Advertisement
ಪೋಸ್ಟರ್ ಬಳಿಯೋ ಕೆಲಸದಾಗಿನ ಕೆಲ ಅನುಭವಗಳು… ಬಸವನಗೌಡ ಹೆಬ್ಬಳಗೆರೆ ಸರಣಿ

ಪೋಸ್ಟರ್ ಬಳಿಯೋ ಕೆಲಸದಾಗಿನ ಕೆಲ ಅನುಭವಗಳು… ಬಸವನಗೌಡ ಹೆಬ್ಬಳಗೆರೆ ಸರಣಿ

ನಾವು ಪೋಸ್ಟರನ್ನು ಅಂಟಿಸುತ್ತಾ ಲಕ್ಷ್ಮೀ ಮೆಕ್ಕೆಜೋಳದ ಬೀಜಗಳ ಬಗ್ಗೆ ಪ್ರಚಾರ ಮಾಡುತ್ತಾ ಹೋಗುತ್ತಿದ್ದಾಗ ಒಂದು ಹಳ್ಳಿಯವರು ನಮ್ಮನ್ನು ಸುತ್ತುವರೆದು “ಕಳೆದ ವರ್ಷ ಇದೇ ಬೀಜಗಳನ್ನು ಬಿತ್ತಿದ್ದೆವು. ನಮಗೆ ಬೆಳೆ ಲಾಸ್ ಆಗಿದೆ. ಅವು ಸರಿಯಾಗಿ ಹುಟ್ಟಿಲ್ಲ. ಆದ್ದರಿಂದ ಆ ನಷ್ಟವನ್ನು ನೀವೇ ಭರಿಸಬೇಕು” ಎಂದು ನಮ್ಮನ್ನು ಕೇಳಲು ಶುರು ಮಾಡಿದರು. ಅದೇನೋ ಹೇಳ್ತಾರಲ್ಲಾ. ‘ಮದುವೆ ಆಗೋ ತಿಮ್ಮ ಅಂದ್ರೆ ನೀನೇ ನನ್ನ ಹೆಂಡ್ತಿ ಆಗೋ ಅಂದ್ನಂತೆ’ ಅನ್ನೋ ಹಾಗಾಯ್ತು ನಮ್ಮ ಪರಿಸ್ಥಿತಿ. ನಮ್ಮನ್ನು ಹಳ್ಳಿಯವರು ಹಾಗೇ ಕೇಳಿದಾಗ ನಾವು ನಮ್ಮ “ಮ್ಯಾನೇಜರ್‌ನ ಕರೆದುಕೊಂಡು ಬರ್ತೀವಿ” ಎಂದು ಹೇಳಿ ಅಲ್ಲಿಂದ ತಪ್ಪಿಸಿಕೊಂಡು ಓಡಿದೆವು!!
ಬಸವನಗೌಡ
ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಐವತ್ತೆರಡನೆಯ ಕಂತು ನಿಮ್ಮ ಓದಿಗೆ

ಯಾವುದೇ ವ್ಯಕ್ತಿ ಎಷ್ಟೇ ಬುದ್ಧಿವಂತನಾಗಿದ್ರೂ ಆ ಬುದ್ಧಿವಂತಿಕೆಯನ್ನು ಒಂದು ಪರೀಕ್ಷೆಯ ಫಲಿತಾಂಶದಲ್ಲಿ ಅಳೆಯುತ್ತಾರೆ. ಒಂದೊಮ್ಮೆ ನಿರೀಕ್ಷಿತ ಫಲಿತಾಂಶ ಬರದೇ ಇದ್ದಲ್ಲಿ,  ಆ ವ್ಯಕ್ತಿ ಎಷ್ಟೇ ಇಂಟಲಿಜೆಂಟ್ ಇದ್ರೂ ಕೂಡ ಅದು ‘ಕರ್ಣನ ವಿದ್ಯೆ’ ಯಂತೆ ವೇಸ್ಟ್ ಆಗಿಬಿಡುತ್ತೆ. ಅದರಲ್ಲೂ ನಮ್ಮ ದೇಶದ ‘ಮಾರ್ಕ್ಸ್ ಆಧಾರಿತ ವ್ಯವಸ್ಥೆ’ ಯಲ್ಲಿ ಅಂಕಗಳೇ ವ್ಯಕ್ತಿಯ ಬುದ್ಧಿವಂತಿಕೆಯ ಅಳತೆಯ ಮಾಪನಗಳಾಗಿವೆ. ಮಾರ್ಕ್ಸ್ ಇದ್ದಿದ್ರೂ ಅಡ್ಡಿ ಇರಲಿಲ್ಲ, ಎಲ್ಲರನ್ನೂ ಒಂದೇ ಮಾನದಂಡದ ಮೇಲೆ ಆಯ್ಕೆ ಮಾಡಿದ್ರೂ ಪರವಾಗಿರಲಿಲ್ಲ. ಕೆಟಗರಿವಾರು ನೇಮಕ ಪ್ರಕ್ರಿಯೆ ಇರೋದ್ರಿಂದ ಕೆಲವರಿಗೆ ಲಾಭವಾದರೆ ಹಲವರಿಗೆ ನಷ್ಟವಾಗುತ್ತೆ. ಹೆಚ್ಚು ಅಂಕ ಪಡೆದೂ ಅವರಿಗೆ ನಿರೀಕ್ಷಿತ ಫಲ ಸಿಗದೇ, ಕೆಟಗರಿಯಿಂದಾಗಿ ಕಡಿಮೆ ಅಂಕ ಪಡೆದವರು ಕೆಲಸ ಗಿಟ್ಟಿಸಿಕೊಂಡಿರುವುದನ್ನು ನೋಡಿದಾಗ ಮನಸ್ಸಿಗೆ ಹೆಚ್ಚೇ ಬೇಸರವೆನಿಸುತ್ತದೆ. ಈ ನೋವು ಅನುಭವಿಸಿದವರಿಗೆ ಮಾತ್ರ ಗೊತ್ತು. ಇಂತಹ ಪರಿಸ್ಥಿತಿ ನನ್ನ ಜೀವನದಲ್ಲೂ ಎದುರಾಯ್ತು.

ಶಿಕ್ಷಕ ವೃತ್ತಿಯ ಸಿಇಟಿ ಬರೆದು ಉತ್ತರ ಪತ್ರಿಕೆಯ ಮೌಲ್ಯಮಾಪನವನ್ನು ಕೀ ಆನ್ಸರ್ ಇಟ್ಟುಕೊಂಡು ಮಾಡಿಕೊಂಡಾಗ ನನಗೆ ಬೇರೆಯವರಿಗಿಂತ ಹೆಚ್ಚು ಅಂಕ ಪಡೆದಿದ್ದೇನೆಂಬ ಖುಷಿ ಇದ್ದರೆ, ಗೊತ್ತಿದ್ದ ಪ್ರಶ್ನೆಗಳನ್ನು ಬಿಟ್ಟು ಬಂದದ್ದರ ಬಗ್ಗೆ ಬೇಸರವೆನಿಸಿತ್ತು. ಆದರೆ ಮನದ ಒಂದು ಮೂಲೆಯಲ್ಲಿ ‘ಕೆಲಸವು ಖಂಡಿತಾ ಸಿಗುತ್ತೆ’ ಎಂಬ ನಂಬಿಕೆ ಇತ್ತು. ಫಲಿತಾಂಶದ ದಿನ ನಾವು ಎಲ್ಲಿ ಸಿಇಟಿ ಬರೆದಿದ್ದೆವೋ ಅಲ್ಲಿಯೇ ಹೋಗಿ ನೋಡಿಕೊಂಡು ಬರಬೇಕಾಗಿತ್ತು. ಈಗಿನಂತೆ ಆಗ ಮೊಬೈಲಿನಲ್ಲಿ ನೋಡುವ ಅವಕಾಶ ಇರಲಿಲ್ಲ. ನಾನು ನೋಡಿಕೊಂಡು ಬರಲು ಮೈಸೂರಿಗೆ ಹೋಗುವ ಬಸ್ ಚಾರ್ಜ್ ಇರದಿರುವ ಕಾರಣ ನಾನು ಆ ಜಿಲ್ಲೆಯಲ್ಲಿ ಬರೆದ ಬೇರೆಯವರಿಂದ ಫಲಿತಾಂಶ ತಿಳಿದುಕೊಂಡೆ. ಫಲಿತಾಂಶದಲ್ಲಿ ನನಗೆ ಬರೀ ಒಂದು ಅಂಕದಿಂದ ಕೆಲಸ ತಪ್ಪಿ ಹೋಗಿತ್ತು. ಆದರೆ ನಾನು ಬೇರೆ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡಿದ್ದರೆ ಇದೇ ಪರ್ಸೆಂಟೇಜ್‌ಗೆ ನನಗೆ ಕೆಲಸ ಸಿಗುತ್ತಿತ್ತು. ಆದರೆ ನನ್ನ ಆಯ್ಕೆ ತಪ್ಪಾಗಿತ್ತು.

ಶಿಕ್ಷಕ ವೃತ್ತಿಯ ಆಯ್ಕೆಯಲ್ಲಿ ನಾನು ಮೊದಲ ಪ್ರಯತ್ನದಲ್ಲಿ ದುರಾದೃಷ್ಟದಿಂದ ಸೋತೆ. ನನ್ನಷ್ಟೇ ಪರ್ಸೆಂಟೇಜ್ ಇರುವ ಬೇರೋಬ್ಬನು ಬೇರೆ ಜಿಲ್ಲೆಯಲ್ಲಿ ಆಯ್ಕೆಯಾಗಿದ್ದನ್ನು ಕೇಳಿದಾಗ ಮನಸ್ಸಿಗೆ ಗಾಯದ ಮೇಲೆ ಬರೆ ಎಳೆದಂತಾಗಿತ್ತು. ಬ್ಯಾಡ್ ಲಕ್‌ನಿಂದಾಗಿ ಉತ್ತಮ ಅಂಕಗಳನ್ನು ಗಳಿಸಿದ್ದಾಗ್ಯೂ ಕೆಲಸ ಸಿಗದಿದ್ದುದಕ್ಕಾಗಿ ನಾನು ಮನದಲ್ಲಿ ತುಂಬಾ ನೊಂದಿದ್ದೆ. ಆದರೆ ಇದಕ್ಕಿಂತಲೂ ಬೇಸರವೆನಿಸಿದ್ದು ನನಗಿಂತಲೂ ಕಡಿಮೆ ಅಂಕ ಪಡೆದ ನನ್ನ ಕ್ಲಾಸ್ ಮೇಟ್‌ಗಳು ಕೆಲಸಕ್ಕೆ ಸೇರಿದಾಗ!! ಮನುಷ್ಯನ ಗುಣ ಇಷ್ಟೇ ಅಲ್ವಾ?! ಯಾವುದಾದರೂ ನಮಗೆ ಬೇಕಾದ್ದು ಸಿಗದೇ ಹೋದಾಗ, ಸಿಗದ ಬೇಸರಕ್ಕಿಂತ ನಮ್ಮ ಪರಿಚಿತನಿಗೆ ಸಿಕ್ಕಾಗ ಆಗುವ ಬೇಸರವೇ ಹೆಚ್ಚಾಗಿರುತ್ತದೆ.

ಪದೇ ಪದೇ ನಾನು ಪರೀಕ್ಷೆಯಲ್ಲಿ ಮಾಡಿಕೊಂಡ ಮಿಸ್ಟೇಕ್‌ಗಳು ಕಣ್ಣ ಮುಂದೆ ಬಂದು ಹೋಗುತ್ತಿದ್ದವು. ತಿಂಗಳಾನುಗಟ್ಟಲೇ ಒಬ್ಬನೇ ಯಾರಿಗೂ ಗೊತ್ತಾಗದಂತೆ ಅತ್ತೆ. ಯಾರ ಬಳಿಯಲ್ಲೂ ಈ ದುಃಖವನ್ನು ಹೇಳಿಕೊಳ್ಳಲಿಲ್ಲ. ಒಂದು ಮಾತಿದೆ. “ನಾವು ಯಾರ ಬಳಿಯಾದರೂ ಸಮಸ್ಯೆ ಹೇಳಿಕೊಂಡರೆ ಶೇಕಡಾ 70 ರಷ್ಟು ಜನ ಅದರ ಬಗ್ಗೆ ಕೇರ್ ಮಾಡೋದಿಲ್ಲವಂತೆ. ಹಾಗೆಯೇ 30 ಶೇಕಡಾರಷ್ಟು ಜನ ನಮ್ಮ ಸಮಸ್ಯೆಯನ್ನು ಕೇಳಿ ಅಣಕವಾಡಿಕೊಂಡು ನಗುತ್ತಾರಂತೆ!! ಈ ಮಾತನ್ನು ತಿಳಿದ ನಾನು ಪರರ ಮುಂದೆ ಸಾಮಾನ್ಯವಾಗಿ ಇರತೊಡಗಿದೆ.

Free microphone image, public domain concert CC0 photo.

ಇತ್ತ ‘ನನಗೆ ಕೆಲಸ ಸಿಕ್ಕೇ ಸಿಗುತ್ತದೆ’ ಎಂದು ಭಾವಿಸಿದ್ದ  ಸಂಬಂಧಿಕರು ನನ್ನ ಬಗ್ಗೆ ತಾತ್ಸಾರ ಮಾಡಲು ಶುರು ಮಾಡಿದರು. ಕೆಲವರು ವ್ಯಂಗ್ಯದ ಮಾತಿನ ಮೂಲಕ ಚುಚ್ಚಲು ಶುರು ಮಾಡಿದರು. “ಗೆದ್ದರೆ ಆಡೋಕೆ ಬಂದಿದ್ದೆ ಸೋತರೆ ನೋಡೋಕೆ ಬಂದಿದ್ದೆ” ಎಂಬ ಜನರ ನಡುವೆ ಇದೆಲ್ಲಾ ಕಾಮನ್. ಎಲ್ಲರೂ ಗೆದ್ದ ಎತ್ತಿನ ಬಾಲ ಹಿಡಿಯುವವರೇ!! ಒಬ್ಬ ವ್ಯಕ್ತಿಗೆ ಸೋಲು ಕಲಿಸುವ ಪಾಠ ದೊಡ್ಡದು. ಇದರಿಂದ ನಾನು ಮಾನಸಿಕವಾಗಿ ಗಟ್ಟಿಯಾದೆನೇ ಹೊರತು ಅವರ ವ್ಯಂಗ್ಯದ ಮಾತುಗಳಿಗೆ ಬಗ್ಗಲಿಲ್ಲ. ಕೆಲಸವಿಲ್ಲದೇ ಸುಮ್ಮನೇ ಕೂರುವುದು ಬೇಡ ಎಂದುಕೊಂಡು ಒಂದು ಸೀಡ್ಸ್ ಕಂಪೆನಿಯಲ್ಲಿ ಮಾರ್ಕೆಟಿಂಗ್‌ಗಾಗಿ ಪೋಸ್ಟರ್ ಬಳಿಯಲು ಹೋದೆ. ನನಗೆ ದಿನಕ್ಕೆ 80 ರೂನಂತೆ ವೇತನ ಕೊಡುತ್ತಿದ್ದರು. ಹಿಂದೆ ಯಾವುದೇ ಜಾಹೀರಾತುಗಳನ್ನಾಗಲೀ ಒಂದು ಪೇಪರ್ ಮೇಲೆ ಮುದ್ರಿಸಿ ಅದನ್ನು ಯಾವುದಾದರೂ ಗೋಡೆ ಅಥವಾ ಅಂಗಡಿಯ ಬಾಗಿಲ ಮೇಲೆ ಅಂಟಿಸುತ್ತಿದ್ದರು. ನಾನು ಪ್ರಕಾಶನ ಜೊತೆ ಈ ಕೆಲಸಕ್ಕೆ ಹೋದಾಗ ಮೊದಮೊದಲು ಹೇಗಪ್ಪಾ ಈ ಕೆಲಸ ಮಾಡೋದು?! ನನ್ನ ಪರಿಚಿತರು ನೋಡಿದರೆ ಏನಂದುಕೊಂಡಾರು ಎಂಬ ಭಾವನೆ ಇದ್ದುದರಿಂದ ನಾನು ನಮ್ಮ ಮ್ಯಾನೇಜರ್‌ಗೆ ಒಂದು ಕಂಡೀಷನ್ ಹಾಕಿದ್ದೆ. ನನ್ನನ್ನು ನಮ್ಮ ತಾಲ್ಲೂಕನ್ನು ಬಿಟ್ಟು ಬೇರೆ ತಾಲ್ಲೂಕನ್ನು ಹಾಕಬೇಕೆಂದು. ನನ್ನ ಮನವಿಯಂತೆ ಅವರು ನನ್ನನ್ನು ಹರಪನಹಳ್ಳಿ ತಾಲ್ಲೂಕಿಗೆ ಹಾಕಿದರು.

ನಮ್ಮ ಈ ಪೋಸ್ಟರ್ ಬಳಿಯುವ ಕೆಲಸವು ಬೆಳಗ್ಗೆ 9 ಘಂಟೆಗೆ ಶುರುವಾದ ಕೆಲಸವು ಸಂಜೆ 6 ರವರೆಗೂ ನಡೆಯುತ್ತಿತ್ತು. ನಮ್ಮ ವೇತನವನ್ನು ನಾವು ಕೊನೆಗೆ ಕೊಡುವಂತೆ ಕೇಳಿಕೊಂಡಿದ್ದರಿಂದ ಅವರು ನಮ್ಮ ತಿಂಡಿ ಊಟಕ್ಕೆ ಮಾತ್ರ ಹಣ ಕೊಡುತ್ತಿದ್ದರು.

ನಿಯತ್ತಿನಿಂದ ಮಾಡುವ ಕೆಲಸವು ಯಾವುದಾದರೇನು? ‘ಕಾಯಕವೇ ಕೈಲಾಸ’ ಎಂಬಂತೆ ಅದನ್ನು ನಾವು ಪ್ರಾಮಾಣಿಕವಾಗಿ ಮಾಡಬೇಕಷ್ಟೆ. ನಾನು ಖುಷಿಯಿಂದಲೇ ಈ ಕೆಲಸ ಮಾಡುವಾಗ ನನ್ನ ಜೊತೆಗೆ ಕೆಲಸ ಮಾಡುವವರು ಇವರು ನಮಗಿಂತಲೂ ಜಾಸ್ತಿ ಓದಿ ಈ ಕೆಲಸ ಮಾಡೋಕೆ ಬರ್ತಿದ್ದಾರೆ ಅಂದಾಗ ಮಾತ್ರ ಬೇಸರವೆನಿಸೋದು! ಆದರೂ ಅನಿವಾರ್ಯ. ಪೋಸ್ಟರ್ ಬಳಿಯೋ ಕೆಲಸವನ್ನು ಮಾಡಿದೆ. ಕೆಲವರಂತೂ ಅಂಗಡಿಯ ಮುಂದೆ ಪೋಸ್ಟರ್ ಅಂಟಿಸಲು ಹೋದಾಗ ಬಯ್ಯುತ್ತಿದ್ದರು. ಕೆಲವರು ಸುಮ್ಮನಿರುತ್ತಿದ್ದರು. ಬರೀ ಪೋಸ್ಟರನ್ನು ಅಂಟಿಸುವ ಕೆಲಸದ ಜೊತೆಗೆ ‘ಲಕ್ಷ್ಮೀ ಬೀಜಗಳನ್ನು ಬಿತ್ತಿರಿ’ ಎಂದು ಪೇಂಟ್‌ನಿಂದ ಯಾವುದೇ ಹಳೇ ಗೋಡೆಗಳ ಮೇಲೆ ಬರೆಯಬೇಕಾಗಿತ್ತು. ನನ್ನ ಬರೆಹವು ಸುಂದರವಾಗಿದ್ದರಿಂದ ನನಗೆ ಇದೇ ಕೆಲಸಕ್ಕೆ ಹಚ್ಚಿದ್ದರು. ಹೀಗೆ ಕೆಲಸ ಮಾಡುತ್ತಿದ್ದಾಗ ಒಂದು ಹಳ್ಳಿಯಲ್ಲಿ ಆದ ಕಹಿ ಅನುಭವವನ್ನು ನಾನು ನಿಮಗೆ ಹೇಳಲೇಬೇಕು.

ನಾವು ಪೋಸ್ಟರನ್ನು ಅಂಟಿಸುತ್ತಾ ಲಕ್ಷ್ಮೀ ಮೆಕ್ಕೆಜೋಳದ ಬೀಜಗಳ ಬಗ್ಗೆ ಪ್ರಚಾರ ಮಾಡುತ್ತಾ ಹೋಗುತ್ತಿದ್ದಾಗ ಒಂದು ಹಳ್ಳಿಯವರು ನಮ್ಮನ್ನು ಸುತ್ತುವರೆದು “ಕಳೆದ ವರ್ಷ ಇದೇ ಬೀಜಗಳನ್ನು ಬಿತ್ತಿದ್ದೆವು. ನಮಗೆ ಬೆಳೆ ಲಾಸ್ ಆಗಿದೆ. ಅವು ಸರಿಯಾಗಿ ಹುಟ್ಟಿಲ್ಲ. ಆದ್ದರಿಂದ ಆ ನಷ್ಟವನ್ನು ನೀವೇ ಭರಿಸಬೇಕು” ಎಂದು ನಮ್ಮನ್ನು ಕೇಳಲು ಶುರು ಮಾಡಿದರು. ಅದೇನೋ ಹೇಳ್ತಾರಲ್ಲಾ. ‘ಮದುವೆ ಆಗೋ ತಿಮ್ಮ ಅಂದ್ರೆ ನೀನೇ ನನ್ನ ಹೆಂಡ್ತಿ ಆಗೋ ಅಂದ್ನಂತೆ’ ಅನ್ನೋ ಹಾಗಾಯ್ತು ನಮ್ಮ ಪರಿಸ್ಥಿತಿ. ನಮ್ಮನ್ನು ಹಳ್ಳಿಯವರು ಹಾಗೇ ಕೇಳಿದಾಗ ನಾವು ನಮ್ಮ “ಮ್ಯಾನೇಜರ್‌ನ ಕರೆದುಕೊಂಡು ಬರ್ತೀವಿ” ಎಂದು ಹೇಳಿ ಅಲ್ಲಿಂದ ತಪ್ಪಿಸಿಕೊಂಡು ಓಡಿದೆವು!!

ಇದೇ ರೀತಿ ಇನ್ನೊಮ್ಮೆ ಒಂದು ಊರಿನಲ್ಲಿ ಊಟಕ್ಕೆಂದು ನಮ್ಮ ಮ್ಯಾನೇಜರ್‌ನ ಸಲಹೆಯಂತೆ ಒಂದು ಮದುವೆ ಛತ್ರಕ್ಕೆ ಹೋದೆವು. ಆದರೆ ಅಲ್ಲಿ ನನ್ನ ಸೀನಿಯರ್‌ಗಳು ಸಿಕ್ಕು ನನಗೆ ಮುಜುಗರವುಂಟಾಗಿತ್ತು. ನಮಗೆ ಕೊಡಲಾಗಿದ್ದ ವ್ಯಾನಿನಲ್ಲಿ ಕುಳಿತು ಅದಕ್ಕೊಂದು ಮೈಕ್ ಸೆಟ್ ಹಾಕಿಕೊಂಡು ಲಕ್ಷ್ಮೀ ಬೀಜಗಳನ್ನು ಬಿತ್ತಿರಿ ಎಂದು ಊರೂರಿಗೆ ಹೇಳಿಕೊಂಡು ಹೋಗುವುದು ಸರಿಸುಮಾರು 2 ತಿಂಗಳವರೆಗೆ ನಡೆದಿತ್ತು. ಮ್ಯಾನೇಜರ್ ಈ ಕೆಲಸ ಮುಗಿದ ಕೂಡಲೇ ನಮ್ಮನ್ನು ಕರೆದು ನಾವು ಕೆಲಸ ಮಾಡಿದ ವೇತನವನ್ನು ನೀಡಿದರು. ಹಾಗೆಯೇ “ನಿಮ್ಮ ಕೆಲಸ ಮುಗಿಯಿತು, ಮತ್ತೆ ಮುಂದಿನ ವರ್ಷ ಬೇಕಾದರೆ ನಿಮ್ಮನ್ನೇ ಕರೆಯುತ್ತೇವೆ” ಎಂದಾಗ ನನಗೆ ತುಂಬಾ ಬೇಸರವೆನಿಸಿತ್ತು. ಇಷ್ಟು ದಿನ ಯಾವುದೋ ಒಂದು ಉದ್ಯೋಗವಿತ್ತು. ಆದರೆ ಇನ್ಮುಂದೆ ಮನೆಯಲ್ಲಿ ಹೇಗಪ್ಪಾ ಕಾಲ ಕಳೆಯೋದು? ಅಂತಾ ವಾಪಸ್ಸು ಮನೆಗೆ ಹೋದೆ. ಹಾಗೆಯೇ ಒಮ್ಮೆ ಒಂದು ಸಂದರ್ಶನಕ್ಕೆ ಹೋದೆ. ಅಲ್ಲಿ ಮನೆ ಮನೆಗೆ ಹೋಗಿ ಮಾರ್ಕೆಟಿಂಗ್ ಮಾಡಬೇಕು ಅಂದಿದ್ದಕ್ಕೆ ಆ ಕೆಲಸಕ್ಕೆ ಸೇರಲಿಲ್ಲ.

ಜೂನ್ ತಿಂಗಳು ಪ್ರಾರಂಭದ ಸಮಯದಲ್ಲಿ ದಾವಣಗೆರೆಯ ಶಾಲೆಯೊಂದಕ್ಕೆ ಸಂದರ್ಶನಕ್ಕೆ ಹೋಗಿ ಅಲ್ಲಿ ಆಯ್ಕೆಯೂ ಆದೆ. ಆದರೆ ಅವರು ಬರೀ 1300 ರೂ ಗಳನ್ನು ವೇತನವಾಗಿ ಕೊಡುತ್ತಿದ್ದರು. ಹಾಸ್ಟೆಲ್ ಇರಲಿಲ್ಲ. ನಾನು ಈ ಶಾಲೆಗೆ ನಮ್ಮಜ್ಜಿ ಊರಿಂದ ಓಡಾಡಲು ಶುರು ಮಾಡಿದೆ. ಕೊನೆಗೆ ದಾವಣಗೆರೆಯಲ್ಲಿಯೇ ರೂಮ್ ಮಾಡಲು ನಿರ್ಧರಿಸಿ ನಾನು ಅದೇ ಶಾಲೆಯ ಇನ್ನೊಬ್ಬರು ಸೇರಿ ಒಂದು ರೂಮು ಮಾಡಿದೆವು. ತುಂಬಾ ಚಿಕ್ಕ ರೂಮು. ಬಾಡಿಗೆ ಬರೀ 500 ರೂ ಮಾತ್ರ ಇತ್ತು. ಆದರೆ ಬಡಾವಣೆ ಮಾತ್ರ ಪ್ರತಿಷ್ಟಿತ ಬಡಾವಣೆ. 5 ಕೆಜಿಯ ಒಂದು ಗ್ಯಾಸನ್ನು ಇಟ್ಟುಕೊಂಡಿದ್ದೆವು. ಬೆಳಗ್ಗೆ ತಿಂಡಿಗೆಂದು 5 ರೂ, ಮಧ್ಯಾಹ್ನ ಸಾಂಬಾರ್‌ಗೆ 5 ರೂ ಹಾಗೂ ರಾತ್ರಿ ಸಾಂಬಾರ್‌ಗೆ 5 ರೂ ಮಾತ್ರ ಖರ್ಚಾಗುತ್ತಿತ್ತು. ಅನ್ನವನ್ನು ರೂಮಿನಲ್ಲಿಯೇ ಮಾಡಿಕೊಳ್ಳುತ್ತಿದ್ದೆವು. ತಿಂಗಳಿಗೆ 600 ರೂ ಗಳಲ್ಲಿಯೇ ಇಡೀ ತಿಂಗಳ ಖರ್ಚು ವೆಚ್ಚವನ್ನು ನೋಡಿಕೊಳ್ಳುತ್ತಿದ್ದೆವು. ಆ ಶಾಲೆ ಪ್ರತಿಷ್ಟಿತ ಶಾಲೆಯಾದುದರಿಂದ ನಾವೂ ಮಕ್ಕಳಂತೆ ತುಂಬಾ ಸ್ಟ್ಯಾಂಡರ್ಡ್ ಆಗಿ ಹೋಗಲು ಸಾಧ್ಯವಾಗದಿದ್ದರೂ ತಕ್ಕಮಟ್ಟಿಗೆ ಹೋಗುತ್ತಿದ್ದೆವು.

ಆ ಶಾಲೆಯಲ್ಲಿ 1 ರಿಂದ 10 ನೇ ತರಗತಿ, ಹಾಗ ಬಿಎಡ್ ಕೋರ್ಸ್‌ಗಳೂ ಇದ್ದವು. ನಮ್ಮ ಶಾಲೆಯಲ್ಲಿ 2 ಹಾಜರಾತಿ ಪುಸ್ತಕಗಳನ್ನು ನಿರ್ವಹಿಸಲಾಗುತ್ತಿತ್ತು. 9:30 ಕ್ಕೆ ಶಾಲೆಗೆ ಬಂದವರಿಗೆಂದು. ನಂತರ ಬಂದವರಿಗೆಂದು ಬೇರೊಂದು ಹಾಜರಾತಿ ಪುಸ್ತಕ!! ಈ ಶಾಲೆಯಲ್ಲಿ ನಾನು ಮುಂದುವರಿದೆನೇ ಅಥವಾ ಅದನ್ನು ಮಧ್ಯಂತರದಲ್ಲಿ ಬಿಟ್ಟೆನೇ?? ಬಿಡಲು ಕಾರಣವೇನು? ಈ ಶಾಲೆಯಲ್ಲಿ ನನಗಾದ ಹಾಸ್ಯದ ಅನುಭವಗಳನ್ನು ಮುಂದಿನ ಸಂಚಿಕೆಯಲ್ಲಿ ತಿಳಿಸಬಯಸುತ್ತೇನೆ.

ಜೀವನವು ನಾವಂದುಕೊಂಡಂತೆ ಅಲ್ಲ. ಹಲವಾರು ತಿರುವುಗಳು, ಕಷ್ಟಗಳು ನಮಗೆ ಬರಬಹುದು. ಆದರೆ ಅವನ್ನು ಎದುರಿಸಿ ನಾವು ಮುನ್ನಡೆಯಬೇಕಷ್ಟೆ. ಅವಕ್ಕೆ ಹೆದರಿಕೊಂಡು ಕುಳಿತರೆ ನಾವು ಯಶಸ್ವೀ ಪುರುಷರಾಗಲು ಸಾಧ್ಯವಿಲ್ಲ. ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ ಜಗ್ಗದೆಯೇ ಕುಗ್ಗದೆಯೇ ನುಗ್ಗಿ ನಡೆ ಮುಂದೆ ಎಂದು ನಾವು ಮುನ್ನಡೆದರೆ ಮಾತ್ರ ನಮಗೆ ಸಮಾಜದಲ್ಲಿ ಮನ್ನಣೆ ಸಿಗುತ್ತದೆ.

About The Author

ಬಸವನಗೌಡ ಹೆಬ್ಬಳಗೆರೆ

ಬಸವನಗೌಡ ಹೆಬ್ಬಳಗೆರೆ  ಶಿವಮೊಗ್ಗದ ಸ.ಪ್ರೌ.ಶಾಲೆ, ಮಸಗಲ್ಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಬಂಧ, ಲೇಖನ, ಕವನ ಹಾಗೂ ಕಥೆ ಬರೆಯುವುದು ಹಾಗೂ ಓದುವುದು ಇವರ ಹವ್ಯಾಸಗಳು. “ಬೋಳಾಯಣ” ಇವರ ಪ್ರಕಟಿತ ಹನಿಗವನ ಸಂಕಲನ.

1 Comment

  1. Paramesh N K

    ಸೊಗಸಾಗಿದೆ mestre

    Reply

Leave a comment

Your email address will not be published. Required fields are marked *

ಜನಮತ

ಬದುಕಲು ನಿಮಗೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ