Advertisement
ಕೀರ್‌ಗಂಗಾ ದಾರಿಯಲ್ಲಿ ಸಿಕ್ಕನೊಬ್ಬ ಸಂತ: ಶ್ರೀಧರ್‌ ಎಸ್.‌ ಸಿದ್ದಾಪುರ ಬರೆಯುವ ಪ್ರವಾಸ ಸರಣಿ

ಕೀರ್‌ಗಂಗಾ ದಾರಿಯಲ್ಲಿ ಸಿಕ್ಕನೊಬ್ಬ ಸಂತ: ಶ್ರೀಧರ್‌ ಎಸ್.‌ ಸಿದ್ದಾಪುರ ಬರೆಯುವ ಪ್ರವಾಸ ಸರಣಿ

ಕಾಲು ಸರಿಯಿಲ್ಲದ ಬಾಣಸಿಗನೊಬ್ಬ ಕಷ್ಟಪಟ್ಟು ಮೇಲೇರಿ ಬಂದು ಅಡುಗೆ ಮಾಡಿದ್ದ. ಆತನ ಬದುಕಿನ ಕಷ್ಟಗಳು ಏನಿದ್ದವೋ? ಸದಾ ಚಡಪಡಿಸುತ್ತಲೇ ಇರುತ್ತಿದ್ದ. ಹಿಮಾಚಲ, ಮೇಘಾಲಯದಲ್ಲಿ ಹಬ್ಬುತ್ತಿರುವ ಗಾಂಜಾ ವಾಸನೆ ಇಲ್ಲಿಯೂ ನನ್ನ ಮೂಗಿಗೆ ಬಡಿದಿತ್ತು!! ರಾತ್ರಿಯಾಗುತ್ತಲೇ ಆಗಸದ ಬೀದಿಯಲ್ಲಿ ತಾರಾ ಮೆರವಣಿಗೆ. ಎಲ್ಲೂ ಜಾಗವಿಲ್ಲದಂತೆ ಹಾಸಿದ್ದ ನಕ್ಷತ್ರ ಚಾಪೆ! ಕೌತುಕಮಯ ನೀಲಾಕಾಶ. ನಮ್ಮಲ್ಲಿ ಒಂದೆರಡು ತಾರಾ ದರ್ಶನವಷ್ಟೇ ಅಲ್ಲಿನ ಆಕಾಶವೇ ಬೇರೆ ಎಂಬಂತೆ ಭಾಸ.
ಶ್ರೀಧರ್‌
ಎಸ್.‌ ಸಿದ್ದಾಪುರ ಬರೆಯುವ “ಸಾಗುತ ದೂರ ದೂರ…” ಪ್ರವಾಸ ಸರಣಿಯಲ್ಲಿ ಕೀರ್‌ಗಂಗಾ ಪ್ರವಾಸ ಕುರಿತ ಬರಹ ಇಲ್ಲಿದೆ

ನನ್ನ ಸ್ಮೃತಿಪಟಲದಿಂದ ಅಳಿಸಿಹೋಯಿತೆಂಬಂತೆ ಆಗಿದ್ದ ಹಿಮಾಚಲದ ಕೀರ್‌ಗಂಗಾ ಚಾರಣ ಮತ್ತೆ ಮುನ್ನಲೆಗೆ ಬಂದಿದ್ದೇ ಆಕಸ್ಮಿಕ! ಬೆಟ್ಟಗಳಲ್ಲಿ ಕಳೆದೋಗುವುದು ಅಂತಾರೆ; ಆದರೆ ಇಲ್ಲಿ ಬರೋಬ್ಬರಿ 1768 ಜನ ಮತ್ತೆಂದೂ ಸಿಗದಂತೆ ಕಣ್ಮರೆಯಾಗಿದ್ದಾರೆ! ಭಾರತದ ಉದ್ದಗಲಕ್ಕೂ ಇಂತಹ ಇನ್ನೊಂದು ಚಾರಣ ಪಥ ಕಾಣಸಿಗದು! ನೆತ್ತಿಯಿಂದ ೨೪ ಗಂಟೆಯೂ ಹರಿದು ಬರುವ ಹಾಲಿನಂತಹ ಬಿಸಿ ನೀರು ಮತ್ತೊಂದು ವಿಶೇಷ! ಜಗತ್ತು ಹುಚ್ಚರ ಸಂತೆ. ಇಲ್ಲಿ ಎಲ್ಲರದೂ ಒಂದು ವಿಭಿನ್ನ ಹುಡುಕಾಟ. ನನ್ನಂಥವರಿಗೆ ತಿರುಗಾಟವೇ ಒಂದು ಬಿಡುಗಡೆ.

ಈ ಅಚ್ಚರಿಯ ಜಾಡು ಹಿಡಿದು ಹೊರಟವನಿಗೆ ಹೊಸ ಹೊಸ ವಿಷಯಗಳ ಮಹಾಪೂರವೇ ಕೀರ್‌ಗಂಗಾ ಚಾರಣದ ದಾರಿಯಲ್ಲಿ ಕಾಣಸಿಕ್ಕವು. ಹಾಗಾಗಿ ಕನಸಿನ ಈ ಚಾರಣಕ್ಕೆ ಅಡಿಯಿಟ್ಟೆ. ಬನ್ನಿ ನಿಮ್ಮನ್ನೂ ಕರೆದೊಯ್ಯುವೆ.

ಕೀರ್‌ಗಂಗಾ ಹಿಮಾಚಲದ ಕಸೋಲ್‌ ಹಳ್ಳಿಯಿಂದ ಅನತಿ ದೂರದಲ್ಲಿದೆ. ಮಣಿಕರಣವನ್ನೂ ದಾಟಿ ಸಿಗುವ ತೋಷ್‌ನಿಂದಲೂ ಚಾರಣ ಮಾಡಬಹುದು.  ದೊಡ್ಡ ಪ್ರವಾಸದ ನಡುವೆ ಹೇಗೋ ಜಾಗ ಮಾಡಿಕೊಂಡು ಚಾರಣಕ್ಕಾಗಿ 3   ದಿನ ತೆಗೆದಿರಿಸಿದೆ. ಕನಿಷ್ಟ ನಾಲ್ಕು ದಿನಗಳ ಚಾರಣವನ್ನು ಎರಡೇ ದಿನದಲ್ಲಿ ಮುಗಿಸುವ ಹಠಕ್ಕೆ ಬಿದ್ದು ಪೂರ್ಣ ಗೊಳಿಸಿದೆವು. ಕೀರ್‌ಗಂಗಾ ರಾಷ್ಟ್ರೀಯ ಉದ್ಯಾನವನದಲ್ಲಿನ 12 ಕಿ.ಮೀ ಅತಿ ಉದ್ದದ ಚಾರಣವನ್ನು ಎರಡೇ ದಿನದಲ್ಲಿ ಪೂರೈಸುವ ಮನಸ್ಸು ಮಾಡಿದೆವು.

ಮಣಿಕರಣದಿಂದ ತೋಷ್‌ಗೆ

ನಾವು ಬಿಜಿಲಿ ಮಹಾದೇವನಿಗೆ ನಮಿಸಿ, ಮಲಾನಾ ದಾರಿಯಲ್ಲಿ ಕಳೆದುಹೋಗಿ, ಮಣಿಕರಣದ ಬಸಿ ನೀರ ಬುಗ್ಗೆಯಲಿ ಮಿಂದೆದ್ದು ಮೈಮನ ತಣಿಸಿಕೊಂಡು ಕೀರ್‌ಗಂಗಾ ಚಾರಣಕ್ಕೆ ಹೊರಟು ನಿಂತಾಗ ನಡು ಹಗಲು. ಬೆಳಗಿನ ಬಸ್ಸಾಗಲೇ ಊರು ತೊರೆದಿತ್ತು. ಕುಂಬಕರ್ಣನ ಹೊಟ್ಟೆಯಂತಹ ಎರಡು ಲಗೇಜು ಹೊತ್ತು ಹೋಗುವುದೂ ಸುಲಭವಿರಲಿಲ್ಲ. ಕಾರು ಹತ್ತಿದೆವು.

ಓಕ್, ಪೈನ್ ಮರಗಳ ಚಪ್ಪರದಡಿ ನುಸುಳುತ್ತಾ ನುಜ್ಜುಗುಜ್ಜಾದ ರಸ್ತೆಯಿಲ್ಲದ ರಸ್ತೆಯಲ್ಲಿ ತೋಷ್‌ನತ್ತ ಕಾರಿನಲ್ಲಿ ಪ್ರಯಾಣ ಬೆಳೆಸಿದೆವು. ನಡು ಹಗಲಿಗೇ ತಂಪಾದ ಚಂದ್ರನಂತಹ ಸೂರ್ಯ! ಏಕಮುಖಿ ರಸ್ತೆಯ ಗೋಜಲಿಗೆ ಸಿಕ್ಕಿಹಾಕಿಕೊಂಡ ನಮ್ಮ ವಾಹನ ನಡುರಸ್ತೆಯಲ್ಲಿ ಉಳಿಯಿತು. ನಾವು ಊರಿಗೆ ಪಾದ ಸೇವೆಗೈದೆವು. ಒಂದಿಷ್ಟು ಪಡ್ಡೆಗಳು ಊರ ಹೆಬ್ಬಾಗಿಲಿನಲ್ಲಿ  ಅಗ್ನಿ ಕಾರ್ಯ ನಡೆಸಿದ್ದರು. ಅದೇನು ಹುಚ್ಚು ಗೊತ್ತಿಲ್ಲ ಪ್ರತಿ ಸಾರಿ ಕಂಡ ಬೆಟ್ಟವು ನೋಡಿದಷ್ಟು  ಮತ್ತೆ ನೋಡಬೇಕೆನ್ನುವ ಬಯಕೆ. ತನ್ನ ಮೇಲೆ ನೀರ ಗಾಯಗಳನ್ನ ಮಾಡಿಕೊಂಡ ಬೆಟ್ಟ ನಗುತ್ತಲೇ ನಮ್ಮನ್ನು ಸ್ವಾಗತಿಸಿತು. ಅಸಂಖ್ಯಾತ ಬೇರುಗಳು ಹರಿದಾಡಿದಂತೆ ಹಿಮ ಕೊರೆದ ಗೀರುಗಳು. ದೂರದ ಗ್ಲೇಶಿಯರ್ ನಿಂದ ಬೀಸುವ ಕುಳಿರ್ಗಾಳಿ. ಅಪಾರವಾದ ನಿಲುಕದ ಸೌಂದರ್ಯ ಹೊತ್ತ ತೋಷ ಹಳ್ಳಿಗೆ ಮರುಳಾಗಿ ತುಂಬಾ ಹೊತ್ತು ಹಾಗೇ ನಿಂತೆ.

ತೋಷ್‌ ಎಂಬ ಗ್ಲೋಬಲ್‌ ಹಳ್ಳಿ!

ಮೊದಲೊಂದು ಹಳ್ಳ ದಾಟಿ ಏರು ದಾರಿ ಏರುತ್ತಾ ಜರ್ಮನ್‌ ಬೇಕರಿ, ಇಸ್ರೇಲಿ ಕೆಫೆ ಇವನ್ನೆಲ್ಲಾ ಬಳಸಿ, ಜಮ್ಲು ಮಂದಿರ ದಾಟಿ, ದೂರದ ಜಲಧಾರೆಯ ಶಬ್ದಕ್ಕೆ ಕಿವಿಯಾಗುತ್ತಾ ರೂಂ ಸೇರಿ ಅಲ್ಲೇ ಕುಳಿತು ಎರಡೆರಡು ಲೋಟ ಕಾಫಿ ಸಮಾರಾಧನೆ ನಡೆಸಿ ಮನ ತಣಿಸಿಕೊಂಡೆ. ಸ್ವಲ್ಪ ವಿಶ್ರಾಂತಿ ಪಡೆದು ಊರು ಸುತ್ತಲು ಹೊರಟೆವು.

ತೋಷ್ ಪಾರ್ವತಿ ಕಣಿವೆಯ ಕೊನೆಯ ಹಳ್ಳಿ ಹೈನುಗಾರಿಕೆಯೇ ಪ್ರಧಾನ ಉದ್ಯೋಗ. ಗೋಧೂಳಿಯಲ್ಲಿ ಗಂಟೆ ಬಾರಿಸುತ್ತಾ ಗೋಪಾಲಕರ ಹಿಂಡು ಊರ ಕಡೆ ಹೆಜ್ಜೆ ಹಾಕಿದ್ದವು. ಊರ ನೆತ್ತಿಯಲ್ಲೊಂದು ಹಿಮಟೋಪಿ ಹೊತ್ತ ಶಿಖರವೊಂದು ಫ್ರೇಮ್ ಹಾಕಿಸಿದಂತೆ ಆಕಾಶಕ್ಕೆ ತೂಗು ಬಿದ್ದಿತ್ತು. ಪಾರ್ವತಿ ಕಣಿವೆಯ ತುದಿಯೂರು ಸನಿಹದಲ್ಲೆ ತೋಷ್ ನದಿ ಬೋರ್ಗರೆಯುತ್ತಾ ಪಾರ್ವತಿ ನದಿಗೆ ಸೇರುವ ತವಕದಲ್ಲಿ ಕ್ಷಣಕ್ಷಣಕ್ಕೂ ದೂರದ ಬೃಹತ್ ಹಿಮಗಡ್ಡೆ ಕರಗಿಸಿಕೊಂಡು ತನ್ನೊಡಲು ತುಂಬಿಸಿಕೊಂಡು ಹರಿಯುತಿತ್ತು.

ತೋಷ್ ನದಿ ಹರಿವಿಗಡ್ಡವಾಗಿ ಇತ್ತೀಚಿಗೆ ಚಿಕ್ಕ ಡ್ಯಾಂ ನಿರ್ಮಿಸಿದ್ದಾರೆ. ಅದರ ಹರಿವೆ ಇಲ್ಲಿನ ಪ್ರತಿ ಮನೆಯ ಬೆಳಕ ಪ್ರಜ್ವಲನೆಗೆ ಕಾರಣ. ಊರ ಹಿರಿಯರು ಬಿಸಿಲು ಕಾಸಿ ಮೈ ಬೆಚ್ಚಗೆ ಮಾಡಿಕೊಂಡು ಹೊರಡುತ್ತಿದ್ದರು.

ಊರ ಹೆಬ್ಬಾಗಿಲಿನಲ್ಲಿ

ಊರ ಹೆಬ್ಬಾಗಿಲಿನಲಿ ಕಂಡ ಜರ್ಮನ್ ಬೇಕರಿ ನಮ್ಮನ್ನು ಅಚ್ಚರಿಗೆ ತಳ್ಳಿತು. ಅಲ್ಲಿ ಸಿಗುವ ಬ್ರೆಡ್, ಕ್ರೊಸೊಂಟ್‌ಗಳಿಂದ ಸ್ಥಳೀಯ ಆಹಾರದ ಮೇಲೆ ಅಲಾವುದ್ದೀನ್ ಖಿಲ್ಜಿ ಆಕ್ರಮಣ! ಆಹಾರ ದಾಸ್ಯದ ಮುಂದುವರಿಕೆ! ಹೇವರಿಕೆ! Eat local ತತ್ವವೇ ನಮ್ಮ ಪಥವಾದುದರಿಂದ ಸ್ಥಳೀಯ ಆಹಾರಕ್ಕೆ ಪ್ರಥಮ ಪ್ರಾಶಸ್ತ್ಯ ಕೊಟ್ಟೆವು. ಈ ಕೊನೆಯ ಹಳ್ಳಿಯಲ್ಲೂ ಜರ್ಮನ್ ಬೇಕರಿ ಕಂಡು ಅಚ್ಚರಿ ಮತ್ತು ವಿಷಾದ ಒಟ್ಟೊಟ್ಟಿಗೆ ಉಂಟಾದವು. ಯಾರದೋ ಬಾಯಿ ಚಪಲ ತಣಿಸಲು ಎಲ್ಲೆಲ್ಲಿಂದಲೋ ಇಲ್ಲಿಗೆ ಬಂದ ಸಕ್ಕರೆ, ಮೈದಾ ಮಿಶ್ರಿತ ತಿನಿಸುಗಳ ಸಂಗಕ್ಕೆ ಬಿದ್ದ ಸ್ಥಳೀಯರನ್ನು ಮೋಹಗೊಳಿಸುತ್ತಲೇ ಇದೆ. ಇಲ್ಲಿನ ಸ್ಥಳೀಯ ಆಹಾರಕ್ಕಾಗಿ ಹುಡುಕಿದಾಗ ಊರ ಚೌಕದ ಸನಿಹ ಜಮದಗ್ನಿಯ ದೇವಾಲಯದ ದಾರಿಯಲ್ಲಿ ಸ್ಥಳೀಯ ಪುಟ್ಟ ಹೋಟೆಲ್ ಕಣ್ಣಿಗೆ ಬಿತ್ತು. ಕತ್ತಲ ಕವಿದ ರಾತ್ರಿಯಲಿ ಮೇಣದ ದೀಪದ ಬೆಳಕಿನಲಿ ಆತನು ಬಡಿಸಿದ ಪದರ ಪದರವಾದ ಜವೆ ಗೋಧಿಯ ರೊಟ್ಟಿ ಹೊಟ್ಟೆ ಜೊತೆಗೆ ಮನಸ್ಸನ್ನೂ ತಣಿಸಿತ್ತು. ಇಲ್ಲಿಗೆ ಆಗಮಿಸಿದ್ದೇ ಈ ಚಾರಣದ ತಿರು ಬಿಂದು!

ಚಾರಣಿಗರ ಸಂತೆಯಲ್ಲೊಬ್ಬ ಸಂತ

ಈ ಉಪಹಾರ ಗೃಹದಲ್ಲೇ ಫ್ರಾನ್ಸ್ ದೇಶದವನೊಬ್ಬ ಭೇಟಿಯಾದ. ಡೂಡೋ ಆತನ ಹೃಸ್ವ ನಾಮಧೇಯ! ಯಾವುದೇ ಆತಂಕವಿಲ್ಲದೆ ಮನೆ ಮಗನಂತೆ ಉಣ್ಣುತಲಿದ್ದ! ಆತ ತನ್ನ ಸಣ್ಣ ಕತೆಯ ಕರಂಡಿಕೆ ಬಿಚ್ಚಿಟ್ಟಿದ್ದು ಹೀಗೆ.

“ನಾನು ಡೂಡೋ” (ಪೂರ್ಣ ನಾಮ ಮರೆತಿದ್ದೇನೆ) ಫ್ರಾನ್ಸ್ ದೇಶದವ ತೋಷ್‌ನ ಪ್ರಕೃತಿ ಸೌಂದರ್ಯಕ್ಕೆ ಮರುಳಾಗಿ ಪ್ರತಿವರ್ಷ ಬರುತ್ತಿದ್ದೇನೆ! ನಾನು ನನ್ನ ಅಕ್ಕನ ಜೊತೆ ವಾಸವಾಗಿದ್ದೇನೆ. ಮದುವೆ ಆಗಿಲ್ಲ, ಆಗುವ ಆಸೆಯೂ ಇಲ್ಲ. ಪ್ರಾಯ 50. ನನ್ನ 25ನೆಯ ವರ್ಷಕ್ಕೆ ಅಂದರೆ 2000ನೆಯ ಇಸವಿಗೆ ಇಲ್ಲಿಗೆ ಮೊದಲ ಬಾರಿಗೆ ಬಂದೆ! ಇದು ನನ್ನ 25ನೆಯ ಭೇಟಿ! ಎಂದು ಬೆರಳು ಚೀಪುತ್ತಾ ಊಟ ಮುಗಿಸಿದ. ಆತನ ಈ ಮಾತು ನನ್ನಲ್ಲಿ ಪ್ರಶ್ನೆಗಳ ಮಹಾಪೂರದ ಅಲೆಯನ್ನೇ ಎಬ್ಬಿಸಿತು. ಒಬ್ಬ ವ್ಯಕ್ತಿ ತನ್ನೆಲ್ಲಾ ಕೆಲಸವನ್ನು, ತಿರುಗಾಟವನ್ನು ಬದಿಗಿಟ್ಟು ಇಲ್ಲಿಗೆ ಬರಬೇಕೆಂದರೆ ಇಲ್ಲಿನ ಅಪೂರ್ವ ಆಕರ್ಷಣೆಯಾದರೂ ಏನು? ಊರವರ ಗೆಳೆತನವೇ? ಮುಕ್ತವಾಗಿ ಸಿಗುವ ಗಾಂಜಾವೇ? ಯಾವುದು ಅವನ ಹಿಡಿದಿಟ್ಟ ಆಸಕ್ತಿಯ ಬಿಂದು? ತಿಳಿಯದಾದೆ. ಮರುದಿನದ ತರುವಾಯ ಕೀರ್‌ಗಂಗಾ ಚಾರಣ ಹಾದಿಯಲ್ಲೂ 12ರ ಸುಮಾರಿಗೆ ಸಿಕ್ಕಿ ಅಚ್ಚರಿಗೆ ತಳ್ಳಿದ್ದ! ಅವನನ್ನು ಕೇಳಬೇಕಿದ್ದ ನೂರಾರು ಪ್ರಶ್ನೆಗಳು ನನ್ನಲೇ ಉಳಿದವು. ಎಲ್ಲವನ್ನು ನುಂಗಿಕೊಂಡು ಹೊರಟು ಬಿಟ್ಟೆ! ಊರ ಜಗುಲಿಯಲಿ ಅನೇಕ ಇಸ್ರೇಲಿ ಹೋಟೆಲುಗಳು, ವಿಶಿಷ್ಟ ವಿನ್ಯಾಸದಿಂದ ಕಂಗೊಳಿಸುತ್ತಿದ್ದವು. ಎಲ್ಲಿಯ ಇಸ್ರೇಲ್ ಎಲ್ಲಿಯ ತೋಷ್, ಎಲ್ಲಿಯ ಪಾರ್ವತಿ ಕಣಿವೆ? ಉದಾರಿಕರಣದ ಪದತಲದಲ್ಲಿ ಕಮರಿದ ದೇಸಿ ತಿನಿಸುಗಳ ಲೆಕ್ಕವಿಟ್ಟವರ್ಯಾರು? ನಮ್ಮ ತನವ ಫೋಕಸ್ ಮಾಡಲಾಗದ ಮೂರ್ಖರಂತೆ, ಪೆಕರರಂತೆ ಭಾಸವಾದೆವು.

ಯಾವುದೇ ಹೆಚ್ಚಿನ ಲಗೇಜುಗಳಿಲ್ಲದೇ ಮಣಿಪುರದ ಶಂಗೈ ಹಬ್ಬದಲ್ಲೂ ಇಟಲಿಯ ಪ್ರವಾಸಿಗನೊಬ್ಬ ಸಿಕ್ಕಿದ್ದ. ಅವನಂತೆಯೇ ಈ ಡುಡೋ ಭಾಸವಾಗಿದ್ದ! ಮುರುಕು ಇಂಗ್ಲೀಷ್‌ನಲ್ಲಿ ಮಾತನಾಡಿ ಅವನ ಸ್ನೇಹ ಸಂಪಾದಿಸಿದ್ದೆ. ತನ್ನ ಫೋನ್ ಸಂಖ್ಯೆ ನೀಡಿ ಇಟಲಿಗೂ ಆಹ್ವಾನಿಸಿದ್ದ!

ದಾರಿ ಯಾವುದಯ್ಯ

ಸಾಮಾನ್ಯ ಚಾರಣದಂತೆ ಕಂಡರೂ ಇದು ಸಾಮಾನ್ಯ ಚಾರಣವಲ್ಲ. ಎಲ್ಲ ದೊಡ್ಡ ಚಾರಣಗಳ ಹೂರಣ ಹೊತ್ತ ದಾರಿ. ಯಾಮಾರಿದರೆ ಸ್ವರ್ಗಕ್ಕೆ ರಹದಾರಿ! ಇದೊಂದು ಅನನ್ಯ ಚಾರಣ ದಾರಿ. ದಾರಿಯುದ್ದಕ್ಕೂ ಸಿಗುವ ನೂರಾರು ತೊರೆಗಳು, ಫರ್ನ್‌ಗಳು, ಜಲಪಾತಗಳು, ನಕ್ತಾನ್‌, ಕಲ್ಗಾ ಎಂಬ ಹಳ್ಳಿ ಇದನ್ನು ವಿಶಿಷ್ಟ ಚಾರಣವನ್ನಾಗಿಸಿದೆ. ಅಲ್ಲದೇ ಕಳೆದು ಹೋದ ಆ ೧೭೬೮ ಜನ ಚಾರಣಕ್ಕೊಂದು ನಿಗೂಢ ಮೆರಗನ್ನು ನೀಡಿ ಹೋಗಿದ್ದಾರೆ!

ಕೀರ್‌ಗಂಗಾಕೆ ಪ್ರಮುಖ ಎರಡು ದಾರಿಗಳು ಮೊದಲನೆ ಬರ್‌ಶೈನಿಯಿಂದ ವಯಾ ಕಲ್ಗಾ. ಎರಡನೆಯ ದಾರಿ ನಾಕ್‌ತಾನ್‌ ಹಳ್ಳಿಯ ಮೂಲಕ. ನಾಕ್ತಾನ್ ದಾರಿ ಬಲು ಕಠಿಣ. ಹೊಸ ದಾರಿಯ ಹುಡುಕಾಟದಲ್ಲಿರುವವರಿಗಾಗಿ ಕಾದಿರುವ ದಾರಿ ಬುನ್‌ಬುನಿ. ಸ್ವಲ್ಪ ಕಠಿಣವಾದರೂ ಅನ್ವೇಷಣಾ ಅಲೆಮಾರಿಗಳಿಗೆ ಉತ್ತಮ!

ನಾವು ಆಯ್ಕೆ ಮಾಡಿಕೊಂಡ ದಾರಿ ಬರ್‌ಶೈನಿಯಿಂದ ಕಲ್ಗಾ ಮೂಲಕ ಕಾಡು ಬೀಳುವುದೆಂದು ತೀರ್ಮಾನಿಸಿ ನಾಕ್ತಾನ್‌ ಹಳ್ಳಿ ದಾರಿ ಬಿಟ್ಟೆವು. ಹೇಗೆ ಈ ಊರ ಉಚ್ಚಾರಣೆ ನನಗಿನ್ನೂ ಗೊಂದಲವಿದೆ.

ಬರ್‌ಶೈನಿಯಲ್ಲೇ ಚಾರಣಿಗರ ಸಂತೆ ನೆರೆದಿತ್ತು. ತಲೆಗೊಂದು ಸಾವಿರವಿತ್ತು. ಅಲ್ಲೊಬ್ಬ ದಾಂಡಿಗನಂತಹ ಗೈಡ್‌ನೊಂದಿಗೆ ಸನಿಹದ ಬರಶೈನಿ ಡ್ಯಾಂ ದಾಟಿ ಕೀರ್‌ಗಂಗಾ ದಾರಿಗಡಿ ಇಟ್ಟೆವು.

ಕೀರ್‌ಗಂಗಾದ ದಾರಿ ಓಕ್ ಮತ್ತು ಮೇಪಲ್ ಮರಗಳ ದಟ್ಟಣಿಯ ನಡುವೆ ಕಾಲು ಹಾದಿ ಜಾಗ ಮಾಡಿಕೊಂಡು ನುಸುಳಿ ಹೊರಟಿತ್ತು. ಕಡು ನೀಲ ಹಕ್ಕಿಯೆಂದು ನನಗೆ ಕೀರ್‌ಗಂಗಾ ಚಾರಣಕ್ಕೆ ಸ್ವಾಗತವೆಂದುಸುರಿ ನಭಕ್ಕೆ ಹಾರಿತು. ಅದರ ಹತ್ತಾರು ಚಿತ್ರ ನನ್ನ ಕ್ಯಾಮರಾದಲ್ಲಿ ದಾಖಲಾಯಿತು. ಹತ್ತು ಹೆಜ್ಜೆ ಹಾಕುತ್ತಲೆ ಚಾರಣದಾರಿ ಗಡ್ಡವಾಗಿ ಹರಿವ ತೊರೆಯನು ಹರ ಸಾಹಸಗೈದು ದಾಟಿದೆವು. ನಮ್ಮ ಸಾಹಸ ಪರೀಕ್ಷೆ ಮಾಡಲು ಕೇವಲ ಒಂದೇ ಒಂದು ತುಂಡು ಮರವನ್ನು ದಾರಿಗಡ್ಡವಾಗಿ ಹಾಕಲಾಗಿತ್ತು. ಇವೆಲ್ಲವು ಬರ್‌ಶೈನಿಯ ಬೃಹತ್ ಅಣೆಕಟ್ಟಿಗೆ ನೀರೂಡುವ ಪುಟಾಣಿ ಸ್ತನಗಳು.

ತೋಷ್‌ಗೆ, ಬರಶೈನಿಗೆ ಬೆಳಕು ಚೆಲ್ಲುವ ಪುಟಾಣಿ ಡ್ಯಾಂ ಕರಗಿದ ಹಿಮಗಡ್ಡೆಗಳಿಂದ ವಿದ್ಯುತ್ ಉತ್ಪಾದಿಸುತ್ತಲೇ ಇದೆ. ಮಾನವ ಅಭೀಪ್ಸೆಗೆ ಬೆಲೆ ತೆತ್ತುತ್ತಲೇ ಇದೆ. 2025ರ ಮಹಾ ಮಳೆಯೊಂದು ರಾತ್ರೋರಾತ್ರಿ ಪಾರ್ವತಿಕೊಳ್ಳದ ಊರನ್ನು ನದಿಗುಂಟ ಕೊಚ್ಚಿ ಸಾಗಿಸಿದೆ ಎಂಬ ಸುದ್ದಿ ತಿಳಿಯುತ್ತಲೇ ಖಿನ್ನನಾದೆ. ಅಂತಹ ಜಲಪ್ರಳಯಕ್ಕೆ ಈ ಊರುಗಳು ಸಾಕ್ಷಿಯಾಗಬೇಕಾಗಿದ್ದು, ದುರಾದೃಷ್ಣ.

ದಾರಿಯುದ್ದಕ್ಕೂ 3-4 ಜಲಪಾತಗಳು ಬಳುಕುತ್ತಾ ಹರಿಯುವವು. ಒಂದು ಜಲಪಾತದಲ್ಲಂತೂ 3-4 ಜನ ತಮ್ಮ ಪ್ರಾಣ ಕಳಕೊಂಡಿದ್ದರು! ಅವುಗಳಿಗೆ ಅವರ ಹೆಸರನ್ನೇ ಇರಿಸಲಾಗಿತ್ತು. ಭೀಕರತೆಯಿಂದ ಹರಿವ ನಡು ಚಾರಣದ ನಡುವೆ ಸಿಗುವ ಹೆಸರೇ ಇಲ್ಲದ  ಜಲಪಾತವೂ ಒಂದು. ಇಲ್ಲಿ ದಣಿವಾರಿಸಿಕೊಳ್ಳಲು ಹಲವು ಕೆಫೆಗಳಿಗೆ. ಝುಳು ಝುಳು ಹರಿವ ತೊರೆಗೆ ಕಾಲಿಟ್ಟು ಕಾಫಿ ಹೀರಿ ಚಾರಣಿಗರನ್ನು ನೋಡುತ್ತಾ ಕೂರುವುದು ವಿಶೇಷ ಅನುಭವ! ಸನಿಹ ದೂರಿನ ಹಲವು ನಾಯಿಗಳು ನಮ್ಮನ್ನು ಹಿಂಬಾಲಿಸಿ ಇಲ್ಲಿನ ಬಿಸಿಲ ಹೀರುತ್ತಾ ಕುಳಿತವು.

ಹೆಸರಿಸದ ಜಲಪಾತ ದಾಟುತ್ತಲೇ ದಾರಿ ಏರು ಮುಖವಾಗಿತ್ತು. ಏರು ಇಳಿಯ ದಾರಿಗಳ ದಾಟಿ ಅರ್ಧ ದಾರಿ ಏರಿ ಬಂದಾಗ ಮತ್ತೊಂದು ಜಲಪಾತ ನಿರುಮ್ಮಳವಾಗಿ ಹರಿಯುತಲಿತ್ತು. ದೂರದಿಂದೊಂದು ಜಲಧಾರೆ ಈ ಜಲಧಾರೆಗೆ ಬಂದು ಸೇರಿತ್ತು.  ಇಲ್ಲಿ ತಂಗಲು ವ್ಯವಸ್ಥೆ ಸಹ ಇದೆ. ನಮ್ಮ ಗುರಿ ಕೀರ್‌ಗಂಗಾವಾದುದರಿಂದ ಕಾಲು ತೋಯಿಸಿ ಹರಿವ ನೀರ ಜೋಗುಳವನು ಆಲಿಸಿ ಕಾಫಿ ಹೀರಿ, ಹೊಟ್ಟೆ ಪೂಜೆ ಮಾಡಿ ಹೊರಟು ಬಿಟ್ಟೆವು.

ಕಾಡ ಗರ್ಭದಲ್ಲಿ

ಕಾಡಗರ್ಭಕ್ಕಿಳಿದಂತೆ ಧಾರೆ ಮತ್ತು ಮಸ್ಕ್ ಜಿಂಕೆಗಳು ಉಜ್ಜಿ ಹೋದ ಮರಗಳು ಅವುಗಳ ಇರುವಿಕೆಯ ಸಾಕ್ಷಿ ನುಡಿಯುತ್ತಿತ್ತು. ಮುಂದಿನ ಕಠಿಣ ಏರುದಾರಿಗಳ ಏರಲು ಅಲ್ಲಲ್ಲಿ ಕಬ್ಬಿಣದ ಸಲಾಖೆ ನೆಟ್ಟಿದ್ದರು. ಒಂದೆರಡು ಜಲಪಾತಗಳ ರುದ್ರ ಭೀಕರತೆ ಕಂಡು ಬೆರಗಾದೆನು. ಒಂದು ಜಲಪಾತದಲ್ಲಂತೂ ಇಂತಿಂಥವರು ಸತ್ತಿದ್ದಾರೆಂದು ಗಿಡಗಳ ಕೊಂಬೆಗಳಿಗೆ ಬೋರ್ಡು ನೇತು ಹಾಕಿದ್ದರು.

ಕಾಡ ಗರ್ಭ ಹೊಕ್ಕು ಹೊರಟು ನಿಂತಾಗ ದಾರಿಯುದ್ದಕ್ಕೂ ಒರಟು ಕಲ್ಲುಗಳ ಪತ್ತೆದಾರಿಕೆ. ಓಕ್ ಮರಗಳ ಎಲೆಗಳು ದಾರಿಯ ಜಾರುವಿಕೆಯಲ್ಲಿ ಮತ್ತಷ್ಟು ತೀವ್ರಗೊಳಿಸಿ ಜಿಡುಕಾಗಿಸಿತ್ತು. ಅಲ್ಲಲ್ಲಿ ಸಿಗುವ ಸಣ್ಣ ತೊರೆಗಳ ಬಳಸಿ ದಾಟುವಾಗಲೇ ಆಕಾಶ ಬಿಕ್ಕ ತೊಡಗಿತು. ಚಳಿಯಲ್ಲಿ ನಡುಗುತ್ತಾ ಪಾಂಚೋ ಹಾಕಿ ಯಾವುದೇ ಭಯವಿಲ್ಲದೇ ದಾಟಿಕೊಂಡದ್ದು ನೆನೆದರೆ ಬೆನ್ನು ಹುರಿಯಲ್ಲಿ ಸಣ್ಣ ನಡುಕ. ಕೆಲವೆಡೆ ಜಾರುವ ಬಂಡೆಗಳ ಮೇಲೆ ಕಪ್ಪೆ ಹಿಡಿದಂತೆ ಬಂಡೆ ಹಿಡಿದು ನೀರ ಝರಿಗಳ ದಾಟಬೇಕು.

ನಡು ದಾರಿಗೊಂದು ಚಂದದ ಜಲಪಾತ. ಜಲಪಾತದ ಹಾದಿಯಲ್ಲೇ ಟೇಬಲ್ ಕುರ್ಚಿ ಜೋಡಿಸಿದ ಚಿಕ್ಕ ಮ್ಯಾಗಿ ಪಾಯಿಂಟ್. ಇಲ್ಲಿಂದ ಪ್ರಪಾತದ ಸನಿಹವೇ ಬಳಸು ದಾರಿಯೊಂದು ಕೀರ್‌ಗಂಗಾದತ್ತ ಪ್ರಯಾಣ ಬೆಳೆಸುತ್ತದೆ. ಅರಣ್ಯ ಇಲಾಖೆ ಇಲ್ಲಿ ಪ್ರಯಾಣಿಕರ ನೋಂದಣಿ ಮಾಡಿಕೊಳ್ಳುತ್ತದೆ. ನಡು ಮಧ್ಯಾಹ್ನ ದಾಟಿದ್ದರಿಂದ ಇಲ್ಲಿ ಚಿಕ್ಕ ಉಪಹಾರ ಸೇವಿಸಿ ಜಲಪಾತದಲ್ಲಿ ಕಾಲು ತೋಯಿಸಿ ಹೊರಟೆವು. ಸರಿಸುಮಾರು 5 ಗಂಟೆ ಹೊತ್ತಿಗೆ ಕೀರ್‌ಗಂಗಾದ ನೆತ್ತಿಯಲ್ಲಿದ್ದೆವು.

ನೂರಾರು ಕ್ಯಾಂಪ್‌ಗಳು ಚಾರಣಿಗರಿಗಾಗಿ ಇಲ್ಲಿ ಹಾಕಲಾಗಿದೆ. ಹಣ್ಣಿನ ರಸ ಒಂದನು ಹೀರಿ ಕೀರ್‌ಗಂಗಾದ ಬಿಸಿ ನೀರಿನ ಬುಗ್ಗೆಗೆ ಲಗ್ಗೆ ಇಟ್ಟೆವು. ಚಾರಣದ ಆಯಾಸವನ್ನೆಲ್ಲಾ ಒಂದು ಚಿಕ್ಕ ಸ್ನಾನ ತೊಳೆದು ಹಾಕಿತು. ಪ್ರತಿ ಹನಿಯಲ್ಲೂ ಹರಿದು ಬರುವ ಹಾಲಿನ ಕೆನೆಯಂತಹ ಸಣ್ಣ ಕಣ! ಕ್ಷಣ ಕ್ಷಣವೂ ಉಕ್ಕುಕ್ಕಿ ಹರಿವ ಬಿಸಿ ನೀರು! ತಣ್ಣಗಿನ ವಾತಾವರಣದಲ್ಲಿ ಮೈ ತಾಗಿಸಿದರೆ ಸುಟ್ಟು ಹೋಗುವಷ್ಟು ಬಿಸಿನೀರು ಚಾರಣದ ಆಯಾಸ ತೊಡೆದು ಹಾಕಲು ಮನಸೊ ಇಚ್ಚೆ ಮಿಂದು ಮುಳುಗುವ ಸೂರ್ಯನಿಗೆ ಮುಖ ಮಾಡಿ ಕುಳಿತೆವು. ಬೃಹತ್ ಬೆಟ್ಟವೊಂದರ ನೆತ್ತಿಯಿಂದ ಹರಿವ ಬಿಸಿನೀರೇ ಒಂದು ಕೌತುಕ. ಬೇಸಿಗೆ ಪೂರ್ಣ ಬಿಸಿನೀರ ಔತಣ ಉಣ ಬಡಿಸುತ್ತದೆ. ಡಿಸೆಂಬರ್‌ನಿಂದ ಮಾರ್ಚ್‌ವರೆಗೆ ಬಿಸಿನೀರ ಬುಗ್ಗೆಗೆ ಬಿಡುವು! ಹಿಮ ಕಟ್ಟಿ ನೀರ ಹರಿವು ನಿಲ್ಲುತ್ತದೆ. ಮೊದ ಮೊದಲು ಈ ಬಿಸಿನೀರನ್ನು ಕೊಳವೊಂದಕ್ಕೆ ಹಾಯಿಸಲಾಗುತ್ತಿತ್ತು. ಆದರೆ ಈಗ ಕೇವಲ ಸಣ್ಣ ನಲ್ಲಿಯಂತಹುದನು ಮಾಡಿ ಸ್ನಾನ ಮಾಡಬೇಕಾದ ಅನಿವಾರ್ಯತೆ! ಸನಿಹದ ಶಿವ ಮತ್ತು ಕಾರ್ತಿಕೆಯನ ಗುಹಾ ದರ್ಶನ ಮಾಡಿ ರಾತ್ರಿಯ ಆಕಾಶಗಂಗೆಗಾಗಿ ಕಾದು ಕುಳಿತೆವು.

ಮ್ಯಾಗಿ ಮತ್ತು ಮಿಲ್ಕೀ ವೇ

ಬಿಸಿ ಬಿಸಿಯಾಗಿ ಹರಿವ ಚಿಲುಮೆಯಲಿ ಮಿಂದು, ಮ್ಯಾಗಿ ತಿಂದು ಮಿಲ್ಕೀವೇ ಕಾಣುವ ಕನಸಿನೊಂದಿಗೆ ಕಾತರಿಸಿದೆವು. ಚಳಿಯಾಗದಿರಲೆಂದು ಬೆಟ್ಟಗಳೆಲ್ಲಾ ಹಿಮ ಟೋಪಿ ಹೊದ್ದು ಕುಳಿತಿದ್ದವು. ಸುಂದರವಾದ ಸಂಜೆ 3000 ಮೀ ಎತ್ತರದಲ್ಲಿ ಸಾಕ್ಷಿಯಾಯಿತು! ರಾತ್ರಿಯಾಗುತ್ತಲೇ ನಮ್ಮ `ಓಂ ಶಾಂತಿ’ ಟೆಂಟ್‌ನ ಬಾಣಸಿಗ ಬಡಿಸಿದ ದಾಲ್ ಖಿಚಿಡಿ, ಪನ್ನೀರ್ ಗ್ರೇವಿ, ಸಲಾಡ್ ನಮ್ಮ ರುಚಿಮೊಗ್ಗುಗಳನ್ನು ಬಡಿದೆಬ್ಬಿಸಿತ್ತು! ಬದುಕಿನ ಅತ್ಯುತ್ತಮ ಊಟವೊಂದು ದಾಖಲಾಯಿತು. ಕಾಲು ಸರಿಯಿಲ್ಲದ ಬಾಣಸಿಗನೊಬ್ಬ ಕಷ್ಟಪಟ್ಟು ಮೇಲೇರಿ ಬಂದು ಅಡುಗೆ ಮಾಡಿದ್ದ. ಆತನ ಬದುಕಿನ ಕಷ್ಟಗಳು ಏನಿದ್ದವೋ? ಸದಾ ಚಡಪಡಿಸುತ್ತಲೇ ಇರುತ್ತಿದ್ದ. ಹಿಮಾಚಲ, ಮೇಘಾಲಯದಲ್ಲಿ ಹಬ್ಬುತ್ತಿರುವ ಗಾಂಜಾ ವಾಸನೆ ಇಲ್ಲಿಯೂ ನನ್ನ ಮೂಗಿಗೆ ಬಡಿದಿತ್ತು!! ರಾತ್ರಿಯಾಗುತ್ತಲೇ ಆಗಸದ ಬೀದಿಯಲ್ಲಿ ತಾರಾ ಮೆರವಣಿಗೆ. ಎಲ್ಲೂ ಜಾಗವಿಲ್ಲದಂತೆ ಹಾಸಿದ್ದ ನಕ್ಷತ್ರ ಚಾಪೆ! ಕೌತುಕಮಯ ನೀಲಾಕಾಶ. ನಮ್ಮಲ್ಲಿ ಒಂದೆರಡು ತಾರಾ ದರ್ಶನವಷ್ಟೇ ಅಲ್ಲಿನ ಆಕಾಶವೇ ಬೇರೆ ಎಂಬಂತೆ ಭಾಸ.

ನಕ್ತಾನ ದಾರಿಯಲ್ಲಿ ಇಳಿಯುವ ಮನಸ್ಸಾದರೂ ದಾರಿತಪ್ಪುವ ಭಯದಲ್ಲಿ ಕುಲ್ಗಾದ ಅದೇ ದಾರಿ ಹಿಡಿದೆವು.  ತೀವ್ರ ಕಡಿದಾದ ಮೂರು ಕಿಲೋಮೀಟರ್ ಇಳಿದಿದ್ದೇವಷ್ಟೇ; ಆಗಷ್ಟೇ ಸೂರ್ಯ ಕಣ್ಣು ಒಡೆದಿದ್ದ. ಇಳಿವ ಧಾವಂತದ ನಡುವೆ ಕಾರ್ತಿಕೇಯ ಗುಹೆ ಹೊಕ್ಕು ಕತೆಗಳಿಗೆ ಆವಿಯಾದೆ. ನಮ್ಮ ದಂಡು ಹೊರಡಲು ತಯಾರಿ ನಡೆಸಿತ್ತು.

ಹಳದಿ ಬೆಳಕಲಿ ಮೀಯುತ್ತಾ ಬೆಟ್ಟಗಳ ಬಾಯ್ ಬಾಯ್ ಹೇಳಿದೆ. ಪೈನ್ ಡಿಯೋದಾರ್ ಮರಗಳ ನೆರಳಲ್ಲಿ ಜಾರುತ್ತಾ ನಡೆಯ ಹತ್ತಿದೆವು. ಅರ್ಧ ದಾರಿ ಕ್ರಮಿಸಿದ್ದೆವಷ್ಟೇ ಕೊನೆಯ ಜಲಪಾತದ ನಿಲ್ದಾಣ ಎದುರಾಯಿತು.

ಡೂಡೋ ಎದುರಾಗಿ

ತೋಷ್ ಊರಿನಲ್ಲಿ ಸಿಕ್ಕ ಸಂತ `ಡೂಡೋ’ ಎದುರಾದ. ಒಂದು ಕೋಲು, ಹತ್ತಿ ಜೋಳಿಗೆ ಹಿಡಿದು ಚಾರಣಕ್ಕೆ ಹೊರಟಿದ್ದ! ಆತನೊಂದಿಗೆ ಹರಟಲು ಹಲವು ವಿಷಯಗಳಿದ್ದವು. ಆಗಲೇ ನನ್ನ ಬಿಟ್ಟು ತೆರಳಿದ ಗುಂಪು ಮುಂದಡಿ ಇಟ್ಟಾಗಿತ್ತು. ಕೇವಲ ಸೆಲ್ಫಿಯೊಂದನ್ನು ಕ್ಲಿಕ್ಕಿಸಿ ಪ್ರಶ್ನೆಗಳ ದೊಡ್ಡದೊಂದು ಮೂಟೆ ಹೊತ್ತು ಹೊರಟು ಬಿಟ್ಟೆ. ಗೆಳೆಯರ ಗುಂಪು ಬಿಟ್ಟು ಈತನ ಕತೆಗಳಿಗೆ ಕಿವಿಯಾಗಬೇಕಿತ್ತೆಂದು ಈಗ ಪಶ್ಚಾತ್ತಾಪವಾಗುತ್ತಿದ್ದೆ! ಇನ್ನೆಂದಾದರೂ ಇಂತಹ ಅವಕಾಶವೊಂದು ಸಿಕ್ಕರೆ ಅದನ್ನು ಮತ್ತೆ ಬಿಡಬಾರದೆಂಬ ಪ್ರತಿಜ್ಞೆಯೊಂದಿಗೆ ಬರಶೈನಿ ಕಡೆಗೆ ಹೆಜ್ಜೆ ಹಾಕಿದೆ.

ಬರಶೈನಿಯ ಹೋಟೆಲ್‌ನಲ್ಲಿ ಉಂಡ ದಾಲ್‌ ಮಖ್ನಿ, ಸಬ್ಜಿ ಊಟದ ಸವಿಯಿನ್ನೂ ನಾಲಿಗೆ ತುದಿಯಲ್ಲಿದೆ. ಮತ್ತೊಮ್ಮೆ ಅಂತಹ ಊಟಕ್ಕಾಗಿ ತಹತಹಿಸುತ್ತಾ ಬರಶೈನಿಗೆ ಬಾಯ್ ಹೇಳುತ್ತಾ ಸೀಸುವಿನ ಅನಂತ ಆಕಾಶವನ್ನು ಅಪ್ಪಲು ಬರಶೈನಿಯಿಂದ ಕಾರು ಹತ್ತಿದೆ!

(ಚಿತ್ರಗಳು: ಲೇಖಕರವು)

About The Author

ಶ್ರೀಧರ್‌ ಎಸ್.‌ ಸಿದ್ದಾಪುರ

ಶ್ರೀಧರ್‌ ಎಸ್.‌ ಸಿದ್ದಾಪುರ ವೃತ್ತಿಯಲ್ಲಿ ಶಿಕ್ಷಕರು. ತಿರುಗಾಟ, ಅನ್ವೇಷಣೆ ಒಂದು ಹುಚ್ಚು. ಬರಹ, ಓದು ಅಚ್ಚುಮೆಚ್ಚು. ಹಕ್ಕಿ, ಜೇಡಗಳಲ್ಲಿ ವಿಶೇಷ ಆಸಕ್ತಿ.  “ಅಲೆಮಾರಿಯ ಅಂತರಂಗ” ಇಪ್ಪತ್ತು ವರ್ಷದ ಅಲೆದಾಟ, ಅನುಭವಗಳ ಪ್ರವಾಸ ಕಥನ.

Leave a comment

Your email address will not be published. Required fields are marked *

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ