ಕನಿಷ್ಟ ಎರಡು ವಾರಗಳ ಹಿಂದಿನಿಂದ ಕೆಲಸ ಆರಂಭಿಸಿರುತ್ತಿದ್ದ ಅಮ್ಮ, ದೀಪಾವಳಿ ಬಟ್ಟೆ ಶಾಪಿಂಗಿಗೆ ಬಂದಿದ್ದು ಕಡಿಮೆಯೇ. ಅಕ್ಕ-ನಾನು ಆಯ್ದ ಬಟ್ಟೆಗಳು ಅವರಿಗೆ ಯಾವಾಗಲೂ ಖುಷಿಯೇ. ಹಾಗಾಗಿ ನೀವೇ ಆರಿಸಿತಂದುಬಿಡಿ ಅಂತ ನಮ್ಮೆಲ್ಲರನ್ನೂ ಕಳಿಸಿಬಿಡುತ್ತಿದ್ದರು. ಹಾಗಾಗಿ ನಮ್ಮದೆಲ್ಲ ಬಟ್ಟೆ ಕೊಂಡಾದ ಮೇಲೆ, ಅಮ್ಮನಿಗೆಂದು ಚಂದದ ಸೀರೆ ಆರಿಸುವ ಜವಾಬ್ದಾರಿ ನಮ್ಮಗಳ ಮೇಲಿರುತ್ತಿತ್ತು. ಅಪ್ಪನೂ, ನಾವೂ ಎಲ್ಲರೂ ಸೇರಿ ಅಮ್ಮನಿಗೆ ಒಪ್ಪಬಹುದಾದ ಸೀರೆಯನ್ನು ಬಹಳ ಕುತೂಹಲದಿಂದ ಆರಿಸುತ್ತಿದ್ದೆವು. ಮತ್ತೆ ನಾವು ಆರಿಸಿ ತಂದ ಬಟ್ಟೆಯನ್ನು ಅಮ್ಮ ಪ್ರೀತಿಯಿಂದ ತನ್ನ ಲಕ್ಷ್ಮಿಗೆ ಉಡಿಸಿ, ಹಬ್ಬ ಕಳೆದ ನಂತರ ಅದನ್ನು ಉಡುತ್ತಿದ್ದರು.
ದೀಪಾವಳಿಯ ಆಚರಣೆಯ ಕುರಿತು ರೂಪಶ್ರೀ ಕಲ್ಲಿಗನೂರ್ ಬರಹ
ಎರಡು ವಾರಗಳ ಹಿಂದೆ ಅಮ್ಮನಿಗೆ ಕಾಲ್ ಮಾಡಿ, ಈ ಸಲ ನಮ್ಮಿಬ್ಬರಿಗೂ ಜೋರು ಕೆಲಸಗಳಿವೆ. ಹಾಗಾಗಿ ಈ ಸಲ ದೀಪಾವಳಿಗೆ ಬರಲ್ಲ ಅಂತ ಗಟ್ಟಿಮನಸ್ಸಿನಿಂದ ಹೇಳಿದ್ದೆ. ಯಾವ ಕಾರಣಕ್ಕೂ ದೀಪಾವಳಿ ಹಬ್ಬವನ್ನು ಮಿಸ್ ಮಾಡಿಕೊಳ್ಳಲು ನಾನು ಸಿದ್ಧಳಿರುವವಳಲ್ಲ ಎಂದು ಅಮ್ಮನಿಗೆ ಗೊತ್ತಿರುವುದರಿಂದಲೇ, ಹೀಗೆ ನಾನಾಗಲೇ ಹೇಳಿದ್ದು, ಯಾವುದೋ ಕಾರಣಕ್ಕಿರಬೇಕು ಎಂದುಕೊಂಡು, ಜಾಸ್ತಿ ತಲೆಕೆಡಿಸಿಕೊಳ್ಳಬೇಡ. ಹಬ್ಬ ಪ್ರತೀ ವರ್ಷ ಬರತ್ತೆ. ಕೆಲಸದ ಸ್ಟ್ರೆಸ್ ಮಾಡಿಕೊಳ್ಳಬೇಡ. ಆರಾಮಾಗಿರು. ಮುಂದಿನಸಲ ಬರುವಿಯಂತೆ ಅಂತ ಅವರೂ ಅಷ್ಟೇ ಆರಾಮಾಗಿ ಹೇಳಿದ್ದರು. ಆದರೆ ಹಾಗೆ ಹೇಳಿದ ನಾನಂತೂ ಒಳಗೆ ಚಡಪಡಿಸುತ್ತಿದ್ದೆ. ಯಾಕೆಂದರೆ ದೀಪಾವಳಿ ಎಂದರೆ ನನಗೆ ಮೊದಲಿನಿಂದಲೂ ಬಹಳ ಪ್ರೀತಿಯ ಹಬ್ಬ. ನಮ್ಮನೆಯ ದೊಡ್ಡ ಹಬ್ಬ.
ಬೆಂಗಳೂರಿನಲ್ಲಿ ದೀಪಾವಳಿಯೆಂದರೆ ಬರೀ ಕಿವಿ ತಮಟೆ ಹರಿದುಹೋಗುವಂಥ ಪಟಾಕಿ ಹಾರಿಸುವುದಷ್ಟೇ… ಬಿಟ್ಟರೆ ಕಪಾಟಿನ ತುಂಬ ಬಟ್ಟೆ ಬೇರೆ ಹೊಸ ಬಟ್ಟೆ ತುಂಬಿದ್ದರೂ, ಹಬ್ಬದ ನೆನಪಿಗೆ ಮತ್ತೊಂದು ಜೋರು ಶಾಪಿಂಗ್ ಮಾಡಿ, ಹೊಸ ಬಟ್ಟೆ ಉಟ್ಟುಕೊಂಡು, ದೀಪ ಹಚ್ಚಿದರೆ ಅಲ್ಲಿಗೆ ದೀಪಾವಳಿ ಹಬ್ಬ ಮುಗಿಯಿತು. ಆದರೆ ಉತ್ತರ ಕರ್ನಾಟಕ ಹಾಗೂ ತಮಿಳುನಾಡಿನ ಕಡೆ ಇದರ ಆಚರಣೆಗಳು ಬೇರೆ ಬೇರೆ ರೀತಿಯಲ್ಲೇ ಇವೆ. ಉತ್ತರ ಕರ್ನಾಟಕದ ಕಡೆಯಲ್ಲೆಲ್ಲ ಲಕ್ಷ್ಮಿ ಕೂರಿಸುವುದು ಮುಖ್ಯ ಆಚರಣೆಯಾದರೆ, ತಮಿಳುನಾಡಿನ ಕಡೆ ನೀರು ತುಂಬುವ ಹಬ್ಬವನ್ನು ಮಾಡುತ್ತಾರೆ.
ನಮ್ಮನೆಯ ದೀಪಾವಳಿ
ನಮ್ಮನೆಯ ದೀಪಾವಳಿಯಲ್ಲಿ ಲಕ್ಷ್ಮೀ ಕೂರಿಸೋದೆ ಈ ಹಬ್ಬದಾಚರಣೆಯ ಮುಖ್ಯ ಭಾಗ. ಅಪ್ಪ-ಅಮ್ಮ ಇಬ್ಬರೂ ಮಹಾನ್ ದೈವಭಕ್ತರಲ್ಲದಿದ್ದರೂ, ಅಮ್ಮನಿಗೇನೋ ಲಕ್ಷ್ಮೀ ಕೂರಿಸುವುದೆಂದರೆ, ಒಂಚೂರು ಭಕ್ತಿ, ಶ್ರದ್ಧೆ ಹಾಗೂ ಸಾಕಷ್ಟು ಸಡಗರಗಳ ಮಿಶ್ರಣದಂತೆ ಕಾಣುತ್ತದೆ ನನಗೆ. ಅಪ್ಪನ ನಾಸ್ತಿಕತೆ ನಮಗೂ ಇದೆ. ಹಾಗಾಗಿ ನಾವು ನಮಗಾಗಿ ಅಲ್ಲದಿದ್ದರೂ, ಆಚರಣೆಯ ಕಾರಣಕ್ಕೋ, ಅಮ್ಮನ ಸಂಭ್ರಮಕ್ಕೋ ಜೊತೆಯಾಗುತ್ತೇವಷ್ಟೇ.
ನಾವೆಲ್ಲ ಬೆಂಗಳೂರೆಂಬೋ ಮಹಾನಗರಕ್ಕೆ ಸೇರುವ ಮುಂಚೆಯೇ ನಮ್ಮ ಮನೆಯಲ್ಲಿ ಈ ಹಬ್ಬದ ಆಚರಣೆ ಶುರುವಾಗಿತ್ತು. ನಾವು ತೀರಾ ಚಿಕ್ಕವರಾಗಿದ್ದಾಗ ಹೇಗೆ ಮಾಡುತ್ತಿದ್ದರೋ ನೆನಪಿಲ್ಲ. ಆದರೆ ಬೆಂಗಳೂರಿಗೆ ಬಂದನಂತರ, ಅಲ್ಲಿನ ವರಮಹಾಲಕ್ಷ್ಮೀ ಹಬ್ಬದ ಆಚರಣೆಯೂ, ನಮ್ಮನೆಯ ಲಕ್ಷ್ಮಿಯ ಮೇಲೆ ಚೂರು ಪ್ರಭಾವ ಬೀರಿ, ಆಚರಣೆಯಲ್ಲಿ ಚೂರು ಹಾಗೆಹೀಗೆ ಆಗಿರಬಹುದೆನ್ನಿಸುತ್ತೆ ನನಗೆ.
ಹಬ್ಬದ ದಿನಗಳು ಹತ್ತಿರ ಬಂದಂತೆ, ಮನೆ ಸ್ವಚ್ಛತಾ ಕಾರ್ಯ ಭಾರೀ ರಭಸದಲ್ಲಿ ಶುರುವಾಗುತ್ತಿತ್ತು… ಮನೆಯ ಇಂಚಿಂಚೂ ಜಾಗವನ್ನು ಗುಡಿಸಿ ತೊಳೆದು, ಚಂದಗಾಣಿಸುವಷ್ಟರಲ್ಲಿ ನಮ್ಮೆಲ್ಲರ ಸೊಂಟ ಮುರಿದುಬೀಳುತ್ತಿತ್ತು. ಇದೆಲ್ಲ ಒಂದು ದಿನದ ಕೆಲಸವಂತೂ ಅಲ್ಲವೇ ಅಲ್ಲ. ಕನಿಷ್ಠ ಒಂದು ವಾರವಾರದೂ ಈ ಸ್ವಚ್ಛತಾ ಕಾರ್ಯ ನಡೆಯುತ್ತಿತ್ತು. ಹಾಗಾಗಿ ಹಬ್ಬದ ಜೊತೆಗೆ ಬರುವ ಕೆಲಸಗಳನ್ನು ಮನಸಾರೆ ಶಪಿಸುತ್ತಲೇ, ಕೆಲಸಗಳನ್ನು ಮಾಡಿ ಮುಗಿಸುತ್ತಿದ್ದೆವು. ಹಬ್ಬಕ್ಕಾಗಿ ಅಲ್ಲವಾದರೂ ಅಮ್ಮ ಒಬ್ಬರಿಗೇ ಎಲ್ಲವೂ ಕಷ್ಟಸಾಧ್ಯ ಅನ್ನುವ ಕಾರಣಕ್ಕೇ ಕೆಲಸಗಳಿವೆ ನಾವು ಕೈಜೋಡಿಸುತ್ತಿದ್ದದ್ದು.
ಹೀಗೆ ವಾರವೆಲ್ಲ ಮನೆ ಸ್ವಚ್ಛ ಮಾಡಿಮಾಡಿ ಸಾಕಾಗಿರುತ್ತಿದ್ದ ನಾವು, ಹಬ್ಬದ ಬಟ್ಟೆ ಶಾಪಿಂಗ್ ಮಾಡುತ್ತಿದ್ದುದು, ಹಬ್ಬದ ಹಿಂದಿನ ದಿನವೇ. ಮಾಡಿಮಾಡಿ ಮೈ-ಕೈಯೆಲ್ಲ ಎಷ್ಟೇ ನೋವಾಗಿದ್ದರೂ ಬಟ್ಟೆಯ ಶಾಪಿಂಗ್ ಎಂದಕೂಡಲೇ, ಅದೆಲ್ಲ ಮರೆತುಹೋಗಿ ಎಲ್ಲಿಲ್ಲದ ಶಕ್ತಿ, ಉತ್ಸಾಸ ನಮ್ಮೊಳಗೆ ಬಂದುಬಿಡುತ್ತಿತ್ತು. (ನನಗೇ ಆ ಸಂಭ್ರಮ ಹೆಚ್ಚು ಅನ್ನಿಸುತ್ತೆ) ಅದರಲ್ಲೂ ನನಗೇಕೋ ಯಾವಾಗ ಬಟ್ಟೆ ಕೊಂಡರೂ, ಒಂದು ಕೊಳ್ಳುವ ಜಾಗದಲ್ಲಿ, ಎರಡು ಸಿಕ್ಕಿಬಿಡುತ್ತಿತ್ತು. ಬೇಕೆಂದೇ ಪ್ಲಾನ್ ಮಾಡದಿದ್ದರೂ, ಯಾವುದೋ ಮಾಯಕದಲ್ಲೆಂಬಂತೆ ನನಗೆ ಯಾವಾಗಲೂ ಎರಡು ಬಟ್ಟೆಗಳ ಭಾಗ್ಯ ದೊರಕುತ್ತಿತ್ತು. ಹಾಗಂತ ಅಕ್ಕನಿಗೇನೂ ಅದರ ಬಗ್ಗೆ ಬೇಸರವಾಗುತ್ತಿರಲಿಲ್ಲ. ನಾನು ಚಂದಚಂದ ಬಟ್ಟೆ ತೊಟ್ಟಷ್ಟೂ ಅವಳಿಗೆ ಖುಷಿಯೇ ಹಾಗಾಗಿ ನನಗೆ ಇನ್ನೂ ಖುಷಿ.
ಕನಿಷ್ಟ ಎರಡು ವಾರಗಳ ಹಿಂದಿನಿಂದ ಕೆಲಸ ಆರಂಭಿಸಿರುತ್ತಿದ್ದ ಅಮ್ಮ, ದೀಪಾವಳಿ ಬಟ್ಟೆ ಶಾಪಿಂಗಿಗೆ ಬಂದಿದ್ದು ಕಡಿಮೆಯೇ. ಅಕ್ಕ-ನಾನು ಆಯ್ದ ಬಟ್ಟೆಗಳು ಅವರಿಗೆ ಯಾವಾಗಲೂ ಖುಷಿಯೇ. ಹಾಗಾಗಿ ನೀವೇ ಆರಿಸಿತಂದುಬಿಡಿ ಅಂತ ನಮ್ಮೆಲ್ಲರನ್ನೂ ಕಳಿಸಿಬಿಡುತ್ತಿದ್ದರು. ಹಾಗಾಗಿ ನಮ್ಮದೆಲ್ಲ ಬಟ್ಟೆ ಕೊಂಡಾದ ಮೇಲೆ, ಅಮ್ಮನಿಗೆಂದು ಚಂದದ ಸೀರೆ ಆರಿಸುವ ಜವಾಬ್ದಾರಿ ನಮ್ಮಗಳ ಮೇಲಿರುತ್ತಿತ್ತು. ಅಪ್ಪನೂ, ನಾವೂ ಎಲ್ಲರೂ ಸೇರಿ ಅಮ್ಮನಿಗೆ ಒಪ್ಪಬಹುದಾದ ಸೀರೆಯನ್ನು ಬಹಳ ಕುತೂಹಲದಿಂದ ಆರಿಸುತ್ತಿದ್ದೆವು. ಮತ್ತೆ ನಾವು ಆರಿಸಿ ತಂದ ಬಟ್ಟೆಯನ್ನು ಅಮ್ಮ ಪ್ರೀತಿಯಿಂದ ತನ್ನ ಲಕ್ಷ್ಮಿಗೆ ಉಡಿಸಿ, ಹಬ್ಬ ಕಳೆದ ನಂತರ ಅದನ್ನು ಉಡುತ್ತಿದ್ದರು.
ನಮ್ಮನೆ ಲಕ್ಷ್ಮಿ ಕೂರಿಸುವ ವಿಧಾನ
ಒಂದು ಚೊಂಬು ಅಥವಾ ಪುಟ್ಟ ತಾಮ್ರದ ಬಿಂದಿಗೆಯಲ್ಲಿ ಕಂಠಮಟ್ಟದವರೆಗೂ ನೀರು ತುಂಬಿ, ಅದಕ್ಕೆ ಅಕ್ಕಿ, ನಾಣ್ಯ, ಖರ್ಜೂರ, ಅಡಿಕೆ, ಗೋಡಂಬಿ, ಬಾದಾಮಿ, ಅರಿಶಿನದ ಕೊಂಡು-ಕುಂಕುಮಗಳನ್ನು ಹಾಕಿ, ಮೇಲೆ ಐದು ವೀಳ್ಯದೆಲೆಗಳನ್ನು ಇಟ್ಟು ಅದರ ಮೇಲೆ ತೆಂಗಿನಕಾಯಿಯನ್ನಿಡುತ್ತಾರೆ. ನಂತರ ಆ ಬಿಂದಿಗೆಗೆ ಸೀರೆಯುಡಿಸುತ್ತಾರೆ. ಅದೇ ತೆಂಗಿನಕಾಯಿಗೆ, ಬೆಳ್ಳಿಯ ಲಕ್ಷ್ಮೀ ಮುಖವಾಡವನ್ನು ಇಟ್ಟು, ಸರಿಯಾಗಿ ಬಿಗಿದು ಕಟ್ಟುತ್ತಾರೆ. ಆನಂತರ ಅದಕ್ಕೆ ಅಲಂಕಾರ ಶುರು… ಥೇಟು ಮನೆಯ ಮಗಳಿಗೆ ಅಲಂಕಾರ ಮಾಡಿದಂತೆ, ಹಣೆಗೆ ಕುಂಕುಮವಿಟ್ಟು, ಕೆನ್ನೆಗೆ ಅರಿಶಿನ ಬಳಿದು, ತುಟಿಗಳಿಗೆ ಚೂರು ಕೆಂಪು ಹಚ್ಚಿ, ಹುಬ್ಬು ತೀಡಿದ ಮೇಲೆ, ಅವಳಿಗಂತಲೇ ಎತ್ತಿಟ್ಟ ಆಭರಣಗಳನ್ನು ಒಂದೊಂದೇ ಏರಿಸುತ್ತಾರೆ. ಹಾಗೆ ಮಾಡುವಾಗ, ಆಗಾಗ ದೇವಿ ಮೂರ್ತಿಯಿಂದ ಚೂರು ಹಿಂದೆ ಹೇಗೆ ಕಾಣುತ್ತಿದೆ ಅಲಂಕಾರ ಎಂದು ಒಂದು ಹತ್ತು ಸಲವಾದರೂ ಕುಲಂಕೂಷವಾಗಿ ಗಮನಿಸಿ, ಮನೆಯವರನ್ನೂ ಒಂದು ಮಾತು ಕೇಳಿನೋಡಿ, ಎಲ್ಲರೂ ಓಕೆ ಎಂದು ಸಮಾಧಾನವಾದ ನಂತರವೇ ಪೂಜೆಗೆ ಅಣಿಯಾಗೋದು.
ಕೆಲಸದ ಹಂಚಿಕೆಗಳು
ನಾನು ಮತ್ತೆ ಅಕ್ಕ, ಕಾಲೇಜು ಮೆಟ್ಟಿಲೇರುವ ಮುನ್ನವೇ ಈ ಹಬ್ಬದ ಸಾಕಷ್ಟು ಕೆಲಗಳನ್ನು ಮಾಡುತ್ತಿದ್ದೆವಾದರೂ, ಕಾಲೇಜು ಆರಂಭವಾದ ವರ್ಷಗಳಲ್ಲೇ ಅನ್ನಿಸುತ್ತೆ, ಅಮ್ಮ, ಲಕ್ಷ್ಮಿ ಪೂಜೆಯ ಜವಾಬ್ದಾರಿಯನ್ನು ಅಕ್ಕನಿಗೆ ವಹಿಸಿಬಿಟ್ಟರು. ಇಲ್ಲವಾದರೆ ಪೂಜೆ ಹಾಗೂ ಅಡುಗೆ ಎರಡೂ ಅಮ್ಮನ ಮೇಲೆಯೇ ಇರುತ್ತಿತ್ತು. ಎರಡೂ ಕೆಲಸ ಒಟ್ಟಿಗೆ ನಡೆದರೆ ಮಧ್ಯಾಹ್ನ ಕನಿಷ್ಟ ಎರಡು ಗಂಟೆಗಾದರೂ ಹೊಟ್ಟೆಗೆ ಊಟ ಬೀಳುತ್ತದೆ. ಇಲ್ಲವಾದರೆ ಒಬ್ಬರೆ ಹೇಗೆ ಎಲ್ಲವನ್ನೂ ನಿಭಾಯಿಸೋದು! ಹಾಗಾಗಿ ಅಕ್ಕ ಲಕ್ಷ್ಮಿಯನ್ನು ಸಿದ್ಧಮಾಡುವ ಜವಾಬ್ದಾರಿ ಹೊತ್ತನಂತರದಿಂದ ಖಂಡಿತವಾಗಿ ಅಮ್ಮನಿಗೆ ಹಬ್ಬ ಚೂರು ಹಗುರವೆನ್ನಿಸಿರಬೇಕು.
ವರ್ಷದಲ್ಲಿ ಯಾವ ದಿನವೂ ದೇವರ ಮನೆಯ ಕಡೆ ನೋಡಿಯೂ ಗೊತ್ತಿಲ್ಲದ ಅಕ್ಕ, ಬಹಳ ಶ್ರದ್ಧೆಯಿಂದ, ದೀಪಾವಳಿಯ ದಿನ ಬೆಳಗ್ಗೆ ಬೇಗನೆದ್ದು, ಸ್ನಾನ ಮಾಡಿ, ಲಕ್ಷ್ಮಿಯನ್ನು ಸಿದ್ಧಪಡಿಸುವ ರೀತಿ ನನಗೆ ಯಾವಾಗಲೂ ಅಚ್ಚರಿ. ಯಾಕೆಂದರೆ ಲಕ್ಷ್ಮಿ ಕೂರಿಸುವ ಇಡೀ ಕೆಲಸದ ನಂತರ ಪೂಜೆಯನ್ನು ಅವಳು ಮಾಡೋದಿಲ್ಲ. ಅಮ್ಮನಿಗೋ ಅಥವಾ ನನಗೋ ಆ ಜವಾಬ್ದಾರಿಯನ್ನು ನನಗೆ ದಾಟಿಸಿ, ಅಡುಗೆ ಮನೆಯ ಸಹಾಯಕ್ಕೆ ಇಳಿಯುತ್ತಾಳೆ.
ಈ ಹಬ್ಬದಲ್ಲಿ ಮೊದಲಿನಿಂದಲೂ ನಾನು ಹಂಚಿಕೊಂಡ ಜವಾಬ್ದಾರಿ ಎಂದರೆ ಮನೆಯನ್ನು ಚಂದಗಾಣಿಸುವ ಕೆಲಸ. ಹೊರಗೆ ಒಳಗೆ ತೋರಣ, ಹೂಮಾಲೆ ಕಟ್ಟುವುದು, ರಂಗೋಲಿ ಹಾಕುವುದು, ಸಾಲುಸಾಲು ದೀಪ ಹಚ್ಚುವುದು, ಜೊತೆಗೆ ಆ ಕಡೆ ಅಮ್ಮನಿಗೆ ಅಡುಗೆಯಲ್ಲೂ ಮತ್ತು ಈ ಕಡೆ ಅಕ್ಕನಿಗೆ ಪೂಜೆಗೂ ಸ್ವಸಹಾಯ ಮಾಡುವುದು ಯಾವಾಗಲೂ ನನ್ನ ಜವಾಬ್ದಾರಿ. ಅದರಲ್ಲೂ ಸಂಜೆಗೆ ಮನೆಯ ಒಳಗೂ ಹೊರಗೂ ನನಗೆ ಸಾಕೆನಿಸುವಷ್ಟು ಸಾಲುಸಾಲು ದೀಪಗಳನ್ನು ಹಚ್ಚಿ, ಹೂವಿನ ರಂಗೋಲಿ ಮಾಡುವುದು ನನಗೆ ಎಲ್ಲಿಲ್ಲದ ಸಂಭ್ರಮ. ಬೆಳಗ್ಗಿನಿಂದ ಸಾಕಷ್ಟು ಕೆಲಸ ಮಾಡಿ ಠುಸ್ ಪಟಾಕಿಯಂತೆ ಅಮ್ಮನೂ ಅಕ್ಕನೂ ಮಲಗಿರುವಾಗ, ನನಗೆ ಸಂಜೆ ಹೊಸ ಬಟ್ಟೆಯುಟ್ಟು, ಕೈಯಲ್ಲಿ ದೀಪ ಹಿಡಿದು ಫೋಟೋ ಕ್ಲಿಕ್ಕಿಸಿಕೊಳ್ಳಲು ಎಲ್ಲಿಲ್ಲದ ಹುರುಪು. ಹಾಗಾಗಿ ಹಾಗೋ ಹೀಗೋ ಎಲ್ಲರನ್ನೂ ಪುಸಲಾಯಿಸಿ, ಎಬ್ಬಿಸಿ, ಸಿದ್ಧವಾಗಲು ಪ್ರಚೋದಿಸಿ, ಎಲ್ಲರೂ ಒಟ್ಟಿಗೇ ಸೇರಿ ದೀಪ ಹಚ್ಚಿ, ಒಂದಷ್ಟು ಪಟಾಕಿ ಸಿಡಿಸಿದರೆ ಅಲ್ಲಿಗೆ ನನಗೆ ನೆಮ್ಮದಿ.
ಹಬ್ಬದಾಚರಣೆಯಲ್ಲಿ ತಂದ ಬದಲಾವಣೆಗಳು
ಮೊದಲೆಲ್ಲ ದೀಪಾವಳಿಯ ಮಧ್ಯಾಹ್ನದ ಹೊತ್ತಿಗೆ ಅಪ್ಪ ಸಾಕಷ್ಟು ಜನ ಸ್ನೇಹಿತರನ್ನು ಊಟಕ್ಕೆ ಆಹ್ವಾನಿಸುತ್ತಿದ್ದರು. ಕೆಲವೊಮ್ಮೆ ನಾವಂದುಕೊಂಡದ್ದಕ್ಕಿಂತ ಹೆಚ್ಚೇ ಜನರು ಬಂದು, ನಿಭಾಯಿಸೋದು ಬಹಳ ಕಷ್ಟವೆನ್ನಿಸುತ್ತಿತ್ತು. ಅಪ್ಪನಿಗೆ ಅಡುಗೆಮನೆಯ ತಲೆಬಿಸಿಗಳು ಗೊತ್ತಿರುವುದಿಲ್ಲ. ಹಾಗಾಗಿ ನಾನೂ ಹಾಗೂ ಅಕ್ಕ ಸಣ್ಣಪುಟ್ಟ ಸಹಾಯ ಮಾಡುತ್ತಿದ್ದೆವಾದರೂ, ಅಮ್ಮ ಒಬ್ಬರೇ ಮುಖ್ಯ ಕೆಲಸಗಳನ್ನೆಲ್ಲ ಮಾಡುತ್ತಿದ್ದರಿಂದ ಹೊರೆಯೆಲ್ಲ ಅವರ ಮೇಲೆಯೇ ಬೀಳುತ್ತಿತ್ತು. ಆಗೆಲ್ಲ ಅಮ್ಮ ಅದು ಹೇಗೆ ೫೦-೬೦ ಜನರನ್ನು ನಿಭಾಯಿಸಿದ್ದರೋ… ನೆನೆಸಿಕೊಂಡರೇ ಅಚ್ಚರಿ ಅನ್ನಿಸುತ್ತೆ. ಹಬ್ಬದ ನೆಪದಲ್ಲಿ ಇಷ್ಟೆಲ್ಲ ದಣಿದುಕೊಂಡು ಹಬ್ಬ ಆಚರಿಸುವ ಯಾವ ಅವಶ್ಯಕತೆಯೂ ಇಲ್ಲ ಎಂದು ನಮಗೆ ಅರ್ಥವಾಗತೊಡಗಿದ್ದೇ, ಮೆಲ್ಲಗೇ ಆ ಸಂಪ್ರದಾಯವನ್ನು ನಿಲ್ಲಿಸಿಬಿಟ್ಟೆವು. ಅಲ್ಲದೇ ಆಗೆಲ್ಲ ಅಮ್ಮ ಮೂರು ದಿನಗಳ ಕಾಲ ರಾತ್ರಿ ದೇವಿಯ ಮುಂದೆ ಹಚ್ಚಿಟ್ಟ ದೀಪ ಆರಬಾರದು ಎಂದು, ರಾತ್ರಿ ಆಗಾಗ ಎದ್ದು ದೀಪಗಳಿಗೆಲ್ಲ ಎಣ್ಣೆ ಹಾಕುತ್ತಿದ್ದರು. ಮೊದಲೇ ವಾರಗಟ್ಟಲೇ ಮನೆ ಸ್ವಚ್ಛ ಮಾಡಿ ಮಾಡಿ ಹೈರಾಣಾಗಿರುತ್ತಿದ್ದ ಅವರು ಮತ್ತಷ್ಟೂ ದಣಿಯುವುದನ್ನು ನೋಡಲಾಗದೇ, ಸಾಕಷ್ಟು ಸಲ ಮನವೊಲಿಸಿ, ಮೆಲ್ಲಗೇ ಆ ಅಭ್ಯಾಸವನ್ನೂ ನಿಲ್ಲಿಸಿಬಿಟ್ಟೆವು. ಆಗಿನಿಂದ ಹಬ್ಬ ಎನ್ನುವುದು ಅಷ್ಟು ಹೊರೆಯೆನ್ನಿಸುತ್ತಿಲ್ಲ. ಈಗೇನಿದ್ದರೂ ಹಿಂದಿನ ದಿನವೇ ಎಲ್ಲರೂ ಕೆಲಸಗಳನ್ನು ಹಂಚಿಕೊಂಡು ಅರ್ಧಕೆಲಸ ಮಾಡಿಟ್ಟುಕೊಳ್ಳುವುದರಿಂದ ಹಬ್ಬದ ದಿನ ಹೆಚ್ಚು ಆಯಾಸವೆನ್ನಿಸುವುದಿಲ್ಲ. ಹಾಗಾಗಿ ಊರಿಗೆ ಹಬ್ಬಕ್ಕೆ ಬರೋದು ಡೌಟ್ ಎಂದಿದ್ದ ನಾನೂ, ಕೆಲಸಗಳನ್ನೆಲ್ಲ ಬದಿಗಿಟ್ಟು ಊರಿಗೆ ಬಂದು ಅರ್ಧ ಕೆಲಸಗಳನ್ನೆಲ್ಲ ಮಾಡಿ ಕುಳಿತಿದ್ದೇನೆ. ಇನ್ನೇನು ಪೂಜೆ ಮಾಡಿ, ಆಗಲೇ ಸಿದ್ಧವಿರುವ ಕಡುಬು ತಿನ್ನಬೇಕಷ್ಟೇ…
ಮತ್ತೆ ನಿಮ್ಮನೆಯ ದೀಪಾವಳಿ ಹಬ್ಬ ಹೇಗೆ ನಡೆಯುತ್ತಿದೆ…!
(ಫೋಟೋ ಹಕ್ಕುಗಳು: ಲೇಖಕರವು)

ಚಿತ್ರ ಕಲಾವಿದೆ, ಕವಯತ್ರಿ ಹಾಗೂ ಪತ್ರಕರ್ತೆ. ಚಿತ್ರಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ‘ಕಾಡೊಳಗ ಕಳದಾವು ಮಕ್ಕಾಳು’ ಮಕ್ಕಳ ನಾಟಕ . ‘ಚಿತ್ತ ಭಿತ್ತಿ’ ವಿಭಾ ಸಾಹಿತ್ಯ ಪ್ರಶಸ್ತಿ ಪಡೆದ ಕವನ ಸಂಕಲನ. ಹುಟ್ಟಿದ್ದು ಸವಣೂರಿನಲ್ಲಿ. ಈಗ ಬೆಂಗಳೂರು. ‘ಕೆಂಡಸಂಪಿಗೆ’ ಯಲ್ಲಿ ಸಹಾಯಕ ಸಂಪಾದಕಿ.