‘ನನ್ನ ಸ್ವಕಾರಣದಿಂದ ಪಿಎಚ್.ಡಿ ಸಂಶೋಧನೆಗೂ, ಅತಿಥಿ ಉಪನ್ಯಾಸಕ ವೃತ್ತಿಗೂ ರಾಜಿನಾಮೆ ನೀಡುತ್ತಿರುವೆ’ ಎಂದು ಒಂದು ಸಾಲಿನ ರಾಜಿನಾಮೆ ಬರೆದು ಲಕೋಟೆಯಲ್ಲಿಟ್ಟು ಯಾರ್ಯಾರಿಗೆ ಕೊಡಬೇಕೊ ಅವರಿಗೆಲ್ಲ ಕೊಟ್ಟು ಹಾಸ್ಟಲಿಗೆ ಬಂದೆ. ಆ ಕ್ಷಣವೇ ಕ್ಯಾಂಪಸ್ಸನ್ನು ತೊರೆದೆ. ಯಾರಿಗೂ ಹೇಳಲಿಲ್ಲ. ಇಷ್ಟು ಕಾಲ ಪೊರೆದ ಕ್ಯಾಂಪಸ್ಸೇ ನಿನ್ನನ್ನು ಬಿಟ್ಟು ಹೋಗುತ್ತಿರುವೆ. ನಿನ್ನ ಈ ನೆಲದ ಸಾರವನೆಲ್ಲ ತಾಯ ಎದೆ ಹಾಲ ಕುಡಿದಂತೆ ಹೀರಿ ಅರಗಿಸಿಕೊಂಡಿರುವೆ. ಹೋಗುವೆ ನನ್ನ ಮುದ್ದಿನ ನವಿಲುದಾರಿಗಳೇ ಎಂದು ಕತ್ತಲಲ್ಲಿ ಬಂದಿದ್ದೆ. ಲೈಬ್ರರಿಯ ಮುಂದೆ ನಿಂತು ವಂದಿಸಿದೆ. ಗೆಳೆಯರಿಗೆ ಎಲ್ಲ ಪುಸ್ತಗಳ ಕೊಟ್ಟು ಬಿಟ್ಟಿದ್ದೆ. ಕೆಲವೇ ಬಟ್ಟೆ ತೆಗೆದುಕೊಂಡು ಮಾರುಕಟ್ಟೆಯ ಬಳಿ ಸಿದ್ರಾಮಣ್ಣನ ಹುಡುಕಿದೆ. ಅಷ್ಟು ಹೊತ್ತಲ್ಲಿ ಅಲ್ಲಿ ಅವನೀಗ ಇರಲು ಸಾಧ್ಯವಿರಲಿಲ್ಲ. ಮೊಗಳ್ಳಿ ಗಣೇಶ್ ಆತ್ಮಕತೆ ʻನನ್ನ ಅನಂತ ಅಸ್ಪೃಶ್ಯ ಆಕಾಶʼ ಸರಣಿಯಲ್ಲಿ 37ನೇ ಕಂತು.
ಮೈಕೇಲ್ ತನ್ನ ದೇಶಕ್ಕೆ ಹಿಂತಿರುಗಿದ್ದ. ಪ್ರಾಮಿಸ್ ಮಾಡಿದ್ದ. ಏನಾದರೂ ನಿನಗೆ ಸಹಾಯ ಮಾಡುವೆ ಎಂದು ಮಾತು ಕೊಟ್ಟಿದ್ದ. ಎಷ್ಟೇ ಆಗಲಿ ಜಗತ್ತಿನ ಮಹಾ ದುರಂತಗಳ ಬೆಂಕಿ ಬಾಯಿಂದ ಅಕಸ್ಮಾತ್ ತಪ್ಪಿಸಿಕೊಂಡು ಬಂದಿದ್ದ ಯಹೂದಿ ಜನಾಂಗದವನು. ನಮ್ಮ ದೇಶದ ಜಾತಿಗಳಿಗೆ ಅಂತಹ ಜನಾಂಗ ದ್ವೇಷ ಇದೆ; ಆದರೆ ಅದು ಎಸಗುವ ದುರಂತದ ಅರಿವಿಲ್ಲ. ಅಸ್ಪೃಶ್ಯರನ್ನು ಈಗಲೂ ಯಾತನಾ ಶಿಬಿರದಲ್ಲೇ ಇಟ್ಟಿರುವಂತೆ ಬಂಧಿಸಲಾಗಿದೆ ಅಲ್ಲವೇ… ನನ್ನ ಯಾತನೆ ಮೇಲಿನವರಿಗೆ ಯಾತನೆ ಎಂದೆನಿಸಿಯೇ ಇಲ್ಲ. ಯಾತನೆಯ ಶಿಬಿರಗಳು ಎಲ್ಲೆಲ್ಲಿವೆ ದೇಶದಲ್ಲಿ… ಗೊತ್ತಿಲ್ಲವೇ; ಇಡೀ ದೇಶವೇ ಒಂದು ಮಹಾನ್ ಯಾತನಾ ದೇಶ. ಅದರಲ್ಲಿ ಎಲ್ಲ ಜಾತಿಗಳು ಯಾತನೆಯ ಬೇರೆ ಬೇರೆ ಸ್ವರೂಪಗಳೇ… ಸಾವಿನ ಶಿಬಿರ ಕೊನೆಯದು. ಅದು ಮುಟ್ಟಿಸಿಕೊಳ್ಳಬಾರದವರ ಉಗ್ರ ಶಿಬಿರ. ನನಗೇ ಅನುಮಾನ! ನಾನು ಸುಳ್ಳು ಹೇಳಿಕೊಂಡು ಈ ಯಾತನಾ ಶಿಬಿರದ ದೇಶದಲ್ಲಿ ಅಕಸ್ಮಾತ್ ಇಲ್ಲಿ ತನಕ ಬಂದಿರುವೆನೇ…
ಹೌದು ಯಾತನೆಯ ಗರ್ಭದಿಂದಲೇ ತಾನು ಹುಟ್ಟಿ ಬಂದದ್ದಲ್ಲವೇ. ನಮ್ಮ ಯಮಲೋಕದಲ್ಲಿ ಎಷ್ಟೊಂದು ಯಮಕಿಂಕರರು ತುಂಬಿದ್ದಾರಲ್ಲಾ… ಅಲ್ಲಾ… ಈ ಶಿಬಿರಗಳ ನಿರ್ಮಿಸಿ ಅವುಗಳ ಒಡೆಯರಾಗಿ ಮೆರೆಯುತ್ತಿರುವುದು ಕೂಡ ಆ ಯಾತನಾ ಕೂಪಗಳಲ್ಲೇ ತಾನೇ… ಅವರೇನು ಸುಖವಾಗಿ ಇದ್ದಾರಾ. ಕೊಂದವನ ಉಸಿರು ಒಂದೇ ಕ್ಷಣದಲ್ಲಿ ಎಲ್ಲಿಗೊ ಹೊರಟು ಹೋಯಿತು. ಆದರೆ ಕೊಂದವನು ಕೊಲೆಯನ್ನೇ ಹತ್ಯೆಯನ್ನೇ ಉಸಿರಾಡುತ್ತಿರಬೇಕಲ್ಲಾ… ಯಾವುದು ಹೆಚ್ಚಿನ ದಂಡನೆ… ಮರಣದಂಡನೆ ಸಲೀಸು; ಆದರೆ ಮರಣ ಶಾಸನ ಬರೆವವರದೇ ಘೋರ ದುರಂತ. ಆ ಪಾಪಿಗಳು ಅತಿ ಹೆಚ್ಚಿನ ಯಾತನೆಯಲ್ಲಿದ್ದಾರೆ; ಅದವರಿಗೆ ಗೊತ್ತಿಲ್ಲ. ಆದರೆ ಅವರ ಮೂಲಕ ಅದು ಮಾನವ ಪಾಡಿಗೆ ಅರಿವಾಗುತ್ತದೆ; ಕಾಯೋಣ ಎಂದು ಏನೊ ಟಿಪ್ಪಣಿ ಬರೆದುಕೊಂಡೆ. ಈವಿಲ್ ಅಂತಾರೆ… ಕಿಲ್ಲಿಂಗ್ ಇನ್‌ಸ್ಟಿಂಕ್ಟ್ ಅಂತಾರೆ… ಬೀಸ್ಟ್… ಹಂಟಿಂಗ್ ಅಂತಾರೆ… ಯಪ್ಪಾ… ಏನೇನೊ ವಕ್ರ ವರ್ತನೆಗಳು. ಇವೆಲ್ಲವೂ ಎಲ್ಲಿಂದ ಬಂದವು ದೇವರೇ… ನಿನ್ನ ಬಿಟ್ಟು ಇನ್ನಾರ ಕೇಳಲೀ… ಬೇರೆಯವರಿದ್ದಾರೆಯೇ… ಇಲ್ಲವೇ… ಹಾಗಾದರೆ ಇನ್ನಾರನ್ನು ಕೇಳಲಿ… ನಿನ್ನನ್ನು ನೀನೇ ಕೇಳಿಕೊ… ಅಷ್ಟು ಸಾಕು… ನನ್ನೊಳಗೇ ಎಲ್ಲರೂ ಇದ್ದಾರೆಯೇ ಕೊಲುವವರೂ, ಪೊರೆಯುವವರೂ… ಹೌದು! ಸುಮ್ಮನೆ ನಿನ್ನ ಕರ್ತವ್ಯ ಪಾಲಿಸು… ಮನಸ್ಸೊ ಆತ್ಮವೊ ಮಾತಾಡಿದಂತಾಗಿತ್ತು. ಗೆಳೆಯರೆಲ್ಲ ದೂರವಾಗಿದ್ದರು. ಕ್ಯಾಂಪಸ್ ಎಂದರೆನೇ ಹಾಗೆ… ಬರ್ತಾನೆ ಇರ್ತಾರೆ -ಹೋಗ್ತಾನೆ ಇರ್ತಾರೆ… ಯೋಚಿಸುತ್ತಾ ಕ್ಯಾಂಟೀನಿನಲ್ಲಿ ಕೂತಿದ್ದೆ.
`ಹಲ್ಲೊ ಮೈ ಯಂಗ್ ಫಿಲಾಸಫರ್… ವಾಟ್ ಈಸ್ ದಿ ಮೀನಿಂಗ್ ಆಫ್ ಮ್ಯಾನ್’ ಎಂದು ಅಶ್ವಥ್ ನಾರಾಯಣ್ ಹಿಂದಿನಿಂದ ಬಂದು ಹೆಗಲ ಮೇಲೆ ತಟ್ಟಿ ಎಚ್ಚರಿಸಿ ಮಾತಾಡಿದರು. ತುಂಬ ದಿನವಾಗಿತ್ತು ಸಿಕ್ಕಿ. ದೆಹಲಿಯ ಜೆ.ಎನ್.ಯು.ಗೆ ಹೋಗಿದ್ದರು ಅಪರೂಪದ ರೆಕಾರ್ಡ್ಸ್‌ಗಳನ್ನು ಲೈಬ್ರರಿಯಲ್ಲಿ ಅಧ್ಯಯನ ಮಾಡಲು. ಏನಾದ್ರು ತಿಂತಿಯಾ… ನನಗೆ ಹಸಿವಾಗುತ್ತಿದೆ… ನಾನು ತಿನ್ನುವೆ. ನೀನು ಚಹಾ ಕುಡಿ ಎಂದರು. ಆಯಿತು. ಹೊರ ಬಂದೆವು. `ಹಾಂsss ಬೈದ ಬೈ… ನಿನಗೊಂದು ವಿಷಯ ಗೊತ್ತಾ…’ ‘ಇಲ್ಲಾ’ ಎಂದೆ. ಅಲ್ಲಯ್ಯಾ… ನಿನ್ನ ಬಗ್ಗೆಯೇ ಏನೋ ಸ್ಕೆಚ್ ಹಾಕಿದ್ದಾರೆ ಎಂದು ರಾತ್ರಿ ತಿಳಿದೆ. ನಿನಗೇ ಗೊತ್ತಿಲ್ಲವೇ’ ಎಂದರು. ಕೊಲ್ಲೋರು ಹೇಳಿ ಕೊಲ್ತಾರಾ… ಕೊಲ್ಲಲಿ ಬಿಡಿ! ನನ್ನದೇನು ಈ ಜೀವ… ಈ ದೇಹ… ಈ ಉಸಿರಾಟ… ಎಲ್ಲಿಂದ ಬಂದಿದೆಯೊ ಅಲ್ಲಿಗೇ ಹೋಗಲಿ ಬಿಡಿ’ ಎಂದಿದ್ದೆ. `ಎಲ್ಲ ಹಂತದಲ್ಲಿ ಫಿಲಾಸಫಿ ಸಲ್ಲದು ಕಣೋ; ಕುತರ್ಕವನ್ನು ವಾಸ್ತವದಲ್ಲಿ ನಿಂತು ಎದುರಿಸಬೇಕಾಗುತ್ತದೆ’ ಎನ್ನುತ್ತ ಕಣ್ಣು ಕೊಕ್ಕರಿಸಿಕೊಂಡು ಕೈಗಳನ್ನು ಗುದ್ದಿಕೊಂಡರು. ಅವರ ಚಡಪಡಿಕೆಯಲ್ಲಿ ಏನೊ ಆಪತ್ತು ಕಾದಿದೆ ಎಂಬುದು ಸ್ಪಷ್ಟವಾಗಿತ್ತು. ನನಗೆ ಏನನ್ನೂ ಹೇಳಬೇಡಿ ಸಾರ್… ಮರಣದಂಡನೆ ಎಂದಿದ್ದರೂ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಯಾವತ್ತೊ ಸತ್ತು ಹೋಗಿದ್ದೀನಿ… ಈಗ ಬದುಕಿರುವಂತೆ ಕಾಣುವೆ ಅಷ್ಟೇ. ಅದು ಕೂಡ ಈ ಲೋಕದ ಮಾಯೆ. ಎಷ್ಟೇ ಆಗಲಿ ನೀವು ಪ್ರಾಣ ಮಿತ್ರರು. ನಿಮ್ಮಂತವರಿಂದ ಉಸಿರಾಡುತ್ತಿರಬಹುದು. ‘ನೀವು ದೆಹಲಿಯಿಂದ ಬಂದಿದ್ದೀರಿ… ಆಗ್ರಾ, ಫತೇಪುರ್ ಸಿಕ್ರಿ… ಉದಯ್ ಪುರ, ದೆಹಲಿ ನಗರಗಳ ಚರಿತ್ರೆಯ ಕಥೆಗಳ ಹೇಳಿ. ಕಥೆ ನನ್ನ ಪ್ರಾಣ ಪಕ್ಷಿ… ಅದು ನನ್ನ ದೇಹ ಬಿಟ್ಟು ಹಾರಿ ಹೋದರೂ ಯಾವುದಾದರೂ ಒಂದು ಮರದ ಕೊಂಬೆಗೆ ಅಂಟಿಕೊಂಡಿರುತ್ತದೆ’ ಎಂದು ವಿಷಯಾಂತರ ಮಾಡಿದೆ. ದಿಟ್ಟಿಸಿ ಕೇಳಿದರು…
‘ಏನೇ ಬಂದರೂ ನಿಭಾಯಿಸ್ತಿಯಾ’
‘ಖಂಡಿತ’
‘ನಿನ್ನನ್ನು ಈ ಕ್ಯಾಂಪಸ್ ಬಿಡಿಸಿದರೆ’
‘ನಾನಾಗಲೆ ಅರ್ಧ ಕಾಲನ್ನು ಎತ್ತಿ ಆಚೆ ಇಟ್ಟಿರುವೆ… ಜಿಗಿಯಲು ಕಾಯುತ್ತಿರುವೆ’
‘ಗುಡ್… ವೆರಿಗುಡ್…ಯೂ ಆರ್ ನಾಟ್ ಎ ಸಿಂಪಲ್… ಬಟ್ ಸಿಂಪ್ಲಿ ಗ್ರೇಟ್…ʼ
‘ಬರ್ತೀನಿ… ಒಂದು ವೇಳೆ ನಿನಗೆ ಸಹಿಸೋಕೆ ಆಗ್ಲಿಲ್ಲ ಅಂದ್ರೆ ನಾನಿದ್ದೀನಿ ಅನ್ನುದಾ ನೆನಪಿಸ್ಕೊ’
ಅಶ್ವಥ್ ಜಿಮ್‌ನತ್ತ ಹೊರಟರು. ಯಾಕೆ ಹೀಗೆ ಹೇಳಿದರು ಎಂದು ಯೋಚಿಸಿದೆ. ಹಿರೋಶಿಮಾದ ಮೇಲೆ ಬಾಂಬು ಹಾಕುವ ಮುನ್ನ ಆ ನಗರ ಎಷ್ಟು ಅಮಾಯಕವಾಗಿತ್ತು… ಮಕ್ಕಳು ಏನೇನು ಆಟ ಆಡುತ್ತಿದ್ದರು… ಎದೆ ಹಾಲ ಕುಡಿಯುತಿದ್ದ ಮಕ್ಕಳ ಮನದಲ್ಲಿ ತಾಯ ಅಕ್ಕರೆ ಹೇಗೆ ಕಾಣುತಿತ್ತು… ನಲ್ಲನ ಬಿಸಿಯಪ್ಪುಗೆಯಲ್ಲಿ ಮಲಗಿದ್ದ ಚೆಲುವೆಯ ನಾಳಿನ ಸಂಸಾರದ ಕನಸು ಹೇಗೆ ಚಿತ್ತಾರವಾಗುತಿತ್ತು… ಗೆದ್ದೇ ಎಂದು ಬೀಗುತ್ತಿದ್ದ ಕಮಾಂಡರ್‌ಗಳ ಚಿತ್ತದಲ್ಲಿ ಏನೇನು ವಿಪ್ಲವ ಘಟಿಸುತಿತ್ತು ಎಂಬುದನ್ನು ಯಾರು ತಾನೆ ಊಹೆ ಮಾಡಿದ್ದರು. ಅಣುಬಾಂಬು ಸಿಡಿಸಲು ಕಾದು ಕೂತಿದ್ದ ಅಷ್ಟೆಲ್ಲ ಅಣು ವಿಜ್ಞಾನಿಗಳ ಹೃದಯ ಹೇಗೆ ಬಡಿದುಕೊಳ್ಳುತ್ತಿತ್ತು… ಐನ್‌ಸ್ಟೈನ್‌ಗೆ ಹೀಗೆ ಆಗುತ್ತದೆ ಎಂದು ಗೊತ್ತಿತ್ತೇ… ಮನುಷ್ಯರ ಎಷ್ಟೋ ದುಷ್ಕೃತ್ಯಗಳು ಸ್ವತಃ ದೇವರಿಗೂ ಗೊತ್ತಿರುವುದಿಲ್ಲ!
ಭೂಮಿ ತನಗಾದ ಗಾಯವ ತಾನೇ ಸರಿಪಡಿಸಿಕೊಳ್ಳುತ್ತದೆ. ಲಾವಾದ ಹೊಳೆಯಲ್ಲು ಜೀವ ಉದಿಸುತ್ತದೆ… ಅರೇ; ಹೇಗೇ… ಅದು ಆ ಲಾವಾಕ್ಕೇ ಗೊತ್ತು… ಇರಲಿ! ನನ್ನದೇನು ಜುಜುಬಿ. ನನಗಾಗುವ ಗಾಯವ ನಾನೆ ವಾಸಿ ಮಾಡಿಕೊಳ್ಳುವೆ ಎಂದು ಹಾಸ್ಟಲಿಗೆ ಬಂದೆ. ಶೋಭ ನೆನಪಾದಳು. ತಾಳಿಯನ್ನು ಕಟ್ಟಿರುತ್ತೇವೆ ನಿಜಾ… ಆದರೆ ಅದೇ ನಮ್ಮನ್ನು ಬಲವಾಗಿ ಕಟ್ಟಿಹಾಕಿಕೊಂಡಿರುತ್ತದೆ ಎನಿಸಿತು. ಮದುವೆ ಆಗಿ ಬಂದಿರುವೆ ಎಂಬ ಸಡಗರವೆ ಇರಲಿಲ್ಲ. ಪ್ರಾಧ್ಯಾಪಕರ ತಿರಸ್ಕಾರದ ನೋಟ ಮಾಮೂಲಾಗಿತ್ತು. ನಾಗವಾರರು ಕರೆದು; ‘ನೋಡೀ, ನಿಮಗೆ ಇಲ್ಲಿ ಎಲ್ಲರೂ ಆಗದವರೆ ತುಂಬಿದ್ದಾರೆ… ಎಲ್ಲಾದರೂ ಹೊರಗೆ ಲಂಕೇಶ್ ಅವರಿಗೆ ಹೇಳಿ ಒಂದು ಕೆಲಸ ಗಿಟ್ಟಿಸಿಕೊಳ್ಳಿ. ಸಂಸಾರ ಕಟ್ಟಿಕೊಂಡಿದ್ದೀರಿ… ಜಾರಿ ಬಿದ್ದರೆ ಯಾರೂ ಬರೋದಿಲ್ಲ… ಯೋಚನೆ ಮಾಡಿ’ ಎಂದಿದ್ದರು. ಸರಿ ಇತ್ತು. ಕಣ್ಣುಕಟ್ಟಿ ಕಾಡಲ್ಲಿ ಬಿಟ್ಟಂತಾಗಿತ್ತು. ಅನಂತಮೂರ್ತಿ ಅವರು ಎನ್.ಬಿ.ಟಿ.ಯ ಅಧ್ಯಕ್ಷರಾಗಿ ದೆಹಲಿಗೆ ಹೊರಟರು. ನನ್ನ ತಾಪತ್ರಯ ಅವರಿಗೆ ಗೊತ್ತಿತ್ತು. ಎನ್.ಬಿ.ಟಿಯಲ್ಲಿ ಒಂದು ಸಂಪಾದಕ ಹುದ್ದೆ ನಿರ್ಮಿಸಿ ಅರ್ಜಿ ಹಾಕು ಎಂದು ಟೆಲಿಗ್ರಾಂ ಕಳಿಸಿದರು. ಈ ಪುಟ್ಟ ಹಳ್ಳಿ ಹುಡುಗಿಯ ಈಗ ತಾನೆ ಮದುವೆ ಮಾಡಿಕೊಂಡಿರುವೆ. ಆ ದೂರದ ನಾಡಿಗೆ ಇವಳ ಹೇಗೆ ಕರೆದೊಯ್ಯಲಿ ಎಂದು ಸುಮ್ಮನೆ ಅರ್ಜಿ ಹಾಕಿ ಇಂಟರ್ವ್ಯೂ ತಪ್ಪಿಸಿಕೊಂಡಿದ್ದೆ. ಆ ಕೆಲಸ ಬೇರೆಯವರಿಗೆ ಸಿಕ್ಕಿತು. ಮೈಸೂರು ಅಷ್ಟೊಂದು ಆಕರ್ಷಿಸಿತ್ತು. ‘ನೀನು ಬರದೇ ಹೋದದ್ದಕ್ಕೆ ನನಗೇನು ಬೇಸರವಿಲ್ಲಾ; ಅಲ್ಲೇ ಕನ್ನಡ ವಿಶ್ವವಿದ್ಯಾಲಯ ಇದೆಯಲ್ಲಾ ಅಲ್ಲೇ ಕಂಬಾರರಿಗೆ ಹೇಳಿ ಕೆಲಸ ಕೊಡಿಸುವೆ’ ಎಂದು ಪತ್ರ ಬರೆದಿದ್ದರು. ನನಗೆ ಅಲ್ಲಿಗೂ ಹೋಗಲು ಇಷ್ಟ ಇರಲಿಲ್ಲ. ಸ್ವತಃ ಕಂಬಾರರೇ ‘ಇಲ್ಲಿಗೆ ಬಾರಯ್ಯ ಕೆಲಸ ಕೊಡುವೆ’ ಎಂದು ಕರೆದಿದ್ದರು. ಆಗ ನಾನು ಲಂಕೇಶರ ಅಂಗಳದಲ್ಲಿದ್ದೆ. ಹಾಗೆ ಕಂಬಾರರ ಮಾತಿಗೆ ಹೋದರೆ ಲಂಕೇಶರಿಗೆ ಬೇಸರವಾಗುತ್ತದೆ ಎಂದು ಹಿಂದೆ ಸರಿದಿದ್ದೆ.
ಒಂದು ವಾರ ಕಳೆದಿತ್ತು. ಅಶ್ವಥ್ ಹೇಳಿದ್ದನ್ನು ಮರೆತು ಬಿಟ್ಟಿದ್ದೆ. ಬೆಳಿಗ್ಗೆ ಹೋಗಿ ವಿಭಾಗದ ಮುಂದೆ ನಿಂತರೆ ನನ್ನದೇ ಪಟ ಇದ್ದ ಕರಪತ್ರವ ಗೋಡೆಗೆ ಹಚ್ಚಿದ್ದರು. ಅಲ್ಲಿ ಇಲ್ಲಿ ಎಲ್ಲೆಲ್ಲು. ಲೈಬ್ರರಿ, ಕ್ಯಾಂಟೀನು… ಆಯಾಯ ವಿಭಾಗಗಳ ನೋಟೀಸು ಬೋರ್ಡುಗಳಲ್ಲೆಲ್ಲ ನನ್ನದೇ ಅಪಖ್ಯಾತಿಯ ಆರ್ಭಟದ ಕರಪತ್ರ… ದಂಗಾಗಲಿಲ್ಲ. ಒಂದೇ ಕ್ಷಣದಲ್ಲಿ ಎಲ್ಲ ಹೊಂಚುದಾರರೂ ಕಣ್ಣ ಮುಂದೆ ಬಂದರು.
ಜೋರಾಗಿ ನಕ್ಕು ಬಿಟ್ಟೆ… ಎಲ್ಲರೂ ನನ್ನನ್ನೆ ನೋಡುತ್ತಿದ್ದರು… ಗಹಗಹಿಸಿ ನಗಾಡುತಿದ್ದೆ. ಒಹ್! ಇವನಿಗೆ ಹುಚ್ಚು ಹಿಡಿಯಿತೇನೊ ಎಂದುಕೊಂಡು ಅಲ್ಲೆಲ್ಲ ಇದ್ದವರು ಅತ್ತಿತ್ತ ಸರಿದರು. ನಿಜವೇ ಸುಳ್ಳೇ ಎಂದು ಯಾರೂ ಕೇಳಲಿಲ್ಲ. ಕ್ಯಾಂಟೀನಿಗೆ ಬಂದೆ. ಒಬ್ಬ ಅಪರಿಚಿತ ಹುಡುಗ ಕರಪತ್ರ ಹಂಚುತ್ತಿದ್ದ. ನಾನೇ ಆ ಕರಪತ್ರದಲ್ಲಿ ಇರವವನು ಎಂಬುದೆ ಅವನಿಗೆ ತಿಳಿಯಲಿಲ್ಲ. ‘ನನಗೂ ಒಂದ ಕೊಡಪ್ಪಾ’ ಎಂದೆ. ಕೊಟ್ಟ. ಚಹಾ ಸೇವಿಸುತ್ತಾ ಸಿಗರೇಟಿನ ಹೊಗೆ ಉಗುಳುತ್ತ ಓದಿದೆ. ಭಯಂಕರ ಆರೋಪಗಳಿದ್ದವು. ಗಾದೆ ಪ್ರಾಧ್ಯಾಪಕ ನನ್ನನ್ನೆ ಹುಡುಕಿಕೊಂಡು ಬಂದು; ‘ಇದೇನ್ರಿ ಇದು ಅನ್ಯಾಯಾ’ ಎಂದರು. ‘ಯಾವುದು ಸರ್ ಅನ್ಯಾಯಾ…’ ಎಂಬಂತೆ ನೋಡಿದೆ. ‘ನೀನು ಈ ಮಟ್ಟಕ್ಕೆ ಇಳ್ದಿದ್ದೀಯೆ ಅಂತಾ ಗೊತ್ತಿರ್ಲಿಲ್ಲ… ಇಂಗೇನಯ್ಯಾ ಅನ್ಯಾಯ ಮಡೋದು’ ಎಂದು ನಶ್ಯ ಏರಿಸಿದರು. ‘ಗೊತ್ತಾಯ್ತು ಬಿಡೀ ಸಾರ್… ಆ ಅನ್ಯಾಯದಲ್ಲಿ ನಿಮ್ಮ ಯಾವ ಪಾತ್ರವು ಇಲ್ಲಾ ಹೋಗಿ ಸಾರ್’ ಎಂದು ಹೇಳಿ ಸಂಸ್ಥೆಗೆ ಬಂದೆ. ಗುಲಗುಲ್ಲು, ನಿದೇರ್ಶಕರು ಕರೆಸಿದರು. ಏನಿದೆಲ್ಲ ಎಂದರು. ಅದೆಲ್ಲ ಸುಳ್ಳು ಎಂದೆ. ‘ಬೆಂಕಿ ಇಲ್ಲದೆ ಹೊಗೆ ಆಡುತ್ತಾ’ ಎಂದು ಕೋಪಿಸಿಕೊಂಡರು. ಆರೋಪ ಮಾಡಿದ್ದಾರಲ್ಲಾ; ಅವರು ಸಾಬೀತು ಪಡಿಸಲಿ ಬಿಡಿ ಸಾರ್… ಇವೆಲ್ಲ ತಣ್ಣಿಪಾಂಬು. ಘಟ ಸರ್ಪಗಳಾಗಿದ್ದರೆ ನನ್ನ ಎದಿರು ಬಂದು ಹೇಳಲಿ; ಆಗ ಉತ್ತರಿಸುವೆ’ ಎಂದು ಹೊರ ಬಂದೆ. ಪಾಠ ಮಾಡಿದೆ. ಆಡಳಿತಾಂಗ ಆರೋಪ ಪತ್ರವ ಗಂಭೀರವಾಗಿ ಪರಿಗಣಿಸಿರಲಿಲ್ಲ. ನಾನು ತೆಪ್ಪಗಿದ್ದೆ. ಬೇಕೆಂತಲೇ ಹಾಗೆ ಆರೋಪಿಸಿ ಕರಪತ್ರ ಬರೆದವರ ಎದಿರು ಹುಡುಗಿಯರ ಕಟ್ಟಿಕೊಂಡು ಶೋ ಕೊಟ್ಟೆ. ಇನ್ನೇನೊ ಇವನ ಕಥೆ ಮುಗಿಯಿತು ಎಂದು ಅನೇಕರು ತುದಿಗಾಲಲ್ಲಿ ನಿಂತಿದ್ದರು. ನಾನದನ್ನು ಎಳೆದಾಡಲಿಲ್ಲ. ಯಾರ ವಿರುದ್ಧವೂ ಕೂಗಾಡಲಿಲ್ಲ. ನನಗೆ ನೋವೇ ಆಗಿರಲಿಲ್ಲ. ಕರಪತ್ರದಲ್ಲಿ ಮೂರು ಆರೋಪಗಳಿದ್ದವು. ಒಂದನೆಯದು; ಈತ ಅಗಸರವನು. ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿದ್ದಾನೆ. ಇವನು ಪರಿಶಿಷ್ಟ ಜಾತಿಯವನಲ್ಲ. ಎರಡನೆಯ ಆರೋಪ- ಈತ ನಕ್ಸಲ್‌ವಾದಿ; ನಕ್ಸಲರಿಗೆ ಆಶ್ರಯ ನೀಡಿದ್ದಾನೆ. ಮೂರನೆಯದು -ಈತ ಅಮಾಯಕ ಹುಡುಗಿಯರ ಶೀಲ ಕೆಡಿಸಿದ್ದಾನೆ…
ಯಾರು ಹೀಗೆ ಬರೆದಿರೋದು… ಯಾರ್ಯಾರು ಇದರಲ್ಲಿದ್ದಾರೆಂದು ಲೆಕ್ಕಹಾಕಿದೆ. ಛೇ ಎನಿಸಿತು. ಅವರೆಲ್ಲ ಒಂದು ಕಾಲಕ್ಕೆ ನನ್ನ ಜೊತೆ ಇದ್ದವರೇ… ಹೋಗಲಿ ಬಿಡು… ಆಗೋದೆಲ್ಲ ಆಗಲಿ ಎಂದು ಕೊಂಚ ಭಾವುಕನಾದೆ. ನಾನು ಸತ್ತು ಹೋಗಿರುವೆನೊ; ಅವರೇ ಮಡಿದು ಹೋಗಿದ್ದಾರೊ ಎಂದುಕೊಂಡು; ಅವರೇ ಹೆಚ್ಚು ಕಾಲ ಬದುಕಿರಲಪ್ಪಾ ದೇವರೇ. ನಾನು ಇಲ್ಲಿರಬಾರದು ಎಂಬುದೊಂದೇ ಅವರ ಸಂಚು. ಅವರೇ ಇರಲಿ ಇಲ್ಲಿ ಮೊಳೆ ಹೊಡೆದುಕೊಂಡು… ನಾನೇ ಹೊರಗೆ ಹೋಗುವೆ ಎಂದು ಮನಸ್ಸನ್ನು ಗಟ್ಟಿ ಮಾಡಿಕೊಂಡೆ. ಅವರ ಹೆಸರನ್ನೆ ತರಬಾರದು. ಒಳ್ಳೆಯವರಂತೆ ನಟಿಸುತ್ತ ಬಂದಿದ್ದಾರೆ… ಅವರ ಆ ನಟನೆಯೆ ಒಂದು ದಿನ ಸತ್ಯವೇ ಆಗಿ ಕೊನೆಗಾಲಕ್ಕಾದರು ಒಳಿತನ್ನು ಮಾಡಲಿ ಎಂದು ಯಾವುದೇ ಪ್ರತಿಕ್ರಿಯೆ ಮಾಡಲಿಲ್ಲ. ಆದರೆ ಆಡಳಿತಾಂಗ ವಿವರಣೆ ಕೇಳಿತು. ದಾಖಲೆ ಸಹಿತ ವಿವರ ಕೊಟ್ಟೆ. ಅಲ್ಲಿಗೆ ಅದು ಒಂದೇ ಗಳಿಗೆಯಲ್ಲಿ ಬೂದಿಯಾಗಿ ಗಾಳಿಗೆ ಹಾರಿ ಹೋಯಿತು. ಅಂತಹ ಒಳ್ಳೆಯ ಅಧಿಕಾರಿಗಳೂ ಇದ್ದರು. ನಿರಾಳನಾಗಿದ್ದೆ. ಲಂಕೇಶ್ ಪತ್ರಿಕೆಯ ಹಬ್ಬಕ್ಕೆ ಹೋಗಿದ್ದೆ. ಅದಾಗಲೆ ಸಾಕಷ್ಟು ರೀತಿಯಲ್ಲಿ ಕರಪತ್ರಗಳ ಹಂಚಿದ್ದರು. ಇಲ್ಲೇನೊ ಆಗಿದೆ ಎಂದು ಅಂದುಕೊಂಡಿದ್ದರು. ವಿಮರ್ಶೆಯ ನನ್ನ ಏಟುಗಳ ತಿಂದಿದ್ದವರೆಲ್ಲ ಆ ಕರಪತ್ರ ಹೇಳೋದು ಸತ್ಯ ಎಂದು ಅಪಪ್ರಚಾರವನ್ನು ವ್ಯವಸ್ಥಿತವಾಗಿ ಮಾಡಿದ್ದರು. ಬಹಳ ಕಷ್ಟಪಟ್ಟು ನನಗೆ ಇನ್ನೊಂದು ಬಗೆಯ ಪ್ರಚಾರ ತಂದುಕೊಟ್ಟಿದ್ದರು. ಹೈರಾಣಾಗಿದ್ದೆ. ದಿನವೂ ಕಾಲು ಕೆರೆದು ಜಗಳಕ್ಕೆ ಕರೆಯುತ್ತಿದ್ದರು. ತಲೆ ತಗ್ಗಿಸಿಕೊಂಡು ಸಂಸ್ಥೆಯ ಒಳಕ್ಕೆ ಬಂದರೂ ಕೆಮ್ಮಿ ಕ್ಯಾಕರಿಸಿ; ʻಏನೋ ಏನೋಲೇಯ್ ಗುರಾಯಿಸ್ತಿಯೇ… ಏನೊ ಕಾಣ್ತಿದ್ದದೂ… ನೋಡ್ತಿಯೇನಲೇ… ತಗುದು ತೋರಿಸ್ತೀನಿ… ಯಾರ್ನ ಕರ್ಕ ಬತ್ತಿಯೊ ಕರ್ಕಬರೋಗ್ಲಾ… ಸರ್ಯಾಗಿ ಮಾಡ್ತಿನಿ’ ಎಂದು ಅಡ್ಡ ನಿಲ್ಲಿಸಿ ತಳ್ಳುವ ಮಟ್ಟಕ್ಕೆ ಹೋಯಿತು. ಹತಾಶೆಯ ಪರಾಕಷ್ಟೆಯಲ್ಲಿರುವ ಈ ದುರುಳರ ಸಹವಾಸ ಬೇಡಪ್ಪಾ ದೇವರೇ… ತತ್… ಭಿಕ್ಷೆ ಬೇಡಿದ್ರೂ ಸರಿಯೇ; ಈ ಹೊಲಸಿಗರ ಸಹವಾಸ ಸಾಕು ಎಂದು ಮರು ಮಾತಾಡದೆ ಲೈಬ್ರರಿಗೆ ಬಂದೆ.
‘ನನ್ನ ಸ್ವಕಾರಣದಿಂದ ಪಿಎಚ್.ಡಿ ಸಂಶೋಧನೆಗೂ; ಅತಿಥಿ ಉಪನ್ಯಾಸಕ ವೃತ್ತಿಗೂ ರಾಜಿನಾಮೆ ನೀಡುತ್ತಿರುವೆ’ ಎಂದು ಒಂದು ಸಾಲಿನ ರಾಜಿನಾಮೆ ಬರೆದು ಲಕೋಟೆಯಲ್ಲಿಟ್ಟು ಯಾರ್ಯಾರಿಗೆ ಕೊಡಬೇಕೊ ಅವರಿಗೆಲ್ಲ ಕೊಟ್ಟು ಹಾಸ್ಟಲಿಗೆ ಬಂದೆ. ಆ ಕ್ಷಣವೇ ಕ್ಯಾಂಪಸ್ಸನ್ನು ತೊರೆದೆ. ಯಾರಿಗೂ ಹೇಳಲಿಲ್ಲ. ಇಷ್ಟು ಕಾಲ ಪೊರೆದ ಕ್ಯಾಂಪಸ್ಸೇ ನಿನ್ನನ್ನು ಬಿಟ್ಟು ಹೋಗುತ್ತಿರುವೆ. ನಿನ್ನ ಈ ನೆಲದ ಸಾರವನೆಲ್ಲ ತಾಯ ಎದೆ ಹಾಲ ಕುಡಿದಂತೆ ಹೀರಿ ಅರಗಿಸಿಕೊಂಡಿರುವೆ. ಹೋಗುವೆ ನನ್ನ ಮುದ್ದಿನ ನವಿಲುದಾರಿಗಳೇ ಎಂದು ಕತ್ತಲಲ್ಲಿ ಬಂದಿದ್ದೆ. ಲೈಬ್ರರಿಯ ಮುಂದೆ ನಿಂತು ವಂದಿಸಿದೆ. ಗೆಳೆಯರಿಗೆ ಎಲ್ಲ ಪುಸ್ತಗಳ ಕೊಟ್ಟು ಬಿಟ್ಟಿದ್ದೆ. ಕೆಲವೇ ಬಟ್ಟೆ ತೆಗೆದುಕೊಂಡು ಮಾರುಕಟ್ಟೆಯ ಬಳಿ ಸಿದ್ರಾಮಣ್ಣನ ಹುಡುಕಿದೆ. ಅಷ್ಟು ಹೊತ್ತಲ್ಲಿ ಅಲ್ಲಿ ಅವನೀಗ ಇರಲು ಸಾಧ್ಯವಿರಲಿಲ್ಲ. ತಡರಾತ್ರಿ ಅಕ್ಕನ ಮನೆಗೆ ಬಂದಿದ್ದೆ. ಅವರಿಗೆ ಏನೂ ಗೊತ್ತಿಲ್ಲ. ನಾನು ಹೇಳಲೂ ಇಲ್ಲ. ವಾರ ಕಳೆಯಿತು. ತಿಂಗಳ ಮೇಲೆ ಮೂರು ಮಂಡಲಗಳಂತೆ ಆ ಮೂರು ತಿಂಗಳೂ ತೇಲಿ ಹೋದವು. ಅಕ್ಕ ಕೇಳಲು ಹಿಂಜರಿಯುತಿದ್ದಳು. ಕೆಲಸ ಇಲ್ಲವೆ ನಿನ್ನ ತಮ್ಮನಿಗೆ ಎಂದು ಕೇಳುತ್ತಿದ್ದರು ಜನ. ಶೋಭ ಗರ್ಭಿಣಿ ಆಗಿದ್ದಳು. ಮನೆ ಬಿಟ್ಟು ಎಲ್ಲೂ ಹೋಗಲು ಮನಸ್ಸೆ ಬರುತ್ತಿರಲಿಲ್ಲ. ಆದರೂ ಆಗಾಗ ಬೆಂಗಳೂರಿಗೆ ಹೋಗುತ್ತಿದ್ದೆ. ಸಿ.ಜಿ.ಕೆ. ಪರಿಚಯ ಆದರು. ತಾಯಂತಹ ಮನುಷ್ಯ. ಬಿಗಿದು ಅಪ್ಪಿಕೊಂಡಿದ್ದರು. ಚಿಂತಿಸಬೇಡ. ನೀನು ಒಬ್ಬ ಬರಹಗಾರನಾಗಿಯೆ ಬದುಕಬಹುದು ಎಂದು ಎನ್.ಜಿ.ಒ ಸಂಸ್ಥೆಗಳಿಗೆ ಏನೇನೊ ಸ್ಕ್ರಿಪ್ಟ್‌ಗಳ ಬರೆಸಿಕೊಟ್ಟು ಸಾಕಷ್ಟು ಹಣವ ನೀಡಿದರು. ಮೆಲ್ಲಗೆ ಬೆಂಗಳೂರಿನ ರಾತ್ರಿಯ ಅಮಲಿನ ಬೀದಿಗಳು ಸೆಳೆದವು. ಜಾಲಿಯಾಗಿ ಬಾರ್‌ಗಳಲ್ಲಿ ಕಾಲ ಕಳೆದೆ. ಎಷ್ಟೋ ಗೆಳೆಯರು ಕೈ ಹಿಡಿದರು. ನಾಟಕ ಬರೆಸಲು ಸಿ.ಜಿ.ಕೆ ಎಷ್ಟೆಲ್ಲ ಯತ್ನಿಸಿದರೂ ನಾಟಕ ಬರೆಯಲು ನನ್ನಿಂದಾಗಲಿಲ್ಲ. ಸಿ.ಜಿ.ಕೆ ಗ್ಯಾಂಗ್ ಸೇರಿದ್ದಾನೆ ಎಂದು ಲಂಕೇಶರಿಗೆ ಯಾರೊ ಚಾಡಿ ಹೇಳಿದ್ದರು. ನಿಜ. ಅವರಿಂದ ಅಂತರ ಕಾಯ್ದುಕೊಂಡಿದ್ದೆ. ನನ್ನ ಸ್ವಭಾವವೇ ಹಾಗೆ; ಒಂದು ಸಲ ಬಿಟ್ಟೆ ಎಂದರೆ ಬಿಟ್ಟೇ ಬಿಡುತ್ತಿದ್ದೆ.
‘ನೋಡಿದ್ರಾ… ಅವನನ್ನ ಯಂಗೆ ಬೀದಿ ಪಾಲು ಮಾಡಿದೆವು’ ಎಂದು ಗಂಗೋತ್ರಿಯ ಆ ಜನ ನಗಾಡುತ್ತಿದ್ದರು. ನಗನಗ್ತಾ ಇರ್ಲಿ… ಎಷ್ಟು ದಿನ ನಕ್ಕಾರು… ಒಂದು ದಿನ ಅಳಲೇಬೇಕಲ್ಲಾ ಎಂದು ಸುಮ್ಮನಿದ್ದೆ. ಅದೇ ತರತರದ ಕಲಾವಿದರೆಲ್ಲ ಸಂಜೆ ಆಗುತ್ತಿದ್ದಂತೆ ರವೀಂದ್ರ ಕಲಾಕ್ಷೇತ್ರದ ಬಳಿ ಸಿಗತೊಡಗಿದರು. ಪ್ರೀತಿಯಿಂದ ಕರೆದೊಯ್ದು ಸಿಕ್ಕಾಪಟ್ಟೆ ಕುಡಿಸುತ್ತಿದ್ದರು. ಅದರ ಜಾಡಿನಲ್ಲಿ ಜಾರಿಬಿದ್ದೆ. ದಿನವೂ ಅಮಲು ಬೇಕೇ ಬೇಕೆನಿಸುತಿತ್ತು. ವ್ಯಸನವೇ ಹಾಗೆ. ಬಲಿಯನ್ನು ಎತ್ತಿಕೊಂಡು ಎಲ್ಲೆಂದರಲ್ಲಿಗೆ ಹಾರಿಬಿಡುತ್ತದೆ. ಬಲಿಯ ಬಾಯಲ್ಲಿ ಸಿಲುಕಿದ್ದೇವೆ ಎಂದೆನಿಸುವುದೇ ಇಲ್ಲ. ಸವಿಸವಿ ಮಜಮಜ ನಿಶೆನಿಶೆ ನಿತ್ಯ ಎಂದು ಅಮಲು ಗಾನವಾಗಿ ಬಂದು ಹಾಡಿ ಕುಣಿಸುತ್ತಿರುತ್ತದೆ. ಅಮಲುಗಣ್ಣುಗಳು ಅಮಾಯಕ ಕುಡುಕರ ಕಣ್ಣಲ್ಲೆ ಒಂದು ತರ. ಅದನ್ನೂ ನಾನು ಬಲ್ಲವನಾಗಿದ್ದೆ. ಆಗೆಲ್ಲ ನಾನು ಧರ್ಮರಾಯ ಆಗಿಬಿಡುತ್ತಿದ್ದೆ. ಆ ಕಾಲಕ್ಕೆ ಮೆಜೆಸ್ಟಿಕ್‌ನ ಎಲ್ಲ ಬೀದಿಗಳೂ ನನ್ನ ಕಾಲಿಗೇ ಅಂಟಿಕೊಂಡಿದ್ದವು. ಬೀದಿ ವ್ಯಾಪಾರಿಗಳೆಲ್ಲ ಗೆಳೆಯರಾಗಿಬಿಟ್ಟಿದ್ದರು. ಚಿಲ್ಲರೆ ರೌಡಿಗಳಿಗೂ ಪ್ರಿಯನಾಗಿದ್ದೆ.
ಅವರೆಲ್ಲ ಯಾರೆಂದು ನೋಡಿದರೆ ಬೆಂಗಳೂರಿನ ಆಸುಪಾಸಿನ ಹಳ್ಳಿಯವರೇ… ನನ್ನ ಹಳ್ಳಿಯ ಕೆಲ ಪುಂಡು ಹುಡುಗರೂ ಅಲ್ಲಿದ್ದರು. ಎಲ್ಲ ತರದ ಅಕ್ರಮಗಳಲ್ಲಿ ಅವರು ಪಳಗಿದ್ದರು. ಅವರ ಸ್ನೇಹ ಬೇಡ ಎಂದರೂ ನನಗಿದ್ದ ಹೆಸರಿನ ಸಲುವಾಗಿ ‘ನಮ್ಮಣ್ಣ’ ಎಂದು ಅಭಿಮಾನ ಪಡುತ್ತಿದ್ದರು. ಅವರಲ್ಲೊಬ್ಬ ತಲೆ ಹಿಡುಕ. ಅದರಲ್ಲೇನಣ್ಣ ತಪ್ಪು… ಅವರಿಗೆ ಒಳ್ಳೆ ಗಿರಾಕಿಯ ಕರೆದೊಯ್ದು ವ್ಯಾಪಾರ ಮಾಡಿಕೊಡ್ತೀನಿ. ತೊಂದ್ರೆ ಆಗ್ದಂಗೆ ಕಾಯ್ತಿನಿ. ಅನ್ಯಾಯ ಎಲ್ಲಿ ಬಂತಣ್ಣಾ…’ ಎಂದು ಸಮಾಜದ ನೀತಿ ಬಗ್ಗೆ ಮಾತಾಡುತ್ತಿದ್ದ. ಅದೇ ಒಂದು ಭೂಗತ ಜಗತ್ತು. ವೇಷ ಹಾಕಿ ನಟಿಸುವ ಸಭ್ಯ ಲೋಕವೇ ಹೆಚ್ಚು ಭಯಾನಕ ಎನಿಸುತ್ತಿತ್ತು. ಪಿಕ್ ಪಾಕೆಟರ್ಸ್, ಪಿಂಪ್‌ಗಳ ಜೊತೆ ಅಡ್ಡಾಡುತ್ತಿದ್ದೆ. ಅವರ ಕಸುಬಿನ ಕೌಶಲ್ಯವ ಕಂಡು ಬೆರಗಾಗುತ್ತಿದ್ದೆ. ಬಾಲ್ಯದಲ್ಲಿ ಹಳ್ಳಿ ತೊರೆದು ಬೆಂಗಳೂರಿಗೆ ಬಂದಿದ್ದರೆ ಭಾಗಶಃ ನಾನೂ ಕೂಡ ಇಂತದೇ ಚಾಕರಿಯ ಬಲೆಯಲ್ಲಿ ಬಿದ್ದಿರುತ್ತಿದ್ದೆ ಎಂದುಕೊಳ್ಳುತ್ತಿದ್ದೆ. ನೀತಿ ಅನೀತಿಗಳಿಗೆ ಅಲ್ಲಿ ಅರ್ಥವೇ ಇರಲಿಲ್ಲ… ಆದರೆ ಅವರವರಲ್ಲೇ ಮಾನವೀಯತೆಯೂ ಇತ್ತು. ಅಲ್ಲಿ ಜಾರಿದರೆ ಭೂಗತವಾಗಿಬಿಡುತ್ತಿದ್ದೆ. ಅಷ್ಟೆಲ್ಲ ಕುಡಿತದಲ್ಲೂ ಯಾವುದೊ ಎಚ್ಚರ ಬೆನ್ನ ಹಿಂದೆಯೇ ನಿಂತೇ ಇರುವಂತೆ ಭಾಸವಾಗುತ್ತಿತ್ತು. ಅವರಿಂದ ಉಪಾಯದಿಂದ ತಪ್ಪಿಸಿಕೊಂಡಿದ್ದೆ. ಆದರೆ ಮದಿರೆ ಎಂಬ ನಿಶೆವಂತಿ ನನ್ನ ಎತ್ತಿ ಎದೆ ಕಚ್ಚಿಸಿಕೊಂಡು ಕಂಕುಳಲ್ಲಿ ಇರಿಸಿಕೊಂಡು ಬಹಳ ದೂರ ಹೊರಟು ಹೋಗಿದ್ದಾಳೆ ಎಂಬುದೇ ನನ್ನ ಅರಿವಿಗೆ ಬಂದಿರಲಿಲ್ಲ. ನೀನು ಮಾಡುತ್ತಿರುವುದು ತಪ್ಪು ಎಂದು ಅಕ್ಕರೆಯಿಂದ ಹೇಳುವವರು ಯಾರೂ ಇರಲಿಲ್ಲ. ನನ್ನ ಹೆಂಡತಿಗೆ ನನ್ನ ಈ ಸ್ಥಿತಿಯೇ ಗೊತ್ತಿರಲಿಲ್ಲ. ರಾಜಿನಾಮೆ ಎಸೆದು ಬಂದಿರುವೆ ಎಂದು ಯಾರಿಗೂ ಹೇಳಿರಲಿಲ್ಲ. ಅಮಾಯಕ ಮಡದಿಗೆ ಮೋಸವಾಗದಿರಲಿ ಎಂದು ಆತ್ಮ ಒಳಗೇ ಪಿಸುಗುಟ್ಟುತಿತ್ತು.
ಅದೇ ಗಾಂಧಿನಗರ… ಮೆಜೆಸ್ಟಿಕ್ ಸುತ್ತಿ ಹೋಗುತ್ತಿದ್ದೆ. ಯಾರೊ ಹಿಂದಿನಿಂದ ಬಂದು ಹೆಗಲ ಮೇಲೆ ಕೈ ಹಾಕಿ “ಹಲ್ಲೊ ಮೈ ಹೀರೊ..” ಎಂದು ವ್ಯಂಗ್ಯ ವಿಷಾದ ಮಾಡುವಂತೆ ನೋಡಿದರು. ಅಗ್ರಹಾರ ಕೃಷ್ಣಮೂರ್ತಿ! ನನ್ನ ಇಷ್ಟದ ಮನುಷ್ಯ ಸಾಮಾನ್ಯವಾಗಿ ನಾನು ಯಾವ ಮನುಷ್ಯರ ಮೇಲು ವಿಶ್ವಾಸ ಮಾಡುವುದಿಲ್ಲ. ಆದರೆ, ಮಾನವೀಯ ನಗೆಯ ಅಗ್ರಹಾರ ಅವರನ್ನು ಅಂತರಂಗದಲ್ಲಿ ಬಹಳ ಪ್ರೀತಿಸುತ್ತಿದ್ದೆ. ನಾಚಿಕೆ ಆಯಿತು. ನಿಮ್ಮನ್ನು ಒಂದು ಗಂಟೆಯಿಂದ ಹಿಂಬಾಲಿಸುತ್ತ ಬಂದಿದ್ದೀನಿ ರೀ… ಎಲ್ಲಿ ನಿಶೆ ಏರಿ ಹೆಚ್ಚಾಗಿ ಬಿದ್ದುಹೋಗುತ್ತೀರೊ ಎಂದು ಆತಂಕದಿಂದ ಹಿಂದೆನೇ ಬಂದಿರುವೆ… ಎಲ್ಲೂ ಬೀಳಬಾರದು… ಮನುಷ್ಯ ಎಷ್ಟೇ ಕೆಟ್ಟ ಸ್ಥಿತಿಗೆ ಹೋದರೂ ತಪ್ಪು ಮಾಡಬಾರದು… ತಪ್ಪಿತಸ್ತರ ನಡಿಗೆ ಬಹಳ ನಾಜೂಕಾಗಿರುತ್ತೆ. ಎಲ್ಲೂ ಜಾರುವುದಿಲ್ಲ. ನಿನ್ನಂತವರು ನಾಜೂಕಿಲ್ಲದವರು. ಹಗಲೇ ಕುಡಿದು ಬೀದಿಯಲ್ಲಿ ವಾಲಾಡಿ ತೂರಾಡಿ ನಡೆಯುವವರು… ಬಿದ್ದು ಬಿದ್ದು ಎದ್ದು ಮತ್ತೆ ಮತ್ತೆ ಮುಂದೆ ನಡೆಯಲು ತೊಡಗುವವರ ನಡಿಗೆಯೇ ಒಂದು ಬಗೆ. ಅಂದ ಚೆಂದದ ವಿಮರ್ಶೆ ಅಲ್ಲ. ಧೀರೋದಾತ್ತ ನಡೆ ಬೇರೆ… ಡೋಂಗಿಗಳೂ ಹಾಗೆ ನಡೆಯಬಲ್ಲರು. ನೀನು ನಡೆಯಲ್ಲಿ ಎಲ್ಲೂ ತಪ್ಪು ಹೆಜ್ಜೆ ಹಾಕಲಿಲ್ಲ! ಅದು ನೀನು… ನಿನ್ನ ನಡೆ ನುಡಿ ನಡಿಗೆಯ ನೀನೇ ಸುಧಾರಿಸಿಕೊಳ್ಳುತ್ತೀಯೆ… ಊಟ ಮಾಡಿಲ್ಲ ಎಂದು ಗೊತ್ತಾಗುತ್ತೇ… ಬಾ ಅಲ್ಲೊಂದು ನಾಯುಡು ಹೋಟೆಲಿದೆ. ಅಲ್ಲಿಗೆ ದ್ವಾರಕನಾಥ್ ಕೂಡ ಬರುತ್ತಾರೆ. ಜೊತೆಗೆ ಊಟ ಮಾಡುವ ನಡೆ -ಎಂದು ಆಟೋದಲ್ಲಿ ಕೂರಿಸಿಕೊಂಡು ಆ ನಾನ್‌ವೆಜ್ ಹೋಟೆಲಿಗೆ ಬಂದರು. ಕಣ್ಣು ಮಳ್ಳಿಸುತ್ತಿದ್ದವು. ಇನ್ನೂ ಸ್ವಲ್ಪ ಕುಡಿಯುವೆ ಎಂದೆ. ದ್ವಾರಕನಾಥ್ ಬೇಡ ಎಂದು ತಡೆದರು. ನಿಜವಾದ ಬಡವರ ಹೋರಾಟದ ನ್ಯಾಯವಾದಿ… ವಿಪರೀತ ತಿನ್ನಲಿಲ್ಲ. ಏನೇನೊ ಐಟಂಗಳ ಆರ್ಡರ್ ಮಾಡಿದ್ದರು.
ಅಗ್ರಹಾರ ತಮ್ಮ ಕಛೇರಿಗೆ ಕರೆದೊಯ್ದರು. ಅಲ್ಲಿ ಅವರೇ ಹೆಡ್‌ಬಾಸ್. ಸಾಹಿತ್ಯದ ಹತ್ತಾರು ಹಸ್ತಪ್ರತಿಗಳ ನೀಡಿ ಇವುಗಳ ಮೌಲ್ಯಮಾಪನ ಮಾಡು, ಅದಕ್ಕೆ ಒಳ್ಳೆಯ ಸಂಭಾವನೆ ಇದೆ ಎಂದರು. ಆ ಅಮಲಲ್ಲೂ ಮನುಷ್ಯನ ವಿಧಿಯ ಕೊನೆಯ ಕಥೆಯ ಬರೆಯಬೇಕು ಎನಿಸುತಿತ್ತು. ಆ ಕೆಲಸಗಳೆಲ್ಲ ನನ್ನ ಓದಿಗೆ ಗಳಿಗೆಯವು. ಸುಮಾರು ದಿನಗಳಾದವು. ಲಂಕೇಶರನ್ನು ಬೆಟ್ಟಿ ಆಗು ಎಂದರು. ಬಿಟ್ಟು ಬಹಳ ದಿನವಾಗಿತ್ತು. ಅವರ ಕೊಂಡಿಯ ಕಳಚಿಕೊಂಡಿದ್ದೆ. ಕೃತಜ್ಞತೆ ಹೇಳಿ ಬರುವ ಎಂದು ಹೊರಟೆ. ಕುಡಿದಿರಲಿಲ್ಲ. ತಲೆ ಕಡಿಯುತ್ತಿತ್ತು. ಮನಸ್ಸು ಚೀರಾಡುತ್ತಿತ್ತು. ಬಸವರಾಜು ನೋಡಿದ. ಪ್ರಾಣ ಮಿತ್ರ. ಅಂತವರನ್ನೆಲ್ಲ ನಾನೇ ದೂರ ಮಾಡಿಕೊಂಡಿದ್ದೆ. ಲಂಕೇಶರಿಗೆ ತಿಳಿಸಿದ. ಕಳಿಸು ಒಳಕ್ಕೆ ಅವನ ಎಂದದ್ದು ಕೇಳಿಸಿತು. ಹೊರಕ್ಕೋ… ಒಳಕ್ಕೊ… ಎಂಬ ಅನುಮಾನ ಬಂತು. ‘ಹೋಗಿ ಹೋಗೀ… ಒಳ್ಳೆಯ ಮೂಡಲ್ಲಿದ್ದಾರೆ’ ಎಂದ ಗೆಳೆಯ. ವಿನಮ್ರವಾಗಿ ಅವರ ಮುಂದೆ ನಿಂತೆ. ಕಂಪಿಸುತ್ತಿದ್ದೆ. ನಿಯಂತ್ರಣವೇ ಇಲ್ಲಾ… ಕೈ ಮುಗಿದು ಹೊರಟು ಹೋಗಬೇಕು ಎಂದು ಎರಡೂ ಕೈಗಳ ಪ್ರಾಂಜಲವಾಗಿ ಜೋಡಿಸಿ ನಮಸ್ಕರಿಸಿದೆ. ಅವರು ಅಲ್ಲೇ ಪ್ರೀತಿಸಿ ಅಲ್ಲೇ ದ್ವೇಷಿಸುವವರು ಎಂಬ ಮಾತಿತ್ತು. ನನ್ನನ್ನು ಪರಿಗಣಿಸಲಾರರು ಎಂದು ಹಾಗೆ ಕೈ ಮುಗಿದು ಹಿಂತಿರುಗುತ್ತಿದ್ದೆ.
`ಹೇಯ್; ಹೋಪ್‌ಲೆಸ್ ಫೆಲೋ… ಎಲ್ಲೋಯ್ತಿದ್ದೀಯೇ… ನಿಲ್ಲು… ಬಾ ಕೂತುಕೊ. ಮನುಷ್ಯರ ದುಃಖ ಕಂಡರೆ ನನಗೆ ಆಗೋದಿಲ್ಲಾ… ಬಾ ಇಲ್ಲಿ ಕೂರು’
‘ಇಲ್ಲಾ ಸಾರ್; ಒಮ್ಮೆ ನೋಡಬೇಕೆನಿಸಿತ್ತು. ಬಂದೆ. ನೋಡಿದೆ. ಯಾವುದೇ ಸಹಾಯ ಕೋರಲು ಬರಲಿಲ್ಲ. ಏನೊ ಸೆಳೆಯಿತು ಅಷ್ಟೇ; ಹೋಗ್ತೀನಿ..’ ‘ಎಲ್ಲಿ ಹೋಗ್ತಿಯೇ… ಜೀವನ ಪಲಾಯನದ ಆಟ ಅಲ್ಲ… ಉಸಿರು ಇರೋ ತನಕ ಆಡಬೇಕಾದ ಮುಷ್ಠಿಯುದ್ಧ. ವ್ಯವಹಾರ ಪ್ರಜ್ಞೆ ಇಲ್ಲದ ಮೂರ್ಖ… ನಾವು ನಂಬೋದನ್ನು ಬರೆಯೋದನ್ನು ಜೀವನವಾಗಿ ಪರಿವರ್ತಿಸಲು ತಕ್ಕುದಾದ ಕೌಶಲ್ಯ ಜಾಣ್ಮೆ ಚಾತುರ್ಯ ಇರಬೇಕು… ಅವು ನಿನಗಿಲ್ಲ. ಅಂತವರು ಬಹಳ ಬೇಗ ವ್ಯಸನಗಳಿಗೆ ಬಲಿಯಾಗುತ್ತಾರೆ… ಕೂತುಕೊ ಎಂದು ಎಷ್ಟು ಸಲ ಹೇಳಬೇಕೂ…’
ದಿಟ್ಟಿಸಿದರು. ತಲೆ ತಗ್ಗಿಸಿದೆ. ‘ನನ್ನ ಮುಂದೆ ತಲೆ ಎತ್ತಿ ನಡೆಯೋರಿಗೆ ಅಷ್ಟೇ ಅವಕಾಶ’ ಎಂದರು. ಕೂತುಕೊಂಡು ಪ್ರತಿಯಾಗಿ ತೀಕ್ಷ್ಣವಾಗಿ ಅವರನ್ನೇ ನೋಡಿ; ‘ನಾನು ಕುಡೀಬೇಕು ಸಾರ್’ ಎಂದೆ. ಹೋಗು ಅಲ್ಲಿ ಫ್ರಿಡ್ಜ್‌ನಲ್ಲಿದೆ ಬಾಟಲ್… ಅದಷ್ಟನ್ನೂ ಕುಡೀ’ ಎಂದರು. ತಂದು ಅವರ ಟೇಬಲಿನಲ್ಲೇ ಗ್ಲಾಸಿಗೆ ವಿಸ್ಕಿ ಸುರಿದುಕೊಂಡು ಗಟಗಟನೆ ಕುಡಿದೆ.
‘ನನಗೊಂದು ಪೆಗ್ ಹಾಕಿ ಕುಡಿಯೋದೇನಲ್ಲೊ… ಹೊಟ್ಟೆಬಾಕ ಕುಡುಕ… ನನ್ನ ಗ್ಲಾಸಿಗೂ ಹಾಕು’ ಎಂದು ಮೆಲ್ಲಗೆ ಹೀರಿದರು. ನಿಶೆ ಏರಿತು. ತಂತಾನೆ ದುಃಖ ತುಳುಕಿತು. ನಿಯಂತ್ರಿಸಿದೆ.
`ಯಾರು ಕೊಂದರಯ್ಯಾ ನಿನ್ನನ್ನು… ಆ ಮೊದಲ ದಿನ ನಿನ್ನ ನೋಡಿದ್ದಕ್ಕೂ; ಈಗ ಈ ಸ್ಥಿತಿಯಲ್ಲಿ ನೋಡುತ್ತಿರುವುದಕ್ಕೂ ಎಷ್ಟೊಂದು ಅಂತರವಿದೆ… ಕೊಂದುಬಿಟ್ಟಿದ್ದಾರಲ್ಲ ನಿನ್ನ ಅಂತಃ ಶಕ್ತಿಯನ್ನೇ… ಯಾರಯ್ಯ ಕೊಂದವರು…’
`ನೀವೇ… ನೀವೇ ನನ್ನನ್ನು ಕೊಂದದ್ದು. ಎಲ್ಲೊ ಬಿದ್ದಿದ್ದ ಕಥೆಗಾರನ ಕರೆದು ಮೆರೆಸಿದಿರಿ. ಪುಟಗಟ್ಟಲೆ ಬರೆಸಿದಿರಿ… ರಾತ್ರೋರಾತ್ರಿ ಹೊಸದೊಂದು ನಕ್ಷತ್ರ ಮೂಡಿತು ಎಂದಿರಿ. ಒಹೋ ಇದು ನಾಳೆ ನನ್ನನ್ನು ದುರಂತ ನಾಟಕದ ಕೊನೆಯ ದೃಶ್ಯಕ್ಕೆ ಕೊಂಡೊಯ್ಯುತ್ತದೆ ಎಂದು ಲೆಕ್ಕಿಸಿದ್ದೆ… ಈಗ ಅದೇ ಆಯ್ತು ನೋಡಿ!’
‘ಸ್ಟುಪಿಡ್… ಸ್ಟಾಪಿಟ್. ಬೀ ಕೂಲ್… ಐ ಆ್ಯಮ್ ಫಾರ್ ಯುವರ್ ಲೈಫ್.’
ತಗ್ಗಿದೆ. ಮತ್ತೆ ಕುಡಿದೆ.
ನನಗಾಗುವ ಗಾಯವ ನಾನೆ ವಾಸಿ ಮಾಡಿಕೊಳ್ಳುವೆ ಎಂದು ಹಾಸ್ಟಲಿಗೆ ಬಂದೆ. ಶೋಭ ನೆನಪಾದಳು. ತಾಳಿಯನ್ನು ಕಟ್ಟಿರುತ್ತೇವೆ ನಿಜಾ… ಆದರೆ ಅದೇ ನಮ್ಮನ್ನು ಬಲವಾಗಿ ಕಟ್ಟಿಹಾಕಿಕೊಂಡಿರುತ್ತದೆ ಎನಿಸಿತು. ಮದುವೆ ಆಗಿ ಬಂದಿರುವೆ ಎಂಬ ಸಡಗರವೆ ಇರಲಿಲ್ಲ. ಪ್ರಾಧ್ಯಾಪಕರ ತಿರಸ್ಕಾರದ ನೋಟ ಮಾಮೂಲಾಗಿತ್ತು.
‘ಪರಿಹಾರ ಎಲ್ಲದಕ್ಕೂ ಇದೆ. ನಾನೊಂದು ಯೋಜನೆ ಮಾಡಿರುವೆ. ನೀನು ಇಲ್ಲೇ ಈ ಗಾಂಧಿ ಬಜಾರಲ್ಲೇ ನೆಲೆಯೂರುವೆ ಎಂದರೆ… ನಿನಗೆ ಒಂದು ಫ್ಯಾನ್ಸಿ ಸ್ಟೋರ್ ಹಾಕಿಸಿಕೊಡುವೆ. ಎಷ್ಟೇ ಲಕ್ಷ ಆಗಲಿ… ನಾನು ಬಂಡವಾಳ ಹೂಡುವೆ. ನೀನು ಮನೆಯಲ್ಲಿದ್ದು ಒಳ್ಳೆಯ ಕಥೆ ಬರಿ. ಕುಡಿತವ ಕಂಟ್ರೋಲೆಲಿ ಇಟ್ಟುಕೊ. ನಿನ್ನ ಹೆಂಡತಿ ಚಿಕ್ಕವಳು. ಫ್ಯಾನ್ಸಿ ಸ್ಟೋರ್ ವ್ಯಾಪಾರವ ಆಕೆ ಮಾಡಲಿ. ಬರೀ ಹೆಣ್ಣುಮಕ್ಕಳ ಕಾಸ್ಮೆಟಿಕ್ಸ್ ತುಂಬಿರುವ ಹೈಟೆಕ್ ಅಂಗಡಿ ಮಾಡಿಸಿಕೊಡುವೆ… ಅವಳಿಗೂ ಈ ಪ್ರಾಪಂಚಿಕ ಲೋಕ ತಿಳಿಯಲಿ… ಬದುಕು ನಡೆಯಲಿ… ನಿನ್ನಿಂದ ಇನ್ನೂ ಆಳವಾದ ಬರಹಗಳು ಬರಲಿ… ಇದರ ಬಗ್ಗೆ ಊರಿಗೆ ಹೋಗಿ ವಿಚಾರ ಮಾಡು…’
ಲಂಕೇಶರ ಆ ಆಲೋಚನೆ ನನ್ನ ಮನಸ್ಸಿನಲ್ಲಿ ಇಳಿಯಲಿಲ್ಲ. ಈ ಮಾಯಾ ನಗರಿಯಲ್ಲಿ ನನ್ನ ಹೆಂಡತಿ ನಿಭಾಯಿಸಲಾರಳು ಎನಿಸಿತು. ಅಕ್ಕನ ಮುಂದೆ ಪ್ರಸ್ತಾಪಿಸಿದೆ. ‘ಬ್ಯಾಡಕನಪಾ… ಅಂತಾ ವ್ಯಾಪಾರನೆಲ್ಲ ನನ್ನ ಮಗಳು ಮಾಡಲಾರಳು’ ಎಂದು ಒಂದೇ ಮಾತಿಗೆ ಮುರಿದಳು. ಹೆಂಡತಿಗೂ ಇಷ್ಟವಾಗಲಿಲ್ಲ. ಆಗ ಅವಳು ಏಳು ತಿಂಗಳ ಗರ್ಭಿಣಿ. ಮತ್ತೆ ಲಂಕೇಶರ ಬಳಿ ಹೋಗಲಿಲ್ಲ. ಅಷ್ಟರಲ್ಲಿ ಯು.ಆರ್. ಅನಂತಮೂರ್ತಿ ಅವರು ಪತ್ರ ಬರೆದಿದ್ದರು. ಆಗವರು ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು. ನನಗಾಗಿ ಮತ್ತೆ ಅಲ್ಲಿ ಒಂದು ಹುದ್ದೆಯನ್ನು ಸೃಷ್ಟಿ ಮಾಡಿ ಇಂಟರ್ವ್ಯೂಗೆ ಕರೆದರು. ಅಕ್ಕನ ಮನೆಯಲ್ಲಿ ಕಳಿಸಲು ಯಾರೂ ಸಿದ್ಧರಿರಲಿಲ್ಲ. ಆ ಲಂಕೇಶರೂ ಬೇಡ ಈ ಅನಂತಮೂರ್ತಿ ಅವರೂ ಬೇಡ ಎಂದು ಮನಸ್ಸು ಬಿಗಡಾಯಿಸಿತು. ತುಂಬಿದ ಗರ್ಭಿಣಿಯ ಬಿಟ್ಟು ಎಲ್ಲೂ ಹೋಗಲು ಆಗಲಿಲ್ಲ. ದಿನಗಳು ತುಂಬುತ್ತಿದ್ದವು. ವೈದ್ಯರು ಕೊಟ್ಟಿದ್ದ ಹೆರಿಗೆಯ ದಿನಾಂಕ ಮುಂದೆ ಹೋಗಿತ್ತು. ಮಗು ಆರೋಗ್ಯವಾಗಿ ಬೆಳೆದಿತ್ತು; ಆದರೆ ಅದು ತಲೆ ಕೆಳಗು ಮಾಡಿ ಹೊರ ಬರಲು ಯತ್ನಿಸಿರಲೇ ಇಲ್ಲಾ… ನನ್ನ ಅಪ್ಪನ ಕಷ್ಟವ ನೋಡಲಾರೆ ಎಂಬಂತೆ ಒಳಗೇ ಮಲಗಿಬಿಟ್ಟಿತ್ತು. ತಕ್ಷಣ ಸ್ಕ್ಯಾನಿಂಗ್ ಮಾಡಿಸಿದೆ. ಮಗುವಿಗೆ ಹೊಕ್ಕುಳ ಮೂಲಕ ಸೂಕ್ತ ಪ್ರಮಾಣದಲ್ಲಿ ರಕ್ತ ಸರಬರಾಜಾಗುತ್ತಿರಲಿಲ್ಲ. ವೈದ್ಯರು ವಿವರಿಸಿದರು. ಗರ್ಭಿಣಿಯ ದಿನ ತುಂಬಿದ ನಂತರ ಮಗು ಹೊರಬರದೇ ಇದ್ದರೆ ಅದಕ್ಕೆ ತಾಯಿಯ ಮೂಲಕ ಸಾಗಿ ಹೋಗುವ ಶಕ್ತಿಯೆಲ್ಲ ಕುಗ್ಗಿ ಹೋಗಿ ಮಗು ಸಾಯುವ ಸ್ಥಿತಿ ತಲುಪುತ್ತದೆ ಎಂದರು.
ಅದೇ ದಿನ ಮಂಡ್ಯಕ್ಕೆ ಹಾರಿ ಹೋದೆ! ಕೆ.ವಿ. ಶಂಕರೇಗೌಡ ಅವರ ಹೆಸರಿನ ನರ್ಸಿಂಗ್ ಹೋಂ ಇತ್ತು. ಅದರ ಮಾಲೀಕರು ಅವರ ಮಗ ಸಚ್ಚಿದಾನಂದ ಅವರು. ಆಗ ಅವರು ಶಾಸಕ ಆಗಿದ್ದರು. ಅವರ ತಂದೆಯಂತೆ ಜನೋಪಕಾರಿ. ನನ್ನ ಬಗ್ಗೆ ಗೊತ್ತಿದ್ದವರು. ನಾಳೆ ಬೆಳಿಗ್ಗೆಯೆ ಕರೆತಂದು ಅಡ್ಮಿಟ್ ಮಾಡಿ. ಸಂಜೆ ವೇಳೆಗೆ ಮಗು ಎಂತದು ಎಂದು ತಿಳಿಸಿ… ಯಾವುದಕ್ಕೂ ಒಂದು ಪೈಸೆ ಕಾಸು ಕೊಡಬೇಕಾಗಿಲ್ಲ. ತಕೊಳ್ಳಿ ಈ ಹತ್ತು ಸಾವಿರವ. ಏನಾದರು ಖರ್ಚಿಗೆ ಬೇಕಾಗುತ್ತದೆ ಎಂದು ಜೇಬಿಗೆ ಹಣ ತುರುಕಿ ಕಳುಹಿಸಿಕೊಟ್ಟರು. ಬರ್ರನೆ ನನ್ನ ಕತ್ತೆ ಮೊಪೆಡ್ ಗಾಡಿಯಿಂದ ಹಿಂತಿರುಗಿ ಮನೆಗೆ ಬಂದು ವಿಷಯ ತಿಳಿಸಿದೆ. ನನ್ನ ಹೆಂಡತಿಗೂ ಖುಷಿಯೊ ಖುಷಿ. ನನ್ನ ಮಗುವ ನಾಳೆ ನಾನು ನೋಡುತ್ತೇನೆ ಎಂದು ಸಡಗರ ಪಟ್ಟಳು. ಅಕ್ಕ ಬಟ್ಟೆಗಳ ಬುತ್ತಿಯ ರೆಡಿ ಮಾಡಿಕೊಂಡಳು. ಹೆರಿಗೆ ಎಂದರೆ ಸಲೀಸಲ್ಲ ಎಂಬ ಆತಂಕ ಅಕ್ಕನ ಮುಖದಲ್ಲಿ ತೇಲಾಡುತ್ತಿತ್ತು. ನನಗೆ ಅನುಭವ ಇರಲಿಲ್ಲ. ಬೆಳಗಾಗುವುದನ್ನೇ ಕಾದಿದ್ದೆ. ಇಡೀ ರಾತ್ರಿ ನಿದ್ದೆ ಬಂದಿರಲಿಲ್ಲ. ಕುಡಿದಿರಲಿಲ್ಲ. ಕೋಳಿ ಕೂಗುವ ಹೊತ್ತಿಗೇ ಎದ್ದು ಹೋಗಿ ಒಂದು ಬಾಡಿಗೆ ಕಾರು ತಂದಿದ್ದೆ. ಎಂಟು ಗಂಟೆಗೆಲ್ಲ ಆಸ್ಪತ್ರೆಯಲ್ಲಿ ದಾಖಲಿಸಿದೆ. ಆಪತ್ಬಾಂಧವನಂತೆ ಸಚ್ಚಿದಾನಂತ ವ್ಯವಸ್ಥೆ ಮಾಡಿದ್ದರು. ಏನೇನೊ ಪರೀಕ್ಷೆಗಳು. ಮುಗಿಯಲು ಸಾಕಷ್ಟು ಹೊತ್ತಾಗಿತ್ತು. ಕುಡಿವ ಒತ್ತಡವ ತಡೆದುಕೊಂಡಿದ್ದೆ. ಸಿಸೇರಿಯನ್ ಮಾಡಲೇಬೇಕಾಗಿತ್ತು. ಆ ದಿಗಿಲು ನೆತ್ತಿಯ ಮೇಲೆ ನಿಂತಿತ್ತು. ಆಪರೇಶನ್ ತಜ್ಞೆ ಶರ್ಮಿಳ ಬರುವುದು ತಡವಾಗಿತ್ತು. ಸಂಜೆಯಾಗುತ್ತಿತ್ತು. ಆಪರೇಷನ್ ಥಿಯೇಟರ್ ಒಳಕ್ಕೆ ಕರೆದೊಯ್ದರು. ಹೊರಗೆ ಕಾಯುತಿದ್ದೆ. ತಡೆಯಲಾರದೆ ಹೋಗಿ ಪಕ್ಕದಲ್ಲೇ ಇದ್ದ ವೈನ್‌ಶಾಪಲ್ಲಿ ವಿಸ್ಕಿಯ ಕುಡಿದೆ.
ಹಿಂತಿರುಗಿ ಬಂದೆ. ಅದಾಗಲೇ ಶಸ್ತ್ರ ಚಿಕಿತ್ಸೆ ಮುಗಿದು ಸ್ಟ್ರೆಚರ್ ಮೇಲೆ ಮಲಗಿಸಿ ಕರೆತರುತ್ತಿದ್ದರು. ನಿಶೆಯಲ್ಲಿ ತೇಲುತಿದ್ದೆ. ನರ್ಸುಗಳು ನನ್ನನ್ನು ಅತ್ತ ಕಳಿಸಿದರು. ಮಗು ಎಲ್ಲಿ ಎಂದೆ. ಶೋಭ ಎಚ್ಚರವಿರಲಿಲ್ಲ. ನನ್ನ ಹೆಂಡತಿಯ ತಂಗಿ ನಿರ್ಮಲ ಆಗ ಮೈಸೂರಲ್ಲಿ ಓದುತ್ತಿದ್ದಳು. ಆಸ್ಪತ್ರೆಗೆ ಬಂದಿದ್ದಳು. ಅವಳಿದ್ದರೆ ಸಾಕು; ಎಲ್ಲವನ್ನು ಅವಳೇ ನಿಭಾಯಿಸುವಳು ಎಂದು ಧೈರ್ಯ ಬಂತು. ನನ್ನ ಅಕ್ಕ ಹೆಣ್ಣು ಮಗು ಆಯಿತೇ ಎಂದು ನಿರಾಶೆ ಪಟ್ಟಂತಿತ್ತು. ತಾಯಿ ಮಗು ಸುರಕ್ಷಿತವಾಗಿದ್ದರೆ ಸಾಕೆನಿಸಿತ್ತು. ನನಗೆ ಮೊದಲೆ ಗೊತ್ತಿತ್ತು. ನನ್ನ ಹೆಂಡತಿಗೆ ಹುಟ್ಟುವುದೇ ಹೆಣ್ಣು ಮಗು ಎಂದು. ಮೊದಲೇ ಒಂದು ಹೆಸರನ್ನೂ ಕೂಸಿಗೆ ಇಟ್ಟುಬಿಟ್ಟಿದ್ದೆ. ‘ಬೆಳಕು’ ಎಂದು. ರಾತ್ರಿ ವೇಳೆಗೆ ಮಗು ತಾಯ ಎದೆ ಹಾಲ ಕುಡಿಯುತ್ತಿರುವುದ ಕಂಡು ವಿಸ್ಮಯ ಪಟ್ಟೆ. ಬಂಧುಬಳಗ ಮರುದಿನ ಬಂದು ನೋಡಿ ಹಾರೈಸಿತ್ತು. ಆ ನರ್ಸಿಂಗ್ ಹೋಂ ಬಳಿಯೆ ನನ್ನ ಮಾವನ ಸ್ನೇಹಿತರೊಬ್ಬರು ರಾಮಲಿಂಗಯ್ಯ ಎಂಬುವವರೊಬ್ಬರು ಇದ್ದರು. ಅವರಿಗೆ ನಾಲ್ಕು ಜನ ಹೆಣ್ಣು ಮಕ್ಕಳು. ಅವರಲ್ಲಿ ಮೊದಲಿನವಳ ನನಗೆ ಕೊಟ್ಟು ಮದುವೆ ಮಾಡಬೇಕು ಎಂದು ಲೆಕ್ಕ ಹಾಕಿದ್ದರಂತೆ. ಅದು ತಡವಾಗಿ ನನಗೆ ಗೊತ್ತಿತ್ತು. ಸಭ್ಯ ಜನ. ಆಸ್ಪತ್ರೆಯಲ್ಲಿ ಇದ್ದಷ್ಟು ದಿನವೂ ಮೂರು ಹೊತ್ತಿನ ಊಟ ತಿಂಡಿಗಳ ನೋಡಿಕೊಂಡರು. ನನಗೆ ಕೊಟ್ಟು ಮದುವೆ ಮಾಡಬೇಕೆಂದುಕೊಂಡಿದ್ದ ಆ ತಾಯಿ ಮಗಳ ಕರೆದುಕೊಂಡು ಬಂದಿದ್ದಳು. ತಾಯಿ ಮಗುವ ನೋಡುತ್ತಿದ್ದರು. ಇವಳನ್ನೆ ನಾನು ಮದುವೆ ಆಗಬೇಕಾಗಿದ್ದುದು ಎಂಬುದು ತಿಳಿಯಿತು. ಅವಳ ತಂದೆಯಂತೆ ಎತ್ತರದವಳು. ಬಹಳ ಸುಂದರಿ… ನನ್ನ ವಯಸ್ಸಿಗೆ ಹೊಂದಿದವಳಾಗಿದ್ದಳು. ನೋಡಿ ನಕ್ಕೆ. ಅವಳೂ ನಕ್ಕಳು. ಏನೂ ಮಾತಿಲ್ಲ. ಯಾರ ಬಾಳ ಪಯಣದಲ್ಲಿ ಯಾರು ಸಹ ಪಯಣಿಗರು ಎಂದು ಹೇಗೆ ನಿರ್ಧಾರವಾಗಿರುತ್ತದೊ…
ಹನ್ನೆರಡು ದಿನದ ನಂತರ ಮನೆಗೆ ಕರೆ ತಂದೆ. ಏನೋ ಹೊಸ ಜೀವನ… ಕುಡಿತವ ಕಡಿಮೆ ಮಾಡಿದ್ದೆ. ನನ್ನ ತಮ್ಮ ಎಲ್ಲಿಯಾದರೂ ಹೊರಗೆ ಹೋಗಿ ದುಡಿದು ಬದುಕಲಿ ಎಂಬ ಹಂಬಲ. ಏನೊ ಕುರುಡು ಕವಿದಂತಾಗಿತ್ತು. ದುಡ್ಡು ಹಾಗೂ ಹೀಗೊ ಜೇಬು ತುಂಬ ಸಿಗುತ್ತಲೇ ಇತ್ತು. ಸಂಸಾರವನ್ನು ಹಗುರ ಎಂದುಕೊಂಡಿದ್ದೆ. ದಿನಗಳೆದಂತೆಲ್ಲ ಅದರ ಹೊರೆ ಅತಿ ಎನಿಸಿತು. ಬರೆಯುವುದು ಓದುವುದು ಮರೆತು ಹೋಗಿತ್ತು. ವಿಚಿತ್ರ ವೈರಾಗ್ಯವೂ ಮೂಡುತಿತ್ತು. ಬಾಯಿ ಬಿಟ್ಟು ಅಕ್ಕ ಒಂದು ದಿನ ಮೈಸೂರಿಗೆ ಯಾವತ್ತು ಕರಕಂಡು ಹೋಗ್ತಿಯಪ್ಪಾ’ ಎಂದು ಕೇಳಿದಳು. ‘ಈ ಹಸುಗೂಸು ಎತ್ತಿಕೊಂಡು; ಈ ಬಾಣಂತಿಯ ಕಟ್ಟಿಕೊಂಡು ಇಷ್ಟು ಬೇಗ ಎಲ್ಲಿಗೆ ಹೋಗಲವ್ವಾ’ ಎಂದೆ. ಅಕ್ಕ ಮುನಿಸಿಕೊಂಡಳು. ಯಾರಿಗೂ ನಾನು ಬೇಡವಾದೆನೆ ಎನಿಸಿ ಖಿನ್ನನಾದೆ. ಅದೇ ಹೊತ್ತಿಗೆ ಎಂ.ಪಿ. ಪ್ರಕಾಶ್ ಆಗ ಗ್ರಾಮೀಣ ಅಭಿವೃದ್ಧಿ ಸಚಿವರಾಗಿದ್ದರು. ಅವರಿಂದ ಒಂದು ಅಚ್ಚರಿಯ ಪತ್ರ ಬಂದಿತ್ತು. ರಾಜಕಾರಿಣಿಗಳತ್ತ ನಾನು ಸುಳಿಯುತ್ತಿರಲಿಲ್ಲ. ಆದರೆ ನಜೀರ್‌ಸಾಬ್ ಅಂತವರ ಬಗ್ಗೆ ಅಪಾರಗೌರವ ಇತ್ತು. ಅದೇ ಹಾದಿಯವರು ಎಂ.ಪಿ. ಪ್ರಕಾಶರು. ಕೇಳಿ ತಿಳಿದಿದ್ದೆ. ‘ನನ್ನ ಮೆಚ್ಚಿನ ಕಥೆಗಾರನೇ… ಬುಗುರಿ ಕಥೆ ಬರೆದು ಕಣ್ಣು ತೆರೆಸಿದವನೇ… ನಿನ್ನ ಅಭಿಮಾನಿ ನಾನು… ಸುಳ್ಳು ಹೊಗಳಿಕೆ ಎಂದುಕೊಳ್ಳಬೇಡ. ಸಾಹಿತ್ಯ ನನಗೆ ಗೊತ್ತು. ನೀನು ವಿಧಾನ ಸೌಧದ ನನ್ನ ಕೊಠಡಿಗೆ ಬರಬೇಕು. ನಿನ್ನ ಜೊತೆ ಒಂದಿಷ್ಟು ಸ್ಮರಣೀಯ ಸಮಯ ಕಳೆಯಬೇಕು. ನೀನು ಬರುವೆ ವಿಶ್ವಾಸ ಇದೆ. ಕಾಯುವೆ’ ಎಂದಿದ್ದ ಆ ಪತ್ರವ ಮೂರು ಸಲ ಓದಿದೆ. ಸರ್ಕಾರಿ ಮೊಹರಿನ ಪತ್ರ ಅದಾಗಿತ್ತು. ಯಾರೊ ಬರೆದಿದ್ದಾಗಿರಲಿಲ್ಲ.
ತಡವಾಗಿ ಉತ್ತರ ಬರೆದಿದ್ದೆ. ‘ಮಾನ್ಯರೇ; ತಮ್ಮ ವಿಶ್ವಾಸ… ಪ್ರೀತಿಗೆ ಅನಂತ ನಮಸ್ಕಾರಗಳು. ತಾವು ತುಂಬ ದೊಡ್ಡವರು. ಆದರೆ ಆ ವಿಧಾನ ಸೌಧಕ್ಕೆ ಕಾಲಿಡಲು ನನಗೆ ಮನಸ್ಸಿಲ್ಲ. ನೀವು ಗ್ರಾಮೀಣ ಅಭಿವೃದ್ಧಿ ಸಚಿವರು. ನಮ್ಮ ಹಳ್ಳಿಗೆ ಬನ್ನಿ. ನಮ್ಮ ಜನಗಳ ನೋಡಿ. ಅವರ ಕಷ್ಟಸುಖ ವಿಚಾರಿಸಿ. ಏನಾದರು ಉಪಕಾರ ಮಾಡುವುದಿದ್ದರೆ ದಯವಿಟ್ಟು ಮಾಡಿ. ನೀವೇ ನಮ್ಮ ಊರಿಗೆ ಮನೆಗೆ ಮನಕ್ಕೆ ಬನ್ನಿ’ ಎಂದು ಪತ್ರಿಸಿದ್ದೆ.
ಒಂದೇ ವಾರದಲ್ಲಿ ಎಂ.ಪಿ. ಪ್ರಕಾಶರು ನನ್ನ ಹಳ್ಳಿಗೆ ಹಾಜರಾದರು. ಆ ರಾತ್ರಿ ಜಿಲ್ಲಾಧಿಕಾರಿ ಬಂದು ನಾಳೆ ಸಾಹೇಬರು ಬರುತ್ತಿದ್ದಾರೆ ಎಂದು ತಿಳಿಸಿ ಹೋದರು. ನನಗೆ ಅಚ್ಚರಿ ಆಗಿತ್ತು. ಹೀಗೆ ಪತ್ರ ಬರೆದರೆ ಆಗ ಅವರು ಬರುವುದಿಲ್ಲ; ನನಗೂ ಅವರಿಗೂ ಸಂಬಂಧ ಆಗುವುದಿಲ್ಲ ಎಂದು ಉಪೇಕ್ಷೆಯಲ್ಲಿ ಬರೆದಿದ್ದೆ. ಒಂದು ಪತ್ರ ಬರೆದರೂ ಹಳ್ಳಿಗೆ ಬಂದು ಸ್ಪಂದಿಸುವ ರಾಜಕಾರಣಿಗಳು ಇದ್ದಾರೆಯೇ ಎಂದು ತಪ್ಪಿತಸ್ಥನಂತೆ ಪರದಾಡಿದೆ. ಮನೆಯಲ್ಲಿ ಅವರಿಗೆ ಆತಿಥ್ಯ ಮಾಡುವ ಯಾವ ಸ್ಥಿತಿಯೂ ಇರಲಿಲ್ಲ. ಯೋಗ್ಯವಾದ ಒಂದು ಕುರ್ಚಿಯೂ ಇರಲಿಲ್ಲ. ಸದ್ಯ ಒಂದು ಲಟಾರಿ ಮಂಚ ಇತ್ತು. ಅದರ ಮೇಲೆ ಒಳ್ಳೆಯ ಬಟ್ಟೆ ಹಾಸಿ ರೆಡಿ ಮಾಡಿಕೊಂಡೆ. ಊರಲ್ಲಿ ಸುದ್ದಿಯಾಗಿತ್ತು. ಊರ ಮುಂದೆ ಗೌಡರು ವೇದಿಕೆ ಸಿದ್ಧಪಡಿಸಿದ್ದರು. ನನ್ನನ್ನು ಆ ಊರವರು ಪರಿಗಣಿಸಿರಲಿಲ್ಲ. ಎಷ್ಟೋ ಜನಕ್ಕೆ ಗೊತ್ತೇ ಇರಲಿಲ್ಲ. ಬಂದೇ ಬಿಟ್ಟರು. ಊರ ಕೆರೆ ಮುಂದೆ ಹಾರ ತುರಾಯಿ ಹಿಡಿದು ನಿಂತಿದ್ದವರಿಗೆಲ್ಲ ನಿರಾಶೆ ಆಗಿತ್ತು. ನೇರ ನಮ್ಮ ಮನೆಗೆ ಬಂದರು. ನೂಕು ನುಗ್ಗಲಂತೆ ಜನ ನೆರೆಯಿತು. ಇಡೀ ಜಿಲ್ಲೆಯ ಬಹುಪಾಲು ಎಲ್ಲ ಉನ್ನತ ಅಧಿಕಾರಿಗಳ ದಂಡೇ ಬಂದಿತ್ತು. ಕಾರುಗಳೊ ಕಾರುಗಳು. ಒಟ್ಟಿಗೇ ಅಷ್ಟೊಂದು ಅಧಿಕಾರಿಗಳ ನಾನು ಕಂಡಿರಲೇ ಇಲ್ಲ. ಊಹೆಯೆ ಇರಲಿಲ್ಲ. ಎಸ್.ಪಿ.ಯಿಂದ ಹಿಡಿದು ಜಿಲ್ಲಾಧಿಕಾರಿಗಳು ಕೆಳಗಿನ ಎಷ್ಟೋ ಉನ್ನತ ದರ್ಜೆಯವರೆಲ್ಲ ಮಂತ್ರಿಗಳ ಹಿಂದೆ ನಿಂತಿದ್ದರು. ನಾನು ಪಡಸಾಲೆಯಲ್ಲಿ ಸುಮ್ಮನೆ ಕೂತಿದ್ದೆ. ಪ್ರಕಾಶರು ಎಲ್ಲರೆದಿರು ಅಪ್ಪಿಕೊಂಡರು. ಅಧಿಕಾರಿಗಳತ್ತ ದಿಟ್ಟಿಸಿದರು. ಅವರೆಲ್ಲ ಧಮಾರೆಂದು ಪಟಪಟನೆ ನನಗೆ ನಮಸ್ಕಾರ ಹೊಡೆದರು. ಅಹಾ! ನಾಳೆ ನಾನೊಂದು ದಿನ ಸತ್ತಾಗಲೂ ಹೀಗೆಯೇ ಸಕಲ ಸರ್ಕಾರಿ ಗೌರವ ವಂದನೆಗಳು ಸಲ್ಲುತ್ತವೆಯೇ ಎಂದು ಭಾವುಕನಾದೆ. ಮನೆ ಒಳಗೆ ಕರೆದು ಕೂರಿಸಿದೆ. ಅನೇಕ ರಾಜಕಾರಿಣಿಗಳೂ ತುಂಬಿದ್ದರು. ನಿಂಬೆ ಹಣ್ಣಿನ ರಸವ ಅಕ್ಕ ಮಾಡಿದ್ದಳು. ಬಾಯಿ ಕಟ್ಟಿತ್ತು. ಮಂಚದ ಕೆಳಗೆ ಅವರ ಮುಂದೆ ಕೂರಲು ಯತ್ನಿಸಿದೆ… ‘ಛೇ ಛೇ… ನಾನು ಬೇಕಾದ್ರೆ ಅಲ್ಲಿ ಕೂರ್ತೀನಿ… ನೀನು ಮೇಲೆ ಕೂರು. ನಿನ್ನ ಜೊತೆ ಕೂರುವುದು ನನ್ನ ಸುಖ’ ಎಂದು ಹತ್ತಿರ ಕೂರಿಸಿಕೊಂಡರು.
ಹಳ್ಳಿಯ ಜನಗಳ ಕರೆದರು. ವಿಚಾರಿಸಿದರು. ಕಷ್ಟ ಹೇಳಿಕೊಳ್ಳಲು ಮುಂದಾಗಲಿಲ್ಲ. ಈ ಹೊಲೆಯನ ಮನೆಗೆ ಬಂದಿರುವ ಈ ಮಂತ್ರಿಯ ಮುಂದೆ ನಮಗೇನು ಮಾತೂsss… ನಾವು ಮುಖ್ಯ ಮಂತ್ರಿಯನ್ನೆ ಕಂಡು ಖುದ್ದು ಮುಖತಃ ಮಾತಾಡುತ್ತೇವೆ… ಅಹಂನಿಂದ ಅವರು ಬಾಯಿ ಬಿಡಲಿಲ್ಲ. ನಮ್ಮ ಜಾತಿಯವರಿಗೆ ಬಾಯಿಯೇ ಇರಲಿಲ್ಲ. ನಾನೆ ಕೋರಿದೆ. ನಮ್ಮೂರಿಗೆ ಒಂದು ರಸ್ತೆ, ಒಳಚರಂಡಿ ವ್ಯವಸ್ಥೆ, ಕೊಳಾಯಿ ನೀರಿನ ವ್ಯವಸ್ಥೆ ಹಾಗೂ ಕೆರೆಗೆ ನೀರು ಹರಿಸಿ ಎಂದು ಕೇಳಿದೆ. ತಕ್ಷಣವೇ ಈ ಎಲ್ಲ ಕೆಲಸಗಳಿಗೆ ಪ್ರಕಾಶರು ಅಲ್ಲೇ ಆದೇಶ ಮಾಡಿದರು. ‘ಇನ್ನೇನ್ರಪ್ಪಾ… ಸರ್ಕಾರವನ್ನೆ ನಿಮ್ಮ ಮನೆ ಬಾಗಿಲಿಗೆ ಕರೆ ತಂದಿರುವೆ… ಕಷ್ಟಗಳ ಹೇಳಿಕೊಳ್ಳಿ’ ಎಂದು ಕೋರಿದರು. ಎಲ್ಲರು ದಂಗಾಗಿದ್ದರು. ಹೆಚ್ಚು ಸಮಯ ಇರಲಿಲ್ಲ. ಹೊರಡಲು ಅನುವಾದರು. ನನ್ನ ಹೆಂಡತಿಯ ಪರಿಚಯಿಸಿದೆ. ಅಕ್ಕ-ಭಾವರ ಬಗ್ಗೆ ಹೇಳಿದೆ. ‘ಎಲ್ಲರೂ ಸ್ವಲ್ಪ ಹೊರಗಿರಿ’ ಎಂದರು. ಒಳಮನೆಯತ್ತ ಬಂದು ಹತ್ತು ಹತ್ತು ಸಾವಿರದ ಐದು ಕಂತೆಗಳ ಕೈಗಿತ್ತು, ‘ಜೋಪಾನ ಬಳಸು. ಇವರನ್ನೆಲ್ಲ ಕರೆತಂದು ದರ್ಪ ತೋರುತ್ತಿದ್ದಾನೆ ಎಂದುಕೊಳ್ಳಬೇಡ! ಒಬ್ಬ ಒಳ್ಳೆಯ ಲೇಖಕನ ಸ್ಥಾನ ಎಷ್ಟು ದೊಡ್ಡದು ಎಂದು ಎಲ್ಲರಿಗೂ ತಿಳಿಸಲು ಎಚ್ಚರಿಸಲು ಈ ದಂಡು ದಾಳಿನೆಲ್ಲ ಕಟ್ಟಿಕೊಂಡು ಬಂದದ್ದು. ರೇಸ್‌ಕೋರ್ಸ್ ರಸ್ತೆಯಲ್ಲಿ ನನ್ನ ಸರ್ಕಾರಿ ಬಂಗಲೆ ಇದೆ. ಯಾವಾಗಾದರು ಬಾ… ಇದು ನನ್ನ ಖಾಸಗಿ ನಂಬರ್. ಫೋನ್ ಮಾಡಿ ಬಾ… ಚಿಂತೆ ಮಾಡಬೇಡಮ್ಮಾ… ನಾನಿದ್ದೀನಿ… ನನ್ನ ಮಗಳಿದ್ದಂತೆ ನೀನು’ ಎಂದು ಹೇಳಿ ಹೊರಟರು.
ಒಂದು ಸುಂದರ ಕನಸು ಹೀಗೆ ಬಂದು ಹಾಗೆ ಮಾಯವಾದಂತೆ ಆಗಿತ್ತು. ವಿಶ್ವಾಸ ಬಂದಿತ್ತು. ಇನ್ನೂ ನನ್ನ ಬೆಳಕು ಮಗಳಿಗೆ ವರ್ಷ ತುಂಬಿರಲಿಲ್ಲ. ಅಕ್ಕ ಬಿಗುವಾಗಿಯೇ ಇದ್ದಳು. ಒಂದು ದಿನ ಹೆಂಡತಿ ತೋಟದತ್ತ ತಿರುಗಾಡಿ ಬರೋಣ ಬನ್ನಿ ಎಂದಳು. ಆಯ್ತು ಬಾ ಎಂದು ಕತ್ತೆ ಮೊಪೆಡ್ ಮೇಲೆ ಕೂರಿಸಿಕೊಂಡು ಬಂದೆ. ಸಂಕಟ ಅವಳ ಗಂಟಲಲ್ಲಿ ಸಿಕ್ಕಿಹಾಕಿಕೊಂಡಿತ್ತು. ಮನೆಯಲ್ಲಿ ಮಾತಾಡಲು ಆಗಿರಲಿಲ್ಲ. ತವಕಿಸುತ್ತಿದ್ದಳು ನೋವಿನಲ್ಲಿ ಏನನ್ನೊ ಹೇಳಿ ಹಗುರಾಗಲು… ‘ಏನು’ ಎಂದೆ. ತೊಡೆ ಮೇಲೆ ಮಗು ಆಟ ಆಡುತಿತ್ತು. ಪುಟ್ಟ ತೋಟ ಇತ್ತು. ಅಲ್ಲೆ ಚಿಕ್ಕದಾದ ಗುಡಿಸಲೂ ಇತ್ತು. ಪಟಪಟನೆ ಅವಳಿಂದ ಕಣ್ಣೀರು ಉದುರಿದವು. ಅರ್ಥವಾಗಿತ್ತು, ಕಾರಣ ಕೇಳಿಲಿಲ್ಲ. ಗಂಭೀರವಾಗಿದ್ದಳು. ಮೊದಲ ಬಾರಿಗೆ ಗಟ್ಟಿದನಿಯಲ್ಲಿ ನುಡಿದಳು.
‘ನೀವು ನನ್ನನ್ನು ಮದುವೆ ಮಾಡಿಕೊಳ್ಳಬಾರದಿತ್ತು’
‘ಆಗಿ ಈಗ ನನ್ನ ನಿನ್ನ ಮಗು ತೊಡೆ ಮೇಲೆ ಆಟ ಆಡುತ್ತಿದೆಯಲ್ಲಾ…’
‘ನಾನು ಒಪ್ಪಿಕೊಳ್ಳಬಾರದಿತ್ತು. ನನಗೇನು ಆಗ ಹೊಳೆದಿರಲಿಲ್ಲ’
‘ನನಗೂ ಅಷ್ಟೇ… ಆಗ ಬೇರೆ ವಿಚಾರವೆ ಇರಲಿಲ್ಲ. ನಿನ್ನನ್ನೆ ಮದುವೆ ಮಾಡಿಕೊಳ್ಳಬೇಕು… ನಿನ್ನ ಪಾರು ಮಾಡಬೇಕು ಎಂಬುದಷ್ಟೇ ಇದ್ದದ್ದು…’
‘ನೀವು ನನಗೆ ಮೋಸ ಮಾಡಿದಿರಿ!’
‘ಹಾsss ಮೋಸವೇ… ನನ್ನಿಂದ…’
‘ಮತ್ತಿನ್ನೇನೂ? ನಿಮ್ಮ ವಂಶವೇ ಅಂತಾದ್ದು… ಕಳ್ಳರು ಸುಳ್ಳರು ನೀಚರು! ಕೊಲೆ ಪಾತಕಿಗಳು… ಹೆಂಗಸಿನ ರಕ್ತ ಹೀರುವವರು… ವಿಕೃತ ಹುಚ್ಚರು! ಜವಾಬ್ದಾರಿ ಇಲ್ಲದವರು… ಮದುವೆ ಆಗಬಾರದಿತ್ತು ನೀವು’
‘ಸನ್ಯಾಸಿ ಆಗಬೇಕಿತ್ತೇ… ಬಿಕಾರಿ ಆಗಿಯೇ ಇರಬೇಕಿತ್ತೇ’
‘ಹೂಂ. ಅಂತವರೂ ನಿಮ್ಮ ವಂಶದಲ್ಲಿ ಸಾಧು ಸಂತರಂತೆ ತುಂಬ ಜನ ಇದ್ದಾರಲ್ಲಾ… ಊರೂರ ಭಿಕ್ಷೆ ಎತ್ತಿಕೊಂಡೂ…’
‘ಆಯ್ತು; ಈಗ ನಿನ್ನ ಬಿಟ್ಟು ಭಿಕ್ಷೆಗೆ ಹೋಗಲೇ’
‘ನೀವೆ ತೀರ್ಮಾನ ಮಾಡಿ. ಭಿಕ್ಷೆಗೆ ಹೋಗ್ತಿರೊ ಎಲ್ಲಿಗೆ ಹೋಗ್ತಿರೊ… ಎಲ್ಲೆಂದರಲ್ಲಿಗೆ ಹೋಗಿ… ನನಗೆ ಚಿಂತೆ ಇಲ್ಲ. ನನ್ನ ಅಪ್ಪನ ಮನೆ ಇದೆ. ನಾನಿಲ್ಲೆ ಇರುವೆ’
‘ಇದನ್ನು ಹೇಳಲು ಈ ತೋಟದ ಮರೆಗೆ ಕರೆತಂದೆಯಾ… ಹಾಗಾದರೆ ಮಸಣಕ್ಕೆ ಹೋಗಲೇ…’
ಮಗು ಜೋರಾಗಿ ಅಳುತ್ತಿತ್ತು. ನಮ್ಮಿಬ್ಬರ ಜಗಳ ಮಗುವಿಗೆ ಅರ್ಥ ಆಗಿತ್ತೇನೊ… ‘ಆಯ್ತು’ ನಾಳೆನೆ ಎಲ್ಲಿಗಾದ್ರು ಹೋಗ್ತಿನಿ. ಒಂದು ತಿಂಗಳು ಸಮಯ ಕೊಡು…’ ‘ನಿನಗೆ ಸಮಯ ಕೊಡುವಷ್ಟು ದೊಡ್ಡವಳಲ್ಲ. ಹಂಗಿನಲ್ಲಿ ಬದುಕಬಾರದು ರೀ… ನಿಮ್ಮ ಗೆಳೆಯರ ಬಳಿ ಎಷ್ಟೆಂದು ಹಣ ಪಡೆಯುವಿರೀ… ಸ್ವಂತ ದುಡೀರಿ… ಗಂಜಿ ಕುಡಿದು ಮಲಗಿದರೂ ಆಗ ನೆಮ್ಮದಿ ಇರುತ್ತದೆ…’ ಮೆಟ್ಟು ತೆಗೆದುಕೊಂಡು ಬಡಿದಂತಾಗಿತ್ತು. ಕತ್ತೆ ಮೊಪೆಡ್‌ನಲ್ಲೆ ಬಾಟಲಿ ಇತ್ತು. ತಂದು ಅವಳ ಎದಿರೇ ಕುಡಿದೆ. ಇನ್ನಷ್ಟು ಕಠಿಣ ಆದಳು. ಅದು ನಿನ್ನನ್ನು ಕುಡೀತಿದೆ. ನೀನಲ್ಲ ಅದನ್ನು ಹೀರುತ್ತಿರುವುದು… ಕುಡಿ ಕುಡಿ ನೋಡ್ತಿನಿ ಅದೆಷ್ಟು ಕುಡೀತಿಯೊ…’
‘ಹೀಗೇ ಕುಡಿದು ಅಮಲಲ್ಲೇ ಒಂದು ದಿನ ಸತ್ತು ಹೋಗುವೆ. ಈ ಪ್ರಪಂಚಕ್ಕೆ ನನ್ನ ಅವಶ್ಯಕತೆ ಇಲ್ಲ’. ‘ಅಯೋ ದೊಡ್ಡ ಮನುಷ್ಯಾ… ನಿನ್ನ ಅಗತ್ಯ ನನಗೂ ಇಲ್ಲಾ; ಆದರೆ ತೊಡೆ ಮೇಲೆ ಮಲಗಿ ಬೆದರಿ ನಮ್ಮ ಮುಖ ನೋಡುತ್ತಿದೆಯಲ್ಲಾ… ಈ ಏನೂ ಕಾಣದ ಮಗುವಿಗೆ ನಿನ್ನ ಅವಶ್ಯಕತೆ ಇದೆ!’
‘ನೀನಿದ್ದೀಯಲ್ಲಾ… ನೋಡಿಕೊಳ್ಳುತ್ತೀಯೇ’ ‘ಅಹಾ! ದೇವರೇ ಇದು ಮೋಸ ಅಲ್ಲವೇ; ಅನ್ಯಾಯ ಅಲ್ಲವೇ… ಈ ಗಂಡ ವಿವೇಕಿಯೊ; ಅವಿವೇಕಿಯೊ… ಸ್ವಾರ್ಥಿಯೊ. ನೋಡಿದೆಯಾ; ಅದಕ್ಕೆ ನಾನು ಹೇಳಿದ್ದು; ನೀನು ಮದುವೆ ಮಾಡಿಕೊಳ್ಳಬಾರದಿತ್ತು ಎಂದು’. ‘ನನಗೇನೂ ತೋಚುತಾ ಇಲ್ಲಾ… ಕೊನೆಗೆ ಉಳಿದಿದ್ದೋಳು ನೀನೇ… ನೀನೂ ಹೀಗೆ ಮಾತಾಡ್ತಿಯೆ ಎಂದರೆ ಯಾಕೆ ಬದುಕಿರಬೇಕು…’ ಮಗುವ ಕಂಕುಳಿಗೆ ಹಾಕಿಕೊಂಡು ಎದ್ದು ನಡೆದಳು. ಹಿಂಬಾಲಿಸಿ ಗಾಡಿ ಚಾಲು ಮಾಡಲು ಹತ್ತಿಪ್ಪತ್ತು ಬಾರಿ ಕಿಕ್ ಮಾಡಿದೆ. ಸಾಧ್ಯವಾಗಲಿಲ್ಲ. ಆ ಸ್ಕೂಟರ್ ರಿಪೇರಿ ಮಾಡಿಸದೆ ಬಹಳ ದಿನವಾಗಿತ್ತು. ಇವನ ಈ ಗಾಡಿಯೂ ಇವನೂ ಒಂದೇ ಎಂದು ನಡೆಯುತ್ತ ಆಗಲೆ ಮುಂದೆ ಹೊರಟಿದ್ದಳು. ಅದನ್ನು ಅಲ್ಲೆ ಕಾಲುದಾರಿಯಲ್ಲೆ ಬಿಸಾಡಿ ಹೆಂಡತಿಯ ಹಿಂಬಾಲಿಸಿದ್ದೆ. ಮನೆಗೆ ಬಂದು ಗಪ್‌ಚಿಪ್ಪಾಗಿದ್ದೆ. ಉಸಿರು ಬಿಡುವಂತಿರಲಿಲ್ಲ. ತಡೆದುಕೊಂಡಿದ್ದೆ. ಗಾಡಿ ಎಲ್ಲಿ ಎಂದು ಅಕ್ಕ ಕೇಳಿದ್ದಳು. ಕೆಟ್ಟು ಸತ್ತು ಅಲ್ಲಿ ತೋಟದಲ್ಲಿ ಬಿದ್ದಿದೆ ಎಂದೆ. ತನ್ನ ಮಗನ ಕಳಿಸಿ ಮನೆಗೆ ತರಿಸಿದ್ದಳು. ಅದರಲ್ಲಿ ಪೆಟ್ರೋಲ್ ಇರಲಿಲ್ಲ ಅಷ್ಟೇ. ನನ್ನ ಭಾಮೈದ ಸತೀಶ ಒಂದು ಲೀಟರ್ ಪೆಟ್ರೋಲ್ ತಂದು ಹಾಕಿ ಕಿಕ್ ಮಾಡಿ ಕತ್ತೆಯ ಕಿರುಚಿಸುವಂತೆ ಗಾಡಿಯು ಅರಚಿಕೊಳ್ಳುವಂತೆ ಎಕ್ಸ್‌ಲೇಟರ್ ಕೊಟ್ಟಿದ್ದ. ಬುಸಬುಸನೆ ಹೊಗೆ ನುಗ್ಗಿಬಂದಿತ್ತು. ‘ಹಾsss; ಸಾಕು ಕೊಡೋ… ತ್ಯಾಂಕ್ಸ್ ಕಣೋ’ ಎಂದು ಮದ್ದೂರಿನತ್ತ ಹೊರಟೆ. ಕತ್ತಲಾಗಿತ್ತು. ಹೆಂಡತಿ ಬಂದು… ‘ಎಲ್ಲಿಗೇ’ ಎಂದು ಜೋರಾಗಿ ಗದರಿ ಕೇಳಿದಳು. ‘ಅಲ್ಲಿಹುದು ನಮ್ಮನೇ ಇಲ್ಲಿ ಬಂದೆ ಸುಮ್ಮನೆ’ ಎಂದೆ. ‘ಇರುವಷ್ಟು ದಿನ ಈ ಮನೆಯಲ್ಲೆ ಇರು.’ ‘ಇರಲಾರೆ… ಕಾಲಕಸವಾದ ಮೇಲೆ ಕಾಲನ್ನಾದರೂ ತೊಳೆದುಕೊಳ್ಳಬೇಕು.’ ‘ಇಲ್ಲೆ ತೊಳೆದುಕೊ.’ ‘ಇಲ್ಲಾ; ಎಲ್ಲಿ ತೊಳೆದುಕೊಳ್ಳಬೇಕೊ ಅಲ್ಲೇ ತೊಳಕೋಬೇಕು’ ಎಂದು ಗಾಡಿಯ ಮುಂದೋಡಿಸಿದೆ. ನನ್ನ ಅಕ್ಕ ಸಿಟ್ಟಿನಿಂದ ಮಗಳ ಹಿಂದೆ ನಿಂತು ಚಡಪಡಿಸಿದ್ದಳು. ಮಂಡ್ಯಕ್ಕೆ ಬಂದಿದ್ದೆ. ಗೆಳೆಯನ ಮನೆಯಲ್ಲಿ ಉಳಿದಿದ್ದೆ. ಬೆಂಗಳೂರಿಗೆ ಹೋಗಿ ವ್ಯವಸ್ಥೆ ಮಾಡಿಕೊಂಡೆ. ಸಾಲ ತಂದೆ. ಬಾಡಿಗೆ ಮನೆ ಮಾಡಿದೆ. ಬೇಕಾದ ಎಲ್ಲ ಸಾಮಾನುಗಳ ತಂದು ಜೋಡಿಸಿದೆ. ಸರಳ ಬಡಪಾಯಿ ಮನೆ. ಅಲಂಕಾರ ಮಾಡಿದ್ದೆ. ಅದಷ್ಟೇ ಬೇಕಾದಷ್ಟಾಗಿತ್ತು. ತೊಟ್ಟಿಲು ಕಟ್ಟಿದ್ದೆ. ಪುಟ್ಟ ಪುಟ್ಟ ಆಕರ್ಷಕ ವಸ್ತುಗಳ ಜೋಡಿಸಿದ್ದೆ. ಒಂದು ವಾರ ತುಂಬಿತ್ತು. ನಾನು ನಾಪತ್ತೆ ಆದೆನೊ ಎಲ್ಲೊ ಆಕ್ಸಿಡೆಂಟಾಗಿ ಸತ್ತನೊ ಎಂಬ ಚಿಂತೆ ಬಂದಿರಲೇಬೇಕು.
ಹಳ್ಳಿಗೆ ಬಂದೆ. ಮುಖ ಇರಲಿಲ್ಲ. ಹೆಂಡತಿ ಮಗಳಿಗಾಗಿ ಸೋತಿದ್ದೆ. ಹೆಂಡತಿ ಮರುಗಿದಳು. ಎಲ್ಲ ಹೆಂಡತಿಯರಿಗೂ ತನ್ನದೇ ಒಂದು ಸಂಸಾರ, ಮನೆ, ಮಕ್ಕಳು ಎಂಬ ಕನಸಿರುತ್ತವೆ. ಕರೆದುಕೊಂಡು ಬಂದೆ. ಯಾರೂ ನಿರೀಕ್ಷಿಸಿರಲಿಲ್ಲ. ಸಂತೋಷ ಪಟ್ಟಿದ್ದರು. ಅಂತೂ ಒಂದು ಮನೆಗೆ ಕರೆತಂದು ತೊಟ್ಟಿಲು ತೂಗಿದೆನಲ್ಲಾ ಎಂದು ಆನಂದಪಟ್ಟೆ. ಆ ಸುಖ ಬಹಳ ದಿನ ಇರಲಿಲ್ಲ. ಸಂಸಾರ ನಿಭಾಯಿಸಲು ಹೆಣಗಾಡಬೇಕಾಯಿತು. ಎಂ.ಪಿ.ಪ್ರಕಾಶರ ಮನೆಗೆ ಹೋಗುತಿದ್ದೆ. ಸಾಕಷ್ಟು ಹಣವ ನೀಡುತ್ತಿದ್ದರು. ಲಂಕೇಶರ ಆರೋಗ್ಯ ಕೆಟ್ಟಿತ್ತು. ಬಹುಪಾಲು ಸಂಬಂಧ ತುಂಡಾಗಿತ್ತು. ಸಿ.ಜಿ.ಕೆ. ಕಂಬಾರರ ನಾಟಕೋತ್ಸವ ಮಾಡಿದ್ದರು. ಪಟ್ಟು ಹಾಕಿ ಒತ್ತಾಯಿಸಿದ್ದರು. ಆಯಿತು; ಅವನಿಗೆ ಕೆಲಸ ಕೊಡುವೆ ನನ್ನ ಬಳಿ ಕಳುಹಿಸಿ ಎಂದಿದ್ದರಂತೆ. ಸಿ.ಜಿ.ಕೆ. ಟೆಲಿಗ್ರಾಂ ಮಾಡಿದ್ದರು. ಅದನ್ನು ನೋಡಿ ಹರಿದು ಬಿಸಾಡಿದ್ದೆ. ಇದೆಲ್ಲ ನಾಟಕ ಎನಿಸಿತ್ತು. ಮಂಡ್ಯದಲ್ಲಿ ನಾಗವಾರರ ಸಂಬಂಧಿ ಚಂದ್ರಕಾಂತ್ ಪರಿಚಯವಾಗಿದ್ದರು. ನನ್ನ ಕಂಡರೆ ಬಹಳ ಪ್ರೀತಿ, ಕರುಣೆ. ಇವೆಲ್ಲ ಯಾಕೆ ತರಲೆ. ನಾನು ಅಧಿಕಾರಿಯಾಗಿ ನಿನಗೆ ಸಮಾಜ ಕಲ್ಯಾಣ ಇಲಾಖೆಯಿಂದ ಒಂದು ಬೋರ್‍ವೆಲ್ ಹಾಕಿಸಿಕೊಡುವೆ. ತೋಟ ಇದೆ. ಜಮೀನಿದೆ. ವ್ಯವಸಾಯ ಮಾಡಿಸು. ಅದರಲ್ಲೆ ದುಡಿ… ಈ ಬುದ್ಧಿ ಜೀವಿಗಳ ಸಹವಾಸವೆ ಬೇಡ ಎಂದು ತೇಜಸ್ವಿ ಕಾಡು ಸೇರಿಕೊಂಡು ಸುಖವಾಗಿ ಇದ್ದಾರೆ ಅಲ್ಲವೇ… ನೀನೂ ಹಾಗೇ ಮಾಡು; ಬರಿ… ಖುಷಿಯಾಗಿರು ಎಂದು ಬೋರ್‍ವೆಲ್ ವ್ಯವಸ್ಥೆ ಮಾಡಿಸಿದರು. ಸಾಕಷ್ಟು ನೀರು ಹರಿದು ಬಂತು. ಆದರೆ ಅದು ನನ್ನ ತೋಟ ಆಗಿರಲಿಲ್ಲ. ಅಕ್ಕ ಭಾವನದಾಗಿತ್ತು. ಅದನ್ನು ಬಯಸಲಿಲ್ಲ. ಅದನ್ನೂ ಬಿಟ್ಟುಬಿಟ್ಟೆ. ಕಂಬಾರರು ಆ ಮೊದಲೆ ಎರಡು ಬಾರಿ ನಿರಾಕರಿಸಿ ಹಿಂತಿರುಗಿಸಿದ್ದರು. ಸಂದರ್ಶನದ ನಾಟಕ ಮಾಡಿ ಬೇರೆ ಯಾರ್ಯಾರೊ ಗೂಸ್ಲುಗಳನ್ನೆಲ್ಲ ಆಯ್ಕೆ ಮಾಡಿಕೊಂಡು ನನ್ನನ್ನು ಕೈಬಿಟ್ಟು ಅಪಮಾನಿಸಿದ್ದರು. ಇಲ್ಲಿಗೆ ನನ್ನ ಕಥೆ ಮುಗಿಯಿತು ಎಂದು ಸುಮ್ಮನೆ ಮಂಡ್ಯದಲ್ಲಿ ನಿಶೆಯಲ್ಲಿ ತೇಲುತಿದ್ದೆ.
ಒಂದು ದಿನ ಬೆಸಗರಹಳ್ಳಿ ರಾಮಣ್ಣ ಕಂಡರು. ತಾಯಿ ಕರುಳಿನ ಕಥೆಗಾರ. ‘ಯಾಕ್ಲ ಮೊಗಾ ಇಂಗಾಗೋದೇ… ಸರಿ ಇಲ್ಲಕಲ ಇದೆಲ್ಲಾ. ನೀಸ್ಬೇಕು ಕಲಾ ಬಾಳಿ ಬದ್ಕು ಜೀವ ನಿಂದು… ನಾವೆಲ್ಲ ಸತ್ತೋಗಿದ್ದೀವ್ಲಾ… ಇವಿ ಕಲಾ ಇನ್ನೂ… ಇವ್ನೆಲ್ಲ ಬಿಟ್ಟುಬಿಡ್ಲಾ… ಕಾಲ ಒಂದದೆ ತೀರ್ಮಾನ ಮಾಡ್ತದೆ. ನನುಗೆ ಇವುರೆಲ್ಲ ಅನ್ನಾಯ ಮಾಡುದ್ರು ಅಂತಾ ಅಳ್ತಾ ಕುಂತಿದ್ರೆ ಹೊಡ್ದೋರ್ಗೇನಾರ ನೋವಾದದ್ಲಾ… ಚೆನ್ನಾಗಿಲ್ಲಾ… ಬಿದ್ದೋಗ್ಲಿ ಅವುನು ಅಂತಾ ಕಾಯ್ತಾ ಅವರೇ… ಮನುಸ್ರ ಯೀ ಸಂಚೇ ನಿನುಗೆ ಗೊತ್ತಾಯ್ತಾ ಇಲವಲ್ಲಾ’ ಎಂದು ಕಣ್ಣಲ್ಲಿ ನೀರು ತುಂಬಿಕೊಂಡರು. ಅವರ ಮಗ ರವಿಕಾಂತೇಗೌಡ ಆಗಾಗ ಮನೆಗೆ ಬಂದು ವಿಚಾರಿಸಿಕೊಂಡು ಹೋಗುತ್ತಿದ್ದ. ನನ್ನ ಪಾಡು ಕಂಡು ಮರುಗುತಿದ್ದ. ಮಂಡ್ಯದ ಪಿ.ಈ.ಎಸ್. ಕಾಲೇಜಿನಲ್ಲಿ ಅಧ್ಯಾಪಕನಾಗಿ ಕೆಲಸ ಮಾಡು ಎಂದು ಸಚ್ಚಿದಾನಂದ ಅವರು ವ್ಯವಸ್ಥೆ ಮಾಡಿದರು. ಯಾರೊ ಬಂದು ಕಲ್ಲು ಹಾಕಿದರು. ಅದರಿಂದ ಒಳ್ಳೆಯದೇ ಆಗಿತ್ತು. ತಡೆದವನು ನನ್ನ ಒಂದೇ ಒಂದು ಹೆಜ್ಜೆಯನ್ನು ತಪ್ಪಿಸಲು ಆಗಲಿಲ್ಲ. ಅಮಲಿಗೆ ಬಿದ್ದು ಆರೋಗ್ಯ ಹದಗೆಟ್ಟಿತ್ತು. ಆಸ್ಪತ್ರೆ ಸೇರಿದ್ದೆ. ಜಾಂಡೀಸ್ ಆಗಿತ್ತು. ಮಧುಮೇಹ ಹಾಗೂ ಅಧಿಕ ರಕ್ತದೊತ್ತಡ ದೇಹಕ್ಕೆ ಬಂದು ಸೇರಿಕೊಂಡಿದ್ದವು. ಸ್ವಾಗತಿಸಿದ್ದೆ. ಬಾಳಿನ ಉದ್ದಕ್ಕೂ ಸಂಸಾರದಂತೆ ಬರಲು ಬಂದಿರಾ… ಒಳ್ಳೆಯದಾಯಿತು. ಇನ್ನಾದರೂ ಒಂದಿಷ್ಟು ಎಚ್ಚರ ವಹಿಸುವೆ ಎಂದು ಎಲ್ಲ ಚಟಗಳ ಬಿಟ್ಟು ಜಾಗೃತನಾಗಬೇಕು ಎಂದುಕೊಂಡೆ. ಆಸ್ಪತ್ರೆಯಿಂದ ಎದ್ದು ಕುದುರೆಯಂತೆ ಬಂದಿದ್ದೆ. ಚಟ ಬಿಡವುದು ನನ್ನ ಕೈಯಲ್ಲಿದೆಯೊ ಇಲ್ಲವೊ ಎಂಬ ಗೊಂದಲದಲ್ಲೇ ಗೆಳೆಯರ ಜೊತೆ ಹೋಗಿ ಮತ್ತೆ ಬಾರಲ್ಲಿ ಕೂತು ಕುಡಿಯತೊಡಗಿದೆ.
ಎಲ್ಲರಿಗೂ ಬೇಸರವಾಗಿತ್ತು. ನಿಭಾಯಿಸುವುದು ಕಷ್ಟವಾಗಿತ್ತು. ಎಲ್ಲರೂ ಒಟ್ಟಾಗಿ ನನ್ನನ್ನು ಬೇಟೆ ಆಡುತ್ತಿದ್ದಾರೆ ಎಂಬ ಭ್ರಾಂತಿಗೆ ಬಿದ್ದಿದ್ದೆ. ಮಗಳು ಬೆಳಕು ಅಂಬೆಗಾಲಿಟ್ಟು ಎದ್ದು ನಿಂತು ನಡೆಯತೊಡಗಿದಳು. ಮಗಳಿಗಾಗಿ ದಿನಕ್ಕೆ ಒಂದೊಂದು ಬಣ್ಣದ ಬಟ್ಟೆ ತರುತ್ತಿದ್ದೆ. ಒಂದು ಚೀಲದಷ್ಟು ಆಟದ ಸಾಮಾನುಗಳ ತಂದು ಸುರಿದಿದ್ದೆ. ಆ ಮುಗ್ಧ ಮಗುವಿಗೆ ನನ್ನಪ್ಪನ ಅವಸ್ಥೆ ಏನು ಎಂಬುದೇ ತಿಳಿದಿರಲಿಲ್ಲ. ಒಂಟಿತನ ಬಲುಹಿತ ಎನಿಸುತ್ತಿತ್ತು. ಒಬ್ಬೊಬ್ಬನೇ ಎಲ್ಲೆಲ್ಲೊ ಅಲೆದಾಡುತಿದ್ದೆ. ನನ್ನ ಅಕ್ಕ ಮುನಿಸು ಮುರಿದು ಕರುಳ ಬಳ್ಳಿಯ ಸೆಳೆತದಿಂದ ನನ್ನ ಮಂಡ್ಯದ ಬಾಡಿಗೆ ಮನೆಗೆ ಬಂದಿದ್ದಳು. ಸಹಜವಾಗಿ ಮಾತನಾಡಿಸಲಿಲ್ಲ. ನನ್ನ ಸ್ವಭಾವ ಹಾಗೆಯೇ… ಬೇಗ ಹೊಂದಿಕೊಳ್ಳುತ್ತಿರಲಿಲ್ಲ. ಮಗಳನ್ನು ನೋಡಲು ಬಂದಿದ್ದಾಳೆ… ನೋಡಿಕೊಂಡು ಹೋಗಲಿ ಎಂದು ಬಿಗುಮಾನದಿಂದ ಹೊರಗೆ ಬಂದಿದ್ದೆ. ಅದೇ ರಸ್ತೆಗಳು ತೂರಾಡಿ ಡೊಂಕಾದಂತೆ ಕಾಣುತ್ತಿದ್ದವು.
ಕಥೆಗಾರ, ಕವಿ ಮತ್ತು ಕಾದಂಬರಿಕಾರ. ಹಂಪಿ ಕನ್ನಡ ವಿಶ್ವವಿದ್ಯಾಲಯದ ಜಾನಪದ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದಾರೆ.