ದಕ್ಷಿಣ ಕನ್ನಡ ಮತ್ತು ಉಡುಪಿ ಪ್ರದೇಶದ ನೇಕಾರರು ನೇಯುವ ಈ ಸೀರೆಯ ವಿನ್ಯಾಸ ಅಪರೂಪವಾದುದು. ತಿಳಿ ಬಣ್ಣದ ಮೈ ಮತ್ತು ಗಾಢ ಬಣ್ಣದ ಅಂಚುಸೆರಗಿನ ಸೀರೆಯು ಕರಾವಳಿಯ ಹವಾಮಾನಕ್ಕೆ ಕ್ಷೇಮಭಾವ ಕೊಡುವಂತಹುದು. ಪರಿಸರಕ್ಕೆ ಧಕ್ಕೆ ಮಾಡದ ಸಾವಯವ ಉಡುಪು ಮಮತಾ ರೈ ಅವರಿಗೆ ಇಷ್ಟವಾಗಿರುವುದು ಕೇವಲ ವಿನ್ಯಾಸದ ಕಾರಣದಿಂದಲ್ಲ.ಬದುಕು ಪರಿಸರಕ್ಕೆ ಹತ್ತಿರವಾಗಿರಬೇಕು ಎಂಬಅವರ ಆಶಯವೇ ಅವರ ಈ ಕಾಯಕಕ್ಕೆ ಪ್ರೇರಣೆ. ಸೀರೆಯ ಪಯಣವೊಂದರ ಕುರಿತು ಬರೆದಿದ್ದಾರೆ ಕೋಡಿಬೆಟ್ಟು ರಾಜಲಕ್ಷ್ಮಿ
ಸೀರೆಯೊಂದರ ನೇಯ್ಗೆಯೆನ್ನುವುದು ಎಷ್ಟೊಂದು ಸುಂದರ ಕೌಶಲ ಎನ್ನುವುದು ಅರಿವಾಗಬೇಕಿದ್ದರೆ, ಯಂತ್ರವನ್ನು ಅವಲಂಬಿಸದೇ, ಕೈಗಳಿಂದಲೇ ನೇಯ್ಗೆ ಮಾಡಬೇಕು. ಹಾಗೆ ಯೋಚಿಸಲು ಶುರು ಮಾಡಿದರೆ ಈ ಜಗವೇ ದೇವರ ನೇಯ್ಗೆಯಂತೆ ತೋರುವುದೇನೋ. ಬಣ್ಣಗಳ ಗಾಢತೆ, ಸರಳತೆ, ಅಂಚಿನ ಹೆಣಿಗೆ, ಅಲ್ಲೊಂದು ಬುಟ್ಟ, ಇಲ್ಲೊಂದು ಚಿತ್ರ.. ಯಾವ ಮೈಬಣ್ಣದ ಸೀರೆಗೆ ಯಾವ ಬುಟ್ಟಾ ಹೊಂದೀತು ? ಆ ಅಂಚಿನಲ್ಲಿ ಎಂಥ ಗೀರುಗಳನ್ನು ಹೆಣೆದರೆ ಚಂದವಾದೀತು.. ಹೀಗೆ ನೇಕಾರನೆಂದರೆ ಅವನು ನಿರಂತರ ಸೌಂದರ್ಯದ ಹುಡುಕಾಟದಲ್ಲಿರುವ ವ್ಯಕ್ತಿಯೆಂದರೆ ಹೆಚ್ಚು ಸರಿ.
ಕಿನ್ನಿಗೋಳಿಯ ತಾಳಿಪಾಡಿಯಲ್ಲಿರುವ ನೇಕಾರ ಸಂಘದಲ್ಲಿ ಸೀರೆ ನೇಯ್ಗೆಯ ಮಗ್ಗವೊಂದರ ಎದುರು ಕುಳಿತ ಶಾರದಾ ಹೇಳುತ್ತಾರೆ, ‘ ಎಲ್ಲ ರಂಗೋಲಿಯನ್ನು ಸೂಕ್ಷ್ಮವಾಗಿ ನೋಡುತ್ತೇನೆ, ಅದರಿಂದ ಒಂದು ಬಿಡಿ ಭಾಗವನ್ನು ಎತ್ತಿಕೊಂಡು ಬುಟ್ಟಾಗಳನ್ನು ಇಲ್ಲಿ ಬರೆದುಕೊಂಡಿದ್ದೇನೆ ನೋಡಿ’, ಎಂದು ಗ್ರಾಫ್ ಪುಸ್ತಕ ತೋರಿಸುತ್ತಾರೆ.
ಬಾಲ್ಯದಲ್ಲಿ ನೇಕಾರಿಕೆ ಕಲಿತು, ಮತ್ತೆ ಆ ವೃತ್ತಿಯನ್ನು ಕೈಬಿಟ್ಟ ಅವರು ಇತ್ತೀಚೆಗೆ ನೇಕಾರಿಕೆಗೆ ಮರಳಿ ಬಂದವರು. ನೇಕಾರಿಕೆ ವೃತ್ತಿಯು ತಮ್ಮಲ್ಲಿ ಆತ್ಮವಿಶ್ವಾಸವನ್ನು ಮರಳಿ ಮೂಡಿಸಿದ ಬಗೆಯನ್ನು ಅವರು ತಮ್ಮದೇ ಮಾತುಗಳಲ್ಲಿ ಹೇಳಬಲ್ಲರು. ಈ ಜಗತ್ತಿನಲ್ಲಿರುವ ಸೌಂದರ್ಯವನ್ನೇ ಹುಡುಕುತ್ತ ಸಾಗುವುದು ಒಂದು ವೃತ್ತಿಯಾದರೆ ಅದು ಸಕಾರಾತ್ಮಕ ಚಟುವಟಿಕೆಯಲ್ಲದೆ ಮತ್ತೇನು?
ನೇಕಾರಿಕೆಯನ್ನು ಬಿಟ್ಟು ಬೀಡಿ ಕೆಲಸ, ಗೋಡಂಬಿ ಸಿಪ್ಪೆ ಸುಲಿಯುವ ಕೆಲಸ, ಕೂಲಿ ಕೆಲಸ, ಹೋಟೆಲ್ ಗಳಲ್ಲಿ ಕೆಲಸಗಳನ್ನು ಮಾಡುತ್ತಿದ್ದವರು ಈಗ ನೇಕಾರಿಕೆಗೆ ಮರಳಿದ್ದಾರೆ. ಅವರೆಲ್ಲರ ಮುಖದಲ್ಲಿ ಈಗ ಆತ್ಮವಿಶ್ವಾಸದ ಕಳೆಯಿದೆ. ವ್ಯಕ್ತಿಯ ಕಾಲು, ಕೈಗಳು, ಬುದ್ಧಿಗೆ ಕೆಲಸ ಕೊಡುವ ಕಾಯಕ ನೇಕಾರಿಕೆ. ಇಲ್ಲಿ ನೂಲಿನ ಹಾಸು ಹೊಕ್ಕಿನ ಗಣಿತವು ಗೊತ್ತಿರಬೇಕು. ಯಾವ ನೂಲು ಎಲ್ಲಿ ಹಾದು ಹೋದರೆ ಚೆಂದವಾದೀತು ಎಂಬ ಸೌಂದರ್ಯ ಲಹರಿ ತಿಳಿದಿರಬೇಕು. ಕೈ ಕಾಲುಗಳ ನಿರಂತರ ಚಲನೆಯಲ್ಲಿ ಶ್ರಮವು ದಣಿವನ್ನುಕೊಡಬಹುದು. ಆದರೆ ತನ್ನ ನಿರೀಕ್ಷೆಯ ಕಾಲ್ಪನಿಕ ವಿನ್ಯಾಸ ಸೃಷ್ಟಿಯಾದ ಹೃದಯದಲ್ಲಿ ಚಿಮ್ಮುವ ಸಂತೋಷವೇ ಬದುಕಿನ ನಿಜವಾದ ಸಾರ್ಥಕ ಕ್ಷಣ ಅಲ್ಲವೇ. ಅಂತಹುದೊಂದು ಕ್ಷಣವನ್ನು ಪಡೆಯುವ ಅವಕಾಶ ಇಲ್ಲಿದೆ.
ಕದಿಕೆ ಟ್ರಸ್ಟ್ ಮತ್ತು ತಾಳಿಪಾಡಿ ನೇಕಾರರ ಸಂಘದ ಪ್ರಯತ್ನದಿಂದ ಅನೇಕರು ನೇಕಾರಿಕೆಗೆ ಮರಳುವಂತಾಯಿತು. ಅದಕ್ಕೆ ಕಾರಣರಾದವರು ಮಮತಾ ರೈ.
ದಕ್ಷಿಣ ಕನ್ನಡ ಮತ್ತು ಉಡುಪಿ ಪ್ರದೇಶದ ನೇಕಾರರು ನೇಯುವ ಈ ಸೀರೆಯ ವಿನ್ಯಾಸ ಅಪರೂಪವಾದುದು. ತಿಳಿ ಬಣ್ಣದ ಮೈ ಮತ್ತು ಗಾಢ ಬಣ್ಣದ ಅಂಚುಸೆರಗಿನ ಸೀರೆಯು ಕರಾವಳಿಯ ಹವಾಮಾನಕ್ಕೆ ಕ್ಷೇಮಭಾವ ಕೊಡುವಂತಹುದು. ಪರಿಸರಕ್ಕೆ ಧಕ್ಕೆ ಮಾಡದ ಸಾವಯವ ಉಡುಪು ಮಮತಾ ರೈ ಅವರಿಗೆ ಇಷ್ಟವಾಗಿರುವುದು ಕೇವಲ ವಿನ್ಯಾಸದ ಕಾರಣದಿಂದಲ್ಲ.ಬದುಕು ಪರಿಸರಕ್ಕೆ ಹತ್ತಿರವಾಗಿರಬೇಕು ಎಂಬಅವರ ಆಶಯವೇ ಅವರ ಈ ಕಾಯಕಕ್ಕೆ ಪ್ರೇರಣೆ.
ನಮ್ಮ ಜೀವನ ಶೈಲಿಯಿಂದಾಗಿ ಪರಿಸರಕ್ಕೆ ಎಷ್ಟೊಂದುಹಾನಿಯಾಗುತ್ತಿದೆ, ಒತ್ತಡ ಬೀಳುತ್ತಿದೆ ಎಂಬ ಅರಿವು ಮೂಡುತ್ತಿದ್ದಂತೆಯೇ ಮಮತಾ ರೈ ಅವರು ತಮ್ಮ ಜೀವನ ಶೈಲಿಯನ್ನೇ ಬದಲಾಯಿಸಿಕೊಂಡಿದ್ದರು. ಸ್ಮಾರ್ಟ್ ಪೋನ್ ನಿಂದ ದೂರ ಉಳಿದರು, ಉಪನ್ಯಾಸಕಿ ಕೆಲಸದಿಂದ ಹಿಂದೆ ಸರಿದರು. 2015ರಲ್ಲಿ ಮಂಗಳೂರು ಮಹಾನಗರದಿಂದ ನಿಸರ್ಗದ ಮಡಿಲು ಕಾರ್ಕಳಕ್ಕೆ ತೆರಳಿ ಬದುಕು ಶುರು ಮಾಡಿದರು. ಅವರ ಪತಿ ಬಿ.ಸಿ. ಶೆಟ್ಟಿಯವರೂ ಇದೇ ಆಲೋಚನೆಗೆ ಸಹಮತ ವ್ಯಕ್ತಪಡಿಸಿದ್ದರು. ಖಾದಿ ಬಟ್ಟೆಗಳನ್ನು ತೊಡುತ್ತ, ಕೈತೋಟ, ಕಾಂಪೋಸ್ಟ್ ತಯಾರಿಕೆ, , ನೀರು, ಇಂಧನಗಳ ಉಳಿತಾಯ , ಕಾಡು ಗಿಡ – ಉತ್ಪನ್ನಗಳ ಬಳಕೆ ಮುಂತಾದ ಕೆಲಸಗಳಲ್ಲಿ ತೊಡಗಿಸಿಕೊಂಡರು. ತಮ್ಮ ಜೀವನ ಶೈಲಿಯು ಭೂಮಿಗೆ ಹೊರೆಯಾಗಬಾರದು ಎಂಬ ದೃಷ್ಟಿಯಿಂದ ತಮ್ಮ ಬದುಕಿನಲ್ಲಿ ಸಾವಯವ ಬದಲಾವಣೆ ಮಾಡಿಕೊಂಡರು.
ಇಂತಹ ಸಂದರ್ಭದಲ್ಲಿ ಅವರಿಗೆ ಉಡುಪಿ ಸೀರೆಯ ಮಹತ್ವದ ಪರಿಚಯವಾಗಿತ್ತು. ಪರಿಸರ ಸ್ನೇಹಿ ಆಗಿರುವ ಈ ಸೀರೆಯ ನೇಯ್ಗೆ ಕೌಶಲವು ಬಹುತೇಕ ಕೊನೆಯ ತಲೆಮಾರಿನ ನೇಕಾರರ ಕೈಯಲ್ಲಿದೆ ಎಂಬುದು ಗೊತ್ತಾಗಿತ್ತು. ಎಷ್ಟೋ ವರ್ಷಗಳಿಂದ ಮನುಷ್ಯ ಕರಗತ ಮಾಡಿಕೊಂಡಿರುವ ಒಂದು ಕೌಶಲವು ಮರೆಯಾಗುವುದು ಎಂಬ ಕಲ್ಪನೆ ಅವರಲ್ಲಿ ಬೇಸರವನ್ನು ತರಿಸಿತು. ಇದೇ ಬೇಸರವೇ ಮುಂದಿನ ಅವರ ಕೆಲಸಗಳಿಗೆ ಪ್ರೇರಣೆಯೂ ಆಯಿತು.
ನೇಕಾರಿಕೆ ವೃತ್ತಿಯು ತಮ್ಮಲ್ಲಿ ಆತ್ಮವಿಶ್ವಾಸವನ್ನು ಮರಳಿ ಮೂಡಿಸಿದ ಬಗೆಯನ್ನು ಅವರು ತಮ್ಮದೇ ಮಾತುಗಳಲ್ಲಿ ಹೇಳಬಲ್ಲರು. ಈ ಜಗತ್ತಿನಲ್ಲಿರುವ ಸೌಂದರ್ಯವನ್ನೇ ಹುಡುಕುತ್ತ ಸಾಗುವುದು ಒಂದು ವೃತ್ತಿಯಾದರೆ ಅದು ಸಕಾರಾತ್ಮಕ ಚಟುವಟಿಕೆಯಲ್ಲದೆ ಮತ್ತೇನು?
ಕರಾವಳಿ ಜಿಲ್ಲೆಗಳಲ್ಲಿರು ನೇಕಾರರ ಮನೆಗಳಿಗೆ, ಸಂಘಗಳಿಗೆ ಭೇಟಿ ನೀಡಿ ಅಧ್ಯಯನ ಮಾಡಿದರು. ಮಹಾತ್ಮ ಗಾಂಧಿಜಿಯವರ ಸಹಕಾರ ಚಳುವಳಿಯಿಂದ ಪ್ರೇರಿತರಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ನೇಕಾರರು ತಮ್ಮದೇ ನೇಕಾರರ ಸಂಘಗಳನ್ನು ಸ್ಥಾಪಿಸಿ ಅದರ ಸದಸ್ಯರಾಗಿ ಕೆಲಸ ಮಾಡುತ್ತಿದ್ದರು. ಹೀಗೆ ಸ್ಥಾಪಿಸಿದ ಒಟ್ಟು ಎಂಟು ನೇಕಾರರ ಸಂಘದಲ್ಲಿ ಕೇವಲ 5 ನೇಕಾರರ ಸಂಘಗಳು ಮಾತ್ರ ಉಳಿದಿತ್ತು. 2018 ರಲ್ಲಿ ಎರಡು ಜಿಲ್ಲೆಗಳಲ್ಲಿ ಕೇವಲ 45 ಮಂದಿ ವಯಸ್ಸಾದ ನೇಕಾರರು ನೇಕಾರಿಕೆಯಲ್ಲಿ ಉಳಿದಿದ್ದರು. ಐವತ್ತರ ಕೆಳಗಿನ ಒಬ್ಬ ನೇಕಾರರೂ ಇರಲಿಲ್ಲ. ಈ ಹಿರಿಯರು ಕೇವಲ ತಮ್ಮ ವೃತ್ತಿಯ ಮೇಲಿನ ಪ್ರೀತಿಯಿಂದ ಈ ಕಾಯಕದಲ್ಲಿ ಉಳಿದಿದ್ದರೆ ಅವರ ಮಕ್ಕಳಾರೂ ನೇಕಾರಿಕೆಯ್ನನೇ ಕಲಿತಿರಲಿಲ್ಲ.
ಹಿರಿಯರ ಬಳಿಯಿದ್ದ ಕೌಶಲವನ್ನು ಹೊಸತಲೆಮಾರಿಗೆ ದಾಟಿಸದೇ ಇದ್ದರೆ ಮತ್ತೆ ಅದೆಂದೂ ಕಾಣಸಿಗುತ್ತಿರಲಿಲ್ಲ. ಇದನ್ನು ಮನಗಂಡು ಮಮತಾ ರೈ ಬಿ.ಸಿ. ಶೆಟ್ಟಿ ದಂಪತಿ ಹಾಗೂ ಸಮಾನ ಮ ನಸ್ಕರ ಜೊತೆಗೂಡಿ ಕದಿಕೆ ಟ್ರಸ್ಟ್ ರೂಪಿಸಿದರು. 2018ರಲ್ಲಿ ಈ ಟ್ರಸ್ಟ್ ಮೂಲಕ ತಾಳಿಪಾಡಿ ನೇಕಾರ ಸಂಘವನ್ನು ಕೇಂದ್ರವಾಗಿಟ್ಟುಕೊಂಡು ನೇಕಾರಿಕೆ ಕ್ಷೇತ್ರದಲ್ಲಿ ಕೆಲಸ ಶುರು ಮಾಡಿದರು. ತಾಳಿಪಾಡಿ ನೇಕಾರರ ಸಂಘದ ವ್ಯವಸ್ಥಾಪಕ ನಿರ್ದೇಶಕರಾದ ಮಾಧವ ಶೆಟ್ಟಿಗಾರ, ಅಧ್ಯಕ್ಷ ಆನಂದ ಶೆಟ್ಟಿಗಾರ್ ಕೂಡ ಈ ಪುನರುಜ್ಜೀವನ ಕೆಲಸಕ್ಕೆ ಉತ್ಸಾಹದಿಂದ ಕೈ ಜೋಡಿಸಿದ್ದಾರೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ನೇಕಾರರು ನೇಯುವ ಉಡುಪಿ ಸೀರೆ ಪ್ರಾದೇಶಿಕ ವಿಶೇಷತೆ ( GI ) ಮಾನ್ಯತೆ ಪಡೆದ ಸೀರೆ. ಈ ಸೀರೆಯನ್ನು ಬಾಸೆಲ್ ಮಿಷನ್ ಪರಿಚಯಿಸಿದ ಮಲಬಾರ್ ಫ್ರೇಮ್ ಮಗ್ಗದಲ್ಲಿ ಚೌಕುಳಿ ಅಥವಾ ಸಾದಾ ವಿನ್ಯಾಸದಲ್ಲಿ ಒಂದೆಳೆಯ ಹತ್ತಿಯ ನೂಲನ್ನು ಬಳಸಿ ನೇಯಲಾಗುತ್ತದೆ. ಬಾಸೆಲ್ ಮಿಷನ್ ಈ ತಂತ್ರವನ್ನು ಪರಿಚಯಿಸುವ ಮುನ್ನಡ ಸ್ಥಳೀಯವಾಗಿ ಗುಳಿ ಮಗ್ಗಗಳನ್ನು ಬಳಸಲಾಗುತ್ತಿತ್ತು. ಪ್ರಸ್ತುತ ಪ್ರಚಲಿತವಾಗಿ ಉಳಿದುಕೊಂಡಿರುವ ಮಗ್ಗದ ಕೌಶಲವನ್ನು ಇನ್ನಷ್ಟು ಜನರಿಗೆ ಕಲಿಸುವ ಉದ್ದೇಶದಿಂದ ನೇಕಾರಿಕೆ ತರಬೇತಿ ಕಾರ್ಯಕ್ರಮವನ್ನು ಕಲಿಕೆ ಟ್ರಸ್ಟ್, ನಬಾರ್ಡ್ ಅನುದಾನದ ಸಹಾಯದೊಂದಿಗೆ ಆಯೋಜಿಸಲಾಯಿತು. ಬಹಳ ಹಿಂಜರಿಕೆಯಿಂದಲೇ ನೇಕಾರರು ಈ ತರಬೇತಿಯಲ್ಲಿ ಭಾಗವಹಿಸಿದರು. ತರಬೇತಿ ಪಡೆಯುವುದಕ್ಕೆ ಶಿಷ್ಯವೇತನ ನೀಡಿದ್ದರಿಂದ ಹಿರಿಯ ನೇಕಾರರು ತರಬೇತಿಯಲ್ಲಿ ಭಾಗವಹಿಸುವಂತಾಯಿತು. ನೇಕಾರಿಕೆ ಮೇಲಿನ ಪ್ರೀತಿಯಿಂದಷ್ಟೇ ಕೆಲಸ ಮಾಡುತ್ತಿದ್ದ ಮೋಹಿನಿ ಶೆಟ್ಟಿಗಾರ್ ಈ ತರಬೇತಿಯಲ್ಲಿ, ತರಬೇತುದಾರರಾಗಿ ಭಾಗವಹಿಸಿದ್ದರು. ಈಗ ಅವರ ಮಗಳು ಯಶೋಧ ಕೂಡ ಇದೇ ವೃತ್ತಿಯನ್ನು ನೆಚ್ಚಿಕೊಂಡಿದ್ದಾರೆ ಎಂಬುದು ‘ಬದಲಾವಣೆ’ಯ ಒಂದು ಸಂಕೇತ.
ದಕ್ಷಿಣ ಕನ್ನಡ ಜಿಲ್ಲೆಯ ಕಿನ್ನಿಗೋಳಿ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ತಾಳಿಪಾಡಿ ನೇಕಾರ ಭವನದಲ್ಲಿ ನೇಕಾರಿಕೆ ಕೆಲಸವನ್ನು ಎಂಟು ಮಂದಿ ನಿರ್ವಹಿಸುತ್ತಿದ್ದರು. ಇಬ್ಬರು ಸಂಘದ ಭವನದಲ್ಲಿ ಕೆಲಸ ನಿರ್ವಹಿಸುತ್ತಿದ್ದರೆ, ಆರು ಮಂದಿ ತಮ್ಮ ಮನೆಗಳಲ್ಲಿ ಮಗ್ಗ ಇಟ್ಟುಕೊಂಡು ಕೆಲಸ ಮಾಡುತ್ತಿದ್ದರು. ಆದರೆ ಇಂದು 32 ಮಂದಿ ನೇಕಾರರು ನೇಕಾರ ಭವನದಲ್ಲಿ ಕೆಲಸ ಮಾಡುತ್ತಿದ್ದಾರೆ. ಮಗ್ಗಗಳ ಸಂಖ್ಯೆ ಹೆಚ್ಚಾಗಿದೆ. ಸೀರೆಗಳ ವಿನ್ಯಾಸಗಳು ಹೆಚ್ಚಾಗಿವೆ. ಆರಂಭದಲ್ಲಿ ಮಮತಾ ರೈ-ಬಿ.ಸಿ. ಶೆಟ್ಟಿ ದಂಪತಿಗಳು ಚೀಲಗಳಲ್ಲಿ ಸೀರಗಳನ್ನು ತುಂಬಿಸಿಕೊಂಡು, ಸಾವಯವ ಸಂತೆಗಳಲ್ಲಿ, ವಸ್ತು ಪ್ರದರ್ಶನಗಳಲ್ಲಿ ಮಳಿಗೆಗಳಲ್ಲಿ ಮಾರಾಟ ಮಾಡಿದ್ದುಂಟು. ಈಗ ಆನ್ ಲೈನ್ ವೇದಿಕೆಯಲ್ಲಿ ಮಾರಾಟದ ಪ್ರಮಾಣ ಹೆಚ್ಚಾಗಿದೆ. ಹೊರಗಿನ ಜಿಲ್ಲೆಗಳಲ್ಲಿ ಈ ಸೀರೆಯ ಕುರಿತು ಮಹಿಳೆಯರು ಆಸಕ್ತಿ ತಾಳುತ್ತಿದ್ದಾರೆ. ಸೀರೆಗೆ ಉತ್ತಮ ಬೆಲೆ ಸಿಗುತ್ತಿದೆ. ಅದರ ಲಾಭವು ನೇಕಾರರನ್ನು ತಲುಪುತ್ತಿದೆ. ಈ ದುಡಿಮೆಯನ್ನು ಅವಲಂಬಿಸಿ ಜೀವನ ನಿರ್ವಹಿಸಬಹುದು ಎಂಬ ವಿಶ್ವಾಸ ನೇಕಾರರ ಮನದಲ್ಲಿ ಮೂಡಿದೆ.
ಹಾಗೆಂದು ಸೀರೆ ತಯಾರಿಕೆಯ ಒಟ್ಟು ಪ್ರಕ್ರಿಯೆ ಸರಳವಾದ್ದೇನೂ ಅಲ್ಲ, ನೂಲಿನ ಲಟ್ಟಿಗಳನ್ನು ತರಿಸಿಕೊಂಡು, ಅದಕ್ಕೆ ಬಣ್ಣವನ್ನು ಹಾಕಿ, ನೂಲನ್ನು ಪ್ರತ್ಯೇಕವಾಗಿ ರಾಟೆಗಳಿಗೆ ಸುತ್ತಿ, ಮಗ್ಗದಲ್ಲಿ ನೇಯ್ಗೆ ಮಾಡಿದಾಗ ಒಂದು ಸೀರೆಯು ಸಿದ್ಧವಾಗುವುದು. ಆ ಬಳಿಕ ಅಂಗಡಿಗಳಲ್ಲಿ ಅಥವಾ ಪ್ರದರ್ಶನಗಳಲ್ಲಿ ಆನ್ ಲೈನ್ ವೇದಿಕೆಗಳಲ್ಲಿ ಮಾರಾಟವಾಗುವುದು.
ಈ ದೀರ್ಘ ಪ್ರಕ್ರಿಯೆಯಲ್ಲಿ ನೇಕಾರರಿಗೆ ಬೇಕಾಗುವ ಸೌಕರ್ಯಗಳನ್ನು ಕಲ್ಪಿಸುವುದು, ಅವರ ಜೀವನದ ಕಷ್ಟಕಾಲದಲ್ಲಿ ಜೊತೆಯಾಗಿ ನಿಲ್ಲುವುದು, ಅವರ ಬದುಕಿನ ಬಿಕ್ಕಟ್ಟಿನ ಸಂದರ್ಭದಲ್ಲಿ ಸಾಧ್ಯವಾದ ಆರ್ಥಿಕ ನೆರವು ದೊರೆಯುವಂತೆ ಮಾಡುವುದು, ಕೌಶಲವನ್ನು ಇನ್ನಷ್ಟು ಫೈನ್ ಟ್ಯೂನ್ ಮಾಡುವ ದೃಷ್ಟಿಯಿಂದ ಪೂರಕ ತರಬೇತಿಗಳನ್ನು ಆಯೋಜಿಸುವುದು, ಜೀವನ ಮೌಲ್ಯ, ಜೀವನ ಸುಧಾರಣೆಗೆ ಬೇಕಾದ ತರಬೇತಿಗಳನ್ನು ಆಯೋಜಿಸುವುದು.. ಹೀಗೆ ಈ ಕಾಯಕದಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳುವ ಮಮತಾ ರೈ ಯಾವುದೇ ಸಂಭಾವನೆ ಪಡೆಯುವುದಿಲ್ಲ. ವಿದ್ಯುತ್, ಅಥವಾ ಇತರ ತಂತ್ರಜ್ಞಾನದ ಅಗತ್ಯವಿಲ್ಲದೆ, ಮನುಷ್ಯ ಶ್ರಮದಿಂದಾಗಿ ಬಟ್ಟೆಯನ್ನು ಸಿದ್ಧಪಡಿಸುವ ಈ ಕಾಯಕವು ಉಳಿಯಬೇಕು, ಮಾವನ ಶ್ರಮದ ಈ ವಿಸ್ಮಯವು ಉಳಿಯಬೇಕು ಎಂಬುದು ಅವರ ಆಶಯ.
ಒಂದು ಸೀರೆಯನ್ನು ನೇಯಲು ಮೂರು ದಿನಗಳು ಬೇಕಾಗುತ್ತವೆ. ಒಬ್ಬ ನೇಕಾರರ ಶ್ರಮಕ್ಕೆ ನೀಡುವ ಗೌರವ ಈ ಬೆಲೆಯಾಗಿರುತ್ತದೆ. ನೇಯ್ಗೆಗಿಂತ ಮುನ್ನ ಅನೇಕ ಪೂರ್ವತಯಾರಿಯೂ ಅಗತ್ಯ. ಉಡುಪಿ ಸೀರೆ ಎನ್ನುವುದು ಒಂದು ಕೌಶಲ. ಅದು ಯಾರ ಸೊತ್ತೂ ಅಲ್ಲ. ಅದು ನಮ್ಮ ಪೂರ್ವಜರು ಕಂಡುಕೊಂಡ ಕಲೆಯಾಗಿದೆ. ಅದನ್ನು ಉಳಿಸುವುದು ಕೇವಲ ಒಂದು ಟ್ರಸ್ಟ್ ನ ಅಥವಾ ನೇಕಾರರ ಸಂಘಗಳ ಜವಾಬ್ದಾರಿಯಲ್ಲ. ಬದಲಾಗಿ ಎಲ್ಲರ ಒಳಿತಿಗಾಗಿ ಈ ಪರಿಸರ ಸ್ನೇಹಿ ಕೌಶಲವೊಂದನ್ನು ಹೊಸತಲೆಮಾರಿಗೆ ದಾಟಿಸುವ ಜವಾಬ್ದಾರಿ ನಮ್ಮದು. ಹಿಂದೆಲ್ಲ ನೇಕಾರರ ಸಮುದಾಯಕ್ಕೆ ಸೀಮಿತವಾಗಿದ್ದ ಕೌಶಲವನ್ನು ಈ ಮುಕ್ತವಾತಾವರಣದಿಂದಾಗಿ ಇಂದು ಇತರರೂ ಕಲಿಯುತ್ತಿದ್ದಾರೆ.
ನೇಯ್ದವರ ಮಾಹಿತಿ:
ನಾವು ಉಟ್ಟ ಸೀರೆಯನ್ನು ನೇಯ್ದವರು ಯಾರು ಎಂಬ ಪ್ರಶ್ನೆಗೆ ಉಡುಪಿ ಸೀರೆ ಉತ್ತರಿಸುತ್ತದೆ. ಪ್ರತೀ ಸೀರೆಯ ನೇಕಾರರ ಫೋಟೋದೊಂದಿಗೆ ಸೀರೆಯನ್ನು ಖರೀದಿಸಬಹುದು. ಇದರಿಂದ ನೇಕಾರರಿಗೂ ಪ್ರೋತ್ಸಾಹ ದೊರೆತಂತಾಗುತ್ತದೆ. ಉಡುವವರಿಗೂ ಅರಿವು ಮೂಡಿದಂತಾಗುತ್ತದೆ. ಸೀರೆಯ ನೇಕಾರಿಕೆ ಹೇಗೆ ನಡೆಯುತ್ತದೆ ಎಂಬುದನ್ನು ಮಕ್ಕಳಿಗೆ ತೋರಿಸಿ ಅಲ್ಲಿಯೇ ಸೀರೆಗಳನ್ನು, ಟವಲ್, ಬಟ್ಟೆಗಳನ್ನು ಖರೀದಿಸಿ ಬರುವುದಾದರ ಮಕ್ಕಳಿಗೆ ಅದೊಂದು ಶಿಕ್ಷಣವೂ ಹೌದಲ್ಲವೇ.
ಮಂಗಳೂರಿನವರಾದ ಕೋಡಿಬೆಟ್ಟು ರಾಜಲಕ್ಷ್ಮಿ ಪತ್ರಕರ್ತೆಯಾಗಿ ಕೆಲಸ ಮಾಡಿದವರು. ‘ಒಂದುಮುಷ್ಟಿ ನಕ್ಷತ್ರ’ ಅವರು ಬರೆದ ಕಥಾ ಸಂಕಲನ. ‘ಅಮ್ಮನ ಜೋಳಿಗೆ’ ಪ್ರಬಂಧ ಸಂಕಲನ.