Advertisement
ಪ್ರಾಚೀನ ಚಿನ್ನದ ಗಣಿಗಾರಿಕೆ: ಡಾ. ಎಂ. ವೆಂಕಟಸ್ವಾಮಿ ಸರಣಿ

ಪ್ರಾಚೀನ ಚಿನ್ನದ ಗಣಿಗಾರಿಕೆ: ಡಾ. ಎಂ. ವೆಂಕಟಸ್ವಾಮಿ ಸರಣಿ

ಧಾರವಾಡ ಜಿಲ್ಲೆಯ ಚಿನ್ಮಲ್ಗುಂಡ್ ಪ್ರದೇಶದಲ್ಲಿ ಪ್ರಾಚೀನ ಚಿನ್ನದ ಗಣಿಗಳು ವಿಜಯನಗರ ಸಾಮ್ರಾಜ್ಯ ಮತ್ತು ಟಿಪ್ಪು ಸುಲ್ತಾನ್ ಕಾಲದಲ್ಲಿ ಕಾರ್ಯ ನಿರ್ವಹಿಸುತ್ತಿದ್ದವು. ಇದೇ ಪ್ರದೇಶದ ಹದಬನತ್ತ ಚಿನ್ನದ ಗಣಿಗಳು ಮತ್ತು ಆಂಧ್ರಪ್ರದೇಶದ ರಾಮಗಿರಿ ಚಿನ್ನದ ಗಣಿಗಳು ಟಿಪ್ಪು ಕಾಲದಲ್ಲಿ ಸಕ್ರಿಯವಾಗಿದ್ದವು ಎಂದು ಹೇಳಲಾಗುತ್ತದೆ. ಭಾರತದಲ್ಲಿ ಇತರ ಲೋಹಗಳಿಗೆ ಹೋಲಿಸಿದರೆ ಚಿನ್ನದ ಗಣಿಗಾರಿಕೆಯ ಬಗ್ಗೆ ಇತಿಹಾಸದಲ್ಲಿ ಅಷ್ಟೊಂದು ನಿಖರವಾದ ಲಿಖಿತ ದಾಖಲೆಗಳು ದೊರಕುವುದಿಲ್ಲ ಎಂದೇ ಹೇಳಬೇಕು.
ಡಾ.
ಎಂ. ವೆಂಕಟಸ್ವಾಮಿ ಅನುವಾದಿತ “ಭಾರತದಲ್ಲಿ ಪ್ರಾಚೀನ ಗಣಿಗಾರಿಕೆ” ಸರಣಿಯಲ್ಲಿ ಮೂರನೆಯ ಅಧ್ಯಾಯ

ಮನುಷ್ಯನ ಅತ್ಯಂತ ಪ್ರಾಚೀನ ಭಾಷೆಯಾದ ಸಂಸ್ಕೃತದಲ್ಲಿ ಚಿನ್ನದ ಬಗ್ಗೆ ಹಲವಾರು ಹೆಸರುಗಳು ಇರುವುದರಿಂದ ಚಿನ್ನದ ವ್ಯಾಮೋಹ ಬಹಳ ಹಿಂದಿನಿಂದಲೇ ಇದೆ ಎನ್ನಬಹುದು. ಇದರ ಜೊತೆಗೆ ಅನೇಕ ದೇಶಿ ಭಾಷೆಗಳು, ಉಪ ಭಾಷೆಗಳು ಮತ್ತು ಬುಡಕಟ್ಟು ಭಾಷೆಗಳಲ್ಲೂ ಚಿನ್ನಕ್ಕೆ ನೂರಾರು ಹೆಸರುಗಳಿವೆ. ಋಗ್ವೇದ, ಶಾಸ್ತ್ರಗಳು, ಪುರಾಣಗಳು, ರಾಮಾಯಣ, ಮಹಾಭಾರತ ಇತ್ಯಾದಿ ಗ್ರಂಥಗಳಲ್ಲೂ ಚಿನ್ನದ ಬಗ್ಗೆ ಹೇರಳ ಉಲ್ಲೇಖಗಳಿವೆ. ಹೀಬ್ರೂ, ಗ್ರೀಕ್ ಮತ್ತು ರೋಮನ್ ಭಾಷೆಗಳಲ್ಲೂ ಚಿನ್ನದ ಬಗ್ಗೆ ಹಲವು ರೀತಿಯ ವಿವರಗಳು ದೊರಕುತ್ತವೆ. ಚರಿತ್ರೆಯ ಉದ್ದಕ್ಕೂ ಎಲ್ಲಾ ಭಾಷೆಯ ಸಾಹಿತ್ಯದಲ್ಲೂ ಚಿನ್ನದ ಬಗ್ಗೆ ವಿಪುಲ ವಿವರಣೆಗಳು ದೊರಕುತ್ತವೆ. ಆದರೆ ಪ್ರಾಚೀನ ಕಾಲದಲ್ಲಿ ಚಿನ್ನವನ್ನು ಯಾರು ತೆಗೆಯುತ್ತಿದ್ದರು? ಎಲ್ಲೆಲ್ಲಿ ಚಿನ್ನದ ಗಣಿಗಳಿದ್ದವು ಎನ್ನುವ ವಿವರಗಳು ಯಾವ ಭಾಷೆಯಲ್ಲೂ ನಿಖರವಾಗಿ ದಾಖಲಾಗಿಲ್ಲ. ಚಿನ್ನಕ್ಕೆ 600 ವರ್ಷಗಳ ಚರಿತ್ರೆ ಇದ್ದರೂ ತೀರಾ ಇತ್ತೀಚೆಗೆ ಅಂದರೆ ಕಳೆದ 300 ವರ್ಷಗಳಲ್ಲಿ ಚಿನ್ನದ ಗಣಿಗಳ ವಿವರಗಳನ್ನು ಪ್ರಪಂಚದಾದ್ಯಂತ ಕೂಲಂಕುಷವಾಗಿ ಶೋಧನೆ ಮಾಡಿ ದಾಖಲಿಸಲಾಗಿದೆ.

ಭಾರತದ ಚಿನ್ನದ ಪರಂಪರೆ ವಿದೇಶಿಯರ ಕಣ್ಣುಗಳಿಗೆ ಸದಾ ಅದ್ಭುತಗಳ ತವರಾಗಿ ಕಂಡಿದೆ. ಭಾರತವನ್ನು ಋಷಿಗಳ ಪುಣ್ಯಭೂಮಿ ಮತ್ತು ಸಾಧುಸಂತರ ನಾಡೆಂದು ಕರೆದರು. ಪ್ರಾಚೀನರು ಚಿನ್ನಕ್ಕೆ ಬಹಳ ದೊಡ್ಡ ಸ್ಥಾನ ಕೊಟ್ಟಿದ್ದು ವೇದಗಳಲ್ಲೂ ಚಿನ್ನ ಅಮೂಲ್ಯ ಸ್ಥಾನವನ್ನು ಪಡೆದುಕೊಂಡಿದೆ. ಪುರಾಣಗಳಲ್ಲಂತೂ ಚಿನ್ನವನ್ನು ದೈವಲೋಹವೆಂದು ಸಾರುವ ಅನೇಕ ಕತೆ ಮತ್ತು ಉಪಕತೆಗಳೂ ಇವೆ. ವೇದಕಾಲದಿಂದಲೂ ಭಾರತೀಯರಿಗೆ ಚಿನ್ನ ಶ್ರೇಷ್ಠ ಲೋಹವಾಗಿ ಕಂಡಿದೆ. ಋಗ್ವೇದದ ಶ್ರೀಸೂಕ್ತದ ಹಲವು ಋಕ್ಕುಗಳು ಚಿನ್ನದ ಹಿರಿಮೆಯನ್ನು ಕೊಂಡಾಡುತ್ತವೆ. ಶ್ರೀಸೂಕ್ತದ ಮೊದಲ ಋಕ್ ಪ್ರಾರಂಭವಾಗುವುದೇ ಲಕ್ಷ್ಮಿಯನ್ನು ಸ್ತುತಿಸುವುದರ ಮೂಲಕ.

ಆರ್ಯ ಋಷಿಗಳು ಲಕ್ಷ್ಮಿಯ ಕಟಾಕ್ಷದಿಂದ ಸುವರ್ಣ, ಗೋವು, ಅಶ್ವ, ಸಂಪತ್ತುಗಳನ್ನು ಬೇಡಿದರು. ಲಕ್ಷ್ಮಿಯನ್ನು ಹಿರಣ್ಮಯೀ ಎಂದು ಸ್ತುತಿಸಿದರು. ಚಿನ್ನದ ಆಕರ್ಷಕ ಬಣ್ಣ ವೇದ ಕಾಲದ ಋಷಿಗಳ ಗಮನವನ್ನು ಸೆರೆ ಹಿಡಿದಿತ್ತು. ಚಿನ್ನ ಕೇವಲ ಅಲಂಕಾರದ ಆಭರಣವಾಗದೆ ಉಪಮೆಗಳಾಗಿಯೂ ಬಳಕೆಯಾಯಿತು. ಋಗ್ವೇದದಲ್ಲಿ ಅನೇಕ ಲೋಹಗಳ ಪ್ರಸ್ತಾಪ ಮಾಡುವುದರ ಜೊತೆಗೆ ಅವುಗಳನ್ನು ಸಂಸ್ಕರಿಸುವ ವಿಧಾನವನ್ನೂ ತಿಳಿಸಿದೆ. ಯಜ್ಞ ಯಾಗಾದಿಗಳಲ್ಲಿ ನೀಡುತ್ತಿದ್ದ ಅಶ್ವಗಳ ಬಲಿಯಲ್ಲಿ, ಬಲಿ ನೀಡಿದ ನಂತರ ಬಲಿಯನ್ನು ಚಿನ್ನದ ಸೂಜಿಗಳಲ್ಲಿ ಚುಚ್ಚುತ್ತಿದ್ದರು ಎಂಬುದಾಗಿ ಶತಪಥ ಬ್ರಾಹ್ಮಣದಲ್ಲಿ ಉಲ್ಲೇಖಿಸಲಾಗಿದೆ. ಚಿನ್ನವನ್ನು ಕಳವು ಮಾಡಿದರೆ ಮರಣ ದಂಡನೆ ಮತ್ತು ಘೋರ ಶಿಕ್ಷೆಗಳನ್ನು ವಿಧಿಸಲು ಆಪಸ್ತಂಭ, ಗೌತಮ ಋಷಿಗಳು ಸೂಚಿಸಿದ್ದರು. ಚಿನ್ನದ ಆಭರಣಗಳನ್ನು ಧರಿಸುವುದೇ ಶೋಭಾಯಮಾನ, ಅದು ಅಂತಸ್ತು ಗೌರವವನ್ನು ಹೆಚ್ಚಿಸುತ್ತದೆ, ರೋಗ ಪರಿಹಾರಕ ಎಂಬ ಭಾವನೆಯೂ ಇದೆ.

ಪಂಜಾಬಿನ ನದಿಗಳ ಮೆಕ್ಕಲು ಮಣ್ಣಿನಲ್ಲಿ ಚಿನ್ನವನ್ನು ಸೋಸುತ್ತಿದ್ದರ ಬಗ್ಗೆ ಶತಪಥ ಬ್ರಾಹ್ಮಣದಲ್ಲಿ (ಶುಕ್ಲ ಯಜುರ್ವೆದ) ಸ್ಪಷ್ಟವಾಗಿ ದಾಖಲಿಸಲಾಗಿದೆ. ಋಗ್ವೇದ ಒಂದರಲ್ಲೇ ಚಿನ್ನಕ್ಕೆ 16 ಹೆಸರುಗಳಿವೆ. ಆಭರಣಗಳು ತಯಾರಿಸುವುದರಿಂದ ಹಿಡಿದು ಹೋಮಗಳಲ್ಲಿ ಉಪಯೋಗಿಸುತ್ತಿದ್ದ ಮಡಿಕೆ, ಕುಡಿಕೆ, ಚಮಚ ಇತ್ಯಾದಿಗಳನ್ನು ತಯಾರಿಸುವಾಗಲೂ ಚಿನ್ನವನ್ನು ಉಪಯೋಗಿಸಲಾಗುತ್ತಿತ್ತು. ವೇದ ಕಾಲದ ಋಷಿಗಳು ಹಿಮಾಲಯದಲ್ಲಿ ಹುಟ್ಟುವ ನದಿಗಳನ್ನು ಸ್ವರ್ಣ ನದಿಗಳೆಂದೇ ಕರೆದರು. ಋಗ್ವೇದದಲ್ಲಿ ಸಿಂಧೂ ನದಿಯನ್ನು ಹಿರಣ್ಯಾನಿ, ಹಿರಣ್ಯವರ್ಣಿ ಎಂದೇ ಸಂಬೋಧಿಸಲಾಗಿದೆ.

ಪುರಾಣಗಳು ಮೇರು ಪರ್ವತವನ್ನು ಚಿನ್ನದ ಪರ್ವತವೆಂದೇ ಹೊಗಳಿವೆ. ಹಿಮಾಲಯದ ಉತ್ತರಕ್ಕಿರುವ ಮಂಗೋಲಿಯ ಭಾಗದ “ಅಲ್ಟಾಯ್” ಪ್ರದೇಶವೇ ಈ ಮೇರು ಪರ್ವತ ಎನ್ನುವುದು ಕೆಲವು ಪಂಡಿತರ ಊಹೆ. ಆ ಪ್ರದೇಶದಲ್ಲಿ ಚಿನ್ನ ದೊರೆಯುವುದಲ್ಲದೆ, ಜಂಬೂ ನದಿಯೂ ಇದೆ. ಚಿನ್ನ ದೇವತೆಗಳ ಅಲಂಕಾರಕ್ಕೆ ಯೋಗ್ಯವಾದುದು. ಇಂದ್ರಗೋಪವೆಂಬ ಹುಳುವಿನಂತೆ ಪ್ರಕಾಶಯುಕ್ತವಾದದ್ದು. ಹೀಗೆಂದು ಮತ್ಸ್ಯ ಪುರಾಣ ಚಿನ್ನದ ಪ್ರಾದೇಶಿಕತೆಯನ್ನು ವಿವರಿಸುತ್ತದೆ. ತ್ರಿಪುರೋಪಾಖ್ಯಾನದಲ್ಲಿ ತ್ರಿಪುರಾಸುರರು, ಬ್ರಹ್ಮನನ್ನು ದೇವತೆಗಳು ಭೇದಿಸಲಾರದಂತಹ ಕೋಟೆ ಕಟ್ಟಲು ವರವನ್ನು ಕರುಣಿಸುವಂತೆ ಕೇಳುವ ಪ್ರಸಂಗವಿದೆ. ಶಿಲ್ಪಿಗಳು ಅವರಿಗಾಗಿ ಭೂಮಿಯ ಮೇಲೆ ಕಬ್ಬಿಣದ ನಗರ, ಆಕಾಶದಲ್ಲಿ ಬೆಳ್ಳಿಯ ನಗರ, ಅದರ ಮೇಲೆ ಚಿನ್ನದ ನಗರ ನಿರ್ಮಿಸಿದರಂತೆ. ಒಂದೊಂದು ಪಟ್ಟಣವೂ ನೂರು ಯೋಜನೆಗಳ ಉದ್ದ ಮತ್ತು ನೂರು ಯೋಜನೆಗಳ ಅಗಲ. ಪುರಾಣಗಳು ಏನೇ ಹೇಳಲಿ, ಅವುಗಳನ್ನು ರಚಿಸುವ ಕಾಲಕ್ಕೆ ಚಿನ್ನ, ಬೆಳ್ಳಿ, ಕಬ್ಬಿಣ ಇನ್ನಿತರ ಲೋಹಗಳನ್ನು ಮನುಷ್ಯರು ಉಪಯೋಗಿಸುತ್ತಿದ್ದರು ಎನ್ನುವುದು ನಿರ್ವಿವಾದ.

ಭಾರತದಲ್ಲಿ ಕ್ರಿ.ಪೂ. 4000 ರಿಂದ ಕ್ರಿ.ಪೂ. 2000ರ ನಡುವೆ ಕೆಜಿಎಫ್ ಮತ್ತು ಮಧ್ಯ ಏಷ್ಯಾದ ಪ್ರದೇಶಗಳಲ್ಲಿ ನೆಲದ ಮೇಲೆ ಮೆಕ್ಕಲು ಮಣ್ಣಿನಲ್ಲಿ ಅಥವಾ ಬೆಣಚು ಶಿಲೆಗಳಿಂದ ಚಿನ್ನವನ್ನು ತೆಗೆದಿರಬಹುದೆಂದು ಕವನಾಘ್ (1968) ಹೇಳುತ್ತಾರೆ. ಕ್ರಿ.ಪೂ. 2000 ರಿಂದ ಕ್ರಿ.ಪೂ. 1000ರ ನಡುವೆ ಭೂವೈಜ್ಞಾನಿಕ-ಭೂಭೌತಿಕ ಪ್ರಕ್ರಿಯೆಗಳ ಜೊತೆಗೆ ಚಿನ್ನವನ್ನು ಗುರುತಿಸುವ ಕಲ್ಪನೆ ಹುಟ್ಟಿಕೊಂಡಿರುವ ಸೂಚನೆಗಳು ಕಂಡುಬಂದಿವೆ. ಕ್ರಿ.ಪೂ. 450ರ ಸುಮಾರಿಗೆ ಹೆರೋಡೋಟಸ್ ಚಿನ್ನ ಮತ್ತು ಬೆಣಚು ಶಿಲೆಗಳ ನಡುವಿನ ಸಂಬಂಧವನ್ನು ಗುರುತಿಸಿದರು.

ಸಿಂಧೂ ನಾಗರಿಕ ತೊಟ್ಟಿಲು ತಲುಪಿದ ಕೆಜಿಎಫ್ ಮತ್ತು ಹಟ್ಟಿ ಗಣಿಗಳ ಚಿನ್ನ: ಹೈದರಾಬಾದ್ ನಿಜಾಮರ ಕಾಲದ ಅಧಿಕಾರಿ ಲಿಯೋನಾರ್ಡ್ ಮನ್ ಹೇಳುವ ಹಾಗೆ ದಕ್ಷಿಣ ಭಾರತದಲ್ಲಿ ಚಿನ್ನ ತೆಗೆಯುವ ಕೆಲಸದಲ್ಲಿ ತೊಡಗಿಕೊಂಡವರೆಲ್ಲ ಸ್ಥಳೀಯರೆ. ಭಾರತದಾದ್ಯಂತ ಅಶೋಕ ಚಕ್ರವರ್ತಿ ಸ್ಥಾಪಿಸಿದ 23 ಶಿಲಾಶಾಸನಗಳಿದ್ದು, ಅವುಗಳಲ್ಲಿ 11 ಶಾಸನಗಳು ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿವೆ. ವೀಲರ್ ಚಿನ್ನದ ಬಳಕೆಯನ್ನು ಕುರಿತಂತೆ ಹೊಸ ದೃಷ್ಟಿಕೋನವನ್ನೇ ತಳೆದರು. ಚಿನ್ನದ ಗಣಿಯ ಪ್ರಾಚೀನತೆಯನ್ನು ಪ್ರಾಚ್ಯ ಶೋಧಕರು ಸಿಂಧೂನದಿಯ ನಾಗರಿಕತೆಯವರೆಗೂ ವಿಸ್ತರಿಸುತ್ತಾರೆ.

ಸಿಂಧೂ ನಾಗರಿಕತೆಯಲ್ಲಿ ಬಳಸಿದ ಬಹುಪಾಲು ಚಿನ್ನ ತಿಳಿವರ್ಣದಿಂದ ಕೂಡಿದ್ದು ಹೆಚ್ಚು ಬೆಳ್ಳಿಯ ಅಂಶವನ್ನು ಹೊಂದಿದೆ. ಈ ಚಿನ್ನ ಕೆಜಿಎಫ್ ಮತ್ತು ಹಟ್ಟಿ (ರಾಯಚೂರು ಜಿಲ್ಲೆ) ಚಿನ್ನಕ್ಕೆ ತಾಳೆಯಾಗುತ್ತದೆ ಎನ್ನುವುದೇ ಇಲ್ಲಿನ ವಿಶೇಷ. ಈ ಎರಡು ಚಿನ್ನದ ಗಣಿಗಳನ್ನು ಬಿಟ್ಟರೆ, ಆ ಕಾಲಕ್ಕೆ ಭಾರತದಲ್ಲಿ ಯಾವ ಚಿನ್ನದ ಗಣಿಗಳೂ ಕಂಡುಬರುವುದಿಲ್ಲ. ದೇಶದ ಮೆಕ್ಕಲು ಮಣ್ಣಿನಲ್ಲಿ ತೆಗೆದ ಚಿನ್ನ ಕೆಜಿಎಫ್ ಮತ್ತು ಹಟ್ಟಿ ಚಿನ್ನಕ್ಕಿಂತ ಭಿನ್ನವಾದುದು. ಪ್ರೊ.ಆಲ್ಚಿನ್ ಮತ್ತು ಎಸ್.ಆರ್.ರಾವ್ ಅವರು ಇದೇ ವಿಷಯವನ್ನು ಎತ್ತಿ ಹಿಡಿಯುತ್ತಾರೆ.

ಕ್ರಿ.ಶ. 1906ರಲ್ಲೇ ಮೆಕ್ಲಾರೆನ್ ಎಂಬ ಭೂವಿಜ್ಞಾನಿ ಈ ಭಾಗದಲ್ಲಿ ಸಮೀಕ್ಷೆ ನಡೆಸಿ ಪುರಾತನ ಚಿನ್ನದ ಗಣಿಗಳ ಬಗ್ಗೆ ವಿವರವಾಗಿ ದಾಖಲಿಸಿದ್ದಾನೆ. ಕೆಜಿಎಫ್ ಪ್ರದೇಶದಲ್ಲಿ ಚಿನ್ನದ ಅನ್ವೇಷಣೆಯ ಬಗ್ಗೆ ನಿಖರವಾದ ದಾಖಲೆಗಳು ದೊರೆಯುವುದು ಕ್ರಿ.ಶ.1802ರಿಂದ. ಇದೇ ಸಮಯದಲ್ಲಿ ಪ್ಲಿನಿ ಇನ್ನೊಂದು ನಿಖರವಾದ ಸ್ಥಳದ ಬಗ್ಗೆ ಹೀಗೆ ದಾಖಲಿಸಿದ್ದಾನೆ: ರಾಯಚೂರಿನ ಸುತ್ತಮುತ್ತಲ ಪ್ರದೇಶಗಳಲ್ಲಿ ನವ ಶಿಲಾಯುಗದ ಅವಶೇಷಗಳು ಪತ್ತೆಯಾದಾಗ ವೀಲರ್ ಅವರ ಈ ಅಭಿಪ್ರಾಯಕ್ಕೆ ಪೂರಕವಾಗುವ ಅನೇಕ ಆಧಾರಗಳನ್ನು ಪ್ರಾಚ್ಯ ಸಂಶೋಧಕರು ನೀಡಿದ್ದಾರೆ.

ಹಟ್ಟಿ ಚಿನ್ನದ ಗಣಿಯ ಸುತ್ತಮುತ್ತಲು ನವ ಶಿಲಾಯುಗದ ಅನೇಕ ಅವಶೇಷಗಳು ಪತ್ತೆಯಾಗಿರುವುದರ ಹಿನ್ನೆಲೆಯಲ್ಲಿ “ಬಹುಶಃ ಚಿನ್ನ ಈ ಭಾಗದಿಂದಲೇ ಅಲ್ಲಿಗೆ ಪೂರೈಕೆಯಾಗಿರಬಹುದು” ಎಂದು ಬರೆದರು. ಈ ವಾದವನ್ನು ಎತ್ತಿ ಹಿಡಿದು ಎಸ್.ಆರ್.ರಾವ್ ಅವರು, ಹಟ್ಟಿ ಮತ್ತು ಕೆಜಿಎಫ್ ಗಣಿಗಳ ಚಿನ್ನ ಲೋಥಾಲ್ ಮತ್ತು ಸಿಂಧೂ ಕಣಿವೆಗೆ ಪೂರೈಕೆ ಆಗಿದೆ. ಮತ್ತು ಮಸ್ಕಿ, ಪಿಕ್ಲಿಹಾಲ್, ತೆಕ್ಕಲಕೋಟೆ, ಉತ್ತನೂರು (ಕ್ರಿ.ಪೂ.2000) ಪ್ರದೇಶಗಳಲ್ಲಿ ದೊರೆಯುವ ಬಳಪದ ಕಲ್ಲಿನ ಮಣಿ ಮಾಲೆಗಳು ಹರಪ್ಪ ನಾಗರಿಕತೆಗೆ ರವಾನೆಯಾಗಿವೆ ಎನ್ನುವುದನ್ನು ಸಾರಿ ಹೇಳುತ್ತದೆ, ಎಂದರು. ಸುಮಾರು 3000 ವರ್ಷಗಳ ಹಿಂದಿನಿಂದಲೂ ಈ ಚಿನ್ನದ ಬಯಲುಗಳಲ್ಲಿ ಚಿನ್ನ ತೆಗೆಯುವ ಚಟುವಟಿಕೆಗಳು ನಡೆದಿದ್ದರೂ ಆಧುನಿಕ ಚಿನ್ನದ ಗಣಿಗಳ ಕಾಲವನ್ನು ಬಿಟ್ಟರೆ ಅದಕ್ಕಿಂತ ಹಿಂದಿನ ಕಾಲದ ಯಾವುದೇ ನಿಖರವಾದ ದಾಖಲೆಗಳು ದೊರಕುವುದಿಲ್ಲ.

ವಸಾಹತು ಕಾಲಘಟ್ಟದೊಂದಿಗೆ ಪ್ರಾರಂಭವಾದ ಕೆಜಿಎಫ್ ಆಧುನಿಕ ಗಣಿಗಳ ಉದ್ದಿಮೆ ಇಲ್ಲಿನ ಜನರ ಜೊತೆಗೆ ಸಾಮಾಜಿಕ ಸಂಬಂಧಗಳನ್ನು ಹೊಂದಿರುವುದಲ್ಲದೆ ಅನೇಕ ರೀತಿಯ ಬದಲಾವಣೆಗಳಿಗೂ ಕಾರಣವಾಗಿದೆ. ಈ ಪ್ರದೇಶ ಶೈಕ್ಷಣಿಕ ಮತ್ತು ಆರ್ಥಿಕತೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಂಡಿದ್ದು ದೇಶದ ಮೇಲೆಯೂ ಸ್ವಲ್ಪ ಮಟ್ಟಿಗೆ ಪ್ರಭಾವ ಬೀರಿತು. ವಿಶ್ವದ ಎರಡು ಮಹಾಯುದ್ಧಗಳ ಕಾಲದಲ್ಲಿ ಬೆಂಗಳೂರಿನಲ್ಲಿ ಅನೇಕ ಕಾರ್ಖಾನೆಗಳು ಮತ್ತು ಕೈಗಾರಿಕಾ ಉದ್ಯಮಗಳು ಸ್ಥಾಪನೆಯಾಗಲು ಕಾರಣವಾಯಿತು. ಹಾಗಾಗಿ ಕೆಜಿಎಫ್ ಗಣಿಗಳನ್ನು “ತಾಯಿ ಗಣಿಗಳು” ಎಂದು ಕರೆಯಲಾಯಿತು.

ನೂರಾ ಇಪ್ಪತ್ತೊಂದು (1800 ರಿಂದ 2001) ವರ್ಷಗಳಲ್ಲಿ ತೆಗೆದ ಒಟ್ಟು ಚಿನ್ನ ಸುಮಾರು 800 ಟನ್ನುಗಳು. ಆದರೆ 1947 ರವರೆಗೆ ಬ್ರಿಟನ್ 650 ಟನ್ನುಗಳಷ್ಟು ಚಿನ್ನವನ್ನು ತನ್ನ ದೇಶಕ್ಕೆ ತೆಗೆದುಕೊಂಡು ಹೋಯಿತು. ಇದರ ಜೊತೆಗೆ ಸುಮಾರು 150 ರಿಂದ 200 ಟನ್ನುಗಳಷ್ಟು ಚಿನ್ನ ಕಳ್ಳತನವಾಗಿದೆ ಎನ್ನುವ ಒಂದು ಲೆಕ್ಕಾಚಾರವಿದೆ. ಈ ಗಣಿಗಳ ಆಳ 3,230 ಮೀಟರ್‌ಗಳು ಮತ್ತು ಒಟ್ಟು ಎಲ್ಲಾ ಸುರಂಗಗಳ ಉದ್ದ 1647 ಕಿ.ಮೀ.ಗಳು. ಬ್ರಿಟಿಷರು ಮತ್ತು ಬ್ರಿಟನ್ ದೇಶ ಪ್ರಪಂಚದಾದ್ಯಂತ ಮೆರೆಯಲು ಈ ಗಣಿಗಳು ಮುಖ್ಯ ಕಾರಣವಾಗಿವೆ. ಸ್ಥಳೀಯ ಧರ್ಮಗಳು ಮತ್ತು ಜಾತಿಗಳ ಮೇಲೂ ಅಪಾರ ಪ್ರಭಾವ ಬೀರಿತು.

ಒಂದು ಕಾಲದಲ್ಲಿ ಇಂದಿನ ಅಫ್ಘಾನಿಸ್ತಾನ, ಬರ್ಮಾ, ದಕ್ಷಿಣ ಈಶಾನ್ಯ ದೇಶಗಳಿಂದ ಹಿಡಿದು ಶ್ರೀಲಂಕಾ ದೇಶವನ್ನೂ ವ್ಯಾಪಿಸಿಕೊಂಡಿದ್ದ ಭರತ ಖಂಡವನ್ನು ವಿಶ್ವದ ಅತ್ಯಂತ ಪುರಾತನ ಚಿನ್ನದ ಗಣಿಗಾರಿಕೆಯ ಕೇಂದ್ರವೆಂದು ಗುರುತಿಸಲಾಗಿದೆ. ಚಿನ್ನದ ಗಣಿಗಾರಿಕೆ ಸುಮಾರು 6,000 ದಿಂದ 8,000 ವರ್ಷಗಳಷ್ಟು ಹಳೆಯದು. ಇಂದಿನ ಭಾರತದ ವಿವಿಧ ಪ್ರದೇಶ/ರಾಜ್ಯಗಳಲ್ಲಿ 900 ಕ್ಕಿಂತ ಹೆಚ್ಚು ಸ್ಥಳಗಳಲ್ಲಿ ಚಿನ್ನಕ್ಕಾಗಿ ಹುಡುಕಾಟ ನಡೆಸಿ ಗಣಿಗಾರಿಕೆಯನ್ನು ಮಾಡಿರುವುದು ಕಂಡುಬಂದಿದೆ. ಜಲಗಾರರು (ಚಿನ್ನ ಜಾಲಿಸುವ ಕುಟುಂಬಗಳು) ಚಿನ್ನದ ಅಂಶವಿರುವ ಮಣ್ಣನ್ನು ಹುಡುಕಿ ಮಳೆಗಾಲದಲ್ಲಿ ಕಬ್ಬಿಣ ಬಾಣಲೆಗಳ ಮೂಲಕ ನೀರಿನಲ್ಲಿ ಸೋಸಿ (ಶೋಧಿಸಿ) ತೆಗೆದಿದ್ದಾರೆ. ಜಲಗಾರರು ಇಂದಿಗೂ ದೇಶದ ಅನೇಕ ಪ್ರಾಂತ್ಯಗಳಲ್ಲಿ ಚಿನ್ನ ಶೋಧಿಸುವ ಕೆಲಸದಲ್ಲಿ ತೊಡಗಿಕೊಂಡಿದ್ದು ಎಷ್ಟೋ ಕುಟುಂಬಗಳು ಇದೇ ಕೆಲಸವನ್ನು ಅವಲಂಬಿಸಿವೆ.

ಈ ಜಲಗಾರರ ಸಮುದಾಯಗಳನ್ನು ಮಧ್ಯಪ್ರದೇಶ, ಛತ್ತೀಸ್‌ಘಡ್ ರಾಜ್ಯಗಳಲ್ಲಿ ಸೊಂಜೋರಿಯಾ, ಜರಿಯಾ, ಜಾರಾ ಎಂದು ಕರೆದರೆ, ಛೋಟಾ ನಾಗ್ಪುರ್ ಪ್ರದೇಶದಲ್ಲಿ ಧೋರಾ, ಜೋರಾ, ಜಾರಾ, ಟೋರಾ ಮತ್ತು ಡೋಕ್ರಾ ಎಂದು ಕರೆಯುತ್ತಾರೆ. ಅಸ್ಸಾಮ್ ರಾಜ್ಯದಲ್ಲಿ ಸೋನ್ವಾಲ್ ಎಂದರೆ ಕರ್ನಾಟಕದಲ್ಲಿ ಜಲಗಾರರು ಎಂದು ಕರೆಯುತ್ತಾರೆ. ಲಡಾಕ್ ಮತ್ತು ಜಮ್ಮು-ಕ್ಯಾಶ್ಮೀರದಲ್ಲಿ ಬಾಲ್ತಿ, ಹಿಮಾಚಲ ಪ್ರದೇಶದಲ್ಲಿ ದಾವೋಲಾ, ಒರಿಸ್ಸಾದಲ್ಲಿ ಸೊಂಜೋರಿಯಾ, ಉತ್ತರ ಭಾರತದಲ್ಲಿ ನ್ಯಾರಿಯಾ ಮತ್ತು ಕೇರಳದಲ್ಲಿ ಪನ್ನಿಯರ್ಸ್‌ ಎಂದು ಕರೆಯುತ್ತಾರೆ. ದೇಶದ ಇತರ ಪ್ರದೇಶಗಳಲ್ಲಿ ಇನ್ನೂ ಹಲವಾರು ಹೆಸರುಗಳಲ್ಲಿ ಇವರನ್ನು ಕರೆಯುತ್ತಾರೆ.

ಆಲ್ಚಿನ್ (1962) ನವ ಶಿಲಾಯುಗದ ಕಾಲದಲ್ಲಿಯೇ ಪ್ರಾಚೀನರು ಡೆಕ್ಕನ್ ಪ್ರಾಂತ್ಯದಲ್ಲಿ ಚಿನ್ನಭರಿತ ಬೆಣಚು ಅಥವಾ ಸ್ಫಟಿಕ ಸಿರೆ (ಕ್ವಾರ್ಡ್ಝ್ ರೀಫ್ಸ್) ಕಲ್ಲುಗಳಲ್ಲಿ ಚಿನ್ನ ಇರುವುದನ್ನು ಕಂಡುಹಿಡಿದಿದ್ದರು ಎನ್ನುತ್ತಾರೆ. ಅನಂತರ ಕ್ರಿ.ಪೂ. 3ನೇ ಸಹಸ್ರಮಾನದ ಅಂತ್ಯ ಮತ್ತು ಕ್ರಿ.ಪೂ. ಮೊದಲ ಸಹಸ್ರಮಾನದ ಮೊದಲಾರ್ಧದ ನಡುವೆ ಚಿನ್ನವನ್ನು ನಿಖರವಾಗಿ ಗುರುತಿಸಲಾಗಿದೆ. ಪುರಾತತ್ವ ಶಾಸ್ತ್ರದ ಅಧ್ಯಯನಗಳು ಚಾಲ್ಕೋಲಿಥಿಕ್ (ನವ ಶಿಲಾಯುಗ-ಕಂಚಿನ ಯುಗದ ಪರಿವರ್ತನೆಯ ಕಾಲ) ಸ್ಥಳಗಳು, ಪಿ.ಜಿ.ಡಬ್ಲೂ. ((Painted Grey Ware culture) ಹಂತಗಳು (ಪ್ರಾಚೀನರು ಗುಹೆಗಳಲ್ಲಿ ಚಿತ್ರಕಲೆ ಬಿಡಿಸಿದ ಕಾಲ), ಮೆಗಾಲಿಥಿಕ್ ಸಮಾಧಿಗಳು (ಬೃಹತ್ ಶಿಲೆಗಳು ನಿಲ್ಲಿಸಿದ) ಮತ್ತು ಆರಂಭಿಕ ಐತಿಹಾಸಿಕ ಸ್ಥಳಗಳಲ್ಲಿ ಚಿನ್ನದ ಆಭರಣಗಳು ದೊರಕಿವೆ.

ಈಗ ಪಾಕಿಸ್ತಾನದಲ್ಲಿರುವ ಮುಲ್ತಾನ್ ಬಳಿ ಕಂಡುಬರುವ ಹರಪ್ಪನ ಕಾಲದ ಕಲಾಕೃತಿಗಳ ಪ್ರಕಾರ ಕ್ರಿ.ಪೂ. 4ನೇ ಸಹಸ್ರಮಾನದ 2ನೇ ಅರ್ಧಭಾಗದಲ್ಲಿ ಚಿನ್ನದ ಪ್ರಾಚೀನತೆಯನ್ನು ಪತ್ತೆ ಹಚ್ಚಲಾಗಿದೆ. ಈ ಚಿನ್ನದ ಆಭರಣಗಳು ಕೊಳವೆಯಾಕಾರದ ರಂಧ್ರಗಳಿರುವ ಚಿನ್ನದ ಹಾಳೆಯ ಮಣಿಗಳಿಂದ ಪೋಣಿಸಲಾಗಿದೆ. ಇದರಿಂದ ಚಿನ್ನ ಮತ್ತು ಚಿನ್ನದ ಅದಿರುಗಳ ಸ್ವಭಾವ, ಅದರಲ್ಲಿನ ಕಲ್ಮಶದ ಅಂಶ ಮತ್ತು ಲೋಹಶಾಸ್ತ್ರೀಯ ಸಂಸ್ಕರಣೆ ಇತ್ಯಾದಿಗಳ ಜ್ಞಾನ ಅಂದಿನ ಜನರಿಗೆ ಇರುವುದಾಗಿ ತಿಳಿಯುತ್ತದೆ.

ಮೌರ್ಯರ ಕಾಲದ ಆರಂಭದಲ್ಲಿ (ಕ್ರಿ.ಪೂ. 4ನೇ ಶತಮಾನದಿಂದ ಕ್ರಿ.ಶ. 2ನೇ ಶತಮಾನ) ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಚಿನ್ನದ ಬಗ್ಗೆ ಸಾಕಷ್ಟು ಉಲ್ಲೇಖಗಳಿವೆ. ರಾಯಚೂರು ಜಿಲ್ಲೆಯ ಹಟ್ಟಿ ಚಿನ್ನದ ಗಣಿಗಳ ಪುರಾತನ ಸುರಂಗಗಳಿಂದ ಸಂಗ್ರಹಿಸಿದ ಮರದ ತುಂಡುಗಳನ್ನು ಕಾರ್ಬನ್-14 ಡೇಟಿಂಗ್‌ಗೆ ಒಳಪಡಿಸಿದಾಗ ಅವು 4೦೦೦ ವರ್ಷಗಳ ವಯಸ್ಸನ್ನು ತೋರಿಸಿವೆ (ನಾಗಭೂಷಣಂ 2೦೦8). ಚಿತ್ರದುರ್ಗ ಹತ್ತಿರದ ಇಂಗಲದಾಲ್ ಮತ್ತು ಕುಂಚಿಗನಹಾಳು ತಾಮ್ರ ಗಣಿಗಳಿಂದ ಸಂಗ್ರಹಿಸಿದ ಮರದ ತುಂಡುಗಳನ್ನು ಕಾರ್ಬನ್-14 ಡೇಟಿಂಗ್ ಮಾಡಿದಾಗ ಅವು 2೦7೦ ರಿಂದ 13೦೦ ವರ್ಷಗಳವರೆಗಿನ ವಯಸ್ಸಿನ ವ್ಯಾಪ್ತಿಯನ್ನು ತೋರಿಸಿದವು. ಪರ್ಷಿಯನ್ ರಾಜ (ಕ್ರಿ.ಪೂ. 48೦) ಡೇರಿಯಸ್ ಭಾರತೀಯರಿಂದ ಚಿನ್ನದ ಧೂಳನ್ನು ಗೌರವದ ರೂಪದಲ್ಲಿ ಪಡೆಯುತ್ತಿದ್ದನು ಎಂಬುದಾಗಿ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.

ಶಿಲಾ ಶಾಸನಗಳ ಆಧಾರದ ಮೇಲೆ ಹಲವಾರು ಪ್ರಾಚೀನ ಚಿನ್ನದ ಗಣಿಗಾರಿಕೆ ಸ್ಥಳಗಳನ್ನು ರಾಜ ಆಶೋಕನ ಕಾಲಕ್ಕೆ ಸಮೀಕರಿಸಲಾಗಿದೆ. ಕ್ರಿ.ಪೂ. 5೦೦ ರಿಂದ 1ನೇ ಶತಮಾನಕ್ಕೆ ಸೇರಿದ ಭಾಗಲ್ಪುರ ಬಳಿಯ ಚಂಪಾನಗರದಲ್ಲಿ ಪತ್ತೆಯಾದ ಕಲ್ಲಿನ ಅಚ್ಚುಗಳ ಜೊತೆಗೆ ಕಂಡುಬಂದ ತೆಳುವಾದ ಒಂದು ಚಿನ್ನದ ರೇಖು ಕ್ರಿಶ್ಚಿಯನ್ ಯುಗಕ್ಕೆ ಮೊದಲು ಪೂರ್ವ ಭಾರತದಲ್ಲಿ ಚಿನ್ನದ ಬಳಕೆಯನ್ನು ಸೂಚಿಸುತ್ತದೆ. ಮಧ್ಯ ಭಾರತದ ಕೋಸರಿಯ (ನಾಗಪುರ ಜಿಲ್ಲೆ) ಪ್ರಾಚೀನ ಚಿನ್ನದ ಗಣಿಗಳಿಗೆ ಸಮೀಪವಿರುವ ಗುಹೆಗಳಲ್ಲಿ ಕಂಡುಬರುವ ಶಿಲಾ ಕೆತ್ತನೆಗಳು ಮತ್ತು ಗ್ರಂಥಗಳು ಕ್ರಿ.ಪೂ. 2ನೇ ಶತಮಾನಕ್ಕೆ ಸೇರಿವೆ.

(ಚಿತ್ರ: ಯರ‍್ರಗುಡ್ಡಿ, ಆಂಧ್ರಪದೇಶ ಮತ್ತು ಮಸ್ಕಿ, ರಾಯಚೂರು ಜಿಲ್ಲೆ, ಕರ್ನಾಟಕದಲ್ಲಿರುವ ಅಶೋಕನ ಕಾಲದ ಶಿಲಾ ಶಾಸನಗಳು.)

ಧಾರವಾಡ ಜಿಲ್ಲೆಯ ಚಿನ್ಮಲ್ಗುಂಡ್ ಪ್ರದೇಶದಲ್ಲಿ ಪ್ರಾಚೀನ ಚಿನ್ನದ ಗಣಿಗಳು ವಿಜಯನಗರ ಸಾಮ್ರಾಜ್ಯ ಮತ್ತು ಟಿಪ್ಪು ಸುಲ್ತಾನ್ ಕಾಲದಲ್ಲಿ ಕಾರ್ಯ ನಿರ್ವಹಿಸುತ್ತಿದ್ದವು. ಇದೇ ಪ್ರದೇಶದ ಹದಬನತ್ತ ಚಿನ್ನದ ಗಣಿಗಳು ಮತ್ತು ಆಂಧ್ರಪ್ರದೇಶದ ರಾಮಗಿರಿ ಚಿನ್ನದ ಗಣಿಗಳು ಟಿಪ್ಪು ಕಾಲದಲ್ಲಿ ಸಕ್ರಿಯವಾಗಿದ್ದವು ಎಂದು ಹೇಳಲಾಗುತ್ತದೆ. ಭಾರತದಲ್ಲಿ ಇತರ ಲೋಹಗಳಿಗೆ ಹೋಲಿಸಿದರೆ ಚಿನ್ನದ ಗಣಿಗಾರಿಕೆಯ ಬಗ್ಗೆ ಇತಿಹಾಸದಲ್ಲಿ ಅಷ್ಟೊಂದು ನಿಖರವಾದ ಲಿಖಿತ ದಾಖಲೆಗಳು ದೊರಕುವುದಿಲ್ಲ ಎಂದೇ ಹೇಳಬೇಕು.

ಚಿನ್ನದ ಗಣಿಗಾರಿಕೆಯ ಪ್ರಮುಖ ಚಟುವಟಿಕೆಗಳ ಕಾಲಘಟ್ಟಗಳೆಂದರೆ *ಪ್ರಾಚೀನ ಅವಧಿ ಕ್ರಿ.ಪೂ. 39೦೦ ದಿಂದ ಕ್ರಿ.ಶ. 5೦೦/6೦೦, *ಕ್ರಿ.ಶ. 15೦೦ ಮತ್ತು ಕ್ರಿ.ಶ. 187೦ ನಡುವಿನ ಮಧ್ಯಕಾಲದ ಅವಧಿ ಮತ್ತು  *187೦ ದಿಂದ 2೦೦2ರ ನಡುವಿನ ಆಧುನಿಕ ಕಾಲದ ಅವಧಿ. ಹೆಚ್ಚಿನ ಚಿನ್ನದ ಗಣಿಗಾರಿಕೆ ಚಟುವಟಿಕೆಗಳು ಪ್ರಾಚೀನ ಕಾಲಕ್ಕೆ ಸೇರಿದವು. ಮೊದಲ ಮತ್ತು ಎರಡನೇ ಅವಧಿಯ ನಡುವೆ ಚಿನ್ನದ ಗಣಿಗಾರಿಕೆಯ ಚಟುವಟಿಕೆಗಳು ಯಾಕಾಗಿ ಸ್ತಗಿತಗೊಂಡವು ಎಂಬುದರ ಬಗ್ಗೆ ಸರಿಯಾದ ಮಾಹಿತಿ ದೊರಕುವುದಿಲ್ಲ. ಬಹುಶಃ ನಷ್ಟ ಅನುಭವಿಸಿದ ಕಾರಣ ಸ್ತಗಿತಗೊಂಡಿರಬಹುದು!

ಎರಡನೇ ಅವಧಿಯಲ್ಲಿ ದೇಶದ ಮೇಲೆ ಆಕ್ರಮಣಗಳು ನಡೆದ ಕಾರಣ ಗಣಿಗಾರಿಕೆ ಕುಂಟಿತಗೊಂಡಿತು ಎನ್ನುವ ಮಾತಿದೆ. ಆಧುನಿಕ ಭೂವೈಜ್ಞಾನಿಕ ಸಮೀಕ್ಷೆಗಳು ಮೂರನೇ ಅವಧಿಯ ಕಾಲದಲ್ಲಿ ಕರ್ನಾಟಕದ ಕೋಲಾರ ಜಿಲ್ಲೆಯ ಕೆಜಿಎಫ್, ರಾಯಚೂರು ಜಿಲ್ಲೆಯ ಹಟ್ಟಿ, ಗದಗ ಜಿಲ್ಲೆಯ ಗದಗ ಪ್ರದೇಶ ಮತ್ತು ಆಂಧ್ರಪ್ರದೇಶದ ರಾಮಗಿರಿ ಪ್ರಾಚೀನ ಚಿನ್ನದ ಗಣಿಗಳ ಪ್ರದೇಶಗಳಲ್ಲಿ ಗಣಿಗಾರಿಕೆ ಮತ್ತೆ ಪುನಾರಂಭಗೊಂಡಿತು. ಜಗತ್ಪ್ರಸಿದ್ಧ ಆಧುನಿಕ ಕೋಲಾರ ಚಿನ್ನದ ಗಣಿಗಳು 188೦ರಲ್ಲಿ ಪ್ರಾರಂಭಗೊಂಡು 323೦ ಮೀಟರುಗಳ ಆಳ ತಲುಪಿ 8೦೦ ಟನ್ನುಗಳ ಚಿನ್ನವನ್ನು ಉತ್ಪಾದಿಸಿದ ಮೇಲೆ 2೦೦1ರಲ್ಲಿ ಸಂಪೂರ್ಣವಾಗಿ ಸ್ತಗಿತಗೊಂಡವು.

ಆಶೋಕನ ಕಾಲದ ಪೂರ್ವದಲ್ಲಿ (ಕ್ರಿ.ಪೂ. 2೦೦೦) ಪ್ರಮುಖ ಚಿನ್ನದ ಗಣಿಗಾರಿಕೆ ಚಟುವಟಿಕೆಗಳನ್ನು ಆರಂಭಿಸಲಾಗಿತ್ತು ಮತ್ತು ಚಿನ್ನಭರಿತ ಸಿರೆಗಳು ಉನ್ನತ ದರ್ಜೆಯ ಚಿನ್ನವನ್ನು ಹೊಂದಿದ್ದವು. ಹಟ್ಟಿ ಹಳೆ ಚಿನ್ನದ ಗಣಿ ಪ್ರದೇಶದಲ್ಲಿ ಅಂತರ್ಜಲವನ್ನು ಹೊರಹಾಕುವ ಸಮಸ್ಯೆ ಇದ್ದರೂ 195 ಮೀಟರುಗಳ ಆಳದವರೆಗೂ ಗಣಿಗಳನ್ನು ತೋಡಲಾಗಿತ್ತು. ಧಾರವಾಡ ಜಿಲ್ಲೆಯ ಪ್ರಾಚೀನ ಬೆಲ್ಲಾರ ಗಣಿಗಳು 64೦ ಅಡಿಗಳ ಆಳದವರೆಗೂ ಇಳಿದಿದ್ದವು. ಆ ಕಾಲಕ್ಕೆ ಈ ಗಣಿ ಜಗತ್ತಿನಲ್ಲೇ ಆಳವಾದ ಗಣಿಯಾಗಿತ್ತು. ಹಾಸನ ಜಿಲ್ಲೆಯ ಕೆಂಪಿನಕೋಟೆ ಶ್ಯಾಫ್ಟ್ ದೇಶದಲ್ಲಿಯೇ ದೊಡ್ಡದು. ಒಟ್ಟಿನಲ್ಲಿ ಪ್ರಾಚೀನ ಭಾರತೀಯರು ಶ್ರೇಷ್ಠ ಗಣಿಗಾರಿಕೆ ಕೌಶಲ್ಯವನ್ನು ಹೊಂದಿದ್ದರು ಎನ್ನುವುದಕ್ಕೆ ಇವೆಲ್ಲ ಒಳ್ಳೆಯ ಪುರಾವೆಗಳಾಗಿವೆ ಎಂಬುದಾಗಿ ಟಿ.ಆರ್.ಅನಂತರಾಮು (1992) ಮತ್ತು ಗ್ರೋವರ್, ಪಂಡಿತ್ (2೦15) ಇತರರು ಅಭಿಪ್ರಾಯಪಟ್ಟಿದ್ದಾರೆ.

ಕೋಲಾರ ಚಿನ್ನದ ಗಣಿಗಳು (ಕೆಜಿಎಫ್/ಕೋಲಾರ್ ಗೋಲ್ಡ್ ಫೀಲ್ಡ್): ಕೆಜಿಎಫ್‌ನ ಆರಂಭಿಕ ಇತಿಹಾಸವನ್ನು ರೆವರೆಂಡ್ ಡೇವಿಡ್ ಪಿಳ್ಳೈ, ವೆಸ್ಲಿಯನ್ ತಮಿಳು ಮಿಷನ್, ಬೆಂಗಳೂರು ಮತ್ತು ಕೆಜಿಎಫ್ ಮೇಲ್ವಿಚಾರಕರು ಗಣಿಗಳ ಬಗ್ಗೆ ವಿಷಯ ಸಂಗ್ರಹಿಸಿ ಮಿಥಿಕ್ ಸೊಸೈಟಿಯ ತ್ರೈಮಾಸಿಕ ಪತ್ರಿಕೆಗಳಲ್ಲಿ ಮತ್ತು ಇತರ ಶೈಕ್ಷಣಿಕ ನಿಯತಕಾಲಿಕೆಗಳಲ್ಲಿ ಪ್ರಕಟಿಸಿದರು.

(ಚಿತ್ರ: ಕೆಜಿಎಫ್‌ನ ಪ್ರಖ್ಯಾತ ಎಡ್ಗೇರ್ ಗಣಿ ಶ್ಯಾಫ್ಟ್.)

 

(ಚಿತ್ರ: 192೦ರ ದಶಕದ ಕೆಜಿಎಫ್ ಗಣಿ ಪ್ರದೇಶದ ಒಂದು ದೃಶ್ಯ.)

ಕ್ರಿ.ಶ. 2ನೇ ಶತಮಾನದಲ್ಲಿ ಗಂಗರು ಕೋಲಾರ ಪಟ್ಟಣವನ್ನು ಸ್ಥಾಪಿಸಿದರು (ಕೋಲಾರ, ಬೆಂಗಳೂರಿಗಿಂತ ಅತ್ಯಂತ ಹಳೆಯ ಪಟ್ಟಣ) ಮತ್ತು ಅವರು ಅಧಿಕಾರದಲ್ಲಿದ್ದ 1,೦೦೦ ವರ್ಷಗಳವರೆಗೆ “ಕುವಲಾಲ ಪುರವರೇಶ್ವರ” (ಕೋಲಾರದ ದೇವರು) ಎಂಬ ಬಿರುದನ್ನು ಪಡೆದುಕೊಂಡಿದ್ದರು. ಮೊದಲಿಗೆ ಕೋಲಾರದಿಂದ, ನಂತರ ತಲಕಾಡಿನಿಂದ ದಕ್ಷಿಣ ಪ್ರದೇಶಗಳನ್ನು ಒಳಗೊಂಡ ಗಂಗವಾಡಿಯನ್ನು ಅವರು ಆಳಿದರು. ಕ್ರಿ.ಶ. 1೦೦4ರಲ್ಲಿ ಮೊದಲ ಬಾರಿಗೆ ಕೋಲಾರ ಪ್ರದೇಶ ಚೋಳರ ಆಳ್ವಿಕೆಗೆ ಒಳಪಟ್ಟಿರುವ ಸ್ಪಷ್ಟ ದಾಖಲೆಗಳು ದೊರಕುತ್ತವೆ. ಚೋಳರು ಕೋಲಾರ ಪ್ರದೇಶಕ್ಕೆ “ನಿಕಾರಿಲಿ ಚೋಳಮಂಡಲಂ” ಎಂಬ ಹೆಸರನ್ನು ನೀಡಿದರು.

ಕ್ರಿ.ಶ. 1117ರಲ್ಲಿ ವಿಷ್ಣುವರ್ಧನನ ಆಡಳಿತದಲ್ಲಿ ಹೊಯ್ಸಳರು ತಲಕಾಡು ಮತ್ತು ಕೋಲಾರನ್ನು ವಶಪಡಿಸಿಕೊಂಡು ಚೋಳರನ್ನು ಮೈಸೂರು ಸಂಸ್ಥಾನದಿಂದ ಓಡಿಸಿದರು. ಕ್ರಿ.ಶ. 1254ರಲ್ಲಿ ಸೋಮೇಶ್ವರನ ಮರಣದ ನಂತರ, ಹೊಯ್ಸಳರ ಆಳ್ವಿಕೆ ವಿಭಜನೆಗೊಂಡು ಆತನ ಇಬ್ಬರು ಪುತ್ರರಲ್ಲಿ ಒಬ್ಬನಾದ ರಾಮನಾಥನಿಗೆ ಕೋಲಾರ ಪ್ರದೇಶ ಬಂದಿತು. ಮುಂದಿನ ರಾಜ ಬಲ್ಲಾಳ-3, ಹೊಯ್ಸಳರ ಸಾಮ್ರಾಜ್ಯವನ್ನು ಒಟ್ಟುಗೂಡಿಸಿದನು. ಹೊಯ್ಸಳರನ್ನು ಸೋಲಿಸಿದ ವಿಜಯನಗರ ಸಾಮ್ರಾಜ್ಯರು ಕೋಲಾರ ಪ್ರದೇಶವನ್ನು ಕ್ರಿ.ಶ. 1336 ರಿಂದ 1664ರವರೆಗೂ ಆಳಿದರು. 17ನೇ ಶತಮಾನದಲ್ಲಿ ಕೋಲಾರ 5೦ ವರ್ಷಗಳ ಕಾಲ ಶಹಾಜಿಯ ಜಗೀರ್‌ನ ಭಾಗವಾಗಿ ಮರಾಠರ ಆಳ್ವಿಕೆಗೆ ಒಳಪಟ್ಟಿತು. ನಂತರ 7೦ ವರ್ಷಗಳ ಕಾಲ ಮುಸ್ಲಿಂ ಆಳ್ವಿಕೆಗೆ ಒಳಪಟ್ಟಿತು.

ಕ್ರಿ.ಶ. 172೦ರಲ್ಲಿ ಕೋಲಾರ ಸಿರಾದ ಸುಬೇದಾರನ ಕೆಳಗೆ ಬಂದಿತು, ಹೈದರ್ ಅಲಿಯ ತಂದೆ ಫತೇಹ್ ಮೊಹಮ್ಮದ್ ಈ ಪ್ರಾಂತ್ಯದ ಫೌಜ್ದಾರ್ ಆಗಿದ್ದನು. ಇದರ ನಂತರ ಕೋಲಾರನ್ನು ಮರಾಠರು, ಕಡಪದ ನವಾಬ, ಹೈದರಾಬಾದ್‌ನ ನಿಜಾಮ ಮತ್ತು ಹೈದರ್ ಅಲಿ ಆಳಿದರು. ಮುಂದೆ 177೦ರವರೆಗೆ ಕೋಲಾರ ಬ್ರಿಟಿಷರ ಆಳ್ವಿಕೆಗೆ ಒಳಪಟ್ಟಿತು. ನಂತರ ಮರಾಠರು ಮತ್ತು ಹೈದರ್ ಅಲಿ ಆಡಳಿತದಲ್ಲಿ ಸ್ವಲ್ಪ ಕಾಲವಿತ್ತು. 1791ರಲ್ಲಿ ಲಾರ್ಡ್ ಕಾರ್ನ್ವಾಲಿಸ್ ಕೋಲಾರನ್ನು ವಶಪಡಿಸಿಕೊಂಡನು. ನಂತರ 1972ರಲ್ಲಿ ಶಾಂತಿ ಒಪ್ಪಂದದ ಅಡಿಯಲ್ಲಿ ಮೈಸೂರಿನ ಆಡಳಿತಕ್ಕೆ ಒಪ್ಪಿಸಲಾಯಿತು. ಅಂದಿನಿಂದ ಕೋಲಾರ ಪ್ರದೇಶ ಮೈಸೂರು ರಾಜ್ಯದ ಭಾಗವಾಗಿ ಉಳಿಯಿತು. ಚದುರಿಹೋಗಿದ್ದ ಮೈಸೂರು ರಾಜ್ಯ 1956ರಲ್ಲಿ ಏಕೀಕರಣಗೊಂಡು 1973ರಲ್ಲಿ ಕರ್ನಾಟಕ ಎಂಬ ಹೆಸರು ಪಡೆಯಿತು.

(ಚಿತ್ರ: ಚಿನ್ನದ ಅದಿರನ್ನು ಪುಡಿ ಮಾಡಿ ಸಂಸ್ಕರಣೆ ಮಾಡುವ ಕೆಜಿಎಫ್ ಚಿನ್ನದ ಗಣಿ ಕಾರ್ಯಗಾರದ (ಮಿಲ್) ಒಂದು ದೃಶ್ಯ.)

 

(ಚಿತ್ರ: ಡ್ರಮ್ ವೈಂಡರ್ ಇರುವ ಕೆಜಿಎಫ್ ಚಿನ್ನದ ಗಣಿಯ ಒಂದು ಶ್ಯಾಫ್ಟ್.)

ಬೆಂಜಮಿನ್ ಲೂಯಿಸ್ ರೈಸ್ ಅವರು ಕೋಲಾರ ಜಿಲ್ಲೆಯಲ್ಲಿನ ಒಟ್ಟು 1347 ಶಾಸನಗಳನ್ನು ಎಪಿಗ್ರಾಫಿಯಾ ಕರ್ನಾಟಿಕಾದ 1೦ನೇ ಸಂಪುಟದಲ್ಲಿ ದಾಖಲಿಸಿದ್ದಾರೆ. ಈ ಶಾಸನಗಳಲ್ಲಿ 714 ಕನ್ನಡದಲ್ಲಿ, 422 ತಮಿಳಿನಲ್ಲಿ ಮತ್ತು 211 ತೆಲುಗಿನಲ್ಲಿ ಕೆತ್ತಲಾಗಿದೆ (Venkataswamy, M., Kolar Gold Mines, Journal of Geological Society of India 2೦17).

ಪ್ರಾಚೀನ ಭಾರತದಲ್ಲಿ ಚಿನ್ನದ ಗಣಿಗಾರಿಕೆ ಆರಂಭದಲ್ಲಿ ಪ್ರಮುಖವಾಗಿ ಪ್ಲೇಸರ್ (ನದಿ ಪಾತ್ರದ ಮೆಕ್ಕಲು ಮಣ್ಣು) ನಿಕ್ಷೇಪಗಳಿಂದ ಚಿನ್ನವನ್ನು ಸಂಗ್ರಹಿಸಲಾಯಿತು. ನದಿ ಪಾತ್ರದ ಮೆಕ್ಕಲುಮಣ್ಣು, ಮರಳು ತೊಳೆದು ಜಾಲಿಸಿ ಸೋಸಿ ಚಿನ್ನವನ್ನು ಸಂಗ್ರಹಿಸಲಾಗುತ್ತಿತ್ತು. ಲೋಹಶಾಸ್ತ್ರ ಜ್ಞಾನದ ಸಹಾಯದಿಂದ ಚಿನ್ನಭರಿತ ಸ್ಫಟಿಕ ಶಿಲೆಗಳಿಂದ (ಕ್ವಾರ್ಡ್ಝ್ ರೀಫ್ಸ್-ಬೆಣಚು ಶಿಲೆಗಳು/ಸಿರೆ) ಮೂಲ ಲೋಹಗಳ ಜೊತೆಗೆ ತಾಮ್ರ, ಸೀಸ, ನಿಕಲ್ ಜೊತೆಗೆ ಇನ್ನೂ ಕನಿಷ್ಠ 2೦ ಮೂಲ ಲೋಹಗಳೊಂದಿಗೆ (ಬೇಸ್ ಮೆಟಲ್ಸ್) ಚಿನ್ನವನ್ನು ಪಡೆಯಲಾಗುತ್ತಿತ್ತು.

ಬ್ರಿಟಿಷರ ಕಾಲದಲ್ಲಿ 19ನೇ ಶತಮಾನದಲ್ಲಿ ಆರಂಭವಾದ ಆಧುನಿಕ ಭೂವೈಜ್ಞಾನಿಕ ಸಮೀಕ್ಷೆಗಳಿಂದ ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ಪ್ರಾಚೀನ ಚಿನ್ನದ ಗಣಿಗಾರಿಕೆಗಳು ನಡೆದಿರುವ ಮತ್ತು ಲೋಹಶಾಸ್ತ್ರೀಯ ತಾಣಗಳನ್ನು ಗುರುತಿಸಲಾಯಿತು (ಬ್ರೂಸ್‌ಫೂಟೆ, 1882). ಖನಿಜಯುಕ್ತ ವಲಯಗಳಲ್ಲಿ ಚಿನ್ನದ ಉಂಡೆಗಳು, ರೇಖುಗಳು, ಸ್ಪೆಕ್ಸ್ ಮತ್ತು ಧೂಳನ್ನು ಮೆಕ್ಕಲುಮಣ್ಣು, ಮರಳು, ಕಂಕರುಕಲ್ಲು ಪದರು, ಸ್ಫಟಿಕಶಿಲೆ ಮತ್ತು ಗಣಿ ತ್ಯಾಜ್ಯದಲ್ಲಿ ಕಂಡುಬಂದಿತು. ಪ್ರಾಚೀನ ಕಾಲದಲ್ಲಿ ಇದೇ ರೀತಿಯಾಗಿ ಹೆಚ್ಚು ಚಿನ್ನವನ್ನು ಸಂಗ್ರಹ ಮಾಡಲಾಗಿತ್ತು. ಅದನ್ನು ಹೆಚ್ಚಾಗಿ ರಾಜರ ಅರಮನೆಗಳಲ್ಲಿ ಮತ್ತು ದೇಶದಾದ್ಯಂತ ದೇವಾಲಯಗಳಲ್ಲಿ ಕಾಣಬಹುದು. ಸಾರ್ವಜನಿಕರು, ಕೂಲಿಕಾರರು ಚಿನ್ನ ಹೊಂದಿರುವುದೆಂದರೆ ಅಪರಾಧವಾಗಿತ್ತು.

ಗಣಿಗಾರಿಕೆ ನಡೆದ ಪ್ರದೇಶಗಳಲ್ಲಿ ಮಾನವ ನಿರ್ಮಿತ ಗುಹೆಗಳು, ಶ್ಯಾಫ್ಟ್ಗಳು, ಗುಂಡಿಗಳು/ಕಂದಕಗಳು ಅಥವಾ ಸರಣಿ ಹೊಂಡಗಳ ಜೊತೆಗೆ ಅದಿರನ್ನು ಪುಡಿ ಮಾಡಿರುವ ರುಬ್ಬು ಕಲ್ಲುಗಳು ಮತ್ತು ಇತರ ಸಲಕರಣೆಗಳು ಕಂಡುಬಂದಿವೆ. ಆಳವಿಲ್ಲದ ಹೊಂಡಗಳು, ತೆರೆದ ದೊಡ್ಡ ದೊಡ್ಡ ಗುಂಡಿಗಳು, ಇಳಿಜಾರುಗಳು, ಲಂಬವಾದ ಶಾಫ್ಟ್ಗಳು ಮತ್ತು ಭೂಗತ ಗಣಿಗಳ ರೂಪದಲ್ಲಿ ವಿವಿಧ ಹಂತಗಳಲ್ಲಿ ಅಥವಾ ಗ್ಯಾಲರಿಗಳು ಕಂಡುಬಂದಿವೆ. ಲಂಬವಾದ ಕಿರಿದಾದ ತೆರೆದ ಗಣಿಗಳು ಅಥವಾ ಶಾಫ್ಟ್ಗಳು/ಸುರಂಗಗಳು ವಿಭಿನ್ನ ರೀತಿಯ ಗಣಿಗಾರಿಕೆ ಪರಿಸ್ಥಿತಿಗಳಲ್ಲಿ ಮಾಡಲಾಗಿರುತ್ತದೆ. ಉದಾ: ಗಣಿಗಳ ಒಳಕ್ಕೆ ಪ್ರವೇಶ, ಅದಿರಿನ ಸಾಗಣೆ, ನೀರು ಹೊರಕ್ಕೆ ತೆಗೆಯುವುದು ಮತ್ತು ಗಾಳಿಯಾಡುವಿಕೆ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ (ಜಿಯಾವುದ್ದೀನ್ ಮತ್ತು ನಾರಾಯಣಸ್ವಾಮಿ, 1974).

(ಚಿತ್ರ: ಗಟ್ಟಿ ಮರದ ತುಂಡುಗಳನ್ನು ಆಧಾರ ಕೊಟ್ಟಿರುವ ಹಳೆ ಮಾದರಿಯ ಕೆಜಿಎಫ್ ಗಣಿ ಸುರಂಗ.)

 

(ಚಿತ್ರ: ಪುಡಿ ಮಾಡಿದ ಚಿನ್ನದ ಅದಿರಿಗೆ ಸೈನೈಡ್ (ಪೊಟ್ಯಾಸಿಯಮ್ ಸೈನೈಡ್ ಅಥವಾ ಸೋಡಿಯಮ್ ಸೈನೈಡ್) ರಾಸಾಯನಿಕವನ್ನು ಮಿಶ್ರಣ ಮಾಡಿ ಚಿನ್ನ ಪ್ರತ್ಯೇಕಿಸುವ ತೊಟ್ಟಿಗಳು.)

ಕರ್ನಾಟಕದ ಇತರ ಪ್ರಾಚೀನ ಚಿನ್ನದ ಗಣಿಗಾರಿಕೆ ಪ್ರದೇಶಗಳು: ಕ್ಯಾಪ್ಟನ್ ಅಯ್ತೌನ್ 1852ರಲ್ಲಿ ಗದಗ ಜಿಲ್ಲೆಯ ಜಲಗಾರಗುಡ್ಡ ಮತ್ತು ಸಾಂಗ್ಲಿ/ವೆಂಕಟಾಪುರದ ಬಳಿ ಸುಮಾರು 18 ರಿಂದ 25 ಅಡಿಗಳ ಆಳ ಮತ್ತು 3 ರಿಂದ 4 ಅಡಿ ವ್ಯಾಸದ 22 ಪ್ರಾಚೀನ ಗಣಿ ಕಾರ್ಯಗಳನ್ನು ಕಂಡುಹಿಡಿದರು. 19೦5ರಲ್ಲಿ ಮ್ಯಾಕ್ಲಾರೆನ್ ಇದೇ ಜಿಲ್ಲೆಯ ಕಾಬುಲಿಯಟ್‌ಕಟ್ಟಿಯ ಬಳಿ ಹೆಚ್ಚಿನ ಸಂಖ್ಯೆಯ ಹಳೆಯ ಶ್ಯಾಫ್ಟ್ಗಳು ಮತ್ತು ದೊಡ್ಡದೊಡ್ಡ ಹೊಂಡಗಳನ್ನು ಕಂಡುಹಿಡಿದರು. ಕೆಲವು ಶ್ಯಾಫ್ಟ್ಗಳು ಕನಿಷ್ಠ 3೦೦ ಅಡಿಗಳ ಆಳ ತಲುಪಿದ್ದವು; ಹತ್ತಿಕಟ್ಟಿ, ದಿಂಡೂರು, ನಾಗತಿ ಬಸಾಪುರ ಮತ್ತು ಜಾಜಿಕಲ್‌ಗುಡ್ಡದ ಬಳಿ ಶ್ಯಾಫ್ಟ್ಗಳು ಕಂಡುಬಂದವು.

ಮ್ಯಾಕ್ಲಾರೆನ್ ಗದಗ ಜಿಲ್ಲೆಯ ಸಾಂಗ್ಲಿ, ನಾಗಾವಿ ಮತ್ತು ನಭಾಪುರದ ಹತ್ತಿರ ಚಿನ್ನಭರಿತ ಶಿಲಾರಚನೆಗಳನ್ನು, ಅದಿರು ಅರಿಯುವ ರುಬ್ಬುಕಲ್ಲುಗಳು ಮತ್ತು ಬಂಡೆಗಳ ಮೇಲಿನ ಸಣ್ಣಸಣ್ಣ ಸಾಲುಸಾಲು ಕೈ ಅಗಲದ ಕುಣಿಗಳನ್ನು (ಪೌಂಡಿಂಗ್ ಮಾರ್ಕ್ಸ್) ಗಮನಿಸಿದರು. ರುಬ್ಬುಕಲ್ಲುಗಳು ಮತ್ತು ಸಣ್ಣಸಣ್ಣ ಸಾಲುಸಾಲು ಕುಣಿಗಳು ಚಿನ್ನ ದೊರಕುವ ದೇಶದ ಎಲ್ಲಾ ಪ್ರದೇಶಗಳಲ್ಲೂ ಕಂಡುಬರುತ್ತವೆ.

ವೆಸ್ಟ್ ಹೆಸರಿನ ಭೂವಿಜ್ಞಾನಿ 1951ರಲ್ಲಿ ಧಾರವಾಡ ಜಿಲ್ಲೆಯ ಜಲ್ಲಿಗೇರಿ ಪ್ರದೇಶದಲ್ಲಿ ಪುರಾತನ ಬೆಣಚು ಶಿಲೆಗಳ ಗಣಿ ತ್ಯಾಜ್ಯವನ್ನು ಗುರುತಿಸಿದರು. ಕೃಷ್ಣನ್ 1958ರಲ್ಲಿ ಬಿಸಾನತ್ತಂ (ಕೆಜಿಎಫ್ ದಕ್ಷಿಣ) ಹತ್ತಿರದ ಮಲ್ಲಪ್ಪನಕೊಂಡ ಮತ್ತು ಕಂಗುಂದಿ ಪ್ರದೇಶದಲ್ಲಿ ಫೆರುಜಿನಸ್ ಸ್ಫಟಿಕ (ferruginous quartzite) ಶಿಲೆಗಳಲ್ಲಿ ಪ್ರಾಚೀನ ಗಣಿ ಕಾರ್ಯಗಳನ್ನು ಗುರುತಿಸಿದರು. ಈ ಹಳೆ ಗಣಿಗಳು ಹಿರೇವಡ್ವಟ್ಟಿ ಬಳಿ ಸ್ಫಟಿಕ ಶಿಲೆಗಳ ಬ್ಯಾಂಡ್‌ಗಳೊಂದಿಗೆ ನೀಲಿ ಸ್ಫಟಿಕ ಶಿಲೆಯ ಶಂಕುವಿನಾಕಾರದ ಬೆಟ್ಟದಲ್ಲಿದ್ದವು. ಈ ಬೆಟ್ಟದಿಂದ ಸವಕಳಿಗೊಂಡು ಹರಿದುಬಂದ ಮಣ್ಣಿನಲ್ಲಿ ಸಾಕಷ್ಟು ಚಿನ್ನ ಸಂಚಯನಗೊಂಡಿತ್ತು. ಈ ಪ್ರದೇಶದ ಫೆರುಜಿನಸ್ ಶಿಲಾರಚನೆಗಳಲ್ಲಿ ಪ್ರಾಚೀನ ಗಣಿ ಹೊಂಡಗಳು, ಕಂದಕಗಳು ಮತ್ತು ಕ್ವಾರಿಗಳಲ್ಲಿದ್ದವು.

ಕೃಷ್ಣನ್, 1958ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಲಕ್ಕವಳ್ಳಿ ಬಳಿಯ ಜಲಗಾರ ಗುಂಡಿಯಲ್ಲಿ ಪ್ರಾಚೀನ ಚಿನ್ನದ ಗಣಿ ಕಾರ್ಯಗಳನ್ನು ಗುರುತಿಸಿದರು. ಬೆಳ್ಳಾರ, ಅಜ್ಜನಹಳ್ಳಿ (ತುಮಕೂರು ಜಿಲ್ಲೆ), ಕೆಂಪಿನಕೋಟೆ (ಹಾಸನಜಿಲ್ಲೆ) ಹೊನ್ನೆಹಟ್ಟಿ (ಹೊನ್ನೆಗುಡ್ಡ), ಕುದ್ರೆಕೊಂಡ, ಪಲವನಹಳ್ಳಿ (ಶಿವಮೊಗ್ಗ ಜಿಲ್ಲೆ), ಕಬ್ಲಿಗಟ್ಟಿ ಮತ್ತು ಮಂಗಳಗಟ್ಟಿ (ಧಾರವಾಡ ಜಿಲ್ಲೆ) ಮಂಗ್ಳೂರು (ಗುಲ್ಬರ್ಗ ಜಿಲ್ಲೆ) ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯ ಪ್ರಾಚೀನ ಚಿನ್ನದ ಗಣಿಗಾರಿಕೆ ಕಂಡುಬಂದಿವೆ.

ಅಜ್ಜನಹಳ್ಳಿ ಮತ್ತು ಕೆಂಪಿನಕೋಟೆ ಗಣಿಗಳು 6೦೦ ಅಡಿಗಳಿಗಿಂತಲೂ ಹೆಚ್ಚು ಉದ್ದವಾಗಿ ಹಾಸಿಕೊಂಡಿವೆ. ಕಬ್ಲಿಗಟ್ಟಿ ಪ್ರದೇಶದಲ್ಲಿ ಕೆಲವು ಗಣಿ ಕಾರ್ಯಗಳು 3೦೦ ಅಡಿಗಳ ಆಳದವರೆಗೂ ಇಳಿದಿವೆ. ಕೆಂಪಿನಕೋಟೆ-ಪಲವನಹಳ್ಳಿ ಪ್ರದೇಶದಲ್ಲಿ 19೦7ರಲ್ಲಿ 4.5 ಔನ್ಸ್ ತೂಕದ ಅತಿದೊಡ್ಡ ಚಿನ್ನದ ಘಟ್ಟಿ ದೊರಕಿತು ಮತ್ತು ಒಂದು ಕಡೆ ಕ್ವಾರ್ಡ್ಝ್ ಸಿರೆಯಲ್ಲಿ ಉತ್ಕೃಷ್ಟವಾದ 45 ಔನ್ಸ್ (2.75 ಪೌಂಡ್) ತೂಕದ ಚಿನ್ನದ ಉಂಡೆ ದೊರಕಿತ್ತು. ಒಂದು ಔನ್ಸ್ ಚಿನ್ನವೆಂದರೆ 31.1೦ ಗ್ರಾಮ ತೂಕ.

(ಚಿತ್ರ: ಕೆಂಚಾರಪುರ ಮತ್ತು ಅಜ್ಜನಹಳ್ಳಿ (ಬಿ.ಐ.ಎಫ್.) ಹಳೆ ಗಣಿ ಶ್ಯಾಫ್ಟ್ಗಳು, ಕರ್ನಾಟಕ (ಗ್ರೋವರ್ ಮತ್ತು ಪಂಡಿತ್, 1915).

ಬಂಗಾರಕ್ಕನಹಳ್ಳಿ, ಗೊಲ್ಲರಹಟ್ಟಿ, ಗುಡದರಂಗವನಹಳ್ಳಿ (ಚಿತ್ರದುರ್ಗ ಜಿಲ್ಲೆ), ಕಾಳಿಂಗನಹಳ್ಳಿ ಮತ್ತು ನಾಗಮಂಗಲ (ಮಂಡ್ಯ ಜಿಲ್ಲೆ) ಸಮೀಪದ ಹೊನ್ನೆಬೆಟ್ಟ, ಹಾಸನ ಜಿಲ್ಲೆಯ ಬೆಳಗಂಬ, ಜಲಗಾರ್ನಹಳ್ಳಿ ಯಲ್ವಾರಿ ಬಳಿ, ಬಳ್ಳಾರಿ ಜಿಲ್ಲೆಯ ಎತ್ತಿನಹಟ್ಟಿ ಮತ್ತು ಮಂಡ್ಯ ಜಿಲ್ಲೆಯ ಬೆಳ್ಳಿಬೆಟ್ಟ. ಚಿತ್ರದುರ್ಗ ಜಿಲ್ಲೆಯ ಕುಂಚಿನಹಾಳ ಪೂರ್ವದಲ್ಲಿರುವ ಚೆರ್ಟ್ (ಜಲಜ ಶಿಲೆ) ಶಿಲೆಗಳಲ್ಲಿ ಸಂಗ್ರಹಿಸಿದ ಮಾದರಿಗಳಲ್ಲಿ ಒಂದು ಟನ್ ಕಲ್ಲುಗಳಲ್ಲಿ 6 ಗ್ರಾಂ ಚಿನ್ನ ಇರುವುದು ಕಂಡುಬಂದಿದೆ (ರಾಯ್ 1966ರಲ್ಲಿ).

ಧಾರವಾಡ ಜಿಲ್ಲೆಯ ಚಿನ್ಮುಲ್ಗುಂಡ್ ಪ್ರದೇಶದಲ್ಲಿ ಅನ್ವೇಷಣೆ ನಡೆಸುತ್ತಿದ್ದಾಗ 3 ಚ.ಕಿ.ಮೀ. ವ್ಯಾಪ್ತಿಯಲ್ಲಿ ಚಿನ್ನಭರಿತ ಬಿ.ಐ.ಎಫ್. ಮತ್ತು ಪೈರಿಟಿಕ್ ಟುಪ್ ಶಿಲಾರಚನೆಗಳಲ್ಲಿ ಶ್ಯಾಫ್ಟ್ಗಳು, ಇಳಿಜಾರುಗಳು ಮತ್ತು ಹೊಂಡಗಳು ಕಂಡುಬಂದಿವೆ. ಹಾಸನ ಜಿಲ್ಲೆಯ ಗೊಲ್ಲರಹಳ್ಳಿ, ಮಾದೇಹಳ್ಳಿ, ವಿಠ್ಠಲಪುರ (ಶ್ಯಾಫ್ಟ್) ಮತ್ತು ಕರಡಿಹಳ್ಳಿ (ಆಳವಿಲ್ಲದ) ಬಳಿ ಕಮಾನು ಮಾದರಿಯಲ್ಲಿ ಚಿನ್ನ ದೊರಕುವ ಹಲವಾರು ಪ್ರಾಚೀನ ಹೊಂಡಗಳಿವೆ. ಚಿತ್ರದುರ್ಗ ಶಿಸ್ಟ್ ಪಟ್ಟಿಯ ವಾಯುವ್ಯ ವಿಸ್ತರಣಾ ಪ್ರದೇಶ ಹೊನ್ನೆಮರಡಿಯಲ್ಲಿ ಸಮೀಕ್ಷೆ ಮಾಡುತ್ತಿದ್ದಾಗ ಪ್ರಾಚೀನ ಶ್ಯಾಫ್ಟ್ಗಳು, ಚಿನ್ನಭರಿತ ಶಿಲೆಗಳು ಮತ್ತು ಅದಿರನ್ನು ಅರಿದಿರುವ ಕುರುಹುಗಳು 6೦೦ ಮೀಟರುಗಳ ವಿಸ್ತೀರ್ಣದಲ್ಲಿ ಕಂಡುಬಂದವು. ಮಜ್ಜೂರು, ಡೋಣಿತಾಂಡಾ ಮತ್ತು ಕಡಕೋಲ್ ಬಳಿಯ ಬಿ.ಐ.ಎಫ್.ನಲ್ಲಿ ಕೆಲವು ಪ್ರಾಚೀನ ಗಣಿಕಾರ್ಯಗಳು ಮತ್ತು ಕೋಟೆಮರಡಿ ಬಳಿ ಆಳವಿಲ್ಲದ ಕಂದಕಗಳು ಕಂಡುಬಂದವು.

ಚಿಕ್ಕಮಗಳೂರು ಜಿಲ್ಲೆಯ ಸಿದ್ದರಹಳ್ಳಿ ಬಳಿಯ ಸುರಂಗಗಳು, ಕಂದಕಗಳು, ಶ್ಯಾಫ್ಟ್ಗಳು, ಕೆಂಚಾರಪುರದ ಹತ್ತಿರ ಆಳವಿಲ್ಲದ ಹೊಂಡಗಳು, ಇಳಿಜಾರು ಶ್ಯಾಫ್ಟ್ಗಳು; ಸಿದ್ದಯ್ಯಹಳ್ಳಿ ಮತ್ತು ನಂದಿ ಬಳಿ ಹಳ್ಳಗಳು ಮತ್ತು 25 ಮೀಟರ್ ಆಳದ ಇಳಿಜಾರು, ಲಂಬವಾದ ಶ್ಯಾಫ್ಟ್ಗಳು ಕಂಡುಬಂದವು. ಕೆಲವು ಪ್ರಾಚೀನ ಗಣಿಗಾರಿಕೆ ತಾಣಗಳು (ಆಳವಾದ ಶ್ಯಾಫ್ಟ್ಗಳು, ಸುರಂಗಗಳು ಮತ್ತು 32 ಮೀಟರು ಉದ್ದದ ಕಂದಕ) ಹೊನ್ನಗುಡ್ಡ ಬೆಟ್ಟದ ಹಕ್ಕಿಡೊಣ್ಣಾ, ಹೊನ್ನಡೊಣ್ಣಾ ಮತ್ತು ಬುಕ್ಕಾಂಬುದಿ, ಗುರುಪುರ ಮತ್ತು ಸಿಂಗನಮನೆ ಹತ್ತಿರವೂ ಶ್ಯಾಫ್ಟ್ಗಳು, ಸುರಂಗಗಳು ಮತ್ತು ಕಂದಕಗಳು ಕಂಡುಬಂದಿವೆ.

ಬೀಜಾಪುರ ಜಿಲ್ಲೆಯ ಅಮರಾಪುರ, ಅರಭೋಗಾಪುರ, ಕಿಲಾರಿಹಟ್ಟಿ, ಜೈಗಡಗುಡ್ಡ ಚಿಕ್ಕಭೆರ್ಗಿ, ನರನಹಾಲ್ ಬಳಿ 21೦ ಮೀಟರ್ ಉದ್ದದ ಕಂದಕ ಮತ್ತು ಲಂಬವಾದ ಶ್ಯಾಫ್ಟ್ಗಳು ಕಂಡುಬಂದವು. ಶಿವಮೊಗ್ಗ ಜಿಲ್ಲೆಯ ತಮಡಿಹಳ್ಳಿ, ಹೊನ್ನುಹಟ್ಟಿ-ಹೊಸೂರು ಹತ್ತಿರ ಶ್ಯಾಫ್ಟ್ಗಳು, ಸುರಂಗಗಳು ಮತ್ತು ಕಂದಕಗಳು ಮತ್ತು ರಾಯಚೂರು ಜಿಲ್ಲೆಯ ಚಿಕ್ಕಹೊನ್ನಕುಣಿ ಆಮ್ಲ ಜ್ವಾಲಾಮುಖಿ ಶಿಲೆಗಳಲ್ಲಿ ಪುರಾತನ ಶ್ಯಾಫ್ಟ್ ಒಂದು ದೊರಕಿದೆ.

ಚಿತ್ರದುರ್ಗ ಶಿಸ್ಟ್ ಪಟ್ಟಿಯಲ್ಲಿ ಪ್ರಾದೇಶಿಕ ಮೌಲ್ಯಮಾಪನ ಮಾಡುತ್ತಿದ್ದಾಗ ಬಸವನಗುಡ್ಡ, ಗುಂಗರಪೆಂಟಾ ಮತ್ತು ಕರಿಯಮ್ಮನಗುಡಿ (5೦೦ ಮೀ. ಉದ್ದ) ಮತ್ತು ನೇರಳೆಗೂಡ ಬಳಿ ಪ್ರಾಚೀನ ಗಣಿಕಾರ್ಯಗಳು ಕಂಡುಬಂದವು. ತುಮಕೂರು ಜಿಲ್ಲೆಯ ಬೆಳ್ಳಾರ ಬಳಿ ಗಣಿಗಾರಿಕೆ ಕರುಹುಗಳು, ಕೋಲಾರ ಜಿಲ್ಲೆಯ ಹುತ್ತೂರು ಮತ್ತು ಧಾರವಾಡ ಜಿಲ್ಲೆಯ ಕರ್ಜಿಗಿ ಪ್ರದೇಶದಲ್ಲಿಯೂ ಗಣಿಗಾರಿಕೆ ನಡೆದಿರುವುದು ಕಂಡುಬಂದಿದೆ.

(ಚಿತ್ರ: ಕೆಂಚಾಪುರ ಉತ್ತರ ಮತ್ತು ಮಂಗಳಗಟ್ಟಿ ಪ್ರಾಚೀನ ಚಿನ್ನದ ಗಣಿಕಾರ್ಯಗಳು (ಗ್ರೋವರ್ ಮತ್ತು ಪಂಡಿತ್, 2೦15)

ಮೈಸೂರು ಜಿಲ್ಲೆಯಲ್ಲಿ ಪ್ರಾಚೀನ ಚಿನ್ನದ ಗಣಿ ಕಾರ್ಯಗಳು ಹೊಲಗೇರಿ ಮತ್ತು ನಂಜನಗೂಡಿನ ದಕ್ಷಿಣಕ್ಕಿರುವ ಆಂಬ್ಲೆ ಬಳಿ ಕಂಡುಬಂದಿವೆ. ಹೊಲಗೇರಿ ಪ್ರದೇಶದಲ್ಲಿ 3೦೦ ಮೀಟರ್ ಉದ್ದಕ್ಕಿಂತ ಹೆಚ್ಚು ಪ್ರದೇಶದಲ್ಲಿ ಹೊಂಡಗಳು ಮತ್ತು ತಗ್ಗುಗಳು 75 X 25 X 5 ಮೀಟರುಗಳ ಆಕಾರದಲ್ಲಿದ್ದವು. ಭೂಗತ ಮಣ್ಣಿನ ಮಾದರಿಗಳಲ್ಲಿ (2 ರಿಂದ 6 ಮೀಟರು ಅಗಲದಲ್ಲಿ) ಒಂದು ಟನ್ನು ಶಿಲೆಯಲ್ಲಿ ಸರಾಸರಿ 6 ಗ್ರಾಮ ಚಿನ್ನ ಇರುವುದು ಕಂಡುಬಂದಿತು.

ಗದಗ ಜಿಲ್ಲೆಯ ನಭಾಪುರ ಪ್ರದೇಶದಲ್ಲಿ ಹಳೆಯ ಗಣಿಕಾರ್ಯಗಳು ಕಂಡುಬಂದಿವೆ. ಸಂಕಟೋಡಕ್-ದೋಣಿತಾಂಡಾ ಹಳೆ ಗಣಿಗಳಲ್ಲಿ ಎರಡು ಕಡೆ ಚಿನ್ನ ಇರುವುದು ಸಾಬೀತಾಗಿದೆ. ಚಿತ್ರದುರ್ಗ ಶಿಸ್ಟ್ ಪಟ್ಟಿಯಲ್ಲಿ ರಾಮಜೋಗಿಹಳ್ಳಿಯ ಹಳೆಯ ಗಣಿಗಳಲ್ಲಿ ಒಂದು ಟನ್ನು ಶಿಲೆಯಲ್ಲಿ 3.7 ಗ್ರಾಂ ಚಿನ್ನ ಇರುವುದಾಗಿ ತಿಳಿದಿದೆ. ಹೊಸಹಟ್ಟಿ ಪ್ರದೇಶದಲ್ಲಿ ಹಲವಾರು ಸ್ಥಳಗಳಲ್ಲಿ ಮತ್ತು ಇತರ ಸ್ಥಳಗಳಲ್ಲಿ ಚಿನ್ನ ಇರುವುದು ತಿಳಿದಿದೆ.

ಚಿತ್ರದುರ್ಗ ಜಿಲ್ಲೆಯ ಆನೆಸಿದ್ರಿ (ಶ್ಯಾಫ್ಟ್ಗಳು) ಮತ್ತು ಕಾಚೇನಹಳ್ಳಿ, ತುಮಕೂರು ಜಿಲ್ಲೆಯ ಹೊನ್ನಬೆಟ್ಟದಲ್ಲೂ ಚಿನ್ನ ದೊರಕುವುದಾಗಿ ಇತ್ತೀಚೆಗೆ ತಿಳಿದುಬಂದಿದೆ. ಬಂಗಾರಗಟ್ಟಿ ಪರ್ವತ ಶ್ರೇಣಿಯ ಬಿ.ಐ.ಎಫ್. ಶಿಲೆಗಳಲ್ಲಿ ಹೆಚ್ಚಿನ ಸಂಖ್ಯೆಯ ಪುರಾತನ ಕಾರ್ಯಗಳು ಮತ್ತು ಬಿ.ಐ.ಎಫ್ ಮತ್ತು ಸ್ಫಟಿಕ ಶಿಲೆಗಳಲ್ಲಿ ಚಿನ್ನ ಅರಿದಿರುವ ಕುರುಹುಗಳು ಕಂಡುಬಂದಿವೆ; ಚಾನಲ್ ಶಿಲಾಮಾದರಿಗಳಲ್ಲಿ ಟನ್ನಿಗೆ 5.8 ಗ್ರಾಂ ಚಿನ್ನ ದೊರಕಿದೆ.

ರಾಯಚೂರು ಜಿಲ್ಲೆಯ ಎತ್ಕಲ್ ಹತ್ತಿರ ಇತ್ತೀಚೆಗೆ ನಡೆಸಿದ ಡ್ರಿಲ್ಲಿಂಗ್ ಶೋಧನೆಯಲ್ಲಿ ಉತ್ಕೃಷ್ಟ ಚಿನ್ನ ಇರುವುದು ಕಂಡುಬಂದಿದೆ. ಬಳ್ಳಾರಿ ಜಿಲ್ಲೆಯ ರಾಮಾಪುರ ಮತ್ತು ದಾಸಾಪುರದ ಹತ್ತಿರ 6 ಕಿ.ಮೀ.ಗಳ ಉದ್ದದಲ್ಲಿ ಹಳೆ ಗಣಿಕಾರ್ಯಗಳ ಚಟುವಟಿಕೆಗಳು ಮತ್ತು ಶಿಲಾ ಮಾದರಿಗಳಲ್ಲಿ ಟನ್ನಿಗೆ 5 ಗ್ರಾಂ ಚಿನ್ನ ಕಂಡುಬಂದಿದೆ.

ದಾವಣಗೆರೆ ಜಿಲ್ಲೆಯ ಗೌಡಿಹಟ್ಟಿ ಬಳಿಯ ಹಳೆ ಕಂದಕದಲ್ಲಿ ಸಂಗ್ರಹಿಸಿದ ಮಾದರಿಗಳಲ್ಲಿ ಚಿನ್ನದ ಅಂಶ ಇರುವುದು ಕಂಡುಬಂದು ಡ್ರಿಲ್ಲಿಂಗ್ ಮಾಡಿದ ಮೇಲೆ ಟನ್ನಿಗೆ 2.4 ಗ್ರಾಂ ಚಿನ್ನದ ಇರುವುದು ದೃಢಪಟ್ಟಿದೆ. ಚಿತ್ರದುರ್ಗ ಜಿಲ್ಲೆಯ ಜಿ.ಆರ್.ಹಳ್ಳಿಯ ಪೂರ್ವಕ್ಕಿರುವ ಹಳೆ ಹೊಂಡಗಳಲ್ಲಿ 3೦ ಮೀಟರ್ ಆಳದವರೆಗೆ ಎರಡು ಹಂತಗಳಲ್ಲಿ ಸುರಂಗಗಳು ಇರುವುದು ಕಂಡುಬಂದಿದೆ. ಹೊನ್ನಮರಡಿಯ ಪೂರ್ವದಲ್ಲಿ ಚಿನ್ನ ಕಂಡುಬಂದಿರುವುದಲ್ಲದೆ ಕಣಕುಪ್ಪೆ ಪ್ರದೇಶದಲ್ಲಿ ಗ್ರಾನೈಟ್ ಬಂಡೆಗಳ ಮೇಲೆ ಚಿನ್ನದ ಅದಿರು ಅರಿದಿರುವ ಗುರುತುಗಳಿವೆ.

(ಚಿತ್ರ: ಬಂಗಾರಘಟ್ಟಿ ಬಿ.ಐ.ಎಫ್ ಶಿಲಾರಚನೆಗಳಲ್ಲಿನ ಹಳೆ ಗಣಿ ಕಾರ್ಯ)

(ಚಿತ್ರ: ಚಿನ್ನದ ಅದಿರನ್ನು ಪುಡಿ ಮಾಡಿ ಚಿನ್ನ ಸಂಗ್ರಹಿಸುವ ಕುಣಿಗಳು.)

ಚಿನ್ನ ಪ್ರತ್ಯೇಕಿಸುವ ದೇಶಿ ವಿಧಾನ: ಚಿನ್ನ ಹೊಂದಿರುವ ಕಲ್ಲುಗಳನ್ನು ನುಣ್ಣಗೆ ಪುಡಿ ಮಾಡಿ ಇಳಿಜಾರಿನ ಸಣ್ಣಸಣ್ಣ ಕುಣಿಗಳಲ್ಲಿ ನೀರಿನ ಮೂಲಕ ಹರಿಸಿದಾಗ ಹೆಚ್ಚು ಸಾಂದ್ರತೆ ಇರುವ ಚಿನ್ನದ ಧೂಳು ಕುಣಿಗಳಲ್ಲಿ ಉಳಿದುಕೊಂಡು ಮಣ್ಣಿನ ಗಸಿ ಮುಂದಕ್ಕೆ ಹರಿದುಹೋಗುತ್ತದೆ. ಅದೇ ಮಣ್ಣು ಮಿಶ್ರಿತ ಚಿನ್ನದ ಧೂಳಿಗೆ ಪಾದರಸ ಬೆರೆಸಿದರೆ ಪಾದರಸ ಚಿನ್ನವನ್ನು ಮಾತ್ರ ಸಂಪೂರ್ಣವಾಗಿ ಹೀರಿಕೊಂಡು ಮಣ್ಣನ್ನು ಬಿಟ್ಟುಬಿಡುತ್ತದೆ. ನಂತರ ಪಾದರಸವನ್ನು ಒಂದು ಬಟ್ಟೆಯಲ್ಲಿ ಮಡಿಸಿ ಹಿಸಿಕಿದಾಗ ಚಿನ್ನದ ಧೂಳು ಮಾತ್ರ ಬಟ್ಟೆಯಲ್ಲಿ ಉಳಿದುಕೊಂಡು ಪಾದರಸ ಹೊರಕ್ಕೆ ಬಂದುಬಿಡುತ್ತದೆ. ಇದು ಚಿನ್ನವನ್ನು ಪ್ರತ್ಯೇಕಿಸುವ ಬಹಳ ಸರಳವಾದ ದೇಶಿ ತಂತ್ರಜ್ಞಾನ.

ರಾಜಸ್ಥಾನ: ರಾಜಸ್ಥಾನದ ಜುಂಜುನು ಜಿಲ್ಲೆಯ ಉಸ್ರು, ಧೌಲಾಘರ್; ಅಜ್ಮೇರ್ ಜಿಲ್ಲೆಯ ಸುನರಿಕುರಿಯ ಬಳಿ ಚಿನ್ನ ಇರುವುದನ್ನು ಪತ್ತೆ ಮಾಡಲಾಗಿದೆ. ಭುಕಿಯಾ-ಜಗಪುರ ಪ್ರದೇಶ, ಬನ್ಸ್ವಾರಾ ಜಿಲ್ಲೆ, ಹಿಂಗ್ಲಾಜ್ ಮಾತಾ ಮತ್ತು ಭಾರ್ಕುಂಡಿಯ ದುಂಗಾರ್‌ಪುರ್ ಜಿಲ್ಲೆಗಳಲ್ಲಿ ಹೆಚ್ಚಾಗಿ ಪ್ರಾಚೀನ ಚಿನ್ನದ ಗಣಿ ಕಾರ್ಯಗಳು ಕಂಡುಬಂದಿವೆ. ಗೋಸಾನ್ (ಕಬ್ಬಿಣ ಅದಿರು) ಮಾದರಿಗಳಲ್ಲಿ ಟನ್ನಿಗೆ 7೦.6 ಗ್ರಾಂ ಚಿನ್ನ ಕಣ್ಣುಗಳಿಗೆ ನೇರವಾಗಿ ಕಾಣಿಸುವಷ್ಟು ದಟ್ಟವಾಗಿತ್ತು. ಇದೇ ಸ್ಥಳಗಳಲ್ಲಿ ರುಬ್ಬುವ ಕಲ್ಲು ಉಪಕರಣಗಳು ಮತ್ತು ಪ್ರಾಚೀನ ಚಿನ್ನ ಸೋಸುವ ತಾಣಗಳು ಕಂಡುಬಂದಿವೆ. ಈ ಪ್ರದೇಶಗಳಲ್ಲಿ ಸಂಗ್ರಹಿಸಿದ ಕಲ್ಲು ಮಾದರಿಗಳಲ್ಲಿ ಟನ್ನಿಗೆ 11.75 ಗ್ರಾಂ ಚಿನ್ನ ದೊರಕಿದೆ.

ಹಿಂಗ್ಲಾಜ್ ಮಾತಾ ಮತ್ತು ಭಾರ್ಕುಂಡಿ ಹಳೆ ಗಣಿ ಪ್ರದೇಶಗಳಲ್ಲಿ ಸಂಗ್ರಹಿಸಿದ ಮಾದರಿಗಳಲ್ಲಿ ಕ್ರಮವಾಗಿ ಟನ್ನಿಗೆ 49 ಗ್ರಾಂ ಮತ್ತು 14.1 ಗ್ರಾಂ ಚಿನ್ನ ದೊರಕಿದೆ. ವಿವರವಾದ ಪರಿಶೋಧನೆಯಿಂದ ಭೋಕಿಯಾ-ಜಗಪುರ ಪ್ರದೇಶದಲ್ಲಿ ಚಿನ್ನದ ನಿಕ್ಷೇಪಗಳು ಇರುವುದು ಕಂಡುಬಂದಿದೆ.

(ಚಿತ್ರ: ಭುಕಿಯಾ ಮತ್ತು ಭಾರ್ಕುಂಡಿ ಹಳೆ ಚಿನ್ನದ ಗಣಿ ಕಾರ್ಯಗಳು.)

 

(ಚಿತ್ರ: ವಾಸು ಪ್ರದೇಶ ಮತ್ತು ಕಲಾಜೋಡ್ ಪ್ರದೇಶದಲ್ಲಿರುವ ಹಳೆ ಚಿನ್ನದ ಗಣಿ ಕಾರ್ಯಗಳು.)

ರಾಜಸ್ಥಾನದ ಅಲ್ವಾರ್, ಬನ್ಸ್ವಾರಾ, ಭಿಲ್ವಾರಾ, ದೌಸಾ, ದುಂಗರ್‌ಪುರ್, ಜೈಪುರ, ಜುಂಜುನು, ಪಾಲಿ, ಸಿಕಾರ್ ಸಿರೋಹಿ ಮತ್ತು ಉದಯಪುರ ಜಿಲ್ಲೆಗಳಲ್ಲಿರುವ ತಾಮ್ರ ಗಣಿಗಳಲ್ಲಿ ಚಿನ್ನದ ಸ್ವಲ್ಪ ಅಂಶವು ಉಪಉತ್ಪನ್ನ (ಬೈಪ್ರಾಡಕ್ಟ್) ಲೋಹವಾಗಿ ದೊರಕುತ್ತದೆ. ಮನ್ಪುರ-ಸಂಜೇಲಾ ಪ್ರದೇಶದಲ್ಲಿ ಅದಿರನ್ನು ಅರಿದಿರುವ ರುಬ್ಬುಕಲ್ಲುಗಳು ಕಂಡುಬಂದಿದ್ದು ವ್ಯಾಪಕವಾಗಿ ಬಿದ್ದಿರುವ ಕಿಟ್ಟ (ಸ್ಲ್ಯಾಗ್)ದಲ್ಲಿ ಟನ್ನಿಗೆ 1.33 ಗ್ರಾಂ ಚಿನ್ನ ಇರುವುದು ಕಂಡುಬಂದಿದೆ.

ಉತ್ತರಾಖಂಡ್: ಗರ್ವಾಲ್ ಹಿಮಾಲಯದ ಕಿಮೋಥ, ಲ್ಯಾಮೇರಿ, ಟಿನಿ-ಕೋಟೇಶ್ವರ, ಮಲಾರಿ ಮತ್ತು ರುದ್ರಪ್ರಯಾಗ್ ಪ್ರದೇಶಗಳಲ್ಲಿ ತಾಮ್ರ ಮತ್ತು ಚಿನ್ನ ಜೊತೆಜೊತೆಗೆ ಇರುವುದು ದೃಢಪಟ್ಟಿದೆ.

(ಚಿತ್ರ: ರುದ್ರಪ್ರಯಾಗ್ ಜಿಲ್ಲೆಯ ಕಿಮೋಥಾ ಮತ್ತು ಲ್ಯಾಮೇರಿ ಹಳೆ ಗಣಿ ಕಾರ್ಯಗಳು.)

 

(ಚಿತ್ರ: ತಮಖಾನಿ ಮತ್ತು ಖಿಮ್‌ಖರಕ್ ಪ್ರದೇಶ, ಮಲಾರಿ, ಚಮೋಲಿ ಜಿಲ್ಲೆ.)

ಸುಮೇರ್‌ಪುರ್-ರಾತುರಾ, ಸಾರಿ ಮತ್ತು ಜುಗ್ತೋಲಿ ಪ್ರದೇಶಗಳ ಅಲಕ್‌ನಂದಾ ಮತ್ತು ಮಂದಾಕಿನ ನದಿಗಳಲ್ಲಿ ಮೆಕ್ಕಲುಮಣ್ಣು ಜಾಲಿಸುವ ಮೂಲಕ ಜಿ.ಎಸ್.ಐ. ಭೂವಿಜ್ಞಾನಿಗಳು ಅನೇಕ ಕಡೆ ಚಿನ್ನದ ಧೂಳು ಮತ್ತು ಸ್ಪೆಕ್‌ಗಳನ್ನು ಸಂಗ್ರಹಿಸಿದ್ದರು.

ಉತ್ತರಪ್ರದೇಶ: ಮಧ್ಯ ಭಾರತದಲ್ಲಿ ಉತ್ತರಪ್ರದೇಶ ಮತ್ತು ಮಧ್ಯಪ್ರದೇಶದ ಗಡಿ ಚಕೋರಿಯ ಪ್ರದೇಶದಲ್ಲಿ ಚಿನ್ನದ ಶೋಧನೆ ಮಾಡುತ್ತಿದ್ದಾಗ ಪ್ರಾಚೀನ ಗಣಿ ಕಾರ್ಯಗಳ ಸರಪಳಿ ಕಾಣಿಸಿಕೊಂಡಿತು. ಮಣ್ಣು ಮಾದರಿಗಳನ್ನು ನಿಷ್ಕರ್ಷಗೆ ಒಳಪಡಿಸಿದಾಗ 1 ಟನ್ನು ಕಲ್ಲುಗಳಲ್ಲಿ 1 ಗ್ರಾಂ ಚಿನ್ನ ಇರುವುದು ಕಂಡುಬಂದಿತು. ಸಲ್ಖಾನನ್‌ನಲ್ಲಿ ಟನ್ನಿಗೆ 8.8 ಗ್ರಾಂ ಚಿನ್ನ, ಗುರ್ಹರ್ ಪಹಾರ್‌ನಲ್ಲಿ ಟನ್ನಿಗೆ 1೦.8 ಗ್ರಾಂ ಚಿನ್ನ ದೊರಕಿತು. ಸೊಂಕರ‍್ವ ಪ್ರದೇಶದ ಎರಡು ಪ್ರಾಚೀನ ಗುಂಡಿಗಳಲ್ಲಿ (15 ಮೀಟರ್ ಉದ್ದ 4 ಮೀಟರ್ ಅಗಲ) ಟನ್ನಿಗೆ 17 ಗ್ರಾಂ ಚಿನ್ನ, ಅಮ್ಲಿಲಾ ಬಳಿ ಮೂರು ಗುಂಡಿಗಳಲ್ಲಿ ಟನ್ನಿಗೆ 1.7 ಗ್ರಾಂ ಚಿನ್ನ, ಬಂಧೋಲ್ ಬಳಿ ಎರಡು ಗುಂಡಿಗಳಲ್ಲಿ ಟನ್ನಿಗೆ 2 ಗ್ರಾಂ ಚಿನ್ನ, ಹರಪ್ಪಾ ಬಳಿ ಮೂರು ಗುಂಡಿಗಳಲ್ಲಿ ಟನ್ನಿಗೆ 9.2 ಗ್ರಾಂ ಚಿನ್ನ, ಖೋಖ್ವಾ ಬಳಿ ಮೂರು ಗುಂಡಿಗಳಲ್ಲಿ ಟನ್ನಿಗೆ 24.5 ಗ್ರಾಂ ಚಿನ್ನ, ಬಾಗ್ಧಾ ಬಳಿ ಎರಡು ಗುಂಡಿಗಳಲ್ಲಿ ಟನ್ನಿಗೆ 1.6 ಗ್ರಾಂ ಚಿನ್ನ, ಸೆಂದೋರಿಯ ಬಳಿಯ ಒಂದು ಗುಂಡಿಯಲ್ಲಿ ಟನ್ನಿಗೆ 5 ಗ್ರಾಂ ಚಿನ್ನ ಮತ್ತು ತಿಶಿವಾ ಬಳಿ ಅಲ್ಲಲ್ಲಿ ಪ್ರಾಚೀನ ಗುಂಡಿಗಳು ಕಂಡುಬಂದವು.

ಸಲ್ಖಾನ್-ಸೊಂಕೋರ್ವ ಪ್ರದೇಶದಲ್ಲಿ 1 ಕಿ.ಮೀ. ಉದ್ದ ಮತ್ತು 1-15 ಕಿ.ಮೀ. ಅಗಲ ಪ್ರದೇಶದಲ್ಲಿ ಮತ್ತು ಗುರ್ಹರ್ ಪಹಾರ್ ಪ್ರದೇಶದಲ್ಲಿ ನಾಲ್ಕೈದು ಸಮಾನಾಂತರ ವಲಯಗಳಲ್ಲಿ ಚಿನ್ನ ತೆಗೆದಿರುವ ಕಾರ್ಯಗಳು ನಡೆದಿರುವುದು ಕಂಡುಬಂದಿದೆ. ಭೂರಾಸಾಯನಿಕ ಮೌಲ್ಯಮಾಪನದ ಸಮಯದಲ್ಲಿ ಚಿನ್ನಕ್ಕಾಗಿ ನಡೆದಿರುವ ಪ್ರಾಚೀನ ಗಣಿಗಾರಿಕೆ ಸ್ಥಳಗಳು ಜರೈಲ್ ಮತ್ತು ಗುರುಮುರಾ, ಸೋನ್ಭದ್ರಾ ಜಿಲ್ಲೆಯಲ್ಲಿ ಕಂಡುಬಂದಿವೆ. ಇಲ್ಲಿ ಹಲವಾರು ಗಾತ್ರದ ಗುಂಡಿಗಳು, ಕಂದಕಗಳು, ಶ್ಯಾಫ್ಟ್ಗಳು (ಕೆಲವು ಇಳಿಜಾರು) ಮತ್ತು ಅದಿರನ್ನು ಅರಿದಿರುವ ರಬ್ಬುಕಲ್ಲು ಇತ್ಯಾದಿ ಸಲಕರಣೆಗಳು ದೊರಕಿವೆ.

ಸೋನಾ ಪಹಾರ್ ಪ್ರದೇಶದಲ್ಲಿ ಪುರಾತನ ಚಿನ್ನದ ಗಣಿಗಾರಿಕೆ ಕಂಡುಬಂದಿದೆ. ಕೆಲವು ಕಡೆ ಮಣ್ಣನ್ನು ಜಾಲಿಸಿದಾಗ ಟನ್ನಿಗೆ 8.9 ಗ್ರಾಂ ಚಿನ್ನ ದೊರಕಿತು. 2 ಕಿ.ಮೀ. ಉದ್ದ 6೦೦ ಮೀಟರ್ ಅಗಲ ಪ್ರದೇಶದಲ್ಲಿ 6೦ ಮೀಟರ್ ಉದ್ದ, 1೦ ಮೀಟರ್ ಅಗಲ ಮತ್ತು 1೦ ಮೀಟರ್ ಆಳದ ಕಂದಕಗಳಿದ್ದು ಕಚ್ಚಾ ರುಬ್ಬುಕಲ್ಲುಗಳು ಮತ್ತು ಇತರ ಸಲಕರಣೆಗಳು ಅಲ್ಲೆಲ್ಲ ಬಿದ್ದಿದ್ದವು.

ಗುಲಾಲ್ದಿಹ್‌ನ ರಂಧೋರ್ ಮತ್ತು ಬೀರನ್‌ಬಹ್ರಾ ಹತ್ತಿರ ಸಂಗ್ರಹಿಸಿದ ಮಾದರಿಗಳಲ್ಲಿ ಟನ್ನಿಗೆ 3 ಗ್ರಾಂ ಚಿನ್ನ ದೊರಕಿತು. ಪರಸ್ಪನಿ ಹತ್ತಿರ ಟನ್ನಿಗೆ 1.5 ಗ್ರಾಂ, ಕನ್ಹೇರಾ ಬಳಿ ಟನ್ನಿಗೆ 1.5 ಗ್ರಾಂ, ಗುಲಾರಿಹಾ, ಗರಫಥರ್ ಮತ್ತು ಪರಸಿಧೈ ಹತ್ತಿರ ಟನ್ನಿಗೆ 3.5 ಗ್ರಾಂ ಚಿನ್ನ ದೊರಕಿತು. ಜುಗ್ನೇರಾ-ಖಜುರಾ ಪ್ರದೇಶದ ಹೊಂಡಗಳಲ್ಲಿ ಟನ್ನಿಗೆ 2 ಗ್ರಾಂ ಚಿನ್ನದ ಜೊತೆಗೆ ಸೀಸ-ಸತುವಿನ ಅಂಶವೂ ದೊರಕಿದೆ.

(ಚಿತ್ರ: ಉತ್ತರ ಪ್ರದೇಶದ ಸೋನಾ ಪಹಾರ್ ಚಿನ್ನದ ಗಣಿ ಕಾರ್ಯ._

(ಚಿತ್ರ: ಮಧ್ಯಪ್ರದೇಶದ ಗುರ್ಹರ್ ಪಹಾರ್ ಪ್ರಾಚೀನ ಚಿನ್ನದ ಗಣಿ ಕಾರ್ಯ.)

ಮಧ್ಯಪ್ರದೇಶ-ಛತ್ತೀಸ್‌ಗರ್ : ರಾಯಗರ್ ಜಿಲ್ಲೆಯ ಜಶ್‌ಪುರ ಪ್ರದೇಶದಲ್ಲಿ ಒಂದು ಕಾಲದಲ್ಲಿ ಚಿನ್ನದ ಗಣಿಗಾರಿಕೆ ಸಮೃದ್ಧವಾಗಿ ನಡೆದಿದ್ದು, ಈ ಚಟುವಟಿಕೆಗಳು ಇಬ್ ನದಿ ಮತ್ತು ಅದರ ಉಪನದಿಗಳ ದಡಗಳಲ್ಲಿ ಕಂಕರುಕಲ್ಲು ಮತ್ತು ಮೆಕ್ಕಲುಮಣ್ಣಿನಲ್ಲಿ ಸೀಮಿತಗೊಂಡಿತ್ತು. ಚಿನ್ನದ ಪ್ರಾಥಮಿಕ ಮೂಲ ಬಂಗಾವ್, ಪೊನಾರಿಪಾನಿ, ತಂಗರ್‌ಗಾಂವ್, ಸಿಮಿರ್ಕಾಚಾ ಹಳ್ಳಿಗಳ ಸುತ್ತಮುತ್ತಲಿನ ಸ್ಫಟಿಕ (ಕ್ವಾರ್ಡ್ಝ್) ಶಿಲೆಗಳಾಗಿದ್ದು, ಈ ಶಿಲೆಗಳಿಂದ ಚಿನ್ನ ಬಿಡುಗಡೆಗೊಂಡಿತ್ತು. ಜರೆಕುರ್ಸೆ ಹತ್ತಿರ ಕೊತ್ರಿನಾಡಿ ಮತ್ತು ನಾಲೆಗಳ ಮರಳಿನಲ್ಲಿ ಚಿನ್ನದ ಅಂಶ ಕಂಡುಬಂದಿದೆ. ರಾಯ್‌ಪುರ್ ಜಿಲ್ಲೆಯ ಸೋನಾಖಾನ್ ಪ್ರದೇಶದಲ್ಲಿ ಗೋಸಾನ್ (ಕಬ್ಬಿಣ ಅದಿರು) ಮತ್ತು ಸ್ಫಟಿಕ ಶಿಲೆಗಳಲ್ಲಿ ಚಿನ್ನ ಕಂಡುಬಂದಿದೆ. ಬಸ್ತಾರ್ ಜಿಲ್ಲೆಯ ಸೋನಾಡೈ ಮತ್ತು ಸೋನಾದೇಹಿ ಡೋಂಗ್ರಿ ಬೆಟ್ಟದಲ್ಲೂ ಚಿನ್ನ ದೊರಕಿದೆ.

ಸೋನಾದೇಹಿ ಪರ್ವತ ಶ್ರೇಣಿಯಲ್ಲಿ 1 ಚ.ಕಿ.ಮೀ. ಪ್ರದೇಶದಲ್ಲಿ ಸುಮಾರು 1೦೦ ಕಡೆ ಚಿನ್ನ ತೆಗೆದಿರುವ ಕುರುಹುಗಳು ಹರಡಿಕೊಂಡಿವೆ. ಕನಿಷ್ಠ 1೦ ಕಡೆ 5೦ ಮೀಟರುಗಳ ಆಳದ ಗುಂಡಿಗಳು ಕಂಡುಬಂದಿದ್ದು ಇಲ್ಲಿ ಸಂಗ್ರಹಿಸಿದ ಮಾದರಿಗಳಲ್ಲಿ ಟನ್ನಿಗೆ 2೦.7 ಗ್ರಾಂವರೆಗೂ ಚಿನ್ನ ಇರುವುದು ಕಂಡುಬಂದಿದೆ. ಬೇಜಾರ್-ತುಮರಿಸೂರ್ ಮತ್ತು ಪುರೋ-ಮಿಚಿಗಾಂವ್ ಪ್ರದೇಶಗಳ ಬ್ಯಾಂಡೆಡ್ ಐರನ್ ಶಿಲಾ ರಚನೆಗಳಲ್ಲಿ (ಬಿ.ಐ.ಎಫ್) ಚಿನ್ನದ ಅಂಶ ಕಂಡುಬಂದಿದೆ. ಅದೇ ರೀತಿ ಕುಮೂರಕಟ್ಟಾದ ಹೊಂಡಗಳು ಮತ್ತು ಇಳಿಜಾರಿನಲ್ಲಿ ಬಿದ್ದಿರುವ ಗಣಿ ತ್ಯಾಜ್ಯದಲ್ಲಿ ಮತ್ತು ಕುಮೂರಕಟ್ಟಾದ ತ್ಯಾಜ್ಯದಲ್ಲೂ ಚಿನ್ನದ ಅಂಶ ದೊರಕಿದೆ.

ಬೆತುಲ್ ಬಳಿಯ ಸೋನಾಘಾಟಿ ಪ್ರದೇಶದಲ್ಲಿ ಸ್ಫಟಿಕ ಕಲ್ಲುಗಳನ್ನು ಅರಿದು ಚಿನ್ನವನ್ನು ಸಂಗ್ರಹಿಸಿರುವ ಕುರುಹುಗಳು ಹೇರಳವಾಗಿ ಕಂಡುಬಂದಿವೆ. ಸಿಧಿ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ 8 ಮೀ. ಉದ್ದ 7 ಮೀ. ಆಳದ ಪ್ರಾಚೀನ ಗುಂಡಿಗಳು ಕಂಡುಬಂದಿವೆ. ಜಬಲ್ಪುರ್ ಜಿಲ್ಲೆಯ ಇಮಾಲಿಯಾ ಪ್ರದೇಶದಲ್ಲಿ ಚಿನ್ನದ ಗಣಿಗಾರಿಕೆ ನಡೆದಿರುವ ಶ್ಯಾಫ್ಟ್ಗಳು, ಕಂದಕಗಳು ಮತ್ತು ಗಣಿತ್ಯಾಜ್ಯ ಬಿದ್ದಿದ್ದು ಕೆಲವು ಕಡೆ ಡ್ರಿಲ್ಲಿಂಗ್ ಮಾಡಿದಾಗ ಟನ್ನಿಗೆ 12.6 ಗ್ರಾಂ ಚಿನ್ನ ಇರುವುದು ಕಂಡುಬಂದಿದೆ.

ಬಿಹಾರ-ಜಾರ್ಖಂಡ್ : ಛೋಟಾನಾಗಪುರ ಪ್ರದೇಶದಲ್ಲಿ ಸಮೃದ್ಧ ಚಿನ್ನದ ನಿಕ್ಷೇಪಗಳು ಇರುವುದಾಗಿ 1869ರಲ್ಲಿ ಬಾಲ್ ದಾಖಲಿಸಿದ್ದಾರೆ. ಎಂ.ಎಸ್.ಕ್ರಿಷ್ಣನ್ 1953ರಲ್ಲಿ ಸಿಂಗಭೂಮ್ ಜಿಲ್ಲೆಯ ಮಾಯಾಸಾರದಲ್ಲಿ ಸ್ಫಟಿಕ ಶಿಲೆ ಮತ್ತು ಗಣಿತ್ಯಾಜ್ಯ ಆಧಾರದ ಮೇಲೆ ಚಿನ್ನ ತೆಗೆದಿರುವ ಗಣಿ ಕಾರ್ಯ ಚಟುವಟಿಕೆಗಳು ನಡೆದಿರುವುದಾಗಿ ಗುರುತಿಸಿದ್ದರು. ಅದೇ ರೀತಿ ರಾಖೋಬ್ ಸಮೀಪದ ಕಂಭರ್, ಬೈರಗಿ, ಸಲ್ಕಾ ಮತ್ತು ಕಂದರಾಜ ಪ್ರದೇಶಗಳಲ್ಲೂ ಚಿನ್ನ ಇರುವುದು ಕಂಡುಬಂದಿದೆ.

ಕುಂದರಕೋಚಾ (2 ಚ.ಕಿ.ಮೀ ಗಿಂತಲೂ ಹೆಚ್ಚು ಪ್ರದೇಶ), ಸುರೈಗೋರ, ರಂಗ್ರಾ, ಪೊರೊಜರ್ನ, ಕೊರಿಯಮ್ ಮತ್ತು ಲಾವಾ ಪ್ರದೇಶದ ತಮಾಪಹಾರ್ ಮತ್ತು ಭಾಲುಕ್ ಖಡ್ ಬೆಟ್ಟಗಳ ಬಳಿ ಟನ್ನಿಗೆ 13.4 ಗ್ರಾಂ ಚಿನ್ನ ದೊರಕಿದ್ದು, ಇಲ್ಲೆಲ್ಲ ಸಾಕಷ್ಟು ಚಿನ್ನದ ಗಣಿ ಕಾರ್ಯಗಳು ನಡೆದಿವೆ. ಪಾಟ್ನಾ ಜಿಲ್ಲೆಯ ಸಿತೌರಾ ಬಳಿಯ ಸ್ಫಟಿಕ ಶಿಲೆಗಳು ಮತ್ತು ಸಿಂಘಭೂಮ್ ಜಿಲ್ಲೆಯ ಪೊರೊಜರ್ನ ಬಳಿ ಒಂದು ಸುರಂಗವಿದೆ. ಇನ್ನೂ ಅನೇಕ ಸ್ಥಳಗಳಲ್ಲಿ ಚಿನ್ನ ತೆಗೆದಿರುವ ಪ್ರಾಚೀನ ಗಣಿಗಾರಿಕೆ ಕುರುಹುಗಳು ಕಂಡುಬಂದಿವೆ.

ಚಿತ್ರ: ಟಿಲೈಟ್ನರ್ ಮತ್ತು ಮಹರ್ಡಿಯಾ ಹತ್ತಿರ ಇರುವ ಶ್ಯಾಫ್ಟ್ಗಳು.

ಆಂಧ್ರಪ್ರದೇಶ: 1953ರಲ್ಲಿ ಕೃಷ್ಣನ್, ವೆಂಕಟಂಪಲ್ಲೆ ಮತ್ತು ರಾಮಾಪುರಂ ಬಳಿ ನೀಲಿ ಬಣ್ಣದ ಸಿರೆ ಸ್ಫಟಿಕ ಶಿಲೆಗಳಲ್ಲಿ ಮತ್ತು ಸಿರಸಂಬೇಡು ಬಳಿ ಕ್ವಾರ್ಟ್ಜೈಟ್‌ನಲ್ಲಿ ಚಿನ್ನಕ್ಕಾಗಿ ತೋಡಿರುವ ಪ್ರಾಚೀನ ಗಣಿಗಳು ಇರುವುದನ್ನು ಗುರುತಿಸಿದರು. ರಾಯ್ 1962ರಲ್ಲಿ ರಾಮಗಿರಿ, ಬುರುಜು, ಕೊಟ್ಟಪಲ್ಲಿ ಮತ್ತು ಜಿಬುಟಿಲ್ ಬಳಿ ಹಸಿರು ಮಿಶ್ರಿತ ನೀಲಿ ಬಣ್ಣದಿಂದ ಬಿಳಿ ಸ್ಫಟಿಕ ನಾಳಗಳಲ್ಲಿ ಸಿರಿಸಿಟಿಕ್ ಮತ್ತು ಕ್ಲೋರೈಟ್ ಫಿಲ್ಲೈಟ್ ಶಿಲಾ ರಚನೆಗಳಲ್ಲಿ ಪ್ರಾಚೀನ ಗಣಿ ಕಾರ್ಯಗಳು ನಡೆದಿರುವುದನ್ನು ಕಂಡುಹಿಡಿದರು.

ಕೃಷ್ಣಮೂರ್ತಿಯವರು 1963ರಲ್ಲಿ ಚಿತ್ತೂರು ಜಿಲ್ಲೆಯ ರಾಮಗಿರಿ ಬಳಿ 7-8 ಮೈಲಿ ಉದ್ದದ ಶಿಸ್ಟ್ ಪಟ್ಟಿಯಲ್ಲಿ ಹರಿಡಿರುವ ಕಿರಿದಾದ ಕಂದಕಗಳ ಮೂಲಕ ಚಿನ್ನದ ಚಟುವಟಿಕೆಗಳು ನಡೆದಿರುವುದನ್ನು ದಾಖಲಿಸಿದರು. ಅದೇ ರೀತಿ ಚಿನ್ನಭಾವಿ, ಭದ್ರಂಪಲ್ಲಿ, ಕಲಗಳ್ಳೆ, ಮತ್ತು ಮರುಟ್ಲ ತುರ್ಪುರ ಪ್ರದೇಶಗಳು ಮತ್ತು ನಾಗಿರೆಡ್ಡಿಪಲ್ಲೆ ಬಳಿ ಜಿ.ಎಸ್.ಐ. ಭೂವಿಜ್ಞಾನಿಗಳು ಚಿನ್ನಕ್ಕಾಗಿ ತೋಡಿರುವ ಹಳೆ ಗುಂಡಿಗಳನ್ನು ಗುರುತಿಸಿದರು. ತಾಡುಕೊಂಡದಲ್ಲಿ ಎರಡು ಸುರಂಗಗಳು, ಗಾಂಧಿಮುಡುಗು ಹತ್ತಿರ 3೦*3*4 ಮೀ.ಗಳ ಗುಂಡಿ ಜೊತೆಗೆ ಸ್ಲ್ಯಾಗ್, ರೆಟಾರ್ಟ್ಸ್ ಮತ್ತು ಚಿನ್ನದ ಅದಿರು ಅರಿದಿರುವ ಗುಂಡು ಕಲ್ಲುಕಲ್ಲುಗಳು ಕಂಡುಬಂದವು; ಮಲ್ಲೈಕೊಂಡದಲ್ಲೂ ಗಣಿಗಾರಿಕೆ ಕಂಡುಬಂದಿದೆ. ಅನಂತಪುರ ಜಿಲ್ಲೆಯ ಪೆನಕಚೆರ್ಲಾ ಬಳಿ 4 ಕಡೆ ಹಳೆಯ ಕಂದಕಗಳು ಕಂಡುಬಂದಿವೆ.

ಚಿತ್ತೂರು ಜಿಲ್ಲೆಯಲ್ಲಿ ನಡೆಸಿದ ಪರಿಶೋಧನೆಯಲ್ಲಿ ಆವುಲತಿಪ್ಪನಪಲ್ಲಿ ಬಳಿ ಹಳೆಯ ಕಂದಕಗಳಲ್ಲಿ ಸಂಗ್ರಹಿಸಿದ ಮಾದರಿಗಳಲ್ಲಿ ಟನ್ನಿಗೆ 12 ಗ್ರಾಂ ಚಿನ್ನ ದೊರಕಿದೆ. ಪಾಲಚೂರು ಬಳಿ ಫೆರುಜಿನಸ್ ಮೈಕೇಸಿಯಸ್ ಸ್ಫಟಿಕ ಶಿಲೆಗಳಲ್ಲಿ 15*1೦*12 ಮೀಟರುಗಳ ಆಳದ ಹೊಂಡಗಳಲ್ಲಿ ಟನ್ನಿಗೆ 2.47 ಗ್ರಾಂ ಚಿನ್ನ ಕಂಡುಬಂದಿತು. ಕರ್ನೂಲ್ ಜಿಲ್ಲೆಯ ಗವನಿಕೊಂಡ ಮತ್ತು ಡೋನಾ ಬಳಿ 1.1 ಕಿ.ಮೀ. ಉದ್ದದ ಆಂಪಿಬೋಲೈಟ್ ಶಿಲೆಗಳ ಮೇಲೆ ಹೊಂಡಗಳು, ಅದಿರನ್ನು ಅರಿದಿರುವ ಕುರುಹುಗಳು ಮತ್ತು ಗಣಿತ್ಯಾಜ್ಯ ಕಂಡುಬಂದಿದೆ.

ಪ್ರಾದೇಶಿಕ ಭೂರಾಸಯನಿಕ ಧಾತುಗಳ ಸಮೀಕ್ಷೆಯಿಂದ ಗಣಿ-ಕಲ್ವ-ವೆಲ್ದುರ್ತಿ ವಲಯದಲ್ಲಿ ಟನ್ನಿಗೆ 1 ಗ್ರಾಂ ಚಿನ್ನ ದೊರಕಿದೆ. ಜಾಲಿಸಿದ ಮಣ್ಣಲ್ಲಿ 1.35 ಗ್ರಾಂ ಮತ್ತು ಡ್ರಿಲ್ಲಿಂಗ್ ಮಾದರಿಗಳಲ್ಲಿ ಟನ್ನಿಗೆ 4.2 ಗ್ರಾಂ ಚಿನ್ನ ದೊರಕಿದೆ. ಚೆಟ್ಲಮಲ್ಲಪುರಂ ಮತ್ತು ಪೆರವಳಿ ಬಳಿ ಪ್ರಾಚೀನ ಗಣಿಗಾರಿಕೆ ನಡೆದಿರುವುದು ಕಂಡುಬಂದಿದೆ.

(ಚಿತ್ರ: ಗವನಕೊಂಡ ಕಂದಕ ಮತ್ತು ಚಿನ್ನದ ಅದಿರು ಅರಿದಿರುವ ಡೋನಾ, ಜೊನ್ನಗಿರಿ ಶಿಸ್ಟ್ ಪಟ್ಟಿ.)

ಮಹಾರಾಷ್ಟ್ರ: ನಾಗ್ಪುರ ಜಿಲೆಯ ಕಿಟಾರಿ ಪ್ರದೇಶದಲ್ಲಿ 1೦೦೦ಕ್ಕೂ ಹೆಚ್ಚು ಪುರಾತನ ಗಣಿಗಾರಿಕೆ ನಡೆದಿರುವ ಸ್ಥಳಗಳಲ್ಲಿ 2೦ ಮೀಟರುಗಳಿಗಿಂತ ಹೆಚ್ಚು ಆಳದ ಕಂದಕಗಳು, ಗಣಿತ್ಯಾಜ್ಯ ಗುಡ್ಡಗಳು 1 ಕಿ.ಮೀ. ಉದ್ದ ಬಿದ್ದಿರುವುದನ್ನು ನೋಡಬಹುದು. ಇಲ್ಲಿ ಸಂಗ್ರಹಿಸಿದ ಶಿಲಾಮಾದರಿಗಳಲ್ಲಿ ಟನ್ನಿಗೆ 1೦೦ ಗ್ರಾಂ ಚಿನ್ನ ಮತ್ತು ಡ್ರಿಲ್ಲಿಂಗ್ ಮಾದರಿಗಳಲ್ಲಿ ಚಿನ್ನದ ಸ್ಪೆಕ್ಸ್ಗಳು ಕಣ್ಣಿಗೆ ನೇರವಾಗಿ ಕಾಣಿಸುತ್ತಿದ್ದವು. ಅದೇ ರೀತಿ ಡೊಂಗಾರಮುಂಡ, ಕೊಸರಿ, ರಣಬೋರಿ-ಭಾಂವ್ರಿ, ಮತ್ತು ಪುಲಾರ್-ಪಾರ್ಸೋರಿ ಬಳಿ ಕ್ವಾರ್ಡ್ಜ್ ತ್ಯಾಜ್ಯ ಕಂಡುಬಂದಿದೆ.

ಪುಲಾರ್-ಕೊಸರಿ ಹತ್ತಿರಿ 1 ಚ.ಕಿ.ಮೀ. ಪ್ರದೇಶದಲ್ಲಿ 3೦೦ಕ್ಕಿಂತ ಹೆಚ್ಚು ಸ್ಥಳಗಳಲ್ಲಿ (13೦*3೦*3೦ ಮೀಟರುಗಳ ಹೊಂಡಗಳು) ಚಿನ್ನದ ಅದಿರನ್ನು ಅರಿದಿರುವ ಗುಂಡುಕಲ್ಲುಗಳು, ಸ್ಲ್ಯಾಗ್, ತ್ಯಾಜ್ಯ ಗುಡ್ಡಗಳು ಮತ್ತು ಒಂದು ಗುಹೆ ಕಂಡುಬಂದಿದೆ. ಇಲ್ಲಿ ಕೆಲವು ಚಿನ್ನದ ನಾಣ್ಯಗಳು ದೊರಕಿವೆ. ಇಲ್ಲಿನ ಮಾದರಿಗಳಲ್ಲಿ ಟನ್ನಿಗೆ 14೦ ಗ್ರಾಂವರೆಗೂ ಚಿನ್ನ ದೊರಕಿದೆ. ಭಂಡಾರ ಜಿಲ್ಲೆಯ ಇಟವಾಯಿ ಮತ್ತು ಖೈರಿ ಪ್ರದೇಶದಲ್ಲಿ ಪ್ರಾಚೀನ ಗಣಿಗಾರಿಕೆ ನಡೆದಿರುವುದು ಕಂಡುಬಂದಿದ್ದು ಇಲ್ಲಿನ ಎರಡು ಮಾದರಿ ಸಂಗ್ರಹಗಳಲ್ಲಿ ಟನ್ನಿಗೆ 4.52 ಮತ್ತು 2೦.26 ಗ್ರಾಂ ಚಿನ್ನ ದೊರಕಿದೆ.

ಭೀಮಸೇನ್ ಕಿಲ್ಲಾ ಪಹಾರ್, ನೈಹರ್ವಾನಿ ಮತ್ತು ಪಕ್ಕದಲ್ಲಿನ ಶಿಸ್ಟ್ ಪಟ್ಟಿಯಲ್ಲಿ ಹಲವು ಪ್ರಾಚೀನ ಗಣಿ ಕಾರ್ಯಗಳು ಸ್ಲ್ಯಾಗ್ ಮತ್ತು ಆಕ್ಸಿಡೀಕೃತಕೊಂಡ ಸಿರೆ ಸ್ಫಟಿಕ ಶಿಲೆಗಳು ಮತ್ತು ಗಣಿ ತ್ಯಾಜ್ಯ ಬಿದ್ದಿದ್ದು ಇಲ್ಲಿನ ಮಾದರಿಗಳಲ್ಲಿ ಟನ್ನಿಗೆ 5 ಗ್ರಾಂವರೆಗೂ ಚಿನ್ನ ದೊರಕಿದೆ. ಪ್ರಾಚೀನ ಗಣಿ ಕಾರ್ಯಗಳು ನಡೆದಿರುವ ಹಲವಾರು ಸಮಾನಾಂತರ ಸರಪಳಿಗಳು ಮುರುಪಾರ್ ಬಳಿ ಕಂಡುಬಂದಿದ್ದು ಡ್ರಿಲ್ಲಿಂಗ್ ಮಾಡಿದಾಗಿ ಹೆಚ್ಚು ಚಿನ್ನ ಇರುವುದು ಕಂಡುಬಂದಿದೆ.

ಕೋಲಾರಿ ಪ್ರದೇಶದಲ್ಲಿ ಹಲವಾರು ಪುರಾತನ ಗಣಿ ಕಾರ್ಯ ಹೊಂಡಗಳಿದ್ದು ಅತಿದೊಡ್ಡದನ್ನು ರಾಕ್ಷಸ ಗುಡ್ಡ ಎಂದು ಕರೆಯಲಾಗಿ ಇಲ್ಲಿನ ಕಲ್ಲು ಮಾದರಿಗಳಲ್ಲಿ ಟನ್ನಿಗೆ 15 ಗ್ರಾಂ ಚಿನ್ನ ದೊರಕಿದೆ. ರೆಂಗಟೂರು ಪ್ರದೇಶದಲ್ಲಿ ಹಳೆ ಗಣಿ ಕಾರ್ಯಗಳ ಎರಡು ರೇಖೀಯ ವಲಯಗಳಿದ್ದು (ಎರಡೂ 4೦೦ ಮೀಟರುಗಳ ಉದ್ದ), ಟನ್ನಿಗೆ 4.2 ಗ್ರಾಂ ಚಿನ್ನ ದೊರಕಿದೆ. ತಾಸ್-ಕೋಟಲ್ಪುರ್ ಪ್ರದೇಶದಲ್ಲಿಯೂ ಚಿನ್ನ ಇರುವುದು ಕಂಡುಬಂದಿದೆ.

ತಮಿಳುನಾಡು: ಕಿಂಗ್ 1875ರಲ್ಲಿ ಚಿನ್ನಕ್ಕಾಗಿ ಡೇವಲ್ಲಾ ಬಳಿಯ ಚುಳ್ಳೈಮುಳ್ಳೆ ಪರ್ವತದಲ್ಲಿ ಪ್ರಾಚೀನ ಚಿನ್ನದ ಗಣಿ ಕಾರ್ಯ ನಡೆದಿರುವುದಾಗಿ ವರದಿ ಮಾಡಿದ್ದರು. ಮಲಬಾರ್ ಜಿಲ್ಲೆ ಪ್ರಾಚೀನ ಕಾಲದಿಂದಲೂ ಚಿನ್ನಕ್ಕೆ ಪ್ರಸಿದ್ಧಿಯಾಗಿದೆ. ನೀಲಗಿರಿ ಜಿಲ್ಲೆಯ ಕೋಟಗಿರಿಯಲ್ಲಿ ಚಿನ್ನದ ಗಣಿಗಾರಿಕೆ ನಡೆದಿರುವುದು ದಾಖಲಾಗಿದೆ. ಕೊಯಮುತ್ತೂರು ಜಿಲ್ಲೆಯ ಹಡಬನಟ್ಟಾ ಪ್ರದೇಶದಲ್ಲಿ 25 ಅಡಿಗಳ ಆಳದವರೆಗೂ ಕಂದಕಗಳಿದ್ದು ಅಲ್ಲಿನ ಮಣ್ಣನ್ನು ಜಾಲಿಸಿದಾಗ ಚಿನ್ನದ ಅಂಶ ಕಂಡುಬಂದಿದೆ. ಕೃಷ್ಣಗಿರಿ ಜಿಲ್ಲೆಯ ಬರ್ಗೂರು ಪ್ರದೇಶದ ಬಂಗಾರಗುಂಟಾ ಮತ್ತು ಸಾಕಲುಗುಂಟಾ (ಕೆಜಿಎಫ್‌ಗೆ ಹತ್ತಿರ) ಹತ್ತಿರ ಸಂಗ್ರಹಿಸಿದ ಮಾದರಿಗಳಲ್ಲಿ ಟನ್ನಿಗೆ 9.5 ಮತ್ತು 8 ಗ್ರಾಂ ಚಿನ್ನ ದೊರಕಿದೆ. ಧರಮ್‌ಪುರಿ ಜಿಲ್ಲೆಯ ಅಡ್ಡಕೊಂಡ ವಲಯದಲ್ಲಿ ಹಳೆ ಕಂದಕಗಳಲ್ಲಿ 2.35 ಗ್ರಾಂ ಚಿನ್ನ ದೊರಕಿದೆ.

(ಚಿತ್ರ: ಡೇವಲ್ಲಾ ಗಣಿ, ತಮಿಳುನಾಡು ಮತ್ತು ಪಂದಲೂರು ಗಣಿ, ವೈನಾಡು, ಕೇರಳ (https://historicalleys.blogspot.com/).

ಕೇರಳ : ಮ್ಯಾಕ್ಲೇರನ್ 19೦5ರಲ್ಲಿ ಕೊರುಂಬಾರ ಬುಡಕಟ್ಟು ಜನರು ಕಂದಕಗಳಿಂದ ಚಿನ್ನವಿರುವ ಕ್ವಾರ್ಡ್ಜ್ ಶಿಲೆಗಳನ್ನು ತೆಗೆದು ಪುಡಿ ಮಾಡಿ ಚಿನ್ನವನ್ನು ಬೇರ್ಪಡಿಸುತ್ತಿರುವುದಾಗಿ ದಾಖಲಿಸಿದ್ದಾರೆ. ಕರುಣಾಕರನ್ 1982ರಲ್ಲಿ ನಿಲಂಬೂರ್ ಕಣಿವೆಯ ಬ್ಯಾಂಡೆಟ್ ಮೈಕೇಶಿಯಸ್ ಕ್ವಾರ್ಡ್ಜ್ನಲ್ಲಿ ಚಿನ್ನದ ಖನಿಜೀಕರಣದ ಉಪಸ್ಥಿತಿಯನ್ನು ವರದಿ ಮಾಡಿದ್ದಾರೆ. ಮಲಾಪುರಂ ಜಿಲ್ಲೆಯ ಮಂಜೇರಿ ಪ್ರದೇಶದಲ್ಲಿ ಸ್ಫಟಿಕ-ಮ್ಯಾಗ್ನೆಟೈಟ್ ಗ್ರ್ಯಾನುಲೈಟ್ ಶಿಲೆಗಳಲ್ಲಿ ಕಿರಿದಾದ ಕಂದಕಗಳು, ಸುರಂಗಗಳು, ಶ್ಯಾಫ್ಟ್ಗಳು, ಭೂಗತ ವಿಸ್ತರಣೆಗಳು ಮತ್ತು ಸ್ಲ್ಯಾಗ್‌ಗಳ ರೂಪದಲ್ಲಿ ಪ್ರಾಚೀನ ಚಿನ್ನದ ಗಣಿಗಾರಿಕೆ ವ್ಯಾಪಕವಾಗಿ ನಡೆದಿರುವುದು ದಾಖಲಾಗಿದೆ. ಅದೇ ರೀತಿ ಕಪ್ಪಿಲ್ ಮತ್ತು ಮಂಕಡ ಪ್ರದೇಶಗಳಲ್ಲಿ 25೦*1೦೦ ಮೀಟರ್ ಗಾತ್ರದ ಕಂದಕಗಳು ಕಂಡುಬಂದಿವೆ.

ಕಡನ್ನಮಣ್ಣ ಪ್ರದೇಶದ ಸ್ಫಟಿಕ ಶಿಲೆ-ಮ್ಯಾಗ್ನೆಟೈಟ್ ಗ್ರ್ಯಾನುಲೈಟ್ ಶಿಲೆಗಳ ಮೇಲೆ ಗಣಿ ತ್ಯಾಜ್ಯ ಕಂಡುಬಂದಿದೆ. ಪಾಲಕ್ಕಾಡ್ ಜಿಲ್ಲೆಯ ನಾಟುಕಲ್ ಪ್ರದೇಶದ ಗ್ರ್ಯಾನುಲೈಟ್‌ನ ಶಿಲೆಗಳಲ್ಲಿ 7೦*1೦*6 ಮೀಟರುಗಳ ಆಳದ ಕಂದಕಗಳು, ಶ್ಯಾಫ್ಟ್ಗಳು ಮತ್ತು ಇಳಿಜಾರು ಸುರಂಗಗಳು ಚಿನ್ನದ ಗಣಿಗಾರಿಕೆಯನ್ನು ತೋರಿಸುತ್ತದೆ. ಇಲ್ಲಿ ಹೆಚ್ಚು ಚಿನ್ನ ದೊರಕುತ್ತಿದ್ದ ನಿಕ್ಷೇಪಗಳನ್ನು ಗಣಿ ಮಾಡಿ ತೆಗೆಯಲಾಗಿದೆ.

ನೆಬ್ಯುಲ್ಲಾದಲ್ಲಿ ರೂಪುಗೊಂಡ ಚಿನ್ನ: ಚಿನ್ನ ನಿಜವಾಗಿಯೂ ಭೂಮಿಯಲ್ಲಿ ರೂಪುಗೊಳ್ಳಲಿಲ್ಲ. ತಳತಳನೆ ಹೊಳೆಯುವ ಈ ಹಳದಿ ಲೋಹ ವಾಸ್ತವವಾಗಿ ಬೃಹತ್ ನಕ್ಷತ್ರಗಳ ಒಳಗೆ ಸೂಪರ್ನೋವಾ ಸ್ಫೋಟಗೊಂಡಾಗ ರೂಪುಗೊಂಡಿದೆ ಎಂಬುದಾಗಿ ವಿಜ್ಞಾನಿಗಳು ಹೇಳುತ್ತಾರೆ. ಅದು ಇದುವರೆಗಿನ ವೈಜ್ಞಾನಿಕ ಕಲ್ಪನೆಗಳಿಗೆ ಹತ್ತಿರವಾದ ಕಲ್ಪನೆಯಾಗಿದೆ. ನಕ್ಷತ್ರ-ಸೂಪರ್‌ನೋವಾಗಳಲ್ಲಿ ರೂಪುಗೊಂಡ ಚಿನ್ನ ನಂತರ ಯಾವುದೋ ಒಂದು ರೂಪದಲ್ಲಿ ಭೂಮಿಗೆ ಬಂದಿತು. ಬಿಗ್ ಬ್ಯಾಂಗ್ ಸ್ಫೋಟದ ನಂತರ ಬ್ರಹ್ಮಾಂಡ ವಿಕಾಸಗೊಳ್ಳುತ್ತಲೇ ನಕ್ಷತ್ರಗಳು, ಗ್ರಹಗಳು ಮತ್ತು ಇತರ ಆಕಾಶಕಾಯಗಳು ವಿಕಾಸಗೊಂಡವು, ಜೊತೆಗೆ ಚಿನ್ನವೂ ಕೂಡ. ಚಿನ್ನದ ಜೊತೆಗೆ ಇನ್ನೂ ಅನೇಕ ಖನಿಜ/ಲೋಹಗಳು ಭೂಮಿಗೆ ಬಂದವು.

(ಚಿತ್ರ : ಕ್ವಾರ್ಟ್ಜ್ (ಬೆಣಚು) ಶಿಲೆಯಲ್ಲಿ ಚಿನ್ನ (geologypics.com, native gold in quartz vein).

ಕಾಲಾನಂತರದಲ್ಲಿ ಭೂಮಿಯ ವಿಕಾಸದೊಂದಿಗೆ ಭೂಮಿಯ ಮೇಲೆ ಅನ್ಯಕಾಯಗಳ ದಾಳಿ ಕೋಟ್ಯಂತರ ವರ್ಷಗಳು ಕಾಲ ನಡೆದು ಭೂಮಿ ಸೂರ್ಯನ ರೀತಿಯಲ್ಲಿ ಕೊತಕೊತನೆ ಕುದಿದು ತಣ್ಣಗಾಗುತ್ತಿದ್ದಂತೆ ಭೂಗರ್ಭದಿಂದ ಜ್ವಾಲಾಮುಖಿಗಳು ಚಿಮ್ಮಿ ಭೂಮಿಯ ಮೇಲೆಲ್ಲ ಕಾರಿಕೊಂಡವು. ಅದೇ ಕಾಲದಲ್ಲಿ ಚಿನ್ನದ ಅಂಶವನ್ನು ಹೊಂದಿರುವ ಕ್ವಾರ್ಡ್ಜ್ ಶಿಲೆಗಳು ಕೂಡಾ ಭೂಮಿಯ ಮೇಲೆ ಚೆಲ್ಲಿಕೊಂಡವು. ಹಾಗೆ ಸ್ವಲ್ಪಮಟ್ಟಗೆ ಕ್ವಾರ್ಡ್ಜ್ ಶಿಲೆಗಳು ಬೇರುಗಳ ರೀತಿ ಮೇಲಿನ ಭೂಪದರಗಳಲ್ಲಿ ಉಳಿದುಕೊಂಡವು. ಭೂಮಿಯ ಮೇಲೆ ನಿರಂತರವಾಗಿ ಭೂಭೌತಿಕ ಪ್ರಕ್ರಿಯೆಗಳು ನಡೆದು ದ್ವಿತೀಯ (ಸೆಕೆಂಡರಿ) ರೀತಿಯ ಚಿನ್ನದ ನಿಕ್ಷೇಪಗಳು ಸೃಷ್ಟಿಯಾದವು. ಭೂಮಿಯ ಮೇಲೆ ನಾಗರಿಕತೆಗಳು ಬೆಳೆದಂತೆ ಕಾಲಕಾಲಕ್ಕೆ ಎಲ್ಲವನ್ನೂ ಗಣಿ ಮಾಡಲಾಯಿತು.

ಚಿನ್ನದ ಧಾತುವನ್ನು ಲ್ಯಾಟಿನ್ ಭಾಷೆಯಲ್ಲಿ “ಔರಮ್” ಎಂದು ಕರೆಯಲಾಗಿ ಇದರ ಪರಮಾಣು ಸಂಖ್ಯೆ 79 ಆಗಿದ್ದು ಚಿನ್ನ ನಿಸರ್ಗದಲ್ಲಿ ನೈಸರ್ಗಿಕವಾಗಿ ದೊರಕುವ ಲೋಹವಾಗಿದೆ. ಚಿನ್ನದ ಶುದ್ಧತೆಯನ್ನು ಕ್ಯಾರೆಟ್ ಮೂಲಕ ಅಳೆಯಲಾಗುತ್ತದೆ. 24 ಕ್ಯಾರೆಟ್ಸ್ ಎಂದರೆ 1೦೦೦ಕ್ಕೆ 1೦೦೦ ಪಟ್ಟು ಶುದ್ಧ. 22 ಕ್ಯಾರೆಟ್ಸ್ ಎಂದರೆ ಸಾವಿರಕ್ಕೆ 916 ಪಟ್ಟು ಶುದ್ಧ. ಚಿನ್ನ ಶುದ್ಧ ರೂಪದಲ್ಲಿ ಪ್ರಕಾಶಮಾನವಾದ, ಸ್ವಲ್ಪ ಕೆಂಪು ಹಳದಿ, ದಟ್ಟವಾದ, ಮೃದುವಾದ ಲೋಹವಾಗಿದೆ. ಚಿನ್ನ ಮುಕ್ತವಾಗಿ, ನಗೆಟ್‌ಗಳಲ್ಲಿ ಅಥವಾ ಧಾನ್ಯಗಳಾಗಿ, ಬಂಡೆಗಳಲ್ಲಿ, ಸಿರೆಗಳಲ್ಲಿ, ಮೆಕ್ಕಲುಮಣ್ಣಿನಲ್ಲಿ ದೊರಕುತ್ತದೆ. ಚಿನ್ನವನ್ನು ಸ್ವಾಭಾವಿಕವಾಗಿ ತಾಮ್ರ ಮತ್ತು ಪಲ್ಲಾಡಿಯಮ್‌ನಂತಹ ಇತರ ಲೋಹಗಳೊಂದಿಗೆ ಮಿಶ್ರಣ ಮಾಡಬಹುದು. ಚಿನ್ನವನ್ನು ಪಂಚಲೋಹದ ವಿಗ್ರಗಳು ಮತ್ತು ಇತರೆ ವಸ್ತುಗಳನ್ನು ತಯಾರಿಸಲು ಬಳಸಲಾಗುತ್ತದೆ.

ಚಿನ್ನ ಹೆಚ್ಚಿನ ಆಮ್ಲಗಳ ಜೊತೆಗೆ ಬೆರೆಯುವುದಿಲ್ಲ. ಆದರೆ ನೈಟ್ರಿಕ್ ಆಮ್ಲ ಮತ್ತು ಹೈಡ್ರೋಕ್ಲೋರಿಕ್ ಆಮ್ಲದ ಮಿಶ್ರಣದಲ್ಲಿ ಮಾತ್ರ ಚಿನ್ನ ದ್ರವರೂಪ ಪಡೆಯುತ್ತದೆ. ಹಾಗೇ ಸೈನೈಡ್ ಕ್ಷಾರೀಯ ದ್ರಾವಣದಲ್ಲಿ ಚಿನ್ನ ಕರಗುತ್ತದೆ. ಪಾದರಸದಲ್ಲಿ ಚಿನ್ನ ಮಿಶ್ರಣವಾದರೂ ಕರಗುವುದಿಲ್ಲ, ನಂತರ ಚಿನ್ನವನ್ನು ಪಾದರಸದಿಂದ ಪ್ರತ್ಯೇಕಿಸಬಹುದು. ಚಿನ್ನ ಯಾವುದೇ ಪ್ರಕ್ರಿಯೆಯಲ್ಲೂ ತನ್ನತನ ಕಳೆದುಕೊಳ್ಳುವುದಿಲ್ಲ, ತುಕ್ಕು ಹಿಡಿಯುವುದಿಲ್ಲ. ಲಕ್ಷಾಂತರ ವರ್ಷಗಳ ಕಾಲ ಮಣ್ಣಿನಲ್ಲಿ, ಸಮುದ್ರದಲ್ಲಿ ಬಿಸಾಕಿದರೂ ಹೊಳೆಯುತ್ತಲೇ ಇರುತ್ತದೆ.

2೦2೦ರ ಒಂದು ಲೆಕ್ಕಾಚಾರದಂತೆ ಭೂಮಿಯಿಂದ ಬಗೆದು ತೆಗೆದಿರುವ ಚಿನ್ನ ಸುಮಾರು 2೦1,296 ಟನ್ನುಗಳು ಎನ್ನಲಾಗಿದೆ. ಜಗತ್ತಿನಲ್ಲಿ ಉತ್ಪಾದನೆಯಾಗುವ ವಾರ್ಷಿಕ ಚಿನ್ನದಲ್ಲಿ 5೦% ಚಿನ್ನ ಒಡವೆಗಳನ್ನು ಮಾಡಲು ಉಪಯೋಗಿಸಿದರೆ, 4೦% ಚಿನ್ನ ಹೂಡಿಕೆಗಳಲ್ಲಿ ತೊಡಗಿಸಲಾಗುತ್ತಿದೆ ಮತ್ತು 1೦% ಚಿನ್ನವನ್ನು ಉದ್ಯಮಗಳಲ್ಲಿ ಬಳಸಲಾಗುತ್ತದೆ. 2೦2೦ರಲ್ಲಿ ಜಗತ್ತಿನಲ್ಲಿ ಉತ್ಪಾದನೆಯಾದ ಒಟ್ಟು ಚಿನ್ನ 3,2೦೦ ಟನ್ನುಗಳು.

2೦19 ರವರೆಗೂ ಜಗತ್ತಿನಲ್ಲಿ ಉತ್ಪಾದನೆಯಾದ ಒಟ್ಟು ಚಿನ್ನ 19೦,೦4೦ ಟನ್ನುಗಳು. ಟನ್ನುಗಳಲ್ಲಿ ಅಮೆರಿಕ 8133, ಜರ್ಮನಿ 335೦, ಐ.ಎಮ್.ಎಫ್. 2814, ಇಟಲಿ 2452, ಫ್ರಾನ್ಸ್ 2437, ರಷ್ಯಾ 2332, ಚೀನಾ 23೦4, ಸ್ಟಜ್ರಲ್ಯಾಂಡ್ 1೦4೦ ಇಂಡಿಯಾ 9೦೦, ಜಪಾನ್ 846 ಮತ್ತು ಟರ್ಕಿ 635 ಟನ್ನುಗಳು.

ಭಾರತದಲ್ಲಿ ಕರ್ನಾಟಕದ ಹಟ್ಟಿ ಚಿನ್ನದ ಗಣಿಗಳಲ್ಲಿ ಉತ್ಪಾದನೆಯಾಗುವ ವಾರ್ಷಿಕ ಚಿನ್ನ ಸರಾಸರಿ ಒಂದೂವರೆ ಟನ್ನು (1,5೦೦ ಕೆಜಿಗಳು) ಮಾತ್ರ. ಆದರೆ ಭಾರತದಲ್ಲಿ ಖಾಸಗಿಯಾಗಿ ಜನರು ವಾರ್ಷಿಕ ಸರಾಸರಿ ಕೊಳ್ಳುವ ಚಿನ್ನ ಸುಮಾರು 8೦೦ ರಿಂದ 1೦೦೦ ಟನ್ನುಗಳು. ನಮ್ಮ ದೇಶದಲ್ಲಿ ಜನರು ಖಾಸಗಿಯಾಗಿ ಹೊಂದಿರುವ ಚಿನ್ನ ಸುಮಾರು 25೦,೦೦೦ ಟನ್ನುಗಳು? ಮತ್ತು ದೇವಾಲಯಗಳ ಒಡೆತನದಲ್ಲಿರುವ ಒಟ್ಟು ಚಿನ್ನ 4೦೦೦ ಟನ್ನುಗಳು? ಎನ್ನಲಾಗಿದೆ. ಆದರೆ ಇದು ಖಾಸಗಿ ಮತ್ತು ದೇವಾಲಯಗಳಲ್ಲಿರುವ ಚಿನ್ನದ ಲೆಕ್ಕ ನಿಖರವಾದದ್ದಲ್ಲ.

About The Author

ಡಾ. ಎಂ. ವೆಂಕಟಸ್ವಾಮಿ

ಡಾ. ವೆಂಕಟಸ್ವಾಮಿ ಇಂದಿನ ಕೆ.ಜಿ.ಎಫ್. ತಾಲ್ಲೂಕು, ಕೋಲಾರ ಜಿಲ್ಲೆಯವರು. ಪ್ರ.ದ.ಕಾಲೇಜ್‌ನಲ್ಲಿ ಬಿ.ಎಸ್ಸಿ,. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ(ಭೂವಿಜ್ಞಾನ) ಎಂ.ಎಸ್ಸಿ. ಮುಗಿಸಿದ್ದಾರೆ. ೧೯೮೫ರಲ್ಲಿ ಲಕ್ನೋದಲ್ಲಿ ಭೂವಿಜ್ಞಾನಿಯಾಗಿ(ಯು.ಪಿ.ಎಸ್.ಸಿ. ಮೂಲಕ) ಸೇರಿಕೊಂಡು ೨೦೧೫ರಲ್ಲಿ ಮಹಾರಾಷ್ಟ್ರದ ನಾಗ್ಪುರದಲ್ಲಿ ಉಪ ಮಹಾನಿರ್ದೇಶಕರಾಗಿ ನಿವೃತ್ತಿ ಹೊಂದಿದ್ದಾರೆ. "ಕೋಲಾರ ಚಿನ್ನದ ಗಣಿಗಳು" ಮಹಾಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಡಿ.ಲಿಟ್. ದೊರಕಿದೆ. ಕಳೆದ ನಾಲ್ಕೂವರೆ ದಶಕಗಳಿಂದಲೂ ಇವರು ಸಾಹಿತ್ಯಸೇವೆಯಲ್ಲಿ ತೊಡಗಿಕೊಂಡಿದ್ದು, ಈಶಾನ್ಯ ರಾಜ್ಯಗಳ ಸಾಹಿತ್ಯವನ್ನು ಕನ್ನಡಕ್ಕೆ ಮೊದಲು ತಂದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ. ಇವರ ಕೃತಿಗಳು ನಾಡಿನ ಪ್ರಮುಖ ಪ್ರಕಾಶನಗಳಲ್ಲಿ ಒಟ್ಟು ೩೭ ಕೃತಿಗಳು ಪ್ರಕಟಗೊಂಡಿವೆ. ೨೦೧೯ರಲ್ಲಿ ಬಂಗಾರಪೇಟೆ ತಾಲ್ಲೂಕಿನ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆಯನ್ನು ವಹಿಸಿದ್ದರು.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ