ಮಳೆಗಾಲ ಬಂತೆಂದರೆ, ಕೀಟಗಳ ಸಂಖ್ಯೆಯೂ ಹೆಚ್ಚಾಗಿ, ಮರಿಹಕ್ಕಿಗಳಿಗೆ ವಿಫುಲವಾದ ಆಹಾರ ದೊರಕುವುದರಿಂದ, ಖಗರತ್ನಗಳು ಈ ಋತುವಿನಲ್ಲಿ ಗೂಡು ಕಟ್ಟುತ್ತವೆ. ಗೂಡು ಕಟ್ಟುವ ಸಂಪೂರ್ಣ ಜವಾಬ್ದಾರಿ ಹೆಣ್ಣು ಹಕ್ಕಿಯದ್ದು. ಗಂಡು ಹಕ್ಕಿಯದೇನಿದ್ದರೂ ಕೇವಲ ಮೇಲ್ವಿಚಾರಣೆ! ಒಂದು ಕೊಂಬೆಯ ತುದಿಯಲ್ಲಿ, ಕಸ-ಕಡ್ಡಿ, ಒಣಗಿದ ನಾರು-ಬೇರು ಹಾಗೂ ಪುಷ್ಕಳವಾದ ಜೇಡರ ಬಲೆಯನ್ನು ಬಳಸಿ ಕಟ್ಟುವ ಗೂಡು. ಇದು ಹೊರಗಿನಿಂದ ಒರಟಾಗಿ ಕಂಡರೂ, ಒಳಗೆ ಮುದ್ದಾದ, ಮೃದುವಾದ, ನೇತಾಡುವ ಗೂಡು. ಆಶ್ಚರ್ಯವೆಂದರೆ, ಮಳೆಯಿಂದ ರಕ್ಷಣೆಗಾಗಿ, ಅದರ ಬಾಗಿಲ ಮೇಲೊಂದು ಚಜ್ಜ!
ಡಾ. ಎಸ್.ವಿ. ನರಸಿಂಹನ್ ಬರೆಯುವ “ಹಕ್ಕಿಪಕ್ಷಿ ಚಿತ್ರ ಸಂಪುಟ” ಸರಣಿಯಲ್ಲಿ “ಖಗರತ್ನ” ಹಕ್ಕಿಯ ಕುರಿತ ಬರಹ ಇಲ್ಲಿದೆ
ಇಂದು ನಾವು ಕರ್ನಾಟಕದ ಒಂದು ಅತ್ಯಂತ ಸುಂದರ ಹಕ್ಕಿಯಾದ ಖಗರತ್ನದ ಬಗ್ಗೆ ತಿಳಿದುಕೊಳ್ಳೋಣ. ಹಕ್ಕಿಗಳಲ್ಲಿಯೇ ಮಾಣಿಕ್ಯದಂತಿರುವ ಈ ಪಕ್ಷಿಗೆ ಖಗರತ್ನ ಎಂಬ ಹೆಸರು ಅನ್ವರ್ಥವಾಗಿದೆ. ಇದು ಹೂಗಳ ಮಕರಂದಪ್ರಿಯ. ನೆಕ್ಟರಿನೈಡೆ ಕುಟುಂಬಕ್ಕೆ ಸೇರಿದ ಈ ಹಕ್ಕಿಯನ್ನು ಇಂಗ್ಲೀಷಿನಲ್ಲಿ Purple-rumped Sunbird, ಪರ್ಪಲ್ ರಂಪ್ಡ್ ಸನ್ಬರ್ಡ್ ಎಂದೂ, ವೈಜ್ಞಾನಿಕ ಪರಿಭಾಷೆಯಲ್ಲಿ ಲೆಪ್ಟೋಕೋಮಾ ಝೈಲಾನಿಕಾ ಎಂದೂ ಕರೆಯುತ್ತಾರೆ. ದಕ್ಷಿಣ ಭಾರತ, ಶ್ರೀಲಂಕಾ ಮತ್ತು ಬಾಂಗ್ಲಾ ದೇಶದ ನಿವಾಸಿ.
ಮಿರುಗುವ ಉಜ್ವಲ ಬಣ್ಣದ, ಹಾಗೂ ಗುಬ್ಬಚ್ಚಿಗಿಂತಲೂ ಮುದ್ದಾದ ಪುಟಾಣಿ ಹಕ್ಕಿಗಳು ಇವು. ಕೇವಲ 10 ಸೆಂಮೀ. ಗಾತ್ರದ ಗಂಡು ಖಗರತ್ನ ಹೆಣ್ಣಿಗಿಂತ ಆಕರ್ಷಕ. ಸೂರ್ಯನ ಕಿರಣಗಳಿಗೆ ಮಿಂಚಿ-ಮಿರುಗುವ ಕಡುಗೆಂಪು-ನೇರಳೆ ಬಣ್ಣದ ಮೇಲ್ಭಾಗ ಮತ್ತು ಗಂಟಲು; ಹೊಳೆಯುವ ಹಸಿರು ನೆತ್ತಿ, ಭುಜ ಪಟ್ಟಿ; ಕಡು ಕೆಂಗಂದು ಸರ; ನೇರಳೆ ಬಣ್ಣದ ಕೆಳಬೆನ್ನು; ಹಳದಿ-ಬಿಳಿ ಕೆಳಮೈ. ಹೆಣ್ಣಿಗೆ ಹಸಿರುಗಂದು ಮೇಲ್ಮೈ, ಪೇಲವ ಹಳದಿ ಕೆಳಮೈ ಮತ್ತು ಮಾಸಲು ಗಲ್ಲ.
ಉದುರೆಲೆ, ಕಾಡಿನಲ್ಲಾಗಲೀ, ಎಸ್ಟೇಟು, ನಗರಗಳ ಹೂದೋಟವೇ ಆಗಲೀ, ಮರಗಿಡಗಳು ಹೂ ತಳೆದರೆ ಸಾಕು, ಮಕರಂದಕ್ಕಾಗಿ ಎಲ್ಲಿದ್ದರೂ ಹಾಜರು! ಮಕರಂದವನ್ನು ಹೀರುವುದಕ್ಕಾಗಿಯೇ ಹೇಳಿಮಾಡಿಸಿದಂತಿರುವ, ಕೆಳಕ್ಕೆ ಬಾಗಿದ ಉದ್ದವಾದ ಕೊಕ್ಕು ಮತ್ತು ಕೊಳವೆಯಂತಹ ನಾಲಿಗೆ. ಹೂವಿನ ಎದುರು, ಒಂದೆರಡು ಕ್ಷಣ ಗಾಳಿಯಲ್ಲಿಯೇ ಹಾರಾಡುವುದನ್ನು ನೋಡಲು ಬಲು ಆಕರ್ಷಕ! ಈಗೀಗ ಅವೂ ಸೋಮಾರಿತನವನ್ನು ಕಲಿತಿವೆ! ದಾಸವಾಳದ ಹೂವಿನ ಮೇಲಿನಿಂದಲೇ ಅದರ ಬುಡದಲ್ಲಿ ಕೊಕ್ಕಿ, ಅಲ್ಲಿಂದಲೇ ಮಕರಂದ ಹೀರುತ್ತವೆ! ಹೂಗಳ ಪರಾಗಸ್ಪರ್ಶಕ್ರಿಯೆಯಲ್ಲಿ ಬಹು ಉಪಕಾರಿ. ಮಕರಂದದ ಜೊತೆಗೆ ಜೇಡ, ಹುಳಹುಪ್ಪಟೆಗಳೂ ಆಹಾರದ ಪಟ್ಟಿಯಲ್ಲಿವೆ.
ಖಗರತ್ನಗಳು ಹೂದುಂಬಿದ ಮರಗಿಡಗಳ ಮೇಲೆ, ಬಹಳ ಸಂಭ್ರಮದಿಂದ, ಹಾಡುತ್ತಾ ಹಾರಾಡುವುದನ್ನು ಕೇಳುವುದೇ ಒಂದು ಸೊಗಸು! ತಮ್ಮ ಇಂಪಾದ ಕಿಲಿಕಿಲಿ ಸ್ವರದಿಂದ ಸುತ್ತಮುತ್ತಲ ಇಡೀ ವಾತಾವರಣವನ್ನೇ ಆಹ್ಲಾದಕರಗೊಳಿಸುತ್ತವೆ. ಅದರಲ್ಲೂ ಸಂತಾನಋತುವಿನಲ್ಲಿ ಗಂಡುಹಕ್ಕಿ ಉದ್ರೇಕದಿಂದ ಅತ್ತಿಂದಿತ್ತ ಹಾರುತ್ತಾ ಟಿಟ್ಯೂ..ಟಿಟ್ಯೂ..ಟ್ರ್… ಎಂದು ತೀಕ್ಷ್ಣ ಧ್ವನಿಯಲ್ಲಿ ಕೂಗುತ್ತ ಅವಿಶ್ರಾಂತವಾಗಿ ಹಾಡುತ್ತವೆ.
ಮಳೆಗಾಲ ಬಂತೆಂದರೆ, ಕೀಟಗಳ ಸಂಖ್ಯೆಯೂ ಹೆಚ್ಚಾಗಿ, ಮರಿಹಕ್ಕಿಗಳಿಗೆ ವಿಫುಲವಾದ ಆಹಾರ ದೊರಕುವುದರಿಂದ, ಖಗರತ್ನಗಳು ಈ ಋತುವಿನಲ್ಲಿ ಗೂಡು ಕಟ್ಟುತ್ತವೆ. ಗೂಡು ಕಟ್ಟುವ ಸಂಪೂರ್ಣ ಜವಾಬ್ದಾರಿ ಹೆಣ್ಣು ಹಕ್ಕಿಯದ್ದು. ಗಂಡು ಹಕ್ಕಿಯದೇನಿದ್ದರೂ ಕೇವಲ ಮೇಲ್ವಿಚಾರಣೆ! ಒಂದು ಕೊಂಬೆಯ ತುದಿಯಲ್ಲಿ, ಕಸ-ಕಡ್ಡಿ, ಒಣಗಿದ ನಾರು-ಬೇರು ಹಾಗೂ ಪುಷ್ಕಳವಾದ ಜೇಡರ ಬಲೆಯನ್ನು ಬಳಸಿ ಕಟ್ಟುವ ಗೂಡು. ಇದು ಹೊರಗಿನಿಂದ ಒರಟಾಗಿ ಕಂಡರೂ, ಒಳಗೆ ಮುದ್ದಾದ, ಮೃದುವಾದ, ನೇತಾಡುವ ಗೂಡು. ಆಶ್ಚರ್ಯವೆಂದರೆ, ಮಳೆಯಿಂದ ರಕ್ಷಣೆಗಾಗಿ, ಅದರ ಬಾಗಿಲ ಮೇಲೊಂದು ಚಜ್ಜ!
ಇದರೊಳಗೆ ಹೆಣ್ಣು ಹಕ್ಕಿ, ಚುಕ್ಕಿಗಳಿರುವ ಮಾಸಲು ಹಸಿರು ಬಣ್ಣದ ಎರಡು ಮೊಟ್ಟೆಗಳನ್ನಿಡುತ್ತದೆ. ಗಂಡು-ಹೆಣ್ಣು ಹಕ್ಕಿಗಳೆರಡೂ ಸರದಿಯ ಮೇಲೆ ಕಾವು ನೀಡಿ, ಮರಿಹಕ್ಕಿಗಳಿಗೆ ಗುಟುಕು ನೀಡಿ ಸಲಹುತ್ತವೆ.
ಪ್ರಕೃತಿಯಲ್ಲಿ ನಿರಂತರವಾಗಿ ನಡೆಯುತ್ತಿರುವ ಇಂತಹ ಸುಂದರ ವಿದ್ಯಮಾನಗಳನ್ನು ನಾವೆಲ್ಲ ನೋಡಿ ಅನುಭವಿಸಬೇಕು. ಈ ಭೂಮಿ ಪೂರ್ವಿಕರಿಂದ ನಮಗೆ ಬಳುವಳಿಯಾಗಿ ಬಂದ ಆಸ್ತಿಯಲ್ಲ, ಅದು ನಮ್ಮ ಮುಂದಿನ ಪೀಳಿಗೆ ನಮಗಿತ್ತ ಸಾಲ ಎಂದು ಭಾವಿಸಿ, ಸಾಧ್ಯವಾದಷ್ಟು ಗಿಡಗಳನ್ನು ನೆಟ್ಟು ಪೋಷಿಸೋಣ, ನೆಲವನ್ನು ಹಸಿರುಗೊಳಿಸೋಣ. ನಮ್ಮ ಒಬ್ಬೊಬ್ಬರ ಅಳಿಲುಸೇವೆಯೂ ಈ ನಿಟ್ಟಿನಲ್ಲಿ ಮಹತ್ತರ ಪಾತ್ರ ವಹಿಸುತ್ತದೆ ಎಂಬುದನ್ನು ನಾವು ಮರೆಯಬಾರದು.

ಡಾ. ಎಸ್.ವಿ. ನರಸಿಂಹನ್ ವೈದ್ಯರು. ಕೊಡಗಿನ ವಿರಾಜಪೇಟೆಯಲ್ಲಿ ನೆಲೆಸಿದ್ದಾರೆ. ಆರೋಗ್ಯ ರಕ್ಷಣೆಯೊಂದಿಗೆ ಪರಿಸರ ರಕ್ಷಣೆಯ ಬಗೆಗೂ ಅಪಾರ ಕಾಳಜಿ ಹೊಂದಿದ್ದಾರೆ. ಕಳೆದ ನಲವತ್ತೊಂದು ವರ್ಷಗಳಿಂದ ಡಾ. ನರಸಿಂಹನ್ರವರು ಕೈಯಿಂದ ಕುಂಚಿಸಿದ ಸುಮಾರು ಎಂಭತ್ತೆರಡು ಸಾವಿರ ‘ವನ್ಯಜೀವಿ ಸಂದೇಶ ಪತ್ರ’ಗಳು ಪ್ರಪಂಚದಾದ್ಯಂತ ತಲುಪಿವೆ. ಇದೊಂದು ಲಿಮ್ಕಾ ದಾಖಲೆ. ವಿಜ್ಞಾನ ಬರವಣಿಗೆಯಲ್ಲೂ ಆಸಕ್ತಿ ಹೊಂದಿರುವ ಇವರು, ಕನ್ನಡ ಭಾಷೆ, ಸಂಗೀತ-ಸಾಹಿತ್ಯ, ಖಗೋಳ, ಪರಿಸರ ಮುಂತಾದ ವಿಷಯಗಳಲ್ಲಿ ಶಾಲಾ-ಕಾಲೇಜುಗಳಲ್ಲಿ, ರೇಡಿಯೋ, ಟಿವಿ ಮತ್ತು ಪತ್ರಿಕಾ ಮಾಧ್ಯಮಗಳ ಮೂಲಕ ವಿದ್ಯಾರ್ಥಿಗಳಲ್ಲಿ ಆಸಕ್ತಿ ಬೆಳೆಸಿದ್ದಾರೆ. ಕೊಡಗಿನ ಸಂಪೂರ್ಣ ಪಕ್ಷಿಸಂಕುಲದ ನಿಖರ ಮಾಹಿತಿಯುಳ್ಳ ‘ಕೊಡಗಿನ ಖಗರತ್ನಗಳು’ ಪುಸ್ತಕದಲ್ಲಿ ತಾವೇ ಎಲ್ಲ ಹಕ್ಕಿಗಳ ಚಿತ್ರಗಳನ್ನೂ ಬರೆದದ್ದು ಮತ್ತೊಂದು ಲಿಮ್ಕಾ ದಾಖಲೆ. ‘2013ರ ಕೊಡಗಿನ ವರ್ಷದ ವ್ಯಕ್ತಿ’ಪುರಸ್ಕೃತರು


