ಆ ಗುಂಪಿನ ತಮಿಳರನ್ನು ನೋಡಿ ಕೆಲವು ಸಲ ಹೊಟ್ಟೆ ಉರಿಯೋದು. ಆ ಭಾಷೆಯಲ್ಲಿ ಬರುವ ಎಲ್ಲಾ ಪತ್ರಿಕೆಗಳನ್ನು ತರಿಸೋರು ಮತ್ತು ಹತ್ತು ಹದಿನೈದು ಜನ ಗ್ರೂಪ್ ಮಾಡಿಕೊಂಡು ಅದರ ಖರ್ಚು ಶೇರ್ ಮಾಡುತ್ತಿದ್ದರು. ಇನ್ನೂ ವಿಶೇಷ ಅಂದರೆ ಡಿ ಎಂ ಕೆ ಅವರು ತರಿಸುತ್ತಿದ್ದ ಪತ್ರಿಕೆ ಡಿ ಎಂ ಕೆ ವಿರೋಧಿಗಳು ತರಿಸುತ್ತಾ ಇರಲಿಲ್ಲ. ಅವರು ಇವರು ಪರಸ್ಪರ ಮಾತು ಕತೆ ಸಹ ಇಲ್ಲ! ಕೆಲವು ಸಲ ಇದೇ ವಿಷಯವಾಗಿ ತಮಿಳಿನಲ್ಲಿ ಜೋರು ಜೋರು ಮಾತುಕತೆ ಜಗಳ ಆಗುತ್ತಿತ್ತು. ಇದನ್ನು ದೂರ ನಿಂತು ನೋಡುತ್ತಿದ್ದ ನಮಗೆ ಒಂದು ರೀತಿ ಕುತೂಹಲ ಮತ್ತು ತಮಾಷೆ!
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ೭೧ನೇ ಬರಹ ನಿಮ್ಮ ಓದಿಗೆ
ಹಿಂದಿನ ಕಂತು ಹೀಗೆ ಅಂತ್ಯ ಕಂಡಿತ್ತು
ಜಲ್ಲಿ ಮೆಶೀನ್ ಬಲಕ್ಕೆ ತಿರುಗಿದರೆ ಅಟ್ಟುರು ಮೂಲಕ ಯಲಹಂಕಕ್ಕೆ ಒಂದು ಎತ್ತಿನ ಗಾಡಿ ಹೋಗುವಷ್ಟು ರಸ್ತೆ ಇತ್ತು. ಆಗ 268 ನಂಬರಿನ ಒಂದು ಬಸ್ಸು ಈ ದಾರಿಯಲ್ಲಿ ಮೆಜೆಸ್ಟಿಕ್, ಮಾರ್ಕೆಟ್ಗೆ ಇತ್ತು. ಬಹುಶಃ ನಗರಕ್ಕೆ ಸಂಪರ್ಕಿಸುವ ಕೆಲವೇ ಕೆಲವು ಬಸ್ಸುಗಳಲ್ಲಿ ಈ ಮಾರ್ಗ ಸಹ ಒಂದು. ಜನ ಕಿಕ್ಕಿರಿದು ತುಂಬಿಕೊಂಡ ಬಸ್ಸು ಗರ್ಭಿಣಿ ಹೆಂಗಸರ ಹಾಗೆ ನಿಧಾನಕ್ಕೆ ಬುಸ್ ಬುಸ್ ಉಸಿರು ಬಿಡುತ್ತಾ ಗರ್ಭದ ಭಾರಕ್ಕೆ ಕುಸಿಯುತ್ತೇನೋ ಎನ್ನುವ ಭಯ ಹುಟ್ಟಿಸುತ್ತಿತ್ತು.
ಜಲ್ಲಿ ಮೆಶೀನ್ ಹತ್ತಿರ ಎರಡು ಟೆಂಟ್ ಇದ್ದವು. ಒಂದು ಎಡಕ್ಕೆ ತಿರುಗಿ ಒಂದು ಹದಿನೈದು ಹೆಜ್ಜೆ ಹಾಕಿದರೆ ಅಲ್ಲಿ ಮತ್ತೊಂದು ಬಲಕ್ಕೆ ತಿರುಗಿ ಹದಿನೈದು ಹೆಜ್ಜೆ ಹಾಕಿದರೆ ಅಲ್ಲಿ..! ನಮಗೆ ಆಗ ಇವೇ ರಿಕ್ರಿಯೇಷನ್ ಸೆಂಟರ್ಗಳು. ಹಿಂದಿ ತಮಿಳು ತೆಲುಗು ಸಿನೆಮಾಗಳು ಕೆಲವು ಸಲ ವಾರಕ್ಕೊಮ್ಮೆ ಬದಲಾದರೆ ಕೆಲವು ಸಲ ಮೂರು ದಿವಸಕ್ಕೆ ಬದಲಾಗುತ್ತಿದ್ದವು. ನಮಗೆ ತೆಲುಗು ತಮಿಳಿನ ಮಲೆಯಾಳದ ಪ್ರಾಥಮಿಕ ಕಲಿಕೆ ಆಗಿದ್ದು ಇಲ್ಲಿ. ಹಿಂದಿ ಮೊದಲೇ ಬರುತ್ತಿತ್ತು. ನಿಧಾನಕ್ಕೆ ಈ ರಸ್ತೆ ಅಭಿವೃದ್ಧಿ ಕಾಣುತ್ತಾ ಬಂದಿದೆ. ಈಗ ಮೊದಲ ಬಾರಿಗೆ ಈ ರಸ್ತೆ ನೋಡಿದವರು ಹಿಂದೆ ಇದ್ದ ಅದರ ರೂಪವನ್ನು ಕಲ್ಪಿಸಲೂ ಅಸಾಧ್ಯ….!
ಈಗ ಮುಂದಕ್ಕೆ ಓಡೋಣವೇ
ಜಲ್ಲಿ ಮೆಶೀನ್ ಬಳಿಯ ಟೆಂಟ್ ಸಿನಿಮಾ ಬಗ್ಗೆ ಹೇಳುತ್ತಿದ್ದೆ. ವಿದ್ಯಾರಣ್ಯಪುರಕ್ಕೆ ಬಂದಾಗ ನಮಗೆ ರಿಕ್ರಿಯೇಷನ್ ಅಂದರೆ ಅಲ್ಲಿ ಹತ್ತಿರದಲ್ಲಿದ್ದ ಈ ಎರಡು ಟೆಂಟ್ ಸಿನೆಮಾ ಗಳು ಮತ್ತು ಜಾಲಹಳ್ಳಿ ವೆಸ್ಟ್ನಲ್ಲಿದ್ದ ಒಂದು ಮಿಲಿಟರಿ ಥಿಯೇಟರು. ಬಿಇ ಎಲ್ ಕಾರ್ಖಾನೆ ಮುಂದೆ ಬಂದು ಒಂದು ನೂರುಗಜ ನಡೆದರೆ ಆಗ ಅಲ್ಲಿ ಗೋಕುಲ ಹೌಸ್ ಪಕ್ಕ ಒಂದು ಟೆಂಟ್ ಸಿನಿಮಾ ಥಿಯೇಟರು. ಅದರ ಹೆಸರು ಮುರಳಿ ಅಂತ. ಅದರ ಪಕ್ಕ ಒಂದು ಪೆಟ್ರೋಲ್ ಬಂಕು. ಅದರ ಎದುರು ಒಂದು ರಸ್ತೆ. ರಸ್ತೆ ಮೂಲಕ ಹೋದರೆ ಒಂದು ಐವತ್ತು ನೂರು ಮನೆಗಳ ಗುಂಪು. ಅದು ಎಂ ಎಸ್ ಆರ್ ನಗರ ಅಂತ ಆಗ ತಾನೇ ಬೆಳೆಯುತ್ತಿತ್ತು. ಎಂ ಎಸ್ ರಾಮಯ್ಯ ಅವರು ಅವರಿಗೆ ಸೇರಿದ ಜಮೀನನ್ನು ಸೈಟ್ ಹಾಗೆ ಗುರುತು ಮಾಡಿ ಮಾರಿದರು. ತುಂಬಾ ಕಡಿಮೆ ಬೆಲೆ. ಕಾರ್ಖಾನೆ ಕಾರ್ಮಿಕರು ಈ ಸೈಟ್ಗಳನ್ನು ಕಂತಿನಲ್ಲಿ ಕೊಂಡು ಅಲ್ಲಿ ತಮ್ಮ ಅಗತ್ಯಕ್ಕೆ ತಕ್ಕ ಹಾಗೆ ಪುಟ್ಟ ಪುಟ್ಟ ಮನೆ ಕಟ್ಟಿಕೊಂಡಿದ್ದರು. ಬರುತ್ತಿದ್ದ ಸಂಬಳ ಎರಡು ಹೊತ್ತು ಗಂಜಿಗೂ ಸಾಲದೇ ಇದ್ದರೂ ತಲೆ ಮೇಲೆ ಒಂದು ಸೂರು ಬೇಕು ಎನ್ನುವ ಮಾನವ ಸಹಜವಾದ ಆಸೆ ಈ ಸ್ವಂತ ಮನೆಗೆ ಪ್ರೇರೇಪಣೆ ಅಂತ ಆಗ ಅನಿಸಿತ್ತು. ಮೂಲ ಸೌಕರ್ಯ ಅಂದರೆ ಬಹುಮುಖ್ಯವಾಗಿ ಮನೆ ಕೆಲಸದ ತಾಣಕ್ಕೆ ಸಮೀಪ ಅನ್ನುವುದು! ಇಲ್ಲೂ ತಮಾಷೆ ಅಂದರೆ ಆಂಧ್ರದ ಕೆಲಸಗಾರರು ಹೆಚ್ಚು ಜನ ಮನೆ ಕಟ್ಟಿಸಿಕೊಂಡಿದ್ದರು. ಕನ್ನಡದವರು ಇರಲಿಲ್ಲ. ಇದಕ್ಕೆ ಕಾರಣ ಅಂದರೆ ಕಾರ್ಖಾನೆ ಶುರುವಾದ ಹೊಸತರಲ್ಲಿ ಇಲ್ಲಿಗೆ ಹಿಂಡು ಹಿಂಡು ವಲಸೆ ಬಂದವರು ಕೇರಳದವರು ಮೊದಲು, ನಂತರ ತಮಿಳು ನಾಡಿನವರು, ನಂತರ ಆಂಧ್ರದವರು. ಇವರೆಲ್ಲರೂ ತುಂಬಿದ ಮೇಲೆ ಸ್ಥಳೀಯರಿಗೆ ಅಲ್ಪ ಸ್ವಲ್ಪ ಅವಕಾಶ ಸಿಕ್ಕಿದವು. ಕಾರ್ಖಾನೆ ಶುರು ಆದ ಮೊದಮೊದಲು ಇವರದ್ದೇ ಹೆಚ್ಚು ಪ್ರಾಬಲ್ಯ ಮತ್ತು ಗಟ್ಟಿ ಧ್ವನಿ. ಲೋಕಲ್ನವರನ್ನು ಕಂಡರೆ ಒಂದು ರೀತಿ ಅಸಡ್ಡೆ ಮಾತಿನಲ್ಲಿ ನಡವಳಿಕೆಯಲ್ಲಿ ಕಾಣುತ್ತಿತ್ತು. ಕನ್ನಡದವರಲ್ಲಿ ಎಂಟರ್ ಪ್ರೈನರ್ ಶಿಪ್ ಇಲ್ಲ. ಅವರಲ್ಲಿ ಮುನ್ನುಗ್ಗುವ ಚಾಳಿ ಇಲ್ಲ, ಅವರು ಸೋಂಬೇರಿಗಳು…. ಮೊದಲಾದ ಯೋಚನೆಗಳನ್ನು ಎಷ್ಟು ಸಲೀಸಾಗಿ ಹರಿಯ ಬಿಡುತ್ತಿದ್ದರು ಎಂದರೆ ಅಪ್ಪಟ ನೂರಕ್ಕೆ ನೂರು ಕನ್ನಡಿಗರೂ ಸಹ ಇದನ್ನು ನಂಬಿಬಿಟ್ಟಿದ್ದರು….! ಇದೇ ನಂಬಿಕೆಯನ್ನು ನಮ್ಮ ಸ್ಥಳೀಯ ಪತ್ರಿಕೆಗಳು ತಲೆಯೊಳಗೆ ತುಂಬಿದ್ದವು. ನಿಧಾನಕ್ಕೆ ಈ ಮೈಂಡ್ ಸೆಟ್ನಿಂದ ಕನ್ನಡಿಗ ಹೊರ ಬಂದ. ಬಂದವನು ತೆಪ್ಪಗಿರಲಿಲ್ಲ, ಬೆಳೆದ ಬೆಳೆದ ಬೆಳೆದ ಮತ್ತು ದೈತ್ಯನಾಗಿ ಬೆಳೆದ! ಇಡೀ ಪ್ರಪಂಚಕ್ಕೆ ತನ್ನತನ ಕಾಣುವ ಹಾಗೆ ವಿಸ್ತಾರನಾದ. ಈಚಿನ ವರ್ಷಗಳಲ್ಲಿ ನಮ್ಮ ನಂತರದ ಪೀಳಿಗೆಯ ಕನ್ನಡಿಗರ ಸಾಧನೆ ಕಂಡಾಗ ಮೈ ನವಿರೇಳುತ್ತದೆ.
ಬೆಂಗಳೂರಿನಲ್ಲೇ ಇದ್ದೀನಿ ಹುಟ್ಟಿ ಬೆಳೆದದ್ದು ಇಲ್ಲೇ ಅಂತೀಯಾ, ತಮಿಳು ಬರೋಲ್ಲವಾ ಅಂತ ಎಷ್ಟೋ ಕೋಲೀಗುಗಳು ನನ್ನ ಕೇಳಿದ್ದರು, ಕೆಲಸಕ್ಕೆ ಸೇರಿದ ಹೊಸದರಲ್ಲಿ. ಇಲ್ಲಪ್ಪಾ ತಮಿಳು ಇಲ್ಲದೇ ಬೆಂಗಳೂರಿನಲ್ಲಿ ಬದುಕಬಹುದು ಅಂತ ತೋರಿಸಲು ತಮಿಳು ಕಲಿತಿಲ್ಲ ಅಂತ ಹೇಳುತ್ತಾ ಇದ್ದದ್ದು ನಾನು. ಅದು ಹೇಗೋ ತಮಿಳು ತೆಲುಗು ಕಲಿಯದೇ ಬೆಂಗಳೂರಿನಲ್ಲಿ ಇಷ್ಟು ವರ್ಷ ಜೀವನ ಸಾಗಿಸಿದೆನಲ್ಲಾ ಇದು ಈಗ ನನಗೆ ಒಂದು ರೀತಿ ಆಶ್ಚರ್ಯ ಹುಟ್ಟಿಸುವ ಸಂಗತಿ. ಅದೇ ರೀತಿ ಒಂದೊಂದು ಸಲ ಮುಜುಗರ ಸಹ ಹುಟ್ಟುತ್ತೆ; ಕಾರಣ ತಮಿಳು ತೆಲುಗು ಕಲಿಯದೇ ಅಲ್ಲಿನ ಒಳ್ಳೆ ಸಾಹಿತ್ಯ ಓದುವುದು ತಪ್ಪಿ ಹೋಯಿತಲ್ಲಾ ಎನ್ನುವ ಸಂಕಟ ಮುಜುಗರಕ್ಕೆ ಕಾರಣ ಆಗಿದೆ. ಆದರೆ ಇದು ಈಗ ಇತಿಹಾಸ ಮತ್ತು ನನ್ನ ಲೆಕ್ಕದಲ್ಲಿ ಒಂದು ಅಪೂರ್ವ ದಾಖಲೆ, ಯಾರೂ ಮುರಿಯಲು ಆಗದೇ ಇರುವ ದಾಖಲೆ, ಈ ಎರಡು ಭಾಷೆ ಕಲಿಯದೆ ಬೆಂಗಳೂರಿನಂತಹ ಕಾಸ್ಮೋಪಾಲಿಟನ್ ನಗರದಲ್ಲಿ ಎಪ್ಪತ್ತೈದು ವರ್ಷ ಕಳೆದೆ ಎನ್ನುವುದು!
ಹೊಸಾ ಮನೆಗೆ ಬಂದು ಸೇರಿಕೊಂಡೆ ಅಂದೆ. ಇಲ್ಲಿ ನನ್ನ ಟೈಮ್ ಪಾಸ್ ಅಂದರೆ ಬೆಳಿಗ್ಗೆ ಶಿಫ್ಟ್ ಇದ್ದಾಗ ಕೆಲಸ ಮುಗಿಸಿಕೊಂಡು ಮೂರಕ್ಕೆ ಮನೆ ಸೇರು. ಮನೆ ಮೇಲಿನ ಟೆರೇಸ್ನಲ್ಲಿ ನಿಂತು ಮನೆ ಪಕ್ಕದಲ್ಲಿನ ಕೆರೆ, ದೇವದಾರು ಮರ, ಮತ್ತು ಮತ್ತು ಇತರ ಮರಗಳು, ಕೊಕ್ಕರೆ ಮತ್ತು ಬೇರೆ ಬೇರೆ ಪಕ್ಷಿ ವೀಕ್ಷಣೆ, ಹೆಂಡತಿ ಮಗು ಒಂದಿಗೆ ಆಟ, ನಂತರ ಮೂರೂ ಜನ ನಾಗಾಲ್ಯಾಂಡ್ ಸರ್ಕಲ್ಗೆ ವಾಕಿಂಗ್. ಕೆಲವು ಸಲ ಗೋಕುಲದವರೆಗೂ ತ್ರಿಬಲ್ ರೈಡ್. ಅಲ್ಲಿ ಸಿನಿಮಾ ನೋಡೋದು, ಸಮೋಸ ತಿನ್ನೋದು ಇದು ಪಾರ್ಟ್ ಆಫ್ ಲೈಫು. ಮಧ್ಯಾಹ್ನ ಶಿಫ್ಟ್ ಆದರೆ ಕೆಲಸಕ್ಕೆ ಹೋಗುವವರೆಗೆ ಮನೆಯಲ್ಲಿ ಅದು ಇದು ಕೆದಕೋ ಕೆಲಸ. ಮಗು ಜತೆ ಆಟ ಮತ್ತು ಒಂದು ಸುತ್ತು ಸೈಕಲ್ ಮೇಲೆ. ಇದು ಒಂದು ತರಹ ರೂಟೀನ್ ಆಗಿರಬೇಕಾದರೆ ಒಂದು ಕ್ರಿಯೆ ಜರುಗಿತು. ಒಂದು ಕೆಲಸ ಆಯಿತು ಅನ್ನುವುದರ ಬದಲು ಕ್ರಿಯೆ ಜರುಗಿತು ಅಂತ ಸಾಹಿತ್ಯಕವಾಗಿ ಹೇಳ್ತಾ ಇದ್ದಾನೆ ಎನ್ನುವ ಆಶ್ಚರ್ಯ ನಿಮ್ಮ ಮುಖದಲ್ಲಿ ಎದ್ದು ಕಾಣಿಸುತ್ತಿದೆ. ಈಗ ಅದಕ್ಕೇ ಬಂದೆ. ಏನು ಕ್ರಿಯೆ ಅಂದಿರಾ.. ಅದರ ಹಿನ್ನೆಲೆ ಹೀಗೆ.
ಮೆಜೆಸ್ಟಿಕ್ನಲ್ಲಿ ಹಳೇ ಪುಸ್ತಕದ ಅಂಗಡಿ ಸುತ್ತಿ ಸುತ್ತಿ ಪುಸ್ತಕ ಕೊಂಡು ತಂದು ಅದನ್ನ ಓದುತ್ತಾ ರಾಶಿ ರಾಶಿ ಹಳೇ ಪುಸ್ತಕ ಹೊಸದರ ಜತೆಗೆ ಪೇರಿಸಿ ಇಟ್ಟು ಬಿಟ್ಟಿದ್ದೆ ಅಂತ ಹಿಂದೆ ನಿಮಗೆ ಹೇಳಿದ್ದೆ ತಾನೇ? ಸೆಕೆಂಡ್ ಶಿಫ್ಟ್ನಲ್ಲಿ ಕೆಲಸ ಹೆಚ್ಚು ಇರ್ತಾ ಇರಲಿಲ್ಲ ಅಂತಲೂ ಹೇಳಿದ್ದೆ ತಾನೇ? ಪುಸ್ತಕ ಓದಲು ಬೇಕಾದಷ್ಟು ಸಮಯ ಸಿಕ್ಕುತ್ತಾ ಇತ್ತು. ನನ್ನ ಜ್ಞಾನಾಭಿವೃದ್ಧಿ ವೇಗ ಪಡೆಯಿತು ಮತ್ತು ಈ ಓದು ಎನ್ನುವ ಹವ್ಯಾಸ ಒಂದು ಚಟ ಆಗಿ ಅಂಟಿಕೊಂಡಿತು. ಈಗಲೂ ಈ ಚಟ ಹೇಗೆ ಅಂಟಿದೆ ಅಂದರೆ ಹಾಸಿಗೆ ದಿಂಬಿನ ಪಕ್ಕ ಒಂದು ರಾಶಿ ಪುಸ್ತಕ ನನ್ನ ಜತೆ ಮಲಗುತ್ತದೆ! ಓದಿ ಓದಿ ತಲೆ ತುಂಬಿದರೆ ಏನಾಗುತ್ತೆ ಎನ್ನುವುದರ ಅರಿವು ಮೊದಲು ಇರಲಿಲ್ಲ. ಅದು ಸ್ಫೋಟಗೊಂಡಿದ್ದು ಒಂದು ಕಿಡಿ ಮೂಲಕ. ನನಗೆ ಹೀಗೆ ಓದಿದ ಪುಸ್ತಕಗಳ ವಿಚಾರವಿನಿಮಯ ಗೆಳೆಯರ ಸಂಗಡ ನಡೆಯುತ್ತಾ ಇತ್ತು. ಅವರುಗಳೂ ಸಹ ಓದುವ ಚಟ ಅಂಟಿಸಿಕೊಂಡವರು. ಗೆಳೆಯ ನಟರಾಜನಿಗೂ ಈ ಚಟ. ಇಬ್ಬರೂ ಗಂಟೆ ಗಟ್ಟಲೆ ನಾವು ಓದಿದ ಪುಸ್ತಕಗಳ ಬಗ್ಗೆ ಚರ್ಚೆ ನಡೆಸುತ್ತಾ ಇದ್ದೆವು. ಕೆಲವು ಸಲ ಅವನ ಮಾತು ಮತ್ತು ಒಲವು ನನಗೆ ಹಿಡಿಸುತ್ತಾ ಇರಲಿಲ್ಲ. ಅವನು ಮೆಚ್ಚಿದ ಸಾಹಿತಿಗಳನ್ನು ಚುಡಾಯಿಸಿ ಚುಡಾಯಿಸಿ ಖುಷಿ ಪಡುತ್ತಿದ್ದೆ. ಪಾಪ ಅವನು ಜಂಟಲ್ ಮನ್ ಆದ್ದರಿಂದ ಇದನ್ನು ಸಹಿಸಿಕೊಳ್ಳುತ್ತಿದ್ದ. ಇದು ಈಚೆಗೆ ಹೆಚ್ಚು ಸ್ಪಷ್ಟವಾಗಿದೆ. ಹೀಗೇ ಒಂದು ದಿವಸ ಯಾರೋ ಒಬ್ಬರು ನವ್ಯ ಸಾಹಿತಿಯನ್ನು ಹಿಗ್ಗಾಮುಗ್ಗಾ ಚುಡಾಯಿಸಿ ಬಿಟ್ಟಿದ್ದೆ ಅಂತ ಕಾಣುತ್ತೆ. ಬಹುಶಃ ಆಗ ತಾನೇ ಹೆಸರು ಮಾಡುತ್ತಿದ್ದ ಲಂಕೇಶ್ ಇರಬಹುದು. ಅವನು ಅಂದರೆ ನಟರಾಜ್ ತುಂಬಾ ಇಷ್ಟ ಪಡುತ್ತಿದ್ದ ನವ್ಯ ಸಾಹಿತಿ ಅವರು. ಪಾಪ ಮನಸಿಗೆ ಬಹಳ ಹಿಂಸೆ ಆಗಿರಬೇಕು. ಹೇಗೋ ತಡೆದುಕೊಂಡು ಬಿಟ್ಟ ಅಂತ ತೋರುತ್ತದೆ. ಅದಾದ ಸ್ವಲ್ಪ ಹೊತ್ತಿನಲ್ಲೇ ಮಾತು ಮಯೂರ ಮಾಸ ಪತ್ರಿಕೆ ಕಡೆ ತಿರುಗಿತು. ಮಯೂರ ಕನ್ನಡದಲ್ಲಿ ಪ್ರಕಟ ಆಗುತ್ತಿದ್ದ ಮತ್ತು ಈಗಲೂ ಆಗುತ್ತಿರುವ ಪ್ರಜಾವಾಣಿ ಪತ್ರಿಕಾ ಸಮೂಹದ ಮಾಸಿಕ ಪತ್ರಿಕೆ. ವಾರಪತ್ರಿಕೆಯಾಗಿ ಸುಧಾ ಹೆಸರು ಮಾಡಿದ್ದರೆ ಮಾಸ ಪತ್ರಿಕೆಯಾಗಿ ಮಯೂರ ಹೆಸರು ಮಾಡಿತ್ತು. ಕಸ್ತೂರಿ, ಸಂಯುಕ್ತ ಕರ್ನಾಟಕ ಪತ್ರಿಕಾ ಸಮೂಹದಿಂದ ಪ್ರಕಟವಾಗುತ್ತಿದ್ದ ಮಾಸಿಕ ಪತ್ರಿಕೆ. ಇದು ಡೈಜೆಸ್ಟ್ (ರೀಡರ್ಸ್ ಡೈಜೆಸ್ಟ್.. ಇಂಗ್ಲಿಷ್ ಪತ್ರಿಕೆಯ ಹಾಗೆ) ಎಂದು ಹೆಸರು ಮಾಡಿತ್ತು. ಇದೇ ಗುಂಪಿನ ಕರ್ಮವೀರ ಪತ್ರಿಕೆ ಸಾಪ್ತಾಹಿಕ. ತುಷಾರ ಪತ್ರಿಕೆ ಉದಯವಾಣಿ ಬಳಗದ ಮಾಸ ಪತ್ರಿಕೆ, ಇದೇ ಸಮೂಹದಿಂದ ತರಂಗ ವಾರಪತ್ರಿಕೆ ಪ್ರಕಟ ಆಗುತ್ತಿದೆ.

ಆಗಿನ ಕನ್ನಡ ಚಳುವಳಿ ಅವರ ಮಾತು ನಮಗೆ ವೇದ ವಾಕ್ಯ. ಕನ್ನಡ ಪುಸ್ತಕ ಕೊಳ್ಳಿ, ಕನ್ನಡ ಪುಸ್ತಕ ಓದಿ ಎನ್ನುವ ಭಾಷಣ ನಮಗೆ ಅತ್ಯಂತ ಪ್ರಿಯವಾದದ್ದು. ಅದೇ ರೀತಿ ಕನ್ನಡ ಪತ್ರಿಕೆ ಕೊಂಡುಕೊಳ್ಳಿ, ಕನ್ನಡ ಪತ್ರಿಕೆ ಓದಿ ಕನ್ನಡ ಬೆಳೆಸಿ ಎನ್ನುವ ಸ್ಲೋಗನ್ ಬೇರೆ. ಕನ್ನಡ ಪತ್ರಿಕೆ ಕೊಂಡರೆ ನಮಗೇನು ಲಾಭ, ಪತ್ರಿಕೆ ಮಾಲೀಕ ಉದ್ಧಾರ ಆಗ್ತಾನೆ ಅಷ್ಟೇ ಎನ್ನುವ ಲಾಜಿಕ್ ಇನ್ನೂ ಹುಟ್ಟಿರಲಿಲ್ಲ. ನನ್ನ ಸಹೋದ್ಯೋಗಿ ಕೃಷ್ಣಮೂರ್ತಿ (ಇವನ ಬಗ್ಗೆ ತುಂಬಾ ಹೇಳುವ ವಿಷಯಗಳ ಖಜಾನೆ ನನ್ನ ಬಳಿ ಇದೆ)ಮೊಟ್ಟ ಮೊದಲು ಈ ಲಾಜಿಕ್ ಅದೇ ಪತ್ರಿಕಾ ಮಾಲೀಕ ಉದ್ಧಾರ ಆಗುವ ಯೋಚನೆ ಹರಿಬಿಟ್ಟ. ಅದರಿಂದ ಈ ಸ್ಲೋಗನ್ನಲ್ಲಿ ಪತ್ರಿಕಾ ಮಾಲೀಕರು ಇನ್ವಾಲ್ವ್ ಆಗಿದ್ದರಾ ಎನ್ನುವ ಸಂದೇಹ ಹಲವು ವರ್ಷ ನನ್ನ ತಲೆ ಕೊರೆದದ್ದು ನಿಜ ಅಂದರೆ ನಿಜ ಸಾರ್. ಹೀಗಾಗಿ ಪ್ರಕಟವಾಗುತ್ತಿದ್ದ ಎಲ್ಲಾ ದಿನ. ವಾರ. ಮಾಸ ಪತ್ರಿಕೆ ಕೊಳ್ಳುತ್ತಿದ್ದೆವು ಮತ್ತು ಪಾರಾಯಣ ಮಾಡುತ್ತಿದ್ದೆವು. ಹೀಗೇ ಒಂದು ಒಂದಲ್ಲ ಹಲವು ತಮಿಳು ಭಾಷಿಕರ ಗುಂಪುಗಳು ಇದ್ದವು. ಆ ಗುಂಪಿನ ತಮಿಳರನ್ನು ನೋಡಿ ಕೆಲವು ಸಲ ಹೊಟ್ಟೆ ಉರಿಯೋದು. ಆ ಭಾಷೆಯಲ್ಲಿ ಬರುವ ಎಲ್ಲಾ ಪತ್ರಿಕೆಗಳನ್ನು ತರಿಸೋರು ಮತ್ತು ಹತ್ತು ಹದಿನೈದು ಜನ ಗ್ರೂಪ್ ಮಾಡಿಕೊಂಡು ಅದರ ಖರ್ಚು ಶೇರ್ ಮಾಡುತ್ತಿದ್ದರು. ಇನ್ನೂ ವಿಶೇಷ ಅಂದರೆ ಡಿ ಎಂ ಕೆ ಅವರು ತರಿಸುತ್ತಿದ್ದ ಪತ್ರಿಕೆ ಡಿ ಎಂ ಕೆ ವಿರೋಧಿಗಳು ತರಿಸುತ್ತಾ ಇರಲಿಲ್ಲ. ಅವರು ಇವರು ಪರಸ್ಪರ ಮಾತು ಕತೆ ಸಹ ಇಲ್ಲ! ಕೆಲವು ಸಲ ಇದೇ ವಿಷಯವಾಗಿ ತಮಿಳಿನಲ್ಲಿ ಜೋರು ಜೋರು ಮಾತುಕತೆ ಜಗಳ ಆಗುತ್ತಿತ್ತು. ಇದನ್ನು ದೂರ ನಿಂತು ನೋಡುತ್ತಿದ್ದ ನಮಗೆ ಒಂದು ರೀತಿ ಕುತೂಹಲ ಮತ್ತು ತಮಾಷೆ!
ಇನ್ನೂ ಆಶ್ಚರ್ಯ ಹುಟ್ಟಿಸುತ್ತಾ ಇದ್ದ ಸಂಗತಿ ಎಂದರೆ ಕೆಲವು ತಮಿಳರ ಅಭಿಮಾನ. ಈ ಅಭಿಮಾನದ ಕೆಲವು ನೋಟ ಪ್ರತಿದಿವಸ ಕಣ್ಣಿಗೆ ಬೀಳುತ್ತಿತ್ತು. ಅದರಲ್ಲಿ ಒಂದು ಅಂದರೆ ನನ್ನ ಶಿಷ್ಯರಾದ ಷಣ್ಮುಗಂ ಮತ್ತು ಗೋವಿಂದ ಚಾಮಿ ಎನ್ನುವ ಕಟ್ಟಾ ವೀರ ತಮಿಳರ ಸಾಹಿತ್ಯಾಸಕ್ತಿ. ಪ್ರಕಟವಾಗುವ ಪ್ರತಿಯೊಂದು ಪತ್ರಿಕೆ ಇವರ ಮೂಲಕ ಗುಂಪಿಗೆ ಹಂಚಿಕೆ ಆಗುತ್ತಿತ್ತು. ಒಬ್ಬ ಡಿ ಎಂ ಕೆ ಪಕ್ಷದವನು, ಮತ್ತೊಬ್ಬ ಅದರ ವಿರೋಧಿ. ಅಂದರೆ ಇಬ್ಬರೂ ಹಂಚುತ್ತಿದ್ದ ಪತ್ರಿಕೆ ಬೇರೆ ಬೇರೆಯವು. ಇಬ್ಬರೂ ಒಂದೊಂದು ಮೂಲೆಯಲ್ಲಿ ಟೇಬಲ್ಲು ಚೇರ್ ಹಾಕಿಕೊಂಡಿದ್ದರು. ಆಗ ಕಾರ್ಖಾನೆಯಲ್ಲಿ ಯಥೇಚ್ಛವಾಗಿ ಸಿಗುತ್ತಿದ್ದ ಕಂಪ್ಯೂಟರ್ ಹಾಳೆ ತಂದು ಅದನ್ನು ನೀಟಾಗಿ ಕತ್ತರಿಸಿ ಜೋಡಿಸುತ್ತಿದ್ದರು. ಡಬ್ಬಳ, ದಪ್ಪನೆ ದಾರ ಇದು ಇವರ ಕಬೋರ್ಡ್ನಲ್ಲಿ ಇರುತ್ತಿತ್ತು. ಕತ್ತರಿಸಿ ಇಟ್ಟಿದ್ದ ಹಾಳೆ ಜೋಡಿಸಿ ಸುಮಾರು ದಪ್ಪನೆಯ ಐದಾರು ನೋಟ್ ಬುಕ್ ತಯಾರಿಕೆ ಆಗುತ್ತಿತ್ತು. ನಂತರದ ಕಾಯಕ ಎಂದರೆ ಅದರಲ್ಲಿ ಬರೆಯುವುದು ಬರೆಯುವುದು ಬರೆಯುವುದು ಮತ್ತು ಬರೆಯುವುದು. ಮೊದಮೊದಲು ಅಂತಹ ಕುತೂಹಲ ಹುಟ್ಟಿರಲಿಲ್ಲ. ಒಂದು ಸಲ ಇಷ್ಟೊಂದು ಕಾಳಜಿ ಆಸಕ್ತಿ ವಹಿಸಿ ಅದೇನು ಬರೆಯುತ್ತಾರೆ ಎನ್ನುವ ಯೋಚನೆ ಶುರು ಆಯಿತು.
ರೀ ಗೋವಿಂದ ಸಾಮಿ…. ಅಂತ ಕೂಗಿದೆ. ಅಲ್ಲಿಂದಲೇ ಎನ್ನಾ ಚಾ ಅಂತ ಗೋವಿಂದ ಸಾಮಿ ಕೇಳಿತು.
ಏನು ಅಷ್ಟೊಂದು ಬರೀತಾ ಇದ್ದೀರಿ? ಯಾವುದಾದರೂ ಕಾದಂಬರಿ ಬರೀತಾ ಇದೀರಾ….. ಅಂತ ಕೇಳಿದೆ.
ಇಲ್ಲಾ ಚಾ. ಮ್ಯಾಗಜಿನ್ ಕಾಪಿ ಮಾಡ್ತಾ ಇದೀನಿ… ಅಂದರು!
ಏನು ಇಡೀ ಮ್ಯಾಗಜಿನ್ ಕಾಪಿ. ನಾ…. ಅಂದೆ.
ಇಲ್ಲ ಚಾ. ಒಂದು ಕ್ರೈಂ ಕತೆ ಬರ್ತಿದೆ. ಅದನ ಕಾಪಿ ಮಾಡ್ತಾ ಇದೀನಿ… ಅಂದರು!
ಕಾಪಿ ಯಾಕೆ ಮಾಡಬೇಕು? ಮ್ಯಾಗಜಿನ್ ಇಟ್ಕೋ ಬಹುದಲ್ಲಾ…
ಅದು ಸರ್ಕುಲೆಟ್ ಆಗುತ್ತೆ ಚಾ…
ಎಲ್ರೂ ಓದಿದ ಮೇಲೆ ವಾಪಸ್ ಬರುತ್ತಲಾ….
ಇಲ್ಲ ಚಾ ಮೊದಲಿಂದ ಹೀಗೆ ಮಾಡೋದು…. ಅಂದರು.
ಆಗಿನ್ನೂ ಜೆರಾಕ್ಸ್ ಶೈಶವ ಅವಸ್ಥೆಯ ಕುರಿ ಮರಿ. ಇನ್ನೂ ಕಾರ್ಖಾನೆಗೆ ದೊಡ್ಡ ರೀತಿಯಲ್ಲಿ ಎಂಟ್ರಿ ಹಾಕಿರಲಿಲ್ಲ. ಅದರಿಂದ ಜೆರಾಕ್ಸ್ ಮಾಡಿ ಇಟ್ಟುಕೊಳ್ಳಬಹುದು ಎನ್ನುವ ಐಡಿಯ ಕೊಡಲಿಲ್ಲ.
ಅವರು ಮಾತು ಮುಂದುವರೆಸಿ, ಮನೇಲಿ ಈ ತರದ ಅರವತ್ಮೂರು ಬೈಂಡ್ ಪುಸ್ತಕ ಅವೆ…. ಅಂದರು. ಆಶ್ಚರ್ಯದಿಂದ ಸ್ತಂಭಿಭೂತ ಆದೆ! ಷಣ್ಮುಖ ಯಾವಾಗಲೂ ಬರೀತಾ ಇರ್ತಾನಲ್ಲ ಅದು ಏನು….. ಅಂತ ಕೇಳಿದೆ. ಸೇಮ್ ಉತ್ತರ, ಗೋವಿಂದಸಾಮಿ ಕೊಟ್ಟ ಉತ್ತರವೇ ಬಂತು!! ಇದು ತಮಿಳರಿಗೆ ಮಾತ್ರಾ ವಿಶಿಷ್ಟವಾದದ್ದು ಎಂದು ಸುಮಾರು ವರ್ಷ ನಂಬಿದ್ದೆ. ತೀರಾ ಈಚೆಗೆ ಇದು ಸುಳ್ಳು ಅಂತ ಗೊತ್ತಾಯಿತು. ಕನ್ನಡದ ಒಬ್ಬ ಬರಹಗಾರರು ಲಂಕೇಶ ಪತ್ರಿಕೆಯ ಬರಹ ಹೀಗೇ ಕಾಪಿ ಮಾಡಿ ಮಾಡಿ ಇಟ್ಟುಕೊಂಡಿದ್ದರಂತೆ…! ಈ ತರಹ ಇವರು ಕಾಪಿ ಮಾಡಿ ಇಟ್ಟುಕೊಂಡಿದ್ದು ಗೊತ್ತಿದ್ದವರು ಅದರ ಪ್ರತಿ ಎಷ್ಟೋ ವರ್ಷಗಳ ನಂತರ ಕೇಳಿದ್ದರು. ಪ್ರತಿ ಹಳೆಯದಾಗಿತ್ತು ಅಂತ ಅದನ್ನು ಮರೆತೇ ಬಿಟ್ಟೆ. ಸಮಯಕ್ಕೆ ಅದು ಒದಗಲಿಲ್ಲ ಎನ್ನುವ ಅರ್ಥ ಬರುವ ಹಾಗೆ ಅವರು ಬರೆದುಕೊಂಡ ನೆನಪು. ಮಿಕ್ಕ ಯಾರೂ ನಮ್ಮ ಪೀಳಿಗೆಯವರು ಹೀಗೆ ಪ್ರತಿ ಮಾಡಿದ್ದು ನನ್ನ ಅರಿವಿಗೆ ಬಂದಿಲ್ಲ.
ಮಯೂರ ಕತೆ ಹೇಳುತ್ತಿದ್ದೆ. ಗೆಳೆಯ ನಟರಾಜ ಕತೆ ಬರೀರಿ ಅಂತ ಹೇಳಿದ್ದ ಅಲ್ಲವೇ? ನಾನು ಕಾಲೇಜು ಓದಬೇಕಾದರೆ ಕೊನೆ ಬೆಂಚಿನಲ್ಲಿ ಕೂತು ಮಾಸ್ತಿ ಅವರ ಸಂಗಡ ನಾನು ಕಳೆದ ಕೆಲವು ಗಂಟೆಗಳ ನೆನಪನ್ನು ಬರಹಕ್ಕೆ ಇಳಿಸಿ ಮಾಸ್ತಿ ಅವರ ಬಗ್ಗೆ ಪ್ರಕಟವಾಗಲಿದ್ದ ಒಂದು ಗ್ರಂಥಕ್ಕೆ ಲೇಖನ ಕಳಿಸಿದ್ದೆ. ಇದು ನಮ್ಮ ದೊಡ್ಡಣ್ಣ ಹೇಳಿದ ಅಂತ ಬರೆದದ್ದು. ಇದು ಬರೆದು ಎಷ್ಟೋ ತಿಂಗಳುಗಳು ಕಳೆದು ಅದನ್ನು ಮರೆತೇ ಹೋಗಿದ್ದೆ. ಕೆಲಸಕ್ಕೆ ಸೇರಿ ಫಸ್ಟ್ ಶಿಫ್ಟ್ ಮುಗಿಸಿಕೊಂಡು ಒಂದು ದಿವಸ ನಾನು ಮನೆಗೆ ಬಂದಾಗ ದೊಡ್ಡ ಪುಸ್ತಕ ಕೈಲಿ ಹಿಡಿದು ಅಮ್ಮ ಖುಷಿ ಪಡುತ್ತಿದ್ದ ಸಂಗತಿ ಹಿಂದೆ ನಿಮಗೆ ಹೇಳಿದ್ದೆ. ಅದರಲ್ಲಿ ಮಾಸ್ತಿ ಬಗೆಗಿನ ಬರಹ ಬಂದಿತ್ತು. ಇದು ನನ್ನ ಮೊಟ್ಟ ಮೊದಲ ಪ್ರಕಟಿತ ಬರಹ. ಇದು ಬರೆದು ಹೆಚ್ಚೂ ಕಮ್ಮಿ ಎರಡು ದಶಕ ಕಳೆದಿದೆ. ಈಗ ಮತ್ತೆ ಬರೆಯುವ ಸೆಳೆತ ಹುಟ್ಟಿತೇ..?
ಸೆಳೆತ ಹುಟ್ಟಿತೇ, ನಟರಾಜನ ಮಾತು ಟ್ರಿಗರ್ ಆಯಿತೇ ತಿಳಿಯದು. ಅವತ್ತೇ ಕಾರ್ಖಾನೆ ಯಲ್ಲಿ ಸೆಕೆಂಡ್ ಶಿಫ್ಟ್ನಲ್ಲಿ ಕೂತು ಬಿಳಿಯ ಹಾಳೆ ಜೋಡಿಸಿ ಇಟ್ಟುಕೊಂಡು, ಒಂದು ಕತೆ ಬರೆದೇ ಬಿಟ್ಟೆ. ಬಿಳಿ ಪೇಪರು, ಅದನ್ನು ಬರೆದ ಸಮಯ ಎಲ್ಲವೂ ಕಾರ್ಖಾನೆಯ ಆಸ್ತಿ. ಬರೆದ ಕತೆಯನ್ನು ಮಡಿಸಿ ಕವರಿಗೆ ಹಾಕಿದೆ. ಅದನ್ನು ಮಾರನೇ ದಿವಸ ಅಂಚೆ ಕಚೇರಿಗೆ ಹೋಗಿ ತೂಕ ಹಾಕಿಸಿ ಸ್ಟಾಂಪ್ ಹಚ್ಚಿ ಪೋಸ್ಟ್ ಡಬ್ಬಕ್ಕೆ ಹಾಕಿದೆ…! ನಂತರ ಅದನ್ನು ಮರೆತೂ ಬಿಟ್ಟೆ.
ಅದಾದ ಮೇಲೆ ಒಂದೋ ಎರಡೋ ಮಯೂರದ ಸಂಚಿಕೆ ಸಹ ಬಂತು. ಅದನ್ನು ಪುಟ ತಿರುಗಿಸಿ ನೋಡೋದು, ಪಕ್ಕಕ್ಕೆ ಹಾಕೋದು ನಡೀತಾ.. ಆಶ್ಚರ್ಯ ಮುಂದೆ ಕಾದಿತ್ತು. ಹೇಗೆ ಅಂತೀರಾ?
ಒಂದು ದಿನ ಎಂದಿನ ಹಾಗೆ ಫಸ್ಟ್ ಶಿಫ್ಟ್ ಮುಗಿಸಿ ಮನೆಗೆ ಬಂದೆ. ಮಯೂರ ಬಂದಿತ್ತು. ಮಯೂರ ಬಂತಾ? ಅದನ್ನು ತೆಗೆದರೆ ಮೊದಲೇ ನಾನು ಬರೆದ ಕತೆ ಕಣ್ಣಿಗೆ ಬೀಳ ಬೇಕೇ? ಪುಟದ ಅರ್ಧ ಹರಡಿಕೊಂಡ ಚಿತ್ರ, ಅದರ ಮಧ್ಯೆ ಅರಳಿದ ಕತೆ ಐದಾರು ಪುಟ ದಾಟಿ ನಿಂತಿತ್ತು! ಅಪೂರ್ಣ ಕತೆ, ಮುಂದಿನ ಕತೆ ಓದುಗರ ಊಹೆಗೆ ಮತ್ತು ಓದುಗರ ಊಹೆ ಜತೆಗೆ ಮಿಕ್ಕ ಭಾಗದ ಕತೆ ಪ್ರಕಟವಾಗುತ್ತದೆ ಎನ್ನುವ ಪ್ರಕಟಣೆ!
ನೀವು ಕತೆ ಬರೆಯುವ ಗುಂಪಿಗೆ ಸೇರಿದ್ದರೆ ನಿಮ್ಮ ಮೊದಲ ಕತೆ ಪ್ರಕಟವಾದಾಗ ನಿಮಗೆ ಹೇಗೆ ಅನಿಸಿತ್ತು ಅಂತ ಜ್ಞಾಪಿಸಿಕೊಳ್ಳಿ. ಅದೂ ಮಯೂರ ಅಂತಹ ನಂಬರ್ ಒನ್ ಪತ್ರಿಕೆಯಲ್ಲಿ ಅನಾಮಧೇಯನೊಬ್ಬನ ಕತೆ ಅಪೂರ್ಣ ಕತೆ ಎಂದು ಪ್ರಕಟವಾದರೆ?
ಮಯೂರ ನಂಬರ್ ಒನ್ ಪತ್ರಿಕೆ ಅಂತ ಆಗ ಗೊತ್ತಿರಲಿಲ್ಲ ಮತ್ತು ಮಯೂರದಂತಹ ಪತ್ರಿಕೆಯಲ್ಲಿ ಕತೆ ಪ್ರಕಟವಾಗುವುದು ಒಂದು ಹೆಚ್ಚುಗಾರಿಕೆ ಎಂದೂ ಸಹ ನನಗೆ ಗೊತ್ತೇ ಇರಲಿಲ್ಲ! ಸುಮಾರು ವರ್ಷ ಕಳೆದ ಮೇಲೆ ಒಬ್ಬರು ಬೀಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪಳಗಿದ ಸಾಹಿತಿಗಳ ಸಂದರ್ಶನ ಬಂದಿತ್ತು. ಅದರಲ್ಲಿ ಅವರು ಇಂತಹ ಅಂದರೆ ಪ್ರಜಾವಾಣಿ ಪತ್ರಿಕೆಯಲ್ಲಿ ತಮ್ಮ ಲೇಖನ ಪ್ರಕಟ ಆಗುವುದನ್ನು ತುಂಬಾ ಕಾತರದಿಂದ ಅಪಾರ ನಿರೀಕ್ಷೆಯಿಂದ ಕಾಯುತ್ತಾ ಇದ್ದುದಾಗಿ ಹೇಳಿಕೊಂಡಿದ್ದರು. ಇಂತಹ ಒಂದು ಅಪೂರ್ವ ಅವಕಾಶ ನನಗೆ ಸಿಕ್ಕಿದೆ ಅಂತ ಆಗ ನನಗೆ ಖಂಡಿತ ಅನಿಸಲೇ ಇಲ್ಲ. ಈ ಕತೆ ಪ್ರಕಟ ಆಗಿ ನಾಲ್ಕು ದಶಕಗಳ ಮೇಲೆ ಆಗಿರಬೇಕು. ಈಗ ಯೋಚಿಸಿದರೆ ಕತೆ ಪ್ರಕಟ ಆದ ನಂತರದ ನನ್ನ ಪರ್ಸನಲ್ ಗ್ರೋಥ್ ನನಗೆ ದಿಗ್ಭ್ರಮೆ ಹುಟ್ಟಿಸಿತು ಅನ್ನಬೇಕು!
ಬರೆಯೋ ಚಟ ಹತ್ತಿಬಿಟ್ಟಿತು ಅಂದರೆ ಅದನ್ನು ಬಿಡಿಸೋದು ಬಾರೀ ಕಷ್ಟ. ಇದರ ಅನುಭವ ಮುಂದೆ ನನಗೆ ಹೇಗಾಯಿತು ಅಂದರೆ ದಿವಸಕ್ಕೆ ಕನಿಷ್ಠ ಇಷ್ಟು ಪದಗಳನ್ನು ಬರೆಯಲೇಬೇಕು ಅನಿಸುವಷ್ಟು. ವಾಕಿಂಗ್ ಪ್ಯಾಕಿಂಗ್ ಅಂತ ಹೋಗುವ ಜನ ಇರ್ತಾರೆ ನೋಡಿ. ತೋಳಿನ ಅಂಚಿಗೆ ಒಂದು ಅಗಲದ ಪಟ್ಟಿ ಇರುವ ಪೋನು ಅಥವಾ ವಾಚ್ ಕಟ್ಟಿಕೊಂಡು ಮಿಕ್ಕವರಿಗಿಂತಲೂ ತಾವು ಬಿನ್ನರು ವಿಭಿನ್ನರು ಎನ್ನುವ ಮುಖವಾಡ ಹೊತ್ತು ಗಂಟು ಮೋರ್ ಹಾಕಿಕೊಂಡು ನಡೆಯುತ್ತಾರಲ್ಲ ಅವರನ್ನು ಗಮನಿಸಿ. ಪ್ರತಿ ಆರು ನಿಮಿಷಕ್ಕೆ ಒಮ್ಮೆ ನಿಂತು ತಮ್ಮ ಮೊಬೈಲ್, ವಾಚು ಪರೀಕ್ಷಿಸುತ್ತಾರೆ. ಇದು ಯಾಕೆ ಗೊತ್ತಾ? ಎಷ್ಟು ಸ್ಟೆಪ್ಸ್ ಹಾಕಿದ್ದೀನಿ ಎಂದು ನೋಡಿಕೊಳ್ಳಲು. ದಿವಸಕ್ಕೆ ಇಷ್ಟು ಸ್ಟೆಪ್ಸ್ ಹಾಕಬೇಕು ಅಂತ ನಿರ್ಧಾರ ಮಾಡಿರುತ್ತಾರೆ. ಕೆಲವು ಸಲ ವಾಕಿಂಗ್ ಹೋಗಲು ಇಷ್ಟ ಇರುವುದಿಲ್ಲ. ಆದರೆ ಈ ಹಾಳಾದ ಸ್ಟೆಪ್ಸ್ ಬಿಡಬೇಕೇ? ಬಲವಂತವಾಗಿ ವಾಕಿಂಗ್ ಬಂದು ಎಷ್ಟು ಸ್ಟೆಪ್ಸ್ ಆಯಿತು ಎಂದು ಆಗಾಗ್ಗೆ ನೋಡಿಕೊಂಡು ಇದ್ದಕ್ಕಿದ್ದ ಹಾಗೆ ಪಾರ್ಕ್ನಿಂದ ಮಾಯಾ ಆಗುತ್ತಾರೆ. ಇದೇ ಚಟ ಬರೆಯುವ ಹವ್ಯಾಸ ಹೊಂದಿರುವವರಿಗೆ!
ತಲೆ ಮೇಲೆ ತಲೆ ಬೀಳಲಿ, ಆಸ್ಪತ್ರೆಯಲ್ಲಿ ಮೈಕೈಗಳಿಗೆ ಚುಚ್ಚಿಸಿಕೊಂಡು ಸುತ್ತಲೂ ನಲಿಕೆಗಳ ಪ್ರಪಂಚದಲ್ಲಿರಲಿ ಕೈಗೆ ಒಂದು ಪೆನ್ನು ಪೇಪರ್ ಪ್ಯಾಡ್ ಮತ್ತು ಪೇಪರು ಕೊಡಿ. ಅವರ ಪ್ರತಿಕ್ರಿಯೆ ನೋಡಿ….!
ಮೊದಲನೇ ಕತೆ ಹೀಗೆ ಒಂದು ಪ್ರತಿಷ್ಠಿತ ಪತ್ರಿಕೆಯಲ್ಲಿ ಪ್ರಕಟ ಆದನಂತರ ನನ್ನ ಮನಃಸ್ಥಿತಿ ಹೇಗೆ ಬದಲಾಯಿತು, ಹೇಗೆ ಮೆಟಮಾರ್ಫಸಿಸ್ಗೆ ಒಳಗಾಯಿತು ಅಂತ ತಮಗೆ ಖಂಡಿತ ತಿಳಿಸಲೇಬೇಕು. ಈ ಮೆಟಮಾರ್ಫಸಿಸ್ ಕತೆಗೆ ಮುಂದಿನ ಸಂಚಿಕೆಯಲ್ಲಿ ಹೆಜ್ಜೆ ಹಾಕುತ್ತೇನೆ. ಸರಿ ತಾನೇ ಸರ.. ಸರಿ ತಾನೇ ಮೇಡಂ?
ಅಲ್ಲಿಯವರೆಗೆ ನಿಮಗೆ ನನ್ನಿಂದ ಫ್ರೀಡಂ..
ಇನ್ನೂ ಇದೆ

ಎಚ್. ಗೋಪಾಲಕೃಷ್ಣ ಬೆಂಗಳೂರಿನ BEL ಸಂಸ್ಥೆಯಲ್ಲಿ ಸ್ಪೋರ್ಟ್ಸ್ ಆಫೀಸರ್ ಜೊತೆಗೆ ಹಲವು ಹುದ್ದೆಗಳನ್ನು ನಿರ್ವಹಿಸಿ ಈಗ ನಿವೃತ್ತರಾಗಿದ್ದಾರೆ. ರಾಜಕೀಯ ವಿಡಂಬನೆ ಮತ್ತು ಹಾಸ್ಯ ಬರಹಗಳತ್ತ ಒಲವು ಹೆಚ್ಚು.
 
						
 
							
 
			 
			 
			 
			 Loading ...
 Loading ... 
					 
                         
			 
			 
			 
			