Advertisement
ಕಪ್ಪೆಂಚಿನ ಕಲ್ಡಿ ಮನೆ, ಕೆಂದೆತ್ತು ಮತ್ತು ಲಾಳ ಕಟ್ಟೋ ರೆಹಮಾನ್ ಸಾಬರು: ಎಸ್. ಗಂಗಾಧರಯ್ಯ ಅನುಭವ ಕಥನ

ಕಪ್ಪೆಂಚಿನ ಕಲ್ಡಿ ಮನೆ, ಕೆಂದೆತ್ತು ಮತ್ತು ಲಾಳ ಕಟ್ಟೋ ರೆಹಮಾನ್ ಸಾಬರು: ಎಸ್. ಗಂಗಾಧರಯ್ಯ ಅನುಭವ ಕಥನ

ಕೆಳಕ್ಕೆ ಬೀಳುತ್ತಲೇ ಎತ್ತೂ ತನ್ನ ಪ್ರತಿರೋಧವನ್ನು ಕಡಿಮೆ ಮಾಡಿತು. ಎತ್ತಿನ ಕಾಲುಗಳನ್ನು ಕಟ್ಟುತ್ತಲೇ ನಾನು ಮತ್ತೆ ಅದರ ಕೊಂಬು ಮತ್ತು ಮೂಗುದಾರಗಳ ಸಹಾಯದಿಂದ ಅದರ ಮೂತಿಯನ್ನು ಅಮುಕಿಕೊಂಡೆ. ಸಾಬರು ತಮ್ಮ ಕೆಲಸವನ್ನು ಶುರು ಮಾಡುತ್ತಲೇ ಮತ್ತೆ ಕೊಸರಾಡತೊಡಗಿತು. ನಾನು ಮೂತಿಯನ್ನು ಎಷ್ಟೇ ಅಮುಕಿಕಂಡರೂ ಅದರ ಅಲುಗಾಟವನ್ನು ಪೂರಾ ನಿಲ್ಲಿಸಲಾಗಲಿಲ್ಲ. ನನಗೂ ಕೈಗಳು ಸೋಲ ಹತ್ತಿದ್ದವು. ಕುಕ್ಕುರುಗಾಲಲ್ಲಿ ಕೂತಿದ್ದರಿಂದ ಕಾಲುಗಳೂ ಪದ ಹೇಳತೊಡಗಿದ್ದವು. ಸಾಬರು ನನ್ನನ್ನು ಎತ್ತಿನ ಮೂತಿನ ಮೇಲೆ ಕೂತು ಅಲುಗಾಡದಂತೆ ಹಿಡುಕೊಳ್ಳುವಂತೆ ಹೇಳಿದರು. ನಾನು ಅದಕ್ಕಾಗೇ ಕಾಯುತ್ತಿದ್ದೆ ಅನ್ನುವಂತೆ ಚಕ್ಕನೆ ಎತ್ತಿನ ಮೂತಿಯ ಮೇಲೆ ಅತ್ಲಾಗೊಂದು ಇತ್ಲಾಗೊಂದು ಕಾಲುಗಳನ್ನು ಹಾಕಿ ಕೂತೆ. ಎತ್ತು ಕೊಸರಾಡುವುದನ್ನು ನಿಲ್ಲಿಸಿತು.
ಎಸ್.‌
ಗಂಗಾಧರಯ್ಯ ಅನುಭವ ಕಥನ “ಕಾಡ ಕಕ್ಕೆ”ಯ ಇಪ್ಪತ್ತೆರಡನೆಯ ಕಂತು

ಮನುಷ್ಯರ ಜತೆ ದನ ಕರು ಎಮ್ಮೆ ಕುರಿ ಮೇಕೆಗಳೆಲ್ಲಾ ಸೇರಿ ಮನೆ ಅನಿಸಿಕೊಳ್ಳುತ್ತಿದ್ದ ಕಾಲ ಅದು. ಅವುಗಳೆಡೆಗಿನ ಮಮಕಾರ ಮತ್ತು ನಿಗಾ ಮಾಡುವ ವಿಷಯಕ್ಕೆ ಬಂದರೆ ಮನೆಯವರೊಬ್ಬರಿಗಿದ್ದಷ್ಟೇ ಕಿಮ್ಮತ್ತು ಅವುಗಳಿಗೂ ಇರುತ್ತಿತ್ತು. ಅವುಗಳೊಂದಿಗೆ ಒಂದು ಭಾವನಾತ್ಮಕ ನಂಟಿರುತ್ತಿತ್ತು. ಅವುಗಳ ಮೈ ತೊಳೆಯುವುದರಿಂದ ಹಿಡಿದು ಮೇವು ಮುಂತಾದವುಗಳ ಸೌಕರ್ಣೆಗಳು ರೈತಾಪಿ ಬದುಕಿನ ಒಂದು ಭಾಗ ಮಾತ್ರ ಆಗದೆ ಕಾಳಜಿಯ ಸಂಗತಿಯಾಗಿತ್ತು. ಹಿಂಗೆ ಸಾಕಿಸಿಕೊಳ್ಳುತ್ತಿದ್ದ ರಾಸುಗಳು ಒಂಚೂರು ಬಡವಾದರೆ ಇಲ್ಲಾ ಖಾಯಿಲೆಯಾದರೆ ಮನೆ ಮಂದಿಯ ಮನಸು ಚುರುಕ್ ಅನ್ನುತ್ತಿತ್ತು. ನನ್ನ ಹಳ್ಳಿಯಲ್ಲಿ ಬಹಳಷ್ಟು ಮನೆಗಳನ್ನು ದನಕರು ಕುರಿ ಮೇಕೆ ಹಾಗೂ ಮನುಷ್ಯರುಗಳು ಸಮನಾಗಿ ಹಂಚಿಕೊಂಡಿದ್ದರು. ಅವುಗಳಿಗೆ ಅಲಾಯ್ದವಾಗಿ ಕೊಟ್ಟಿಗೆಗಳನ್ನು ಕಟ್ಟಿಸಲು ತ್ರಾಣವಿಲ್ಲದ್ದೇ ಇದಕ್ಕೆ ಕಾರಣವಾಗಿತ್ತು. ಹಂಗಾಗಿ ಪುಟ್ಟದಾಗಿರುತ್ತಿದ್ದ ತಮ್ಮ ವಾಸದ ಮನೆಗಳಲ್ಲಿ ಅರ್ಧ ತಾವು ವಾಸಿಸುತ್ತಾ ಮತ್ತರ್ಧವನ್ನು ಇವುಗಳಿಗೆ ಮೀಸಲಿಡಲಾಗುತ್ತಿತ್ತು. ಅಂದರೆ ದನ ಕುರಿ ಮೇಕೆಗಳು ಒಂದು ವಚ್ಚಾಲಿನಲ್ಲಿದ್ದರೆ ಉಳಿದರ್ಧ ವಚ್ಚಾಲು ಮನೆ ಮಂದಿಗಿರುತ್ತಿತ್ತು. ಹಂಗಾಗಿ ಚಿಕ್ಕಂದಿನಲ್ಲಿ ಕೆಲವರ ಮನೆಗಳನ್ನು ಹೊಗುತ್ತಲೇ ಕೊಟ್ಟಿಗೆಯ ಘಮ ಮೂಗಿಗಡರುತ್ತಿತ್ತು. ನಾವು ತೋಟದಲ್ಲಿ ಹೊಸದಾಗಿ ಮನೆಯನ್ನು ಕಟ್ಟಿಸುವುದಕ್ಕೆ ಮುನ್ನ ತೋಟದಲ್ಲೊಂದು ಪುರಾತನ ಮನೆಯಿತ್ತು. ಅದನ್ನು ಅಜ್ಜ ಕಲ್ಡಿ ಮನೆ ಅಂತ ಕರೆಯುತ್ತಿತ್ತು. ಒಂದು ಸಾರ್ತಿ ಈ ಮನೆಯ ಜಗಲಿಯಲ್ಲಿ ಕರಡಿ ಮಲಗಿತ್ತಂತೆ. ಅದಕ್ಕೆ ಹಂಗೆ ಕರೀತಿದ್ದರು ಅಂತ ನನಗೆ ಅಜ್ಜ ಹೇಳಿತ್ತು. ಅದರ ಮಾಡಿಗೆ ತುಂಬಾ ಕಲಾತ್ಮಕವಾಗಿ ಕಪ್ಪೆಂಚುಗಳನ್ನು ಹೊದಿಸಲಾಗಿತ್ತು. ಒರಟೊರಟಾದ ಕಾಡುಗಲ್ಲುಗಳಿಂದ ಕಟ್ಟಲಾಗಿದ್ದ ಅದಕ್ಕೆ ದಪ್ಪನೆಯ ಅಂಕು ಡೊಂಕಿನ ಗಟ್ಟಿಮುಟ್ಟಾದ ಈಚಲು ಮರದ ಜಂತೆ ಮತ್ತು ತೀರುಗಳು ಅದಕ್ಕಿದ್ದವು. ಸುಮಾರು ನೂರು ನೂರೈವತ್ತು ವರ್ಷದಷ್ಟು ಹಳೆಯದಾಗಿದ್ದ ಅದಕ್ಕೆ ಮರದ ಬಾಗಿಲ ನಿಲದ ಬದಲಿಗೆ ಹಾಸುಗಲ್ಲಗಳನ್ನು ನಿಲ್ಲಿಸಿ ಹತ್ತಿ ಮರದ ಕದವನ್ನು ಕೂರಿಸಲಾಗಿತ್ತು. ಬಾಗಿಲಿನಿಂದ ಆಚೆ ಒಂದೆಡೆ ಒಂದೈದಾರು ಮಂದಿ ಮಲಗಬಹುದಾದ ಬಗ್ಗಡ ಬಳಿದಿದ್ದ ಜಗಲಿ. ಮತ್ತೊಂದೆಡೆ ಬಚ್ಚಲು. ಮನೆಯ ಒಳಗಡೆ ಒಂದು ನಡುಮನೆ ಅಷ್ಟೇ. ಮನೆಯಲ್ಲಿ ಇಸ್ಸೆ ಮಾಡಿಕಂಡು ತೋಟದ ಮನೆಗೆ ಬಂದು ಹೊಸಾ ಮನೆ ಆಗುವವರೆಗೂ ಸುಮಾರು ನಾಲ್ಕೈದು ವರ್ಷ ಆ ಪುಟ್ಟ ಮನೆಯಲ್ಲಿದ್ದೆವು. ಅಂತ ಪುಟ್ಟ ಮನೆಯ ಅರ್ಧ ಭಾಗದಲ್ಲಿ ಒಂದು ಎಮ್ಮೆ, ಒಂದು ಹಸು, ಎರಡು ಕರುಗಳೂ ನಮ್ಮೊಂದಿಗಿದ್ದವು. ಒಂದಷ್ಟು ದಿನ ಕಳೆದ ಮೇಲೆ ಅವುಗಳನ್ನು ಒಂದೆರಡು ಮೇಕೆ ಮರಿಗಳೂ ಜತೆಯಾದವು. ಇವುಗಳನ್ನು ಅಲ್ಲಿ ಕಟ್ಟುತ್ತಿರಲಿಲ್ಲವಾದ್ದರಿಂದ ಕೆಲವೊಮ್ಮೆ ನಮ್ಮ ತಲೆ ದಿಂಬುಗಳ ಬದಿಯಲ್ಲೋ ಇಲ್ಲಾ ಕಾಲಡಿಯ ಜಾಗದಲ್ಲೋ ಹಂಗೇ ಸುರಟಿ ಮಲಗುತ್ತಿದ್ದವು. ಆಗ ಇಡೀ ಮನೆ ಅವುಗಳ ಬಿಸಿಯುಸಿರಿನಿಂದ ಬೆಚ್ಚಗಿರುತ್ತಿತ್ತು. ಪಿಸಿಗೆ, ಸಗಣಿ ಮತ್ತು ಗಂಜಲಗಳ ಘಮಲು ಮನೆಯಂಥ ಮನೆಯನ್ನೆಲ್ಲಾ ಅಡರಿಕಂಡಿರುತ್ತಿತ್ತು. ಅದರೊಳಗೇ ಬದುಕುತ್ತಿದ್ದ ನಮಗಾಗ ಆ ಬೆಚ್ಚನೆಯ ಬಿಸಿಯುಸಿರು ಮತ್ತಾ ಘಮಲು ಬಲು ಹಿತವಾಗಿ ನಮ್ಮೊಳಗಾಡುತ್ತಿತ್ತು. ಈಗಲೂ ಆ ಸುಖ ಆಗಾಗ ನನ್ನೊಳಗೆ ಮುಖ ಮಾಡಿ ಹಿತ ಕೊಡುತ್ತೆ. ಇಂಥ ಈ ಮನೆ ಕೆಂಪೆಂಚಿನ ಹೊಸಾ ಮನೆ ಆದ ಮೇಲೆ ಪೂರಾ ಕೊಟ್ಟಿಗೆ ಮನೆಯಾಯ್ತು. ಜಂತೆ ಮತ್ತು ತೀರುಗಳು ಕುಂಟೆ, ಹೆಗ್ಗುಂಟೆ, ಕೂರಿಗೆ, ಹಲುಬೆ, ನೇಗಿಲು ಮುಂತಾದ ಕೃಷಿ ಪರಿಕರಗಳಿಗೆ ಅಟ್ಟವಾದವು. ಬಗ್ಗಡದ ಜಗಲಿಯ ಮುಂಬದಿಗೆ ಉದ್ದಕ್ಕೆ ಚಪ್ಪಡಿ ಕಲ್ಲುಗಳನ್ನು ಅದ್ದದ್ದರಿಂದ ಅದು ಗೊಂತಾಯ್ತು. ಅದರ ನಡುವಲ್ಲಿ ಮಣ್ಣಿನ ಮುಸುರೆ ಕುನಿಯೊಂದನ್ನು ಕೂರಿಸಲಾಯ್ತು. ಅಯ್ಯ ದನಕರುಗಳನ್ನು ವ್ಯಾಪಾರ ಮಾಡತೊಡಗಿದ ಮೇಲೆ ಅಲ್ಲಿ ದಿನವೂ ಬೆಳಗಿನ ಹೊತ್ತಲ್ಲಿ ಸಪ್ಪೆಕಡ್ಡಿಯನ್ನು ತಿನ್ನಿಸಲು ಬಳಸಲಾಗುತ್ತಿತ್ತು. ಹೊಸಾ ಮನೆಯಾದರೂ ನಾನು ಮತ್ತು ಅಣ್ಣ ಈ ಜಗಲಿಯಲ್ಲಿ ಮಲಗುತ್ತಿದ್ದೆವು. ಕ್ರಮೇಣ ಈ ಹಳೆಯ ಮತ್ತು ಹೊಸಾ ಮನೆಗಳ ನಡುವಲ್ಲೊಂದು ವಪ್ಪಾರು ಎದ್ದು ಅದು ಎತ್ತಿನ ಗಾಡಿಯನ್ನು ನಿಲ್ಲಿಸುವ ಜಾಗವಾಯ್ತು. ಈ ಹಳೆಯ ಮನೆ ಕೊಟ್ಟಿಗೆಯಾದರೂ ನನಗೆ ಮಾತ್ರ ತುಂಬಾ ಇಷ್ಟದ ತಾಣವಾಗಿತ್ತು. ಒಂದು ರೀತಿಯಲ್ಲಿ ಆತ್ಮಸಂಗಾತದ ಸಖನಾಗಿತ್ತು. ಎಷ್ಟರ ಮಟ್ಟಿಗೆ ಅಂದರೆ ನನ್ನ ಖುಷಿಯ ಮತ್ತು ನೋವಿನ ಚಣಗಳನ್ನು ಹೇಳಿಕೊಳ್ಳಲು ಈ ಮನೆಯ ಒಳಕ್ಕೆ ಹೋಗಿ ಗೊಂತಿಗೆ ಹಾಕಿದ್ದ ಗೊಂತಿನ ಹಲಗೆಗಳ ಮೇಲೆ ಕೂತುಬಿಡುತ್ತಿದ್ದೆ. ನನ್ನ ಕಷ್ಟ ಮತ್ತು ಸುಖಗಳನ್ನು ಆಲಿಸುತ್ತಿದ್ದ ಇಂಥಾ ಈ ಮನೆ ಬರಬರುತ್ತಾ ರಿಪೇರಿಗೆ ಬಾರದಷ್ಟು ಕೃಷವಾಗುತ್ತಾ ಹೋಯ್ತು. ಗೋಡೆಗಳಲ್ಲಿ ಬಿರುಕಾಡತೊಡಗಿದವು. ಕಪ್ಪೆಂಚುಗಳು ಮೆಲ್ಲಗೆ ಕರಗತೊಡಗಿದವು. ಹಿಂಗೆ ಹತ್ತಾರು ವರ್ಷ ಬಡವಾಗುತ್ತಾ ಆಗುತ್ತಾ ಕಡೆಗೆ ಇನ್ನು ನನ್ನ ಯಾಕಾದರೂ ಸುಮ್ಮನೆ ಸತಾಯಿಸ್ತಾ ಇದೀಯಾ ನನಗೊಂದು ಗತಿ ಕಾಣಿಸು ಅಂತ ನಾನು ತೋಟಕ್ಕೆ ಹೋದಾಗಲೆಲ್ಲಾ ನನ್ನನ್ನು ಗೋಗರೆಯತೊಡಗಿತು. ಅದರ ಮಾತಿಗೆ ಓಗೊಟ್ಟು ಅದೊಂದು ದಿನ ಜೆ.ಸಿ.ಬಿಯ ಕ್ರೂರ ಹಲ್ಲುಗಳು ಅದರ ಮೈ ಮೇಲೆ ಆಡುತ್ತಾ ಅದನ್ನು ನೆಲ ಕಚ್ಚಿಸುತ್ತಿದ್ದಾಗ ಎದೆಯಲ್ಲಿ ಹೇಳಿಕೊಳ್ಳಲಾಗದ ಸಂಕಟ ಉಮ್ಮಳಿಸುತ್ತಿತ್ತು. ಈಗ ಅದು ಇದ್ದ ಕುರುಹುಗಳೆಲ್ಲಾ ಪೂರಾ ಅಳಿಸಿ ಹೋಗಿ ಆ ಜಾಗದಲ್ಲಿ ಪ್ರಾಯಕ್ಕೆ ಬರುತ್ತಿರುವ ಅಡಕೆ ಸಸಿಗಳೆದ್ದಿವೆ. ಆದರೂ ಅವುಗಳ ಹಸಿರಿನ ನಡುವೆ ಈಗಲೂ ಆ ಮನೆ ನಾನತ್ತ ಎಡತಾಕಿದಾಗಲೆಲ್ಲಾ ಪೂರಾಂಥ ಪೂರಾ ಥೇಟ್ ಮೊದಲಿನಂತೆಯೇ ಕಾಣಿಸಿಕೊಳ್ಳುತ್ತದೆ. ಆ ಬಗ್ಗಡದ ಜಗಲಿ, ಆ ಮುಸುರೆ ಕುನಿ, ಹತ್ತಿಯ ಆ ದಪ್ಪ ಬಾಗಿಲು ಹಂಗಂಗೇ ಒಡಮೂಡುತ್ತವೆ. ಅದೇ ಹಳೆಯ ಧಾಟಿಯಲ್ಲಿ ನನ್ನ ಕರೆದು ಮಾತಿಗಿಳಿಯುತ್ತವೆ. ಆಗೆಲ್ಲಾ ಛೆ ನಾನದರ ಮಾತು ಕೇಳಿ ಕೆಡವಿಸಬಾರದಿತ್ತು ಅಂತ ಎದೆಯೊಳಗೆ ಚಳುಕಾಡುತ್ತದೆ. ಅದರ ಅಟ್ಟದಲ್ಲಿದ್ದ ಕೃಷಿ ಪರಿಕರಗಳನ್ನು ಅದ್ಯಾರು ತಗಂಡು ಹೋಗಿದ್ದರೋ ಗೊತ್ತಿಲ್ಲ. ಅವುಗಳ ಪೈಕಿ ಒಂದು ಕೂರಿಗೆ ಮಾತ್ರ ಉಳುಕಂಡಿತ್ತು. ಆ ಮನೆಯ ನೆನಪಾಗಿ ಇಂದಿಗೂ ಆ ಕೂರಿಗೆಯ ಕಣ್ಣು ನಮ್ಮ ಮನೆಯಲ್ಲಿದೆ.

ನಾನು ಕೃಷಿ ಬದುಕಿಗೆ ಕಣ್ಬಿಡುವ ಹೊತ್ತಿಗೆ ನಮ್ಮ ಮನೆಯಲ್ಲಿ ಹತ್ತಾರು ರಾಸುಗಳಿದ್ದವು. ಇವುಗಳಲ್ಲಿ ಒಂದು ಜತೆ ಹೋರಿ ಮತ್ತೊಂದು ಜತೆ ಬೇಸಾಯದ ಎತ್ತುಗಳಿರುತ್ತಿದ್ದವು. ಕರೇವಿನ ಒಂದು ಎಮ್ಮೆ ಅಥವಾ ಒಂದು ಹಸು ಕಡ್ಡಾಯವಾಗಿ ಇರುತ್ತಿದ್ದವು. ಹೋರಿಕರುಗಳನ್ನು ಜಾಸ್ತಿ ಬೇಸಾಯಕ್ಕೆ ಹೂಡುತ್ತಿರಲಿಲ್ಲ. ಕೇವಲ ಹೆಗಲು ಮಾಡಿಸುವ ಸಲುವಾಗಿ ಮಾತ್ರ ಆಗಾಗ ಅವುಗಳ ಹೆಗಲಿಗೆ ನೊಗ ಬರುತ್ತಿತ್ತು. ಆದರೆ ಸೌಕರ್ಣೆಯಲ್ಲಿ ಎತ್ತುಗಳಿಗಿಂತ ಇವುಗಳನ್ನು ಕಂಡರೆ ಒಂದು ಕೈ ಮುಂದಿರುತ್ತಿತ್ತು. ನನಗೆ ಹೋರಿ ಕರುಗಳಿಗಿಂತ ಈ ಎತ್ತುಗಳ ಮೇಲೆ ಇನ್ನಿಲ್ಲದ ಅಕ್ಕರೆ ಇರುತ್ತಿತ್ತು. ಏಕೆಂದರೆ ನಾನು ನೇಗಿಲು ಹೊಡೆಯುವಾಗಲಾಗಲಿ, ಗಾಡಿಗೆ ಹೂಡಿದಾಗಲಾಗಲಿ ಇವು ನನ್ನ ಅಜ್ಞಾನ ಮತ್ತು ಆತುರಗಳನ್ನೆಲ್ಲಾ ಹೊಟ್ಟೆಗಾಕಿಕೊಳ್ಳುತ್ತಿದ್ದವು. ಇದು ಕೇವಲ ಒಂದು ಜತೆ ಎತ್ತುಗಳ ವಿಚಾರವಲ್ಲ. ಬಹುತೇಕ ನಾನು ಕಂಡು ನಮ್ಮ ಮನೆಯ ಎತ್ತುಗಳ ಜಾಯಮಾನ ಇದಾಗಿತ್ತು. ಒಂದು ಜತೆ ಕೆಂದೆತ್ತುಗಳು ನಮ್ಮ ಮನೆಯಲ್ಲಿದ್ದವು. ಅವುಗಳ ಮೈ ತೊಳೆಯೋದು, ಹೆಗಲು ಬಂದಿದ್ದರೆ ಅದಕ್ಕೆ ಬಳಪದ ಕಲ್ಲನ್ನು ನುಣ್ಣಗೆ ಚಚ್ಚಿ ಪುಡಿ ಮಾಡಿ ತೆಳು ಬಟ್ಟೆಯಲ್ಲಿ ಆ ಪುಡಿಯನ್ನು ಸೋಸಿ ಹೆಗಲಿಗೆ ಉದುರಿಸೋದು, ಹೊಟ್ಟೆ ತುಂಬಾ ಮೇಯಿಸೋದರಲ್ಲಿ ನನಗೆ ತುಂಬಾ ಖುಷಿ ಇರುತ್ತಿತ್ತು. ಒಂದಷ್ಟು ದಿನ ಓದುವುದನ್ನು ಬಿಟ್ಟು ನಾನೇ ಕೃಷೀ ಬದುಕನ್ನು ಮಾಡತೊಡಗಿದಾಗ ಇವುಗಳಿಗೆ ನಾನೇ ಲಾಳ ಕಟ್ಟಿಸುತ್ತಿದ್ದೆ. ಆಗ ರೆಹಮಾನ್ ಸಾಬ್ ಅನ್ನುವವರು ಚಿನಾಳ್ಳಿಯಿಂದ ಲಾಳ ಕಟ್ಟಲು ನಮ್ಮೂರಿಗೆ ಬರುತ್ತಿದ್ದರು. ಇವರನ್ನು ನನ್ನ ಹಳ್ಳಿಯಲ್ಲಿ ರೈಮಾನ್ ಸಾಬ್ರು ಅಂತ ಕರೀತಿದ್ರು. ಅದಕ್ಕವರು `ಸಧ್ಯ ಹೈವಾನ್ ಅಂತ ಕರೀತಿಲ್ವಲ್ಲ’ ಅಂತ ನಗಾಡುತ್ತಿದ್ದರು. ಬೇಸಾಯದ ಎತ್ತುಗಳಿಗೆ ತಪ್ಪದೇ ಲಾಳಗಳನ್ನು ಕಟ್ಟಿಸಬೇಕಿತ್ತು. ಇಲ್ಲದಿದ್ದಲ್ಲಿ ಅವುಗಳ ಗೊರಸುಗಳು ಮೆತುವಾಗಿ ಕುಂಟುಬೀಳುತ್ತಿದ್ದವು.

ರೆಹಮಾನ್ ಸಾಬರು ಊರಿಗೆ ಬಂದರು ಅಂದರೆ ಅವರ ಹೆಗಲ ಮೇಲೊಂದು ಗೋಣಿ ಚೀಲದ ಗಂಟು ಇರುತ್ತಿತ್ತು. ಅದರಲ್ಲಿ ಥರಾವರಿ ಅಳತೆಯ ಲಾಳಗಳು, ಒಂದು ಸಣ್ಣ ಸುತ್ತಿಗೆ ಹಾಗೂ ಎತ್ತು ಅಥವಾ ಹೋರಿಗಳ ಗೊರಸುಗಳನ್ನು ಹೆರೆಯಲು ಅಂಗೈಯಗಲದ ಹರಿತವಾದ ಚಪ್ಪೆ ಉಳಿಗಳಿರುತ್ತಿದ್ದವು. ಸಾಮಾನ್ಯವಾಗಿ ಸೋಮವಾರಗಳನ್ನು ನಿಗಧಿ ಮಾಡಿಕಂಡಿದ್ದ ಸಾಬರು ಕೆಲವು ದಿನ ಮಿಕ್ಕ ದಿನಗಳಲ್ಲೂ ಬರುತ್ತಿದ್ದರು. ಊರ ನಡೂ ಮಧ್ಯೆಯಿದ್ದ ಕರಿಯಮ್ಮನ ಗುಡಿಯ ಎದೂರಿಗಿದ್ದ ಬುಗರಿ ಮರದಡಿಯಲ್ಲಿ ಲಾಳ ಕಟ್ಟುತ್ತಿದ್ದರು. ಅವರು ಬರುವ ಹೊತ್ತಿಗೆ ದನಗಳು ಮೇವಿಗೆ ಹೋಗಿದ್ದರೆ ಅಲ್ಲಿಗೇ ಹೋಗಿ ಲಾಳ ಕಟ್ಟುತ್ತಿದ್ದರು. ಎತ್ತುಗಳು ಎಷ್ಟೇ ದಢೂತಿ ಇರಲಿ, ಎಷ್ಟೇ ರಂಪಾಟ ಮಾಡಲಿ ಅವುಗಳ ನಡುವಿಗೆ ಹೊಟ್ಟೆಯ ಕೆಳಗಿನಿಂದ ಹಗ್ಗವನ್ನು ಎಸೆದು ಅವುಗಳ ನಡುವನ್ನು ಬಿಗಿದು ತುಂಬಾ ಸಲೀಸಾಗಿ ಮೆಲ್ಲಗೆ ಕೆಳಕ್ಕುರುಳಿಸುತ್ತಿದ್ದರು. ಬೀಳುತ್ತಲೇ ಅದೇ ಹಗ್ಗದಿಂದ ಕಾಲುಗಳನ್ನು ಕಟ್ಟುತ್ತಿದ್ದರು. ಆಗ ಯಾರಾದರೊಬ್ಬರು ಆಗ ಮೂಗುದಾರ ಮತ್ತು ಕೊಂಬುಗಳನ್ನು ಹಿಡಿದು ಅವುಗಳ ಮುಖಗಳನ್ನು ಅಮುಕಿಕೊಳ್ಳಬೇಕಿತ್ತು. ಗೊರಸಿನ ಕೆಳಭಾಗವನ್ನು ತುಂಬಾ ಎಚ್ಚರಿಕೆಯಿಂದ ಹೆರೆದು ಒಂದು ಸಮ ಮಾಡಿ ಪಕ್ಕದಲ್ಲಿ ಹರವಿಕೊಂಡಿರುತ್ತಿದ್ದ ಗೋಣಿ ಚೀಲದಿಂದ ಆ ಗೊರಸಿಗೆ ಸರಿಯಾದ ಲಾಳವನ್ನು ತಗಂಡು ಗೊರಸಿನ ಮೇಲಿಟ್ಟು ಅದರ ಮೇಲ್ಭಾಗದಿಂದ ಸುತ್ತಿಗೆಯಿಂದ ಸಣ್ಣ ಸಣ್ಣ ಮೊಳೆಗಳನ್ನು ಹೊಡೆಯುತ್ತಿದ್ದರು. ಆ ಮೊಳೆಗಳು ಲಾಳದ ತೂತುಗಳಿಂದ ಕೆಳಗಿಯುತ್ತಲೇ ಅವುಗಳನ್ನು ಚಕಚಕನೆ ಮಡಿಚುತ್ತಿದ್ದರು. ಇವರ ನಿಪುಣತೆ ಎಷ್ಟಿತ್ತೆಂದರೆ ಸುತ್ತೇಳು ಹಳ್ಳಿಗಳಲ್ಲೂ ರೆಹಮಾನರನ್ನು ಬಿಟ್ಟರೆ ಮತ್ತೊಬ್ಬರಿಂದ ಲಾಳ ಕಟ್ಟಿಸುತ್ತಿರಲಿಲ್ಲ. ಶೆಟ್ಟೀಕೆರೆ ಸಂತೆಯ ದಿನವಾದ ಶುಕ್ರವಾರ ಬೆಳಗಿನಿಂದಲೇ ಹಳ್ಳಿಗಳಿಂದ ಎತ್ತುಗಳನ್ನು ಹೊಡಕಂಡು ಬಂದು ಸರತಿಯಲ್ಲಿ ಕಾಯುತ್ತಿದ್ದರು. ಸಂತೆಯ ಮಾಳದ ಪಕ್ಕದಲ್ಲಿದ್ದ ಅರಳಿ ಮರವೊಂದರಡಿಯಲ್ಲಿ ಶುರುವಾಗುತ್ತಿದ್ದ ಇವರ ಕಾಯಕ ಹೊತ್ತು ಮುಳಗಲು ಬಂದರೂ ಮುಗಿಯುತ್ತಿರಲಿಲ್ಲ.

ಒಂದು ಸಾರ್ತಿ ನಮ್ಮ ಕೆಂದೆತ್ತುಗಳಿಗೆ ಲಾಳ ಕಟ್ಟಿಸುವ ಸಲುವಾಗಿ ನಾನು ಕರಿಯಮ್ಮನ ಮುಂದೆ ದನಗಳನ್ನು ಮೇವಿಗೆ ಬಿಡುವ ಹೊತ್ತಿನವರೆಗೂ ಕಾದರೂ ನನ್ನ ಸರದಿ ಬರಲಿಲ್ಲ. ಹಂಗಾಗಿ ನಾನು ನಮ್ಮ ಹೊಲದ ಹೆಸರನ್ನು ಹೇಳಿ ಅಲ್ಲಿಗೆ ಬರುವಂತೆ ಅವರನ್ನು ಕೇಳಿದ್ದೆ. ಅದರಂತೆ ಅವರು ನಾನು ಮೇಸುತ್ತಿದ್ದ ಮಳ್ಳೊಲದ ಹತ್ತಿರಕ್ಕೆ ಬಂದಿದ್ದರು. ಅದು ಮಧ್ಯಾಹ್ನದ ಹೊತ್ತಾಗಿದ್ದರಿಂದ ಹೊಲಮಾಳದಲ್ಲಿ ಒಂದು ನರಪಿಳ್ಳೆಯ ಸುಳಿವೂ ಇರಲಿಲ್ಲ. ನಾನೇ ಅವರ ಸಹಾಯಕ್ಕೆ ನಿಲ್ಲಬೇಕಿತ್ತು. ಒಂದು ಎತ್ತನ್ನು ಹೊಲಕ್ಕೆ ನೆಟಕದಂತೆ ಬದುವಿನ ಗಿಡವೊಂದಕ್ಕೆ ಕಟ್ಟಾಕಿ ಮತ್ತೊಂದು ಎತ್ತನ್ನು ಸಾಬರು ಕೂತಿದ್ದ ಹೊಲದ ಮೂಲೆಯಲ್ಲಿದ್ದ ಹಲಸಿನ ಮರದಡಿಗೆ ಹೊಡಕಂಡು ಹೋಗಿ ಅವರ ಅಣತಿಯಂತೆ ನಾನು ಎತ್ತಿನ ಮೂಗುದಾರ ಮತ್ತು ಕೊಂಬುಗಳನ್ನು ಹಿಡಿದು ಅದರ ಕತ್ತನ್ನು ಕೊಂಚ ತಿರುಚಿ ಹಿಡುಕಂಡೆ. ಅದು ಬಲು ಪಟಿಂಗ ಎತ್ತು. ಬಡಪಟ್ಟಿಗೆ ಬಗ್ಗುತ್ತಿರಲಿಲ್ಲ. ಯಾವಾಗ ಸಾಬರು ಹೊಟ್ಟೆಯಡಿಯಿಂದ ಹಗ್ಗವನ್ನು ಎಸೆದರೋ ಎತ್ತು ಜೋರಾಗಿ ಕೊಸರಾಡತೊಡಗಿತು. ಮೆಲ್ಲಗೆ ಮುಪ್ಪಿರಿಯುತ್ತಾ ಅದರ ಬೆನ್ನಿನ ಮೇಲೆ ಕೈಯ್ಯಾಡಿಸುತ್ತಾ ಅವರು ತುಂಬಾ ಮೆಲ್ಲಗೆ ನಡುವನ್ನು ಬಿಗಿ ಹಚ್ಚಿ ಕೆಳಕ್ಕೆ ಬೀಳಿಸಿದರು. ಕೆಳಕ್ಕೆ ಬೀಳುತ್ತಲೇ ಎತ್ತೂ ತನ್ನ ಪ್ರತಿರೋಧವನ್ನು ಕಡಿಮೆ ಮಾಡಿತು. ಎತ್ತಿನ ಕಾಲುಗಳನ್ನು ಕಟ್ಟುತ್ತಲೇ ನಾನು ಮತ್ತೆ ಅದರ ಕೊಂಬು ಮತ್ತು ಮೂಗುದಾರಗಳ ಸಹಾಯದಿಂದ ಅದರ ಮೂತಿಯನ್ನು ಅಮುಕಿಕೊಂಡೆ. ಸಾಬರು ತಮ್ಮ ಕೆಲಸವನ್ನು ಶುರು ಮಾಡುತ್ತಲೇ ಮತ್ತೆ ಕೊಸರಾಡತೊಡಗಿತು. ನಾನು ಮೂತಿಯನ್ನು ಎಷ್ಟೇ ಅಮುಕಿಕಂಡರೂ ಅದರ ಅಲುಗಾಟವನ್ನು ಪೂರಾ ನಿಲ್ಲಿಸಲಾಗಲಿಲ್ಲ. ನನಗೂ ಕೈಗಳು ಸೋಲ ಹತ್ತಿದ್ದವು. ಕುಕ್ಕುರುಗಾಲಲ್ಲಿ ಕೂತಿದ್ದರಿಂದ ಕಾಲುಗಳೂ ಪದ ಹೇಳತೊಡಗಿದ್ದವು. ಸಾಬರು ನನ್ನನ್ನು ಎತ್ತಿನ ಮೂತಿನ ಮೇಲೆ ಕೂತು ಅಲುಗಾಡದಂತೆ ಹಿಡುಕೊಳ್ಳುವಂತೆ ಹೇಳಿದರು. ನಾನು ಅದಕ್ಕಾಗೇ ಕಾಯುತ್ತಿದ್ದೆ ಅನ್ನುವಂತೆ ಚಕ್ಕನೆ ಎತ್ತಿನ ಮೂತಿಯ ಮೇಲೆ ಅತ್ಲಾಗೊಂದು ಇತ್ಲಾಗೊಂದು ಕಾಲುಗಳನ್ನು ಹಾಕಿ ಕೂತೆ. ಎತ್ತು ಕೊಸರಾಡುವುದನ್ನು ನಿಲ್ಲಿಸಿತು. ಗೊರಸುಗಳನ್ನು ಹದವಾಗಿ ಹೆರೆದು ಅವುಗಳಿಗೆ ಹೊಂದುವ ಲಾಳಗಳನ್ನು ಹೊಡೆಯತೊಡಗಿದರು. ಇನ್ನೇನು ಕೊನೆಯ ಲಾಳ ಹೊಡೆದು ಮುಗಿಸಬೇಕು ಅನ್ನುವಷ್ಟರಲ್ಲಿ ಅದೇನಾಯ್ತೋ ಗೊತ್ತಿಲ್ಲ. ಕೆಂದೆತ್ತು ಒಮ್ಮೆಗೇ ಇದ್ದಬದ್ದ ಬಿರುವನ್ನೆಲ್ಲಾ ಬಿಟ್ಟು ಜೋರಾಗಿ ಗೋರಾಡುತ್ತಾ ಕೊಸರಾಡತೊಡಗಿತು. ಕೊಸರಾಟದ ಬಿರುವು ಎಷ್ಟಿತ್ತೆಂದರೆ ಎತ್ತಿನ ಕಾಲುಗಳಿಗೆ ಕಟ್ಟಿದ್ದ ಹಗ್ಗ ಒಮ್ಮೆಗೇ ಅಳುಚಿಕಂಡಿತು. ಅವರು ಹಗ್ಗವನ್ನು ಮತ್ತೆ ಬಿಗಿ ಹಚ್ಚಲು ಯತ್ನಿಸತೊಡಗಿದರು. ಆಗಲಿಲ್ಲ. ಅಷ್ಟೊತ್ತಿಗೆ ಸೊಂಟಕ್ಕೆ ಕಟ್ಟಿದ್ದ ಹಗ್ಗವೂ ಸಡಿಲಗೊಂಡಿತ್ತು. ಆಗಲೂ ನಾನು ಎತ್ತಿನ ಮೂತಿಯ ಮೇಲೆಯೇ ಕೂತು ಮತ್ತಷ್ಟು ಬಿರುವಾಗಿ ಅದುಮಿಕೊಳ್ಳತೊಡಗಿದ್ದೆ. ಯಾವಾಗ ಎತ್ತಿನ ಕಾಲುಗಳಿಗೆ ಮತ್ತು ಸೊಂಟಕ್ಕೆ ಕಟ್ಟಿದ್ದ ಹಗ್ಗ ಬಿಚ್ಚಿಕೊಂಡಿತೋ ಎತ್ತು ಮೂತಿಯ ಮೇಲೆ ಕೂತಿದ್ದ ನನ್ನ ಭಾರವನ್ನು ಲೆಕ್ಕಿಸದೆ ಒಮ್ಮೆಗೇ ಚಿಮ್ಮಿ ಮೇಲಕ್ಕೆದ್ದಿತು. ಹಂಗೆ ರಭಸವಾಗಿ ಎದ್ದ ಅದು ನನ್ನನ್ನು ಸೀದಾ ತನ್ನ ಕೊಂಬುಗಳ ಸಂಧಿಗೆ ಎಸಕಂಡು ಅಡ್ಡಾದಿಡ್ಡಿಯಾಗಿ ಓಡತೊಡಗಿತು. ಗಾಬರಿಗೆ ದಿಕ್ಕು ತೋಚದಾದ ನಾನು ಅದರ ಎರಡೂ ಕೊಂಬುಗಳನ್ನು ಬಿಗಿಯಾಗಿ ಅವುಚಿಕಂಡೆ. ಜೀವ ಬಾಯಿಗೆ ಬಂದಿತ್ತು. ಕಿರುಚಿಕೊಳ್ಳಲೂ ಬಾಯಿ ಬಾರದಾಗಿತ್ತು. ಸಾಬರು ಎತ್ತಿನ ಹಿಂದೆ ಕೂಗುತ್ತಾ ಓಡಿ ಬರುತ್ತಿದ್ದದ್ದು ಕೇಳಿಸುತ್ತಿತ್ತು.

ಇದು ಓಡುವುದ ಕಂಡು ಬೆದರಿದ ಬದುವಿನಲ್ಲಿ ಕಟ್ಟಿದ್ದ ಮತ್ತೊಂದು ಎತ್ತೂ ಕಟ್ಟಿದ್ದಲ್ಲಿಂದ ಕಿತ್ತುಕಂಡು ಮತ್ತೊಂದು ದಿಕ್ಕಿಗೆ ಪೇರಿ ಕೀಳತೊಡಗಿತು. ಒಂದಷ್ಟು ದೂರ ಓಡುವುದರೊಳಗೆ ಕೊಂಬುಗಳ ಸಂಧಿಯಲ್ಲಿದ್ದ ನಾನುದಕ್ಕೆ ಭಾರ ಅನಿಸತೊಡಗಿದೆನೋ ಏನೋ ಎತ್ತು ಕತ್ತನ್ನು ಒಮ್ಮೆಗೇ ರಭಸವಾಗಿ ಇದ್ದಕ್ಕಿದ್ದಂತೆ ಕೆಳಕ್ಕೆ ಬಗ್ಗಿಸಿ ಮತ್ತೊಮ್ಮೆ ಅಷ್ಟೇ ರಭಸವಾಗಿ ಮೇಲಕ್ಕೆ ಚಿಮ್ಮಿತು. ಆ ಚಿಮ್ಮಾಟಕ್ಕೆ ನನ್ನ ಹಿಡಿತ ಸಡಿಲಗೊಂಡು ನಾನು ಅನಾಮತ್ತಾಗಿ ಕೊಂಬುಗಳ ಸಂಧಿಯಿಂದ ಒಂದೆರಡು ಮೊಳದಷ್ಟು ಎತ್ತರಕ್ಕೆ ಹಾರಿ ಮಕಾಡೆಯಾಗಿ ಕೆಳಕ್ಕೆ ಹೊಲದೊಳಕ್ಕೆ ಬಿದ್ದೆ. ಇನ್ನೇನು ಗರಿಗೆ ಬಿಡಬೇಕು ಅನ್ನುವಂತೆ ಸೊಂಟದುದ್ದಕ್ಕೆ ಸೊಂಪಾಗಿ ಬೆಳೆದಿದ್ದ ರಾಗಿ ಪೈರು ಯಾವ ಅನಾಹುತವೂ ಆಗದಂತೆ ನನ್ನನ್ನು ಕಾಪಾಡಿತ್ತು. ಕೆಳಕ್ಕೆ ಬೀಳುತ್ತಲೇ ನನಗೆ ಕಣ್ಣಿಗೆ ಹರಿಷಿಣದ ನೀರು ಚೆಲ್ಲಿದಂಗಾಗಿತ್ತು. ಮೇಲೇಳಲಾಗದೆ ಹಂಗೇ ಮಲಗಿದ್ದೆ. ಆ ಸೊಂಟದುದ್ದದ ಪೈರಿನಲ್ಲಿ ಕೂಗಿಕಂಡು ಬರುತ್ತಿದ್ದ ರೆಹಮಾನ್ ಸಾಬರ ದನಿ ನನಗೆ ಕೇಳಿಸುತ್ತಿತ್ತು. ಆದರೆ ನಾನವರಿಗೆ ಕಾಣುತ್ತಿರಲಿಲ್ಲ. ಕಡೆಗೂ ಕಂಡುಕಂಡು ಎತ್ತಿ ನಿಲ್ಲಿಸಿ ಕರಕಂಡು ಬಂದು ಹಲಸಿನ ಮರಡಿಯಲ್ಲಿ ಕೂರಿಸುವ ಹೊತ್ತಿಗೇ ಅವರ ಗಾಬರಿಗೊಂಡಿದ್ದ ಮುಖದಲ್ಲಿ ದಣಿವು ಕಾಣಿಸುತ್ತಿತ್ತು. ಮುಂದಕ್ಕೆ ಕೆಲವೇ ಕೆಲವು ದಿನಗಳಿಗೆ ಕಾರಬ್ಬ ಇತ್ತು. ಹಂಗಾಗಿ ಕಾರಬ್ಬದಲ್ಲಿ ಎತ್ತುಗಳನ್ನು ಹೊರಡಿಸುವ ಸಲುವಾಗಿ ನಾನೇ ಕೊಂಬು ಎರೆಯುವ ಗಿರಿಜಾ ಮೀಸೆ ಚಂದ್ರಯ್ಯನವರಿಂದ ಎತ್ತುಗಳ ಕೊಂಬುಗಳನ್ನು ನುಣ್ಣಗೆ ಚೂಪಗೆ ಎರೆಸಿದ್ದೆ. ಅದು ರೆಹಮಾನ್ ಸಾಬರ ಗಾಬರಿಗೆ ಕಾರಣವಾಗಿತ್ತು. ಅವತ್ತು ಆ ಎತ್ತಿನ ಲಾಳ ಕಟ್ಟುವಿಕೆ ಅರ್ಧಂಬರ್ದ ಆಗಿತ್ತು. ಮತ್ತೊಂದು ಎತ್ತು ಅದರಿಂದ ಪೂರಾ ತಪ್ಪಿಸಿಕಂಡಿತ್ತು. ಈ ಎತ್ತುಗಳು ಕೊನೆಯವರೆಗೂ ನಮ್ಮೊಂದಿಗಿದ್ದವು. ನನ್ನನ್ನು ಬೀಳಿಸಿದ್ದ ಕೆಂದೆತ್ತು ತೀರಿಕೊಂಡಾಗ ಅದನ್ನು ಮನೆಯ ಮುಂದಲ ಬದುವಿನ ಪಕ್ಕದಲ್ಲಿ ಮಣ್ಣು ಮಾಡಿ ಅದರ ಮೇಲೆ ತೆಂಗಿನ ಸಸಿಯನ್ನು ಇಡಲಾಗಿತ್ತು. ಆರೇಳು ಮಾರು ಉದ್ದಕ್ಕೆ ಬೆಳೆದಿದ್ದ ತುಂಬಾ ಚೆನ್ನಾಗಿ ಕಾಯಿ ಬಿಡುತ್ತಿದ್ದ ಅದರ ಸುಳಿಗೆ ಹುಳ ಹೊಡೆದು ಕೆಲ ವರ್ಷಗಳ ಹಿಂದೆ ಅದೂ ಅಸುನೀಗಿತು.

ಎಷ್ಟೋ ವರ್ಷಗಳಾದ ಮೇಲೆ ಒಂದಿನ ಈ ಲಾಳ ಕಟ್ಟುವ ರೆಹಮಾನ್ ಸಾಬರು ಚಿನಾಳ್ಳಿಯ ನೆಹರೂ ನೆಹರು ಸರ್ಕಲ್‌ನಲ್ಲಿ ಸಿಕ್ಕಿದ್ದರು. ವರ್ಷಗಳೇಷ್ಟೋ ಕಳೆದು ಹೋಗಿದ್ದರಿಂದ ನಾನವರಿಗೆ ಗುರುತು ಸಿಗಲಿಲ್ಲ. ದಷ್ಟಪುಷ್ಟವಾಗಿದ್ದ ಅವರು ಸೊರಗಿದ್ದರು. ಬೆಳ್ಳಂ ಬೆಳ್ಳಗಿದ್ದ ಗಡ್ಡ ಕೆಂಚಗಾಗಿತ್ತು. ನಾನೇ ಅವರ ಹತ್ತಿರಕ್ಕೆ ಹೋಗಿ ಪರಿಚಯ ಮಾಡಿಕಂಡು ಮಾತಾಡಿಸಿದೆ. ಅವರು ಹಾಕಿಕಂಡಿದ್ದ ಅತ್ತರಿನ ಘಮಲು ಮೂಗಿಗೆ ರಾಚುತ್ತಿತ್ತು. ಇಂಥ ಊರು ಅಂತ ಹೇಳುತ್ತಲೇ ಅವರಿಗೆ ನನ್ನ ಅಯ್ಯನ ನೆನಪಾಯ್ತು. ಜತೆಗೆ ಅವತ್ತು ಮಳ್ಳೊಲದ ಹಲಸಿನ ಮರದಡಿಯಲ್ಲಿ ನಡೆದ ಪ್ರಸಂಗವೂ ಅವರು ಗೆಪ್ತಿಗೆ ತಂದುಕೊಂಡು `ಅವತ್ತೇನಾರ ಒಂಚೂರು ಹೆಚೂಕಮ್ಮಿ ಆಗಿದ್ರೆ ನಿಂಗೆ ಅದೇ ಇರ್ತಿರಲಿಲ್ವಲ್ಲ’ ಅಂತ ನಗಾಡಿದರು. ಅವರ ಸೊರಗಿದ್ದ ಮುಖದಲ್ಲಿ ಹಿಂದಿನ ಅದೇ ನಗುವಿತ್ತು. ಅವತ್ತು ತುಂಬಾ ಒತ್ತಾಯ ಮಾಡಿ ಎದುರಿಗಿದ್ದ ವಿಷ್ಣು ಭವನ್ ಅನ್ನುವ ಹೊಟೆಲ್ಲಿಗೆ ಕರಂಡು ಹೋಗಿ ಮೈಸೂರು ಪಾಕ್ ಕೊಡಿಸಿದ್ದರು. ನನ್ನ ಮುಖೇನ ಅವರು ಕಸುಬು ಮಾಡುತ್ತಿದ್ದ ಹಳ್ಳಿಗಳು ಹಾಗೂ ಅಲ್ಲಿನ ಜನರ ಪ್ರೀತಿ ಅವರ ನೆನಪಿಗೆ ಬಂದು ಅವರು ಚಣೊತ್ತು ಭಾವುಕರಾದರು. ಆಗ ಅವರ ಮುಖದ ಮೇಲಾಡುತ್ತಿದ್ದ ಧನ್ಯತಾ ಭಾವ ನನ್ನೊಳಗಿಂದ ಯಾವತ್ತೂ ಮರೆಯಾಗಲಾರದಂಥದ್ದು. ಈಗವರು ಬದುಕಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರವರು ತಾವು ಮಾಡುತ್ತಿದ್ದ ಕಸುಬಿನ ಮುಖೇನಾ ಹಳ್ಳಿಯ ಮನಸ್ಸುಗಳಲ್ಲಿ ನೆಲಸಿದ್ದಾರೆ. ನನ್ನೂರಿನ ಕೆಲ ಹಳಬರು `ಲಾಳ ಕಟ್ಟ ಸಾಬ್ರು ಅಂದ್ರೆ ಆ ರೈಮಾನ್ ಸಾಬ್ರು’ ಅಂತ ಅವರನ್ನು ಈಗಲೂ ನೆನಪಿಸಿಕೊಳ್ಳುತ್ತಾರೆ.

*****

ಕಲ್ಡಿ: ಕರಡಿ.
ಅಲಾಯ್ದ: ಅಲಾಯಿದ, ಪ್ರತ್ಯೇಕವಾಗಿ.
ವಚ್ಚಾಲು: ಒಂದು ಭಾಗ.
ಜಂತೆ: ತೊಲೆಗಳ ಮೇಲೆ ಹಾಕುವ ಸಣ್ಣ ಅಡ್ಡಪಟ್ಟಿ.
ತೀರು: ತೊಲೆ.
ಮುಸುರೆ ಕುನಿ: ಮುಸುರೆ ಬಾನಿ.
ವಪ್ಪಾರು: ಒಪ್ಪಾರು. ಒಂದೇ ಕಡೆಗೆ ಇಳಿಜಾರಾಗಿರುವ ಛಾವಣಿ.
(ಹಿಂದಿನ ಕಂತು: ಹಾಡಿನಾ ಹುಡುಗಿ ಮತ್ತು ನಡೆಯದಾ ವಾಚು)

About The Author

ಎಸ್. ಗಂಗಾಧರಯ್ಯ

ಎಸ್. ಗಂಗಾಧರಯ್ಯ ಮೂಲತಃ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮಾಕುವಳ್ಳಿಯವರು. ಪ್ರಸ್ತುತ ವಾಸ ತಿಪಟೂರಿನಲ್ಲಿ. ಕಥಾ ಸಂಕಲನ: ನವಿಲ ನೆಲ, ಒಂದು ಉದ್ದನೆಯ ನೆರಳು, ದೇವರ ಕುದುರೆ, ಮಣ್ಣಿನ ಮುಚ್ಚಳ, ಎರೆ ನೆತ್ತಿ -ಈ ತನಕದ ಕಥೆಗಳು, ಕಾದಂಬರಿ: ಗಂಗಪಾಣಿ, ವ್ಯಕ್ತಿಚಿತ್ರ ಸಂಪುಟ: ಬಯಲ ಪರಿಮಳ, ಅನುವಾದ: `ವೈಕಂ ಕಥೆಗಳು’, ಲೋರ್ಕಾ ನಾಟಕ-`ಎರ್ಮಾ’, ಲೋರ್ಕಾಕಾವ್ಯ-`ಚರಮಗೀತೆ’, `ಹಲವು ರೆಕ್ಕೆಯ ಹಕ್ಕಿʼ-ವಿವಿಧ ಲೇಖಕರ ಕಥೆಗಳು, ಟರ್ಜೆನೇವ್‌ರ `ಬೇಟೆಗಾರನ ಚಿತ್ರಗಳು’, ದಾರಿಯೋ ಫೋ ನಾಟಕ-`ಗುಲಾಬಿ ಗರ್ಭ’, ಮಾರ್ಕ್ವೆಜ್ ಸಂದರ್ಶನ-`ಫ್ರೇಗ್ರನ್ಸ್ ಆಫ್ ಗ್ವಾವ’, ಚಿಂಗೀಝ್ ಐತ್ಮತೋವ್‌ನ ಕಾದಂಬರಿ- `ಜಮೀಲಾ’, ಬುನಿನ್ ಕಥೆಗಳು, ಅರ್ನೆಸ್ಟ್ ಹೆಮಿಂಗ್ವೆ -ಇಂಡಿಯನ್‌ಕ್ಯಾಂಪ್ ಮತ್ತು ಇತರ ಕಥೆಗಳು, ಮಾರ್ಕ್ವೆಜ್ ಕಥೆಗಳು, ದಾರಿಯೋ ಫೋ ವಾಚಿಕೆ, ಲೋರ್ಕಾ ನಾಲ್ಕು ನಾಟಕಗಳು, ಇವರ ಪ್ರಕಟಿತ ಕೃತಿಗಳು. ಕರ್ನಾಟಕ ಸಾಹಿತ್ಯಅಕಾಡೆಮಿ ಪುಸ್ತಕ ಬಹುಮಾನ (ಅನುವಾದ - 1996), ಕರ್ನಾಟಕ ಸಾಹಿತ್ಯಅಕಾಡೆಮಿ ಪುಸ್ತಕ ಬಹುಮಾನ (ಕಥೆ - 2018), ಡಾ. ಬೆಸಗರಹಳ್ಳಿ ರಾಮಣ್ಣಕಥಾ ಪ್ರಶಸ್ತಿ(2018), ಶಿವಮೊಗ್ಗ ಕರ್ನಾಟಕ ಸಂಘದ ಡಾ.ಯು.ಆರ್.ಅನಂತಮೂರ್ತಿ ಪ್ರಶಸ್ತಿ.(2018), ತುಮಕೂರಿನ ವೀ.ಚಿ.ಪ್ರತಿಷ್ಠಾನದ ವೀ.ಚಿ.ಪ್ರಶಸ್ತಿ (2018), ಸೇಡಂನ ಅಮ್ಮ ಪ್ರಶಸ್ತಿ(2022), ಶಾ. ಬಾಲೂರಾವ್ ಅನುವಾದ ಪ್ರಶಸ್ತಿ(2023) ಸೇರಿದಂತೆ ಇನ್ನೂ ಹಲವು ಪ್ರಶಸ್ತಿಗಳು ಇವರಿಗೆ ದೊರೆತಿವೆ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ