Advertisement
ಬಿಸಿಲಿನ ತುಣುಕುಗಳಿಗೆ ಒಂದ್ ಪತ್ರ ಬರೆದು…..: ದೇವರಾಜ್‌ ಹುಣಸಿಕಟ್ಟಿ ಬರಹ

ಬಿಸಿಲಿನ ತುಣುಕುಗಳಿಗೆ ಒಂದ್ ಪತ್ರ ಬರೆದು…..: ದೇವರಾಜ್‌ ಹುಣಸಿಕಟ್ಟಿ ಬರಹ

ಈ ಲೋಕದ ಹಂಗುಗಳು, ದರ್ದುಗಳು ಇರ್ಶೆಯನ್ನೇ ಹಾಸಿ ಹೊದ್ದು ಮಲಗಿವೆ. ಪ್ರೇಮಿಗಳ ಲೆಕ್ಕದಲ್ಲಂತು ಥೇಟ್ ರಾಕ್ಷಸಿ ಸೊರೂಪ… ಇಡೀ ಇತಿಹಾಸದುದ್ದಕ್ಕೂ ಇದು ದಿಟವಾಗಿದೆ… ಇಲ್ಲಾ ಅಂದ್ರೆ ರೋಮಿಯೋ ಜೂಲಿಯಟ್, ಮಮತಾಜ್ ಷಹ ಜಹಾನ್ ಇನ್ನೂ ಅದೆಷ್ಟೋ ಕಥನಗಳು ರೂಪ ಪಡೆದಿರುತ್ತಿರಲಿಲ್ಲ
ಅಮೃತಾ ಪ್ರೀತಮ್ ಒಂದಷ್ಟು ಕವಿತೆಗಳನ್ನು “ಬಿಸಿಲಿನ ಅದೆಷ್ಟೋ ತುಣುಕುಗಳು” ಎಂಬ ಸಂಕಲನದಡಿ ರಶ್ಮಿ ಎಸ್ ಕನ್ನಡಕ್ಕೆ ಅನುವಾದಿಸಿದ್ದು, ಈ ಸಂಕಲನದ ಕುರಿತು ದೇವರಾಜ್ ಹುಣಸಿಕಟ್ಟಿ ಬರಹ

ರೆಂಬೆಗಳ ಮನೆಗೆ
ಹೂ ಬಂಧುಗಳಾಗಿ ಬಂದ್ವು ಅಂತಾ ಕೇಳಿದೆ…

ಆಯಸ್ಸಿನ ಹಾಳಿ ಮ್ಯಾಲೆ
ನಿನ್ನ ಪ್ರೀತಿಯ ಹೆಬ್ಬರಳೊತ್ತಿ
ಈ ಹಿಸಾಬು ಚುಕ್ತಾ ಮಾಡೋರ್ ಯಾರು?
ಗಾಳಿಯ ನಿಟ್ಟುಸಿರು, ಕೇಳಿದೋರು ಯಾರು?

ಕವಿತೆ ಔತಣದ ಸಾಲುಗಳು ಇವು.

ಅನುವಾದಕ್ಕೆ ಏನು ಬೇಕು? ಯಾರೋ ಕೇಳಿದ್ರು… ಹೃದಯದ ತಂತಿ ಹಿಡಿದು ನುಡಿಸೋ ಬೆರಳು ಬೇಕು ಅಂದೇ ಮತ್ತೆ ಈ ಸಂಕಲನ ಅವರ ಕೈಗೆ ಇಟ್ಟೆ.

ಹಿಂಗ್ ಅಮೃತಾ ಪ್ರೀತಮ್ ಅವರ ಕಾವ್ಯದ ಹೃದಯ ಮಿಡಿತ ಹಿಡಿದು, “ಬಿಸಿಲಿನ ಅದೆಷ್ಟೋ ತುಣುಕುಗಳು” ಎಂಬ ಹೆಸರಿನಲ್ಲಿ ಒಂದಷ್ಟು ಕವಿತೆಗಳನ್ನು ಅನುವಾದ ಮಾಡಿರೋ ಅಪ್ಪಟ ಕಾವ್ಯ ಪ್ರೇಮ ಜೀವಿ ರಶ್ಮಿ ಎಸ್ ಅವರು.

ಕಾವ್ಯದ ಉಸಿರು ಹಿಡಿದ ನಡೆದು ಅನುವಾದ ಮಾಡೋದ ಇದೆಯಲ್ಲ ಅದು ಸ್ವತಃ ಕವಿಯತ್ರಿಯ ಆತ್ಮ ಪ್ರವೇಶಿಸುವ ಕೆಲಸ. ಇದನ್ನ ನಾನು ಪೂರ್ಣ ಪ್ರಜ್ಞೆಯಿಂದ ಹೇಳತಾ ಇದೀನಿ, ಇದು ಅನುವಾದ ಅಲ್ಲ; ಅದು ಸ್ವತಃ ಅಮೃತ ಆಗೋ ಕೆಲಸ ಅದನ್ನ ರಶ್ಮಿಯವರು ಮಾಡಿದ್ದಾರೆ.

(ಅಮೃತಾ ಪ್ರೀತಮ್)

ದಿನಗೂಲಿ ಕವಿಯ ಸಾಲುಗಳ ಒಮ್ಮೆ ನೋಡಿ..

ಪ್ರತಿಭಟ್ಟಿಯೊಳಗೂ ಬೆಂಕಿಯ
ಕೆನ್ನಾಲಿಗೆ ಜೊತೆಗೆ ನನ್ನ ಪ್ರೀತಿ ಮಜದುರೀ ಮಾಡ್ತದ
ನೀ ಭೇಟಿಯಾಗೂದು ಹೆಂಗಂದ್ರ ಅಂಗೈಯೊಳಗೆ ದಿನಗೂಲಿ ಇಟ್ಟಂಗ!

ಈ ಸಂಕಲನ ಓದುವಾಗ ಸದಾ ಅನಿಸ್ತದ ಇದು ಕಾಲದ ಆಟಕ್ಕೆ ಸುಟ್ಟುಕೊಂಡವರ ಹಾಡು ಅನಿಸತದ. ಸುಳ್ಳ ಅಂದ್ರ ಈ ಸಂಕಲನದ “ಸಿಗರೇಟು “ಕವಿತೆ ಒಮ್ಮೆ ನೋಡಿ..

ಇದು ಬೆಂಕಿ ಮಾತದ
ನೀನೆ ಈ ಮಾತು ಕೇಳಿಸಿ
ಇದು ಜೀವನದ ಅದೇ ಸಿಗರೇಟದ..
ನೀನೆ ಒಂದಿವ್ಸ ಕಿಡಿ ಇಟ್ಟಿದ್ದಿ
ಕಿಡಿಯಂತೂ ನೀ ಕೊಟ್ಟಿ
ಈ ಹೃದಯ ಸದಾ ಸುಡಾಕತ್ತಿತ್ತು..
ಕಾಲ ಕಲಂ ಹಿಡಕೊಂಡ
ಯಾವುದೋ ಲೆಕ್ಕ ಬರೀಲಿಕತ್ತಿತ್ತು….

ಹಿಂಗ್ ಬರೆದು ಪ್ರೇಮದ ಆತ್ಮಕ್ಕೆ ಕನ್ನಡಿ ಹಿಡಿದ ಅಮೃತಾ ಸದಾ ವಿರಹಿ.

ಅದರ ಉರಿಗೆ ಹೊಸ ವರ್ಷದ ಆಗಮನ ಕೂಡ ಹಿಂಗ್ ಕಾಣುತ್ತೆ… ಸುಮ್ನೆ ಓದಿ ಒಮ್ಮೆ

ಈ ವಿಚಾರಗಳ ಹಣಗಿಯಿಂದ
ಹಲ್ಲೊಂದು ಮುರಿದಂಗ್..
ನಿದ್ದೆಯೂ ತನ್ನ ಕೈಯೊಳಗ
ಸುಡು ಸುಡು ಕನಸಿನ ಕೆಂಡ ಹಿಡಿದಂಗ್..
ಸಮಯದ ತುಟಿ ಅಂಚಿನಿಂದ
ನಿಡಿದಾದ ಉಸಿರೊಂದು ಹೊರ ಬಂದಂಗ…
ಇಷ್ಕನ ನಾಲಿಗಿ ಮ್ಯಾಲೆ
ಉರಿ ಬೊಕ್ಕಿಯೊಂದು ಇದ್ದಂಗ….
ಹಿಂಗ್ ಥೇಟ್ ಹಿಂಗ್ ಬಂತು ಹೊಸ ವರ್ಷ….

ತಮ್ಮ ಅಗಾಧ ಜೀವನಾನುಭವವ ರೂಪಕ ಭಾಷೆಯಲ್ಲಿ, ಅಷ್ಟೇ ಸಹಜತೆಯಲ್ಲಿ ಬಿಕ್ಕಿದ್ದು ಕಾವ್ಯದ ಅದೃಷ್ಟ ಅಂತಾನೇ ನನ್ನ ಅನಿಸಿಕೆ. ಸಾಹಿರ್ ವಿರಹವೇ ಕಾವ್ಯದ ಹರಿವಾಗಿ ಹರಿದಿದೆ. ಅವಳ “ನಿನಗ ಭೇಟಿಯಾಗ್ತೀನಿ” ನೋಡಿ…

ನಿನಗೆ ನಾ ತಿರಿಗಿ ಭೇಟಿಯಾಗ್ತಿನಿ …
ಹೆಂಗ್, ಎಲ್ಲಿ ಗೊತ್ತಿಲ್ಲ
ಬಹುಶಃ ನಿನ್ನ ಕಲ್ಪನೆಯ ಒಂದು ಎಳಿಯಾಗಿ..
ನಿನ್ನ ಕ್ಯಾನ್ವಾಸಿನ ಮ್ಯಾಲಿಳಿತೀನಿ… “

ಹಿಂಗ್ ಪ್ರೇಮದ ಪರಾಕಾಷ್ಟೇಯ ತಣ್ಣನೆಯ ನಡುಕ ಹುಟ್ಟಿಸೋ ಹಂಗ್ ಬರೆದು ಹಗುರಾಗಿದ್ದಾರೆ ಅಮೃತ ಅನ್ನಿಸುತ್ತೆ. ಇಮ್ರೋಜ್ ಜೊತೆಗೆ ಇದ್ದಾಗಲೂ ಕಾಡೋ ಸಾಹಿರ್ ಕವಿತೆಗಳಲ್ಲಿ ಕೂಡ ಹಾಸು ಹೊಕ್ಕಾಗಿ ಹರದಾನ ಅನ್ನಿಸುತ್ತೆ. “ಖಾಲಿ ಜಾಗ” ಕವಿತೆಯ ಸಾಲುಗಳು…

ಎರಡೇ ಎರಡು ರಾಜ ವಾಡೆಗಳಿದ್ವು..
ಒಂದು ನನ್ನನ್ನ ಮತ್ತ ಅವನನ್ನ
ಬೇಡಖಲ್ ಮಾಡಿತು..
ಇನ್ನೊಂದು ನಮ್ಮನ್ನ ಹೊರ ನೂಕಿತು..
ಇನ್ನೊಂದನ್ನ ನಾವಿಬ್ರು ತ್ಯಾಗ ಮಾಡಿದ್ವಿ…..

(ರಶ್ಮಿ ಎಸ್)

ಈ ಲೋಕದ ಹಂಗುಗಳು, ದರ್ದುಗಳು ಇರ್ಶೆಯನ್ನೇ ಹಾಸಿ ಹೊದ್ದು ಮಲಗಿವೆ. ಪ್ರೇಮಿಗಳ ಲೆಕ್ಕದಲ್ಲಂತು ಥೇಟ್ ರಾಕ್ಷಸಿ ಸೊರೂಪ… ಇಡೀ ಇತಿಹಾಸದುದ್ದಕ್ಕೂ ಇದು ದಿಟವಾಗಿದೆ… ಇಲ್ಲಾ ಅಂದ್ರೆ ರೋಮಿಯೋ ಜೂಲಿಯಟ್, ಮಮತಾಜ್ ಷಹ ಜಹಾನ್ ಇನ್ನೂ ಅದೆಷ್ಟೋ ಕಥನಗಳು ರೂಪ ಪಡೆದಿರುತ್ತಿರಲಿಲ್ಲ… “ತುತ್ತು..” ಕವಿತೆಯ ಸಾಲುಗಳ ಒಮ್ಮೆ ನೋಡಿ….

ಜೀವನ ಬಾಳಾ ಇವೊತ್ತು ರಾತ್ರಿ
ಕನಸಿನದೊಂದು ಮುದ್ದೆ ಮುರಿದ…
ಆದ್ರೆ ಈ ಸುದ್ದಿ ಅದೆಂಗ್
ಆಗಸದ ಕಿವಿಗೆ ಹೋಗಿ ತಲುಪಿತು….

ಕೂರಂಬಿನ ನಾಲಿಗಗಳು
ಈ ಸುದ್ದಿ ಕೇಳಿದ್ವು..

ಈ ತುತ್ತಿನ ಮೈ ಬೆತ್ತಲು..
ಒಂದೇ ಗುಕ್ಕಿನಾಗ ತುತ್ತು ಕಸಿದರು….
ಕಪ್ಪಿರುಳು ರಣ ಹದ್ದು ಗಳಂತೆ ಹಾರಾಡ ತೊಡಗಿದವು….

ಹೀಗೆ ಕವಿತೆಗಳು ಓದುಗನಿಗೆ ನಿಡು ಗಣ್ಣು ನೀಡುತ್ತವೆ. ಲೋಕ ಗ್ರಹಿಕೆಗೆ ಕಣ್ಣು ನೀಡುತ್ತವೆ. ಒಮ್ಮೊಮ್ಮೆ ಅಚ್ಚರಿ ನೋಟ ನೀಡಿ ಓದುಗನನ್ನು ದಿಗ್ಬ್ರಮೆಗೆ ಒಳ ಪಡಿಸುತ್ತೆ. ಕವಿತೆ, ಕವಿ ಎರಡೂ ಮಾಡಬೇಕಾದ ಕೆಲಸ ಅದು.

ಉದಾಹರಣೆಗೆ…”ಕನ್ಯೆ “ಯ ನೋಡಿ..

ವಧುವಾಗಿ ನಿನ್ನ ಕೋಣೆಗೆ
ಕಾಲಿರಿಸಿದಾಗ ನಾನೊಬ್ಬಳಾಗಿರಲಿಲ್ಲ..
ನನ್ನಲ್ಲಿಬ್ಬರಿದ್ದರು…
ಒಂದು ನವ ವಿವಾಹಿತ, ಇನ್ನೊಬ್ಬಳು..
ಕನ್ಯೆ.. ನಿನ್ನ ಭೋಗಕ್ಕಾಗಿ..
ನನ್ನೊಳಗಿನ ಕನ್ಯೆಯ ಹತ್ಯೆ ಮಾಡಬೇಕಿತ್ತು..
ಮತ್ತ.. ನಾನು ಆ ಹತ್ಯೆ ಮಾಡಿದ್ದೆ…

ಒಂದು ವಿರಹ, ಒಂದು ಭೇಟಿ, ಒಂದು ಅಸಮಧಾನ ಹೆಂಗೆಲ್ಲಾ ಹೇಳಬಹುದು ಯಪ್ಪಾ ಅನ್ನೋ ಹಂಗ್ ಹೇಳೋದ್ ಅಮೃತಾ ಅವರಿಗೆ ದಕ್ಕಿದೆ, ಅದನ್ನ ಯತಾ ವತ್ತಾಗಿ ಅನುವಾದ ಮಾಡಿರೋ… ರಶ್ಮಿ ಎಸ್ ಅವರ ಕಾವ್ಯ ಪ್ರೀತಿಗೆ…. ಈ ಕವಿತೆ “ನೀ ಬರಲಿಲ್ಲ”

ಚೈತ್ರ ಎಚ್ಚರವಾಗಿ ಮೈ ಮುರಿಯುತ್ತಿತ್ತು..
ಹೂಗಳೆಲ್ಲ ನವಿರಾದ ರೇಕುಗಳನ್ನು ಹೆಣೆಯುತ್ತಿವೆ..
ಹೋಳಿ ಹಬ್ಬದ ಸಂಭ್ರಮಕ್ಕಾಗಿ
ಆದ್ರೆ ನೀ ಬರಲಿಲ್ಲ..

ಹಿಂಗ್ ಎದೆಯ ಗಿಲಿಕಿಗೆ ಕೈ ಹಾಕಿ ಬರೆದ ಅಮೃತಾ, ಅದಕ್ಕೆ ಧಕ್ಕೆ ಆಗದಂತೆ ಅನುವಾದ ಮಾಡಿದ ರಶ್ಮಿ ಇಬ್ಬರೂ ಅಭಿನಂದನೆಗೆ ಅರ್ಹರು.. ಕಾವ್ಯ ಜೀವಿಸೋದು ಉಸಿರಾಡೋದ ಕಾಲದ, ದೇಶದ ಗಡಿ ದಾಟಿ ಎದೆಗಪ್ಪೋದು ಹೀಗೆ.

ಇಂತಹ ಅನನ್ಯ ಸಂಕಲನ ಲಡಾಯಿ ಪ್ರಕಾಶನ ಪ್ರಕಟಿಸಿದೆ. ಹಿರಿಯ ಲೇಖಕಿ ಸುನಂದಾ ಕಡಮೆ ಮುನ್ನುಡಿ ಬೆನ್ನುಡಿ ಎರಡೂ ಬರೆದು ಹಾರೈಸಿದ್ದಾರೆ. ಕವಯತ್ರಿ ರಶ್ಮಿ. ಎಸ್. ಅವರಿಗೆ ಮತ್ತೊಮ್ಮೆ  ಶುಭ ಕಾಮನೆಗಳೊಂದಿಗೆ..

About The Author

ದೇವರಾಜ್‌ ಹುಣಸಿಕಟ್ಟಿ

ದೇವರಾಜ್‌ ಹುಣಸಿಕಟ್ಟಿ ರಾಣೇಬೆನ್ನೂರಿನವರು. ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. "ಬಿಡಿ ಚಿತ್ರಗಳು ಮತ್ತು ಇತರ ಕವಿತೆಗಳು" ಇವರ ಪ್ರಕಟಿತ ಕೃತಿ ಕವಿತೆಯ ಓದು, ಬರೆಯುವುದು ಇವರ ಹವ್ಯಾಸ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ