ಇದು ಅನಿರೀಕ್ಷಿತ ತಿರುವುಗಳಿಲ್ಲದ, ಊಹಿಸಲಾಧ್ಯವಾದ ಸಂಗತಿಗಳಿರುವ ಕಾದಂಬರಿಯೂ ಅಲ್ಲ. ಪ್ರಧಾನ ಕತೆ ಒಂದು ಕಾದಂಬರಿಯಾಗಿ ಸಾಗಲು ಒಂದು ನೆಪವಷ್ಟೇ. ಮುಖ್ಯವಾಗಿ ಮಧ್ಯಘಟ್ಟ ಆ ಭಾಗದ ಮಲೆನಾಡಿನ ೭೦-೮೦ ವರ್ಷಗಳ ಹಿಂದಿನ ಜೀವನ ಪದ್ಧತಿ, ನಿಸರ್ಗದ ಜೊತೆಗಿನ ಸಂಬಂಧ, ಆಹಾರ ಪದ್ಧತಿ, ಕಷ್ಟ ಸುಖಗಳು, ವಿವಿಧ ಸಮುದಾಯಗಳು ಮತ್ತು ಆ ಸಮುದಾಯಗಳ ನಡುವಣ ಅನುಬಂಧ, ವಿಶಿಷ್ಟವಾದ ನಾಟೀ ಔಷಧಿಗಳು ಇತ್ಯಾದಿಗಳ ಕುರಿತು ಬಹಳ ಆಪ್ತವಾಗಿ ಹೇಳುತ್ತಾ ಹೋಗುತ್ತದೆ. ಈಗಾಗಲೇ ನಶಿಸಿ ಹೋದ ಅಥವಾ ಅಳಿವಿನ ಅಂಚಿನಲ್ಲಿರುವ ಎಷ್ಟೋ ಪದ್ಧತಿಗಳ ಬಗ್ಗೆ ಈ ಹೊತ್ತಿಗೆಯಲ್ಲಿ ವಿವರಗಳಿವೆ.
ಓದುವ ಸುಖ ಅಂಕಣದಲ್ಲಿ ಗಿರಿಧರ್ ಗುಂಜಗೋಡು ಬರಹ
ಹಲವಾರು ಜನ ಯಾಣಕ್ಕೆ ಹೋಗಿರಬಹುದು. ಉತ್ತರ ಕನ್ನಡ ಜಿಲ್ಲೆಯ ಸಿರಸಿ ಮತ್ತು ಕುಮಟಾದ ನಡುವಿನ ಎರಡು ಬೃಹದಾಕಾರದ ಶಿಲಾ ರಚನೆಗಳು. ನಮ್ಮ ಕಡೆ ಒಂದು ಗಾದೆ ಇದೆ. ‘ರೊಕ್ಕ ಇದ್ದರೆ ಗೋಕರ್ಣಕ್ಕೆ ಹೋಗಬೇಕು, ಸೊಕ್ಕು ಇದ್ದರೆ ಯಾಣಕ್ಕೆ ಹೋಗಬೇಕು’ ಎಂದು. ಮೊದಲನೆ ಭಾಗವನ್ನು ಪಕ್ಕಕ್ಕಿಟ್ಟು ಸೊಕ್ಕಿದ್ದವನು ಯಾಕೆ ಯಾಣಕ್ಕೆ ಹೋಗಬೇಕು ಅನ್ನುವ ವಿಚಾರಕ್ಕೆ ಬರೋಣ.
ಮಲೆನಾಡು ನೋಡಲಿಕ್ಕೆ ಬಹಳ ಸುಂದರ ನಿಜ. ಆದರೆ ಮುನಿಸಿಕೊಂಡ ಮಲೆನಾಡು ರುದ್ರ ಭಯಾನಕ. ನಿಜ ಹೇಳಬೇಕೆಂದರೆ ನನ್ನ ಪೀಳಿಗೆಯ ಮಲೆನಾಡಿನ ಹೆಚ್ಚಿನ ಮಂದಿಗೆ ಅದರ ಭೀಕರತೆಯ ಅರಿವಾಗಿದ್ದು ಕಮ್ಮಿಯೇ. ಆದರೆ ನಮ್ಮ ಹಿರಿಯರು ಹೇಳಿರುವುದನ್ನು ಕೇಳಿ ಗೊತ್ತಿರುತ್ತದೆ. ಈ ಭೀಕರತೆಯೂ ಪಶ್ಚಿಮ ಘಟ್ಟದ ಹತ್ತಿರ ಹೋದಷ್ಟೂ ಜಾಸ್ತಿ. ಅದಕ್ಕೇ ಘಟ್ಟದ ನಡುವಿರುವ ಯಾಣಕ್ಕೆ ಹೋಗಲು ಎಂಟೆದೆ ಬೇಕಾಗಿತ್ತು. ದುರ್ಗಮವಾದ ಅರಣ್ಯ, ಕಾಡುಪ್ರಾಣಿಗಳು, ರಕ್ತ ಹೀರುವ ಉಂಬಳಗಳು ಇದೆಲ್ಲವನ್ನೂ ದಾಟಿ ಯಾಣಕ್ಕೆ ಹೋಗುವುದು ಸುಲಭದ ಕೆಲಸವಾಗಿರಲ್ಲ. ಅಷ್ಟೆಲ್ಲಾ ಕಷ್ಟಪಟ್ಟ ನಂತರ ಸೊಕ್ಕು ಇಳಿಯುವುದೆಂಬುದು ಇದರ ತಾತ್ಪರ್ಯ. ಈಗದು ಏನೂ ಪ್ರಯಾಸವಿಲ್ಲದ ಕೆಲಸ ಬಿಡಿ. ಅದಕ್ಕೆ ಈ ಗಾದೆಗೆ ಮೊದಲಿನ ಪ್ರಾಮುಖ್ಯ ಉಳಿದಿಲ್ಲ.
ಆದರೆ ನಾನು ಈಗ ಹೇಳಹೊರಟಿರುವ ಪುಸ್ತಕ ಯಾಣದ ಬಗೆಗಿನದಲ್ಲ. ಯಾಣದ ಹತ್ತಿರವೇ ಇರುವ ಒಂದು ಪುಟ್ಟ ಗ್ರಾಮವಾದ ‘ಮತ್ತಿಘಟ್ಟದ’ ದಲ್ಲಿ ಕತೆ ಸಾಗುವ ‘ಮಧ್ಯಘಟ್ಟ’ ಅನ್ನುವ ಕಾದಂಬರಿಯ ಬಗ್ಗೆ (ಈ ಮತ್ತಿಘಟ್ಟವನ್ನೇ ಹಿಂದೆ ಮಧ್ಯಘಟ್ಟ ಎಂದು ಕರೆಯುತ್ತಿದ್ದರಂತೆ). ಪರಿಸರ ತಜ್ಞರಾದ ಶ್ರೀ ಶಿವಾನಂದ ಕಳವೆಯವರು ಈ ಅದ್ಭುತ ಕೃತಿಯನ್ನು ಬರೆದಿದ್ದಾರೆ. ಇತ್ತೀಚೆಗೆ ಓದಿದ ಕೃತಿಗಳಲ್ಲಿ ನಾನು ಬಹುವಾಗಿ ಮೆಚ್ಚಿಕೊಂಡ ಕೃತಿಗಳಲ್ಲಿ ಇದೂ ಒಂದು. ಕೆಲ ದಶಕಗಳ ಹಿಂದಿನ ಮಲೆನಾಡ ಜೀವನವನ್ನು, ನಮ್ಮ ಜನರೊಟ್ಟಿಗೆ ಅತ್ಯಂತ ಗಾಢವಾಗಿ ಬೆರೆತಿದ್ದ ಪರಿಸರವನ್ನು, ಅಲ್ಲಿನ ಬವಣೆಗಳನ್ನು, ಹಾಗೆಯೇ ಸುಖಗಳನ್ನು ಅತ್ಯಂತ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ.
ಚೂರು ವಿಷಯಾಂತರ ಮಾಡ್ತೀನಿ. ನಾನು ಕಾಸರಗೋಡಿನ ಹುಡುಗಿಯನ್ನು ಹುಡುಕಿಕೊಂಡಾಗ ನಮ್ಮಮ್ಮನಿಗೆ ನನ್ನೂರು ಸಿದ್ದಾಪುರದಿಂದ ಅಷ್ಟು ದೂರದ ಬೀಗರ ಮನೆಗೆ ಹೇಗೆ ಹೋಗಿಬಂದು ಮಾಡುವುದೆನ್ನುವುದೇ ಯೋಚನೆಯಾಗಿತ್ತು. ಈಗ ದೂರವೆಂದರೆ ೮-೧೦ ಗಂಟೆಗಳ ಪ್ರಯಾಣವಾಗಿರಬಹುದು. ಆದರೆ ಆಗ? ವಾಹನ ವ್ಯವಸ್ಥೆ ಸರಿಯಾಗಿಲ್ಲದ ಸಮಯದಲ್ಲಿ ಎಷ್ಟೋ ವರ್ಷಗಳಿಗೆ ಒಮ್ಮೆ ಮಾತ್ರ ಹೋಗಬಹುದಾದ ಪ್ರಯಾಣವಾಗಿತ್ತು. ತವರಿನ ಮುಖ ನೋಡಲು ಹರಸಾಹಸ ಪಡಬೇಕಾಗಿರುವುದು ಪುತ್ತೂರು-ಕುಂಬ್ಳೆ ಸೀಮೆಯಿಂದ ವಿವಾಹವಾಗಿ ಮಲೆನಾಡ ಕಡೆ ಬಂದ ಅನೇಕ ಹೆಣ್ಣುಮಕ್ಕಳ ಪಾಡಾಗಿತ್ತು. ದಶಕಗಳ ಕಾಲ ತವರಿಗೆ ಹೋಗದವರೂ ಕೂಡಾ ಇದ್ದರು.
ಈ ವಿಷಯವನ್ನು ಇಲ್ಲಿ ತೆಗೆಯಲು ಕಾರಣವಿದೆ. ಈ ಕಾದಂಬರಿಯಲ್ಲಿ ದಶಕಗಳ ಹಿಂದೆ ಬಡತನವೋ ಇನ್ಯಾವುದೋ ಕಾರಣದಿಂದ ಮದುವೆಯಾಗದ ಕಾಸರಗೋಡು ಸೀಮೆಯ ಕುಂಬ್ಳೆಯ ಹದಿಹರೆಯದ ಹುಡುಗಿ ಮಧ್ಯಘಟ್ಟದ ಅರವತ್ತು ದಾಟಿದ ವೃದ್ಧನ ಕೈ ಹಿಡಿಯುತ್ತಾಳೆ. ಅವಳನ್ನು ನೋಡಲು ಅವಳ ತಾಯಿ ಮತ್ತು ತಮ್ಮ ಅಲ್ಲಿಂದ ಮಧ್ಯಘಟ್ಟಕ್ಕೆ ಕಾಲ್ನಡಿಗೆಯಲ್ಲಿ ಬರುವಲ್ಲಿಂದ ಮುಖ್ಯವಾದ ಕತೆ ಆರಂಭವಾಗುತ್ತದೆ.
ವಾಹನ ವ್ಯವಸ್ಥೆ ಸರಿಯಾಗಿಲ್ಲದ ಸಮಯದಲ್ಲಿ ಎಷ್ಟೋ ವರ್ಷಗಳಿಗೆ ಒಮ್ಮೆ ಮಾತ್ರ ಹೋಗಬಹುದಾದ ಪ್ರಯಾಣವಾಗಿತ್ತು. ತವರಿನ ಮುಖ ನೋಡಲು ಹರಸಾಹಸ ಪಡಬೇಕಾಗಿರುವುದು ಪುತ್ತೂರು-ಕುಂಬ್ಳೆ ಸೀಮೆಯಿಂದ ವಿವಾಹವಾಗಿ ಮಲೆನಾಡ ಕಡೆ ಬಂದ ಅನೇಕ ಹೆಣ್ಣುಮಕ್ಕಳ ಪಾಡಾಗಿತ್ತು. ದಶಕಗಳ ಕಾಲ ತವರಿಗೆ ಹೋಗದವರೂ ಕೂಡಾ ಇದ್ದರು.
ಆದರೆ ಅವರು ಬಂದಿದ್ದಾಗಲೀ, ಬರುವ ಕಾರಣವಾಗಲೀ ಕತೆಗೆ ಬಹುಮುಖ್ಯವಾದ ತಿರುವನ್ನೇನೂ ಕೊಟ್ಟಹಾಗೆ ನನಗನ್ನಿಸುವುದಿಲ್ಲ. ಅಥವಾ ಇದು ಅನಿರೀಕ್ಷಿತ ತಿರುವುಗಳಿಲ್ಲದ, ಊಹಿಸಲಾಧ್ಯವಾದ ಸಂಗತಿಗಳಿರುವ ಕಾದಂಬರಿಯೂ ಅಲ್ಲ. ಪ್ರಧಾನ ಕತೆ ಒಂದು ಕಾದಂಬರಿಯಾಗಿ ಸಾಗಲು ಒಂದು ಹೆಳೆಯಷ್ಟೇ (ನೆಪ). ಮುಖ್ಯವಾಗಿ ಮಧ್ಯಘಟ್ಟ ಆ ಭಾಗದ ಮಲೆನಾಡಿನ ೭೦-೮೦ ವರ್ಷಗಳ ಹಿಂದಿನ ಜೀವನ ಪದ್ಧತಿ, ನಿಸರ್ಗದ ಜೊತೆಗಿನ ಸಂಬಂಧ, ಆಹಾರ ಪದ್ಧತಿ, ಕಷ್ಟ ಸುಖಗಳು, ವಿವಿಧ ಸಮುದಾಯಗಳು ಮತ್ತು ಆ ಸಮುದಾಯಗಳ ನಡುವಣ ಅನುಬಂಧ, ವಿಶಿಷ್ಟವಾದ ನಾಟೀ ಔಷಧಿಗಳು ಇತ್ಯಾದಿಗಳ ಕುರಿತು ಬಹಳ ಆಪ್ತವಾಗಿ ಹೇಳುತ್ತಾ ಹೋಗುತ್ತದೆ. ಈಗಾಗಲೇ ನಶಿಸಿ ಹೋದ ಅಥವಾ ಅಳಿವಿನ ಅಂಚಿನಲ್ಲಿರುವ ಎಷ್ಟೋ ಪದ್ಧತಿಗಳ ಬಗ್ಗೆ ಈ ಹೊತ್ತಿಗೆಯಲ್ಲಿ ವಿವರಗಳಿವೆ.
ಇಲ್ಲಿ ಉಲ್ಲೇಖವಾದ ಎಷ್ಟೋ ಅಂಶಗಳ ಬಗೆಗೆ ಕೇಳಿ ಮಾತ್ರ ಗೊತ್ತು. ಉದಾಹರಣೆಗೆ ಬಡತನದ ಕಾರಣದಿಂದಲೋ ಇಲ್ಲಾ ಅಲಭ್ಯತೆಯ ಕಾರಣದಿಂದಲೋ ಅಕ್ಕಿಯಿಲ್ಲದಿರುವಾಗ ಬಾಳೆಕಾಯಿಯನ್ನೋ ಇಲ್ಲಾ ಹಲಸಿನಕಾಯನ್ನೋ ಉಪ್ಪು ಮೆಣಸು ಹಾಕಿ ತಿನ್ನುವ ಸಂದರ್ಭ. ಇದೇ ಉಲ್ಲೇಖ ‘ತಲೆಗಳಿ’ ಮತ್ತು ಸಿದ್ದಾಪುರ ತಾಲೂಕಿನ ಸ್ವಾತಂತ್ರ್ಯ ಹೋರಾಟದ ಬಗ್ಗೆ ಇರುವ ನಾಟಕವಾದ ‘ದೇವಿಯ ದೀವಿಗೆ’ಯಲ್ಲಿ ಬರುತ್ತದೆ. ಅದೇ ರೀತಿ ಪೌಷ್ಟಿಕತೆಯ ಕೊರತೆಯಿಂದ ಬಳಲುತ್ತಿರುವ ಮಕ್ಕಳಿಗೆ ಕಾಡೆಮ್ಮೆಯ ಗಿಣ್ಣಿನಿಂದ ಮಾಡುವ ಔಷಧ (ಕಾಡೆಮ್ಮೆ ತನ್ನ ಕರುವಿಗೆ ಹಾಲು ಕೊಡುತ್ತಿರುವಾಗ ಅದರ ಬಾಯಿಂದ ಸೋರಿದ ಹಾಲು), ಸಂತಾನೋತ್ಪತ್ತಿಗೆ ಮಾಡುವ ನಾಟಿ ಔಷಧ ಇತ್ಯಾದಿಗಳ ಬಗೆಗೆ ಬೆಳಕು ಚೆಲ್ಲುತ್ತದೆ.
ಅದೇ ರೀತಿ ಹಿಂದೆ ಸೋಗೆ ಮನೆಗಳಿದ್ದಾಗ ಮಾಡುವ ‘ಮನೆ ಕಂಬಳ’ದ ವರ್ಣನೆ. ಅಂದರೆ ಮಳೆಗಾಲದ ಮುಂಚೆ ಹಳೆಯ ಸೋಗೆ ತೆಗೆದು ಹೊಸ ಸೋಗೆ ಹೊದೆಸುವ ಪ್ರಕ್ರಿಯೆಯ ವರ್ಣನೆ ಕೂಡಾ. ಈಗ ಇಪ್ಪತ್ತರ ಒಳಗಿನವರು ಸೋಗೆ ಮನೆ ನೋಡಿರುವುದ ಬಿಡಿ ಹೊರಗೆ ನೆಲೆಸಿರುವ ನಮ್ಮೂರ ಮಕ್ಕಳು ‘ಸೋಗೆ’ (ನಮ್ಮ ಕಡೆ ಭಾಷೆಲಿ ಸೋಂಗೆ) ಅನ್ನುವ ಶಬ್ದ ಕೇಳಿದ್ದು ಕೂಡಾ ಅನುಮಾನವೇ!
ಈಗ ಕಾಡು ಪ್ರಾಣಿಗಳ ರಕ್ಷಣೆ ನಮ್ಮ ಆದ್ಯ ಕರ್ತವ್ಯ. ಆದರೆ ಆಗಿನ ತಲೆಮಾರಿಗೆ ಆತ್ಮರಕ್ಷಣೆಗೆ ಮಾಡಬೇಕಾದ ಅನಿವಾರ್ಯ ಕರ್ಮ. ಅರಣ್ಯ ಕಾನೂನು ಬಲವಾಗಿಲ್ಲದ ಮತ್ತು ಕಾಡು ಪ್ರಾಣಿಗಳು ವಿಪುಲವಾಗಿದ್ದ ಸಮಯದಲ್ಲಿ ಬರೀ ಆತ್ಮರಕ್ಷಣೆ, ಜಾನುವಾರುಗಳ ಮತ್ತು ಬೆಳೆಗಳ ರಕ್ಷಣೆ ಮಾತ್ರವಲ್ಲದೇ ಮೋಜಿಗಾಗಿ ಮತ್ತು ಆಹಾರಕ್ಕಾಗಿಯೂ ಬೇಟೆ ಸಾಮಾನ್ಯವಾಗಿತ್ತು. ಕೆನೆತ್ ಆ್ಯಂಡರ್‌ಸನ್, ತೇಜಸ್ವಿ, ಕುವೆಂಪು ಮೊದಲಾದ ಮೇರು ಬರಹಗಾರರ ಕೃತಿಗಳಲ್ಲಿ ಬೇಟೆಯ ಉಲ್ಲೇಖವನ್ನು ನಾವು ಓದಿಯೇ ಇದ್ದೇವೆ. ಅದೇ ರೀತಿ ಕಲ್ಕುಳಿ ವಿಟ್ಟಲ ಹೆಗಡೆಯವರ ‘ಮಂಗನ ಬ್ಯಾಟೆ’ಯಲ್ಲಿ ಬೇಟೆಯ ಬಗ್ಗೆ ವಿವರವಾದ ಉಲ್ಲೇಖವಿದೆ. ಅದೇ ರೀತಿ ಇಲ್ಲಿ ಕೂಡಾ ಬೇಟೆಯ ಬಗ್ಗೆ, ನರಭಕ್ಷಕ ಹುಲಿಬೇಟೆಯ ಸಮಯದಲ್ಲಿ ನಡೆದ ಘಟನೆಗಳ ಬಗ್ಗೆ ಮನಮುಟ್ಟುವ ವರ್ಣನೆಗಳಿವೆ.
ಮತ್ತೊಂದು ಕುತೂಹಲಕರವಾದ ಅಂಶ ನನಗೆ ಅನ್ನಿಸಿದ್ದು, ರಾಗಿಬೈಲು ಅನ್ನುವ ಜಾಗ. ಅದರ ಹೆಸರಿನ ಹಿನ್ನೆಲೆ ಹೇಳುತ್ತಾ ಕಳವೆಯವರು ಅಲ್ಲಿ ರಾಗಿ ಬೆಳೆಯುತ್ತಾ ಇದ್ದುದನ್ನು ವಿವರಿಸುತ್ತಾರೆ. ಮಲೆನಾಡಿಗೂ ರಾಗಿಗೂ ಎಲ್ಲಿಯ ಸಂಬಂಧ? ನಾನು ನನಗೆ ೧೮-೨೦ ವರ್ಷ ಆಗೋವರೆಗೂ ರಾಗಿಯ ತೆನೆ ಕೂಡಾ ನೋಡಿರಲಿಲ್ಲ. ಹಿಂದೆ ಅಲ್ಲಿ ‘ಕುಮರಿ ಮರಾಟಿ’ ಜನಾಂಗದವರು ಕಾಡಿನ ಕೆಳಹಂತದ ಪೊದೆ-ಗಿಡಗಳ ಸುಟ್ಟು ರಾಗಿ ಬೆಳೆಯುತ್ತಿದ್ದರಂತೆ. ಅಲ್ಲಿನ ಮಣ್ಣು ಫಲವತ್ತತೆ ಕಳೆದುಕೊಂಡ ನಂತರ ಸ್ಥಳಾಂತರ ಮಾಡುತ್ತಾ ಇದ್ದರಂತೆ. ಆಮೇಲೆ ಬ್ರಿಟೀಷರು ಬೆಳೆ ಬೆಳೆಯಲು ಕಾಡು ಸುಡುವುದ ನಿಷೇಧಿಸಿದ ಮೇಲೆ ರಾಗಿ ಕೃಷಿಯು ನಿಂತಿತು ಎಂದು ಲೇಖಕರು ಉಲ್ಲೇಖಿಸುತ್ತಾರೆ. ನಮ್ಮೂರ ಸುತ್ತಮುತ್ತ ಎಲ್ಲೂ ರಾಗಿ ಕೃಷಿ ನೋಡಿರದ ನನಗೆ ಇದನ್ನು ಮೊದಲು ಓದಿದಾಗ ಇದನ್ನು ನಂಬಲು ಸಾಧ್ಯವಾಗಿರಲಿಲ್ಲ.
ನೀವು ಪರಿಸರ ಸಂಬಂಧಿತ ವಿಷಯಗಳಲ್ಲಿ ಹೆಚ್ಚು ಆಸಕ್ತರಾಗಿದ್ದರೆ ಈ ಪುಸ್ತಕ ಹೇಳಿ ಮಾಡಿಸಿದ್ದು. ಕಾದಂಬರಿಯಲ್ಲಿ ಬರುವ ಮಲೆನಾಡ ಪರಿಸರದ ವರ್ಣನೆಯೇ ನಿಮ್ಮನ್ನು ವಾರಗಟ್ಟಲೇ ಕಾಡುವಂತೆ ಮಾಡುತ್ತದೆ. ಆದರೆ ನೀವು ಮಲೆನಾಡು ಜಿಲ್ಲೆಗಳಿಂದ ಬಾರದೇ ಇದ್ದರೆ ಇಲ್ಲಿ ಉಲ್ಲೇಖಿಸಲ್ಪಟ್ಟಿರುವ ಅನೇಕ ಪದಗಳು ನಿಮಗೆ ಅಪರಿಚಿತ ಅನ್ನಿಸಬಹುದು (ಎಷ್ಟೋ ಪದಗಳು ನನಗೆ ಕೂಡಾ ಅಪರಿಚಿತ ಅನ್ನಿಸಿದ್ದು ಬೇರೆ ವಿಷಯ). ಅದಕ್ಕೆ ಅವುಗಳ ಅರ್ಥ ಗೊತ್ತಾಗದಿದ್ದರೆ ಕೊನೆಯಲ್ಲಿ ಕೊಟ್ಟಿರುವ ಪದಕೋಶದಲ್ಲಿ ಗಮನಿಸಿ. ಇನ್ನೂ ವಿವರ ಬೇಕಾದರೆ ನಮ್ಮ ಭಾಗದ ಗೆಳೆಯರ ಸಂಪರ್ಕಿಸಿ. ಹಾಗೆಯೇ ಕೊನೆಯಲ್ಲಿ ನಿಮಗೆ ಕೃತಿಯಲ್ಲಿ ಉಲ್ಲೇಖಗೊಂಡಿರುವ ವನಮೂಲದ ಮತ್ತು ಕೃಷಿಮೂಲದ ಸಸ್ಯಗಳ ಪರಿಚಯವಿದೆ. ಅವುಗಳ ವಿವರ ಹುಡುಕಿ ನೋಡಿ ಅನೇಕ ಕುತೂಹಲಕಾರಿ ಸಂಗತಿಗಳು ನಿಮಗೆ ತಿಳಿಯುತ್ತವೆ.
ಮಧ್ಯಘಟ್ಟ ಓದುತ್ತಾ ಹೋದಹಾಗೇ ಇದನ್ನು ಓದುವ ಸ್ವಲ್ಪ ದಿನಗಳ ಮುಂಚೆ ಓದಿದ ನಮ್ಮೂರ ಭಾಗದ ಇನ್ನೊಂದು ಕಾದಂಬರಿ ತಲೆಗಳಿ ಚೂರು ಸಪ್ಪೆಯೆನಿಸಿತು. ಇವೆರಡನ್ನೂ ಹೋಲಿಸಿ ಒಂದನ್ನು ಮೇಲೂ ಇನ್ನೊಂದನ್ನು ಕೀಳು ಮಾಡುವ ಉದ್ದೇಶ ಖಂಡಿತ ಇಲ್ಲ. ಎರಡೂ ಅತ್ಯುತ್ತಮ ಕಾದಂಬರಿಗಳೇ. ಆದರೆ ನನ್ನ ಅಭಿರುಚಿಗೆ ಮಧ್ಯಘಟ್ಟ ಜಾಸ್ತಿ ಇಷ್ಟವಾಯಿತು.
ಊರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಗುಂಜಗೋಡು. ಸದ್ಯ ಮೈಸೂರಿನಲ್ಲಿ ವಾಸ. ಓದು, ತಿರುಗಾಟ, ಚದುರಂಗ ಇತ್ಯಾದಿ ಇಷ್ಟದ ಆಸಕ್ತಿಗಳು. ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.