀ ಕತೆಗಳ ಮುಖೇನ ಹೊಸ ಸಾಧ್ಯತೆಗಳನ್ನು ನಿರೀಕ್ಷೆಗಳನ್ನು ಇಟ್ಟುಕೊಳ್ಳುವಂತೆ ಮಾಡಿದ್ದಾರೆ.
ಶೃತಿ ಬಿ.ಆರ್. ಕಥಾ ಸಂಕಲನ “ಎಲ್ಲೆಗಳ ದಾಟಿದವಳು” ಕುರಿತು ಎಚ್.ಆರ್. ರಮೇಶ್ ಬರಹ
ಆಧುನಿಕೋತ್ತರ ಕನ್ನಡ ಕಥಾಪ್ರಕಾರವು ಹೊಸ ಬಗೆಯ ನಿರೂಪಣೆ, ವಸ್ತು-ವಿಷಯ, ನಿರ್ವಹಣೆ, ಅನುಭವ, ಧೋರಣೆ, ಅಭಿವ್ಯಕ್ತಿಗಳಿಂದಾಗಿ ತುಂಬ ಗಮನ ಸೆಳೆಯುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ಬರೆಯುತ್ತಿರುವ ಅನೇಕ ಹೊಸ ಬಗೆಯ story tellers ಗಳಲ್ಲಿ ಶೃತಿ ಬಿ.ಆರ್ ಅವರು ತಮ್ಮ ಎಲ್ಲೆಗಳ ದಾಟಿದವಳು ಸಂಕಲನದಲ್ಲಿನ ವಾಸ್ತವವಾದಿ ಕತೆಗಳ ಕಟ್ಟನ್ನು ಹೊತ್ತು ತಂದು ಓದುಗರ ಮುಂದೆ ಇಟ್ಟಿದ್ದಾರೆ.
ಶೀರ್ಷಿಕೆಯ ಕತೆ ಎಲ್ಲೆಗಳ ದಾಟಿದವಳು ಈ ಸಂಕಲನದಲ್ಲಿ ಸ್ವಲ್ಪ ಮಟ್ಟಿಗೆ ಘನವಾದ ಕತೆಯಾಗಿ ಮೂಡಿ ಬಂದಿದೆ. ಭಾಷೆ, ನಿರೂಪಣೆ ಮತ್ತು ಅದಕ್ಕೆ ಹೊಂದಿಕೊಂಡು ಬಂದಿರುವ ತಂತ್ರ, ಹಾಗೂ ಕಥಾಭಿತ್ತಿ. ಸಂಪ್ರದಾಯ, ಜಾತಿವ್ಯವಸ್ಥೆ, ಪುರುಷ ಪ್ರಧಾನ ಮನಸ್ಥಿತಿ, ಮತ್ತದರ ಅಹಮ್ಮಿಕೆ, ಸಾಮಾಜಿಕ ನಿಷೇಧಗಳನ್ನು ಧಿಕ್ಕರಿಸುವಿಕೆ ಇವೆಲ್ಲವುಗಳನ್ನು ಈ ಕತೆಯಲ್ಲಿ ಪರಿಣಾಮಕಾರಿಯಾಗಿ ಚಿತ್ರಿಸಲು ಕತೆಗಾರ್ತಿ ಪ್ರಯತ್ನಪಟ್ಟಿರುವುದು, ಹಾಗೂ ಶ್ರದ್ಧೆಯನ್ನು ತೋರಿಸಿರುವುದನ್ನು ನಿಚ್ಚಳವಾಗಿ ಗಮನಿಸಬಹುದು. ಕತೆ ಸುಮಾರು ಎರಡೂವರೆ ಪುಟಗಳಿಂದ ಆರಂಭವಾದರೂ ನಮ್ಮೊಳಗೆ ಇಳಿದು ಗಾಢವಾಗಿ ಆವರಿಸಕೊಳ್ಳತೊಡಗುತ್ತದೆ. ಮನುಷ್ಯ ಸಂಬಂಧದಲ್ಲಿ ‘ನಿರಾಕರಣೆಗೆ ಒಳಗಾಗುವುದು’ ಮಾನಸಿಕವಾಗಿ ಜರ್ಜರಿತವಿಗುವಂತಹ ಅನುಭವ. ಅಂತಹದ್ದನ್ನು ನಿರೂಪಕಿಯ ಅಜ್ಜಿಯ ದೊಡ್ಡಮ್ಮ ತನ್ನ ಗಂಡ ಅಚಾನಕ್ಕಾಗಿ ಸತ್ತ ನಂತರ ಅನುಭವಿಸುತ್ತಾಳೆ. ಅವಳಿಗೆ ಅನಿವಾರ್ಯವಾಗಿ ಸ್ವಾಭಿಮಾನ, ಬದುಕಿನ ಬಗೆಗಿನ ಸೆಳೆತ ಅವಳನ್ನು ಬದುಕಿನಲ್ಲಿ ಜೊತೆ ಸಾಗಲು ಒಂದು ಸಾಂಗತ್ಯವನ್ನು ಅರಸಿಕೊಂಡು ಹೋಗಲು ಮಾಡುತ್ತವೆ. ಹಾಗಾಗಿ, ಸ್ವಂತ ಬದುಕನ್ನು ಕಟ್ಟಿಕೊಳ್ಳುವ ಸಲುವಾಗಿ, ಅವಳಿಗೆ social taboos ಮುರಿಯುವುದು, ಮುರಿದು ಸ್ವಂತ ಬದುಕನ್ನು ಕಟ್ಟಿಕೊಳ್ಳುವುದು ಅವಶ್ಯಕವಾಗುತ್ತದೆ. ಕತೆಯು ಆರಂಭದಲ್ಲಿ ತೋಯ್ದಾಡಿದರೂ, ಮಧ್ಯದಲ್ಲಿ ಗಟ್ಟಿಯಾಗಿ ನಿಂತು ತೀವ್ರತೆಯನ್ನು ಪಡೆದುಕೊಳ್ಳುತ್ತದೆ.

(ಶ್ರುತಿ ಬಿ.ಆರ್.)
ಶಕುನದ ಹಕ್ಕಿ ಎನ್ನುವ ಕತೆಯಲ್ಲಿ ಪ್ರೀತಿಸಿ ಮದುವೆ ಆದ ಸುಮ, ಚಪಾತಿ ಸರಿಯಾಗಿ ಬೇಯಿಸಿಲ್ಲ ಎನ್ನುವ ಕಾರಣಕ್ಕೆ, ಮತ್ತು, ತನಗಿಂತೆ ಕಡಿಮೆ ವೇತನ ಬರುತ್ತೆ ಎನ್ನುವ ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ಎರಡು ದಿನ ಮನೆ ಹಾಗೂ ಗಂಡನನ್ನು ಬಿಟ್ಟು ಹೋದಾಗ ಕಥಾನಾಯಕಿ ಅನುಭವಿಸುವ ತಳಮಳಂತಹ ಸಣ್ಣ ಪುಟ್ಟ ಸಂಗತಿಗಳನ್ನು ಕತೆಯೊಳಗೆ ತಂದು, ಅದರ ಮೂಲಕ ಶೃತಿ ಅವರು ಸಂಬಂಧಗಳ ಸೂಕ್ಷ್ಮತೆಯನ್ನು ಹಿಡಿದಿಡಲು ತುಂಬ ಗಂಭೀರವಾಗಿ ಪ್ರಯತ್ನಿಸಿದ್ದಾರೆ.
ತನಗಾಗುತ್ತಿರುವ ಅಥವಾ ಆಗಿರುವ ಅನುಭವವನ್ನು ಮತ್ತೊಬ್ಬರ ಜೊತೆ ಹಂಚಿಕೊಳ್ಳದೆ ಸಮಾಧಾನ ಆಗದು. ಇದು ಮನುಷ್ಯನ ಆದಿಮ ಮೂಲ ಸ್ವಭಾವಗಳಲ್ಲಿ ಒಂದು. ಹಾಗಾಗಿಯೇ ಕಲೆಯನ್ನು ಅಭಿವ್ಯಕ್ತಿಯ ಮಾಧ್ಯಮವನ್ನಾಗಿ ಮಾಡಿಕೊಂಡಿರುವುದು. ಈ ಕತೆಯಲ್ಲಿ ಅವರು ಡೈರಿ ಬರೆಯುವ ತಂತ್ರವನ್ನು, ಉಪಯೋಗಿಸುತ್ತಾರೆ. ಮತ್ತು ಸುಮ ತಾನು ಅನುಭವಿಸುವ ಸಂಕಟ, ತುಮುಲಗಳನ್ನು ತನ್ನ ಗೆಳತಿಯ ಜೊತೆ ಹಂಚಿಕೊಳ್ಳುವುದರ ಮೂಲಕ ತುಸು ಸಮಾಧಾನವನ್ನು ಪಡೆಯುತ್ತಾಳೆ.
ಅನಾಮಧೇಯ ಕತೆಯಲ್ಲಿ ನಿತ್ಯದ ಬದುಕಿನ ಘಟನೆಗಳನ್ನು ಕತೆಯಾಗಿಸಲು ತುಂಬ ವ್ಯವಧಾನದಲ್ಲಿ ಭಾಷೆಯನ್ನು ಬಳಸಿಕೊಂಡು ಕಥೆಗಾರ್ತಿಯರ ಶ್ರಮ ಪಟ್ಟಿರುವುದನ್ನು ಅನಾಯಾಸವಾಗಿ ಗುರುತಿಸಬಹುದಾಗಿದೆ. ಸುಧಾಳ ಮದುವೆಯನ್ನು ತಪ್ಪಿಸಲು ಅವಳ ಅತ್ತಿಗೆ ಮತ್ತು ಅತ್ತಿಗೆ ಸಹೋದರ ಹೊಸ ಬೀಗರಿಗೆ ಅನಾಮಧೇಯ ಪತ್ರ ಬರೆದು ಅವಳ ಚಾರಿತ್ರ್ಯ ವಧೆ ಮಾಡಲು ಯತ್ನಿಸಲಾಗುವುದು. ಆ ಪತ್ರವನ್ನು ಯಾರು ಬರೆದರು ಎನ್ನುವುದನ್ನು ಪತ್ತೆ ಹಚ್ಚುವುದು ಕತೆಯ ವಸ್ತು.
ಘಟನೆಯೊಂದನ್ನಷ್ಟೇ ಇಟ್ಟುಕೊಂಡು ಕತೆ ಮಾಡಲು ಹೊರಟಾಗ ದೇವರು ಬಂತು ಎನ್ನುವಂತಹ ಕತೆಗಳು ಹುಟ್ಟುತ್ತವೆ. ಸರಿ, ಓದುಗರನ್ನು ಈ ಕತೆ ಯಾವ ಬಗೆಯಲ್ಲಿ ಗಾಢವಾಗಿ ತಟ್ಟುತ್ತದೆ ಎಂದು ಯೋಚಿಸಿದರೆ ಉತ್ತರ ಶೂನ್ಯ. ಇಲ್ಲಿನ ಪಾತ್ರಗಳು ಅಂತಹ ಭಾವ ತೀವ್ರತೆಯಲ್ಲಿ ಬಿದ್ದು ಒದ್ದಾಡುವುದಿಲ್ಲ. ಬಡ್ಡಿಗಾಗಿ ಒಬ್ಬರಿಗೆ ಹತ್ತು ಲಕ್ಷ ಕೊಟ್ಟು, ಅದಕ್ಕೆ ಸಂಬಂಧಿಸಿದ ಮಾಸಿಕ ಬಡ್ಡಿ ಕೆಲ ತಿಂಗಳ ಬಂದು, ನಂತರ ಬಡ್ಡಿ ಹಣ ನಿಲ್ಲುತ್ತದೆ, ಬಡ್ಡಿಗೆ ಹಣವನ್ನು ಕೊಟ್ಟಿದ್ದ ಗೀತಳಿಗೆ ಅಸಲೂ ಸಹ ಸಿಗದು ಎನ್ನುವ ಆತಂಕ ಆಘಾತವನ್ನು ತರುತ್ತದೆ. ಆಗ ಅವಳ ಸ್ನೇಹಿತೆ/ ಕತೆಯ ನಿರೂಪಕಿ ದೇವರು ಬರುವ ಹೆಂಗಸೊಬ್ಬಳ ಬಳಿ ಕರೆದೊಯ್ಯುತ್ತಾಳೆ. ಅಲ್ಲಿ ಅವರಿಗೆ ದೇವರ ಹೆಸರಿನಲ್ಲಿ ಅಮಾಯಕರನ್ನು ಸುಲಿಗೆ ಮಾಡುತ್ತಿರುವುದು ಅರಿವಾಗಿ ವಾಪಸ್ಸು ಬರುವರು. ಆದರೆ ಕತೆಯು ಓದುಗರನ್ನು ಅಷ್ಟೊಂದಾಗಿ ಹಿಡಿದಿಟ್ಟುಕೊಳ್ಳಲಾಗದೆ ಪೇಲವವಾಗಿ ಕಾಣುತ್ತದೆ.
ದ್ಯಾವಮ್ಮನೂ… ಸತ್ಯನಾರಾಯಣನೂ… ಕರೋನ ಕಾಲದ ಮಾನಸಿಕ ಕ್ಷೋಭೆ, ಒಂಟಿತನ, ಇವುಗಳನ್ನು ಕುರಿತು ಇರುವ ಕತೆ. ಹೊರಗಿನ ವೈರಸ್ಸು ಮತ್ತು ಮನದೊಳಗಿನ ಕೆಟ್ಟತನವೆನ್ನುವ ವೈರಸ್ಸುಗಳನ್ನು ಮುಖಾಮುಖಿಯಾಗಿಸಿ ಕತೆಯನ್ನು ಹೆಣೆಯಲಾಗಿದೆ. ಕತೆಯ ಸಂಕೀರ್ಣತೆ, ಭಾಷೆಯ ಉತ್ಕೃಷ್ಟತೆ ಇಲ್ಲದೆ ಕತೆ ಸೊರಗುತ್ತದೆ. ದ್ಯಾವಮ್ಮಳ ಅಂತಃಕರಣ ಮನಸ್ಸಿಗೆ ನಾಟುತ್ತದೆ ನಿಜ.
ಧಾರೆ ಕತೆಯು ಇಡೀ ಸಂಕಲನದಲ್ಲಿ ನಿರೂಪಣೆಯ ದೃಷ್ಟಿಯಿಂದ ನೋಡುವುದಾದರೆ ತುಂಬ ಮಹತ್ವವಾದ ಕತೆ. ಸುನಂದಳ ಒಳ ತುಮುಲಗಳನ್ನು ನಿರುದ್ವಿಗ್ನವಾಗಿ ನಿರೂಪಿಸಲಾಗಿದೆ. ಈ ಕತೆಯಲ್ಲಿ ಘಟನೆ, ಅಥವಾ ಸಂದರ್ಭಗಳು ಕತೆಯಾಗಲು ನುಸುಳಲು ನಿರೂಪಣೆ ಎಲ್ಲಿಯೂ ಅವಕಾಶ ಕೊಡುವುದಿಲ್ಲ. ಸುನಂದಳ ಎಲ್ಲ ನೋವು, ದುಗುಡ, ಸಂಕಟ, ಅವಮಾನಗಳನ್ನು ನುಂಗಿಕೊಂಡು ಬದುಕುವ ಕ್ರಮವೇ ನಿರೂಪಣೆಯಲ್ಲಿ ಹಾಸುಹೊಕ್ಕಾಗಿ ಸೇರಿಕೊಂಡು ಕತೆಗೆ ಒಂದು ಬಿಗಿಯನ್ನು ತಂದುಕೊಟ್ಟಿವೆ. ಜೊತೆಗೆ ವಾಸ್ತವವಾದ ಶೈಲಿಯೂ ತನ್ನದೇ ಆದ ಸೌಂದರ್ಯವನ್ನು ಈ ಕತೆಗೆ ಸುರಿದು ಚಂದ ಮಾಡಿದೆ. ಈ ಕತೆಯಲ್ಲಿ ಸ್ತ್ರೀ ಸಂವೇದನೆಯು ಎಲ್ಲಿಯೂ ಪ್ರಜ್ಞಾಪೂರ್ವಕವಾಗಿ ಅಥವಾ ಹಣೆ ಪಟ್ಟಿಕೊಂಡು ಕಾಣಿಸದೆ ಅಂತರ್ಗತವಾಗಿ ತುಂಬ ನಿಧಾನಕ್ಕೆ ಹರಿಯುತ್ತ ಕತೆಯನ್ನು ಇಡಿಯಾಗಿ ಆವರಿಸಿಕೊಳ್ಳುತ್ತದೆ. ಆಮೇಲೆ, ಆವರಿಸಿಕೊಂಡು, ಅದು ಆಚೆ ಬಂದು ಓದುಗರ ಮನೋಲೋಕದೊಳಗೂ ಸೇರಿಕೊಳ್ಳುತ್ತದೆ. ಇಂತಹ ಕಡೆ ಕತೆಗಾರ್ತಿ ಶೃತಿ ಅವರು ನಾನಿನ್ನೂ ಉತ್ತಮ ಕತೆಗಳನ್ನು ಬರೆಯಬಲ್ಲೆ, ಸ್ವಲ್ಪ ಓರೆ ಕೋರೆಗಳಿದ್ದರೆ ವಸಿ ಹೊಟ್ಟೆಗೆ ಹಾಕ್ಕಳಿ ಎಂದು ಪಿಸು ನುಡಿದಂತೆ ಕೇಳುತ್ತದೆ. ಹೆಣ್ಣೊಬ್ಬಳು, ಬೇಜವಾಬ್ದಾರಿಯ ಗಂಡನನ್ನು ಕಟ್ಟಿಕೊಂಡು, ಮಕ್ಕಳು, ಮೊಮ್ಮಕ್ಕಳನ್ನು ಸಲುಹುತ್ತ ಬದುಕನ್ನು ದಟ್ಟವಾಗಿ ಕಟ್ಟಿಕೊಳ್ಳುವ ಚಿತ್ರಣ ಈ ಕತೆಯಲ್ಲಿ ಗಾಢವಾಗಿ ಮೂಡಿದೆ. ಸಂಕಲನದ ಕೆಲವು ಕತೆಗಳು ವಸ್ತು-ವಿಷಯದಿಂದಾಗಿ, ಅಥವಾ, ಭಾಷೆಯನ್ನು ದುಡಿಸಿಕೊಳ್ಳುವ ನೆಲೆಯಲ್ಲಿ ಸೊರಗಿದರೂ, ಅದೆಲ್ಲ ಈ ಕತೆಯ ಬೆಳಕಲ್ಲಿ ಕರಗಿಹೋಗಬಲ್ಲವು. ಈ ಕತೆಯಿಂದಾಗಿ ಅವೂ ಕಷ್ಟಪಟ್ಟು ದಡ ಮುಟ್ಟಲು ಕಷ್ಟಪಡುತ್ತವೆ. ಹಾಗಾಗಿ ಈ ಧಾರೆ ಎನ್ನುವ ಕತೆಯು ಅವುಗಳಿಗೆ ಸ್ಫೂರ್ತಿಯಂತೆ ಕಾಣಬಲ್ಲದು ಎಂದರೆ ಅದು ತಮಾಷೆಯ ಮಾತಲ್ಲ ಗಂಭೀರವಾದ ಮಾತು!
ದರಕಾಸ್ತು ಕತೆ ನಿಜಕ್ಕೂ ಒಂದು ಉತ್ತಮ ಕತೆ. ಅದರಲ್ಲಿ ಯಾವ ಅನುಮಾನ ಇಲ್ಲ. ಸಹಜವಾಗಿಯೇ ಮಾರ್ಕ್ವೇಜ್‌ನ ನೋ ಒನ್ ರೈಟ್ಸ್ ಟು ಕರ್ನಲ್, ಮತ್ತು ತೇಜಸ್ವಿಯವರ ತಬರನ ಕತೆ ಗಳನ್ನು ನೆನಪಿಸುತ್ತದೆ. ವ್ಯವಸ್ಥೆಯ ತಣ್ಣನೆಯ ಕ್ರೌರ್ಯ, ದಬ್ಬಾಳಿಕೆ, ಅಮಾಯಕರಿಗೆ ಆಗುವ ಅನ್ಯಾಯ, ಅಧಿಕಾರ ಶಾಹಿಯ ದರ್ಪ, ಭ್ರಷ್ಟಾಚಾರ, ಇವುಗಳೆಲ್ಲ ತುಂಬ ಗಟ್ಟಿಯಾಗಿ ನಿರೂಪಿಸಲ್ಪಟ್ಟಿವೆ. ಇದಕ್ಕೆ ವಾಸ್ತವವಾದ ಸ್ಪರ್ಶ ಮತ್ತಷ್ಟು ಮೆರುಗನ್ನು ಕೊಟ್ಟಿದೆ. ಹನುಮಯ್ಯ, ತಬರ, ನಿವೃತ್ತ ಕರ್ನಲ್ ಅಂತಹವರು ದೇಶಕಾಲವನ್ನು ಮೀರಿ ವ್ಯವಸ್ಥೆಯ ಕ್ರೌರ್ಯದ ವಿರುದ್ಧ ಸೋತು ಅನ್ಯಾಯಕ್ಕೆ ಒಳಗಾಗುವವರ ರೂಪಕವಾಗಿ ಇರುವರು ಎಂಬುದಕ್ಕೆ ಈ ಕತೆಯು ಸಾಕ್ಷಿಯಾಗಿ ನಿಲ್ಲುತ್ತದೆ. ಮತ್ತೂ, ಗುಣಕ್ಕೆ ಮತ್ಸರ ಯಾಕೆ ಅನ್ನುವಂತೆ, ಈ ಕತೆಯ ಕಥಾವಸ್ತು ತುಂಬ gripping ಆಗಿ ನಿರ್ವಹಿಸಲ್ಪಟ್ಟಿದೆ ಎಂದು ಹೊಗಳಬೇಕು ಅನ್ನಿಸುತ್ತದೆ.
ಅವಳು ಮತ್ತು ಹದಿನೈದು ಜೊತೆ ಕಣ್ಣುಗಳು; ಹಾಗೂ, ಕೆಂಪಾದವೋ ಎಲ್ಲಾ.. ಕೆಂಪಾದವೋ.. ಕತೆಗಳಲ್ಲಿ ಹೆಣ್ಣನ್ನು ಯಾಕೆ ಈ ಪುರುಷರೆನ್ನುವ ಗಂಡಸರು ಒಂಥರ ನೋಡುತ್ತಾರೆ, ಅವರ ದೃಷ್ಟಿಗಳಿಗೆ ಏನು ಮೆತ್ತಿಕೊಂಡಿದೆ, ಹಾ, ಎಂದು ಕತೆಗಾರ್ತಿ ಹೇಳುತ್ತಿರುವಂತೆ ಕಾಣುತ್ತದೆ. ಮತ್ತೂ, ಮೊಲೆ ಮೂಡಿ ಬಂದಡೆ ಹೆಣ್ಣೆಂಬರು/ಗಡ್ಡ ಮೀಸೆ ಬಂದಡೆ ಗಂಡೆಂಬರು/ನಡುವೆ ಸುಳಿವ ಆತ್ಮನು/ಹೆಣ್ಣೂ ಅಲ್ಲ ಗಂಡೂ ಅಲ್ಲ ಕಾಣಾ! ರಾಮನಾಥ. ಎಂಬ ವಚನವನ್ನು ಜ್ಞಾಪಿಸುತ್ತವೆ. ಆದಾಗ್ಯೂ ಈ ಕತೆಗಳಿಗೆ ಇನ್ನೂ ಶಕ್ತಿ ಸಾಲದು ಅನ್ನಿಸುತ್ತದೆ. ಜೊತೆಗೆ ಇವೆರಡು ಸಂಕಲನದ ಗಾತ್ರವನ್ನು ಹೆಚ್ಚಿಸಿವೆ ಎಂದು ಹೇಳಿದರೆ ಆ ಮಾತನ್ನು ಲಘುವಾಗಿ ತೆಗೆದುಕೊಂಡರೆ ತಮಾಷೆ, ಗಂಭೀರವಾಗಿ ತೆಗೆದುಕೊಂಡರೆ ಟೀಕೆ ಅಲ್ಲ ವಿಮರ್ಶೆ ಎಂದು ಭಾವಿಸುವೆ.
ಇಲ್ಲಿನ ಎಲ್ಲ ಕತೆಗಳ ಹಿಂದಿನ ಕಾಳಜಿ ಮನುಷ್ಯ ಎದುರಿಸುತ್ತಿರುವ ಬಿಕ್ಕಟ್ಟು, ಹಾಗೂ, ಮಾನಸಿಕವಾಗಿ ಉಸಿರುಗಟ್ಟಿಕೊಂಡು ಬಿದ್ದು ಒದ್ದಾಡುತ್ತಿರುವ ಇಕ್ಕಟ್ಟುಗಳಿಂದ ಪಾರಾಗಿ ಹಸನಾದ ಬದುಕನ್ನು ಕಟ್ಟಿಕೊಳ್ಳಲು ಹೆಣಗಾಡುತ್ತಿರುವವರ ಚಿತ್ರಣಗಳನ್ನು ಭಾಷೆಯಲ್ಲಿ ರೂಪಕಗಳಾಗಿ ಹಿಡಿದಿಡುವುದಾಗಿದೆ. ತಮ್ಮ ಮೊದಲ ಪ್ರಯತ್ನದಲ್ಲಿಯೇ ಶೃತಿ ಬಿ. ಆರ್ ಅವರು ತಮ್ಮೀ ಕತೆಗಳ ಮುಖೇನ ಹೊಸ ಸಾಧ್ಯತೆಗಳನ್ನು ನಿರೀಕ್ಷೆಗಳನ್ನು ಇಟ್ಟುಕೊಳ್ಳುವಂತೆ ಮಾಡಿದ್ದಾರೆ.

ಹೊಸ ತಲೆಮಾರಿನ ಪ್ರತಿಭಾವಂತ ಕವಿ. ಊರು ಚಿತ್ರದುರ್ಗದ ಬಳಿಯ ಹರಿಯಬ್ಬೆ. ಈಗ ಮಡಿಕೇರಿಯಲ್ಲಿ ಇಂಗ್ಲಿಷ್ ಪ್ರಾದ್ಯಾಪಕ. ಝೆನ್ನದಿ ಇವರ ಪ್ರಮುಖ ಕವಿತಾ ಸಂಕಲನ.