ಅಲ್ಲಿಂದ ಇಲ್ಲಿಯವರೆಗೆ ಅನುದಿನ ಪುಟ್ಟನ ಸುದ್ದಿ, ನೆನಪುಗಳಿಂದಲೇ ಬೆಳಕು ಹರಿಯುತ್ತದೆ, ಕತ್ತಲಾಗುತ್ತದೆ. ಅವ ಮಗುಚಿದ, ಕೂತ, ತೊದಲು ಮಾತನಾಡಿದ, ಎದ್ದ, ನಿಂತ ಎನ್ನುವುದೆಲ್ಲ ನಮ್ಮದೇ ಸಾಧನೆ ಎಂಬಂತಾಗಿದೆ. ಹಲ್ಲು ಕಡಿದು ಮುದ್ದು ಮಾಡುತ್ತ ಮಾಡುತ್ತ ಮುಂದಿನ ಹಲ್ಲು ಸವೆದೇ ಹೋದಂತಿದೆ! ಸಣ್ಣ ಅವಕಾಶ, ಪುರುಸೊತ್ತು ಸಿಕ್ಕರೂ ಬೆಂಗಳೂರಿಗೆ ಹೋಗಿ ಪುಟ್ಟನ ಕಂಡುಬರುವಾ ಅನಿಸುತ್ತದೆ. ಈ ಅಮ್ಮ ತಮ್ಮನ್ನಿಷ್ಟು ಪ್ರೀತಿಸಿದ್ದಳೋ ಇಲ್ಲವೋ ಎಂದು ನಮ್ಮ ಮಕ್ಕಳು ಶಂಕಿಸಬಹುದಾದಷ್ಟು ಬದುಕು ಸೂರ್ಯಮಯವಾಗಿದೆ!
ಡಾ. ಎಚ್.ಎಸ್. ಅನುಪಮಾ ಕವನ ಸಂಕಲನ “ಅಮ್ಮಮ್ಮನ ಕವಿತೆಗಳು” ಕೃತಿಯ ಕುರಿತು ಅವರ ಬರಹ ನಿಮ್ಮ ಓದಿಗೆ
ಇಲ್ಲಿರುವುದು ಒಬ್ಬರ ಅನುಭವವಲ್ಲ. ಲೋಕದ ಅಸಂಖ್ಯ ತಾಯಿಮನಸುಗಳು ಅನುಭವಿಸಿರುವ ಹಿತ, ಆತಂಕಗಳ ಸಮ್ಮಿಶ್ರಭಾವ. ಮೊದಲ ಸಲ ಅಮ್ಮಮ್ಮನಾದಾಗ ಮನದಲ್ಲಿ ಹಾದುಹೋದ ನೂರಾರು ಅವರ್ಣನೀಯ ಭಾವಗಳಲ್ಲಿ ಕೆಲವಕ್ಕೆ ಅಕ್ಷರ ರೂಪ ಕೊಟ್ಟು ಕವಿತೆಗಳೆಂದು ಕರೆದಿದ್ದೇನೆ, ಅಷ್ಟೇ.
ನಮ್ಮ ಗೂಡುಗಳಿಂದ ರೆಕ್ಕೆ ಬಲಿತು ಮರಿಗಳು ಹಾರಿಹೋಗಿದ್ದವು. ಬರಬರುತ್ತ ನಮ್ಮ-ಅವರ ಲೋಕ ಎರಡಾಯಿತು. ಆಗಬೇಕಾದದ್ದೇ. ಅವರಂತೆ ನಾವು ಕೂಡ ಇದ್ದ ಗೂಡು ತೊರೆದು, ಲೋಕ ಎರಡಾಗಿಸಿಕೊಂಡು ಹೊಸ ಬದುಕು ಕಟ್ಟಿಕೊಂಡವರಲ್ಲವೆ? ಬಹುಶಃ ಅದೊಂದು ವಯಸ್ಸು ಎನಿಸುತ್ತದೆ, ಏರು ಜವ್ವನ ಕಳೆದು ನಡುವಯಸ್ಸು ದಾಟುವ ಆಚೀಚೆ ಮತ್ತೆ ಮರಿಗಳತ್ತ ಗಮನ ಹರಿಯತೊಡಗುತ್ತದೆ. ಇದ್ದಕ್ಕಿದ್ದಂತೆ ಹಸುಳೆಗಳು ಕರೆಯುತ್ತವೆ. ಎಳೆಯ ಜೀವಗಳ ಇರುವಿಕೆ, ಮಾತು, ಚಲನೆ ಎಲ್ಲವೂ ಆಕರ್ಷಿಸುತ್ತವೆ. ಎತ್ತಿ ಮುದ್ದಾಡಿ ಮಿದು ಮೈಯ ಸ್ಪರ್ಶದ ಹಿತ ಅನುಭವಿಸುವ ಬಯಕೆಯುಂಟಾಗುತ್ತದೆ. ಅಂತಹ ಒಂದು ಕಾಲದಲ್ಲಿ ನನಗೆ ಎಳೆಬಾಲೆ ಕನಸು ಸಿಕ್ಕಿ ಅಂಟಿಕೊಂಡಿದ್ದಳು. ಅವಳೂ ಈಗ ರೆಕ್ಕೆ ಬಿಚ್ಚಿ ಹಾರುವ ಹಕ್ಕಿಯಾಗಿರುವಳು.
ನಮ್ಮ ಮನೆಯಲ್ಲಿಲ್ಲದಿದ್ದರೇನು, ಸುತ್ತಣ ಹಲವು ಮಕ್ಕಳ ಮೇಲೆ ಅಂಟುನಂಟು ಬೆಳೆಯುತ್ತದೆ. ಆದರೆ ನಮಗೆ ಮುದ್ದು ಉಕ್ಕಿ ಬೇಕೆನಿಸಿದಾಗಲೆಲ್ಲ ಅವರು ಸಿಗಲಾರರು. ಸಿಕ್ಕರೂ ಕೆಲಕಾಲ ದೊರೆತಾರು ಅಷ್ಟೇ. ನಮ್ಮ ಮನೆಯಲ್ಲೇ, ಕುಟುಂಬದಲ್ಲೇ ಮಗು ಹುಟ್ಟಿದರೆ ಅನಾಯಾಸವಾಗಿ ತಿಂಗಳುಗಟ್ಟಲೆ, ವರ್ಷಗಟ್ಟಲೆ ಮಗುವಿನ ಸಾಂಗತ್ಯ ದೊರೆಯುತ್ತದೆ. ಅದೊಂದು ಜವಾಬ್ದಾರಿ-ಆನಂದ ಎರಡೂ ಬೆರೆತ ಸುಂದರ ಅನುಭೂತಿಯ ಲೋಕ. ಹೊಸ ಜೀವದೊಡನಾಡುವ ಹೊನ್ನಿನವಕಾಶ ದೊರೆತು ಒಳಗಣವು ಹೊಸಹುಟ್ಟು ಪಡೆವ ಕಾಲ.
ಮೊದಲ ಸಲ ನಮ್ಮನ್ನು ಅಮ್ಮ, ಅಪ್ಪ ಮಾಡಿದ್ದವಳು ಪುಟ್ಟಿ (ಪೃಥ್ವಿ). ಪುಟ್ಟಿ ಮತ್ತವಳ ಒಲವಿನ ಸಂಗಾತಿ ವಿಕಾಸ್ ತಮ್ಮ ಶಿಕ್ಷಣ, ಉದ್ಯೋಗ, ವೈವಾಹಿಕ ಬದುಕಿನ ಸಾಂಗತ್ಯಗಳು ಒಂದು ಹಂತ ತಲುಪಿದ ಬಳಿಕ ಮಗುವನ್ನು ಪಡೆಯಬೇಕೆಂದು ನಿರ್ಧರಿಸಿದರು. ಒಂಬತ್ತು ತಿಂಗಳು ನಿರೀಕ್ಷೆ, ಸಂತಸಗಳಲ್ಲಿ ಕಳೆದೆವು. ದಿನ ತುಂಬುವ ಮೊದಲೇ ಬೆಂಗಳೂರಿಗೆ ಹೊರಡಬೇಕೆಂದು ನಾವು ತಯಾರಾದ ಹಿಂದಿನ ಸಂಜೆಯೇ ಬಸುರಿಗೆ ತೆಳುನೋವು ಶುರುವಾಯಿತು. ನನ್ನ ತಂಗಿ ರಾಧ, ಪೃಥ್ವಿ-ವಿಕಾಸರ ಗೆಳೆತನದ ಬಳಗ ನೆರವಿಗೆ ಬಂದು ಅವಳು ಆಸ್ಪತ್ರೆ ಸೇರಿದಳು. ಅಜ್ಜ ಅಜ್ಜಿಯರಾಗಲಿರುವ ನಾವು ನಾಲ್ವರು ಧಾವಿಸಿ ಬೆಂಗಳೂರು ತಲುಪಿದೆವು. 2024, ಜುಲೈ 29ರ ಸಂಜೆ ಆರೂವರೆಗೆ ಹಸುಗೂಸು ಕಿರುಚಿ ಅಳುವ ಸದ್ದು ಓಟಿಯೊಳಗಿನಿಂದ ಬಂತು. ತನ್ನ ಮಾವಜ್ಜ (ಎಂದರೆ ನನ್ನ ತಮ್ಮ ಸುಧೀಂದ್ರ) ಹುಟ್ಟಿದ ದಿನವೇ ಹುಟ್ಟಿದ `ಸೂರ್ಯ’ ಎಲ್ಲರ ಮುಖಗಳನ್ನು ಊರಗಲ ಹಿಗ್ಗಲಿಸಲು ಹಿಗ್ಗು ತುಂಬಿತು.
ಅಮ್ಮನ ಮಡಿಲಿಂದ ಎಷ್ಟು ಇಂತಹ ಮಕ್ಕಳು ಹೊರಬರಲು ಕೃಷ್ಣ ಮತ್ತು ನಾನು ನೆರವಾಗಿರುವೆವೋ, ಎಷ್ಟು ಹಸುಮಕ್ಕಳನ್ನು ಅವರ ಅಮ್ಮ-ಅಜ್ಜಿಯರ ಕೈಗಿತ್ತಿರುವೆವೋ ಲೆಕ್ಕವಿಲ್ಲ. ಆದರೆ ನಮ್ಮ ಮಗುವಿನ ಮಗು ಕೈಸೇರಿದಾಗ ಆಗುವ ಅನುಭವ ವರ್ಣಿಸಲಸದಳ. ಅದು ಹಾರ್ಮೋನುಗಳು ನೆರವೇರಿಸುವ ಪ್ರಕೃತಿಯ ಹುನ್ನಾರ. ಈ ಮಾಯೆಯನ್ನು ಒಪ್ಪಿಕೊಳ್ಳದೇ ವಿಧಿಯಿಲ್ಲ. ಬಾಣಂತಿಯೊಡನೆ ಹೊಸ ಜೀವವನ್ನು ಮನೆಗೆ ಕರೆತಂದಾಗ ಎದೆ ತುಂಬಿತೋ, ಉಸಿರು ಸಿಕ್ಕಿತೋ, ನಗುವುಕ್ಕಿತೋ, ಸಂತಸದ ಅಳು ಹರಿಯಿತೋ – ಒಂದೂ ತಿಳಿಯಲಾರದಷ್ಟು ಭಾವನೆಗಳ ಮಹಾಪೂರ.

ಒಂದು ಜನನದಿಂದ ಹಲವರು ಪದೋನ್ನತಿ ಪಡೆದುಬಿಟ್ಟಿದ್ದೆವು. ಮೊದಲ ಹದಿನೈದು ದಿನ ವಿಕಾಸನ ಅಮ್ಮ ಭಾರತಿ ಮತ್ತು ನಾನು ಪುಟ್ಟ-ಪುಟ್ಟಿ-ವಿಕಾಸ್ ಜೊತೆಗೆ ಬೆಂಗಳೂರಿನಲ್ಲೇ ಕಳೆದೆವು. ಮಗುವಿಗೆ ಹೊಂದಿಕೊಂಡೆವು. ಪಾಳಿಯಲ್ಲಿ ನಿದ್ದೆ ಬಿಟ್ಟೆವು. ಮಗುವಿನ ಹೊಟ್ಟೆ ತುಂಬಿಸಿ ಸುಮ್ಮನಿರಿಸಲು ಪಾಡು ಪಟ್ಟೆವು. ಎಣ್ಣೆ ತಿಕ್ಕಿ ಮೀಯಿಸಿ ರೋಮಾಂಚನಗೊಂಡೆವು. ಮಗುವನ್ನು ಬಳಗದವರಿಗೆಲ್ಲ ತೋರಿಸಿದೆವು, ಅದು ಕೊಂಚ ಮಿಸುಕಿದರೂ ಆತಂಕ ಅನುಭವಿಸಿದೆವು. ನಮ್ಮ ಕೂಸುಗಳು ಸಣ್ಣವಿದ್ದಾಗ ನಮ್ಮಮ್ಮ, ಅಜ್ಜಿಯರು ಹಾಡಿದ ಹಾಡುಗಳ ನೆನಪಿಸಿಕೊಂಡು ಹಾಡಿದೆವು. ಅದು ನಮ್ಮ ತಿಳಿವನ್ನು, ಅನುಭವವನ್ನು ನಿಕಷಕ್ಕೊಡ್ಡುವ ಕಾಲವಾಗಿತ್ತು.
ಬಳಿಕ ನಾಲ್ಕುನೂರು ಕಿಲೋಮೀಟರು ದಾಟಿ ಕವಲಕ್ಕಿಗೆ ಕರೆತಂದೆವು. ಇದುವರೆಗಿನ ನಮ್ಮ ಆಲೋಚನೆ, ವೇಳಾಪಟ್ಟಿ, ಆದ್ಯತೆ, ಮಾತುಕತೆಗಳಲ್ಲಿ ಗಮನಾರ್ಹ ಬದಲಾವಣೆಗಳಾದವು. ಮೊಮ್ಮಗುವನ್ನು ಆಡಿಸುವಲ್ಲಿ ಅಜ್ಜಂದಿರಾದ ಕೃಷ್ಣ, ವಿನಾಯಕರೂ ಹಿಂದೆ ಬೀಳಲಿಲ್ಲ, ತಮ್ಮದೇ ವಿಧಾನದಲ್ಲಿ ಪುಟ್ಟನ ಆಡಿಸುತ್ತ, ಸಂತೈಸುತ್ತ ಹಿಗ್ಗನುಭವಿಸಿದರು. ಪುಟ್ಟನೊಡನೆ ಕಳೆದ ಹಗಲು, ರಾತ್ರಿಗಳು ಎಂದೆಂದಿಗೂ ಉಳಿಯಲಿರುವ ಸವಿನೆನಪುಗಳಾಗಿ ಸಂಗ್ರಹವಾದವು.

(ಡಾ. ಎಚ್.ಎಸ್. ಅನುಪಮಾ)
ಹೆಚ್ಚುಕಡಿಮೆ ಮೂರು ತಿಂಗಳು `ಅಮ್ಮಮ್ಮತನದ ರಜೆ’ (ಗ್ರ್ಯಾಂಡ್ ಮೆರ್ನಿಟಿ ಲೀವ್) ತೆಗೆದುಕೊಂಡೆ. (ಕ್ಲಿನಿಕ್ಕಿಗೆ ಹದಿನೈದು ದಿನ ಮಾತ್ರ ರಜೆ ಹಾಕಿದೆ.) ಸಂಘಟನಾತ್ಮಕ ಚಟುವಟಿಕೆ, ಭಾಷಣ, ಬರವಣಿಗೆ ಮುಂತಾದ ವೃತ್ತಿಯೇತರ ಕೆಲಸಗಳಿಂದ ದೂರವುಳಿದು ಬದುಕಿನ ಹೊಚ್ಚಹೊಸ ಪಾತ್ರದ ರುಚಿಯನ್ನನುಭವಿಸಿದೆ. ಪುಟ್ಟನೊಡನೆ ಕಳೆದ ಕಾಲವು ಮಗುವಾಗಿದ್ದಾಗಿನ ಅವನ ಅಮ್ಮ-ಚಿಕ್ಕಮ್ಮರ ನೆನಪನ್ನೂ, ನನ್ನ ಅಮ್ಮತನದ ನೆನಪುಗಳನ್ನೂ ಎಳೆದು ತಂದಿತು. ಹೆಜ್ಜೆಹೆಜ್ಜೆಗೂ ಸಲಹಿದವರು ನೆನಪಾದರು.
ಅಲ್ಲಿಂದ ಇಲ್ಲಿಯವರೆಗೆ ಅನುದಿನ ಪುಟ್ಟನ ಸುದ್ದಿ, ನೆನಪುಗಳಿಂದಲೇ ಬೆಳಕು ಹರಿಯುತ್ತದೆ, ಕತ್ತಲಾಗುತ್ತದೆ. ಅವ ಮಗುಚಿದ, ಕೂತ, ತೊದಲು ಮಾತನಾಡಿದ, ಎದ್ದ, ನಿಂತ ಎನ್ನುವುದೆಲ್ಲ ನಮ್ಮದೇ ಸಾಧನೆ ಎಂಬಂತಾಗಿದೆ. ಹಲ್ಲು ಕಡಿದು ಮುದ್ದು ಮಾಡುತ್ತ ಮಾಡುತ್ತ ಮುಂದಿನ ಹಲ್ಲು ಸವೆದೇ ಹೋದಂತಿದೆ! ಸಣ್ಣ ಅವಕಾಶ, ಪುರುಸೊತ್ತು ಸಿಕ್ಕರೂ ಬೆಂಗಳೂರಿಗೆ ಹೋಗಿ ಪುಟ್ಟನ ಕಂಡುಬರುವಾ ಅನಿಸುತ್ತದೆ. ಈ ಅಮ್ಮ ತಮ್ಮನ್ನಿಷ್ಟು ಪ್ರೀತಿಸಿದ್ದಳೋ ಇಲ್ಲವೋ ಎಂದು ನಮ್ಮ ಮಕ್ಕಳು ಶಂಕಿಸಬಹುದಾದಷ್ಟು ಬದುಕು ಸೂರ್ಯಮಯವಾಗಿದೆ!
ಋತುಚಕ್ರ ತಿರುಗಿದೆ. ಪುಟ್ಟ ಸೂರ್ಯನಿಗೆ ವರ್ಷ ತುಂಬುತ್ತಿದೆ. ನನ್ನ ಮನದ ಅಸಂಖ್ಯ ಭಾವಗಳು, ಅನನ್ಯ ಅನುಭವಗಳಲ್ಲಿ ಕೆಲವಕ್ಕೆ ಅಕ್ಷರ ರೂಪ ಕೊಟ್ಟು ಇಲ್ಲಿಟ್ಟಿದ್ದೇನೆ. ಈ ಪದ ನನ್ನೊಬ್ಬಳದಲ್ಲ. ನಿಮ್ಮವೂ ಹೌದು. ತಮ್ಮ ಮಗಳಂದಿರ ಒಡಲಲ್ಲಡಗಿದ ಕನಸುಗಳ ಕಾಯುತ್ತಿರುವ ಅಸಂಖ್ಯ ಜೀವಗಳದ್ದೂ ಹೌದು. ಮಗುವು ಹೇಗೆ ಲೋಕಕ್ಕೆ ಸೇರಿದುದೋ ಹಾಗೆ ಮಗುವಿನೊಡನಾಟದ ಅನುಭವಗಳೂ ಲೋಕಸತ್ಯಗಳೇ. ಒಪ್ಪಿಸಿಕೊಳ್ಳಿ.

ಪುಟ್ಟನೊಡನಾಡುತ್ತ ನನ್ನಾಳದಲ್ಲಿ ದುಃಖದ ಸೆಳಕೊಂದೂ ಎಳೆಯುತ್ತಿದೆ. ಅದು ಅವನಂಥ ಹಸುಳೆಗಳಿಗೆ ನಾವು ಬಿಟ್ಟು ಹೋಗುತ್ತಿರುವ ಮಲಿನ, ಕ್ರೂರ ಸಮಾಜದ ಕುರಿತಾದದ್ದು. ಅಲ್ಲೆಲ್ಲೋ ಗಾಜಾ ಪಟ್ಟಿಯಲ್ಲಿ, ಉಕ್ರೇನಿನಲ್ಲಿ, ಇರಾನಿನಲ್ಲಿ, ಪಾಕಿಸ್ತಾನದಲ್ಲಿ, ನಮ್ಮಲ್ಲಿ, ಹಲವು ಗಡಿಗಳ ನೆಪಗಳಲ್ಲಿ ನೋಯುತ್ತಿರುವ, ನೊಂದೆಯಾ ಎಂದು ಅಳುವವರೂ ಇರದೆ ಕೊನೆಯುಸಿರೆಳೆಯುತ್ತಿರುವ, ದೌರ್ಜನ್ಯ-ಹಸಿವಿನಿಂದ ಕಂಗೆಟ್ಟಿರುವ ಅಸಂಖ್ಯ ಎಳೆಯ ಜೀವಗಳ ನೆನೆದು ಮನಸ್ಸು ವಿಹ್ವಲಗೊಳ್ಳುತ್ತಿದೆ. ಲೋಕದ ಎಲ್ಲ ಹಸುಳೆಗಳಿಗೂ ಪ್ರೇಮ, ಕಾಳಜಿಯ ಬೆಚ್ಚನೆ ಮಡಿಲು ದೊರೆಯುವಂತಾಗಲಿ; ಯುದ್ಧ, ನೋವು, ವಿಕೋಪಗಳು ಜೀವರನ್ನು ಬಾಧಿಸದಿರಲಿ ಎಂದು ನನ್ನಾಳದ ಅಳಲು ವಿಶ್ವ ಹೃದಯವನ್ನು ಪ್ರಾರ್ಥಿಸುತ್ತಿದೆ.
1. ರವಿ ಕಿರಣದಂತೆ
ಲೋಕವೇ ತಣ್ಣಗಾಗು
ಮಲಗಿಸಬೇಕು ಶಿಶುವನ್ನು.
ಕಾಣಬೇಕು ಅದು
ಬಣ್ಣಿಸಲಾಗದ ಕನಸುಗಳನ್ನು.
ನಂಬಬೇಕು ಲೋಕ
ತಾನರಿಯಲಾರದ
ಶಿಶು ಕಂಡ ಕನಸುಗಳನ್ನು..
ಉಬ್ಬಿದೆದೆಯ ನಾಯಕನೇ
ನಿಲಿಸು ನಿನ್ನ ಉದ್ದುದ್ದ
ಪೊಳ್ಳು ಭಾಷಣಗಳನ್ನು.
ಕೇಳಿಸಬೇಕು ಮಗುವಿಗೆ
ಪ್ರೇಮ ರಾಗದ ಮಟ್ಟುಗಳನ್ನು,
`ಲಿಂಗ ಮೆಚ್ಚಿ ಅಹುದಹುದೆನುವ’
ನಿತ್ಯ ಸತ್ಯ ಸೊಲ್ಲುಗಳನ್ನು
ನಿಲ್ಲಿಸಿ ಲೋಗರೇ
ಗೋಡೆ ಬೇಲಿಗಳನೆಬ್ಬಿಸದಿರಿ
ಹಗ್ಗ ಕಲ್ಲು ಕಂಬಗಳನೈತAದು..
ಬರೆಯದಿರಿ ದಯವಿಟ್ಟು
ಇದು ಇದೇ ಎಂದು ಕೂನ ಹಿಡಿವ
ಯಾವ ಅಂಕಿತವನ್ನೂ ..
ಬೆಳೆಯಲಿ ಮಗು ಮುಕ್ತ ಲೋಕದಲಿ
ಗುರುತರಿಯದ ಕಾಯವದು
ಬೆಳೆಯಬೇಕು `ಸೂರ್ಯ’ ಶಿಶು
ಜಗದ ಮೂಲೆಮೂಲೆಗಳ
ಹೊಕ್ಕು ಬರುವ ರವಿಕಿರಣದಂತೆ.
ನೆಲ ಮುಗಿಲುಗಳ ಸತ್ವ ಹೀರಿ
ಹರಡಿಕೊಳುವ ಬೋಧಿಯಂತೆ..
ಲೋಕ ಮಿಡಿತವೇ ಪ್ರಾಣದುಸಿರಾಗುವಂತೆ..
2. ಜಾನದ ಹಾಲನೂಡಿಸಿರೇ
ಮೊಲೆಹಾಲ ಕುಡಿದ ಮೇಲೂ
ಏಕೆ ಅಳುವುದು ಮಗುವೇ?
ಸೊಕ್ಕಿ ಎಳೆದು ಉಕ್ಕಿದ ಹಾಲು
ಕಟಬಾಯಿಂದ ಸುರಿದು
ಅಂಗಿ ಒದ್ದೆಯಾಗಿದೆ
ಹೊಟ್ಟೆ ತುಂಬಿದ ಸದ್ದು ಕೇಳುತಿದೆ
ಎಳಸು ಕಣ್ಣೆವೆಗಳೆಳೆಯುತ್ತಿವೆ
ನಿನ್ನ ಶಾಂತ ನಿದ್ರೆಗಾಗಿ
ಇಡೀ ಮನೆ ನಿಶ್ಶಬ್ದವಾಗಿದೆ..
ಅಷ್ಟಾದರೂ ಅಳುವಿಯೇಕೆ ಕೂಸೇ?
ಬಾಯ್ದೆರೆದ ಕಂದನ ತಣಿಸೇವು ಹೇಗೆ?
ಓ..
ಲೋಕ ಪೊರೆವ ತಾಯೇ
ಸಮಗಾರ ಭೀಮವ್ವ
ಇಳೆಗಿಳಿದು ಬಾರವ್ವ
ಅವ್ವತನದರಿವಿನ ಸವಿಯ
ಸಿಸುಮಗುವಿಗುಣಿಸೇ ನನ್ನವ್ವಾ..
ಓ
ಚೆನ್ನಮಲ್ಲನನರಸಿ ನಡೆದ
ಉಡುತಡಿಯ ಅಕ್ಕಯ್ಯಾ..
ನಿನ್ನ ಚೆಲುವಾಂತ ಗೊರವ
ಶಿಶುವಾಗಿ ಬಾಯಾರಿಹನಿಲ್ಲಿ
ಪ್ರೇಮತನಿಯ ಮೊಲೆವಾಲ
ಊಡಿಸೇ ಎಲೆಗವ್ವಾ..
ಮೊಲೆ ಕತ್ತರಿಸಿ ಇಟ್ಟವಳೆ
ಮಲೆಮಗಳೆ ನಂಗೆಲವ್ವ
ಮತ್ತೆ ಬೆಳೆದ ನಿನ್ನೆದೆಯ
ಕಂಡುಬಿಟ್ಟಿದೆ ಕೂಸು
ದಿಟ್ಟೆದೆಯ ಬಿಸಿಹಾಲ
ಉಣಬಡಿಸೇ ಚಿನ್ನವ್ವಾ..
ಹರಿಯ ಮೂರುತಿಗೆಂದು
ತೌರ ತೊರೆದ ನಚಿಯರಮ್ಮ
ನಿನ್ನಪ್ಪುಗೆಗಾಗಿ ಕನಲಿಹುದು ಚೆಲುವ
ಸೂರ್ಯ ನಾರಾಯಣ ಕೂಸು
ಭಕ್ತಿಯೊಲವ ಧಾರೆಯನು
ಹರಿಸ ಬಾರೇ ಬೀಬವ್ವಾ..
ಹಲವು ಮಕ್ಕಳ ತಾಯಿ
ಅಮ್ಮಮ್ಮ ತೆರೆಸಮ್ಮ
ನಿನ್ನ ಕಾರುಣ್ಯದೆದೆ ಹಾಲ
ನೂಡಿಸೇ ಅವ್ವಯ್ಯ..
ಕೃಷ್ಣನೂ ಕ್ರಿಸ್ತನೂ
ರೂಮಿಯೂ ರಾಬಿಯಳೂ
ಬಸವನೂ ಕಬೀರನೂ
ಇದ್ದ ಅನಾದಿ ಚಿಪ್ಪೊಂದು
ಒಡೆದು ಮುತ್ತು ಬಂದಿದೆ ನಮ್ಮನೆಗೆ..
ಬನ್ನಿರೇ ಲೋಕದೆಲ್ಲ
ಅಕ್ಕಯ್ಯಗಳಿರಾ ಅವ್ವೆಯರಿರಾ..
ಏನ ಉಂಡರೆ ಮುತ್ತು ಬೆಳಗುವುದೋ
ಜೀವ ತಂಪಾಗಿ ಶಾಂತವಾಗುವುದೋ
ಎಂದು ಕಾದಿಹೆವು ನಾವಿಲ್ಲಿ,
ಜಾನದ ಹಾಲನೂಡಿಸಿರೇ ದಮ್ಮಯ್ಯ..
`ಯಾಕಳುವೆ ಎಲೆ ಕಂದ
ಬೇಕಾದ್ದು ನಿನಗೀವೆ
ಹಲವು ತಾಯಿಯರೆದೆಯ ನೊರೆಹಾಲು
ನೊರೆಹಾಲಂತ ಅಕ್ಕರೆ
ನೀ ಕೇಳಿದಾಗ ಕೊಡುವರು..’
(ಕೊನೆಯ ಪ್ಯಾರಾ ಜಾನಪದ ಹಾಡಿನ ಕೊಂಚ ಬದಲಾದ ರೂಪ)
3. ದೃಷ್ಟಿ
`ಚಟ್ ಚಟಾ ಚಟ್
ಪಟ್ ಪಟಾ ಪಟ್
ಸಾಸಿವೆ ಉಪ್ಪು
ಮೆಣಸು ಎಳ್ಳು
ಹೊಟ್ಟಲಿ ಹಾರಲಿ
ಚೆಲುವ ಕೂಸಿಗೆ
ದೃಷ್ಟಿ ತೆಗೆಯಿರಿ
ಯರ್ಯಾರ ಕಣ್ಣು
ಹೇಗೋ ಏನೋ’
ಎಂದು ಒತ್ತೊತ್ತಿ
ಕೂಗುತಿದೆ ಲೋಕ..
ಅರೆರೆ, ತೆಗೆಯುವುದೇಕೆ?
ಕುಶಲವಾಗಿರಬೇಕಾದರೆ
ಬೀಳಬೇಕು ಕೂಸಿನ ಮೇಲೆ
ಕಾಳಿ ಬೋಳಿಯರ ಆಳ ದಿಟ್ಟಿ..
ನಾನು ನನದಿದು ಎಂಬ
ಕರ್ಪೂರವನುರಿಸಿ
ಕರಿ ತಿಲಕ ಇಟ್ಟಿಹೆವು
ಮಗುವಿನ ಹಣೆಯ ಮೇಲೆ..
ಲೋಕ ನೀಡಿದ ಸಂಕಟವ
ಕುಡಿದು ಬದುಕಿದ `ಬೋಳಮ್ಮ’ನೇ,
ಮಗುವ ಕಾಯಲಿ ನಿನ ದಿಟ್ಟಿ
ನೆಲೆಯಾಗು ಫಾಲದಲಿ..
ಚಟ್ ಚಟಾ ಚಟ್
ಪಟ್ ಪಟಾ ಪಟ್
ಹಗೆತನದ ಕೆಮ್ಮೆಣಸ
ಹೊರಗಣದಲೇ ಸುಟ್ಟು
ಘಾಟಿನ ಹೊಗೆ ಕರಗಿ
ಒಲೆದಂಡೆ ಕರಿಯಾಗಿ
ಕೆನ್ನೆ ಚುಕ್ಕೆಯಾಗಿಸಿಹೆವು..
ಊರ ಕಾದವಳೇ ಕಾಳಮ್ಮ
ನೆಲೆಯಾಗು ಚುಕ್ಕಿನಲಿ
ನಿನ ದಿಟ್ಟಿ ಕೂಸಿನ ಮೇಲಿರಲಿ
ಚಟ್ ಚಟಾ ಚಟ್
ಪಟ್ ಪಟಾ ಪಟ್
ಸಾವಿರುವ ಮನೆಗಳ
ಸಾಸಿವೆ ಕಾಳ ಬೇಡಿ
ಹೊಟ್ಟಿಸಿ ಕರಿಯಾಗಿಸಿ
ಗಲ್ಲದ ಬೊಟ್ಟಾಗಿಸಿಹೆವು
ಕಾಳ ಕಂಡರೆ ಕಾಕಾ ಎಂದು
ಬಳಗ ಕರೆವ ಕಾಗೆಯೇ
ಬೀಳಲಿ ಮಗುವಿನ ಮೇಲೆ
ನಿನ್ನ ಬಾಂಧವ್ಯದ ದಯೆ..
ಹಗಲ ಕಾಯಲಿ ನಿನ್ನ ಕರುಣೆ
ಚಟ್ ಚಟಾ ಚಟ್
ಪಟ್ ಪಟಾ ಪಟ್
ಅಸೂಯೆಯ ಎಳ್ ನೆಯ್ಯ
ಕಾಸಿ ಕಾಡಿಗೆಯಾಗಿಸಿ
ಚಿಕ್ಕ ಟಿಕ್ಕಿಯನಿಟ್ಟಿಹೆವು
ಅರೆತೆರೆದ ಕಂಗಳ ತುದಿಯಲ್ಲಿ..
ಇರುಳ್ಗತ್ತಲ ಬೆಳಕಾಗಿಸಿಕೊಂಡ
ಜಾಣ ಮುದಿ ಗೂಬೆಯೇ,
ಬಾ ಇಲ್ಲಿ ನೆಲೆಯಾಗು..
ಮಗುವಿನ ಇರುಳ ಕಾಯಲಿ
ಗವ್ಗತ್ತಲಲೂ ಬದುಕುವ
ನಿನ್ನ ದಿಟ್ಟ ನೆಟ್ಟ ದಿಟ್ಟಿ..
ಚಟ್ ಚಟಾ ಚಟ್
ಪಟ್ ಪಟಾ ಪಟ್
ಚೆಲುವ ಕೂಸಿಗೆ
ದೃಷ್ಟಿ ತೆಗೆಯಿರೇ
ಎಂದೊತ್ತುತಿದೆ ಲೋಕ..
ಕಾಗಕ್ಕ ಗೂಬಕ್ಕ
ಕಾಳಮ್ಮ ಬೋಳಮ್ಮರೇ
ತೆಗೆವವರಲ್ಲ ನಾವು
ಇರಿಸಿಕೊಂಬವರು.
ಹೊಟ್ಟದೇ ಹಾರದೇ
ನೆಲೆಯಾಗ ಬನ್ನಿರೇ
ಕೂಸಿನ ಬಲವಾಗಿ
ಬೆಂಬಲದ ಬಾಳರಿವಾಗಿ
ನೆಲೆ ನಿಲ್ಲ ಬನ್ನಿರೇ..
(ಕೃತಿ: ಅಮ್ಮಮ್ಮನ ಕವಿತೆಗಳು (ಅಮ್ಮಮ್ಮನ ಕವಿತೆಗಳು), ಲೇಖಕರು: ಡಾ. ಎಚ್.ಎಸ್. ಅನುಪಮಾ, ಪ್ರಕಾಶಕರು: ಲಡಾಯಿ ಪ್ರಕಾಶನ, ಬೆಲೆ: 100/-)

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

