ಅರ್ಚಿಕ ವೆಂಕಟೇಶ ಅವರು ೧೯೧೬ರಲ್ಲಿ ಧಾರವಾಡದಲ್ಲಿ ಜನಿಸಿದರು. ಇವರ ತಾಯಿ ರಾಧಾಬಾಯಿ ; ತಂದೆ ಗೋಪಾಲಕೃಷ್ಣಾಚಾರ್ಯ. ಕೆಲಕಾಲ ಎಚ್.ಎ.ಎಲ್. ಕಂಪೆನಿಯಲ್ಲಿ ಉದ್ಯೋಗ ಕೈಕೊಂಡ ವೆಂಕಟೇಶರವರು, ಆ ಬಳಿಕ ಸಿದ್ಧವ್ವನಹಳ್ಳಿ ಕೃಷ್ಣಶರ್ಮರ ‘ವಿಶ್ವ ಕರ್ನಾಟಕ’ ಪತ್ರಿಕೆಯ ಸಂಪಾದಕ ಮಂಡಲಿಯಲ್ಲಿ ಸೇರಿದರು. ಕೊನೆಯ ಎರಡು ವರ್ಷ ಆ ಪತ್ರಿಕೆಯ ಸಂಪಾದಕರೂ ಆಗಿದ್ದರು. ‘ವಿಶ್ವ ಕರ್ನಾಟಕ’ ಮುಚ್ಚಿದ ಬಳಿಕ ಸಂಯುಕ್ತ ಕರ್ನಾಟಕ ಪತ್ರಿಕೆಯ ಬೆಂಗಳೂರು ಆವೃತ್ತಿಯಲ್ಲಿ ಕೆಲಸ ಮಾಡಿ ನಿವೃತ್ತಿ ಹೊಂದಿದರು. ಸಂಧ್ಯಾರಾಗ, ಪೂರ್ಣ ಚಂದ್ರ, ಶಿಲಾಪಕ್ಷಿ, ಶಬ್ದ ಶಿಲ್ಪಿ, ಪ್ರಹ್ಲಾದನ ಪಾಣಿಪತ್ತು ಅವರ ಪ್ರಮುಖ ಕೃತಿಗಳು. ಕನ್ನಡ ಕಾವ್ಯಮಾಲೆಯ ಕುಸುಮಗಳು ಸರಣಿಯಲ್ಲಿ ಅವರು ಬರೆದ ‘ಯಾಂವ ನನ್ನೆ ಕೇಳಾಂವ?’ ಪದ್ಯ ಇಂದಿನ ಓದಿಗಾಗಿ.
ಯಾಂವ ನನ್ನೆ ಕೇಳಾಂವ?
ಯಾಂವ ನನ್ನ ಕೇಳಾಂವ?
ಯಾಂವ ಯಾಂವ ಯಾಂವ ಯಾಂವ
ಯಾಂವ ನನ್ನ ಕೇಳಾಂವ? ॥ಪ॥
ಮನಸಿಗೆ ಬಂದರ ಬರಿಯಾಂವ
ಮನಸಿಗೆ ಬಂದರ ಹಾಡಾಂವ-ನನ
ಮನಸಿಗೆ ಬಂದರ ಕುಣಿಯಾಂವ
ಯಾಂವ ನನ್ನ ಕೇಳಾಂವ?
ಗಾಳಿ ಸುಂಯ್ ಸುಂಯ್ ಅನ್ತಿರವಲ್ಲು
ಬೆಳಕು ತನ್ಮೈ ಚಾಚಿರವಲ್ಲು
ಹಾಳು ಕತ್ತಲಿ ಇನ್ನೂ ಮಬ್ಬಿನಾಗ
ತೂಗಾಡ್ತಿದರ ತೂಗಾಡ್ತಿರಲಿ
ಯಾಂವ ನನ್ನ ಕೇಳಾಂವ? ॥೧॥
ತೊಟ್ಟಿಲ ಕೂಸು ಆಡತಿರಲಿ
ತಾಯಿ ಜೋಗುಳ ಹಾಡತಿರಲಿ
ಹಕ್ಕಿದನಿಗೆ ದನಿಗೂಡಿಸಿದರು
ನಾಯಾಕ ನನ್ಹಾಡ ಹಾಡಲಿ?
ಯಾಂವ ನನ್ನ ಕೇಳಾಂವ! ॥೨॥
ತುಂಬಿ ಹೂವಿಗೆ ಮುತ್ತಿಡುತಿರಲಿ
ಸವಿದುಟಿ ಜೇನ ಕುಡಿಯುತ್ತಿರಲಿ
ಹುಂಬನ್ಹಂಗ ಮೈಯ್ಯಮರೆತು
ಗುಂಯ್ ಗುಂಯ್ ಗುಂಯ್ ಗುಂಯ್ ಅನ್ನುತ್ತಿರಲಿ
ಯಾಂವ ನನ್ನ ಕೇಳಾಂವ? ॥೩॥
ಹೆಣ್ಣು ಗಂಡು ಕೂಡಿಕೊಂಡು
ಸಣ್ಣ ಗೂಡ ಕಟ್ಟಿಕೊಂಡು
ತಮ್ಮ ಬಾಳು ಶಾಶ್ವತವೆಂದು
ಹಾಡತಿದ್ದರ ಹಾಡತಿರಲಿ
ಯಾಂವ ನನ್ನ ಕೇಳಾಂವ? ॥೪॥
ಬರುವುದು ಬರಲಿ ಬಿಡುವುದು ಬಿಡಲಿ
ನ್ಯಾನ್ಯಾಕ್ಕೋಚನೆ ಮಾಡಲಿ?
ಪರಮನ ಕರುಣೆಯು ಕರಗತವಾಗುತ
ಬಾಳು ನಂದನವಾಗಲಿ
ಆಗ ನಾನು ಹಾಡಾಂವ
ಆಗ ನಾನು ಬಾರಿಯಾಂವ
ಆಗ ನಾನು ಕುಣಿಯಾಂವ ॥೫॥
ಯಾಂವ ನನ್ನ ಕೇಳಾಂವ
ಯಾಂವ ಯಾಂವ ಯಾಂವ ಯಾಂವ
ಯಾಂವ ನನ್ನ ಕೇಳಾಂವ? ॥ಪ॥
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ