ಮರವನ್ನು ಸುತ್ತಿದ್ದ ಹೆಬ್ಬಾವು ಪೊಟರೆಯೊಳಕ್ಕೆ ಬಾಯಿಡಲು ಹವಣಿಸುತ್ತಿದೆ. ಒಂದೆಡೆ ಅಳಿವಿನಂಚಿನ ಜೀವಿಯ ಭವಿಷ್ಯದ ಆಶಾಕಿರಣವಾದ ಮೂರು ಮರಿಹಕ್ಕಿಗಳು. ಮತ್ತೊಂದೆಡೆ ಪ್ರಕೃತಿ ಸಹಜವಾಗಿ ಹಸಿದ ಹಾವು. ಏನೂ ಮಾಡದೇ ಹಾವು ಆ ಹಕ್ಕಿ ಮರಿಗಳನ್ನು ನುಂಗಲು ಬಿಡಲೇ ಅಥವಾ ಮಧ್ಯ ಪ್ರವೇಶಿಸಿ ಅದರ ಊಟವನ್ನು ಕಸಿದುಕೊಳ್ಳಲೇ? ವಿಚಿತ್ರ ಸಂದಿಗ್ಧ ಪರಿಸ್ಥಿತಿ. ಅದು ಅಳಿವಿನಂಚಿನ ಹಕ್ಕಿಯೆಂದು ಹೆಬ್ಬಾವಿಗೇನು ಗೊತ್ತು ಪಾಪ. ಹಸಿದ ಹೊಟ್ಟೆಯನ್ನು ತಣಿಸಿಕೊಳ್ಳಲು ಅದೂ ಸಾಕಷ್ಟು ಕಷ್ಟಪಟ್ಟು ಅಲ್ಲಿಯವರೆಗೆ ಹೋಗಿದೆ. ನಾನೀಗ ಮಧ್ಯ ಪ್ರವೇಶಿಸುವುದು ಪ್ರಕೃತಿ ನಿಯಮಕ್ಕೆ ವಿರುದ್ಧವೇ? ಈಗೇನು ಮಾಡಬೇಕು ನಾನು ಎಂಬ ದ್ವಂದ್ವದಲ್ಲೇ ಮನಸ್ಸು ಹೊಯ್ದಾಡಿತು.
ಹಕ್ಕಿ ಮತ್ತು ಹಾವುಗಳ ಒಡನಾಟದಲ್ಲಿ ಪುಟಿದ ಜಿಜ್ಞಾಸೆಗಳಿಗೆ ಅಕ್ಷರ ರೂಪ ನೀಡಿದ್ದಾರೆ ಪ್ರಸನ್ನ ಆಡುವಳ್ಳಿ.

ಮಳೆಗಾಲದ ಒಂದು ದಿನ. ಪುಣೆಯ ಆಫೀಸಿನಲ್ಲಿ ತಡರಾತ್ರಿಯವರೆಗೆ ಕೆಲಸ ಮುಗಿಸಿ, ನೇರ ಹೋಗಿ ಹಾಸಿಗೆಯಲ್ಲಿ ಉರುಳಿ ನಿದ್ದೆಮಾಡುವ ಲೆಕ್ಕಾಚಾರ ಹಾಕಿಕೊಂಡು ನನ್ನ ರೂಮಿಗೆ ತಲುಪಿದೆ. ಅಲ್ಲಿದ್ದ ಶ್ರೀನಾಥ ಬಾಗಿಲು ತೆಗೆದ.

“ಭಾವೂ, ಮಲಾ ಶಿವ್ಯಾ ದೇವೂ ನಖಾ. ಏಕ್ ಬಾತ್ ಹೈ…” ತುಸು ಭಯದಿಂದಲೇ ಶ್ರೀನಾಥ ಮರಾಠಿಯಲ್ಲಿ ಶುರುಮಾಡಿ, ನನಗೆ ಆ ಭಾಷೆ ಬರುವುದಿಲ್ಲವೆಂದು ಥಟ್ಟನೆ ನೆನಪಾಗಿ ಕೊನೆಗೆ ಹಿಂದಿಯಲ್ಲಿ ಮುಂದುವರೆಸಿದ…

‘ಒಂದು ವಿಷ್ಯ ಇದೆ, ಬೈಬೇಡ’ ಎಂದು ಇವನು ಪೀಠಿಕೆ ಹಾಕುತ್ತಿದ್ದಾನೆ ಎಂದರೆ ಏನೋ ಗಂಭೀರ ವಿಚಾರವೇ ಇದ್ದೀತು ಎಂದುಕೊಂಡು ತುಸು ಅಸಹನೆಯಿಂದಲೇ ಏನೆಂದು ಕೇಳುವಂತೆ ಮುಖಮಾಡಿದೆ.

“ಇವತ್ತೇನಾಯ್ತೂ ಅಂದ್ರೆ…” ಎಂದು ಮರಾಠಿ ಬೆರೆತ ಹಿಂದಿಯಲ್ಲಿ ‘ಶ್ರೀನಾಥ ಪುರಾಣ’ ಶುರುಮಾಡಿದ.

ಶ್ರೀನಾಥ ಮಹಾರಾಷ್ಟ್ರದ ದಕ್ಷಿಣ ಭಾಗದ ಒಂದು ಹಳ್ಳಿಯವನು. ಸುಮಾರು ಇಪ್ಪತ್ತರ ಹರೆಯ. ಹತ್ತನೇ ಕ್ಲಾಸಲ್ಲಿ ಡುಮ್ಕಿ ಹೊಡೆದ ಮೇಲೆ ಅವನ ಊರಲ್ಲೇ ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ದ. ಊರಿನವರ ಮಟ್ಟಿಗೆ ಅವನು ಉರಗ ಸಂರಕ್ಷಕ. ಊರಲ್ಲಿ ಯಾರದ್ದಾದರೂ ಮನೆಯೊಳಕ್ಕೆ ಹಾವು ನುಸುಳಿದ್ದರೆ ಅವುಗಳನ್ನು ಹಿಡಿದು, ಅವರು ಕೊಡುವ ಪುಡಿಗಾಸು ಪಡೆದು, ಹಾವಿನ ಜೊತೆಗೆ ಒಂದಿಷ್ಟು ಸೆಲ್ಫಿ ತೆಗೆದುಕೊಂಡು ಕಾಡಿಗೆ ಬಿಟ್ಟು ಬರುತ್ತಿದ್ದ. ಆಗೀಗ ಅರಣ್ಯ ಇಲಾಖೆಯವರೂ ಹಾವು ಹಿಡಿಯಲು ಇವನಿಗೇ ಹೇಳಿ ಕಳಿಸುತ್ತಿದ್ದರು. ಬಹುತೇಕ ಉರಗ ಸಂರಕ್ಷಕರ ಹಾಗೆ ಇವನ ಕಾಳಜಿ ಹಾವುಗಳ ಬಗೆಗಿಂತ, ಅವುಗಳನ್ನು ಕೈಯಲ್ಲಿ ಹಿಡಿದುಕೊಂಡ ಫೋಟೋಗಳನ್ನು ಫೇಸ್ ಬುಕ್ಕಿಗೇರಿಸಿ ‘ಹಾವು ಹಿಡಿದ ಹೀರೋ’ ಎಂದೆನಿಸಿಕೊಳ್ಳುವುದರಲ್ಲಿತ್ತು.

ಗೂಬೆಗಳ ಬಗ್ಗೆ ಮಹಾರಾಷ್ಟ್ರದ ಉತ್ತರ ಭಾಗದ ಕಾಡುಗಳಲ್ಲಿ ಸರ್ವೇಕ್ಷಣೆ ಮಾಡಲು ನಮಗೆ ಓರ್ವ ವನ್ಯಜೀವಿಗಳ ಬಗ್ಗೆ ಆಸಕ್ತಿಯುಳ್ಳ, ಓದು ಬರಹ ಬಲ್ಲ, ಸ್ಥಳೀಯನ ಅಗತ್ಯವಿತ್ತು. ಅರಣ್ಯ ಇಲಾಖೆಯವರು ಈ ಶ್ರೀನಾಥನನ್ನು ಒಂದಿಷ್ಟು ಹೊಗಳಿ ಇವನೇ ಸೂಕ್ತವೆಂದು ನಮ್ಮ ಬಳಿಗೆ ಕಳುಹಿಸಿದ್ದರು. ಕಾಡಿನಲ್ಲಿ ಕೆಲಸ ಮಾಡುವ ಮೊದಲು ಅವನಿಗೆ ವೈಜ್ಞಾನಿಕ ಮಾಹಿತಿಯನ್ನು ಸರಿಯಾಗಿ ದಾಖಲಿಸುವ, ಸರ್ವೆಯ ನಿಯಮಗಳ ಬಗ್ಗೆ ತಿಳಿಸಿ ತರಬೇತಿ ನೀಡುವ ಜವಾಬ್ದಾರಿ ನನ್ನ ಮೇಲಿತ್ತು. ಕೆಲದಿನಗಳ ಮಟ್ಟಿಗಾದ್ದರಿಂದ ನನ್ನ ರೂಮಿನಲ್ಲೇ ಅವನಿಗೆ ಉಳಿಯುವ ವ್ಯವಸ್ಥೆ ಮಾಡಿದ್ದೆ.

ಆ ದಿನ ಆಗಿದ್ದಿಷ್ಟು: ಸಂಜೆ ಶ್ರೀನಾಥನಿಗೆ ಯಾರೋ ಕರೆ ಮಾಡಿ ಅವರ ಮನೆಯ ಬಳಿ ನಾಗರಹಾವೊಂದು ಬಂದಿದೆಯೆಂದೂ, ಅದನ್ನು ಹಿಡಿದು ಬೇರೆಡೆಗೆ ಬಿಡಬೇಕೆಂದೂ ಕೇಳಿಕೊಂಡಿದ್ದಾರೆ. ಇವನು ಹೋಗಿ ಲೀಲಾಜಾಲವಾಗಿ ಹಿಡಿದು ಅಲ್ಲಿಂದ ಹೊರಡುವಷ್ಟರಲ್ಲಿ ಮತ್ತೊಂದು ಕರೆ ಬಂದಿದೆ. ಈ ಬಾರಿ ಹತ್ತಿರದ ಅಪಾರ್ಟ್ಮೆಂಟ್ ಒಂದರ ಬಳಿ ಹೆಬ್ಬಾವೊಂದು ನುಸುಳಿದೆ, ಜನ ಗಾಬರಿಯಾಗಿದ್ದಾರೆ. ಅರಣ್ಯ ಇಲಾಖೆಯವರೇ ಇವನಿಗೆ ಹೇಳಿ ಕಳಿಸಿದ್ದಾರೆ. ಶ್ರೀನಾಥ ಅದನ್ನೂ ಹಿಡಿದು ಬ್ಯಾಗಿಗೇರಿಸಿ ಹತ್ತಿರದ ಪ್ರಾಣಿಸಂಗ್ರಹಾಲಯಕ್ಕೆ ಹೋದರೆ ಅವರು ಆಗಲೇ ಬಾಗಿಲು ಹಾಕಿ ಹೋಗಿದ್ದಾರೆ. ಅರಣ್ಯ ಇಲಾಖೆಯವರೇ ಹಾವುಗಳನ್ನು ಮರುದಿನ ತಂದು ಅಲ್ಲಿ ಬಿಡುವಂತೆ ಅಪ್ಪಣೆ ಮಾಡಿ ಹೋಗಿದ್ದಾರೆ. ಈ ಮಹಾನಗರಿಯ ಹತ್ತಿರದಲ್ಲಿ ನಿರ್ಜನ ಕಾಡೂ ಇಲ್ಲ. ಆ ರಾತ್ರಿ ಹೊತ್ತು ಎರೆಡೆರೆಡು ಹಾವುಗಳನ್ನು ಇಟ್ಟುಕೊಂಡು ದೂರ ಬೈಕಿನಲ್ಲಿ ಹೋಗಿ ಕಾಡಿಗೆ ಬಿಟ್ಟು ಬರುವುದು ಸುಲಭವೂ ಅಲ್ಲ. ಹೀಗಾಗಿ ಏನು ಮಾಡಲೂ ತೋಚದೇ ಹೆಬ್ಬಾವನ್ನೂ, ನಾಗರ ಹಾವನ್ನೂ ನನ್ನ ರೂಮಿಗೇ ತಂದು ಇಟ್ಟುಕೊಂಡಿದ್ದಾನೆ.

ನನ್ನ ರೂಮು ಇದ್ದಿದ್ದು ನಗರದಲ್ಲಿ ಹೊಸದಾಗಿ ಕಟ್ಟಲಾಗಿದ್ದ ಒಂದು ಬೃಹತ್ ಮನೆಗಳ ಸಮುಚ್ಚಯದ ಮೇಲ್ಮಹಡಿಯಲ್ಲಿ. ಏನಿಲ್ಲವೆಂದರೂ ಅಲ್ಲಿ ನೂರೈವತ್ತು ಮನೆಗಳು ಒಂದೇ ಕಟ್ಟಡದಲ್ಲಿವೆ. ನೂರಾರು ಮಂದಿಯೂ, ಮಕ್ಕಳೂ ಇರುವ ಜಾಗ. ಇಂಥ ಮನೆಗೆ ಇವನು ವಿಷ ಹೊತ್ತ ನಾಗರಹಾವನ್ನೂ, ಬೃಹತ್ ಹೆಬ್ಬಾವನ್ನೂ ಯಾರಿಗೂ ಕಾಣದಂತೆ ಹೊತ್ತು ತಂದಿದ್ದಾನೆ!

ಶ್ರೀನಾಥನ ಬಳಿ ಹಾವು ಹಿಡಿಯಲು ಭಂಡ ಧೈರ್ಯ ಇತ್ತೇ ವಿನಃ ಹಾವುಗಳನ್ನು ಸುರಕ್ಷಿತವಾಗಿ ಸಾಗಿಸಲು ಬೇಕಾದ ಪರಿಕರಗಳೇನೂ ಇರಲಿಲ್ಲ. ನಾಗರಹಾವನ್ನು ಒಂದು ಪ್ಲಾಸ್ಟಿಕ್ ಡಬ್ಬಿಗೆ ತುಂಬಿ, ಗಾಳಿಯಾಡಲು ತೂತುಗಳನ್ನು ಮಾಡಿ ಬ್ಯಾಗಿನೊಳಕ್ಕೆ ಇಟ್ಟುಕೊಂಡಿದ್ದ. ಆದರೆ ಹೆಬ್ಬಾವನ್ನು ಹಾಗೆಲ್ಲಾ ಅಡಗಿಸಿದಲಾದೀತೇ? ಅಸಲಿಗೆ ಅದು ಹೆಬ್ಬಾವಿನ ಮರಿ. ಮರಿಯಾದರೇನು? ಅದು ಹೆಬ್ಬಾವಿನದ್ದಲ್ಲವೇ? ಸುಮಾರು ಒಂದು ಮೀಟರು ಉದ್ದವಿತ್ತು. ಬಲು ಭಾರ. ಅವನು ಹಿಡಿಯಲು ಹೋದಲ್ಲಿ ಯಾರೋ ದಿಂಬಿನ ಕವರು ಕೊಟ್ಟಿದ್ದರು. ಅದರಲ್ಲೇ ಕಟ್ಟಿಕೊಂಡು ಬಂದಿದ್ದ. ಹಾವು ಆ ಸಣ್ಣ ಬ್ಯಾಗಿನೊಳಗೆ ಇರಲಾಗದೇ ಬಿಡಿಸಿಕೊಳ್ಳಲು ಹೆಣಗುತ್ತಿತ್ತು.

ರಾತ್ರಿ ಹನ್ನೆರೆಡಾಗಿದೆ. ನನಗೆ ಶ್ರೀನಾಥನ ಮೆಲೆ ಕೋಪ ಉಕ್ಕೇರುತ್ತಿತ್ತು. ಆದರೆ ಏನು ಮಾಡಲಿ? ನಾನೇ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಕರೆ ಮಾಡಿ ವಿಷಯ ವಿವರಿಸಿದೆ. ಹೇಗಾದರೂ ಇನ್ನು ಕೆಲ ಗಂಟೆಗಳ ಕಾಲ ನಿಮ್ಮ ಬಳಿ ಇಟ್ಟುಕೊಳ್ಳಿ, ಬೆಳೆಗ್ಗೆ ಆರಕ್ಕೆಲ್ಲ ಪ್ರಾಣಿಸಂಗ್ರಹಾಲಯ ತೆರೆಯುವುದಾಗಿಯೂ, ಆಮೇಲೆ ಹಾವುಗಳನ್ನು ತಂದು ಬಿಡಿ ಹೇಳಿ ಎಂದು ನಿದ್ದೆಗಣ್ಣಲ್ಲೇ ತಪ್ಪಿಸಿಕೊಂಡರು. ಅರಣ್ಯ ಇಲಾಖೆಯವರೇ ಹೀಗೆ ಹೇಳಿದ ಮೇಲೆ ಮತ್ತೇನು ಮಾಡಲಾದೀತು?

ಇಂಥ ಪರಿಸ್ಥಿತಿಯಲ್ಲೂ ಶ್ರೀನಾಥನಿಗೆ ಹಾವುಗಳನ್ನು ಹೊರಬಿಟ್ಟು, ತುಸು ಹೊತ್ತು ಅವುಗಳನ್ನು ಹಿಡಿದುಕೊಂಡು ಫೋಟೋ ತೆಗೆಸಿಕೊಳ್ಳುವ ತವಕ. “ಭೈಯ್ಯಾ, ನನ್ನ ಫೋಟೋ ತೆಗಿತೀಯಾ…” ಎಂದಾಕ್ಷಣ ನನ್ನ ತಾಳ್ಮೆ ತಪ್ಪಿತು. ಅವನಿಗಷ್ಟು ಬೈದು, ಹಾವುಗಳನ್ನು ಹೇಗಾದರೂ ಮಾಡಿ ಅವಕ್ಕೆ ತೊಂದರೆಯಾಗದಂತೆ ಸುರಕ್ಷಿತವಾಗಿ ಇಡಲು ಹೇಳಿದೆ. ಇದ್ದ ಹಳೆಯ ಒಂದು ಬೆಡ್ ಶೀಟಿನ ಬಟ್ಟೆಯೊಳಕ್ಕೆ ಹೆಬ್ಬಾವನ್ನು ಕಟ್ಟಿ ಕೋಣೆಯ ಒಂದು ಮೂಲೆಗೆ ತಳ್ಳಿದ. “ಏನಾಗಲ್ಲ ಭೈಯ್ಯಾ, ಬೆಳಿಗ್ಗೆ ಬೇಗ ಎದ್ದು ತಗೊಂಡು ಹೋಗಣ, ಈಗ ಸ್ವಲ್ಪ ನಿದ್ದೆ ಮಾಡಣ” ಎಂದು ಆತ್ಮವಿಶ್ವಾಸದಿಂದ ಹೇಳಿದ. ದಿನಾ ಅದೇ ಕೋಣೆಯ ಇನ್ನೊಂದು ಮೂಲೆಯ ಮಂಚದ ಮೇಲೆ ಮಲಗುತ್ತಿದ್ದವನು ಈ ದಿನ ಹಾವಿಗೆ ಹೆದರಿ, ನಾನು ಅಡುಗೆ ಮನೆಯಲ್ಲಿ ನೆಲಕ್ಕೆ ಚಾಪೆ ಹಾಸಿಕೊಂಡು ಬಾಗಿಲು ಭದ್ರಪಡಿಸಿಕೊಂಡು ಮಲಗಿದೆ. ರಾತ್ರಿಯೆಲ್ಲಾ ನೆಟ್ಟಗೆ ನಿದ್ದೆ ಬಂದಿದ್ದರೆ ಕೇಳಿ!

ಆಗೀಗ ಅರಣ್ಯ ಇಲಾಖೆಯವರೂ ಹಾವು ಹಿಡಿಯಲು ಇವನಿಗೇ ಹೇಳಿ ಕಳಿಸುತ್ತಿದ್ದರು. ಬಹುತೇಕ ಉರಗ ಸಂರಕ್ಷಕರ ಹಾಗೆ ಇವನ ಕಾಳಜಿ ಹಾವುಗಳ ಬಗೆಗಿಂತ, ಅವುಗಳನ್ನು ಕೈಯಲ್ಲಿ ಹಿಡಿದುಕೊಂಡ ಫೋಟೋಗಳನ್ನು ಫೇಸ್ ಬುಕ್ಕಿಗೇರಿಸಿ ‘ಹಾವು ಹಿಡಿದ ಹೀರೋ’ ಎಂದೆನಿಸಿಕೊಳ್ಳುವುದರಲ್ಲಿತ್ತು.

ನಮ್ಮೊಡನೆ ಕೆಲಸಕ್ಕೆ ಸೇರಿದಾಗಲೇ ಶ್ರಿನಾಥನಿಗೆ ಈ ಹಾವು ಹಿಡಿಯುವ ಕೆಲಸ ಬಿಡಬೇಕೆಂದು ಕಟ್ಟುನಿಟ್ಟಾಗಿ ಹೇಳಿದ್ದೆ. ಕೇಳಬೇಕಲ್ಲ ಅವನು! ವನ್ಯಜೀವಿಗಳ ಅಧ್ಯಯನದಲ್ಲಿ ತೊಡಗಿಸಿಕೊಳ್ಳುವುದೆಂದರೆ ಹೀಗೆ ಹಾವುಗಳೊಂದಿಗೆ ಸರಸವಾಡುವುದಲ್ಲ. ಅವುಗಳನ್ನು ಅವುಗಳ ಪಾಡಿಗೆ ಬಿಟ್ಟು ಗಮನಿಸುವುದಷ್ಟೇ ನಮ್ಮ ಕೆಲಸ. ನನಗಂತೂ ಹಾವುಗಳೆಂದರೆ ಒಳಗೊಳಗೇ ಭಯ. ವಿಷಕಾರಿಯಲ್ಲ ಎಂದು ಗೊತ್ತಿರುವ ಹಾವುಗಳನ್ನೂ ಅನಗತ್ಯವಾಗಿ ಮುಟ್ಟುವವನಲ್ಲ ನಾನು. ವಾರದ ಹಿಂದೆಯಷ್ಟೇ ಶ್ರೀನಾಥ ತನ್ನ ಹಾವು ಹಿಡಿವ ಹಳೇ ಚಾಳಿ ಬಿಡದೇ ನನ್ನಿಂದ ಬೈಸಿಕೊಂಡಿದ್ದ. ಪುಣೆಯಲ್ಲಿದ್ದ ಯಾರೋ ಖ್ಯಾತ ಟಿವಿ ನಟಿಯೊಬ್ಬಳ ಏಜೆಂಟನೊಬ್ಬ ಇವನಿಗೆ ಕರೆ ಮಾಡಿದ್ದನಂತೆ. ನಾಗದೋಷ ಪರಿಹಾರಕ್ಕೇನೋ ಪೂಜೆಗೆಂದು ಅವಳಿಗೆ ಜೀವಂತ ನಾಗರಹಾವು ಒಂದು ದಿನದ ಮಟ್ಟಿಗೆ ಬೇಕಿತ್ತಂತೆ. ಪುಡಿಗಾಸಿನ ಆಸೆಗೆ ಇವನು ತಂದುಕೊಡಲು ಒಪ್ಪಿಕೊಂಡುಬಿಟ್ಟಿದ್ದ. ಇವೆಲ್ಲಾ ಸರಿಯಲ್ಲವೆಂದು ಇವನಿಗೆ ಒಂದಿಷ್ಟು ಬೈದು ಬುದ್ಧಿಹೇಳಿ ಅರಣ್ಯ ಇಲಾಖೆಯವರಿಗೆ ಈ ಬಗ್ಗೆ ಸುದ್ದಿ ಮುಟ್ಟಿಸಿದ್ದೆ. ಇಂಥ ಶ್ರೀನಾಥನನ್ನು ಸುಧಾರಿಸಿ ವನ್ಯಜೀವಿ ಸಂರಕ್ಷಣೆಗೆ ತರಬೇತಿಗೊಳಿಸುವುದು ಕಷ್ಟವಿತ್ತು.

ಬೆಳಗಿನ ಜಾವ ತುಸು ಮಂಪರು ಹತ್ತುವ ಹೊತ್ತಲ್ಲಿ ಶ್ರೀನಾಥ ಎಬ್ಬಿಸಿದ. “ಭೈಯ್ಯಾ. ಅಜ್ಗರ್ ಗಾಯಬ್ ಹೋಗಯಾ!” ಎನ್ನುತ್ತಿದ್ದಾನೆ. ಕಣ್ಣುಜ್ಜಿಕೊಂಡು ಮತ್ತೆ ಕೇಳಿಸಿಕೊಂಡೆ… ಹೆಬ್ಬಾವು ತಪ್ಪಿಸಿಕೊಂಡಿದೆ! ಅರೆ! ಅದು ಎಲ್ಲಿಗೆ ಹೋಗಲು ಸಾಧ್ಯ? ಅದೂ ಬೃಹತ್ ಹಾವು. ಇಲ್ಲೇ ಎಲ್ಲಾದರೂ ಇದ್ದೀತು ಅಂತ ಇನ್ನೊಮ್ಮೆ ಹುಡುಕಲು ಹೇಳಿದೆ. ನಾನೂ ಸಿಕ್ಕಲ್ಲೆಲ್ಲ ತಡಕಾಡಿದೆ. ನಾಗರ ಹಾವು ಡಬ್ಬಿಯೊಳಕ್ಕೇ ಇತ್ತಾದರೂ ಬಟ್ಟೆಯಲ್ಲಿ ಕಟ್ಟಿ ಇಟ್ಟಿದ್ದ ಹೆಬ್ಬಾವಿನ ಸುಳಿವೇ ಇಲ್ಲ! ಮನೆಯ ಎಲ್ಲೆಡೆ ಹುಡುಕಿದ್ದಾಯ್ತು. ರಾತ್ರಿ ಸೆಖೆಯೆಂದು ಕಿಟಕಿ ತೆರೆದಿದ್ದನಂತೆ. ಅಲ್ಲೇನಾದರೂ ನುಸುಳಿ ಹೋಯಿತೇ?

ಕಿಟಕಿಯಿಂದ ಬಗ್ಗಿ ನೋಡಿದ್ದಾಯ್ತು. ಮನೆಯಿಂದಾಚೆ ಬಂದು ಮೂಲೆಗಳನ್ನೆಲ್ಲ ತಡಕಿದ್ದಾಯ್ತು. ಆಚೆ ಮನೆಯ ಆಂಟಿ ನಮ್ಮನ್ನು ಗಮನಿಸಿ ಏನೋ ಅನುಮಾನ ಬಂದು ವಿಷಯ ಏನೆಂದು ವಿಚಾರಿಸಿದರು. ರೂಮಿಗೆ ಹಾವು ತಂದಿದ್ದೆವೆಂದೂ, ಅದೀಗ ತಪ್ಪಿಸಿಕೊಂಡಿದೆಯೆಂದು ಸತ್ಯ ಹೇಳಿದರೆ ಅಲ್ಲೊಂದು ದೊಡ್ದ ಹಗರಣ ಆಗುವುದು ಗ್ಯಾರಂಟಿ! ಹಾಗೆಂದು ಹೇಳದಿದ್ದರೂ ಕಷ್ಟ. ಪುಟ್ಟ ಮಕ್ಕಳೂ, ನೂರಾರು ಜನರೂ ಇರುವ ಜಾಗ ಅದು. ಇಲ್ಲೇ ಎಲ್ಲೋ ನಮ್ಮ ಕ್ರಿಕೆಟ್ ಬಾಲ್ ಕಳೆದು ಹೋಗಿದೆಯೆಂದು ಹೇಳಿ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡೆ.

ಸಂಜೆಯಾದರೂ ಸುತ್ತಮುತ್ತೆಲ್ಲ ಕಡೆ ಹೆಬ್ಬಾವು ಕಾಣದಿದ್ದಾಗ ನನ್ನ ಆತಂಕ ಹೆಚ್ಚಾಯಿತು. ವಿಷಯ ಹೇಳದಿದ್ದರೆ ಕೊನೆಗೆ ಎಡವಟ್ಟಾದೀತೆಂಬ ಭಯದಲ್ಲಿ ವಸತಿ ಸಮುಚ್ಚಯದ ಜವಾಬ್ದಾರಿ ಹೊತ್ತವರ ಬಳಿ ಹೋದೆ. ಎರಡು ದಿನಗಳ ಹಿಂದೆ ಇಲ್ಲೇ ಹತ್ತಿರದಲ್ಲಿ ಒಂದು ಹಾವಿನ ಮರಿಯನ್ನು ನೋಡಿದ್ದಾಗಿಯೂ, ತುಸು ಎಚ್ಚರದಲ್ಲಿ ಇರಲು ಎಲ್ಲರಿಗೂ ಹೇಳಬೇಕೆಂದು ವಿನಂತಿಸಿಕೊಂಡೆ. ಕೆರೆ ಹಾಗೂ ಉದ್ಯಾನದ ಬಳಿಯೇ ಇರುವ ಈ ಸ್ಥಳಕ್ಕೆ ಹಾವುಗಳು ಬರುವುದು ವಿಶೇಷವೇನಲ್ಲ, ಅದಕ್ಕೆಲ್ಲ ಹೆದರಬೇಕಿಲ್ಲವೆಂದು ಅವರು ನನ್ನ ಮಾತನ್ನು ಮೂಲೆಗುಂಪುಮಾಡಿದರು. ಹೆಬ್ಬಾವು ಯಾರಿಗೂ ಏನೂ ಮಾಡದಿರಲಪ್ಪಾ ಎಂದು ನಾನು ದೇವರಲ್ಲಿ ಪ್ರಾರ್ಥಿಸಿಕೊಂಡೆ.

ದಿನಗಳು ಕಳೆಯಿತು. ಹೆಬ್ಬಾವಿನ ಸುದ್ದಿಯಿಲ್ಲ. ಪ್ರಾಯಶಃ ನಮ್ಮ ರೂಮಿನ ಕಿಟಕಿಯಿಂದಿಳಿದು ಬೇರೆಲ್ಲೋ ಹೋಗಿದ್ದಿರಬೇಕೆಂದು ನಾವೂ ಸುಮ್ಮನಾದೆವು. ಹತ್ತು ದಿನಗಳ ಬಳಿಕ ತರಬೇತಿ ಮುಗಿಸಿ ಶ್ರೀನಾಥನೂ ರಜೆ ಪಡೆದು ಊರಿಗೆ ಹೊರಟ. ಹಾವಿನ ಪ್ರಕರಣ ಮನಸಿನಿಂದ ಮರೆಯಾಗುತ್ತ ಬಂದಿತ್ತು.

ಹದಿಮೂರು ದಿನಗಳ ಬಳಿಕ ಒಂದು ದಿನ ಸಂಜೆ. ಆಫೀಸಿನಿಂದ ಬಂದವನೇ ನನ್ನ ರೂಮಿನ ಬಾಗಿಲು ತೆಗೆದೆ. ನನ್ನ ಮಂಚದಡಿಯಲ್ಲೇನೋ ಹೊಸತು ಕಂಡಂತಾಗಿ ನೋಡಿದರೆ ಅದೇ ಹೆಬ್ಬಾವಿನ ಮರಿ! ಎಲ್ಲೆಲ್ಲೋ ಹುಡುಕುತ್ತಿದ್ದ ಹೆಬ್ಬಾವು ನನ್ನ ಮಂಚದಡಿಯಲ್ಲೇ ಇದೆ! ನಾನು ಹೌಹಾರಿದೆ! ಹಾವು ಹಿಡಿದು ನನಗೆ ಅಭ್ಯಾಸವಿಲ್ಲ, ಶ್ರೀನಾಥನೂ ಜೊತೆಗಿಲ್ಲ. ಅರಣ್ಯ ಇಲಾಖೆಗೆ ಹೇಳಿದರೆ ಮತ್ತಷ್ಟು ಸಂಕಷ್ಟ! ಏನು ಮಾಡಲೂ ತೋಚದೇ ಶ್ರೀನಾಥನಿಗೇ ಫೋನಾಯಿಸಿದೆ. ಏನೂ ಮಾಡೋಲ್ಲ ಅದು, ನೀನೇ ಹಿಡಿದು ಕಾಡಿಗೆ ಬಿಡು ಎಂದ. ಆಗಲೇ ಹೆಬ್ಬಾವನ್ನು ಮಂಚದಡಿ ನೋಡಿ ನಡುಗುತ್ತಿದ್ದ ನನ್ನಲ್ಲಿ ಅಷ್ಟು ಧೈರ್ಯವಿರಲಿಲ್ಲ.

ಕೆಲ ಗಂಟೆಗಳ ಬಳಿಕ ಶ್ರೀನಾಥ ಪುಣೆಯಲ್ಲಿ ಅವನ ಪರಿಚಯದ ಉರಗಮಿತ್ರನೊಬ್ಬನನ್ನು ನನ್ನ ರೂಮಿಗೆ ಕಳುಹಿಸಿದ. ಅವನು ಬರಿಗೈಯ್ಯಲ್ಲಿ ಲೀಲಾಜಾಲವಾಗಿ ಮಂಚದಡಿಯಿಂದ ಹೆಬ್ಬಾವನ್ನೆತ್ತಿಕೊಂಡು ತನ್ನ ಹಾವಿನ ಚೀಲಕ್ಕೆ ತುಂಬಿಕೊಂಡ. ನಗರದ ಹೊರವಲಯದಲ್ಲಿದ್ದ ಕಾಡಿಗೆ ಬಿಟ್ಟು ಬರುವುದಾಗಿ ಹೇಳಿ ಹೊರಟ.

ಅವನು ಹೆಬ್ಬಾವನ್ನು ರೂಮಿನಿಂದ ಹೊರಗೆ ತೆಗೆದುಕೊಂಡು ಹೋದಮೇಲೂ ನಾನು ಬೆವರುತ್ತ ಕುಳಿತಿದ್ದೆ. ಕಳೆದ ಹದಿಮೂರು ದಿನಗಳಿಂದ ಹಸಿದ ಹೆಬ್ಬಾವೊಂದು ನನ್ನ ಮಂಚದ ಕೆಳಗೆ ಮಲಗಿತ್ತೆಂಬ ಯೋಚನೆಯೇ ನನಗೆ ಭಯ ಹುಟ್ಟಿಸಿತ್ತು. ಕೆಳಗೆ ಒಂದಿಷ್ಟು ಹಳೆಯ ಪುಸ್ತಕ, ಪತ್ರಿಕೆಗಳನ್ನು ತುಂಬಿಟ್ಟ ಬಾಕ್ಸ್ ಇತ್ತು. ಅದರೊಳಗೆ ಹೆಬ್ಬಾವು ಅಡಗಿ ಕುಳಿತಿತ್ತು! ಒಮ್ಮೆ ಹೊಟ್ಟೆ ತುಂಬಿದ ಹೆಬ್ಬಾವು ಮತ್ತೆ ಹಸಿವಾಗುವವರೆಗೂ ಹೀಗೆ ಒಂದೆಡೆ ಅಡಗಿ ಕುಳಿತಿರುತ್ತವೆ. ಸುಮಾರು ಎರಡು ವಾರ ಅಲ್ಲಿ ಅಡಗಿದ್ದ ಹಾವು ಹಸಿವಾದಾಗ ಮತ್ತೆ ಹೊರಗೆ ಬಂದಿದೆ! ದಿನವೂ ಅಲ್ಲೇ ಮೇಲೆ ಮಲಗಿ ನಿದ್ದೆ ಮಾಡುತ್ತಿದ್ದ ನಾನು ಅದಕ್ಕೆ ಆಹಾರವಾಗಿ ಕಾಣದಿದ್ದುದು ನನ್ನ ಪುಣ್ಯ!

*****

(ಕಾಡುಗೂಬೆ)

ಈ ಹಾವುಗಳ ಸಹವಾಸವೇ ಬೇಡವೆಂದು ಮಧ್ಯ ಪ್ರದೇಶದ ಸಾತ್ಪುರ ಬೆಟ್ಟಗಳ ಮಡಿಲಲ್ಲಿ ಕಾಡುಗೂಬೆಗಳೆಂಬ ಅಪರೂಪದ ಹಕ್ಕಿಗಳ ಬಗ್ಗೆ ಅಧ್ಯಯನ ಮಾಡುತ್ತಿದ್ದೆ. ಈ ಕಾಡುಗೂಬೆಗಳು ನಮ್ಮ ಹಾಲಕ್ಕಿಗಳ ಹಾಗೆಯೇ ಮೇಲ್ನೋಟಕ್ಕೆ ಕಾಣುತ್ತವಾದರೂ ತುಸು ಭಿನ್ನ ಪ್ರಬೇಧಕ್ಕೆ ಸೇರಿದವು. ಮಧ್ಯಪ್ರದೇಶ, ಮಹಾರಾಷ್ಟ್ರ ಹಾಗೂ ಗುಜರಾತಿನ ಕೆಲವೆಡೆಗಳಲ್ಲಿ ಮಾತ್ರ ಇವುಗಳ ಆವಾಸ. ಇವುಗಳ ಒಟ್ಟು ಸಂಖ್ಯೆ ಐನೂರನ್ನು ಮೀರಲಿಕ್ಕಿಲ್ಲವಾದ್ದರಿಂದ ಜಗತ್ತಿನ ಅಳಿವಿನಂಚಿನ ಜೀವಿಗಳ ಪಟ್ಟಿಯಲ್ಲಿಡಲಾಗಿದೆ. ಈ ಹಕ್ಕಿಗಳ ಓಡಾಟ, ವರ್ತನೆಗಳನ್ನು ದಾಖಲಿಸಿಕೊಂಡು ಸಂರಕ್ಷಣೆಗೆ ಸಹಕರಿಸುವ ಕೆಲಸ ಮಾಡುತ್ತಿದ್ದೆ. ಅದು ಗೂಬೆಗಳು ಮರಿಮಾಡುವ ಕಾಲ. ತೇಗದ ಮರದ ಪೊಟರೆಯೊಳಕ್ಕೆ ಮೊಟ್ಟೆಯಿಟ್ಟು, ಗಂಡು ಹೆಣ್ಣು ಎರಡೂ ಸೇರಿ ಮರಿಗಳನ್ನು ನೋಡಿಕೊಳ್ಳುತ್ತವೆ. ಕೆಲವೇ ನೂರುಗಳ ಸಂಖ್ಯೆಯಲ್ಲಿರುವ ಈ ಹಕ್ಕಿಗಳ ಒಂದೊಂದು ಮರಿಯೂ ಅಳಿವಿನಂಚಿನ ಜೀವಿಯ ಉಳಿವಿನ ಆಶಾಕಿರಣ.

ಆ ವರ್ಷ ಕೇವಲ ಮೂರು ಗೂಬೆ ಜೋಡಿಗಳು ಮೊಟ್ಟೆಯಿಟ್ಟು ಮರಿ ಮಾಡಿದ್ದವು. ದುರದೃಷ್ಟವಶಾತ್ ಕೆಲ ದಿನಗಳಿಂದ ಅದರಲ್ಲಿ ಒಂದು ಗಂಡು ಹಕ್ಕಿ ನಾಪತ್ತೆಯಾಗಿತ್ತು. ಹೀಗಾಗಿ ಹೆಣ್ಣು ಹಕ್ಕಿಯೊಂದೇ ಎಲ್ಲವನ್ನೂ ನಿಭಾಯಿಸುತ್ತಿತ್ತು. ಒಂದು ದಿನ ಹಕ್ಕಿಗಳ ಚಲನವಲನ ದಾಖಲಿಸಲೆಂದು ಬೆಳ್ಳಂಬೆಳಿಗ್ಗೆ ನನ್ನ ಸ್ಥಳೀಯ ಸಹಾಯಕ ಬಾಬೂಲಾಲನೊಂದಿಗೆ ಗೂಡಿನ ಬಳಿಗೆ ಬಂದು ಕುಳಿತೆ. ಅಮ್ಮಗೂಬೆಗೆ ಹಸಿವಾಗಿದ್ದಿರಬೇಕು, ಮರಿಗಳನ್ನು ಅಲ್ಲೇ ಬಿಟ್ಟು ಗೂಡಿನಿಂದ ಹೊರಗೆ ಹಾರಿತು. ನಾನು ಬಾಬೂಲಾಲನನ್ನು ಗೂಡಿನ ಬಳಿಯೇ ನೋಡಲು ಬಿಟ್ಟು ಕ್ಯಾಮೆರಾ ಹಿಡಿದು ಹಿರಿಗೂಬೆಯ ಹಿಂದೆ ಬಿದ್ದೆ. ಗೂಬೆ ಮರದಿಂದ ಮರಕ್ಕೆ ಹಾರಿತ್ತ ಸುಮಾರು ಅರ್ಧ ಕಿಲೋಮೀಟರು ದೂರದಲ್ಲಿದ್ದ ಗದ್ದೆಯಂಚಿನ ಮರದ ಮೇಲೆ ಕುಳಿತು, ನೆಲದ ಮೇಲೆ ಇಲಿ-ಹುಳಗಳನ್ನು ಹುಡುಕುತ್ತ ಕುಳಿತಿತ್ತು. ನಾನು ಕ್ಯಾಮರ ಹಿಡಿದು ಅದನ್ನೇ ಹಿಂಬಾಲಿಸುತ್ತ ಸಾಗಿದೆ.

ಎದುರಿಗೇ ಎರಡು ಕಣ್ಣುಗಳಿರುವ ಈ ಗೂಬೆಗಳ ವಿಶ್ವಾಸ ಗಳಿಸಿಕೊಳ್ಳುವುದು ಸುಲಭವಲ್ಲ. ನಾವೇನಾದರೂ ಬೈನಾಕ್ಯುಲರ್ ಅಥವಾ ಕ್ಯಾಮರಾ ಮೂಲಕ ಅವುಗಳನ್ನೇ ನೋಡುತ್ತ ಕುಳಿತದ್ದು ಅವಕ್ಕೆ ಗೊತ್ತಾದರೆ ಏನೋ ಅಪಾಯ ಮಾಡಬಹುದೆಂದು ಭಾವಿಸಿ ತಮ್ಮ ಸಹಜ ವರ್ತನೆಯನ್ನು ಬಿಟ್ಟು ಬೇರೆಡೆಗೆ ಹಾರಿಬಿಡುತ್ತವೆ. ಪುಟ್ಟದೊಂದು ಅಡಗುದಾಣ ಮಾಡಿಕೊಂಡು ಅದರೊಳಗೆ ಸದ್ದಿಲ್ಲದೇ ಕುಳಿತು ಗಮನಿಸಬೇಕು. ಆದರೆ ಈ ಗೂಬೆಗಳನ್ನು ಕಳೆದೊಂದು ವರ್ಷದಿಂದ ನೋಡುತ್ತಿದ್ದರಿಂದ ಅವಕ್ಕೂ ನಮ್ಮ ಇರುವಿಕೆ ಅಭ್ಯಾಸವಾಗಿ ಹೋಗಿತ್ತು. ಇದ್ಯಾವುದೋ ಕ್ಯಾಮರಾ ಹೊತ್ತ ವಿಚಿತ್ರ ನಿರುಪದ್ರವಿ ಪ್ರಾಣಿ ಎಂದು ನಮ್ಮ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೇ ತಮ್ಮ ಪಾಡಿಗೆ ತಾವು ಇರುತ್ತಿದ್ದವು. ಹೀಗಾಗಿ ಹತ್ತಿರದಿಂದ ಗಮನಿಸುತ್ತ ನಮಗೂ ಅವುಗಳ ಬದುಕನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಿತ್ತು.

ಅಮ್ಮ ಗೂಬೆ ಮರದ ಮೇಲೆ ತಲೆ ತಿರುಗಿಸುತ್ತ ನೆಲ ದಿಟ್ಟಿಸುತ್ತ ಕುಳಿತ ಸ್ವಲ್ಪ ಹೊತ್ತಿನಲ್ಲೇ ದೂರದಲ್ಲಿ ಬಾಬೂಲಾಲನ ಕೂಗು ಕೇಳಿತು. “ಬೇಗ ಓಡಿ ಬನ್ನಿ” ಎಂದೇನೋ ಹೇಳಿದ್ದು ಕೇಳಿದಂತಾಗಿ, ಏನೋ ಎಡವಟ್ಟು ಮಾಡಿಕೊಂಡಿರಬೇಕೆಂದು ಭಾವಿಸಿ ಎಲ್ಲ ಬಿಟ್ಟು ಅವನಿರುವಲ್ಲಿಗೆ ಓಡಿದೆ. ಬಾಬೂಲಾಲ ಗೂಬೆಗೂಡಿನ ಮರದ ಪೊಟರೆಯತ್ತ ಬೆರೆಳುತೋರಿದ. ಅಲ್ಲೊಂದು ಹೆಬ್ಬಾವು! ಮರವನ್ನು ಸುತ್ತಿದ್ದ ಹೆಬ್ಬಾವು ಪೊಟರೆಯೊಳಕ್ಕೆ ಬಾಯಿಡಲು ಹವಣಿಸುತ್ತಿದೆ. ಒಳಗೆ ಮೂರು ಅಳಿವಿನಂಚಿನ ಹಕ್ಕಿ ಮರಿಗಳು. ಬಾಬೂಲಾಲ “ಸಾರ್… ಕಲ್ಲು ಹೊಡೆದು ಓಡಿಸಲಾ” ಎನ್ನುತ್ತ ಸುತ್ತಮುತ್ತ ಸೂಕ್ತ ಗಾತ್ರದ ಕಲ್ಲಿಗೆ ಹುಡುಕಾಡತೊಡಗಿದ. ನನಗೆ ಧರ್ಮ ಸಂಕಟ. ಒಂದೆಡೆ ಅಳಿವಿನಂಚಿನ ಜೀವಿಯ ಭವಿಷ್ಯದ ಆಶಾಕಿರಣವಾದ ಮೂರು ಮರಿಹಕ್ಕಿಗಳು. ಮತ್ತೊಂದೆಡೆ ಪ್ರಕೃತಿ ಸಹಜವಾಗಿ ಹಸಿದ ಹಾವು. ಏನೂ ಮಾಡದೇ ಹಾವು ಆ ಹಕ್ಕಿ ಮರಿಗಳನ್ನು ನುಂಗಲು ಬಿಡಲೇ ಅಥವಾ ಮಧ್ಯ ಪ್ರವೇಶಿಸಿ ಅದರ ಊಟವನ್ನು ಕಸಿದುಕೊಳ್ಳಲೇ? ವಿಚಿತ್ರ ಸಂದಿಗ್ಧ ಪರಿಸ್ಥಿತಿ. ಅದು ಅಳಿವಿನಂಚಿನ ಹಕ್ಕಿಯೆಂದು ಹೆಬ್ಬಾವಿಗೇನು ಗೊತ್ತು ಪಾಪ. ಹಸಿದ ಹೊಟ್ಟೆಯನ್ನು ತಣಿಸಿಕೊಳ್ಳಲು ಅದೂ ಸಾಕಷ್ಟು ಕಷ್ಟಪಟ್ಟು ಅಲ್ಲಿಯವರೆಗೆ ಹೋಗಿದೆ. ನಾನೀಗ ಮಧ್ಯ ಪ್ರವೇಶಿಸುವುದು ಪ್ರಕೃತಿ ನಿಯಮಕ್ಕೆ ವಿರುದ್ಧವೇ? ದ್ವಂದ್ವದಲ್ಲೇ ಬಾಬೂಲಾಲನನ್ನು ತಡೆದೆ. ವಿಧಿಯು ಅದೇನು ಆಟವನ್ನು ಅಡಗಿಸಿಟ್ಟಿದೆಯೋ ನೋಡೋಣ ಎಂದು ಸುಮ್ಮನೆ ಕುಳಿತೆವು. ಅಷ್ಟು ದಪ್ಪದ ಹೆಬ್ಬಾವು ಪುಟ್ಟ ಪೊಟರೆಯೊಳಕ್ಕೆ ಬಾಯಿಟ್ಟು ಹಕ್ಕಿಮರಿಗಳನ್ನು ಹೊರತೆಗೆಯಲು ಆಗುವುದಿಲ್ಲವೇನೋ ಎಂಬ ಸಣ್ಣ ಆಶಾಕಿರಣವಿತ್ತು. ತುಸು ಸಮಯ ಅತ್ತಿತ್ತ ಸುಳಿದು ಹೆಬ್ಬಾವು ತನ್ನ ದೇಹವನ್ನು ಕುಗ್ಗಿಸಿಕೊಂಡು ಪೊಟರೆಯೊಳಕ್ಕೆ ಬಾಯಿಟ್ಟಿತು. ಒಂದರ ಹಿಂದೆ ಒಂದರಂತೆ ಮೂರೂ ಮರಿಹಕ್ಕಿಗಳು ಹೆಬ್ಬಾವಿನ ಹೊಟ್ಟೆ ಸೇರಿದವು. ಗೂಡು ಖಾಲಿ ಮಾಡಿದ ಹಾವು ಸರಸರನೆ ಮರವಿಳಿದು ಬೇರೆಡೆಗೆ ಹೊಯಿತು.

ಮಾತಿಲ್ಲದೇ ನನ್ನ ಜೊತೆ ಇದನ್ನೆಲ್ಲ ನೋಡುತ್ತ ಕುಳಿತಿದ್ದ ಬಾಬೂಲಾಲತ್ತ ತಿರುಗಿದೆ. ಅವನ ಕಣ್ಣಂಚಲ್ಲಿ ನೀರು. ಇಷ್ಟು ದಿನ ಹಿಂದೆ ಬಿದ್ದು ದಿನವೂ ನೋಡುತ್ತಿದ್ದ ಗೂಬೆಯ ಮರಿಗಳು ಇನ್ನಿಲ್ಲ. “ನೀವು ಬೇಡ ಎನ್ನದಿದ್ದರೆ ಹಾವನ್ನು ಹೊಡೆದು ಕೊಂದೇ ಬಿಡುತ್ತಿದ್ದೆ” ಎಂದು ಕೋಪದಿಂದ ನನ್ನತ್ತ ನೋಡಿದ. ಪ್ರಕೃತಿಯಲ್ಲಿ ಹಕ್ಕಿಗಿದ್ದಷ್ಟೇ ಬದುಕುವ ಹಕ್ಕು ಅದನ್ನು ತಿನ್ನುವ ಹಾವಿಗೂ ಇದೆ ಎಂದು ಇವನಿಗೆ ಹೇಗೆ ಅರ್ಥ ಮಾಡಿಸಲಿ?

ಸ್ವಲ್ಪ ಹೊತ್ತಿನ ಬಳಿಕ ಅಮ್ಮ ಗೂಬೆ ತನ್ನ ಗೂಡಿನ ಬಳಿ ಬಂತು. ಈ ಬಾರಿ ಅದರ ಕೊಕ್ಕಿನ ಅಂಚಿನಲ್ಲಿ ಪುಟ್ಟದೊಂದು ಇಲಿಮರಿ ನೇತಾಡುತ್ತಿತ್ತು. ಅಮ್ಮ ಹಕ್ಕಿ ತನ್ನ ಮರಿಗಳಿಗೆ ಆಹಾರವಾಗಿ ಇಲಿ ಮರಿಯೊಂದನ್ನು ಕೊಂದು ತಂದಿತ್ತು. ತನ್ನ ಗೂಡಿನೊಳಕ್ಕೆ ಇಣುಕಿ ನೋಡಿತು, ಅತ್ತಿತ್ತ ಹುಡುಕಿತು. ಮರಿಗಳು ಕಾಣದೇ ಕಕ್ಕಾಬಿಕ್ಕಿಯಾಗಿ ಕೊಕ್ಕಿನಲ್ಲಿದ್ದ ಇಲಿಯನ್ನು ಕಾಲಿಗೆ ದಾಟಿಸಿ ಮರಿಗಳನ್ನು ಮೆಲುದನಿಯಲ್ಲಿ ಕರೆಯತೊಡಗಿತು. ಬರಬರುತ್ತ ಅಮ್ಮ ಹಕ್ಕಿಯ ದನಿ ಜೋರಾಗತೊಡಗಿತು. ಮಕ್ಕಳ ಸುಳಿವಿಲ್ಲ! ಮರದ ಕೆಳಗೆ ಬೈನಾಕ್ಯುಲರ್ ಹಿಡಿದು ನಿಂತ ನಾವಿಬ್ಬರು ಮನುಷ್ಯರು. ನಮ್ಮನ್ನೇ ಕಣ್ಣಲ್ಲಿ ಕಣ್ಣಿಟ್ಟು ದಿಟ್ಟಿಸುತ್ತ ಹೃದಯ ವಿದ್ರಾವಕವಾಗಿ ರೋಧಿಸತೊಡಗಿತು. ನಾವೇ ಅದರ ಮರಿಗಳಿಗೆ ಏನಾದರೂ ಮಾಡಿದೆವೆಂದು ಅಮ್ಮ ಗೂಬೆ ಭಾವಿಸಿತೇ? ಇವರನ್ನು ನಿರುಪದ್ರವಿಗಳೆಂದು ನಂಬಿದ್ದೇ ತಪ್ಪಾಯಿತೆಂದು ಅದಕ್ಕೆ ಅನಿಸಿರಬಹುದೇ? ಹಾವು ಕಂಡರೂ ಏನೂ ಮಾಡದ ನಾನೇ ನಿಜಕ್ಕೂ ಅಪರಾಧಿಯೇ? ಒಂದೇ ಸಮನೆ ಕೂಗುತ್ತ, ಮರಿಗಳನ್ನು ಹುಡುಕುತ್ತಿದ್ದ ಗೂಬೆಯ ವೇದನೆ ಕೇಳಲಾಗದೇ, ಅದರ ಕಣ್ಣಲ್ಲಿ ಕಣ್ಣಿಟ್ಟು ನೋಡಲಾಗದೇ ನಾವು ಅಲ್ಲಿಂದ ಹೊರಟೆವು.