ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಂಪ ಪ್ರಶಸ್ತಿ, ರಾಜ್ಯೋತ್ಸವದಂತಹ ದೊಡ್ಡ ದೊಡ್ಡ ಪ್ರಶಸ್ತಿಗಳು ಹುಡುಕಿಕೊಂಡು ಬಂದರೂ ಸರಳತೆಯ ಸಾಕಾರ ಮೂರ್ತಿಯಾಗಿ, ದೊಡ್ಡ ವೇದಿಕೆಗಳ ಕಾರ್ಯಕ್ರಮಗಳಿಂದ ಸದಾ ದೂರವೇ ಉಳಿದವರು ತೇಜಸ್ವಿ. “ಎಲ್ಲರೂ ದೊಡ್ಡ ಮನುಷ್ಯರೆಂದು ಕರೆದರೆಂದು ಹಾಗೆ ನಟಿಸಲು ಹೋಗಬಾರದು” ಎನ್ನುತ್ತಾ ತಾನು ರಾಷ್ಟ್ರ ಕವಿಯ ಮಗನೆಂದು ಬಿಂಬಿಸಿಕೊಳ್ಳದೆ, ತನ್ನದೇ ವಿಭಿನ್ನ ವ್ಯಕ್ತಿತ್ವ ರೂಪಿಸಿಕೊಂಡು, ಅತ್ಯಂತ ಸರಳವಾಗಿ ಬದುಕಿ ತೋರಿಸಿದವರು.
ಪೂರ್ಣಚಂದ್ರ ತೇಜಸ್ವಿಯವರ ಕುರಿತು ರಾಘವೇಂದ್ರ ಈ. ಹೊರಬೈಲು ಬರಹ
ಹುಸಿ ಕೋಪವನ್ನು ಮುಖದಲ್ಲಿ ಹೊದ್ದು, ಹೃದಯದೊಳಗೆ ಅಗಾಧ ಪ್ರೀತಿಯ ಧಾರೆಯನ್ನು ಹೊಂದಿ,
ರಾಷ್ಟ್ರಕವಿ ಕುವೆಂಪುರವರ ಮಗನಾಗಿ ಜನಿಸಿದರೂ ಎಲ್ಲಿಯೂ ತನ್ನ ತಂದೆಯ ಪ್ರಭಾವವನ್ನು ಬಳಸದೆ, ಅವರ ಛಾಯೆಯಿಂದ ಸಂಪೂರ್ಣ ಹೊರಬಂದು ತಮ್ಮದೇ ವಿಶಿಷ್ಟ ವ್ಯಕ್ತಿತ್ವ, ಬರವಣಿಗೆ ಹಾಗೂ ಹವ್ಯಾಸಗಳನ್ನು ಅಳವಡಿಸಿಕೊಂಡು ಕನ್ನಡದ ಸಾಹಿತ್ಯವನ್ನು ಮೇರು ಪರ್ವತದತ್ತ ಕೊಂಡೊಯ್ದ ಮಹಾನ್ ಮೋಡಿಗಾರ ಪೂರ್ಣಚಂದ್ರ ತೇಜಸ್ವಿ.
ಮಲೆನಾಡಿನ ಹೆಬ್ಬಾಗಿಲಾದ ಶಿವಮೊಗ್ಗದ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳಿಯಲ್ಲಿ ಜನಿಸಿ, ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಪಡೆದು, ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದರೂ ತನ್ನ ಸ್ನೇಹಿತರಂತೆ ಅಧ್ಯಾಪಕ ವೃತ್ತಿಯನ್ನು ಹಿಡಿಯದೆ, ತನ್ನ ತಾಯಿಯ ತವರೂರಾದ ಮೂಡಿಗೆರೆಯೆಂಬ ದಟ್ಟ ಕಾನನದ ನಡುವಿನ ಪುಟ್ಟ ಊರಿನಲ್ಲಿ ಸಹಜ ಕೃಷಿ ಮಾಡಿ, ಗೆದ್ದು ತೋರಿಸಿದವರು ತೇಜಸ್ವಿ. ವ್ಯವಸಾಯ ಮಾಡುತ್ತಲೇ ತಮ್ಮ ಅಪಾರ ಓದು ಮತ್ತು ಅನುಭವದಿಂದ ವಿಶ್ವವೇ ಕನ್ನಡ ಸಾಹಿತ್ಯದತ್ತ ತಿರುಗಿ ನೋಡುವಂತಹ ಅದ್ಭುತ ಕೃತಿಗಳನ್ನು ರಚಿಸಿದ ಸಾಹಿತ್ಯ ಮಾಂತ್ರಿಕ.
‘ಕರ್ವಾಲೋ, ಚಿದಂಬರ ರಹಸ್ಯ, ಜುಗಾರಿ ಕ್ರಾಸ್ನಂತಹ’ ಮಾಸ್ಟರ್ ಪೀಸ್ ಎನಿಸುವಂತಹ ಕಾದಂಬರಿಗಳನ್ನು ಕನ್ನಡಕ್ಕೆ ಕೊಟ್ಟ ಮಾಸ್ಟರ್ ತೇಜಸ್ವಿ. ರೆಕ್ಕೆಯಿರುವ ಹಾರುವ ಓತಿಯನ್ನು ತಮ್ಮ ಕರ್ವಾಲೋದಲ್ಲಿ ಪರಿಚಯಿಸಿ, ಇಡೀ ವಿಶ್ವಕ್ಕೇ ಹಾರುವ ಓತಿಯ ಬಗ್ಗೆ ಕುತೂಹಲ ಹುಟ್ಟಿಸಿದವರು ತೇಜಸ್ವಿ. ಜೇನು ಸಾಕಣೆ, ಮಂದಣ್ಣ ಇವೆಲ್ಲವೂ ಜನಮಾನಸದಲ್ಲಿ ಅಜರಾಮರವಾಗಿ ಉಳಿಯುವ ವ್ಯಕ್ತಿ ಮತ್ತು ವಸ್ತುಗಳು. ಅಬಚೂರಿನ ಪೋಸ್ಟಾಫೀಸು, ಕಿರಗೂರಿನ ಗೈಯ್ಯಾಳಿಗಳು ಕನ್ನಡದ ಮೇರು ಕಥಾಸಂಕಲನಗಳು. ಆತ್ಮಕಥೆಯೂ ಅಲ್ಲದ ಜೀವನ ಚರಿತ್ರೆಯೂ ಆಗದ ‘ಅಣ್ಣನ ನೆನಪು’ ಸ್ವತಃ ತೇಜಸ್ವಿ ಹಾಗೂ ತಂದೆ ಕುವೆಂಪುರವರ ವ್ಯಕ್ತಿತ್ವವನ್ನು ವರ್ಣಿಸುವ ಅಮೋಘ ಕೃತಿ.
ಕಥೆಯಿರಲಿ, ಕಾದಂಬರಿಯಿರಲಿ, ಲೇಖನವಿರಲಿ, ಕಾಡಿನ ಕಥೆಗಳಾಗಲಿ, ಪ್ರವಾಸ ಕಥನವಾಗಲಿ, ವಿಮರ್ಶೆಯಾಗಲಿ, ಅನುವಾದವಾಗಲಿ ಇಲ್ಲವೇ ವಿಜ್ಞಾನ ಸಾಹಿತ್ಯವೇ ಆಗಿರಲಿ ತೇಜಸ್ವಿಯವರ ಬರಹ ಸಲಿಲವಾದ ನೀರು ಹರಿದಂತೆ. ಎಂಥವರೂ ವಾಹ್ ಎನ್ನುವಂತೆ, ಓದಿ ಮುಗಿಸಿದ್ದೇ ಗೊತ್ತಾಗದಂತೆ ಸಲೀಸಾಗಿ ಓದಿಸಿಕೊಂಡು ಮನಸ್ಸಿನೊಳಗೆ ಅದರ ಪಡಿಯಚ್ಚನ್ನು ಶಾಶ್ವತವಾಗಿ ಉಳಿಸಿಹೋಗುವ ಶಕ್ತಿ ತೇಜಸ್ವಿಯವರ ಬರಹಕ್ಕಿದೆ. ಅವರ ಪ್ರವಾಸ ಕಥನ ‘ಅಲೆಮಾರಿಯ ಅಂಡಮಾನ್’ ಮತ್ತು ‘ಮಹಾನದಿ ನೈಲ್’ ಈ ಎರಡು ಪ್ರವಾಸ ಕಥನಗಳನ್ನು ಓದಿದವರು ಅಂಡಮಾನಿಗೋ ಅಥವಾ ನೈಲ್ ನದಿ ನೋಡಲು ಈಜಿಪ್ಟಿಗೋ ಹೋಗುವ ಅವಶ್ಯಕತೆಯೇ ಇಲ್ಲ. ಅಲ್ಲಿಯ ಎಲ್ಲಾ ವಿವರಗಳೂ ಅಚ್ಚುಕಟ್ಟಾಗಿ ನಮ್ಮ ಕಣ್ಣ ಮುಂದೆಯೇ ಬಂದು ನಿಲ್ಲುತ್ತವೆ. ಅಥವಾ ಈ ಎರಡು ಕೃತಿಗಳನ್ನು ಓದಿ ಮುಗಿಸುತ್ತಿದ್ದಂತೆ ತಮ್ಮ ಜೀವನದಲ್ಲಿ ಒಮ್ಮೆಯಾದರೂ ಅಂಡಮಾನಿಗೋ ಅಥವಾ ನೈಲ್ ನದಿ ನೋಡಲೋ ಹೋಗಲೇಬೇಕೆಂಬ ಪಣ ತೊಡುತ್ತಾರೆ. ಇದು ತೇಜಸ್ವಿಯವರ ಬರಹಕ್ಕಿರುವ ತಾಕತ್ತು. ತೇಜಸ್ವಿಯವರಿಂದ ಅನುವಾದಗೊಂಡ ಜಿಮ್ ಕಾರ್ಬೆಟ್ ಹಾಗೂ ಕೆನೆತ್ ಆಂಡರ್ಸನ್ ಬರೆದ ನರಭಕ್ಷಕ ಹುಲಿ ಹಾಗೂ ಚಿರತೆಗಳ ಕಥೆಗಳಂತೂ ಅದೆಷ್ಟು ಕಾಡುತ್ತವೆಯೆಂದರೆ, ಅವು ಅನುವಾದಗಳಾದರೂ ಅವುಗಳ ತುಂಬಾ ತೇಜಸ್ವಿಯವರ ತೇಜಸ್ಸು ಮಿರಮಿರಗೊಳ್ಳುತ್ತದೆ. ಬೆಳ್ಳಂದೂರಿನ ನರಭಕ್ಷಕ, ಜಾಲಹಳ್ಳಿಯ ಕುರ್ಕ, ರುದ್ರಪ್ರಯಾಗದ ಭಯಾನಕ ನರಭಕ್ಷಕ, ಪೆದ್ದಚೆರುವಿನ ರಾಕ್ಷಸ ಈ ಕಥೆಗಳನ್ನು ಓದಿ ಒಬ್ಬಂಟಿಯಾಗಿ ಕಾಡಿನ ಸಮೀಪ ಹೋಗಲೂ ಭಯಪಟ್ಟ ನನ್ನಂತಹ ಅಪ್ಪಟ ಮಲೆನಾಡಿನ ಸಾವಿರಾರು ಓದುಗರು ಸಿಗುತ್ತಾರೆ. ಅದು ತೇಜಸ್ವಿ ಬರಹಗಳ ಓಜಸ್ಸು. ಕನಸಿನಲ್ಲೂ ಹುಲಿ, ಚಿರತೆಗಳು ದಾಳಿಯಿಟ್ಟ ಅನುಭವಗಳು ನನಗೂ ಪ್ರತೀ ಬಾರಿ ಈ ಕಥೆಗಳನ್ನು ಓದಿದಾಗ ಆಗಿವೆಯೆಂದರೆ ಈ ಕಥೆಗಳಿಗೆ ಅದೆಷ್ಟು ಕಾಡುವ ಗುಣವಿದೆಯೆಂದು ಅರ್ಥವಾಗುತ್ತದೆ.

ಪರಿಸರದ ಕಥೆ ಮತ್ತು ವಿಜ್ಞಾನ ಸಾಹಿತ್ಯವನ್ನು ತೇಜಸ್ವಿಯವರಷ್ಟು ಸರಳವಾಗಿ ಮತ್ತು ಪರಿಣಾಮಕಾರಿಯಾಗಿ ಇನ್ಯಾರಿಂದಲೂ ಬರೆಯಲು ಸಾಧ್ಯವೇ ಇಲ್ಲವೇನೋ ಎನ್ನುವಂತೆ, ಆ ಸಾಧ್ಯತೆಗಳನ್ನೇ ಮೀರಿ ಬರೆದಿದ್ದಾರೆ. ಅದು ಮಾನವನ ವಿಕಾಸದ ಸುತ್ತ ಸುತ್ತುವ ‘ಮಿಸ್ಸಿಂಗ್ ಲಿಂಕ್’ ಆಗಿರಬಹುದು, ಪಕ್ಷಿಗಳ ಲೋಕವನ್ನು ಪರಿಚಯಿಸುವ ‘ಹೆಜ್ಜೆ ಮೂಡದ ಹಾದಿ, ಪರಿಸರದ ಕಥೆ, ಏರೋಪ್ಲೇನ್ ಚಿಟ್ಟೆ ಮತ್ತು ಇತರ ಕಥೆಗಳು, ಹಕ್ಕಿಪುಕ್ಕ, ಸಾಸರ್’ ಸರಣಿಯಾಗಿರಬಹುದು. ‘ಕರ್ವಾಲೋ’ದಂತಹ ಕಾದಂಬರಿಯೇ ಆಗಿರಬಹುದು. ಪರಿಸರದ ಬಗ್ಗೆ, ವಿಜ್ಞಾನದ ಬಗ್ಗೆ ಅಗಾಧವಾದ ಪ್ರೀತಿ ಮತ್ತು ಕುತೂಹಲವಿದ್ದುದರಿಂದ ಮತ್ತು ಮಲೆನಾಡಿನ ದಟ್ಟ ಕಾಡಿನ ನಡುವೆ ಜೀವಿಸಿದ್ದರಿಂದ ಆ ಜೀವನಾನುಭವ ತೇಜಸ್ವಿಯವರಿಗೆ ಆ ಕಸುವನ್ನು ನೀಡಿರಬಹುದು.
ಕೈಯಲ್ಲಿ ಸದಾ ಕೋವಿಯನ್ನು ಹಿಡಿದು, ಕೊರಳಿಗೊಂದು ಕ್ಯಾಮರಾ ಸುತ್ತಿಕೊಂಡು, ಜೊತೆಗೊಂದು ನಾಯಿ ‘ಕಿವಿ’ಯನ್ನು ಕಟ್ಟಿಕೊಂಡು ಕಾಡಲ್ಲಿ ತಿರುಗುವುದೆಂದರೆ ತೇಜಸ್ವಿಯವರಿಗೆ ಪಂಚಪ್ರಾಣ. ಮಲೆನಾಡಿನಲ್ಲಿ ಹುಟ್ಟಿ, ಬೆಳೆದ ತೇಜಸ್ವಿಯವರಿಗೆ ಶಿಕಾರಿ ಸಹಜ ಹವ್ಯಾಸ. ಹಾಗಾಗಿ ಸದಾ ಹೆಗಲ ಮೇಲೆ ಕೋವಿಯಿರುತ್ತಿತ್ತು. ಜೊತೆಗಾರನಾಗಿ ಅವರು ತುಂಬಾ ಪ್ರೀತಿಸುತ್ತಿದ್ದ ನಾಯಿ ‘ಕಿವಿ’ ಇರುತ್ತಿತ್ತು. ಕ್ಯಾಮರಾ ಕಣ್ಣಿನಿಂದ ಪ್ರಪಂಚವನ್ನು ನೋಡುವ, ಕಾಡಿನ, ಪ್ರಕೃತಿಯ ಸೊಬಗನ್ನು ಸೆರೆಹಿಡಿಯುವ ತುಡಿತದಿಂದಾಗಿ ಸದಾ ಕೊರಳಲ್ಲೊಂದು ಕ್ಯಾಮರಾ ಇರಲೇಬೇಕಿತ್ತು. ಸಿಕ್ಕ ಸಿಕ್ಕ ಎಲೆಕ್ಟ್ರಾನಿಕ್ ವಸ್ತುಗಳನ್ನು ಬಿಚ್ಚಿ ರಿಪೇರಿ ಮಾಡುವುದೆಂದರೆ ತೇಜಸ್ವಿಯವರಿಗೆ ಎಲ್ಲಿಲ್ಲದ ಆಸಕ್ತಿ. ಕುವೆಂಪುರವರು ಪರಿಚಯಿಸಿದ ‘ಮಂತ್ರಮಾಂಗಲ್ಯ’ದಂತೆ ವಿವಾಹವಾದ ಮೊದಲಿಗರು ತೇಜಸ್ವಿ.
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಂಪ ಪ್ರಶಸ್ತಿ, ರಾಜ್ಯೋತ್ಸವದಂತಹ ದೊಡ್ಡ ದೊಡ್ಡ ಪ್ರಶಸ್ತಿಗಳು ಹುಡುಕಿಕೊಂಡು ಬಂದರೂ ಸರಳತೆಯ ಸಾಕಾರ ಮೂರ್ತಿಯಾಗಿ, ದೊಡ್ಡ ವೇದಿಕೆಗಳ ಕಾರ್ಯಕ್ರಮಗಳಿಂದ ಸದಾ ದೂರವೇ ಉಳಿದವರು ತೇಜಸ್ವಿ. “ಎಲ್ಲರೂ ದೊಡ್ಡ ಮನುಷ್ಯರೆಂದು ಕರೆದರೆಂದು ಹಾಗೆ ನಟಿಸಲು ಹೋಗಬಾರದು” ಎನ್ನುತ್ತಾ ತಾನು ರಾಷ್ಟ್ರ ಕವಿಯ ಮಗನೆಂದು ಬಿಂಬಿಸಿಕೊಳ್ಳದೆ, ತನ್ನದೇ ವಿಭಿನ್ನ ವ್ಯಕ್ತಿತ್ವ ರೂಪಿಸಿಕೊಂಡು, ಅತ್ಯಂತ ಸರಳವಾಗಿ ಬದುಕಿ ತೋರಿಸಿದವರು.

ಪೂಚಂತೇ ಎಂದೇ ಪ್ರೀತಿಯಿಂದ ಕರೆಸಿಕೊಂಡ ತೇಜಸ್ವಿ ಕಾಡಿನ ಮೂಲೆಯಲ್ಲಿ ವ್ಯವಸಾಯ, ಶಿಕಾರಿ ಮಾಡುತ್ತಾ, ಪ್ರಕೃತಿ ವಿಸ್ಮಯಗಳನ್ನು ತಮ್ಮ ಕ್ಯಾಮೆರಾ ಕಣ್ಣಿನಿಂದ ಸೆರೆ ಹಿಡಿಯುತ್ತಾ, ರೈತ ಚಳುವಳಿ, ಕನ್ನಡ ಚಳುವಳಿಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು. ಮಲೆನಾಡಿನಲ್ಲಿ ಗಾಳ ಹಿಡಿದು ಮೀನು ಹಿಡಿಯುವವರಂತೆ ಕಂಡರೂ ಧ್ಯಾನಸ್ಥರಾಗಿ ತಮ್ಮ ಸಾಹಿತ್ಯ ಕೃಷಿಯನ್ನು ಉತ್ತುಂಗಕ್ಕೊಯ್ದು, ಕನ್ನಡದ ಕೀರ್ತಿ ಪತಾಕೆಯನ್ನು ವಿಶ್ವದೆಲ್ಲೆಡೆ ಹರಡಿದ ವಿಶ್ವ ಮಾನವನ ಪುತ್ರ ತೇಜಸ್ವಿಗೆ ಇದೋ ನನ್ನ ನಮನ.

ರಾಘವೇಂದ್ರ ಈ ಹೊರಬೈಲುರವರು ಶಿವಮೊಗ್ಗ ಜಿಲ್ಲೆಯ, ಅದೇ ತಾಲೂಕಿನ ಹೊರಬೈಲು ಗ್ರಾಮದವರು. ಪ್ರಸ್ತುತ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಬಟ್ಲಹಳ್ಳಿ ಎಂಬಲ್ಲಿ ಸರ್ಕಾರಿ ಪ್ರೌಢಶಾಲೆಯ ಆಂಗ್ಲ ಭಾಷೆಯ ಶಿಕ್ಷಕರಾಗಿದ್ದಾರೆ. ಗಾಯನ, ಚಿತ್ರಕಲೆ, ನಟನೆ, ಭಾಷಣಗಳಲ್ಲಿ ಅಪಾರ ಆಸಕ್ತಿ ಹೊಂದಿದ್ದಾರೆ. ‘ಅಂತರಂಗದುಲಿ’ (ಕವನ ಸಂಕಲನ ೨೦೧೩), ‘ಚೊಂಬೇಶ ಮುಕ್ತಕ'(ಚುಟುಕು ಸಂಕಲನ ೨೦೧೭) ಹಾಗೂ ‘ಬದುಕು ಪುಕ್ಸಟ್ಟೆ ಅಲ್ಲ’ (ಲೇಖನ ಸಂಕಲನ ೨೦೧೯) ಇವರ ಪ್ರಕಟಿತ ಕೃತಿಗಳು

