ಬರಹಗಾರನಾಗಲು ಲಂಡನ್ ಗೆ ಬಂದಿಳಿದ ಜಾರ್ಜ್ ಬರ್ನಾರ್ಡ್ ಷಾ ಸರಿಯಾದ ಉದ್ಯೋಗ ಇಲ್ಲದೆ ತಾಯಿಯಿಂದ ಮತ್ತು ಆಕೆಯ ಹೊಸ ಗಂಡನಿಂದ ವಾರಕ್ಕೆ ಸಿಗುವ ಒಂದು ಪೌಂಡ್ ಹಣದ ಮೇಲೆ ಅವಲಂಬಿತನಾಗಿದ್ದ. ಮಧ್ಯಾಹ್ನಗಳನ್ನು ಬ್ರಿಟಿಷ್ ಮ್ಯೂಸಿಯಮ್‌ನ ಓದುವ ಕೋಣೆಯಲ್ಲಿ ಕಳೆಯುತ್ತಿದ್ದ. ಶಾಲೆಯಲ್ಲಿ ಯಾವುದನ್ನು ಪಡೆಯಲಾಗಲಿಲ್ಲವೋ ಲೈಬ್ರರಿಯ ಓದಿನಲ್ಲಿ ಅವನ್ನು ಓದಿ ಗಳಿಸುವ ಪ್ರಯತ್ನ ಮಾಡುತ್ತಿದ್ದ. ಕಾದಂಬರಿ ಬರೆಯಲು ಶುರು ಮಾಡಿದ. ಇನ್ನು ಸಂಜೆಯ ಹೊತ್ತಿಗೆ ಉಪನ್ಯಾಸಗಳು ಚರ್ಚೆಗಳು ನಡೆಯುವ ಲಂಡನ್ ನ ತಾಣಗಳನ್ನು ಹುಡುಕಿಕೊಂಡು ಅಲೆಯುತ್ತಿದ್ದ. ಲಂಡನ್‌ನ ಸಮಕಾಲೀನ ಮಧ್ಯಮವರ್ಗದವರ ಬೌದ್ಧಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದ.
‘ನೀಲಿ ಫಲಕಗಳಲಿ ನೆನಪಾಗಿ ನಿಂದವರು’ ಸರಣಿಯಲ್ಲಿ ನಾಟಕಕಾರ ಬರ್ನಾರ್ಡ್‌ ಷಾ ಬಗ್ಗೆ ಬರೆದಿದ್ದಾರೆ ಯೋಗೀಂದ್ರ ಮರವಂತೆ

ಲಂಡನ್‌ನ ಧೂಳು ತುಂಬಿದ ಅವ್ಯವಸ್ಥಿತ ಕೋಣೆಯಲ್ಲಿ ಕುಳಿತು ಬರೆದ ಮೊದಮೊದಲಿನ ನಾಟಕಗಳು ಪ್ರದರ್ಶಕರಿಂದ ಪತ್ರಿಕೆಗಳಿಂದ ನಿರ್ಲಕ್ಷ್ಯಕ್ಕೆ ತಿರಸ್ಕಾರಕ್ಕೆ ಒಳಗಾದಾಗ “ನನ್ನ ಪ್ರತಿ ನಾಟಕ ನಿರಾಕರಿಸಲ್ಪಟ್ಟಾಗಲೂ ನಾಟಕಕಾರನಾಗಿ ನನ್ನ ಖ್ಯಾತಿ ಅಷ್ಟಷ್ಟು ಹೆಚ್ಚುತ್ತದೆ” ಎಂದು ಪ್ರತಿಕ್ರಿಯಿಸಿದ್ದ. ತಾನು ಮೊದಲು ಬರೆದ ಕೆಲವು ನಾಟಕಗಳನ್ನು “ಅಹಿತಕರ” (unpleasant) ಎಂದು ವಿಂಗಡಿಸಿ ಕರೆದ. ಸಮಾಜದ ಕೆಲವು ಅಹಿತಕರ ವಿಷಯಗಳನ್ನು ನಾಟಕದ ಮಾದರಿಯಲ್ಲಿ ಪ್ರಸ್ತುತ ಪಡಿಸುವ ಯತ್ನ ಅದಾಗಿದ್ದಕ್ಕೆ. ಆಮೇಲೆ, ವ್ಯಂಗ್ಯಭರಿತ, “ಹಿತವಲ್ಲದ” ನಾಟಕಗಳಿಂದ ಬೇಸತ್ತ ವೀಕ್ಷಕರನ್ನು, ನಿರ್ಮಾಪಕರನ್ನು ಖುಷಿಪಡಿಸಲು ನಾಲ್ಕು “ಹಿತಕರ” ನಾಟಕಗಳನ್ನು ಬೆನ್ನು ಬೆನ್ನಿಗೆ ಬರೆದ. ಎರಡೂ ಬಗೆಯ ನಾಟಕಗಳು ಪರಿಷ್ಕರಣೆಗೊಂಡು “ಪ್ಲೇಸಂಟ್ ಅಂಡ್ ಅನ್ ಪ್ಲೇಸಂಟ್” ಎನ್ನುವ ಹೆಸರಿನಲ್ಲಿ 1898ರಲ್ಲಿ ಪ್ರಕಟಗೊಂಡವು.

ಜಗತ್ಪ್ರಸಿದ್ಧ ನಾಟಕಕಾರ ವಿಮರ್ಶಕ ಜಾರ್ಜ್ ಬರ್ನಾರ್ಡ್ ಷಾ, 1887 ರಿಂದ 1898ರ ತನಕ ಲಂಡನ್ನಿನ 29 ನೆಯ ನಂಬ್ರದ ಫಿಟ್ಜ್ರೊಯ್ ಚೌಕದಲ್ಲಿರುವ ಮನೆಯ ಮೇಲ್ಮಾಳಿಗೆಯಲ್ಲಿ ವಾಸಿಸಿದ. ಆತನ ಭಾವಿ ಪತ್ನಿ ಶಾರ್ಲೆಟ್, ಷಾನ ಬರೆಯುವ ಕೋಣೆಯನ್ನು ಒಮ್ಮೆ ನೋಡಿ “ಪ್ರತಿ ಮೂಲೆಯಲ್ಲೂ ನಿರಂತರ ಧೂಳು ತುಂಬುವ, ಅವ್ಯವಸ್ಥೆಯ ಗೂಡಾಗಿರುವ ಅತಿ ಸಣ್ಣ ಕೊಠಡಿ. ಬರೆದಿಟ್ಟ ಕಾಗದಗಳ ರಾಶಿ, ಕರಡು ಪ್ರತಿಗಳ ಹಾಳೆಗಳು, ಪುಸ್ತಕಗಳು, ಖಾಲಿ ಕಾಗದಗಳು ಪೆನ್ನುಗಳು ಮತ್ತೆ ಜೊತೆಯಲ್ಲೇ ಬೆಣ್ಣೆ ಸಕ್ಕರೆ ಸೇಬು ಹಣ್ಣು, ಚಮಚ, ಫೋರ್ಕ್, ಕೋಕೋ ಪಾನೀಯ ಕುಡಿದಿಟ್ಟ ಕಪ್ಪು, ಅರ್ಧಂಬರ್ಧ ತಿಂದಿಟ್ಟ ಬಟ್ಟಲು ಮತ್ತೆ ಒಂದು ಡಜನ್ ಇನ್ನಿತರ ವಸ್ತುಗಳು. ಪ್ರತಿಯೊಂದೂ ವಸ್ತುವೂ ಮುಚ್ಚಿದೆ ಧೂಳಿನಲ್ಲಿ, ಹಾಗಂತ ಅವನ ಯಾವುದೇ ಕಾಗದವನ್ನು ಯಾರೂ ಮುಟ್ಟುವಂತಿರಲಿಲ್ಲ” ಎಂದು ಆಘಾತದಲ್ಲಿ ಬಣ್ಣಿಸಿದ್ದಳು. “ತೀರ ಅವ್ಯವಸ್ಥಿತವಾಗಿ ಜೋಡಿಸಿದ ಪೀಠೋಪಕರಣಗಳು, ಯಾರೇ ಕೋಣೆಯೊಳಗೆ ಬಂದರೂ ಅಡ್ಡಡ್ಡ ಏಡಿಯಂತೆ ನಡೆಯಬೇಕಾಗುತ್ತಿತ್ತು. ಯಾವಾಗಲೋ ಒಮ್ಮೆ ನಡೆಯುವ ಸ್ವಚ್ಛತಾ ಕಾರ್ಯಾಚರಣೆಗೆ ಕನಿಷ್ಠ ಎರಡು ಪೂರ್ತಿ ದಿನಗಳ ಕಠಿಣ ಶ್ರಮ ಬೇಕಾಗುತ್ತಿತ್ತು” ಎಂದು ಕೋಣೆಯೊಳಗೆ ಬಂದುಹೋದ ಗೆಳೆಯನೊಬ್ಬ ಹೇಳಿದ್ದ. ಮದುವೆಯ ನಂತರ ಷಾ ಆ ಮನೆಯಿಂದ ಲಂಡನ್ ನ ಇನ್ನೊಂದು ಪ್ರಾಂತ್ಯಕ್ಕೆ ವಸತಿ ಬದಲಿಸಿದ. ಷಾನ ತಾಯಿ ಅದೇ ಮನೆಯಲ್ಲಿ ವಾಸವನ್ನು ಮುಂದುವರಿಸಿದಳು.

ಐರ್ಲಾಂಡ್ ನ ಡಬ್ಲಿನ್ ಅಲ್ಲಿ ಹುಟ್ಟಿದ ಷಾ, ಹದಿನಾರು ವರ್ಷಕ್ಕೆ ಶಾಲಾ ವಿದ್ಯಾಭ್ಯಾಸವನ್ನು ನಿಲ್ಲಿಸಿ ಸಣ್ಣ ನೌಕರಿ ಹಿಡಿದವನು1876ರಲ್ಲಿ ಲಂಡನ್ ಗೆ ಬಂದರೂ ನಾಟಕಕಾರನಾಗಿ ವಿಮರ್ಶಕನಾಗಿ ಹೆಸರು ಮಾಡಲಾರಂಭಿಸಿದ್ದು ಇನ್ನೊಂದು ಹತ್ತು ವರ್ಷಗಳ ಅತಂತ್ರ ಹುಡುಕಾಟ ಸೆಣಸಾಟದ ನಂತರ. ಇಪ್ಪತ್ತರ ಹರೆಯದ ಷಾ ನಿರಂತರ ಬಡತನ ಮತ್ತು ನಿರಾಸೆಯನ್ನು ಅನುಭವಿಸಿದ್ದ. ಡಬ್ಲಿನ್‌ನಲ್ಲಿ ಕಳೆದ ಬಾಲ್ಯಯೌವ್ವನದ ದಿನಗಳಲ್ಲಿ ತಾಯಿಯ ಪ್ರಭಾವದಲ್ಲಿ ಸಂಗೀತ ಕಲೆ ಹಾಗು ಸಾಹಿತ್ಯದಲ್ಲಿ ಆಸಕ್ತಿ ಬೆಳೆದಿತ್ತು. ಓದುತ್ತ ಕೇಳುತ್ತ ಜ್ಞಾನವೂ ಬೆಳೆಯಿತು. 1872ರಲ್ಲಿ ತಾಯಿ, ತನ್ನ ಸಂಗೀತ ಗುರು ಲಂಡನ್ ಗೆ ವಲಸೆ ಹೋದಾಗ ಅವನ ಹಿಂದೆ ಸಾಗಲು ಗಂಡ ಮತ್ತು ಷಾರನ್ನು ಬಿಟ್ಟು ಇಬ್ಬರು ಹೆಣ್ಣು ಮಕ್ಕಳ ಜೊತೆಗೆ ಲಂಡನ್ ಗೆ ಬಂದು ನೆಲೆಸಿದಳು.

ಬರಹಗಾರನಾಗಲು ಲಂಡನ್ ಗೆ ಬಂದಿಳಿದ ಷಾ ಸರಿಯಾದ ಉದ್ಯೋಗ ಇಲ್ಲದೆ ತಾಯಿಯಿಂದ ಮತ್ತು ಆಕೆಯ ಹೊಸ ಗಂಡನಿಂದ ವಾರಕ್ಕೆ ಸಿಗುವ ಒಂದು ಪೌಂಡ್ ಹಣದ ಮೇಲೆ ಅವಲಂಬಿತನಾಗಿದ್ದ. ಮಧ್ಯಾಹ್ನಗಳನ್ನು ಬ್ರಿಟಿಷ್ ಮ್ಯೂಸಿಯಮ್‌ನ ಓದುವ ಕೋಣೆಯಲ್ಲಿ ಕಳೆಯುತ್ತಿದ್ದ. ಶಾಲೆಯಲ್ಲಿ ಯಾವುದನ್ನು ಪಡೆಯಲಾಗಲಿಲ್ಲವೋ ಲೈಬ್ರರಿಯ ಓದಿನಲ್ಲಿ ಅವನ್ನು ಓದಿ ಗಳಿಸುವ ಪ್ರಯತ್ನ ಮಾಡುತ್ತಿದ್ದ. ಕಾದಂಬರಿ ಬರೆಯಲು ಶುರು ಮಾಡಿದ. ಇನ್ನು ಸಂಜೆಯ ಹೊತ್ತಿಗೆ ಉಪನ್ಯಾಸಗಳು ಚರ್ಚೆಗಳು ನಡೆಯುವ ಲಂಡನ್ ನ ತಾಣಗಳನ್ನು ಹುಡುಕಿಕೊಂಡು ಅಲೆಯುತ್ತಿದ್ದ. ಲಂಡನ್‌ನ ಸಮಕಾಲೀನ ಮಧ್ಯಮವರ್ಗದವರ ಬೌದ್ಧಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದ.

ಬರ್ನಾರ್ಡ್ ಷಾನ ಕಾದಂಬರಿಯ ಪ್ರಯತ್ನಗಳು ಸೋಲನ್ನುಂಡವು. 1879ರಲ್ಲಿ ಬರೆದ “ಇಮ್ಮೆಚುರಿಟಿ” ಪ್ರಕಾಶಕರಿಂದ ತಿರಸ್ಕರಿಸಲ್ಪಟ್ಟಿತು (ಬಹಳ ನಂತರ 1930ರಲ್ಲಿ ಪ್ರಕಾಶನ ಕಂಡಿತು). ಮುಂದಿನ ನಾಲ್ಕು ಕಾದಂಬರಿಗಳೂ ಪ್ರಕಟಣೆಗೆ ಸ್ವೀಕೃತವಾಗಲಿಲ್ಲ. ಲಂಡನ್‌ಗೆ ಆಗಮಿಸಿದ ನಂತರದ ಇಡೀ ದಶಕ ಅವನ ಬರಹಗಳನ್ನು ಪತ್ರಿಕೆಗಳು ಪ್ರಕಟಣೆಗೆ ಯೋಗ್ಯ ಎಂದು ಪರಿಗಣಿಸಲಿಲ್ಲ. ಬರಹಗಾರನಾಗುವ ಕನಸು ಹೊತ್ತು ಲಂಡನ್ ಗೆ ಬಂದವನ ಆರಂಭಿಕ ಬರಹಗಳು, ಸಾಹಿತ್ಯ ಕೃತಿಗಳು ವರ್ಷಕ್ಕೆ ಒಂದು ಪೌಂಡ್ ಹಣವನ್ನೂ ಗಳಿಸಲಿಲ್ಲ. 1887-88 ರಲ್ಲಿ ಬರೆದ “ಎನ್ ಅನ್ ಫಿನಿಷಡ್ ನಾವೆಲ್” ಮರಣೋತ್ತರವಾಗಿ ೧೯೫೮ರಲ್ಲಿ ಪ್ರಕಟಗೊಂಡು ಅವನ ಕಾದಂಬರಿ ಸೃಷ್ಟಿಗೆ ಒಂದು ಹುಸಿ ಆರಂಭ ದೊರಕಿಸಿತು.

ಪತ್ರಿಕಾ ಬರಹ, ಕಾದಂಬರಿಗಳ ವೈಫಲ್ಯಗಳ ಹೊರತಾಗಿಯೂ ೧೮೮೦ರ ದಶಕದಲ್ಲೇ ಷಾ ತನ್ನತನವನ್ನು ಕಂಡುಕೊಂಡ. ಸಸ್ಯಹಾರಿಯಾಗಿ ಬದಲಾದ. ಜೀವನ ವೆಚ್ಚವನ್ನು ಕಡಿಮೆ ಮಾಡಲು ಹೀಗೆ ಆಹಾರ ಪದ್ಧತಿಯನ್ನು ಬದಲಿಸಿಕೊಂಡ ಎನ್ನುವ ಅಭಿಪ್ರಾಯಗಳಿವೆ. ಸಮಾಜವಾದಿ, ವಾಗ್ಮಿ, ಚರ್ಚಾಪಟು ಮತ್ತು “ತಾತ್ಕಾಲಿಕ ನಾಟಕಕಾರ”ನಾಗಿ ರೂಪುಗೊಂಡ. ಮಧ್ಯಮ ವರ್ಗದವರ ಸಮಾಜವಾದಿ ಗುಂಪು “ಫ್ಯಾಬಿಯನ್ ಸೊಸೈಟಿಯ ಪ್ರವರ್ತಕನಾದ. ಇಂಗ್ಲಿಷ್ ಸಮಾಜವನ್ನು ಕ್ರಾಂತಿಯಿಂದಲ್ಲ, ದೇಶದ ಬೌದ್ಧಿಕ ಹಾಗು ರಾಜಕೀಯವ ಜೀವನಗಳ ವ್ಯಾಪಿಸುವಿಕೆಯಿಂದ (Permeation) ಬದಲಿಸುವ ಗುರಿ ಹೊಂದಿದ್ದ. ಸೊಸೈಟಿಯ ಪ್ರತಿ ಚಟುವಟಿಕೆಯಲ್ಲೂ ಸಕ್ರಿಯನಾದ. ಬ್ರಿಟಿಷ್ ಸಮಾಜವಾದದ ಕ್ಲಾಸಿಕ್ ಎಂದು ಕರೆಯಲ್ಪಡುವ “Fabian Essays in Socialism” (1889) ನ ಸಂಪಾದಕನಾಗಿ ಎರಡು ಅಧ್ಯಾಯಗಳನ್ನು ಬರೆದ. ಅಂತೂ ಕೊನೆಗೆ, 1885ರಲ್ಲಿ ರಂಗ ವಿಮರ್ಶಕ ವಿಲಿಯಮ್ ಆರ್ಚರ್, ಷಾನ ಪತ್ರಿಕಾ ಕೆಲಸಗಳನ್ನು ಗುರುತಿಸಿದ.

ಅವನ ಪತ್ರಿಕೋದ್ಯಮದ ಮೊದಲ ಕೆಲಸಗಳು ಪುಸ್ತಕ ವಿಮರ್ಶೆ, ಕಲಾವಿಮರ್ಶೆ, ನಾಟಕ ವಿಮರ್ಶೆ, ಸಂಗೀತದ ಕುರಿತಾದ ಅಂಕಣಗಳಿಗೆ ವಿಸ್ತರಿಸಿದ್ದವು. ಸಾಹಿತ್ಯ ಕಲೆ ಸಂಗೀತಗಳಲ್ಲಿನ ಆಳವಾದ ಜ್ಞಾನದ ಜೊತೆಗೆ ಮುಖ್ಯ ವಿಚಾರಕ್ಕೆ ಪೂರಕವಾದ ಅಡ್ಡವಿಷಯಗಳು, ಟಿಪ್ಪಣಿಗಳ ಶೈಲಿಯ ಆಕರ್ಷಣೆಯನ್ನು ವೃದ್ಧಿಸಿದವು. ಲಘು ಹಾಸ್ಯ ಜಿಜ್ಞಾಸೆಗಳಿಂದ ಕೂಡಿದ ಬರವಣಿಗೆಯ ಅಭಿಯಾನ, ವಿಕ್ಟೋರಿಯನ್ ರಂಗಭೂಮಿಯ ಕೃತಕ, ಬೂಟಾಟಿಕೆಯ ಯೋಚನೆಗಳನ್ನು ಸ್ಥಾನಪಲ್ಲಟಗೊಳಿಸಿದವು. ಷಾ ತನ್ನದೇ ನಾಟಕಗಳನ್ನು ಬರೆಯಲು ಆರಂಭಿಸಿದ.

ಷಾ ಇಂಗ್ಲಿಷ್ ನಾಟಕಗಳನ್ನು ಬರೆಯಲು ಶುರು ಮಾಡಿದಾಗ ಸರ್ ಎ. ಡಬ್ಲ್ಯೂ. ಪಿನೆರೋ ಹಾಗು ಎಚ್. ಎ. ಜೋನ್ಸ್ ಇಂಗ್ಲೆಂಡ್ ನ ಪ್ರಮುಖ ನಾಟಕಕಾರರಾಗಿದ್ದರು. ಇಬ್ಬರೂ ಆಧುನಿಕ ವಾಸ್ತವಿಕ ನಾಟಕಗಳನ್ನು ಬೆಳೆಸಿದವರು. ಹಾಗಂತ ಇಬ್ಬರಿಗೂ ಕೃತಕ ಕಥಾವಸ್ತು, ಸಾಂಪ್ರದಾಯಿಕ ಪಾತ್ರಗಳಿಂದ ದೂರ ಹೋಗುವುದು ಸಾಧ್ಯ ಆಗಿರಲಿಲ್ಲ. ಯಾವುದೇ ಪ್ರೇಕ್ಷಕರೂ ಈ ನಾಟಕಗಳು ಹೀಗೇ ಇರುತ್ತವೆ ಎಂದು ಊಹಿಸಬಹುದಿತ್ತು. 1880-90ರ ಲಂಡನ್ ನ ನಾಟಕಗಳು ಬಹುತೇಕ ಇದೇ ಮಾದರಿಯ ಏಕತಾನ ಹಾಗು ಬಡತನದಲ್ಲಿ ಬಳಲುತ್ತಿದ್ದವು. 1890ರಲ್ಲಿ ಲಂಡನ್ ವೇದಿಕೆ ಏರಿದ ಷಾನ ನಾಟಕಗಳು ಆಂಗ್ಲ ರಂಗಭೂಮಿಗೆ ಹೊಸ ಸ್ವಾತಂತ್ಯ್ರ, ಗಾಂಭೀರ್ಯವನ್ನು ಉಡಿಸಿ ತೊಡಿಸಿದವು. “Quintessence of Ibsenism”(1891) ನಿರರ್ಥಕ ಹಾಸ್ಯದ ಬಳಕೆಯನ್ನು ಬದಲಿಸಿತು.

“Widowers’ Houses”, ಲಂಡನ್ ನ ಕೊಳಚೆಗೇರಿಯ ಕುಖ್ಯಾತ ಜಮೀನುದಾರಿಕೆಯ ಮೇಲೆ ಬೆಳಕು ಚೆಲ್ಲಿತು. “The result” ( 1892), ನಾಟಕದಲ್ಲಿ ಆಗಿನ ಪ್ರಮುಖ ನಾಟಕಕಾರರು ಇನ್ನೂ ಪ್ರಯೋಗಿಸುತ್ತಲೇ ಇದ್ದ ಮಾಮೂಲಿ ಪ್ರಣಯ ಸನ್ನಿವೇಶಗಳು ಇರಲೇ ಇಲ್ಲ. ಸದುದ್ದೇಶ ಇರುವ ಆಂಗ್ಲ ಯುವಕ ಪ್ರೇಮದಲ್ಲಿ ಬೀಳುವುದರಿಂದ ನಾಟಕ ಆರಂಭವಾಗುತ್ತದೆ. ಆದರೆ ಅವನಿಗೆ ತನ್ನ ಭಾವಿ ಮಾವ ಮತ್ತು ತನ್ನ ಖಾಸಗಿ ಆದಾಯಗಳು ಬಡವರ ಶೋಷಣೆಯಿಂದ ಬರುತ್ತಿರುವುದು ತಿಳಿಯುವುದರಿಂದ ಸಂಘರ್ಷವನ್ನು ಹುಟ್ಟಿಸುತ್ತದೆ. ಇದು ದುರಂತವಾಗಬಲ್ಲ ಕಥಾವಸ್ತು. ಆದರೆ ಷಾ ಯಾವಾಗಲೂ ದುರಂತಗಳನ್ನು ನಾಟಕದ ಮುಖ್ಯ ವಸ್ತುವಾಗಿಸುವುದನ್ನು ತಪ್ಪಿಸಿದವನು. ಬಡವರ ಶೋಷಣೆ, ಸಾಮಾಜಿಕ ಪಿಡುಗಿನ ಹಿನ್ನೆಲೆ ಇರುವ ನಾಟಕ ಪ್ರಣಯ ಸಂಕಟದ ಮೇಲೆ ಗಮನ ಕೇಂದ್ರೀಕರಿಸುತ್ತದೆ. ಎಲ್ಲ ಚಲನೆಗಳೂ ವಿಡಂಬನೆಯಲ್ಲಿ ಸಾಗುತ್ತವೆ.

ಶಾಸ್‌ ಕಾರ್ನರ್‌ ನಲ್ಲಿ  ಜಾರ್ಜ್‌ ಬರ್ನಾರ್ಡ್‌ ಶಾ ಮನೆ ಮುಂದೆ  (photo: Granger Historical Picture Archive / Alamy Stock Photo)

ಲಘು ಹಾಸ್ಯ ಜಿಜ್ಞಾಸೆಗಳಿಂದ ಕೂಡಿದ ಬರವಣಿಗೆಯ ಅಭಿಯಾನ, ವಿಕ್ಟೋರಿಯನ್ ರಂಗಭೂಮಿಯ ಕೃತಕ, ಬೂಟಾಟಿಕೆಯ ಯೋಚನೆಗಳನ್ನು ಸ್ಥಾನಪಲ್ಲಟಗೊಳಿಸಿದವು. ಷಾ ತನ್ನದೇ ನಾಟಕಗಳನ್ನು ಬರೆಯಲು ಆರಂಭಿಸಿದ.

ಇನ್ನು ಷಾನನ್ನು ಬೆಳೆಸಿದ ರೂಪಿಸಿದ ನೆಲೆ ಎಂದು ಖ್ಯಾತವಾದ ಫಿಟ್ಜ್ರೊಯ್ ಚೌಕದಲ್ಲಿರುವ ಮನೆಯನ್ನು ಬಿಟ್ಟ ನಂತರ ಬರೆದ ನಾಟಕ “ಮಿಸೆಸ್ ವಾರೆನ್ಸ್ ಪ್ರೊಫೆಶನ್”(1893) 1902ರ ತನಕವೂ ಪ್ರದರ್ಶನಕ್ಕೆ ಪರವಾನಿಗೆ ಪಡೆಯಲಿಲ್ಲ. ಯಾಕೆಂದರೆ ನಾಟಕವನ್ನು ಸಂಘಟಿತ ವೇಶ್ಯಾವಾಟಿಕೆಯ ಸುತ್ತ ಹೆಣೆಯಲಾಗಿತ್ತು. ವಿಷಯ ವಸ್ತುಗಳ ಬಗ್ಗೆ ಮಡಿವಂತಿಕೆ ಇದ್ದ, ನಾಟಕಗಳಿಗೆ ಸೆನ್ಸಾರ್ ಪಡೆಯಬೇಕಾದ ಕಾಲ ಅದು. ಒಬ್ಬ ಸುಶಿಕ್ಷಿತ ಯುವತಿ “ಮಿಸೆಸ್ ವಾರೆನ್”, ತನ್ನ ತಾಯಿ ವೃತ್ತಿಪರ ವೇಶ್ಯೆಯಾಗಿ ಬೆಳೆದು ಯುರೋಪಿನಾದ್ಯಂತ ವೇಶ್ಯಾವಾಸಗಳ ಪಾಲುದಾರಳಾಗುವುದನ್ನು ತಿಳಿದ ನಂತರ ಹೇಗೆ ಪ್ರತಿಕ್ರಿಯಿಸುತ್ತಾಳೆ ಎನ್ನುವುದರ ಕುರಿತಾದ ನಾಟಕ ಅದು. ಆರ್ಥಿಕ ಅಗತ್ಯ ಮತ್ತು ವ್ಯಕ್ತಿಯ ನೈತಿಕ ಕುಸಿತಗಳು ಒಂದಕ್ಕೊಂದು ಎದುರಾಗಿ ಯಾವುದೇ ಹಾಸ್ಯವನ್ನು ಒಳಗೊಳ್ಳದೆ ಗಂಭೀರವಾಗಿ ಪ್ರಸ್ತುತಿಗೊಂಡಿದ್ದವು.

ನಾಟಕಗಳನ್ನು ಬರೆಯುವ ಒತ್ತಡದ ಜೊತೆಗೆ ವಿಮರ್ಶೆ, ರಾಜಕೀಯದ ಕೆಲಸಗಳು ಷಾನಿಗಿದ್ದ ಸಣ್ಣ ಅನಾರೋಗ್ಯ ಉಲ್ಬಣಿಸುವಂತೆ ಮಾಡಿತು. ಆರೈಕೆ ಮತ್ತು ಚೇತರಿಕೆಯ ಸಮಯದಲ್ಲಿ ನರ್ಸ್ ಆಗಿದ್ದ ಮಹಿಳೆಯ ಜೊತೆ 1898ರಲ್ಲಿ ಮದುವೆಯೂ ಆದ. ಆಕೆ ಷಾನ ಮೊದಲಿನ ಸಂಗಾತಿಗಳ ಗೆಳತಿಯೂ ಆಗಿದ್ದಳೂ ಮತ್ತೆ ಷಾನ ಮರಣದ ತನಕವೂ ಜೊತೆಗಿದ್ದಳು. 1901ರಲ್ಲಿ ಪ್ರದರ್ಶನ ಕಂಡ “Caesar and Cleopatra” ವನ್ನು ಷಾನ ಮೊದಲ ಮಹಾನ್ ನಾಟಕ ಎಂದು ಕರೆಯುತ್ತಾರೆ. ಇಲ್ಲಿ ಕ್ಲಿಯೋಪಾತ್ರಾಳನ್ನು ಹದಿನಾರು ವರ್ಷದ ದುಷ್ಟಳಾಗಿ, ಮೊದಲೇ ಪ್ರಸಿದ್ಧಿಗೆ ಬಂದಿದ್ದ ಶೇಕ್ಸ್‌ಪಿಯರ್‌ನ ನಾಟಕದಲ್ಲಿ ಬರುವ 38 ವರ್ಷದ ಮಾಯಗಾರ್ತಿಗಿಂತ ಭಿನ್ನವಾಗಿ ಚಿತ್ರಿಸಿದ. ಸೀಸರ್ ನನ್ನು ಕಟ್ಟುನಿಟ್ಟಿನ ಏಕಾಂಗಿಯಾಗಿ, ಸೈನಿಕನಾಗಿಯೂ ತಾತ್ವಿಕ ವ್ಯಕ್ತಿಯಾಗಿ ಕಲ್ಪಿಸಿದ. ನಾಟಕದ ಅಭೂತಪೂರ್ವ ಯಶಸ್ಸಿಗೆ ಕಾರಣ, ಸೀಸರ್ ನ ಪಾತ್ರವನ್ನು ಅತಿಮಾನವಗೊಳಿಸದೇ ಉದಾತ್ತತೆ ನೈತಿಕತೆಗಳನ್ನು ಜನಸಾಮಾನ್ಯರು ನಂಬಲಾರ್ಹವಾಗುವಂತೆ ಕಟ್ಟಿದುದು ಎಂದು ವಿಮರ್ಶಕರು ಹೇಳುತ್ತಾರೆ. ನಂತರ ಬರೆದ ಹಲವು ನಾಟಕಗಳು ಷಾ ನಿಗೆ ಜಗದ್ವಿಖ್ಯಾತಿ ತಂದುಕೊಟ್ಟವು. ಅತಿ ಜನಪ್ರಿಯ ವಿನೋದಪೂರ್ಣ ನಾಟಕ “Pygmalion” 1913ರಲ್ಲಿ ಪ್ರದರ್ಶನ ಕಂಡಿತು. ಪ್ರೇಮ ಮತ್ತು ಆಂಗ್ಲ ಶ್ರೇಣೀಕೃತ ಸಮಾಜದ ಬಗೆಗಿನ ಮಾನವೀಯ ವಿನೋದ ನಾಟಕದ ಜೀವಾಳವಾಗಿತ್ತು.

ಲಂಡನ್ನಿನ ಹೂ ಮಾರುವ ಹುಡುಗಿಗೆ ಉನ್ನತ ಸಮಾಜದ ಮಹಿಳೆ ಆಗುವಲ್ಲಿ ಹಿಗ್ಗಿನ್ಸ್ ಎಂಬ ವ್ಯಕ್ತಿ ನೀಡುವ ತರಬೇತಿ ಮತ್ತು ಪರಿಣಾಮಗಳು ಪ್ರೇಕ್ಷರನ್ನು ನಗಿಸುತ್ತಾ ತಲುಪಿದವು. ಪ್ರತಿಷ್ಠಿತ ಬಹುಮಾನಗಳನ್ನು ಪಡೆದ ನಾಟಕ, 1930ರಲ್ಲಿ ಸಿನಿಮಾ ಆಯಿತು, ಅಕಾಡೆಮಿ ಪ್ರಶಸ್ತಿ ಪಡೆಯಿತು. ಮತ್ತೆ 1956ರಲ್ಲಿ “My Fair Lady” ಹೆಸರಿನ ಸಂಗೀತ ರೂಪಕವಾಗಿಯೂ ಜನಪ್ರಿಯವಾಯಿತು. ಬರ್ನಾರ್ಡ್ ಷಾ ಬದುಕಿದ್ದ ಕಾಲದಲ್ಲಿ ಹಲವು ನಾಟಕಗಳು ಅವನ ಪ್ರಸಿದ್ಧಿಯನ್ನು ಹೆಚ್ಚಿಸಿದ್ದರೂ ಈ ಕಾಲ ಷಾನನ್ನು ನೆನಪಿಡುವುದು ಬಹುಷಃ “ಪಿಗ್ಮ್ಯಾಲಿಯನ್” ಹಾಗು “ಮೈ ಫೇರ್ ಲೇಡಿ” ಗಳ ಕಾರಣಕ್ಕೆ ಇರಬಹುದು.

ಬರ್ನಾರ್ಡ್ ಷಾನ ನಾಟಕ ಕೃತಿ, ಭಾಷಣ ಚರ್ಚೆ ಜಿಜ್ಞಾಸೆ ಗಳಿಂದ ಆಯ್ದ ಪ್ರಭಾವಿ ಸಾಲು ಮಾತಿನ ವರಸೆ ಈಗಲೂ ಪತ್ರಿಕೆ ಪುಸ್ತಕಗಳಲ್ಲಿ ಉಲ್ಲೇಖಗೊಳ್ಳುತ್ತವೆ. ಅವನ ಸಾಹಿತ್ಯದ ವ್ಯಕ್ತಿತ್ವದ ಪರಿಚಯ ಇಲ್ಲದವರೂ ಜಗತ್ತಿನ ಯಾವುದೋ ಊರಿನ ಭಾಷೆಯ ದಿನಪತ್ರಿಕೆಯ ಮುಖಪುಟದ ಮೇಲ್ತುದಿಯಲ್ಲಿ ಮುದ್ರಿತವಾದ ದಾರ್ಶನಿಕ ವಾಕ್ಯವನ್ನು ಓದಿ ಯೋಚನೆಗೆ ಇಳಿಯುವುದಿದೆ, ಬರೆದಿಟ್ಟುಕೊಳ್ಳುವುದಿದೆ. “ಪೊಳ್ಳು ಜ್ಞಾನದ ಬಗ್ಗೆ ಎಚ್ಚರದಿಂದಿರಿ, ನಿರ್ಲಕ್ಷ್ಯಕ್ಕಿಂತ ಅಪಾಯಕಾರಿಯಾದುದು”, “ಜೀವನ ಎನ್ನುವುದು ನಿನ್ನನ್ನು ಹುಡುಕಿಕೊಳ್ಳುವುದಲ್ಲ, ನಿನ್ನನ್ನು ರೂಪಿಸಿಕೊಳ್ಳುವುದು” ಇಂತಹ ಅನೇಕ ಸಾಲುಗಳು ಬಿಳಿಗಡ್ಡಗದ ಹಣ್ಣು ಕೂದಲಿನ ಮುದುಕ ಬರ್ನಾರ್ಡ್ ಷಾನ ಭಾವಚಿತ್ರದ ಬದಿಯಲ್ಲಿ ಅಚ್ಚುಗೊಂಡು ಅಂಗೈಯಲ್ಲಿರುವ ಮೊಬೈಲ್ ಮೂಲಕವೂ ಹರಿದಾಡುತ್ತಿರುತ್ತವೆ.

ಎಳವೆಯಿಂದಲೇ ಗಡ್ಡ ಬೆಳೆಸಿದ ಷಾನನ್ನು ರೇಜರ್ ಕಂಪನಿಯವರು ಗಡ್ಡ ತೆಗೆಯುವ ಜಾಹೀರಾತಿಗಾಗಿ ಸಂಪರ್ಕಿಸಿದ್ದರಂತೆ. “ನಾನು ಯಾವ ಕಾರಣಕ್ಕೆ ಗಡ್ಡ ಬೆಳೆಸಿದೆನೋ ಅದೇ ಕಾರಣಕ್ಕೆ ಖಂಡಿತ ತೆಗೆಯಲಾರೆ, ಮತ್ತೆ ನನ್ನ ತಂದೆ ಯಾವ ಕಾರಣಕ್ಕೆ ಅವನದನ್ನು ಆರಂಭಿಸಿದನೋ ಅದೇ ಕಾರಣಕ್ಕೆ…..” ಎಂದಿದ್ದನಂತೆ. ಸಿಡುಬಿನ ಕಾರಣಕ್ಕೆ ಮುಖದ ಮೇಲೆ ಮೂಡಿದ ಕಲೆಗಳನ್ನು ಮುಚ್ಚಲು ಯುವಕನಾಗಿದ್ದಾಗಲಿಂದಲೇ ಗಡ್ಡ ಬೆಳೆಸಿದ ಎಂದು ಕೆಲವು ಮೂಲಗಳಲ್ಲಿ ದಾಖಲಾಗಿದೆ.

ಜಾರ್ಜ್ ಬರ್ನಾರ್ಡ್ ಷಾ ಬರೇ ಅತ್ಯುತ್ತಮ ಹಾಸ್ಯ ನಾಟಕಗಳನ್ನು ಬರೆದವನಾಗಿರದೇ ಹದಿನೇಳನೆಯ ಶತಮಾನದ ನಂತರದ ಮಹತ್ವಪೂರ್ಣ ನಾಟಕಕಾರ ಎಂದು ರಂಗ ಇತಿಹಾಸಕಾರರು ಗುರುತಿಸುತ್ತಾರೆ. ಸೀಸರ್ ಮತ್ತು ಕ್ಲಿಯೋಪಾತ್ರ, ಡ್ಯಾನ್ ಜ್ಯೂಅನ್ ಇನ್ ಹೆಲ್, ಮ್ಯಾನ್ ಅಂಡ್ ಸೂಪರ್ಮ್ಯಾನ್ ಸರಣಿ, ಮೇಜರ್ ಬಾರ್ಬರಾ, ಹಾರ್ಟ್ ಬ್ರೇಕ್ ಹೌಸ್, ಸೈಂಟ್ ಜೋನ್ ಗಳು ರಂಗವನ್ನೇರಿದ ಕೆಲವು ಅತ್ಯುತ್ತಮ ಕೃತಿಗಳು ಎಂದು ತಿಳಿಯುತ್ತಾರೆ. ಅವುಗಳಲ್ಲಿನ ತೀವ್ರ ಗಾಂಭೀರ್ಯ, ಗದ್ಯ ಲಾಲಿತ್ಯಗಳು ಅವನ ಸಮಕಾಲೀನರಲ್ಲಿ ಕಂಡುಬರಲಿಲ್ಲ ಎಂದು ವಿಶ್ಲೇಷಿಸುತ್ತಾರೆ.

ನಾಟಕವನ್ನು ಮನೋವಿಕಾಸ, ಬೌದ್ಧಿಕ ಸಂಘರ್ಷ, ಜಿಜ್ಞಾಸೆ, ಸುಸಂಸ್ಕೃತ ವಿನೋದ, ಸಂಕೇತಗಳ ಬಳಕೆಗಳಿಂದ ತುಂಬಿ ತನ್ನ ಕಾಲದ ಮತ್ತು ನಂತರದ ರಂಗಭೂಮಿಯನ್ನು ಶಾಶ್ವತವಾಗಿ ಪ್ರಭಾವಿಸಿದವನು ಜಾರ್ಜ್ ಬರ್ನಾರ್ಡ್ ಷಾ. ಅತ್ಯಂತ ಪರಿಣಾಮಕಾರಿಯಾದ ಕರಪತ್ರಗಳನ್ನು ಬರೆಯುವುದರಿಂದ, ಹೆಚ್ಚು ಓದಲ್ಪಟ್ಟ ಸಂಗೀತ ವಿಮರ್ಶೆಗಳು, ಒಂದು ತಲೆಮಾರಿನ ಶ್ರೇಷ್ಠ ನಾಟಕ ವಿಮರ್ಶೆಗಳು, ಪ್ರಖರ ವಾಗ್ಮಿ, ಉಪನ್ಯಾಸಕ, ರಾಜಕೀಯ ಪ್ರಬಂಧಕಾರ ಆರ್ಥಿಕ ಸಾಮಾಜಿಕ ವಿಶ್ಲೇಷಕನಾಗಿಯೂ ಅಸ್ತಿತ್ವವನ್ನು ಸ್ಥಾಪಿಸಿದವನು. ಜಗತ್ತಿನ ಸಾಹಿತ್ಯ ಬೆಳೆಯ ಸಮೃದ್ಧ ಕೃಷಿಕಾರನೂ ಆಗಿದ್ದವನು. ನಿರ್ಭೀತ ವಿಮರ್ಶಕ ನೋಟ ಸೂಕ್ಷ್ಮ ಪ್ರಜ್ಞೆಗಳನ್ನು ಹಲವು ಆಯಾಮಗಳಲ್ಲಿ ಪ್ರದರ್ಶಿಸುತ್ತ ಮೂರು ತಲೆಮಾರುಗಳ ರಾಜಕೀಯ ಆರ್ಥಿಕ ಸಾಮಾಜಿಕ ಯೋಚನಾಕ್ರಮವನ್ನು ರೂಪಿಸಿದವನು. 1925ರಲ್ಲಿ ಅರ್ಹವಾಗಿಯೇ ಸಾಹಿತ್ಯದ ನೊಬೆಲ್ ಪುರಸ್ಕಾರ ಪಡೆದವನು.

1950ರಲ್ಲಿ ಮಡಿದ ಷಾನ ನೆನಪಿಗೆ ಲಂಡನ್ ನ ಫಿಟ್ಜ್ರೊಯ್ ಚೌಕದ ಧೂಳು ಆವರಿಸಿದ ಅವ್ಯವಸ್ಥಿತ ಕೋಣೆಯಿದ್ದ ಮನೆಯ ಗೋಡೆಯ ಮೇಲೆ ಸ್ಮರಣೆಯ ಫಲಕವನ್ನು ನೆಡಲಾಯಿತು. ಅವನ ಮನೆ ಕೆಲಸದಾಕೆ, ಮಿಸೆಸ್ ಲಾಡೆನ್, ಮಾಲಿಕನ ಸಾವನ್ನು ಕಂಡು ಬರೆದಿದ್ದ ಸಂದೇಶವನ್ನು ಕೆತ್ತಲಾಯಿತು; “ಪ್ರತಿಭೆಯ ಭಂಡಾರದಿಂದ ಜಗತ್ತನ್ನು ಸಮೃದ್ಧಗೊಳಿಸಿದವನು”.