Advertisement
ಜೀವಕ್ಕೊಂದು ಜೀವ…. : ರೂಪಶ್ರೀ ಕಲ್ಲಿಗನೂರ್‌ ಬರಹ

ಜೀವಕ್ಕೊಂದು ಜೀವ…. : ರೂಪಶ್ರೀ ಕಲ್ಲಿಗನೂರ್‌ ಬರಹ

ಈಗ ಆಂಟಿ ಮಿಕ್ಕಿಯನ್ನು ವಾಕಿಂಗಿಗೆ ಕರೆದುಕೊಂಡು ಹೋಗುವುದಿಲ್ಲ. ಅಂಕಲ್‌ ಸಮಯ ಮಾಡಿಕೊಂಡು ಬೇಗ ಬಂದು ಆ ಕೆಲಸವನ್ನು ತಾವೇ ಮಾಡುತ್ತಾರೆ. ಆದರೆ ಚಂದೂ ಆಂಟಿಯ ಪ್ರೀತಿಯಿಂದ ಮಾತ್ರ ಮಿಕ್ಕಿಗೆ ರಿಯಾಯಿತಿ ದೊರೆತಿಲ್ಲ… ಯಾಕೆಂದರೆ ನಾಯಿಗಾಗಲೀ, ಮನುಷ್ಯನಿಗಾಗಲಿ ಯಾವತ್ತೂ ಯಾರದ್ದಾದರೂ ಸಾಂಗತ್ಯ ಬೇಕೆಬೇಕು. ಈಗ ವಯಸ್ಸಾದ ಕಾಲಕ್ಕೆ ಆಂಟಿಯೊಟ್ಟಿಗೆ ಬಹುತೇಕ ಇರುವುದು ಆ ನಾಯಿಯೆ. ಆದರೆ ಈಗ ಆ ನಾಯಿಗೂ ವಯಸ್ಸಾಗುತ್ತಿದೆ ಎನ್ನುವಾಗ, ಅವರ ಕಣ್ಣಲ್ಲಿ ತೆಳುವಾಗಿ ನೀರ ಪರದೆ ಕಾಣುತ್ತದೆ. “ಆಗಷ್ಟೇ ಇದ್ದರು… ಈಗ ಇಲ್ಲವಾದರಂತೆ..” ಎನ್ನುವಷ್ಟು ಪುಟ್ಟ ಜೀವಕ್ಕೆ, ಜೀವನಕ್ಕೆ ಒಳಗಿದ್ದನ್ನು ಹೇಳಿಕೊಳ್ಳಲು ಕಿವಿಯೊಂದು ಇಲ್ಲದಿದ್ದರೆ ಹೇಗೆ?
ರೂಪಶ್ರೀ ಕಲ್ಲಿಗನೂರ್‌ ಬರಹ ನಿಮ್ಮ ಓದಿಗೆ

ನಾಯಿಯೆಂದರೆ ನನಗೆ ಚಿಕ್ಕಂದಿನಿಂದಲೂ ಬಲು ಪ್ರೀತಿ. ನನಗೂ ತಮ್ಮನಿಗಂತೂ ಯಾವಾಗಲಾದರೂ ಒಂದು ನಾಯಿಮರಿಯನ್ನು ತಂದು ಸಾಕಬೇಕೆನ್ನುವುದು ಚಿಕ್ಕವಯಸ್ಸಿನಿಂದ ಇರುವ ಬಯಕೆ. ಆದರೆ ನಮ್ಮ ಮೂರೂ ಜನರ ಜೊತೆ ಅಪ್ಪನ ಜವಾಬ್ದಾರಿಯನ್ನೂ ನಿಭಾಯಿಸುವ ಅಮ್ಮ “ಈಗ ನಮ್‌ಮನ್ಯಾಗ ಯಾವ ಪ್ರಾಣೀನೂ ಕಡಿಮಿಯಿಲ್ಲ.. ಎಲ್ಲಾ ಅದಾವು.. ಇನ್ನೊಂದು ತಂದು ನನ್‌ ಕೊಳ್ಳಿಗಿ ಕಟ್ಟಬ್ಯಾಡ್ರೀ…” ಅಂತ ಅವಾಝು ಹಾಕುತ್ತಿರುತ್ತಾರಾದ್ದರಿಂದ ನಾವು ಬಾಯ್ಮುಚ್ಚಿಕೊಂಡು ಇದ್ದೆವು. ಆದರೆ ನಾನು ಮದುವೆಯಾಗಿ ಬಂದ ಮನೆಯಲ್ಲಿ ಎರಡು ಮುದ್ದು ನಾಯಿಗಳಿದ್ದು. ಅವುಗಳಲ್ಲಿ ಕಾಕರ್‌ ಸ್ಪ್ಯಾನಿಯಲ್‌ ನನ್ನಿಷ್ಟದ್ದು. ಬಾರೀ ಜಾಣ ಮತ್ತು ಮುದ್ದಿನದಾಗಿತ್ತು ಅದು. ಆದರೆ ಕೋವಿಡ್‌ ಕಾಲದಲ್ಲಿ ಒಂದು ಕಾಯಿಲೆಯಾಗಿ ಹಾಗೇ ಇನ್ನೊಂದು ಯಾರೋ ಇಟ್ಟ ವಿಷ ತಿಂದು ತಿಂಗಳ ಅಂತರದಲ್ಲಿ ಎರಡೂ ಸತ್ತು ಹೋದವು. ಹಾಗಾಗಿ ನನಗೆ ಇನ್ನೊಂದು ನಾಯಿಮರಿಯನ್ನು ತರಬೇಕೆಂದು ಆಸೆಯಾದರೂ ನಮ್ಮ ಓಡಾಟದ, ಕೆಲಸದ ಶೆಡ್ಯೂಲ್‌ನಲ್ಲಿ ಅದರ ಲಾಲನೆ ಪಾಲನೆ ಕಷ್ಟವೆನ್ನಿಸಿ ತೆಪ್ಪಗಿದ್ದೇನೆ. ಮನೆಯಲ್ಲಿ ಅತ್ತೆಯಿರುತ್ತಾರಾದರೂ, ಅದರಲ್ಲೂ ಹದಿನೈದು ವರ್ಷಗಳ ಮೇಲೆ ನಾಯಿಗಳನ್ನು ಕಂಡು, ಸಾಕಿದ ಅವರನ್ನು ಈಗ ಮತ್ತೆ ಈಗ ನಾನೊಂದು ನಾಯಿಯನ್ನು ಮನೆಗೆ ತರಬಹುದಾ ಅಂತ ಕೇಳಿದರೆ ಅಟ್ಟಾಡಿಸಿಕೊಂಡು ಬರುವ ಭಯವೂ ಇದೆಯೆನ್ನುವುದು ಸತ್ಯಾತಿಸ ಸತ್ಯ… ಹಾಗಾಗಿ ಸುತ್ತಮುತ್ತ ಇರುವ ನಾಯಿಗಳು, ಅವುಗಳನ್ನು ನೋಡಿಕೊಳ್ಳುವ ಮನೆಯವರ ಕುರಿತು ನನಗೆ ಆಸಕ್ತಿ. ಹಾಗೆ ನಾನು ಕಂಡ ಹಲವು ನಾಯಿಗಳಲ್ಲಿ ಎರಡು ತದ್ವರುದ್ಧ ಜೀವನ ನಡೆಸುತ್ತಿರುವ ನಾಯಿಗಳ ಕುರಿತು ಈ ಬರಹ…

ನಮ್ಮ ಪಕ್ಕದ ಮನೆಯವರೊಂದು ನಾಯಿ ಸಾಕಿದ್ದಾರೆ. ತೀರಾ ಒಂದು ತಿಂಗಳ ಮರಿಯಿದ್ದಾಗಲೇ ಅದನ್ನು ತಂದು ಅದನ್ನು ಬೆಳೆಸುತ್ತಿದ್ದಾರೆ. ಲ್ಯಾಬ್ರೊಡಾರ್‌ ಹಾಗೂ ರಾಟ್‌ ವ್ಹೀಲರ್‌ ತಳಿಗಳ ಮಿಶ್ರಿತ ನಾಯಿಯಾದ ಇದು ಬೆಳ್ಳನೆಯ ಬಣ್ಣದೊಂದಿಗೆ ಬಾರ್ಡರ್‌ ಕೋಲಿಯಂಥ ದೇಹ ಹೊಂದಿದೆ. ಅದನ್ನು ತನ್ನ ಗೂಡಿನಿಂದ ಬಿಟ್ಟರೆ ಸಾಕು, ಅದು ಓಡುವ ಓಟದ ತೀವ್ರತೆಯೂ ಬಾರ್ಡರ್‌ ಕೋಲಿ ನಾಯಿಯಂತೆಯೇ ಬಹಳ ಅತ್ಯಾಕರ್ಷಕ ರೀತಿಯಲ್ಲಿ ಓಡುತ್ತದೆ. ಹಾಗಾಗಿ ಅದರ ಓಟವನ್ನ ನೋಡುವುದೇ ಚಂದ.

ಮನೆಗೆ ತಂದಾಗ ಬೆಳ್ಳನೆಯ ಟೆನ್ನಿಸ್‌ ಬಾಲಿನಂತೆ ಕಾಣುತ್ತಿದ್ದ ಅದು ಈಗ ಎರಡು ವರ್ಷದ ಪ್ರಾಯದವನಾದರೂ ಅಷ್ಟೇ ಮುದ್ದುಕ್ಕಿಸುವಂತೆಯೇ ಕಾಣುತ್ತಾನೆ. ಆದರೆ ಅದನ್ನು ಗೂಡಿನಿಂದ ಬಿಟ್ಟದ್ದೆ ಎದುರಿಗಿದ್ದವರ ಮೇಲೆ ಅನಾಮತ್ತು ಎಗರಿಯೇಬಿಡುತ್ತಾನೆ. ಎಗರೋದು ಅಂದರೆ ದಾಳಿ ಮಾಡುವುದಲ್ಲ… ತನ್ನೊಟ್ಟಿಗೆ ಆಟವಾಡಲೋ ಅಥವಾ ಬಂದವರನ್ನು ಮುದ್ದಿಸಲೋ ಎಂಬಂತೆ ಅವರ ಮೇಲೆ ಹೋಗುತ್ತಾನೆ. ಆದರೆ ಹಾಗೆ ನಾಯಿಗಳ ದೇಹಭಾಷೆ ಗೊತ್ತಿಲ್ಲದವರಿಗೆ ಅದು ದಾಳಿಯಂತೆಯೇ ಕಾಣುತ್ತದೆ. ಎಲ್ಲಿ ನಾಯಿಯನ್ನು ಬಿಟ್ಟಾಗ ಹೊರ ಬಂದು ನಮ್ಮ ಮೇಲೆಗರಿ ಕಚ್ಚಿ ಹಾಕುತ್ತದೋ ಎಂದು ಭಯವಾಗುತ್ತದೆ. ಆದರೆ ಇಂಥ ಅದರ ನಡುವಳಿಕೆಗೆ ಒಂದು ಕಾರಣವಿದೆ.

ಮನುಷ್ಯರು ಹೇಗೆ ಸಂಘಜೀವಿಯೋ ನಾಯಿಯೂ ಹಾಗೆಯೆ. ಅದು ತನ್ನನ್ನು ತಂದು, ಹಿಡಿ ಅನ್ನ ಹಾಕಿ ಸಾಕುವವರನ್ನು ದೇವರಂತೆ ಕಾಣುತ್ತದೆ. ಪ್ರೀತಿಯಿಂದ ನೋಡಿಕೊಳ್ಳುತ್ತದೆ. ಆದರೆ ನಮ್ಮ ಪಕ್ಕದ ಮನೆಗೆ ಬಂದ ಈ ನಾಯಿಗೆ ಬಂದಾಗಲಿಂದಲೂ ಅದರ ಗೂಡೇ ಗತಿ. ಅದನ್ನು ಹೊಸದಾಗಿ ತಂದಾಗ ಮಾಡಿಸಿದ್ದ ಗೂಡಿನಲ್ಲೇ ಈಗಲೂ ಅದರ ವಾಸ. ಆ ಗೂಡು ಸರಿಯಾಗಿ ಎರಡೂವರೆ ಫೀಟ್‌ ಕೂಡ ಇಲ್ಲವೇನೋ… ಈಗದಕ್ಕೆ ಎರಡು ವರ್ಷವಾದರೂ ಅದರ ಇಡೀ ಜೀವನ ಅದರಲ್ಲೇ. ಅದರ ಯಜಮಾನರ ಬಿಡುವಿನ ಅನುಕೂಲದಲ್ಲಿ ಅದನ್ನ ಹೊರಗೆ ಬಿಡುವುದು.. ಅದದೇ ಊಟ ಎರಡು-ಮೂರು ಹೊತ್ತು. ಚಳಿಗಾಲದಲ್ಲಿ ಮೊಸರನ್ನ ಮುಂದಿಟ್ಟು “ತಿನ್ನು… ತಿನ್ನು…” ಎಂದು ಬೈಯುತ್ತಾರೆ. ಚಳಿಗಾಲದಲ್ಲಿ ನಾವೇ ಮೊಸರಿನ ಗೋಜಿಗೆ ಹೋಗುವುದಿಲ್ಲ. ಅಂಥದ್ದರಲ್ಲಿ ಹೊರಗೆ ಚಳಿಮಳೆ ಗಾಳಿಯನ್ನು ಸಹಿಸಿಕೊಳ್ಳುವ ಆ ನಾಯಿಗೆ ಮೊಸರನ್ನ ಹೇಗಾದರೂ ಗಂಟಲಿಗೆ ಇಳಿಯಬೇಕು? ಹೀಗೆ ನೋಡಿಕೊಳ್ಳುವ ಆ ಜನ, ಅದಕ್ಕೆ ಹೊರಗೆ ಓಡಿಯಾಡಲೂ ಹೆಚ್ಚು ಸಮಯ ಕೊಡದಿರುವ ಕಾರಣ ಅವನಿಗೆ ಮೈಯಲ್ಲಿ ಹೆಚ್ಚು ಶಕ್ತಿಯಿಲ್ಲ… ಒಮ್ಮೆ ಎರಡೇ ಎರಡು ಮೆಟ್ಟಿಲಿಂದ ಕೆಳಗೆ ಬಿದ್ದು ಅದರ ಕಾಲಿಗೆ ಫ್ರ್ಯಾಕ್ಟರ್‌ ಆಗಿತ್ತು ಎಂಬುದನ್ನ ನಂಬುತ್ತೀರ! ಅದಾಗಿ, ಎರಡೇ ವಾರಕ್ಕೂ ಮತ್ತೆ ಮೂರೋ ನಾಲ್ಕೋ ಮೆಟ್ಟಿಲಿನಿಂದ ಹಾರಿ ಬಿದ್ದಾಗಲೂ ಅದರ ಮತ್ತೊಂದು ಕಾಲಿಗೆ ಫ್ರ್ಯಾಕ್ಚರ್‌ ಆಗಿತ್ತು. ಅಷ್ಟು ಸೂಕ್ಷ್ಮದ ನಾಯಿಯದು. ಹಾಗಾಗಿ ನಮ್ಮ ಏರಿಯಾದ ಅತೀಸುಂದರವೂ ಹಾಗೂ ಅತೀ ನಾಜೂಕಿನ ನಾಯಿಯೆಂದು ಅದಕ್ಕೆ ಬಿರುದಿದೆ. ಹೇಗೆ ನಾವು ಮೈಯನ್ನು ದಂಡಿಸಿದಷ್ಟೂ ಗಟ್ಟಿಗೊಳ್ಳುತ್ತೇವೋ, ನಾಯಿಗಳೂ ಹಾಗೆಯೇ… ಮನೆಗೊಂದು ನಾಯಿಬೇಕೆಂದು ತಂದಮೇಲೆ, ಮೂರೂ ಹೊತ್ತು ಅವುಗಳ ಊಟತಿಂಡಿ ನೋಡಿಕೊಳ್ಳುವ ಹಾಗೇ, ಅವುಗಳ ದೈಹಿಕ ಆರೋಗ್ಯದ ಕುರಿತೂ ಕಾಳಜಿ ವಹಿಸಬೇಕು. ಮೂರೂ ಹೊತ್ತೂ ಅವನು ಗೂಡಿನಲ್ಲೇ ಇರುವ ಕಾರಣವೇ, ಅದನ್ನು ಗೂಡಿನಿಂದ ಹೊರಗೆ ಬಿಟ್ಟಾಕ್ಷಣ ಹಾರಿ ಜನರ ಮೇಲೆ ಬರುತ್ತದೆ.. ಹೊರಗೆ ಇರುವಷ್ಟೂ ಹೊತ್ತೂ ಒಂದು ಸಂಭ್ರಮ ಅದಕ್ಕೆ…

ಆವತ್ತೊಂದಿನ ನಡು ರಾತ್ರಿ ನನ್ನ ಫೋನ್‌ ರಿಂಗಣಿಸಿತ್ತು. ಅಯ್ಯೋ ಇದ್ಯಾರಪ್ಪ ಇಷ್ಟು ಹೊತ್ತಿಗೆ ಅಂತ ಅರ್ಧ ನಿದ್ರೆಯಲ್ಲಿದ್ದವಳು ಬೆಚ್ಚಿ, ಫೋನ್‌ ನೋಡಿದಾಗ, ಸ್ಕ್ರೀನ್‌ ಮೇಲೆ ಚಂದೂ ಆಂಟಿ ನಂಬರ್‌ ನೋಡಿ ಭಯವಾಗಿತ್ತು. ಯಾಕಂದ್ರೆ ಅಂಕಲ್‌ ಹಾರ್ಟ್‌ ಪೇಷಂಟ್‌ ಆದ್ದರಿಂದ ಏನಾದ್ರೂ ಅನಾಹುತವಾಯ್ತಾ ಅಂತ ಗಾಬರಿಯಾಗಿ ಮೊದಲಿಗೆ ನಾನೇ “ಹಲೋ ಆಂಟಿ.. ಏನಾಯ್ತು..?” ಎಂದು ಕೇಳಿದೆ. ಆಂಟಿಯ ಧ್ವನಿಯೂ ಆ ಕಡೆಯಿಂದ ದಗ್ದದಿತವಾಗಿ ಕೇಳುತ್ತಿತ್ತು. ಹಾಗಾಗಿ ಇನ್ನೂ ಭಯವಾಯ್ತು ನನಗೆ. ಆಂಟಿ ಚೂರು ಸುಧಾರಿಸಿಕೊಂಡು “ನಂಗೆ ಚಂಗಪ್ಪ ಡಾಕ್ಟರ್ರ ನಂಬರ್‌ ಫಾರ್ವರ್ಡ್‌ ಮಾಡ್ತಿಯಾಪಾ. ಮಿಕ್ಕಿಗೆ ತುಂಬಾ ಹುಷಾರಿಲ್ಲ… ತುಂಬಾ ನರಳ್ತಾ ಇದ್ದಾನೆ.. ಈಗಲೇ ಡಾಕ್ಟರ್‌ ಹತ್ರ ಕರ್ಕೊಂಡು ಹೋಗ್ಬೇಕು…” ಎಂದವರ ಧ್ವನಿ ಕಂಪಿಸುತ್ತಿತ್ತು. ಹುಷಾರಿಲ್ಲದ್ದು ಮಿಕ್ಕಿಗೆ ಅಂತ ಗೊತ್ತಾಗಿ “ಸಧ್ಯ ಆಂಟಿ ಅಂಕಲ್‌ ಹುಷಾರಿದ್ದಾರಲ್ಲ…” ಅಂತ ನನಗೆ ಒಂಚೂರು ಸಮಾಧಾನವಾಯಿತಾದರೂ ಆ ಕಡೆಯಿದ್ದ ಆಂಟಿಯ ಧ್ವನಿಯಿನ್ನೂ ಇನ್ನೂ ಅದೇ ಸ್ಥಿತಿಯಲ್ಲಿ ಇತ್ತು. ಹಾಗಾಗಿ ತಡಮಾಡದೇ ಹೂಂ ಅಂದವಳೇ, ಫೋನಿಟ್ಟದ್ದೇ ಅವರಿಗೆ ಚಂಗಪ್ಪ ಡಾಕ್ಟರರ ನಂಬರನ್ನು ಅವರಿಗೆ ಕಳಿಸಿಕೊಟ್ಟಿದ್ದೆ. ಅವರಿಗೆ ನಾಯಿಯೆಂದರೆ ಅಷ್ಟು ಪ್ರೀತಿ…

ಮಿಕ್ಕಿ ಚಂದೂ ಆಂಟಿಯ ಮಗನಂಥಾ ಮುದ್ದು ನಾಯಿ. ಅಂಕಲ್‌ ಆಂಟಿ ಈಗಿರುವ ಮನೆಯಿಂದ ಅವರ ತೋಟ ಬಹಳ ದೂರದಲ್ಲಿದೆ. ಹಾಗಾಗಿ ಅಂಕಲ್‌ ಬೆಳಗ್ಗೆ ಬೇಗನೆದ್ದು ತೋಟಕ್ಕೆ ಹೊರಟರೆಂದರೆ ಬರುವುದು ತಡವಾಗುತ್ತದೆ. ಅವರಿಬ್ಬರ ಗಂಡುಮಕ್ಕಳಿಬ್ಬರೂ ಸಂಸಾರ ಸಮೇತರಾಗಿ ಬೆಂಗಳೂರು, ಹಾಗೂ ವಿದೇಶದಲ್ಲಿ ಸೆಟಲ್‌ ಆಗಿರುವುದರಿಂದ, ಇಡೀದಿನ ಆಂಟಿಯೊಬ್ಬರೇ ಮನೆಯಲ್ಲಿ… ಮಕ್ಕಳಿಬ್ಬರು ತಮ್ಮ ಹಾಗೂ ತಮ್ಮ ಪತ್ನಿಯರ ಕೆಲಸ, ರಜಾ ಅಂತೆಲ್ಲ ನೋಡಿಕೊಂಡು ಬ್ಯುಸಿ ಶೆಡ್ಯೂಲಿನಲ್ಲಿ ಬಿಡುವು ಮಾಡಿಕೊಂಡು ಅಪ್ಪ-ಅಮ್ಮನನ್ನು ಭೆಟ್ಟಿ ಆಗೋಕೆ ಊರಿಗೆ ಬರಲು ಐದಾರು ತಿಂಗಳಿಗೊಮ್ಮೆಯೇ ಸಾಧ್ಯ. ಹಾಗಾಗಿ ಮಿಕ್ಕಿ ಎಂಬ ಪಗ್‌ ಜಾತಿಯ ನಾಯಿಯೇ ಅವರ ಸಂಗಾತಿ. ಆದರೆ ಅದಕ್ಕೆ ಈಗ ಹನ್ನೊಂದು ವರ್ಷದ ಮೇಲೆ ವಯಸ್ಸಾಗಿದ್ದು, ಕಣ್ಣು ಮೆಲ್ಲನೆ ಮಂಜಾಗುತ್ತಿವೆ. ಹಾಗಾಗಿ ಅದನ್ನು ಇನ್ನೂ ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದಾರೆ. ದಿನಕ್ಕೆ ಮೂರು ಮೊಟ್ಟೆ, ಚೀಸ್‌, ಕೇಕ್‌, ಹಾಲು ಹಾಗೂ ಚಿಕನ್‌ ಅವನ ನಿತ್ಯದ ಮೆನುವಿನಲ್ಲಿ ಕಡ್ಡಾಯ… ರಾತ್ರಿ ಸೊಳ್ಳೆ ಕಾಟ ಜಾಸ್ತಿಯಾದರೆ ಅಳುತ್ತಾನಂತೆ. ಹಾಗಾಗಿ, ಸಂಜೆಯೇ ಅವನ ಗೂಡಿನ ಮುಂದೆ ಒಂದು ಸೊಳ್ಳೆ ಓಡಿಸುವ ಕಾಯಿಲ್‌ ಹಚ್ಚಿಟ್ಟರೆ, ನೆಮ್ಮದಿಯಿಂದ ಗೊರಗೊರ ಗೊರಕೆ ಹೊಡಿದುಕೊಂಡು ಮಲಗುತ್ತಾನಂತೆ… ಮೊನ್ನೆ ಆಂಟಿ ಮನೆಗೆ ಬಂದಾಗ ಹೀಗೆಲ್ಲ ಹೇಳುತ್ತಿದ್ದರೆ, ಆಹಾ… ಮಿಕ್ಕಿಯ ಅದೃಷ್ಟವೇ.. ಎನ್ನಿಸಿತು.

ಎರಡು ತಿಂಗಳ ಹಿಂದೆ, ಹೀಗೆ ಎಂದಿನಂತೆ ಸಂಜೆ ಆಂಟಿ ಅವರ ವಾಕಿಂಗ್‌ ಮುಗಿಸಿಕೊಂಡು, ವಾಪಸ್‌ ಬಂದು ಮಿಕ್ಕಿಯನ್ನೂ ಅಲ್ಲೇ ಶೌಚಕ್ಕೆಂದು ವಾಕಿಂಗ್‌ ಕರೆದುಕೊಂಡು ಹೋಗಿದ್ದರು. ನಾವಿರುವ ಲೇಜೌಟ್‌ನ ರಸ್ತೆ, ಅಕ್ಕಪಕ್ಕ ಎರಡು ಗ್ರಾಮ ಪಂಚಾಯತ್‌ಗೂ ಸೇರದ ಹಿನ್ನೆಲೆ, ಇಬ್ಬರೂ ಕಲ್ಲು-ಕೊರಕಲಿನಿಂದ ಕೂಡಿದ ರಸ್ತೆಗೆ ಡಾಂಬಾರು ಹಾಕಿಸಿಲ್ಲ. ಹಾಗಾಗಿ ಟೂ ವೀಲರ್‌ನವರೇನಾದರೂ ಈ ರಸ್ತೆಗೆ ಬಂದರೆ, ರಸ್ತೆಯನ್ನು ಈ ಸ್ಥಿತಿಗೆ ತಂದವರನ್ನು ಬೈದುಕೊಂಡೇ ಹೋಗುತ್ತಾರೆ. ಅಷ್ಟು ಕಲ್ಲುಗಳು… ಅಂದು ಚಂದೂ ಆಂಟಿ ನಾಯಿಯನ್ನು ವಾಪಸ್‌ ಕರೆದುಕೊಂಡು ಬರುವಷ್ಟರಲ್ಲಿ ಕತ್ತಲಾಗಿ, ಇನ್ನೇನು ಮನೆ ಬಂದೇಬಿಟ್ಟಿತು ಎನ್ನುವಾಗ, ಮಿಕ್ಕಿ ಮನೆಕಂಡ ಖುಷಿಯಲ್ಲಿ ಜೋರಾಗಿ ಓಡಿಹೋದದ್ದೆ, ಗಟ್ಟಿಯಾಗಿ ಬೆಲ್ಟನ್ನು ಹಿಡಿದಿದ್ದ ಆಂಟಿ ಆಯ ತಪ್ಪಿ ಅಂಗಾತ ಬಿದ್ದಿದ್ದಾರೆ. ಆಗಲೇ ಕತ್ತಲಾಗಿದ್ದರಿಂದ ನಾವೆಲ್ಲ ನಮ್ಮನಮ್ಮ ಮನೆಯಲ್ಲಿದ್ದೆವು. ಹಾಗಾಗಿ ಯಾರೂ ಆಂಟಿ ಬಿದ್ದದ್ದು ನೋಡಿಯೇ ಇಲ್ಲ. ಬಿದ್ದ ಭಯಕ್ಕೋ ಏನೋ ಆಂಟಿ ಅಲ್ಲೇ ಮೂರ್ಚೆ ಹೋಗಿ ಹತ್ತು ನಿಮಿಷಗಳೇ ಕಳೆದಿದ್ದವಂತೆ. ಆಗ ಸುಮ್ಮನೆ ಹೊರಗೆ ಬಂದ, ಅವರ ಪಕ್ಕದ ಮನೆಯವರ ಕಣ್ಣಿಗೆ ಅವರು ಕಂಡು, ಯಾರೋ ಬಿದ್ದಿದ್ದಾರಲ್ಲ ಅಂತ ಬಂದು ನೋಡಿ, ಆಂಟಿಯನ್ನು ಗುರುತಿಸಿ ಮೇಲಕ್ಕೆತ್ತಿದರೆ, ಅವರ ತುಟಿ, ನಾಲಗೆ ಒಡೆದು, ರಕ್ತ ಸೋರುತ್ತಿತ್ತಂತೆ. ಅಂಕಲ್‌ ತಡವಾಗಿ ಬರುವುದು ಅವರಿಗೂ ಗೊತ್ತಿರುವ ಕಾರಣ, ಅವರು ತಮ್ಮದೇ ಕಾರಿನಲ್ಲಿ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿಕೊಂಡು ಬಂದಿದ್ದರೆನ್ನುವುದು ಮಾರನೆಯ ದಿನವೇ ಮಿಕ್ಕೆಲ್ಲ ಮನೆಯರಿಗೂ ಗೊತ್ತಾದದ್ದು.

ಈಗ ಆಂಟಿ ಮಿಕ್ಕಿಯನ್ನು ವಾಕಿಂಗಿಗೆ ಕರೆದುಕೊಂಡು ಹೋಗುವುದಿಲ್ಲ. ಅಂಕಲ್‌ ಸಮಯ ಮಾಡಿಕೊಂಡು ಬೇಗ ಬಂದು ಆ ಕೆಲಸವನ್ನು ತಾವೇ ಮಾಡುತ್ತಾರೆ. ಆದರೆ ಚಂದೂ ಆಂಟಿಯ ಪ್ರೀತಿಯಿಂದ ಮಾತ್ರ ಮಿಕ್ಕಿಗೆ ರಿಯಾಯಿತಿ ದೊರೆತಿಲ್ಲ… ಯಾಕೆಂದರೆ ನಾಯಿಗಾಗಲೀ, ಮನುಷ್ಯನಿಗಾಗಲಿ ಯಾವತ್ತೂ ಯಾರದ್ದಾದರೂ ಸಾಂಗತ್ಯ ಬೇಕೆಬೇಕು. ಈಗ ವಯಸ್ಸಾದ ಕಾಲಕ್ಕೆ ಆಂಟಿಯೊಟ್ಟಿಗೆ ಬಹುತೇಕ ಇರುವುದು ಆ ನಾಯಿಯೆ. ಆದರೆ ಈಗ ಆ ನಾಯಿಗೂ ವಯಸ್ಸಾಗುತ್ತಿದೆ ಎನ್ನುವಾಗ, ಅವರ ಕಣ್ಣಲ್ಲಿ ತೆಳುವಾಗಿ ನೀರ ಪರದೆ ಕಾಣುತ್ತದೆ. “ಆಗಷ್ಟೇ ಇದ್ದರು… ಈಗ ಇಲ್ಲವಾದರಂತೆ..” ಎನ್ನುವಷ್ಟು ಪುಟ್ಟ ಜೀವಕ್ಕೆ, ಜೀವನಕ್ಕೆ ಒಳಗಿದ್ದನ್ನು ಹೇಳಿಕೊಳ್ಳಲು ಕಿವಿಯೊಂದು ಇಲ್ಲದಿದ್ದರೆ ಹೇಗೆ?

About The Author

ರೂಪಶ್ರೀ ಕಲ್ಲಿಗನೂರ್

ಚಿತ್ರ ಕಲಾವಿದೆ, ಕವಯತ್ರಿ ಹಾಗೂ ಪತ್ರಕರ್ತೆ. ಚಿತ್ರಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 'ಕಾಡೊಳಗ ಕಳದಾವು ಮಕ್ಕಾಳು' ಮಕ್ಕಳ ನಾಟಕ . 'ಚಿತ್ತ ಭಿತ್ತಿ' ವಿಭಾ ಸಾಹಿತ್ಯ ಪ್ರಶಸ್ತಿ ಪಡೆದ ಕವನ ಸಂಕಲನ. ಹುಟ್ಟಿದ್ದು ಸವಣೂರಿನಲ್ಲಿ. ಈಗ ಬೆಂಗಳೂರು. ‘ಕೆಂಡಸಂಪಿಗೆ’ ಯಲ್ಲಿ ಸಹಾಯಕ ಸಂಪಾದಕಿ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ