ನಾನು ಅಂದು ಪ್ರವಾಸಕ್ಕೆ ಹೊರಟಿದ್ದೆ. ನನಗಾಗಿ ಹುಡುಗರು ಕಾಯುತ್ತಿದ್ದರು. ಪದೇ ಪದೇ ಕಾಲ್ ಬೇರೆ ಮಾಡುತ್ತಿದ್ದರು. ಹೋಗುವ ಧಾವಂತ ಬೇರೆ. ಆಸಾಮಿ ಬಿಡಲೇ ಇಲ್ಲ. ಅವನ ಮಾತನ್ನು ನಿಜವೆಂದು ನಾನು ಅವನಿಗೆ ಮತ್ತೆ 500 ರುಪಾಯಿಗಳನ್ನು ಕೊಟ್ಟೆ. ಕೊಟ್ಟಾಕ್ಷಣ “ನಾಳೇನೇ ನಿಮ್ಮ ಖಾತೆಗೆ ಹಾಕ್ತೇನೆ” ಎಂದ. ನಾನು ನನ್ನ ಮೊಬೈಲ್ ಸಂಖ್ಯೆಯನ್ನೂ ಕೊಟ್ಟೆ. ಕೊಟ್ಟ ತಕ್ಷಣ ನಾನು ಕಾಯುತ್ತಿದ್ದ ಬಸ್ ಬಂತು. ಅವನು ಲಗುಬಗೆಯಿಂದಲೇ ನನ್ನನ್ನು “ಹೋಗಿ ಹೋಗಿ” ಎಂದು ಬಸ್ ಹತ್ತಿಸಿದ. ಮಾರನೇ ದಿನ ಅವನು ಕಾಲ್ ಮಾಡುತ್ತಾನೆಂದು ಕಾದೆ. ಮಾಡಲಿಲ್ಲ!
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ನಲವತ್ತೇಳನೆಯ ಕಂತು ನಿಮ್ಮ ಓದಿಗೆ

“ದುಡಿಮೆಯೇ ದುಡ್ಡಿನ ತಾಯಿ” “ಕೈಕೆಸರಾದರೆ ಬಾಯಿ ಮೊಸರು” ಎಂಬಿತ್ಯಾದಿ ಮಾತುಗಳು ದುಡಿಮೆಯ ಮಹತ್ವವನ್ನು ಸಾರುತ್ತವೆ. ಆದರೆ ಇಂದು ಅನೇಕರು ಮೈ ಬಗ್ಗಿಸಿ ದುಡಿಯದೇ ಬರೀ ಕಂಡವರಿಗೇ ಟೋಪಿ ಹಾಕಿ ಹಣ ಮಾಡುವ ಆಸೆ ಹೊಂದಿರುತ್ತಾರೆ. ಕೆಲವರಂತೂ ರೈಲ್ವೇ ನಿಲ್ದಾಣದಲ್ಲಿ, ಬಸ್ ನಿಲ್ದಾಣದಲ್ಲಿ ಬೇರೆ ಬೇರೆ ಕಥೆ ಹೇಳಿಕೊಂಡು ಪ್ರಯಾಣಿಕರಿಂದ ಹಣ ಬೇಡುತ್ತಿರುತ್ತಾರೆ. “ಸಾರ್, ನನ್ನ ಮಕ್ಕಳು ಆಸ್ಪತ್ರೆಯಲ್ಲಿದ್ದಾರೆ, ಚಿಕಿತ್ಸೆಗೆ ಹಣವಿಲ್ಲೆಂತಲೋ ಅಥವಾ ನನ್ನ ಪೋಷಕರಿಗೆ ಆಸ್ಪತ್ರೆಯ ಖರ್ಚಿಗೆ ವಿಪರೀತ ಹಣ ಬೇಕು ಸಾರ್, ಸಹಾಯ ಮಾಡಿ” ಎಂಬಿತ್ಯಾದಿ ಡೈಲಾಗ್ ಹೊಡೆದು ಬೇಡುತ್ತಾರೆ. ಇಂಥವರ ಮಾತು ನಂಬಿ ಕೆಲವರಿಗೆ ಸಹಾಯ ಮಾಡಿ ನಂತರ ನಿಜ ಸ್ಥಿತಿ ತಿಳಿದು ನನಗೆ ಈಗೀಗ ಇಂತಹವರ ಮೇಲೆ ನಂಬಿಕೇನೆ ಹೊರಟು ಹೋಗಿದೆ.

ಒಮ್ಮೆ ನಾನು ದಾವಣಗೆರೆ ಬಸ್ ಸ್ಟ್ಯಾಂಡಿನಲ್ಲಿ ನಿಂತಿದ್ದಾಗ ಅಲ್ಲಿಗೆ ಒಬ್ಬ ಬಂದು “ಸಾರ್ ನನ್ನ ಮಗು ಆಸ್ಪತ್ರೆಯಲ್ಲಿದೆ. ಅವನ ಚಿಕಿತ್ಸೆಗೆ ಹಣ ಬೇಕು” ಎಂದ. ನಾನು ನಂಬಲಿಲ್ಲ. ತುಂಬಾ ಪೀಡಿಸಿದ. ಆದರೂ ನಾನು ಅವನ ಮಾತಿಗೆ ಕರಗಲಿಲ್ಲ. ಅವನು “ಬೆಳಗ್ಗೆಯಿಂದ ಏನೂ ತಿಂದಿಲ್ಲ ಸರ್. ಹೊಟ್ಟೆ ತುಂಬಾ ಹಸೀತಾ ಇದೆ. ಏನಾದರೂ ಕೊಡಿಸಿ” ಎಂದು ಕೇಳಿದ. ನಾನು ಅವನ ಮಾತಿಗೆ ಕರಗಿ ಹೋಟೆಲ್ಲಿಗೆ ಕರೆದುಕೊಂಡು ಹೋಗಿ ಅವನಿಗೆ ತಿಂಡಿ ಕೊಡಿಸಿದೆ. ಅವನು ಹೋಟೆಲ್ಲಿನಿಂದ ಹೊರಗೆ ಬಂದ ತಕ್ಷಣ “ಸಾರ್ ಒಂದು ಪ್ಯಾಕು ಬೀಡಿ ಅಥವಾ ಸಿಗರೇಟು ಕೊಡಿಸಿ” ಎಂದು ಕೇಳಬೇಕಾ?!! ಆಗ ನನಗೆ, ನನ್ನ ದಡ್ಡತನಕ್ಕೆ ನಾಚಿಕೆಯಾದಂತಾಗಿ ಬಯ್ದು ಕಳಿಸಿದೆ.

ಇನ್ನೊಮ್ಮೆ ಇದೇ ರೀತಿ ಒಂದು ಅಂಗಡಿಯ ಬಳಿ ಒಬ್ಬ ಹೆಂಗಸು ಒಂದು ಮಗು ಹಿಡಿದುಕೊಂಡು ಭಿಕ್ಷೆ ಬೇಡಲು ಬಂದಳು. ಆಗ ಆ ಅಂಗಡಿಯವರು ಅವಳಿಗೆ 10 ರೂಪಾಯಿ ಕೊಟ್ಟರು. ಆಗ ನಾನು ಅಂಗಡಿಯವರಿಗೆ “ಈ ರೀತಿ ಕೊಡಬಾರದಿತ್ತು. ಹಾಗೇ ಕೊಡುವುದಿದ್ದರೆ ಅವರಿಂದ ಏನಾದರೂ ಸ್ವಚ್ಛತೆಯ ಕೆಲಸ ಮಾಡಿಸಿಕೊಂಡು ಕೊಡಬಹುದಿತ್ತಲ್ಲವ?” ಅಂದೆ. ಅದಕ್ಕವರು “ಸಾರ್, ಆ ಹೆಂಗಸು ಅಂಗಡಿಯ ಮುಂಭಾಗದ ಕಸ ಗುಡಿಸಿದರೆ 50 ರೂ ಕೊಡುತ್ತೇನೆ. ಆ ಕೆಲಸ ಮಾಡಿಸಿ ನೋಡೋಣ” ಎಂದು ಚಾಲೆಂಜ್ ಹಾಕಿದರು. ನಾನು ಹೋಗುತ್ತಿದ್ದ ಆ ಹೆಂಗಸನ್ನು ಕರೆದು “ಅವರು 50 ರೂಪಾಯಿ ಕೊಡುತ್ತಾರಂತೆ. ಕಸ ಗುಡಿಸುತ್ತೀರಾ” ಎಂದು ಕೇಳಿದೆ. ಅದಕ್ಕೆ ಭಿಕ್ಷೆ ಬೇಡುತ್ತಿದ್ದ ಆ ಹೆಂಗಸು “ನನಗೇನು ಕಾಟ ಆ ಅಂಗಡಿಯ ಕಸ ಗುಡಿಸಲು ಎಂದು ಹೇಳಬೇಕಾ??” ಎಂದರು. ಆಗ ಅಂಗಡಿಯವರು ತಕ್ಷಣ ನನ್ನ ನೋಡಿ ನಕ್ಕರು.

ನಾನು ತುಸು ಹೆಚ್ಚೇ ಆಸ್ತಿಕ. ಒಮ್ಮೆ ನನ್ನ ಮನೆಗೆ ಕಾವಿಧಾರಿಯಾದ ಒಬ್ಬ ವ್ಯಕ್ತಿ ನನ್ನ ಬಳಿ ಬಂದು “ದಾನ ಮಾಡಿರಿ. ಅನಾಥ ಮಕ್ಕಳನ್ನು ನೋಡಿಕೊಳ್ತಾ ಇದೀನಿ” ಅಂದಾಗ ನನ್ನ ಮನಸ್ಸು ಕರಗಿ ಅವರನ್ನು ಮನೆಯೊಳಗೆ ಕರೆದು 500 ರೂಪಾಯಿ ಕೊಟ್ಟೆ. ಸಂಜೆ ನಮ್ಮ ಮನೆಯ ಓನರ್ ರವರಿಂದ ತಿಳಿದದ್ದು, ಅವರು ಮೋಸ ಮಾಡಿದ ವ್ಯಕ್ತಿಯೆಂದು!!

ಕೆಲವರು ನಮ್ಮ ಕಣ್ಣ ಮುಂದೆ ಬಂದು ನಮ್ಮನ್ನು ಯಾಮಾರಿಸಿದರೆ ಇನ್ನೂ ಹಲವರು ನಮ್ಮ ಕಣ್ಣ ಮುಂದೆ ಬರದೇ ಆನ್ ಲೈನ್ ಮೂಲಕ ಯಾಮಾರಿಸುತ್ತಾರೆ! ಕಣ್ಣ ಮುಂದೆ ಬರುವವರದ್ದು ಚಿಲ್ಲರೆ ಕಾಸಾದ್ರೆ, ಕಣ್ಣ ಮುಂದೆ ಬಾರದವರು ಇಡೀ ಗಂಟಿಗೆ ಕೈ ಹಾಕ್ತಾರೆ!! ಮೋಸ ಹೋಗೋರು ಪ್ರಪಂಚದಲ್ಲಿ ಇರುವ ತನಕ ಮೋಸ ಮಾಡೋರು ಇದ್ದೇ ಇರುತ್ತಾರೆ. ಇಷ್ಟೆಲ್ಲಾ ಅನುಭವ ಆದರೂ ನಾನು ಮತ್ತೊಮ್ಮೆ ಯಾಮಾರಿದೆ!! ಒಮ್ಮೆ ಏನಾಯ್ತು ಅಂದ್ರೆ ನಾನು ಶಿವಮೊಗ್ಗದಿಂದ ಸಾಗರ ಹೋಗಲು ಬಸ್ಸಿಗಾಗಿ ಕಾಯುತ್ತಿದ್ದೆ. ಆಗ ನನ್ನೆದುರಿಗೆ ಒಬ್ಬ ಇನ್ ಶರ್ಟಿನಲ್ಲಿ ಠಾಕುಠೀಕಾಗಿ ಡ್ರೆಸ್ ಮಾಡಿದ್ದ, ನೋಡಲು ತುಂಬಾ ಸಿರಿವಂತನಂತೆ ಕಾಣುತ್ತಿದ್ದ ಒಬ್ಬ ಆಸಾಮಿ ಬಂದ. ನನ್ನನ್ನು ನೋಡಿ ಪರಿಚಿತನ ರೀತಿಯಲ್ಲಿ ನಗು ಬೀರುತ್ತಾ ಹತ್ತಿರ ಬಂದ. ಆಮೇಲೆ “ಸಾರ್ ನಾನು ಬಿಜಾಪುರದಿಂದ ಬಂದಿದೀನಿ. ನಾನು ಸುಮಾರು ಬಸ್‌ಗಳ ಒಡೆಯ. ನಾವು ನಮ್ಮ ಬಸ್‌ನಲ್ಲಿ ಧರ್ಮಸ್ಥಳ ಹೋಗಿದ್ವಿ. ನಾನು ನಿನ್ನೆ ನಮ್ಮ ಬಸ್ ಡ್ರೈವರ್‌ಗೆ ಗಾಡಿಯನ್ನು ವೇಗವಾಗಿ ಓಡಿಸಿದ್ದಕ್ಕಾಗಿ ಹೊಡೆದೆ. ಅದಕ್ಕೆ ಅವನು ನನ್ನ ಮೇಲೆ ಸಿಟ್ಟಾಗಿ ನನ್ನನ್ನೇ ಬಿಟ್ಟು ಹೋಗಿದ್ದಾನೆ. ನನಗೆ ಈಗ ಬಿಜಾಪುರಕ್ಕೂ ಹೋಗಲು ಹಣವಿಲ್ಲ. ದಯಮಾಡಿ ಸಹಾಯ ಮಾಡಿ”ಎಂದು ಕೇಳಿಕೊಂಡ. ಮೊದಲೇ ಇಂತವ್ರನ್ನ ನೋಡಿ ನೋಡಿ ನಂಬಿಕೆ ಕಳೆದುಕೊಂಡಿದ್ದ ನಾನು, ಇವನ ಮಾತಿಗೆ ಸೊಪ್ಪು ಹಾಕಲಿಲ್ಲ. ಆನಂತರ ಅವನು ಧರ್ಮಸ್ಥಳಕ್ಕೆ ಸಂಬಂಧಿಸಿದ ಟಿಕೇಟ್ಟುಗಳನ್ನು ತೋರಿಸಿದ. ಮೊದಲೇ ಆ ದೇವರ ಬಗ್ಗೆ ವಿಪರೀತ ನಂಬಿಕೆ ಇದ್ದ ನಾನು “ಆಯ್ತು” ಎಂದು ಅವನ ಮಾತು ನಂಬಿ 100 ರುಪಾಯಿಗಳನ್ನು ಅವನಿಗೆ ಕೊಟ್ಟೆ. ಆದರೆ ಅವನು ಇವನ್ಯಾವನೋ ಬಕ್ರ ಸಿಕ್ಕ ಅಂತಾ ಭಾವಿಸಿರಬೇಕು.” ಸಾರ್, ದಯವಿಟ್ಟು ಹೀಗೆ ಮಾಡ್ಬೇಡಿ ನಾನು ಯಾವತ್ತೂ ಹೀಗೆ ಬೇಡಿಲ್ಲ, ಪ್ಲೀಸ್! ಸರ್ ನಂಗೆ ಬಿಜಾಪುರಕ್ಕೆ ಹೋಗೋಕೆ ಹಣ ಕೊಡಿ” ಎಂದು ಕೇಳಿದ. ಆಗ ನಾನು “ನಿಮ್ಮ ಮೊಬೈಲ್ ನಂಬರ್ ಕೊಡಿ” ಎಂದು ಕೇಳಿದೆ. ಆಗ ಅವನು ಒಂದು ಹಳೆ ಪಾಕೆಟ್ ಡೈರಿಯಿಂದ ಒಂದು ನಂಬರ್ ಕೊಟ್ಟ. ನಾನು ಆ ನಂಬರ್‌ಗೆ ಡಯಲ್ ಮಾಡಲು, ಅದು ಸ್ಡಿಚ್ಡ್ ಆಫ್ ಅಂತಾ ಬಂತು. ಆಗ ಅವನು, “ಇಲ್ಲಾ ಸರ್ ಅದೂ ಸಹ ಬಸ್ಸಿನಲ್ಲಿದೆ. ಡ್ರೈವರು ಸ್ವಿಚ್ಚ್ ಆಫ್ ಮಾಡಿದ್ದಾನೆ” ಎಂದ. ಅಲ್ಲದೇ ತನ್ನ ಕೈ ತೋರಿಸುತ್ತಾ “ಈ ಕೈ ಇನ್ನೊಬ್ಬರಿಗೆ ಕೊಟ್ಟ ಕೈ, ಯಾವತ್ತೂ ಬೇಡಿದ ಕೈಯಲ್ಲ. ದಯಮಾಡಿ ಸಹಾಯ ಮಾಡಿ. ಇನ್ನೂ 500 ರುಪಾಯಿ ಕೊಟ್ಟು ಬಿಜಾಪುರಕ್ಕೆ ತಲುಪುವಂತೆ ಮಾಡಿ. ನಾಳೆ ನಿಮಗೆ ಅಕೌಂಟಿಗೆ ಜಮಾ ಮಾಡುತ್ತೇನೆ ಪ್ಲೀಸ್” ಎಂದ. ನಾನು ಅಂದು ಪ್ರವಾಸಕ್ಕೆ ಹೊರಟಿದ್ದೆ. ನನಗಾಗಿ ಹುಡುಗರು ಕಾಯುತ್ತಿದ್ದರು. ಪದೇ ಪದೇ ಕಾಲ್ ಬೇರೆ ಮಾಡುತ್ತಿದ್ದರು. ಹೋಗುವ ಧಾವಂತ ಬೇರೆ. ಆಸಾಮಿ ಬಿಡಲೇ ಇಲ್ಲ. ಅವನ ಮಾತನ್ನು ನಿಜವೆಂದು ನಾನು ಅವನಿಗೆ ಮತ್ತೆ 500 ರುಪಾಯಿಗಳನ್ನು ಕೊಟ್ಟೆ. ಕೊಟ್ಟಾಕ್ಷಣ “ನಾಳೇನೇ ನಿಮ್ಮ ಖಾತೆಗೆ ಹಾಕ್ತೇನೆ” ಎಂದ. ನಾನು ನನ್ನ ಮೊಬೈಲ್ ಸಂಖ್ಯೆಯನ್ನೂ ಕೊಟ್ಟೆ. ಕೊಟ್ಟ ತಕ್ಷಣ ನಾನು ಕಾಯುತ್ತಿದ್ದ ಬಸ್ ಬಂತು. ಅವನು ಲಗುಬಗೆಯಿಂದಲೇ ನನ್ನನ್ನು “ಹೋಗಿ ಹೋಗಿ” ಎಂದು ಬಸ್ ಹತ್ತಿಸಿದ. ಮಾರನೇ ದಿನ ಅವನು ಕಾಲ್ ಮಾಡುತ್ತಾನೆಂದು ಕಾದೆ. ಮಾಡಲಿಲ್ಲ! ನಾನೇ ಕಾಲ್ ಮಾಡಿ ನನ್ನ ಬ್ಯಾಂಕ್ ಖಾತೆಯನ್ನು ಹೇಳಿದರಾಯ್ತು ಎಂದು ಕಾಲ್ ಮಾಡಿದೆ. ಆದರೆ ಆ ಮೊಬೈಲ್ ಸ್ವಿಚ್ಡ್ ಆಫ್ ಅಂತಾ ಬಂತು. ಹೀಗೆ ಮಾರನೇ ದಿನವೂ ಕಾದೆ. ಆದರೆ ಇದೇ ಮರುಕಳುಸಿತು. ಅವನ ಕಡೆಯಿಂದಲೂ ಯಾವುದೇ ಕರೆ ಬರಲಿಲ್ಲ. ನನಗೆ ಆಗ ತಿಳೀತು. ಇವನೂ ಸಹ ನಾನು ಲೇಖನದ ಮೊದಲು ತಿಳಿಸಿದಂತಹ ವ್ಯಕ್ತಿಗಳ ಸಾಲಿಗೆ ಸೇರುವ ವ್ಯಕ್ತಿ ಎಂದು. ಆದರೆ ಇವನ ಮಾರ್ಗ ಬೇರೆಯಾಗಿತ್ತು. ಅಂತೂ ಇಂತೂ ನನ್ನ ಯಾಮಾರಿಸಿದ್ದ!! ಅದಕ್ಕೇ ಹೇಳೋದು “ಉದರ ನಿಮಿತ್ಥಂ ಬಹುಕೃತ ವೇಷಂ” ಅಂತಾ!! ಆದರೆ ಇವನು ಹಾಕಿದ್ದು ಮಾತ್ರ ಬಹುಕೃತಕ ವೇಷ!!!!

ಕೆಲವರು ಬ್ಯಾಂಕಿನವರಂತಲೋ, ಕೆಲವರು ನಮ್ಮ ಫೇಸ್ ಬುಕ್ ಐಡಿ ಕ್ರಿಯೇಟ್ ಮಾಡಿಕೊಂಡು ಹಣ ನಮ್ಮ ಹೆಸರಿನಲ್ಲಿ ಹಣ ಬೇಡುತ್ತಿದ್ದಾರೆ. ಒಮ್ಮೆ ಹೀಗೆ ಆಯ್ತು; ನನ್ನ ಫೇಸ್ ಬುಕ್ ಮೆಸೆಂಜರ್ ನಿಂದ ನನ್ನ ಸ್ಟೂಡೆಂಟ್‌ಗೆ 3000 ರೂಪಾಯಿ ಹಣವನ್ನು ಒಬ್ಬ ಕೇಳಿದ್ದಾನೆ. ಅವನು ನಾನು ಇಷ್ಟು ಕಮ್ಮಿ ಮೊತ್ತವನ್ನು ನಮ್ಮ ಸರ್ ಯಾಕೆ ಕೇಳ್ತಾರೆ ಅಂತಾ ಅವನು ನನಗೆ ಕರೆ ಮಾಡಿದ. ತಕ್ಷಣ ನಾನು ‘ನಾನವನಲ್ಲ’ ಎಂದೆ. ಅವನು ಹೇಳಿದ ಮಾತು “ಸರ್, ಒಂದೊಮ್ಮೆ ಜಾಸ್ತಿ ಮೊತ್ತ ಕೇಳಿದ್ರೆ ಹಣ ಹಾಕಿ ನಂತರ ನಿಮಗೆ ಕರೆ ಮಾಡುತ್ತಿದ್ದೆ. ನಮ್ ಸರ್ ಯಾಕೆ ಇಷ್ಟು ಕಮ್ಮಿ ದುಡ್ಡು ಕೇಳ್ತಾರೆ ಎಂಬ ಅನುಮಾನ ಬಂತು. ಅದಕ್ಕೆ‌ ಕಾಲ್ ಮಾಡಿದೆ ಸಾರ್” ಎಂದ!! ಅವನ ಗುರುಭಕ್ತಿಗೆ ಮೆಚ್ಚಿ “ನಾನು ದುಡ್ಡು ಕೇಳೋದಿಲ್ಲ. ಒಂದೊಮ್ಮೆ ಈ ರೀತಿಯ ಮೆಸೇಜ್ ಬಂದರೆ ಮಾಹಿತಿ ತಿಳಿದುಕೊಂಡು ಹಾಕು” ಎಂದೆ. ಅದಕ್ಕವನು ‘ಆಗಲಿ ಸಾರ್’ ಎಂದ.

ಇನ್ನೂ ಕೆಲವರು ಇರ್ತಾರೆ. ಗೆಳೆತನದ ಸಲುಗೆಯಲ್ಲಿ ಹಣ ಪಡೆದುಕೊಂಡು ಬಿಡ್ತಾರೆ. ಕೇಳಿದ್ರೆ ವಾಪಾಸ್ಸು ಕೋಡೋ ಮಾತೇ ಬರೋಲ್ಲ. ಅಷ್ಟೇ ಅಲ್ಲ ಹಣದ ಜೊತೆ ಗೆಳೆತನವನ್ನೂ ಕಡಿದುಕೊಂಡು ಬಿಡ್ತಾರೆ.!! ಕೆಲವರು ಕೊಟ್ಟ ದುಡ್ಡು ವಾಪಾಸ್ ಕೇಳಿದ್ರೆ “ನಾನೇನು ಊರು ಬಿಟ್ಟು ಹೋಗೋಲ್ಲ. ಹೊಲ ಮನೆ ಇದೆ. ದುಡ್ಡು ಮುಖ್ಯ ಅಲ್ಲ. ಸತ್ತಾಗೇನು ಹೊತ್ಕೊಂಡು ಹೋಗ್ತೀವಾ? ದುಡ್ಡಿಗಿಂತ ಮನುಷ್ಯರು ಮುಖ್ಯ. ದುಡ್ಡೇನು ಯಾರು ಬೇಕಾದ್ರೂ ದುಡೀಬೋದು” ಎಂಬ ಒಣ ವೇದಾಂತದ ಮಾತು ಹೇಳ್ತಾರೆ ಹೊರತು ಕೊಟ್ಟ ದುಡ್ಡು ವಾಪಾಸ್ ಕೊಡೋಲ್ಲ!! ಇಂತವರು‌ Money is not everything, but it is necessary for everything ಎಂಬ ಮಾತು ಮರೆತಿರುತ್ತಾರೆ!!

“ತಾಮ್ರದ ಬಿಲ್ಲೆ ತಾಯಿ ಮಗನನ್ನು ಕೆಡಿಸಿತ್ತಂತೆ” “ಹಣವಿಲ್ಲದವರು ಹೆಣಕ್ಕಿಂತ ಕಡೆ” “ಹಣವಿದ್ದರೆ ಊರೆಲ್ಲಾ ನೆಂಟರು”ಎಂಬ ಗಾದೆ ಮಾತುಗಳು ಹಣದ ಪ್ರಾಮುಖ್ಯತೆಯನ್ನು ತಿಳಿಸುತ್ತದೆ. ಆದ್ದರಿಂದ ನಾವು ಮಕ್ಕಳಿಗೆ ಹಣದ ಮಹತ್ವವನ್ನು ಮೊದಲಿನಿಂದಲೂ ತಿಳಿಸಬೇಕು. ಹಣ ಗಳಿಸುವುದು ಎಷ್ಟು ಮುಖ್ಯವೋ ಉಳಿಸುವುದೂ ಸಹ ಅಷ್ಟೇ ಮುಖ್ಯ . If you save money, money will save us ಎಂಬಂತೆ ಉಳಿತಾಯದ ಮೌಲ್ಯವನ್ನು ಕಲಿಸಬೇಕು. ಆರ್ಥಿಕ ಸಾಕ್ಷರತೆ ನಮ್ಮಲ್ಲರಿಗೂ ಮುಖ್ಯ. ಸೈಬರ್ ಕ್ರೈಮ್ ಹೆಚ್ಚುತ್ತಿರುವ ಇಂದಿನ ಜಮಾನದಲ್ಲಿ ಇದರ ಬಗ್ಗೆಯೂ ಜಾಗೃತಿ ವಹಿಸುವುದು ಸೂಕ್ತ.