ಒಂದು ದಿವಸಕ್ಕೆ ನಾಲ್ಕು ಕೆ.ಜಿ ಅಕ್ಕಿ ಹಾಕಿದರೆ ಎಲ್ಲರ ಹೊಟ್ಟೆ ತುಂಬುವಷ್ಟಾಗುತ್ತದಲ್ಲಾ. ಊರಿಂದ ಅಡುಗೆಯವರನ್ನೊಬ್ಬರನ್ನು ಕರೆತಂದರೆ ಸಮಸ್ಯೆ ಬಗೆಹರಿದಂತೆ. ಹಣ ಹರಿದುಬರುವುದನ್ನು ಬಲಪಡಿಸಿದರೆ, ವ್ಯರ್ಥ ಪೋಲಾಗುವುದು ನಿಂತರೆ ಕಂಪೆನಿ ಉದ್ಧಾರವಾಗದೇ ಏನು? ಈ ಮೂಲಭೂತ ತಿಳುವಳಿಕೆಯೇ ಇಲ್ಲದಿದ್ದರೆ ಕಂಪೆನಿ ನಡೆಸಲು ಖಂಡಿತಾ ಆಗುವುದಿಲ್ಲವೆಂದೆ. ಕಂಪೆನಿ ಕಟ್ಟಬೇಕೆಂಬ ಆಸೆ ಇದ್ದರಷ್ಟೆ ಸಾಲದು, ಅನುಭವಗಳೂ ಬೇಕು ಎಂಬುದು ಅವರಿಗೆ ಅರ್ಥವಾಗುವ ಹೊತ್ತಿಗೆ ಕಂಪೆನಿ ನಷ್ಟದ ಬಹುದೂರದ ಹಾದಿಯನ್ನು ಕ್ರಮಿಸಿಯಾಗಿತ್ತು.
ಕೀರ್ತಿ ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ” ಇಪ್ಪತ್ತೈದನೆಯ ಕಂತು
ಆಗ ನಾಟಕ ನಡೆಯುತ್ತಿರಲಿಲ್ಲ. ಹತ್ತಿಕುಣಿ ಕ್ಯಾಂಪ್ ಮುಗಿದದ್ದಷ್ಟೇ, ಮುಂದಿನ ಊರಿಗೆ ಹೊರಡುವ ತಯಾರಿಯಲ್ಲಿದ್ದೆವು. ಅದೇ ಹೊತ್ತಿಗೆ ಶೇಕ್ ಚಾಂದ್ ಅವರ ಮನೆಯಿಂದ ರಂಜಾನ್ ಹಬ್ಬಕ್ಕೆ ಬರಬೇಕೆಂದು ಪತ್ರವೊಂದು ಬಂದಿತ್ತು. ಅಲ್ಲಿದ್ದವರ ಬಳಿಯೆಲ್ಲ, ‘ರಂಜಾನ್ ಹಬ್ಬಕ್ಕೆ ನಾ ಊರಿಗ್ ಹೋಕೆನ್ರಿ’ ಇದೊಂದೇ ಸಾಲನ್ನು ಹೇಳಿದ್ದೇ ಹೇಳಿದ್ದು. ಯಾಕಿಷ್ಟು ಸಲ ಹೇಳುತ್ತಾರೆ? ಎಂದು ನನ್ನ ತಲೆಗೆ ಹೊಳೆಯಲೇ ಇಲ್ಲ. ನನಗೆ ಆ ಕುರಿತು ಕೇಳಿ ತಿಳಿದುಕೊಳ್ಳುವ ಆಸಕ್ತಿಯೂ ಇರಲಿಲ್ಲವಾದ್ದರಿಂದ ನಿರ್ಲಕ್ಷ್ಯ ತೋರಿದೆ. ಆದರೆ ಅಂದೇ ನನಗೆ ವಿಪರೀತ ತಲೆನೋವು. ಇವತ್ತಿಗೂ ಆ ಬಗೆಯ ತಲೆನೋವು ಬರುವುದಿದೆ. ಆಗ ಹಣೆಗೆ ವಿಕ್ಸ್ ಹಚ್ಚಬೇಕು. ಹೇಗೆಂದರೆ ವಿಭೂತಿ ಬಳಿದುಕೊಳ್ಳುತ್ತಾರಲ್ಲಾ, ಹಣೆ ಪೂರ್ತಿ ಸುಟ್ಟುಹೋಗುವಷ್ಟು ಹಚ್ಚಲೇಬೇಕು. ಸಾಮಾನ್ಯಕ್ಕೆ ಬಗ್ಗುವ ತಲೆನೋವಲ್ಲ! ಅಂದೂ ತಲೆನೋವು, ಜ್ವರದಿಂದ ಒದ್ದಾಡುತ್ತಿದ್ದೆ. ಅಪ್ಪ ವೈದ್ಯರನ್ನು ಕರೆತರಲು ಹೋಗಿದ್ದರು. ಅಂದು ನಾಟಕವೂ ಇದ್ದಿರಲಿಲ್ಲ. ಏನಾಗುತ್ತಿರಬಹುದೆಂಬ ಪ್ರಜ್ಞೆ ಇರದೆ ಮಲಗಿದ್ದೆ. ಶೇಕ್ ಚಾಂದ್ ಅವರು ತಡಮಾಡದೆ, ಸುಡುತ್ತಿದ್ದ ನನ್ನ ತಲೆಯನ್ನು ಎತ್ತಿ ತಮ್ಮ ಮಡಿಲಿಗಿರಿಸಿಕೊಂಡರು. ಹಣೆಯನ್ನು ಒತ್ತುತ್ತಿರುವಾಗ ಜ್ವರ ಏರುತ್ತಿರುವುದು ಅವರ ಗಮನಕ್ಕೆ ಬಂದು, ಕೂಡಲೇ ಹಣೆಯ ಮೇಲೆ ತಣ್ಣೀರು ಬಟ್ಟೆಯನ್ನಿಟ್ಟರು. ಆಗ ಎಚ್ಚರಗೊಂಡೆ. ಆದರೇನು, ತಲೆಯನ್ನೊತ್ತುತ್ತಿದ್ದ ರೀತಿ ಹಿತವೆನಿಸುತ್ತಿತ್ತು! ಹಾಗೆ ಮಡಿಲಿನಲ್ಲಿ ತಲೆಯೊರಗಿಸಿ, ಮತ್ತೆ ನಿದ್ರೆಗೆ ಜಾರಿದೆ.
ವೈದ್ಯರನ್ನು ಕರೆದುಕೊಂಡು ಬಂದು ಮನೆ ಎದುರು ಅಪ್ಪ ಬಂದು ನಿಂತದ್ದೇ, ಹಿಂದುಮುಂದು ನೋಡದೆ ನನ್ನ ತಲೆ ಕೆಳಗಿಟ್ಟು ಆಸಾಮಿ ಹೌಹಾರಿ ದೌಡಾಯಿಸಿದ್ದೇ! ಕೋಣೆಯಿಂದ ಓಡುವುದನ್ನು ನೋಡಿದ ಅಪ್ಪ, ನಾನಿರುವ ಕೋಣೆಯಲ್ಲಿ ಇವನಿಗೇನು ಕೆಲಸ? ಎಂದು ವಿಚಾರಿಸಲಾಗಿ, ಆರೋಗ್ಯ ಹೇಗಿದೆ ಎಂದು ಕೇಳುವುದಕ್ಕೆ ಹೋಗಿದ್ದಾನೆಂಬುದು ತಿಳಿಯಿತು. ಆದರಿದು ಮುಂದೆ ಘಟಿಸಬಹುದಾದ ಅಪಾಯದ ಮುನ್ಸೂಚನೆಯಂತೆಯೂ ಅನಿಸಿತು!
ಅಪ್ಪ ತಡಮಾಡಲಿಲ್ಲ. ಆದ ಒಂದೊಂದೇ ಘಟನೆಯೂ ಅವರ ಮನಸ್ಸನ್ನು ಎಷ್ಟು ಕಂಗಾಲು ಮಾಡಿತ್ತೆಂದರೆ, ಜೀವದ ಮಗಳ ಜೀವವೇ ಆಗಿದ್ದ ಕಂಪೆನಿಗೆ ಉದ್ದಂಡ ನಮಸ್ಕಾರ ಹಾಕಿ ಹೊರಡುವಂತೆ ಮಾಡಿತು. ಊರಿನ ಗೌಡ ಮಾಲಿ ಪಾಟೀಲರು ಊಟಕ್ಕೆ ಕರೆದಿದ್ದಾಗ ನನ್ನನ್ನು ಮದುವೆಯಾಗುತ್ತೇನೆಂದು ಹೇಳಿದ್ದು ಅಪ್ಪನ ಪಾಲಿಗದು ನಿರ್ಲಕ್ಷಿಸುವ ವಿಚಾರ ಆಗಿರಲೇ ಇಲ್ಲ. ಹೇಳಿ ಕೇಳಿ ಊರ ಗೌಡ. ಏನು ಬೇಕಾದರೂ ಮಾಡುವಂತಿದ್ದ. ಮಗಳನ್ನು ಅವರ ಕೈಗೊಪ್ಪಿಸಲು ಅಪ್ಪನಿಗೆ ಧೈರ್ಯವೂ ಅದಕ್ಕಿಂತ ಹೆಚ್ಚಾಗಿ ಇಷ್ಟವಿರಲಿಲ್ಲ. ಅದರೊಂದಿಗೆ ಕಂಪೆನಿಯಲ್ಲಿ ಇದ್ದ ಹೆಣ್ಣು ಮಕ್ಕಳಿಬ್ಬರೂ ಮದುವೆಯಾದವರು. ಮದುವೆಯಾಗದ ಕಲಾವಿದೆಯರನ್ನು ಉಳಿಸಿಕೊಳ್ಳುವುದು ಕಂಪೆನಿಗೂ ಕಷ್ಟಕರವೇ ಆಗಿತ್ತಾಗ. ಕಾಲ ತಂದೊಡ್ಡುವ ಸಂಭವನೀಯತೆಯನ್ನು ಅರಿತಂದಿದ್ದ ಅಪ್ಪನಿಗೆ ಆ ಊರ ಗೌಡನನ್ನು ಎದುರು ಹಾಕಿಕೊಳ್ಳುವಷ್ಟು ಶಕ್ತಿ ಇರಲಿಲ್ಲ. ಹಣ ಬಲ, ಜನ ಬಲ ಎರಡೂ ಇರಲಿಲ್ಲವಲ್ಲಾ! ನಮ್ಮ ಊರಿನಲ್ಲಾದರೆ ಪರಿಚಿತರನ್ನೆಲ್ಲ ಒಟ್ಟುಗೂಡಿಸಿ, ಒಗ್ಗಟ್ಟು ಪ್ರದರ್ಶಿಸಿ, ಅಪಹರಿಸಿಕೊಂಡು ಹೋಗಲು ಬಂದವರಿಗೆ ಏನಾದರೊಂದು ಶಾಸ್ತಿ ಮಾಡಿ ಕಳಿಸಬಹುದಿತ್ತು. ಆದರೆ ಪರವೂರಿನಲ್ಲಿ ನಮ್ಮ ಬೆಂಬಲಕ್ಕೆ ನಿಲ್ಲುವರಾರು?
ಹೆಣ್ಣನ್ನು ಭೌತಿಕ ಸರಕೆಂದು ನೋಡುವ ಕಾಲ ಬದಲಾಗಿದೆ ಎಂದು ಅನಿಸುತ್ತದೆಯಾ? ಇಪ್ಪತ್ತೊಂದನೆಯ ಶತಮಾನದ ಕಾಲುಭಾಗವನ್ನು ಕಳೆದ ಮೇಲೂ ಇಂತಹ ಅಭಿಪ್ರಾಯಗಳು ಬದಲಾಗಿಲ್ಲ. ಇನ್ನು 1960ರ ಕಾಲಕ್ಕೆ ಅದರ ತೀವ್ರತೆ ಎಷ್ಟಿರಬಹುದು? ಪ್ರತೀ ಕಂಪೆನಿಯೂ ಮದುವೆಯಾಗದ ಕಲಾವಿದೆಯರನ್ನು ಉಳಿಸಿಕೊಳ್ಳುವುದಕ್ಕೆ ಮಾಡುತ್ತಿದ್ದ ಹೆಣಗಾಟ ಅಷ್ಟಿಷ್ಟಲ್ಲ. ಕಂಪೆನಿ ಆ ಊರಿನಲ್ಲಿ ಕ್ಯಾಂಪ್ ಮಾಡುತ್ತಿದೆ ಎಂದರೆ ಊರ ಗೌಡನ ಕೃಪಾಕಟಾಕ್ಷವೂ ಬೇಕು. ಯಾವುದೋ ಕಲಾವಿದೆಯ ಅಭಿನಯ ಚೆನ್ನಾಗಿತ್ತು ಎಂದು ಆತನಿಗನಿಸಿದರೆ ಅವಳ ಬದುಕು ಅಂದೇ ಕೊನೆಯಾಗುತ್ತಿತ್ತು. ಅಪಹರಿಸಿಕೊಂಡು ಹೋಗುವುದೆಲ್ಲ ಸಹಜವೆನಿಸಿದ್ದ ಕಾಲವದು. ಹೀಗಾಗಿ ಎರಡು ಮೂರು ದಿನಗಳಾಗುತ್ತಿದ್ದಂತೆ ಕಂಪೆನಿ ಯಾದಗಿರಿಗೆ ಪ್ರಯಾಣ ಬೆಳೆಸಿತು. ಅಪ್ಪನ ಇರಾದೆಯೂ ಆದಷ್ಟು ಬೇಗ ಊರು ಬಿಡುವುದೇ ಆಗಿತ್ತು.
ಆದರೆ ಇಲ್ಲಿನ ಕ್ಯಾಂಪ್ಗೆ ಶ್ರೀಶೈಲದ ಶಿವಣ್ಣನ ಕುಟುಂಬ ಬರಲೇ ಇಲ್ಲ. ಶಿವಣ್ಣನ ಹೆಂಡತಿಯರು ಕನಕ ಮತ್ತೆ ಶಿವಮ್ಮರನ್ನು ಮತ್ತೆ ನೋಡುವ ಸಂದರ್ಭ ಬದುಕಿಗೆ ಎದುರಾಗಲೇ ಇಲ್ಲ. ಅದಕ್ಕೆ ಬದಲಿ ಕಲಾವಿದರ ಅವಶ್ಯಕತೆ ಇತ್ತು. ಹಾಗಾಗಿ ಇಳಕಲ್ಗೆ ಹೋಗಿ ಮೂವರು ಕಲಾವಿದರನ್ನು ಕರೆತಂದರು. ಅದರಲ್ಲಿ ಮುಸ್ಲಿಂ ಗಂಡ ಹೆಂಡತಿಯಿದ್ದರು. ಹೊಸತಾಗಿ ಬಂದ ಅವರಲ್ಲಿ ಶೇಕ್ ಚಾಂದ್ ಅವರು ನನ್ನನ್ನು ಇಷ್ಟಪಡುತ್ತಿದ್ದ ವಿಷಯವನ್ನು ಹೇಳಿಕೊಂಡಿದ್ದರು. ಅವಳಿಗೆ ಇಷ್ಟವಿದೆಯಾ ಎಂದು ಕೇಳಿರಲಿಕ್ಕೂ ಇಲ್ಲ ಅವರು. ‘ನಿಮ್ಮಿಬ್ಬರದೂ ಒಳ್ಳೇ ಜೋಡಿಯಾಗತ್ತೆ. ಮದುವೆಯಾದರೆ ಚೆನ್ನಾಗಿರತ್ತೆ’ ಎಂದಿದ್ದರು. ಶೇಕ್ ಚಾಂದ್ ಅವರು ಮದುವೆಗೆ ಅಡ್ಡಿಯೇ ಅವರ ಅಪ್ಪ ಎಂದುಬಿಟ್ಟರು. ಕೂಲಂಕಷವಾಗಿ ವಿಷಯವನ್ನು ಅವಲೋಕಿಸುತ್ತಿದ್ದ ಆ ಮುಸ್ಲಿಂ ಗಂಡ ಹೆಂಡತಿಯರಲ್ಲಿ ಇನ್ಯಾವ ಮುಚ್ಚುಮರೆಯೆಂದು, ‘ಅವರಪ್ಪ ಹೊನಗೆ ಇದ್ದಂಗ ಅದಾನು. ಮಕ್ಕೊಂಡ್ರೆ ಮಗಳ್ ಎರಡೂ ಕಾಲ್ ಹಿಡ್ದು ಮಕ್ಕೊತಾನ’ ಎಂದು ಸಮಸ್ಯೆಗಳನ್ನು ಹೇಳಿಕೊಂಡರು. ನನ್ನ ಪಡೆಯಲೇಬೇಕೆಂದಿದ್ದ ಅವರ ಹಠ ಅಪ್ಪನೆದುರು ಅವರನ್ನು ಅಸಹಾಯಕರನ್ನಾಗಿಸಿತ್ತು. ಇತ್ತ ತಂದೆಯವರೂ ಹಾಗೆಯೇ ಇದ್ದದ್ದು ಬಿಡಿ. ನನ್ನ ಕಾಲಡಿಯಲ್ಲೇ ಮಲಗುತ್ತಿದ್ದರು. ಸಣ್ಣ ಲೋಪವನ್ನೂ ಅವರು ಸಹಿಸುತ್ತಿರಲಿಲ್ಲ.
ಮಾತಿನ ಮಧ್ಯದಲ್ಲೆಲ್ಲ ಶೇಕ್ ಚಾಂದ್ ಅವರು ತಾನೆಷ್ಟು ನಷ್ಟ ಅನುಭವಿಸುತ್ತಿದ್ದೇನೆ ಎಂದು ಹಲುಬುತ್ತಲೇ ಇರುತ್ತಿದ್ದರು. ಕಾಗೆ ಕೂರುವುದಕ್ಕೂ ಕೋಲು ಮುರಿಯುವುದಕ್ಕೂ ಸಮಯ ಹೊಂದಿದರೆ, ಕಾಗೆಯ ತಪ್ಪೇನಿದೆ ಅಲ್ಲಿ! ಆದ ನಷ್ಟಕ್ಕೆಲ್ಲ ನಾನೇಕೆ ಜವಾಬ್ದಾರಳು? ಈ ಕಲ್ಯಾಣೇಶ್ವರ ನಾಟ್ಯ ಸಂಘ ಮಲ್ಲ(ಭಿ)ಯ ಮಾಲೀಕರಾಗಿದ್ದ ಪೂಜಾರಿಗಳು, ಕುರುಬರಾಗಿದ್ದರು. ಹಾಗೆ ನೋಡಿದರೆ ಊರ ಹೊಲವನ್ನೆಲ್ಲ ಮಾರಿ, ಅವರು ಕಂಪೆನಿ ಕಟ್ಟಿದ್ದು. ನನ್ನೊಬ್ಬಳ ಸಲುವಾಗಿ ಕಂಪೆನಿ ಕಟ್ಟುವ ಅನಿವಾರ್ಯತೆಯೇನೂ ಇರಲಿಲ್ಲ; ನನಗಾಗಿಯೇ ಕಟ್ಟಿರೆಂದು ನಾನು ದುಂಬಾಲುಬಿದ್ದು ಬೇಡಿಕೊಂಡೂ ಇಲ್ಲ. ಕಂಪೆನಿಯ ನಿರ್ಮಾಣದ ಹಿಂದೆ ಅವರವರ ಆಶಯವೇ ಪ್ರಧಾನವಾಗಿತ್ತು.
ಕೇಳುವಷ್ಟು ಕೇಳಿದೆ. ಮಿತಿ ಮೀರುತ್ತಿದೆ ಎನಿಸಿದಾಗ, ಕಂಪೆನಿಯ ಅಶಿಸ್ತಿನ ಕುರಿತು ತಿಳಿಸಿಯೇಬಿಟ್ಟೆ. ನಷ್ಟವಾಗುತ್ತಿದೆ ಎಂದು ನೂರು ಸಲ ಹೇಳಿದರೆ ಹಣದ ಮಳೆ ಸುರಿಯುವುದಿಲ್ಲ. ನಾಟಕದ ಟಿಕೇಟ್ ನೀಡುವುದಕ್ಕೆ ಕಾರ್ಕೂನರು ಅಥವಾ ಮ್ಯಾನೇಜರ್ ಯಾರಿದ್ದಾರೆ ಇಲ್ಲಿ? ಸಿಕ್ಕವರ ಕೈಯಲ್ಲಿ ಟಿಕೇಟ್ ಕೊಟ್ಟರೆ ಅಳಿದವರ ಸಾಮ್ರಾಜ್ಯದಲ್ಲಿ ಉಳಿದವನೇ ತಾನು ಎಂದು ರಾಜನಾಗಿ ಮರೆಯುತ್ತಾನಷ್ಟೇ. ಇಲ್ಲೂ ಆಗಿದ್ದು ಇದೇ ಸ್ಥಿತಿ. ಬಂದವರೆಷ್ಟು? ಸಂಗ್ರಹಗೊಂಡ ಹಣವೆಷ್ಟು? ಕಂಪೆನಿಗೆ ಹಣ ಬರುವ ಮೂಲವನ್ನೇ ಭದ್ರವಾಗಿರಿಸಿಕೊಳ್ಳಬೇಕು ಮೊದಲು. ನಿತ್ಯವೂ ಹೊಟೇಲಿನಿಂದ ಊಟ ಬರುತ್ತಿತ್ತು. ಹೊರಗಡೆಯ ಊಟ ತರಿಸಿಕೊಂಡರೆ ಕಂಪೆನಿ ಉಳಿವುದಾದರೂ ಹೇಗೆ? ಬೋರ್ಡಿಂಗ್ ಅಂತ ಮಾಡಿಕೊಳ್ಳಬೇಕು. ಒಂದು ದಿವಸಕ್ಕೆ ನಾಲ್ಕು ಕೆ.ಜಿ ಅಕ್ಕಿ ಹಾಕಿದರೆ ಎಲ್ಲರ ಹೊಟ್ಟೆ ತುಂಬುವಷ್ಟಾಗುತ್ತದಲ್ಲಾ. ಊರಿಂದ ಅಡುಗೆಯವರನ್ನೊಬ್ಬರನ್ನು ಕರೆತಂದರೆ ಸಮಸ್ಯೆ ಬಗೆಹರಿದಂತೆ. ಹಣ ಹರಿದುಬರುವುದನ್ನು ಬಲಪಡಿಸಿದರೆ, ವ್ಯರ್ಥ ಪೋಲಾಗುವುದು ನಿಂತರೆ ಕಂಪೆನಿ ಉದ್ಧಾರವಾಗದೇ ಏನು? ಈ ಮೂಲಭೂತ ತಿಳುವಳಿಕೆಯೇ ಇಲ್ಲದಿದ್ದರೆ ಕಂಪೆನಿ ನಡೆಸಲು ಖಂಡಿತಾ ಆಗುವುದಿಲ್ಲವೆಂದೆ. ಕಂಪೆನಿ ಕಟ್ಟಬೇಕೆಂಬ ಆಸೆ ಇದ್ದರಷ್ಟೆ ಸಾಲದು, ಅನುಭವಗಳೂ ಬೇಕು ಎಂಬುದು ಅವರಿಗೆ ಅರ್ಥವಾಗುವ ಹೊತ್ತಿಗೆ ಕಂಪೆನಿ ನಷ್ಟದ ಬಹುದೂರದ ಹಾದಿಯನ್ನು ಕ್ರಮಿಸಿಯಾಗಿತ್ತು.
ಐದಾರು ತಿಂಗಳು ಕ್ಯಾಂಪ್ ನಡೆದಿರಬೇಕು. ಮೊದಲು ‘ಸೂಳೆ ಸಂಪತ್ತು’ ನಾಟಕದಲ್ಲಿ ನನ್ನದು ಬಸಮ್ಮ ಎನ್ನುವ ಸೂಳೆಯ ಪಾತ್ರ. ಕೆಲ ಪ್ರದರ್ಶನಗಳು ಆಗುತ್ತಿದ್ದಂತೆ ನಾಯಕಿಯ ಪಾತ್ರ ನೀಡಲಾರಂಭಿಸಿದರು. ನಾಯಕ ಶೇಕ್ ಚಾಂದ್. ಇನ್ನೊಂದು ನಾಟಕದಲ್ಲಿ ನನ್ನದು ಅತ್ತಿಗೆಯ ಪಾತ್ರವಾದರೆ ಅವರದ್ದು ಅಣ್ಣನ ಪಾತ್ರ. ಜೋಡಿ ಪಾತ್ರ ಮಾಡುವುದಕ್ಕೆ ನನ್ನದೇನೂ ತಕರಾರಿರಲಿಲ್ಲ. ಆದರೆ ಪ್ರಾಕ್ಟೀಸ್ ಸಮಯದಲ್ಲಿ ಪೇಚಾಡುವಂತಾಗುತ್ತಿತ್ತು. ಕೆಲ ಪದಗಳನ್ನು ಸರಿಯಾಗಿಯೇ ಉಚ್ಛರಿಸುತ್ತಲೇ ಇರಲಿಲ್ಲ ಅವರು. ಮಾತುಗಳೂ ಕೆಲವು ಅಸ್ಪಷ್ಟ. ತಿದ್ದುವುದಕ್ಕೆ ಸಮಯ ಹಿಡಿಯುತ್ತಿತ್ತು. ಎದುರಿಗಿದ್ದವರಿಗೆ ಏನು ಹೇಳುತ್ತಿದ್ದೀರೆಂದು ಅರ್ಥವಾಗುವುದು ಬೇಡವೇ? ಅ ಕಾರ ಮತ್ತೆ ಹ ಕಾರವನ್ನು ಎಚ್ಚರದಲ್ಲಿ ಬಳಸಬೇಕು. ಕರುಣಾಜನಕವಾಗಿರುವ ದೃಶ್ಯ ನಿಮ್ಮ ತಪ್ಪು ಉಚ್ಛಾರದಿಂದ ಹಾಸ್ಯಗೊಳ್ಳುತ್ತದೆ ನೋಡಿ ತಿದ್ದಿಕೊಳ್ಳಬೇಕೆಂದೆ. ಅವರಿಗಷ್ಟೇ ಅಲ್ಲ, ಪ್ರಾಕ್ಟೀಸ್ ಮ್ಯಾನೇಜರ್ ಕೂಡ ಆಗಿದ್ದರಿಂದ ತಪ್ಪು ಹೇಳಿದವರೆದುರು ಕೂಗಾಡಿಬಿಡುತ್ತಿದ್ದೆ; ಕೋಪಿಷ್ಠೆಯೂ ಆಗಿದ್ದೆ.

ತಾರನಾಳ್ ಎಂಬ ಕವಿಗಳಿದ್ದರು. ಅವರು ಮತ್ತೆ ಶೇಕ್ ಚಾಂದ್ ಗೆಳೆಯರಾಗಿದ್ದರು. ಜಾಣ ಜಾರಿ ಬಿದ್ದ ಸಿನೆಮಾ ನೋಡಿದವರಿಗೆ ತಾರನಾಳ್ ಹೆಸರು ನೆನಪಾಗಬಹುದು. ಇನ್ನು ಎರಡು ಮೂರು ಚಿತ್ರಗಳಿಗೆ ಕಥೆ ಬರೆದುಕೊಟ್ಟಿದ್ದರು. ಅದೇನೊ ಬಾಯಲ್ಲಿ ವಿಚಿತ್ರ ಆಲಾಪ ಹೇಳುತ್ತಾ, ಹಲ್ಲು ಬಾರಿಸುತ್ತಾ ನಡೆಯುತ್ತಿದ್ದರು. ಅವರಿಗೊಮ್ಮೆ ಹೇಳಿದ್ದೆ, ‘ನೋಡಿ, ಕೆಲವೊಂದು ಚಟಗಳನ್ನು ಬಿಟ್ಟರೆ ನೀವು ಒಳ್ಳೆಯ ಹೆಸರಾಂತ ಕವಿಗಳಾಗುತ್ತೀರಿ’ ಎಂದು.
(ಹಿಂದಿನ ಕಂತು: ನಾಟಕ ಕಂಪನಿ ಮತ್ತು ಒಲವಿನ ಪತ್ರ)

ಕನ್ನಡ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಂದೋಲನ ಪತ್ರಿಕೆಯ ಹಾಡುಪಾಡು ಪುಟದಲ್ಲಿ ಇವರ ಅನೇಕ ಲೇಖನಗಳು ಪ್ರಕಟಗೊಂಡಿವೆ.

