Advertisement
“ನನ್ನ ಚಲಿಸದ ಕಾಲುಗಳನ್ನು ಹೊತ್ತ ಈ ಭೂಮಿಗೆ..”: ವಿಕ್ರಂ ಹತ್ವಾರ್‌ ಬರಹ

“ನನ್ನ ಚಲಿಸದ ಕಾಲುಗಳನ್ನು ಹೊತ್ತ ಈ ಭೂಮಿಗೆ..”: ವಿಕ್ರಂ ಹತ್ವಾರ್‌ ಬರಹ

ಹೀಗೆ ಎಲ್ಲದಕ್ಕು ಕವಿಯ ಎಲ್ಲ ನಿವೇದನೆಯೂ ಕೊನೆಗೆ ‘ಕೇಳು ಓ ನನ್ನ ಹುಂಬ ಪ್ರಾಣವೇ ನಾನಿನ್ನೂ ನಿನ್ನನ್ನು ಚಕಿತಗೊಳಿಸುವುದಿದೆ’ ಎಂದು ಸವಾಲು ಎಸೆಯುತ್ತದೆ. ಅದು ಸ್ಪರ್ಧೆಯಲ್ಲ. ಅಲ್ಲಿ ಗೆಲ್ಲಬೇಕೆಂಬ ಅಥವ ಗೆದ್ದೇ ಗೆಲ್ಲುವೆ ಎನ್ನುವ ಠೇಂಕಾರವಿಲ್ಲ. ಪ್ರಾಣದ ಕೆನ್ನೆ ಚಿವುಟಿ ಕಣ್ಣು ಹೊಡೆದು ಅಣಕಿಸಿದಂತಿದೆ. ಇಂಥ ವಿರಳಾತಿ ವಿರಳ ಕವಿತೆಗಳ ಗುಚ್ಛವೇ ಅವಳ ಬಳಿ ಇತ್ತು…. ಪ್ರಕಟಿಸೋಣ ಅಂದೆ..
ನಾಗಶ್ರೀ ಶ್ರೀರಕ್ಷ ವಿತೆಗಳ ಕುರಿತು ವಿಕ್ರಂ ಹತ್ವಾರ್‌ ಬರಹ

ಕನ್ನಡದ ಕವಿ ನಾಗಶ್ರೀ ಕಣ್ಮರೆಯಾಗಿ ಐದು ವರ್ಷಗಳೇ ಕಳೆದುಹೋಗಿದೆ. ಈ ಐದು ವರ್ಷದಲ್ಲಿ ಎಕ್ಸ್‌ಪ್ರೆಸ್‌ವೇ ಬದುಕಿನ ವೇಗವೂ ಲಾಲಸೆಯೂ ಧಾವಂತವೂ ಹೆಚ್ಚುತ್ತಲೇ ಇದೆ. ಕವಿತೆಗೆ ಬೇಕಾದ ವ್ಯವಧಾನ ಕಡಿಮೆಯಾಗುತ್ತಲೇ ಇದೆ. ಇಂಥ ಹೊತ್ತಿನಲ್ಲಿ ನಾಗಶ್ರೀ ಕವಿತೆಗಳನ್ನು ಮತ್ತೊಮ್ಮೆ ಓದಿದೆ. ಕವಿತೆಗಳ ನೆಪದಲ್ಲಿ ನೆನಪುಗಳ ಕೆಲವು ತುಣುಕಗಳನ್ನು ಹಂಚಿಕೊಳ್ಳಬೇಕೆನಿಸಿತು. ಹಾಗಾಗಿ ಈಗ ಈ ಬರಹ.

ನಾಗಶ್ರೀ ಒಂದು ಕಾರ್ಯಕ್ರಮದಲ್ಲಿ ಅಚಾನಕ್ಕಾಗಿ ಭೇಟಿಯಾಗಿದ್ದಳು. ನಂತರ ಒಂದೆರೆಡು ಸಲ ಫೋನಿನಲ್ಲಿ ಮಾತಾಡಿದ್ದಳು. ಸುಮಾರು ಸಮಯದ ನಂತರ ಅವಳು ಮತ್ತೆ ಕಂಡಿದ್ದು ಕ್ಯಾನ್ಸರ್ ಆಸ್ಪತ್ರೆಯಲ್ಲಿ. ನನ್ನ ತಂಗಿಯ ಚಿಕಿತ್ಸೆ ಮುಗಿಸಿಕೊಂಡು ಶಂಕರ ಆಸ್ಪತ್ರೆಯಿಂದ ಹೊರಡುತ್ತಿದ್ದಾಗ ಎದುರಿಗಿರುವವಳನ್ನು ಎಲ್ಲೋ ನೋಡಿರುವ ಹಾಗಿದೆಯೆಲ್ಲ ಅಂದುಕೊಂಡೆ. ಅವಳು ಅಷ್ಟು ಬದಲಾಗಿದ್ದಳು. ನನ್ನನ್ನು ಕಂಡೊಡನೆ ಏನನ್ನಿಸಿತೊ- ಅಳತೊಡಗಿದಳು. ನನ್ನ ತಂಗಿ ಅವಳಿಗೆ ಧೈರ್ಯ ಹೇಳಿ ಹೋದಳು. ಅದುವರೆಗೆ ಅವಳ ಅನಾರೋಗ್ಯವನ್ನು ಯಾರ ಬಳಿಯೂ ಅವಳು ಹೇಳಿಕೊಂಡಿರಲಿಲ್ಲ. ಸದ್ಯ ಯಾರಲ್ಲಿ ಹೇಳೋದು ಬೇಡವೆಂದಳು. ವಿಚಿತ್ರವೆಂದರೆ ನನ್ನ ತಂಗಿಗೆ ಬಂದಂತಹ ಅತ್ಯಂತ ವಿರಳವಾದ ಕ್ಯಾನ್ಸರ್ ಪ್ರಭೇದವೇ ಅವಳನ್ನೂ ಕಾಡುತ್ತಿತ್ತು. ಹೊರಡುವ ಮುಂಚೆ ಒಂದು ಅಪ್ಪುಗೆಯಿತ್ತು ಹೊರಟೆ. ಅದೇ ಸಂಜೆ ಅವಳಿಂದ ಒಂದು ಕವನ ಚಿಮ್ಮಿತು. ತನ್ನ ಪ್ರಾಣವನ್ನೇ ಎದುರಿಟ್ಟುಕೊಂಡು ‘ನಾನಿನ್ನೂ ನಿನ್ನನ್ನು ಚಕಿತಗೊಳಿಸುವುದಿದೆ…’ ಎನ್ನುವ ಆ ಕವಿತೆಯಲ್ಲಿ:

ನನ್ನ ಚಲಿಸದ ಕಾಲುಗಳನ್ನು ಹೊತ್ತ ಈ ಭೂಮಿಗೆ
ನನ್ನೊಳಗೆ ನನಗರಿಯದೆ ಸಂಚು ನಡೆಸುತಿರುವ
ನನ್ನ ಮುದ್ದಿನ ಮರಿಕೋಶಗಳಿಗೆ
ಮುಗಿಯದ ನನ್ನ ಹುಚ್ಚಿನ ದಿನಗಳಿಗೆ
ಬೆಂಕಿಯಿಂದ ಬಂದವಳನ್ನು ನೀನು
ಆವರಿಸಿದ ಒಂದು ದಿವ್ಯ ಘಳಿಗೆಗೆ

ಹೀಗೆ ಎಲ್ಲದಕ್ಕು ಕವಿಯ ಎಲ್ಲ ನಿವೇದನೆಯೂ ಕೊನೆಗೆ ‘ಕೇಳು ಓ ನನ್ನ ಹುಂಬ ಪ್ರಾಣವೇ ನಾನಿನ್ನೂ ನಿನ್ನನ್ನು ಚಕಿತಗೊಳಿಸುವುದಿದೆ’ ಎಂದು ಸವಾಲು ಎಸೆಯುತ್ತದೆ. ಅದು ಸ್ಪರ್ಧೆಯಲ್ಲ. ಅಲ್ಲಿ ಗೆಲ್ಲಬೇಕೆಂಬ ಅಥವ ಗೆದ್ದೇ ಗೆಲ್ಲುವೆ ಎನ್ನುವ ಠೇಂಕಾರವಿಲ್ಲ. ಪ್ರಾಣದ ಕೆನ್ನೆ ಚಿವುಟಿ ಕಣ್ಣು ಹೊಡೆದು ಅಣಕಿಸಿದಂತಿದೆ. ಇಂಥ ವಿರಳಾತಿ ವಿರಳ ಕವಿತೆಗಳ ಗುಚ್ಛವೇ ಅವಳ ಬಳಿ ಇತ್ತು…. ಪ್ರಕಟಿಸೋಣ ಅಂದೆ..

ಪ್ರಕಟವಾಗುವುದಕ್ಕೆ ಕೆಲವರ ತೊಡರುಗಳಿದ್ದವು. ಅವರೆಲ್ಲ ಕರಗುವುದಕ್ಕೆ ಕೆಲವು ಸಮಯ ಹಿಡಿಯಿತು. ಕವನ ಸಂಕಲನ ಪ್ರಕಟವಾಗುವ ಹೊತ್ತಿಗೆ ಅವಳ ಆರೋಗ್ಯ ತುಂಬ ಹದಗೆಡುತ್ತ ಬಂದಿತ್ತು. ಸಂಕಲನದ ಪ್ರೂಫ್ ನೋಡಲು ಸಾಧ್ಯವಾಗಿದ್ದು, ಮುಖಪುಟ ಲೇಔಟ್ ಅಂತಿಮಗೊಳಿಸಿದ್ದು, ಕೊನೆಗೆ ಪ್ರಕಟಿತ ಪ್ರತಿಯನ್ನು ಕೈಗೆತ್ತಿಕೊಂಡಿದ್ದು ಆಸ್ಪತ್ರೆಯ ಕೋಣೆಯಲ್ಲೇ. ಮುಖಪುಟವನ್ನು ಅಪಾರನೇ ಮಾಡಬೇಕು. ಮುನ್ನುಡಿಯನ್ನು ರಶೀದರೇ ಬರೆಯಬೇಕು ಅನ್ನುವುದೆಲ್ಲ ತನ್ನ ಕೊನೆಯ ಆಸೆ ಎಂಬಂತೆ ಸಂಭ್ರಮಿಸಿದಳು. ನೀನು ಏನಾದರು ಬರೀ ಎಂದಳು. ಏನನ್ನೂ ಬರೆಯಲಾಗಿರಲಿಲ್ಲ.

‘ಅಲ್ಲಿ ಯಾರೋ ಕಟುಕನೊಬ್ಬ
ಕೈ ಎತ್ತಿ ಆರ್ತನಾಗುತ್ತಿದ್ದಾನೆ
ಇಲ್ಲಿ ಆಕಾಶವು ಜಗ್ಗನೆ ಮಿನುಗುತ್ತಿದೆ’

ಎನ್ನುವಂಥ ಸಾಲುಗಳಿಗೆ ನಾನು ಕನಲಿಹೋಗಿದ್ದೆ. ಇನ್ನು ಬರೆಯುವುದೇನನ್ನು. ನಾಗಶ್ರಿಯ ಕವಿತೆಗಳಲ್ಲಿ ಕಾಮವೂ ದಿವ್ಯ ಆರ್ತ ನಿವೇದನೆಯ ಪಿಸುಮಾತು. ಸಾವನ್ನು ಎದುರುಗೊಳ್ಳುವ ಬಗೆಯೂ ಅದೇ ತೆರನಾದ ಒಂದು ಕಾಮೋದ್ದೀಪ್ತ ಮುಖಾಮುಖಿ. ಅರ್ಥವಾಗುವವರಿಗೆ ಅರ್ಥವಾದೀತು.

ನನ್ನ ತಂಗಿ ತೀರಿಹೋದ ಸಮಯದಲ್ಲಿ ನನ್ನೊಳಗೆ ಉಂಟಾಗುತ್ತಿದ್ದ ಎಲ್ಲ ತಳಮಳಗಳನ್ನು ನಿರ್ಲಿಪ್ತಳಾಗಿ ಕೇಳಿಸಿಕೊಂಡು – ಅದು ಪ್ರಕೃತಿ ಸಹಜವಾದದ್ದು… ಸಾವಿನ ಮೆರವಣಿಗೆಯ ನಡುವೆಯೇ ಬದುಕು ತನ್ನ ಸಂಭ್ರಮದ ದಾರಿಯನ್ನು ಹುಡುಕಿಕೊಳ್ಳುತ್ತದೆ. ಈ ಬದುಕಿನ ಸೌಂದರ್ಯವೇ ಅದು – ಎಂದು ಮಿನುಗುವ ಕಣ್ಣುಗಳಿಂದ ಸಮಾಧಾನ ಪಡಿಸುತ್ತಿದ್ದಳು.

ಏನಾಯಿತೋ ಏನೋ… ಅಲ್ಲಿವರಗೆ ಸಾವನ್ನು ಸ್ವೀಕರಿಸುವ ನೇವರಿಸುವ ತೆರನಾಗಿದ್ದವಳು ಇದ್ದಕ್ಕಿದ್ದ ಹಾಗೆ ತಾನು ಬದುಕಲೇಬೇಕೆಂಬ ಹಠಕ್ಕೆ ತಿರುಗಿಕೊಂಡಳು. ಬಹುಶಃ ತಾನಿನ್ನು ಬದುಕುವುದಿಲ್ಲ ಎನ್ನುವ ಅನುಮಾನ ಮೂಡಿರಬೇಕು. ಈಗ ಅನುಭವಿಸುತ್ತಿರುವುದಕ್ಕಿಂತ ನೂರು ಪಟ್ಟು ಹೆಚ್ಚು ನೋವನ್ನು ಅನುಭವಿಸಲು ಸಿದ್ಧಳಿದ್ದೇನೆ; ನಾನು ಬದುಕಬೇಕು ಅನ್ನುತ್ತಿದ್ದಳು. ಸಂಕಲನದ ಕೊನೆ ಸಾಲುಗಳು ಹೀಗಿವೆ:

ಬೆಳಕು ಕ್ಷೀಣಿಸುತಿದೆ
ಕತ್ತಲು ಬೆಳಗುತಿದೆ
ತಾರೆಗಳು ಪೊರೆಯುತಿದೆ
ಶಬ್ದಗಳು ಮಾತಾಗುತಿದೆ
ನೀನು ರಾತ್ರಿಯ ಕೊಳದ ಹಾಗಿರುವೆ
ಇನ್ನೂ ಬೆಳಗಾಗಲಿಲ್ಲ
ಬೆಳಗೇ ಇಲ್ಲದ ಈ ಇರುಳು
ಮುಗಿಯುವುದೂ ಇಲ್ಲ

ಬದುಕು ನಿರ್ಲಿಪ್ತವಾಗಿತ್ತು. ಅವಳ ಹಠ ಅಹವಾಲುಗಳನ್ನು ಕೇಳಿಸಿಕೊಳ್ಳದಂತಹ ನಿಷ್ಕರುಣಿಯಾಗಿತ್ತು. ಅದೇ ಅದರ ಸೌಂದರ್ಯವೇನೋ. ಆದರೂ ಅವಳ ಹಠ ಸೋಲಲಿಲ್ಲ. ಅವಳ ಕವಿತೆಗಳ ಮೂಲಕ ಇಂದಿಗೂ ಎಂದಿಗೂ – ತಾರೆಯ ಬೆಳಕಿನ ಪೊರೆಯುವಿಕೆಯೇ ಸಾಕು ಈ ಬದುಕಿಗೆ – ಎನ್ನುವವರೊಳಗೆ ಜೀವಂತವಾಗಿರುತ್ತಾಳೆ. ಹುಂಬ ಪ್ರಾಣಗಳನ್ನು ಚಕಿತಗೊಳಿಸುತ್ತಲೇ ಇರುತ್ತಾಳೆ.

About The Author

ವಿಕ್ರಂ ಹತ್ವಾರ್

ಕವಿ, ಕಥೆಗಾರ. ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್. ಊರು ಕುಂದಾಪುರ. ಇರುವುದು ಬೆಂಗಳೂರು. `ಜೀರೋ ಮತ್ತು ಒಂದು' ಇವರಿಗೆ ಹೆಸರು ತಂದುಕೊಟ್ಟ ಕಥಾಸಂಕಲನ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ