ಜಲಪಾತದ ಎಡಮಗ್ಗಲಿನ ತಗ್ಗಿನಲಿ ನಿಂತು ನೋಡಿದರೆ ನೀರಿನ ನಡುವೆ ಅಲ್ಲಲ್ಲಿ ಗುಲಾಲಿ ಬಣ್ಣದ ರೇಖೆಗಳು ಕಾಣಿಸಿ ನಿಮ್ಮನ್ನು ತಬ್ಬಿಬ್ಬು ಗೊಳಿಸುತ್ತದೆ. ಯಾವುದು ದಿಟ ಯಾವುದು ಮಿಥ್ಯ ಎಂದರಿಯುವ ಹೊತ್ತಿಗೆ ಜಲಪಾತ ನಿಮ್ಮ ಮನಸ್ಸನ್ನು ಮತ್ತು ಒಡಲನ್ನು ಒದ್ದೆ ಮಾಡಿಸಿರುತ್ತದೆ. ಮೌನದಲ್ಲೇ ನೀವು ಮೇಲೆ ಬಂದು ಜಲಪಾತದ ಎಡ ಭುಜಕ್ಕಾನಿಸಿ ಕುಳಿತು ಧ್ಯಾನಸ್ಥರಾಗುವಿರಿ. ಧ್ಯಾನಸ್ಥರಾದಾಗಲೇ ನಿಮ್ಮ ಅಂತರಂಗಕ್ಕೊಂದು ಹೊಸ ಹೊಳಹು ಉತ್ಸಾಹ.
ಶ್ರೀಧರ್ ಎಸ್. ಸಿದ್ದಾಪುರ ಬರೆಯುವ “ಸಾಗುತ ದೂರ ದೂರ…” ಪ್ರವಾಸ ಸರಣಿಯಲ್ಲಿ ಹೊಸ ಬರಹ
ನಮ್ಮ ತಿರುಗಾಲು ತಿಪ್ಪಲುತನಕ್ಕೆ ಕಿಚ್ಚುಹಚ್ಚಿಸಿದ್ದು ಹೊಸ ಕರ್ಮವೀರ! ಕರ್ಮವೀರದ ಜೋಳಿಗೆಯ ತುಂಬಾ ಅರವತ್ತು ಜಲಪಾತಗಳನ್ನು ಕಟ್ಟಿಕೊಟ್ಟಿದ್ದ ಸಂಪಾದಕ ಮಹಾಶಯ. ಗುಣಿಸಿ ಭಾಗಿಸಿ ನಾವು ಆಯ್ಕೆ ಮಾಡಿದ್ದು ಶಿರಸಿಯ ಬೆಣ್ಣೆ ಮತ್ತು ವಿಭೂತಿ ಜಲಧಾರೆ. ಶನಿವಾರ ಸಂಜೆ ಜೋಳಿಗೆ ತುಂಬಾ ಬಟ್ಟೆ ತುಂಬಿಕೊಂಡು ಲಟಾರಿ ಹಿಡಿದ ಕ್ಯಾಮರಕೊಂದಿಷ್ಟು ರೀಲು ತುಂಬಿ ಕರ್ಮವೀರ ಹಿಡಿದು ಹೊರಟೆವು.
ಕುಂದಾಪುರದಿಂದ ಕುಮಟಾವರೆಗೆ ರೈಲು. ಆನಂತರ ಕುಮಟಾದಿಂದ ಶಿರಸಿಯವರೆಗೆ ಬಸ್ಸು ಪ್ರಯಾಣ. ಇವೆಲ್ಲ ಮುಗಿದು ಶಿರಸಿ ತಲುಪಿದಾಗ ರಾತ್ರಿ 11. ರೈಲಿನಲ್ಲಿ ಸಿಕ್ಕ ಯಲ್ಲಾಪುರದ ದಂಪತಿಗಳು ನಮ್ಮನ್ನು ಇನ್ನಿಲ್ಲದಂತೆ ಯಲ್ಲಾಪುರಕ್ಕೆ ಬನ್ನಿ ಎಂದು ದುಂಬಾಲು ಬಿದ್ದರು. ಮತ್ತೊಮ್ಮೆ ನಿಮ್ಮ ಮನೆಗೆ ಬಂದೇ ಬರುತ್ತೇವೆ ಎಂದು ಹೇಳಿ ತಪ್ಪಿಸಿಕೊಂಡೆವು. ಬಂಡಿ ಬಕಾಸುರನಾದ ನನಗೆ ಅಂದು ರಾತ್ರಿ ಉಪವಾಸ ಕೆಡವಿತ್ತು ಶಿರಸಿ. ಮಧುವನ ಹೋಟೆಲಿನ ದಿಂಬಿಗೊರಗಿದಾಗ ರಾತ್ರಿ 11.30. ನಿದ್ದೆ ಹತ್ತುದಾದರೂ ಹೇಗೆ? ದಿಂಬಿನೊಡನೆ ಮಾತಿಗಿಳಿದು ರಾತ್ರಿ ಕಳೆದೆ. ಗೆಳೆಯನ ಕುಂಭಕರ್ಣ ಗೊರಕೆ ಕಿವಿ ತುಂಬುತ್ತಲೇ ಇತ್ತು. ಹೊಟ್ಟೆ ಚುರುಗುಟ್ಟುತ್ತಲೇ ಇತ್ತು.
ಬೆಳಗಾಗುತ್ತಲೇ ಹೋಟೆಲ್ ಸಾಮ್ರಾಟಕ್ಕೆ ದೌಡಾಯಿಸಿದೆ. ಹೋಟೆಲ್ ಸಾಮ್ರಾಟನ ವಿಶೇಷ ರುಚಿಯ ಉಪ್ಪಿಟ್ಟು ಜೊತೆಗೊಂದಿಷ್ಟು ಸೇವು, ಅದರೊಂದಿಗೆ ಲಗ್ನ ಮಾಡಿಕೊಂಡ ಫಿಲ್ಟರ್ ಕಾಫಿ ಹೊಟ್ಟೆ ಸೇರಿದಾಗ ನಮ್ಮ ಚೇತನವೂ ಎಚ್ಚೆತ್ತಿತು.
ಹೊಸ ಕರ್ಮವೀರ ಸಂಚಿಕೆಯ ಹಾಳೆ ಹಿಡಿದು ಹೊರಟವನಿಗೆ ಜಲಪಾತದ ಜಿಪಿಎಸ್ ಕಳೆದಿತ್ತು. ಶಿರಸಿಯಲ್ಲಿ ಸಿಕ್ಕಿದ ಚಂದ್ರಶೇಖರ್ ಎಂಬುವವರ ಜೀಪು ಬಾಡಿಗೆಗೆ ಪಡೆದೆವು. ಎರಡು ಜಲಪಾತಗಳನ್ನು ತೋರಿಸಲು ಆತ ಬರೋಬ್ಬರಿ 2400 ಕ್ಕೆ ಒಪ್ಪಿಕೊಂಡಿದ್ದ! ಹೊರಗೆ ತಣ್ಣನೆಯ ಗಾಳಿಯ ಬಿರುಮಳೆಯ ಶೃಂಗಾರ. ನಾವು ಹೊರಹೋಗದಂತೆ ಪ್ರತಿಬಂಧ. ಶಿರಸಿಯಲ್ಲೋ ಅಂದು ದಾರಿ ಕಾಣದಷ್ಟು ಮಳೆ. ಅಂದು ಶಿರಸಿಯಲ್ಲೇ ಉಳಿದು ಸಂಜೆ ವಾಪಸು ಹೊರಡಬೇಕಾಗುತ್ತದೆ ಎಂದು ಅಂದುಕೊಂಡೆವು. ಆದರೂ ಸಾಹಸ ಮಾಡೋಣವೆಂದು ಜೀಪ್ ಹತ್ತಿದೆವು. ವಾರದಿಂದ ರಚ್ಚೆ ಹಿಡಿದ ಮಳೆಗೆ ಬೇಸರ ಬಂದು ಬೆಳಿಗ್ಗೆ ಹತ್ತರ ಸುಮಾರಿಗೆ ಕೊಂಚ ಬಿಡುವು. ಮೈ ಮನ ಒದ್ದೆ ಮಾಡಿಕೊಂಡು 20 ನಿಮಿಷಗಳ ನಡಿಗೆ ಪೂರೈಸಿ ನೂರಾರು ಇಂಬಳಗಳ ಸ್ವಾಗತದ ನಡುವೆ ವಿಭೂತಿಯಲ್ಲಿ ಮಿಂದು ಹೊರಟೆವು. ಮುಂದಿನ ಕಥೆ ಬಲು ರೋಚಕ.
ಇಲ್ಲಿಂದ ನಮ್ಮ ಬಂಡಿ ಮಂಜುಗುಣಿಯ ವೆಂಕಟರಮಣ ದೇವಾಲಯಕ್ಕೆ ಅಡಿ ಇಟ್ಟಿತು. ನಾವಿಲ್ಲಿಗೆ ಕಾಲಿಟ್ಟಾಗ ಮುತ್ತುದುರಿದಂತೆ ಹನಿ ಮಳೆಯ ಶೃಂಗಾರ. ಊರ ಪ್ರವೇಶ ದ್ವಾರದಲ್ಲಿ ಹತ್ತಾರು ಮಕ್ಕಳು ಮೈ ಒದ್ದೆ ಮಾಡಿಕೊಂಡು ಕಬಡ್ಡಿ ಆಟದಲ್ಲಿ ನಿರತರಾಗಿದ್ದರು. ಅವರನ್ನು ನೋಡಿ ನಾವು ಬಾಲ್ಯಕ್ಕೆ ಮರಳಿದೆವು. ಕಳೆದು ಹೋಗಬಾರದಿತ್ತು ನಮ್ಮ ಬಾಲ್ಯ ಎಂದುಕೊಂಡೆವು. ಇನ್ನೂ ನೋಡುತ್ತಲಿದ್ದರೆ ಮಂಜುಗುಣಿಯ ಮಜ್ಜಿಗೆ ಊಟವೂ ಮಿಸ್ ಆಗುತ್ತದೆ ಎಂದು ಡ್ರೈವರ್ ಹೊರಡಿಸಿದ. ದೇವಾಲಯಕ್ಕೆ ಸುಮ್ಮನೆ ಸುತ್ತು ಬಂದು ಗಂಧ ಹಚ್ಚಿ ನಾಲ್ಕೈದು ದಿನ ಊಟ ಮಾಡದವರಂತೆ ಊಟದ ಮನೆಗೆ ಹೋಗಲು ಗೆಳೆಯ ಗಡಿಬಿಡಿ ಮಾಡಿದ.

ಬಲು ರುಚಿಯಾದ ತಂಬಳಿಯೂಟ ಒಂದು ನಮ್ಮ ಉದರವನು ಸೇರಿತು. ಸೇಡು ತೀರಿಸಿಕೊಳ್ಳುವವನಂತೆ, ಎರಡೆರಡು ಬಾರಿ ತಂಬುಳಿ ಹಾಕಿಸಿಕೊಂಡು ಉಂಡ ಗೆಳೆಯ. ಜೊತೆಗೆ ಜೀರಿಗೆ ಮೆಣಸು ಬೆರೆಸಿದ ಹದವಾದ ಮಜ್ಜಿಗೆ ಮೋರಿದ. ನಾನು ಮೂರು ಮೂರು ಬಾರಿ ತಂಬುಳಿ ಕೇಳಿ ಹಾಕಿಸಿಕೊಂಡು ಉಂಡಾಡಿ ಗುಂಡರಂತೆ ನಾಚಿಕೆ ಬಿಟ್ಟು ಉಂಡು ದೇವಾಲಯ ದರ್ಶನ ಮಾಡಿ ಸುತ್ತಲಿನ ಪರಿಸರ ಆಸ್ವಾದಿಸಿದೆವು. ‘ಇಷ್ಟು ಉಂಡರೆ ನಮ್ಮ ಗತಿ ಏನು?’ ನಾ ಕೇಳಿದೆ ಮಿತ್ರ ನಾಗರಾಜನಲ್ಲಿ. ಶುಕ್ರಾಚಾರ್ಯರು ಎಂದಂತೆ ‘ವಾತಾಪಿ ಜೀರ್ಣೋಭವʼ ಎಂದು ಉಂಡಾದ ಮೇಲೆ ಹೊಟ್ಟೆ ಮೇಲೆ ಕೈಯಿಟ್ಟು ಹೇಳು. ತಿಂದದ್ದೆಲ್ಲಾ ಕ್ಷಣ ಮಾತ್ರದಲ್ಲಿ ಜೀರ್ಣ! ಎಂದು ಕಣ್ಣು ಮಿಟುಕಿಸಿದ. ನಕ್ಕು ಹಗುರಾದೆವು.
ಮಂಜುಗಣಿ ಅಜ್ಞಾತವಾಗಿ ಕಾಡೊಳಗೆ ಅವಿತ ಸುಂದರ ದೇವಾಲಯ. ಇದರ ಇತಿಹಾಸ 10 ನೆಯ ಶತಮಾನದ ಬಾಗಿಲವರೆಗೆ ಕೊಂಡೊಯ್ಯುತ್ತದೆ. ಜೊತೆಗೆ ಚಕ್ರತೀರ್ಥವೆಂಬ ಚಂದದ ಪುಷ್ಕರಣಿ. ಪುಷ್ಕರಣಿಯ ವಿಹಂಗಮತೆಯಲ್ಲಿ ಮಿಂದೆದ್ದೆವು. 10 ಶತಮಾನಗಳ ಉದ್ದಕ್ಕೂ ಜನರನ್ನು ಕಂಡ ದೇವಾಲಯ. ಜನಜೀವನ, ಜಗಳ, ಜಾತ್ರೆ ಎಲ್ಲದಕ್ಕೂ ಮೂಕ ಸಾಕ್ಷಿಯಾಗಿದೆ. 10 ಶತಮಾನಗಳ ಅಂಚನ್ನು ಸವರಿ ಬಂದಿದೆ! ನೂರಾರು ತಾಪತ್ರಯಗಳನ್ನು ಎದುರಿಸಿದೆ. ಪಶ್ಚಿಮ ಘಟ್ಟಗಳ ನಟ್ಟ ನಡುವೆ ನೆಲೆಸಿರುವುದೊಂದು ವಿಶೇಷ. ಈ ದೇವಾಲಯಕ್ಕೆ ಕಾಡು ಒಂದು ವಿಕ್ಷಿಪ್ತತೆಯನ್ನು ಒದಗಿಸಿದೆ. ಒಂದು ಕಡೆ ಯಾಣ ಇನ್ನೊಂದು ಕಡೆ ವಿಭೂತಿ ಎಂಬ ಎರಡು ವಿಭಿನ್ನ ಸ್ಥಳಗಳು. ಇದೇ ದಾರಿಯುದ್ದಕ್ಕೂ ಹಬ್ಬಿದ ನೂರಾರು ಜಲಧಾರೆಗಳು. ಇದೇ ದಾರಿಯೊಳಗೆಲ್ಲೊ ಶಿವಾನಂದ ಕಳವೆಯವರ ಮಧ್ಯಗಟ್ಟ ಕಾನಿನ ಕಾದಂಬರಿಯು ನಡೆದ ಊರು ಸಿಗುತ್ತದೆ. ಈ ದಾರಿಯುದ್ದಕ್ಕೂ ನೆನಪುಗಳ ಮೆರವಣಿಗೆ.
ಸುತ್ತಲಿನ ಹತ್ತಾರು ಹಳ್ಳಿಗಳಿಗೆ ಕುಲ ದೇವರಾಗಿದೆ. ದೇವಾಲಯದ ವಿಶಾಲ ಬೀದಿಗಳು ಹಾಗೂ ಬೃಹತ್ ಮರದ ರಥ ದೇವಾಲಯದ ಹಿರಿತನವನ್ನು ಸಾರುತ್ತದೆ. ಸಂಪೂರ್ಣ ಶಿಲಾಮಯವಾದ ದೇವಾಲಯವಾಗಿದ್ದು ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿದೆ. 14 ರಿಂದ 16ನೆಯ ಶತಮಾನದ ನಡುವೆ ವಿಜಯನಗರ ಅರಸರು ಈ ದೇವಾಲಯವನ್ನು ಜೀರ್ಣೋದ್ಧಾರಗೊಳಿಸಿದರೆಂದು ತಿಳಿದು ಬಂದಿದೆ. ಕರ್ನಾಟಕ ಮಾತ್ರವಲ್ಲದೆ ಆಂಧ್ರ, ತಮಿಳುನಾಡು ಇಲ್ಲಿನ ದೇವಾಲಯಗಳನ್ನೂ ಪೊರೆದ ದೊರೆ ವಿಜಯನಗರ ಅರಸರು. ಕಾಡೊಳಗಿನ ದೇವಾಲಯಕ್ಕೂ ದಾನದತ್ತಿಗಳನ್ನು ದೊರಕಿಸಿಕೊಟ್ಟವರು.

ವಿಶಿಷ್ಟ ದೇವಾಲಯ
ಇಲ್ಲಿನ ವಿಶಿಷ್ಟ ವೆಂಕಟರಮಣ ಮೂರ್ತಿಯು ಕೈಯಲ್ಲಿ ಬಿಲ್ಲು ಬಾಣ ಶಂಖ ಚಕ್ರವನ್ನು ಹಿಡಿದಿದ್ದಾನೆ. ಸಾಮಾನ್ಯ ಮೂರ್ತಿಗಳಿಗಿಂತ ಇದು ವಿಭಿನ್ನವಾಗಿದೆ. ಸಾಮಾನ್ಯವಾಗಿ ವೆಂಕಟರಮಣ ಮೂರ್ತಿಯ ಕೈಯಲ್ಲಿ ಕಮಲವಿರುತ್ತದೆ. ಆದರೆ ಇಲ್ಲಿನ ಬಿಲ್ಲು ಬಾಣಧಾರಿಯಾಗಿ ತನ್ನ ಭಕ್ತರ ರಕ್ಷಣೆಗೆ ನಿಂತಿದ್ದಾನೆ. ವೆಂಕಟರಮಣ ಮೂರ್ತಿಯು ಸ್ವಲ್ಪವೇ ಸ್ವಲ್ಪ ತಿರುಗಿದಂತೆ ಶಿಲ್ಪಿಯು ರಚಿಸಿದ್ದಾನೆ. ವೆಂಕಟರಮಣನ ಜೊತೆಗೆ ಆತನ ಕಾಲ ಬುಡದಲ್ಲಿ ಪದ್ಮಾವತಿಯು ನೆಲೆಸಿದ್ದಾಳೆ. ಮಾರ್ಚ್ ತಿಂಗಳ ಚೈತ್ರ ಪೂರ್ಣಿಮೆಯೆಂದು ಇಲ್ಲಿ ರಥೋತ್ಸವ ಜರಗುತ್ತದೆ. ದೇವಾಲಯದ ಗರ್ಭಗೃಹದ ಹೊರ ಭಾಗದ ಮಂಟಪದಲ್ಲಿರುವ ಕಂಬಗಳ ಕೆತ್ತನೆ ಅದ್ಭುತವಾಗಿದೆ. ದೇವಾಲಯದ ರಚನೆ ಸ್ವಲ್ಪ ಮಟ್ಟಿಗೆ ಶಿವಮೊಗ್ಗ ಜಿಲ್ಲೆಯ ಬಳ್ಳಿಗಾವಿ ದೇವಾಲಯವನ್ನು ಹೋಲುತ್ತದೆ. ದೇವಾಲಯದ ಹೊರ ಮಂಟಪದಲ್ಲೂ ಅಂದದ ಕೆತ್ತನೆಗಳಿವೆ. ದೇವಾಲಯದೊಳಗೆ ನೀರು ನುಗ್ಗದಂತೆ ಮೇಲ್ಚಾವಣಿ ಮತ್ತು ಅದಕ್ಕೆ ಅನುಸರಿಸುವ ಮಂಟಪವನ್ನು ರಚಿಸಲಾಗಿದೆ. ಹದಿನಾರನೆಯ ಶತಮಾನದಲ್ಲಿ ರಚನೆಯಾದ ವಾದಿರಾಜ ತೀರ್ಥರ ‘ತೀರ್ಥ ಪ್ರಬಂಧದಲ್ಲಿʼ ಈ ದೇವಾಲಯದ ಉಲ್ಲೇಖಗಳನ್ನು ವಿವರಿಸಿದ್ದಾರೆ!
ಸುಂದರ ದೇವಾಲಯದ ಸುತ್ತ ಸಿಮೆಂಟ್ ಕಟ್ಟಡಗಳನ್ನು ಕಟ್ಟಿ ಇದರ ಮೂಲ ಸೌಂದರ್ಯಕ್ಕೆ ಧಕ್ಕೆಯನ್ನುಂಟು ಮಾಡಿದ್ದಾರೆ. ಆ ಮೂಲಕ ಜನರು ಸೌಂದರ್ಯೋಪಾಸಕತೆಯನ್ನು, ರಸಾಸ್ವಾದತೆಯನ್ನು ಕಳೆದುಕೊಂಡಿದ್ದೇವೆಂದು ಸಾಬೀತುಪಡಿಸಿದ್ದಾರೆ. ಉದರ ಉಬ್ಬಿಸಿಕೊಂಡು ಇಲ್ಲಿಂದ ಹೊರಟಿದ್ದು ಬೆಣ್ಣೆ ಜಲಧಾರೆ ಎಡೆಗೆ.
ಬೆಣ್ಣೆ ಎಂಬ ಬೆಡಗಿ
ಜೀರುಂಡೆ ಗಾಯನ ಕೇಳುತ್ತಾ ಜಿಗಣೆಗಳನ್ನು ಕಚ್ಚಿಸಿಕೊಂಡು ಒಂದೆರಡು ಕಿಲೋಮೀಟರ್ ನಡೆದು ಬೆಣ್ಣೆ ಜಲಪಾತದ ಬುಡದವರೆಗೆ ಹೋಗಿ, ಸಿಡಿಯುವ ನೀರ ಹನಿಗೆ ಮುಖ ಮಜ್ಜನ ಮಾಡಿಸಿಕೊಂಡಾಗಲೇ ನೆಮ್ಮದಿ. ದಾರಿಯುದ್ದಕ್ಕೂ ಹನಿ ಮಳೆಯ ಮಾಲ್ಕೌಂಸ್ ರಾಗ. ಜೀರುಂಡೆಗಳ ಹಿಮ್ಮೇಳ. ಸದಾ ಬೆಣ್ಣೆಯಂತೆ ಧುಮ್ಮಿಕ್ಕುವ ಜಲೌಘವನ್ನು ಕಾಡ ನಡುವೆ ನೋಡುವ ಆನಂದವೇ ಬೇರೆ. ಹೊನ್ನೆ ಸುರಗಿ ಮುಂತಾದ ಕಾಡು ವೃಕ್ಷಗಳ ನಡುವೆ ನೆಮ್ಮದಿಯಿಂದ ಧಮ್ಮಿಕ್ಕುವ ಈ ಜಲ ಧಾರೆಯು ಕಲ್ಲು ಪೊಟರೆ ನಡುವೆ ಜಾಗ ಮಾಡಿಕೊಂಡು ಉದುರುವ ಸಣ್ಣ ಬ್ರೆಡ್ನ ಪುಡಿಗಳಂತೆ ಭಾಸವಾಗುತ್ತದೆ. ನೋಡಿದಷ್ಟು ತಣಿಯದ ನೀರ ರೇಖೆಗಳು. ಪ್ರತಿಕ್ಷಣವೂ ನೂರಾರು ಹನಿಗಳು ಎಲ್ಲೆಲ್ಲಿಂದಲೋ ಓಡಿ ಬಂದು ಮೈ ಮುಖವನ್ನೆಲ್ಲ ತಬ್ಬಿಕೊಳ್ಳುವ ಜಾದುಗಾರನಂತೆ. ಜಲಪಾತದ ಸನಿಹದಲ್ಲೊಂದು ಸಣ್ಣ ಮರವೊಂದು ಛತ್ರಿಯಂತೆ ಹರಡಿ ಜಲಧಾರೆಯನ್ನು ಸದಾ ಕಾಯುತ್ತಿರುತ್ತದೆ. ಕೇವಲ ಕಲ್ಲುಗಳ ನಡುವೆ ಅತಿ ಕಡಿಮೆ ಮಣ್ಣಿನಲ್ಲಿ ಬದುಕುಳಿವ ಕಾಲನ ಕೈವಾಡಕ್ಕೆ ನನ್ನದೊಂದು ಅಚ್ಚರಿ. ಈ ಮರದ ಅಪೂರ್ವ ಆಕರ್ಷಣೆ ಕೊನೆ ಮೊದಲಿಲ್ಲದಂತೆ ನನ್ನನ್ನು ಸೆಳೆದಿದೆ. ಮುಖ್ಯ ಜಲಧಾರೆಗೆ ಬಂದು ಸೇರುವ ಹಲವಾರು ಪುಟಾಣಿ ಹಳ್ಳಗಳು. ಎಲ್ಲವೂ ಒಂದಾಗಿ ಕೊನೆಗೆ ಶಾಲ್ಮಲೆಯ ಒಡಲನ್ನು ಸೇರಿಕೊಳ್ಳುತ್ತವೆ. ತವರು ತೊರೆದ ಶಾಲ್ಮಲೆ ಶರಾವತಿಗೆ ತನ್ನನ್ನು ಒಪ್ಪಿಸಿಕೊಳ್ಳುತ್ತಾಳೆ. ತನ್ನನ್ನು ಸಂಪೂರ್ಣವಾಗಿ ಒಪ್ಪಿಸಿಕೊಳ್ಳುವುದರಲ್ಲೂ ಸುಖವಿದೆ ಎಂದು ಸದಾ ಸಾರುತ್ತಲೇ ನಮಗೊಂದು ಹೊಸ ಪಾಠ ಅರಹುತ್ತಾಳೆ. ಇಲ್ಲಿಂದಲೇ ಇವಳ ಹೊಸ ಪ್ರಯಾಣದ ಆರಂಭ. ಇವಳ ಸಂಘಕ್ಕೆ ಬಿದ್ದ ಹತ್ತಾರು ಹಳ್ಳಿಗಳು, ಅಲ್ಲಿನ ಕೃಷಿಕರು ನೆಮ್ಮದಿಯ ಬದುಕು ಕಾಣುತ್ತಾರೆ. ಜಲಪಾತ ಮತ್ತು ಜೀರುಂಡೆ ನಿಮ್ಮ ಕರಣಗಳನ್ನು ತುಂಬುತ್ತದೆ…..
ಜಲಪಾತದ ಎಡಮಗ್ಗಲಿನ ತಗ್ಗಿನಲಿ ನಿಂತು ನೋಡಿದರೆ ನೀರಿನ ನಡುವೆ ಅಲ್ಲಲ್ಲಿ ಗುಲಾಲಿ ಬಣ್ಣದ ರೇಖೆಗಳು ಕಾಣಿಸಿ ನಿಮ್ಮನ್ನು ತಬ್ಬಿಬ್ಬು ಗೊಳಿಸುತ್ತದೆ. ಯಾವುದು ದಿಟ ಯಾವುದು ಮಿಥ್ಯ ಎಂದರಿಯುವ ಹೊತ್ತಿಗೆ ಜಲಪಾತ ನಿಮ್ಮ ಮನಸ್ಸನ್ನು ಮತ್ತು ಒಡಲನ್ನು ಒದ್ದೆ ಮಾಡಿಸಿರುತ್ತದೆ. ಮೌನದಲ್ಲೇ ನೀವು ಮೇಲೆ ಬಂದು ಜಲಪಾತದ ಎಡ ಭುಜಕ್ಕಾನಿಸಿ ಕುಳಿತು ಧ್ಯಾನಸ್ಥರಾಗುವಿರಿ. ಧ್ಯಾನಸ್ಥರಾದಾಗಲೇ ನಿಮ್ಮ ಅಂತರಂಗಕ್ಕೊಂದು ಹೊಸ ಹೊಳಹು ಉತ್ಸಾಹ.
ಬೆಣ್ಣೆ ಜಲಧಾರೆಯ ದಾರಿಯಲ್ಲಿ ಮಿಸಳ್ ಬಾಜಿ!
ಅಲ್ಲಿಂದ ಮೇಲಕೆ ಹತ್ತಿ ಬಂದಾಗ ಬಲ್ ನನ್ನ ಮಗನ ಹೊಟ್ಟೆ ಚುರು ಚುರು ಎಂದಿತ್ತು! ನಮ್ ಜೀಪ್ ಡ್ರೈವರ್ಗೂ ನಮ್ ಹೊಟ್ಟೆ ಬಾಕತನ ಇಷ್ಟವಾಗಿರಬೇಕು. ಮೋಸ್ಟ್ಲೀ ಅವನೂ ಹೊಟ್ಟೆಬಾಕನಿರಬೇಕು. ಅವನ ಮುಂದೆ ಹಸಿವಿನ ವಿಷಯ ಪ್ರಸ್ತಾಪಿಸಿದ್ದೇ ಟಣ್ ಎಂದು ‘ಅವರ್ ನೆಕ್ಸ್ಟ್ ಡೆಸ್ಟಿನೇಶನ್ ಈಸ್ ಶ್ಯಾನುಭೋಗರ ಕ್ಯಾಂಟಿನ್’ ಎಂದು ಬಿಡೋದೆ! ನನಗೆ ಒಳಗೊಳಗೆ ಖುಷಿಯಾದರೂ ಸ್ವಲ್ಪ ನಾಚಿಕೆಯಾಯಿತು; ನಾಲಿಗೆಯ ಜೊಲ್ಲು ಸಲೀಸಾಗಿ ಹೊರ ಬಂದಿತ್ತು. ‘ಥೂ ನಾಯಿ ಬುದ್ದೀದೆ’ ಎಂದು ಬೈದುಕೊಂಡು ನಾಲಿಗೆಯ ಸುಮ್ಮನಿರಿಸಿದೆ. ಆದರೂ ಕೇಳಬೇಕಲ್ಲ. ಕ್ಯಾಂಟಿನ್ ಬಂದೊಡನೆ ನಿಲ್ಲಿಸೋಣವೇ ಎಂದು ಕೇಳಿದ ಚಾಲಕ. ‘ಹಂ’ ಅಂದ್ದಿದ್ದೇ ನಿಲ್ಲಿಸಿಬಿಡೋದೆ!
ಕ್ಯಾಂಟೀನ್ಗೆ ನಮ್ಮ ಹಾಜರಿ ಹಾಕಿಯಾಗಿತ್ತು. ನಮ್ಮ ಜೊತೆಗೇನೆ ದೇವಸ್ಥಾನದಲ್ಲಿ ಊಟ ಮಾಡಿದ ಚಾಲಕನಿರುವುದರಿಂದ ದಾಕ್ಷಿಣ್ಯಕ್ಕೆ ಅರ್ಧ ಪ್ಲೇಟ್ ಮಿಸಳ ಬಾಜಿ ಹಾಗೂ ಎರಡು ಕಪ್ ಕಾಫಿಗೆ ಆಹ್ವಾನವಿಟ್ಟೆವು. ಜಲಧಾರೆಯ ಹನಿಗಳಿಗೆ ನೆನೆದು ಹೋಗಿದ್ದೆವು. ಮನಸ್ಸು ಕಾಫೀ ಬೇಡುತ್ತಿತ್ತು. ಹನಿ ಮಳೆ ನೋಡುತ್ತಾ ಕೂತೆವು. ಮಿಸಳಿನ ಜೊತೆಗೆ ಕೊಡುವ ಬಾಜಿಯನ್ನು ಬೇರೆಯಾಗಿ ಕೊಟ್ಟ ಕ್ಯಾಂಟಿನಿನ ಮಾಮ್. ಒಂದು ತುತ್ತು ಮಿಸಳ ಬಾಜಿಯನ್ನು ಬಾಯಿಗೆ ಹಾಕಿದ್ದೆನಷ್ಟೇ; ಅದರ ಮೋಡಿಗೆ ನನ್ನ ನಾಲಿಗೆಯ ರುಚಿ ಮೊಗ್ಗುಗಳೆಲ್ಲಾ ಒಮ್ಮೆಲೆ ಯಾರೋ ಬಡಿದೆಬ್ಬಿಸಿದಂತಾಯಿತು. ನಿಜವಾಗಲೂ ಸ್ವರ್ಗ ಸದೃಶ ರುಚಿ ಆ ಮಿಸಳ ಬಾಜಿಗಿತ್ತು.
ಇನ್ನೊಂದು ಪ್ಲೇಟ್ ಹೇಳೋಣವೆಂದುಕೊಂಡರೆ ಓರೆ ನೋಟದಲ್ಲೇ ಚಾಲಕ ನಮ್ಮನ್ನೇ ತಿನ್ನುವಂತೆ ನೋಡುತ್ತಿದ್ದಾನೆ. ಜೊತೆಗೆ ಮೀಸೆ ಕೆಳಗಿನ ಕಿರು ನಗೆ ಬೇರೆ. ಇನ್ನೊಮ್ಮೆ ಮಿಸಳ್ ಬಾಜಿ ತಿನ್ನಲೆಂದೇ ಇಲ್ಲಿಗೆ ಬರಬೇಕೆಂದು ಮಾತಾಡಿಕೊಂಡೆವು. ಚಾಲಕ ನಗುತಲಿದ್ದ. ಅನೇಕ ಕಡೆ ಈ ತಿಂಡಿಯನ್ನು ನಾ ಸವಿದಿದ್ದೆ. ಆದರೆ ಇಷ್ಟು ರುಚಿಕಟ್ಟಾದ ಮಿಸಳಬಾಜಿ ಮತ್ತೆಲ್ಲೂ ನನಗೆ ತಿಂದ ನೆನಪಿಲ್ಲ. ಮೊದಲ ಮಾತಿನಂತೆ ಮೊದಲ ತುತ್ತು ಅತಿ ವಿಶಿಷ್ಟವಾಗಿ ನನ್ನ ಸ್ಮೃತಿ ಪಟಲದಲ್ಲಿ ಉಳಿದಿತ್ತು.

ಮಿಸಳ್ ಬಾಜಿಯ ಆಧ್ಯಾತ್ಮ
ಇದು ಯಾವುದೇ ಹೋಲಿಕೆಗೂ ಸಿಗದ ಇದು ವಿಶಿಷ್ಟ ತಿಂಡಿ ಮಿಸಾಳ್ ಎಂದರೆ ಮಿಕ್ಷರ್ ಬಾಜಿ ಎಂದರೆ ವಿಶಿಷ್ಟ ಸಾಂಬಾರು. ಮಸಾಲೆ ಮೆತ್ತಿದ ಅವಲಕ್ಕಿಗೆ ಖಾರಾ ಶೇವು, ಕಡಲೆ ಜೊತೆಗೆ ಬಾಜಿ. ಸ್ವಲ್ಪವೇ ಸ್ವಲ್ಪ ಈರುಳ್ಳಿ ಬೆರೆಸಿ ತಯಾರಿಸುವ ವಿಶೇಷ ಖಾದ್ಯ. ಬಾಯಿಗಿಟ್ಟ ಮರುಕ್ಷಣವೇ ನಿಮ್ಮೆಲ್ಲಾ ಇಹದ ಬಂಧನ ಕಳಚಿ ಹೊಸ ಲೋಕಕ್ಕೆ ಒಯ್ಯುವ ಅಮೃತರುಚಿ. ಒಮ್ಮೆ ತಿಂದ ಮೇಲಂತೂ ಮತ್ತೆ ಮತ್ತೆ ಮೆಲ್ಲಬೇಕೆಂಬ ಮನಸ್ಸು. ಇನ್ನೊಮ್ಮೆ ನಮ್ಮ ಉಡುಪಿ ಗಜಾನನ ಬಸ್ಸಿನ ಗ್ಯಾರೇಜಿನ ಬಳಿಯ ಸಣ್ಣ ಕ್ಯಾಂಟೀನ್ನಲ್ಲಿ ತಿಂದಿದ್ದೆ ಬಲು ರುಚಿಯಾಗಿತ್ತು.
ಮಹಾರಾಷ್ಟ್ರದಲ್ಲೆಲ್ಲೋ ಪ್ರಾರಂಭವಾಗಿ ಉತ್ತರಕನ್ನಡಕ್ಕೆ ಚಿತ್ಪಾವನದೊಂದಿಗೆ ವಲಸೆ ಬಂದ ತಿಂಡಿಯೊಂದು ಉತ್ತರ ಕನ್ನಡದಾದ್ಯಂತ ಹರಡಿ ತನ್ನ ಘಮವನ್ನು ಹರಡುತಲಿದೆ. ಅಲ್ಲಿ ಮಿಸಾಳ್ ಪಾವ್ ಆಗಿರುವುದು ಹೊನ್ನಾವರ, ಅಂಕೋಲ, ಕುಮಟಾ ಬರುತ್ತಲೆ ತನ್ನ `ಪಾವ್’ ಎಂಬ ಅಂಗಿ ಕಳಚಿ `ಬಾಜಿ’ ತೊಟ್ಟು ನಿಲ್ಲುತ್ತದೆ. ಈರುಳ್ಳಿ ಸೇವ್, ಟೊಮ್ಯಾಟೋ ಸೇರಿ ನಮ್ಮ ರುಚಿ ಮೊಗ್ಗ ಅರಳಿಸುತ್ತವೆ. ನಮ್ಮನ್ನೂ ಸದಾ ಸೋಲಿಸುತಲಿದೆ. ರಾಗಿ ಹೊಸಳ್ಳಿಯ ಭಟ್ಟರ ಹೋಟೆಲ್, ಗುಣವಂತೆಯ ಭಟ್ಟರ ಹೋಟೆಲು, ಶಿರಾಲಿಯ ಭಟ್ಟರ ಹೋಟೆಲುಗಳಲ್ಲಿ ಸಿಗುವ ಇಂತಹ ಅಂಥೆಟಿಕ್ ಅಡ್ಡಾಗಳ ತಿಂಡಿಗಳು ನಮ್ಮ ಜಿಹ್ವೆಯನ್ನು ಸದಾ ರುಚಿಯ ಹರಿತ ಕತ್ತರಿಯಾಗಿಸುತ್ತಲೇ ಇದೆ.

ಹೇಗೆ ಮಾಡ್ತಾರೆ ಎಂದು ಕೇಳಿದಿರಾ?
ಅವಲಕ್ಕಿಗೆ ಒಂದಿಷ್ಟು ವಿಶೇಷ ಮಸಾಲೆ ಹಾಕಿ ತಯಾರು ಮಾಡಿಟ್ಟುಕೊಂಡಿರುತ್ತಾರೆ. ಅದಕ್ಕೆ ಖಾರಾಸೇವು, ಶಂಕರಪೋಳೆ ಸೇರಿಸಿ ಜೊತೆಗೆ ವಿಶಿಷ್ಟ ರುಚಿಯ ಸಾಂಬಾರು ನೀಡುತ್ತಾರೆ. ‘ಮೂಲತಃ ಇದೊಂದು ಮಹರಾಷ್ಟ್ರದ ಕಡೆಯ ತಿಂಡಿ’ ಎಂದು ನನ್ನ ಪ್ರೀತಿಯ ತಿರುಗಾಲ ತಿಪ್ಪ ಗೆಳೆಯ ನಾಗರಾಜ ಹೇಳಿದ. ನನಗೆ ಯಾವ ಫರಕ್ಕೂ ಕಾಣಲಿಲ್ಲ. ಇದರ ವಿಶಿಷ್ಟ ರುಚಿಗೆ ಮನಸೋತೆ.
ಹಾಂ ಈ ಕ್ಯಾಂಟಿನ್ ಇರುವುದು ಶಿರಸಿ ಕುಮುಟಾ ನಡುವಿನ ರಾಗಿ ಹೊಸ ಹಳ್ಳಿ ಎಂಬ ಪುಟ್ಟ ಊರಲ್ಲಿ. ಮುಂದಿನ ಸಾರಿ ಈ ಕಡೆ ಬಂದಾಗ ಮಿಸ್ ಮಾಡದೇ ಮಿಸಳ್ ಬಾಜಿಗೆ ಆರ್ಡರಿಸಿ.

ಬೆಣ್ಣೆಯಷ್ಟೇ ಹುಡುಕಿ ಹೊರಟು ಮಜ್ಜಿಗೆ ಪಡೆದು ಕೃತಾರ್ಥರಾದೆವು! ನಿಮಗೆ ಎಂದಾದರೂ ಹೀಗಾಗಿದೆಯೇ? ಕಾಡುವ ಇಂತಹ ಜಾಗಗಳಿಗೆ ಮತ್ತೆ ಮತ್ತೆ ಕಾಡು ಬೀಳಬೇಕು ಎಂದೆಣೆಸುತ್ತ ಬೆಣ್ಣೆ ಜಲಧಾರೆಗೆ ಬಾಯ್ ಬಾಯ್ ಹೇಳಿದೆವು.
(ಫೋಟೋಗಳು: ಲೇಖಕರವು)

ಶ್ರೀಧರ್ ಎಸ್. ಸಿದ್ದಾಪುರ ವೃತ್ತಿಯಲ್ಲಿ ಶಿಕ್ಷಕರು. ತಿರುಗಾಟ, ಅನ್ವೇಷಣೆ ಒಂದು ಹುಚ್ಚು. ಬರಹ, ಓದು ಅಚ್ಚುಮೆಚ್ಚು. ಹಕ್ಕಿ, ಜೇಡಗಳಲ್ಲಿ ವಿಶೇಷ ಆಸಕ್ತಿ. “ಅಲೆಮಾರಿಯ ಅಂತರಂಗ” ಇಪ್ಪತ್ತು ವರ್ಷದ ಅಲೆದಾಟ, ಅನುಭವಗಳ ಪ್ರವಾಸ ಕಥನ.


