Advertisement
ಪುಸ್ತಕ ಹಾಗೂ ನೋಟ್ ಪುಸ್ತಕದ ಬಗ್ಗೆ ಒಂದಷ್ಟು ಮಾತು…: ಬಸವನಗೌಡ ಹೆಬ್ಬಳಗೆರೆ ಸರಣಿ

ಪುಸ್ತಕ ಹಾಗೂ ನೋಟ್ ಪುಸ್ತಕದ ಬಗ್ಗೆ ಒಂದಷ್ಟು ಮಾತು…: ಬಸವನಗೌಡ ಹೆಬ್ಬಳಗೆರೆ ಸರಣಿ

ನನಗೆ ಟಿಸಿಹೆಚ್ ಓದುವಾಗ ನಮ್ಮೂರಲ್ಲಿದ್ದ ಒಬ್ಬರು ನನಗೆ ಅವರ ಪುಸ್ತಕಗಳನ್ನು ಉಚಿತವಾಗಿ ಕೊಟ್ಟಿದ್ದರು. ಅಲ್ಲದೇ ನಮ್ಮೂರ ಗ್ರಂಥಪಾಲಕ ವಿಜಯಣ್ಣನೂ ಕೇಳಿದಾಗ ಪುಸ್ತಕಗಳನ್ನು ಕೊಡುತ್ತಿದ್ದರು. ನನ್ನ ಓದಿಗೆ ತುಂಬಾ ಸಹಕಾರ ಮಾಡಿದರು. ಪ್ರೌಢಶಾಲೆಯಲ್ಲಿದ್ದಾನ ನನಗೆ ನನ್ನ ಸೀನಿಯರ್ ಒಬ್ಬರು ಹಳೇ ಪುಸ್ತಕಗಳನ್ನು ಕೊಡುತ್ತೇನೆ ಎಂದು ಹೇಳಿ ಮೊದಲೇ ನನ್ನ ಬಳಿ ಅಡ್ವಾನ್ಸ್ ಆಗಿ ಹಣ ಪಡೆದು ಯಾಮಾರಿಸಿದ ಘಟನೆಯನ್ನು ನಾನು ಇನ್ನೂ ಮರೆತಿಲ್ಲ. ಅಲ್ಲದೇ ಪಿಯುಸಿಯನ್ನು ಬೆಂಗಳೂರಿನಲ್ಲಿ ಓದುವಾಗ ನಮ್ಮ ಹಾಸ್ಟೆಲ್ಲಿನ ಕೆಲ ಹುಡುಗರು ಪುಸ್ತಕಗಳನ್ನು ಕದ್ದು ಆಗ ಅವೆನ್ಯೂ ರಸ್ತೆಯಲ್ಲಿದ್ದ ಸೆಕೆಂಡ್ ಹ್ಯಾಂಡ್ ಪುಸ್ತಕದಂಗಡಿಗಳಿಗೆ ಮಾರುತ್ತಿದ್ದ ಘಟನೆಗಳೂ ಇವೆ!!
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ನಲವತ್ತೊಂಭತ್ತನೆಯ ಕಂತು ನಿಮ್ಮ ಓದಿಗೆ

ಪ್ರೌಢಶಾಲೆಯಲ್ಲಿ ಓದುತ್ತಿದ್ದಾಗ ನಾವು ಹಿಂದಿನ ವರ್ಷದವರ ಪುಸ್ತಕವನ್ನು ಖರೀದಿಸಿ ಅವನ್ನು ಓದಲು ಬಳಸಿಕೊಳ್ಳುತ್ತಿದ್ದೆವು. ಕೆಲವರು ಮಾತ್ರ ಹೊಸ ಪುಸ್ತಕಗಳನ್ನು ಖರೀದಿಸುತ್ತಿದ್ದರು. ನಮಗೆ ಆಗ ಶಾಲೆಯಲ್ಲಿ ಉಚಿತ ಪುಸ್ತಕಗಳನ್ನು ಕೊಡುತ್ತಿರಲಿಲ್ಲ. ನಾವೂ ಅಷ್ಟೇ ಕೊಂಡ ಸೆಕೆಂಡ್ ಹ್ಯಾಂಡ್ ಪುಸ್ತಕಗಳನ್ನು ಜತನವಾಗಿರಿಸಿಕೊಂಡು ಮತ್ತೆ ಅವನ್ನು ಮಾರನೇ ವರ್ಷದವರಿಗೆ ಮಾರುತ್ತಿದ್ದೆವು. ನಾವು ಅರ್ಧ ರೇಟಿಗೆ ಪುಸ್ತಕಗಳನ್ನು ಖರೀದಿಸಿದರೆ ಮತ್ತೆ ಅವನ್ನು ಕಾಲು ರೇಟಿಗೆ ಮಾರುತ್ತಿದ್ದೆವು. ಪುಸ್ತಕಗಳ ಬೆಲೆಯು ಅವು ಇದ್ದ ಸ್ಥಿತಿಯ ಆಧಾರದ ಮೇಲೆ ಇರುತ್ತಿತ್ತು. ಇದಕ್ಕಾಗಿ ಪುಸ್ತಕಗಳನ್ನು ಹಾಳು ಮಾಡಿಕೊಳ್ಳುತ್ತಿರಲಿಲ್ಲ. ಅವಕ್ಕೆ ಬೈಂಡ್ ಹಾಕಲು ಹಳೇ ದಿನಪತ್ರಿಕೆಯನ್ನು ಬಳಸಿಕೊಳ್ಳುತ್ತಿದ್ದೆವು. ಅಲ್ಲದೇ ದಿನಪತ್ರಿಕೆ ಹಾಳಾಗಬಾರದೆಂದು ಹಿಂದೆ ಪತ್ರಿಕೆಗಳ ಮೇಲೆ ಬರುತ್ತಿದ್ದ ಖಾಕಿ ಬೈಂಡ್ ಗಳನ್ನು ಪೇಪರ್ ಹಾಕುವವರ ಮನೆಯಿಂದ 25 ಪೈಸೆ ಕೊಟ್ಟು ಖರೀದಿಸುತ್ತಿದ್ದೆವು. ಇನ್ನೂ ಕೆಲವೊಮ್ಮೆ ನಾನು ಬಟ್ಟೆ ಖರೀದಿ ಮಾಡಿದಾಗ ಕೊಡುತ್ತಿದ್ದ ಬಟ್ಟೆ ಇಡಲು ಬಳಸುತ್ತಿದ್ದ ಪ್ಲಾಸ್ಟಿಕ್ ಕವರುಗಳನ್ನು ಬಳಸುತ್ತಿದ್ದೆನು. ಒಟ್ಟಾರೆಯಾಗಿ ಹೇಳುವುದಾದರೆ ಪುಸ್ತಕ ಹಾಳಾಗಬಾರದೆಂದು ಶತಾಯಗತಾಯ ಪ್ರಯತ್ನಿಸಿ ಅದನ್ನು ಚೆನ್ನಾಗಿಯೇ ಇಟ್ಟುಕೊಳ್ಳುತ್ತಿದ್ದೆನು. ಏಕೆಂದರೆ ಮಾರನೇ ವರ್ಷ ನನಗೆ ಮಾರಿದಾಗ ಉತ್ತಮ ಬೆಲೆ ಸಿಗಬೇಕಲ್ಲವಾ ಅದಕ್ಕೆ!!

ನಮ್ಮ ಮನೆಯಲ್ಲಿ ಆಗ ನೋಟ್ ಪುಸ್ತಕಗಳನ್ನು ನನಗೆ ಹೆಚ್ಚು ಕೊಡಿಸುತ್ತಿರಲಿಲ್ಲ. ಇಡೀ ವರ್ಷಕ್ಕಾಗಿ ಕೊಡಿಸಿದ 1 ಡಜನ್ ನೋಟ್ ಪುಸ್ತಕಗಳಲ್ಲೇ ಎಲ್ಲಾ ವಿಷಯಗಳ ನೋಟ್ಸ್, ಹೋಮ್ ವರ್ಕ್‌ಗೆ ಅಡ್ಜಸ್ಟ್ ಮಾಡುತ್ತಿದ್ದೆನು. ಒಂದೇ ನೋಟ್ ಪುಸ್ತಕದಲ್ಲೇ ಸಮಾಜ ನೋಟ್ಸ್ ಆದರೆ ಇತಿಹಾಸ, ಪೌರನೀತಿ, ಭೂಗೋಳ ಎಂದೂ, ವಿಜ್ಞಾನವಾದರೆ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಎಂದು ವಿಭಾಗಿಸಿಕೊಂಡು ‘ಆಲ್ ಇನ್ ಒನ್’ ರೀತಿಯಲ್ಲಿ ಬಳಸುತ್ತಿದ್ದೆ. ಗಣಿತಕ್ಕಾದರೆ ಅಂಕಗಣಿತ, ಬೀಜಗಣಿತವನ್ನು ಒಂದು ಪುಸ್ತಕದಲ್ಲಿ ಬರೆದರೆ ರೇಖಾಗಣಿತವನ್ನು ಮಾತ್ರ ಗೆರೆರಹಿತ ನೋಟ್ ಪುಸ್ತಕದಲ್ಲಿ ಬರೆಯುತ್ತಿದ್ದೆ. ನಮ್ಮ ಕನ್ನಡ ಮೇಷ್ಟ್ರು ಮಾತ್ರ ನೋಟ್ಸ್ ಬಗ್ಗೆ ಅಷ್ಟಾಗಿ ಗಮನ ಕೊಡುತ್ತಿರಲಿಲ್ಲ. ನಾನು ಪಠ್ಯಪುಸ್ತಕವನ್ನು ಓದುತ್ತಿದ್ದೆ. ಪರೀಕ್ಷೆಯಲ್ಲಿ ಮಾತ್ರ ಉತ್ತರಗಳನ್ನು ನಾನೇ ಅರ್ಥೈಸಿಕೊಂಡ ರೀತಿಯಲ್ಲಿ ಬರೆಯುತ್ತಿದ್ದೆ. ಒಂದೊಮ್ಮೆ ಪ್ರಸಕ್ತ ಸಾಲಿನ ವರ್ಷದಲ್ಲಿ ಇಟ್ಟ ನೋಟ್ ಪುಸ್ತಕದ ಹಾಳೆಗಳು ಉಳಿದರೆ ಮಾರನೇ ವರ್ಷ ಎಲ್ಲಾ ನೋಟ್ ಪುಸ್ತಕದ ಹಾಳೆಗಳನ್ನು ಕಿತ್ತುಕೊಂಡು ಅವನ್ನೆಲ್ಲಾ ಸೇರಿಸಿಕೊಂಡು ಬುಕ್ ಬೈಂಡ್ ಮಾಡಿಕೊಳ್ಳುತ್ತಿದ್ದೆ. ಅದನ್ನು ಮಾರನೇ ವರ್ಷದ ‘ಆಲ್ ರಫ್ಅಂತಾ ಒಂದು ಪುಸ್ತಕ ಇಟ್ಟು ಅದರಲ್ಲಿ ಎಲ್ಲಾ ವಿಷಯವನ್ನು ಬರೆಯಲು ಬಳಸುತ್ತಿದ್ದೆ. ಬಹತೇಕ ಬಡ ಹಾಗೂ ಮಧ್ಯಮ ವರ್ಗದ ಹುಡುಗರು ಇದೇ ರೀತಿ ಮಾಡುತ್ತಿದ್ದರು. ನಾನು ಒಮ್ಮೊಮ್ಮೆ ನಮ್ಮ ಹಾಸ್ಟೆಲ್ಲಿನಲ್ಲಿ ಇದ್ದ ನನ್ನ ಗೆಳೆಯರ ಹಾಗೂ ಪರಿಚಿತರ ಬಳಿ, ಒಬ್ಬೊಬ್ಬರ ಬಳಿ ಹೋಗಿ ‘ಒಂದೊಂದು ಶೀಟನ್ನು ಕೊಡಿ ಎಂದು ಕೇಳುತ್ತಿದ್ದೆ. ಒಬ್ಬರಿಗೆ ಕೇಳಿದ್ದು ಮತ್ತೊಬ್ಬರಿಗೆ ಗೊತ್ತಾಗುತ್ತಿರಲಿಲ್ಲ. ಒಂದು ಹಾಳೆ ಅಷ್ಟೇ ಅಲ್ವ ಎಂದು ಅವರು ಹಾಳೆ ಕೊಡುತ್ತಿದ್ದರು. ಇದೇ ರೀತಿ ಹಾಸ್ಟೆಲ್ಲಿನ ಬೇರೆ ಬೇರೆ ಹುಡುಗರ ಬಳಿ ತೆಗೆದುಕೊಂಡು ಅವನ್ನೆಲ್ಲಾ ಸೇರಿಸಿ ಒಂದು ಪುಸ್ತಕ ಹೊಲಿದುಕೊಳ್ಳುತ್ತಿದ್ದೆ!!

ಆದರೆ ಈಗ ಕಾಲ ಬದಲಾಗಿದೆ. ಮಕ್ಕಳಿಗೆ ವರ್ಷ ವರ್ಷವೂ ಹೊಸ ಪುಸ್ತಕಗಳು ಬೇಕು. ಬೈಂಡ್ ಹಾಕಲು ಅಂಗಡಿಯಿಂದ ಖರೀದಿಸಿದ ಬೈಂಡೇ ಬೇಕು. ಕೆಲವರಂತೂ ವರ್ಷದ ಅಂತ್ಯಕ್ಕೆ ಬರುವಷ್ಟರಲ್ಲಿ ಅವನ್ನು ಹಾಳು ಮಾಡಿಕೊಳ್ಳುತ್ತಾರೆ!! ನೋಟ್ ಪುಸ್ತಕಗಳಿಗಂತೂ ಬಿಡಿ ಬೆಲೆಯೇ ಇಲ್ಲ. ಚಿಕ್ಕ ಚಿಕ್ಕ ಮಕ್ಕಳಿಗೂ ನೋಟ್ ಪುಸ್ತಕ ಬೇಕು ಬಿಡಿ. ಹಿಂದೆ ಸ್ಲೇಟು ಬಳಪ ಉಪಯೋಗಿಸಿ ಬರೆಯುತ್ತಿದ್ದೆವು. ಬಾಣಪ್ಪನ ಕಲ್ಲು (ಬಳಪದ ಕಲ್ಲು ಇದು ಜನರ ಬಾಯಿಗೆ ಸಿಕ್ಕು ಅದು ಬಾಣಪ್ಪನ ಕಲ್ಲು ಆಗಿರಬಹುದು) ಎಂದು ಸಿಗುವ ಕಲ್ಲನ್ನೇ ಬಳಸಿ ಬರೆದದ್ದು ಇದೆ. ನೋಟ್ ಪುಸ್ತಕ ಬಳಸಿದ್ದು ಮೂರನೇ ತರಗತಿಯ ನಂತರ!! ಎಂದೂ ನನಗೆ ಇದು ಕೊರತೆಯಾಗಿ ಕಾಡಲಿಲ್ಲ.

ಪುಸ್ತಕವನ್ನು ಚೆನ್ನಾಗಿ ಇಟ್ಟುಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಉಚಿತ ಪುಸ್ತಕಗಳನ್ನು ಶುರು ಮಾಡಿದ ಮೇಲೆ ಇಂದಿನ ಬಹುತೇಕ ಮಕ್ಕಳಿಗೆ ಪುಸ್ತಕದ ಬೆಲೆಯ ಬಗ್ಗೆ ಅಷ್ಟು ಅರಿವು ಇಲ್ಲ. ಪೋಷಕರೂ ಮಕ್ಕಳಿಗೆ ಅವರು ಕೇಳಿದಷ್ಟು ಅವರು ಕೇಳಿದಾಗ ಕೊಡಿಸುವುದರಿಂದಲೇ ಮಕ್ಕಳು ಹಾಳೆಗಳನ್ನು ವ್ಯರ್ಥ ಮಾಡುತ್ತಿದ್ದಾರೆ. ಇದಕ್ಕೆ ಒಂದು ಶಾಲೆಯಲ್ಲಿ ನಡೆದ ತಮಾಷೆಯ ಕಲ್ಪಿತ ಪ್ರಸಂಗವೊಂದನ್ನು ಹೇಳುತ್ತೇನೆ ಕೇಳಿ:

ಒಮ್ಮೆ ಒಂದು ಶಾಲೆಗೆ ಒಬ್ಬ ಅಧಿಕಾರಿ ಆ ಶಾಲೆಯ ಮಕ್ಕಳ ಕಲಿಕೆಯನ್ನು ಪರೀಕ್ಷಿಸಲು ಹೋದರಂತೆ. ಆಗ ಅವರು ಶಿಕ್ಷಕರ ರೆಕಾರ್ಡ್‌ಗಳನ್ನು ನೋಡಿ ತರಗತಿ ಕೋಣೆಗೆ ಹೋದರಂತೆ. ಆಗ ಅವರಿಗೆ ಮೇಷ್ಟ್ರು ಮಾಡಿದ ಪಾಠದ ರೀತಿ ನೋಡಿ ತುಂಬಾ ಅಚ್ಚರಿಯ ಜೊತೆ ಸಿಟ್ಟು ಬಂದಿತಂತೆ. ಮೇಷ್ಟ್ರು ಏನು ಮಾಡಿದ್ದಾರೆಂದರೆ ಫೆಬ್ರವರಿ, ಮಾರ್ಚ್‌ನಲ್ಲಿ ಮಾಡಬೇಕಾದ ಪಾಠಗಳನ್ನು ಜೂನ್‌ನಲ್ಲೇ ಮಾಡಿದ್ದರಂತೆ. ಹಿಂದೆ ಇಲಾಖೆಯಿಂದ ಯಾವ ತಿಂಗಳಲ್ಲಿ ಯಾವ ಪಾಠ ಮಾಡಬೇಕೆಂದು ಒಂದು ಚಾರ್ಟ್ ಕೊಡುತ್ತಿದ್ದರು. ಅದಕ್ಕನುಗುಣವಾಗಿ ಶಿಕ್ಷಕರು ಪಾಠ ಮಾಡಬೇಕಿತ್ತು. ಆದರೆ ಮೇಷ್ಟ್ರು ಮಾಡಿದ ರೀತಿಗೆ ಅಧಿಕಾರಿಗೆ ಸಿಕ್ಕಾ ಪಟ್ಟೆ ಸಿಟ್ಟು ಬಂದು ಅವರು ಶಿಕ್ಷಕರ ಕುರಿತು “ಅಲ್ರೀ ಮೇಷ್ಟ್ರೇ, ನೀವು ಈ ರೀತಿ ಪಾಠ ಮಾಡಿದ್ದು ಸರಿಯೇ? ನಿಮ್ಮ ಮೇಲೆ ಶಿಸ್ತು ಕ್ರಮ ಕೈಗೊಳ್ಳುತ್ತೇನೆ” ಎಂದಾಗ ಅವರು “ಹೆದರುತ್ತಾ ಸರ್… ದಯವಿಟ್ಟು ಹಾಗೆ ಮಾಡಬೇಡಿ. ನಾನು ಹಾಗೆ ಪಾಠ ಮಾಡಿದ್ದು ಮಕ್ಕಳಿಗೆ ಸಹಾಯವಾಗಲೆಂದೇ!!” ಎಂದಾಗ ಅಧಿಕಾರಿಯು “ಅದು ಹೇಗೆ?” ಎಂದಾಗ ಮೇಷ್ಟ್ರು “ಸರ್ ನಮ್ಮ ಮಕ್ಕಳಿಗೆ ಇಲಾಖೆಯ ನಿಯಮದಂತೆ ಮೊದಲನೇ ಪಾಠದಿಂದ ಬೋಧನೆ ಮಾಡುತ್ತಾ ಹೋದರೆ ಮಾರ್ಚ್ ತಿಂಗಳು ಬರುವಷ್ಟರೊಳಗೆ ಆ ತಿಂಗಳಿಗೆ ನಿಗದಿಪಡಿಸಿದ ಪಾಠಗಳನ್ನು ಮಾಡೋಕೆ ಸಾಧ್ಯಾನೇ ಆಗೋದಿಲ್ಲ” ಎಂದು ಹೇಳಿದರು. ಆಗ ಅಧಿಕಾರಿಯು ಅಚ್ಚರಿಯಿಂದ “ಅದು ಯಾಕೆ?” ಎಂದಾಗ ಆ ಮೇಷ್ಟ್ರು “ಸರ್, ಮಾರ್ಚ್ ತಿಂಗಳು ಬರೋವಷ್ಟರಲ್ಲಿ ಮಕ್ಕಳ ಪುಸ್ತಕದಲ್ಲಿ ಆ ಪಾಠವೇ ಇರೋದಿಲ್ಲ. ಅವರು ಪುಸ್ತಕದ ಕೊನೇ ಹಾಳೆಗಳೆಲ್ಲ ಹಾಳಾಗಿ ಹೋಗಿರುತ್ತವೆ. ಅಥವಾ ಅವನ್ನು ಕಿತ್ತುಕೊಂಡಿರುತ್ತಾರೆ” ಎಂದಾಗ ಅಧಿಕಾರಿಗೆ ಒಳಗೊಳಗೆ ನಗು ಬಂದು ಇನ್ನು ಮುಂದೆ ಹೀಗಾಗದಂತೆ ನೋಡಿಕೊಳ್ಳಿ ಎಂದು ಹೇಳಿದರಷ್ಟೇ ಅಲ್ಲದೇ ಮಕ್ಕಳಿಗೆ ಪುಸ್ತಕಗಳನ್ನು ಚೆನ್ನಾಗಿ ಇಟ್ಟುಕೊಳ್ಳುವ ಬಗ್ಗೆ ಹೇಳಿ ಹೋದರಂತೆ.

ಮೇಲಿನದು ಒಂದು ಕಲ್ಪಿತ ಪ್ರಸಂಗವೆನಿಸಿದರೂ ಇದು ಕೆಲವು ಮಕ್ಕಳ ಉದಾಹರಣೆಯಲ್ಲಿ ನಿಜವೆನಿಸುತ್ತದೆ. ಪುಸ್ತಕವನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು. ಅದನ್ನು ಹಾಳು ಮಾಡಿಕೊಳ್ಳಬಾರದು. ನನಗೆ ಟಿಸಿಹೆಚ್ ಓದುವಾಗ ನಮ್ಮೂರಲ್ಲಿದ್ದ ಒಬ್ಬರು ನನಗೆ ಅವರ ಪುಸ್ತಕಗಳನ್ನು ಉಚಿತವಾಗಿ ಕೊಟ್ಟಿದ್ದರು. ಅಲ್ಲದೇ ನಮ್ಮೂರ ಗ್ರಂಥಪಾಲಕ ವಿಜಯಣ್ಣನೂ ಕೇಳಿದಾಗ ಪುಸ್ತಕಗಳನ್ನು ಕೊಡುತ್ತಿದ್ದರು. ನನ್ನ ಓದಿಗೆ ತುಂಬಾ ಸಹಕಾರ ಮಾಡಿದರು. ಪ್ರೌಢಶಾಲೆಯಲ್ಲಿದ್ದಾನ ನನಗೆ ನನ್ನ ಸೀನಿಯರ್ ಒಬ್ಬರು ಹಳೇ ಪುಸ್ತಕಗಳನ್ನು ಕೊಡುತ್ತೇನೆ ಎಂದು ಹೇಳಿ ಮೊದಲೇ ನನ್ನ ಬಳಿ ಅಡ್ವಾನ್ಸ್ ಆಗಿ ಹಣ ಪಡೆದು ಯಾಮಾರಿಸಿದ ಘಟನೆಯನ್ನು ನಾನು ಇನ್ನೂ ಮರೆತಿಲ್ಲ. ಅಲ್ಲದೇ ಪಿಯುಸಿಯನ್ನು ಬೆಂಗಳೂರಿನಲ್ಲಿ ಓದುವಾಗ ನಮ್ಮ ಹಾಸ್ಟೆಲ್ಲಿನ ಕೆಲ ಹುಡುಗರು ಪುಸ್ತಕಗಳನ್ನು ಕದ್ದು ಆಗ ಅವೆನ್ಯೂ ರಸ್ತೆಯಲ್ಲಿದ್ದ ಸೆಕೆಂಡ್ ಹ್ಯಾಂಡ್ ಪುಸ್ತಕದಂಗಡಿಗಳಿಗೆ ಮಾರುತ್ತಿದ್ದ ಘಟನೆಗಳೂ ಇವೆ!! ಇನ್ನೂ ಕೆಲವರಿಗೆ ಓದಲು ಪುಸ್ತಕಗಳನ್ನು ಕೊಟ್ಟರೆ ಯಥಾವತ್ತಾಗಿ ಅವು ವಾಪಸ್ಸು ಬರುವುದಿಲ್ಲ. ಇದಕ್ಕೆಂದು ಸಂಸ್ಕೃತದಲ್ಲಿ ಪುಸ್ತಕವನ್ನು ಕುರಿತ ಒಂದು ಶ್ಲೋಕವೇ ಇದೆ.

ಪುಸ್ತಕಂ ವನಿತಾ ವಿತ್ತಂ ಪರಹಸ್ತಗತಂ ಗತಂ!
ಅಥವಾ ಪುನರಾಯಾತಿ ಜೀರ್ಣಂ ಭ್ರಷ್ಟಂಖಂಡಿತಮ್||

ಇದರ ಅರ್ಥವನ್ನು ನೋಡುವುದಾದರೆ ಪುಸ್ತಕ, ಸ್ತ್ರೀ, ಧನ ಈ ಮೂರೂ ಪರಹಸ್ತಗಳನ್ನು ಸೇರಿದರೆ ಅವು ಹೋದಂತೆಯೇ!! ಒಂದೊಮ್ಮೆ ಪುಸ್ತಕ ಹಿಂತಿರುಗಿ ಬಂದರೆ ಅದು ಹಳೆಯದಾಗಿ ಹಾಳಾಗಿರುತ್ತವೆ. ವನಿತಾ ಅರ್ಥಾತ್ ಸ್ತ್ರೀ ಬದಲಾಗಿರುತ್ತಾಳೆ. ಅದೇ ರೀತಿ ಹಣ ಕಡಿಮೆಯಾಗಿರುತ್ತದೆ ಎಂದು ಹೇಳುತ್ತದೆ. ಇಲ್ಲಿ ಸ್ತ್ರೀ ಜೊತೆಗೆ ಪುರುಷನನ್ನೂ ಸೇರಿಸಬಹುದೇನೋ??!!. ಒಟ್ಟಾರೆಯಾಗಿ ಹೇಳುವುದಾದರೆ ಪುಸ್ತಕವನ್ನು ಪರರಿಗೆ ಓದಲು ಕೊಟ್ಟರೆ ವಾಪಸ್ ಬರುತ್ತದೆಯೆಂಬ ನಂಬಿಕೆಯಿಂದ ಕೊಡಬಾರದು. ಎಲ್ಲರನ್ನೂ ಹೀಗೆಯೇ ಎಂದು ಹೇಳಲು ಆಗದಿದ್ದರೂ ಬಹುತೇಕ ಪರಿಸ್ಥಿತಿಗಳಲ್ಲಿಕೊಟ್ಟೋನು ಕೋಡಂಗಿ ಇಸ್ಕೋಂಡೋನು ಈರಭದ್ರಎಂಬಂತಾಗಿಬಿಡುತ್ತದೆ.

ನಾನು ಸಾಮಾನ್ಯವಾಗಿ ಪುಸ್ತಕಗಳನ್ನು ಕೊಂಡು ಓದುತ್ತೇನೆ. ಕೊಂಡಾಗಲಾದರೂ ದುಡ್ಡು ಕೊಟ್ಟು ತಂದದ್ದು ಎಂಬ ಭಾವನೆಯಿಂದಾದರೂ ಓದುತ್ತೇವೆ. ಹಲವರ ಜೀವನಗಳು ಅವರು ಓದಿದ ಪುಸ್ತಕಗಳಿಂದಲೇ ಬದಲಾಗಿವೆ ಎಂಬ ವಿಷಯವೂ ಗಮನಾರ್ಹ. ಸಾಹಿತ್ಯಕ್ಕೆ ಅಷ್ಟೊಂದು ಶಕ್ತಿಯಿದೆ. ದೊಡ್ಡ ದೊಡ್ಡ ಬರಹಗಾರರು ಅವರು ಹೆಚ್ಚಾಗಿ ಓದಿದ್ದರಿಂದಲೇ ಅವರು ಬರಹಗಾರರಾಗಿದ್ದು ಎಂಬ ಅಂಶವನ್ನು ತಿಳಿಯಬೇಕು. “ಪುಸ್ತಕ ಓದುವ ಹವ್ಯಾಸವುಳ್ಳವರು ಎಲ್ಲೇ ಹೋದರೂ ಸಂತೋಷವಾಗಿರಬಲ್ಲರು”, “ಕೋಶ ಓದಬೇಕು, ದೇಶ ಸುತ್ತಬೇಕು”, “ನಾವು ಅತ್ಯಂತ ಕಡಿಮೆ ಖರ್ಚಿನಲ್ಲಿ ಜಗತ್ತನ್ನು ಸುತ್ತಬೇಕೆಂದರೆ ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು” ಎಂಬ ಮಾತುಗಳು ಪುಸ್ತಕ ಓದಿನ ಮಹತ್ವವನ್ನು ನಮಗೆ ತಿಳಿಸುತ್ತವೆ.

ಇಂದು ಹೆಚ್ಚುತ್ತಿರುವ ಮೊಬೈಲ್ ಹಾವಳಿಯೂ ಮಕ್ಕಳು ಪುಸ್ತಕದಿಂದ ವಿಮುಖರಾಗಲು ಕಾರಣ ಎನ್ನಬಹುದು. ನಮ್ಮ ಆಲೋಚನ ಶಕ್ತಿ, ಕಲ್ಪನಾ ಶಕ್ತಿ, ಸೃಜನಾತ್ಮಕ ಚಿಂತನೆ ಬರುವುದು ಪುಸ್ತಕದಿಂದ ಮಾತ್ರ. ಮಕ್ಕಳಿಗೆ ಪುಸ್ತಕ ಓದಿನ ರೂಢಿ ಮಾಡುವುದು ನಮ್ಮ ಕೈಲಿದೆ. ಮಕ್ಕಳಿಗೆ ಎಳವೆಯಿಂದಲೇ ಅವರಿಗೆ ಓದಿನ ರುಚಿ ಹತ್ತಿಸಬೇಕು. ಇದಕ್ಕಾಗಿ ಅವರಿಗೆ ಪುಸ್ತಕದ ಬಹುಮಾನಗಳನ್ನು ಕೊಡಬೇಕು. ಕೇವಲ ಸಿಲಬಸ್‌ನ ಓದಿಗೆ ಮಾತ್ರ ಮಕ್ಕಳನ್ನು ಸೀಮಿತಗೊಳಿಸದೇ ಇತರೇ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಬೇಕು. ಪೋಷಕರೂ ಸಹ ಮಕ್ಕಳ ಜೊತೆಗೆ ಓದಬೇಕು. ಇದರ ಪರಿಣಾಮ ಉತ್ತಮವಾಗಿರುತ್ತದೆ. ನಾವು ಟಿವಿ ನೋಡುತ್ತಲೋ ಅಥವಾ ಮೊಬೈಲ್ ನೋಡುತ್ತಲೋ ಕುಳಿತು ಮಕ್ಕಳಿಗೆ ಓದು ಎಂದು ತಿಳಿಸಿದರೆ ಅವರ ಮನದಲ್ಲಿ “ನೀವು ಮಾತ್ರ ಟಿವಿ ನೋಡಬಹುದಾ??” ಎಂಬ ಪ್ರಶ್ನೆ ಮೂಡುತ್ತದೆ. ಅದಕ್ಕವರು ನಮ್ಮ ಮುಂದೆ ಶಾಲಾ ಪುಸ್ತಕಗಳನ್ನು ಓದಿದಂತೆ ನಟಿಸುತ್ತಾರೆ. “ಜಗತ್ತು ನೀನು ಮಾಡಿದಂತೆ ಮಾಡುತ್ತದೆಯೇ ಹೊರತು ನೀನು ಹೇಳಿದಂತೆ ಮಾಡುವುದಿಲ್ಲ”. ನಾವು ಯಾರ ಮುಂದೆಯಾದರೂ “ನಾನು ಹೇಳಿದಂತೆ ಮಾಡು. ನಾ ಮಾಡಿದಂತೆ ಮಾಡಬೇಡ” ಎಂಬ ಚಟುವಟಿಕೆ ಮಾಡಲು ಅವರಿಗೆ ನೀವು ಗಲ್ಲದ ಮೇಲೆ ಕೈ ಇಟ್ಟುಕೊಳ್ಳಿ ಎಂದು ಹೇಳಿ ನೀವು ನಿಮ್ಮ ಹಣೆಯ ಮೇಲೆ ಕೈ ಇಟ್ಟುಕೊಂಡರೆ ಅವರೂ ಸಹ ಅವರ ಹಣೆಯ ಮೇಲೆಯೇ ಕೈ ಇಟ್ಟುಕೊಂಡಿರುತ್ತಾರೆ!! ಆದ್ದರಿಂದ ನಾವು ಮಕ್ಕಳಿಂದ ಏನನ್ನು ಮಾಡಲು ಬಯಸುತ್ತೇವೆಯೋ ಅದನ್ನು ನಾವು ಮೊದಲು ಮಾಡಬೇಕು. ಪುಸ್ತಕ ಓದೂ ಅದೇ ತರಹ. ಏನಂತೀರ?

About The Author

ಬಸವನಗೌಡ ಹೆಬ್ಬಳಗೆರೆ

ಬಸವನಗೌಡ ಹೆಬ್ಬಳಗೆರೆ  ಶಿವಮೊಗ್ಗದ ಸ.ಪ್ರೌ.ಶಾಲೆ, ಮಸಗಲ್ಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಬಂಧ, ಲೇಖನ, ಕವನ ಹಾಗೂ ಕಥೆ ಬರೆಯುವುದು ಹಾಗೂ ಓದುವುದು ಇವರ ಹವ್ಯಾಸಗಳು. “ಬೋಳಾಯಣ” ಇವರ ಪ್ರಕಟಿತ ಹನಿಗವನ ಸಂಕಲನ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ